SEARCH HERE

Friday 1 October 2021

ರುದ್ರ ಚಮಕ ಮತ್ತು ಅಗಣಿತ ಗಣಿತ

 ರುದ್ರ, ಚಮಕ ಮತ್ತು ಅಗಣಿತ ಗಣಿತ


(ಗಣಿತವೆಂದರೆ ತಲೆನೋವು ಎನ್ನುವವರೂ ಇದನ್ನು ಓದಿ ಅರಗಿಸಿಕೊಳ್ಳಬಹುದು! )


ಗಣಿತ ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿ ಇದೆಯೋ, ಅದೇರೀತಿ ನಮ್ಮ ಸನಾತನ ಧಾರ್ಮಿಕ ವಿಧಿವಿಧಾನಗಳಲ್ಲೂ ಹಾಸುಹೊಕ್ಕಾಗಿದೆ.


ಒಂದು ಸರಳ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ರುದ್ರ ಪಠಣ. ಅದು ಪರಶಿವನನ್ನು ಆರಾಧಿಸುತ್ತ ಆಶೀರ್ವಾದ ಬೇಡುವ ಸ್ತೋತ್ರ. ರುದ್ರದಲ್ಲಿ ಒಟ್ಟು 11 ಭಾಗಗಳು (ಅನುವಾಕಗಳು) ಇವೆ. ರುದ್ರದ ನಂತರ ಪಠಿಸುವ ’ಚಮಕ’ದಲ್ಲೂ ಒಟ್ಟು 11 ಭಾಗಗಳಿವೆ. ಒಂದು ಸರ್ತಿ ರುದ್ರ ಮತ್ತು ಚಮಕಗಳನ್ನು ಪಠಿಸುವುದಕ್ಕೆ ದೈನಂದಿನ ’ನ್ಯಾಸ’ ಎಂದು ಹೆಸರು.


ವಿಶೇಷ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಸರ್ತಿ ರುದ್ರಪಠಣ ನಡೆಯುತ್ತದೆ. ಒಟ್ಟು 11 ಸರ್ತಿ ಪಠಿಸುವ ಪದ್ಧತಿಯಿದೆ. ಹೀಗೆ 11 ಸರ್ತಿ ಪಠಿಸುವಾಗ ರುದ್ರದ ಒಂದು ಆವರ್ತನ ಮುಗಿಸಿ ಚಮಕದ ಒಂದು ಭಾಗ (ಹನ್ನೊಂದರಲ್ಲಿ ಒಂದು) ಪಠಿಸುತ್ತಾರೆ. ರುದ್ರದ ಇನ್ನೊಂದು ಆವರ್ತನ ಮುಗಿಸಿದ ಮೇಲೆ ಚಮಕದ ಇನ್ನೊಂದು ಭಾಗ (ಅನುಕ್ರಮವಾಗಿ) ಹೀಗೆ. ಒಟ್ಟು 11 ಸರ್ತಿ ರುದ್ರವನ್ನು (ಮತ್ತು 11 ಭಾಗಗಳ ಮೂಲಕ ಒಂದು ಸರ್ತಿ ಇಡೀ ಚಮಕವನ್ನು) ಪಠಿಸುವುದಕ್ಕೆ "ಏಕಾದಶಿನೀ" ಎಂದು ಹೆಸರು.


ಅಂತಹ 11 ಏಕಾದಶಿನೀಗಳನ್ನು (ಅಂದರೆ 11X11 = 121 ಸರ್ತಿ ರುದ್ರವನ್ನು ಮತ್ತು 11 ಸರ್ತಿ ಚಮಕವನ್ನು) ಪಠಿಸುವುದಕ್ಕೆ ’ಲಘುರುದ್ರ’ ಎನ್ನುತ್ತಾರೆ.


11 ಲಘುರುದ್ರಗಳು (ಅಂದರೆ 11X11X11 = 1331 ಸರ್ತಿ ರುದ್ರವನ್ನು ಮತ್ತು 121 ಸರ್ತಿ ಚಮಕವನ್ನು) ಪಠಿಸುವುದಕ್ಕೆ ’ಮಹಾರುದ್ರ’ ಎನ್ನುತ್ತಾರೆ.


11 ಮಹಾರುದ್ರಗಳು (ಅಂದರೆ 11X11X11X11 = 14641 ಸರ್ತಿ ರುದ್ರವನ್ನು, 1331 ಸರ್ತಿ ಚಮಕವನ್ನು) ಪಠಿಸುವುದಕ್ಕೆ ’ಅತಿರುದ್ರ’ ಎನ್ನುತ್ತಾರೆ.


’ಚಮಕ’ದಲ್ಲಿ ಮೊದಲ 10 ಅನುವಾಕಗಳಲ್ಲಿ ಮನುಷ್ಯನ ಆತ್ಮತೃಪ್ತಿ ಮತ್ತು ಸಂತೋಷಕ್ಕಾಗಿ ಏನು ಬೇಕೋ ಅವೆಲ್ಲವನ್ನೂ ಪರಮೇಶ್ವರನ ಬಳಿ ಪ್ರಾರ್ಥಿಸುವ ಮಂತ್ರಗಳಿವೆ. ಆದರೆ, ಚಮಕದ 11ನೇ ಅನುವಾಕವು ಅತಿ ವಿಶಿಷ್ಟವಾದುದು. ಅದರಲ್ಲಿ ಭಕ್ತನು ತನಗೆ ’ಏನು’ ಬೇಕು ಎಂದು ಕೇಳುವುದಿಲ್ಲ, ಬದಲಿಗೆ ’ಎಷ್ಟು’ ಪ್ರಮಾಣದಲ್ಲಿ ಬೇಕು ಎಂದು ಕೇಳಿಕೊಳ್ಳುತ್ತಾನೆ. ಮೊದಲು 1 ರಿಂದ 33ರವರೆಗಿನ ಬೆಸ ಸಂಖ್ಯೆಗಳನ್ನು ಉಚ್ಚರಿಸಿ ಅಷ್ಟು ಪ್ರಮಾಣದಲ್ಲಿ ಬೇಕು ಎನ್ನುತ್ತಾನೆ. ಆಮೇಲೆ 4 ರಿಂದ ಆರಂಭಿಸಿ 48ರವರೆಗೆ 4ರ ಅಪವರ್ತ್ಯಗಳನ್ನು ಉಚ್ಚರಿಸಿ ಅಷ್ಟು ಪ್ರಮಾಣದಲ್ಲಿ ಬೇಕು ಎನ್ನುತ್ತಾನೆ. ಸಂಸ್ಕೃತ ಸಂಖ್ಯೆಗಳ ರೂಪದಲ್ಲಿ ಅದು ಹೀಗೆ ಬರುತ್ತದೆ:


"ಏಕಾ ಚ ಮೇ ತಿಸ್ರಶ್ಚ ಮೇ ಪಂಚ ಚ ಮೇ ಸಪ್ತ ಚ ಮೇ ನವ ಚ ಮ ಏಕಾದಶ ಚ ಮೇ ತ್ರಯೋದಶ ಚ ಮೇ ಪಂಚ ದಶ ಚ ಮೇ ಸಪ್ತ ದಶ ಚ ಮೇ ನವ ದಶ ಚ ಮ ಏಕವಿಗ್ಂಶತಿಶ್ಚ ಮೇ ತ್ರಯೋವಿಗ್ಂಶತಿಶ್ಚ ಮೇ ಪಂಚವಿಗ್ಂಶತಿಶ್ಚ ಮೇ ಸಪ್ತವಿಗ್೦ ಶತಿಶ್ಚ ಮೇ ನವವಿಗ್೦ಶತಿಶ್ಚ ಮ ಏಕ ತ್ರಿಗ್ಂ ಶಚ್ಚ ಮೇ ತ್ರಯಸ್ತ್ರಿಗ್ಂಶಚ್ಚ ಮೇ ||


ಚತಸ್ರಶ್ಚ ಮೇsಷ್ಟೌ ಚ ಮೇ ದ್ವಾದಶ ಚ ಮೇ ಷೋಡಶ ಚ ಮೇ ವಿಗ್ಂಶತಿಶ್ಚ ಮೇ ಚತುರ್ವಿಗ್ಂ ಶತಿಶ್ಚ ಮೇsಷ್ಟಾವಿಗ್ಂ ಶತಿಶ್ಚ ಮೇ ದ್ವಾತ್ರಿಗ್ಂ ಶಚ್ಚ ಮೇ ಷಟ್ತ್ರಿಗ್ಂ ಶಚ್ಚ ಮೇ ಚತ್ವಾರಿಗ್ಂ ಶಚ್ಚ ಮೇ ಚತುಶ್ಚತ್ವಾರಿಗ್ಂ ಶಚ್ಚ ಮೇsಷ್ಟಾಚತ್ವಾರಿಗ್ಂ ಶಚ್ಚ ಮೇ ||"


ಕನ್ನಡದಲ್ಲಿ ಹೇಳುವುದಾದರೆ "ನನಗೆ 1,3,5,7,9,11,13,...., 27, 29, 31, 33 ಬೇಕು. ಹಾಗೆಯೇ 4,8,12,16,.... 40, 44, 48 ಬೇಕು" ಎಂದು.


ಆದರೆ ಈ ಸಂಖ್ಯೆಗಳ ಗೂಢಾರ್ಥ ಏನು?


1 = ಪ್ರಕೃತಿ

3 = ಸತ್ವ, ರಜೋ, ತಮೋ ಗುಣಗಳು

5 = ಭೂಮಿ, ನೀರು, ಅಗ್ನಿ, ವಾಯು, ಆಕಾಶ. ಎಂಬ ಪಂಚಭೂತಗಳು

7 = ಐದು ಜ್ಞಾನೆಂದ್ರಿಯಗಳು, ಮನಸ್ಸು ಮತ್ತು ಬುದ್ಧಿ

9 = ನವರಂಧ್ರಗಳು

11 = ಹತ್ತು ಪ್ರಾಣಗಳು ಮತ್ತು ಸುಶುಮ್ನ ನಾಡಿ

13 = ದೇವತೆಗಳು

15 = ಮನುಷ್ಯದೇಹದಲ್ಲಿನ ನಾಡಿಗಳು

17 = ಮನುಷ್ಯದೇಹದಲ್ಲಿನ ಅಂಗಾಂಗಗಳು

19 = ಔಷಧೀಯ ಗಿಡಮೂಲಿಕೆಗಳು

21 = ಮನುಷ್ಯದೇಹದ ಅತಿಮುಖ್ಯ ಭಾಗಗಳು

23 = ಕಾಯಿಲೆಗಳನ್ನು ನಿಯಂತ್ರಿಸುವ ದೇವತೆಗಳು

25 = ಸ್ವರ್ಗದಲ್ಲಿನ ಅಪ್ಸರೆಯರು

27 = ಗಂಧರ್ವರು

29 = ನಭೋಮಂಡಲ ದೇವತೆಗಳು

31 = ಪ್ರಪಂಚಗಳು

33 = ಕೋಟಿ ದೇವತೆಗಳು


4ರ ಅಪವರ್ತ್ಯಗಳು:

4 = ಧರ್ಮ, ಅರ್ಥ, ಕಾಮ, ಮೋಕ್ಷ

8 = ನಾಲ್ಕು ವೇದಗಳು ಮತ್ತು ನಾಲ್ಕು ಉಪವೇದಗಳು

12 = ಆರು ವೇದಾಂಗಗಳು ಮತ್ತು ಆರು ಶಾಸ್ತ್ರಗಳು.

16 = ದೇವರಿಂದ ಲಭಿಸಬೇಕಾದ ಜ್ಞಾನ

20 = ಮಹಾಭೂತಗಳು

24 = ಗಾಯತ್ರೀ ಛಂದಸ್ಸಿನಲ್ಲಿರುವ ಅಕ್ಷರಗಳು

28 = ಊಷ್ಣಿಕ್ ಛಂದಸ್ಸಿನಲ್ಲಿರುವ ಅಕ್ಷರಗಳು

32 = ಅನುಷ್ಟುಪ್ ಛಂದಸ್ಸಿನಲ್ಲಿರುವ ಅಕ್ಷರಗಳು

36 = ಬೃಹತೀ ಛಂದಸ್ಸಿನಲ್ಲಿರುವ ಅಕ್ಷರಗಳು

40 = ಪಂಕ್ತೀ ಛಂದಸ್ಸಿನಲ್ಲಿರುವ ಅಕ್ಷರಗಳು

44 = ತ್ರಿಷ್ಟುಪ್ ಛಂದಸ್ಸಿನಲ್ಲಿರುವ ಅಕ್ಷರಗಳು

48 = ಜಗತಿ ಛಂದಸ್ಸಿನಲ್ಲಿರುವ ಅಕ್ಷರಗಳು


ಕೆಲವು ವಿದ್ವಾಂಸರು/ವಿಜ್ಞಾನಿಗಳು ಈ ಸಂಖ್ಯೆಗಳನ್ನು ಮನುಷ್ಯ ದೇಹದಲ್ಲಿನ ಡಿಎನ್‌ಎ ಯುಗ್ಮಗಳ ಸಂಖ್ಯೆಗಳೊಂದಿಗೆ ತಳುಕು ಹಾಕುತ್ತಾರೆ. 1 ರಿಂದ 33ರವರೆಗಿನ ಬೆಸಸಂಖ್ಯೆಗಳನ್ನು ಉಚ್ಚರಿಸಿರುವುದು 33000 ಮೈಟೋಕಾಂಡ್ರಿಯಲ್ ಡಿಎನ್‌ಎ ಯುಗ್ಮಗಳನ್ನೂ (base pairs) 4ರಿಂದ 48ರವರೆಗಿನ ಅಪವರ್ತ್ಯಗಳು 48 ದಶಲಕ್ಷ ನ್ಯೂಕ್ಲಿಯರ್ ಬೇಸ್ ಡಿಎನ್‌ಎಗಳನ್ನೂ ಪ್ರತಿನಿಧಿಸುತ್ತವೆ ಎನ್ನುತ್ತಾರೆ. ಈ ಡಿಎನ್‌ಎ ಯುಗ್ಮಗಳು ಮನುಷ್ಯನ ದೈಹಿಕ ಉಚ್ಛ್ರಾಯಸ್ಥಿತಿಗೆ ಮೂಲಾಧಾರ ಎನ್ನುವುದನ್ನು ಜೀವವಿಜ್ಞಾನಿಗಳೂ ಪ್ರತಿಪಾದಿಸಿದ್ದಾರೆ.


* * *

"ನೋಡಿದಿರಾ!? ನಮ್ಮ ಋಷಿಮುನಿಗಳಿಗೆ ಭಗವಂತನ ಆರಾಧನೆಯಲ್ಲೇ ಗಣಿತ, ಅಧ್ಯಾತ್ಮ, ಜೀವಶಾಸ್ತ್ರ, ಮುಂತಾಗಿ ಎಲ್ಲವನ್ನೂ ತಳುಕುಹಾಕುವ ಅಪ್ರತಿಮ ಕೌಶಲ ಇತ್ತು!" ಎಂದು ಅವರ ಹಿರಿಮೆಯನ್ನು ಸಾರುವುದಕ್ಕಾಗಿಯಷ್ಟೇ ಇದನ್ನಿಲ್ಲಿ ಪ್ರಸ್ತುತಪಡಿಸಿದ್ದಲ್ಲ. ಒಂದಿಷ್ಟು ’ಮೆದುಳಿಗೆ ಮೇವು’ (food for thought) ಇರಲಿ ಎಂದು ಈ ವಿಚಾರವನ್ನು ಪ್ರಕಟಿಸಿದ್ದು. ಇಂಥದೊಂದು ವಿಷಯ ಇದೆ ಎಂದು ಎಲ್ಲರೂ ಕಲೆತು ತಿಳಿದುಕೊಳ್ಳುವುದು ಇಲ್ಲಿನ ಉದ್ದೇಶ.

***


No comments:

Post a Comment