SEARCH HERE

Friday 1 October 2021

ದಶನಾಮಿ ಪದ್ಧತಿಯನ್ನು ಶಂಕರರು ತಂದರು

ಅದ್ವೈತ ಸನ್ಯಾಸಿಗಳ ದಶನಾಮ ಅರ್ಥ ವಿವರಣೆ.

* * * ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತೀ ಮಹಾ ಸ್ವಾಮಿಗಳು. * * *

ಜಗತ್ತಿನ ಅತ್ಯಂತ ಪ್ರಾಚೀನ ಸಿದ್ಧಾಂತಗಳಲ್ಲಿ ಒಂದೆನಿಸಿರುವ ಅದ್ವೈತಕ್ಕೆ ತಾತ್ವಿಕ ನೆಲೆಗಟ್ಟು ನೀಡಿದ ಆದಿ ಶಂಕರಾಚಾರ್ಯರು ಸನಾತನ ಧರ್ಮ ಸ್ಥಾಪನೆಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಶ್ರೀಪೀಠಗಳನ್ನು ಸ್ಥಾಪಿಸಲು ನೆರವಾದರು. ಷಣ್ಮತಾರಾಧನೆ, ದಶಾನಾಮಿ ಪದ್ಧತಿ ತಂದರು.

ಅದ್ವೈತ ಎಂದರೆ ದ್ವೈತವಲ್ಲದ್ದು, ಆತ್ಮ ಹಾಗೂ ಪರಮಾತ್ಮ ಒಂದೇ, ತತ್ತ್ವಮಸಿ -ಅದು ನೀನೆ ಆಗಿದ್ದೀಯ ಎಂದು ಬೇಧ ವಿಲ್ಲದ ಅಭೇದ ಸಿದ್ಧಾಂತ ಎನಿಸಿದೆ. 


ಸನ್ಯಾಸದ 4 ವಿಧಗಳಿಗೆ ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ.ಇದರ ಜೊತೆಗೆ ದಶನಾಮಿ ಪದ್ಧತಿಯನ್ನು ಶಂಕರರು ಹೊರತಂದರು. ದಶನಾಮಿ ಸಂಪ್ರದಾಯದಂತೆ ಹೆಸರುಗಳು 

1.ತೀರ್ಥ

2. ಆಶ್ರಮ

3. ವನ

4. ಅರಣ್ಯ

5. ಗಿರಿ 

6. ಪರ್ವತ

7. ಸಾಗರ

8. ಸರಸ್ವತಿ

9. ಭಾರತೀ

10. ಪುರೀ


ಈ ಬಗ್ಗೆ ವಿವರಣೆ ಮುಂದಿದೆ


ದೇಶದ ನಾಲ್ಕು ಕಡೆ ಇರುವ ಅದ್ವೈತ ಪೀಠ ಶಂಕರಾಚಾರ್ಯರು ನಾಲ್ಕು ವೇದಗಳಿಗೆ ಒಂದೊಂದು ಮಠದಂತೆ ದೇಶದ ನಾಲ್ಕು ಕಡೆ ಪೀಠಗಳನ್ನು ಸ್ಥಾಪಿಸಿದರು.


•ಪ್ರಜ್ಞಾನಮ್ ಬ್ರಹ್ಮ: ಪೂರ್ವದಲ್ಲಿ ಗೋವರ್ಧನ ಪೀಠ. ಋಗ್ವೇದ ಶಾಖೆಯ ಈ ಪೀಠ ಪುರಿಯಲ್ಲಿದೆ.


•ತತ್ತ್ವಮಸಿ: ಪಶ್ಚಿಮದಲ್ಲಿ ಸಾಮವೇದ ಶಾಖೆಯ ಕಾಳಿಕಾ ಪೀಠ ಗುಜರಾತಿನ ದ್ವಾರಕಾದಲ್ಲಿದೆ.


•ಅಯಮಾತ್ಮಾ ಬ್ರಹ್ಮ: ಉತ್ತರದಲ್ಲಿ ಅಥರ್ವವೇದದ ಶಾಖೆಯ ಜ್ಯೋತಿರ್‌ ಮಠ ಬದರಿಕಾಶ್ರಮದಲ್ಲಿದೆ.


•ಅಹಮ್ ಬ್ರಹ್ಮಾಸ್ಮಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಯಜುರ್ವೇದ ಶಾಖೆಯ ಪೀಠ ಶೃಂಗೇರಿಲ್ಲಿದೆ.


ದಶನಾಮ ವಿವರಣೆ


ಭಾರತೀ ನಾಮ

ವಿದ್ಯಾಭಾರೇಣ ಸಂಪೂರ್ಣಃ ಸರ್ವಭಾರಂ ಪರಿತ್ಯಜೇತ್ |

ದುಃಖ ಭಾರಂ ನ ಜಾನತಿ ಭಾರತೀ ಪರಿಕೀರ್ತಿತಃ ||


ಭಾರವನ್ನು ಧರಿಸುವುದರಿಂದ 'ಭಾರತೀ' ಎಂಬ ಸಂಜ್ಞೆಯುಂಟಾಗುತ್ತದೆ. ಯಾವ ವ್ಯಕ್ತಿಯು ವಿದ್ಯೆಯ ಭಾರದಿಂದ ಪರಿಪೂರ್ಣನಾಗಿ, ಪ್ರಪಂಚದ ಸಮಸ್ತ ಭಾರಗಳನ್ನೂ ತ್ಯಜಿಸಿ ಮತ್ತು ದುಃಖದ ಭಾರವನ್ನು ತಿಳಿದಿರುವುದಿಲ್ಲವೋ ಆತನಿಗೆ 'ಭಾರತೀ' ಎಂಬ ಉಪಾಧಿಯುಂಟಾಗುತ್ತದೆ.


ಸರಸ್ವತೀ ನಾಮ

ಸ್ವರಜ್ಞಾನ ವಶೋ ನಿತ್ಯಂ ಸ್ವರವಾದೀ ಕಿವೀಶ್ವರಃ |

ಸಂಸಾರ ಸಾಗರೇ ಸಾರಾಭಿಜ್ಞೋ ಯಃ ಸಃ ಸರಸ್ವತೀ ||


ಸ್ವರದ(ಶ್ವಾಸದ) ಜ್ಞಾನದಿಂದ, ಯಾವ ವಿದ್ವಾಂಸನು ವೇದಗಳ ಸ್ವರಗಳನ್ನು ಸಂಪೂರ್ಣವಾಗಿ ತಿಳಿದಿರುತ್ತಾನೋ ಮತ್ತು ಸಂಸಾರವೆಂಬ ರತ್ನದ ಪರೀಕ್ಷೆಯನ್ನು ಮಾಡುತ್ತಾನೋ ಆತನ ಪದವಿಯನ್ನು 'ಸರಸ್ವತೀ' ಎಂದು ಕರೆಯುತ್ತಾರೆ.


ತೀರ್ಥ ನಾಮ

ತ್ರಿವೇಣೀ ಸಂಗಮೇ ತೀರ್ಥೇ ತತ್ವಮಸ್ಯಾದಿ ಲಕ್ಷಣೇ|

ಸ್ನಾಯತ್ ತತ್ವಾರ್ಥ ಭಾವೇನ ತೀರ್ಥ ನಾಮಾ ಸ ಉಚ್ಯತೇ||


ತತ್ವಮಸಿ.. ಇತ್ಯಾದಿ ಮಹಾಕಾವ್ಯಗಳ ಪ್ರತೀಕವೇ ತ್ರಿವೇಣೀ ಸಂಗಮ. ಆ ಸಂಗಮರೂಪವಾದ ತೀರ್ಥದಲ್ಲಿ ತತ್ತ್ವಾರ್ಥವನ್ನು ತಿಳಿಯಬೇಕೆಂಬ ಅಪೆಕ್ಷೇಯಿಂದ ಯಾವ ವ್ಯಕ್ತಿಯು ಸ್ನಾನ ಮಾಡುತ್ತಾನೋ ಆತನು ತೀರ್ಥ ಎಂಬ ಹೆಸರಿಂದ ಕರೆಯಲ್ಪಡುತ್ತಾನೆ.


ಆಶ್ರಮ ನಾಮ

ಆಶ್ರಮ ಗ್ರಹಣೀ ಪ್ರೌಢಃ ಆಶಾಪಾಶ ವಿವರ್ಜಿತಃ |

ಯಾತಾಯಾತ ವಿನಿರ್ಮುಕ್ತ ಏತದಾಶ್ರಮ ಲಕ್ಷಣ ||


ಯಾವ ವ್ಯಕ್ತಿಯು ಹೃದಯದಿಂದ ಆಸೆ, ಮಮತೆ, ಮೋಹ ..ಇತ್ಯಾದಿ ಬಂಧನಗಳು ಸಂಪೂರ್ಣವಾಗಿ ನಾಶವಾಗಿರುವುವೋ, ಆಶ್ರಮದ ನಿಯಮಗಳನ್ನು ಧರಿಸಲು ದೃಢಮನಸ್ಕನಾಗಿರುತ್ತಾನೋ ಮತ್ತು ಸಂಪೂರ್ಣ ವಿರಕ್ತನಾಗಿರುತ್ತಾನೋ ಆತನಿಗೆ 'ಆಶ್ರಮ' ಎಂಬ ಸಂಜ್ಞೆ.


ವನ ನಾಮ ದೀಕ್ಷೆ

ಸುರಮ್ಯನಿರ್ಜನೇದೇಶೇ ವಾಸಂ ನಿತ್ಯಂ ಕರೋತಿ ಯಃ|

ಆಶಾಪಾಶ ವಿನಿರ್ಮುಕ್ತೋ ವನ ನಾಮ ಸ ಉಚ್ಯತೇ||


ಯಾವ ಮನುಷ್ಯನು ಸುಂದರವಾದ, ಶಾಂತವಾದ ಮತ್ತು ನಿರ್ಜನವಾದ ವನದಲ್ಲಿ ವಾದಮಾಡುತ್ತಾ, ಪ್ರಪಂಚದ ಬಂಧನಗಳಿಂದ ಸಂಪೂರ್ಣವಾಗಿ ವಿಮುಕ್ತನಾಗಿರುತ್ತಾನೋ ಆತನ ಹೆಸರು 'ವನ' ಎಂದು.


ಅರಣ್ಯ ನಾಮ

ಅರಣ್ಯೇ ಸಂಸ್ಥಿತೋ ನಿತ್ಯ ಆನಂದಂ ನಂದನೇವನೇ|

ತ್ವಕ್ತಾ ಸರ್ವಮಿದಂ ವಿಶ್ವಂ ಅರಣ್ಯಂ ಲಕ್ಷಣಂ ಕಿಲ ||


ಯಾರು ಪ್ರಪಂಚವನ್ನು ತ್ಯಜಿಸಿ ಅರಣ್ಯದಲ್ಲಿ ವಾಸಮಾಡುತ್ತಾ (ನಂದನವನದಲ್ಲಿ ವಾಸಮಾಡುತ್ತಾ )ಆನಂದವನ್ನು ಸರ್ವದಾ ಅನುಭವಿಸುತ್ತಲಿರುತ್ತಾರೋ ಅವರಿಗೆ 'ಅರಣ್ಯ' ಎಂದು ಹೆಸರು.


ಗಿರಿ ನಾಮ

ವಾಸೋ ಗಿರಿವರೇ ನಿತ್ಯಂ ಗೀತಾಭ್ಯಾಸೇ ಹಿ ತತ್ಪರಃ |

ಗಂಭೀರಾಚಲ ಬುದ್ಧೆಶ್ಚ ಗಿರಿ ನಾಮ ಸ ಉಚ್ಯತೇ ||


ಯಾರು ಗೀತಾಭ್ಯಾಸದಲ್ಲಿ ತತ್ಪರರಾಗಿ, ಎತ್ತರವಾದ ಪರ್ವತಗಳ ಶಿಖರಗಳ ಮೇಲೆ ವಾಸಮಾಡುತ್ತಾ, ಗಂಭೀರವಾದ ಮತ್ತು ನಿಶ್ಚಿತವಾದ ಬುದ್ಧಿಯನ್ನು ಹೊಂದಿರುತ್ತಾರೋ ಅವರಿಗೆ 'ಗಿರಿ' ಎಂದು ಹೆಸರು.


ಪರ್ವತ ನಾಮ

ವಸೇತ್ಪರ್ವತ ಮೂಲೇಷು ಪ್ರೌಢೋ ಯೋ ಧ್ಯಾನತತ್ಪರಃ |

ಸಾರಾಸಾರಂ ವಿಚಾನಾತಿ ಪರ್ವತಃ ಪರಿಕೀರ್ತೀತಃ ||


ಸಮಾಧಿಸ್ಥರಾಗಿ ಯಾರು ಪರ್ವತಗಳ ತಪ್ಪಲು ಪ್ರದೇಸಗಳಲ್ಲಿ ವಾಸಮಾಡುತ್ತಾ, ಪ್ರಪಂಚದ ಸತ್ಯತ್ವ ಮತ್ತು ಅಸತ್ಯತ್ವಗಳ ಜ್ಞಾನ ಹೊಂದಿರುತ್ತಾರೋ ಅವರಿಗೆ 'ಪರ್ವತ' ಎಂದು ಹೆಸರು.


ಸಾಗರ ನಾಮ

ವಸೇತ್ಸಾಗರ ಗಂಭಿರೇ ಘನ ರತ್ನ ಪರಿಗ್ರಹಃ |

ಮರ್ಯಾದದಶ್ಚಾನ ಲಂಘ್ಯೇತ ಸ ಸಾಗರಃ ಪರಿಕೀರ್ತಿತಃ ||


ಗಂಭೀರವಾದ ಸಮುದ್ರದ ಸಮೀಪದಲ್ಲಿ ವಾಸಮಾಡುತ್ತಾ ಯಾರು ಆಧ್ಯಾತ್ಮಶಾಸ್ತ್ರದ ಉಪದೇಶಗ್ರಹಣ ಮಾಡುತ್ತಾರೋ ಮತ್ತು ತಮ್ಮ ಆಶ್ರಮದ ನಿಯಮಗಳನ್ನು ಕಿಂಛಿತ್ತೂ ಉಲ್ಲಂಘಿಸುವುದಿಲ್ಲವೋ ಅವರು ಸಮುದ್ರಕ್ಕೆ ಸಮಾನರಾದುದರಿಂದ 'ಸಾಗರ' ಎಂದು ಕರೆಯಲ್ಪಡುತ್ತಾರೆ.


ಪುರೀ ನಾಮ

ಜ್ಞಾನ ತತ್ತ್ವೇನ ಸಂಪೂರ್ಣಃ ಪೂರ್ಣ ತತ್ತ್ವೇ ಪದೇ ಸ್ಥಿತಃ |

ಪರಬ್ರಹ್ಮರತೋ ನಿತ್ಯಂ ಪುರೀ ನಾಮ ಸ ಉಚ್ಯತೇ ||


'ಪುರೀ' ಎಂದರೆ ಪೂರ್ಣನಾಗಿರುವುದು-ತತ್ವಜ್ಞಾನದಿಂದ ಪೂರ್ಣನಾಗಿರುವುದು, ಪೂರ್ಣಪದಗಳಲ್ಲಿ ಸ್ಥಿತನಾಗಿರುವುದು, ಪರಬ್ರಹ್ಮನಲ್ಲಿರತನಾಗಿರುವುದು- ಈ ಯೋಗ್ಯತೆಗಳು ಯಾರಿಗಿದೆಯೋ ಆತನು 'ಪುರೀ' ಎಂಬ ಪದವಿಗೆ ಅಧಿಕಾರಿಯಾಗುತ್ತಾನೆ.🙏

***


No comments:

Post a Comment