SEARCH HERE

Tuesday, 30 November 2021

ತಂತ್ರಸಾರ ಸಂಗ್ರಹ

 ಶ್ರೀಮನ್ಮಧ್ವಾಚಾರ್ಯರಿತ್ತ_ತಂತ್ರರತ್ನ


ಇತಿಹಾಸಪುರಾಣಗಳ ವಿಷಯಗಳಲ್ಲಿ ಮಹಾಭಾರತತಾತ್ಪರ್ಯನಿರ್ಣಯ, ಭಾಗವತತಾತ್ಪರ್ಯನಿರ್ಣಯ ಶ್ರೀಮನ್ಮಧ್ವಾಚಾರ್ಯರ ಮೇರು ಕೃತಿಗಳಾದರೆ, ತಂತ್ರಶಾಸ್ತ್ರದ ವಿಷಯದಲ್ಲಿ ತಂತ್ರಸಾರಸಂಗ್ರಹವು ನಿರ್ಣಾಯಕ ಗ್ರಂಥವಾಗಿದೆ. ಇದರಲ್ಲಿ ನಾರಾಯಣನು ಬ್ರಹ್ಮದೇವರಿಗೆ ಉಪದೇಶಿಸಿದ ಪಂಚರಾತ್ರದಸಾರವು (ತಂತ್ರಸಾರಸಂಗ್ರಹ ೪.೧೬೨) ಅಢಕವಾಗಿದೆ. ಒಬ್ಬ ಬೇರೆ ಬೇರೆ ತಂತ್ರಸಿದ್ಧಾಂತಗಳನ್ನು ನೋಡಿಕೊಂಡಿದ್ದಾಗ ಅದರಲ್ಲಿರುವ ನ್ಯೂನತೆ, ವೈವಿಧ್ಯತೆಗಳಿದ್ದಾಗ ಅದರ ನಿರ್ಣಯವನ್ನು ನೀಡಿ ಸನ್ಮಾರ್ಗದಲ್ಲಿ ನಡೆಸುವಂತಹ ಗ್ರಂಥವಾಗಿದೆ.


ಪ್ರಾಚೀನ ಪಂಚರಾತ್ರಸಂಹಿತೆಗಳಂತೆ ತಂತ್ರಸಾರಸಂಗ್ರಹವು ಶಾಸ್ತ್ರಾವತರಣ, ಮಂತ್ರೋದ್ಧಾರ, ಪೂಜೆಯ ಕ್ರಮ, ಪ್ರಾಣಾಯಾಮಾದಿ ಆತ್ಮಶುದ್ಧಿ, ಕಲಶವಿಧಿ, ದೀಕ್ಷಾವಿಧಿ, ಹೋಮಗಳಕ್ರಮ, ಪ್ರತಿಮಾನಿರ್ಮಾಣಕ್ರಮ, ದೇವಾಲಯನಿರ್ಮಾಣದ ಕ್ರಮ, ಪ್ರತಿಮಾಪ್ರತಿಷ್ಠಾಪನೆಯ ವಿಧಾನ, ಉತ್ಸವ, ಜೀರ್ಣೋದ್ಧಾರ, ಸಂಪ್ರೋಕ್ಷಣೆಯ ವಿಧಾನ, ತತ್ವಗಳ ಸ್ವರೂಪ, ವರಾಹಾದಿಮಂತ್ರಗಳ ಸಂಗ್ರಹ, ಲಕ್ಷ್ಮೀ-ಬ್ರಹ್ಮಾದಿ ದೇವತೆಗಳ ಅಪೂರ್ವಮಂತ್ರಗಳು, ಧನ್ವಂತರೀಮಂತ್ರದ ಮಹಿಮೆ, ಮಂತ್ರಗಳ ಉಪಯೋಗ, ಯಂತ್ರರಚನೆಯಕ್ರಮ, ಗುರು-ಶಿಷ್ಯಲಕ್ಷಣ, ಮತ್ತು ಉಪಾಸನವಿಧಿಗಳ ತಿಳಿಸುವ ಗ್ರಂಥವಾಗಿದೆ.


ಯಾವುದೇ ಗ್ರಂಥಕ್ಕೆ ಸಿದ್ಧಾಂತದ ಚೌಕಟ್ಟು ಮುಖ್ಯ. ಆಚಾರ್ಯಲಕ್ಷಣವನ್ನು ಹೇಳುವಾಗ ಪಾದ್ಮಸಂಹಿತೆಯು ಸಿದ್ಧಾಂತದ ಸರಿಯಾದ ತಿಳುವಳಿಕೆಗೆ ಶ್ರಮವಹಿದವನಾಗಿರಬೇಕೆಂದೇ ತಿಳಿಸಿದೆ. ತಂತ್ರಶಾಸ್ತ್ರಗಳ ಸಿದ್ಧಾಂತಗಳಲ್ಲಿ ಮಾಡುವ ಸಾಂಕರ್ಯವು ದೋಷವೆಂದು ಭಾರ್ಗವಾದಿ ಸಂಹಿತೆಗಳು ಸಾರಿವೆ. ಶ್ರೀಮದಾಚಾರ್ಯರ ತಂತ್ರಸಾರಸಂಗ್ರಹವು ಭಗವಂತನು ಸರ್ವೋತ್ತಮ, ದೋಷರಹಿತ, ಗುಣಪೂರ್ಣ ಎಂಬ ಸಿದ್ಧಾಂತದ ಹಿನ್ನಲೆಯಲ್ಲಿ ಹೊರಟ ತಂತ್ರಗ್ರಂಥವಾಗಿದೆ. ಇದು ಅವರು ಗ್ರಂಥಾರಂಭದಲ್ಲಿ ಮಾಡಿದ ಮಂಗಳಾಚರಣೆಯಿಂದಲೇ ಸ್ಪಷ್ಟವಾಗುತ್ತದೆ. ಗ್ರಂಥದ ಆರಂಭದಿಂದ ಅಂತ್ಯದವರೆಗೂ ಪರಮಾತ್ಮನ ಗುಣಪೂರ್ಣತ್ವ, ನಿರ್ದೋಷತ್ವ, ಸರ್ವೋತ್ತಮತ್ವ ಪ್ರತಿಪಾದಿತವಾಗಿದೆ.


ತಂತ್ರಸಾರಸಂಗ್ರಹವು ನಾಕು ಅಧ್ಯಾಯಗಳನ್ನು ಒಳಗೊಂಡಿದೆ. ಇವುಗಳ ಅಪೂರ್ವತೆಗಳಲ್ಲಿ ಕೆಲವನ್ನು ನೋಡೋಣ.

ಮೊದಲನೆ_ಅಧ್ಯಾಯ: ೫೧ ವೈದಿಕಾಕ್ಷರಗಳಿಂದ ಭಗವಂತನ ಯಾವ ರೂಪಗಳು ಚಿಂತಿಸಲ್ಪಡಬೇಕು ಎಂಬುದಕ್ಕೆ ನಮಗೆ ಮಾರ್ಗದರ್ಶನ ಇಲ್ಲಿದೆ. ಪಂಚರಾತ್ರದಲ್ಲೇ ಜಯಾಖ್ಯ ಸಂಹಿತೆಯು ಅಪ್ರಮೇಯ, ಆದಿದೇವ, ಇಷ್ಟ ಇತ್ಯಾದಿ ರೂಪಗಳನ್ನು ತಿಳಿಸಿದರೆ, ಪ್ರಕಾಶಸಂಹಿತೆ ಅಜ, ಆನಂದ, ಇಂದ್ರ ಇತ್ಯಾದಿ ರೂಪಗಳನ್ನು ತಿಳಿಸಿವೆ. ಯಾವ ರೂಪಗಳ ಅನುಸಂಧಾನ ಮಾಡಬೇಕೆಂಬ ಗೊಂದಲ ಸಹಜವಾಗಿರುತ್ತದೆ. ಶ್ರೀಮನ್ಮಧ್ವಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಅಜಾದಿರೂಪಗಳನ್ನು ಚಿಂತಿಸಬೇಕೆಂದು ನಿರ್ಣಯಿಸಿಕೊಟ್ಟಿದ್ದು  ಅಪೂರ್ವವಾದ ನಿರ್ಣಯ. ಇದೇ ರೀತಿ ನಾರಾಯಣ ಅಷ್ಟಾಕ್ಷರದ ರೂಪಗಳ ಬಗ್ಗೆಯೂ ವರಾಹ, ನರಸಿಂಹ, ಶ್ರೀಧರ, ಶ್ರೀಧರ, ಹಯಶಿರಸ, ಭಾರ್ಗವ, ರಾಮ, ವಾಸುದೇವ ರೂಪಗಳ ಚಿಂತಿಸಬೇಕು ಎಂದು, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ ಎಂದೂ, ಹಾಗೆಯೇ ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ ಜ್ಞಾನಾತ್ಮಗಳೆಂಬ ರೂಪಗಳಯ ಎಂಬ ಪಕ್ಷಾಂತರಗಳು ಕಾಣಸಿಗುತ್ತವೆ. ವಿಶ್ವ ತೈಜಸಾದಿ ರೂಪಗಳು ಉಪಾಸ್ಯವಾದವು ಎಂಬುದಾಗಿ ಮೊದಲನೆಯ ಅಧ್ಯಾಯವು ಮಾರ್ಗದರ್ಶನ ಮಾಡುದೆ. ಹೀಗೆ ತಂತ್ರಶಾಸ್ತ್ರಗಳಲ್ಲಿ ಬರುವ ಗೊಂದಲಾತ್ಮಕವಾದ ವಿಷಯಗಳಿಗೆ ನಿರ್ಣಾಯಾತ್ಮಕ ಗ್ರಂಥ ಇದುವಾಗಿದೆ.

ಇನ್ನೂ ಆಗಮೋಕ್ತ ಆಲಯಗಳಲ್ಲಿ ಷಡಾಧಾರಪ್ರತಿಷ್ಠೆ ಮಾಡುವ ಕ್ರಮ ಇದೆ. ಈ ಷಡಾಧಾರದ ಚಿಂತನೆ ಪೂರ್ಣವಾಗಿ ದೊರಕುವುದು ಶ್ರೀಮದಾಚಾರ್ಯರ ತಂತ್ರಸಾರಸಂಗ್ರಹದಲ್ಲಿ. ಅನ್ಯ ತಾಂತ್ರಿಕರು ಆಧಾರಶಿಲೆಯನ್ನು ಹೇಳಿದ್ದರೂ ಅದಕ್ಕೆ ದೇವತೆಯನ್ನು ಹೇಳಲಿಲ್ಲ. ಆಧಾರಶಿಲೆಯನ್ನು ಪೃಥಿವಿಯ ಪ್ರಾರ್ಥನಾಮಂತ್ರದಿಂದಲೇ ಆರಾಧಿಸಲಾಗುತ್ತದೆ. ಪರಮಪುರುಷ, ಆಧಾರಶಕ್ತಿ, ಕೂರ್ಮ, ಅನಂತ, ಪೃಥಿವೀ ಅದರ ಮೇಲೆ ಯೋಗಪೀಠ ಇವರೇ ಷಡಾಧಾರಗಳು ಎಂಬ ಸ್ಪಷ್ಟ ಚಿಂತನೆ ಸಿಗುವುದು ತಂತ್ರಸಾರಸಂಗ್ರಹದಲ್ಲಿ ಮಾತ್ರ. ಹೀಗೆ ಹಲವಾರು ಅಪೂರ್ವತೆಗಳ ಮೊದಲನೇ ಅಧ್ಯಾಯ ಒಳಗೊಂಡಿದೆ. ಶ್ರೀಮನ್ಮಧ್ವಾಚಾರ್ಯರು ೨೪ ಕೇಶವಾದಿರೂಪಗಳ ನಿರೂಪಿಸಿದ ರೀತಿ ಅವರ ಗಣಿತಜ್ಞಾನಕ್ಕೆ ನಿದರ್ಶನ.

ಎರಡನೇ_ಅಧ್ಯಾಯ: ಕಲಶವೆಂದರೆ ಭಗವಂತನ ೧೦೦ ಕಲಾರೂಪಗಳನ್ನು ಒಳಗೊಂಡದ್ದು ಎಂಬ ಅಪೂರ್ವ ವಿಷಯ, ಎಲ್ಲಾ ಹೋಮಗಳಲ್ಲಿ ಪುರುಷಪ್ರಕೃತಿಯರಾದ ಲಕ್ಷ್ಮೀನಾರಾಯಣಾತ್ಮಕವಾದ ಕುಂಡದಲ್ಲಿ ವಿಷ್ಣುವೀರ್ಯಾತ್ಮಕ ಅಗ್ನಿಯ ಸ್ಥಾಪಿಸಿ ೧೬ ಸಂಸ್ಕಾರಗಳಮಾಡಬೇಕು ಎಂದು ಆಚಾರ್ಯರು ನಿರೂಪಿಸಿದ ವಿಷಯವು ಅಗ್ನಿಯಲ್ಲಿ ಶೈವಾಗ್ನಿ ವೈಷ್ಣವಾಗ್ನಿ ಎಂಬ ಬೇಧ ಇಲ್ಲ, ಗರ್ಭಾದಾನಾದಿ ೧೬ ಸಂಸ್ಕಾರಗಳು ಸರ್ವತ್ರ ಹೋಮಗಳಲ್ಲಿ ಮಾಡಲ್ಪಡಬೇಕೆಂಬ ನಿರ್ಣಯತ್ಮಕ ವಿಷಯಗಳನ್ನು ತಿಳಿಸುತ್ತದೆ. ಯಾಕೆಂದರೆ ತಂತ್ರಾಂತರಗಳು ಶೈವ-ವೈಷ್ಣವಾದಿ ಅಗ್ನಿಭೇದ, ಶಿವನ ಹೊರತಾಗಿ ಇತರ ದೇವತಾ ಹೋಮಗಳಲ್ಲಿ ಅಗ್ನಿಗೆ ೮ ಅಥವಾ ೭ ಸಂಸ್ಕಾರಗಳ ಮಾಡಬೇಕೆಂದು ಹೇಳಿದ್ದಿದೆ. ಇದಲ್ಲದೆ ಕುಂಡದ ಕರಾರುವಕ್ಕಾದ ಅಳತೆಗಳು, ಹೋಮದ್ರವ್ಯಗಳು, ದೀಕ್ಷೆಯವಿಧಿಯ ಕುರಿತಾದ ಅಪೂರ್ವವಿಷಯಗಳ ಒಳಗೊಂಡಿದೆ.

ಮೂರನೇ_ಅಧ್ಯಾಯ:  ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಒಳಗೊಂಡ ಅಧ್ಯಾಯ. ಇಲ್ಲಿ ಇರುವಷ್ಟು ಕರಾರುವಕ್ಕಾಗಿ ಪ್ರತಿಮೆಯ ಅಂಗಾಂಗಳ ಅಳತೆಗಳ ವಿಚಾರ ಇನ್ನೆಲ್ಲೂ ಕಾಣಲು ಸಿಗಲ್ಲ ಎಂಬ ದೇವನಹಳ್ಳಿಯ ಖ್ಯಾತ ಶಿಲ್ಪಿಗಳಾದ ದಿ. ಹನುಮಂತಾಚಾರ್ಯರ ಮಾತನ್ನು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ತಂತ್ರಸಾರಸಂಗ್ರಹ ಕನ್ನಡಾನುವಾದದ ಮುನ್ನುಡಿಯಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀಮದಾಚಾರ್ಯರು ಆರಿಸಿಕೊಟ್ಟ ವಾಸ್ತುಪೂಜಾವಿಧಿಯು ನಮಗೆ ವಾಸ್ತುಶಾಸ್ತ್ರದ ವಿಷಯದಲ್ಲಿ ಮಾರ್ಗದರ್ಶಕ. ಭಗವಂತನ ಪ್ರತಿಷ್ಠಾವಿಧಾನದಿಂದ ಹಿಡಿದು ಸಂಪ್ರೋಕ್ಷಣೆವರೆಗಿನ ವಿಷಯಗಳು ಆಚರಣೆಗೆ ಅನುಕೂಲವಾಗುವಂತೆ ಸಂಕ್ಷಿಪ್ತವಾಗಿ ನಿರೂಪಿತವಾಗಿದೆ. ವಿಷ್ಣುವಿನ ಹೊರತಾಗಿ ಇತರ ಶಾಕ್ತಶೈವಾದಿ ಆರಾಧನೆಗಳ ಶಾಸ್ತ್ರಗಳಲ್ಲಿ ನಿಷೇಧಿಸಿದ್ದುಂಟು. ಇದು ಸ್ವತಂತ್ರವಾಗಿ ಆಯಾಯ ದೇವತೆಗಳ ಆರಾಧನೆಯ ಖಂಡಿಸಿದ್ದು, ಭಗವಂತನ ನಿಯಮನಕ್ಕೆ ಒಳಪಟ್ಟವರು ಇತರ ದೇವತೆಗಳು ಎಂಬ ಅನುಸಂಧಾನದಿಂದ ಆರಾಧಿಸುವುದು ಶಾಸ್ತ್ರಸಮ್ಮತ ಇದನ್ನೇ ದೇವತೆಗಳು ಸ್ವೀಕರಿಸುವುದು  ಎಂಬ ನಿರ್ಣಯ ಇಲ್ಲಿದೆ. ಇನ್ನೂ ತತ್ವಗಳ ವಿಷಯದಲ್ಲಿ ತಂತ್ರಗಳಲ್ಲಿ ಅಭಿಪ್ರಾಯಬೇಧಗಳಿವೆ. ಸಾಮಾನ್ಯವಾಗಿ ಪಂಚರಾತ್ರಸಂಹಿತೆಗಳು ಪುರುಷವೇ ಮೊದಲಾದ ೨೫ ತತ್ವಗಳನ್ನು ಹೇಳುತ್ತವೆ. ಸೂರ್ಯ, ಚಂದ್ರ, ಅಗ್ನಿ, ವಾಸುದೇವಾದಿ ನಾಕುರೂಪಗಳ ಸೇರಿಸಿ ೩೨ ತತ್ವಗಳು ಎಂದದ್ದೂ ಉಂಟು. ಶೈವತಂತ್ರಗಳು ಶಿವ, ಈಶ್ವರ, ಅಶುದ್ಧವಿದ್ಯಾದಿ ತತ್ವಗಳ ಕಲ್ಪಿಸಿಕೊಂಡು ೩೬ ತತ್ವಗಳ ಹೇಳಿದ್ದೂ ಉಂಟು. ಆದರೆ ೨೫ ತತ್ವಗಳು ಯಾವವು !? ೩೨ ತತ್ವಗಳೆಂದರೆ ಯಾವ್ಯಾವವು !?, ೩೬ ತತ್ವಗಳು ಅವುಗಳ ಅಭಿಮಾನಿ ದೇವತೆಗಳು ಯಾರ್ಯಾರು ! ಎಂಬ ಸ್ಪಷ್ಟ ತಿಳುವಳಿಕೆ ಸಿಗುವುದು ತಂತ್ರಸಾರಸಂಗ್ರಹದಲ್ಲಿ ಮಾತ್ರ.

ನಾಲ್ಕನೇ_ಅಧ್ಯಾಯ: ತಂತ್ರಶಾಸ್ತ್ರಗಳಲ್ಲಿ ಮಂತ್ರಗಳ ಸಾಗರವೇ ಕಾಣಸಿಗುತ್ತವೆ. ಇವುಗಳಲ್ಲಿ ಕಲಿಯುಗದಲ್ಲಿ ಫಲಕೊಡುವಮಂತ್ರಗಳ ಅಪೂರ್ವವಾದ ಸಂಗ್ರಹ ಇಲ್ಲಿದೆ. ಅಪೂರ್ವವಾದ ಇತರ ತಾಂತ್ರಿಕರಿಂದ ದೂರ ಉಳಿದ ಪರಶುರಾಮ, ವೇದವ್ಯಾಸ, ದತ್ತಾತ್ರೇಯ, ಕಪಿಲಾದಿಮಂತ್ರಗಳು ಇಲ್ಲಿವೆ. ಈ ಅಧ್ಯಾಯವು ಬ್ರಹ್ಮದೇವರಿಗೆ ಆರಾಧನೆ ಇಲ್ಲ ಎಂಬ ತಪ್ಪು ಕಲ್ಪನೆಯ ನಿವಾರಿಸುತ್ತದೆ. ಭಕ್ತಿ ಎಂದರೇನು !? ಎಂತಹ ಆಚಾರ್ಯರ ಆಶ್ರಯಿಸಬೇಕು ! ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಪಷ್ಟ ನಿರ್ಣಯ ಇಲ್ಲಿದೆ. ಯಮ ನಿಯಮಾದಿಗಳ ವಿಷಯ, ದೇಹದಲ್ಲಿರುವ ಷಟ್ಚಕ್ರಗಳ ಲಕ್ಷಣ ಅವುಗಳಲ್ಲಿ ಭಗವಂತನರೂಪಗಳ ಉಪಾಸನೆಯಕ್ರಮಗಳು, ಸುಷುಮ್ನಾದಿ ನಾಡಿಲಕ್ಷಣ, ಧ್ಯಾನಧಾರಣಸಮಾಧಿಗಳ ಮೂಲಕ ಭಗವಂತನ ಸಾಕ್ಷಾತ್ಕಾರ ಇತ್ಯಾದಿ ಯೋಗಿಕಸಾಧನೆಗಳ ಬಗ್ಗೆ ಸಮಗ್ರಮಾಹಿತಿ ಇಲ್ಲಿದೆ.


ಒಟ್ಟಾರೆ ಒಬ್ಬ ಸಾಧಕನಿಗೆ ಸಾಧನೆಗೆ ಬೇಕಾದ ಎಲ್ಲಾ ವಿಷಯಗಳು ಈ ಪುಟ್ಟ ಸರಿಸುಮಾರು ೪೦೦ ಶ್ಲೋಕಗಳ ಗ್ರಂಥದಲ್ಲಿ ಅಢಕವಾಗಿದೆ. ಶ್ರೀಮದಾಚಾರ್ಯರು ಸರ್ವಜ್ಞರಾಯರು ಅವರಿಗೆ ಅಪಾರವಾದ ತಂತ್ರ, ಶಿಲ್ಪ, ವಾಸ್ತು ಹಾಗೂ ಜೋತಿಷ್ಯ ಶಾಸ್ತ್ರಗಳ ಅರಿವು ಚೆನ್ನಾಗಿತ್ತೆಂದು ಗ್ರಂಥ ತಿಳಿಸುತ್ತಿದೆ. ತಂತ್ರಸಾರಸಂಗ್ರಹವು ತಂತ್ರಶಾಸ್ತ್ರವನ್ನು ಅನುಸರಿಸುವ ಪ್ರತಿಯೊಬ್ಬನಿಗೂ ಮಾರ್ಗದರ್ಶಕ. ಕೆಲವರು ತಿಳಿಯದ ಜನರು ಇದು ಕೇವಲ ಮಠಕ್ಕೆ ಸಂಬಂಧಿಸಿದ ತಂತ್ರವೆಂದು ತಪ್ಪಾಗಿ ಹೇಳುತ್ತಾರೆ. ಆಚಾರ್ಯರು ಹೇಳಿದ ಪ್ರತಿಯೊಂದು ವಿಷಯ ಅದು ದೇವಾಲಯಕ್ಕೆ ಸಂಬಂಧಿಸಿಯೇ ಆಗಿದೆ.

ಈ ಗ್ರಂಥವನ್ನು ಇನ್ನಷ್ಟು ತಿಳಿದು ಆಚರಿಸುವಂತಾಗಲಿ. 

ಶ್ರೀಮಧ್ವೇಶಾರ್ಪಣಮಸ್ತು

- by  ಬೆಳ್ಳೆ ಸುದರ್ಶನ ಆಚಾರ್ಯ

***


No comments:

Post a Comment