ಭಾದ್ರಪದ ಅಮಾವಾಸ್ಯೆ ಪೂಜಾ ವಿಧಾನ ಮತ್ತು ಪ್ರಯೋಜನ
ಭಾದ್ರಪದ ಅಮಾವಾಸ್ಯೆಯಂದು ಹೇಗೆ ಪೂಜಿಸಬೇಕು ಗೊತ್ತಾ..? ಭಾದ್ರಪದ ಅಮಾವಾಸ್ಯೆಯಂದು ಪೂಜೆಯನ್ನು ಕೈಗೊಳ್ಳುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ತಿಳಿದುಕೊಳ್ಳಿ.
ಭಾದ್ರಪದ ಅಮಾವಾಸ್ಯೆಯನ್ನು ವಿಶೇಷವೆನ್ನಲು ಕಾರಣವೇನು..?
ಭಾದ್ರಪದ ಅಮಾವಾಸ್ಯೆಯನ್ನು ಅಚರಿಸಲು ಕುಶಾ ಅಥವಾ ದರ್ಬೆ ಹುಲ್ಲನ್ನು ಸಂಗ್ರಹಿಸಲಾಗುತ್ತದೆ. ಈ ದಿನದಂದು ಧಾರ್ಮಿಕ ವಿಧಿ - ವಿಧಾನಗಳನ್ನು ಪೂರೈಸಲು ಧಾರ್ಮಿಕ ಮಾನ್ಯತೆಯುಳ್ಳ ದರ್ಬೆಯನ್ನು ಬಳಸುವುದು ಅತ್ಯಂತ ಪ್ರಯೋಜನಕಾರಿಯೆನ್ನುವ ನಂಬಿಕೆಯಿದೆ. ಈ ದಿನ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತವಾಗಲೆಂದು ಹಲವಾರು ಆಚರಣೆಗಳನ್ನು ಮಾಡುತ್ತೇವೆ.
ಮತ್ತೊಂದೆಡೆ ಈ ದಿನ ಕೆಲವು ಮಹಿಳೆಯರು ತಮ್ಮ ಪತಿ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಉಪವಾಸವನ್ನು ಕೈಗೊಳ್ಳುತ್ತಾರೆ. ನೀವು ಈ ದಿನ ಶಿವ, ಶನಿ ಮತ್ತು ತಾಯಿ ದುರ್ಗೆಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ದಕ್ಷಿಣ ಭಾರತದಲ್ಲಿ ಪಿಥೋರಿ ಅಮಾವಾಸ್ಯೆಯನ್ನು ಪೋಲಾಲಾ ಅಮಾವಾಸ್ಯೆಯಂದು ಕರೆಯಲಾಗುತ್ತದೆ. ಈ ದಿನ ಅವರು ತಾಯಿ ಪಾರ್ವತಿಯ ಒಂದು ರೂಪವಾದ ತಾಯಿ ಪೋಲೇರಮ್ಮನನ್ನು ಪೂಜಿಸುತ್ತಾರೆ.
ಪಿಥೋರಿ ಅಥವಾ ಕುಶಾ ಗ್ರಹಣಿ ಅಮಾವಾಸ್ಯೆಯೆಂದು ಕರೆಯಲಾಗುವ ಭಾದ್ರಪದ ಅಮಾವಾಸ್ಯೆ. ತರ್ಪಣ ನೀಡುವುದು, ದಾನ ಮಾಡುವುದು ಮತ್ತು ಸ್ನಾನ ಮಾಡುವುದು ಈ ಮಾಸದಲ್ಲಿ ಪ್ರಮುಖವಾದುದ್ದಾಗಿದೆ. ಪ್ರತೀ ಮಾಸದಲ್ಲೂ ಅಮಾವಾಸ್ಯೆ ಬರುತ್ತದೆ. ಆದರೆ ಭಾದ್ರಪದ ಮಾಸದ ಆರಂಭದಲ್ಲಿ ಬರುವ ಅಮಾವಾಸ್ಯೆಯ ಮಹತ್ವವೇನು ಗೊತ್ತೇ..?
ಭಾದ್ರಪದ ಅಮಾವಾಸ್ಯೆಯ ಮಹತ್ವ:
ಭಾದ್ರಪದ ಅಮಾವಾಸ್ಯೆಯಲ್ಲಿ ಕುಶ ಅಂದರೆ ದರ್ಬೆಯನ್ನು ಕಡ್ಡಾಯವಾಗಿ ಬಳಸುವುದರಿಂದ ಪ್ರಾಚೀನ ಗ್ರಂಥಗಳಲ್ಲಿ ಈ ಅಮಾವಾಸ್ಯೆಯನ್ನು ಕುಶೋತ್ಪತಿನಿ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ. ಈ ದಿನದಂದು ಸಂಗ್ರಹಿಸಿದ ದರ್ಬೆಯನ್ನು ಸುಮಾರು ಒಂದು ವರ್ಷಗಳ ಧಾರ್ಮಿಕ ಚಟುವಟಿಕೆಯಲ್ಲಿ ಬಳಸಬಹುದು. ಅದೇ ಭಾದ್ರಪದ ಅಮಾವಾಸ್ಯೆ ಸೋಮವಾರ ಬಂದರೆ, ದರ್ಬೆಯನ್ನು ಬರೋಬ್ಬರಿ 12 ವರ್ಷಗಳವರೆಗೆ ಬಳಸಬಹುದು.
ಧರ್ಮಗ್ರಂಥಗಳಲ್ಲಿ ಸುಮಾರು 10 ವಿವಿಧ ಬಗೆಯ ದರ್ಬೆಯ ಕುರಿತು ಉಲ್ಲೇಖಿಸಲಾಗಿದೆ. ಭಾದ್ರಪದ ಅಮಾವಾಸ್ಯೆಯಂದು ಈ 10 ಬಗೆಯ ದರ್ಬೆ ಹುಲ್ಲುಗಳಲ್ಲಿ ಯಾವುದೇ ನಿಮಗೆ ಸುಲಭವಾಗಿ ಸಿಗುತ್ತದೆಯೋ ಅದನ್ನೇ ಬಳಸಬಹುದು. ದರ್ಬೆಯ ಹುಲ್ಲನ್ನು ಕೀಳುವಾಗ ಕೈಗಳಿಂದ ಕೀಳಬೇಕು. ಯಾವುದೇ ಚೂರಿ, ಕತ್ತರಿ ಅಥವಾ ಕತ್ತಿಯನ್ನು ಬಳಸಬಾರದು. ಉತ್ತರ ದಿಕ್ಕಿನಲ್ಲಿರುವ ದರ್ಬೆಯನ್ನೇ ಮುಂಜಾನೆ ಕೀಳಬೇಕೆನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಭಾದ್ರಪದ ಅಮಾವಾಸ್ಯೆಯ ಆಚರಣೆಗಳು ಯಾವುವು..?
1) ಭಾದ್ರಪದ ಅಮಾವಾಸ್ಯೆಯಂದು ಜನರು ಅರಳಿ ಮರಕ್ಕೆ ಪ್ರದಕ್ಷಿಣೆಯನ್ನು ಹಾಕಬೇಕು. ಇದರೊಂದಿಗೆ ಕಪ್ಪು ಎಳ್ಳು ಮತ್ತು ಗಂಗಾ ಜಲವನ್ನು ಬೆರೆಸಿದ ಹಸಿ ಹಾಲನ್ನು ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಅರ್ಪಿಸಬೇಕು.
2) ಶಿವನನ್ನು ಆರಾಧಿಸುವುದು ಅತ್ಯಂತ ಪ್ರಮುಖವಾದುದ್ದೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
3) ಭಾದ್ರಪದ ಅಮಾವಾಸ್ಯೆಯಂದು ಬಲಗೈಯಿಂದ ದರ್ಬೆಯ ಹುಲ್ಲನ್ನು ಕಿತ್ತು ಪೂಜೆಗೆ ಬಳಸಬೇಕು.
4) ಗಂಡು ಮಕ್ಕಳನ್ನು ಹೊಂದಿರುವ ಮಹಿಳೆಯರು ತಮ್ಮ ಪುತ್ರರ ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಭಾದ್ರಪದ ಅಮಾವಾಸ್ಯೆಯಂದು ತಾಯಿ ದುರ್ಗೆಯನ್ನು ಪೂಜಿಸಬೇಕು. ಕೆಲವು ಸ್ಥಳಗಳಲ್ಲಿ ಮಹಿಳೆಯರು ಮಗನ ಉತ್ತಮ ಭವಿಷ್ಯಕ್ಕೆ, ಆರೋಗ್ಯಕ್ಕೆ, ಆಯಸ್ಸಿಗಾಗಿ ಉಪವಾಸವನ್ನು ಕೂಡ ಕೈಗೊಳ್ಳುತ್ತಾರೆ.
5) ಜಾತಕದಲ್ಲಿ ಶನಿ ಮತ್ತು ರಾಹು - ಕೇತುವಿನ ದುಷ್ಟರಿಣಾಮದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವರು ಭಾದ್ರಪದ ಅಮಾವಾಸ್ಯೆಯಂದು ಪೂರ್ವಜರ ಹೆಸರಿನಲ್ಲಿ ದಾನ - ಧರ್ಮವನ್ನು ಮಾಡಿ, ತರ್ಪಣವನ್ನು ಅರ್ಪಿಸಬೇಕು.
6) ತಮ್ಮ ಕುಂಡಲಿಯಲ್ಲಿ ಕಾಳ ಸರ್ಪ ದೋಷವನ್ನು ಹೊಂದಿದವರು ಸಮಸ್ಯೆಗಳ ಪರಿಹಾರಕ್ಕೆ ಈ ದಿನದಂದು ವಿಶೇಷ ಪೂಜೆಯನ್ನು ಮಾಡಬೇಕು.
7) ನಿಮ್ಮ ಆರ್ಥಿಕ ಸ್ಥಿತಿ ಗತಿಗಳಿಗೆ ಅನುಗುಣವಾಗಿ ಅಗತ್ಯವಿರುವ ವ್ಯಕ್ತಿಗಳಿಗೆ ದಾನ ಮಾಡಬೇಕು.
8) ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರ ಹೆಸರಿನಲ್ಲಿ ಬಡವರಿಗೆ ಆಹಾರವನ್ನು ನೀಡಿ.
9) ಪೂರ್ವಜರ ಹೆಸರಿನಲ್ಲಿ ಈ ದಿನ ಹಸುಗಳಿಗೆ ಆಹಾರವನ್ನು ನೀಡಬೇಕು. ಅಲ್ಲದೇ ಹತ್ತಿರುವ ನದಿಯಲ್ಲಿ ಪಿಂಡವನ್ನು ಬಿಡಬೇಕು.
ಭಾದ್ರಪದ ಅಮಾವಾಸ್ಯೆಯ ಪೂಜಾ ವಿಧಾನ:
1) ಭಾದ್ರಪದ ಅಮಾವಾಸ್ಯೆಯಂದು ಮುಂಜಾನೆ ಬೇಗ ಎದ್ದು, ಮೊದಲು ನದಿ, ಕೊಳ ಅಥವಾ ಜಲಾಶಯದಲ್ಲಿ ಸ್ನಾನ ಮಾಡಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಸ್ನಾನ ಮಾಡುವ ನೀರಿಗೆ ಗಂಗಾಜಲ ಮತ್ತು ದರ್ಬೆಯ ಎಲೆಯನ್ನು ಬೆರೆಸಿ ಮನೆಯಲ್ಲೇ ಸ್ನಾನ ಮಾಡಬಹುದು.
2) ನಂತರ ಶುದ್ಧವಾದ ಬಟ್ಟೆಯನ್ನು ಧರಿಸಿ, ಕೈಯಲ್ಲಿ ನೀರಿಟ್ಟುಕೊಂಡು ವ್ರತ ಮಾಡುವ ಬಗ್ಗೆ ಪ್ರಮಾಣ ವಚನವನ್ನು ತೆಗೆದುಕೊಳ್ಳಿ.
3) ಮುಂಜಾನೆ ಸೂರ್ಯನಿಗೆ ಅರ್ಘ್ಯವನ್ನು ನೀಡಿ ಮತ್ತು ಎಳ್ಳುಗಳನ್ನು ಹರಿಯುವ ನೀರಿಗೆ ಅರ್ಪಿಸಿ.
4) ಹಿಟ್ಟಿನಿಂದ 64 ದೇವತೆಗಳ ವಿಗ್ರಹಗಳನ್ನು ತಯಾರಿಸಿ ಆ ವಿಗ್ರಹಗಳಿಗೆ ಶೃಂಗಾರ ಮಾಡಿ ಪೂಜಿಸಿ.
5) ಎಲ್ಲಾ ದೇವತೆಗಳ ವಿಗ್ರಹಗಳನ್ನು ಒಂದೇ ತಟ್ಟೆಯಲ್ಲಿಟ್ಟು ಹೂವುಗಳಿಂದ, ಹಣ್ಣುಗಳಿಂದ, ಧೂಪ, ಸಿಂಧೂರ ಇತ್ಯಾದಿಗಳಿಂದ ಪೂಜಸಬೇಕು.
6) ಕೊನೆಯಲ್ಲಿ ಎಲ್ಲಾ ದೇವತೆಗಳಿಗೆ ಆರತಿಯನ್ನು ಮಾಡಿ, ಅವರ ಆಶೀರ್ವಾದವನ್ನು ಪಡೆದುಕೊಳ್ಳಿ.
7) ಈ ಎಲ್ಲಾ ಆಚರಣೆಗಳ ನಂತರ ಪ್ರಸಾದವನ್ನು ಬ್ರಾಹ್ಮಣರಿಗೆ ಅಥವಾ ಕುಟುಂಬದ ಹಿರಿಯರಿಗೆ ಅರ್ಪಿಸಿ, ಅವರ ಆಶೀರ್ವಾದವನ್ನು ಪಡೆದುಕೊಳ್ಳಿ.
8) ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವವರಿಗೆ ಅಥವಾ ಬ್ರಾಹ್ಮಣರಿಗೆ ದಾನ ಮಾಡಿ.
9) ಮುಸ್ಸಂಜೆಯಲ್ಲಿ ಅರಳಿ ಮರದ ಕೆಳಗೆ ಪೂರ್ವಜರ ನೆನಪಿಗಾಗಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ, 7 ಬಾರಿ ಪ್ರದಕ್ಷಿಣೆ ಹಾಕಿ.
10) ಅಮಾವಾಸ್ಯೆಯನ್ನು ಭಗವಾನ್ ಶನಿಯ ದಿನವೆಂದು ಕರೆಯಲಾಗುತ್ತದೆ. ಆದ್ದರಿಂದ ಈ ದಿನ ನೀವು ಶನಿಯನ್ನು ಕೂಡ ಪೂಜಿಸಬೇಕು.
ಇದು 2020 ಭಾದ್ರಪದ ಅಮಾವಾಸ್ಯೆಯಂದು ನೀವು ದೇವರನ್ನು, ಪೂರ್ವಜರನ್ನು ಪೂಜಿಸುವ ವಿಧಾನಗಳಾಗಿವೆ. ಈ ದಿನ ಪೂಜಿಸುವುದರಿಂದ ನಿಮ್ಮ ಪತಿಯ ಆಯಸ್ಸು ಮಗನ ಆಯಸ್ಸು ಹೆಚ್ಚಾಗುತ್ತದೆ. ಕುಟುಂಬದ ಅಭಿವೃದ್ಧಿಗಾಗಿ, ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ನೀಡುವುದಕ್ಕಾಗಿ ಈ ದಿನ ನಾವು ಪೂಜೆಯನ್ನು ಮಾಡಬೇಕು.
ಈ ಬಾರಿ ಅಂದರೆ 2020ರ ಭಾದ್ರಪದ ಅಮಾವಾಸ್ಯೆಯನ್ನು ಆಗಸ್ಟ್ 19 ರಂದು ಬುಧವಾರ ಆಚರಿಸಲಾಗುತ್ತಿದೆ. 2020 ಭಾದ್ರಪದ ಮಾಸವು ಕೂಡ ಆಗಸ್ಟ್ 19 ರಿಂದ ಆರಂಭವಾಗಲಿದೆ.
******
No comments:
Post a Comment