SEARCH HERE

Friday, 1 October 2021

ತುರಿಕೆಯ ತೊಂದರೆ ತಪ್ಪಿಸಿ ಪ್ಯುರೈಟಸ್

 ತುರಿಕೆಯ ತೊಂದರೆ ತಪ್ಪಿಸಿಕೊಳ್ಳುವುದು ಹೇಗೆ?

 

ವೈದ್ಯಕೀಯಭಾಷೆಯಲ್ಲಿ ಪ್ಯುರೈಟಸ್ ಎಂದು ಕರೆಯಲಾಗುವ ತುರಿಕೆಯ ಬಗೆಗೆ ತಿಳಿದುಕೊಳ್ಳೋಣ. ಬ್ಯಾಕ್ಟೀರಿಯಾ, ಫಂಗಸ್​ಗಳ ಸೋಂಕುಗಳು, ಯಾವುದಾದರೂ ಕೀಟಗಳ ಕಡಿತ, ಅಲರ್ಜಿ, ಸೋರಿಯಾಸಿಸ್, ಅಟೋಪಿಕ್ ಡರ್ಮಟೈಟಿಸ್, ಒಣಚರ್ಮ, ಸೂರ್ಯಾಘಾತ ಇನ್ನಿತರ ಚರ್ಮಸಂಬಂಧಿತ ಸಮಸ್ಯೆಗಳಿಂದಾಗಿ ತುರಿಕೆ ಆಗಿರಬಹುದು. ಕ್ಯಾಂಫರ್, ಮೆಂಥಾಲ್, ಫಿನಾಲ್, ಪ್ರಮೊಕ್ಸಿನ್, ಡೈಫಿನ್​ಹೈಡ್ರಮಿನ್ ಅಥವಾ ಬೆಂಝೋಕೈನ್ ಅಂಶವಿರುವ ಕ್ರೀಮ್ಳು ತುರಿಕೆಯನ್ನು ಕಡಿಮೆ ಮಾಡಲು ಹೆಚ್ಚು ಸಹಕರಿಸುತ್ತವೆ. ಕೆಲವು ಬಗೆಯ ತುರಿಕೆಗಳ ನಿವಾರಣೆಗೆ ಕಾರ್ಟಿಕೋಸ್ಟಿರೈಡ್ ಔಷಧಗಳನ್ನು ನೀಡಬೇಕಾಗುತ್ತದೆ.


ತುರಿಕೆ ಇರುವಾಗ ಸಾಧ್ಯವಾದಷ್ಟರ ಮಟ್ಟಿಗೆ ತುರಿಸಿಕೊಳ್ಳುವುದನ್ನು ತಡೆಯುವುದು ಅತಿ ಮುಖ್ಯ. ಜೋರಾಗಿ ತುರಿಸಿಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾಗಳ ಚಟುವಟಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೊತೆಯಲ್ಲಿ ಗಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಮಾನಸಿಕ ಒತ್ತಡ, ಖಿನ್ನತೆಯೂ ತುರಿಕೆಗೆ ಕಾರಣವಾಗಬಹುದೆಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ. ಹೀಗಿದ್ದಾಗ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಪ್ರತಿನಿತ್ಯ ಯೋಗ, ಧ್ಯಾನ, ಪ್ರಾಣಾಯಾಮದಂತಹ ಉಪಾಯಗಳು ನಮ್ಮ ಕೈಹಿಡಿಯುತ್ತವೆ. ಸಾಮಾನ್ಯ ತುರಿಕೆಯಾದಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳುವ ಉಪಾಯಗಳನ್ನು ತಿಳಿಯೊಣ.


ತುರಿಕೆ ಆಗುತ್ತಿರುವ ಭಾಗವನ್ನು ಕಹಿಬೇವಿನ ಕಷಾಯದಿಂದ ಪದೇಪದೆ ತೊಳೆದುಕೊಳ್ಳುವುದರಿಂದ ತುರಿಕೆ ಕಡಿಮೆ ಮಾಡಿಕೊಳ್ಳಲು ಸಾಧ್ಯ. ತುರಿಕೆ ಆಗುತ್ತಿರುವ ಭಾಗದಲ್ಲಿ ಅರಿಶಿಣಪುಡಿ ಹಚ್ಚಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುತ್ತದೆ. ಐಸ್​ಪೀಸ್​ಗಳನ್ನು ತುರಿಕೆ ಆಗುತ್ತಿರುವ ಭಾಗಗಳಲ್ಲಿಟ್ಟುಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ನಿಂಬೆರಸವನ್ನು ಸೇರಿಸಿದ ನೀರಿನ ಮಿಶ್ರಣವನ್ನು ಹತ್ತಿಬಟ್ಟೆಯಲ್ಲದ್ದಿ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ತುರಿಕೆ ವೇಗವಾಗಿ ಕಡಿಮೆ ಆಗಲು ಸಾಧ್ಯ. ನೀರಿನೊಂದಿಗೆ ಕಲಸಿದ ಕಡಲೆಹಿಟ್ಟಿನ ಪೇಸ್ಟ್​ನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿ ಒಣಗಲು ಬಿಡಬೇಕು. ಒಣಗಿದ ನಂತರ ತೊಳೆದುಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ಎಕ್ಸಾ ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ಹಚ್ಚಿಕೊಳ್ಳುವುದರಿಂದಲೂ ತುರಿಕೆ ಕಡಿಮೆ ಆಗುವುದು. ಸ್ವಲ್ಪ ಬೇಕಿಂಗ್ ಸೋಡಾ ಹಾಕಿದ ನೀರಿನಿಂದ ಸ್ನಾನ ಮಾಡಬಹುದು. ತುಳಸಿ ಎಲೆಗಳು, ಕಹಿಬೇವಿನ ಎಲೆಗಳು, ಮಾವಿನ ಎಲೆಗಳನ್ನು ಹಾಕಿದ ನೀರನ್ನು ಸ್ನಾನ ಮಾಡುವುದೂ ಬಹಳ ಉತ್ತಮ. ಇಲ್ಲವಾದಲ್ಲಿ ಈ ಎಲೆಗಳ ಕಷಾಯವನ್ನು ಸ್ನಾನದ ನೀರಿಗೆ ಸೇರಿಸಿ ಅದರಿಂದ ಸ್ನಾನ ಮಾಡಬಹುದು. ಅಲೋವೆರಾ ಜೆಲ್ ಹಚ್ಚಿಕೊಳ್ಳುವುದರಿಂದ ತುರಿಕೆ ಕಡಿಮೆ ಆಗುವುದು. ಸ್ವಲ್ಪ ಕಹಿಬೇವಿನ ಎಲೆಗಳು, ಕರಿಬೇವಿನ ಎಲೆಗಳು, ತುಳಸಿ ಎಲೆಗಳು ಹಾಗೂ ಕುಟ್ಟಿದ ಅರಿಶಿಣ ಇವನ್ನು ಸೇರಿಸಿ ಜಜ್ಜಿ ಗುಳಿಗೆರೂಪವನ್ನು ಮಾಡಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 45 ದಿನಗಳ ಕಾಲ ಸೇವಿಸುವುದರಿಂದ ಯಾವುದೇ ರೀತಿಯ ತುರಿಕೆ ಇದ್ದರೂ ಕಡಿಮೆಯಾಗುವುದು.

ಡಾ . ವೆಂಕಟ್ ರಮಣ ಹೆಗಡೆ .

ವಿಜಯ ವಾಣಿ .

***

ಸೋರಿಯಾಸಿಸ್‌ಗೆ ಶಾಶ್ವತ ಪರಿಹಾರ


#ಚರ್ಮ #ರೋಗಗಳಿಂದ ಬಳಲುತ್ತಿರುವವ ಬಹಳಷ್ಟು ಜನರು ಚಳಿಗಾಲದಲ್ಲಿ ರೋಗದ ತೀವ್ರತೆ ಹೆಚ್ಚಾಗಿ ವೈದ್ಯರ ಬಳಿಗೆ ದೌಡಾಯಿಸುತ್ತಾರೆ. ಇದರಲ್ಲಿ ಅತ್ಯಂತ ಕ್ಲಿಷ್ಟವಾದ ಸಮಸ್ಯೆ ಸೋರಿಯಾಸಿಸ್.


   

ಚರ್ಮ ರೋಗಗಳಿಂದ ಬಳಲುತ್ತಿರುವವ ಬಹಳಷ್ಟು ಜನರು ಚಳಿಗಾಲದಲ್ಲಿ ರೋಗದ ತೀವ್ರತೆ ಹೆಚ್ಚಾಗಿ ವೈದ್ಯರ ಬಳಿಗೆ ದೌಡಾಯಿಸುತ್ತಾರೆ. ಇದರಲ್ಲಿ ಅತ್ಯಂತ ಕ್ಲಿಷ್ಟವಾದ ಸಮಸ್ಯೆ ಸೋರಿಯಾಸಿಸ್. ಬಹಳಷ್ಟು ಜನರು ಸೋರಿಯಾಸಿಸ್‌ನ್ನು ತುಂಬಾ ಸಾಧಾರಣ ಕಾಯಿಲೆ ಎಂದು ಭಾವಿಸುತ್ತಾರೆ. ಆದರೆ ಇದು ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿ ಕುಂದಿದಾಗ ಬರುವ ಚರ್ಮರೋಗ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ.


ಪ್ರಪಂಚದ ಜನ ಸಾಂದ್ರತೆಯಲ್ಲಿ ಶೇ.3 ರಷ್ಟು ಜನರು ಈ ರೋಗಕ್ಕೆ ಒಳಗಾಗುತ್ತಾರೆ. ಸೋರಿಯಾಸಿಸ್ ಮಾರಣಾಂತಿಕವಲ್ಲ. ಆದರೆ ತ ಮಾನಸಿಕ ಅಶಾಂತಿಗೆ ಒಳಗಾಗುವುದರಿಂದ ಮತ್ತಷ್ಟು ತೊಂದರೆಪಡುತ್ತಾನೆ. ಸೋರಿಯಾಸಿಸ್ ಒಂದು ದೀರ್ಘಕಾಲಿಕ ಚರ್ಮರೋಗ. ಇದರಲ್ಲಿ ಮುಖ್ಯವಾಗಿ ಚರ್ಮದ ಮೇಲೆ ತುರಿಕೆಯಿಂದ ಕೂಡಿದ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೋರಿಯಾಸಿಸ್‌ನಲ್ಲಿ ಮೊದಲು ಚರ್ಮ ಇನ್‌ಫ್ಲಮೇಶನ್‌ಗೆ ಒಳಗಾಗುತ್ತದೆ. ಇದರಿಂದ ಚರ್ಮದ ಮೇಲಿನ ಪೊರೆ ಕೆಂಪು ಬಣ್ಣದಿಂದ ಕೂಡಿದ ಮೊಡವೆಗಳ ರೂಪದಲ್ಲಿ ಕಳಚಿಕೊಳ್ಳುತ್ತದೆ. ಸಾಧಾರಣವಾಗಿ ವಾತಾವರಣ ತಂಪು ಇದ್ದಾಗ ಈ ರೋಗ ಲಕ್ಷಣಗಳು ಅಧಿಕವಾಗುತ್ತವೆ. ಈ ವ್ಯಾಧಿ ಚರ್ಮದ ಜತೆಗೆ ಕೀಲುಗಳಲ್ಲಿ ಕೂಡ ಪ್ರಭಾವ ಬೀರುತ್ತದೆ. ಆರೋಗ್ಯವಂಥ ಚರ್ಮವು ಕಾಲಕ್ರಮೇಣ ಉದುರುವುದರಿಂದ ಅದರ ಕೆಳಗೆ ಹೊಸ ಜೀವಕೋಶಗಳು ನಿರಂತರವಾಗಿ ಉತ್ಪತ್ತಿಯಾಗುತ್ತಿರುತ್ತವೆ. ಸುಮಾರು ಒಂದು ತಿಂಗಳ ಕಾಲ ಈ ಕಣಗಳು ಹೊರಗಡೆ ಸೇರಿಕೊಳ್ಳುತ್ತವೆ. ಈ ರೀತಿಯ ದೇಹದ ಪೊರೆಯಾಗಿ ಮಾರ್ಪಡುವ ಕಣಗಳು ಕ್ರಮೇಣ ನಿರ್ಜೀವವಾಗಿ ಉದುರಿ ಹೋಗುತ್ತವೆ. ಕೆಳಗಡೆ ಇರುವ ಕಣಗಳನ್ನು ಹೊಸ ಚರ್ಮ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ರೋಗ ಕಣಗಳ ಮೇಲೆ ದಾಳಿ ನಡೆಸುವುದರಿಂದ ಸೋರಿಯಾಸಿಸ್ ಉಂಟಾಗುತ್ತದೆ.


ಕಾರಣಗಳು: ಅನುವಂಶೀಯ ಕಾರಣಗಳಿಂದ ಅಥವಾ ಮಾನಸಿಕ ಒತ್ತಡದಿಂದ ಈ ಕಾಯಿಲೆ ಬರುತ್ತದೆ. ದೇಹದ ರೋಗನಿರೋಧಕ ವ್ಯವಸ್ಥೆಯಲ್ಲಿ ಅಸಮತೋಲನ ಏರ್ಪಡುತ್ತದೆ. ಅಲ್ಲದೆ ಹಲವು ಬಗೆಯ ಔಷಧಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದಲೂ ಸೋರಿಯಾಸಿಸ್ ಬರಬಹುದು.


ದುಷ್ಪರಿಣಾಮಗಳು: ಸೋರಿಯಾಸಿಸ್ ಅರ್ಥೈಟಿಸ್, ಮಾನಸಿಕ ಅಶಾಂತಿ, ಲವಣಗಳು, ವಿಟಮಿನ್ ಲೋಪಕ್ಕೆ ದಾರಿ ಮಾಡಿಕೊಡುತ್ತದೆ.


ಲಕ್ಷಣಗಳು: ತಲೆ, ಮೊಣಕೈ, ಮೊಣಕಾಲು, ಅಂಗೈ, ಪಾದ ಹಾಗೂ ಹೊಟ್ಟೆಯ ಮೇಲ್ಭಾಗದ ಚರ್ಮದ ಮೇಲೆ ಸೋರಿಯಾಸಿಸ್ ಪ್ರಭಾವ ಬೀರುತ್ತದೆ.


ಚರ್ಮ ಕೆಂಪಾಗುವುದು, ಸಾಧಾರಣದಿಂದ ಅತಿ ತೀವ್ರ ತುರಿಕೆ, ಚರ್ಮ ಒಡೆದು ಹೋಗುವುದರಿಂದ ತೀವ್ರವಾದ ನೋವು, ಸೋರಿಯಾಸಿಸ್ ತಲೆಯಲ್ಲಿ ಇದ್ದಾಗ ಹೊಟ್ಟು ಹಾಗೂ ಕೂದಲುದುರುವಿಕೆ, ಅಂಗೈ, ಪಾದಗಳಲ್ಲಿನ ಚರ್ಮ ಹೊಟ್ಟಿನ ರೂಪದಲ್ಲಿ ಉದುರುವುದು.

ಸೋರಿಯಾಸಿಸ್ ರೋಗ ತೀವ್ರವಾಗಿದ್ದಾಗ ಕೀಲುಗಳಲ್ಲಿ ನೋವು ಕಾಣಿಸುತ್ತದೆ.


ಮುಂಜಾಗ್ರತೆ: ಅಧಿಕ ನೀರಿನ ಸೇವನೆ, ಅಧಿಕ ಪ್ರೋಟೀನ್‌ಯುಕ್ತ ಆಹಾರ ಸೇವನೆ, ಚರ್ಮ ಉದುರಿ ಹೋಗದಂತೆ ಕೊಬ್ಬರಿ ಎಣ್ಣೆ, ಮಾಯ್ಚಿರೈಸರ್ ಹಚ್ಚಬೇಕು. ಚರ್ಮದ ಮೃದುತ್ವ ಕಾಪಾಡಲು ಒಮೆಗಾ 3 ಇರುವ ಆಹಾರ ಸೇವಿಸುವುದು, ಪ್ರತಿದಿನ ವ್ಯಾಯಾಮ ಮಾಡುವುದು, ಪ್ರತಿನಿತ್ಯ ಬೆಳಗಿನ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡುವುದು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಚಳಿಗಾಲ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಕೆಲವು ದುರಾಭ್ಯಾಸಗಳಿಂದ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.


ರೋಗ ಪತ್ತೆ ಪರೀಕ್ಷೆಗಳು: ಸಿಬಿಸಿ, ಇಎಸ್‌ಬಿ, ಚರ್ಮ ಬಯೋ ಸೈ, ಕ್ಷ ಕಿರಣ(ಸೋರಿಯಾಸಿಸ್ ಕೀಲುಗಳ ನೋವು ಹೆಚ್ಚಾದಾಗ), ಮುಂತಾದ ಪರೀಕ್ಷೆಗಳನ್ನು ಮಾಡಬೇಕು. ಸಾಧಾರಣವಾಗಿ ಅನುಭವಿ ವೈದ್ಯರು ರೋಗಿಯ ಚರ್ಮವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರಿಂದ ರೋಗವನ್ನು ಪತ್ತೆ ಹಚ್ಚುತ್ತಾರೆ.


ಕೃಪೆ: #ವಿಜಯ #ಕರ್ನಾಟಕ ದಿನಪತ್ರಿಕೆ

***



No comments:

Post a Comment