ಶ್ರೀ ರಾಯರ ಮಠದಲ್ಲಿ ಪ್ರೋಷ್ಠಪದಿ "
" ದಿನಾಂಕ : 08.09.2021 ಬುಧವಾರದಿಂದ 20.09.2021 ಸೋಮವಾರದ ವರೆಗೆ "
" ಭಾದ್ರಪದ ಮಾಸ " ಎಂದರೆ ಹಬ್ಬಗಳ ಮಾಸವೆಂದೂ - ಅಲ್ಲದೆ ಭಾದ್ರಪದ ಮಾಸಕ್ಕೆ " ಪ್ರೋಷ್ಠಪದ ಮಾಸ " ವೆಂತಲೂ ಶಾಸ್ತ್ರಕಾರರು ಹೇಳುವುದುಂಟು.
ಕಾರಣ ನಮ್ಮ ಶಬ್ದಗಳು ಭದ್ರವಾಗಿ ಇರುವಂತೆ ಸುಭದ್ರವಾದ ಮೋಕ್ಷವನ್ನು ಕರುಣಿಸುವಂಥಾ ಸಕಲ ಶಬ್ದವಾಚ್ಯನಾದ ಭಗವಂತನ ಮತ್ತೂ ಭಗವದ್ಭಕ್ತರ ಕಥೆಗಳನ್ನೊಳಗೊಂಡ ಶ್ರೀಮದ್ಭಾಗವತದ ಪದಗಳು ನಮ್ಮ ನಾಲಿಗೆಯಲ್ಲಿ ಸದಾ ಕಾಲ ಸುಭದ್ರವಾಗಿ - ಸುಲಲಿತವಾಗಿ ಗಂಗಾ ಪ್ರವಾಹದಂತೆ ಹರಿಯುವಂತೆ ಮಾಡಿ ಮೋಕ್ಷ ಪಥವನ್ನು ತೋರಿಸುವ ಮಾಸ ಭಾದ್ರಪದ ಮಾಸ ಅಥವಾ ಪ್ರೋಷ್ಠಪದ ಮಾಸ ಎಂದು ಹೆಸರು.
ಆಚಾರ್ಯ ನಾಗರಾಜು ಹಾವೇರಿ....
ಗೋವ್ಗಳ ಕಾಯ್ದ ಗೋವಿಂದಾ ।
ಪವನನಯ್ಯನೆ -
ಶ್ರೀ ಕೃಷ್ಣಯ್ಯಾ ।। ಪಲ್ಲವಿ ।।
ಪರಮ ಪುರುಷನೇ
ಅನಾಥ ಬಂಧೋ ।
ನರಹರಿ ಕರುಣಾದಿ
ನೆಲೆಸೆನ್ನ ಹೃನ್ಮಂದಿರದಿ ।। ಚರಣ ।।
ಪ್ರಹ್ಲಾದ ವರದನೇ ಕಾಯಯ್ಯಾ ।
ಬಾಹ್ಲೀಕ ಪ್ರಿಯನೇ -
ಶ್ರೀ ಕೃಷ್ಣಯ್ಯಾ ।। ಚರಣ ।।
ವ್ಯಾಸದೇವ ನಿರ್ಮಿತ
ಭಾಗವತವನ್ನೂ ।
ವ್ಯಾಸಮುನಿಯು ಕನ್ನಡದೀ
ರಚಿಸಿದ ಮುದದಿ ।। ಚರಣ ।।
ಪ್ರೋಷ್ಠಪದಿ ಮಾಸದಲ್ಲಿ
ಶ್ರೀ ವೇಂಕಟನಾಥನ
ಕಥೆಯು ಸಡಗರದಿ ।
ಶ್ರೇಷ್ಟಯತಿ ಶ್ರೀ ರಾಯರ
ಮನೆಯಲ್ಲಿ ನಡೆಯುವುದಯ್ಯಾ ।। ಚರಣ ।।
" ಶ್ರೀ ಮದ್ಭಾಗವತ ಅವತರಣಿಕೆ "
ಶ್ರೀ ಪರಮಾತ್ಮನ ಉಪದೇಶ ಪರಂಪರೆಯಿಂದ ಬಂದ ಮುಕ್ತಿ ಮಾರ್ಗವಾದ ತತ್ತ್ವಜ್ಞಾನವು ಕಲಿ ಪ್ರಭಾವದಿಂದ ಭೂಲೋಕದಲ್ಲಿ ಮರೆಯಾಗಿ ನಾನಾ ವಿಧ ಸಾಂಸಾರಿಕ ಕ್ಲೇಶದಲ್ಲಿ ಸಿಕ್ಕಿ ನರಳುತ್ತಿದ್ದ ಸಜ್ಜನರನ್ನು ಉದ್ಧರಿಸಬೇಕೆಂದು ದಯಾಳುಗಳಾದ ಶ್ರೀ ಚತುರ್ಮುಖ ಬ್ರಹ್ಮ ರುದ್ರೇ೦ದ್ರಾದಿಗಳ ಪ್ರಾರ್ಥನೆಯನ್ನು ಲಾಲಿಸಿ - ಶ್ರೀಮನ್ನಾರಾಯಣನು ಬಹು ಕಾಲ ತಪಸ್ಸನ್ನು ಮಾಡಿ ಶುದ್ಧಳಾದ ಸತ್ಯವತೀದೇವಿಯಲ್ಲಿ ಶ್ರೀ ಪರಾಶರರಿಂದ ಆವಿರ್ಭವಿಸಿದ " ಶ್ರೀ ವ್ಯಾಸ " ನೆಂದು ಪ್ರಸಿದ್ಧನಾದ ಮುರ ಧ್ವಂಸಿ ಶ್ರೀಮನ್ನಾರಾಯಣನು ಶಾಪದಿಂದ ಹಾಳಾಗಿದ್ದ " ವೇದ " ವೆಂಬ " ಕಲ್ಪವೃಕ್ಷ " ವನ್ನು ಮತ್ತೆ ಉದ್ಧಾರ ಮಾಡಿ, ಮಂದಮತಿಗಳಾದ ಜನರಲ್ಲಿ ಕನಿಕರದಿಂದ ವೇದವನ್ನು ಶಾಖೆಗಳನ್ನಾಗಿಯೂ - ಉಪ ಶಾಖೆಗಳನ್ನಾಗಿಯೂ ವಿಂಗಡಿಸಿದವನಾಗಿ ಆ ವೇದಗಳ ಅರ್ಥಗಳನ್ನು ನಿರ್ಣಯಿಸುವ ಇಚ್ಛೆಯಿಂದ " ಬ್ರಹ್ಮಸೂತ್ರ " ಗಳನ್ನು ರಚಿಸಿದನು!
ಆ ವೇದಗಳಲ್ಲಿ ಅಧಿಕಾರಿಗಳಲ್ಲದ ಸ್ತ್ರೀ - ಶೂದ್ರರೇ ಮೊದಲಾದ ಜನರಿಗೂ ಮೋಕ್ಷವಾಗಲೆಂದು 18 ಪುರಾಣಗಳನ್ನು ರಚಿಸಿ ಅವುಗಳಲ್ಲಿ ಪ್ರಸಿದ್ಧವೂ - ಬ್ರಹ್ಮಸೂತ್ರಗಳ ಅರ್ಥವನ್ನೇ ಪ್ರಕಾಶ ಪಡಿಸುವುದೂ - 12 ಸ್ಕಂಧಗಳೆಂದು ವಿಭಾಗಿಸಲ್ಪಟ್ಟದ್ದೂ -18 ಸಾವಿರ ಗ್ರಂಥಗಳನ್ನುಳ್ಳದ್ದೂ ಆದ ಶ್ರೀಮದ್ಭಾಗವತವೆಂಬ ಪುರಾಣ ಸಂಹಿತೆಯನ್ನು ಬರೆಯಲು ಇಷ್ಟವುಳ್ಳವರಾಗಿ ಆದಿಯಲ್ಲಿ ಸಕಲರಿಗೂ ಇಷ್ಟ ದೇವತೆಯಾದ ಶ್ರೀಮನ್ನಾರಾಯಣನ ಧ್ಯಾನ ರೂಪ ಮಂಗಲವನ್ನು ಮಾಡಿದ್ದಾರೆ.
ಈ ರೀತಿ ಮಾಡುವ ಮಂಗಳಕ್ಕೆ ತಾವು ರಚಿಸಬೇಕೆಂದಿರುವ ಗ್ರಂಥವು ನಿರ್ವಿಘ್ನವಾಗಿ ಸಮಾಪ್ತಿಯಾಗುವುದೇ ಪ್ರಯೋಜನ.
ಪ್ರಕೃತ ಶ್ರೀಮದ್ಭಾಗವ ಕರ್ತೃಗಳಾದ ಶ್ರೀಮನ್ವೇದವ್ಯಾಸರು ಸಾಕ್ಷಾನ್ನಾರಾಯಣನ ಅವತಾರರಾದ್ದರಿಂದ ಅವರ ಕಾರ್ಯಕ್ಕೆ ವಿಘ್ನ ಪ್ರಸಕ್ತಿಯೇ ಇಲ್ಲವಾದ ಕಾರಣ ನಿರ್ವಿಘ್ನ ಪರಿಸಮಾಪ್ತಿಯ ಉದ್ಧೇಶದಿಂದ ಮಂಗಳ ಮಾಡಿರುವುದು ಹೇಗೆ ಯುಕ್ತವಾದೀತು?
ಎಂದು ಶಂಕಿಸಬಹುದು!
ಆದರೆ ಮಂಗಳ ಮಾಡುವುದಕ್ಕೆ ನಿರ್ವಿಘ್ನ ಪರಿಸಮಾಪ್ತಿಯೊಂದೇ ಪ್ರಯೋಜನವಲ್ಲ - ಅನೇಕ ಪ್ರಯೋಜನಗಳಿವೆ.
ಮಂಗಳ ಪೂರ್ವಕವಾದ ಗ್ರಂಥವೇ ಅಧ್ಯಯನ - ಅಧ್ಯಾಪನೆ ಮಾಡುವವರಿಗೆ ಶ್ರೇಯಃಪ್ರದವೂ - ಪ್ರಸಿದ್ಧಿಯೂ ಆಗುವ ಕಾರಣ ಈ ಗ್ರಂಥಾಧ್ಯಯನ ಮಾಡುವವರಿಗೆ ಶ್ರೇಯಸ್ಸಾಗಲೀ - ಅಸನ್ನಿಹಿತರಾದ ಶಿಷ್ಯರು ಮಂಗಳಾನುಷ್ಠಾನ ಪೂರ್ವಕ ಗ್ರಂಥ ರಚನೆ ಮಾಡಬೇಕೆಂಬ ಸಂಪ್ರದಾಯವನ್ನು ತಿಳಿಯಲಿ ಮುಂತಾಗಿ ಅನೇಕ ಪರಪ್ರಯೋಜನಗಳಿಗಾಗಿ ಶ್ರೀ ವೇದವ್ಯಾಸರು ಸಿರಿ ವಿಧಿ ಮೊದಲಾದ ಸರ್ವ ದೇವತೆಗಳಿಗೂ ಅತ್ಯಂತ ಇಷ್ಟ ದೇವತೆಯಾದ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾರೆ.
ಜನ್ಮಾದ್ಯಸ್ಯಯತೋsನ್ವಯಾದಿ-
ತರತಶ್ಚಾರ್ಥೇಷ್ವಭಿಜ್ಞ: ಸ್ವರಾಟ್
ತೇನೇ ಬ್ರಹ್ಮ ಹೃದಾಯ ಆದಿ -
ಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿ ಮೃದಾಂ ಯಥಾ -
ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾಸ್ವೇನ ಸದಾ ನಿರಸ್ತ -
ಕುಹಕಂ ಸತ್ಯಂ ಪರ೦ ಧೀಮಹಿ ।।
1. ಶ್ರೀಮನ್ನಾರಾಯಣನೇ ಚೇತನಾಚೇತನ ಜಗತ್ತಿನ ಸೃಷ್ಟಿ ಮೊದಲಾದುವುಗಳ ಕರ್ತನು.
2. ಉಪಕ್ರಮಾದಿ ಸಾಧನಗಳಿಂದ ಶ್ರುತಿ - ಸ್ಮೃತಿಗಳನ್ನು ವಿಚಾರ ಮಾಡಿದಾಗ ಅವುಗಳ ತಾತ್ಪರ್ಯ ಹರಿಯೇ ಜಗತ್ಸೃಷ್ಟ್ಯಾದಿ ಕರ್ತನೆಂಬುದು ವಿಷಾದವಾಗುವುದು.
3. ವೇದಗಳಿಗೆ ಅನುಕೂಲಗಳಾದ ತರ್ಕಗಳಿಂದಲೂ ಈ ಸಿದ್ಧಾಂತವೇ ನಿರ್ಣಯಿಸಲ್ಪಡುವುದು.
4. ಶ್ರೀ ಹರಿಯೇ ಸರ್ವೋತ್ತಮನು ( ಅಭಿಜ್ಞನು )
5. ಇನ್ನೊಬ್ಬ ಅಧಿಪತಿ ತನಗಿಲ್ಲದವನು. ಸ್ವತಂತ್ರ ಕರ್ತನು.
6. ಜ್ಞಾನದಲ್ಲಿ ಶ್ರೀ ಚತುರ್ಮುಖ ಬ್ರಹ್ಮದೇವರಿಗೇ ವೇದೋಪದೇಶಕನಾದ ಜಗದ್ಗುರು. ( ಕೃಷ್ಣ೦ ವಂದೇ ಜಗದ್ಗುರುಮ್ ).
7. ಶ್ರೀ ಹರಿಯ ಅನುಗ್ರಹವಿಲ್ಲದೆ ಅವನನ್ನು ಯಾರೂ ತಿಳಿಯಲಾರರು.
8. ಪೂರ್ಣನಾದ್ದರಿಂದ ರಾಮ ಕೃಷ್ಣಾದಿ ರೂಪಗಳಿಂದ ಅವತಾರ ಮಾಡುವುದರಿಂದಲೂ - ಜೀವರಿಗೆ ಜಡ ದೇಹಗಳನ್ನು ಕೊಟ್ಟು ಸೃಷ್ಟಿ ಮಾಡುವುದರಿಂದಲೂ - ಪ್ರಕೃತಿಯಿಂದ ತತ್ತ್ವಾದಿಗಳನ್ನು ಸೃಷ್ಟಿಸುವುದರಿಂದಲೂ ಯಾವ ಪ್ರಯೋಜನವನ್ನೂ ಹೊಂದುವುದಿಲ್ಲ. ಅವನ ( ಶ್ರೀ ಹರಿಯ ) ಸ್ವಭಾವವೇ ಹೀಗೆ.
9. ಹಾವಾಡಿಗರವನಂತೆ ಇಂದ್ರಜಾಲ ಮೊದಲಾದ ವಂಚನೆಯಿಲ್ಲದವನು.
10. ನಿರ್ದೋಷ ಜ್ಞಾನಾನಂದಮೂರ್ತಿಯಾದ್ದರಿಂದ ಸತ್ಯನಾಮಕನು.
11. ಪೂರ್ಣನೂ, ಸರ್ವೋತ್ತಮನೂ, ಸಕಲ ರಕ್ಷಕನೂ ಆದವನು.
ಇಂಥಾ ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತೇನೆ.
ಹರಿವಂಶದಲ್ಲಿ ಶ್ರೀದುರ್ವಾಸ ಮುನಿಗಳು...
ಯದೇತತ್ಪರಮಂ ಬ್ರಹ್ಮ
ವೇದವಾದೇಷು ಪಠ್ಯತೇ ।
ಸದೇವ ಪುಂಡರೀಕಾಕ್ಷ:
ಸ್ವಯಂ ನಾರಾಯಣಃ ಪರಃ ।।
ಶ್ರೀ ವರದ ವ್ಯಾಸ ವಿಠಲರು...
ಶ್ರೀ ರಮಣ ಪರಮೇಷ್ಠಿ ಶಂಕರ ।
ಐರಾವತವರೂಢ ಮನಸಿಜ ।
ಸರ ಅಬ್ಜ ಅಮರ ಕಿನ್ನರ ಕಿಂಪುರುಷರಾ ।।
ಚಾರು ಚರಣ ಕಮಲಕೆ ಆರಾಧಿಸವೆ ।
ಪರಮ ಕರುಣದಿ ಭಾರಿಭಾರಿಗೆ ।
ಎಮಗೆ ಶುಭವನು ಪಾಲಿಸುವದಯ್ಯಾ ।।
- ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ
****
POOJA VIDHANAS BY RASHMI ADISH
MYSORE
Here is the links below of all Pooja vidhanams narrated
By Rashmi Adish Mysore
Just click on the link to listen pooja
🌟 Mangala gowri Pooja vidhanam
🌸 mangala gowri song
🌟 Garuda panchmi Pooja vidhanam
🌸 Garuda panchmi katha song
🐍naga Aarti song
🌟Sri vara maha Lakshmi vratam
🌸Aarati song
🌟Sri Krishna Janmashtami Pooja
🌟Phalagowri
🌟Gowri Pooja vidhanam (Swarna gowri vratam)
🌟 Ganesha vratham(varasiddivinayaka vratham
🌟Sri Anathapadmanabha Swamy vratham
***
No comments:
Post a Comment