SEARCH HERE

Friday 9 April 2021

ಗುರು ನಾನಕ್ guru nanak




ಸಿಖ್​ಪಂಥದ ಸ್ಥಾಪಕರಾದ ಗುರು ನಾನಕ್ ಜಗತ್ತು ಕಂಡಿರುವ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು; ಸಿಖ್ಖರ ಪ್ರಥಮ ಗುರುಗಳೂ ಹೌದು. ವ್ಯಕ್ತಿಯ ವಿಕಾಸ ಮತ್ತು ಸಮಾಜದ ಉನ್ನತಿ – ಎರಡೂ ನೆಲೆಗಳಲ್ಲಿ ತಮ್ಮ ವಿಚಾರಧಾರೆಯನ್ನು ನಿರೂಪಿಸಿದ ಅವರು ವ್ಯಕ್ತಿಯಾಗಲಿ, ಸಮಾಜವಾಗಲಿ ಶಿಸ್ತಿಗೆ ಒಳಪಡದಿದ್ದರೆ ಅಂತರಂಗದ ಶಕ್ತಿ ಪೋಲಾಗುತ್ತದೆ ಎಂಬ ದರ್ಶನವನ್ನು ಒದಗಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದ ಹಲವಾರು ಹಿಂದೂ-ಮುಸ್ಲಿಂ ಪುಣ್ಯಕೇತ್ರಗಳನ್ನು ಸಂದರ್ಶಿಸಿ, ಸಿದ್ಧರೊಡನೆ, ಯೋಗಿಗಳೊಡನೆ, ಪಂಡಿತರೊಡನೆ, ಮೌಲ್ವಿಗಳೊಡನೆ – ವಿಚಾರವಿನಿಮಯ ನಡೆಸಿ, ಸರ್ವಧರ್ಮದ ತಿರುಳು ಒಂದೇ ಎಂಬುದನ್ನು ಜನತೆಗೆ ಮನದಟ್ಟು ಮಾಡಿಸಿದರು.
ಅಂದಿನ ಪಂಜಾಬ್ ಪ್ರಾಂತ್ಯದ ತಲವಂದಿ ಗ್ರಾಮದ ಕಂದಾಯಾಧಿಕಾರಿಯಾಗಿದ್ದ ಮೆಹತ ಕಾಲು ಮತ್ತು ತೃಪ್ತ ಎಂಬ ದಂಪತಿಯ ಮೂರನೇ ಮಗುವಾಗಿ 15.4.1469ರಲ್ಲಿ ನಾನಕ್ ಜನಿಸಿದ. ಮಗುವಿನ ಜಾತಕವನ್ನು ಪರಿಶೀಲಿಸಿದ ಮನೆತನದ ಪುರೋಹಿತ ಹರದಯಾಳ ‘ಈ ಮಗು ಸಾಮಾನ್ಯರ ಮನೆಯಲ್ಲಿ ಹುಟ್ಟಿದರೂ ಸಾಮಾನ್ಯನಲ್ಲ; ಧರ್ಮಗುರುವಾಗಿ ಎಲ್ಲರಿಂದ ಪೂಜಿತನಾಗುವ, ಅಸಾಮಾನ್ಯ ಎಂದೆನಿಸುವ’ ಎಂದು ಭವಿಷ್ಯ ನುಡಿದ.
7 ವರ್ಷದ ಬಾಲಕನನ್ನು ಗೋಪಾಲ ಎಂಬ ಗುರುವಿನ ಬಳಿ ವಿದ್ಯಾಭ್ಯಾಸಕ್ಕೆ ಕಳುಹಿಸಿದರು. ಅವರಲ್ಲಿ ಪಂಜಾಬಿಭಾಷೆ ಮತ್ತು ಸಾಮಾನ್ಯ ಗಣಿತವನ್ನು ಕಲಿತನು. ಬ್ರಿಜನಾಥ ಶಾಸ್ತ್ರಿ ಎಂಬುವರ ಬಳಿ ಸಂಸ್ಕೃತದ ಕಲಿಕೆಯೂ ನಡೆಯಿತು. ಆದರೂ ಬಾಲಕ ನಾನಕ್​ಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹುಟ್ಟಲೇ ಇಲ್ಲ. ಸದಾ ಯಾವುದೋ ಧ್ಯಾನದಲ್ಲಿ ತಲ್ಲೀನನಾದಂತೆ, ಏನನ್ನೋ ಯೋಚಿಸಿ ಕುಳಿತು ಬಿಡುತ್ತಿದ್ದ. ಮಾತು ಕಡಿಮೆ; ಆದರೆ ಮಾತನಾಡಿದರೆ ವಿನಯಪೂರ್ಣ ದನಿಯಲ್ಲಿಯೇ ಖಚಿತ ಆಲೋಚನೆ ವ್ಯಕ್ತವಾಗುತ್ತಿತ್ತು. ಸಂಪ್ರದಾಯಸ್ಥನಾದ ಮೆಹತ ಕಾಲು ಮಗನ ಉಪನಯನ ಸಮಾರಂಭ ಏರ್ಪಡಿಸಿದ. ಯಜ್ಞೋಪವೀತ ಧಾರಣೆ ಸಂದರ್ಭದಲ್ಲಿ ಬಾಲಕ ನಾನಕ್ ಥಟ್ಟನೆ ಅದನ್ನು ವಿರೋಧಿಸಿಬಿಟ್ಟ! ‘ಈ ನೂಲಿನ ಎಳೆಗಳು ನನಗೆ ಬೇಕಾಗಿಲ್ಲ. ಇದು ಕಿತ್ತುಹೋಗುತ್ತದೆ. ಪರಲೋಕಕ್ಕೆ ನನ್ನ ಜತೆ ಬರುವುದಿಲ್ಲ’ – ಎಂದ. ಪುರೋಹಿತ ಹರದಯಾಲ್ ‘ನಿನಗೆ ಬೇಕಾದ ಜನಿವಾರ ಯಾವುದು?’ ಎಂದು ಕೇಳಿದಾಗ, ಹುಡುಗ ತಡವರಿಸದೆ ಉತ್ತರಿಸಿದ: ‘ಕರುಣೆ ಎಂಬ ಹತ್ತಿಯಿಂದ ತೃಪ್ತಿ ಎಂಬ ನೂಲು ತೆಗೆದು, ಸತ್ಯ ಎಂಬ ಮುಷ್ಟಿಯಿಂದ ಅದನ್ನು ಹೊಸೆದು ಗಟ್ಟಿ ಮಾಡಿ, ಸಂಯಮ ಎಂಬ ಗಂಟು ಕಟ್ಟಿ ಸಿದ್ಧಪಡಿಸಿದ ಜನಿವಾರ ನನಗೆ ಬೇಕು’.
ತನ್ನ ಮಗ, ಲೌಕಿಕ ವ್ಯವಹಾರದಲ್ಲಿ ಆಸಕ್ತನಾಗದೆ, ಯಾರಿಗೂ ಅರ್ಥವಾಗದ ಅಧ್ಯಾತ್ಮದ ಬಗ್ಗೆ ಮಾತನಾಡುತ್ತ, ಅನ್ಯಮನಸ್ಕನಾಗಿ ಕುಳಿತರೆ ಅವನ ಜೀವನ ನಡೆಯುವುದಾದರೂ ಹೇಗೆ? ಎಂದು ಚಿಂತಿಸಿ, ನಾನಕ್​ನನ್ನು ದನ ಕಾಯಲು ನಿಯಮಿಸಿದ. ನಾನಕ್​ಗೆ ಈ ಕೆಲಸ ಪ್ರಿಯವೇ ಆಯಿತು. ದನಗಳನ್ನು ಅವುಗಳ ಪಾಡಿಗೆ ಮೇಯಲು ಬಿಟ್ಟು, ತಾನು ನಿಶ್ಚಿಂತೆಯಿಂದ ಧ್ಯಾನಮಗ್ನನಾಗಲು ಒಳ್ಳೆಯ ಅವಕಾಶ ದೊರೆಯಿತು. ಮಗ ವ್ಯಾಪಾರವನ್ನೂ ಮಾಡಲಾರ. ದನ-ಕರುಗಳನ್ನೂ ನೋಡಿಕೊಳ್ಳಲಾರ; ಹೋಗಲಿ, ಹೊಲ-ಗದ್ದೆಗಳ ಉಸ್ತುವಾರಿಯನ್ನಾದರೂ ನಡೆಸಲಿ ಎಂದು ಯೋಚಿಸಿದ. ಆದರೆ ಮಗ ವ್ಯವಸಾಯವನ್ನು ಮಾಡಲೂ ನಿರಾಕರಿಸಿದ: ‘ನನ್ನ ದೇಹವೇ ಒಂದು ಹೊಲ. ಮನಸ್ಸೇ ಅದನ್ನು ಉಳುವ ಎತ್ತು, ವಿನಯ ಎಂಬ ನೀರುಣಿಸಿ, ದೈವಶ್ರದ್ಧೆಯ ಬೀಜಬಿತ್ತಿ ನಾ ಬೆಳೆವ ಬೆಳೆ, ನನ್ನ ಕುಟುಂಬಕ್ಕೆ ಮಾತ್ರವೇ ಅಲ್ಲ, ಇಡೀ ಪ್ರಪಂಚಕ್ಕೆ ಸಾಕಾಗುತ್ತದೆ. ಹೊಲದ ಒಡೆಯ ಪರಮಾತ್ಮ, ನಾನು ಅವನ ಗೇಣಿದಾರ. ನನಗೆ ಅತಿವೃಷ್ಟಿ-ಅನಾವೃಷ್ಟಿಗಳ ಭಯವಿಲ್ಲ. ನಾನು ಎಂದೂ ಉಪವಾಸ ಬೀಳುವುದಿಲ್ಲ; ನಾ ಬೇಡಿದಷ್ಟನ್ನು ಅವನು ಕೊಡುತ್ತಾನೆ; ಹೆಚ್ಚಿಲ್ಲ, ಕಡಿಮೆ ಇಲ್ಲ’ ಎಂದು ವ್ಯಾಖ್ಯಾನಿಸಿದ. ಒಮ್ಮೆ ನಾನಕ್ ಧ್ಯಾನಕ್ಕೆ ಕುಳಿತಿದ್ದಾಗ ಈ ಧ್ಯಾನಾವಸ್ಥೆ ಮೂರು ದಿನಗಳ ಕಾಲ ಇದ್ದಿತಂತೆ. ಈ ಸಂದರ್ಭದಲ್ಲಿಯೇ ನಾನಕ್​ಗೆ ದೈವಸಾಕ್ಷಾತ್ಕಾರವಾಯಿತು ಎನ್ನುತ್ತಾರೆ. ಭಗವಂತ ನಾನಕನಿಗೆ ಒಂದು ಬಟ್ಟಲಿನಲ್ಲಿ ಅಮೃತವನ್ನು ಕೊಟ್ಟನಂತೆ. ಅದನ್ನು ಕುಡಿದ ನಾನಕನಿಗೆ ಭಕ್ತಿ, ಸತ್ಯ, ಸಂಯಮಗಳು ಲಭಿಸಿದವು ಎನ್ನುತ್ತಾರೆ. ಮೂರು ದಿನಗಳ ನಂತರ ಮನೆಗೆ ಹಿಂದಿರುಗಿದ ನಾನಕ್, ‘ನಾನು ಇಲ್ಲಿ ಕಾಣುತ್ತಿರುವುದು ಹಿಂದೂವನ್ನೂ ಅಲ್ಲ, ಮುಸಲ್ಮಾನನನ್ನೂ ಅಲ್ಲ; ಕೇವಲ ಮನುಷ್ಯನನ್ನು ಮಾತ್ರ’ ಎಂದು ಘೊಷಿಸಿದರು.
ಗುರು ನಾನಕರು ತಮ್ಮ ಸಂಚಾರದ ಕಾಲದಲ್ಲಿ ಕರ್ನಾಟಕದ ಬೀದರ್ ಮತ್ತು ಧಾರವಾಡಗಳಿಗೆ ಭೇಟಿ ನೀಡಿದ್ದರು. ಬೀದರ್​ನಲ್ಲಿ ಈಗಲೂ ಸಿಖ್ಖರ ಒಂದು ಪುಣ್ಯಕೇತ್ರವಿದೆ. ಗುರುನಾನಕ್ ಝುರಾ ಎಂಬ ಹೆಸರಿನ ನೀರಿನ ತೊರೆಯೂ ಇದೆ.
ನಾನಕ್ ವಾಣಿ
ಅವನು ಒಬ್ಬನೇ. ಒಬ್ಬನೇ ಎಂದು ಎಲ್ಲರೂ ಹೇಳುವವರೇ. ಆದರೆ ಗರ್ವ, ಅಹಂಕಾರ ಎಲ್ಲೆಡೆ ವ್ಯಾಪಿಸಿರುವುದು. ಒಳಗೂ ಹೊರಗೂ ಒಬ್ಬನೇ ಇರುವನೆಂದು ಅರಿತರೆ ಅವನ ಅರಮನೆ ಎಲ್ಲಿರುವುದೆಂಬುದು ತಿಳಿಯುವುದು. ಪ್ರಭು ಹತ್ತಿರವಿರುವನು. ಅವನು ದೂರ ಇರುವನೆಂದು ತಿಳಿಯಬೇಡ. ಸಮಸ್ತ ಸೃಷ್ಟಿಯೂ ಒಂದೇ. ಒಂದು ಓಂಕಾರದ ಹೊರತು ಬೇರೊಂದಿಲ್ಲ. ಅವನೊಬ್ಬನೇ ಎಲ್ಲೆಡೆಯಲ್ಲಿ ತುಂಬಿರುವನು.
******

jan 2021 Food preparation fully automatic.





No comments:

Post a Comment