SEARCH HERE

Friday, 10 July 2020

ಅಯ್ಯಪ್ಪ ಸ್ವಾಮಿ ayyappa swami

 ಶ್ರದ್ಧಾಭಕ್ತಿಯ ಕೇಂದ್ರ ಶಬರಿಮಲೆ


ವಿಜಯವಾಣಿ ಸುದ್ದಿಜಾಲ 
25.10.2018

ಮಣಿಕಂಠ, ಧರ್ಮಶಾಸ್ತ, ಪಂದಳದ ಕಂದ, ಹರಿಹರಪುತ್ರ, ಶಾಸ್ತಾವು ಮುಂತಾಗಿ ಕರೆಯಲ್ಪಡುವ ಅಯ್ಯಪ್ಪಸ್ವಾಮಿ ಶ್ರದ್ಧಾಳುಗಳ ಹೃದಯಮಂದಿರದಲ್ಲಿ ನೆಲೆಗೊಂಡ ಆರಾಧ್ಯದೈವ. ನಲವತ್ತೆಂಟು ದಿನಗಳ ಕಠಿಣ ವ್ರತದ ಬಳಿಕವೇ ಸ್ವಾಮಿಯ ದರ್ಶನ ಪಡೆಯುವ ನಿಯಮವಿದೆ. ಈಗ ನಾನಾ ಕಾರಣಗಳಿಗಾಗಿ ದೇಶದೆಲ್ಲೆಡೆ ಅಯ್ಯಪ್ಪಸ್ವಾಮಿಯ ನಾಮಸ್ಮರಣೆ ನಡೆಯುತ್ತಿದೆ. ಈ ದೈವದ ಹಿನ್ನೆಲೆ, ಕ್ಷೇತ್ರದ ಐತಿಹ್ಯ ಇತ್ಯಾದಿ ವಿವರಗಳನ್ನು ಒಳಗೊಂಡ ಸಂಗ್ರಾಹ್ಯ ಬರಹ ಇಲ್ಲಿದೆ.

ಹನ್ನೆರಡನೆಯ ಶತಮಾನದ್ದು ಎಂದು ಹೇಳಲಾಗಿರುವ ಶಬರಿಮಲೆ ದೇವಸ್ಥಾನ ಸಹ್ಯಾದ್ರಿ ಪರ್ವತಶ್ರೇಣಿಯ ಮಧ್ಯಭಾಗದಲ್ಲಿದೆ. ಅಯ್ಯಪ್ಪ ಅಥವಾ ಶ್ರೀ ಧರ್ಮಶಾಸ್ತ ಎಂದು ಕರೆಯಲ್ಪಡುವ ದೇವರು ಕೇರಳದ ಪಟ್ಟನಂತಿಟ್ಟ ಜಿಲ್ಲೆ ಮತ್ತು ಕುಮಿಳಿ ಗ್ರಾಮ ಪಂಚಾಯತಿಯಲ್ಲಿರುವ ಕ್ಷೇತ್ರದಲ್ಲಿ ಅಭಯಹಸ್ತ, ಪಟ್ಟಬಂಧ ಧರಿಸಿ ಧ್ಯಾನಾಸಕ್ತನಾಗಿ ಚಿನ್ಮುದ್ರಾ ಭಂಗಿಯಲ್ಲಿದ್ದಾನೆ. ಸಮುದ್ರಮಟ್ಟದಿಂದ 480 ಮೀಟರ್ (1574 ಅಡಿ) ಎತ್ತರದಲ್ಲಿ 18 ಶಿಖರಗಳ ಮಧ್ಯೆ ಸ್ವಾಮಿಯ ದೇವಸ್ಥಾನದೆ. ಎರುಮೇಲಿಯಿಂದ ಶಬರಿಮಲೆ ಕ್ಷೇತ್ರಕ್ಕೆ ತಲುಪುವಲ್ಲಿ ಪೇರೂರು ತೋಡು, ಕಲಕೆತತಿ, ಅಝುುತ್ತ, ಇಂಜಿಪಾರಕ್ಕೋಟ, ಕರಿಮಲೆ, ಪಂಪಾ, ಶಬರಿಪೀಠಂ, ಸರಂಕುತ್ತಿ ಹಾಗೂ 18 ಮೆಟ್ಟಿಲುಗಳ ಬಳಿಕ ದೇವರ ದರ್ಶನ ಪಡೆಯಲಾಗುತ್ತದೆ.

ಅಯ್ಯಪ್ಪಸ್ವಾಮಿಯ ಪೌರಾಣಿಕ ಹಿನ್ನೆಲೆ

ಪಂದಳ ಅರಮನೆಯ ಅರಸ ಬಹುಕಾಲ ಮಕ್ಕಳಾಗದೆ ಪರಿತಪಿಸುತ್ತಿದ್ದ. ಬೇಟೆಗೆಂದು ಕಾಡಿಗೆ ತೆರಳಿದ ಸಂದರ್ಭದಲ್ಲಿ ಅಡವಿಯಲ್ಲಿ ಮಗು ಅಳುವ ಧ್ವನಿ ಕೇಳಿಸಿದ್ದರಿಂದ, ಹೋಗಿನೋಡಿದಾಗ ಶಿಶುವೊಂದು ಕಂಡುಬಂತು. ದೇವರೇ ಈ ಆ ಮಗುವನ್ನು ಅನುಗ್ರಹಿಸಿದ್ದಾನೆಂದು ಅರಸ ಅರಮನೆಗೆ ತಂದು ಲಾಲನೆಪಾಲನೆ ಮಾಡತೊಡಗಿದ. ಹರಿ-ಹರರ ಸಂಯೋಗದಲ್ಲಿ ಜನಿಸಿದ ಈ ಶಿಶುವನ್ನು ಪಂದಳ ರಾಜನಿಗಾಗಿಯೇ ಕಾಡಿನಲ್ಲಿ ಬಿಟ್ಟುಹೋಗಿದ್ದರು ಎಂಬ ಪ್ರತೀತಿಯೂ ಇದೆ.

ಆ ಮಗುವಿನ ಕಂಠದಲ್ಲಿ ಮಣಿಸರ ಇದ್ದ ಕಾರಣ ಮಣಿಕಂಠ ಎಂದು ನಾಮಕರಣ ಮಾಡಿದರು. ಈ ಮಧ್ಯೆ ರಾಣಿ ಬಸುರಿಯಾಗಿ ಮಗುವೂ ಜನಿಸಿತು. ತನ್ನ ಸದವಂತ ಶಿಶುವಿನ ಲಾಲನೆಪಾಲನೆಯಲ್ಲಿ ಮೈಮರೆತ ರಾಣಿಗೆ ಮಣಿಕಂಠನಲ್ಲಿ ನಿಧಾನವಾಗಿ ಪ್ರೀತಿ ಕಡಿಮೆಯಾಗಿ ಅಸೂಯೆ ಉಂಟಾಯಿತು. ತನ್ನ ಮಗನಿಗೇ ಪಟ್ಟ ಸಿಗಬೇಕೆಂದು ಮಣಿಕಂಠನನ್ನು ಮೋಸದಿಂದ ಕೊಲ್ಲಲು ಅನಾರೋಗ್ಯದ ನಾಟಕವಾಡಿ ಹುಲಿಯ ಹಾಲಿನ ಬೇಡಿಕೆಯನ್ನು ವೈದ್ಯರ ಮೂಲಕ ಮುಂದಿರಿಸಿದಳು.

ಬಾಲಕ ಮಣಿಕಂಠ ಕಾಡಿನೊಳಗೆ ತೆರಳಿ ಅನೂಹ್ಯ ರೀತಿಯಲ್ಲಿ ಹುಲಿಗಳ ಹಿಂಡಿನೊಂದಿಗೆ ಪಂದಳದ ಅರಮನೆಗೆ ಹಿಂತಿರುಗಿದಾಗ ಮಾತೆಯ ಸುಳ್ಳು ಬಯಲಾಯಿತು. ಅಧ್ಯಾತ್ಮದಲ್ಲಿ ಆಸಕ್ತನಾದ ಮಣಿಕಂಠ ತಪಸ್ಸಿಗೆ ತೆರಳಲು ನಿಶ್ಚಯಿಸಿ ಅರಣ್ಯ ಸೇರಿದ. ಎತ್ತರದ ಶಬರಿಮಲೆ ಬೆಟ್ಟದಲ್ಲಿ ನೆಲೆಗೊಳ್ಳಲು ನಿಶ್ಚಯಿಸಿದ. ಪಂದಳ ರಾಜನು ಅಗಲುವಿಕೆಯ ನೋವನ್ನು ಮಣಿಕಂಠನಲ್ಲಿ ತೋಡಿಕೊಂಡಾಗ ವರ್ಷಕ್ಕೊಮ್ಮೆ ಶಬರಿಮಲೆಗೆ ಭೇಟಿ ನೀಡಬಹುದೆಂದು ತಿಳಿಸಿ ತೆರಳಿದ. ಈ ನಡುವೆ ಪಂದಳಕ್ಕೆ ವಾವರ ದಾಳಿಯಿಟ್ಟಾಗ ಮಣಿಕಂಠ ಅವನನ್ನು ಸಮರ್ಥವಾಗಿ ಎದುರಿಸಿ ನಾಡನ್ನು ರಕ್ಷಿಸಿದ. ಈ ವೇಳೆ ವಾವರನು ತನಗೊಂದು ನೆಲೆ ಮಾಡಿಕೊಡುವಂತೆ ಕೇಳಿದ್ದರ ಪರಿಣಾಮ ತನ್ನ ಸಖನಾಗಿ ಸೇರಿಸಿಕೊಂಡನೆಂಬ ಕಥೆ ಪ್ರಚಲಿತವಾಗಿದೆ.

ತಿರುವಾಭರಣ

ಶಬರಿಗಿರಿಯಲ್ಲಿ ವಾಸವಾಗಿರುವ ಅಯ್ಯಪ್ಪಸ್ವಾಮಿಗೆ ಪಂದಳ ರಾಜ ಪ್ರೀತಿಯಿಂದ ಮಾಡಿಸಿ ಅರ್ಪಿಸಿದ ಆಭರಣಗಳೇ ‘ತಿರುವಾಭರಣ’. ಈ ಆಭರಣ ಈಗಲೂ ರಾಜಕುಟುಂಬದ ಅಧೀನದಲ್ಲೇ ಇದೆ. ಮಕರ ಸಂಕ್ರಮಣದ ಸಂದರ್ಭದಲ್ಲಿ 84 ಕಿ.ಮೀ. ದೂರದ ಪಂದಳ ಅರಮನೆಯಿಂದ 11 ಮಂದಿ ಮೂರು ಪೆಟ್ಟಿಗೆಗಳಲ್ಲಿ ಮೂರು ದಿನ ಪಲ್ಲಕ್ಕಿ ಮೆರವಣಿಗೆಯ ಮೂಲಕ ಹೊತ್ತು ತರುತ್ತಾರೆ. ಅದರಿಂದ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಆಭರಣದ ಹಿಂದೆ ಪಂದಳರಾಜರ ವಂಶಸ್ಥರಲ್ಲಿ ಒಬ್ಬರು (ಹಿರಿಯರು) ಕತ್ತಿ ಹಿಡಿದುಕೊಂಡು ನೀಲಿಮಲೆವರೆಗೆ ಬಂದು ವಿಶ್ರಮಿಸುತ್ತಾರೆ. ಅನಂತರ ಜನವರಿ 20ರಂದು ಆಭರಣಗಳ ಹಿಂದೆ ಪಂದಳಂ ತನಕ ತೆರಳಿ ಅವುಗಳನ್ನು ನೀಡಿ ಬರುತ್ತಾರೆ. ಪಂದಳದಿಂದ ಶಬರಿಮಲೆಗೆ ಆಭರಣ ಪೆಟ್ಟಿಗೆ ತರುವ ಮೆರವಣಿಗೆಯ ಮೇಲ್ಗಡೆ ಈಗಲೂ ಆಗಸದಲ್ಲಿ ಒಂದು ಹದ್ದು ಬೆಂಗಾವಲಾಗಿ ಬರುವುದು ಕಾಣುತ್ತದೆ. ಈ ದೃಶ್ಯವನ್ನು ಅಯ್ಯಪ್ಪನ ಲೀಲೆಯೆಂದೇ ಭಕ್ತರು ನಂಬಿದ್ದಾರೆ.

ಪಂಚಲೋಹದ ವಿಗ್ರಹ

ಸುಮಾರು ಹನ್ನೆರಡನೆಯ ಶತಮಾನದಲ್ಲಿ ಪರಶುರಾಮರಿಂದ ಶಬರಿಮಲೆ ನಿರ್ವಣವಾಗಿತ್ತು ಎಂಬುದು ಐತಿಹ್ಯ. ಪಂದಳ ರಾಜ ನಿರ್ವಿುಸಿದ್ದ ಎಂದೂ ಹೇಳಲಾಗುತ್ತಿದೆ. ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವಿದೆ. 1907ರಲ್ಲಿ ಶಬರಿಮಲೆ ಗರ್ಭಗುಡಿ ಕಾಡಿನ ನಡುವೆ ಶಿಥಿಲಾವಸ್ಥೆಯಲ್ಲಿದ್ದು, ಗರ್ಭಗುಡಿಯಲ್ಲಿ ಏಕಶಿಲಾ ವಿಗ್ರಹಕ್ಕೆ ಪೂಜೆ ನಡೆಯುತ್ತಿತ್ತು. 1909ರಲ್ಲಿ ದೇವಾಲಯದಲ್ಲಿ ಅಗ್ನಿದುರಂತ ಸಂಭವಿಸಿದ್ದರಿಂದ 1910ರಲ್ಲಿ ಪುನಃ ನಿರ್ವಿುಸಲಾಯಿತು. 1935ರ ನಂತರ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಮಕರ ಸಂಕ್ರಮಣದ ಹೊತ್ತಿಗೆ ಮಾತ್ರವಲ್ಲದೆ ಮಂಡಲ ಪೂಜೆಯಲ್ಲೂ ಭಕ್ತರು ಪಾಲ್ಗೊಳ್ಳುತ್ತಿದ್ದರು. ಚಾಲಕ್ಕಾಯಮಾರ್ಗ, ವಡಿಪೆರಿಯಾರ್ ಮಾರ್ಗ ನಿರ್ಮಾಣ ಬಳಿಕ ಶಬರಿಮಲೆಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಮಲಯಾಳಿಗರ ವಿಶೇಷ ಹಬ್ಬಗಳ ಸಮಯದಲ್ಲೂ ದೇವಾಲಯದ ಪ್ರವೇಶ ಮಾಡಲು 1945ರಲ್ಲಿ ದೇವಸ್ವಂ ಬೋರ್ಡ್ ಅನುಮತಿ ನೀಡಿತು. 1950ರ ಅಗ್ನಿದುರಂತದಲ್ಲಿ ಮತ್ತೆ ದೇವಳ ನಾಶವಾಯಿತು. 1951ರಲ್ಲಿ ಚೆಂಗನ್ನೂರಿನಿಂದ ಒಂದೂವರೆ ಅಡಿ ಎತ್ತರದ ಪಂಚಲೋಹದ ವಿಗ್ರಹವನ್ನು ತರಿಸಿ ಪುನಃ ಪ್ರತಿಷ್ಠಾಪಿಸಿ ದೇವಳವನ್ನು ನಿರ್ವಿುಸಲಾಯಿತು.

ಅರಸರಿಗಿಲ್ಲ ನೇರ ದರ್ಶನ

ಮಕರ ಸಂಕ್ರಮಣದ ನಂತರ (ಜ. 16ರಂದು) ರಾಜಮನೆತನದವರ ವಿಶೇಷ ಭೇಟಿ ನಡೆಯುವುದು ಪರಂಪರೆ. ಪಂದಳದ ಅರಸರು ಅಯ್ಯಪ್ಪ ವಿಗ್ರಹವನ್ನು ನೇರವಾಗಿ ನೋಡುವ ಬದಲು ಒಂದು ಬದಿಯಿಂದ ವೀಕ್ಷಿಸುವ ಕ್ರಮ ಇದೆ. ಅಯ್ಯಪ್ಪಸ್ವಾಮಿ ಪಂದಳದ ಅರಸನ ಮಗನಾಗಿರುವುದರಿಂದ ಹಿರಿಯರು ಬಂದಾಗ ಕಿರಿಯರು ಎದ್ದು ನಿಲ್ಲಬೇಕೆಂಬ ರೂಢಿಯ ಹಿನ್ನೆಲೆಯಲ್ಲಿ ಚಿನ್ಮುದ್ರಾ ರೀತಿಯ ಅಯ್ಯಪ್ಪನ ಎದುರು ನಿಂತು ಅರಸರು ದೇವರ ದರ್ಶನ ಪಡೆಯುವಂತಿಲ್ಲ.

ಅಯ್ಯಪ್ಪಸ್ವಾಮಿಯ ವಸ್ತ್ರಬಂಧನ

ಸ್ವಾಮಿಯ ಮೊಣಕಾಲಿನಲ್ಲಿರುವ ‘ವಸ್ತ್ರಬಂಧನ’ಕ್ಕೂ ಒಂದು ಹಿನ್ನೆಲೆ ಇದೆ. ಮಹಿಷಿವಧೆಯ ಬಳಿಕ ಮಣಿಕಂಠ ಜ್ಞಾನಪೀಠದ ಮೇಲೆ ಯೋಗಮುದ್ರೆಯಲ್ಲಿ ಕುಳಿತಿರುವ ಸಂದರ್ಭದಲ್ಲಿ ಪಂದಳ ರಾಜ ಆಭರಣವನ್ನು ಅರ್ಪಿಸಲು ಬಂದಾಗ, ಅವನ ಗೌರವಾರ್ಥ ಮಣಿಕಂಠ ಎದ್ದು ನಿಲ್ಲಲು ಯತ್ನಿಸಿದ್ದ. ಮಣಿಕಂಠನನ್ನು ಆ ಭಂಗಿಯಲ್ಲಿ ನೋಡಿ ಭಾವಪರವಶನಾಗಿದ್ದ ಅರಸ ತನ್ನ ಹೆಗಲಿನ ಮೇಲಿದ್ದ ರೇಷ್ಮೆ ಶಾಲನ್ನು ಸ್ವಾಮಿಯ ಕಾಲಿಗೆ ಕಟ್ಟಿದ. ಭಕ್ತರು ಇದೇ ರೂಪದಲ್ಲಿ ಮಣಿಕಂಠ ದರ್ಶನ ಪಡೆಯಬೇಕೆಂಬ ರಾಜನ ಕೋರಿಕೆಗೆ ಅಯ್ಯಪ್ಪ ಒಪ್ಪಿದ. ಅದೇ ‘ವಸ್ತ್ರಬಂಧನ’ ಎನ್ನುವುದು ಪ್ರತೀತಿ.

ಕ್ಷೇತ್ರದ ತಂತ್ರಿಗಳು

ಶಬರಿಮಲೆ ಅಯ್ಯಪ್ಪನ ಆರಾಧನೆಗೆ ಪರಶುರಾಮನು ಆಂಧ್ರದಿಂದ ತಾಯಮಣ್ಣ್ ಮತ್ತು ತರುಣನೆಲ್ಲೂರ್ ಎಂಬ ಎರಡು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಪೂಜೆಗೆ ನೇಮಿಸಿದ್ದ ಎನ್ನುವುದು ಪ್ರತೀತಿ. ತರುಣನೆಲ್ಲೂರು ಮನೆತನದವರು ಶಬರಿಮಲೆ ದೇವಸ್ಥಾನ ಹೊರತುಪಡಿಸಿ ಇತರ ಕ್ಷೇತ್ರಗಳ ಅರ್ಚನೆ ನಿರ್ವಹಿಸುತ್ತಾರೆ. ತಾಯಮಣ್ಣ್ ಮನೆತನದವರು ಮಾತ್ರ ಶಬರಿಮಲೆ ತಾಂತ್ರಿಕ ವಿಧಿವಿಧಾನಗಳನ್ನು ನಿರ್ವಹಿಸುತ್ತಿದ್ದು, ಇವರಲ್ಲಿ ಕಂಠರರ್ ನೀಲಕಂಠರರ್(ಅಣ್ಣ) ಹಾಗೂ ಕಂಠರರ್ ಮಹೇಶ್ವರರ್ (ತಮ್ಮ) ಬಳಿಕ ಈಗ ನೀಲಕಂಠರರ್ ಅವರ ಪುತ್ರ ಕಂಠರರ್ ರಾಜೀವರ್ ತಂತ್ರಿಗಳಾಗಿ ಪೂಜೆ ನಿರ್ವಹಿಸುತ್ತಿದ್ದಾರೆ.

ಮಕರಜ್ಯೋತಿಯ ಮಹಾದರ್ಶನ

ಮಕರಸಂಕ್ರಾಂತಿಯಂದು (ಜನವರಿ 14) ಶಬರಿಮಲೆಗೆ ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಅಂದು ಸೂರ್ಯಾಸ್ತದ ವೇಳೆ ಗರ್ಭಗೃಹದಲ್ಲಿ ಪೂಜೆ ನಡೆಯುತ್ತಿರುವ ಹೊತ್ತಿಗೆ ಧ್ವಜಸ್ತಂಭದ ಮೇಲ್ಭಾಗದಲ್ಲಿ ಬಿಳಿ ಹದ್ದು ಹಾರಾಡುತ್ತದೆ. ಇದಾಗಿ ಕೆಲವೇ ನಿಮಿಷಗಳಲ್ಲಿ ಶಬರಿಮಲೆ ಅಡವಿಯೊಳಗಿನಿಂದ ಮೂರು ಬಾರಿ ಅವ್ಯಕ್ತ ಬೆಳಕಿನ ಕಿರಣ ಗೋಚರಿಸುತ್ತದೆ. ಇದನ್ನು ಮಕರ ಜ್ಯೋತಿ ಎಂದು ಕರೆಯಲಾಗಿದ್ದು, ಹಿಂದೆ ಪಂದಳ ರಾಜನಿಗೆ ಮಣಿಕಂಠನು ವರ್ಷಕ್ಕೊಮ್ಮೆ ದರ್ಶನ ನೀಡುವ ಪ್ರತೀಕವಾಗಿ ಈ ಬೆಳಕು ಕಾಣಿಸುವುದೆಂದು ನಂಬಲಾಗಿದೆ. ಇದು ಕೃತಕವೆಂಬ ವಾದವೂ ಇದೆ.

ಹಿಂದೆ ಮಹಿಳಾ ಪ್ರವೇಶವಿತ್ತು?

1991ರಲ್ಲಿ ಶಬರಿಮಲೆಯ ಅಂದಿನ ಆಡಳಿತ ಮಂಡಳಿ, ತಂತ್ರಿವರ್ಯರು ಕೇರಳ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಬೇಕೆಂದು ಕೇಳಿದ್ದರ ಪರಿಣಾಮ ನ್ಯಾಯಾಲಯ ಅದನ್ನು ಅಂಗೀಕರಿಸಿ ಮಹಿಳೆಯರ ಪ್ರವೇಶ ನಿಷೇಧಿಸಿತ್ತು. ಇದಕ್ಕೂ ಮೊದಲು ಮಹಿಳೆಯರು ಶಬರಿಮಲೆಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಕಳೆದ ಶತಮಾನದಲ್ಲಿ ಪಂದಳ ರಾಜಮಾತೆ ಎರಡು ಬಾರಿ ಮಲೆ ಸಂದರ್ಶಿಸಿದ ದಾಖಲೆಗಳಿವೆ.

ಸ್ವಾಮಿಯ ದರ್ಶನಕ್ಕೆ ಕಠಿಣ ವ್ರತ

ಅತ್ಯಂತ ಕಠಿಣ ವ್ರತ, ಅನುಷ್ಠಾನ ಕೈಗೊಂಡವರಿಗಷ್ಟೇ ಅಯ್ಯಪ್ಪ ದರ್ಶನ ಸುಲಭ ಎಂಬ ನಂಬಿಕೆ ಭಕ್ತರಲ್ಲಿದೆ. ಸಾಮಾನ್ಯವಾಗಿ ಗುರುಸ್ವಾಮಿಗಳ (ಹಲವು ವರ್ಷಗಳ ಯಾತ್ರೆಯ ಅನುಭವವುಳ್ಳ ಮತ್ತು ವ್ರತದ ಕುರಿತು ಸಂಪೂರ್ಣ ಮಾಹಿತಿ ಹೊಂದಿದವರು) ಮೂಲಕವೇ ಅಯ್ಯಪ್ಪಮಾಲೆ (ರುದ್ರಾಕ್ಷಿ, ತುಳಸಿ) ಧರಿಸಿ ಯಾತ್ರೆ ಮಾಡುವುದು ಪದ್ಧತಿ. 48 ದಿನಗಳ ವ್ರತಾನುಷ್ಠಾನದ ಬಳಿಕ ಇರುಮುಡಿಯೊಂದಿಗೆ (ತೆಂಗಿನಕಾಯಿ, ತುಪ್ಪ, ಅಕ್ಕಿ ಸಹಿತ ದೇವರಿಗೆ ಅರ್ಪಿಸುವ ವಸ್ತುಗಳು) ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ರತದ ಸಂದರ್ಭದಲ್ಲಿ ಮನೆಯಿಂದ ಹೊರಗಿರುವ ಭಕ್ತರು; ದೇವಸ್ಥಾನ, ಭಜನಾಮಂದಿರ ಅಥವಾ ಪ್ರತ್ಯೇಕ ಆಶ್ರಮದಲ್ಲಿ ವಾಸಿಸುತ್ತಾರೆ. ಈ ಸಂದರ್ಭ ಮದ್ಯ, ಮಾಂಸ, ಮಾನಿನಿಯರಿಂದ ದೂರ ಇರಬೇಕೆಂಬುದು ಪ್ರಮುಖ ನಿಯಮ. ಅನುಷ್ಠಾನದ ಪ್ರಕಾರವೇ ಆಹಾರ ಸೇವಿಸಬೇಕು. ವ್ರತ ಮುಗಿಯುವವರೆಗೆ ಕ್ಷೌರವಿಲ್ಲ. ಪಾದರಕ್ಷೆ ಕೂಡ ಧರಿಸುವಂತಿಲ್ಲ. ಕೋಪಿಸಿಕೊಳ್ಳಬಾರದು, ಯಾರನ್ನೂ ನೋಯಿಸಬಾರದು, ಹಿಂಸಿಸಬಾರದು ಮುಂತಾದ ನಿಯಮಗಳಿವೆ. ಎಲ್ಲರಲ್ಲೂ ಅಯ್ಯಪ್ಪನನ್ನೇ ಕಾಣಬೇಕೆಂದು ಇತರರನ್ನು ಸಂಬೋಧಿಸುವಾಗ ಸ್ವಾಮಿ ಎಂದು ಸೇರಿಸಿಯೇ ಕರೆಯುವ ರೂಢಿ ಇದೆ. ಭಕ್ತರು ಕಪ್ಪು, ನೀಲಿ ಅಥವಾ ಕೇಸರಿ ವಸ್ತ್ರ ಮಾತ್ರ ತೊಡುತ್ತಾರೆ. ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ, ದೇವಸ್ಥಾನಗಳಿಗೆ ಭೇಟಿ, ರಾತ್ರಿ ಅಯ್ಯಪ್ಪ ಸ್ತೋತ್ರಗಳ ಪಠಣ ಮಾಡಬೇಕು.

ದೈವಸ್ವಂ ಬೋರ್ಡ್

ಕೇರಳ ರಾಜ್ಯೋದಯದ ಬಳಿಕ ತಿರುವಾಂಕೂರ್ ದೇವಸ್ವಂ ಬೋರ್ಡ್​ನ ಸುಪರ್ದಿಗೆ ಶಬರಿಮಲೆ ಕ್ಷೇತ್ರ ಒಳಪಟ್ಟಿತ್ತು. ತಿರುವನಂತಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ದೇವಸ್ವಂ ಮಂಡಳಿ ಅಡಿಯಲ್ಲಿ ಸಾವಿರಕ್ಕೂ ಅಧಿಕ ದೇವಸ್ಥಾನಗಳಿವೆ. ಅದರಲ್ಲಿ ಪ್ರಮುಖವಾದುದು ಶಬರಿಮಲೆ. ದೇವಸ್ಥಾನಗಳ ಸಂಪೂರ್ಣ ಆಡಳಿತ ಉಸ್ತುವಾರಿ ಈ ಮಂಡಳಿಗಳದ್ದು.

ಗರ್ಭಗುಡಿಗೆ ಸ್ವರ್ಣಕವಚ

ಬೆಂಗಳೂರಿನ ಭಕ್ತರೊಬ್ಬರು ಅಯ್ಯಪ್ಪಸ್ವಾಮಿ ದೇಗುಲದ ಗರ್ಭಗುಡಿ ಸುತ್ತ ಬಂಗಾರದ ಕವಚ ಹಾಕಿಸಿದ್ದು, ಶಬರಿಮಲೆ ಸ್ವರ್ಣದೇಗುಲವಾಯಿತು. 1984ಕ್ಕಿಂತ ಮೊದಲು ಶಬರಿಮಲೆಗೆ ತೆರಳಲು ಭಕ್ತರು ಕಲ್ಲಿನ ಮೆಟ್ಟಿಲುಗಳನ್ನು ಬಳಸುತ್ತಿದ್ದರು. ಮೆಟ್ಟಿಲುಗಳನ್ನು ಹತ್ತುವಾಗ ಪ್ರತಿ ಮೆಟ್ಟಿಲಿನ ಮೇಲೆ ಒಂದೊಂದು ಕೊಬ್ಬರಿಕಾಯಿ ಒಡೆಯುತ್ತಿದ್ದರು. ಅದರಿಂದ ಭಕ್ತರು ಮೆಟ್ಟಿಲುಗಳನ್ನು ಏರುವುದಕ್ಕೆ ಕಷ್ಟವಾಗುತ್ತಿತ್ತು. ಈಗ ಮೆಟ್ಟಿಲುಗಳಿಗೆ ಸ್ವರ್ಣಕವಚ ಅಳವಡಿಸಲಾಗಿದ್ದು, ಅಲ್ಲಿ ತೆಂಗಿನಕಾಯಿ ಒಡೆಯಲು ಅವಕಾಶವಿಲ್ಲ.
*********

No comments:

Post a Comment