ಒಂದು ಸರಳ ವಿವರಣೆ. - ಈಗಿನ ಸಂದರ್ಭದಲ್ಲಿ ನೀವು ಮಾನಸಿಕ ಒತ್ತಡಲ್ಲಿದ್ದರೆ, ಹೆಚ್ಚು ಕಷ್ಟದಲ್ಲಿದ್ದರೆ, ಪರಿಹರಿಸಲು ಸಾಧ್ಯವಾಗದ ಗೊಂದಲದಲ್ಲಿದ್ದರೆ, ಅಪಾರ ನೋವಿನಲ್ಲಿದ್ದರೆ, ನೆನಪಿನ ಕಹಿಯಲ್ಲಿ ಕೊರಗುತ್ತಿದ್ದರೆ, ಭವಿಷ್ಯದ ಭಯದಲ್ಲಿ ನರಳುತ್ತಿದ್ದರೆ, ಸಹಜ ಆತಂಕ ಖಿನ್ನತೆಗಳಿದ್ದರೆ ಕೆಲವೊಂದು ಸರಳ ಅನುಭವದ ಪರಿಹಾರಗಳು ಅಥವಾ ಒಂದಷ್ಟು ಒತ್ತಡ ಕಡಿಮೆ ಮಾಡಬಹುದಾದಾ ಸಲಹೆ ರೂಪದ ಕಿವಿಮಾತು...
1) ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು.
ಮೇಲಿನ ಎಲ್ಲಾ ಸಂಕಷ್ಟಗಳಿಗೆ ಮೂಲ ಕಾರಣ ಜ್ಞಾನ ಅಥವಾ ತಿಳುವಳಿಕೆಯ ಕೊರತೆಯೇ ಆಗಿರುತ್ತದೆ. ನಮ್ಮಲ್ಲಿ ಅರಿವಿನ ಕೊರತೆ ಉಂಟಾದಾಗಲೇ ಈ ಸಮಸ್ಯೆಗಳು ಇರುವುದಕ್ಕಿಂತ ಬೃಹತ್ ಆಗಿ ಕಾಣತೊಡಗುತ್ತದೆ. ನಮ್ಮ ಪ್ರತಿಕ್ರಿಯೆಗಳೂ ಸಹ ಅದಕ್ಕೆ ಪೂರಕವಾಗಿ ಮತ್ತಷ್ಟು ಪ್ರಪಾತಕ್ಕೆ ತಳ್ಳುತ್ತವೆ. ಇಡೀ ಸಮಸ್ಯೆಗಳಿಗೆ ಜ್ಞಾನದ ಮುಖಾಂತರ ಪರಿಹಾರವಿರುತ್ತದೆ ಅಥವಾ ಕನಿಷ್ಠ ಸಮಾಧಾನವಾದರೂ ಇರುತ್ತದೆ. ನೀವು ಹೆಚ್ಚು ಹೆಚ್ಚು ದುಃಖಪಡುತ್ತಿದ್ದೀರೆಂದರೆ ನೀವಿನ್ನೂ ಜ್ಞಾನದ ಕೊರತೆಯಲ್ಲಿದ್ದೀರಿ ಎಂದೇ ಅರ್ಥ. ಅರಿವು ನಮ್ಮ ನೋವನ್ನು ಕಡಿಮೆ ಮಾಡಿ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಇದನ್ನು ಪಡೆಯುವುದು ಬಹಳ ಕಷ್ಟ. ಆದರೆ ಅದೇ ಮೊದಲ ಮತ್ತು ಅತ್ಯುತ್ತಮ ಮಾರ್ಗ......
2) ಧ್ಯಾನದಲ್ಲಿ ಮಗ್ನರಾಗುವುದು...
ಒಂದು ವೇಳೆ ಜ಼್ಞಾನ ಪಡೆಯುವುದು ಕಷ್ಟವಾಗಿ ಅದು ನಮಗೆ ಸಂಪೂರ್ಣ ನಿಲುಕದೆ ಇದ್ದಾಗ ಎರಡನೇ ಆಯ್ಕೆ ಧ್ಯಾನ...
ಜ್ಞಾನದ ಕೊರತೆಯನ್ನು ಧ್ಯಾನದ ಮೂಲಕ ಸರಿದೂಗಿಸಿಕೊಳ್ಳಬಹುದು. ಒತ್ತಡಗಳನ್ನು ನಿಯಂತ್ರಿಸಿಕೊಳ್ಳಬಹುದು. ಮನಸ್ಸಿನ ಹುಚ್ಚು ಕುಣಿತವನ್ನು ನಿಯಂತ್ರಿಸಿ ಮೆದುಳಿಗೆ ವಿಶ್ರಾಂತಿ ನೀಡುವ ಪ್ರಯತ್ನ ಧ್ಯಾನದಿಂದ ಸಾಧ್ಯ.
3) ಕರ್ಮ ಅಥವಾ ಕೆಲಸ ಅಥವಾ ನಮ್ಮ ಕರ್ತವ್ಯಗಳಲ್ಲಿ ಮಗ್ನರಾಗುವ ಮುಖಾಂತರ ನೆಮ್ಮದಿಯತ್ತ ಸಾಗುವ ಪ್ರಯತ್ನ......
ಇದು ಬಹುಶಃ ಮೂರನೆಯ ಆಯ್ಕೆ. ಕೆಲವರಿಗೆ ಮೊದಲನೇ ಆಯ್ಕೆಯೂ ಆಗಬಹುದು. ಜ್ಞಾನ ಮತ್ತು ಧ್ಯಾನದ ಕೊರತೆಯನ್ನು ಕೆಲಸದ ಮುಖಾಂತರ ನೀಗಿಸಿಕೊಳ್ಳಬಹುದು. ಬದುಕಿನ ಆಳಕ್ಕೆ ಹೆಚ್ವು ತಲೆಕೆಡಿಸಿಕೊಳ್ಳದೆ ತಾವು ಮಾಡುತ್ತಿರುವ ಕೆಲಸದಲ್ಲಿಯೇ ಇನ್ನಷ್ಟು ಮತ್ತಷ್ಟು ತೊಡಗಿಸಿಕೊಳ್ಳುವ ಮತ್ತು ಹೆಚ್ಚಿನ ಪ್ರತಿಫಲಾಪೇಕ್ಷೆ ಇಲ್ಲದೆ ಸಂಪೂರ್ಣ ತನ್ಮಯರಾಗುವ ಮುಖಾಂತರ ನಮ್ಮೆಲ್ಲ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಮಾನ್ಯರು ಮತ್ತು ಶ್ರಮಜೀವಿಗಳು ಇದನ್ನು ಕಾರ್ಯರೂಪಕ್ಕೆ ತರುವುದು ಹೆಚ್ಚು ಅನುಕೂಲಕರ....
4) ದೇಹ ದಂಡನೆ...
ಹೌದು, ಉತ್ತರವೇ ಸಿಗದ ಬದುಕಿನ ಸಂಕಷ್ಟಗಳಿಗೆ ಜ್ಞಾನ ಧ್ಯಾನ ಕರ್ಮಗಳ ಮಟ್ಟಕ್ಕೂ ಏರಲಾಗದ ದಿನನಿತ್ಯದ ಮೂಲಭೂತ ಸೌಕರ್ಯಗಳಿಗೇ ಒದ್ದಾಡುವಾಗ ನಮಗೆ ನೆಮ್ಮದಿ ನೀಡಬಹುದಾದ ಸಾಧ್ಯತೆ ಇರುವುದು ದೇಹದಂಡನೆಯಲ್ಲಿ. ಬೆಳಗಿನಿಂದ ಸಂಜೆಯವರೆಗೂ ದೇಹಕ್ಕೆ ವಿಶ್ರಾಂತಿ ನೀಡದೆ ಕಡಿಮೆ ಆಹಾರ ಸೇವಿಸುತ್ತಾ ನಿರಂತರ ಶ್ರಮಪಡಬೇಕು. ದೇಹ ರಾತ್ರಿಯಲ್ಲಿ ತನ್ನಿಂದ ತಾನೇ ವಿಶ್ರಾಂತಿ ಬಯಸಿ ನಮಗರಿವಿಲ್ಲದೇ ಮನಸ್ಸನ್ನು ಮಲಗಿಸಬೇಕು. ಬಹುಶಃ ಅತ್ಯಂತ ಕಡುಬಡವರ ಆಯ್ಕೆ ಇದೇ ಆಗಿರುತ್ತದೆ. ಇದೂ ಕೂಡ ಸೋತ ವ್ಯಕ್ತಿಯ ನೆಮ್ಮದಿಯ ಹುಡುಕಾಟದ ಉತ್ತಮ ಮಾರ್ಗ.
5)ದೇವರು ಮತ್ತು ಧರ್ಮದ ಮೇಲಿನ ನಂಬಿಕೆ......
ನಂಬಿಕೆಯ ಆಧಾರದಲ್ಲಿ ಭಕ್ತಿಯ ಮುಖಾಂತರ ನಮ್ಮನ್ನು ಸಂಪೂರ್ಣ ಶರಣಾಗಿಸಿಕೊಳ್ಳುವಿಕೆಯೇ ಈ ಮಾರ್ಗ. ಯಾವುದೋ ಅಗೋಚರ ಶಕ್ತಿ ಈ ಸೃಷ್ಟಿಯಲ್ಲಿದ್ದು ಅದೇ ನಮ್ಮನ್ನು ನಿಯಂತ್ರಿಸುತ್ತದೆ. ನಾವೇನಿದ್ದರೂ ಅದು ಆಡಿಸಿದಂತೆ ಆಡುವ ಗೊಂಬೆಗಳು ಎಂಬ ಭಕ್ತಿಪೂರ್ವಕ ನಂಬಿಕೆಯೂ ನಮ್ಮಲ್ಲಿ ನವ ಚೈತನ್ಯ ಉಂಟುಮಾಡಿ ಒಂದಷ್ಟು ನೆಮ್ಮದಿ ಮೂಡಿಸಬಹುದು. ಇಲ್ಲಿ ಫಲಿತಾಂಶ ಅವರವರ ವಿವೇಚನೆಗೆ ಸೇರಿದ್ದು.
ಇಲ್ಲಿ ಗಮನಿಸಬೇಕಾದ ಬಹುಮಖ್ಯ ಅಂಶವೆಂದರೆ ಈ ಯಾವುದನ್ನು ಕಾಟಾಚಾರಕ್ಕೆ ಅಥವಾ ಆತ್ಮವಂಚನೆ ಮಾಡಿಕೊಂಡು ಬೇಗನೆ ಫಲಿತಾಂಶ ನಿರೀಕ್ಷಿಸಿ ಕೇವಲ ಸಣ್ಣದಾಗಿ ಪ್ರಯತ್ನಿಸಿದರೆ ಇದರಿಂದ ಯಾವ ಪ್ರಯೋಜನವೂ ಇರುವುದಿಲ್ಲ. ಇವು ದೀರ್ಘಕಾಲದ ನಿರಂತರ ತಪಸ್ಸಿನಂತ ಏಕಾಗ್ರತೆ ಬಯಸುವ ಮಾರ್ಗಗಳು.
ಇನ್ನೂ ಅನೇಕ ಮಾರ್ಗಗಳು ಬದುಕಿನ ಯಾತ್ರೆಯಲ್ಲಿ
ಸೃಷ್ಟಿಯಾಗಬಹುದು. ಮೊದಲೇ ಹೇಳಿದಂತೆ ಇದೊಂದು ಸರಳ ನಿರೂಪಣೆ. ಸಾಧ್ಯವಾದರೆ ಪ್ರಯತ್ನಿಸಬಹುದು..
ಧನ್ಯವಾದಗಳು.
ಪ್ರಯತ್ನಿಸಿ ಫಲವಿದೆ
******
No comments:
Post a Comment