SEARCH HERE

Sunday, 30 August 2020

ಪಕ್ಷಮಾಸದ ಚಿಂತನೆ paksha masa chintane pitru paksha maasa


ಪಕ್ಷಮಾಸದ ಚಿಂತನೆ 

                  Part -1

ನರಕಲೋಕ ಒಂದು ವಿಶ್ಲೇಷಣೆ

ಅನಾದಿಕಾಲದಿಂದ  ಜೀವನು ಶಾಶ್ವತನಾದವನು. ಪ್ರಳಯಕಾಲದಲ್ಲಿ ಪರಮಾತ್ಮನ ಉದರದಲ್ಲಿರುವ ಜೀವ ಅವನ ಕರ್ಮಾನುಸಾರವಾಗಿ ದೇಹವನ್ನು ಪಡೆದು ಸಂಸಾರಕ್ಕೆ ಬರುತ್ತಾನೆ ಅನ್ನೋದು ಗೊತ್ತಿರುವ ವಿಷಯವೇ. 

ಜೀವರಲ್ಲಿ ಮೂರು ವಿಧ
ಸಾತ್ವಿಕ ಜೀವರು
ರಾಜಸ ಜೀವರು
ತಾಮಸ ಜೀವರು

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ/
ನಿಭದ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್// ಎನ್ನುವ ಗೀತೆಯ ವಾಕ್ಯದಂತೆ 

ಪ್ರಕೃತಿಯಿಂದ ಉಂಟಾದ ಸತ್ವ, ರಜಸ್ಸು,  ತಮಸ್ಸು ಎನ್ನುವ ಮೂರು ಗುಣಗಳು,  ಇವುಗಳ ಅಭಿಮಾನಿದೇವತೆಗಳು ದೇಹದಲ್ಲಿರುವಂತಹಾ, ಸ್ವರೂಪತಃ ನಾಶವಿಲ್ಲದಂತಹಾ ಜೀವನನ್ನು ಬಂಧಿಸಿರ್ತವೆ..

ಸತ್ವ ಗುಣದವರು - ಶ್ರೀದೇವಿಯರು ಸತ್ವಾಭಿಮಾನಿ ದೇವತೆ - ಜೀವನಿಗೆ ಶುದ್ಧವಾದ ತತ್ವಜ್ಞಾನವನ್ನು ನೀಡುವಳು.. ಸತ್ವ ಗುಣದವರು ಅಹಂಕಾರಾದಿಗಳಿಲ್ಲದೆ, ರೋಗ ರುಜಿನಗಳಿಲ್ಲದೆ, ಎಲ್ಲ ಅವಸ್ಥೆಗಳಲ್ಲಿಯೂ ತಟಸ್ಥರಾಗಿ, ಪರಮಾತ್ಮನ ಕುರಿತಾದ ನೈಜ ಜ್ಞಾನವನ್ನು ಹೊಂದಿದವರಾಗಿ, ಕಾರ್ಯಾ ಕಾರ್ಯಗಳನ್ನು, ಬಂಧಮೋಕ್ಷಗಳನ್ನು ಸರಿಯಾಗಿ ತಿಳಿದಿರುತ್ತಾರೆ. ಇವರು ಅಪರೋಕ್ಷಜ್ಞಾನದಿಂದಲೆ ಜನೋಲೋಕ, ತಪೋಲೋಕ ಇತ್ಯಾದಿ ಲೋಕಗಳನ್ನು ಹೊಂದುತ್ತಾರೆ...

ರಜೋಗುಣದವರು - ಭೂದೇವಿಯರು ಅಭಿಮಾನಿ ದೇವತೆ - ಈ ರಜೋಗುಣದ ಜೀವನು ಭೂದೇವಿಯರ ಪ್ರಭಾವದಿಂದ ಸೃಷ್ಟ್ಯಾದಿ ರೂಪ ರಂಜನೆಯನ್ನು ಮಾಡುವುದರಿಂದ ಕರ್ಮಗಳನ್ನು ಮಾಡುವುದರಲ್ಲಿ ನಿತ್ಯ ಆಸಕ್ತನಾಗಿರ್ತಾನೆ. ಕರ್ಮದ ಫಲಾಸಕ್ತಿ , ಹಿಂಸೆಯನ್ನು ಮಾಡುತ್ತಾ, ಅಶುಚಿಯಾಗಿ, ಧರ್ಮಾಧರ್ಮಗಳನ್ನು, ಕಾರ್ಯಾಕಾರ್ಯಗಳನ್ನು ಬೇರೇ ರೀತಿಯಲ್ಲಿ (ಸಾತ್ವಿಕರಂತೆ ಸರಿಯಾದ ರೀತಿಯಲ್ಲಿ ತಿಳಿಯದೆ) ತಿಳಿಯುತ್ತಾರೆ. ಇವರು ತಾವು ಮಾಡುವ ಕಾಮ್ಯ ಕರ್ಮಗಳಿಂದ ಸ್ವರ್ಗಾದಿ ಲೋಕಗಳನ್ನು ಹೊಂದುವರು..

ತಮೋಗುಣದವರು -  ದುರ್ಗಾದೇವಿಯರು ಅಭಿಮಾನಿ ದೇವತೆ. ಈ ಜೀವಿಗಳು ಅಧರ್ಮಬುದ್ಧಿ, ಸೋಮಾರಿತನ, ಸದಾ ಅಳುಮುಖದವನಾಗಿಯೂ, ತೃಪ್ತಿ ಅನ್ನೋ ಮಾತೇ ಇಲ್ಲದ, ಧರ್ಮದಲ್ಲಿ ಆಸಕ್ತಿಯೇ ಇಲ್ಲದ , ಧರ್ಮವನ್ನು ಅಧರ್ಮವನ್ನಾಗಿ, ಜ್ಞಾನವನ್ನು ಅಜ್ಞಾನವಾಗಿ, ಎಲ್ಲವನ್ನೂ ಉಲ್ಟಾ  ತಿಳಿಯುವನಾಗಿರುತ್ತಾನೆ. ಸತ್ವ- ರಜೋ ಗುಣಗಳಿಗಿಂತ ಹೀನವಾದ ಈ ತಮೋಗುಣದ ಸದಾ ಅಜ್ಞಾನದಲ್ಲೇ ಇರುವ, ತಾಮಸ ಜನರು ನಿತ್ಯವೂ ಸಂಸಾರದಲ್ಲೇ ಬಿದ್ದಿರ್ತಾರೆ. ತಾಮಸ ನರಕವನ್ನು ಹೊಂದುತ್ತಾರೆ....

ಹೀಗೆ ಆಯಾಯಾ ಗುಣದವರಿಗೆ ಆಯಾಯಾ ರೀತಿಯ ಬುದ್ಧಿಗಳೇ ಆಯಾ ಅಭಿಮಾನಿ ದೇವತೆಗಳು ನಿಂತು ಜೀವನ ಕರ್ಮಾನುಸಾರೇಣ ಮಾಡಿಸುವರು....

ಈ ವಿಷಯ ಇನ್ನೂ ಆಳವಾಗಿ ಮುಂದೆ ತಿಳಿಯಲು ಪ್ರಯತ್ನ ಮಾಡೋಣ..

ನರಕಗಳ ವಿಷಯಕ್ಕೆ ಬರೋಣ. ಈ ಪಾಪ ಕರ್ಮಗಳಿಗೆ ಫಲವನ್ನು ನೀಡುವ ಹಲವು ನರಕಗಳಿವೆ. ಈ ನರಕಲೋಕ ಬ್ರಹ್ಮಾಂಡದ ನಡುವೆ, ದಕ್ಷಿಣ ದಿಕ್ಕಿನಲ್ಲಿ,  ಭೂಮಿಗಿಂತ ಕೆಳಗೆ, ಜಲರಾಶಿಗಿಂತ ಮೇಲುಭಾಗದಲ್ಲಿ ಇರುವ ಪ್ರದೇಶಕ್ಕೂ ಮಧ್ಯದಲ್ಲಿರುವ ಪ್ರದೇಶದಲ್ಲಿರುವುದು..

ಈ ನರಕಲೋಕದ ಒಡೆಯನೂ ಸೂರ್ಯಪುತ್ರ ಯಮಧರ್ಮರಾಯನು ಭೂಲೋಕದಲ್ಲಿ ಮರಣ ಹೊಂದಿದ ಜೀವರನ್ನು  ಭಯಂಕರ ರೂಪವುಳ್ಳ ತನ್ನ ದೂತರಿಂದ ತನ್ನ ಪಟ್ಟಣಕ್ಕೆ ಕರಿಸಿಕೊಂಡು, ಅವರು ಮಾಡಿದ ಪಾಪಕರ್ಮಗಳ ಅನುಸಾರವಾಗಿ ಪರಮಾತ್ಮನ ಆಜ್ಞೆಯಂತೆ ತನ್ನ ಪರಿವಾದರೊಂದಿಗೆ ಆಯಾಯಾ ನರಕಗಳಳ್ಳಿ ಹಾಕಿ ವಿವಿಧ ರೀತಿಯಲ್ಲಿ ದಂಡನೆ ನೀಡುತ್ತಾನೆ ..

ಆ ನರಕಗಳು ಎಷ್ಟು ಇವೆ, ಅವುಗಳನ್ನು ನಾವು ಯಾವ ಕರ್ಮ ಮಾಡುವುದರಿಂದ ಪಡಿತೇವೆ? ಎನ್ನುವ ಎಲ್ಲ ವಿಷಯಗಳನ್ನು ನಾಳೆಯ ಭಾಗದಲ್ಲಿ ನೋಡೋಣ.....

ಪರಮಾತ್ಮನ ಸ್ಮರಣೆ ನರಕಲೋಕದ ಬಾಧೆಯನ್ನು ತೊಲಗಿಸುವ ಮುಖ್ಯ ಸಾಧನೆ ಕಡಿಂದ ಸದಾ ಹರಿ ನಾಮಸ್ಮರಣೆ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತಾ..
-Padma Sirish
ನಾದನೀರಾಜನದಿಂ ದಾಸಸುರಭಿ 🙏🏽 

ಪಕ್ಷಮಾಸದ ಚಿಂತನೆ

              ಭಾಗ - 2

ನರಕಲೋಕ ಒಂದು ವಿಶ್ಲೇಷಣೆ 

ತ್ರಿಭಿರ್ಮುಹೂರ್ತೈದ್ವಾಭ್ಯಾಂ ವಾ ನೀಯತೇ ತತ್ರ ಮಾನವ/
|ಪ್ರದರ್ಶಯಂತಿ ದೂತಾಸ್ತಾ ಘೋರಾ ನರಕಯಾತನಾಃ//

        ನಿನ್ನೆಯ ಭಾಗದಲ್ಲಿ ಯಮಲೋಕ ಎಲ್ಲಿದೆ ಅಂತ ತಿಳಿದಿವಿ. ಆ ಯಮಲೋಕ ಭೂಲೋಕದಿಂದ 99,000 ಯೋಜನ ದೂರವಿರುತ್ತದೆ , ಈ ದೂರದ ಮಾರ್ಗವನ್ನು ಅತೀ ಪಾಪಿಷ್ಠರನ್ನು ಎರಡು ಮುಹೂರ್ತದಲ್ಲಿ, ಸಾಮಾನ್ಯ ಪಾಪಿಷ್ಠರನ್ನು ಮೂರು ಮುಹೂರ್ತದಲ್ಲಿ ದೇವಮಾನದ ಪ್ರಕಾರ ಎಳೆದುಕೊಂಡು ಹೋಗುತ್ತಾರೆ (ಮನುಷ್ಯನ ಲೆಕ್ಕದಲ್ಲಿ ಹನ್ನೆರಡು ತಿಂಗಳು).  ಎಳದೊಯ್ಯುವಾಗ ದಕ್ಷಿಣದ್ವಾರದ ಮಹಾದ್ವಾರಕ್ಕೆ ಸೇರುವಷ್ಟರಲ್ಲಿ ಯಮದೂತರು ಆತನಿಗೆ ಭಯಾನಕವಾದ ಯಾತನೆಗಳನ್ನು ತೋರಿಸುತ್ತಾರೆ  ಅದೂ ಸಹ ಯಮಮಾರ್ಗದಿಂದ ಕರೆದುಕೊಂಡು ಹೋಗುತ್ತಾ... 
ಜೀವನಾದವನು ಮರಣದನಂತರ ಕ್ರಮಿಸುವ ಮಾರ್ಗವೇ ಯಮಮಾರ್ಗ 

ಈ ಯಮಲೋಕದ ಮಾರ್ಗ ಅತ್ಯಂತ ಭಯಾನಕವಾಗಿರ್ತದೆ. ಆದರೆ ಪುಣ್ಯಮಾಡಿದ ಜೀವನಿಗೆ ಅದು ಸುಖವನ್ನೇ ನೀಡುತ್ತದೆ, ಪಾಪಿಯಾದ ಜೀವನಿಗೆ ಬಹಳ ದುಃಖದಾಯಕವಾಗಿರ್ತದೆ.

ಪಾಪಿಗಳು ಅಂದರೆ ಪರಮಾತ್ಮನ ಭಕ್ತಿಯಿಂದ ವಿಮುಖರಾಗಿದ್ದವರು ದಕ್ಷಿಣದಿಕ್ಕಿನಿಂದ ಈ ಯಮ ಪಟ್ಟಣವನ್ನು ಪ್ರವೇಶ ಮಾಡಿದರೆ, ಪುಣ್ಯ ಮಾಡಿದವರು ಉತ್ತರ, ಪಶ್ಚಿಮ,ಪೂರ್ವ ದಿಕ್ಕುಗಳ ಮೂಲಕ ಯಮ ಪಟ್ಟಣಕ್ಕೆ ಸೇರ್ತಾರೆ.. ಅಂದರೆ ಈ ಪುಣ್ಯವಂತರು ಪಾಪಗಳೇ ಮಾಡೋದಿಲ್ಲವೇ ಅಂದರೆ ಅವರು ಮೊದಲಿಗೆ ದುಃಖದ ಕಾರ್ಯಗಳನ್ನು ಮಾಡಿರುವುದಿಲ್ಲ.  ಎರಡನೆಯದಾಗಿ ಆ ತರಹದ ತಪ್ಪುಗಳು ಮಾಡಿದರೂ ಸಹ ಪಶ್ಚಾತ್ತಾಪವನ್ನು ಪಟ್ಟು ಪ್ರಾಯಶ್ಚಿತ್ತ ಮಾಡಿಕೊಂಡು ಪರಮಾತ್ಮನಲ್ಲಿ ಮತ್ತೆ ನಿಶ್ಚಲವಾದ ಭಕ್ತಿಯನ್ನು ಮಾಡುತ್ತಾರೆ. ಹೀಗಾಗಿ ಅವರಿಗೆ  ಈ ಯಮಮಾರ್ಗದ ದುಃಖಕರವಾದ ಮಾರ್ಗ ಸಂಪರ್ಕಕ್ಕೆ ಬರುವುದಿಲ್ಲ. ಇವರನ್ನು ವಿಷ್ಣುದೂತರು ಕರೆದುಕೊಂಡು ಹೋಗುತ್ತಾರೆ , ಅವರ ಮಾರ್ಗವೇ ಬೇರೇ ಇರ್ತದೆ....

ಜೀವನಾದವನು ತಾಯಿಯ ಗರ್ಭದಲ್ಲಿ ಸೇರುವಾಗಲೇ ಆ ಜೀವಿಯ, ಆಯುಷ್ಯ,  ಅವನ ಕರ್ಮಗಳೇನು, ಅವನ ವಿದ್ಯೆ ಏನು, ಅವನು ಮರಣ ಯಾವಾಗ ಹೊಂದುತ್ತಾನೆ ಇವೆಲ್ಲವನ್ನೂ ಸಹ ಪರಮಾತ್ಮನ ಆಜ್ಞೆಯಂತೆ ಬ್ರಹ್ಮ ದೇವರು ನಿರ್ಧಾರಮಾಡಿಯೇ ಸೃಷ್ಟಿ ಮಾಡಿರುತ್ತಾರಲ್ಲವೇ? 

ಆಯುಃ ಕರ್ಮ ಚ ವಿತ್ತಂಚ ವಿದ್ಯಾನಿಧನಮೇವ ಚ/
ಪಂಚೈತಾನ್ಯಪಿ ಸೃಜ್ಯಂತೇ ಗರ್ಭಸ್ಥಸ್ಯೈವ ದೇಹಿನಃ//

ಎಂದು ಶ್ರೀ 
ಗರುಣಪುರಾಣದಲ್ಲಿ ಬಂದ ಈ ವಿಷಯವನ್ನೇ ಶ್ರೀ ವಿಜಯ ಪ್ರಭುಗಳು ತಮ್ಮ  ಸುಳಾದಿಯಲ್ಲಿ ಅತ್ಯದ್ಭುತವಾಗಿ ತಿಳಿಸಿ ಹೇಳಿದರು...

ಫಣೆಯಲ್ಲಿ ಬರದಿಪ್ಪ ಆಯು ಕರ್ಮ ವಿದ್ಯಾ
ಧನ ನಿಧನ ನೇಮಿಸಿ ಹರಿ ಆಜ್ಞಾದಲ್ಲಿ
ಜನಿಸುವಾಗಲಿ ಅವರವರ ಪಡಿಪಾನ
ಕೊನೆ ಸೆರಗಿನಲ್ಲಿ ಕಟ್ಟಿ ಕಟ್ಟಿಹನೋ ಅಂತ...

ಮೊದಲೇ ನಿಶ್ಚಿತವಾಗಿ ಸಂಸಾರಕ್ಕೆ ಕಳಿಸಲ್ಪಟ್ಟಂತಹಾ ಜೀವನು ಅವನು ಬಂದ ವಿಷಯವನ್ನು ಸರಿಯಾಗಿ ತಿಳಿದು ಪರಮಾತ್ಮನ ಸ್ಮರಣೆ, ಆರಾಧನೆಗಳನ್ನು ಯಾವ ರೀತಿಯ ಸ್ವಾರ್ಥದಿಂದಲ್ಲದೆ ನಿಸ್ವಾರ್ಥ ರೀತಿಯಿಂದ, ಪರಮ ಭಕ್ತಿಯಿಂದ ಮಾಡಬೇಕು ಅಂತಾರೆ ಎಲ್ಲ ದಾಸರುಗಳು..

ಆದರೆ ಕೇವಲ ಲೋಕಾಸಕ್ತನಾಗಿ, ಕುಟುಂಬವನ್ನು ನೋಡಿಕೊಳ್ಳುವುದರಲ್ಲಿ, ಆಸ್ತಿ ಸಂಪತ್ತು ಹೆಚ್ಚಿಸುವುದರಲ್ಲಿ ಸದಾ ಆಸಕ್ತನಾಗಿ ಬರೇ ಸಂಸಾರಾಸಕ್ತನಾಗಿಯೆ ಜೀವನವನ್ನು ಮಾಡಿಕೊಂಡು ಬಂದ ಜೀವ ತಾನು ಪ್ರಾಣದಂತೆ ನೋಡಿಕೊಳ್ಳುವ ಆತ್ಮೀಯರ ಎದುರ್ಗಡೆನೇ ಪ್ರಾಣವನ್ನು ಬಿಡ್ತಾನೆ. ಅವನ ಹಿಂದೆ ಯಾರ್ಯಾರ್ಯಾರೂ ಬರುವುದಿಲ್ಲ. ಅವನ ಸತ್ /  ದುಷ್ಟ ಕರ್ಮಗಳು ಹೊರತುಪಡಿಸಿ... 

ಆರೂ ಸಂಗಡ ಬಾಹೋದಿಲ್ಲ ಅಂತಾರಲ್ವಾ ದಾಸಾರ್ಯರು..

 ಸಾಯುವ ಮುಂದೆ ಇರುವ ಬಾಂಧವ್ಯ ಹೋಗಿ ಹೆಣ ಎಂದೇ ಕರೆಯಲ್ಪಡುವನು ಆ ದೇಹ ಪಡೆದ ಜೀವನು. ಆದರೆ ದೇಹಕ್ಕೆ ಸಾವು ಹೊರತುಪಡಿಸಿ ಜೀವನಿಗಲ್ಲ ಹೌದು.. 

ಈ ಪಾಪಗಳು ಮಾಡಿದ ಜೀವನು ಸಾಯುವ ಸಮಯ ಬಂತು ಅಂದರೆ ಅವನಿಗೆ ಭಯಂಕರ ರೂಪದಿಂದಿರುವ ಯಮದೂತರು ಕಾಣಿಸ್ತಾರೆ. ಆ ಯಮದೂತರು ವಿಕೃತವಾದ ರೂಪದಿಂದಿದ್ದು,  ಬೆಂಕಿಯಂತೆ ಕೆಂಪಗಿನ ಕಣ್ಣುಗಳುಳ್ಳವರಾಗಿ ಭಯವನ್ನುಂಟುಮಾಡಿಸ್ತಾರೆ.  ಅವರನ್ನು ನೋಡಿದ ಈ ಸಾಯುವ , ಪಾಪಿಯಾದ ಜೀವನ ಎದೆ ಬಡೆದುಕೊಳ್ಳುತ್ತದೆ, ಅವನು ಭಯದಿಂದ ಮಲಮೂತ್ರ ವಿಸರ್ಜನೆಯನ್ನೂ ಮಾಡುತ್ತಾನೆ.  ಯಮದೂತರು ಆ ಪಾಪಿಯಾದ ಜೀವನಿಗೆ ಯಾತನಾದೇಹವನ್ನು ತೋರಿಸಿ ಅದರೊಳಗೆ ಆ ಜೀವನು ಪ್ರವೇಶಮಾಡುವಂತೆ ಮಾಡಿ ಅವನ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿ, ಖೈದಿಗಳನ್ನು ಕರೆದುಕೊಂಡು ಹೋಗುವಂತೆ ಎಳೆದುಕೊಂಡು ಹೋಗುವರು. ಹೀಗೆ ಜೀವನಾದವನು ಯಮಮಾರ್ಗದಿಂದ ಪ್ರಯಾಣವನ್ನು ಸಾಗಿಸುವನು. 

ಇಲ್ಲಿ ವಿಶೇಷ ವಿಷಯ ತಿಳಿಯೋಣ. ಅಜಮಿಳ ಅಂತ್ಯಕಾಲದಲ್ಲಿ ನಾರಾಯಣ ಎಂದು ಮಗನ ಕರೆದರೂ , ಕರೆಯುವಾಗ ಭಗವಂತನ ಅರಿವು ಅವನಿಗಾಗಿ ಯಮಲೋಕದ ಬದಿಲಾಗಿ ಸ್ವರ್ಗಲೋಕವನ್ನು ಸೇರಿದಂತೆ, ಯಮಮಾರ್ಗದಲ್ಲಿ ಎಳೆದೊಯ್ಯುವಾಗ ಜೀವ ನಾರಾಯಣಾ ಅಂದರೂ ಆ ಯಮದೂತರೂ ಹೆದರಿಕೆಯಿಂದ ನೋಡುವರಂತೆ. ಅಷ್ಟು ಮಾಹತ್ಮ್ಯ ಪರಮಾತ್ಮನ ನಾಮಸ್ಮರಣೆಗೆ ಇದೆ.. ಆ ನಾಮಸ್ಮರಣೆ ನಾಮಮಾತ್ರೇಣ ಮಾಡದೆ ಭಕ್ತಿಯಿಂದ ಮಾಡಬೇಕು.. ಯಾವುದೇ ಆದರೂ ಅಭ್ಯಾಸದಿಂದಲೆ ಬರುವುದು. ಚಿಕ್ಕಂದಿನಿಂದಲೂ ನಾರಾಯಣ, ಗೋವಿಂದಾ, ಕೃಷ್ಣಾ, ಮಧುಸೂದನಾ ಹೀಗೆ ಕೂತರೆ ನಿಂತರೆ ಹೇಳುವ ಅಭ್ಯಾಸ ಇದ್ದವರಿಗೆ ಅಂತ್ಯಕಾಲೇ ವಿಶೇಷತಃ ಎನ್ನುವ ಶ್ರೀಮದಾಚಾರ್ಯರ ವಾಕ್ಯದಂತೆ ಸಾಯುವಾಗಲೂ ಅದೇ ಧ್ಯಾನವನ್ನು ಮಾಡಲು ಸಾಧ್ಯ.. ಹೀಗಾಗಿ ಸದಾ ಭಗವಧ್ಯಾನಾಸಕ್ತರಾಗಿ ಕುಕರ್ಮಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯುವಂತೆ ನಮ್ಮ ಗುರುಗಳು ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಪರಮಾತ್ಮನು ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ...
--Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
ಪಕ್ಷಮಾಸದ ಚಿಂತನೆ

              ಭಾಗ -3

ನರಕಲೋಕ ಒಂದು ವಿಶ್ಲೇಷಣೆ

ನಿನ್ನೆಯ ಭಾಗದಲ್ಲಿ ಪಾಪಿಗಳು ಹೇಗೆ ಯಮದೂತರಿಂದ ಯಮಮಾರ್ಗದ ದಕ್ಷಿಣ ಮಹಾದ್ವಾರಕ್ಕೆ ಬರೋದರ ವಿವರ ನೋಡಿದ್ದೇವೆ.. 

ಪಾಪಿಯಾದ ಜೀವನ ದೇಹವನ್ನು ಬಿಟ್ಟಾಗ ಆ ಜೀವನ ಕುತ್ತಿಗೆಗೆ ಪಾಶ ಹಾಕಿ ಗಟ್ಯಾಗಿ ಹಿಡಿದು ಭಯಾನಕ ರೂಪದ ಯಮದೂತರು ಎಳೆದುಕೊಂಡು ಹೋಗುವಾಗ ಆ ದೇಹದ ಮೇಲೆ ಮೋಹದಿಂದ ಆ ಜೀವ ಮತ್ತೆ ಮತ್ತೆ  ಆ ದೇಹದಲ್ಲಿ ಬರಲು ಬಡ್ಕೋತಾ ಇರ್ತದೆ. ಆದರೆ ಯಮದೂತರು ಗಟ್ಯಾಗಿ ಕಟ್ಟಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಆದರೆ ಪರಮಾತ್ಮನ ಕರುಣೆಯಿಂದ ಆ ಜೀವನನ್ನು ಹತ್ತುದಿನ ತಮ್ಮ ಆತ್ಮೀಯರನ್ನು ಹತ್ರದಲ್ಲೇ ಇದ್ದು ಕಾಣದಂತೆ ನೋಡಿಕೊಳ್ಳುವ ಅವಕಾಶ ಕೊಟ್ಟಿದ್ದಾನೆ. ಜೀವ ದೇಹವನ್ನು ಬಿಡ್ತಾನೆ. ನಂತರ
  ಆ ದೇಹಕ್ಕೆ ಎಲ್ಲ ಸಂಸ್ಕಾರ ಮಾಡಿ ಆ ಜೀವನ ಮಗನಾದವನು ಬೆಂಕಿ ಇಡುವಾಗ ಎರಡು ಶಿಲೆಯಿಂದ ಆ ಜೀವದ ಶವಕ್ಕೆ ಕಟ್ಟಿದ ಹಗ್ಗವನ್ನು ಹೊಡೆಯುವನು. ಆಗ ಆ ಜೀವ ಒಂದಂಶದಿಂದ  ಶಿಲೆಯಲ್ಲಿ ಬಂದು ಸೇರ್ತದೆ. ಆ ಸಂಸ್ಕಾರ ಮುಗಿಸಿದ ಮಗನಾದವನು ಆ ಶಿಲೆಯನ್ನು ತಗೊಂಡು ಹೋಗಿ  ಮನೆಯ ಹೊರಗ ಗಿಡಕ್ಕೆ ಕಟ್ಟಿ ಇಡುತ್ತಾನೆ... ಕರ್ಮ ಮಾಡೋವಾಗ ಎಲ್ಲಿ ಕರ್ಮ ಮಾಡ್ತಾರೆಯೋ ಅಲ್ಲಿಗೆ ಆ ಶಿಲೆಯನ್ನು ತಗೊಂಡು ಹೋಗ್ತಾರೆ. ಆ ಶಿಲೆಯಲ್ಲಿರುವ ಜೀವನ ಸನ್ನಿಧಾನದಲ್ಲಿ  ಕರ್ಮಗಳನ್ನು ಮಾಡ್ತಾರೆ. 

ಮನೆಯಲ್ಲಿ ಎಲ್ಲಿ ಜೀವ ಹೋಗಿರ್ತದೆಯೋ  ಅಲ್ಲಿ ದಹನ ಸಂಸ್ಕಾರ ಆದ ದಿನವೇ ಒಂದು ದೀಪ ಹಚ್ಚಿರ್ತಾರೆ.  ಆ ದೀಪದಲ್ಲಿ ಸಹ ಒಂದಂಶದಿಂದ  ಜೀವ ಇರ್ತದೆ. ಅದರ ಹತ್ರ ಒಂದು ಮಣ್ಣಿನ ಹರಿವಾಣದೊಳಗ ಗೋಧಿ, ಹೆಸರು ಯಾವುದಾದರೂ ಕಾಳನ್ನು ಹಾಕಿ ಮೊಳಕಿ ಬೆಳೆದು ಸಸಿ ಬೆಳೆಯುವಂತೆ ಮಾಡ್ತಾರೆ. ಆ ಸಸಿ ಹೇಗೆ ಬೆಳೆಕೋತಾ ಹೋಗ್ತದಯೋ ಆ ರೀತಿಯಲ್ಲಿ ಆ ಜೀವನ ಕುಲ ವೃದ್ಧಿಯಾಗಲಿ ಎಂದು ಭಗವಂತ ಆ ಜೀವದಲ್ಲಿ ನಿಂತು ಹರಿಸುವನು. ಅಲ್ಲದೆ ಆ ಸಸಿ ಊರ್ಧ್ವ ಮುಖವಾಗಿ ಬೆಳೆಯುತ್ತ ಹೋದಾಗ ಆ ಜೀವಕ್ಕೆ ಉತ್ತಮಲೋಕಗಳು ಸಿಗುತ್ತಾ ಹೋಗ್ತವು. ಮತ್ತೆ  ಆ ದೀಪದ ಹತ್ರ ಒಂದು ಹಾಲಿನ ಗಡಿಗೆ, ಒಂದು ನೀರಿನ ಗಡಿಗೆ ಕಟ್ಟಿ ಒಂದು ದಾರವನ್ನು ತಗೊಂಡು ಆ ದಾರದ ಒಂದು ಕೊನೆಯನ್ನು ಹಾಲಿನ ಗಡಿಗೆಯಲ್ಲಿ, ಮತ್ತೊಂದು ಕೊನೆಯನ್ನು ನೀರಿನ ಗಡಿಗೆಯಲ್ಲಿ  ಇಡ್ತಾರೆ. ಆ ಹಾಲು ಮತ್ತು ನೀರನ್ನು  ಜೀವ ಹತ್ತುದಿನ ಕುಡಿಯುತ್ತಿರುತ್ತದೆ. ಆ ಹಾಲು, ನೀರು ಕಡಿಮೆ ಆಗ್ತಾ ಹೋಗ್ತದೆ. ಆಗ ಮತ್ತೆ ಹಾಲು, ನೀರು ಆ ಗಡಿಗೆಗಳಲ್ಲಿ ಹಾಕುತ್ತಾ  ಇರ್ತಾರೆ ( ಪ್ರತಿನಿತ್ಯ ಆಯಾ ದಿನದ ಕರ್ಮಗಳಾದ ಮೇಲೆ) ಬದಲಾಯಿಸಬೇಕು. ಆ ಗಡಿಗೆಗಳ ಮುಂದೆ ನಿಂತು ಆ ಜೀವನಿಗೆ ಸಂಸ್ಕಾರ ಮಾಡಿದ  ಮಗನಾದವನು(ಕರ್ತೃ) , ಆ ಜೀವನನ್ನು ಕುರಿತು ನೀನು ಇಷ್ಟು ವರ್ಷಗಳಿಂದ ನನ್ನನ್ನು,  ಮತ್ತೆ ಕುಟುಂಬದ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ನಿನ್ನ ಸುಖಗಳನ್ನು ಸಹ ಬಿಟ್ಟು ನೋಡಿಕೊಂಡಿರುವಿ.. ಆದರೆ ನಾನು ನಿನ್ನನ್ನು ಕ್ರವ್ಯಾದ ನಾಮಕ ಅಗ್ನಿಗೆ ಹವಿಸ್ಸಿನ ರೂಪದಲ್ಲಿ ಅರ್ಪಿಸಿ ಬಂದಿದ್ದೆನೆ. ಆ ದಾಹಾಗ್ನಿಯಿಂದ ಪರಿತಪಿಸುವಂತಹಾ ನಿನಗೆ ಪರಮಾತ್ಮನು ಆ ತಾಪದಿಂದ ಪರಿತಾಪವಾಗದಂತೆ ಅನುಗ್ರಹ ಮಾಡಲಿ ಎಂದು ಬೇಡಿಕೊಳ್ಳುತ್ತಾನೆ.. 

ಆ ಹತ್ತುದಿನದ ಕಾಲ ಆ ಜೀವವಿರುವ ದೀಪದ ಮುಂದೆ ಗರುಡಪುರಾಣವನ್ನು ಶ್ರವಣ ಮಾಡುವ ಕ್ರಮ ಶಾಸ್ತ್ರದಲ್ಲಿ ಹೇಳಿದ್ದಾರೆ. ಆ ಗರುಡಪುರಾಣವನ್ನು ಶ್ರವಣ ಮಾಡುವದರಿಂದ ಆ ಜೀವ ತಾನು ಮಾಡಿದಂತಹ ಪಾಪಕರ್ಮಗಳಿಂದ ಮುಕ್ತನಾಗುವುದಲ್ಲದೆ, ಆ ಯಮದೂತರ ತಾಡನದಿಂದ, ಪೀಡೆಯಿಂದ, ಅವರು ನೀಡುವ ಕ್ಲೇಶಗಳಿಂದ ದೂರನಾಗಿ ಶ್ರೀಹರಿಯ ಅನುಗ್ರಹದಿಂದ ಮುಕ್ತನಾಗಿ ಸದ್ಗತಿಯನ್ನು ಪಡೆಯುತ್ತಾನೆ..

ಹತ್ತನೆಯ ದಿವಸ ಆ , ಬೆಳೆದಂತಹ ಸಸಿ, ನೀರಿನ, ಹಾಲಿನ ಗಡಿಗೆ, ದಾರ ಇವೆಲ್ಲದರ ಸಹಿತ ಆ ದೀಪವನ್ನು ತೆಗೆದುಕೊಂಡು ಹೋಗಿ ಕರ್ಮಮಾಡುವ ಸ್ಥಳದ ಹತ್ತಿರದ ನಾಲ್ಕು ದಾರಿ ಕೂಡಿದ ಸ್ಥಳದಲ್ಲಿ ವಿಸರ್ಜನೆ ಮಾಡಲಾಗುವುದು. 

ಈ ಹತ್ತುದಿನದ ವಿಷಯಗಳು ಇನ್ನೂ ಬಹಳ ಇವೆ ತಿಳಿಯಲು.
ಮುಂದಿನ ಭಾಗದಲ್ಲಿ ಇನ್ನಷ್ಟು ವಿಷಯಗಳು ತಿಳಿಯಲು ಪ್ರಯತ್ನ ಮಾಡೋಣ ಹರಿವಾಯುಗುರುಗಳ ಅನುಗ್ರಹದಂತೆ...

ಹರಿನಾಮ ಸ್ಮರಣೆ ಸಂಕೀರ್ತನೆ ಸದಾ ನಮ್ಮ ನಾಲಿಗೆಯಲ್ಲಿರಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತಾ..

--Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***

ಪಕ್ಷಮಾಸದ ಚಿಂತನೆ

              ಭಾಗ -4

ಮರಣಾನಂತರದ ಜೀವ- ವಿಶ್ಲೇಷಣೆ

ಹಿಂದಿನ ಲೇಖನದಲ್ಲಿ ಜೀವನಿಗೆ ಹತ್ತುದಿನಗಳಲ್ಲಿ ಮಾಡುವ ಕಾರ್ಯಗಳನ್ನು ನೋಡಿದ್ದೆವೆ. ಇವತ್ತು ಸಹ ಮತ್ತಷ್ಟು ವಿಚಾರಗಳನ್ನುತಿಳಿಯುವ ಪ್ರಯತ್ನ ಮಾಡೋಣ..

ಮರಣಾನಂತರ ನಡೆಯುವ ಕ್ರಿಯಗಳಲ್ಲಿ ಮುಖ್ಯವಾದದ್ದು ಪಿಂಡ ಪ್ರದಾನ ಮೊದಲನೆಯ ದಿನದಿಂದ ಹತ್ತನೆಯ ದಿನದ ವರೆಗೂ ಏನು ಪಿಂಡ ಪ್ರದಾನವನ್ನು ಮಾಡ್ತಾರೆ ಅಲ್ವಾ,  ಅದು ಪಿಂಡಜ ಶರೀರವನ್ನು  ಕೊಡಲಿಕ್ಕಾಗಿ ಮಾಡುತ್ತಾರೆ. ಅಂದರೆ ಮುಂದೆ ಹನ್ನೆರಡು ತಿಂಗಳು ವರೆಗೂ ಬರುವ ಹದಿನಾರು ಪಿಂಡಪ್ರದಾನದ ಪಿಂಡಗಳನ್ನು ಭಕ್ಷಿಸಲು ಒಂದು ಶರೀರ ಬೇಕಾಗುತ್ತದೆ. ಆ ಶರೀರವನ್ನು  ಪ್ರದಾನ ಮಾಡಲಿಕ್ಕೇನೇ ಪಿಂಡಪ್ರದಾನ ಮಾಡ್ತಾರೆ. ಪಿಂಡದಿಂದ ಜ-ಜನಿಸಿದ, ಪಿಂಡದಾನದಿಂದ ಉತ್ತವನ್ನವಾಗಿ, ಆ ಪಿಂಡದಾನವನ್ನ ಭಕ್ಷಣೆ ಮಾಡಲಿಕ್ಕಾಗಿ ಉಂಟಾದಂತಹ  ಶರೀರ ಕಡಿಂದ ಪಿಂಡಜ ಶರೀರ ಅಂತಲೇ ಹೆಸರು. 

ಪಿಂಡದಾನದಿಂದ ಹೇಗೆ ಶರೀರ ಉತ್ವನ್ನವಾಗ್ತದೆ ಅಂದರೆ --- ಮೊದಲಿಗೆ ಆ ಜೀವಿಯ ಶರೀರ ಮಾಂಸದ ಮುದ್ದೆಯಂತೆ ಇರ್ತದೆ. ಮೊದಲನೆಯ ದಿನ ಪಿಂಡದಾನ ಮಾಡೋದರಿಂದ ಮುಖ, ಮುಖದಲ್ಲಿನ, ಕಣ್ಣು, ಮೂಗು ಬಾಯಿ ಇತ್ಯಾದಿಗಳು ಉತ್ಪನ್ನವಾಗ್ತವೆ.  ಎರಡನೆಯ ದಿವಸ ಹೆಗಲುಗಳು ಉತ್ಪನ್ನವಾಗ್ತದೆ. ಮೂರನೆಯ ದಿವಸದ ಪಿಂಡದಾನದಿಂದ ಹೃದಯ, ನಾಲ್ಕನೆಯ ದಿವಸದ ಪಿಂಡದಾನದಿಂದ ಉದರ, ಐದನೆಯ ದಿವಸದ ಪಿಂಡದಾನದಿಂದ ಕಟಿ ಹೀಗೆ ಎಲ್ಲ ಭಾಗಗಳು ಉತ್ಪನ್ನವಾಗುತ್ತ ಹತ್ತನೆಯ ದಿನಕ್ಕೆ ಪೂರ್ತಿ ಪಿಂಡಜ ಶರೀರ ಉತ್ಪನ್ನವಾಗುತ್ತದೆ. ಅದರ ಪ್ರಮಾಣ ಅಂಗೈಯಷ್ಟು ಅಗಲ ಮಾತ್ರ ಇರ್ತದ.. ಹೀಗೆ ಪಿಂಡಜ ಶರೀರ ಪೂರ್ತಿಯಾಗಿ ಉತ್ಪನ್ನವಾಗುತ್ತದೆ.. 

ಹತ್ತನೆಯ ದಿನ ಕಾಗೆಪಿಂಡ  ಅಂತ ಕೊಡ್ತಾರೆ..  ಯಾಕೆ ಅಂತಂದರೆ - ಹಿಂದೆ ದೇವತೆಗಳು ದೊಡ್ಡ ಯಜ್ಞವನ್ನು ಮಾಡಿರ್ತಾರೆ . ಆ ಯಜ್ಞದಲ್ಲಿ ಅಮೃತ ಕಲಶ ಉತ್ಪನ್ನವಾಗಿರ್ತದೆ. ಆ ಅಮೃತವನ್ನು ಕದ್ದೊಯ್ಯಲು ದೈತ್ಯರ ಸಮೂಹ ದಂಡೆತ್ತಿ ಬರ್ತದ. ಆಗ ಬ್ರಹ್ಮ ದೇವರು ಎಲ್ಲ ದೇವತೆಗಳಿಗೆ ಆಜ್ಞೆ ಮಾಡ್ತಾರೆ - ನೀವೆಲ್ಲರೂ ಬೇರೇ ಬೇರೇ ಪಶು ಪಕ್ಷಿಗಳ ರೂಪವನ್ನು ತಾಳಿ ಆ ಅಮೃತವನ್ನು ತಗೊಂಡು ಹೋಗಿಬಿಡಿ ಅಂತ... ಆಗ ಆ ಎಲ್ಲ ದೇವತೆಗಳೂ ಪಶು ಪಕ್ಷಿಗಳ ರೂಪ ತಗೊಂಡು ಆ ಅಮೃತವನ್ನು ಪೂರ್ತಿ ಖಾಲಿ ಮಾಡಿಬಿಡ್ತಾರೆ. ಆಗ ದೈತ್ಯರು ಬಂದು ನೋಡಿದಾಗ ಅಮೃತ ಪೂರ್ತಿ ಖಾಲಿಯಾಗಿರ್ತದೆ. ಆ ಸಂದರ್ಭದಲ್ಲಿ ದೇವತೆಗಳು ಯಾವಯಾವ ರೂಪ ಹೊಂದಿದ್ದರೊ ಆಯಾ ಪಶು ಪಕ್ಷಿಗಳ ಸಂಕುಲಕ್ಕೆ ಒಂದೊಂದು ವರವನ್ನು ನೀಡಿರ್ತಾರೆ. ಆಗ ಯಮಧರ್ಮರಾಯರು ಕಾಗೆಯ ರೂಪವನ್ನು ತಗೊಂಡು ಆ ಕಾಗೆಯ ರೂಪದಿಂದ ಆ ಅಮೃತವನ್ನು ಕುಡಿದಿರ್ತಾರೆ. ಆಗ  ಯಮಧರ್ಮರಾಯರು ಕಾಗೆಯ ಸಂಕುಲಕ್ಕೆ ವರವನ್ನು ನೀಡ್ತಾರೆ --- ಇನ್ಮೇಲೆ ಜೀವರು ಮರಣವಾದನಂತರ ಆ ಜೀವದ ಹೆಸರಿನಲಿ ಹತ್ತನೆಯ ದಿವಸ ಪಿಂಡದಾನ ಮಾಡುತ್ತಾರೆಯೋ ಆ ಪಿಂಡವನ್ನು ನಿನ್ನ ಸಂಕುಲದ ಯಾವುದೆ ಕಾಗೆ ಸ್ಪರ್ಶ ಮಾಡುವುದರಿಂದ ಆ ಪಿಂಡ ಯಾರ ಹೆಸರಿನಲ್ಲಿ ನೀಡಲಾಗಿದೆಯೊ ಅವರಿಗೆ ನಾನು ಸದ್ಗತಿಯನ್ನು ನೀಡುತ್ತೆನೆ ಅಂತ.. ಹೀಗಾಗಿ ಹತ್ತನೆಯ ದಿನದ ಪಿಂಡದಾನವನ್ನು ಕಾಗೆಪಿಂಡ ಅಂತಲೆ ಕರಿತಾರೆ. ಕಾಗೆ ಬಂದು ಆ ಪಿಂಡವನ್ನು ಸ್ಪರ್ಶ ಮಾಡಲಿ ಅಂತ ಅತ್ಯಂತ ಭಕ್ತಿ ವಿಶ್ವಾಸದಿಂದ ಬೇಡಿಕೊಳ್ಳಬೇಕು. ಇವತ್ತಿಗೂ ನಾವು ನೋಡ್ತಿರ್ತಿವಿ ಯಾರು ಆ ಜೀವಕ್ಕೆ ಇಷ್ಟವಾದವರು ಬಂದು ಬೇಡಿಕೊಂಡು ತಿನ್ನು ಅಂತ ಹೇಳುತ್ತಾರೆ ಆಗ ತಾನೆ ಆ ಕಾಗೆ ಅದನ್ನು ತಿನ್ನುತ್ತದೆ ಅನ್ನೋದನ್ನ. ಅಲ್ಲೇ ಸುತ್ತಲೂ ಓಡಾಡ್ತಿದ್ದರೂ ಸಹ ಕಾಗೆ ಪಿಂಡ ಸ್ಪರ್ಶ ಮಾಡೋದಿಲ್ಲ. ಯಾಕೆಂದರೆ ಆ ಕಾಗೆಗೆ ಆ ಪಿಂಡ ಬೆಂಕೆಯ ಉಂಡೆಯಂತೆ ಕಾಣ್ತಿರ್ತದೆ. ಅದಕ್ಕೆ ಅಲ್ಲೇ ಇದ್ರೂ ಸಹ ಅದು ತಿನ್ನಂಗಿಲ್ಲ.. ಆಗ ಯಾರಿಗಾಗಿ ಆ ಪಿಂಡಪ್ರದಾನವನ್ನ ಮಾಡಿದರೋ ಅವರಿಗೆ ಪ್ರೀತಿಪಾತ್ರರು ಬಂದು ಭಕ್ತಿಯಿಂದ ಬೇಡೀಕೊಂಡು ತಿನ್ನು ಅಂತ ಹೇಳುತ್ತಾರೆ. ಆಗ ಆ ಬೆಂಕಿಯಂತೆ ಕಾಣುವ ಆ ಪಿಂಡ ತಕ್ಷಣದಲಿ ಅನ್ನದಂತೆ ಕಾಣುತ್ತದೆ.  ಆ ಬೇಡಿದ ಮನುಷ್ಯ ಮುಂದೆ ತನ್ನ ಜವಾಬ್ದಾರಿಯನ್ನು ತಗೋತಾನೆ, ತನ್ನ ಮನೆಯವರನ್ನು ನೋಡಿಕೊಳ್ತಾನೆ ಅಂತ ನಂಬಿಕೆ ಬಂತು ಅಂದರೆ ಆ ಕಾಗೆ ಆ ಪಿಂಡವನ್ನು ಭಕ್ಷಣೆ ಮಾಡುತ್ತದೆ, ಅದರಿಂದ ಆ ಜೀವಕ್ಕೆ ಸದ್ಗತಿಯಾಗ್ತದೆ. ಇದು ಹತ್ತನೆಯ ದಿನದ ಕಾಗೆಪಿಂಡದ ವಿಶೇಷ.  

ನಂತರ ಹನ್ನೆರಡನೆಯ ದಿವಸ ಸಪಿಂಡೀಕರಣ ಆಗ್ತದ, ದಾನ ಧರ್ಮಾದಿಗಳ ಕಾರ್ಯ ನಡಿತದ, ನಂತರ ಹದಿನೈದನೇ ದಿವಸದ ಪಿಂಡದಾನವನ್ನು ಪಾಕ್ಷಿಕ ಪಿಂಡದಾನ ಅಂತಾರೆ. ಆ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಯಮಮಾರ್ಗದ ಮೊದಲಪಟ್ಟಣವಾದ ಸೌಮ್ಯಪಟ್ಟಣವನ್ನು (ಸೌಮ್ಯಪುರಿ) ಯನ್ನು ಸೇರುತ್ತಾನೆ ಆ ಮರಣವನ್ನು ಹೊಂದಿದ ಜೀವ.. ಮತ್ತಷ್ಟು  ವಿಷಯಗಳು ಮುಂದಿನ  ಭಾಗದಲ್ಲಿ ನೋಡೋಣ ಎಂದು ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನ ಪ್ರಾರ್ಥನೆ ಮಾಡುತ್ತಾ...

ಪರಮಾತ್ಮನ ಸ್ಮರಣೆ ಜೀವವಿರುವಷ್ಟರವರೆಗೂ ನಮ್ಮ ಬಾಯಲ್ಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ...
-Padma Sirish
ನಾದನೀರಾಜನದಿಂ ದಾಸಸುರಭಿ
***

ಪಕ್ಷಮಾಸದ ಚಿಂತನೆ

              ಭಾಗ -5

ಮರಣಾನಂತರ - ಜೀವ - ಒಂದು ವಿಶ್ಲೇಷಣೆ 

ನಿನ್ನೆಯ ದಿನ ನಾವು ಪಿಂಡಪ್ರದಾನದಿಂದ ಉತ್ಪನ್ನವಾಗುವ ಪಿಂಡಜಶರೀರ, ಮತ್ತೆ ಕಾಗೆಯಪಿಂಡ ದ ವಿಶೇಷತೆ ತಿಳಿದಿದ್ದೆವು..  ಹದಿನೈದನೇ ದಿನದ ಪಿಂಡಪ್ರದಾನದ ಭಕ್ಷಣೆ ಮಾಡಿ ಆ ಜೀವ ಯಮಮಾರ್ಗದ ಸೋಮ್ಯಪಟ್ಟಣವನ್ನು ಸೇರುತ್ತದೆ ಹನ್ನೆರಡು ತಿಂಗಳುಗಲ ಕಾಲ ಮಾಡುವ ಹದಿನಾರು ಪಿಂಡಗಳನ್ನು ಭಕ್ಷಣೆ ಮಾಡುತ್ತಾ ಜೀವ ಹದಿನಾರು ಪಟ್ಟಣಗಳು ದಾಟುತ್ತದೆ.

1. ಸೌಮ್ಯಪುರಿ
2. ಸೌರಿಪುರ
3. ನಗೇಂದ್ರಭವನ
4.  ಗಂಧರ್ವಪುರ
5. ಶೈಲಾಗಮ
6. ಕ್ರೌಂಚಪುರ
7. ಕ್ರೂರಪುರ
8. ವಿಚಿತ್ರಭವನ
9.  ಬೌಹಾಪದ
10. ದುಃಖದ
11. ನಾನಾಕ್ರಂದಪುರ
12. ಸುತಪ್ತಭವನ
13. ರೌದ್ರಪುರ
14. ಪಯೋವರ್ಷಣ
15. ಶೀತಾಢ್ಯಾ
16. ಬಹುಭೀತಿ 

ಮೊದಲಾದ ಹದಿನಾರು ಪಟ್ಟಣಗಳನ್ನ ಕರ್ತೃ ನೀಡುವ ಹದಿನಾರು ಪಿಂಡಗಳನ್ನು ಭಕ್ಷಣೆ ಮಾಡುತ್ತ , ದಾಟುತ್ತದೆ ಆ ಜೀವ.  ಪಟ್ಟಣ ನೋಡಿದರೆ ಹದಿನಾರು ಇದ್ದವೆ, ತಿಂಗಳು ನೋಡಿದರೆ ಹನ್ನೆರಡು ಅಂತ ಪ್ರಶ್ನೆ ಬರಬಹುದು. ಹೌದು, ಆದರೆ ಅಧಿಕವಾದ ಪಿಂಡದಾನಗಳು ಬರ್ತವು. ಹದಿನೈದನೇ ದಿನದ ಪಾಕ್ಷಿಕ ಪಿಂಡದಾನದ ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ ಸೌಮ್ಯಪುರಕ್ಕೆ ಬರ್ತದೆ, ಎರಡನೆಯದು ಪ್ರಥಮ ಮಾಸಿಕ ಪಿಂಡದಾನದಿಂದ ಸೌರಿಪುರಕ್ಕೆ ಬರ್ತದ. ಮತ್ತೆ 45 ದಿವಸದ ತ್ರೈಪಾಕ್ಷಿಕ ಪಿಂಡದಾನದ ಭಕ್ಷಣೆದಿಂದ ನಗೇಂದ್ರಭವನಕ್ಕೆ ಬರ್ತದ. ಎರಡನೆಯ ತಿಂಗಳ  ಪಿಂಡದಾನದ ಭಕ್ಷಣದಿಂದ ಗಂಧರ್ವಪುರ ಹೀಗೆ ಪಿಂಡದ ಭಕ್ಷಣೆ ಮಾಡ್ತಾ ಮಾಡ್ತಾ 5 ವರೆ ತಿಂಗಳಲ್ಲಿ ವೈತರಿಣಿ ನದಿಯ ಹತ್ರ ಬರ್ತದ. ವೈತರಿಣಿ ನದಿ ಅತಿ ಭಯಂಕರವಾಗಿರ್ತದೆ. ಕೀವು, ರಕ್ತ, ಮಾಂಸಗಳಿಂದ ತುಂಬಿ ತುಳುಕುತ್ತ, ಮಡುವುಗಳು, ತಿರುವುಗಳು ಎಲ್ಲವೂ ಇರ್ತವೆ. ಆ ನದಿಯ ಮಡುವಿನೊಳಗೆ  ಯಮದೂತರು ಈ ಜೀವನನ್ನು ಇಳಿಸೋದು, ಮುಳುಗಿಸೋದು, ಎಬ್ಬಿಸೋದು ಅವೆಲ್ಲವೂ ಕುಡಿಸೋದು ಮೊದಲಾದ ಕ್ರಿಯಗಳಿಂದ ಹಿಂಸೆ ಕೊಡ್ತಾರೆ. ಆ ಸಮಯದಲ್ಲಿ ಗೋದಾನ ಮಾಡಬೇಕು. ಗೋದಾನ ಮಾಡುವುದರಿಂದ ಅಲ್ಲಿಗೆ ವಿಷ್ಣುದೂತರು ಕೈವರ್ತ ಎನ್ನುವ ನೌಕೆಯನ್ನು ತಗೊಂಡು ಬಂದು ಆ ಜೀವನನ್ನು ಆ ವೈತರಿಣಿ ನದಿಯನ್ನು ದಾಟಿಸ್ತಾರೆ.  ಈ ರೀತಿಯಲ್ಲಿ ಎಲ್ಲ ಪಟ್ಟಣಗಳು ದಾಟುತ್ತಾ ಹದಿನಾರು ಪಟ್ಟಣಗಳು ದಾಟುತ್ತದೆ ಆ ಜೀವ. ಆ ಹೊತ್ತಿಗೆ ಹದಿನಾರು ಪಿಂಡದಾನಗಳು ಮುಗಿದಿರ್ತವು. ಅವುಗಳನ್ನು ಷೋಡಶಿ ಅಂತ ಕರಿತಾರೆ. 
ಈ ಷೋಡಶಿ ಸಹ ಮೂರು ವಿಧವಾದದ್ದಿವೆ. 

1. ಮಲಿನ ಷೋಡಶಿ - ದಹನ ಸಂಸ್ಕಾರದಿಂದ ಹತ್ತನೆಯ ದಿವಸದ ವರೆಗೆ ಮೈಲಿಗೆಯ ಸಮಯದಲ್ಲಿ ಮಾಡುವಂತವು.

2. ಮಧ್ಯಮ ಷೋಡಶಿ - 11 ನೇ ದಿವಸ ಹದಿನಾರು ಪಿಂಡದಾನಗಳು ಬರ್ತವು. ಅವುಗಳನ್ನು  ಮಧ್ಯಮ ಷೋಡಶಿ ಅಂತ ಕರಿತಾರೆ.

3. ಉತ್ತಮ ಷೋಡಶಿ - ಹದಿನೈದನೇ ದಿವಸದಿಂದ ಹನ್ನೆರಡು ತಿಂಗಳ ವರೆಗೂ ಮಾಡುವಂತದ್ದು ಉತ್ತಮ ಷೋಡಶಿ... ಹೀಗೆ ಈ ಷೋಡಶಿಗಳು ಮೂರು ಸೇರಿ  (16×3) = 48 ಶ್ರಾದ್ಧಗಳು ಆಗ್ತವೆ

ಈ ರೀತಿಯಲ್ಲಿ 48 ಪಿಂಡದಾನಗಳು ಮಾಡಿಸಿಕೊಂಡಂತಹ ಜೀವ ಮುಂದೆ ಉತ್ತಮ ಲೋಕಕ್ಕೆ ಹೋಗುತ್ತದೆ. ಒಂದು ಮುಖ್ಯ ವಿಷಯವೆಂದರೆ - ಈ ಪಿಂಡಪ್ರದಾನದ ಸಮಯ ಕರ್ತೃ ವಾದವನು ನಾನೇ ದುಡ್ಡು ಖರ್ಚು ಮಾಡಿ ಮಾಡ್ತಿದ್ದಿನಿ ಎನ್ನುವ ಯಾವುದೇ ರೀತಿಯ ಅಹಂಕಾರದಿಂದವಾದರೂ, ಅಳುತ್ತಲಾದರೂ, ಮಾನಸಿಕ ಗೊಂದಲ ಮಾಡಿಕೊಂಡಾದರೂ ಕರ್ಮಾದಿಗಳು, ಪಿಂಡದಾನಗಳು ಮಾಡೋದರಿಂದ ಹದಿನಾರು ಪಟ್ಟಣಗಳ ನಂತರ ಆ ಜೀವಕ್ಕೆ ಅಧೋಗತಿಯ ಪ್ರಾಪ್ತವಾಗುತ್ತದೆ. ಹೀಗಾಗಿ ಕರ್ತೃವಾದವನು ಭಕ್ತಿ ಶ್ರದ್ಧೆಯಿಂದ, ಆ ಕರ್ಮಾದಿಗಳ ಕುರಿತಾದ ಜ್ಞಾನದಿಂದ ಮಾಡಿದಾಗ ಆ ಜೀವಕ್ಕೆ ಸದ್ಗತಿ ದೊರುಕ್ತದೆ. ಮತ್ತೆ ಆ ಕರ್ತೃವಿನ ಜೊತೆ ಕರ್ಮಾದಿಗಳನ್ನು ಮಾಡಿಸುವ ಪುರೋಹಿತನೂ ಸಹ ಅಷ್ಟೇ ಭಕ್ತಿ ಶ್ರದ್ಧಗಳಿಂದ ಮಾಡಿಸಬೇಕು. ಕರ್ತೃವಾದರೂ ಪುರೋಹಿತನಾದರೂ ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಈ ಎಲ್ಲ ಪಟ್ಟಣಗಳು ಸಹ ಕಷ್ಟದಿಂದ ದಾಟುತ್ತ ಆ ಜೀವ ನರಕಾದಿಗಳನ್ನು ಹೊಂದುತ್ತಾನೆ. ಹೀಗಾಗಿ ರೋದಿಸದೆ, ಯಾವುದೇ ರೀತಿಯ ವ್ಯತ್ಯಾಸಗಳು ಮಾಡದೆ, ಅತ್ಯಂತ ಭಕ್ತಿಯಿಂದ, ಸ್ವಚ್ಛ ಮನದಿಂದ ಶ್ರದ್ಧೆಯಿಂದ ಹನ್ನೆರಡು ತಿಂಗಳ ಕಾಲ ಪಿಂಡದಾನಗಳು ಮಾಡೋದರಿಂದ ಆ ಜೀವಕ್ಕೆ ಸದ್ಗತಿ ಯಾವುದೆನ್ನುವುದು ಪರಮಾತ್ಮನ ಕಾರುಣ್ಯ.. 

ಮುಂದಿನ ಭಾಗದಲ್ಲಿ ಮತ್ತಷ್ಟು ವಿಷಯಗಳು ಹರಿವಾಯುಗುರುಗಳ ಅನುಗ್ರಹದಿಂದ ತಿಳಿಯುವಂತಾಗಲಿ..

ಹರಿಯಲ್ಲಿ ಭಕ್ತಿ,  ಹರಿಯ ಮತದಲ್ಲಿ ರಕ್ತಿ, ಮಾಡುವ ಶಾಸ್ತ್ರ ಬದ್ಧವಾದ ಧರ್ಮ ಕಾರ್ಯಗಳಲ್ಲಿ ಶ್ರದ್ಧೆ ಇವೇ ನಮ್ಮ ಆದ್ಯ ಕರ್ತವ್ಯವಾಗಿದೆ. ಸದಾ ಹರಿಯ ಸ್ತುತಿ, ಸ್ಮರಣೆಗಳು ಕ್ಷಣಕ್ಷಣಕ್ಕೂ ನಮಗೆ ಬರುವಂತಾಗಲಿ ಎಂದು ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನನ್ನು ಬೇಡಿಕೊಳ್ಳುತ್ತಾ...
-Padma Sirish
ನಾದನೀರಾಜನದಿಂ ದಾಸಸುರಭಿ 
***

ಪಕ್ಷಮಾಸದ ಚಿಂತನೆ

              ಭಾಗ-6 

ವೈತರಿಣಿ ನದಿಯ ನೋಟ

ನಿನ್ನೆಯ ದಿನ ಐದೂವರೆ ತಿಂಗಳ ಪಿಂಡದಾನವನ್ನು ಭಕ್ಷಿಸಿದ ಪಿಂಡಜದೇಹದ ಜೀವ ವೈತರಿಣಿ ನದಿಯನ್ನು ಸೇರುತ್ತದೆ, ಅದನ್ನು ದಾಟಲು ಗೋದಾನವನ್ನು ಮಾಡಬೇಕು ಇತ್ಯಾದಿ ವಿಷಯಗಳ ಕುರಿತು ತಿಳಿದೆವು. ಈಗ ವೈತರಿಣಿ ನದಿ ಹೇಗಿದೆ ಎನ್ನುವುದು ನೋಡೋಣ..

ಶತಯೋಜನ ವಿಸ್ತೀರ್ಣಾ ಪೂಯ ಶೋಣಿತ ವಾಹಿನೀ/
ಅಸ್ತಿ ವೃಂದ ತಟಾ ದುರ್ಗಾ ಮಾಂಸ ಶೋಣಿತ ಕರ್ದಮಾ//

ಈ ವೈತರಿಣಿ ನದಿ ನೂರು ಯೋಜನೆಗಳ ವಿಸ್ತೀರ್ಣವಾಗಿರುವುದು. ಈ ವೈತರಿಣಿ ನದಿಯಲ್ಲಿ ಕೀವು, ರಕ್ತ, ಮಾಂಸ ಇವೆಲ್ಲವೂ ತುಂಬಿ ತುಂಬಿ ಹರಿಯುತ್ತಿರ್ತವೆ. ಭೋಲೋಕದಲ್ಲಿನ ಎಲ್ಲ ನದಿಗಳಿಗೂ ಉಸುಕಿನ (sand) ದಂಡೆ ಇದ್ದಂತೆ, ವೈತರಿಣಿ ನದಿಗೆ ಬರೇ ಎಲುಬುಗಳು ತುಂಬಿದ ದಂಡೆ ಇರ್ತದೆ. ಆ ಅಸ್ತಿಗಳು ಮಾಂಸ, ರಕ್ತಗಳಿಂದ ಕೂಡಿರ್ತವೆ .. ನೋಡೋಕೆ ಭಯಂಕರವಾಗಿರುವುದು ಸರಿ.. ಪಾಪಿಗಳಿಗೆ ಇನ್ನೂ ಭಯಂಕರವಾಗಿ ಕಾಣುತ್ತದೆ. ನದಿಗಳಲ್ಲಿ ಹಸಿರು ಬಣ್ಣದ ಪಾಚಿ ಇದ್ದು ಜಾರುವ ಸ್ಥಿತಿ ಇದ್ದಂತೆ, ಈ ವೈತರಿಣಿಯಲ್ಲಿ ಕೂದಲುಗಳು ತುಂಬಿದ್ದು, ದಾಟುವದೇ ಅಸಾಧ್ಯವಾಗಿರ್ತದೆ.. ಸಾವಿರಾರು, ಮೀನು, ಮೊಸಳೆಗಳಿಂದ ತುಂಬಿರ್ತದೆ ಆ ನದಿ. ಮತ್ತೆ ಕ್ರೂರವಾದ, ಮಾಂಸವನ್ನು ಕಿತ್ತಿ ತಿನ್ನುವಂತಹಾ ಪಕ್ಷಿಗಳು ಆ ನದಿಯ ದಂಡೆಯ ಮೇಲೆ ಹಾರಾಡ್ತಿರ್ತವೆ. ಇಷ್ಟು ಭಯಂಕರವಾಗಿರುವಂತಹಾ ಈ ವೈತರಿಣಿ ಪಾಪಿಗಳು ಬರೋದನ್ನ ನೋಡಿ  ಜ್ವಾಲೆಯಿಂದ, ಧೂಮದಿಂದ (ಹೊಗೆಯಿಂದ) ಕೂಡಿ ಆ ಪಾಪಿಗಳನ್ನು ಗಟ್ಯಾಗಿ  ತನ್ನೊಳಗೆ ಎಳೆದುಕೊಳ್ತದೆ. 

ಗಂಗಾನದಿಯು ಸಜ್ಜನರಾದ ಮಹಾನ್ ಜ್ಞಾನಿಗಳು ಋಷಿಗಳು ಬಂದಾಗ ತನ್ನ ಅಲೆಗಳನ್ನು ಅವರ ಪಾದದ ಕಡೆ ತರಿಸಿ ಇಷ್ಟು ಮಹಾತ್ಮರು ತನ್ನೊಳಗೆ ಸ್ನಾನ ಮಾಡಲು ಬಂದಿರುವುರು. ಇವರ ಮಜ್ಜನದಿಂದ ತಾನು ಪುನೀತಳಾಗುವಳೆಂದು ಸಂತೋಷ ಪಡ್ತಾಳಂತೆ. ಇಲ್ಲಿ ಗಂಗೆ ಪವಿತ್ರಳು, ಹರಿಪಾದೋದ್ಭವಿ, ಪರಮಾತ್ಮನ ಮಗಳು ಸರಿ.. ಆದರೆ ಪಾಪಿಗಳು ಬಂದು ಸ್ನಾನವಾಚರಿಸಿದಾಗ ಅವರ ಪಾಪ ಗಂಗಾದೇವಿಯರು ಸ್ವೀಕಾರ ಮಾಡುತ್ತಾರೆ. ಆಗ ಆಕೆ ಸಜ್ಜನರ ಮಜ್ಜನಾದಿಗಳಿಂದ ಮತ್ತೆ ಪುನೀತಳಾಗುವಳು. ಇದಕ್ಕೆ ಉದಾಹರಣೆಯಾಗಿ ನಾವು ಶ್ರೀಮತ್ಪುರಂದರದಾಸಾರ್ಯರೇ ಮೊದಲು ಶ್ರೇಷ್ಠ ಹರಿದಾಸರೆಲ್ಲರ ಜೀವನ ಚರಿತ್ರೆಯಲ್ಲಿ ಸಹ ನೋಡಬಹುದು. ಅಂತಹಾ ಪುಣ್ಯವಂತರಿಗೆ ಗಂಗಾದೇವಿಯರು ಸ್ವಾಗತಿಸಿದ ಹಾಗೆ ಇಲ್ಲಿ ವೈತರಿಣಿ ನದಿಯೂ ಪಾಪಿಗಳಿಗೆ ತನ್ನ ಬೆಂಕಿಯ ಜ್ವಾಲಗಳಿಂದ, ಧೂಮದ ತೆರೆಗಳಿಂದ ಒಳಗಡೆ ಅತೀ ವೇಗದಿಂದ ಎಳೆದುಕೊಳ್ತದೆ.  ಲೋಹದ ಬಾಂಡಲಿ ಅಥವಾ ಕೊಪ್ಪರದಲ್ಲಿ ಕುದಿಯುವ ಎಣ್ಣೆ ಅಥವಾ ತುಪ್ಪ ಹೇಗೆ  ಜ್ವಾಲಾಯುಕ್ತವಾಗಿರ್ತದೆಯೋ ಹಾಗೆ ಈ ವೈತರಿಣಿ ನದಿಯೂ ಭಯಂಕರವಾಗಿ ಜ್ವಾಲೆಯನ್ನು ಹೊರಹೊಮ್ತುತ್ತಾ ಕುದಿಯುತ್ತಿರ್ತದೆ. ಚನ್ನಾಗಿ ಕುದಿಯುವ ನದಿ ಕಡಿಂದ ಇದನ್ನು ವೈತರಿಣಿ ಅಂತ ಕರಿತಾರೆ. ಮತ್ತೆ ಅಲ್ಲಿ ಚೂಪಾದ ಮೂಗು ಉಳ್ಳಂತಹಾ ಕ್ರಿಮಿಗಳು ಇರ್ತವು ಆ ನದಿಯಲ್ಲಿ. ಅವುಗಳ ಮುಖವೇ ಸೂಜಿಯಂತೆ ಚೂಪಾಗಿರ್ತವೆ. ಅಕಸ್ಮಾತ್ ಅವು ಪಾಪಿಗಳನ್ನು  ಚುಚ್ಚಿದರೆ ಸಾಕು ಮಾಂಸ ಕಿತ್ತಿ ಹೊರಗ ಬರ್ತದ ಅಷ್ಟು ಭಯಂಕರವಾದ ಕ್ರಿಮಿಗಳು, ಪಕ್ಷಿಗಳು, ಕಾಗೆಗಳು ಇದ್ದು ಆ ವೈತರಿಣಿ ನದಿಯ ಸುತ್ತಲೂ ಎಗುರುತ್ತಾ ಸುತ್ತುತಿರ್ತವು..

ಚೇಳು, ಮೊಸಳೆ, ತಿಮಿಂಗಿಲ   ಮೀನುಗಳು ಇಂಥಹ ಮಾಂಸ ಭೇದಕವಾದ ಕ್ರೂರ ಜೀವಿಗಳಿಂದ ತುಂಬಿರ್ತದೆ. ಇಂತಹ ಭಯಂಕರ ಪ್ರವಾಹದಲ್ಲಿ ಬಿದ್ದಂತಹಾ ಆ ಪಾಪಿಗಳಾದ ಜೀವಿಗಳು ಘೋರವಾದ ಧ್ವನಿಯಲ್ಲಿ - ಹೇ ಮಕ್ಕಳೇ! ಹೇ ಬಾಂಧವರೇ! ಹೇ ನನ್ನ ಅಕ್ಕ ತಂಗಿಯರೇ! ಈ ವೈತರಿಣಿ ನದಿಯಿಂದ ನನ್ನನ್ನು ಕಾಪಾಡಿಪ್ಪ ಅಂತ ತಮ್ಮ ಬಾಂಧವರನ್ನು ಕರೆದು ಕೂಗುತ್ತಾ ಒದರುತ್ತ ನೋವನ್ನು ಅನುಭವಿಸುತ್ತಾರೆ. ಅವರು ಒದರುವುದನ್ನು ಯಾರೂ ಕೇಳುವುದಿಲ್ಲ.  ಹಸಿವೆ, ನೀರಡಿಕೆ ಆದರೂ ಅಲ್ಲಿ ತಿನೋಕೆ, ಕುಡಿಯೋಕೆ ಏನೂ ಸಿಗುವುದಿಲ್ಲ. ಬರೀ ರಕ್ತ, ಕೀವು, ಮಾಂಸ ಎಲುಬುಗಳು ಹೊರತುಪಡಿಸಿ.. ಆಗ ಯಮದೂತರು ಆ ಪಾಪಿಗೆ ಆ ನದಿಯ ಹಳ್ಳದಲ್ಲಿ ಇಳಿಸಿ, ಮುಳುಗಿಸಿ, ಆ ರಕ್ತವನ್ನೇ ಕುಡಿಸುವರು. ಅದನ್ನು ಆ ಪಾಪಿ ವಮನ ಮಾಡಿಕೊಂಡರೂ ಸಹ ಮತ್ತೆ ಅವನ ಮೂಗನ್ನು ಹಿಡಿದು ಕುಡಿಸುವರು.. 

ಇದೀಗ ಇವತ್ತು ವಿಷಯದ ಗಾಂಭೀರ್ಯಕ್ಕೆ ಇಲ್ಲಿಗೆ ವೈತರಿಣಿ ನದಿಯ ವಿವರಣೆಯನ್ನು ನಿಲ್ಲಿಸುತ್ತಾ.. ನಾಳೆ ಮತ್ತಷ್ಟು ವಿವರಣೆ ನೋಡೋಣ..

ಯಮಪಟ್ಟಣದ ದಕ್ಷಿಣ ಮಾರ್ಗದ ಪಯಣ ಯಾರಿಗೂ ಆಗದಿರಬಾರದೆಂದರೆ ಸದಾ ಪರಮಾತ್ಮನ ಸ್ಮರಣೆ ಗುರುಗಳ, ದಾಸಾರ್ಯರ ಕಾರುಣ್ಯದಿಂದ ಸದಾ  ನಮ್ಮ ನಾಲಿಗೆ ತುದಿಯಲ್ಲಿರಲಿ ಎಂದು ಪ್ರಾರ್ಥನೆ ಮಾಡುತ್ತಾ..
-Padma Sirish

ನಾದನೀರಾಜನದಿಂ ದಾಸಸುರಭಿ 
***

ಪಕ್ಷಮಾಸದ ಚಿಂತನೆ

             ಭಾಗ - 7
ವೈತರಿಣಿ ನದಿಯ ನೋಟ

ನಿನ್ನೆಯ ದಿನದ ಲೇಖನದಲ್ಲಿ ವೈತರಿಣಿ ನದಿ ಹೇಗಿದೆ , ಅಲ್ಲಿನ ಪರಿಸ್ಥಿತಿಯ ಕುರಿತು ತಿಳಿದಿದ್ದೆವು. ಪಿಂಡಜ ದೇಹವನ್ನು ,ಯಾತನಾದೇಹವನ್ನು ಪಡೆದ ಜೀವಿಗೆ ಸಾವಂತೂ ಇರುವುದಿಲ್ಲ, ಜೀವ ಶಾಶ್ವತವಾದದ್ದು.  ಆ ಜೀವಿ ಆ ಪಡೆದ ದೇಹದಿಂದ ಆ ವೈತರಿಣಿ ನದಿಯಲ್ಲಿನ ದುಃಖ ಅನುಭವಿಸಲೇಬೇಕಾಗ್ತದೆ. ಹಸಿವೆ ನೀರೆಡಿಕೆ ಆದರೂ ತಿನ್ನೋಕೆ ಏನೂ ಸಿಗುವುದಿಲ್ಲ. ಯಮದೂತರು ಅಲ್ಲಿನ ರಕ್ತವನ್ನೇ ಕುಡಿಸ್ತಾರೆ ಅನ್ನೋದನ್ನೂ ನೋಡಿವಿ. ಆ ವೈತರಿಣಿ ನದಿಗೆ ಒಂದೇ ತಿರುವು ಒಂದೇ ಮಡುವು ಇರೋದಿಲ್ಲ. ಹೆಜ್ಜೆ ಹೆಜ್ಜೆಗೆ ತಿರುವುಗಳು,  ಮಡುವುಗಳು ಇದ್ದು ಒಮ್ಮೊಮ್ಮೆ ಆ ಪಾಪಿಯಾದ ಜೀವ ಪಾತಾಳದಷ್ಟು ಆಳಕ್ಕೆ ಹೋಗ್ತಾನೇನೋ ಅನ್ನೋ ಹಾಗೆ ಇರ್ತದೆ. ಅಷ್ಟು ಆಳಕ್ಕೆ ನೆಟ್ಟುತ್ತಾರೆ ಅಂತ ಅಲ್ಲಿನ ವೈತರಿಣಿ ನದಿಯ ಸ್ವರೂಪ ವಿಶೇಷತೆಯನ್ನು ಗರುಡದೇವರಿಗೆ ಪರಮಾತ್ಮನೇ ತಿಳಿಸಿ ಹೇಳುತ್ತಾನೆ. 

ವಯಂತೇ ಕರ್ತೃ ಕಾಮಾಯ ಮಹಾ ವೈತರಿಣೀಂ ನದೀಂ/
ನಾವಮಾದಾಯ ಸಂಪ್ರಾಪ್ತಾ ಯದಿ ತೇ ಪುಣ್ಯಮೀದೃಶಂ//  ಅಂತ

 ಅಲ್ಲಿ ಕೈವರ್ತ  ಎನ್ನುವ ನೌಕೆಯನ್ನು ಸಿದ್ಧವಾಗಿಟ್ಟುಕೊಂಡಿರುವ ವಿಷ್ಣು ದೂತರು ಕೇಳುತ್ತಾರೆ- ನೋಡಪ್ಪಾ ಜೀವಿಯೇ! ಈ ವೈತರಿಣಿ ನದಿಯನ್ನು ದಾಟಿಸಲೆಂದೇ ನಾವು ಬಂದಿದ್ದೆವೆ. ಈ ಮಹಾ ವೈತರಿಣಿ ನದಿಯನ್ನು  ದಾಟಲು ನೀನು ಏನಾದರೂ ಪುಣ್ಯ ಮಾಡಿದ್ಯೇನು? ಮಾಡಿದ್ದಿ ಅಂತಂದರೆ ಈ ಕೈವರ್ತ ಎನ್ನುವ ನೌಕೆಯನ್ನು ನದಿಯಲ್ಲಿ ಹಾಕಿ ನಿನ್ನನ್ನು ಈ ನದಿಯನ್ನು ದಾಟುಸ್ತೇವೆ ಅಂತ ಕೇಳುತ್ತಾರೆ.
ಮಕ್ಕಳು ಆ ಸಂದರ್ಭದಲ್ಲಿ ಶ್ರದ್ಧಾ ಭಕ್ತಿಯಿಂದ ಗೋದಾನವನ್ನು ಮಾಡಿದಾಗ ಮಾತ್ರ ಆ ನದಿಯನ್ನು ದಾಟಲು ಸಾಧ್ಯ. ಮೊದಲಿಗೆ ನಾವು ಜೀವಂತವಿರುವಾಗಲೇ ಎಲ್ಲಾ ದಾನ ಧರ್ಮಗಳನ್ನು ಮಾಡಬೇಕು ಅದೂ ಸಹ ನಾನು ಮಾಡ್ತಿದ್ದೆನೆ, ಮಾಡಿದ್ದೆನೆ ಎನ್ನುವ ಅಹಂಕಾರದಿಂದ ಮೆರೆಯದೆ ಮಾಡಬೇಕು.  ಎಲ್ಲ ರೀತಿಯಲ್ಲೂ ಶಾಸ್ತ್ರ ವಿಹಿತವಾದ ದಾನಗಳು ಮಾಡುದರ ಜೊತೆಗೆ ಮರಣಾನಂತರದ ಹತ್ತು ದಿನಗಳಲ್ಲಿ ನೀಡುವಂತಹಾ  ದಾನಗಳೇನಿವೆ - ಛತ್ರಿ, ಚಪ್ಪಲೆ,  ಉದಕುಂಭ, ಗೋದಾನ, ಗ್ರಂಥದಾನ , ರಜತ, ಸುವರ್ಣ, ಶಯನದಾನ,  ಇತ್ಯಾದಿ ಹದಿಮೂರು ತ್ರಯೋದಶ ದಾನಗಳು ಅಂತ ಬರ್ತವೆ ಅವುಗಳನ್ನು ನಾವು ಬದುಕಿರುವಾಗಲೂ ಸಹ (ನಮ್ಮ ನಿಮಿತ್ತವಾಗಿ ಸಹ ) ಮಾಡಬಹುದು. ಮಕ್ಕಳು ಅಂತೂ ಮಾಡಲೇಬೇಕು ಆದರೆ ನಾವು ಸಹ ಮಾಡಬೇಕು ಅಂತಾರೆ. 

ಅಲ್ಲಿ ಅದಕ್ಕೆ ವಿಷ್ಣುದೂತರು   ಕೇಳುತ್ತಾರೆ -  ಏನಾದರೂ ದಾನ ಧರ್ಮ ಮಾಡಿ ಬಂದ್ಯಾ ಇಲ್ವಾ ? ಅಂತ.. ವಿಶೇಷವಾಗಿ ಗೋದಾನ ಮಾಡಿದರೆ ಮಾತ್ರ ನೀನು ಈ ನೌಕೆಯಲ್ಲಿ ಕೂಡು, ಇಲ್ಲವಾದರೆ ಈ ಕೈವರ್ತೆನ್ನುವಂತಹಾ ನೌಕಯೆ ಸಮೀಪಕ್ಕೆ ಸಹ ಬರಬೇಡ ಅಂತಾರೆ.. 

ಆಗ ಆ ಪಾಪಿಯಾದ ಜೀವ ಅಂತದೆ -- ಹೇ ನನ್ನ ದುರ್ದೈವವೆ ! ನಾ ಯಾವ ದಾನವನ್ನು ಸಹ ಮಾಡಲಿಲ್ಲ ಅಲ್ವಾ! ಪರಮಾತ್ಮನು ನನಗೆ ಐಶ್ವರ್ಯ ಕೊಟ್ಟಿದ್ದಾ, ಕೈ ಕಾಲು ಗಟ್ಟಿ ಕೊಟ್ಟಿದ್ದಾ, ದುಡಿದು ಮನೆ ಮಾಳಿಗೆ ಕಟ್ಟುವಂತಹ ಶಕ್ತಿ ಕೊಟ್ಟಿದ್ದಾ , ಆದರೆ ನಾ ಯಾವ ದಾನವನ್ನು ಮಾಡದೆ ಐಶ್ವರ್ಯದ ಮದದಿಂದ ಪರಮಾತ್ಮನ ಕಾರ್ಯಗಳಿಗೆ ಆ ಐಶ್ವರ್ಯವನ್ನು ವಿನಿಮಯ ಮಾಡದೆ ತುಚ್ಛ ವಿಷಯಗಳಿಗೆ ಖರ್ಚು ಮಾಡಿದೆನಲ್ಲಾ ಅಂತ ತನ್ನ ದೌರ್ಭಾಗ್ಯವನ್ನು, ದುರ್ದೈವವನ್ನು ನೆನೆಸಿ ನೆನೆಸಿ ಅಳುತ್ತಾನೆ,ಗಟ್ಯಾಗಿ ರೋದನೆ ಮಾಡ್ತಾನೆ, ಚೀರ್ತಾನೆ. ಅದಕ್ಕಾಗಿಯೇ ಐದೂ ವರೆ ತಿಂಗಳಲ್ಲಿ ಮಾಸ ಶ್ರಾದ್ಧ ಮಾಡುವಾಗ ಗೋದಾನವನ್ನು ಉತ್ತಮವಾದ ಕ್ಷೇತ್ರಗಳಲ್ಲಿ ಮಾಡಬೇಕು ಅಂತ ಹೇಳುತ್ತಾರೆ.  ಗೋದಾನ ನೀಡದಿರುವ ಪಾಪಿಯ ಜೀವನನ್ನು ಯಮದೂತರು ಮೀನನ್ನು ಹಿಡಿಯಲು ಚೂಪಾದ ಶೂಲಕ್ಕೆ ಮಾಂಸವನ್ನು ಚುಚ್ಚಿ ಮೀನನ್ನು ಹಿಡಿಯುವಂತೆ. ಈ ಪಾಪಿಯ ಮುಖದಲ್ಲಿ ಶೂಲದಿಂದ ಚುಚ್ಚಿ ಮಾಂಸ ಸಹಿತ ಹಿಂದಕ್ಕೆ ಎಳಿದು ಅತ್ಯಂತ ಭಯಂಕರವಾದ ನೋವನ್ನು ಕೊಡ್ತಾರೆ. ಗಾಳಕ್ಕೆ ಹಾಕಿದಂತೆ ಆ ಜೀವನನ್ನು ಚುಚ್ಚಿ ಮತ್ತೆ ಆ ನದಿಯಲ್ಲಿ ಮುಳುಗಿಸಿ,  ಎಬ್ಬಿಸಿ ಮಾಡಿ ಹಿಂಸೆಯನ್ನು ನೋವನ್ನು ಕೊಡ್ತಾರೆ. ಈ ರೀತಿಯಾಗಿ ಆಕಾಶಮಾರ್ಗದಿಂದ ಆ ವೈತರಿಣಿ ನದಿಯಮೇಲಿಂದ ಆ ಯಮದೂತರು ಚರಿಸುತ್ತ ಆ ಜೀವಿಗೆ ಹಿಂಸೆ ಕೊಡುತ್ತಾ, ಅಲ್ಲಿನ ಕ್ರಿಮಿಗಳಿಂದ, ಪಕ್ಷಿಗಳಿಂದ  ಚುಚ್ಚಿಸುವುದು,ಚೇಳುಗಳಿಂದ
ಮೊಸಳೆಗಳಿಂದ ಕಚ್ಚಿಸುವುದು,  ಮಾಡುತ್ತಾ ಸಾಗುತ್ತಾರೆ. ಹೀಗೆ ಅವರು ಆರು ತಿಂಗಳ ಸಮಯದಲ್ಲಿ ಬಹ್ವಾಪದ  ಎನ್ನುವ ಪಟ್ಟಣಕ್ಕೆ ಆ ಪಾಪಿಯ ಜೀವವನ್ನು ಕರೆದುಕೊಂಡು ಹೋಗ್ತಾರೆ. 

ಈ ನೋವು ತುಂಬಿದ ಈ ವೈತರಿಣಿ ನದಿಯನ್ನು ನಮ್ಮ ಸಂಬಂಧೀಕರು, ಆತ್ಮೀಯರು, ನಾವು ಸೇರದಂತೆ ಗೋದಾನ ಇತ್ಯಾದಿ ದಾನಗಳು ಮಾಡುವಂತೆ ಪರಮಾತ್ಮನು ಅನುಗ್ರಹ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ... 

 ಶ್ರೀ ಕನಕದಾಸಾರ್ಯರಂತಾರೆ ದಾನ ಧರ್ಮಂಗಳ ಮಾಡಿ ಸುಖಿಯಾಗು ಮನವೆ ಅಂತ. ಇದರರ್ಥ ಈ ಲೋಕದ ಸುಖದ ಬಗ್ಗೆ ಅಂತಲ್ಲ ಎಂದು ತಿಳಿದು ನಡೆಯುವ ಜ್ಞಾನ ನಮಗೆ ಸದಾ ಪರಮಾತ್ಮನು ನೀಡಲಿ ಎಂದು ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ ದೇವರಲ್ಲಿ ಪ್ರಾರ್ಥನೆ ಮಾಡುತ್ತಾ..

-Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***

           ಭಾಗ - 8

 ಯಮಲೋಕಕ್ಕೆ ಜೀವದ ಪಯಣ- ಶ್ರವಣ ಶ್ರವಣಿಯರು

ನಿನ್ನೆಯ ಭಾಗದಲ್ಲಿ ಗೋದಾನದ ಪ್ರಾಮುಖ್ಯತೆ,  ಅದನ್ನು ಯಾವ ಸಂದರ್ಭದಲ್ಲಿ ಮಾಡಬೇಕು ಎನ್ನುವುದನ್ನು ತಿಳಿದಿವಿ. ಇವತ್ತು ಯಮಲೋಕವನ್ನು ಒಮ್ಮೆ ನೋಡಿ ಬರೋಣವೇ. 

ಈ ಪಾಪಿಯಾದ ಜೀವ ಯಾತನಾ ದೇಹವನ್ನು ಧರಿಸಿ ಕರ್ಮವನ್ನು ಭೋಗಿಸಲು ಯಮಲೋಕದ ಮಾರ್ಗವನ್ನು ಕ್ರಮಿಸಿ, ಯಮಲೋಕಕ್ಕೆ ಹೋಗಿ ಅಲ್ಲಿ ಯಾವ ರೀತಿಯ ಯಮಯಾತನೆಗಳನ್ನು  ಭೋಗಮಾಡ್ತಾನೆ ಅಂತ ಹೇಳೋ ಮುನ್ನ ಅಂದರೆ ಈ ಹದಿನೈದು ಪಟ್ಟಣಗಳು ದಾಟಿ ಹದಿನಾರನೆ ಪಟ್ಟಣವಾದ ಬಹುಭೀತಿಪುರ ವನ್ನು ಸೇರಿದ ನಂತರ ಮುಂದೆ 44 ಯೋಜನೆಗಳ ವಿಸ್ತೀರ್ಣದ  ದೂರವಿರುವಂತಹ ಯಮಧರ್ಮರಾಯರ ಪಟ್ಟಣವಿರ್ತದೆ. ಬಹಳ ದೊಡ್ಡ  ಪಟ್ಟಣ. ಅಲ್ಲಿ ಎಲ್ಲಾ ಪಾಪಿ ಪುರುಷರು (ಜೀವರು) ಗಟ್ಯಾಗಿ ಒದರುತ್ತಾ ಹಾಹಾಕಾರವನ್ನು ಮಾಡ್ತಿರ್ತಾರೆ. ಅದು ನೋಡಿ ಈ ಯಮದೂತರು ಕರೆದುಕೊಂಡು ಬಂದಂತಹ ಪಾಪಿಯಾದ ಜೀವನೂ ಸಹ ಒದರಲು ಆರಂಭಿಸಿ ಹಾಹಾಕಾರವನ್ನು ಮಾಡ್ತಿರ್ತಾನೆ, ಜೋರಾಗಿ ಚೀರ್ತಾನೆ. ಆಗ ಈ ಯಮದೂತರು ಆ ಯಮಧರ್ಮರಾಯರ ದಕ್ಷಿಣ ಮಾರ್ಗದಲ್ಲಿರುವ ದ್ವಾರಪಾಲಕರಿಗೆ ಹೇಳ್ತಾರೆ. ನಾವು ಒಬ್ಬ ಪಾಪಿಯನ್ನು ತಂದಿವಿ, ಒಳಗೆ ಕರೆದುಕೊಂಡು ಹೋಗಬೇಕಿದೆ ಅಂತ. ಆಗ ಆ ದ್ವಾರಪಾಲಕರು ಒಳಗಡೆ ಹೋಗಿ ಚಿತ್ರಗುಪ್ತರಿಗೆ ಆ ಬಂದ ಪಾಪಿಯ ಶುಭಾಶುಭಗಳನ್ನು ಹೇಳ್ತಾರೆ. ಅದನ್ನು ಕೇಳಿ ಚಿತ್ರಗುಪ್ತರು  ಯಮಧರ್ಮರಾಯರಿಗೆ ತಿಳಿಸುತ್ತಾರೆ. 

ಯಮಧರ್ಮರಾಯರು ಮತ್ತೆ ಚಿತ್ರಗುಪ್ತರು ಎಲ್ಲರ ಪಾಪಗಳನ್ನು ಹೆಜ್ಜೆ ಹೆಜ್ಜೆಗೂ ಮೊದಲಿಗೇನೆ ಚನ್ನಾಗಿ ಅರಿತಿರ್ತಾರೆ. ಆದರೂ ಸಹ ಚಿತ್ರಗುಪ್ತರು ಯಮಧರ್ಮರಾಯರ ಬಳಿ ಹೋಗಿ ಹೇಳುತ್ತಾರೆ.  ಚಿತ್ರಗುಪ್ತರನ್ನು ಪಾಪಿಗಳ ಪಾಪದ ಕುರಿತು ಯಮಧರ್ಮರಾಯರು  ಕೇಳಿದಾಗ ಆ ಚಿತ್ರಗುಪ್ತರು ಬ್ರಹ್ಮಪುತ್ರರಾದ ಶ್ರವಣ ರನ್ನ ಕೇಳುತ್ತಾರೆ.

ಈ ಶ್ರವಣರು ಸ್ವರ್ಗ,  ಪೃಥ್ವಿ, ಪಾತಾಳಲೋಕದಲ್ಲಿ ಅಂದರೆ ಮೂರೂ ಲೋಕಗಳಲ್ಲಿ ಸಂಚಾರ ಮಾಡುತ್ತಾ ಜೀವರು ಮಾಡಿದ  ಎಲ್ಲ ಕರ್ಮಗಳನ್ನು ತಾವು ಎಷ್ಟೇ ದೂರದಲ್ಲಿದ್ದರೂ ಸಹ ಪ್ರತ್ಯಕ್ಷವಾಗಿ ನೋಡಿ, ಕೇಳಿ ತಿಳಿದುಕೊಂಡಿರ್ತಾರೆ. ಹೇಗೆ ರೇಡಿಯೋ, ಟೆಲಿವಿಷನ್ ದೂರದಿಂದ ತರಂಗಗಳನ್ನು ಗ್ರಹಿಸುವುದೋ ಹಾಗೆ ಆ ಶ್ರವಣರೂ ಅವರ ಪತ್ನಿಯರಾದ ಶ್ರವಣಿಯರು ಎಲ್ಲವನ್ನೂ ಕೇಳಿ, ನೋಡಿ ತಿಳಿದುಕೊಳ್ತಿರ್ತಾರೆ. 

ಶ್ರವಣರು ಪಾಪಿ ಪುರುಷರ ಪಾಪಪುಣ್ಯಗಳನ್ನು ತಿಳಿದರೆ, ಶ್ರವಣಿಯರು ಎಲ್ಲಾ ಸ್ತ್ರೀಯರ ಪಾಪ ಪುಣ್ಯಗಳನ್ನು ತಿಳಿದಿಟ್ಟುಕೊಂಡಿರ್ತಾರೆ. ಹೀಗಾಗಿ  ಯಾವುದೇ ಲೋಕದಲ್ಲಿ ಯಾರ್ಯಾರು ಏನೇನು ಮಾಡ್ತಿದ್ದಾರೆ, ಅವನ್ನೆಲ್ಲಾ ಈ ಶ್ರವಣ ಶ್ರವಣಿಯರು ತಿಳಿದು ಆ ವರದಿಯನ್ನು (count) ಚಿತ್ರಗುಪ್ತರಿಗೆ ಒಪ್ಪಿಸ್ತಾರೆ. ಇವರಿಬ್ಬರೂ ಸಹ ಯಮಧರ್ಮರಾಯರ ದೂತರು. ಇವರು ಎಲ್ಲರ ಕರ್ಮಗಳನ್ನು ಸಹ ತಾತ್ವಿಕವಾಗಿ ತಿಳಿದಿರ್ತಾರೆ ಅರ್ಥಾತ್ ಶಾಸ್ತ್ರದ ಪ್ರಕಾರವಾಗಿ ತಿಳಿದಿರ್ತಾರೆ. ಅವರಿಬ್ಬರ ಸಹಾಯದಿಂದ ಆಯಾ ಜೀವಿಯ ಕರ್ಮಗಳ ವರದಿಯನ್ನು ತಿಳಿದ ಚಿತ್ರಗುಪ್ತರು ಯಮಧರ್ಮರಾಯರಿಗೆ ಸಲ್ಲಿಸುತ್ತಾರೆ. 

ಈ ಕರ್ಮಗಳಂದರೆ ಯಾವುದು ? ನಾವು ದಿನಾ ಕಾಣುವಂತೆ ಮಾಡೋದಾ?, ಮಾತಾಡೋದೇನಾ? ಅಂದರೆ ಅದೊಂದೇ ಅಲ್ಲ. ನಾವು ಮನಸಿನಲ್ಲಿ, ಹಿರಿಯರನ್ನ,  ಕಿರಿಯರನ್ನ, ಗುರುಗಳಿಗೆ, ಜ್ಞಾನಿಗಳಿಗೆ ಬಯ್ಕೊಳ್ಳೋದು, ನಿಂದೆ ಮಾಡೋವು ಮಾಡ್ತಿವಲ್ವಾ ಅದನ್ನು ಸಹಾ ಆ ಶ್ರವಣ, ಶ್ರವಣಿಯರು ಕೇಳಿ, ನೋಡಿ ತಾತ್ವಿಕವಾಗಿ ತಿಳಿಯುತ್ತಾರೆ.  ಅದಕ್ಕೆ ನಮ್ಮ ಹಿರಿಯರು ಹೇಳ್ತಿರ್ತಾರೆ. ಯೋಚನೆ ಮಾಡಿ ಮಾತಾಡು, ತಪ್ಪು ತಪ್ಪಾಗಿ ಮಾತಾಡೋದು ಬೇಡ, ಸದಾ ಸತ್ಯದ ಮಾತೇ ಆಡು ಅಂತ. ನಾವು ಸದಾ ಸತ್ಯವರ್ತನೆಯಿಂದ ನಡೆದುಕೊಂಡು ಮನಸಾ, ವಾಚಾ, ಕರ್ಮಣಾ ಸ್ವಚ್ಛ ಮನಸನ್ನು ಹೊಂದಿ ಸತ್ಕರ್ಮಗಳಾಚರಣೆ ಮಾಡ್ತಿವೋ ಆಗ ಆ ಶ್ರವಣ ಶ್ರವಣಿಯರನ್ನ ಒಲಿಸಿಕೊಳ್ಳಲು ಸಾಧ್ಯ. 

ಆ ರೀತಿಯಲ್ಲಿ ಶ್ರವಣ ಶ್ರವಣಿಯರು ನೀಡಿದ ವರದಿಯನ್ನು ಚಿತ್ರಗುಪ್ತರು ಯಮಧರ್ಮರಾಯರಿಗೆ ಹೇಳುವಾಗ ಆ ಪಾಪಿಯಾದ ಜೀವನಿಗೆ ಆ ಯಮಧರ್ಮದೇವರು ಭಯಂಕರವಾದ ರೂಪದಿಂದ ಕಾಣಿಸುತ್ತಾರೆ. ಆಗ ಅವನ ಪಾಪಗಳನ್ನು ಅವನೇ ಕೇಳಿ ಗಟ್ಯಾಗಿ ಒದರುತ್ತಾ , ರೋದನೆ ಮಾಡುತ್ತಾ, ಮಲಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾ,  ಮತ್ತೆ ತನ್ನ  ಬಾಂಧವರನ್ನು ಕರಿಯುತ್ತಾ ಗಟ್ಯಾಗಿ  ಒದರಲು ಆರಂಭಿಸುತ್ತಾನೆ, ಕಾಪಾಡಿ! ಕಾಪಾಡಿ! ಅಂತ. ಆದರೂ ಅವನ ರೋದನ ಅರಣ್ಯರೋದನೆಯೇ ಹೊರತು ಯಾರ್ಯಾರೂ ಸಹ ಕೇಳಿಸಿಕೊಳ್ಳುವುದೇಯಿಲ್ಲ..

ನೋಡಿ ಎಂಥೆಂಥ ಸಿಸ್ತಾದ ವಿಧಾನವನ್ನು ಪರಮಾತ್ಮನು ಮಾಡಿದ್ದಾನೆ. ಮತ್ತೆ  ಅವುಗಳನ್ನು ಆ ಪರಮಾತ್ಮನಿಂದ ನಿಯಮಿಸಲ್ಪಟ್ಟಂತಹಾ ಆ ಎಲ್ಲಾ ಯಮಧರ್ಮರಾಯರೇ ಮೊದಲು ಯಮದೂತರ ವರೆಗೂ ಹೇಗೆ ನಿಭಾಯಿಸಿಕೊಂಡು ಕರ್ತವ್ಯ ಪಾಲನೆ ಮಾಡ್ತಿದ್ದಾರೆ ಅಂತ.. ಅದಕ್ಕೆ ಬಾಯಿ ಚಲೋ ಇದ್ರೆ ನಮ್ಮ ಜೊತೆ ಊರು ಚಲೋ ಇರ್ತದ ಅಂತಾರೆ..

ಅದಕ್ಕೆ ದಾಸಾರ್ಯರು ಸಹ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಅಂತಾರೆ.  ನಾಲಿಗೆ ಮಾತಾಡಿ, ಬಯ್ದು, ಒಳಗಡೆ ಹೋಗಿಬಿಡ್ತದೆ, ಆದರೆ ಏಟು ತಲೆಗೆ ಬಿಳ್ತದೆ ಹಾಗೆ ನಾವು ಮಾತಾಡಿದವೆಲ್ಲವೂ ನಮ್ಮ ತಲೆಗೆ ಅಂದರೆ ಮೂಲಕ್ಕೆ ಬರ್ತವೆ ಅನ್ನೋದೇ ಸೂಕ್ಷ್ಮ.  ಸದಾ ನಮಗೆ ವಾಕ್, ಮನೋ ಶುದ್ಧಿ ಇರಲೇಬೇಕು ಇಲ್ಲವಾದರೆ ಶ್ರವಣಾ-ಶ್ರವಣಿಯರ ಕೈಯಲ್ಲಿ ನಮ್ಮ ಎಲ್ಲ ಕರ್ಮಗಳು ಸೇರಿಯೇ ಸೇರುತ್ತವೆ..

ಅದಕ್ಕೆ ಸದಾ ಹರಿನಾಮದ ಸ್ಮರಣೆ ಜಪ, ಸ್ತುತಿ, ಕೀರ್ತನೆ ಮಾಡ್ತಾನೇ ಇರಬೇಕು ಕೃಷ್ಣಾ ಕೃಷ್ಣಾ ಕೃಷ್ಣಾ ಎಂದು ಮೂರು ಬಾರಿ ನೆನೆಯಿರೊ ಎಂಬಂತೆ ಬಾಲ್ಯದಿಂದ ಮೊದಲಾಗಿ , ಯೌವನದಲ್ಲಿ, ವೃದ್ಧಾಪ್ಯದಲ್ಲಿ ಮೂರು ಬಾರಿ ಅರ್ಥಾತ್ ಆಜೀವನ ಪರ್ಯಂತ ಕೃಷ್ಣ ಪರಮಾತ್ಮನ ಸ್ಮರಣೆ, ಏಳುವಾಗ, ಕೂಡುವಾಗ, ಮಲಗುವಾಗ, ಕೆಲಸದಲ್ಲಿರುವಾಗ , ನಮ್ಮ ಮಾನವಿ ಪ್ರಭುಗಳು ಶ್ರೀಮದ್ ಹರಿಕಥಾಮೃತಸಾರದ 

ನಾಮಸ್ಮರಣೆ ಸಂಧಿಯಲ್ಲಿ

ಮಕ್ಕಳಾಡಿಸುವಾಗ ಮಡದಿಯೊ-
ಳಕ್ಕರದಿ ನಲಿವಾಗ ಹಯಪ-
ಲ್ಲಕ್ಕಿ ಗಜ ಮೊದಲಾದ ವಾಹನಗಳೇರಿ ಮೆರೆವಾಗ |
ಬಿಕ್ಕುವಾಗಾಕಳಿಸುತಲಿ ದೇ-
ವಕ್ಕಿ ತನಯನ ಸ್ಮರಿಸುತಿಹ ನರ
ಸಿಕ್ಕ ಯಮದೂತರಿಗೆ ಆವಾವಲ್ಲಿ ನೋಡಿದರು// ಎಂದು ತಿಳಿಸಿದಂತೆ, ಮಹಾತ್ಮ್ಯಾ ಜ್ಞಾನಪೂರ್ವಕವಾಗಿ ಸುದೃಢವಾದ ಭಕ್ತಿಯಿಂದ ಸದಾ ಕಾಲ ಪರಮಾತ್ಮನ  ಸ್ಮರಣೆ ಮಾಡಿದ್ದಲ್ಲಿ ಕನಸಿನಲ್ಲಿ ಸಹ ಯಮದೂತರ ಕಾಟವಿರುವುದಿಲ್ಲ ಅಂತಾರೆ ದಾಸಾರ್ಯರು.. ಈ ವಿಷಯವನ್ನು ದಾಸಾರ್ಯರು ಯಾವ ಯಾವ ರೀತಿಯಲ್ಲಿ ತಿಳಿಸಿರುವರು ಎನ್ನುವುದು ಬರಿತಾ ಹೋದರೆ ಹತ್ತಾರು ಲೇಖನಗಳು ಸಹ ಸಾಲದು.. ಹೀಗಾಗಿ 

ಮುಂದಿನ ಭಾಗದಲ್ಲಿ ಹರಿವಾಯುಗುರುಗಳ ಅನುಗ್ರಹದಿಂದ ಮತ್ತಷ್ಟು ವಿಷಯಗಳು ತಿಳಿಯುವಂತಾಗಲಿ..
ಸದಾ ಪರಮಾತ್ಮನ ಸ್ಮರಣೆ, ಕೀರ್ತನೆ ನಮಗಿರಲೆಂದು ಪ್ರಾರ್ಥನೆ ಮಾಡುತ್ತಾ..

-Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***

ಪಕ್ಷಮಾಸದ ಚಿಂತನೆ

               ಭಾಗ - 9 

ನಮ್ಮ ಪಾಪಗಳೇ ನರಕಲೋಕಕ್ಕೆ ಕಾರಣ

ನಿನ್ನೆಯ ಭಾಗದಲ್ಲಿ ನಮ್ಮ ಕರ್ಮಗಳನ್ನು ಲೆಕ್ಕಮಾಡಿ ಚಿತ್ರಗುಪ್ತರಿಗೆ ವರದಿ ನೀಡುವ ಶ್ರವಣ ಶ್ರವಣಿಯರ ಕುರಿತು ತಿಳಿದಿದ್ದೆವು. ಆ ಶ್ರವಣ ಶ್ರವಣಿಯರು ನೀಡಿದ ಆ ವರದಿಯನ್ನು ಚಿತ್ರಗುಪ್ತರು ಯಮಧರ್ಮರಾಯನಿಗೆ ನೀಡಿದಾಗ ಆ ಪಾಪಿಯಾದ ಜೀವ ಚೀರುವುದನ್ನು ರೋದನೆ ಮಾಡುವುದನ್ನೂ ನೋಡಿವಿ. 

ಯಮಧರ್ಮರಾಯರು ಪುಣ್ಯವಂತರಿಗೆ ಹೇಗೆ ಶಾಂತರೂಪರಾಗಿ ಕಾಣುತ್ತಾರೆಯೋ. ಅದರ ವಿರುದ್ಧವಾಗಿ ಪಾಪಿ ಜೀವರಿಗೆ ಕಾಣುತ್ತಾರೆ. ಅದು ಹೇಗೆ ಕಾಣುತ್ತಾರೆ ಅಂದರೆ--

ಪಾಪಿಷ್ಟಾಸ್ತೇ ಪ್ರಪಶ್ಯಂತಿ ಯಮರೂಪಂ ಭಯಂಕರಂ/
ದಂಡಹಸ್ತಂ ಮಹಾಕಾಯಂ ಮಹಿಷೋಪರಿ ಸಂಸ್ಥಿತಂ// 

ಭಯಂಕರವಾದ ದೊಡ್ಡ ದೇಹ, ಕೈಯಲ್ಲಿ ದಂಡ, ಮಹಿಷವಾಹನಾಗಿರುತ್ತಾರೆ. ಮತ್ತೆ- ಮಾಮೂಲಿ ದಿನಗಳಲ್ಲಿ ಸಾಧಾರಣ ಮೇಘಗಳ ಗರ್ಜನೆಗೆ ನಮ್ಮ ಎದೆ ನಡುಗ್ತದೆ ಅಂತಾದ್ದು ಯಮಧರ್ಮರಾಯರ ಗರ್ಜನೆ ಪ್ರಳಯಕಾಲದಲ್ಲಿನ ಮೇಘಗಳ ಗರ್ಜನೆ ತರಾ ಇರ್ತದೆ. ಕಾಡಿಗೆಯ ಪರ್ವತ ಕದಿಲಿದರೆ, ಚಲಿಸಿದರೆ ಹೇಗಿರ್ತದೋ ಹಾಗಿರ್ತದೆಯಂತೆ ಯಮಧರ್ಮರಾಯರ ಕಾಂತಿ, ಮಿಂಚಿನಂತಿರುವ ತೇಜಸ್ಸು, ಹೊಳೆಯುವಂತಹಾ ವಸ್ತ್ರ, ಇನ್ನಷ್ಟು ಫಳ ಫಳ ಫಳ ಹೊಳೆಯುವ ಆಯುಧ,32 ಭುಜಗಳಿಂದ ಯುಕ್ತನಾಗಿರುವರು. ಆ ಯಮಧರ್ಮರಾಯರ ದೇಹ ಎಷ್ಟು ದೊಡ್ಡದು ಅನ್ನೋದಕ್ಕೂ ಹೇಳ್ತಾರೆ-  ಯೋಜನ ತ್ರಯ ವಿಸ್ತಾರಂ ವಾಪಿ ತುಲ್ಯ ವಿಲೋಚನಮ್/
ದಂಷ್ಟ್ರಾಕರಾಲ ವದನಂ ರಕ್ತಾಕ್ಷಂ ದೀರ್ಘ ನಾಸಿಕಂ// ಅಂತಾರೆ...

3 ಯೋಜನದ ವಿಸ್ತೀರ್ಣ, ಬಾವಿಯಂತೆ ಆಳವಾದ ಕಣ್ಣುಗಳು, ಭಯಂಕರವಾದ ಮುಖ, ಬೆಂಕಿಯಂತಿರುವ ಕೆಂಪು ಕಣ್ಣುಗಳು, ಉದ್ದನೆಯ ಮೂಗು, ಇಂಥಹ ಭಯಂಕರವಾದ ರೂಪವನ್ನು ಧರಿಸಿ ಪಾಪಿ ಪುರುಷನಿಗೆ ಕಾಣೆಲೆಂತೇ ಯಮಧರ್ಮರಾಯರು ಅಲ್ಲಿ ನಿಂತಿರ್ತಾರೆ.  ಮತ್ತೆ ಚಿತ್ರಗುಪ್ತರು ಸಹ ಅಷ್ಟೇ ಭಯಂಕರವಾದ ರೂಪವನ್ನು ಧರಿಸಿ ಅಲ್ಲೆ ನಿಂತಿರ್ತಾರೆ. ಜೊತೆಗೆ ಜ್ವರದೇವತೆ, ಮೃತ್ಯುದೇವತೆ ಇವರೆಲ್ಲರೂ ಸಹಿತ ಆ  ಚಿತ್ರಗುಪ್ತರ ಬಳಿ ನಿಂತ ವಿಪರೀತ ಭಯಂಕರವಾದ ಜೋರಾದ ಧ್ವನಿಯಿಂದ ಗರ್ಜನೆ ಮಾಡ್ತಿರ್ತಾರೆ. ಇವರನ್ನೆಲ್ಲ ನೋಡಿ ಮತ್ತಷ್ಟು ಗಟ್ಯಾಗಿ ಒದರೋಕೆ ಶುರೂ ಮಾಡ್ತಾನೆ ಆ ಪಾಪಿಯಾದ ಜೀವ. ದಾನಾದಿಗಳನ್ನು ಮಾಡದಿರುವ, ಮಾಡಿಸಿಕೊಳ್ಳದಿರುವ, ಪಾಪಿಗಳು ಕಂಪಿಸುತ್ತ ಕಂಪಿಸುತ್ತ ಮತ್ತಷ್ಟು ಘೋರವಾಗಿ ಹಾಹಾಕಾರವನ್ನು ಮಾಡುತ್ತ ಆಕ್ರಂದನೆಯನ್ನು ಮಾಡ್ತಿರ್ತಾರೆ.  

ಈ ರೀತಿಯಾಗಿ ರೋದನೆ, ಚಿಂತಾತುರರಾಗಿ ಆಕ್ರಂದನೆ ಮಾಡುತ್ತಿರುವ ಆ ಪಾಪಿಯ ಪಾಪದ ಕ್ರಮವನ್ನು (ಪಟ್ಟೀಯನ್ನು)  ಚಿತ್ರಗುಪ್ತರು ಯಮಧರ್ಮರಾಯರ ಆಜ್ಞೆಯಂತೆ ಶ್ರವಣ ಮಾಡಿಸುತ್ತಾರೆ... 

ಹೇ ದುರಾತ್ಮನಾದ, ಅಹಂಕಾರಿಯಾದ ಪಾಪೀ ! ನೀನು ದುರಹಂಕಾರದಿಂದ ಅವಿವೇಕದಿಂದ ಪಾಪ ರೂಪನಾದ ಧನವನ್ನು ಸಂಚಯನ ಮಾಡಿದ್ದಿ (ಕೂಡಿಟ್ಟಿದ್ದಿ). ಆ ಧನವನ್ನು ಸದ್ವಿಯೋಗ ಮಾಡಿದ್ಯಾ ಅಂದರೆ ಅದಿಲ್ಲ, ಪರಮಾತ್ಮನ ನಿಮಿತ್ತವಾದ ಸತ್ಕಾರ್ಯಗಳಿಗೆ, ಶಾಸ್ತ್ರ ವಿಹಿತವಾದ ದಾನ ಧರ್ಮಗಳಲ್ಲಿ ಖರ್ಚು ಮಾಡಿದ್ದಿಯಾ ಅಂದರೆ ಅದೂ ಅಸಲಿಗೆನೇ ಇಲ್ಲ. ಕೇವಲ ಧನ ಸಂಚಯನ ಮಾಡಿ ಮಾಡಿ ಹೆಂಡತಿ ಗೆ ಬೇಕು, ಮಕ್ಕಳಿಗೆ ಬೇಕು, ಮೊಮ್ಮಕ್ಕಳಿಗೆ ಬೇಕು ಅಂತ ಸಿಕ್ಕಾಪಟ್ಟೆ ದುಡ್ಡು ಮಾಡಿ ಮಾಡಿ, ಧರ್ಮ ರೀತಿಯಲ್ಲಿ ಖರ್ಚು ಮಾಡದೇ ಈಗ ಇಲ್ಲಿಗೆ ಬಂದು ಅಳತಿದ್ಯಾ? ಅಂತ ಆ ಪಾಪಿಯನ್ನು ಜೋರು ಜೋರಾಗಿ ಹೊಡಿತಿರ್ತಾರೆ. ಅಲ್ಲದೇ ನೀನು ಭೂಲೋಕದೊಳಗೆ ಪಾಪಿಗಳ ಸಂಗವೂ ಮಾಡಿದ್ದಿ. ಅವರ ಜೊತೆ ಸೇರಿ ಕಾಮ ಕ್ರೋಧಾದಿಗಳಿಂದ  ಉತ್ಪನ್ನವಾದ ಎಲ್ಲ ಪಾಪಗಳನ್ನು ಮಾಡಿ ಇಲ್ಲಿ ಇಷ್ಟು 
ರೋದನೆ ಮಾಡ್ತಿದ್ಯಾ? ಅದೂ ಸಹ ಅಂತಹ ಪಾಪಗಳನ್ನು ಮಾಡಬೇಕಾದರೆ - ಇದು ಪಾಪದ ಕಾರ್ಯ ಅನ್ನೋ ಎಚ್ಚರವಾದರೂ ಇಲ್ಲದೇ ಆನಂದದಿಂದ ಆ ಪಾಪದ ಕೆಲಸಗಳನ್ನು ಮಾಡಿದವನು ನೀನು. ಮತ್ತೆ ಪುಣ್ಯದ ಕೆಲಸ ಮಾಡಬೇಕಾದರೆ - ಅಯ್ಯೋ ಏಕಾದಶಿ  ಮಾಡಬೇಕಾ, ಪೂಜೆ, ವ್ರತ ಇವೆಲ್ಲಾ ಮಾಡಬೇಕಾ?ಯಾರಿಗಾದರೂ ಸಹಾಯ ಮಾಡುವುದಾಗಲಿ ಯಾವುದೇ ಪುಣ್ಯದ ಕೆಲಸವನ್ನು  ದುಃಖಪಡುತ್ತಾ ಮಾಡಿದ್ದಿ.  ಹೀಗೆಲ್ಲಾ ಮಾಡಿದ ನೀನು ಇಲ್ಲಿ ಯಾತನೆಯನ್ನು ಅನುಭವಿಸಲೇಬೇಕು, ಇಲ್ಲಿಂದ ತಪ್ಪಿಸಿಕೊಂಡು ಹೋಗಲಿಕ್ಕಂತೂ ಅಸಾಧ್ಯವಾದ ಕೆಲಸ. ನೀ ಮಾಡಿದ ಪಾಪ ಕರ್ಮಗಳೇನಿವೆ ಅವುಗಳೇ ನಿನ್ನ ಈ ದುಃಖಕ್ಕೆಕಾರಣ ಹೊರತು ಮತ್ಯಾರಲ್ಲ. ಹೀಗಾಗಿ ನೀ ಯಾತನೆಯನ್ನು ಶತಶಃ ಅರ್ಥಾತ್  ನೂರಕ್ಕೆ ನೂರರಷ್ಟು ಅನುಭವಿಸಲೇಬೇಕು ಎನ್ನುತ್ತಾ  ಆ ಪಾಪಿಯಾದವನು ಪಂಡಿತರೇ ಇರಲಿ, ಮೂರ್ಖರೇ ಇರಲಿ, ಶ್ರೀಮಂತನೇ ಇರಲಿ, ಬಡವನೇ ಇರಲಿ, ರಾಜನಾಗಲಿ, ರಾಣಿಯಾಗಲಿ, ಬಲಿಷ್ಠನಾಗಿರಲಿ, ಬಲವಿಲ್ಲದವನಿರಲಿ, ಆ ಯಮಧರ್ಮದೇವರು ಎಲ್ಲರನ್ನೂ ಸಮಾನವಾಗಿ ನೋಡಿ ಅವರೆಲ್ಲರ ಪಾಪಗಳಿಗೆ ದಂಡನೆ ನೀಡುತ್ತಾರೆ. 

ಮುಂದಿನ ಭಾಗದಲ್ಲಿ  ನರಕಲೋಕದ ಅವಲೋಕನವನ್ನು ಮಾಡೋಣ, ಜೊತೆಗೆ ಯಾವ ಯಾವ ಪಾಪಕ್ಕೆ ಏನು ಶಿಕ್ಷೆ ಎನ್ನುವುದು ಸಹ ನೋಡೋಣ. 

ಅದಕ್ಕೆ ತಾಯಿಯೇ ಮೊದಲು ಹಿರಿಯರು, ಅಜ್ಜ, ಅಜ್ಜಿ ಯಾರೇ ಇರಲಿ ಮಗು ಸಣ್ಣದಾಗಿದ್ದಾಗಲೇ ಪರಮಾತ್ಮನ ಮುಂದೆ ಕೈ ಮುಗಿಯೋದು ಹೇಳಿಕೊಡ್ತಾರೆ. ಆದರೆ ದೊಡ್ಡವರಾದ ನಾವು ಪರಮಾತ್ಮನಲ್ಲಿ ಭಕ್ತಿ ಇಡದೆ ಇಂದ್ರಿಯಲೋಲುಪರಾಗಿ, ಸಲ್ಲದ ಕರ್ಮಗಳಲ್ಲಿ ತೊಡಗಿ ಲೌಕಿಕ ಸಂಪತ್ತಿನ, ಭೋಗಗಳಲ್ಲಿ ಆಸಕ್ತರಾಗಿ ಜೀವನವನ್ನು ನಾಶ ಮಾಡಿಕೊಂಡು ನರಕಲೋಕಕ್ಕೆ ಹಾದಿ ಮಾಡ್ಕೋತಿದ್ದೇವೆ. ಅದಕ್ಕಾಗಿ ಇನ್ಮೇಲೆಯಾದರೂ ಪರಮಾತ್ಮನಲ್ಲಿ ನಿಶ್ಚಲವಾದ ಭಕ್ತಿಯನ್ನು ಮಾಡಿ ಸದಾ ಹರಿಯಲ್ಲಿ ರತರಾಗೋಣ , ಹಾಗೆ ರತಿಯನ್ನು ನೀಡಲಿ ಎಂದು ಹರಿವಾಯುಗುರುಗಳಲ್ಲಿ  ಪ್ರಾರ್ಥನೆ ಮಾಡುತ್ತಾ..

-Padma Sirish

ನಾದನೀರಾಜನದಿಂ ದಾಸಸುರಭಿ 
***

ಪಕ್ಷಮಾಸದ ಚಿಂತನೆ

              ಭಾಗ- 10

ಹಿಂದಿನ ಭಾಗದಲ್ಲಿ  ಜೀವನು ಮಾಡುವ ಕರ್ಮಗಳೆ ಸ್ವರ್ಗ ನರಕಾದಿಗಳಿಗೆ ಕಾರಣ ಎನ್ನುವುದನ್ನು ತಿಳಿದಿವಿ. ಯಮಧರ್ಮರಾಯರ, ಚಿತ್ರಗುಪ್ತರ ರೂಪಾದಿಗಳು, ಪಾಪದ ವರದಿಯನ್ನು ಚಿತ್ರಗುಪ್ತರು ಓದುವಾಗ ಜೀವನು ಮಾಡುವ ರೋದನೆ ಇತ್ಯಾದಿಗಳನ್ನು ತಿಳಿದೆವು. ಹೀಗೆ ಆ ಪಾಪಿಯ ಪಾಪಗಳನ್ನು ಓದಿದ ನಂತರ ಅವನನ್ನು ಮತ್ತೆ ಮತ್ತೆ ಹೊಡಿತಾ, ಚುಚ್ಚುತಾ ನಡಿರಿ ನರಕಲೋಕಕ್ಕೆ ಅಂತ ಹೇಳಿ ಯಮದೂತರು ಆ ಪಾಪಿಯಾದ ಜೀವನನ್ನು 84 ಲಕ್ಷ ನರಕಗಳಿರುವ ಜಾಗಕ್ಕೆ ಕರೆದುಕೊಂಡು ಹೋಗ್ತಾರೆ. 
ಆ ನರಕದ ಬಳಿಯ ದಂಡೆಯ ಮೇಲೆ ಬಹಳ ದೊಡ್ಡದಾದ ಶಾಲ್ಮಲಿ ವೃಕ್ಷ ಬರ್ತದೆ. 

ತತ್ರ ವೃಕ್ಷೋ ಮಹಾನೇಕೋ ಜ್ವಲದಗ್ನಿ ಸಮಪ್ರಭಃ/
ಪಂಚಯೋಜನ ವಿಸ್ತೀರ್ಣ  ಏಕಯೋಜನ ಮುಚ್ಛ್ರಿತಃ//

ಆ ವೃಕ್ಷ ಭಯಂಕರವಾಗಿ ಜಾಜ್ವಲ್ಯಮಾನವಾಗಿ ಉರಿಯುವಂತಹ ಅಗ್ನಿಯಂತೆ ಪ್ರಖರವಾಗಿರುವಂತಹಾ ಕಾಂತಿಯನ್ನು ಬೀರುತ್ತಿರ್ತದೆ. ಹಾಗೆ 5 ಯೋಜನ 20 ಹರದಾರಿ ವಿಸ್ತಾರದ ಅಗಲ , 1 ಯೋಜನ ಎತ್ತರವಿರ್ತದೆ. ಆ ಭಯಂಕರವಾದ ಶಾಲ್ಮಲಿ ವೃಕ್ಷಕ್ಕೆ ಆ ಜೀವನನ್ನು ತಲೆಕೆಳಗೆ ಹಾಕಿ, ಅದರ ದೇಹಕ್ಕೆ  ಬೇಡಿಯನ್ನು ಅರ್ಥಾತ್ ಶೃಂಖಲಿಯನ್ನು ಬಿಗಿತಾರೆ. ಹಾಗೆ ಮಾಡಿ ಆ ಜೀವನನ್ನು ಹೊಡಿತಾ ಹೊಡಿತಾ ಇರ್ತಾರೆ. ಮತ್ತೆ ಅದನ್ನು ಅಗ್ನಿಯಿಂದ ಸುಡ್ತಾರೆ. ಆ ಜೀವದಂತೆ ಅಲ್ಲಿ ತಲೆ ಕೆಳಗೆ ಗೂಬೆಗಳಂತೆ ಬಿಗಿಯಲ್ಪಟ್ಟಂತಹಾ ಆ ಪಾಪಿಯಾದ ಜೀವಿಗಳು ಎಲ್ಲರೂ ಹಸಿವೆಯಿಂದ , ನೀರಡಿಕೆಯಿಂದ ಬಳಲುತ್ತಾ ಒದರ್ತಿರ್ತಾರೆ. ಹಾಗೆ ಯಮದೂತರು ಹೊಡೆಯುತ್ತಿರುವಾಗ ಯಮದೂತರಿಗೆ ಆ ಜೀವಿಗಳು ಬೇಡ್ಕೋತಿರ್ತವೆ. 

ಹೇ ಯಮದೂತರೇ ! ಅಜ್ಞಾನದಿಂದ ಬಹಳ ಪಾಪಗಳನ್ನು ಮಾಡಿದ್ದೇವೆ, ಆಗ ಅದು ಸುಖವೆನಿಸಿತ್ತು, ನಿಜವಾದ ಸುಖವನ್ನು ನೀಡುವ ಭಗವದ್ಭಕ್ತಿಯನ್ನೇ ಮಾಡಲಿಲ್ಲ. ದಯವಿಟ್ಟು ಕ್ಷಮೆ ಮಾಡಿ ನಮ್ಮನ್ನು. ಇನ್ಮೇಲೆ ಯಾವ ಪಾಪಗಳನ್ನು ಸಹ ಮಾಡುವುದಿಲ್ಲ ಅಂತ ಅಳುತ್ತಾ ಬೇಡ್ಕೋತಿರ್ತಾರೆ. ಆದರೆ ಅಲ್ಲಿ ಮಾಡುವ ಪ್ರಾರ್ಥನೆ ವ್ಯರ್ಥವೇ ಸರಿ. ಭೂಲೋಕದಲ್ಲಿ ಹಂತ ಹಂತದಲ್ಲಿ ಪರಮಾತ್ಮನು ತನ್ನ ಅರಿವನ್ನು ತೋರಿಸುತ್ತ, ಶರಣಾಗಿ, ಶಾಸ್ತ್ರಬದ್ಧವಾಗಿ, ನ್ಯಾಯವಾಗಿ, ಸಮೀಚೀನವಾದ ,
ಧರ್ಮಬದ್ಧವಾದ ಕರ್ಮಗಳನ್ನು ಮಾಡಿ ಅಂತ ಹುಟ್ಟಿದ ಮೊದಲು ಹೇಳುತ್ತಿದ್ದರೂ ನಿರ್ಲಕ್ಷ್ಯ ಮಾಡಿ ಮೆರೆದು ಮಾಡಿದ ಪಾಪಗಳಿಗೆ ಶಿಕ್ಷೆ ಅನ್ನೋದು ಅನುಭವಿಸಲೇ ಬೇಕಲ್ವಾ? 

ಯಮಧರ್ಮರಾಯರು ಮಾಡಿದ ನಿರ್ಧಾರವನ್ನು ತಪ್ಪಿಸುವ ಹಾಗಿಲ್ಲ.. ಮಾಡಿದ್ದುಣ್ಣೋ ಮಾರಾಯಾ ಅನ್ನೋದು ಇದಕ್ಕೇನೇ  ಹೀಗೆ ಆ ಪಾಪಿಯಾದ ಜೀವಿ ಅಳುತ್ತ ಬೇಡಿಕೊಳ್ತಿದ್ದರೂ ಸಹ ಆ ಯಮದೂತರು ಕೇಳದೆ , ಭಲ್ಲೆಗಳಿಂದ , ಶೂಲಗಳಿಂದ , ಒನಕೆಗಳಿಂದ ಅವುರನ್ನು ಹೊಡಿತಾ, ಚುಚ್ಚುತಾ, ಅನೇಕ ರೀತಿಯಿಂದ ಆ ತಲೆ ಕೆಳಗೆ ಮಾಡಿ ಕಟ್ಟಿರುವಂತಹಾ ಆ ಪಾಪಿಯ ಯಾತನಾ ದೇಹಕ್ಕೆ ಮತ್ತಷ್ಟು ಯಾತನೆಯನ್ನು ನೀಡ್ತಿರ್ತಾರೆ.. ಹಾಗೆ ಬಡೆದು ಚುಚ್ಚಿ ಮಾಡಿದಾಗ ಕೊನೆಗೆ ಆ ಜೀವ ಅಲ್ಲೇ ಹಾಗೆಯೇ ಮೂರ್ಛಹೋಗಿಬಿಡ್ತದೆ. ಈ ಯಮದೂತರು ಬಿಡೋದಿಲ್ಲ ಮತ್ತೆ ಅವನ್ನು ಎಬ್ಬಿಸಿ - ಹೇ ದುರಾಚಾರಿಯಾದ ಪ್ರೇತನೇ! ಇಷ್ಟು ಪಾಪಗಳನ್ನು ಮಾಡಿದ ನೀನು ಈ ಶಿಕ್ಷೆಯನ್ನು ಅನುಭವಿಸಲೇಬೇಕು ಎದ್ದೇಳು ಅಂತ ಎಬ್ಬಿಸಿ ಮತ್ತೆ ಬಡಿತಾರೆ. 

ಈ ರೀತಿಯಾಗಿ ಆ ಶಾಲ್ಮಲಿ ವೃಕ್ಷದ ಕಡೆ ಇಷ್ಟು ನೋವನ್ನು ಅನುಭವಿಸುತ್ತಾ ಆ ಜೀವ ಮತ್ತೆ 84 ಲಕ್ಷ ನರಕಗಳಿಗೆ ಹೋಗಿ ವಿವಿಧ ರೀತಿಯಲ್ಲಿ ಯಾತನೆಯನ್ನು ಅವನು ಮಾಡಿದ ಪಾಪ ಕರ್ಮದ  ಅನುಸಾರವಾಗಿ ಅನುಭವಿಸುವುದನ್ನು, ಮಹಾ ನರಕಗಳ ವಿವರವನ್ನು ಮುಂದಿನ ಭಾಗದಲ್ಲಿ  ನೋಡೋಣ.. 

ಈ ರೀತಿಯ ನೋವು, ಯಾತನೆ ಬಾರದಂತೆ ಸದಾ ಹರಿಯ ಧ್ಯಾನಾಸಕ್ತರಾಗೋಣ. ಕ್ಷಣ ಬಿಡದೆ ಪರಮಾತ್ಮನ ಸ್ತುತಿಸುತ್ತ ಆತನ ಶರಣಾಗೋಣ. ಆ ರೀತಿಯ ಮನಸು ನೀಡಲಿ ಎಂದು ಮನೋನಿಯಾಮಕರಾದ ರುದ್ರದೇವರಿಗೆ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನಲ್ಲಿ ಪ್ರಾರ್ಥನೆ ಮಾಡುತ್ತಾ  ...

-Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***


ಪಕ್ಷಮಾಸದ ಚಿಂತನೆ

            ಭಾಗ -11 

ನಿನ್ನೆಯ ಭಾಗದಲ್ಲಿ ಯಮಧರ್ಮರಾಯರ ಆಜ್ಞೆಯಂತೆ,  ಯಮದೂತರು ಪಾಪಿಯಾದ ಜೀವನನ್ನು ನರಕಲೋಕಕ್ಕೆ ಕರೆದುಕೊಂಡು ಹೋಗುವಾಗ ಅಲ್ಲಿನ ದಡದಲ್ಲಿ ಬರುವ ಶಾಲ್ಮಲಿ ವೃಕ್ಷದ ಕುರಿತು ತಿಳಿದಿದ್ದೆವು. ಅಲ್ಲಿ ಆ ಜೀವನನ್ನು ತಲೆ ಕೆಳಗೆ ಕಟ್ಟಿ,  ಯಾತನೆ ನೀಡುವುದನ್ನೂ ನೋಡಿವಿ. ಹಾಗೆ ಹೊಡೆದು, ಚುಚ್ಚಿ ಯಾತನೆ ಕೊಟ್ಟ ಯಮದೂತರು ಜೋರಾಗಿ ರಭಸದಿಂದ ಒಗಿತಾರೆ. ಹಾಗೆ ಮಾಡಿದಾಗ ಕೆಳಗೆ ಬಿಳುವಂತಹಾ ಪಾಪಿಯಾದ  ಆ ಜೀವನ ಅಂಗಗಳು ಆ ವೃಕ್ಷದ ಎಲೆಗಳಿಗೆ ತಾಕಿ ಛೇದನ ಆಗ್ತಿರ್ತವೆ. ಆಗ ಆ ಛೇದನ ಆಗಿ ಕೆಳಗೆ ಬಿದ್ದ ಆ ಅಂಗಗಳ ಭಾಗಗಳನ್ನು ಅಲ್ಲಿನ ಕ್ರೂರವಾಗಿರುವ ಶ್ವಾನಗಳು ಭಕ್ಷಣೆ ಮಾಡ್ತಿರ್ತವೆ. ಅದನ್ನು ನೋಡಿ ಆ ಜೀವ ದುಃಖಿತವಾಗಿ ರೋದನೆ ಮಾಡುತ್ತದೆ. ರೋದಿಸುವಂತಹಾ ಪಾಪಿಗಳ ಬಾಯಲ್ಲಿ ಧೂಳನ್ನು, ಮರಳನ್ನು ತುಂಬಿ, ಪಾಶಗಳನ್ನು ಕಟ್ಟಿ, ಮತ್ತೆ ಹೊಡಿಯಲು ಆರಂಭಮಾಡ್ತಾರೆ. ಕೆಲವರನ್ನು ಯಮದೂತರು ಕರಗಸದಿಂದ ಕಟ್ಟಿಗೆಯನ್ನು ಕೊರಿದಂತೆ ಪಾಪಿಗಳ ಅಂಗಗಳನ್ನು ಕೊರಿತಾರೆ, ಕೆಲವರನ್ನು ಬಲ್ಲೆಗಳಿಂದ ಚುಚ್ಚುತ್ತಾರೆ, ಕೆಲವರನ್ನು ಯಮದೂತರು  ಪಾಪಿಗಳನ್ನು ಕೆಳಗೆ ಹಾಕಿ ಕಟ್ಟಿಗೆಯನ್ನು ಕೊಡಲಿಯಿಂದ ಕಡಿದಂತೆ ಕಡಿಯುತ್ತಿರ್ತಾರೆ. ಕೆಲವರನ್ನು ಕುಣಿ ಮಾಡಿ ಟೊಂಕದ ವರೆಗೆ ಇಟ್ಟು,  ಅವರ ಮಸ್ತಕವನ್ನು ವಿಷಪೂರಿತ ಬಾಣಗಳಿಂದ ಛೇದಿಸ್ತಿರ್ತಾರೆ. ಕೆಲವರು ಯಮದೂತರು ಗಾಣಿಗೆಯಲ್ಲಿ ಕಡಲೆಬೀಜದ , ಕೊಬ್ಬರಿ ಇತ್ಯಾದಿಗಳನ್ನು ಹಾಕಿ ಎಣ್ಣೆಯನ್ನು ತೆಗಿಯುವಂತೆ , ಈ ಪಾಪಿಗಳನ್ನು ಹಾಕಿ ರುಬ್ಬುತಿರ್ತಾರೆ. ಕೆಲವರನ್ನು ಕಬ್ಬಿನ ಜಲ್ಲೆಯಿಂದ ರಸವನ್ನು ತೆಗೆಯುವಂತೆ ಹಾಕಿ ಹಿಂಡುತ್ತಿರ್ತಾರೆ.  ಕೆಲವರನ್ನು ಭಯಂಕರವಾಗಿ ಉರಿಯುವಂತಹ ಕೊಳ್ಳಿಗಳನ್ನ ಸುತ್ತಲೂ ಕಟ್ಟಿ ಕಬ್ಬಿಣದ ಗುಂಡುಗಳನ್ನ ತಿವಿಯಿಂದ ಗಾಳಿಹಾಕಿ ಕಾಯಿಸುವಂತೆ ಸುಡ್ತಿರ್ತಾರೆ. ಬೆಂಕಿಯಮೇಲೆ ಕುದಿಯುವಂತಹ ಎಣ್ಣೆ ತುಪ್ಪ ಇತ್ಯಾದಿಗಳಲ್ಲಿ ಹಾಕಿ ಹಪ್ಪಳ,  ಕಡುಬು, ವಡೆಗಳನ್ನು ಕರಿತಿರ್ತೆವೆ ಹಾಗೆ ಪಾಪಿಗಳನ್ನು ಸಹ ಕರಿತಾಯಿರ್ತಾರೆ. ಮತ್ತೆ ಕೆಲೊಬ್ಬರು ಪಾಪಿಗಳನ್ನು ಮದೋನ್ಮತ್ತ ಆನೆಯ ಮುಂದೆ ಕೈಕಾಲು ಕಟ್ಟಿ  ಹಾಕ್ತಾರೆ. ಆ ಆನೆಗಳು ಈ ಪಾಪಿಗಳ ಮೇಲಿಂದ ಓಡ್ತಾ ಹೋಗ್ತಿರ್ತವೆ. ಮತ್ತೆ ಭಾವಿಯೊಳಗೆ ನುಗ್ಗಿಸಿ ಅಲ್ಲಿನ ಹಾವು ಚೇಳು ಇತ್ಯಾದಿಗಳಿಂದ ಕಚ್ಚಿಸುತ್ತಾರೆ. ಕೆಲವರನ್ನ ಕ್ರಿಮಿ ಕುಂಡದೊಳಗೆ ಹಾಕ್ತಾರೆ ಕೆಲವರನ್ನು, ಪರ್ವತಗಳ ಮೇಲಿಂದ ಒಗಿತಾರೆ. ಅಲ್ಲಿನ ಹದ್ದು, ಕ್ರೂರ ಕಾಗೆಗಳು ಕೆಲವರು ಪಾಪಿಗಳ ಮಸ್ತಕಗಳಲ್ಲಿನ ಮಜ್ಜ ಮಾಂಸಾದಿಗಳನ್ನು ಚುಚ್ಚಿ ತಿಂತಿರ್ತವೆ. 

ಈ ಮಧ್ಯದಲ್ಲಿ ಒಂದು ಜೀವ ಇನ್ನೊಂದು ಜೀವದ ಜೊತೆ ಮಾತಾಡ್ತಿರ್ತವೆ. ಹೇ ! ನೀನು ಹಿಂದಿನ ಜನ್ಮದಲ್ಲಿ ನನ್ಹತ್ರ ಹಣವನ್ನು ತಗೊಂಡು ಮತ್ತೆ ವಾಪಸ್ ಕೊಡಲಿಲ್ಲ ಅಲ್ವಾ ಅಂತ ಪಶುಗಳಂತೆ ಹಣ ಕೊಡಬೇಕಾದವನ ಮಾಂಸವನ್ನು ಕಿತ್ತಿ ತಿಂತಿರ್ತಾರೆ. 
ಈ ರೀತಿಯಲ್ಲಿ ವಿಧವಿಧವಾದ ಯಾತನೆಗಳನ್ನು ಯಮದೂತರು ಆ ಪಾಪಿಗಳಿಗೆ ನೀಡುತ್ತಾ ಯಮಧರ್ಮರಾಯರನ ಆಜ್ಞಾನುಸಾರವಾಗಿ ಭಯಾನಕವಾದ ನರಕಲೋಕದಲ್ಲಿ ದಬ್ಬುತ್ತಾರೆ. 

ಈ ಶಾಲ್ಮಲಿ ವೃಕ್ಷದ ಬಳಿ ಇರುವ ಏನು ಈ ಮೇಲೆ ಹೇಳಿದ ದುಃಖ ನರಕಯಾತನೆ ಇದೆ ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ. ನಾವು ಇಲ್ಲಿ ನೋಡಿದ್ದು ಸ್ವಲ್ಪ ಮಾತ್ರ, ಇದಕ್ಕೆ ಹತ್ತು ಪಟ್ಟು,  ನೂರು ಪಟ್ಟು ನರಕಯಾತನೆ ಅಲ್ಲಿ ಪಾಪಿಗಳಿಗೆ ಯಮದೂತರು ನೀಡುತ್ತಿರ್ತಾರೆ. ಒಟ್ಟಿನಲ್ಲಿ ನರಕಲೋಕಗಳು ಅಂದರೆ- 84 ಲಕ್ಷ. ಅದರಲ್ಲಿಯೂ ಅತೀ ಭಯಾನಕವಾದ ಮಹಾನರಕಗಳು 21.  ಅವು ಯಾವುವು? ಯಾವ ಪಾಪಗಳನ್ನು ಮಾಡಿದರೆ ಆ ಮಹಾನರಕಗಳ ಪಾಲಾಗ್ತಿವಿ ಎನ್ನುವುದು ಮುಂದಿನ ಭಾಗದಲ್ಲಿ ತಿಳಿಯೋಣ ಹರಿವಾಯುಗುರುಗಳ ಅನುಗ್ರಹದಂತೆ...

ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು ಕಟ್ಟುಮಾಡಿದನಂತೆ ಯಮ ತನ್ನ ದೂತರನು ಎನ್ನುವ ಶ್ರೀ ಕನಕದಾಸಾರ್ಯರ ಉಕ್ತಿಯಂತೆ, ಸದಾ ಶ್ರೀಹರಿಯ ಧ್ಯಾನಾಸಕ್ತರಾಗಿರುವ ನಿಶ್ಚಲ ಭಕ್ತಿ ಸಂಪನ್ನರಾದ ಸಜ್ಜನರನು ಯಮದೂತರು ಸಹ ಮುಟ್ಟಬಾರದೆಂದು ಯಮಧರ್ಮರಾಯರ ಆಜ್ಞೆಯಂತೆ.. 

 ಒಟ್ಟಿನಲ್ಲಿ ನರಕಲೋಕಗಳು ಅಂದರೆ- 84 ಲಕ್ಷ. ಅದರಲ್ಲಿಯೂ ಅತೀ ಭಯಾನಕವಾದ ಮಹಾನರಕಗಳು 21.  ಅವು ಯಾವುವು? ಯಾವ ಪಾಪಗಳನ್ನು ಮಾಡಿದರೆ ಆ ಮಹಾನರಕಗಳ ಪಾಲಾಗ್ತಿವಿ ಎನ್ನುವುದು ಮುಂದಿನ ಭಾಗದಲ್ಲಿ ತಿಳಿಯೋಣ ಹರಿವಾಯುಗುರುಗಳ ಅನುಗ್ರಹದಂತೆ...

ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು ಕಟ್ಟುಮಾಡಿದನಂತೆ ಯಮ ತನ್ನ ದೂತರನು 
ಎನ್ನುವ ಶ್ರೀ ಕನಕದಾಸಾರ್ಯರ ಉಕ್ತಿಯಂತೆ, 
ನಾಮ ಸಂಕೀರ್ತನೆ ಮಾಳ್ಪಗೆ ನರಕಭಯಗಳುಂಟೆ ಎನ್ನುವ

ಸದಾ ಶ್ರೀಹರಿಯ ಧ್ಯಾನಾಸಕ್ತರಾಗಿರುವ ನಿಶ್ಚಲ ಭಕ್ತಿ ಸಂಪನ್ನರಾದ ಸಜ್ಜನರನು ಯಮದೂತರು ಸಹ ಮುಟ್ಟಬಾರದೆಂದು ಯಮಧರ್ಮರಾಯರ ಆಜ್ಞೆಯಂತೆ.. ಹೀಗಾಗಿ...

ಹರಿಪಾದ ನೆನೆವಂಗೆ ಅರಿಗಳ ಭಯವಿಲ್ಲ
ಹರಿಪಾದ ನೆನೆವಂಗೆ ದುರಿತ ಭಯವಿಲ್ಲ
ಹರಿಪಾದ ನೆನೆವಂಗೆ ನರಕದ ಭಯವಿಲ್ಲ
ಹರಿಪಾದ ನೆನೆವಂಗೆ ಮಾಯಾದ ಭಯವಿಲ್ಲ
ಹರಿಪಾದ ನೆನೆವಂಗೆ ಭವದ ಭಯವಿಲ್ಲ
ಹರಿಪಾದ ನೆನೆವಂಗೆ ವಿಷಯ ಭಯವಿಲ್ಲ
ಹರಿಪಾದ ನೆನೆವಂಗೆ ಜನನ ಭಯವಿಲ್ಲ
ಹರಿಪಾದ ನೆನೆವಂಗೆ ಮರಣದ ಭಯವಿಲ್ಲ
ಬರಿದೆ ಮಾತೇ ಅಲ್ಲ ಸಿರಿಹಯವದನನ್ನು 
ಕರೆದು ಮುಕ್ತಿಯನಿತ್ತು ಅನುಗಾಲ ಸಲಹುವ//
ಎನ್ನುವ ಶ್ರೀ ವಾದಿರಾಜ ಗುರುಸಾರ್ವಭೌಮರ ಮಾತಿನಂತೆ ಪರಮಾತ್ಮನ ಪಾದವನ್ನು ಹಿಡಿದು, 

 ಹರಿ ಸ್ಮರಣೆ ಮಾಡೋ ನಿರಂತರ ಪರಗತಿಗೆ ಇದು ನಿರ್ಧಾರ ನೋಡೋ ಎನ್ನುವ ಶ್ರೀಮತ್ಪುರಂದರದಾಸಾರ್ಯರ ವಾಕ್ಯಗಳನ್ನು ಸದಾ ಹೃದಯದಲ್ಲಿ ಅನುಸಂಧಾನ ಮಾಡುತ್ತ, ಜೀವದ ಭಕ್ತಿಯಿಂದ ,
ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನ ಪ್ರಾರ್ಥನೆ ಮಾಡುತ್ತಾ..... 

-Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***



ಪಕ್ಷಮಾಸದ ಚಿಂತನೆ

         ಭಾಗ -12 

  ಯಾರ್ಯಾರಿಗೆ ನರಕಗಳು 

ನಿನ್ನೆಯ ಭಾಗದವರೆಗೆ ಮರಣಾನಂತರದ ಜೀವನ ಪಯಣ, ಯಮಮಾರ್ಗದ ಗಮನ, ವೈತರಿಣಿ ನದಿಯನ್ನು ದಾಟುವ, ಶ್ರವಣ ಶ್ರವಣಿಯರು ನೀಡಿದ ವರದಿಯಂತೆ ಅವರಿಗಾಗುವ ಶಿಕ್ಷೆ, ಶಾಲ್ಮಲಿ ವೃಕ್ಷದ ಬಳಿಯ ಜೀವಕ್ಕೆ ಯಮದೂತರು ನೀಡುವ ಯಾತನೆ ಇವೆಲ್ಲವನ್ನೂ ನೋಡಿದ್ದೇವೆ.. 

ಯಾವ ರೀತಿಯ ಪಾಪಗಳನ್ನು ಮಾಡಿದ ಜೀವಿಗಳು ಈ ಯಮಮಾರ್ಗವೇ ಮೊದಲು ಶಾಲ್ಮಲಿ ವೃಕ್ಷದನಂತರ, 84 ಲಕ್ಷ ನರಕಗಳು ಇವೆಲ್ಲವನ್ನೂ ಅನುಭವಿಸುತ್ತಾರೆ ಅನ್ನೋದೆ ಪ್ರಶ್ನೆ? ಮನುಷ್ಯ ಒಂದು ಹೆಜ್ಜೆ ತೆಗೆದು ಮತ್ತೊಂದು ಹೆಜ್ಜೆ ಇಡುವಷ್ಟು ಸಮಯದಲ್ಲಿ ಅನೇಕ ಜನ್ಮಗಳಲ್ಲಿ ಅನುಭವಿಸುವಷ್ಟು ಪಾಪಕರ್ಮಗಳನ್ನು ಮಾಡ್ತಾನೆ. ಆದರೆ ಮುಖ್ಯವಾಗಿ ನಮಗೆ ಅರ್ಥವಾಗುವಂತೆ ಹೇಳಬೇಕು ಅಂದರೆ 

ಬ್ರಹ್ಮಘ್ನಾಶ್ಚ ಸುರಾಪಾಶ್ಚ ಗೋಘ್ನಾ ವಾ ಬಾಲಘಾತಕಾಃ/
ಸ್ತ್ರೀಘಾತೀ ಗರ್ಭಪಾತೀ ಚ ಯೇ ಚ ಪ್ರಚ್ಛನ್ನ ಪಾಪಿನಃ// 
  ಎಂಬ ಗರುಣಪುರಾಣದ ವಾಕ್ಯದಂತೆ- 
ಬ್ರಹ್ಮಹತ್ಯೆ ಮಾಡುವವರು , ಅಂದರೆ ಬ್ರಾಹ್ಮಣ ಸಮುದಾಯವನ್ನು ನಿಂದಿಸುವವರು, ಬ್ರಾಹ್ಮಣರ ಅವಮಾನವನ್ನು ಮಾಡುವವರು, ಬ್ರಾಹ್ಮಣರ ಸ್ವತ್ತನ್ನು ಅಪಹಾರ ಮಾಡುವವರು, ಮತ್ತೆ  ಮದಿರಾಪಾನ ಮಾಡುವವರು ಅಥವಾ ನಿಂತು ನೀರು ಕುಡಿಯುವವರು,  ನಿಂತಲ್ಲೇ ಹಾಲು ಕುಡಿಯುವವರು ಇವೆಲ್ಲಾ ಸಹ ಮದಿರಾಪಾನಕ್ಕೆ ಸಮವಾದವು. ಮತ್ತೆ  ಯಾವ ಸ್ಥಳದಲ್ಲಿ ಕುಡಿಬಾರದು, ಯಾವ ಸ್ಥಳದಲ್ಲಿ ತಿನ್ನಬಾರದು ಅಂತಹ ಜಾಗದಲ್ಲಿ ಹೋಗಿ ಕುಡಿಯೋದು, ತಿನ್ನೋದು, ಇವೂ ಸಹ ಮದ್ಯಪಾನ, ಮಾಂಸಭಕ್ಷಣಗೆ ಸಮ ಅಂತಾರೆ. ಮತ್ತೆ ಗೋಹತ್ಯೆ  ಮಾಡುವವರು, ಗೋಮಾಂಸ ಭಕ್ಷಣ  ಮಾಡುವವರು ,ಬಾಲಘಾತಕರು, ಮಕ್ಕಳನ್ನು ಹೊಡೆಯುವವರು, ನಿಂದಿಸುವವರು, ಏನೂ ತಿಳಿಯದ ಮಕ್ಕಳಿಗೆ ಕಠಿಣವಾದ ಶಿಕ್ಷೆ ನೀಡುವವರು,  ಸ್ತ್ರೀಘಾತಕರು ಅರ್ಥಾತ್  ಹೆಂಡತಿಗೆ, ಅಕ್ಕಾ ತಂಗಿಯರಿಗೆ ತಾಯಿಯನ್ನು ಅಥವಾ ಇನ್ನಿತರ ಸ್ತ್ರಿಯರನ್ನು ಯಾರೇ ಸ್ತ್ರೀಯರನ್ನಾಗಲಿ ನಿಂದಿಸುವ, ಹೊಡೆಯುವ, ಕೊಲ್ಲುವವರು, ಮತ್ತೆ ಗರ್ಭಪಾತವನ್ನು ಮಾಡುವ, ಮಾಡಿಸಿಕೊಳ್ಳುವ, ಅಂತಹ ಪಾಪದ ಕೆಲಸಕ್ಕೆ ಸಹಾಯ ಮಾಡುವವರು ಇವರೆಲ್ಲರನ್ನೂ ಪ್ರಚ್ಛನ್ನ ಪಾಪಿಗಳು ಅಂತಲೇ ಕರಿತಾರೆ. ಇವರೆಲ್ಲರೂ ಯಮಮಾರ್ಗದಿಂದ, ವೈತರಿಣಿ ನದಿ, ಶಾಲ್ಮಲಿ ವೃಕ್ಷ, 84 ಲಕ್ಷ ನರಕಗಳಿಗೆ ಹೋಗುವಂತವರಾಗಿದ್ದಾರೆ. ಮತ್ತೆ ಇನ್ನೂ ಯಾರು ಹೋಗ್ತಾರೆ ಅಂದರೆ - 

 ಯೋ ಹರಂತಿ ಗುರೋರ್ದ್ರವ್ಯಂ ದೇವದ್ರವ್ಯಂ ದ್ವಿಜಸ್ಯ ವಾ /
ಸ್ತ್ರೀದ್ರವ್ಯಹಾರಿಣೋ ಯೇ ಚ ಬಾಲದ್ರವ್ಯಹರಾಶ್ಚ ಯೇ //

ಗುರುಗಳ, ಬ್ರಾಹ್ಮಣರ ಸಂಪತ್ತನ್ನು ಅಪಹಾರ ಮಾಡುವವರು, ಸ್ತ್ರೀಯರು ಕಷ್ಟಪಟ್ಟು ದುಡಿದದ್ದನ್ನು ಅಪಹಾರ ಮಾಡಿಕೊಂಡು ಹೋಗುವವರು, ಮಕ್ಕಳು ಸೇರಿಸಿಟ್ಟ ದುಡ್ಡನ್ನು ತಗೊಂಡು ಹೋಗುವವರು,ಇವರೆಲ್ಲರೂ ಸಹಿತ ವೈತರಿಣಿ ನದಿಯಲ್ಲಿ ಬಿಳುವವರೇ ಆಗಿದ್ದಾರೆ.  ಮತ್ತೆ 

ಯೇ ಋಣಂ ನ ಪ್ರಯಚ್ಛಂತಿ ಯೇ ವೈ ನ್ಯಾಸಾಪಹಾರಕಾಃ/
ವಿಶ್ವಾಸಘಾತಕಾ ಯೇ ಚ ಸವಿಷಾನ್ನೇನ ಮಾರಕಾ//|
      
ಯಾವ ಸಂದರ್ಭದಲ್ಲಿ ಪರರ ದ್ರವ್ಯ ತಗೊಂಡು (ಸಾಲದ ರೂಪದಲ್ಲಿ ) ತಿರುಗಿ ಕೊಡದವರು, ಠೇವಣಿ ಇಟ್ಟುಕೊಂಡದ್ದನ್ನು ತಿರುಗಿ ಕೊಡದವರು, ವಿಶ್ವಾಸಘಾತಕರು ಅಂದರೆ ನಂಬಿದವರನ್ನು  ಮೋಸಮಾಡುವವರು,
 ಪರರಿಗೆ ವಿಷಾನ್ನ ಹಾಕಿ ಕೊಲ್ಲುವವರು ಇವರೆಲ್ಲರೂ ಸಹ ವೈತರಿಣಿ ನದಿಯಲ್ಲಿ ಬಿದ್ದೆ ಬಿಳುತ್ತಾರೆ. ಮತ್ತೆ 

ದೋಷಗ್ರಾಹಿ  ಗುಣಾಶ್ಲಾಘೀ ಗುಣವತ್ಸು ಸಮತ್ಸರಾಃ/
ನೀಚಾನುರಾಗಿಣೋ ಮೂಢಾಃ ಸತ್ಸಂಗತಿ ಪರಾಂಙ್ಮುಖಾಃ//
 ತುಂಬಾ ಜನರು  ಎರಡನೇಯವರ ಅವಗುಣಗಳನ್ನು ಗ್ರಹಣಮಾಡಿ ಅವರಲ್ಲಿರುವ ಸದ್ಗುಣಗಳನ್ನು  ಗ್ರಹಣ ಮಾಡದೇ, ಕೆಟ್ಟ ಗುಣಗಳನ್ನೇ ಪ್ರಚಾರ ಮಾಡುವಂತವರೋ ಅಂತವರು,  ಗುಣವಂತರ ಈರ್ಷ್ಯೆ ಮಾಡುವವರು, ದ್ವೇಷ ಮಾಡುವವರು, ತನಗಿಂತ ನೀಚ ಜಾತಿಯವರಲ್ಲಿ ಸ್ನೇಹ ಮಾಡಿ ಅಂತರ್ಜಾತಿವಿವಾಹಗಳ ಕಾರಣೀಭೂತರಾಗುವವರು, ಸತ್ಸಂಗತಿಯಿಂದ ವಿಮುಖರಾಗುವವರು, ಇಂಥವರೂ ಸಹ ವೈತರಿಣಿ ನದಿಯಲ್ಲಿ ಬೀಳುತ್ತಾರೆ. 
ಹಾಗೆಯೇ

ತೀರ್ಥಸಜ್ಜನಸತ್ಮರ್ಮ ಗುರುದೇವನಿಂದಕಾಃ/
ಪುರಾಣವೇದಮೀಮಾಂಸಾನ್ಯಾಯವೇದಾಂತ ದೂಷಕಾಃ//

   ಕೆಲವು ಜೀವರು ತೀರ್ಥಗಳ , ಸತ್ಕರ್ಮಗಳ, ಗುರುಗಳ, ದೇವತೆಗಳ ನಿಂದೆ  ಮಾಡುವವರು, ಪುರಾಣಗಳ, ವೇದಗಳ, ಮೀಮಾಂಸೆಗಳ, ನ್ಯಾಯದ , ವೇದಾಂತದ ದೂಷಣೆ ಮಾಡುವವರು ವೈತರಿಣಿ ನದಿಯಲ್ಲಿ ಬಿಳ್ತಾರೆ.. ಮತ್ತೆ 

ಹರ್ಷಿತಾ ದುಃಖಿತಂ ದೃಷ್ಟ್ವಾ ಹರ್ಷಿತೇ ದುಃಖದಾಯಕಾಃ/
ದುಷ್ಟವಾಕ್ಯಸ್ಯ ವಕ್ತಾರೋ ದುಷ್ಟ ಚಿತ್ತಾಶ್ಚ ಯೇ ಸದಾ//
       
ಎರಡನೇಯವರು  ದುಃಖಿಸುವದನ್ನು ನೋಡಿ ಆನಂದ ಪಡ್ತಿರ್ತಾರೆ,  ಎರಡನೆಯವರು ಸುಖಿಗಳಿದ್ದಾಗ ಇವರಿಗೆ ದುಃಖ ಆಗ್ತದೆ. ಅವರ ಸುಖ ದುಃಖದಿಂದ ಇವರಿಗೇನೂ ಉಪಯೋಗ ಅಂತೂ ಇರುವುದಿಲ್ಲ ಆದರೂ ಈರ್ಷ್ಯೆ ತೋರಿಸುತ್ತಾರೆ ಅಂತವರು, ಸದಾ ಸುಳ್ಳು ಮಾತನಾಡುವವರು ಮನಸಿನಲ್ಲಿ ಸಹ ಕೆಟ್ಟ ಯೋಚನೆಗಳು ಮಾಡುವವರು ವೈತರಿಣಿ ನದಿಯಲ್ಲಿ ಬಿಳ್ತಾರೆ..

 ನ ಶೃಣ್ವಂತಿ ಹಿತಂ ವಾಕ್ಯಂ ಶಾಸ್ತ್ರವಾರ್ತಾಂ ನ ಕದಾಪಿ ನ/
ಆತ್ಮಸಂಭಾವಿತಾಃ ಸ್ತಬ್ಧಾಃ ಮೂಢಾ ಪಂಡಿತಮಾನಿನಃ //
       ಹಿರಿಯರು ಜ್ಞಾನಿಗಳು ಹೇಳಿದ ಹಿತದ ಮಾತುಗಳನ್ನು ಕೇಳದವರು, ಶಾಸ್ತ್ರ ವಾರ್ತೆಗಳನ್ನು ಕೇಳದವರು, ಯಾರ್ಯಾರು ದುರಭಿಮಾನಿಗಳಾಗಿ ಓಡಾಡ್ತಾರೆಯೋ,  ಯಾರನ್ನೂ ಸಹಿತ ಗೌರವಾತಿಶಯಗಳಿಂದ ನಮಸ್ಕರಿಸದವರು , ತಾವೇ ಪಂಡಿತರೆಂಬ ದುರಭಿಮಾನಿಗಳಾಗಿ ಮೆರೆಯುವವರು, ಹಗಲೂ ರಾತ್ರಿ ಕೇವಲ ದುಷ್ಟ ವಿಚಾರಗಳನ್ನು ಮಾಡುತ್ತಾ ಕಾಲಹರಣ ಮಾಡುವವರು  ಇವರೆಲ್ಲರೂ ಸಹಿತ ವೈತರಿಣಿ ನದಿಯಲ್ಲಿ ಬಿಳ್ತಾರೆ ನಂತರ 84 ಲಕ್ಷ ನರಕಗಳನ್ನು ಅನುಭವಿಸುತ್ತಾರೆ... 

ಈ ಯಮಮಾರ್ಗದಿಂದ ಹೋಗುವಂತಹ ಜೀವಿಗಳು ಯಮದೂತರು ನೀಡುವ ಯಾತನೆ ಅನುಭವಿಸುತ್ತ ವೈತರಿಣಿ ನದಿಗೆ ಹೋಗ್ತಿದ್ದರೂ, ನದಿಯಲ್ಲಿ ಬಿದ್ದರೂ ಸಹ  ತಮಗೆ ಕಷ್ಟ ಕೊಟ್ಟರೆಂದು ತಾಯಿ, ತಂದೆ, ಗುರುಗಳ ನಿಂದೆ ಮಾಡ್ತಿರ್ತಾರೆ. ಅಲ್ಲಿ ಹೋದರೂ ಸಹ ಅವರಿಗೆ ಬುದ್ಧಿ ಬರೋದೇಯಿಲ್ಲ ಅದಕ್ಕೆ ಅವರು ಪಾಪಿಗಳಲ್ಲವೇ? ಇನ್ನೂ ಯಾರ್ಯಾರು ಪಾಪಿಗಳೆನಿಸಿಕೊಳ್ಳುತ್ತಾರೆ? ಯಾರಿಗೆ ಯಾವ ಶಿಕ್ಷೆ ಆಗ್ತದ ಎನ್ನುವುದು ಇನ್ನಷ್ಟು ವಿಷಯಗಳು ನಾಳಿನ ಭಾಗದಲ್ಲಿ ನೋಡೋಣ ಎಂದು ತಿಳಿಯುತ್ತಾ, 

ಹೆಜ್ಜೆ ಹೆಜ್ಜೆಗೂ ಪರಮಾತ್ಮನ ಕುರಿತಾದ ಎಚ್ಚರಿಗೆ, ದಾಸಾರ್ಯರೆಲ್ಲರ ಕೃತಿಗಳ ಮೂಲಕವಾದಂತಹ ವಿಷಯಗಳು ಮನವರಿಕೆಯಾಗಿ ಮನದಲ್ಲಿ ಅಚ್ಚಿಳಿಯಲಿ ಎಂದು
ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನನ್ನು ಪ್ರಾರ್ಥನೆ ಮಾಡುತ್ತಾ..

-Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***

ಪಕ್ಷಮಾಸದ ಚಿಂತನೆ 

                ಭಾಗ - 13

            ಮಹಾ ನರಕಗಳು

ನಿನ್ನೆಯ ಭಾಗದಲ್ಲಿ ಯಾರ್ಯಾರಿಗೆ ಯಾವ ಪಾಪಗಳನ್ನು ಮಾಡೋದರಿಂದ ವೈತರಿಣಿ ನದಿಯ, 84 ಲಕ್ಷ ನರಕಗಳು ಆಗ್ತವೆಯೋ ಸ್ವಲ್ಪ  ನೋಡಿವಿ. ಇವತ್ತೂ ಸಹ ನೋಡೋಣ. 

ಯಾರು ಪತಿವ್ರತೆಯಾದ ಸ್ತ್ರಿಯನ್ನು ಅರ್ಥಾತ್ ಪತ್ನಿಯನ್ನು ತ್ಯಜಿಸ್ತಾರೆಯೋ, ಯಾರೇ ಆದರೂ ಉತ್ತಮ ಬ್ರಾಹ್ಮಣರನ್ನು ದಾನ ನೀಡ್ತಿನಿ ಅಂತ ಕರೆದು, ಹೇ! ನಿಮ್ಮನ್ನ ಕರೆದೇ ಇಲ್ವಲ್ವಾ ಅಂತ ಅವಮಾನ ಮಾಡ್ತಾರೆಯೋ ಅಂಥವರು, ಹಾಗೆ ದಾನ ಕೊಟ್ಟು ಮತ್ತೆ ಅದನ್ನು ಅಪಹಾರ ಮಾಡಿ ವಾಪಸ್ ಪಡೆಯುವವರು, ಅಥವಾ ಮಂಗಳಸೂತ್ರವನ್ನಾದರೂ ಮಾರಿ ನನ್ನ ದುಡ್ಡನ್ನು ನನಗೆ ಕೊಡು ಅಂತ ಕೇಳುವವರು,ಯಜ್ಞ ದ್ರವ್ಯಗಳನ್ನು ಹಾಳು ಮಾಡುವವರು, ಪುರಾಣ, ಉಪನ್ಯಾಸಗಳು ನಡೆಯುತ್ತಿರುವ ಜಾಗದಲ್ಲಿ ಹೋಗಿ ವಿಘ್ನಗಳನ್ನು ಉಂಟು ಮಾಡುವವರು, ಮತ್ತೊಬ್ಬರ ಭೂಮಿಯನ್ನು ನಾಶ ಮಾಡುವವರು, ನಮ್ಮದಲ್ಲದ ಭೂಮಿಯಲ್ಲಿ ಬೀಜವನ್ನು ಬಿತ್ತುವವರು,  ಮತ್ತೊಬ್ಬರ ಆಸ್ತಿಯನ್ನು ಕಿತ್ತಿಕೊಳ್ಳುವವರು, ಬ್ರಾಹ್ಮಣರಾದವರು ತುಪ್ಪ,  ಎಣ್ಣೆ, ಹಾಲು,ಬೆಲ್ಲ ಇಂಥವುಗಳ ವ್ಯಾಪಾರಗಳನ್ನು ಮಾಡ್ತಾರೆಯೋ ,  ಬ್ರಾಹ್ಮಣರಾದರೂ ಸಹ ಶೂದ್ರ ಸ್ತ್ರೀಯರ, ವೇಶ್ಯಾ ಸ್ತ್ರೇಯರ,  ಹೆಂಡತಿಯಲ್ಲದ, ಮತ್ತೆ  ಕನ್ಯೆಯರ, ದಾಸಿಯರ, ಯಾರು ಸಂಗಮಾಡ್ತಾರೋ ಅಂಥಹವರು, ಯಾರು ವೇದೋಕ್ತ ಯಜ್ಞಗಳ ಸಲುವಾಗಿ ಅಲ್ಲದೇ ತಮ್ಮ ಸ್ವಂತ ಉಪಯೋಗಕ್ಕಾಗಿ ಪಶುಗಳಿಗೆ ಹಿಂಸೆ ಕೊಡ್ತಾರೆಯೋ, ಯಾರು ಸಂಧ್ಯಾವಂದನೆ, ದೇವತಾರ್ಚನೆ ಮಾಡದಿರುವವರು, ಮಾಂಸಭಕ್ಷಣ ಮಾಡುವ ಬ್ರಾಹ್ಮಣರು, ಮತ್ತೆ ಏಕಾದಶಿ ಇತ್ಯಾದಿ ವ್ರತ ನಿಯಮಗಳನ್ನು ಕೈಲಾದಷ್ಟಾದರೂ ಮಾಡದೆ , ಅವರ ಮನಸ್ಸಿಗೆ ತಕ್ಕಂತೆ ಮಾಡ್ತಾರೆಯೋ, ಶೂದ್ರರಾಗಿಯೂ ವೇದ ಪಠಣ ಮಾಡುವವರು, ಕಪಿಲ ಆಕಳ ಹಾಲನ್ನು ಯಾರು ಸೇವನೆ ಮಾಡ್ತಾರೋ, ಶೂದ್ರರಾಗಿಯೂ ಯಜ್ಞೋಪವೀತವನ್ನು ಧಾರಣೆ ಮಾಡುವವರು, ಯಾರೇ ಶೂದ್ರರು ಬ್ರಾಹ್ಮಣ ಸ್ತ್ರೀಯರ ಸಂಗಮಾಡ್ತಾರೋ, ಯಾರಾದರೆ ರಾಜರ ಪತ್ನಿಯರನ್ನು ಇಚ್ಛಿಸ್ತಾರೋ, ಯಾರು ಪರಸ್ತ್ರೀಯ ಗಮನ ಮಾಡ್ತಾರೋ, ಯಾರು ಪತಿವ್ರತಾ ಸ್ತ್ರೀಯರನ್ನು ದೂಷಣೆ ಮಾಡ್ತಿದ್ದಾರೋ, ಬಲಾತ್ಕಾರ ಮಾಡುವವರು, ಶಾಸ್ತ್ರ ವಿರುದ್ಧವಾದ ಕರ್ಮಗಳನ್ನು ಮಾಡುವವರು,  ಶಾಸ್ತ್ರೋಕ್ತ ಕರ್ಮಗಳನ್ನು ತ್ಯಾಗ ಮಾಡಿದವರು, ಇವರೆಲ್ಲರೂ ಸಹ  ಮತ್ತೆ ಮತ್ತೆ ಆ ವೈತರಿಣಿ ನದಿಯಲ್ಲಿ ಬಿದ್ದು ಬಿದ್ದು ಯಾತನೆಯನ್ನು, ಕ್ಲೇಶಗಳನ್ನು ಅನುಭವಿಸಿ, ಯಮಲೋಕದಿಂದ, ಶಾಲ್ಮಲಿ ವೃಕ್ಷದ ನಂತರ, ನರಕಲೋಕಗಳನ್ನು ಸೇರಿ ಮಹಾ ನರಕಗಳು ಅನುಭವಿಸುವರೇ ಆಗಿದ್ದಾರೆ. 

ಇವು ಮುಖ್ಯವಾದ ಪಾಪಗಳು ಮಾತ್ರ, ಇನ್ನೂ ಎಷ್ಟು ರೀತಿಯ ಪಾಪಗಳು ಇವೆಯೋ ಬರಿಯುತ್ತಾ ಹೋದರೆ ಸಮಯವೂ ಸಾಲುವುದಿಲ್ಲ. ಇವರೆಲ್ಲ ಈ ನರಕಗಳು ಅನುಭವಿಸಿ, ಅನುಭವಿಸಿ ನಂತರ ತಿರ್ಯಗ್ ಯೋನಿ ಅರ್ಥಾತ್ ಚಾಂಡಾಲ ಯೋನಿಯಲ್ಲಿ  ಹುಟ್ಟಿ ಬರ್ತಾರೆ. 

ಮತ್ತೆ 84 ಲಕ್ಷ ನರಕಗಳು ಇದ್ದವೆ ಸರಿ. ಆದರೆ ಅವುಗಳಲ್ಲಿ ಸಹ ಮಹಾನರಕಗಳು ಅಂತ ಇವೆ. ಅವು ಯಾವುವು- ಯಾರ್ಯಾರಿಗೆ ಅಂತಹ ನರಕವಾಸ ಅಂದರೆ-

 ತಾಮಿಸ್ರೋಂಧತಾಮಿಸ್ರೋ ರೌರವೋ ಮಹಾರೌರವಃ ಕುಂಭೀಪಾಕಃ ಕಾಲಸೂತ್ರಮಸಿಪತ್ರವನಂ ಸೂಕರಮುಖಮಂಧಕೂಪಃ ಕ್ರಿಮಿಭೋಜನಃ ಸಂದಂಶಸ್ತಪ್ತ ಸೂರ್ಮಿ ವಜ್ರಕಂಟಕ ಶಾಲ್ಮಲೀ ವೈತರಿಣೀ ಪೂಯೋದಃ ಪ್ರಾಣರೂಧೋ ವಿಶಸನಂ ಲಾಲಾಭಕ್ಷಃ ಸಾರಮೇಯಾದನಮವೀಚಿರಯೋರೇತಃ ಪಾನಮಿತಿ, ಕಿಂಚ - ಕ್ಷಾರಕರ್ದಮೋರಕ್ಷೋಗಣ ಭೋಜನಃ ಶೂಲಪ್ರೋತೋ ದಂದಶೂಕೋSವಟನಿರೋಧನೋSಪರ್ಯಾವರ್ತನಃ ಸೂಚೀಮುಖಮಿತ್ಯಷ್ಟಾವಿಂಶತಿರ್ನರಕಾ ವಿವಿಧಯಾತನಾಭೂಮಯಃ ಪಾಪಕರ್ಮಿಣಾಂ//

ಇಷ್ಟು ನರಕಗಳು ಇದ್ದವೆ.. ವಿವರಕ್ಕೆ ಹೋದರೆ --

1. ತಾಮಿಸ್ರ - ಕಂಡವರ ಹೆಂಡತಿ ಮಕ್ಕಳನ್ನು ಅಪಹಾರ ಮಾಡುವನನ್ನು, ಅತಿ ಭಯಂಕರ ರೂಪದವರಾದ ಯಮದೂತರು ಕಾಲಪಾಶದಿಂದ ಗಟ್ಯಾಗಿ ಬಿಗಿದುಹಾಕಿ, ಸದಾ ಕತ್ತಲೆಯಿಂದ ತುಂಬಿದಂತಹ  ಈ ತಾಮಿಸ್ರದಲ್ಲಿ ಬಲವಂತವಾಗಿ ಹಾಕ್ತಾರೆ. ಅನ್ನ, ನೀರಿಲ್ಲದೆ, ಯಮದೂತರು ದೊಣ್ಣೆಯ ಏಟುಗಳಿಗೂ, ಕೈಗುದ್ದುಗಳಿಗೂ, ಆ ಯಮದೂತರು ಗರ್ಜನೆಗಳಗೆ ಗುರಿಯಾಗಿ ವಿವಿಧ ರೀತಿಯ ಯಾತನೆಗಳನ್ನು ಆ ಜೀವ ಅನುಭವಿಸುತ್ತಾನೆ...

2. ಅಂಧತಾಮಿಸ್ರ - ಯಾವ ಪುರುಷನು, ಪತಿಯನ್ನು ಮೋಸಮಾಡಿ ಅವನ ಹೆಂಡತಿಯನ್ನು ವಶದಲ್ಲಿಟ್ಟುಕೊಂಡು ಆಕೆಯ ಸಂಗಮಾಡುವವನೋ ಆ ಪಾಪಿ ಈ ಅಂಧತಾಮಿಸ್ರವೆಂಬ ಮಹಾ ನರಕದಲ್ಲಿ ಬಿದ್ದು ನಾನಾ ಯಾತನೆಯನ್ನು ಅನುಭವಿಸುವವನು..

3. ರೌರವ - ಯಾರು ಶರೀರಾಭಿಮಾನಿದಿಂದ , ಧನಕನಕಾದಿಗಳು ತನ್ನದೆಂತಯೋ ತಿಳಿದು ತನ್ನ ಕುಟುಂಬ ತಾನು ಅನ್ನೋ ಸ್ವಾರ್ಥದಿಂದ ಇರ್ತಾನೋ ಅವನು ಈ ರೌರವ ನರಕದಲ್ಲಿ ಬಿಳ್ತಾನೆ. ಆ ಪಾಪಿ ಭೂಲೋಕದಲ್ಲಿ ಪ್ರಾಣಿಗಳನ್ನು ಹೇಗೆ ಹಿಂಸಿಸಿದನೋ ಅದೇ ರೀತಿಯಿಂದ ಸರ್ಪಗಳಿಗಿಂತ ಅತೀ ಕ್ರೂರವಾದ ರುರುಗಳೆಂಬ ಘಾತುಕ ಪ್ರಾಣಿಗಳು ಆ ಜೀವನನ್ನು ಹಿಂಸಿಸುವವು..

4.ಮಹಾರೌರವ - ಯಾರು ಪ್ರಾಣಿ ಹಿಂಸೆಯಿಂದ ಜೀವನವನ್ನು ನಡೆಸುವನೋ ಅವನಿಗೆ ಈ ಮಹಾರೌರವದಲ್ಲಿ ಬಿದ್ದು ಮಾಂಸಭಕ್ಷಕರಾದ ಅದೇ ರುರುಗಳೆಂಬ ಕ್ರೂರ ಜಂತುಗಳಿಂದ ಕೀಳಿಸಿಕೊಳ್ತಾ ಮಹಾ ಯಾತನೆಗಳನ್ನು ಅನುಭವಿಸುತ್ತಾನೆ.

5.ಕುಂಭೀಪಾಕ - ಯಾರು ತನ್ನ ಆಹಾರದ ಸಲುವಾಗಿ ಜೀವಂತವಿರುವ ಪಶು ಪಕ್ಷಿಗಳನ್ನು ನಿರ್ದಯನಾಗಿ ಎಣ್ಣೆಯಲ್ಲಿ ಕರೆದು ತಿನ್ನುವನೋ ಅವನು ಈ ಕುಂಭೀಪಾಕದಲ್ಲಿ ಕಾಯ್ಸಿದ ಎಣ್ಣೆಯಿಂದ ತುಂಬಿರುವ ಬಾಣಲೆಯಲ್ಲಿ ಬಿದ್ದು ಬೇಯುವಂತಾಗುವನು.

6. ಕಾಲಸೂತ್ರ- ಯಾವ ಮನುಷ್ಯ  ತಂದೆತಾಯಿಯರಿಗೂ, ಬ್ರಾಹ್ಮಣರಿಗೂ, ಜ್ಞಾನಿಗಳಿಗೂ ದ್ರೋಹ ಮಾಡುವನೋ ಅವನನ್ನು ಹತ್ತು ಸಾವಿರ ಗಾವುದ ವಿಸ್ತಾರ ಇದ್ದಂತಹ ಈ ಕಾಲಸೂತ್ರ ಎನ್ನುವ ನರಕದಲ್ಲಿ ಸೂರ್ಯನ ಕಿರಣದಂತಿರುವ ಅಗ್ನಿಯ ಜ್ವಾಲಗಳಿಂದ ಕೆಳಗೆ ಮೇಲೆ ಸುಡ್ತಿರುವ ತಾಮ್ರದ ಕಾವಲಿಯಲ್ಲಿ ಕೂಡಿಸುವರು. ಅಲ್ಲಿ ಹಸಿವೆ, ಬಾಯಾರಿಕೆಯಿಂದ ಮೆಲೆ, ಕೆಳಗೆ ಸುಡುವ ಮೂಲಕ, ಅತ್ಯಂತ ಯಾತನೆಯನ್ನು ಅನುಭವಿಸುತ್ತಾ, ಆಕಳಿಗೆ ಎಷ್ಟು ರೋಮಗಳಿರುತ್ತವೆಯೋ ಅಷ್ಟು ವರ್ಷಗಳ ಕಾಲ ಆ ನರಕಯಾತನೆಯನ್ನು ಅನುಭವಿಸುವವನು..

ನೋಡಿ ಎಷ್ಟು ರೀತಿಯ ಪಾಪಗಳು,  ಎಷ್ಟು ರೀತಿಯ ಶಿಕ್ಷೆಗಳು ಪರಮಾತ್ಮನ ನ್ಯಾಯಾಲಯದಲ್ಲಿ ಎಲ್ಲರೂ ಸಮಾನರೇ ಎನ್ನುವ ವಿಷಯ ಈ ಗರುಣಪುರಾಣ ಎಷ್ಟು ಅದ್ಭುತವಾಗಿ ತಿಳಿಸಿ ಹೇಳುತ್ತದೆ.. ಭಯ ಪಡೋದಕ್ಕಿಂದ , ಎಚ್ಚರಿಕೆಯಿಂದ ಇದ್ದು ಧರ್ಮಬದ್ಧರಾಗಿರುವಂತೆ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹನಲ್ಲಿ ಸದಾ ಸದಾ ಕ್ಷಣಕ್ಷಣಕ್ಕೂ ಪ್ರಾರ್ಥನೆ ಮಾಡುತ್ತಾ......

ಗರುಡಪುರಾಣದ ಈ ಶಿಕ್ಷೆಗಳ ಪಟ್ಟಿಯನ್ನು ಶ್ರೀಮತ್ಪುರಂದರದಾಸಾರ್ಯರು ತಮ್ಮ ಅದ್ಭುತವಾದ ಕೃತಿಯಲ್ಲಿ ಅಡಗಿಸಿ ಎಚ್ಚರಿಸಿದ್ದನ್ನು ನೋಡೋಣ..

ಯಮನ ಶಾಶನ ಕೇಳೋ ಜೀವ ಎನ್ನುವ ಶ್ರೀಮತ್ಪುರಂದರದಾಸಾರ್ಯರ ಈ ಕೃತಿ 

ನನ್ನ ಧ್ವನಿಯಲ್ಲಿ


👇🏽👇🏽👇🏽👇🏽
-Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***

ಪಕ್ಷಮಾಸದ ಚಿಂತನೆ

          ಭಾಗ - 14

ಮಿಕ್ಕ ಮುಖ್ಯವಾದನರಕಗಳು

ನಿನ್ನೆಯ ಭಾಗದಲ್ಲಿ ಮಹಾನರಕಗಳ ಕುರಿತು  ಸ್ವಲ್ಪ ಮಾತ್ರ ತಿಳಿದಿದ್ದೆವು. ಇವತ್ತು ಸಂಕ್ಷಿಪ್ತವಾಗಿ ನೋಡೋಣ.

7.-ಅಸಿಪತ್ರವನ - ಸ್ವಧರ್ಮವನ್ನು ಬಿಟ್ಟವನು ಈ ನರಕಲೋಕಕ್ಕೆ ಬರುವನು. 

8.ಸೂಕರಮುಖ - ತಪ್ಪಿಲ್ಲದವನನ್ನು ದಂಡಿಸುವವರು, ಬ್ರಾಹ್ಮಣರಿಗೆ ದೇಹದಂಡವನ್ನು ನೀಡುವವರು ಬರುವ ಲೋಕ.

9. ಅಂಧಕೂಪ-  ಪರಮಾತ್ಮನ ಕಲ್ಪಿತವಾದ , ರಕ್ತಪಾನವನ್ನೇ ಜೀವನವನ್ನಾಗಿ ಮಾಡಿಕೊಂಡಂತಹ ಸೊಳ್ಳೆ, ಹೇನು,ನೊಣ,ತಿಗಣೆ ಇತ್ಯಾದಿ ಪ್ರಾಣಿಗಳನ್ನು ಬಾಧಿಸುವವನು ಬರುವ ಲೋಕ.

10. ಕ್ರಿಮಿಭೋಜನ- ಅತಿಥಿಗಳಿಗೆ ಭೋಗದಾನಾದಿಗಳನ್ನು ನೀಡದ ಮನುಷ್ಯ ಲಕ್ಷ ಯೋಜನೆ ವಿಸ್ತಾರವಾದ ಈ ಕ್ರಿಮಿ ಕುಂಡದಲ್ಲಿ ಹುಳದಂತೆ ಲಕ್ಷ ವರ್ಷಗಳ ಪರ್ಯಂತ ಹೊರಳಾಡುತ್ತಿರ್ತಾನೆ.

11. ಸಂದಂಶ - ಬ್ರಾಹ್ಮಣರ ಧನ ಕನಕ ವಸ್ತುಗಳ ಅಪಹಾರ ಮಾಡುವವನು ಈ ನರಕದಲ್ಲಿ ಕೆಂಪಗೆ ಕಾದಂತಹ ಕಬ್ಬಿಣದ ಸಂದಂಶಗಳಿಂದ ಚುಚ್ಚಲ್ಪಡುತ್ತಾನೆ.

12. ತಪ್ತಸೂರ್ಮಿ-  ಯಾವ ಮನುಷ್ಯ ವಾವಿವರಸೆ ಬಿಟ್ಟು ರಮಿಸುತ್ತಾರೆಯೋ ಅಂಥಹವರು ಈ ನರಕಲೋಕಕ್ಕೆ ಬಂದಾಗ ಯಮದೂತರು ಒಂದು ಧಗಧಗ ಉರಿಯುತ್ತಿರುವ ಲೋಹಮಯವಾದ ಸೂರ್ಮಿ ಎನ್ನುವ ಲೋಹದ 
ಬೊಂಬೆಯ ಜೊತೆ ಅಂದರೆ   ಗಂಡಸನ್ನು ಹೆಣ್ಣು ಗೊಂಬೆಯ ಜೊತೆ, ಅಥವಾ ಹೆಣ್ಣನ್ನು ಗಂಡು ಬೊಂಬೆಯ ಜೊತೆ ಆಲಿಂಗನ ಮಾಡಿಸುತ್ತಾರೆ.

13. ವಜ್ರಕಂಟಕ ಶಾಲ್ಮಲಿ - ಕಾಮಿಯಾದ ಮನುಷ್ಯ ಈ ನರಕಲೋಕದಲ್ಲಿ ಬಿದ್ದು ಶಾಲ್ಮಲಿ ವೃಕ್ಷದ ವಿಷಯದಲ್ಲಿ ತಿಳಿದ ಯಾತನೆಗಳನ್ನು ಅನುಭವಿಸುತ್ತಾರೆ.

14. ವೈತರಿಣಿ-  ಅವರವರ ಧರ್ಮಗಳನ್ನು ಬಿಟ್ಟವರು ವೈತರಿಣಿಯಲ್ಲಿ ಬಿದ್ದು ಒದ್ದಾಡುತ್ತಾರೆ.

15. ಪೂಯೋಧ-  ನೀಚ ಸ್ತ್ರೀಯರಲ್ಲಿ, ನೀಚ ಪುರುಷರಲ್ಲಿ ರಮಿಸಿದವರು ಬರುವ ನರಕ.

16. ಪ್ರಾಣರೋಧ-  ಬ್ರಾಹ್ಮಣನಾಗಿ ಹುಟ್ಟಿ ನಾಯಿ, ಕತ್ತೆ ಮೊದಲದವುಗಳನ್ನು ಸಾಕುವವರು ಬಿಳುವ ನರಕ.

17. ವಿಶಸನ-  ಯಜ್ಞಾದಿಗಳಲ್ಲಿ ಪಶುಹಿಂಸೆ ಮಾಡುವವನಿಗೆ ಈ ನರಕ .

18. ಲಾಲಾಭಕ್ಷ-  ಯಾವ ಮನುಷ್ಯನು ಕಾಮವಶನಾಗಿ ಪತ್ನಿಗೆ ರೇತಸ್ಸನ್ನು ಪಾನಮಾಡಿಸುವನೋ ಅವನು ರೇತಸ್ಸಿನಿಂದ ತುಂಬಿದ ಈ ನರಕದಲ್ಲಿ ಬೀಳುವನು.

19. ಸಾರಮೇಯಾದನ - ರಾಜ ಮೊದಲಾದ ಅಧಿಕಾರಿಗಳು ಜನರನ್ನು ಪ್ರಜೆಯರನ್ನು ಹಿಂಸಿಸಿದಾಗ ಈ ನರಕಲೋಕಕ್ಕೆ ಬಿದ್ದು 720 ಸೀಳು ನಾಯಿಗಳಿಂದ ಕಿತ್ತು ತಿನ್ನುವನಾಗ್ತಾರೆ.

20. ಅವೀಚಿರಯ -  ದಾನ, ವ್ಯಾಪಾರ ಇತ್ಯಾದಿಗಳು ಮಾಡುವಾಗ ಮಧ್ಯವರ್ತಿಯಾಗಿ, ಸಾಕ್ಷಿಯಾಗಿ ಬಂದು ಸುಳ್ಳು ಹೇಳುವವನು ಬಿಳುವ ನರಕ.

21 ರೇತಃಪಾನ-  ಬ್ರಾಹ್ಮಣನು ಅಥವಾ ನೇಮವಂತನು ಸುರಾಪಾನ ಮಾಡಿದಾಗ ಬರುವ ನರಕ.

22. ಕ್ಷಾರಕರ್ದಮ -  ನೀಚ ಜಾತಿಯಲ್ಲಿ ಹುಟ್ಟಿ ವೇದಾದಿಗಳಲ್ಲಿ ಆಸಕ್ತಿ ಇರುವ ಅಹಂಕಾರಿ ಬರುವ ನರಕ.

23. ರಕ್ಷೋಗಣ ಭೋಜನ-  ಭೈರವ, ಮಾರಿಕಾದಿ ದೇವತೆಗಳನ್ನು ಆರಾಧಿಸಿ, ನರಬಲಿ ಮಾಡುವವನೋ ಅವನು ಅದೇ ಪ್ರಾಣಿ ಅಥವಾ ನರನು ಇವನನ್ನು  ಸೀಳಿಸಿಕೊಂಡು ರಕ್ತವನ್ನು ಕುಡಿಯುತ್ತಾರೆ.

24 ಶೂಲಪ್ರೋತ-  ನಿರಪರಾಧಿಗಳಾದವರನ್ನು ವಶಪಡಿಸಿಕೊಂಡು ಹಿಂಸಿಸುವನೋ ಅವನು ಬರುವ ನರಕ.

25.ದಂದಶೂಕ -  ಸರ್ಪದಂತೆ ವಿಷ ಮನಸ್ಸಿದ್ದು ಜನರಿಗೆ ಹಿಂಸೆ ನೀಡುವವನು ಬರುವ ನರಕ.

26. ಅವಟನಿರೋಧನ - ವಿನೋದಕ್ಕಾಗಿ ಮಕ್ಕಳಿಗೆ,  ಮುದುಕರಿಗೆ ಹಿಂಸೆ ನೀಡುವವನು ಬಿಳುವ ನರಕ. 

27. ಅಪರ್ಯಾವರ್ತನ - ಆತಿಥ್ಯಕ್ಕೆ ಬಂದವರ ಜೊತೆ ಕೋಪದಿಂದ ವರ್ತನೆ ಮಾಡುವವನು ಈ ನರಕದಲ್ಲಿ ಬಿದ್ದು ರಣ ಹಕ್ಕಿಗಳಿಂದ ತಿನಲ್ಪಡುವನು.

28. ಸೂಚೀಮುಖ- ಧನದಿಂದ ಗರ್ವ ಪಡುತ್ತ ನಾನೇ ಶ್ರೇಷ್ಠ ಎಂದು ಬೀರುವವನು , ಗುರುಹಿರಿಯರ ಧನ ಅಪಹಾರ ಮಾಡುವವನು, ಹಣದ ಚಿಂತೆಯಲ್ಲೇ ಒದ್ದಾಡುವವನು ಬರುವ ನರಕ. ಇಲ್ಲಿ ಯಮದೂತರು ಇವನ ದೇಹ ಪೂರ್ತಿ ನೇಯುವವನು ಸೂಜಿಯಿಂದ ದಾರವನ್ನು ಪೋಣಿಸಿ ಹೊಲಿಯುವಂತೆ ಚುಚ್ಚಿ ದಾರಗಳನ್ನು ಪೋಣಿಸಿ ಹೊಲಿಯುವರು.

ಹೀಗೆ ಮಹಾ ನರಕಗಳು ಸೇರಿಸಿ ನರಕಗಳು  84 ಲಕ್ಷ ಇದ್ದವೆ. ಧರ್ಮಿಷ್ಠರಾದ ಜನರು ಹೇಗೆ ಸ್ವರ್ಗವನ್ನು ಪಡೆಯುತ್ತಾರೋ ಹಾಗೆ ಪಾಪಿಗಳು ಈ ನರಕದಲ್ಲಿ ಬಿದ್ದು ಯಾತನೆಗಳನ್ನು ವರ್ಷಾಂತರಗಳು ಅನುಭವಿಸುವರು.

ಆನೆ ಹೇಗೆ ನೀರಿನಲ್ಲಿ ಮುಳುಗಿ ಮತ್ತೆ ಬಂದು ತಲೆಯ ಮೇಲೆ ಮಣ್ಣನ್ನು ಹಾಕಿಕೊಳ್ಳುವ ಹಾಗೆ. ಪ್ರಾಯಶ್ಚಿತ್ತವನ್ನು ಮಾಡಿಕೊಂಡರೂ ಮತ್ತೆ ಹೊಸ ಪಾಪಗಳನ್ನು ಮಾಡದೆ ನಿರ್ಮಲವಾದ, ನಿಶ್ಚಲವಾದ ಭಕ್ತಿಯಿಂದ ಪರಮಾತ್ಮನನ್ನು ಸದಾ ಸದಾ ಮನೋ ಫಲಕದಲ್ಲಿ ನಿಲ್ಲಿಸಿ ಆತನು ನೀಡಿದ ಇಂದ್ರಿಯಗಳನ್ನು ಆತನ ಸೇವೆಗಾಗಿಯೇ ಉಪಯೋಗಿಸುವ ಮೂಲಕ ಉತ್ತಮವಾದ ಧರ್ಮ ಕಾರ್ಯಗಳನ್ನು ಮಾಡುತ್ತ, ಸ್ವಚ್ಛ ಮನಸ್ಕರಾಗಲು ಕ್ಷಣಕ್ಷಣಕ್ಕೂ ಪ್ರಯತ್ನ ಮಾಡುತ್ತಲೆ ಇರಬೇಕು..

ಏಸು ಕಾಯಂಗಳ ಕಳೆದು 84 ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ ಎಂದು ಶ್ರೀ ಕನಕದಾಸಾರ್ಯರು ಡಂಗುರವ ಹೊಯ್ಸಿದಂತೆ ಈ ದೇಹ ತನ್ನದಲ್ಲ.. ತನ್ನದಲ್ಲದ ದೇಹದಲ್ಲಿ ತಾನೇ ಅತಿಥಿಯಾಗಿ ಬಂದು ಏನೂ ಉತ್ತಮ ಕಾರ್ಯಗಳ ಮಾಡದೆ ಪಾಪವನ್ನು ಸಂಪಾದನೆ ಮಾಡಿಕೊಂಡಲ್ಲಿ ಪರಮಾತ್ಮ ಮೆಚ್ಚುವುದೇ ಇಲ್ಲ..

ಹಾಗೆಯೇ ಮಕ್ಕಳು-  ತಾಯಿ ತಂದೆ ಇರುವವರಿಗೂ ಅವರಲ್ಲಿ ಶ್ರದ್ಧಾ ಭಕ್ತಿ ಗೌರವಗಳೊಂದಿಗೆ ನಡೆದುಕೊಳ್ಳುವುದು, ಹೋದ ನಂತರ ಅವರ ಕುರಿತಾಗಿ ಭಕ್ತಿಶ್ರದ್ಧೆಗಳಿಂದ ಪಿಂಡದಾನಾದಿ ಕರ್ಮಗಳನ್ನು ಅಹಂಕಾರ ಮಮಕಾರಾದಿಗಳ ರಹಿತರಾಗಿ, ಆದರಪೂರ್ವಕವಾಗಿ ಮಾಡುವುದರಿಂದ ಇವೆಲ್ಲಾ ನರಕಗಳ ಪ್ರಾಪ್ತಿ ಸರ್ವಥಾ ಅಗುವುದಿಲ್ಲ. ಅಂತಹಾ ಜೀವಿಗಳಿಗೆ ಸದ್ಗತಿಯಾಗಿ ಪರಮಾತ್ಮನ ಅಪಾರವಾದ ಕಾರುಣ್ಯದಿಂದ ಒಳ್ಳೆಯ ಜನ್ಮಗಳು ಲಭಿಸಿ ಸಾಧನೆಯ ಮಾರ್ಗದಲ್ಲಿ ಸಾಗುವಂತೆ ಶ್ರೀಜನಾರ್ದನ ರೂಪಿಯಾದ ನಾನು ಅನುಗ್ರಹಿಸುತ್ತೇನೆ ಎಂದು ಸ್ವತಃ ಶ್ರೀಹರಿಯೇ ಗರುಡನನ್ನು ಕುರಿತು ಲೋಕಕಲ್ಯಾಣಕ್ಕಾಗಿ ತಿಳಿಸಿದ್ದಾನೆ... ಹೀಗಾಗಿ ಪಿತೃಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು...

ಹೀಗಾಗಿ ಸದಾ ಎಚ್ಚರವಾಗಿದ್ದು ಸಾಧನೆಯ ಉತ್ತಮ ಮಾರ್ಗದಲ್ಲಿ ಗುರು ಪ್ರಸಾದೋ ಬಲವಾನ್  ಎಂಬಂತೆ ಗುರುಮುಖೇನಾ ತತ್ವಗಳನ್ನು ತಿಳಿಯುತ್ತಾ, ಸರಿಯಾದ ರೀತಿಯಲ್ಲಿ ಪಿತೃಕಾರ್ಯಗಳನ್ನು ಮಾಡುತ್ತಾ ಪಿತೃಗಳಿಗೆ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹಾಭಿನ್ನ ಷಣ್ಣವತೀ ನಾಮಕ ಪರಮಾತ್ಮನ ಅನುಗ್ರಹ ಪಡೆಯೋಣ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.. 

ಹೇಗೆ ಈ ಜಿವವನ್ನು ನೀನು ಹುಟ್ಟಿಸಿದಿ,  ಹೇಗೆ ತಾಯಿಯ ಗರ್ಭದಲ್ಲಿದ್ದು ನೋವನ್ನನುಭವಿಸಿ ಬಂದಿರುವೆ, ಎಷ್ಟು ಕಷ್ಟದ ಈ ಜೀವನ , ಮಾಯೆಯಿಂದ ಆವೃತವಾದಂತಹಾ ಈ ಜೀವವನ್ನು ನೀನೇ ಕಾಯಬೇಕು ಲಕ್ಷ್ಮೀಯರಸನೆ, 
ಮತ್ತೆ ಮತ್ತೆ ಪುಟ್ಟಿಸಬೇಡಪ್ಪಾ ಎಂದು ನಾವೆಲ್ಲರೂ ಪರಮಾತ್ಮನನ್ನು ಬೇಡಿಕೊಳ್ಳುವ ಕ್ರಮವನ್ನು ತಿಳಿಸಿಕೊಟ್ಟ ಶ್ರೀಮತ್ಪುರಂದರದಾಸಾರ್ಯರ ಮತ್ತೊಂದು ಅದ್ಭುತವಾದ ಕೃತಿ..

ನನ್ನ ಧ್ವನಿಯಲ್ಲಿ...

ಹೀಗಾಗಿ ಸದಾ ಎಚ್ಚರವಾಗಿದ್ದು ಸಾಧನೆಯ ಉತ್ತಮ ಮಾರ್ಗದಲ್ಲಿ ಗುರು ಪ್ರಸಾದೋ ಬಲವಾನ್  ಎಂಬಂತೆ ಗುರುಮುಖೇನಾ ತತ್ವಗಳನ್ನು ತಿಳಿಯುತ್ತಾ, ಸರಿಯಾದ ರೀತಿಯಲ್ಲಿ ಪಿತೃಕಾರ್ಯಗಳನ್ನು ಮಾಡುತ್ತಾ ಪಿತೃಗಳಿಗೆ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹಾಭಿನ್ನ ಷಣ್ಣವತೀ ನಾಮಕ ಪರಮಾತ್ಮನ ಅನುಗ್ರಹ ಪಡೆಯೋಣ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..  ಈ ಲೇಖನವನ್ನು ಓದಿ ಆಶೀರ್ವದಿಸಿದ ಪ್ರತಿಯೊಬ್ಬರಿಗೂ ಶಿರಬಾಗಿ ನಮಸ್ಕಾರಗಳು ಸಲ್ಲಿಸುತ್ತಾ..

ಅಸ್ಮದ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರುಕ್ಮಿಣೀ ಸತ್ಯಭಾಮಾ ಸಮೇತ ಶ್ರೀ ಕೃಷ್ಣ ಪರಮಾತ್ಮನಲ್ಲಿ ಸಮರ್ಪಣೆ ಮಾಡುತ್ತಾ...

ಕರ್ಮದ ಮರ್ಮವನ್ನು ತಿಳಿದುಕೊಳ್ಳಲಾರದೇ ಮಾಡುವದು ವ್ಯರ್ಥ ಪ್ರಯತ್ನ ಎನ್ನುವ ವಿಷಯವನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ತಿಳಿಸಿದ ಶ್ರೀಮತ್ಪುರಂದರದಾಸಾರ್ಯರ ಕೃತಿಯನ್ನು ಸಹ ಆಲಿಸೋಣ 

-Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***


*
🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌    ‌                ‌                                  ‌                                                                     
ಅವಿಧವಾ ನವಮೀ ಶ್ರಾದ್ಧ: ಇದರ ಮಹತ್ವ ಹಾಗೂ ವಿಶೇಷತೆಗಳೇನು? 
 ‌                                                                                                                        ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮೀ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ.
    
ತಾಯಿತಂದೆ, ಪೂರ್ವಜರ ಹಾಗೂ ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರವಾಗಿರಲಿ ಹಾಗೂ ಅವರಿಗೆ ಸದ್ಗತಿಯು ಸಿಗಲೀ ಎಂದು ಮಾಡುವ ಸಂಸ್ಕಾರಕ್ಕೆ ಶ್ರಾದ್ಧ ಎನ್ನುತ್ತಾರೆ. ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಛಾರಗಳಲ್ಲಿ ಪಿತೃಗಳಿಗೆ ಗತಿ ನೀಡುವ ಸೂಕ್ಷ್ಮಶಕ್ತಿ ಇದ್ದು, ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ.

ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ ಹಾಗೂ ಈ ಪಕ್ಷದ ಅಮಾವಾಸ್ಯೆಯನ್ನು 'ಮಹಾಲಯ ಅಮಾವಾಸ್ಯೆ' ಎಂದೂ ಕರೆಯುತ್ತಾರೆ. ಈ ಪಕ್ಷದಲ್ಲಿ ಆಚರಿಸುವಂತಹ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಪಿತೃಪಕ್ಷಕ್ಕೆ ಬಹಳ ಮಹತ್ವವನ್ನು ನೀಡಲಾಗುತ್ತದೆ.

ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮೀ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಗಳಲ್ಲಿ ಅವಿಧವಾ ನವಮೀ ಶ್ರಾದ್ಧವನ್ನು ಭಾದ್ರಪದ ಕೃಷ್ಣಪಕ್ಷದ ನವಮಿಯಂದು ಮಾಡಿದರೆ, ಉತ್ತರ ಭಾರತದ ಕಡೆ ಅಶ್ವಿನ್‌ ಕೃಷ್ಣಪಕ್ಷದಂದು ಮಾಡುತ್ತಾರೆ. 

ಅವಿಧವಾ ನವಮೀ ಶ್ರಾದ್ಧದ ಮಹತ್ವ

ಅವಿಧವಾ ಎಂದರೆ ' ವಿಧವೆಯಲ್ಲದವರು' ಅಂದರೆ 'ಸುಮಂಗಲಿ' ಎಂದರ್ಥ. ಅವಿಧವಾ ನವಮೀ ಶ್ರಾದ್ಧವನ್ನು ಸುಮಂಗಲಿಯಾಗಿ ಮರಣಿಸಿದ ಸ್ತ್ರೀಗೆ ಮಾಡಲಾಗುತ್ತದೆ. ಈ ಆಚರಣೆಯು ಮರಣಾನಂತರ ಸ್ತ್ರೀಯ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಹಾಗೂ ಮಡಿದ ಸ್ತ್ರೀಯು ತನ್ನ ವಂಶಕ್ಕೆ ಆಶೀರ್ವಾದ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಅವಿಧವಾ ನವಮೀ ಆರಾಧನೆ ಕಾಲದಲ್ಲಿ ಮಾತೃಃ, ಪಿತಾಮಹಿಃ, ಪ್ರಪಿತಾಮಹಿಃ ಅಂದರೆ ತಾಯಿ - ಅಜ್ಜಿ(ತಂದೆಯ ಅಜ್ಜಿ) ಮತ್ತು ಮುತ್ತಜ್ಜಿ(ತಂದೆಯ ಅಜ್ಜಿ) ಈ ಮೂರು ಜನ ಮಾತೆಯರಿಗೆ ನವಮಿಯಂದು ಆರಾಧನೆ ಮಾಡಲಾಗುತ್ತದೆ. 

ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ವಗಳಿಗೆ ಸಂಬಂಧಿಸಿದ ರಜೋಗುಣ ಶಿವಲಹರಿಗಳು ಅಧಿಕವಾಗಿರುತ್ತದೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಛಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ವವು ಸೂಕ್ಷ್ಮಶಿವತತ್ವದೊಂದಿಗೆ ಬೇಗನೆ ಸಂಯೋಗವಾಗುವುದರಿಂದ ಮುತ್ತೈದೆಯರ ದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.

ಈ ಶ್ರಾದ್ಧದ ಕುರಿತು ಎರಡು ವಿವಾದಗಳಿವೆ, ಮೊದಲನೆಯದಾಗಿ ಅವಿಧವಾ ನವಮಿಯ ಶ್ರಾದ್ಧದಲ್ಲಿ ಫಾತಚತುರ್ದಶಿಯ ಶ್ರಾದ್ಧದಂತೆ ಏಕೋದ್ದಿಷ್ಟ ಶ್ರಾದ್ಧವನ್ನೇ ಮಾಡಬೇಕು, ಪಾರ್ವಣವನ್ನು ಮಾಡಬಾರದು ಎನ್ನುವುದು ಒಂದಾದರೆ, ಎರಡನೆಯದಾಗಿ ಗಂಡ ಬದುಕಿರುವವರೆಗೆ ಅವಿಧವಾ ನವಮೀ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡಲು ಬರುವುದಿಲ್ಲ ಎನ್ನುವ ವಿವಾದವಿದೆ

ಏಕೋದ್ದಿಷ್ಟ: ಏಕೋದ್ದಿಷ್ಟ ಎಂದರೆ ಯಾರ ಕುರಿತು ಶ್ರಾದ್ಧವಿರುತ್ತದೆಯೋ ಅವರಿಗೆ ಮಾತ್ರ ಶ್ರಾದ್ಧ. ಕೇವಲ ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡುವುದು. ಅಂದರೆ ಮುತ್ತೈದೆಯಾಗಿ ಯಾರು ಸತ್ತಿದ್ದಾರೋ ಅವರಿಗೆ ಮಾತ್ರ ಶ್ರಾದ್ಧ. ಸರಳವಾಗಿ ಹೇಳುವುದಾದರೆ ಒಂದು ಪಿಂಡವನ್ನಿಟ್ಟು ಒಬ್ಬರಿಗೆ ಮಾತ್ರ ಶ್ರಾದ್ಧ ಮಾಡುವುದು.

ಪಾರ್ವಣ ಎಂದರೆ ಸತ್ತಿರುವ ಮುತ್ತೈದೆ, ಅವರ ಅತ್ತೆ(ಅಂದರೆ ಮಗ ತಾಯಿಯ ಶ್ರಾದ್ಧ ಮಾಡುತ್ತಿದ್ದರೆ, ತಾಯಿ, ಅಜ್ಜಿ, ಮುತ್ತಜ್ಜಿ) ಈ ಮೂರೂ ಜನರಿಗೂ ಶ್ರಾದ್ಧವನ್ನು ಮಾಡಲಾಗುತ್ತದೆ. ಅಂದರೆ ಸತ್ತ ವ್ಯಕ್ತಿಯ ತಂದೆ(ಅತ್ತೆ) ಅವರ ತಂದೆ(ಅತ್ತೆ) ಈ ಮೂರೂ ಜನರಿಗೆ ಮೂರು ಪಿಂಡಗಳನ್ನು ಸಮರ್ಪಿಸಿ ಶ್ರಾದ್ಧ ಮಾಡುವುದು ಪಾರ್ವಣ.

ಶ್ರೀ ವಾದಿರಾಜರು ಹೇಳುವ ಪ್ರಕಾರ, ಧರ್ಮಶಾಸ್ತ್ರದ ಆಚರಣೆಗಳನ್ನು ಯುಕ್ತಿಯಿಂದ ನಿರ್ಧರಿಸಬಾರದು ಎಂದು, ಆದರೆ ಅವಿಧವಾನವಮಿಯ ವಿಷಯದಲ್ಲಿ ಧರ್ಮಸಿಂಧುವಿನಲ್ಲಿಯೂ ಸಹ ಕೇವಲ ಯುಕ್ತಿಯಿಂದಲೇ ಆಚರಣೆಯನ್ನು ಸಾಧಿಸಲಾಗಿದೆ. ಈ ದಿನವೂ ಕೂಡ ಧರ್ಮಶಾಸ್ತ್ರವನ್ನು ಓದದೆಯೇ ಜನ ಕೇವಲ ಯುಕ್ತಿಯಿಂದ ಇದರ ಕುರಿತು ಮಾತನಾಡುತ್ತಾರೆ.

ಯುಕ್ತಿಯ ಪ್ರಕಾರ ಘಾತಚತುರ್ದಶಿಯಂದು ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡಬೇಕು ಎಂಬ ವಿಧಿ ಇದೆ. ಯಾರು ದುರ್ಮರಣ ಹೊಂದಿರುತ್ತಾರೆಯೋ ಅವರಿಗೆ ಮಾತ್ರ ಶ್ರಾದ್ಧ. ಹಾಗೆ ನಮ್ಮ ತಾಯಿ ಮಾತ್ರ ಮುತ್ತೈದೆಯಾಗಿ ಸಾವನ್ನು ಪಡೆದಿರಬಹುದು, ಆದರೆ ನಮ್ಮ ಅಜ್ಜಿಗೆ ಆ ರೀತಿಯಲ್ಲಿ ಸಾವು ಬಂದಿಲ್ಲದಿರಬಹುದು. ಪಾರ್ವಣವಾದರೆ ಮೂರೂ ಜನರಿಗೂ ಪಿಂಡವನ್ನಿಡಲೇಬೇಕು. ಆಗ ಅಜ್ಜಿ, ಮುತ್ತಜ್ಜಿಯರು ಮುತ್ತೈದೆಯಾಗಿ ಸಾವನ್ನು ಪಡೆಯದೇ ಇದ್ದರೆ ನಾವು ಮಾಡುವ ಶ್ರಾದ್ಧ 'ಅವಿಧವಾ'ನವಮಿ ಹೇಗಾಗುತ್ತದೆ ಎನ್ನುವುದು.

ಹಾಗಾದರೆ ತಾಯಿ, ಅಜ್ಜಿ, ಮುತ್ತಜ್ಜಿ ಮೂರು ಜನ ಮುತ್ತೈದೆ ಸಾವನ್ನು ಪಡೆದಿದ್ದರೆ ಆಗ ಅವಿಧವಾನವಮಿಯನ್ನು ಪಾರ್ವಣದ ರೀತಿಯಲ್ಲಿ ಮಾಡಬಹುದೇ ಎಂದರೆ ಅದನ್ನೂ ಅವರು ಒಪ್ಪುವುದಿಲ್ಲ, ಕಾರಣ ಅವಿಧವಾನವಮಿ ಗಂಡ ಬದುಕಿರುವರೆಗೆ ಮಾತ್ರ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡುವ ಹಾಗಿಲ್ಲ ಎಂದು. ಅಂದರೆ ತಂದೆ ಬದುಕಿದ್ದಾರೆ, ತಾಯಿ ತೀರಿಕೊಂಡಿದ್ದಾರೆ, ತಾಯಿಯ ಅವಿಧವಾ ನವಮೀ ಶ್ರಾದ್ಧವನ್ನು ಮಗ ಮಾಡುತ್ತಾನೆ. ಮುಂದೊಂದು ದಿನ ತಂದೆ ತೀರಿಹೋಗುತ್ತಾರೆ. ಆ ಬಳಿಕ ಮಗ ತಾಯಿಯ ಅವಿಧವಾ ನವಮೀಯ ಶ್ರಾದ್ಧವನ್ನು ಮಾಡುವ ಹಾಗಿಲ್ಲವೆನ್ನುವುದು ವಿವಾದ.

ಹೀಗಾಗಿ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನ ಮುತ್ತೈದೆಯರಾಗಿ ಸಾವನ್ನು ಪಡೆದಿದ್ದರೂ, ಅಜ್ಜ ಮುತ್ತಜ್ಜರು ಸತ್ತು ಹೋಗಿರುತ್ತಾರೆಯಾದುದರಿಂದ ಅವರಿಗೆ ಅವಿಧವಾನವಮಿಯ ಶ್ರಾದ್ಧವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿ ಏಕೋದ್ದಿಷ್ಟ ಅಂದರೆ ಒಂದು ಪಿಂಡವನ್ನು ಒಬ್ಬರಿಗೆ ಮಾತ್ರ ಇಟ್ಟು ಶ್ರಾದ್ಧ ಮಾಡಬೇಕು, ಪಾರ್ವಣವನ್ನಲ್ಲ ಎನ್ನುವುದು ವಿವಾದದ ಸಾರಾಂಶ.

ಅವಿಧವಾ ನವಮಿ ಎನ್ನುವುದು ಪೂರ್ಣವಾಗಿ ಮಹಾಲಯದ ಅಂಗವಲ್ಲ. ಇದನ್ನು ಮೂಲತಃ ಅನ್ವಷ್ಟಕಾ ಶ್ರಾದ್ಧ ಎನ್ನುತ್ತಾರೆ. ಅಷ್ಟಕಾ ಎಂದರೆ ಅಷ್ಟಮಿಯಂದು ಮಾಡುವ ಶ್ರಾದ್ಧ. ಅನ್ವಷ್ಟಕಾ ಶ್ರಾದ್ಧವೆಂದರೆ ನವಮಿಯಂದು ಮಾಡುವ ಶ್ರಾದ್ಧ. ಮಹಾಲಯದಲ್ಲಿ ಬರುವ ನವಮಿಯಂದು ಮಾಡುವ ಅನ್ವಷ್ಟಕಾಶ್ರಾದ್ಧಕ್ಕೆ ಅವಿಧವಾನವಮೀ ಎಂದು ಹೆಸರು.

ಅಷ್ಟಕಾಶ್ರಾದ್ಧಗಳಲ್ಲಿ ಪಾರ್ವಣದ ರೀತಿಯಲ್ಲೇ ಶ್ರಾದ್ಧ ಮಾಡುತ್ತಾರೆ. ಅನ್ವಷ್ಟಕಾಶ್ರಾದ್ಧದಲ್ಲಿ ಕೂಡ ಮೂರು ಪಿಂಡಗಳನ್ನಿಟ್ಟೇ ಶ್ರಾದ್ಧ ಮಾಡಬೇಕು. ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುಣಗಳಲ್ಲಿ ತಾಯಿಗೆ ಮುತ್ತೈದೆ ಸಾವು ಬರದಿದ್ದರೂ ಶ್ರಾದ್ಧವನ್ನು ಮಾಡಬೇಕು. ಭಾದ್ರಪದದಲ್ಲಿ ಮಾತ್ರ ತಾಯಿ ಮುತ್ತೈದೆಯಾಗಿ ಸತ್ತಿದ್ದರೆ ಆ ದಿನ ಸುವಾಸಿನಿಯರನ್ನು ಕರೆಯಿಸಿ, ಭೋಜನವನ್ನು ಮಾಡಿಸಿ, ಸೌಭಾಗ್ಯ ಪದಾರ್ಥಗಳನ್ನು ದಾನ ಮಾಡಿ ಶ್ರಾದ್ಧ ಮಾಡಬೇಕು.

ಇನ್ನೊಂದು ವಿವಾದವೆಂದರೆ, ಮುತ್ತೈದೆ ಸಾವು ಪಡೆದವರಿಗೆ ಗಂಡ ಸತ್ತ ನಂತರ ಅವಿಧವಾನವಮಿ ಇಲ್ಲ ಎನ್ನುವ ವಿವಾದ. ಜೀವದ ಸಂಬಂಧವನ್ನು ತೆಗೆದುಕೊಂಡರೆ ಜೀವಗಳಿಗೆ ಸಾವೇ ಇಲ್ಲ. ಹೀಗಾಗಿ ದೇಹದ ಮುತ್ತೈದೆ ಸಾವು ಎನ್ನುವ ಗುಣ ಆ ದೇಹದ ಶಾಶ್ವತ ಗುಣವಾಯಿತು ಎನ್ನಲಾಗುತ್ತದೆ. 

ಪ್ರಹ್ಲಾದ ಮುಂದೆ ಎಷ್ಟು ಜನ್ಮ ಎತ್ತಿದರೂ ಮುಂದೊಂದು ದಿನ ಅವನ ದೇಹ ವಿನಾಶವಾದರೂ ಅವನ ಆ ಜನ್ಮದ 'ಹಿರಣ್ಯಕಶಿಪುವಿನ ಮಗ' ಎಂಬ ಗುಣ ಹೇಗೆ ಹೋಗುವುದಿಲ್ಲವೋ ಹಾಗೆ ''ಗಂಡನಿಗಿಂತ ಮೊದಲೇ ಸತ್ತದ್ದು'' ಎಂಬ ಗುಣವೂ ಹೋಗುವುದಿಲ್ಲ. ವೈಧವ್ಯ ಎಂದರೆ ಗಂಡ ಸತ್ತ ಬಳಿಕವೂ ಬದುಕಿರುವುದು, ಅದು ಆಕೆಗೆ ಅನ್ವಯವಾಗುವುದಿಲ್ಲ. ಹೀಗಾಗಿ ಒಮ್ಮೆ ಮುತ್ತೈದೆಯಾಗಿ ಸತ್ತರೆ ಮಗ ತಾನು ಸಾಯುವವರೆಗೆ ಆಕೆ ಅವಿಧವಾನವಮೀ ಶ್ರಾದ್ಧವನ್ನು ಮಾಡಲೇಬೇಕು. ಒಂದು ಶ್ರಾದ್ಧ ನಿಲ್ಲುವುದು ಅದನ್ನು ಮಾಡುವ ಕರ್ತೃ ಸತ್ತಾಗ ಮಾತ್ರ . ಬೇರೆ ಯಾವ ಸಂದರ್ಭದಲ್ಲಿಯೂ ಸಹ ಶ್ರಾದ್ಧ ನಿಲ್ಲುವುದಿಲ್ಲ. 

ಹೀಗಾಗಿ ಯಾವ ಕಾರಣದಿಂದಲೂ ಗಂಡ ಸತ್ತ ಬಳಿಕ ಅವಿಧವಾನವಮೀ ಶ್ರಾದ್ಧವನ್ನು ನಿಲ್ಲಿಸಬೇಕೆಂಬ ನಿಯಮ ಒಪ್ಪಲು ಸಾಧ್ಯವಿಲ್ಲ. ಅದನ್ನು ಮಾಡುವ ಕರ್ತೃ ಇರುವವರೆಗೆ ಆ ಶ್ರಾದ್ಧವನ್ನು ಮಾಡಬೇಕು. ಅವಿಧವಾನವಮೀ ಅನ್ವಷ್ಟಕಾಶ್ರಾದ್ಧವಾದ್ದರಿಂದ ಆ ಶ್ರಾದ್ಧದ ದಿನ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನರಿಗೂ ಪಿಂಡವನ್ನಿಟ್ಟು ಶ್ರಾದ್ಧವನ್ನು ಮಾಡಬೇಕು. ಏಕೋದ್ದಿಷ್ಟ ಶ್ರಾದ್ಧವನ್ನು ಮಾಡಬಾರದು.

ಅವಿಧವಾನವಮಿಯ ವಿಶೇಷತೆ
ಈ ಶ್ರಾದ್ಧದಲ್ಲಿ ಮುತ್ತೈದೆಯರನ್ನು ಭೋಜನಕ್ಕೆ ಆಹ್ವಾನಿಸಬೇಕು
ಆಮಂತ್ರಿತರಾದ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಸೀರೆ, ಕುಪ್ಪಸ ಮುಂತಾದ ಸೌಭಾಗ್ಯ ಪದಾರ್ಥಗಳನ್ನು ಬಾಗಿನ ನೀಡಬೇಕು.
ಅವಿಧವಾ ನವಮೀಯಲ್ಲಿ ಪಿತೃಶ್ರಾದ್ಧಕ್ಕೆ ಸಿದ್ಧಪಡಿಸುವ ರವೆ ಉಂಡೆ ಮತ್ತು ವಡೆಗಳನ್ನು ನಿಷೇಧಿಸಲಾಗಿದೆ.
ಸಾಧ್ಯವಾದಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ವಿಷ್ಣುಭಕ್ತರಾದ ಶ್ರೇಷ್ಠಗುಣಗಳ ಮುತ್ತೈದೆಯರಿಗೆ ದಾನ ನೀಡಿ ಜನ್ಮವಿತ್ತ ತಾಯಿಗೆ ಜನ್ಮಜನ್ಮಗಳಲ್ಲಿಯೂ ಸಕಲ ಸೌಭಾಗ್ಯವಿರಲಿ ಎಂದು ಪ್ರಾರ್ಥಿಸಬೇಕು.
ಅವಿಧವಾ ನವಮಿಯನ್ನು ಹಬ್ಬವೆಂದೇ ಪರಿಗಣಿಸಲಾಗುವುದರಿಂದ ಹಬ್ಬದ ಅಡುಗೆ ಎಂದರೆ, ಬೇಸನ್‌ ಲಡ್ಡು, ಜಿಲೇಬಿ, ಹೋಳಿಗೆ, ಶ್ಯಾವಿಗೆ ಪಾಯಸ, ಮಂಡಿಗೆ ಹಾಗೂ ಬೂಂದಿ ಲಾಡು ಮಾಡಲಾಗುತ್ತದೆ.

ಅವಿಧವಾ ನವಮಿ ಶ್ರಾದ್ಧದಲ್ಲಿ ತಾಯಿಯ ಪಿಂಡಕ್ಕೆ ಅರಿಶಿನ ಕುಂಕುಮಗಳನ್ನು ಅರ್ಪಿಸುವ ಪದ್ಧತಿಯೂ ಇದೆ.
(sangraha) ‌     ‌      ‌      ‌     ‌    ‌       ‌                               ‌ 
***



***



No comments:

Post a Comment