SEARCH HERE

Friday 1 October 2021

ಏಕಾಂತ ಮತ್ತು ಒಂಟಿತನ ಎರಡೂ ಭಿನ್ನ

ಏಕಾಂತ ಮತ್ತು ಒಂಟಿತನ ಈ ಎರಡೂ ಶಬ್ದಗಳು ಸಮಾನಾರ್ಥವನ್ನು ಕೊಡುವಂತೆ ಕಂಡರೂ ಭಾವಾರ್ಥಗಳು ಭಿನ್ನವಾಗಿವೆ. ಇವು ಪರಸ್ಪರ ಎಂದೂ ಎದುರುಬದುರಾಗದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳ ಬಗ್ಗೆ ಒಂದು ಸೂಕ್ಷ್ಮ ಅವಲೋಕನ.


🌿 ನಾವೇ ನಮ್ಮಿಚ್ಛೆಯಿಂದ ಜನರಿಂದ ದೂರಾಗುವುದು ಏಕಾಂತ, ಅನ್ಯರು ನಮ್ಮನ್ನು ದೂರವಿಟ್ಟರೆ ಅದು ಒಂಟಿತನ. 


🌿 ಏಕಾಂತ ನಾವು ಬಯಸಿ ಸೃಷ್ಟಿಸಿಕೊಳ್ಳುವಂತದ್ದು. ಒಂಟಿತನ ನಾವು ಬಯಸದೇ  ಸಂದರ್ಭದ ಪರಿಣಾಮವಾಗಿ ಬರುವಂತದ್ದು.


🌿 ಆಧ್ಯಾತ್ಮಿಕ ಸೆಳೆತದಿಂದ ಉಂಟಾಗುವುದು ಏಕಾಂತ, ಲೌಕಿಕದಲ್ಲಿನ ದುಃಖ, ನೋವು, ನಿರಾಸೆ, ತಿರಸ್ಕಾರಗಳಿಂದ ಉಂಟಾಗುವುದು ಒಂಟಿತನ. 


🌿 ಏಕಾಂತ ಅವಶ್ಯಕತೆ, ಒಂಟಿತನ ಅನಿವಾರ್ಯತೆ. 


🌿 ಏಕಾಂತ ಇಷ್ಟ, ಒಂಟಿತನ ಕಷ್ಟ


🌿 ಏಕಾಂತ ಸಹನೀಯ, ಒಂಟಿತನ ಅಸಹನೀಯ 


🌿 ಜನರ ಜಂಜಾಟದಿಂದ ನಾವೇ ದೂರ ಇರೋದು ಏಕಾಂತ. ಜನರೇ ನಮ್ಮನ್ನು ದೂರವಿಟ್ಟಾಗ ಕಾಡುವುದು ಒಂಟಿತನ. 


🌿 ಏಕಾಂತದಿಂದ ಮನಸ್ಸು ಏಕಾಗ್ರತೆ ಹೊಂದುವುದು. ಒಂಟಿತನದಿಂದ ಮನಸ್ಸು ವಿಚಲಿತಗೊಳ್ಳುವುದು. 


🌿 ಏಕಾಂತದಿಂದ ಮನಸ್ಸಿಗೆ ಆತ್ಮವಿಶ್ವಾಸ, ಶಾಂತಿ, ನೆಮ್ಮದಿ, ಸಂತೋಷ. ಒಂಟಿತನದಿಂದ ಅಸಹಾಯಕತೆ, ಹತಾಶೆ, ಸಿಟ್ಟು. 


🌿 ಏಕಾಂತ ನಮ್ಮ ಜೊತೆಗೆ ನಾವೇ ವಿಹರಿಸುವ ಸಮಯ. ಒಂಟಿತನ ತನಗೆ ಒದಗಿದ ಈ ಸ್ಥಿತಿಗೆ ಕಾರಣರಾದವರ ಬಗ್ಗೆ ಚಿಂತಿಸುವ ಸಮಯ. 


🌿 ಏಕಾಂತ ಪ್ರಬುದ್ಧತೆಯ ಲಕ್ಷಣ, ಒಂಟಿತನ ತನಗೊದಗಿದ ಪ್ರಾರಬ್ಧ. 


🌿 ಏಕಾಂತ ಪಾರಮಾರ್ಥಿಕ, ಒಂಟಿತನ ಪ್ರಾಪಂಚಿಕ. 


🌿 ಏಕಾಂತದಿಂದ ಪ್ರಸನ್ನತೆ, ಒಂಟಿತನದಿಂದ ಖಿನ್ನತೆ. 


🌿 ಏಕಾಂತದಿಂದ ನಮ್ಮ ಆಂತರ್ಯದಲ್ಲಿ ಅಡಗಿರುವ ದಿವ್ಯಶಕ್ತಿಯ ಅರಿವಿನ ಮೆರಗು, ಒಂಟಿತನದಿಂದ ನಮ್ಮೊಳಗೆ ಬರೀ ಕೊರಗು. 


🌿 ಏಕಾಂತ ಯಾವುದೇ ರೀತಿಯ ಆಲೋಚನೆಗಳನ್ನು ಬದಿಗಿಟ್ಟು  ಶಾಂತ ಸ್ಥಿತಿಯಲ್ಲಿ ಇರುವುದು, ಒಂಟಿತನ ಮನಸ್ಸಿನಲ್ಲಿ ನಾನಾ ವಿಧದ ಆಲೋಚನೆಗಳನ್ನು ಮಾಡುತ್ತಾ ನೆಮ್ಮದಿ ಇಲ್ಲದೆ ಆಶಾಂತಿ ಹೊಂದುವುದು. 


🌿 ಏಕಾಂತ ತನ್ನ ತಾನರಿತುಕೊಳ್ಳುವಲ್ಲಿ ಪ್ರಭಾವ, ಒಂಟಿತನ ಇನ್ನೊಬ್ಬರ ಉಪಸ್ಥಿತಿಯ ಅಭಾವ. 


🌿 ಒಬ್ಬ ಜ್ಞಾನಿ ಮಾತ್ರ ಏಕಾಂತವನ್ನು ಆನಂದದಿಂದ ಅನುಭವಿಸಬಲ್ಲ, ಅಜ್ಞಾನಿಗೆ ಒಂಟಿತನವೆಂಬುದು ದುಃಖಕಾರಕ. 


🌿 ಒಬ್ಬ ಜ್ಞಾನಾಪೇಕ್ಷಿತನಿಗೆ ಏಕಾಂತವೆಂಬುದು ವರ, ಅದೇ ಅಜ್ಞಾನಿಗೆ ಒಂಟಿತನವೆಂಬುದು ಶಾಪ.


🌿 ಒಬ್ಬ ಅಧ್ಯಯನಶೀಲನಿಗೆ ಏಕಾಂತವೆಂಬುದು ರಕ್ಷೆ, ಸಾಮಾನ್ಯನಿಗೆ ಅದು ಒಂಟಿತನದ ಶಿಕ್ಷೆ. 


🌿 ಏಕಾಂತ ವ್ಯಕ್ತಿಯನ್ನು ಆತ್ಮೋನ್ನತಿಯ ಶಿಖರಕ್ಕೆ ಏರಿಸಿದರೆ, ಒಂಟಿತನ ಅವನನ್ನು ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟು ಪ್ರಪಾತಕ್ಕೆ ನೂಕಬಹುದು. 


🌿 ಏಕಾಂತ ಪರಮಾತ್ಮನೊಡನೆಯ ಆತ್ಮೀಯತೆಯ ಅನುಸಂಧಾನ, ಮತ್ತೊಬ್ಬರೊಂದಿಗೆ ಹೊಂದಿಕೊಳ್ಳಲಾಗದ ಆತ್ಮೀಯತೆಯ ಕೊರತೆಯೇ ಒಂಟಿತನ.


🌿 ಏಕಾಂತ ಧರ್ಮ, ಒಂಟಿತನ ಕರ್ಮ.


🌿 ಏಕಾಂತದಿಂದ ಭಾವನೆಗಳ ಹತೋಟಿ, ಸ್ಥಿತಪ್ರಜ್ಞತೆ, ನಿರ್ಲಿಪ್ತ ಸ್ಥಿತಿ. ಒಂಟಿತನದಲ್ಲಿ ಭಾವನೆಗಳ ತಾಕಲಾಟ, ಉದ್ವಿಗ್ನ ಸ್ಥಿತಿ.


🌿 ಏಕಾಂತ ಸದಾ ಸಂತೃಪ್ತ ಸ್ಥಿತಿ, ಒಂಟಿತನ ಅತೃಪ್ತ ಸ್ಥಿತಿ.


🌿 ಏಕಾಂತದಿಂದ ಆತ್ಮಸ್ಥೈರ್ಯ, ಆತ್ಮ ವಿಶ್ವಾಸ, ಒಂಟಿತನದಿಂದ ಕೀಳಿರಿಮೆ, ತನ್ನಲ್ಲಿ ತನಗೆ ಅವಿಶ್ವಾಸ.


🌿 ಏಕಾಂತ ಭಗವದ್ ಚಿಂತನ, ಒಂಟಿತನ ಭವದ ಚಿಂತೆ.


🌿 ಏಕಾಂತವಾಸಿಗೆ ತಾನಿರುವ ಗುಡಿಸಲೇ ಅರಮನೆ. ಒಂಟಿಗೆ ಅರಮನೆಯೇ ಸೆರೆಮನೆ.


🌿 ಏಕಾಂತದಲ್ಲಿ ಪರಮಾತ್ಮನ ಸಾನಿಧ್ಯದ ಹಂಬಲ, ಒಂಟಿತನದಲ್ಲಿ ಸಂಗಾತಿಯ ಸಾಂಗತ್ಯದ ಬಯಕೆ.


🌿 ಎಲ್ಲರೊಳಗೆ ನಾವಿದ್ದು ನಮ್ಮೊಳಗೆ ಯಾರು ಇಲ್ಲದಂತಿರುವುದು ಏಕಾಂತ. ನಮ್ಮವರೆನಿಸಿಕೊಂಡವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಮಾನಸಿಕವಾಗಿ ನೆನಪುಗಳಾಗಿ ಕಾಡುವುದೇ ಒಂಟಿತನ.


🌿 ಏಕಾಂತ ಆನಂದಮಯ, ಒಂಟಿತನ ವೇದನಾಮಯ.


🌿 ಏಕಾಂತದಿಂದ ಜ್ಞಾನ ಪ್ರಾಪ್ತಿ. ಒಂಟಿತನಕ್ಕೆ ಕಾರಣವೇ ಅಜ್ಞಾನ.


🌿 ಏಕಾಂತದಿಂದ ಮನಸ್ಸು ಪ್ರಶಾಂತ, ಒಂಟಿತನದಲ್ಲಿ ಅಶಾಂತ.


🌿 ಏಕಾಂತದಲ್ಲಿ ಚಿಂತನೆ, ಒಂಟಿತನದಲ್ಲಿ ಚಿಂತೆ. 


🌿 ಏಕಾಂತ ನಿರ್ಭಯವುಳ್ಳದ್ದು, ಒಂಟಿತನದಿಂದ ಭಯ.


🌿 ಏಕಾಂತ ಸಕಾರಾತ್ಮಕ, ಒಂಟಿತನ ನಕಾರಾತ್ಮಕ.

****

 

No comments:

Post a Comment