madhwa yati vrundavana
ಮಾಧ್ವ ಯತಿಗಳ ವೃಂದಾವನ
ಸೋಸಲೆ
ಶ್ರೀವ್ಯಾಸರಾಜಮಠದ ಶ್ರೀವಿದ್ಯಾವಲ್ಲಭತೀರ್ಥರು ತಮ್ಮ ವ್ಯಕ್ತಿತ್ವದಿಂದ ಆಗಿನ ಕಾಲದಲ್ಲಿ ಮೈಸೂರಿನ ಮುಮ್ಮಡಿಕೃಷ್ಣರಾಜ ಒಡೆಯರಿಂದ ಪಡೆದ ಪುಣ್ಯಭೂಮಿಯೇ ಸೋಸಲೆ. ಕಾವೇರೀ ತೀರದಲ್ಲಿ ರಾಜರು ಭವ್ಯವಾದ ಮಠವನ್ನು ಕಟ್ಟಿಸಿಕೊಟ್ಟರು. ದಾಖಲೆಗಳ ಪ್ರಕಾರ ರಾಜರು ಸ್ವಾಮಿಗಳಿಗೆ ಸೋಸಲೆಯನ್ನು ದಾನಮಾಡಿದ್ದು 28/ಜನವರಿ/1809 ಎಂಬುದಾಗಿ ತಿಳಿದುಬರುತ್ತದೆ. ಸೋಸಲೆಯಲ್ಲಿ ವಿದ್ಯಾಪೂರ್ಣತೀರ್ಥರು, ಶ್ರೀವಿದ್ಯಾಶ್ರೀಸಿಂಧುತೀರ್ಥರು, ಶ್ರೀವಿದ್ಯಾಶ್ರೀನಿವಾಸತೀರ್ಥರು, ಶ್ರೀವಿದ್ಯಾಸಮುದ್ರ ತೀರ್ಥರು, ಶ್ರೀವಿದ್ಯಾರತ್ನಾಕರತೀರ್ಥರು, ಮತ್ತು ಶ್ರೀವಿದ್ಯಾಪ್ರಸನ್ನತೀರ್ಥರ ಮೂಲವೄಂದಾವನಗಳಿವೆ. ಅದ್ಯ ಪೀಠಾಧಿಪತಿಗಳಾದ ಶ್ರೀವಿದ್ಯಾಶ್ರೀಶತೀರ್ಥರು ಸೋಸಲೆಯನ್ನು ಭವ್ಯಮಠವನ್ನು ಕಟ್ಟಿಸಿ ಜೀರ್ಣೊದ್ದಾರ ಮಾಡಿದ್ದಾರೆ. (ಗ್ರಂಥಋಣ: ಜಯಸಿಂಹ)
ಹೊಳೆಹೊನ್ನೂರು
ಈ ಊರನ್ನು ಪುರಂದರದಾಸರು ತಮ್ಮ ದೇವರನಾಮದಲ್ಲಿ “ಹೊನ್ನೂರುಪುರ” ಎಂದಿದ್ದಾರೆ. ಚಾಲುಕ್ಯರ ಸಾಮಂತರಾಗಿದ್ದ ಸಿಂದರ ಸಿಂದವಾಡಿ ಪ್ರಾಂತ್ಯಕ್ಕೆ ಸೇರಿದ್ದು, ಮುಂದೆ ಬನವಾಸಿ, ಹೊಯ್ಸಳ, ಕಳಚೂರಿ, ದೇವಗಿರಿ, ಯಾದವ, ಮತ್ತು ವಿಜಯನಗರದ ವಶಕ್ಕೆ ಹೋಗಿ, ಮುಂದೆ ಮಾರನಾಯಕನ ವಶವಾಯಿತು. 33ವರ್ಷಗಳ ಶ್ರೀಮದುತ್ತರಾದಿಮಠದ ಯತಿಗಳಾದ, ಭಗವತಕ್ಕೆ ಉತ್ತಮ ವ್ಯಾಖ್ಯಾನ ಬರೆದ ಶ್ರೀಸತ್ಯಧರ್ಮತೀರ್ಥರ ಮೂಲವೄಂದಾವನ ಹೊಳೆಹೊನ್ನೂರು ಗ್ರಾಮದಲ್ಲಿದೆ. ಕ್ಷೇತ್ರಮೂರ್ತಿ ಶ್ರೀಲಕ್ಷ್ಮಿನರಸಿಂಹದೇವರು. ಪ್ರತಿದಿವಸ ಸ್ವಾಮಿಗಳು ನರಸಿಂಹನ ಗುಡಿಗೆ ಹೋಗುತ್ತಿದ್ದವರು ಒಮ್ಮೆ ತಡವಾಯಿತು. ಅದನ್ನು ನೋಡಿದ ಅರ್ಚಕರು ಬಾಗಿಲು ಹಾಕಿ ಹೋಗಿಬಿಟ್ಟರು. ಸ್ವಾಮಿಗಳು ಗುಡಿಗೆ ಹೋದಾಗ ಬಾಗಿಲು ಬಂದಾಗಿತ್ತು. ಇದನ್ನು ತಿಳಿದ ಅರ್ಚಕರು ಸ್ವಾಮಿಗಳಲ್ಲಿ ಕ್ಷಮಾ ಬೇಡಿದಾಗ ಸ್ವಾಮಿಗಳು, “ಇದೇನು ಅರ್ಚಕರೇ, ನೀವೇ ಗಂಧಪ್ರಸಾದ ಕೊಟ್ಟಿರಲ್ಲ”, ಎಂದರು. ಹೀಗೆ ಸಾಕ್ಶಾತ್ ಶ್ರೀಲಕ್ಷ್ಮಿನರಸಿಂಹದೇವನಿಂದ ಗಂಧಪಡೆದ ಮಹಾಮಹಿಮರಾದ ರುದ್ರಾಂಶಸಂಭೂತರಾದ ಶ್ರೀಸತ್ಯಧರ್ಮತೀರ್ಥರ ಪವಿತ್ರಕ್ಷೇತ್ರ, ಅದುವೇ ಹೊಳೆಹೊನ್ನೂರು.
ಮಾದನೂರು
ಕಿನ್ನರಪುರ ಅಥವಾ ಕಿನ್ಹಾಳ ಗ್ರಾಮದ ಸಮೀಪದಲ್ಲಿರುವ ಕುಶಾ ನದೀತೀರದಲ್ಲಿರುವುದೇ ಮಾದನೂರು ಅಥವಾ ಮಾದಿನೂರು. ಕೊಪ್ಪಳದಿಂದ ಸುಮಾರು 15ಕಿಮೀ. ಅಡವಿಯಾಚಾರ್ಯರೆಂದೇ ಪ್ರಸಿದ್ದರಾದ, ರುದ್ರಾಂಶಸಂಭೂತರಾದ ಶ್ರೀಮಾದನೂರು ವಿಷ್ಣುತೀರ್ಥರ ಮೂಲವೄಂದಾವನವಿರುವ ಪವಿತ್ರ ಕ್ಷೇತ್ರ. ಸಮೀಪದಲ್ಲೇ “ಮೋದೇಶ್ವರ” ಎಂಬ ರುದ್ರದೇವರ ಗುಡಿಯಿರುವುದರಿಂದ ಈ ಹೆಸರು ಬಂದಿರಬಹುದು. ಕಿನ್ಹಾಳದ ದೇಸಾಯಿಗೆ ಅನ್ನವೆಲ್ಲಾ ಕ್ರಿಮಿಯಾಗಿ ಕಾಣತೊಡಗಿದಾಗ ಶ್ರೀವಿಷ್ಣುತೀರ್ಥರು ಪರಿಹರಿಸಿದಾಗ, ಸ್ವಾಮಿಗಳು ಸ್ಥಿರವಾಗಿ ನೆಲೆಸಲು ಆತ ಇಲ್ಲಿ ವ್ಯವಸ್ಥೆ ಮಾಡಿಕೊಟ್ಟ.
ಸಾಗರಕಟ್ಟೆ
ಶ್ರೀಸಾಗರಕಟ್ಟೆಪ್ರದ್ಯುಮ್ನತೀರ್ಥರ ಪವಿತ್ರ ಹೆಸರನ್ನು ನೆನಪಿಗೆ ತಂದುಕೊಡುವ ಪುಣ್ಯಭೂಮಿ. ಕಾವೇರಿ ನದಿಗೆ ಕಟ್ಟಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಹಿನ್ನೀರು ನಿಲ್ಲುವ ಸ್ಥಳ. ಪ್ರದ್ಯುಮ್ನತೀರ್ಥರ ಶಿಷ್ಯರಾದ ಶ್ರೀಪ್ರಜ್ಞಾಧಿರಾಜತೀರ್ಥರ ಮೂಲವೃಂದಾವನವಿರುವ ಮಂಟಿಗ್ರಾಮ ಇರುವ ಸ್ಥಳ.
ಮಧುಗಿರಿ
ಸುಮಾರು 1630ರಲ್ಲಿ ಆಗಿದ್ದ ಪಾಳೆಗಾರನಿಗೆ ಸ್ವಪ್ನದಲ್ಲಿ ಶ್ರೀನಿವಾಸ ಬಂದು, ಹತ್ತಿರದಲ್ಲಿರುವ ಕೆರೆಯಲ್ಲಿ ತನ್ನ ವಿಗ್ರಹವು ಮುಳುಗಿರುವುದಾಗಿಯೂ, ಮೇಲೆತ್ತಿ ಪ್ರತಿಷ್ಟಾಪನೆ ಮಾಡಬೇಕೆಂದೂ ಸೂಚನೆ ಕೊಟ್ಟನು. ಅದರಂತೆಯೇ ನಡೆದು, ಸುತ್ತಲೂ ಕೋಟೆ ಕಟ್ಟಿ ಪೂಜೆ ಇಂದಿಗೂ ನಡೆಯುತ್ತಿದೆ. ಬಹಳ ಜಾಗೃತ ಕ್ಷೇತ್ರ. ಪಕ್ಕದಲ್ಲೇ, ಬೃಹತ್ ಲಿಂಗರೂಪದಲ್ಲಿ ರುದ್ರದೇವರ ಕಾಡುಮಲ್ಲೇಶ್ವರ ಎಂಬ ಗುಡಿಯಿದೆ.
ಇವರಿಬ್ಬ ಮುಂಭಾಗದಲ್ಲಿ, ಮಂತ್ರಾಲಯದ ಪೀಠದಲ್ಲಿ ರಾಯರ ನಂತರ ಮೂರನೆಯವರಾಗಿ ಬಂದ ಶ್ರೀಸುಮತೀಂದ್ರತೀರ್ಥರು ಸುಮಾರು 300 ವರ್ಷಗಳ ಹಿಂದೆ ಪ್ರತಿಷ್ಟಾಪಿಸಿದ ರಾಯರ ಮೄತ್ತಿಕಾವೃಂದಾವನವಿದೆ. ಅನೇಕ ವರ್ಷಗಳ ಕಾಲ ಪೂಜೆ ಇಲ್ಲದೆ, ಮುಂದೆ ಕೋಠಿಸುಬ್ಬರಾಯರೆಂಬುವರಿಗೆ ಸ್ವಪ್ನಸೂಚಗೆಯಾಗಿ ಇಂದು ಮಠವು ವೈಭವೋಪೇತವಾಗಿ ನಡೆಯುತ್ತಿದೆ. ಈ ಸ್ಥಳವು ಕರಿಗಿರಿಕ್ಷೇತ್ರವೆಂದು ಪ್ರಸಿದ್ದವಾಗ ದೇವರಾಯನದುರ್ಗದಿಂದ ನೇರವಾಗಿ 40ಕಿಮೀ ದೂರದಲ್ಲಿದೆ.
(ಶೇಷಾದ್ರಿ ಪಾರಾ ರಾವ್ )
***
No comments:
Post a Comment