SEARCH HERE

Friday 1 October 2021

ಸಂಕಷ್ಟ ಹರ ಚತುರ್ಥಿ ಮಹತ್ವ ಸಂಕಷ್ಟಿ ಚತುರ್ಥಿ sankashti ಗಣೇಶ

 ಸಂಕಷ್ಟ ಚತುರ್ಥಿ ಮಹತ್ವ, ಪೂಜಾ ವಿಧಿ, ವ್ರತ ಕಥಾ

ಸಂಕಷ್ಟ ಹರ ಚತುರ್ಥಿ ಮಹತ್ವ ಓದಿ ತಿಳಿಯಿರಿ .ತಿಳಿದು ಅಚರಿಸಿ .


ವಕ್ರತುಂಡ, ಗಜವದನ ಗಣೇಶ ವಿಘ್ನನಿವಾರಕನೆಂದೇ ಪ್ರಸಿದ್ಧ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಸಂಕಷ್ಟ ಹರ ಚತುರ್ಥಿ ಎಂದೇ ಹೆಚ್ಚು ಪರಿಚಿತ.


ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟಹರ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ.


ಸಂಕಷ್ಟ ಹರ ಚತುರ್ಥಿಯ ಮಹತ್ವ:


ಸಂಕಷ್ಟಹರ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ ದಿನದಂದು ಅಂದರೆ ಯಾವ ದಿನ ಸಂಕಷ್ಟಹರ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಛ ದೇವ ಎಂದು ಘೋಷಿಸಲಾಯಿತು ಎಂಬುದು ಒಂದು ನಂಬಿಕೆಯಾದರೆ, ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ, ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ.


ಆಚರಣೆ ಹೇಗೆ?

ಸಾಧ್ಯವಾದಲ್ಲಿ ಉಪವಾಸ ಮಾಡಬಹುದು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು.

ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.


ಸಂಕಷ್ಟ ಹರ ವ್ರತದ ಕಥೆ


ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ

ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ತನ್ನ ರಾಜ್ಯ, ಐಶ್ವರ್ಯ ಎಲ್ಲವನ್ನೂ ಕಳೆದುಕೊಂಡು ತನ್ನ ತಮ್ಮಂದಿರೊಂದಿಗೆ ಕಾಡಿನ ಪಾಲಾಗಿ ದುಃಖದಲ್ಲಿ ಇದ್ದ ಧರ್ಮರಾಯನನ್ನು ಸೂತ ಪುರಾಣಿಕ ಮಹರ್ಷಿಗಳು ಸಮಾಧಾನ ಮಾಡಿದರು. ಆಗ ಧರ್ಮರಾಯನು ಸೂತರ ಬಳಿ ತನ್ನ ಕಷ್ಟಗಳೆಲ್ಲಾಲ್ಲ ಪರಿಹಾರವಾಗಿ ರಾಜ್ಯ ತನಗೆ ಮರಳಿ ಸಿಗಲು ಉತ್ತಮ ವ್ರತ ಪೂಜೆ ಒಂದನ್ನು ತಿಳಿಸಲು ಪ್ರಾರ್ಥಿಸಿದ.


ಆಗ ಪೂಜ್ಯರು ಧರ್ಮರಾಜನಿಗೆ ಸಾಕ್ಷಾತ್ ಪರಶಿವನೇ ಕುಮಾರಸ್ವಾಮಿಗೆ ತಿಳಿಸಿದ ವರಸಿದ್ಧಿ ವಿನಾಯಕ ವ್ರತವನ್ನು ಮಾಡಲು ತಿಳಿಸಿದರು. ಅಷ್ಟೇ ಅಲ್ಲ ನಳ ಮಹಾರಾಜನಿಗೆ ದಮಯಂತಿ ಸಿಕ್ಕಿದ್ದು ಹಾಗೂ ಕೃಷ್ಣ ಪರಮಾತ್ಮನಿಗೆ ಶಮಂತಕ ಮಣಿ ಸಹಿತ ಜಾಂಬವತಿ ಲಭಿಸಿದ್ದು ಇದೇ ವ್ರತವನ್ನು ಆಚರಣೆ ಮಾಡಿದ್ದರಿಂದ. ಶ್ರೀರಾಮ, ಭಗೀರಥ ಕೂಡ ಈ ವ್ರತದ ಆಚರಣೆ ಮಾಡಿದ್ದಾರೆ.


ಎಲ್ಲರೂ ಆಚರಿಸುವ ವ್ರತ

ಈ ವ್ರತವನ್ನು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಹೀಗೆ ಎಲ್ಲ ವರ್ಣದವರೂ ಮಾಡಬಹುದು. ಯಾವುದೇ ಜಾತಿ- ಧರ್ಮ- ಮತ- ಭೇದಗಳಿಲ್ಲದೆ ಎಲ್ಲರೂ ಆಚರಣೆ ಮಾಡಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರು ಬೇಕಾದರೂ ಈ ವ್ರತ ಮಾಡಬಹುದು.


ಇನ್ನು ಈ ವ್ರತಾಚರಣೆಯಿಂದ ಧನಾಕಾಂಕ್ಷಿಗೆ ಧನ, ವಿದ್ಯೆ ಬೇಕಾದವರಿಗೆ ಉತ್ತಮ ವಿದ್ಯೆ, ಆರೋಗ್ಯ ಅವಶ್ಯಕತೆ ಇರುವವರಿಗೆ ಉತ್ತಮ ಆರೋಗ್ಯ... ಹೀಗೆ ಭಕ್ತರ ನಾನಾ ವಿಧ ಬೇಡಿಕೆಗಳನ್ನು ಈಡೇರಿಸುವ ಅತ್ಯುತ್ತಮ ವ್ರತ ಇದಾಗಿದೆ.


ಶ್ರೀ ಗಣೇಶ ಮಾನಸ ಪೂಜಾಸ್ತುತಿ


ನಾನಾರತ್ನ ವಿಚಿತ್ರಕಂ ರಮಣಕಂ ಸಿಂಹಾಸನಂ ಕಲ್ಪಿತಂ|

ಸ್ನಾನಂ ಜಾಹ್ನವಿವಾರಿಣಾ ಗಣಪತೇ ಪೀತಾಂಬರಂ ಗೃಹ್ಯತಾಂ||

ಕಂಠಂ ಮೌಕ್ತಿಕ ಮಾಲಿಕಾ ಶ್ರುತಿಯುಗೇ ದ್ವೇಧಾರಿತೆ ಕುಂಡಲೇ|

ನಾನಾರತ್ನ ವಿರಾಜಿತೊ ರವಿ ವಿಭಾಯುಕ್ತಃ ಕಿರೀಟಃ ಶಿರೇ||೧||


ಭಾಲೇ ಚರ್ಚಿತ ಕೇಶರಂ ಮೃಗಮದಾಮೋದಾಂಕಿತಂ ಚಂದನಂ|

ಕಸ್ತೂರೀ ತಿಲಕೋದ್ಭವಂ ಸುಕುಸುಮಂ ಮಂದಾರ ದೂರ್ವಾಶಮಿ||

ಗುಗ್ಗೂಲೋದ್ಭವ ಧೂಪಕಂ ವಿರಚಿತಂ ದೀಪಂ ಸವರ್ತ್ಯಾಯುತಂ|

ಭಕ್ಷ್ಯಂ ಮೋದಕ ಸಂಯುತಂ ಗಣಪತೇ ಕ್ಷೀರೋದನಂ ಗೃಹ್ಯತಾಮ್||೨||


ತಾಂಬೂಲಂ ಮನಸಾಮಯಾ ವಿರಚಿತಂ, ಜಂಬೂಫಲಂ ದಕ್ಷಿಣಾ|

ಸಾಷ್ಟಾಂಗ ಪ್ರಣತಿಂ ಸ್ತುತಿಂ ಬಹುವಿಧಾಂ ಪೂಜಾ ಗೃಹಾಣ ಪ್ರಭೋ||

ಮೇ ಕಾಮಃ ಸತತಂ ತವಾರ್ಚನವಿಧೌ ಬುದ್ಧಿಸ್ತವಾಲಿಂಗನೇ|

ಸ್ವೇಚ್ಛಾತೇ ಸುಖದರ್ಶನೆ ಗಣಪತೇ ಭಕ್ತಿಸ್ತು ಪಾದಾಂಬುಜೇ||೩||


ಅರ್ಥ:

ಎಲೈ ಗಣಪತೇ, ಹಲವು ಬಗೆಯ ರತ್ನಗಳಿಂದ ವಿಚಿತ್ರವೂ ರಮಣೀಯವೂ ಆದ ಸಿಂಹಾಸನ ಗಂಗಾಜಲದಿಂದ ಸ್ನಾನ ಮತ್ತು ಪೀತಾಂಬರಗಳನ್ನು ನೀನು ಸ್ವೀಕರಿಸು.

ಕೊರಳಲ್ಲಿ ಮುತ್ತಿನ ಮಾಲೆಯೂ ಕಿವಿಗಳಲ್ಲಿ ಸೂರ್ಯಕಾಂತಿಯಿಂದ ಮಿನುಗುವ ಕುಂಡಲಗಳೂ ತಮ್ಮ ತಲೆಯ ಮೇಲೆ ಹಲವಾರು ತರದ ರತ್ನಗಳಿಂದ ಶೋಭಿಸುವ ಮುಕುಟವೂ ಇವೆ.(೧)


ಕಸ್ತೂರಿಯಿಂದ ಸಂತೋಷವನ್ನು ಮಾಡುವ ಚಂದನವೂ ಮತ್ತು ಕೇಶರಲೇಪನವುಳ್ಳ ಹಣೆಯುಳ್ಳವನೂ ಒಳ್ಳೆ ಹೂವು,ಎಕ್ಕೆ ಹೂವು, ಗರಿಕೆ ಗಳಿಂದ ತಲೆಯನ್ನು. ಶೋಭಿತಗೊಳಿಸಿದವನೂ ಆದ ಗಣೇಶನೆ,ಗುಗ್ಗುಳದ ಧೂಪ ಮತ್ತು ಸುಂದರವಾದ ಬತ್ತಿಯುಳ್ಳ ದೀಪ, ಉಂಡೆಯ ಊಟ, ಮತ್ತು ಹಾಲು ಅನ್ನ ಇವನ್ನು ನೀನು ಸ್ವೀಕರಿಸು.(೨)


ನಾನು ಮನಸ್ಸಿನಿಂದ ತಯಾರಿಸಿದ ತಾಂಬೂಲ, ನೆರಳೆಹಣ್ಣು ದಕ್ಷಿಣೆ, ಸಾಷ್ಟಾಂಗ ನಮಸ್ಕಾರ, ಬಹುವಿಧ ಪೂಜೆ, ಸ್ತುತಿ ಇವೆಲ್ಲವನ್ನು ಪ್ರಭುವೆ ನೀನು ಸ್ವೀಕರಿಸು. ನನ್ನ ಬಯಕೆಯು ಯಾವಾಗಲೂ ನಿನ್ನ ಪೂಜೆಯಲ್ಲಿ, ಬುದ್ಧಿಯು ನಿನ್ನ ಧ್ಯಾನದಲ್ಲಿ, ನನ್ನ ಇಚ್ಛೆಯು ನಿನ್ನ ಮುಖದರ್ಶನದಲ್ಲಿ ಮತ್ತು ಭಕ್ತಿಯು ನಿಮ್ಮ ಚರಣಗಳಲ್ಲಿ ಎಲೈ ಗಣಪತಿಯೇ ನೆಲೆಗೊಳ್ಳಲಿ.


ಸಾಹಿತ್ಯ: ಪುರಂದರದಾಸರ ಸಾಹಿತ್ಯ


ಗಜವದನ ಬೇಡುವೆ |೨|

ಗಜವದನ ಬೇಡುವೆ ಗೌರಿ ತನಯ |೩|

ತ್ರಿಜಗ ವಂದಿತನೆ ಸುಜನರ ಪೊರೆವನೆ

ಗಜವದನ ಬೇಡುವೆ!


ಪಾಶಾಂಕುಶಧರ ಪರಮ ಪವಿತ್ರ |೨|

ಮೂಷಕ ವಾಹನ ಮುನಿ ಜನ ಪ್ರೇಮ |೩|

ಗಜವದನ ಬೇಡುವೆ ಗೌರಿ ತನಯ

ತ್ರಿಜಗ ವಂದಿತನೆ ಸುಜನರ ಪೊರೆವನೆ

ಗಜವದನ ಬೇಡುವೆ!


ಮೋದದಿ ನಿನ್ನಯ ಪಾದವ ತೋರೊ

ಸಾಧುವಂದಿತನೆ ಆದರದಿಂದಲಿ |೨|

ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|

ನಿರತ ನೆನೆಯುವಂತೆ ವರ ದಯ ಮಾಡೊ |೩|


ಗಜವದನ ಬೇಡುವೆ ಗೌರಿ ತನಯ

ತ್ರಿಜಗ ವಂದಿತನೆ ಸುಜನರ ಪೊರೆವನೆ

ಗಜವದನ ಬೇಡುವೆ


ಎಲ್ಲಾ ಸಂಕಷ್ಟ ಹರ ಗಣಪತಿಯನ್ನು ಪೂಜಿಸಿ

ನಿಮ್ಮ ಇಷ್ಟಾರ್ಥ ಸಿದ್ಧಿಯಾಗುವಂತೆ ಅವನು ಅನುಗ್ರಹಿಸುತ್ತಾನೆ.

#ಕೃಪೆ_ನಿರ್ಮಲರಾಜೇಶ್

****

 

ವಕ್ರತುಂಡ ಸಂಕಷ್ಟಹರ ಚತುರ್ಥಿ ಇದೆ. ವಕ್ರತುಂಡ ಸಂಕಷ್ಟಿ ಚತುರ್ಥಿಯನ್ನು ಮಹಾ ಗಣಪತಿಗೆ ಸಮರ್ಪಿಸಲಾಗಿದೆ. ವಿಘ್ನರಾಜ ಅಂದರೆ ಅಡೆತಡೆಗಳನ್ನು ನಿಯಂತ್ರಿಸುವವನು. ಆದ್ದರಿಂದ ಈ ದಿನ ಭಕ್ತರು ತಮ್ಮ ಜೀವನದಲ್ಲಿ ಅಡೆತಡೆಗಳನ್ನು ತೊಡೆದುಹಾಕಲು ಉಪವಾಸವನ್ನು ಮಾಡುವ ಮೂಲಕ ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ವಿಮೋಚನೆ.


ಈ ದಿನ ಗಣೇಶನನ್ನು ಪೂಜಿಸುವುದರಿಂದ ಭಕ್ತನಿಗೆ ತೊಂದರೆ ನೀಡುವ ಸಮಸ್ಯೆಯನ್ನು ಗಣೇಶನು ತೆಗೆದುಹಾಕುತ್ತಾನೆ. ಸಮಸ್ಯೆಗಳಿಂದ ಮುಕ್ತಿ ನೀಡುತ್ತಾನೆ. 


ಈ ಚತುರ್ಥಿ ತಿಥಿಯಂದು ರಾತ್ರಿಯಲ್ಲಿ ಚಂದ್ರನನ್ನು ಪೂಜಿಸುವ ಮೂಲಕ ವ್ರತ ಮುಗಿಯುವುದು. ವಕ್ರತುಂಡ ಸಂಕಷ್ಟಿ ಚತುರ್ಥಿಯಂದು ಸಿದ್ಧಿ ಯೋಗ ರೂಪುಗೊಳ್ಳುತ್ತದೆ. ಈ ಯೋಗದಲ್ಲಿ ಗಣೇಶನ ಆರಾಧನೆಯು ಎರಡು ಪಟ್ಟು ಫಲಿತಾಂಶವನ್ನು ನೀಡುತ್ತದೆ. ಈ ಶುಭ ಯೋಗಗಳಲ್ಲಿ ವಿಘ್ನರಾಜನನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ತೊಂದರೆಗಳು ನಿವಾರಣೆಯಾಗುತ್ತವೆ. ಉಪವಾಸ ಮಾಡುವವರು ಚಂದ್ರೋದಯದ ಸಮಯದಲ್ಲಿ ಚಂದ್ರನನ್ನು ಪೂಜಿಸಬೇಕು ಬಳಿಕ ಉಪವಾಸವನ್ನು ಪೂರ್ಣಗೊಳಿಸುತ್ತಾರೆ.


ಎಲ್ಲಾ ಅಡೆತಡೆಗಳ ನಿವಾರಣೆ

ಈ ದಿನದಂದು ಶಿವನು ತನ್ನ ಮಗ ಗಣೇಶನನ್ನು ಎಲ್ಲಾ ದೇವರುಗಳಿಗಿಂತ ಶ್ರೇಷ್ಠನೆಂದು ಘೋಷಿಸಿದನು ಎಂದು ನಂಬಲಾಗಿದೆ. ಪ್ರತಿ ತಿಂಗಳು, ಗಣಪತಿಯನ್ನು ಬೇರೆ ಬೇರೆ ಹೆಸರಿನಿಂದ ಪೂಜಿಸಲಾಗುತ್ತದೆ. ಈ ದಿನ ಭಕ್ತರು ಬೇಗ ಎದ್ದು ಸ್ನಾನ ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸುತ್ತಾರೆ. ನಂತರ ಅವರು ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಮತ್ತು ಸ್ಲೋಕಗಳನ್ನು ಪಠಿಸುವ ಮೂಲಕ ಗಣಪತಿಯನ್ನು ಪೂಜಿಸುತ್ತಾರೆ. ಭಕ್ತರು ವ್ರತ ಕಥಾ ಓದುವುದರೊಂದಿಗೆ ಸಂಜೆ ವ್ರತ ಪೂಜೆ ನಡೆಯುತ್ತದೆ. ವಿಘ್ನಹರ್ತದಿಂದ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ವಿಘ್ನಹರ್ತವು ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಭಕ್ತರು ನಂಬುತ್ತಾರೆ.


ಯುಧಿಷ್ಠಿರನಿಗೆ ಕಥೆ ಹೇಳಿದ ಶ್ರೀ ಕೃಷ್ಣ

ಧರ್ಮಗ್ರಂಥಗಳ ಪ್ರಕಾರ, ಪಾಂಡವ ರಾಜ ಯುಧಿಷ್ಠಿರನು ವಕ್ರತುಂಡ ಸಂಕಷ್ಟಿ ಗಣೇಶ ಚತುರ್ಥಿಗೆ ಸಂಬಂಧಿಸಿದ ಕಥೆಯನ್ನು ಹೇಳಲು ಶ್ರೀ ಕೃಷ್ಣನನ್ನು ಕೇಳಿದನು. ಆಗ ಶ್ರೀ ಕೃಷ್ಣ ಈ ಕಥೆಯನ್ನು ಹೇಳುತ್ತಾನೆ.


ಬಾಣಾಸುರನೆಂಬ ರಾಕ್ಷಸನಿದ್ದ. ಈತನಿಗೆ ಉಷಾ ಎಂಬ ಮಗಳಿದ್ದಳು. ಒಂದು ರಾತ್ರಿ ಅವಳು ಅನಿರುದ್ಧ ಎಂಬ ವ್ಯಕ್ತಿಯ ಬಗ್ಗೆ ಕನಸು ಕಂಡಳು. ಕನಸಿನ ನಂತರ ಅವಳು ಅನಿರುದ್ಧನನ್ನು ಭೇಟಿಯಾಗಲು ಉತ್ಸುಕಳಾಗಿದ್ದಳು. ಆದ್ದರಿಂದ ಎಲ್ಲಾ ನಿವಾಸಿಗಳ ಚಿತ್ರಗಳನ್ನು ಒಳಗೊಂಡಿರುವ ಮೂರು ಲೋಕಗಳ ರೇಖಾಚಿತ್ರಗಳನ್ನು ಮಾಡಲು ಚಿತ್ರಲೇಖಾ ಎಂಬ ತನ್ನ ಸ್ನೇಹಿತನನ್ನು ಕೇಳಿದಳು.


ಆ ಮೂಲಕ ಉಷಾ ಅನಿರುದ್ಧನನ್ನು ಹುಡುಕಲು ಪ್ರಾರಂಭಿಸಿದಳು. ಅವನ ಇರುವಿಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಲು ಸ್ನೇಹಿತ ಚಿತ್ರಲೇಖಾರನ್ನು ಕೇಳಿದಳು. ಉಷಾ ಅನಿರುದ್ಧನ ಮೇಲೆ ಎಷ್ಟು ಮೋಹಿತಳಾಗಿದ್ದಳೆ ಎಂದರೆ ಮದುವೆ ಆದರೆ ಅವನನ್ನೇ ಆಗುವುದಾಗಿ ನಿರ್ಧರಿಸಿದಳು. ಜೊತೆಗೆ ಅವನ ಪತ್ತೆಯಿಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ತನ್ನ ಸ್ನೇಹಿತನಿಗೆ ವಿವರಿಸಿದಳು.


ಚಿತ್ರಲೇಖಾ ಉಷಾಗೆ ಸಹಾಯ ಮಾಡಲು ನಿರ್ಧರಿಸಿದರು. ಇಬ್ಬರು ಅನಿರುದ್ಧನನ್ನು ಹುಡುಕಲು ಪ್ರಾರಂಭಿಸಿದರು. ಅಂತಿಮವಾಗಿ ಅನಿರುದ್ಧನನ್ನು ದ್ವಾರಿಕಾದಲ್ಲಿ ಕಂಡರು. ತರುವಾಯ ಅವಳು ರಾತ್ರಿಯಲ್ಲಿ ಅನಿರುದ್ಧನು ಮಲಗಿದ್ದಾಗ ಅವನನ್ನು ಅಪಹರಣ ಮಾಡಿ ಬಾಣಾಸುರನ ರಾಜ್ಯವನ್ನು ತಲುಪಿದಳು.


ಬಾಣಾಸುರರನನ್ನು ಸೋಲಿಸಿ ಅನಿರುದ್ಧನನ್ನು ರಕ್ಷಿಸಿದ ಶ್ರೀಕೃಷ್ಣ

ದ್ವಾರಿಕಾದಲ್ಲಿ ಅನಿರುದ್ಧನ ತಂದೆ ಪ್ರದ್ಯುಮ್ನ ತನ್ನ ಮಗ ನಾಪತ್ತೆಯಾದ ನಂತರ ಆತಂಕಗೊಂಡ. ಪ್ರದ್ಯುಮ್ಮನನು ಶ್ರೀ ಕೃಷ್ಣ ಮತ್ತು ರುಕ್ಮಿಣಿಯರ ಹಿರಿಯ ಮಗ. ಎಲ್ಲರೂ ಅನಿರುದ್ಧನನ್ನು ಹುಡುಕಿದರು. ಆದರೆ ಅನಿರುದ್ಧ ಪತ್ತೆಯಾಗಲಿಲ್ಲ. ಕೊನೆಗೆ ಅನಿರುದ್ಧನನ್ನು ಹುಡುಕಲು ಶ್ರೀಕೃಷ್ಣನು ಋಷಿ ಲೋಮಾಶ್ ಅವರ ಸಹಾಯವನ್ನು ಕೋರಿದ. ತಮ್ಮ ದಿವ್ಯ ಶಕ್ತಿಯ ಮೂಲಕ ಋಷಿಮುನಿಗಳು ಬಾಣಾಸುರನ ಮಗಳ ಬಗ್ಗೆ ತಿಳಿದು ನಡೆದ ಘಟನೆಯನ್ನು ವಿವರಿಸಿದರು. ಇದಕ್ಕೆ ಪರಿಹಾರವನ್ನೂ ಋಷಿಮುನಿಗಳು ಶ್ರೀಕೃಷ್ಣನಿಗೆ ತಿಳಿಸಿದರು. ಸಮಸ್ಯೆಯಿಂದ ಮುಕ್ತಿ ಹೊಂದಲು  ಸಂಕಷ್ಟಿ ಚತುರ್ಥಿಯಂದು ವ್ರತವನ್ನು ಆಚರಿಸುವಂತೆ ಋಷಿ ಶ್ರೀಕೃಷ್ಣನಿಗೆ ಸೂಚಿಸಿದರು. ಈ ವ್ರತದ ಫಲವಾಗಿ ಕೆಲವು ದಿನಗಳ ನಂತರ ಶ್ರೀ ಕೃಷ್ಣನು ಬಾಣಾಸುರನನ್ನು ಯುದ್ಧದಲ್ಲಿ ಸೋಲಿಸಿದನು ಮತ್ತು ಅನಿರುದ್ಧನನ್ನು ರಕ್ಷಿಸಿದನು.


ಉಪವಾಸ, ಸಂಕಷ್ಟಿ ವ್ರತ ಕಥೆ ಪಠಣ

ಈ ಸಮಯದಲ್ಲಿ ಭಕ್ತರು ಭಾರೀ ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಹಾಲು ಮತ್ತು ತಾಜಾ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ರಾತ್ರಿ ಚಂದ್ರನ ದರ್ಶನ ಪಡೆದು ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಜನರು ದೇವರ ಮೂರ್ತಿ ಮತ್ತು ಮನೆಗಳಲ್ಲಿರುವ ದೇವರ ಕೋಣೆಯನ್ನು ಹೂವುಗಳಿಂದ ಅಲಂಕರಿಸುತ್ತಾರೆ. ದೇವರಿಗೆ ಸಿಹಿ ತಿಂಡಿಗಳನ್ನು ಅರ್ಪಿಸುತ್ತಾರೆ. ಭಕ್ತರು ಗಣಪತಿಗಾಗಿ ಎಳ್ಳು-ಬೆಲ್ಲದ ಲಾಡುಗಳು ಇತ್ಯಾದಿ ವಿಶೇಷ ನೈವೇದ್ಯಗಳನ್ನು ತಯಾರಿಸುತ್ತಾರೆ. ಚಂದ್ರೋದಯದ ಮೊದಲು, ಭಕ್ತರು ಗಣೇಶನನ್ನು ಪೂಜಿಸುತ್ತಾರೆ ಮತ್ತು ಸಂಕಷ್ಟಿ ವ್ರತ ಕಥಾವನ್ನು ಪಠಿಸುತ್ತಾರೆ. ಪೂಜೆ ಮತ್ತು ಚಂದ್ರೋದಯದ ನಂತರ, ಕುಟುಂಬ ಮತ್ತು ಸ್ನೇಹಿತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ. ಸಂಕಷ್ಟಿ ಚತುರ್ಥಿಯಂದು ಕೆಂಪು ಬಣ್ಣದ ಬಟ್ಟೆ ಧರಿಸುವುದು ಮಂಗಳಕರ ಎಂದು ಹಲವರು ನಂಬುತ್ತಾರೆ.

***

#ಅಷ್ಟೋತ್ತರಶತನಾಮಾವಳಿ 

ll ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ll 


ಓಂ ಸಂಕಷ್ಟಹರಾಯ ನಮಃ

ಓಂ ಸಂವೃತಪಾರ್ಷ್ಣಿಕಾಯ ನಮಃ

ಓಂ ಸಂಸಾರವೈದ್ಯಾಯ ನಮಃ 

ಓಂ ಸಂವಿದೇ ನಮಃ

ಓಂ ಸುರೂಪಾಯ ನಮಃ

ಓಂ ಸರ್ವನೇತ್ರಾಧಿವಾಸಾಯ ನಮಃ

ಓಂ ಸ್ಮರಪ್ರಾಣದೀಪಕಾಯ ನಮಃ

ಓಂ ಸರ್ವಾತ್ಮನೇ ನಮಃ

ಓಂ ಸರ್ವದೇವಾತ್ಮನೇ ನಮಃ

ಓಂ ಸತ್ಯಶಿರೋರುಹಾಯ ನಮಃ 10


ಓಂ ಸರ್ಪಾಂಗುಲೀಕಾಯ ನಮಃ

ಓಂ ಸೋಮಾರ್ಕಘಂಟಾಯ ನಮಃ

ಓಂ ಸೃಷ್ಟಿಲಿಂಗಾಯ ನಮಃ

ಓಂ ಸದ್ಭಕ್ತಧ್ಯಾನನಿಗಡಾಯ ನಮಃ

ಓಂ ಸ್ವೋಜಸೇ ನಮಃ

ಓಂ ಸಕಾಮದಾಯಿನೀಪೀಠಾಯ ನಮಃ  

ಓಂ ಸ್ಫುರದುಗ್ರಾಸನಾಶ್ರಯಾಯ ನಮಃ 

ಓಂ ಸತ್ಯಾನಿತ್ಯಾವತಂಸಿತಾಯ ನಮಃ

ಓಂ ಸವಿಘ್ನನಾಶಿನೀಪೀಠಾಯ ನಮಃ

ಓಂ ಸರ್ವಶಕ್ತ್ಯಮ್ಬುಜಾಶ್ರಯಾಯ ನಮಃ 20


ಓಂ ಸ್ಥೂಲೋರವೇ ನಮಃ

ಓಂ ಸ್ಥೂಲಕುಕ್ಷಯೇ ನಮಃ

ಓಂ ಸ್ತಬಕಾಕಾರಕುಮ್ಭಾಗ್ರಾಯ ನಮಃ

ಓಂ ಸರ್ಪಹಾರಕಟಿಸೂತ್ರಾಯ ನಮಃ

ಓಂ ಸರ್ಪಯಜ್ಞೋಪವೀತಯೇ ನಮಃ 

ಓಂ ಸರ್ಪಕೋಟೀರಕಟಕಾಯ ನಮಃ

ಓಂ ಸರ್ಪಗ್ರೈವೇಯಕಾಂಗದಾಯ ನಮಃ 

ಓಂ ಸರ್ಪಕಕ್ಷ್ಯೋದರಾಬನ್ಧಾಯ ನಮಃ 

ಓಂ ಸರ್ಪರಾಜೋತ್ತರೀಯಕಾಯ ನಮಃ

ಓಂ ಸರ್ವಾವಯವಸಮ್ಪೂರ್ಣಸರ್ವ

ಲಕ್ಷಣಲಕ್ಷಿತಾಯ ನಮಃ 30


ಓಂ ಸರ್ವಾಭರಣಶೋಭಾಢ್ಯಾಯ ನಮಃ

ಓಂ ಸರ್ವಶೋಭಾಸಮನ್ವಿತಾಯ ನಮಃ 

ಓಂ ಸರ್ವಮಂಗಲಮಾಂಗಲ್ಯಾಯ ನಮಃ 

ಓಂ ಸರ್ವಕಾರಣಕಾರಣಾಯ ನಮಃ

ಓಂ ಸರ್ವದೈಕಕರಾಯ ನಮಃ

ಓಂ ಸರೋಜಭೃತೇ ನಮಃ

ಓಂ ಸ್ವದನ್ತಭೃತೇ ನಮಃ

ಓಂ ಸಪ್ರಮೋದಪ್ರಮೋದನಾಯ ನಮಃ 

ಓಂ ಸಮೇಧಿತಸಮೃದ್ಧಿಶ್ರಿಯೇ ನಮಃ

ಓಂ ಸೇವೋನ್ನಿದ್ರಮದದ್ರವಾಯ ನಮಃ 40


ಓಂ ಸರ್ವಸದ್ಗುರುಸಂಸೇವ್ಯಾಯ ನಮಃ

ಓಂ ಸುಮಂಗಲಸುಮಂಗಲಾಯ ನಮಃ

ಓಂ ಸುಭಗಾಸಂಶ್ರಿತಪದಾಯ ನಮಃ

ಓಂ ಸರಸ್ವತ್ಯಾಶ್ರಯಾಯ ನಮಃ

ಓಂ ಸ್ವಾಹಾಶಕ್ತಯೇ ನಮಃ

ಓಂ ಸಕೀಲಕಾಯ ನಮಃ

ಓಂ ಸರ್ವಕಾಲಿಕಸಂಸಿದ್ಧಯೇ ನಮಃ

ಓಂ ಸರ್ವಜ್ಞಾಯ ನಮಃ

ಓಂ ಸರ್ವಭೇಷಜಭೇಷಜಾಯ ನಮಃ

ಓಂ ಸೃಷ್ಟಿಸ್ಥಿತಿಲಯಕ್ರೀಡಾಯ ನಮಃ 50


ಓಂ ಸುರಕುಂಜರಭೇದನಾಯ ನಮಃ 

ಓಂ ಸಿನ್ದೂರಿತಮಹಾಕುಮ್ಭಾಯ ನಮಃ 

ಓಂ ಸದಸದ್ ವ್ಯಕ್ತಿದಾಯಕಾಯ ನಮಃ 

ಓಂ ಸಾಕ್ಷಿಣೇ ನಮಃ

ಓಂ ಸಮುದ್ರಮಥನಾಯ ನಮಃ

ಓಂ ಸ್ವಸಂವೇದ್ಯಾಯ ನಮಃ

ಓಂ ಸ್ವದಕ್ಷಿಣಾಯ ನಮಃ

ಓಂ ಸ್ವತನ್ತ್ರಾಯ ನಮಃ

ಓಂ ಸತ್ಯಸಂಕಲ್ಪಾಯ ನಮಃ

ಓಂ ಸಾಮಗಾನರತಾಯ ನಮಃ 60


ಓಂ ಸುಖಿನೇ ನಮಃ

ಓಂ ಸೌಭಾಗ್ಯವರ್ಧನಾಯ ನಮಃ

ಓಂ ಸರ್ವವಶ್ಯಕರಾಯ ನಮಃ

ಓಂ ಸಪ್ತರ್ಷಿಭ್ಯೋ ನಮಃ

ಓಂ ಸೃಷ್ಟಯೇ ನಮಃ

ಓಂ ಸದಾಶಿವಾಯ ನಮಃ

ಓಂ ಸಾಧ್ಯೇಭ್ಯೋ ನಮಃ

ಓಂ ಸಮುದ್ರೇಭ್ಯೋ ನಮಃ

ಓಂ ಸರಿದ್ಭ್ಯೋ ನಮಃ

ಓಂ ಸ್ಮೃತ್ಯೈ ನಮಃ 70


ಓಂ ಸೌರಾಯ ನಮಃ

ಓಂ ಸತೇ ನಮಃ

ಓಂ ಸಚೇತನಾಯ ನಮಃ

ಓಂ ಸುಖಾಯ ನಮಃ

ಓಂ ಸತ್ಯಾಯ ನಮಃ

ಓಂ ಸ್ವಸ್ತಿನೆ ನಮಃ

ಓಂ ಸ್ವಧಾಯ ನಮಃ

ಓಂ ಸ್ವಾಹಾಯ ನಮಃ

ಓಂ ಸಪ್ತಪಾತಾಲಚರಣಾಯ ನಮಃ

ಓಂ ಸಪ್ತದ್ವೀಪೋರುಮಂಡಲಾಯ ನಮಃ 80


ಓಂ ಸಪ್ತಸ್ವರ್ಲೋಕಮುಕುಟಾಯ ನಮಃ 

ಓಂ ಸಪ್ತಸಾಪ್ತಿವರಪ್ರದಾಯ ನಮಃ

ಓಂ ಸಪ್ತಾಂಗರಾಜ್ಯಸುಖದಾಯ ನಮಃ

ಓಂ ಸಪ್ತರ್ಷಿಗಣಮಂಡಿತಾಯ ನಮಃ

ಓಂ ಸಪ್ತಛನ್ದೋನಿಧಯೇ ನಮಃ

ಓಂ ಸಪ್ತಹೋತ್ರೇ ನಮಃ

ಓಂ ಸಪ್ತಸ್ವರಾಶ್ರಯಾಯ ನಮಃ

ಓಂ ಸಪ್ತಾಬ್ಧಿಕೇಲಿಕಾಸಾರಾಯ ನಮಃ

ಓಂ ಸಪ್ತಮಾತೃನಿಷೇವಿತಾಯ ನಮಃ

ಓಂ ಸಪ್ತಛನ್ದೋ ಮೋದಮದಾಯ ನಮಃ 90


ಓಂ ಸಪ್ತಚಂದ್ರಮಖಪ್ರಭವೇ ನಮಃ

ಓಂ ಸಾಮಪಂಚದಶಾಯ ನಮಃ

ಓಂ ಸಪ್ತದಶಾಯ ನಮಃ

ಓಂ ಸಪ್ತದಶಾಕ್ಷರಾಯ ನಮಃ

ಓಂ ಸಹಸ್ರಪತ್ರನಿಲಯಾಯ ನಮಃ

ಓಂ ಸಹಸ್ರಫಣಭೂಷಣಾಯ ನಮಃ

ಓಂ ಸಹಸ್ರಶೀರ್ಷ್ಣೇ ಪುರುಷಾಯ ನಮಃ

ಓಂ ಸಹಸ್ರಾಕ್ಷಾಯ ನಮಃ

ಓಂ ಸಹಸ್ರಪದೇ ನಮಃ

ಓಂ ಸಾಮಬೃಂಹಿತಾಯ ನಮಃ 100


ಓಂ ಸ್ವರ್ಣವರ್ಣಾಯ ನಮಃ

ಓಂ ಸ್ವರ್ಧುನೀಭವಾಯ ನಮಃ

ಓಂ ಸರ್ವದುಃಖಪ್ರಶಮನಾಯ ನಮಃ

ಓಂ ಸರ್ವವಿಘ್ನವಿನಾಶಕಾಯ ನಮಃ

ಓಂ ಸರ್ವಲಕ್ಷಣಸಮ್ಪನ್ನಾಯ ನಮಃ

ಓಂ ಸಹಸ್ರನಾಮ ಸಂಸ್ತುತ್ಯಾಯ ನಮಃ

ಓಂ ಸಹಸ್ರಾಕ್ಷಬಲಾಪಹಾಯ ನಮಃ

ಓಂ ಸಪ್ತಕೋಟಿಮಹಾಮನ್ತ್ರಮನ್ತ್ರಿತಾವ

ಯವದ್ಯುತಯೇ ನಮಃ 108


ll ಇತಿ ಶ್ರೀ ಶಾಂತಮಹಾಋಷಿ ವಿರಚಿತ ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

#ಅಷ್ಟೋತ್ತರಶತನಾಮಾವಳಿ

***



No comments:

Post a Comment