ಇಂದು ನೀರು ತುಂಬುವ ಹಬ್ಬ ಹೌದೇ?? ಹೌದು.
ಆದರೆ ನೀರು ತುಂಬಲು
ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ
ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ.
ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ ಇಲ್ಲ.
ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ.
ಸೆಗಣಿ ಕದಡಿದ ನೀರು ಹಾಕಿ ಅಂಗಳ ಸಾರಿಸಿ ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ.
ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ ತಿರುವಿ, ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ .. ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ...
ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ
ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ ಸಾಲಾಗಿ ಕೂರಿಸಿ, ಹಣೆಗೆ ಕುಂಕುಮವಿಟ್ಟು, ಬೆಳ್ಳಿಯ ಬಟ್ಟಲಲ್ಲಿ ಎಣ್ಣೆ ತಂದು, ಹೂವಿನಿಂದ ನೆತ್ತಿಗೆ ಮೂರುಬಾರಿ ಎಣ್ಣೆ ಇಟ್ಟು, ನಂತರ ತಲೆಗೆಲ್ಲಾ ಎಣ್ಣೆ ಹಚ್ಚಿ ಟಪ ಟಪ ಬಡಿದು, ಕೈ ಕಾಲ್ಗಳಿಗೂ ಹಚ್ಚಿ ಎರಡೂ ಕೆನ್ನೆ, ಕೈ ಕಾಲ್ಗಳಿಗೂ ಎಣ್ಣೆಯ ಬೊಟ್ಟಿಟ್ಟು ಆರತಿ ಮಾಡುತ್ತಿದ್ದ... ಹಬ್ಬದ ನೀರು ಇಬ್ಬರಿಗೆ ಒಂದು ಚೊಂಬು ಎಂಬ ಗಾದೆಯಂತೆ ಶೇಖರಿಸಿಡಲು ಸಾಧ್ಯವಾಗುತ್ತಿದ್ದ ಮಿತ ಪ್ರಮಾಣದ ನೀರಿನಲ್ಲೇ ಎಲ್ಲರಿಗೂ ಸ್ವತಃ ಕೈಯಾರೆ, ಸೌದೆ ಉರಿಯಿಂದ ಕಾಯುತ್ತಿದ್ದ ಹಂಡೆಯಿಂದ ಬೋಸಿಯಲ್ಲಿ ತುಂಬಿಕೊಂಡು ನೀರು ಹಾಕುತ್ತಾ, ಒಳ್ಳೆಯ ವಿದ್ಯಾಭ್ಯಾಸ ಪಡ್ದು, ಆಯಸ್ಸು ಆರೋಗ್ಯ, ಐಶ್ವರ್ಯ ಸುಖ ಶಾಂತಿಯಿಂದ ನೂರ್ಕಾಲ ಬಾಳು ಮಗು ಎಂದು ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಿದ್ದ ಅಮ್ಮ...., *ಪೈಪೋಟಿಯ ಮೇಲೆ *ನನಗೆ ಮೊದಲು ನೀರು, ನನಗೆ ಮೊದಲು ನೀರು ಎಂದು ಜಗಳ ಕಾಯುತ್ತಿದ್ದ ನಾವು ಒಡಹುಟ್ಟಿದವರು.....
ಈಗಿನಂತೆ ೩೬೫ ದಿನವೂ ಯಾವ ಹೊತ್ತಿನಲ್ಲಿ ಬೇಕಾದರೂ ತಂದು ತಿನ್ನ ಬಹುದಾದ, ಒಬ್ಬಟ್ಟು ಆಂಬೊಡೆ ಕರಿಗಡುಬು ಚಕ್ಕುಲಿ,ಮುಚ್ಚೊರೆ ಕೋಡುಬಳೆ, ಅತ್ರಾಸ, ಎರೆಯಪ್ಪ ಇತ್ಯಾದಿ ಇತ್ಯಾದಿ ಇತ್ಯಾದಿ ...ಊಹೂಂ ....ಅಂದು ಹಬ್ಬದ ದಿನಗಳಲ್ಲಿ ಮಾತ್ರ ಮಾಡುತ್ತಿದ್ದುದರಿಂದ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲೊಂದು ವಿಶೇಷ ಭಕ್ಷ್ಯಗಳೂ ಆಗಿದ್ದವಲ್ಲವೇ??,
ಧೀಮಂತ ವ್ಯಕ್ತಿತ್ವದ ಆಜಾನುಬಾಹು ಅಪ್ಪ ತಮ್ಮ ಕಂಚಿನ ಕಂಠದಿಂದ ಮಂತ್ರಗಳನ್ನು ಹೇಳುತ್ತಿದ್ದರೆ ಒಂದು ಅಲೌಕಿಕ ವಾತಾವರಣ ಸೃಷ್ಟಿಯಾಗುತ್ತಿತ್ತು
ನಾವು ಮಕ್ಕಳು ಚಿನುಕುರುಳಿ ಚಟಚಟ ಗುಟ್ಟಿಸುತ್ತಾ ಮತಾಪು ಹಚ್ಚಿ ಹಿಗ್ಗುತ್ತಿದ್ದೆವು.
ಸಾಂಗವಾಗಿ, ಸಾವಕಾಶವಾಗಿ ಅಭಿಷೇಕ ಪೂಜೆ ನಡೆದು, ಮಾಡಿದ ಎಲ್ಲಾ ಅಡುಗೆಯ ಸ್ವಲ್ಪ ಭಾಗವನ್ನು ಅಮ್ಮ, ಕುಡಿ ಬಾಳೆ ಎಲೆಯಲ್ಲಿ ಪಾಂಗಿತವಾಗಿ ಬಡಿಸಿಟ್ಟು ತಂದರೆ, ಅಪ್ಪ ಮಂಡಲ
ಮಾಡಿ ಎಲ್ಲವನ್ನೂ ಹಣ್ಣು ಕಾಯಿ ತಾಂಬೂಲದ ಜೊತೆ ನೈವೇದ್ಯ ಮಾಡಿ....
ಚಟಪಟ ಪಟಾಕಿಯ ಆಟದಲ್ಲಿ ಮಗ್ನರಾಗಿದ್ದರೂ ಅಡುಗೆ ಮನೆಯಿಂದ ಹೊಮ್ಮುತ್ತಿದ್ದ ತರೆಹಾವರಿ ಭಕ್ಷ್ಯ ಭೋಜ್ಯಗಳ ಸುವಾಸನೆ ಮೂಗೊಡೆಯುತ್ತಿತ್ತು.....
ಮಂಗಳಾರತಿಗೆ ಬನ್ನಿ ಎಂಬ ಕರೆಗೇ ಕಾಯುತ್ತಿದ್ದ ನಾವೆಲ್ಲ ಒಳಗೆ ದುಡದುಡನೆ ಧಾವಿಸಿ ಬಂದು ..... ಅಪ್ಪನ ಉಚ್ಚ ಕಂಠದಿಂದ ಹೊಮ್ಮುತ್ತಿದ್ದ ಮಂತ್ರದೊಂದಿಗೆ ಮಂಗಳಾರತಿ ಮುಗಿದು.... ನಾವೆಲ್ಲ ಮಂಗಳಾರತಿ ತೆಗೆದುಕೊಂಡು.... ಅಪ್ಪ ದೀರ್ಘದಂಡ ನಮಸ್ಕರಿಸಿದ ಮೇಲೆ.... ನಾವು ಅಕ್ಕತಂಗಿಯರು, ಅಮ್ಮ, ತಮ್ಮನೂ ದನಿಗೂಡಿಸಿ ಒಂದಿಷ್ಟು ದೇವರ ನಾಮವನ್ನು ಹಾಡಿ.... ಅಕ್ಷತೆ ಹೂವು ಹಾಕಿ ನಮಸ್ಕರಿಸಿಯಾದ ಮೇಲೆ... ಅಪ್ಪ ಪ್ರಸಾದದ ಹೂ ಕೊಟ್ಟು ಆಶೀರ್ವದಿಸಿ.. ತೀರ್ಥ ಕೊಡುತ್ತಿದ್ದರು., ನಾವು ಕಣ್ಣಿಗೊತ್ತಿಕೊಂಡು ತೀರ್ಥ ಸೇವಿಸಿದ ತಕ್ಷಣ, ಅಮ್ಮ ಮಾಡಿಟ್ಟಿದ್ದ ಆಂಬೊಡೆಯನ್ನೊ ಬೋಂಡವನ್ನೊ ಒಂದೆರಡನ್ನು ಲಪಟಾಯಿಸಿ ಗಬಕ್ಕೆಂದು ಬಾಯಿಗೆ ಹಾಕಿಕೊಂಡರೆ..... ಆಹಾ!!!! ಆಹಾ!!!!...
ಕೋಸಂಬರಿ ಪ್ರಿಯರಾದ ನಾನು ಮತ್ತು ನನ್ನ ಅಕ್ಕ ಯಥಾಶಕ್ತಿ ಕೋಸಂಬರಿ ಸೇವೆಯನ್ನೂ ಮಾಡಿಕೊಳ್ಳುತ್ತಿದ್ದೆವು....
ಸಾಲಾಗಿ ಕುಡಿ ಬಾಳೆ ಎಲೆ ಹಾಕಿ, ಊಟದ ಚಾಪೆ ಹಾಕಿ ... ಅಭಿಗ್ಯಾರ ಮಾಡಿ... ಶಾತ್ರೊಕ್ತವಾಗಿ ಒಂದೊಂದೇ ವ್ಯಂಜನಗಳನ್ನು ಎಲೆಯ ಮೇಲೆ ಅವುಗಳ ನಿಯತ ಜಾಗದಲ್ಲೆ ಬಡಿಸಿ ಕಡೆಯಲ್ಲಿ ತೊವ್ವೆ ತುಪ್ಪ ಹಾಕಿ..... ಅಪ್ಪ ಪರಿಶಂಚನೆ ಮಾಡಿ, ಅನ್ನ ಬ್ರಹ್ಮನಿಗೆ ನಮಸ್ಕರಿಸಿ ಊಟ ಆರಂಭಿಸಿದ ನಂತರವೇ ನಮ್ಮ ಉದರಾಗ್ನಿ ಶಾಂತಿಯ, ರುಚಿ ರುಚಿ ಪಾಕದ ಸಂತೃಪ್ತ ಭೋಜನದ ರಸಮಯ ಆರಂಭ....
ಸಂಜೆ ದೀಪ ಬೆಳಗಿಸುವ ಸಂಭ್ರಮ.
ಬಲಿಪಾಡ್ಯಮಿಯ ದಿನ ಮರದ ಮಣೆಯ ಮೇಲೆ, ಸಗಣಿಯಲ್ಲಿ ಬಲೀಂದ್ರನ ಕೋಟೆಯ ವಿನ್ಯಾಸ ರಚಿಸಿ, ಚೆಂಡು ಹೂವು ಸೆಕ್ಕಿಸಿ, ಕೆರಕನನ್ನೂ ಸುತ್ತ ಯಥೇಚ್ಛವಾಗಿ ದೀಪಗಳನ್ನೂ ಇಟ್ಟು, ಬಲೀಂದ್ರನನ್ನು ಆವಾಹಿಸಿ, ಪೂಜಿಸಿ ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ ಬಲಿಚಕ್ರವರ್ತಿಯ ರಾಜ್ಯ ಮೂರು ಲೋಕದಲ್ಲೂ ಹರಡಲಿ ಎಂದು ಹೇಳಿ ನಮಸ್ಕರಿಸಿ ನಂತರ, ಬಲೀಂದ್ರನ ಎದುರಿಗೇ ಸುರುಸುರು ಬತ್ತಿ ಹಚ್ಚಿದ ನಂತರವೇ ಬೇರೆ ಢಮ್ ಢಮ್ ಢಮಾರ್ ಆಟಂ ಬಾಂಬ್, ಲಕ್ಷ್ಮೀ ಬಾಂಬ್, ಇತ್ಯಾದಿ ಪಟಾಕಿಗಳ, ಹೂವಿನ ಕುಂಡ, ಭೂಚಕ್ರ, ವಿಷ್ಣುಚಕ್ರಗಳನ್ನು ಹಚ್ಚಿ ಕುಣಿಯುವ ಸಂಭ್ರಮ.
ಮನೆಯ ಒಂಭತ್ತು ಜನಕ್ಕೆ ಹೊಸ ಬಟ್ಟೆ ತರಲು ಸಾಧ್ಯವಾಗದಿದ್ದರೂ ಅದೊಂದು ಕೊರತೆ ಎಂದು ಯಾರಿಗೂ ಯಾವತ್ತೂ ಅನಿಸುತ್ತಿರಲಿಲ್ಲ.
🌟 ಹಬ್ಬ 🌟 ಎಂಬ ಪದದಲ್ಲೇ ಸಂಭ್ರಮ ಸಡಗರ ಸಂತೋಷ ತುಂಬಿ ತುಂಬಿ ತುಳುಕುತ್ತಿತ್ತಾಗಿ ಆಗೆಲ್ಲ ನಮಗೆ ಕೊರತೆಗಳ ನಡುವೆಯೂ ಹಬ್ಬ ಹಬ್ಬವೇ ಆಗಿ ಸಂತೋಷ, ಸಡಗರ ಸಂಭ್ರಮಗಳನ್ನೇ ಉಡುತ್ತಿದ್ದೆವು.ತೊಡುತ್ತಿದ್ದೆವು*.
ಒಳಗೂ ಹೊರಗೂ ಹಬ್ಬವನ್ನೇ ತುಂಬಿಕೊಂಡು ನಲಿಯುತ್ತಿದ್ದೆವು....
ಇಂದು......??? ಕಾಲಾಯ ತಸ್ಮೈ ನಮಃ... ಅಷ್ಟೇ
✍🏼ಗೊತ್ತಿಲ್ಲ
ಇದನ್ನು ಓದಿ ನನ್ನ ಮನಃಪಟಲದ
ಹಳೆಯ ನೆನಪುಗಳ ಸುರಿಮಳೆ. ಮನಸ್ಸಿಗೆ ಸಿಂಚನವಾಯ್ತು
(recd in whatsapp)
***
following by ಬರಹ:- ಆಶಾ ನಾಗಭೂಷಣ.
ಧರ್ಮ ಸೂಕ್ಷ್ಮಗಳು
ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ, ನಡೆ -ನುಡಿ ಇವುಗಳನ್ನು ಹಿರಿಯರು ಹೇಳು ಹೇಳುತ್ತಲೇ, ಅಂದರೆ ಹೀಗೆ ಮಾಡಬೇಡ- ಅದನ್ನು ಮುಟ್ಟಬೇಡ, ಇದರ ಹತ್ತಿರ ಹೋಗಬೇಡ, ಹಾಗೆ ಕೆಲವೊಂದು ನೋಡಿ ತಿದ್ದಿ ಮಾಡಿಸುವುದು ಉದಾ:- ಹೂವು ಕಟ್ಟುವುದು ರಂಗೋಲಿ ಹಾಕುವುದು, ತರಕಾರಿ ಹೆಚ್ಚುವುದು, ದೇವರ ಪಾತ್ರೆ- ಮುಸುರೆ ಪಾತ್ರೆ -ಎಂಜಲು ತಟ್ಟೆ -ಎಂಜಲು ಲೋಟ ಪ್ರತ್ಯೇಕವಾಗಿಡು, ಬಟ್ಟೆ ಬರೆ- ಪುಸ್ತಕ -ಮನೆ ವಸ್ತುಗಳನ್ನು ಜೋಡಿಸುವುದು, ಬಂದ ಅತಿಥಿಗಳನ್ನು ಕೂರಿಸುವುದು, ಮಾತಾಡಿಸುವುದು ಇಂತಹ ಅನೇಕ ವಿಷಯಗಳನ್ನು ಜೀವನದುದ್ದಕ್ಕೂ ಅಗತ್ಯವಿರುವ ಇಂತಹ ಅನೇಕ ವಿಚಾರಗಳನ್ನು ನಿಧಾನವಾಗಿ ಕಲಿಸುತ್ತಾ ಬರುತ್ತಾರೆ. ಇದರ ಜೊತೆ ಸಣ್ಣ ಪುಟ್ಟ ಸುಳು ಸೂಕ್ಷ್ಮ ಗಳನ್ನು ಹೇಳಿಕೊಡುತ್ತಾರೆ.
ಬೆಳಿಗ್ಗೆ ಬಲ ಮಗ್ಗುಲಲ್ಲಿ ಏಳುವುದರಿಂದ ರಾತ್ರಿ ಮಲಗುವ ತನಕ, ನಿತ್ಯ ಜೀವನದ ನಿಯಮಾವಳಿಗಳು, ದೇವರ ಸ್ತೋತ್ರ ,ನಾಮ ಸಂಕೀರ್ತನೆ- ಸ್ಮರಣೆ
ಇದೆಲ್ಲ ಬೆಳವಣಿಗೆಯ ಜೊತೆ ಜೊತೆಯಲ್ಲಿಯೇ ಸರಾಗವಾಗಿ ಕಲಿಸುತ್ತಿದ್ದರು.
ಅದಕ್ಕೆ ಅನುಕೂಲವೆಂಬಂತೆ ಈಗಿನಂತೆ ಟಿ ವಿ -ಸಿನಿಮಾ- ಹೋಟೆಲ್ ಬಳಕೆ ಇರಲಿಲ್ಲ ಈಗಿನ ಪೀಳಿಗೆಯವು ಸಣ್ಣಪುಟ್ಟ ವಿಷಯಗಳಿಗೂ ಹಠ- ಸಿಟ್ಟು- ಮೊಂಡತನ -ಕೂಗುವುದನ್ನು ನೋಡಿದರೆ ಆಡುವ ವಯಸ್ಸಿನಲ್ಲಿ ಇಷ್ಟೊಂದು ಕೋಪ ಸಿಟ್ಟು ಏಕೆ ಎಂದು ಅನಿಸದೆ ಇರುವುದಿಲ್ಲ.
ಮಕ್ಕಳಿಗೆ ಸಂಸ್ಕಾರ ಕಲಿಸುವುದು ಎಂದೇನು ಇರಲಿಲ್ಲ ಕೆಲಸಗಳ ಜೊತೆ ಜೊತೆಯಲ್ಲೇ ಸೇರಿರುತ್ತಿತ್ತು. ಎಲ್ಲಾದರೂ ಒಮ್ಮೊಮ್ಮೆ ದೊಡ್ಡವರ ಆಸ್ಪತ್ರೆಗೆ ಹೋದರೆ ಆ ಬಟ್ಟೆ ಆಸ್ಪತ್ರೆ ಮೈಲಿಗೆ ಆಗುತ್ತಿತ್ತು. ಶಾಲೆಯ ಮೈಲಿಗೆ ಬಟ್ಟೆಯನ್ನು ಒಳಗೆ ಇಡುವಂತಿಲ್ಲ ಅದಕ್ಕಾಗಿ ಒಂದು ಪ್ರತ್ಯೇಕ ಕೋಣೆ ಅಲ್ಲೊಂದು ಸ್ಟ್ಯಾಂಡು ಶಾಲೆ ಬಟ್ಟೆಯನ್ನು ಅಲ್ಲಿ ಬಿಚ್ಚಿ ಹಾಕಿದರೆ, ಮನೆ ಬಟ್ಟೆ ಹಾಕಲು ಮೊಳೆ ಹೊಡೆದು ಅಥವಾ ಕಂಬಗಳಿಗೋ ಒಂದು ಬೆಡ್ಡಿಂಗ್ ದಾರಾ ಕಟ್ಟುತ್ತಿದ್ದರು ಅದನ್ನ ನ್ಯಾಲೆ ಎನ್ನುತ್ತಿದ್ದರು. ಶಾಲೆಗೆ ಹೋಗುವ ಮೊದಲು ಬಿಚ್ಚಿಟ್ಟ ಮನೆ ಬಟ್ಟೆಯನ್ನು ಹಾಕಿಕೊಂಡು ಕೈಕಾಲು ತೊಳೆದು ಒಳಗೆ ಬರಬೇಕಿತ್ತು. ಬಟ್ಟೆಗಳು ಕಡಿಮೆ ಇದ್ದರೂ ಮಡಿ ಮೈಲಿಗೆ ಧಾರಾಳವಾಗಿ ಇರುತ್ತಿತ್ತು.
ಇವುಗಳನ್ನು ಮಾಡಬಾರದು ಎನ್ನುವುದು ದೊಡ್ಡ ಪಟ್ಟಿಯೇ ಇರುತ್ತಿತ್ತು ಅವುಗಳಲ್ಲಿ,
ಹಬ್ಬ ಹರಿದಿನ, ಶುಕ್ರವಾರ, ವಿಶೇಷ ದಿನಗಳಲ್ಲಿ ಹಾಗಲಕಾಯಿ, ಬಾಳೆ ಗಿಡದ ಕಾಯಿ-ದಿಂಡು ಮಾಡುವಂತಿಲ್ಲ, ಬೂದುಗುಂಬಳಕಾಯಿ ಚೀನಿಕಾಯಿ ಇಡಿಕಾಯಿಗಳನ್ನು ಹೆಣ್ಣು ಮಕ್ಕಳು ಒಡೆಯುವಂತಿಲ್ಲ. ಗಂಡಸರು ಮನೆ ಹೊರಗೆ ಒಡೆದು ಕೊಟ್ಟ ಮೇಲೆ ಹೆಚ್ಚಬೇಕು. ( ಚೀನೀ ಬೀಜ ಕುಂಬಳ ಬೀಜ ಎಲ್ಲ ಮಕ್ಕಳು ಎನ್ನುತ್ತಾರೆ) ಕಣ್ಣ್ಕಡುಕು ಬಳೆ ಹಾಕಿಕೊಂಡು ಗಂಡು ಮಕ್ಕಳಿಗೆ ನೀರೂ ಕೊಡಬಾರದು. ಒಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಲೇಬಾರದು. ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು ಅಥವಾ ಮುಖ ತೊಳೆಯದೆ ಹಣೆಗೂ ಇಡದೆ ಹೊರಡುವವರ ಎದುರಿಗೆ ಬಂದು ನಿಲ್ಲುವುದು ಅಥವಾ ಹೊರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು. ಇಂಥ ವಿಚಾರಗಳನ್ನು ಹೆಣ್ಣು ಮಕ್ಕಳಿಗೆ ಒತ್ತಿ ಹೇಳುವುದು ಏಕೆಂದರೆ ಅಡಿಗೆ ಮನೆಗೆ ಗೃಹಲಕ್ಷ್ಮಿ ಹೆಣ್ಣು ಇಂಥ ಹೆಣ್ಣು ಮನೆಯ ಕಣ್ಣು ಆದ್ದರಿಂದ ಹೊರಗೆ ಹೋಗಿ ದುಡಿಯುವವರ ಕುರಿತು, ಮನೆಯವರೆಲ್ಲರ ಆರೋಗ್ಯದ ಕಾಳಜಿ ಸೇರಿದಂತೆ ತಿಳಿಸುವುದಾಗಿತ್ತು. ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ, ಅವರ ಊಟ ಮುಗಿಯೋವರೆಗೂ ಇದ್ದು ಹೇಳಿ, ಇಲ್ಲ ಬೇರೆ ಯಾರಿಗಾದರೂ ಹೇಳಿ ಹೋಗಬೇಕು. ಶುಭ ಸಮಾರಂಭ ಗಳಿಗೆ ಊಟಕ್ಕೆ ಹೋದಾಗ ಬರುವಾಗ ಮನೆಯವರಿಗೆ ಹೋಗಿ ಬರುತ್ತೇವೆ ಚೆನ್ನಾಗಿತ್ತು ಎಂದು ಹೇಳುವುದು, ಹಾಗೆಯೇ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ. ಹರಡುತ್ತೇವೆ ಎಂದು ಹೊರಟು ನಿಂತವ ರಿಗೆ ಊಟ ಮಾಡಿ ಎಂದು ಹೇಳಬಾರದು. ಊರಿಗೆ ಹೊರಟವರ ಬಟ್ಟೆ ಗಂಟು- ಟ್ರಂಕು ಇವುಗಳ ಮೇಲೆ ಕೂರಬಾರದು ಪ್ರಯಾಣದಲ್ಲಿ ತೊಂದರೆಯಾಗುತ್ತದೆ. ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಿಬೇಕು.
ಮೂರು ಸಂಜೆ ಹೊತ್ತು ಮುಸುಕು ಹೊದ್ದು ಮಲಗಬಾರದು, ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು. ಶುಕ್ರವಾರ ಮಂಗಳವಾರ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸುವುದು, ಹಾಗೂ ಉಗುರುಗಳನ್ನು ಮನೆ ಒಳಗೆ ಹಾಕುವುದು ಮಾಡಬಾರದು. ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆಯೇ ಬಿಡಬಾರದು. ಹೊತ್ತಲ್ಲದ ಹೊತ್ತಿನಲ್ಲಿ ಬೀದಿ ಬಾಗಿಲಲ್ಲಿ ಕುಳಿತು ತಲೆ ಬಾಚಿಕೊಳ್ಳಬಾರದು. ಬಟ್ಟೆಗಳನ್ನು ಮೈ ಮೇಲೆ ಧರಿಸಿದ ಮೇಲೆ ಮೈ ಮೇಲಿದ್ದಂತೆ ಕತ್ತರಿಸುವುದು ಗುಂಡಿ ಹಾಕುವುದು ಹೊಲಿಯುವುದು ಮಾಡಬಾರದು. ಇದರಿಂದ ಮನುಷ್ಯನ ಚಿಂತೆ ಹೆಚ್ಚಾಗುತ್ತದೆ.
ಅರ್ಧಂಬರ್ಧ ಮುಖ ತೊಳೆಯುವುದು, ಕಾಲಿನ ಹಿಮ್ಮಡಿ ನೆನೆಯದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದನ್ನು ಮಾಡಬಾರದು ಶನಿ ಹಿಡಿಯುತ್ತದೆ ಎನ್ನುತ್ತಿದ್ದರು. ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡ ಬಾರದು. ಯಾರೋ ಕರ್ಚೀಫ್ ಕೊಟ್ಟರೆ ತೆಗೆದು ಕೊಳ್ಳಬಾರದು. ಸಂಜೆಯ ಹೊತ್ತು ಮೊಸರು- ಅರಿಶಿನ -ಉಪ್ಪು ಇವುಗಳನ್ನು ಹೊಸಿಲಾಚೆ ಕೊಡಬಾರದು. ಅಕಸ್ಮಾತ್ ಹೆಪ್ಪಿಗೆ ನೆರೆಹೊರೆಯವರು ಮೊಸರು ಕೇಳಿದಾಗ ಇಲ್ಲ ಎನ್ನಲಾಗದು ಒಣಮೆಣಸಿ ಕಾಯಿ ಚೂರು ಹಾಕಿ ಮೊಸರನ್ನು ಕೊಡಬಹುದು.
ಕುಲ ದೇವರ ವಾರ, ಅಥವಾ ಒಂದೇ ದಿನ, ಮಂಗಳವಾರ, ಶುಕ್ರವಾರ ತಂದೆ ಮಕ್ಕಳು ಅಣ್ಣ ತಮ್ಮ ಒಟ್ಟೊಟ್ಟಿಗೆ ಕ್ಷೌರ ಮಾಡಿಸಿಕೊಳ್ಳುವಂತಿಲ್ಲ. ಮಾಡಿದ ಅಡುಗೆಗಳಿಗೆ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು. ಉಪನಯನ ಆದ ಮೇಲೆ ಗಂಡು ಮಕ್ಕಳು ತಂಗಳು ಪದಾರ್ಥ ತಿನ್ನಬಾರದು. ಊಟ ಮಾಡಲು ಕಾಯಬೇಕು ಊಟವನ್ನು ಕಾಯಿಸಬಾರದು. ಅನ್ನ ತಟ್ಟೆ ಮೇಲೆ ಹಾಕಿ ಎಷ್ಟು ಹೊತ್ತಾದರೂ ಬರದೇ ಇರಬಾರದು, ಎಂಜಲು ಕೈಯನ್ನು ಒಣಗಿಸುವುದು ಎಂಜಲು ತಟ್ಟೆಯನ್ನು ಒಣಗಿಸುವುದು ಮಾಡಬಾರದು ಇದರಿಂದ ಅಶುಭ ಮತ್ತು ಸಾಲವಾಗುತ್ತದೆ. ಎಂಜಲು ಕೈಯಲ್ಲಿ ತಟ್ಟೆ ಎತ್ತಿಕೊಂಡು ಹೋಗಿ ತೊಳೆಯ ಬಾರದು. ಮೊದಲು ಕೈ ತೊಳೆದುಕೊಂಡು ಬಂದು ಎಂಜಲು ತಟ್ಟೆ ಎತ್ತಬೇಕು. ಊಟದ ಮಧ್ಯೆ ಏಳಬಾರದು. ( ಹಳೆಯ ಸಿನಿಮಾದಲ್ಲಿ ಊಟದ ಮದ್ಯ ಏಳಬೇಡ ಎಂದರು ಅಶ್ವತ್ ಎದ್ದು ಹೋಗುತ್ತಾರೆ. ಸುದ್ದಿ ತಿಳಿಸುವವನು ಗದ್ದೆಗೆ ಬೆಂಕಿ ಬಿದ್ದಿದೆ. ಸಾಲದವ್ರು ಒತ್ತಡ ಹಾಕಿದ್ದಾರೆ ಸುದ್ದಿ ತಿಳಿಸುತ್ತಾನೆ ಬರುತ್ತದೆ.
ಚಪ್ಪಲಿ- ಹಿಡಿ ( ಕಸಬರಿಕೆ)ಗಳನ್ನು ತಲೆಕೆಳಕಾಗಿ ಇಡಬಾರದು, ಏಣಿಯನ್ನು ಉದ್ದಕ್ಕೆ ಮಲಗಿಸಬಾರದು. ಸಂಜೆ ಹೊತ್ತು ಮನೆ ಗುಡಿಸಬಾರದು ದೀಪ ಹಚ್ಚುವ ಮೊದಲೇ ಗುಡಿಸಿ ಹಿಂಬಾಗಿಲು ಹಾಕಿ ಮುಂಭಾಗಲು ತೆರೆದು ದೀಪ ಹಚ್ಚಬೇಕು. ಮಧ್ಯಾಹ್ನ 12 ಗಂಟೆಯ ನಂತರ ತುಳಸಿ ಗಿಡದ ಎಲೆ ಕೀಳಬಾರದು. ತುಳಸಿ ಸಸ್ಯವನ್ನು ಕೊಡುವುದಾದರೂ ಬೆಳಗ್ಗೆ ಮುಂಚೆನೇ ಕೊಡಬೇಕು. ಅಪರಾಹ್ನದ ಹೊತ್ತಿನಲ್ಲಿ ಹೊಳೆ ಬದಿ, ಮರದ ಕೆಳಗೆ ಹೋಗ ಬಾರದು ಮನೆ ಮುಂದಿನ ಬಾಗಿಲ ಚಿಲಕವನ್ನು ಶಬ್ದ ಮಾಡಬಾರದು ಜಗಳ ಆಗುತ್ತದೆ. ಶುಭ ವಿಚಾರಗಳನ್ನು ಮಾತಾಡುವ ಸಂದರ್ಭದಲ್ಲಿ ಒಂಟಿ ಸೀನು ಸೀನಬಾರದು. ಅಕಸ್ಮಾತ್ ಬಂದರೆ ಸೂಕ್ಷ್ಮ ಅರಿತು ಬೇಗ ಎದ್ದು ಹೋಗಬೇಕು.
ಬಿಸಿ ಬಿಸಿ ಅನ್ನಕ್ಕೆ ಹಾಲು ಮೇಲೆ ಮೊಸರು ಹಾಕಿ ತಿನ್ನಬಾರದು. ಸೋಮವಾರ
ಎಣ್ಣೆ ಹಚ್ಚಿ ತಲೆಗೆ ನೀರು ಹಾಕಿಕೊಳ್ಳಬಾರದು. ಒಂಟಿಕಾಲಲ್ಲಿ ನಿಂತು ಮಾತಾಡಬಾರದು. ಹೊಸಿಲ ಮೇಲೆ ಕೂರಬಾರದು. ಮಲಗಿದಾಗ ಗೋಡೆಗೆ ಕಾಲಿನಿಂದ ಒದೆಯುತ್ತಾ ಗೋಡೆ ಮೇಲೆ ಕಾಲು ಹಾಕಿ ಮಲಗ ಬಾರದು. ಕಾಲ ಕೆಳಗೆ ತೊಟ್ಟಿಲು ಕಟ್ಟಿದ್ದರೆ ಕಾಲಿನಿಂದ ತೊಟ್ಟಿಲು( ನಿದ್ರೆಗಣ್ಣಿ ನಲ್ಲಿ ಕಾಲಿನಿಂದಲೇ ತೂಗುವುದು) ಒದೆಯಬಾರದು. ಒದ್ದೆ ಬಟ್ಟೆಯನ್ನು ಮೈಮೇಲೆ ಧರಿಸಬಾರದು. ಸಂಜೆಯ ಮೇಲೆ ಬಟ್ಟೆ ಒಗೆಯಬಾರದು. ರಾತ್ರಿ ಮುಸುರೆ ಪಾತ್ರೆಗಳಿಗೆ ನೀರು ಹಾಕಿಡದೆ ಬಿಡಬಾರದು ಹರಡಬಾರದು. ಎಲ್ಲಾ ತೊಳೆದಿಟ್ಟು ಮಲಗುವುದಾದರೆ ಒಂದು ಚೂರು ಅನ್ನ ಅಥವಾ ಅವಲಕ್ಕಿ ಬಟ್ಟಲಲ್ಲಿ ಹಾಕಿ ಮುಚ್ಚಿಡಬೇಕು ಅಕಸ್ಮಾತ್ ಅನ್ನ ಉಳಿಯದಿದ್ದರೆ ಚೂರು ಅವಲಕ್ಕಿ ಬೆಲ್ಲ ಏನೋ ಒಂದು ಚೂರು ಪದಾರ್ಥವನ್ನು ಹಾಕಿ ಮುಚ್ಚಿಡಬೇಕು.
ಅಪರೂಪಕ್ಕೆ ನೆಂಟರ ಮನೆಗೆ, ಬಾಣಂತಿ ಮನೆಗೆ, ಮಗು ನೋಡಲು ಅಥವಾ ವಯಸ್ಸಾದವರನ್ನು ನೋಡಲು ಹೋಗುವಾಗ ಬರಿಗೈಯಲ್ಲಿ ಹೋಗಬಾರದು.
ಮತ್ತು ಹಾಗೆ ನೋಡಲು ಬಂದವರನ್ನು ಬರಿಗೈಯಲ್ಲಿ ಕಳಿಸಬಾರದು. ಕಾಫಿ, ಟೀ ಆಗದಿದ್ದರೂ ಚಮಚ ಸಕ್ಕರೆ ಕುಡಿಯಲು ನೀರನ್ನು ಕೊಟ್ಟು ನಿಲ್ಲಿಸಿ ಕೊಡಬಾರದು, ಕೂರಿಸಿಕೊಡಬೇಕು. ಕುಳಿತುಕೊಳ್ಳಿ ಎಂದು ಹೇಳುವುದು
ಮರೆತರು ಕುಡಿಯುವವರು ನಿಂತು ನೀರು ಕುಡಿಯಬಾರದು. ಇಬ್ಬರಿಗೂ ಒಳ್ಳೆಯದಲ್ಲ.
ಇನ್ನು ಹುಡುಕುತ್ತಾ ಹೋದರೆ ಬೇಕಾದಷ್ಟು 'ಬೇಡ' ಎನ್ನುವುದು ಇದ್ದಾವೆ
ಈಗ ಇಷ್ಟು ಸಾಕು 'ಬೇಕು' ಅನ್ನುವದರ ಬಗ್ಗೆ ಮತ್ತೆ ಬರೆಯುವೆ.
ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮಾ ಮಗಳೇ
ಮನ ಶುದ್ಧಳಾಗಿ ಗಂಡನೊಡನೆ ಬಾಳ ಬೇಕಮ್ಮ!!
end
***
No comments:
Post a Comment