SEARCH HERE

Friday, 1 October 2021

ಬುಧ

 ಬುಧನ ವಂಶ


ಪುರಾಣದ ಕಥೆಗಳು


ತಾರಾ, ದೇವಗುರು ಬೃಹಸ್ಪತಿಯ ಹೆಂಡತಿ. ಬೃಹಸ್ಪತಿಯಲ್ಲಿ ಶಿಷ್ಯನಾಗಿದ್ದ ಚಂದ್ರನು ಗುರುಪತ್ನಿಯ ಮೇಲೆಯೇ ಮೋಹಗೊಳ್ಳುತ್ತಾನೆ. ತಾರೆಯೂ ಸುರಸುಂದರನಾದ ಚಂದ್ರನ ಮೇಲೆ ಮೋಹಿತಳಾಗುತ್ತಾಳೆ. ಅವರಿಬ್ಬರೂ ಆಶ್ರಮ ತೊರೆದು ಪ್ರತ್ಯೇಕವಾಗಿ ಸಂಸಾರ ಹೂಡುತ್ತಾರೆ.


ಈ ಬೆಳವಣಿಗೆಗಳಿಂದ ಕುಪಿತ ಬೃಹಸ್ಪತಿಯು ತನ್ನ ಹೆಂಡತಿ ತಾರಾಳನ್ನು ಬಿಟ್ಟು ಅಧರ್ಮವನ್ನು ಆಚರಿಸದಂತೆ  ಚಂದ್ರನನ್ನು ಕೇಳಿಕೊಳ್ಳುತ್ತಾರೆ. ತಾರಾಳ ಮನವೊಲಿಸಲು ಕೂಡಾ ಪ್ರಯತ್ನಿಸುತ್ತಾರೆ. ಅದಕ್ಕೆ ಚಂದ್ರ – ತಾರೆಯರಿಬ್ಬರೂ ಒಪ್ಪದೆ ಹೋಗುತ್ತಾರೆ. ಇದರಿಂದ ಕೋಪಗೊಂಡ ಬೃಹಸ್ಪತಿಯು ದೇವೇಂದ್ರನ ಸಹಾಯ ಪಡೆದು ಚಂದ್ರನ ಮೇಲೆ ಯುದ್ಧ ಮಾಡುವನು. ಚಂದ್ರನು ದೈತ್ಯರ ಸಹಾಯ ಯಾಚಿಸಲು ಅವರು ಸಮ್ಮತಿಸಿ ದೇವತೆಗಳ ಎದುರು ನಿಲ್ಲುತ್ತಾರೆ. ದೇವಗುರು ಬೃಹಸ್ಪತಿಯ ಮೇಲಿನ ದ್ವೇಷದಿಂದ ದೈತ್ಯರ ಗುರು ಶುಕ್ರಾಚಾರ್ಯರು ಅದಕ್ಕಾಗಿ ವೀಶೇಷ ಸೇನೆಯನ್ನು ಸಜ್ಜುಗೊಳಿಸುತ್ತಾರೆ.


ಹೀಗೆ ಚಂದ್ರ – ತಾರೆಯರ ಮೋಹವು ದೇವ – ದೈತ್ಯರ ನಡುವಿನ ಯುದ್ಧಕ್ಕೆ ಕಾರಣವಾಗುತ್ತದೆ.  ದೇವತೆಗಳ ಸೈನ್ಯದಲ್ಲಿ ಸ್ವತಃ ಪರಮೇಶ್ವರನೇ ಇರಲಾಗಿ, ದೇವತೆಗಳ ಕೈ ಮೇಲಾಗುತ್ತದೆ, ಚಂದ್ರನು ಸೋತುಹೋಗುತ್ತಾನೆ. 


ವಿನಾಶವನ್ನು ಬಿಟ್ಟು ಯುದ್ಧವು ಬೇರೇನೂ ಫಲಿತಾಂಶವನ್ನು ನೀಡದೆ ಹೋದಾಗ ಬೃಹಸ್ಪತಿಯ ತಂದೆ ಅಂಗೀರಸರು ತನ್ನ ಮಗ – ಸೊಸೆಯರನ್ನು ಒಂದುಗೂಡಿಸುವ ಸಲುವಾಗಿ ಬ್ರಹ್ಮದೇವನನ್ನು ಪ್ರಾರ್ಥಿಸುತ್ತಾರೆ. ಆಗ ಮಧ್ಯಪ್ರವೇಶಿಸಿದ ಬ್ರಹ್ಮದೇವನು ಚಂದ್ರನಿಗೆ ವಾಗ್ದಂಡನೆ ನೀಡಿ, ತಾರೆಗೆ ಬೃಹಸ್ಪತಿಯೊಡನೆ ಹೋಗುವಂತೆ ಸೂಚಿಸುತ್ತಾರೆ. ಆದರೆ, ಆ ವೇಳೆಗೆ ತಾರಾ ಗರ್ಭಿಣಿಯಾಗಿರುತ್ತಾಳೆ. ಇದು ಬೃಹಸ್ಪತಿಯನ್ನು ಮತ್ತಷ್ಟು ಕೆರಳಿಸುತ್ತದೆ. “ನೀನು ಗರ್ಭವನ್ನು ಅಳಿಸಿಕೊಳ್ಳಬೇಕು ಈ ಗರ್ಭ ಅಧರ್ಮಕರವೆಂದರು ತಾರೆ ಒಪ್ಪದೆ

 ಹೇಗಾದರೂ ಅದನ್ನು ಉಳಿಸಿಕೊಳ್ಳಲು ನಿರ್ಧರಿಸುತ್ತಾಳೆ.  “ನಾನು ಚಂದ್ರನೊಡನೆ ಹೋಗುವ ಮೊದಲೇ ನಿಮ್ಮಿಂದ ನನ್ನಲ್ಲಿ ಗರ್ಭಾಂಕುರವಾಗಿತ್ತು. ಚಂದ್ರಲೋಕದಲ್ಲಿ ಶೀತಗಾಳಿ ಇದ್ದುದರಿಂದ ಗರ್ಭದ ಬೆಳವಣಿಗೆ ತಡೆಹಿಡಿಯಲ್ಪಟ್ಟು ಈಗ ಮುಂದುವರಿದಿದೆ” ಅಂದುಬಿಡುತ್ತಾಳೆ.


ತಿಂಗಳುಗಳು ಕಳೆದು, ತಾರೆ ಸುಂದರವಾದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಈ ಮಗುವನ್ನು ಬೃಹಸ್ಪತಿಯು ‘ಬುಧ’ ಎಂದು ಕರೆಯುತ್ತಾರೆ. 


ಆದರೆ ಚಂದ್ರನಿಗೆ ಈ ಮಗು ತನ್ನದೇ ಎಂದು ತಿಳಿದುಬಿಡುತ್ತದೆ. ಅವನು ತನ್ನ ಕುಡಿಯನ್ನು ಕಾಣುವ ಬಯಕೆಯಿಂದ ಬೃಹಸ್ಪತಿಯ ಆಶ್ರಮಕ್ಕೆ ಬರುತ್ತಾನೆ. ಆಗ ಚಂದ್ರ ಮತ್ತು ಬೃಹಸ್ಪತಿಯ ನಡುವೆ ವಾಗ್ವಾದ ಏರ್ಪಡುತ್ತದೆ. ಮಗು ಬುಧನು ಅದಾಗಲೇ ದೈವಪ್ರೇರಣೆಯಿಂದ ಹಿರಿಯರೊಡನೆ ಚರ್ಚೆ ನಡೆಸುವಷ್ಟು ವಯಸ್ಕನಾಗಿಬಿಟ್ಟಿರುತ್ತಾನೆ.


ಬುಧನು ತನ್ನ ತಾಯಿಯ ಬಳಿ ಬಂದು, ಗಂಭೀರವಾಗಿ “ಅಮ್ಮಾ, ಮಗನಿಗೆ ತನ್ನ ತಂದೆ ಯಾರೆಂದು ತಿಳಿಯುವ ಹಕ್ಕು ಇರುತ್ತದೆ, ತಾಯಿಯಾಗಿ ನಿನ್ನ ಕರ್ತವ್ಯವನ್ನು ನಡೆಸು. ನನ್ನ ತಂದೆ ಯಾರೆಂದು ತಿಳಿಸು” ಅನ್ನುತ್ತಾನೆ.


ತಾರೆಯು “ಚಂದ್ರನೇ ನಿನ್ನ ತಂದೆ” ಎಂದು ಸತ್ಯವನ್ನೇ ಹೇಳುತ್ತಾಳೆ. ಚಂದ್ರನು ಸಂತೋಷದಿಂದ ಮಗನನ್ನು ಕರೆದುಕೊಂಡು ಅಲ್ಲಿಂದ ಹೊರಟುಹೋಗುತ್ತಾನೆ. 


ಮುಂದೆ ಈ ಬುಧನೇ ಭೂಮಿಯಲ್ಲಿ ಚಂದ್ರವಂಶದ ಹುಟ್ಟಿಗೆ ಕಾರಣನಾಗುತ್ತಾನೆ.

No comments:

Post a Comment