SEARCH HERE

Friday 1 October 2021

ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಅಂತರಾರ್ಥ

 ಕಾಶಿಗೆ ಹೋದಾಗ ಇಷ್ಟವಾದುದನ್ನು ಬಿಟ್ಟು ಬರುವುದರ ಅಂತರಾರ್ಥ ಏನು?

ಹಿಂದಿನ ಕಾಲದಲ್ಲಿ ವಯಸ್ಸಾದವರು ತಮ್ಮೆಲ್ಲಾ ಜವಾಬ್ಧಾರಿಗಳನ್ನು ಮುಗಿಸಿದ ನಂತರ ಕಾಲ್ನಡಿಗೆಯಲ್ಲಿ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿಕೊಂಡು ಬರುವ ಸಂಕಲ್ಪವನ್ನು ಮಾಡಿಕೊಂಡು ಮನೆಯಿಂದ ದೇಶಾಂತರ ಹೋಗಿಬಿಡುತ್ತಿದ್ದರು. ಎಲ್ಲೋ ಅಪರೂಪಕ್ಕೊಬ್ಬರು ಕಾಶಿಯಿಂದ ಹಿಂದಿರುಗಿ ಬರುತ್ತಿದ್ದರೆ, ಬಹುತೇಕರು ಮಾರ್ಗದ ಮಧ್ಯೆಯೇ ಭಗವಂತನ ಪಾದದಲ್ಲಿ ಐಕ್ಯವಾದರೆ, ಇನ್ನೂ ಹಲವರು ಅಲ್ಲೇ ಕಾಶಿಯಲ್ಲೇ ಉಳಿದು ಬಿಡುತ್ತಿದ್ದರು.

ಹಾಗೆ ಭಗವಂತನ ದರ್ಶನ ಮಾಡಲು ಹೊರಡುವವರು ತಮ್ಮ ಆಸ್ತಿಪಾಸ್ತಿ, ಮನೆಮಠ, ಸಂಸಾರದ ಬಂಧನಗಳ ಮೇಲಿನ ಆಸೆಗಳನ್ನು ಬಿಟ್ಟು ಕೇವಲ ಭಗವಂತನ ಮೇಲೆಯೇ ಕೇಂದ್ರೀಕರಿಸಿ ಬಂದದ್ದೆಲ್ಲವೂ ಬರಲೀ ಗೋವಿಂದನ ದಯೆ ಒಂದಿರಲಿ ಎಂಬ ಭಾವದಿಂದ ಕಾಶೀ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗಂಗಾ ಸ್ನಾನ ಮಾಡುವ ಮುಖಾಂತರ ತಮ್ಮೆಲ್ಲಾ ಆಯಾಸ ಪರಿಹರಿಸಿಕೊಳ್ಳುವುದರ ಜೊತೆಗೆ ಅದುವರೆವಿಗೂ ಮಾಡಿರಬಹುದಾದ ಪಾಪ ಕರ್ಮಗಳನ್ನೆಲ್ಲವನ್ನೂ ಕಳೆದುಕೊಂಡು ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿಯ ದರ್ಶನ ಮಾಡಬೇಕು ಎಂಬ ನಿಯಮವಿತ್ತು.

ಈ ರೀತಿಯಾಗಿ ತಪಸ್ಸನ್ನು ಆಚರಿಸಿದಂತೆ ನಿಷ್ಠೆ ನಿಯಮಗಳನ್ನು ಪಾಲಿಸಿ ಭಗವಂತನ ದರ್ಶನ ಮಾಡಿದಲ್ಲಿ ಮುಕ್ತಿ ದೊರೆಯುವುದು ಎನ್ನುವುದೇ ನಮ್ಮ ಪೂರ್ವಜರ ಆಶಯವಾಗಿತ್ತು.

ಆದರೆ ಉಪ್ಪು ಹುಳಿ ಖಾರ ತಿಂದುಂಡ ದೇಹಕ್ಕೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳಿಂದ ಹೊರಬಂದು ನಿರ್ಮಲ ಮನಸ್ಸಿನಿಂದ ಭಗವಂತನಲ್ಲಿ ಏಕೋಭಾವವನ್ನು ಹೊಂದಲಾಗದೇ ಚಡಪಡಿಸತೊಡಗಿದರು. ಏನಾದರೂ ಬಿಡಬೇಕು ಎಂದರೆ ಏನು ಬಿಡಬೇಕು? ಎಂಬುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡು ಕೊಳ್ಳಲು ಪ್ರಯತ್ನಿಸಿದಾಗಲೇ ಅವರಿಗೆ ಹೊಳೆದದ್ದು ಕಾಶಿಗೆ ಹೋದಾಗ ಮೋಹ ಮಾತ್ಸರ್ಯಗಳ ಪ್ರತೀಕವಾಗಿ ತಮಗೆ ಇಷ್ಟವಾದ ಒಂದು ತರಕಾರಿ, ಒಂದು ಹಣ್ಣು ಮತ್ತು ಒಂದು ತಿಂಡಿಯನ್ನು ಬಿಟ್ಟು ಬಂದಲ್ಲಿ ಇಳೀ ವಯಸ್ಸಿನಲ್ಲಿ ಮುಕ್ತಿ ದೊರಕುತ್ತದೆ ಎಂಬ ಆಲೋಚನೆಯನ್ನು ಮುಂದಿಟ್ಟರು!

ಈ ಪರ್ಯಾಯ ವ್ಯವಸ್ಥೆ ಬಹಳ ಸುಲಭ ಎನಿಸಿದ ಕಾರಣ ಬಹುತೇಕರು ಇದನ್ನೇ ಪುರಸ್ಕರಿಸಿದ್ದರಿಂದ ಅದೇ ಸಂಪ್ರದಾಯವಾಗಿ ಬಿಟ್ಟಿತು. ಹಾಗೆ ಕಾಶಿಗೆ ಹೋಗುವ ಮಂದಿಯೂ ಸಹಾ ಅದರಲ್ಲೂ ಒಳ ಮಾರ್ಗಗಳನ್ನು ಕಂಡು ಹಿಡಿದುಕೊಂಡಿದ್ದಲ್ಲದೇ ತಮಗೆ ಇಷ್ಟ ಬಂದ ತರಕಾರಿ, ಹಣ್ಣು, ತಿಂಡಿಗಳ ಬದಲಾಗಿ ತಮಗಿಷ್ಟವಿಲ್ಲದ್ದನ್ನು ತ್ಯಜಿಸಿ ಬರಲು ಆರಂಭಿಸಿದರು. 

(ವಾಟ್ಸಪ್ ಸಂದೇಶ)

***


No comments:

Post a Comment