SEARCH HERE

Wednesday, 2 December 2020

ಅಂಗಜ ಮನ್ಮಥ

 ಅಂಗಜ ಮನ್ಮಥ ಪ್ರಯೋಗದ ವಿಶೇಷತೆ ಏನಿರಬಹುದು


 ಹರೇ ಶ್ರೀನಿವಾಸ 

ಅಂಗಜ ಮನ್ಮಥ

ಮನಸ್ತತ್ವಾಭಿಮಾನಿ ಕಾಮದೇವರು.. 

ಮನಸಿಜನಾದ ಕಾಮದೇವ ಶ್ರೀ ಕೃಷ್ಣ ನ ಮಗನಾಗಿ ಪ್ರದ್ಯುಮ್ನ ಹೆಸರಿನಲ್ಲಿ ಅವತಾರ ಮಾಡಿದ. 

ಶ್ರೀರಾಮಚಂದ್ರ ನ ತಮ್ಮ ಭರತನಾಗಿ ಅವತಾರ ಮಾಡಿದ. 

ಶ್ರೀ ಕೃಷ್ಣನ ಜಾಂಬವತಿ ದೇವಿಯ ಮಗನಾಗಿ ಸಾಂಬನಾಗಿ ಅವತಾರ ಮಾಡಿದ. 

ರುದ್ರದೇವರ ಮಗನಾಗಿ ಸ್ಕಂದನಾಗಿ ಅವತಾರ ಮಾಡಿದ.

ಅಂಗಜನಾದ ಕಾಮದೇವ ತಾನು ಸೌಂದರ್ಯವಂತ ರೂಪವಂತ ಎಂಬ ಅಹಂಕಾರದಿಂದ

ರುದ್ರದೇವರ ಧ್ಯಾನಕ್ಕೆ ಭಂಗ ತಂದ.. ತಾನು ರುದ್ರದೇವರ ಪ್ರೇರಣೆ ಮಾಡುವಷ್ಟು ಯೋಗ್ಯತೆಯವನಲ್ಲ ಅಂತ ತಿಳಿಯದೆ ಇಂದ್ರಾದಿ ದೇವತೆಗಳ ಕೋರಿಕೆಯಂತೆ ರುದ್ರದೇವರ ಧ್ಯಾನ ಭಂಗ ಮಾಡಿದ. 

ಕಂದರ್ಪ.. ಕಾಮದ ದರ್ಪ ಆತನಿಗೆ.. ಆತಗೆ ಮನ್ಮಥ ಎಂಬ ಅಹಂಕಾರ. 

ರುದ್ರದೇವರ ಮೂರನೇ ಕಣ್ಣಿನಿಂದ ಭಸ್ಮನಾದ 

ಅನಂಗ ನಾದ. 

ರತಿ ದೇವಿ ಪ್ರಾರ್ಥಿಸಿದಾಗ ರುದ್ರದೇವರು ಹೇಳಿದಂತೆ.. ಮಾರ ಶ್ರೀಕೃಷ್ಣ ನ ಮಗನಾದ. . 


ಮಂಗಳಾಂಗ ಅಪ್ರಾಕೃತಕಾಯ ಶ್ರೀ ಕೃಷ್ಣ ನ ಮಗನಾಗಿ 

ಅಂಗಜ

ಶ್ರೀರಾಮಚಂದ್ರದೇವರ ಧ್ಯಾನದೊಳಿಹ ವೈರಾಗ್ಯ ಶಿಖಾಮಣಿಗಳು ಮಂಗಳಪ್ರದ ಧ್ಯಾನತಪ್ತ ಅಂಗ ರುದ್ರದೇವರ ಮಗನಾಗಿ ಮುಂದೆ ಸ್ಕಂದನಾಗಿ ತಾರಕಾಸುರನ ಸಂಹಾರ ಮಾಡಿದ ಅಂಗಜ


ಅಂಗಜ ಆದವನು ಮನ್ಮಥನಾಗಿ ಮನ್ಮಥ ಎಂಬ ದರ್ಪದಿಂದ ಯೋಗ್ಯತೆ ಮೀರಿ ರುದ್ರದೇವರ ಧ್ಯಾನಕ್ಕೆ ಭಂಗತಂದು ಅನಂಗ ಎನಿಸಿದ ಬಳಿಕ ಶ್ರೀ ಕೃಷ್ಣ ನ ಮಗನಾಗಿ ಅಂಗಜ

ರುದ್ರದೇವರ ಮಗನಾಗಿ ಅಂಗಜ ಎನಿಸಿದ.

 ‌(received in WhatsApp)

*** 


 ಅಂಗಜ ಮನ್ಮಥ ಸಾಮಾನ್ಯ ದೇವತೆಯಲ್ಲ . ಮನೋಭಿಮಾನಿ , ಶ್ರೀಹರಿಯ ಮನಸ್ಸಿನಿಂದ ಹುಟ್ಟಿ ಮನಸಿಜ , ಅಂಗಜ ಎಂದು ಪ್ರಸಿದ್ಧನಾದವ , ಪರಾಕ್ರಮದಲ್ಲಿ ಇಂದ್ರನಿಗೆ ಸಮಾನ . ಶ್ರೀಹರಿಯ ಸುದರ್ಶನ ಚಕ್ರಕ್ಕೆ ಅಭಿಮಾನಿ , ಪ್ರದ್ಯುಮ್ನರೂಪಿ ಶ್ರೀಹರಿಯ ಆವೇಶದಿಂದ ಪ್ರದ್ಯುಮ್ನ ಅಂದರೆ ಅಸಾಮಾನ್ಯ ಬಲ ಉಳ್ಳವನೆಂದೇ ಈತನಿಗೆ ಪ್ರದ್ಯುಮ್ನ ಎಂದು ಹೆಸರು . ಈತ ಯಮನಿಗೂ ಯಮ .ಯಮಃ ಕಾಲೋ ಮನುಷ್ಯಾಣಾಂ ತಸ್ಯ ಕಾಲಃ ಸುದರ್ಶನಃ ಮಾನವರಿಗೆಲ್ಲ ಯಮನು ಮೃತ್ಯುವಾದರೆ , ಯಮನಿಗೆ ಸುದರ್ಶನ ಚಕ್ರಾಭಿಮಾನಿ ಕಾಮನು ಮೃತ್ಯು. ಈತನ ಪಟ್ಟದ ರಾಣಿ ಅರವತ್ತನಾಲ್ಕು ಕಲೆಗಳಿಂದ ಪರಿವೃತಳಾದ ದಕ್ಷಕುಮಾರಿ ರತಿದೇವಿ . ಅರವಿಂದ,  ಅಶೋಕ, ಚೂತ ,ನವಮಲ್ಲಿಕಾ , ನೀಲೋತ್ಪಲ , ಎಂದು ಐದು ಬಗೆಯ ಹೂಬಾಣಗಳು; ಹರ್ಷಣ , ರೋಚನ ,ಮೋಹನ, ಶೋಷಣ ,ಮಾರಣ , ಎಂಬ ಐದು ಭಯಂಕರ ಅಸ್ತ್ರಗಳು . ಸಹಾಯಕ್ಕೆ ಈತನಂತೆಯೇ ಆಕೃತಿ ವೇಷಭೂಷಣಗಳುಳ್ಳ ಐವತ್ತು ಮಂದಿ ಕಾಮ, ಕಾಮಾದ ಮುಂತಾದ ವೀರರು . ಅವರೂ ರತಿಯಂತಹ ರಾಣಿಯರಿಂದ ಸಮೇತರಾದವರು . ವಸಂತನು ಮಂತ್ರಿ . ಶೃಂಗಾರ ರಸವು ಸೇನಾನಾಯಕ . ನಲವತ್ತೊಂಬತ್ತು ಶೃಂಗಾರ ಭಾವಗಳೇ ಪ್ರಚಂಡ ಸೈನಿಕರು . ಮಲಯಾನಿಲ , ಕೋಗಿಲೆಯ ಇಂಚರ , ದುಂಬಿಯ ಝೇಂಕಾರ , ಮುಂತಾದವು ಈತನ ಪರಿವಾರದವರು . ಕಬ್ಬಿನ ಬಿಲ್ಲಿಗೆ ದುಂಬಿಗಳ ಹೆದೆ ಏರಿಸಿ ಹೂಬಾಣ ಬಿಟ್ಟರೆ  ಒಂದು ಎದೆ ಸೀಳಾಗಿ ಎರಡಾಗುವದರ ಬದಲು , ಎರಡು ಎದೆಗಳೇ ಬೆಸೆದು ಒಂದಾಗುವವು . ಇದು ಅಂಗಜ ಮನ್ಮಥ ನ ಬಿಲ್ಲುಗಾರಿಕೆಯ ವೈಶಿಷ್ಟ್ಯ ! ಇಂದ್ರನ ವಜ್ರಾಯುಧ ಅನ್ನೋದು ತಪಸ್ವಿಗಳ ಮುಂದೆ ನಿರ್ವೀರ್ಯವಾಗತ್ತೆ ಆದರೆ ಕಾಮನ ಹೂಬಾಣ ಮಾತ್ರ ತಪಸ್ವಿಗಳನ್ನೇ ಕಂಗೆಡಿಸುತ್ತದೆ ! 

   ಇಂಥ ಅಪ್ರತಿಮ ಪರಾಕ್ರಮದ ಅಂಗಜ ಮನ್ಮಥ ನನ್ನೇ ದೇವತೆಗಳೆಲ್ಲಾ ಬೇಡಿ ಶಿವನ ಬಳಿ ಕಳಿಸಿದರು . ಆತನ ರಾಣಿ ರತಿದೇವಿಯ ಸೋದರಿ ಶಿವನ ಹಿಂದಿನ ಮಡದಿ ಸತಿದೇವಿ . ಈಗ ಈಕೆಯೇ ಪಾರ್ವತಿಯಾಗಿ ಜನಿಸಿದ್ದಾಳೆ . ಶಿವನು ಆಕೆಯ ಕೈ ಹಿಡಿಯಬೇಕು , ಪರಮ ವೈರಾಗ್ಯಮೂರ್ತಿ , ವೈರಾಗ್ಯಾಧಿಪತಿಯಾದ ಆ ಶಿವನು ಮನಸ್ಸು ಮಾಡುತ್ತಿಲ್ಲ . ಅಂಗಜ ಮನ್ಮಥ ನು ತನ್ನ ಪರಿವಾದೊಂದಿಗೆ ಬಂದು ಶಿವನು ಧ್ಯಾನದಿಂದ ಬಹಿರ್ಮುಖನಾದಾಗ , ಪಾರ್ವತಿಯೂ ಸಖಿಯರೊಂದಿಗೆ ಬಂದು ಶಿವನನ್ನು ಉಪಚರಿಸಿತ್ತಿದ್ದಾಗ , ಹೊಂಚು ಹಾಕಿ ಸಮಯ ನೋಡಿ ತನ್ನ ಹರ್ಷಣಾಸ್ತ್ರವನ್ನು ಶಿವನ ಎದೆಗೆ ಎಸೆದ . ಒಡನೆಯೇ ಶಿವನ ಎದೆಯಲ್ಲಿ ಅನಿರ್ವಚನೀಯವಾದ ಉಲ್ಲಾಸ ಮೂಡಿತು . ಮನ್ಮಥ ರೋಚನಾಸ್ತ್ರವನ್ನೂ ಎಸೆದ . ಪಾರ್ವತಿಯ ಅಂದ ಶಿವನಿಗೆ ಆಗ ಆಕರ್ಷಕವಾಗಿ ಕಂಡುಬಂದಿತು . ಪಾರ್ವತಿಯನ್ನು ಹೊಗಳಿದ . ಅನಿರೀಕ್ಷಿತವಾಗಿ ಅವನ ಬಾಯಿಂದ ಬಂದ ತನ್ನ ಅಂದದ ಬಗ್ಗೆ ಹೊಗಳಿಕೆಯ ಮಾತು ಕೇಳಿ ಪಾರ್ವತಿಯು ತಾನು ಧನ್ಯೆ ಎಂದುಕೊಂಡಳು . ತನ್ನ ಅಂದವನ್ನು ತೋರುತ್ತ ತಾನೂ ಮಾದಕವಾಗಿ ಮಂದಹಾಸ ಬೀರಿದಳು . ಶಿವ ಪರವಶನಾದ . "ಓಹ್ ! ನೋಡಿದರೇ ಇಷ್ಟು ಆನಂದ ! ಇನ್ನು ಆಲಂಗಿಸಿಕೊಂಡರೆ !!? " ಎಂದುಕೊಂಡ . ಆದರೆ ಒಡನೆಯೇ ಎಚ್ಚೆತ್ತು ಸುತ್ತಲೂ ಕಣ್ಣು ಹಾಯಿಸಿದ , ಅಷ್ಟರಲ್ಲಿ ಮನ್ಮಥನು ಮೋಹನಾಸ್ತ್ರವನ್ನು ಬಿಟ್ಟಿದ್ದ . ಆದರೆ ಎಲ್ಲವೂ ವ್ಯರ್ಥವಾಯಿತು . ಮನ್ಮಥ ಭಯದಿಂದ ನಡುಗಿದ . ಎಲ್ಲ ದೇವತೆಗಳನ್ನೂ ನೆನೆದ . ಎಲ್ಲ ದೇವತೆಗಳೂ ಧಾವಿಸಿ ಧಾವಿಸಿ ಬಂದರು . ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಶಿವನ ದೃಷ್ಟಿ ಮನ್ಮಥನ ಮೇಲೆ ನೆಟ್ಟಿತು . ಮೂರನೆಯ ಕಣ್ಣು ತೆರೆದುಕೊಂಡಿತ್ತು . ಒಂದು ಬೆಂಕಿಯ ಕಿಡಿ ಹೊರಟು ಆಗಸದಲ್ಲಿ ಬಲು ಎತ್ತರಕ್ಕೆ ಏರಿ ಬರಸಿಡಿಲನಂತೆ ವೇಗವಾಗಿ ಧರೆಗೆ ಎರಗಿತ್ತು . ದೇವತೆಗಳ ಹಾಹಾಕಾರ , ರತಿಯ ಕರುಣಾಕ್ರಂದನ ಮುಗಿಲಿಗೇರಿತ್ತು , ಮನ್ಮಥ ಸುಟ್ಟು ಬೂದಿಯಾಗಿದ್ದ !! 

ಸ್ಮರೋ ನಿಯಮಘಸ್ಮರೋ ನಿಯಮಿನಾಮಭೂದ್ಭಸ್ಮಾತ್| - ತಪಸ್ವಿಗಳ ತಪಸ್ಸನ್ನು ಕೆಡಿಸುತ್ತಿದ್ದ ಮನ್ಮಥ ಸುಟ್ಟು ಭಸ್ಮೀಭೂತನಾದ , ಎಂದು ಶ್ರೀಮನ್ನಾರಾಯಣ ಪಂಡಿತಾಚಾರ್ಯರು ವರ್ಣಿಸಿದ್ದಾರೆ . ಶ್ರೀಕನಕದಾದಾಸಾರ್ಯರು - 

ಪಥನಡೆಯದಯ್ಯ ಪರಲೋಕ ಸಾಧನಕೆ ಮನ್ಮಥನೆಂಬ ಖಳನು ಮಾರ್ಗವಕಟ್ಟಿ ಸುಲಿಯುತಿರೆ|| ತನುರೋಮ ಗಿಡವೃಕ್ಷ ಥಳಥಳಿಪ ಭುಜಲತೆಯು ವನ ಸಿಂಹ ಗಜಮೃಗಗಳಿಂದೊಪ್ಪುವ | ವನಿತೆಯರ ಕಾಯಕಾಂತಾರಮಾರ್ಗದಲಿ ಘನ ಕುಚಗಳೆಂಬೋ ಕಣಿವೆಯ ಮಧ್ಯ ಸೇರಿಹನು|| 

ಗಿಳಿನವಿಲು ವಸಂತ ಭ್ರಮರಗಳು ಒಂದಾಗಿ ಬಲದೊಡನೆ ಮದನ ಮಾರ್ಗವ ಕಟ್ಟಲು | ಬಲವುಳ್ಳ ಭಕ್ತ ಮುನಿ ಸನ್ಯಾಸಿಯೋಗಿಗಳು ಸುಲಿಸಿಕೊಂಡರು ಕೆಲರು ಸಿಕ್ಕಿದರು ಸೆರೆಗೆ|| 

ಕಾಳಗದೊಳಿದಿರಿಲ್ಲ ಸುರರು ದಾನವರು ಕಟ್ಟಾಳು ಮನ್ಮಥನ ಛಲದಂಕ ಬಿರುದು ಹೇಳಲಿನ್ನೇನು ಬಾಡದಾದಿ ಕೇಶವರಾಯನಾಳ ಸಂಗಡ ಹೋದರಾವ ಭಯವಿಲ್ಲ|| 

   ಇಂತಹ ಮನ್ಮಥನ ದರ್ಪವೆಲ್ಲ ಅರೆಕ್ಷಣದಲ್ಲೇ ಬಯಲಾದದ್ದು ಆಶ್ಚರ್ಯ !! ಏಕೆಂದರೆ ದೇವತೆಗಳೆಲ್ಲ ಅಮರರು , ಹೀಗಿದ್ದರೂ ಸಹ ಮನ್ಮಥ ಮರಣಹೊಂದಿದ ಎಂಬುವದು ಆಶ್ಚರ್ಯ . ಶ್ರೀಮದ್ಭಾಗವತದಲ್ಲಿ ಕ್ವಚಿತ್ತದಪ್ಯಸಿ ನ ವೇದ್ಯಮಾಯುಷಃ|- ಮನ್ಮಥನಲ್ಲಿ ಒಳ್ಳೆಯ ಶೀಲವಿದೆ , ಎಲ್ಲ ಪ್ರಾಣಿಗಳ ಹೃದಯವನ್ನು ಹೊಕ್ಕು , ಕಲಕಿ , ಸುಖಾನುಭವ ಕೊಡುತ್ತಾನೆ . ಅಂಗಜ ಎಂದರೆ ಪ್ರತಿಯೊಬ್ಬರ ಮನಸ್ಸನ್ನು ಹೊಕ್ಕು ಪ್ರತಿಯೊಂದೂ ಅಂಗ ಅಂಗಗಳಲ್ಲೂ ಸೌಂದರ್ಯವನ್ನು ಹುಟ್ಟಿಸಿ ಆಕರ್ಷಕವಾಗಿ ಕಾಣುವಂತೆ ಮಾಡುವವ , ಮನ್ಮಥ ಎಂದರೆ ಎದೆಯನ್ನು ಕಲಕುವವನು ಎಂದು ಅರ್ಥ . ಹೀಗೆ ಅವನ ಹೆಸರು ಸಾರ್ಥಕ . ದಂಪತಿಗಳನ್ನು ಜೊತೆ ಸೇರಿಸುವ ಮಂಗಳ ಕಾರ್ಯ ಈತನದು . ಪುತ್ರ ಪೌತ್ರಾದಿ ಸಂತತಿ ವೃದ್ಧಿಯಾಗುವದು ಈತನ ಅನುಗ್ರಹದಿಂದಲೇ . 

ಭಸ್ಮೀಭೂತಮಿವಾರಚಯ್ಯ ಗಿರಿಶೋ ಯಂ ಬಾಹ್ಯದೃಷ್ಟ್ಯಾ ಪುನಃ |ಚಿತ್ತಾಂತಃಸ್ಥಿತಮಾರ್ಪಯದ್ ಗಿರಿಸುತಾಗರ್ಭೇ ಹ್ಯನೇಕಾನನಂ|| ಎಂದು ಶ್ರೀವಾದಿರಾಜರು ರುಕ್ಮಿಣೀಶವಿಜಯದಲ್ಲಿ ತಿಳಿಸಿರುವಂತೆ , ಲೋಕದೃಷ್ಟಿಗೆ ಹರನು ಮನ್ಮಥನನ್ನು ಸುಟ್ಟು ಬೂದಿ ಮಾಡಿದಂತೆ ತೋರಿಕೊಂಡರೂ , ವಾಸ್ತವವಾಗಿ ಅವನನ್ನು ತನ್ನ ಎದೆಯಲ್ಲೇ ಇಟ್ಟುಕೊಂಡು ಒಂದು ಮುಖದಿಂದಲೇ ಮೂಲೋಕವನ್ನು ಗೆಲ್ಲುತ್ತಿದ್ದ ಅವನನ್ನು ಅನೇಕ ಮುಖದಿಂದ ಪಾರ್ವತಿಯ ಗರ್ಭದಲ್ಲಿಟ್ಟ , ಷಣ್ಮುಖನಾಗಿ ಅವತರಿಸುವಂತೆ ಮಾಡಿದ . ಶ್ರೀಕೃಷ್ಣನು ಕೈಲಾಸ ಯಾತ್ರೆ ಮಾಡಿದಾಗ ಶಿವನು ಅವನಿಗೆ ಪುತ್ರವರ ನೀಡುವ ನೆಪದಲ್ಲಿ ಮನ್ಮಥನಿಗೆ ಪ್ರದ್ಯುಮ್ನ ರೂಪದಿಂದಲೂ ಜನಿಸುವಂತೆ  ಅನುಗ್ರಹಿಸಿದ . 

   ಷಣ್ಮುಖ , ಪ್ರದ್ಯುಮ್ನ , ರೂಪಗಳಿಂದ ಅಪ್ರತಿಮ ಯುದ್ಧ ವೀರನೆಂದು ಪ್ರಸಿದ್ಧನಾದ  ಮನ್ಮಥನು ಅನಂಗನಾಗಿ ಸ್ಥೂಲ ಶರೀರವಲ್ಲವದನಾಗಿಯೂ ಪ್ರಾಣಿಗಳ ಸೂಕ್ಷ್ಮ ಮನಸ್ಸನ್ನು ಪ್ರವೇಶಿಸಿ ಶೃಂಗಾರ ಭಾವದ ರೂಪದಿಂದ ಆವಿರ್ಭವಿಸಿ ಅಂಗಜ ಎನಿಸುತ್ತಾನೆ . 

     ಅಂಗಜನಾದ ಮನ್ಮಥನ ಈ ಮಹಿಮೆಯನ್ನು ತಿಳಿಸಲು ದಾಸಾರ್ಯರು ಇಲ್ಲಿ ಅಂಗಜ ಮನ್ಮಥ ಎಂಬುದಾಗಿ ತುಂಬಾ ಅರ್ಥಗರ್ಭಿತವಾಗಿ ಪದಪ್ರಯೋಗ ಮಾಡಿದ್ದಾರೆ . 🙏🏻🙇‍♂️ ಹರೇ ಶ್ರೀನಿವಾಸಾ 🙇‍♂️🙏🏻

 ‌(received in WhatsApp)

****


No comments:

Post a Comment