SEARCH HERE

Sunday, 31 October 2021

ಕುಬೇರ kubera

 ಕುಬೇರನ ಜನ್ಮ ರಹಸ್ಯ - ಕುಬೇರ ಲಕ್ಷ್ಮಿಯ ಅನುಗ್ರಹ:- 


'ಕುಬೇರ'  ಈ ಹೆಸರು ಎಲ್ಲರಿಗೂ ಗೊತ್ತು. ಶ್ರೀನಿವಾಸ- ಪದ್ಮಾವತಿಯರ ಕಲ್ಯಾಣಕ್ಕೆ  ಶ್ರೀನಿವಾಸನಿಗೆ ಸಾಲ ಕೊಟ್ಟ ಕುಬೇರನನ್ನು ಯಾರಾದರೂ ಮರೆಯಲು ಸಾಧ್ಯವೇ? ಆಗರ್ಭ ಶ್ರೀಮಂತರಿಗೆ  ( ಹಿಂದೆ ಈಗಲ್ಲ) ಅಯ್ಯೋ ಅವರಿಗೇನ್ ಬಿಡಿ ಕುಬೇರ ಎಂದು ಹೇಳುತ್ತಿದ್ದರು. ಕುಬೇರನು, ನವನಿಧಿ ಸಂಪತ್ತಿನ ಒಡೆಯನಾದುದು  ಹೇಗೆ ?

ಇವನ ಪೂರ್ವಾಪರ  ತಿಳಿಯಬೇಕೆಂದರೆ, ಕುಬೇರನ ನಿಜವಾದ ಹೆಸರು 'ವೈಶ್ರವಣ'  ಇವನು  ಹಿಂದಿನ ಜನ್ಮದಲ್ಲಿ , ಅರಿವಿದ್ದೋ, ಇಲ್ಲದೆಯೋ, ಶಿವನ ಒಲುಮೆಗೆ ಪಾತ್ರ ನಾಗುವಂಥ ಒಳ್ಳೆಯ ಕೆಲಸ ಮಾಡಿದ್ದ. ಆ ಜನ್ಮದಲ್ಲಿ ಇವನ ಹೆಸರು 'ಗುಣನಿಧಿ'. ಇವನ ತಂದೆ ಯಜ್ಞದತ್ತ  'ಕಾಂಪಿಲ್ಯ' ನಗರದಲ್ಲಿ ವಾಸಿಸುತ್ತಿದ್ದನು. 'ಯಜ್ಞದತ್ತ' ದೊಡ್ಡ ಮೇಧಾವಿ ಪಂಡಿತನು, ಸಕಲ ಶಾಸ್ತ್ರ ಸಂಪನ್ನನು, ವಿದ್ವಾಂಸನು, ಆಗಿದ್ದನು. ಸದಾ ಯಜ್ಞ -ಯಾಗ- ಹೋಮ -ಹವನ  ಎಂದು ಊರೂರು ತಿರುಗುತ್ತಿದ್ದು, ಮನೆಯಲ್ಲಿ  ಇರುವುದೇ ಕಡಿಮೆ. ಮಗ ಗುಣನಿಧಿಗೆ ಎಂಟು ವರ್ಷವಾಗುತ್ತಲೇ ಉಪನಯನ ಮಾಡಿ ಗುರುಕುಲದಲ್ಲಿ  ಶಿಕ್ಷಣ ಕಲಿಯಲು ಬಿಟ್ಟನು. ಆದರೆ ಗುಣನಿಧಿ ಕೆಟ್ಟ ಹುಡುಗರ ಸಹವಾಸ ಮಾಡಿ  ಕೆಟ್ಟು ಹೋದ. ಕಳ್ಳತನ, ಸುಳ್ಳತನ, ಗುರುಕುಲಕ್ಕೆ ತಪ್ಪಿಸಿಕೊಳ್ಳುವುದು, ಹೀಗೆ ಮಾಡುತ್ತಾ ದುಶ್ಚಟಗಳನ್ನೇ ಕಲಿತುಕೊಂಡ. ಇದು ತಂದೆ  ಯಜ್ಞದತ್ತನಿಗೆ  ತಿಳಿಯಲೇ ಇಲ್ಲ. ತಾಯಿಗೆ ಗೊತ್ತಿತ್ತು.  ಆದರೆ ಒಬ್ಬನೇ ಮಗ, ನಮಗೆ ಅಪರೂಪಕ್ಕೆ ಹುಟ್ಟಿದವನು ಎಂದು ಯಾವುದನ್ನು ಹೇಳದೆ  ಮುಚ್ಚಿಟ್ಟಳು. ಗುಣನಿಧಿ

ತನ್ನ ಮೋಜು ಮಸ್ತಿ  ಖರ್ಚಿಗಾಗಿ  ತಾಯಿಯನ್ನು ಕಾಡಿಸಿ- ಪೀಡಿಸಿ  ಹಣ ತೆಗೆದು ಕೊಂಡು ಹೋಗುತ್ತಿದ್ದ ಬರ ಬರುತ್ತಾ ಕುಡಿತ, ಹಾಳು ಮೂಳು ತಿನ್ನುವುದು, ಧೂಮ ಪಾನ, ಜೂಜಾಟ ಎಲ್ಲಾ ಶುರು  ಹಚ್ಚಿಕೊಂಡ. ಅವನಲ್ಲಿ ಹುಡುಕಿದರೂ ಒಂದು ಒಳ್ಳೆಯ ಗುಣ ಇರಲಿಲ್ಲ, ಎದೆ ಸೀಳಿದರೆ ನಾಲ್ಕು ಅಕ್ಷರವೂ ಇರಲಿಲ್ಲ. ಊರಿನ ಜನರು ಪಂಡಿತನ ಪುತ್ರ 'ದಂಡಪಿಂಡ' ಎನ್ನುತ್ತಿದ್ದರು. 


ಹೀಗಿರುವಾಗ ಅವನಿಗೊಂದು  ಸುಗುಣ ಶೀಲೆ ಹುಡುಗಿಯನ್ನು ಹುಡುಕಿ ಮದುವೆ ಮಾಡಿದರು. ಮದುವೆಯಾದ ಮೇಲೆ ತನ್ನ ಮಗ ಸರಿ ಹೋಗುತ್ತಾನೆ ಎಂದು ತಾಯಿ ತಿಳಿದಿದ್ದಳು. ಆದರೆ  ರಾಯರ ಕುದುರೆ ಕತ್ತೆಯಾಯ್ತು ಎಂಬಂತೆ, ದುಶ್ಚಟಗಳನ್ನು ಜಾಸ್ತಿ ಮಾಡಿಕೊಂಡ. ಪಂಡಿತನ ಮಗನಾಗಿ  ದುರ್ಗುಣಗಳ  ದಾಸನಾದ. ಹೆಂಡತಿ ಮಾತು ಕೇಳಲಿಲ್ಲ ,ತಾಯಿ ಮಾತು ಕೇಳಲಿಲ್ಲ.  ಮಗ ಕೇಳಿದಾಗೆಲ್ಲ ಹಣ ಕೊಟ್ಟು ಕೊಟ್ಟು ಹಾಳು ಮಾಡಿದ್ದ ಅವನ ತಾಯಿ ಈಗ ಮಗನಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿದಳು. ಇದರಿಂದ ಹುಚ್ಚನಂತಾದ ಅವನು ಮನೆಯಲ್ಲಿರುವ ವಸ್ತುಗಳನ್ನು ಕಳ್ಳತನ ಮಾಡ ತೊಡಗಿದ.  ಸ್ನೇಹಿತರೊಡನೆ ಕಾಡಿಗೆ ಹೋಗಿ ಬೇಟೆಯಾಡುವುದು, ಮಾಂಸ ತಿನ್ನುವುದು, ಧೂಮಪಾನ , ಮದ್ಯ , ಜೋಜಾಟ, ಇವುಗಳನ್ನೇ  ಮೈಗೂಡಿಸಿ ಕೊಂಡ. ಇಷ್ಟಾದರೂ ತಂದೆ ಯಜ್ಞದತ್ತನಿಗೆ ಮಗನ ದುರ್ಗುಣ ತಿಳಿಯಲೇ ಇಲ್ಲ. 


ಒಂದು ದಿನ, ಯಜ್ಞದತ್ತ  ಯಾಗಕ್ಕಾಗಿ ಬೇರೆ ಗ್ರಾಮಕ್ಕೆ ಹೊರಟಿದ್ದನು( ಅದು ಕಾಡು ದಾರಿ)   ಕಳ್ಳಕಾಕರ ಭಯವೆಂದು,  ಹೊರಡುವಾಗ  ತನ್ನ ಕೈಯಲ್ಲಿದ್ದ ರತ್ನಖಚಿತ ಉಂಗುರವನ್ನು ತೆಗೆದಿಡುವಂತೆ ಪತ್ನಿ  ಕೈಗೆ ಕೊಟ್ಟನು. ಅವಳು ತಾನು ಹಾಕಿಕೊಳ್ಳದೆ, ಮಗನಿಗೆ ಕಾಣಬಾರದೆಂದು ಅಡಿಗೆ ಮನೆ ಡಬ್ಬಿಯೊಳಗೆ ಮುಚ್ಚಿಟ್ಟಳು. ಆದರೆ ಕಳ್ಳ ಮಗ ಅದನ್ನು ಮರೆಯಲ್ಲಿ ನೋಡಿದನು. ಅವನು ತಾಯಿಗೆ ಗೊತ್ತಾಗದಂತೆ ಉಂಗುರವನ್ನು ಕದ್ದು ಜೂಜಿನಲ್ಲಿ ಕಳೆದು, ಗೊತ್ತಿಲ್ಲದಂತೆ ಸುಮ್ಮನಿದ್ದು ಬಿಟ್ಟನು. ಅದೆಲ್ಲ ಕಳೆದು ಕೆಲದಿನಗಳಾಯಿತು. ಅದರ ಸುಳಿವು ಗೊತ್ತಾಗಲಿಲ್ಲ. ಮತ್ತೊಮ್ಮೆ ಯಜ್ಞದತ್ತ ಬೇರೆ ಊರಿನಲ್ಲಿ ಹೋಮ ಮುಗಿಸಿ ಮನೆಗೆ ಬರುತ್ತಿರುವಾಗ  ಹಾದಿಯಲ್ಲಿ ಅವನ ಎದುರಿಗೆ ಬರುತ್ತಿದ್ದ ವ್ಯಕ್ತಿಯ ಕೈಯಲ್ಲಿ ಆ ಉಂಗುರವನ್ನು  ನೋಡಿದನು. ಇದು ನನ್ನ ಉಂಗುರ, ನಿನ್ನ ಕೈಗೆ ಹೇಗೆ? ಬಂದಿತು ಎಂದು ಕೇಳಿದ. ಆತ ಜೋರಾಗಿ ನಕ್ಕು, ಆಹಾ ಮೇಧಾವಿ ಪಂಡಿತರೇ, ನಿಮ್ಮ ಮಗ ಗುಣನಿಧಿ  ಜೋಜಾಡಲು  ಉಂಗುರವನ್ನು ಪಣಕಿಟ್ಟ ಅದನ್ನು ನಾನು ಗೆದ್ದು ಕೊಂಡೆ.  ನಿಮ್ಮ ಮಗನನ್ನು ಹೀಗೆ ಬಿಟ್ಟರೆ ಒಂದು ದಿನ ತಂದೆ- ತಾಯಿಯನ್ನೇ  ಮಾರಿಬಿಡುತ್ತಾನೆ ಎಂದು ವ್ಯಂಗ್ಯವಾಡಿ ಮುಂದೆ ಹೋದನು.  ಈ ಮಾತು ಕೇಳಿ ಯಜ್ಞದತ್ತನಿಗೆ ಕಾದ ಸೀಸ ಕಿವಿಯೊಳಗೆ ಸುರಿದಂತಾಯಿತು. ಮನೆಗೆ ಬಂದು ಹೆಂಡತಿಯನ್ನು ಬೈದನು, ನಿನ್ನಿಂದಲೇ ಮಗ ಹಾಳಾಗಿದ್ದು, ನನಗೆ ಒಂದು ಮಾತು ಹೇಳಿದ್ದರೆ ಏನಾದರೂ ಮಾಡುತ್ತಿದ್ದೆ ಎಂದು ಕೂಗಾಡಿದ. ಆದರೆ ಕಾಲ ಮೀರಿ ಹೋಗಿತ್ತು. ಇನ್ನು ನಾನು ಊರ ಜನರೆದುರು  ತಲೆ ಎತ್ತಿ ತಿರುಗಲಾರೆ ಎಂದು ಮನೆ ಬಿಟ್ಟು ಶಾಶ್ವತವಾಗಿ  ಹೊರಟು ಹೋದನು. 


ಇತ್ತ ಗುಣನಿಧಿ, ತನ್ನ ಕೆಟ್ಟ ಗುಣಗಳು ತಮ್ಮ ತಂದೆಗೆ ತಿಳಿದು ಹೋಯಿತು ಎಂದು ಯಾರಿಂದಲೋ  ತಿಳಿದುಕೊಂಡ.  ಮನೆಗೆ ಬಂದರೆ ತಂದೆ ತನ್ನನ್ನು ಸಿಗಿದು ಬಾಗಿಲಿಗೆ ತೋರಣ ಕಟ್ಟುತ್ತಾರೆ ಎಂದು ಹೆದರಿ, ಅವನು ತಂದೆ ಹತ್ತಿರ  ಹೋಗಲೇಬಾರದು  ಎಂದು ಊರು  ತೊರೆದು  ದಿಕ್ಕು ದೆಸೆ ಇಲ್ಲದೆ ಕಾಡಿನಲ್ಲಿ ಅಲೆಯುತ್ತ ಹೊರಟನು. ಕಾಡಿನಲ್ಲಿ ಅಳೆಯುತ್ತಾ  ಅವನಿಗೆ ವಿಪರೀತ ಹಸಿವಾಯಿತು. ತಿನ್ನಲು ಆಹಾರವಿಲ್ಲ. ಕುಡಿಯಲು ನೀರಿಲ್ಲ. ಅದೇ ಹೊತ್ತಿಗೆ 'ಯಾತ್ರೆಗೆ ಹೊರಟ ಶಿವ ಭಕ್ತರ' ತಂಡವೊಂದು 'ಓಂ ನಮಃ ಶಿವಾಯ'  ಓಂ ನಮಃ ಶಿವಾಯ',  ಜಪಮಾಲೆ ಹಿಡಿದು ಶಿವನಾಮ ಸ್ಮರಣೆ ಮಾಡುತ್ತಾ  ಬರುತ್ತಿದ್ದರು. ಅವರು ಶಿವನ ನೈವೇದ್ಯಕ್ಕೆಂದು ತರತರದ ಅಡುಗೆ ಯನ್ನು ಮಾಡಿ ತರುತ್ತಿದ್ದರು. ಅದರ ಘಮ-ಘಮ ಹಸಿದಿದ್ದ ಇವನ ಮೂಗನ್ನು ಸೆಳೆಯಿತು. ನಾಲಿಗೆ ಸವರಿ ಎಂಜಲು ನುಂಗಿಕೊಂಡ,  ಇವನು  ಆಹಾರ ತಿನ್ನುವ ಆಸೆಯಿಂದ ಅವರ ಜೊತೆ ಸೇರಿಕೊಂಡು  ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಎಂದು  ಶಿವನಾಮ ಸ್ಮರಣೆ ಮಾಡುತ್ತಾ ಶಿವನ ದೇವಸ್ಥಾನಕ್ಕೆ ಬಂದನು. 

ಶಿವ ಭಕ್ತರೆಲ್ಲರೂ, ಉಪವಾಸದ ಸಂಕಲ್ಪದೊಂದಿಗೆ, ಶಿವ ಪೂಜೆ ಮಾಡಿ  ಶಿವನಾಮ ಸ್ಮರಣೆ ಮಾಡುತ್ತಾ, ಅಲ್ಲಿಯೇ  ಮಲಗಿ ನಿದ್ದೆ ಹೋದರು. ಆದರೆ ಇವನಿಗೆ ಹಸಿವು ತಡೆಯಲಾರದೆ ನಿದ್ದೆ ಬರಲಿಲ್ಲ . ಸದ್ದು ಮಾಡದೆ ಎದ್ದು, ಶಿವನ ಮುಂದೆ ಇಟ್ಟಿದ್ದ ಪ್ರಸಾದವನ್ನು ಕದ್ದು ತಿನ್ನಲು ಹೋದನು. ಆದರೆ ಸುತ್ತಲು ಕತ್ತಲು ಏನು ಕಾಣಲಿಲ್ಲ, ಹಣತೆಯಲ್ಲಿದ್ದ  ದೀಪ ಆಗಲೇ ನಂದಿ ಹೋಗುವುದರಲ್ಲಿತ್ತು.  ಅವನು, ತಾನು  ಹೊದ್ದುಕೊಂಡಿದ್ದ  ಶಲ್ಯವನ್ನು  ಸ್ವಲ್ಪ  ಹರಿದು ಭತ್ತಿ ಮಾಡಿಕೊಂಡು ಅಲ್ಲೇ ಇದ್ದ ಎಣ್ಣೆಯಲ್ಲಿ  ಅದ್ದಿ ದೀಪ ಹಚ್ಚಿಕೊಂಡ. ಶಿವನ ಮುಂದಿಟ್ಟಿದ್ದ ಅಡುಗೆಯನ್ನೆಲ್ಲ ತೆಗೆದುಕೊಂಡು  ಓಡುವ ಭರದಲ್ಲಿ  ಮಲಗಿದ್ದ  ಒಬ್ಬ ಭಕ್ತನಿಗೆ ಎಡವಿದನು. ಆ ಶಿವಭಕ್ತ  ಎಚ್ಚರವಾಗಿ  ಕಳ್ಳ ಎಂದು ಕೂಗಿದನು. ಎಲ್ಲರೂ ಎದ್ದು ಅವನನ್ನು ಚೆನ್ನಾಗಿ ಹೊಡೆದರು. ಹೊಡೆತ ತಾಳಲಾರದೆ ಅವನು ಶಿವಾಲಯದಲ್ಲೇ ಸತ್ತು ಹೋದನು. 


ಅಂದು ಹಸಿವೆ ತಾಳಲಾರದೆ ಆಹಾರಕ್ಕಾಗಿ, ಕತ್ತಲೆ ತುಂಬಿದ ದೇವಸ್ಥಾನದಲ್ಲಿ ಶಿವನ ಮುಂದೆ  ದೀಪ ಹಚ್ಚಿಟ್ಟ  ಕಾರಣ, ಶಿವನ ಕರುಣೆಗೆ ಪಾತ್ರನಾಗಿ ಸತ್ತು ಬಿದ್ದ ಅವನನ್ನು  ಕರೆದುಯಲು ವಿಷ್ಣು ದೂತರು ಶಿವದೂತರು ಬಂದರು. ಅವನು ಶಿವನ ಪ್ರಸಾದ ತಿನ್ನುವ ಸಲುವಾಗಿ ದೀಪ ಹಚ್ಚಿದ್ದ ಕಾರಣ, ವಿಷ್ಣುದೂತರು  ಕರೆದೊಯ್ದರು. ಆ ಪುಣ್ಯದ ಫಲವಾಗಿ, ಮರುಜನ್ಮದಲ್ಲಿ  ಕಳಿಂಗ ರಾಜನಿಗೆ  ಮಗನಾಗಿ ಜನಿಸಿದ. ಪೂರ್ವ ಜನ್ಮದಲ್ಲಿ ಶಿವನ ಆಲಯದಲ್ಲಿಯೇ  ಪ್ರಾಣಬಿಟ್ಟ ಕಾರಣ ಶಿವಮಂದಿರ, ಧ್ಯಾನ, ಶಿವಪೂಜೆ, ಶಿವ ಭಕ್ತರು,  ಅವನ ಸ್ಮೃತಿಯಲ್ಲಿತ್ತು.  ಸಹಜವಾಗಿ ಎಂಬಂತೆ  ಈ ಜನ್ಮದಲ್ಲಿ  ಶಿವ ಭಕ್ತನಾದನು. ಜನ್ಮ ಪೂರ್ತಿಯು, ಶಿವ ಪೂಜೆ, ಶಿವ ಧ್ಯಾನ  ಶಿವನಾಮ ಮಾಡುತ್ತಾ, ಕಾಲ ಕಳೆದು ವಯಸ್ಸಾದ ಮೇಲೆ ಮರಣ ಹೊಂದಿದನು. ಪುನ:  ಮತ್ತೊಂದು ಜನ್ಮದಲ್ಲಿ ಬ್ರಹ್ಮದೇವನ ಮಗ, ಎರಡನೇ ಬ್ರಹ್ಮ ಎಂದು ಕರೆಸಿಕೊಳ್ಳುವ ಪುಲಸ್ತ್ಯರ ಮಗ  ವಿಶ್ರವಸುವಿಗೆ, ಮಗನಾಗಿ ಹುಟ್ಟಿ ಬ್ರಹ್ಮದೇವನಿಗೆ ಮೊಮ್ಮಗನಾಗಿ  'ವೈಶ್ರವಣ' ಎಂದು ಕರೆಸಿಕೊಂಡ.  ಅಪಾರವಾದ ಶಿವಭಕ್ತ ನಾಗಿದ್ದು, ನದಿ ತೀರಗಳಲ್ಲಿ ಶಿವನಾಮ ಸ್ಮರಣೆ ಮಾಡುತ್ತಾ, ಎಷ್ಟೋ ವರ್ಷಗಳ ಕಾಲ  ಶಿವನ ಕುರಿತು ತಪಸ್ಸು ಮಾಡಿ ಆಯಸ್ಸು ಮುಗಿಯುವ ಹಂತಕ್ಕೆ ಬಂದಿತು. ಶಿವ- ಪಾರ್ವತಿ ಸಹಿತ ಪ್ರತ್ಯಕ್ಷನಾಗಿ ಅವನಿಗೆ ದರ್ಶನ ಕೊಟ್ಟನು. 


ಆದರೆ ಶಿವ ಪಾರ್ವತಿಯರ ತೇಜಸ್ಸನ್ನು  ನೇರವಾಗಿ ನೋಡಲಾಗಲಿಲ್ಲ. ಶಿವನನ್ನು  ಕಣ್ತುಂಬ ನೋಡಲು ದೃಷ್ಟಿಯನ್ನು ಕೊಡುವಂತೆ ಪ್ರಾರ್ಥಿಸಿದನು. ಪರಮೇಶ್ವರನು ಅವನ ಭಕ್ತಿಗೆ ಮೆಚ್ಚಿ ದೃಷ್ಟಿಯನ್ನು ಕೊಟ್ಟನು. ಕುಬೇರ (ವೈಶ್ರವಣ) ನೋಡುತ್ತಾನೆ  ಆದರೆ ಅವನಿಗೆ ಪಾರ್ವತಿ ಸೌಂದರ್ಯದ ಮೇಲೆ ಕಣ್ಣು ಹೋಯಿತು. ಶಿವನೆದುರಿಗೆ ಪಾರ್ವತಿಯನ್ನು ಹೋಗಳಲಾರಂಭಿಸಿದ. ಪಾರ್ವತಿಗೆ ಕೋಪ ಬಂದಿತು.  ಪಾರ್ವತಿ ಯನ್ನೇ ದೃಷ್ಟಿಸಿ ನೋಡುತ್ತಿದ್ದ ಕುಬೇರನ  ಬಲಗಣ್ಣು ಬಲೂನು ಒಡೆದಂತೆ ಟಪ್ಪಂಥ ಒಡೆದು ಹೋಯಿತು. ಕುಬೇರನಿಗೆ ತಪ್ಪಿನ ಅರಿವಾಯಿತು, ಪರಮೇಶ್ವರನನ್ನು ಪ್ರಾರ್ಥಿಸಿ ದೃಷ್ಟಿ ಕೊಡುವಂತೆ ಬೇಡಿದನು. ಶಿವನು ಪಾರ್ವತಿಗೆ ಅವನ ನಮ್ಮ ಪುತ್ರನಂತೆ ಕ್ಷಮಿಸಿ ಬಿಡು ಎಂದನು. ಆಗ ಪಾರ್ವತಿ ಪರಮೇಶ್ವರನ ಮಾತು ಕೇಳಿ ಕುಬೇರನಿಗೆ ದೃಷ್ಟಿ ಬರುವಂತೆ ಮಾಡಿ ಬಲಗಣ್ಣು ಚಿಕ್ಕದಾಗಿ ಕಾಣುವಂತೆ  ಅನುಗ್ರಹಿಸಿದಳು. ಪರಮೇಶ್ವರನು, ಸಂಪತ್ತಿನ ಅಧಿಪತಿಯಾಗುವಂತೆ

ಕುಬೇರನಿಗೆ ವರ ಕೊಟ್ಟನು. ಕುಬೇರನ ಬಳಿ ಸಂಪತ್ತಿನ ರಾಶಿಯೇ ಬಿದ್ದಿದೆ. ನವನಿಧಿಗಳು ಅವನು ಸುತ್ತಲೂ ಸುತ್ತುವರೆದಿದೆ. 


ಸಂಪತ್ತಿನ  ತಿರುಪತಿ ವೆಂಕಟೇಶ್ವರ  ಆಕಾಶ ರಾಜನ ಮಗಳು ಪದ್ಮಾವತಿಯೊಂದಿಗೆ ಭರ್ಜರಿಯಾಗಿ ವಿವಾಹವಾಗಲು ‌ ಸಂಪತ್ತಿನ ಅಧಿಪತಿಯಾದ ಕುಬೇರನ ಬಳಿ  ಸಾಲ ಪಡೆಯುತ್ತಾನೆ. ಅದು ಎಷ್ಟು ಸಾಲ ಎಂದರೆ ಕಲಿಯುಗ ಮುಗಿಯುವವರೆಗೂ ಆ ಸಾಲ ತೀರುವುದಿಲ್ಲ. ತಿರುಪತಿಯಲ್ಲಿ  ನೆಲೆ ನಿಂತ ಶ್ರೀನಿವಾಸ ಭಕ್ತರು ಹಾಕುವ ಕಾಣಿಕೆ ಹರಕೆ ಹಾಡ್ಯಗಳನೆಲ್ಲ ಬಾಚಿ ಬಾಚಿ  ಕುಬೇರನ ಸಾಲಕ್ಕೆ ಕೊಡುತ್ತಿದ್ದಾನೆ ಎಂಬುದು ಭಕ್ತರ ನಂಬಿಕೆ. ಸಿರಿ ಸಂಪತ್ತಿನ ಅಧಿಪತಿ ಯಾದ ಕುಬೇರನು ಉತ್ತರ ದಿಕ್ಕಿಗೆ ದಿಕ್ಪಾಲಕ. ಲೋಕಪಾಲಕನು ಆದ  ಕುಬೇರನನ್ನು  ಲಕ್ಷ್ಮಿ ಸಹಿತ ಪೂಜೆ ಮಾಡಿದರೆ, ಕುಬೇರ  ಬೇಗ ಒಲಿಯುತ್ತಾನೆ. ಸಂಪತ್ತು, ಆರೋಗ್ಯ, ಸಂತಾನ ಲಭಿಸಿ ಅಭಿವೃದ್ಧಿಯಾಗುತ್ತದೆ  ಎಂಬ ನಂಬಿಕೆಯಾಗಿದೆ.‌ ಒಟ್ಟಾರೆ ಧನಾಧಿಪತಿ ಕುಬೇರನ‌ ಪೂಜೆ ಮಾಡಿ ಅವನ ಕೃಪೆ ಪಾತ್ರರಾದರೆ,  ಸರ್ವ ಸುಖ ಸಂತೋಷಗಳಿಗೆ ಅವನೇ ಕಾರಣನಾಗುತ್ತಾನೆ. 


ಕುಬೇರ ಲಕ್ಷ್ಮಿ ಪೂಜೆಯನ್ನು ವಿಶೇಷ ದಿನಗಳಲ್ಲಿ ಅಥವಾ ಐದು ಇಲ್ಲಾ  8 ವಾರ, ಇಂತಿಷ್ಟು ಎಂದು ಸಂಕಲ್ಪ ಮಾಡಿಕೊಂಡೋ, ಅಥವಾ ದೇವರ ಪೂಜೆ ಮಾಡುವಾಗ ನಿತ್ಯವೂ ಮಾಡಬಹುದು. ಸಾಧ್ಯವಾದರೆ ಕುಬೇರನ ಯಂತ್ರವನ್ನು ಇಟ್ಟುಕೊಂಡು ಅಥವಾ ಕುಬೇರನ 9 ಮನೆಯನ್ನು(  ಚೌಕಾಬಾರ ಆಟದ ಮನೆಯಂತೆ) ರಂಗೋಲಿ ಬರೆದುಕೊಂಡು ಅದರಲ್ಲಿ ಸಂಖ್ಯೆಗಳನ್ನು ಬರೆದು, ಅರಿಶಿನ ಕುಂಕುಮ ಹೂವು ಸಹಿತ ಪೂಜೆ ಮಾಡಿ ಸ್ತೋತ್ರಗಳನ್ನು ಹೇಳುತ್ತಾ, ಒಂದು ರೂಪಾಯಿ ಕಾಯಿನ್ ನನ್ನು ಒಂಬತ್ತು ಮನೆಗೂ ಒಂದೊಂದರಂತೆ ಹಾಕಿ ಪೂಜೆ ಮಾಡುತ್ತಾ ಬಂದರೆ,( ನಂಬಿಕೆ ಯಿಂದ ಪೂಜೆ ಮಾಡಬೇಕು) ಧನಸಂಪತ್ತಿನೊಂದಿಗೆ ಸ್ವಂತ  ಮನೆ ಖಂಡಿತ ಆಗುತ್ತದೆ. ಇದು ನನ್ನ ವಿಶ್ವಾಸ. 


ಕುಬೇರ ಮಂತ್ರ !!

ಓಂ ಯಕ್ಷಾಯ ಕುಬೇರಾಯ ವೈ ಶ್ರವಣಾಯ

ಧನ ಧಾನ್ಯದಿಪತಯೇ ಧನ ಧಾನ್ಯ ಸಮೃದ್ಧಿಂ ಮೇ !

ದೇಹಿ ದಾಪಾಯ  ಸ್ವಾಹ !!

ಕುಬೇರ ಗಾಯಿತ್ರಿ ಮಂತ್ರ :-

ಓಂ ಯಕ್ಷರಾಜಾಯ ವಿದ್ಮಹೇ

ಅಲಕಾದೀಶಾಯ ಧೀಮಹೇ

ತನ್ನು ಕುಬೇರ: ಪ್ರಚೋದಯಾತ್!! 


ಓಂಕಾರಂ ಬಿಂದು ಸಂಯುಕ್ತಂ  ನಿತ್ಯಂ ದ್ಯಾಯಂತಿ  ಯೋಗಿನ: !

ಕಾಮದಂ  ಮೋಕ್ಷದಂ ಚೈವ  ಓಂಕಾರಾಯ ನಮೋ ನಮಃ !

ಷಡಕ್ಷರಮಿದಂ  ಸ್ತೋತ್ರಂ ಯ:  ಪಠೇತ್ ಶಿವ ಸನ್ನಿಧೌ

ಶಿವಲೋಕಮವಾಪ್ನೋತಿ  ಸಹಮೋದತೇ !! 

***


No comments:

Post a Comment