SEARCH HERE

Monday, 20 April 2020

ಶೃತಿ ಶ್ರೌತ್ರಿ ಸ್ಮೃತಿ ಸ್ಮಾರ್ತ

ಸ್ಮಾರ್ತರು" ಅಂದರೆ ಏನು? "ಶ್ರೌತ" ಮತ್ತು "ಸ್ಮಾರ್ತ" ಏನು ವ್ಯತ್ಯಾಸ? ಇದರಲ್ಲಿ ಪ್ರಮುಖವಾದ ವಿಚಾರ ಏನಿದೆ? ಈಗಿನ ಕಾಲದ ನಾವು ಇದನ್ನ ಯಾಕೆ ತಿಳಿಯಬೇಕು? ಇದರಿಂದ ಏನು ಪ್ರಯೋಜನ?

"ಶೃತ" ಅಂದರೆ ಸಂಸ್ಕೃತದಲ್ಲಿ "ಕೇಳಿದ್ದು" ಎಂದು. ವೇದಗಳನ್ನ ಮನಸ್ಸಿನಲ್ಲಿ ಭಗವಂತನಿಂದ ಕೇಳಿ ಋಷಿ/ಮುನಿಗಳು ಬರೆದಿದ್ದಾರೆ, ಅವು ಮಾನವ ನಿರ್ಮಿತಿ ಅಲ್ಲ, ಅನ್ನುವ ಭಾವನೆ ಇರುವುದರಿಂದ, ಅವುಗಳಿಗೆ "ಶೃತಿ" ಅನ್ನುತ್ತಾರೆ. ಶೃತಿಯಂತೆ ನಡೆಯುವುದು ಶ್ರೌತ. ಅಂದರೆ ವೇದದಲ್ಲಿರುವುದನ್ನ/ವೇದದಲ್ಲಿರುವಂತೆ ಮಾತ್ರ ಕಾರ್ಯಮಾಡುವುದು. ಶೃತಿಯಂತೆ ಕೆಲಸಮಾಡುವುದು/ಮಾಡಿಸುವವನು "ಶ್ರೌತ್ರಿ" ಆಗುತ್ತಾನೆ.

"ಸ್ಮೃತಿ" ಅಂದರೆ ನೆನಪಿನ ಪಟಲ (memory). ನೆನಪಿನಿಂದ ಕೆಲಸ ಮಾಡುವುದಕ್ಕೆ "ಸ್ಮೃತಿ" ಅಂತ ಹೆಸರು. "ಸ್ಮೃತಿ" ಇಂದ ಕೆಲಸ ಮಾಡುವವರು "ಸ್ಮಾರ್ತರು". ಈ ಪದಗಳ ಅರ್ಥ ಬಹು ಸರಳ. ಪದದ ಅರ್ಥ ತಿಳಿದ ಮೇಲೆ ಮಿಕ್ಕಿದ್ದೆಲ್ಲವೂ ಕಾಮನ್.ಸೆನ್ಸ್.

"ಸ್ಮೃತಿ" ಇಂದ ಮಾಡುವುದು ಅಂದರೆ, ಹಿಂದಿನಿಂದ ಬಂದ ಪದ್ದತಿಯಿಂದ ಮಾಡುವುದು ಎಂದು ಅರ್ಥ. ವೇದದಲ್ಲಿ ಇರದಿದ್ದರೂ ಅಥವಾ ಭಿನ್ನವಾಗಿದ್ದರೂ, ಮನೆ ಪದ್ದತಿಯಂತೆ ಕೆಲಸ ಮಾಡುವುದು ಎಂದು ಅರ್ಥ.

ವೇದಗಳನ್ನ ವೇದವ್ಯಾಸರು ವಿಂಗಡಿಸಿದ ಮೇಲೆ, ಆದಕ್ಕೆ ಮಾರ್ಪಾಡು ಮಾಡುವುದನ್ನ ನಿಲ್ಲಿಸಲಾಯಿತು. ಒಂದು ಪಂಗಡ ವೇದದಲ್ಲಿರುವುದನ್ನ ಮಾತ್ರ ಮಾಡುವ ಆಭ್ಯಾಸ ಇಟ್ಟುಕೊಂಡರು. ವೇದಗಳು ದೈವವಾಣಿ. ಅದರಲ್ಲಿರುವುದು "ಸಾಕು" ಎನ್ನುವ ವಾದ ಇವರದ್ದು. ಇವರು ಶ್ರೋತೃಗಳು. ವೇದದಲ್ಲಿ "ಅಗ್ನಿಕಾರ್ಯ' ಇದೆ ಮಾಡುತ್ತಾರೆ. 'ಸತ್ಯನಾರಾಯಣ' ಪೂಜೆ ಇಲ್ಲ. ಆದ್ದರಿಂದ ಮಾಡುವುದಿಲ್ಲ. ಮಾಡದಿದ್ದರೆ ಹಾನಿ ಏನೂ ಇಲ್ಲ ಅನ್ನುವ ಅಂಬೋಣ.

ಇನ್ನು ಕೆಲವರು, ವೇದದಲ್ಲಿ ಇಲ್ಲದಿರುವುದನ್ನ ಮುಂದೆ ಕಂಡರು. ಉದಾಹರಣೆಗೆ ನೀತಿ ಶಾಸ್ತ್ರ. ಅಂದರೆ ಕಾನೂನು, ಕಟ್ಟಳೆಗಳು. ಮದುವೆ ಯಾವರೀತಿ ಇರಬೇಕು, ಗೃಹಸ್ತ ಹೇಗಿರಬೇಕು ಹೀಗೆ ಕಾನೂನು ಕಟ್ಟಳೆಗಳು.

ಹೀಗೆ ಬೇರೇ ಬೇರೇ ಏಕೆ, ಎಂಬುದನ್ನ ಸರಳವಾಗಿ ಅರ್ಥ ಮಾಡಿಕೊಳ್ಳಲು, ನಮ್ಮ ಸಂವಿಧಾನ ಮತ್ತು ಕಾನೂನುಗಳ (ಐಪಿಸಿ, ಸುಗ್ರೀವಾಜ್ಞೆ, ಸರ್ಕಾರಿ ಆದೇಶ, ಕೋರ್ಟಿನ ಆದೇಶ ಹೀಗೆ) ವ್ಯತ್ಯಾಸ ಗಮನಿಸಿ.

ನಮ್ಮ ಭಾರತದ ಸಂವಿಧಾನದಲ್ಲಿಯೇ ಕಾಯ್ದೆ ಕಾನೂನುಗಳೆಲ್ಲಾ ಅಡಕವಾಗಿ ಇಲ್ಲ. ಕರ್ನಾಟಕದಲ್ಲಿ, ಸರ್ಕಾರ, ಹಾಲಿನ ಬೆಲೆ ಹೆಚ್ಚಳ ಮಾಡಲು ಒಂದು ಸರ್ಕಾರಿ ಆದೇಶ ಸಾಕು. ಅದಕ್ಕೆ ಭಾರತದ ಸಂವಿಧಾನ ತಿದ್ದುಪಡಿ ಮಾಡಬೇಕಿಲ್ಲ. ಸರ್ಕಾರ ಮಾಡುವ ಕಾನೂನೆಲ್ಲವೂ ಸಂವಿಧಾನದಲ್ಲಿ ಹೋಗಿ ಸೇರ್ಪಡೆ ಆಗುವುದೂ ಇಲ್ಲ. ಆದರೆ, ಕಾನೂನುಗಳು ಸಂವಿಧಾನ ವಿರೋಧಿ ಆಗಿರಬಾರದು. ಸರ್ಕಾರದ ಕಾನೂನು ಸಂವಿಧಾನ ವಿರೊಧಿಯಾಗಿದ್ದರೆ, ಅದನ್ನ ನಮ್ಮಕೊರ್ಟುಗಳು ರದ್ದುಮಾಡುತ್ತವೆ.

ಸಂವಿಧಾನ ಉತ್ತಮ ಭಾರತೀಯನಾಗಲು, ರೂಪಿಸಿದ ಅತ್ಯಂತ ಎತ್ತರದ, ಆಶೆ, ಆಶೋತ್ತರದ ಗುರಿಗಳನ್ನ ಹೇಳುತ್ತದೆ. ಕಾನೂನು ಕಾಯ್ದೆಗಳು ದಿನ ನಿತ್ಯದ ಜೀವನ ವ್ಯವಹಾರಕ್ಕೆ ಬೇಕಾದ ನಿಶ್ಚಿತತೆ (clarity) ತಂದು ಕೂಡುತ್ತದೆ. ಕಾನೂನು, ಕಾಲಕಾಲಕ್ಕೆ ಬದಲಾಗುತ್ತವೆ. ಆದರೆ ಗುರಿ (ಸಂವಿಧಾನ) ಬದಲಾಗುವುದಿಲ್ಲ/ಬದಲಾಗಬೇಕಿಲ್ಲ.

ಇದೇ ರೀತಿ ವೇದಗಳೂ ರೂಪಿತವಾಗಿವೆ. ವೇದಗಳ ಆಶೋತ್ತರ ಮುರಿಯದೇ ಹೊಸ ವಿಷಯಗಳು ಬಂದಾಗ, ಆ ಹೊಸಾ ವಿಷಯಗಳನ್ನು ಅಡವಳಿಸಿಕೊಂಡು ಬಂದವರು "ಸ್ಮಾರ್ಥರು". ಆಳವಡಿಸಿಕೊಂಡ ಪದ್ದತಿ ಮನೆ ಪದ್ದತಿ ಮಾಡಿಕೊಂಡರು. ಮನೆ ಪದ್ದತಿಗೆ ಎನೋ ಉತ್ತಮ ಕಾರಣ ಇದೆ. ಆದ್ದರಿಂದ ಆ ರೀತಿಯಲ್ಲೇ ಮಾಡುವುದೇ ಸೂಕ್ತ ಅನ್ನುವ ವಾದದೊಡನೆ ಮುಂದೆ ನಡೆದವರು ಸ್ಮಾರ್ಥರು. ವಿಚಾರ ಅರ್ಥ ಆಗದಿದ್ದಾಗ, ಹಿರಿಯರ ಬುದ್ದಿವಂತಿಕೆಗೆ ಬೆಲೆಕೊಟ್ಟು ಅವರು ನಡೆದಂತೆ ನಡೆಯುವುದು ಉತ್ತಮವೇ. ಆದರೆ ವಿಷಯ/ಸಮಸ್ಯೆಗೆ ಹಿಂದಿಗಿಂತಲೂ ಉತ್ತಮ ವಿಧಾನ ಇರುವಾಗ ಪದ್ದತಿ ಹೆಸರಿನಲ್ಲಿ ಹಳೆಯದನ್ನೇ ಮಾಡುವುದು ಎಷ್ಟು ಸರಿ? ಹಿಂದೆ ನಡೆದೇ ಹೋಗುತ್ತಿದ್ದರು. ಈಗ ವಿಮಾನದ ತನಕ ಅನುಕೂಲ ಬಂದಿದೆ. ಅದನ್ನ ಬಳಸುವುದಿಲ್ಲವೇ? ಹಾಗೇ ಮನೆ ಪದ್ದತಿಗಳೂ ಕೂಡ.

ಈ "ಸ್ಮಾರ್ಥ" ಪದಕ್ಕೂ, ಸೈದ್ದಾಂತಿಕ ನೆಲೆಗಳಾದ ದ್ವೈತ,ಅದ್ವೈತಗಳಿಗೂ ಸಂಬಂಧ ಇಲ್ಲ. ಹಾಗೇ ತತ್ವಗಳಾದ ಶೈವ, ವೈಶ್ಣವ ವಿಚಾರಗಳಿಗೂ ಸಂಬಂಧ ಇಲ್ಲ. ಪದ್ದತಿ ಸೈದ್ದಾಂತಿಕ, ತತ್ವಕ್ಕೆ ಬಹುಮಟ್ನುಟಿಗೆ ನಿರ್ಧಾರ ಆಗಿರುವುದರಿಂದ, ಸ್ಮಾರ್ಥ ಪದ ಬಳಕೆ ಮಾಡುತ್ತಾರೆ ಅಷ್ಟೇ. ಒಂದು ರೀತಿ ನೋಡಿದರೆ, ಎಲ್ಲರೂ ಸ್ಮಾರ್ಥರೇ.

ಒಂದು ಉದಾಹರಣೆ. ವೇದಗಳು ಹುಟ್ಟಿದ ಉತ್ತರ ಭಾರತದಲ್ಲಿ ಮದುವೆ ಮಹೂರ್ತ ರಾತ್ರಿ ಇರುತ್ತದೆ. ದಕ್ಷಿಣದಲ್ಲಿ ಬೆಳಗ್ಗೆ ಇಡುತ್ತಾರೆ, ಸರಿ ಯಾವುದು? ನಾವು ಯಾವುದನ್ನ ಮಾಡಬೇಕು?
ಇದು ವೇದದಲ್ಲಿ ಬರುವ ವಿಚಾರವೇ ಅಲ್ಲ. ವೇದ ನೀತಿ ಬದ್ದ ಗೃಹಸ್ಥಾಶ್ರಮ ಹೇಳುತ್ತದೆ. ವೇದದ ಉನ್ನತ ಮಟ್ಟಕ್ಕೆ, ಈ ನೀತಿ ಬದ್ಧ ಅಂದರೆ, ಸಾಮಾಜಿಕವಾಗಿ ಸಮ್ಮತವಾದ, ಸಂತೋಷ ಕೊಡುವ, ಶಾಂತಿ ಕದಡದ ಎಂದು ಅರ್ಥ. ಶಾಸ್ತ್ರ ಹೇಳಬೇಕಾದದ್ದು / ಹೇಳುವುದು ಇಷ್ಟನ್ನೆ.

ಆದರೆ ಈ ವಿಚಾರ, ಸ್ಮಾರ್ಥ ಪದ ಅರ್ಥೈ‌ಸಲು ಉತ್ತಮ ಉದಾಹರಣೆ. ಈ ಪ್ರಶ್ನೆ ವೇದದ ಬದಲು, ವೇದಾಂಗವಾದ ಜ್ಯೊತಿಷ್ಯಕ್ಕೆ ಸಂಭಂದಿಸಿದ್ದು. ಮದುವೆಗೆ ಜ್ಯೋತಿಷ್ಯದಂತೆ ದಿನ (date) ನಿಗದಿ ಮಾಡಲಾಗುತ್ತದೆ. ದಿನ ಅಂದರೆ ಪಂಚಾಂಗದಲ್ಲಿ ತಿಥಿ. ಯಾವ ದಿನ ನಿಗದಿ ಮಾಡುತ್ತಾರೋ, ಆ ದಿನ ಎಲ್ಲರೂ ಬಂದು ಸೇರುತ್ತಾರೆ. ಎಲ್ಲರೂ ಬಂದು ಸೇರಲು ದಿನ ನಿಗದಿ ಮಾಡುವುದು ಅವಶ್ಯಕ. ಈಗಿನಂತೆ ಹಿಂದೆ ಕ್ಯಾಲೆಂಡರ್ ಇರಲಿಲ್ಲ. ದಿನ/ ತಿಥಿ ಎಣಿಸುವುದು/ತೀರ್ಮಾನಿಸುವುದು ಚಂದ್ರನಿಂದ. ತಿಥಿ ತೀರ್ಮಾನಿಸಲು ಚಂದ್ರ ಕಾಣುವ ಹೊತ್ತು ಸೂಕ್ತ. ಆದ್ದರಿಂದ ಎಲ್ಲಾ ಬಂದು ಸೇರಿದ ಮೇಲೆ, ಚಂದ್ರನನ್ನ ನೊಡಿ, ತಿಥಿ ಸರಿ ಇದೆಯೆಂದು ತೀರ್ಮಾನಿಸಿ ಮದುವೆ ಮಾಡುತ್ತಿದ್ದದ್ದು. ಇದಕ್ಕೆ ರಾತ್ರಿಯೇ ಸರಿ. ಇದು ಹಳೆಯ ಉತ್ತರದ ಪದ್ದತಿ.

ಉತ್ತರದಿಂದ ದಕ್ಷಿಣಕ್ಕೆ ವೈದಿಕ ಜನ ಬರುವ ಕಾಲಕ್ಕೆ, ತಿಥಿ ಲೆಖ್ಖ ಹಾಕುವ ಪರಿಪಾಠ ಬೆಳೆದಿತ್ತು. ಚಂದ್ರ ಇಲ್ಲದೆಯೂ, ತಪ್ಪಿಲ್ಲದೇ ತಿಥಿ ನಿರ್ಧರಿಸುವ ಸಾಮರ್ಥ್ಯ ಬಂದಿತ್ತು. ಹಾಗಾಗಿ, ಹೆಚ್ಚು ಅನುಕೂಲವಾದ ಬೆಳಗಿನ ಮದುವೆಗಳು ಶುರುವಾದವು. ಹೀಗೆ ಕಾಲ ಚಕ್ರಕ್ಕೆ ತಕ್ಕಂತೆ ಬದಲಾವಣೆ ತಂದುಕೊಂಡರು, ಮನೆ ಪದ್ದತಿ ಮಾಡಿಕೊಂಡರು.

ಈಗ ನಮ್ಮ ಆಚರಣೆಗಳು ಸರಿಯೆ/ತಪ್ಪೇ? ಇಲ್ಲಿ ಸರಿ/ತಪ್ಪು ಇಲ್ಲವೇ ಇಲ್ಲ. ಸಾಮಾಜಿಕ ಕಾನೂನಿನಂತೆ ಮದುವೆ ಆದರೆ, ವೇದದ ಆಶೋತ್ತರ ಈಡೇರಿಸಿದಂತೆ. ಮದವೆ ಯಾವಾಗ/ಹೇಗೆ ಮಾಡಬೇಕು ಅನ್ನುವುದನ್ನ ಶಾಸ್ತ್ರ ನಿರ್ಭಂಧಿಸುವುದಿಲ್ಲ. ಮಾಡುತ್ತಿರುವುದು ಶುಭ ಕಾರ್ಯ. ಆದಷ್ಟೂ ಎಲ್ಲರಿಗೂ ಸಂತೋಷ ತರಲಿ ಅನ್ನುವ ಭಾವ ಅಷ್ಟೇ ಶಾಸ್ತ್ರ ಹೇಳುವುದು. ಆದಷ್ಟು ಹೆಚ್ಚು ಜನರಿಗೆ ಸಂತೋಷ ಕೊಡಲು, ಆದಷ್ಟು ಹೆಚ್ಚು ಜನರಿಗೆ ಅನುಕೂಲ ಇರುವಂತೆ ಮಾಡಿದರೆ ಆಯ್ತು. ಅದು ಬೆಳಗ್ಗೆಯಾ/ರಾತ್ರಿಯಾ ಮುಖ್ಯ ಅಲ್ಲ.

ಇನ್ನೂಂದು ಉದಾಹರಣೆ. ಹಿಂದೆ ಮಹಿಳೆ ಅಥವಾ ಬ್ರಾಹ್ಮಣನಿಗೆ ತಲೆ ತೆಗೆಯುವ ಶಿಕ್ಷೆ (ಈಗಿನ ನೇಣು) ಇರುತ್ತಿರಲಿಲ್ಲ. ಆದರೆ ಈಗಿನ ಕಾನೂನು, ಇದನ್ನ ಮಾನ್ಯ ಮಾಡುವುದೂ ಇಲ್ಲ. ಕಾನೂನು ಹಾಗೂ ನೀತಿ ಶಾಸ್ತ್ರ ತದ್ವಿರುದ್ದವಾಗಿದೆ. ಹೊಸ ಯುಗದಲ್ಲಿ ಮಹಿಳೆಗೆ ಹಾಗೂ ಬ್ರಾಹ್ಮಣನಿಗೆ ನೇಣು ಸಾಧ್ಯ. ನಾವು "ಬ್ರಹ್ಮ ಹತ್ಯಾ" ಪಾಪ ಅನ್ನಲಾಗುವುದಿಲ್ಲ.

ನಿರ್ಭಯ ಹತ್ಯಾಕಾಂಡದ ಆರೊಪಿಗಳಲ್ಲಿ ಒಬ್ಬ "ಶರ್ಮ" ಇದ್ದ. ಆತನ ಶೂಲವನ್ನ ನಾವು ಒಪ್ಪಿದ್ದೆವೆ, ಅದಕ್ಕಾಗಿ ಆಗ್ರಹಿಸಿದೆವು ಕೂಡ.
ಈಗ ನಮ್ಮ ಧರ್ಮದ, ಶಾಸ್ತ್ರದ ಅನಾದಿ ಕಾಲದ ಪದ್ದತಿ ಬಿಟ್ಟು, ಬ್ರಹ್ಮ ಹತ್ಯೆ ಒಪ್ಪಲೇ ಬೇಕಿದೆ.

ಈ ರೀತೀ ಶಾಸ್ತ್ರ ವಿರೋಧಿ ಬ್ರಹ್ಮ ಹತ್ಯೆಯನ್ನೇ ಒಪ್ಪಿದ ಮೇಲೆ, ವಿವಾಹ ಸಂಬಂಧಿ ಕಟ್ಟಳೆಗಳಲ್ಲಿ ಈಗಿನ ಕಾಲಕ್ಕೆ ಹೆಚ್ಚು ಉಪಯುಕ್ತವಾದ ಬದಲಾವಣೆ ಮಾಡಿಕೊಂಡರೆ, ಅದು ಪ್ರಮಾದ ಹೇಗಾಗುತ್ತದೆ?

ಇದೇ ರೀತಿ ಈ ಕಾಲಕ್ಕೆ ಸೂಕ್ತವಾದ ಕೆಲವು ಮಾರ್ಪಾಡು ಬೇಕಿದೆ. ಸ್ಮಾರ್ಥ ಪದದ ಅರ್ಥ ತಿಳಿದವರು, ಈ ಬದಲಾವಣೆಗೆ ಪ್ರೊತ್ಸಾಹ ಕೊಡಬೇಕು. ಇದಕ್ಕೆ ಅವಕಾಶ ಇದೆ. ಇಲ್ಲದಿದ್ದರೆ ಎಲ್ಲ ಬ್ರಾಹ್ಮಣರೂ ಶ್ರೌತ್ರಿ ಯಾಗೇ ಇರಬೇಕಿತ್ತು.

ಇಂದು ಬ್ರಾಹ್ಮಣರು ಹುಟ್ಟಿನಿಂದಾಗಲೀ, ಸಂಭಂದದಿಂದಾಗಲೀ, ಸಹವಾಸದಿಂದಾಗಲೀ ವೃತ್ತಿ, ಪ್ರವೃತ್ತಿಗಳಿಂದಾಗಲಿ ತಮ್ಮ ಬ್ರಾಹ್ಮಣ್ಯ ಉಳಿಸಿಕೊಳ್ಳಲಾಗುವುದಿಲ್ಲ. ಅದು ಉಳಿಯುವುದು, ಉನ್ನತ ಆಚಾರ, ವಿಚಾರ ಮತ್ತು ಸಂಸ್ಕೃತಿ ಇಂದ ಮಾತ್ರ. ಪದ್ದತಿ ಪ್ರಕಾರ ನಡೆಯುವುದೇ ಸಂಸ್ಕೃತಿ, ಸರಿ. ಹಾಗಾಗಿ ಅದರಲ್ಲೂ ಮಾರ್ಪಾಡು ಮಾಡಿಕೊಂಡರೆ, ಇನ್ನು ಉಳಿಯುವುದೇನು? ಎನ್ನವ ಪ್ರಶ್ನೆ ಬರುತ್ತದೆ. ಆದರೆ, ಇದು ಭಯ ಅಷ್ಟೇ. ಬ್ರಾಹ್ಮಣರ ಮೂಲ ಗುರಿ, ಇರುವುದು ಉನ್ನತ, ಆಚಾರ ವಿಚಾರ ಹೊಂದಲು. ರೀತಿ, ನೀತಿ ಬದಲಾದರೂ, ಗುರಿ ಬದಲಾಗಬಾರದು. ವೇದದ ಆಶೋತ್ತರ ಕೂಡ ಇದೇ. ವಿಚಾರ ಉನ್ನತ ಮಟ್ಟದಲ್ಲಿ ಇಟ್ಟುಕೊಂಡು ವೇದದ ಆಶೊತ್ತರ ಜೀವಂತ ಇಟ್ಟರೆ ಬ್ರಾಹ್ಮಣ್ಯ ಉಳಿದಂತೆ ಹಾಗೂ ಸಾರ್ಥಕ ಆದಂತೆ.

ಈ ವಿಚಾರ ಮುಖ್ಯ. ಬ್ರಾಹ್ಮಣರಲ್ಲಿ ಇರುವ ಭಿನ್ನ ಭಿನ್ನ ವೈವಿಧ್ಯತೆ ಇರುವುದು, ಮನೆ ಪದ್ದತಿಗಳಲ್ಲೇ. ಈ ಭಿನ್ನತೆಯಲ್ಲಿ ಬಹಳಷ್ಟು ಮುಂದುವರೆಸುವುದು ಈ ಕಾಲಕ್ಕೆ ಸೂಕ್ತವಾಗಿಲ್ಲ. ಆದ್ದರಿಂದ ಕಾಲಗಟ್ಟದಲ್ಲಿ ಪದ್ದತಿ ಬಿಡಬೇಕಾದಾಗ ನೊಂದು ಕೊಳ್ಳದಿರಿ. ಮಾಡುವ ಕೆಲಸ ವೇದದ ಆಶೋತ್ತರಗಳಿಗೆ, ಸೂಕ್ತವೆ ಅಷ್ಟನ್ನ ಮಾತ್ರ ನಿರ್ಧರಿಸಿ. ಎರಡೂ ಪದ್ದತಿಗಳು, ಆಶೋತ್ತರಗಳನ್ನ ಮೀರದಿದ್ದ ಮೇಲೆ, ಹೆಚ್ಚು ಜನಕ್ಕೆ ಅನುಕೂಲ ಆಗುವ ವಿಧಾನ ಆರಿಸಿ. ಅದೇ ಸೂಕ್ತ.

ಬೇರೆಯವರು ಹಾಗೆ ಮಾಡಿದಾಗ, ಸಂಸ್ಕೃತಿ ಬಿಟ್ಟ ಅನ್ನುವ ಹಾಗೆ ಮಾತಾಡಬೇಡಿ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಆವರವರ ಸಂತೋಷಕ್ಕೆ, ನೆಮ್ಮದಿಗೆ ಸೂಕ್ತವಾಗಿ ಇದ್ದರೆ, ಅದು ಒಳ್ಳೆಯದೇ. ಭೇದ ಬಿಟ್ಟು, ಭಿನ್ನತೆ ಕಡಿಮೆ ಆದರೆ, ಅದು ಒಳ್ಳೆಯದೇ. ಭೇದ ಕಡಿಮೆಗೊಳಿಸುವ ಬದಲಾವಣೆಯನ್ನ ವಿರೋಧಿಸುವುದರಿಂದ ಯಾವ ಲಾಭವೂ ಇಲ್ಲ.
*********

No comments:

Post a Comment