SEARCH HERE

Friday 1 October 2021

ಯೂರಿಕ್ ಆಮ್ಲ

 ಸಡನ್‌ಆಗಿ ಕಾಲಿನ ಹೆಬ್ಬೆರಳಿನಲ್ಲಿ ಉರಿ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕೆ ಎನ್ನುತ್ತಾರೆ ವೈದ್ಯರು


ಯೂರಿಕ್ ಆಮ್ಲವು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನವಾಗಿದ್ದು, ಸಾಮಾನ್ಯವಾಗಿ ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಇದು ಶೇಖರಣೆಯಾದರೆ ಅಪಾಯ ಹೆಚ್ಚು.


ದೇಹದಲ್ಲಿ ಆಂತರಿಕವಾಗಿ ನಡೆಯುವ ಸಾಕಷ್ಟು ಕಾರ್ಯಗಳು ಕಾಯಿಲೆಗಳ ಮೇಲೆ ನಿಯಂತ್ರಣ ಹೊಂದಿರುತ್ತವೆ. ದೇಹದೊಳಗೆ ಉತ್ಪತ್ತಿಯಾಗುವ ಕೆಲವು ಆಮ್ಲಗಳು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಅಂತಹ ಆಮ್ಲಗಳಲ್ಲಿ ಯೂರಿಕ್‌ ಆಸಿಡ್‌ ಕೂಡ ಒಂದು. ಯೂರಿಕ್ ಆಮ್ಲವು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನವಾಗಿದ್ದು, ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಇದು ಶೇಖರಣೆಯಾದರೆ ಅಪಾಯ ಹೆಚ್ಚು.


ಈ ಯೂರಿಕ್‌ ಆಸಿಡ್‌ ಹೆಚ್ಚಳ ಹೇಗಾಗುತ್ತದೆ, ಇದರ ಹೆಚ್ಚಳದಿಂದಾಗುವ ಅಪಾಯಗಳೇನು, ಇದರ ನಿಯಂತ್ರಣ ಹೇಗೆ ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.


​ಯೂರಿಕ್‌ ಆಸಿಡ್‌


ನಮ್ಮ ದೇಹದಲ್ಲಿನ ಪ್ಯೂರಿನ್‌ ಎನ್ನುವ ಅಂಶ ಚಯಾಪಚಯದ ನಂತರ ಯೂರಿಕ್‌ ಆಸಿಡ್‌ ಆಗಿ ಪರಿವರ್ತನೆಯಾಗುತ್ತದೆ. ರಕ್ತದಲ್ಲಿರುವ ಈ ಯೂರಿಕ್‌ ಆಸಿಡ್‌ ಸಾಮಾನ್ಯವಾಗಿ ಕಿಡ್ನಿಯ ಮೂಲಕ ಸ್ವಚ್ಛಗೊಂಡು ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಆದರೆ ಹೆಚ್ಚು ಪ್ಯೂರಿನ್‌ಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ಅಥವಾ ಕಿಡ್ನಿ ಕಾರ್ಯ ನಿಧಾನವಾಗಿದ್ದರೆ ರಕ್ತದಲ್ಲಿ ಯೂರಿಕ್‌ ಆಮ್ಲ ಸಂಗ್ರಹವಾಗುತ್ತದೆ.


ಈ ಯೂರಿಕ್‌ ಆಮ್ಲ ದೇಹದಲ್ಲಿ ನೈಸರ್ಗಿಕವಾಗಿರುವ ಅಂಶವಾದರೂ ಅದು ಸರಿಯಾಗಿ ದೇಹದಿಂದ ಹೊರಹೋಗದಿದ್ದರೆ ಅನಾರೋಗ್ಯ ಕಾಡುತ್ತದೆ.


​ಪ್ಯೂರಿನ್‌ ಅಂಶ ಹೆಚ್ಚಾಗುವುದು...


ಅತಿಯಾದ ಸಕ್ಕರೆ ಸೇವನೆಯಿಂದ

ಸಮುದ್ರ ಮೂಲ ಆಹಾರ ಮತ್ತು ಮಾಂಸದ ಅತಿಯಾದ ಸೇವನೆ

ಬೊಜ್ಜಿನಿಂದ ಕೂಡಿದ ದೇಹ ಹೊಂದಿದ್ದರೆ

ಪದೇ ಪದೇ ಮಲಬದ್ಧತೆಯಿಂದ ಬಳಲುತ್ತಿದ್ದರೆ, ಮಾನಸಿಕ ಒತ್ತಡದಿಂದ ಪ್ಯೂರಿನ್‌ ಅಂಶ ಹೆಚ್ಚಾಗುತ್ತದೆ.

ಈ ಪ್ಯೂರಿನ್‌ ಅಂಶ ಹೆಚ್ಚಾದರೆ ಯುರಿಕ್‌ ಆಸಿಡ್‌ ಹೆಚ್ಚಳವಾಗುತ್ತದೆ. ಹೀಗಿದ್ದಾಗ ಕಿಡ್ನಿಅದನ್ನು ಹೊರಹಾಕದೇ ಇದ್ದರೆ ರಕ್ತದಲ್ಲಿ ಯೂರಿಕ್‌ ಆಸಿಡ್‌ ಪ್ರಮಾಣ ಶೇಖರಣೆಯಾಗುತ್ತದೆ.


​ಯೂರಿಕ್‌ ಆಸಿಡ್‌ ಹೆಚ್ಚಾದರೆ..


ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾದರೆ ಕಾಣಿಸಿಕೊಳ್ಳುವ ಮೊದಲ ಲಕ್ಷಣವೆಂದರೆ ಕಾಲಿನ ಹೆಬ್ಬೆರಳಿನಲ್ಲಿ ಇದ್ದಕ್ಕಿದ್ದ ಹಾಗೆ ಅತಿಯಾದ ಉರಿ ಉಂಟಾಗುತ್ತದೆ.

ಸಂಧುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು ಮತ್ತು ನಡೆದಾಡಲು ಕಷ್ಟವಾಗಬಹುದು.

ಈ ಯೂರಿಕ್‌ ಆಸಿಡ್‌ ಹೆಚ್ಚಾದರೆ ಕಿಡ್ನಿ ಸ್ಟೋನ್‌ ಕಾಡುವ ಸಾಧ್ಯತೆ ಇರುತ್ತದೆ.

ಕೆಲವೊಮ್ಮೆ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಕೂಡ ಕಾಡುತ್ತದೆ.


​ಯೂರಿಕ್‌ ಆಸಿಡ್‌ ನಿಯಂತ್ರಣಕ್ಕೆ ವೈದ್ಯರ ಸಲಹೆ


ಅಮೃತಬಳ್ಳಿ ಮತ್ತು ಬೆಟ್ಟದ ನೆಲ್ಲಿಕಾಯಿ ದೇಹದಲ್ಲಿನ ಅತಿಯಾದ ಯೂರಿಕ್‌ ಆಸಿಡ್‌ ನಿಯಂತ್ರಣಕ್ಕೆ ಉತ್ತಮವಾಗಿದೆ.

ಅಮೃತಾರಿಷ್ಟದ ಸೇವನೆ ಅಥವಾ ಅಮೃತಬಳ್ಳಿ ಪುಡಿ, ಕಷಾಯವನ್ನು ಸೇವನೆ ಮಾಡಬಹುದು. ಇಲ್ಲವಾದರೆ ನೆಲ್ಲಿಕಾಯಿಯ ಪುಡಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಯೂರಿಕ್‌ ಆಸಿಡ್‌ನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಇನ್ನು ಆಲ್ಕೋಹಾಲ್‌, ಮಾಂಸಾಹಾರದ ಸೇವನೆಯಲ್ಲಿ ಮಿತವಿದ್ದರೆ ಒಳ್ಳೆಯದು. ಮೊಟ್ಟೆಯನ್ನು ಕೂಡ ಕಡಿಮೆ ಸೇವಿಸುವುದು ಒಳ್ಳೆಯದು.

ಹೆಚ್ಚಿನ ನೀರಿನ ಸೇವನೆ ಮತ್ತು ಹಣ್ಣುಗಳ ಸೇವನೆಯ ಅಭ್ಯಾಸವಿರಬೇಕು.

ಇವೆಲ್ಲದರ ಜೊತೆಗೆ ದಿನನಿತ್ಯ ಸಾಂಬಾರ್‌ನಲ್ಲಿ ಬಳಸುವ ತೊಗರಿಬೇಳೆಯನ್ನು ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಡಾ. ಶರದ್‌.


​ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ


ದೇಹದ ಎಲ್ಲಾ ರೀತಿಯ ಸಮಸ್ಯೆಗಳಿಗೆ ವ್ಯಾಯಾಮದ ಅಭ್ಯಾಸ, ಒಂದಷ್ಟು ದೈಹಿಕ ಚಟುವಟಿಕೆಗಳು ಅಗತ್ಯವಾಗಿರುತ್ತವೆ. ಇದು ಯೂರಿಕ್‌ ಆಸಿಡ್‌ ನಿಯಂತ್ರಣಕ್ಕೂ ಅನ್ವಯ. ವ್ಯಾಯಾಮ ಮಾಡಿದಾಗ ರಕ್ತದಲ್ಲಿನ ಯೂರಿಕ್‌ ಅಂಶಬೆವರಿನ ಮೂಲಕ ದೇಹದಿಂದ ಹೊರಹೋಗುತ್ತದೆ.


ಹೀಗಾಗಿ ರಕ್ತದಲ್ಲಿ ಅದು ಶೇಖರಣೆಯಾಗುವುದನ್ನು ತಪ್ಪಿಸಬಹುದು. ಅಲ್ಲದೆ ವ್ಯಾಯಾಮದಿಂದ ಕಿಡ್ನಿಯ ಕಾರ್ಯ ಚಟುವಟಿಕೆಯನ್ನೂ ಉತ್ತಮವಾಗಿಟ್ಟುಕೊಳ್ಳಬಹುದು.

Dr. Sharad Kulkarni

BAMS, MS

***


No comments:

Post a Comment