SEARCH HERE

Thursday 8 April 2021

ಹಿರಣ್ಯಗರ್ಭ ಸೂಕ್ತ hiranyagarbha sukta


ಬ್ರಹ್ಮಾಂಡದ ವಿವರಣೆಯನ್ನು ಇನ್ನಷ್ಟು ರಹಸ್ಯದಂತೆ ಹೇಳಿರುವ ಹತ್ತು ಋಕ್ಕುಗಳಿರುವ ಮತ್ತೊಂದು ಸೂಕ್ತವೆಂದರೆ ಹಿರಣ್ಯಗರ್ಭ ಸೂಕ್ತ. ಗರ್ಭವೆಂದರೆ ರಹಸ್ಯವೆಂಬ ಅರ್ಥವೂ ಇದೆಯಷ್ಟೆ. ಅದೇ ರೀತಿ ಅದು ಜನನದ ಆದಿಭಾಗವೂ ಹೌದು. ಹಿರಣ್ಯಗರ್ಭ ಎಂದರೆ ಬಂಗಾರದ ಮೊಟ್ಟೆಯೆಂದೂ ಅರ್ಥೈಸಲಾಗಿದೆ. ಇದೇ ಮುಂದೆ ವಿಷ್ಣುವಿನ ಅವತಾರಗಳಲ್ಲಿ ಒಂದು ಎಂದು ಹೇಳಲಾಗಿದೆ. ಅಲ್ಲದೆ ಈ ಹಿರಣ್ಯಗರ್ಭನು ಪ್ರಜಾಪತಿಯಲ್ಲದೆ ಬೇರೆ ಅಲ್ಲ ಎಂದೂ ವಿವರಿಸಲಾಗಿದೆ.

ವಿಶ್ವಕರ್ಮಸೂಕ್ತದಲ್ಲಿಯೂ ಈ ಹಿರಣ್ಯಗರ್ಭನ ಪ್ರಸ್ತಾಪ ಬರುತ್ತದೆ. ಒಂದು ವರ್ಷದ ಕತ್ತಲು, ಅಸ್ತಿತ್ವರಹಿತ ಸ್ಥಿತಿಯಿಂದ ಹೊರಬಂದಾಗ ಆತನು ಸ್ವರ್ಗ ಮತ್ತು ಪೃಥ್ವಿಗಳಿಗೆ ಕಾರಣನಾದನು. ಇಲ್ಲೆಲ್ಲ ರೋಚಕವೆನಿಸುವ ಸಂಗತಿಯೆಂದರೆ, ಆ ಚಿಂತನಶೀಲತೆ. ಎಷ್ಟು ವಿಶಾಲವಾದ ಮನವಿದ್ದರೆ ಮಾತ್ರ ಇಂಥ ಕಲ್ಪನೆ ಗರಿಗೆದರಬಹುದು, ಅದನ್ನು ದಾಖಲಿಸಿ ತಿಳಿಸಬಹುದು. ಋಗ್ವೇದದ 10ನೇ ಮಂಡಲದ 121ನೇ ಸೂಕ್ತವು ಸೃಷ್ಟಿಯ ವಿವಿಧ ಆಯಾಮಗಳನ್ನು ಸೂಚಿಸುವಂತಿದೆ. ಇಡೀ ಸೂಕ್ತದಲ್ಲಿ ಎಂಥ ದೇವನಿಗೆ ಹವಿಸ್ಸನ್ನು ಅರ್ಪಿಸೋಣ ಎಂದು ಕೇಳುತ್ತಲೇ, ಸೃಷ್ಟಿಕರ್ತನನ್ನು ಸ್ತುತಿಸಲಾಗಿದೆ.

ಹಿರಣ್ಯ ಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |

ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ ||೧||

ಜಗತ್ತಿನ ಆದಿಯಲ್ಲಿ ಇದ್ದವನು ಹಿರಣ್ಯಗರ್ಭನು ಮಾತ್ರವೇ. ಅವನೇ ಸಮಸ್ತ ಜೀವಿಗಳಿಗೂ ಅಧಿಪತಿ. ದ್ಯುಲೋಕ ಮತ್ತು ಭೂಮಿಗಳನ್ನೂ ಆತನೇ ಸಂರಕ್ಷಿಸುವನು. ಅಂಥ ದೇವನಿಗೆ ಹವಿಸ್ಸನ್ನು ಸಮರ್ಪಿಸುತ್ತೇವೆ.

ಯ ಆತ್ಮನಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ ದೇವಾಃ

ಯಸ್ಯ ಛಾಯಾಮೃತಂ ಯಸ್ಯ ಮೃತ್ಯುಃ ಕಸ್ಮೈ ದೇವಾಯ ಹವಿಷಾ ವಿಧೇಮ ||೨||

ಇಂಥ ದೇವನು ಬಲಶಾಲಿಯಾಗಿದ್ದಾನೆ. ಸಕಲ ಜೀವಗಳೂ ಆತನ ಆಣತಿಯನ್ನೇ ಅನುಸರಿಸುತ್ತವೆ. ಅಮೃತತ್ವ-ಮರಣಗಳೆರಡೂ ಅವನ ನೆರಳು ಇದ್ದಂತೆ. ಇಂಥ ದೇವನಿಗೆ ನಮ್ಮ ಹವಿಸ್ಸು ಸಮರ್ಪಿತವಾಗಲಿ.

ಯಃ ಪ್ರಾಣತೋ ನಿಮಿಷತೋ ಮಹಿತ್ವೈಕ ಇಂದ್ರಾಜಾ ಜಗತೋ ಬಭೂವ |

ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಮೈ ದೇವಾಯ ಹವಿಷಾ ವಿಧೇಮ ||೩||

ನಮಗೆ ಗೋಚರವಾಗುತ್ತಿರುವ ಈ ಜಗತ್ತು, ಸೃಷ್ಟಿಕರ್ತನ ಮಹಿಮೆಯನ್ನು ಸಾರುತ್ತಿದೆ. ಎರಡು ಮತ್ತು ನಾಲ್ಕು ಕಾಲಿನ ಎಲ್ಲ ಜೀವಿಗಳಿಗೂ ಈತನೇ ಈಶನು. ಇವನಿಗೆ ಹವಿಸ್ಸು ಸಮರ್ಪಿತವಾಗಲಿ.

ಯಸ್ಯೇಮೇ ಹಿಮವಂತೋ ಮಹಿತ್ವಾ ಯಸ್ಯ ಸಮುದ್ರಗ್ಂ ರಸಯಾ ಸಹಾಹುಃ |

ಯಸ್ಯೇಮಾಃ ಪ್ರದಿಶೋ ಯಸ್ಯ ಬಾಹೂ ಕಸ್ಮೈ ದೇವಾಯ ಹವಿಷಾ ವಿಧೇಮ ||೪||

ಹಿಮಾಲಯದಿಂದ ಆರಂಭವಾಗುವ ಗಂಗೆಯ ಜಲದಂತೆ ಆತನ ಮಹಿಮೆ ಪವಿತ್ರವಾದುದು. ಆತನ ತೋಳುಗಳು ಎಂಟು ದಿಕ್ಕಿಗೂ ಚಾಚಿವೆ. ಆತನೇ ಸುಖ ಸ್ವರೂಪದ ದೇವತಾತ್ಮನು. ಇಂಥವನಿಗಲ್ಲದೆ ನಮ್ಮ ಹವಿಸ್ಸು ಬೇರೆ ಯಾರಿಗೆ ತಾನೇ ಸಮರ್ಪಿತವಾದೀತು!

*

93. ಹಿರಣ್ಯಗರ್ಭ ಸೂಕ್ತ (ಮುಂದುವರೆದುದು) 

#ವೇದಪರಿಚಯ


ಯೇನ ದ್ಯೌರುಗ್ರಾ ಪೃಥಿವೀ ಚ ದೃಳ್ಹಾ ಯೇನ ಸ್ವಃ ಸ್ತಭಿತಂ ಯೇನ ನಾಕಃ |

ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈದೇವಾಯ ಹವಿಷಾ ವಿಧೇಮ || 5 ||


ಯಾರಿಂದಾಗಿ ಆಗಸವು ಮೇಲೆ ನಿಲ್ಲಿಸಲ್ಪಟ್ಟಿತೋ, ಭೂಮಿಯು ಧೃಡವಾಗಿ ನಿಲ್ಲಲು ಶಕ್ಯವಾಯಿತೋ, ಸ್ವರ್ಗ ಕೂಡ ಸ್ಥಿರವಾಯಿತೋ, ಸೂರ್ಯನ ಲೋಕವಾದ ನಾಕವೂ ನಿಲ್ಲಲು ಸಾಧ್ಯವಾಯಿತೋ, ಯಾರಿಂದಾಗಿ ಆಗಸದಲ್ಲಿ ಮೋಡಗಳು ನಿರ್ಮಿತವಾಗುತ್ತದೆಯೋ, ಅಂಥ ದೈವಕ್ಕೆ ನಮ್ಮ ಆಹುತಿ ಸಲ್ಲಬೇಕಲ್ಲವೇ ?


ಯಂ ಕ್ರಂದಸೀ ಅವಸಾ ತಸ್ತಭಾನೇ ಅಭ್ಯೈಕ್ಷೇತಾಂ ಮನಸಾ ರೇಜಮಾನೇ |

ಯತ್ರಾಧಿ ಸೂರ ಉದಿತೋ ವಿಭಾತಿ ಕಸ್ಮೈ ದೇವಾಯ ಹವಿಷಾ ವಿಧೇಮ ||6||


ಲೋಕದ ರಕ್ಷಣೆಗೆಂದು ದ್ಯಾವಾಪೃಥಿವಿಗಲು ಪ್ರಜಾಪತಿಯಿಂದ ರಚಿಸಲ್ಪಟ್ಟವು. ಅವು ತಮ್ಮ ಅಸ್ತಿತ್ವಕ್ಕೆಂದು ಆತನಿಗೆ ಕೃತಜ್ಞತೆಯನ್ನು ತಿಳಿಸಿದವು. ಸೂರ್ಯನು ಜಗದಾಧಾರನಷ್ಟೆ. ಆತನು ಕೂಡ ಈ ಪ್ರಜಾಪತಿಯ ಮಹಿಮೆಯಿಂದಲೇ ಪ್ರಕಾಶ ನೀಡುತ್ತಿರುವನು. ಇಂಥ ಸುಖಾತ್ಮಕನಾದ ಪ್ರಜಾಪತಿಗೆ ನಮ್ಮ ಹವಿಸ್ಸುಗಳು ಸಲ್ಲಲಿ. 


ಆಪೋ ಹ ಯದ್ ಬೃಹತೀರ್ವಿಶ್ವಮಾಯನ್ಗರ್ಭಂ  ದಧಾನಾ ಜನಯಂತೀರಗ್ನಿಮ್ |

ತತೋ ದೇವಾನಾಂ ಸಮವರ್ತತಾಸುರೇಕಃ ಕಸ್ಮೈ ದೇವಾಯ ಹವಿಷಾ ವಿಧೇಮ ||7||


ಸಕಲಭೂತಗಳನ್ನು ಉತ್ಪತ್ತಿ ಮಾಡುವುದಕ್ಕೆ ಅಗ್ನಿ ಬೇಕಲ್ಲವೆ. ಪಂಚಭೂತಾತ್ಮಕವಾದ ಜಗತ್ತನ್ನು ಸೃಜಿಸಲು ಗರ್ಭವನ್ನು ಧರಿಸಿ, ಯಾವಾತನು ವ್ಯಾಪಕನಾಗಿದ್ದಾನೋ, ಆತನು ಪ್ರಾಣಸ್ವರೂಪಿ, ಅಂಥ ದೈವವಾದ ಪ್ರಜಾಪತಿಯನ್ನು ಉದ್ದೇಶಿಸಿ ನಮ್ಮ ಹವಿಸ್ಸುಗಳನ್ನು ಅರ್ಪಿಸೋಣ.


ಯಶ್ಚಿದಾಪೋ ಮಹಿನಾ ಪರ್ಯಪಶ್ಯದ್ದಕ್ಷಂ ದಧಾನಾ ಜನಯಂತೀರ್ಯಜ್ಞಮ್ |

ಯೋ ದೇವೇಷ್ವಧಿ ದೇವ ಏಕ ಅಸೀತ್ಕಸ್ಮೈ ದೇವಾಯ ಹವಿಷಾ ವಿಧೇಮ ||8||


ಯಾರು ಜಗತ್ತಿನ ಧರ್ಮವಾದ ಯಜ್ಞವನ್ನು ದಕ್ಷನಾಗಿ ಸೃಷ್ಟಿಮಾಡಬಲ್ಲವನು, ಯಾವನು ತನ್ನ ಧೀಶಕ್ತಿಯಿಂದ ನೋಡಬಲ್ಲ ಅದ್ವಿತೀಯನಾದ ಆತನಿಗೆ ನಮ್ಮ ಹವಿರಾದಿಗಳನ್ನು ಸಮರ್ಪಿಸೋಣ.


ಯಶ್ಚಿದಾಪೋ ಮಹಿನಾ ಪರ್ಯಪಶ್ಯದ್ದಕ್ಷಂ ದಧಾನಾ ಜನಯಂತೀರ್ಯಜ್ಞಂ |

ಯೋ ದೇವೇಶ್ವಧಿ ದೇವ ಏಕ ಆಸೀತ್ಕಸ್ಮೈ ದೇವಾಯ ಹವಿಷಾ ವಿಧೇಮ|| 9 ||


ನೀರಿನ ಗರ್ಭದಲ್ಲಿ ಬೆಂಕಿಯಿದೆ. ಇಂಥ ನೀರು ಸಮಸ್ತ ವಿಶ್ವವನ್ನೂ ಆವರಿಸಿದ್ದಾಗ, ಅದರಿಂದ ಪ್ರಾಣಕ್ಕೆ ಕಾರಣನಾದ ಪ್ರಜಾಪತಿಯು ಜನಿಸಿದನು. ಈ ನೀರು ಅಗ್ನಿಯೂ ಸೇರಿದಂತೆ, ಪಂಚ ಮಹಾಭೂತಗಳ ಉತ್ಪತ್ತಿಗೆ ಕಾರಣ. ಇವೆಲ್ಲಕ್ಕೂ ಅಧಿಪತಿಯಾದವನು ಪ್ರಜಾಪತಿ. ಅಂಥ ದೇವನನ್ನು ಉದ್ದೇಶಿಸಿ ಹವಿರ್ದ್ರವ್ಯಗಳನ್ನು ಸಮರ್ಪಿಸೋಣ.


ಮಾ ನೋ ಹಿಂಸೀಜ್ಜನಿತಾ ಯಃ ಪೃಥಿವ್ಯಾ ಯೋ ವಾ ದಿವಂ ಸತ್ಯ ಧರ್ಮಾಜಜಾನಃ |

ಯಶ್ಚಾಪಶ್ಚಂದ್ರಾ ಬೃಹತೀರ್ಜನಾನ ಕಸ್ಮೈ ದೇವಾಯ ಹವಿಷಾ ವಿಧೇಮ ||10||

ಇಂಥ ಪ್ರಜಾಪತಿಯು ನಮ್ಮನ್ನು ಹಿಂಸಿಸದಿರಲಿ. ಯಾವಾತನು ಈ ಭೂಮಿ, ಅಂತರಿಕ್ಷ ಹಾಗೂ ಉದಕಗಳನ್ನು ಸೃಷ್ಟಿಸಿದನೋ ಅಂತಹನಿಗೆ ನಮ್ಮ ಹವಿರ್ದ್ರವ್ಯಗಳು ಸೇರಲಿ.


ಪ್ರಜಾಪತೇ ನ ತ್ವ ದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ|

ಯತ್ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯಂ ಸ್ಯಾಮ ಪತಯೋ ರಯೀಣಾಂ || 


ಈ ಋಕ್ಕಿನಲ್ಲಿ ಇದು ಪ್ರಜಾಪತಿಯನ್ನು ಉದ್ದೇಶಿಸಿದ್ದು ಎಂದು ಸ್ಪಷ್ಟವಾಗಿ ತಿಳಿಯುವಂತಿದೆ. ಹೀಗಾಗಿ ಇಲ್ಲಿ ಆತನನ್ನೇ ಉದ್ದೇಶಿಸಿ-ಈಗಿರುವ ಪಂಚಮಹಾಭೂತಗಳ ಅಸ್ತಿತ್ವಕ್ಕೆ ನಿನ್ನನ್ನು ಬಿಟ್ಟರೆ ಇನ್ನಾರು ತಾನೇ ಸಮರ್ಥರಿರುವರು. ನಾವು ನಮ್ಮ ಇಷ್ಟಾರ್ಥಗಳು ಸಿದ್ಧಿಸಲೆಂದು ನಿನ್ನನ್ನು ಬೇಡುತ್ತೇವೆ. ನಮಗೆ ಯೋಗ್ಯವಾಗಿರುವುದು ಏನಿದೆಯೋ ಅಂಥ ಫಲ ನಮಗೆ ದೊರಕಲಿ. ನಾವೂ ಸಹ ಧನ-ಧಾನ್ಯಾದಿಗಳನ್ನು ಪಡೆದು ಸುಖವಾಗಿರುವಂತಾಗಲಿ. 


ಇಲ್ಲೊಂದು ಸ್ವಾರಸ್ಯವಿದೆ. ಕೊಡುವವನಿದ್ದಾನೆಂದು ಏನಾದರೂ ಕೇಳಬಾರದೆಂಬ ಔಚಿತ್ಯವನ್ನು ಇದು ನೆನಪಿಸುತ್ತದೆ. ನನ್ನ ಯೋಗ್ಯತೆಗೆ ತಕ್ಕದ್ದನ್ನು ನೀಡು ಎಂದು ಬೇಡುವುದು ವಿನೀತ ಭಾವವಷ್ಟೇ ಅಲ್ಲದೆ, ಕೇಳುಗನ ಪ್ರಾಮಾಣಿಕತೆಯನ್ನೂ ಧ್ವನಿಸುತ್ತದೆ. ಇಂಥ ಅನೇಕ ಚಿಕ್ಕ-ಪುಟ್ಟ ಅಂಶಗಳು ಸೂಕ್ತಗಳ ನಡುವೆ ಹುದುಗಿರುತ್ತದೆ. ಅದನ್ನು ಗ್ರಹಿಸಿದಾಗಲೇ, ಅದರ ಸಂದೇಶ ಸರಿಯಾಗಿ ಅರ್ಥವಾಯಿತೆಂದು ಹೇಳಬಹುದು. 


ಇಡೀ ಸೂಕ್ತದ ಉದ್ದಕ್ಕೂ ಪ್ರಸ್ತಾಪಿತವಾಗಿರುವ ಕಸ್ಮೈ ಪದ ಪ್ರಶ್ನವಾಚಿಯಾದದ್ದು. ಅದಕ್ಕೆ ತಸ್ಮೈ ಎನ್ನುವುದೇ ಉತ್ತರವಾದೀತು. ಅದು ಆ ಪರಸ್ಮೈ ಆದ ಬ್ರಹ್ಮನಿಗೆ ಒಪ್ಪುವಂಥದಾದ್ದರಿಂದ, ಈ ಸೂಕ್ತದ ವ್ಯಾಪ್ತಿಯನ್ನು ಗ್ರಹಿಸಬೇಕಾದರೆ ಇರಬೇಕಾದ ದೃಷ್ಟಿಕೋನವನ್ನು ಮನದಲ್ಲಿ ತಂದುಕೊಂಡರೆ, ಬೃಹತ್ ಎನ್ನುವುದರ ಕಲ್ಪನೆ ಸಾಕಾರವಾದೀತು, ಮಾನವನ ಕುಬ್ಜತನವೂ ತಿಳಿದೀತು. 



ಇಷ್ಟಾಗಿಯೂ ಅದು ಮನುಷ್ಯನಲ್ಲಿ ಕೀಳರಿಮೆಯನ್ನು ಹುಟ್ಟಿಸುವುದಿಲ್ಲ, ಬದಲಾಗಿ ತಾನು ಎತ್ತರಕ್ಕೆ ಬೆಳೆಯಬೇಕೆಂಬ ಹಂಬಲವನ್ನು ಪ್ರಚೋದಿಸುತ್ತದೆಯಾಗಿ, ಅದರ ಮಹತ್ವ ಹೆಚ್ಚುತ್ತದೆ. ಆರಾಧನೆಯಲ್ಲಿ ಭಕ್ತಿಗಿಂತ, ತನ್ನನ್ನು ಕಾಪಾಡುವವನೊಬ್ಬ ಇದ್ದಾನೆ ಎಂಬ ಭಾವವೇ ಜೀವನದಲ್ಲಿ ಸ್ಥಿರತೆಯನ್ನು ತಂದುಕೊಡಬಹುದಾದರೆ ಅಂಥ ನಂಬಿಕೆ ಯಾರಿಗೆ ಬೇಡ, ಏಕೆ ಬೇಡ. ಚಿಂತನಶೀಲತೆಯ ವೈಶಾಲ್ಯವನ್ನು ಬೆಳೆಸುವಲ್ಲಿ ಈ ಸೂಕ್ತಗಳು ನೆರವಾಗಬಲ್ಲದು, ಹೊಸ ಆಯಾಮ ನೀಡಬಲ್ಲದು. ಈ ಕಾರಣಕ್ಕಾಗಿಯಾದರೂ ಇವುಗಳ ಅಧ್ಯಯನದತ್ತ ಆಸಕ್ತಿ ಬೆಳೆಸಿಕೊಳ್ಳಬಹುದು.

*******


No comments:

Post a Comment