SEARCH HERE

Saturday, 30 October 2021

ಗೋಗ್ರಾಸ ಏಕೆ ಯಜ್ಞ ಯಾಗ ಪೂಜೆ ಪಿತೃಕರ್ಮಗಳು ಗೋಗ್ರಾಸವನ್ನಿಡದೇ ಪೂರ್ಣವಾಗಲಾರವು

 ಗೋಗ್ರಾಸ ಏಕೆ? ನಾವು ಆಚರಿಸುವ ಯಾವುದೇ ಯಜ್ಞ ;ಯಾಗ ಪೂಜೆ, ಪಿತೃಕರ್ಮಗಳು ಗೋಗ್ರಾಸವನ್ನಿಡದೇ ಪೂರ್ಣವಾಗಲಾರವು. 


ಯಜ್ಞ, ಶ್ರಾದ್ಧಾದಿಗಳಲ್ಲಿ ವಿಪ್ರಭೋಜನದಂತೆಯೇ ಗೋಗ್ರಾಸ ದಾನವೂ ಅನಿವಾರ್ಯ ಕರ್ತವ್ಯವಾಗಿದೆ. 


ಗೋಗ್ರಾಸ ದಾನದ ಶಾಸ್ತ್ರವಿಧಿ ಬಹಳ ಸಣ್ಣದು. 


ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು( ಹಾಲು ಮೊಸರು ತುಪ್ಪ ಮೊದಲಾದ ಗವ್ಯ ಹೊರತು ಪಡಿಸಿ) ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. 


ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ಈ ಶ್ಲೋಕಗಳನ್ನು ಹೇಳಬೇಕು. 


ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣಪದೇ ಸ್ಥಿತಾ | ಗೋಗ್ರಾಸಸ್ತು ಮಯಾ ದತ್ತಃ ಸುರಭೇ(ಸುರಭಿ) ಪ್ರತಿಗೃಹ್ಯತಾಮ್ ||1|| 


ಸೌರಭೇಯಃ ಸರ್ವಹಿತಾಃ ಪವಿತ್ರಾಃ ಪುಣ್ಯರಾಶಾಯಃ | ಪ್ರತಿಗ್ರಹ್ಣತ್ವಿಮಂ ಗ್ರಾಸಂ ಗಾವಃ ತ್ರೈಲೋಕ್ಯ ಮಾತರಃ ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ | ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು || 


|| ಗವಾಂತರಗತ ಗೋಪಾಲಕೃಷ್ಣ ಪ್ರಿಯತಾಂಮ ಪ್ರೀತೋಭವತು ತತ್ಸತ್ ಶ್ರೀಹರಿ ಕೃಷ್ಣಾರ್ಪಣಮಸ್ತು 


“ದೇವಲೋಕದ ಕಾಮಧೇನು ಸುರಭಿ.

 ಕಾಮಧೇನುವಿನ ಜಾತಿಯೆನಿಸಿದ ಗೋಜಾತಿಯಲ್ಲಿ ಬಂದ ಎಲ್ಲಾ ಗೋವುಗಳನ್ನೂ ಕಾಮಧೇನುವಿನ ಸನ್ನಿಧಾನದ ಅನುಸಂಧಾನದೊಡನೆ ‘ಸುರಭಿ’ ಎಂದೇ ಕರೆಯಲಾಗುತ್ತದೆ. 


ಸುರಭಿಯು ವಿಷ್ಣುದೇವನ ಪ್ರತೀಕ. ಆಕೆ ಎಲ್ಲರಿಗೂ ಹಾಲು ನೀಡುವ ತಾಯಿ. ಎಂದೆಂದಿಗೂ ವಿಷ್ಣುಪದದಲ್ಲಿ ನೆಲೆಗೊಂಡ ಈ ಸುರಭಿ ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ” ಮೂರು ಲೋಕಕ್ಕೂ ಮಾತೆಯಾಗಿ ಸರ್ವ ಪುಣ್ಯ ರಾಶಿಯನ್ನು ಹೊಂದಿದ ಪವಿತ್ರವಾದ ಸುರಭಿಯ ಮಕ್ಕಳಾದ ಗೋವುಗಳು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ” “ಹಸುಗಳೆಲ್ಲಾ ನಮ್ಮ ತಾಯಿ. ಎತ್ತುಗಳೆಲ್ಲಾ ನಮ್ಮ ತಂದೆಗೆ ಸಮ. ಅಂತಹ ಗೋವುಗಳಿಗಿತ್ತ ಈ ಮುಷ್ಟಿ ತುತ್ತಿನಿಂದ ಗೋವಿನ ಒಳಗಿರುವ ಶ್ರೀಕೃಷ್ಣ ಪ್ರೀತನಾಗಲಿ” ಈ ಎರಡು ಶ್ಲೋಕಗಳಿಂದ ಪ್ರಾರ್ಥಿಸಿ ‘ಗವಾಂತರ್ಗತ ಗೋಪಾಲ ಕೃಷ್ಣಃ ಪ್ರೀಯತಾಮ್’ ಎಂದು ಗೋಗ್ರಾಸವನ್ನು ಗೋವಿಗೆ ನೀಡಬೇಕು. 


ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞಗಳೆಂಬ ಮೂರು ಯಜ್ಞಗಳನ್ನು ಗಮನಿಸಿದ್ದೇವೆ. ಇವಲ್ಲದೇ ಮನುಷ್ಯಯಜ್ಞ ಹಾಗೂ ಭೂತ ಯಜ್ಞಗಳೆಂಬ ಎರಡು ಯಜ್ಞಗಳೂ ಇವೆ. ಗೃಹಸ್ಥನಿಗೆ ಈ ಐದು ಯಜ್ಞಗಳು ಕರ್ತವ್ಯ. 


ಮನೆಗೆ ಹಸಿದು ಬಂದ ವ್ಯಕ್ತಿಗೆ ಆತಿಥ್ಯವಿತ್ತು ಉಣಬಡಿಸುವಿಕೆಯೇ ಮನುಷ್ಯಯಜ್ಞ, ಈ ಯಜ್ಞದಲ್ಲಿ ಹಸಿದ ವ್ಯಕ್ತಿಯೇ ಅಗ್ನಿ. ಅನ್ನ ಭೋಜ್ಯಗಳೇ ಆಹುತಿ. 


‘ಅನ್ನಸ್ಯ ಕ್ಷುಧಿತಂ ಪಾತ್ರಂ’ ಎಂಬಂತೆ ಅನ್ನದಾನಕ್ಕೆ ಬಂದ ಅತಿಥಿ ಗಳೆಲ್ಲಾ ಪಾತ್ರರು. ಬರಿಯ ಅನ್ನದಾನವಲ್ಲದೇ ನಾಲ್ಕು ಜನರಿಗೆ ಉಪಕರಿಸುವ ಎಲ್ಲಾ ಸಮಾಜೋಪಯೋಗಿ ಸೇವೆಗಳೂ ಮನುಷ್ಯಯಜ್ಞದ ಪರಿಧಿಯಲ್ಲೇ ಸೇರಿವೆ. 


ನಾಲ್ಕನೆಯದಾದ ಈ ಮನುಷ್ಯಯಜ್ಞದಿಂದ ಸಮಾಜದ ಋಣ ಪರಿಹಾರವಾಗುತ್ತದೆ.ಕೊನೆಯದು ಭೂತಯಜ್ಞ. ಅಂದರೆ ಪಶುಪ್ರಾಣಿಗಳಿಗೆ ಆಹಾರ ನೀಡುವಿಕೆ. ಮನುಷ್ಯ ತನ್ನ ಬದುಕಿನಲ್ಲಿ ಗೋವೃಷಭಾದಿ ಪಶುಗಳ ಉಪಕಾರ ಮರೆಯುವಂತಿಲ್ಲ. 


ಮನುಷ್ಯ ಗವ್ಯಗಳಾದ ಹಾಲು, ಮೊಸರು, ತುಪ್ಪಗಳಿಲ್ಲದೇ ಬದುಕಲಾರ. ದೇವಕರ್ಮಗಳನ್ನು ನಿರ್ವಹಿಸಲಾರ. ಹುಟ್ಟಿದ ಮೊದಲಲ್ಲಿ ತಾಯಿ ಆತನಿಗೆ ಹಾಲು ಕೊಟ್ಟು ಬೆಳೆಸಿದರೆ ಮುಂದಿನ ಆತನ ಜೀವನ ಪೂರ್ತಿ ಈ ಗೋಮಾತೆ ಹಾಲು ಕೊಡುತ್ತಾಳೆ. 


ಆದ್ದರಿಂದಲೇ ಗೋವಿಗೆ ಮಾತೃಸ್ಥಾನ, ವೃಷಭಕ್ಕೆ ಪಿತೃಸ್ಥಾನವಿದೆ. ತಂದೆಯು ಅನ್ನವಿತ್ತು ಪರಿಪೋಷಿಸುತ್ತಾನೆ. ಎತ್ತು ತಾನು ಉತ್ತು ಧಾನ್ಯ ಬೆಳೆಸುತ್ತದೆ. ತನ್ನ ಗೊಬ್ಬರದಿಂದ ಧಾನ್ಯ ಬೆಳೆಗೆ ನೆರವಾಗುತ್ತದೆ. ಗಾಡಿ ಹೊತ್ತು ಧಾನ್ಯವನ್ನು ಮನೆಗೆ ಹೊರುತ್ತದೆ. 


ಆದ್ದರಿಂದಲೇ “ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ” ಇಂತಹ ಗೋವುಗಳಿಗೆ ಸಾಧ್ಯವಾದಷ್ಟು ಪ್ರತ್ಯುಪಕರಿಸಬೇಕು. 


ಈ ಮೂಲಕ ಭೂತಋಣದಿಂದ ಮುಕ್ತನಾಗಬೇಕು. ಉಳ್ಳವನು ಗೋಮಾಳವನ್ನು ರಕ್ಷಿಸುತ್ತಾನೆ. ಗೋಶಾಲೆಯನ್ನು ನಿರ್ವಹಿಸಬಲ್ಲ. ಕೊನೇ ಪಕ್ಷ ಪ್ರತಿದಿನ ಉಣ್ಣುವುದಕ್ಕೆ ಮುಂಚೆ ಒಂದು ಮುಷ್ಟಿ ಅನ್ನವನ್ನಾದರೂ ಗೋವಿಗಾಗಿ ತೆಗೆದಿಡಬೇಕು. 


ಇಂದು ‘ಗೋಗ್ರಾಸ" ಎಂಬ ಹೆಸರಿನಲ್ಲಿ ಭೂತಯಜ್ಞ ಉಳಿದುಕೊಂಡಿದೆ. ಅಲ್ಲದೇ ಗೋಗ್ರಾಸದಾನವು ನಿತ್ಯಕರ್ಮ. ಅದನ್ನು ಮಾಡದಿರುವುದು ಅಪರಾಧ. ಯಾವುದನ್ನು ಮಾಡದಿದ್ದರೆ ಪಾಪ ಬರುವುದೋ ಅದು ನಿತ್ಯಕರ್ಮ.


 “ಯದಕರಣೇ ಪ್ರತ್ಯವಾಯಸ್ತನ್ನಿತ್ಯಮ್” ಗವ್ಯ ಪದಾರ್ಥಗಳನ್ನೆಲ್ಲಾ ಯಥೇಷ್ಟವಾಗಿ ಉಪಯೋಗಿಸಿಕೊಳ್ಳುವ ವ್ಯಕ್ತಿ ಅವನ್ನು ಕೊಟ್ಟ ಗೋವಿಗೆ ಪ್ರಕೃತಿದತ್ತವಾದ ಹಿಡಿಹುಲ್ಲಿನ ಜೊತೆ ತಾನು ಉಣ್ಣುವ ಅನ್ನದಲ್ಲಿ ಒಂದು ಮುಷ್ಟಿಯನ್ನಾದರೂ ತೆಗೆದಿಡದಿದ್ದರೆ ಆತ ಕೃತಘ್ನನಾಗಲಾರನೇ? 


ಅಲ್ಲದೇ ಗೋವು ಸಕಲದೇವತೆಗಳಿಗೆ ಅಧಿಷ್ಠಾನ. ‘ಗವಾಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ.’ ಹದಿನಾಲ್ಕು ಲೋಕಗಳು ಗೋವಿನ ಅಂಗಾಂಗಗಳಲ್ಲಿ ಅಧಿಷ್ಠಿತ ಎಂಬ ಮಾತಿದೆ. ಗೋಗ್ರಾಸದಿಂದಲೇ ಗೋಪಾಲಕೃಷ್ಣ ಪ್ರಸನ್ನನಾಗುತ್ತಾನೆ.


 ಪಟ್ಟಣದಲ್ಲಿ ವ್ಯವಹಾರ ಉದ್ಯೋಗದ ಒತ್ತಡದಲ್ಲಿ ಇರುವ ಜನತೆಗೆ ಇಂದು ಗೋಗ್ರಾಸ ನೀಡುವುದು ಕ್ಲೇಶವೆನಿಸಿದೆ. ಆದರೂ ಆತ ಒಂದು ವಿಷಯವನ್ನು ಗಮನಿಸಬೇಕು. ತಾನು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುವುದನ್ನು ಬಿಡಲಿಲ್ಲ. 


ಆದ್ದರಿಂದ ಹಸುವನ್ನು ಸಾಕುವ ಜವಾಬ್ದಾರಿ ಅವನಿಗಿದೆ. ಅದಕ್ಕಾಗಿ ಗೋಗ್ರಾಸದ ಹೆಸರಿನಲ್ಲಿ ಸ್ವಲ್ಪವಾದರೂ ಧನವನ್ನು ತೆಗೆದಿಡುವ ಕೆಲಸವನ್ನು ಆತ ಮಾಡಬಹುದು. ಆ ಹಣವನ್ನು ದೊಡ್ಡ ಮೊತ್ತವಾದಾಗ ಅಲ್ಲಲ್ಲಿ ನಡೆಯುತ್ತಿರುವ ಗೋಶಾಲೆಗಳಿಗೆ ನೀಡಿ ಭೂತ ಯಜ್ಞದ ಫಲ ಪಡೆಯಬಹುದು. 


ಧರ್ಮದ ನಡೆ ಆಧುನಿಕತೆಯಲ್ಲಿ ಕ್ಲಿಷ್ಟವೆನಿಸಿದರೂ ಮನಸ್ಸಿದಲ್ಲಿ ಮಾರ್ಗವಿದ್ದೇ ಇದೆ. ಹೀಗೆ ಗೃಹಸ್ಥನಿಗೆ ನಿತ್ಯಕರ್ಮಗಳಾಗಿ ಐದು ಯಜ್ಞಗಳು. ಇವೇ ಪಂಚಯಜ್ಞ. ಬ್ರಹ್ಮಯಜ್ಞೋ ದೇವಯಜ್ಞಃ ಪಿತೃಯಜ್ಞಸ್ತಥೈವ ಚ | ಮನುಷ್ಯಭೂತಯಜ್ಞೌ ಚ ಪಂಚಯಜ್ಞಾಃ ಪ್ರಕೀರ್ತಿತಾಃ || 


ಈ ಐದು ಯಜ್ಞಗಳನ್ನು ನಡೆಸುವಲ್ಲಿ ಪ್ರಯತ್ನಶೀಲನಾದ ಗೃಹಸ್ಥ ವ್ಯಕ್ತಿ ಮೋಕ್ಷಪಡೆಯಲು ಅರ್ಹ ಅಧಿಕಾರಿಯಾಗುತ್ತಾನೆ.


ಗೋಗ್ರಾಸ ಮತ್ತು ವಾಯಸ


ಹಬ್ಬ ಹರಿದಿನಗಳಲ್ಲಿ ಮಾಡಿದ ವಿಶೇಷ ಅಡಿಗೆಯನ್ನು ದೇವರಿಗೆ ನೈವೇದ್ಯ ಮಾಡಿದ ಬಳಿಕ ಮನೆಮಂದಿ ಆ ಅಡಿಗೆಯನ್ನು ಸವಿಯುವ ಮೊದಲು ಗೋವಿಗೆ ಮತ್ತು ಕಾಗೆಗೆ ಇಡುತ್ತಾರೆ. ಅವುಗಳು ತಿಂದ ನಂತರ ಮನೆ ಮಂದಿ ತಿನ್ನುತ್ತಾರೆ.


ಗೋವಿಗೆ ಇರಿಸಿದಕ್ಕೆ ಗೋಗ್ರಾಸ ಎಂದೂ 


ಕಾಗೆಗೆ‌ ಮಡಗಿದಕ್ಕೆ ವಾಯಸ ಎನ್ನುತ್ತಾರೆ.


ನೋಡಲು ಸುಂದರವಾದ,‌ಮಧುರ ಕಂಠವುಳ್ಳ ಪಕ್ಷಿಗಳನ್ನು ಬಿಟ್ಟು,  ಕರ್ಕಶಸ್ವರದ ಕಪ್ಪು ಬಣ್ಣದ ಕಾಗೆಯನ್ನೇ ಋಷಿ ಮುನಿಗಳು ವಾಯಸ ಇಡಲು ಯಾಕೆ ಆರಿಸಿದರು? ಇದರ ಹಿಂದೆ ಎರಡು ಕಾರಣಗಳಿವೆ. 


ಒಂದು ಶ್ರದ್ಧೆ ನಂಬಿಕೆಯಾದರೆ ಇನ್ನೊಂದು ವಾತಾವರಣ ರಕ್ಷಣೆಯ ವೈಜ್ಞಾನಿಕ ಕಾರಣ.

ಕಾಗೆಗೆ ಆಹಾರ ಇಟ್ಟರೆ ಅದು ನಮ್ಮ ಗತಿಸಿದ ಪೂರ್ವಜರಿಗೆ (ಪಿತೃಗಳಿಗೆ) ತಲುಪುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ಕಾಗೆಯ ಮೇಲೆ ವಿಷವು ಶೀಘ್ರ ಪರಿಣಾಮ ಬೀರುವುದರಿಂದ ಆಹಾರ ಸೇವಿಸಿದ ಕಾಗೆ ಕ್ಷೇಮವಾಗಿ ಇದ್ದರೆ ತಯಾರಿಸಿದ ಆಹಾರದಲ್ಲಿ ವಿಷಕಾರಕ ಪದಾರ್ಥ ಸೇರಿಲ್ಲ ಎಂಬುದು ದೃಢವಾಗುವುದರಿಂದ ಹಬ್ಬದ/ಸಾರ್ವಜನಿಕರು   ಆಹಾರವನ್ನು ತಿನ್ನುವುದರಿಂದ ಸಂಭವಿಸ ಬಹುದಾದ ಪ್ರಾಣ ಹಾನಿ ತಡೆಗಟ್ಟಲು ಸಾಧ್ಯ.


ಭಾದ್ರಪದ ಮಾಸದ ಕೃಷ್ಣ ಪಕ್ಷಕ್ಕೆ(ಪಾಡ್ಯದಿಂದ ಮಹಾಲಯ ಅಮಾವಾಸ್ಯೆವರೆಗಿನ 15ದಿಗಳು) ಪಿತೃಪಕ್ಷ ವೆನ್ನುತ್ತಾರೆ. ಆ  15ದಿನಗಳ ಅವಧಿಯಲ್ಲಿ ಕುಟುಂಬದ ಗತಿಸಿದ 3ತಲೆಮಾರಿನವರೆಗಿನ  ಪೂರ್ವಜರ ಸ್ಮರಣಾರ್ಥ ಮಾಡಿದ  ಶ್ರಾದ್ಧದ ಅಡುಗೆ  ಕಾಗೆಗೆ ಉಣ್ಣಿಸಿದರೆ ಪಿತೃಗಳು ತೃಪ್ತರಾಗುತ್ತಾರೆಂಬ ನಂಬಿಕೆ. 


ಪಿತೃಪಕ್ಷದಲ್ಲಿ ಕಾಗೆಗೆ ವಾಯಸ ಇಡುವ ಹಿಂದೆ ಇನ್ನೂ ಒಂದು ವೈಜ್ಞಾನಿಕ ಕಾರಣವಿದೆ.


ಇದು ಪರಿಸರ ರಕ್ಷಣೆಗೆ ಸಂಬಂಧಿಸಿದು. ಅಶ್ವತ್ಥವೃಕ್ಷ ಹಗಲಿನಲ್ಲಿ ಅತಿ ಹೆಚ್ಚು ಆಮ್ಲಜನಕವನ್ನು ಹೊರಸೂಸುತ್ತವೆ. ಅಶ್ವತ್ಥ ಬೀಜವು ಮೊಳಕೆಯೊಡೆಯಲು ಕಾಗೆಯ ಹೊಟ್ಟೆಯ ಮೂಲಕ ಸಾಗಲೇ ಬೇಕು. ಕಾಗೆ‌ಗಳು ಅಶ್ವತ್ಥ ವೃಕ್ಷದ ಫಲತಿಂದು ಹಿಕ್ಕೆಯ ಮೂಲಕ ಅಶ್ವತ್ಥ ಮರದ ಬೀಜ ಪ್ರಸಾರಮಾಡುತ್ತವೆ. 


ಆದುದರಿಂದ ವಾತಾವರಣದಲ್ಲಿ ಆಮ್ಲಜನಕ ದ ಪ್ರಮಾಣ ಹೆಚ್ಚಿಸಲು ಹೆಚ್ಚು ಹೆಚ್ಚು ಅಶ್ವತ್ಥ ವೃಕ್ಷದ ಅವಶ್ಯಕತೆ ಇದೆ. 


ಅಶ್ವತ್ಥ ವೃಕ್ಷದ ಸಂಖ್ಯೆ ಹೆಚ್ಚಿಸಲು ಹೆಚ್ಚು ಹೆಚ್ಚು ಕಾಗೆಗಳ ಅಗತ್ಯವಿದೆ.ಕಾಗೆಗಳ ಸಂಖ್ಯೆ ಹೆಚ್ಚಿಸಲು ಕಾಗೆ ಮರಿಗಳಿಗೆ ಸಾಕಷ್ಟು ಆಹಾರ ದೊರಕ ಬೇಕು. ಪಿತೃ ಪಕ್ಷದ ಅವಧಿಯಲೇ ಕಾಗೆಗಳ ಮೊಟ್ಟೆಯೊಡೆದು‌ ಮರಿಗಳಾಗುತ್ತವೆ.


ಈ ಮರಿಗಳಿಗೆ‌ ಸಾಕಷ್ಟು ಆಹಾರ ಸಿಗಲೆಂದು ಪಿತೃ ಪಕ್ಷದ 15 ದಿನಗಳ ಕಾಲ   ವಾಯಸ ಮುಖಾಂತರ ಕಾಗೆಮರಿಗಳಿಗೆ    ಸಾಕಷ್ಟು ಆಹಾರ ಸಿಗುವಂತೆ ನಮ್ಮ ಋಷಿ ಮುನಿಗಳು

ಕ್ರಮಬದ್ಧ ವಾದ ಯೋಜನೆ ರಚಿಸಿದ್ದಾರೆ. 


ಕಾಗೆಗಳಿಗೆ ದಿನಾಲೂ ಆಹಾರ ಸಮಸ್ಯೆಯಿಲ್ಲದೆ ಸಿಗಲಿ ಎಂಬ ಸದುದ್ದೇಶದಿಂದ ದೇವಸ್ಥಾನ, ಮಠಗಳಲ್ಲಿ ದಿನಾಲೂ ಮಧ್ಯಾಹ್ನ ಪೂಜೆಯ ನಂತರ   ವಾಯಸವಿಡುವ ಸಂಪ್ರದಾಯವಿದೆ. 


ಆದುದರಿಂದ ನೀವೂ ಸಹಾ ಕಾಗೆಗೆ‌ ಆಹಾರ ನೀಡುವ‌ ಮೂಲಕ‌ ವಾತಾವರಣ‌ ರಕ್ಷಿಸಲು‌ ಸಹಕರಿಸಿ.

***



No comments:

Post a Comment