SEARCH HERE

Tuesday, 1 January 2019

ಚಂಡಿಕೇಶ್ವರ chandikeshwara


|•|ಚಂಡೀಶ್ವರ ಅಥವ ಚಂಡಿಕೇಶ್ವರ |•|  ಚಂಡಿಕೇಶ್ವರನಿಗೆ "ಚಿಟಿಕೆ" ಹೊಡೆಯುವುದು ಅಥವ "ಚಪ್ಪಾಳೆ ತಟ್ಟುವುದು" ಏಕೆ.?

ಎಲ್ಲ ಶಿವಾಲಯಗಳಲ್ಲಿ, ಶಿವ, ಪಾರ್ವತಿ, ವಿನಾಯಕ , ಸುಬ್ರಹ್ಮಣ್ಯ , ನಂದಿ , ಬೃಂಗಿ ಹಾಗೂ ಚಂಡಿಕೇಶ್ವರ ಮೂರ್ತಿಗಳನ್ನು ಕಾಣುವುದು ಸಾಮಾನ್ಯ.

|ಚಂಡಿಕೇಶ್ವರ|

ಶಿವಾಲಯಗಳಲ್ಲಿ ಚಂಡಿಕೇಶ್ವರನ ದರ್ಶನಕ್ಕೆ ಬಂದಾಗ ಚಿಟಿಕೆ ಹೊಡೆದು, ಚಪ್ಪಾಳೆ ತಟ್ಟಿ ಚಂಡಿಕೇಶ್ವರನ ದರ್ಶನ ಮಾಡುವುದು ವಾಡಿಕೆ.
ಬಹುತೇಕ ಭಕ್ತಾದಿಗಳಿಗೆ ಚಂಡಿಕೇಶ್ವರನಿಗೆ "ಕಿವುಡು" ಎಂಬ ಅಭಿಪ್ರಾಯ.  
ಆದರೆ ಚಂಡಿಕೇಶ್ವರನಿಗೆ ಕಿವುಡು ಎಂಬ ನಮ್ಮ ಅಭಿಪ್ರಾಯ, ತಪ್ಪಾದ ತಿಳುವಳಿಕೆ.

|ಈ ಚಂಡಿಕೇಶ್ವರ ಯಾರು.? |

ದಕ್ಷಿಣ ಭಾರತದ 'ಮಣಿಯಾರ್' ನದಿಯ ತಟದಲ್ಲಿನ ಒಂದು ಅಗ್ರಹಾರ. ವೇದಾಧ್ಯಯನಕ್ಕೆ ಪ್ರಖ್ಯಾತವಾದ, ಪ್ರಶಸ್ತವಾದ, ಪ್ರದೇಶ.
ಅಲ್ಲಿ 'ಈಚದತ್ತ' ಎಂಬ ಪ್ರಖ್ಯಾತ ಬ್ರಾಹ್ಮಣ ಪಂಡಿತ ಇದ್ದ. ಅವನ ಮಗ ಚಂದೇಶ ಶರ್ಮ (ಚಂದ್ರೇಶ್ವರ ಶರ್ಮ). ವೇದಾಧ್ಯಯನದಲ್ಲಿ ತಂದೆಯಂತೆ ತಾನೂ ಪಾರಂಗತನು, ಆರಾಧ್ಯ ದೈವವಾದ ಪರಶಿವನ ಮಹಾ ಭಕ್ತ.

ಪ್ರತಿನಿತ್ಯವೂ ಮಣಿಯಾರ್ ನದಿಯಲ್ಲಿ ಸ್ನಾನಮಾಡಿ ಹಿಂತಿರುಗಿ, ದೇವತಾರಾಧನೆ, ವೇದಾಧ್ಯಯನದಲ್ಲಿ ತೊಡಗುತ್ತಿದ್ದ.

ಒಂದು ದಿನ ನಿತ್ಯಕರ್ಮಗಳನ್ನು ಮುಗಿಸಿ ಹಿಂತಿರುಗುವಾಗ ಒಬ್ಬ ಗೋಪಾಲಕ ತನ್ನ ಗೋವನ್ನು(ಹಸು) ಹಿಗ್ಗಾ ಮುಗ್ಗ ಹೊಡೆಯುತ್ತಿದ್ದ. ಇದನ್ನು ಕಂಡ ಚಂದೇಶ ಶರ್ಮನಿಗೆ ನೋವಾಯಿತು. ಅವನಲ್ಲಿಗೆ ಹೋಗಿ...! 
ಎಲೈ ಗೋಪಾಲಕನೇ, ಗೋವು ದೈವ ಸಮಾನವಾದುದು. ಅದನ್ನು ಹಿಂಸಿಸುವುದು ಸರಿಯಲ್ಲ. ನಿನಗೆ ಈ ಗೋಪಾಲನೆ ಕಷ್ಟವಾದಲ್ಲಿ , ನಾನು ಅದರ ಪಾಲನೆ ಮಾಡುವುದಾಗಿ ತಿಳಿಸಿದ.
ಮೊದಲೇ ಬಹಳ ಕೋಪದಲ್ಲಿದ್ದ ಗೋಪಾಲಕ, ಸರಿ, ನನ್ನ ಎಲ್ಲ ಗೋವುಗಳ ಪೋಷಣೆಯ ಜವಾಬ್ದಾರಿ ಇಂದಿನಿಂದ ನಿನ್ನದು. ಆದರೆ, ಅದರ ಮೇಲಿನ ಹಕ್ಕು‌ ಅಥವ ಅವುಗಳಿಂದ ಉತ್ಪಾದನೆ ಆಗುವ ಹಾಲಿನಲ್ಲಿ ನಿನಗೆ ಯಾವುದೇ ಪಾಲು ಸಿಗದು ಎಂದು ತಿಳಿಸಿದ.

ಗೋಪಾಲಕನ ಷರತ್ತುಗಳಿಗೆ ಒಪ್ಪಿದ ಚಂದೇಶ ಶರ್ಮ, ಸಂತೋಷದಿಂದ ಗೋವುಗಳ ಪಾಲನೆಯ ಜೊತೆಗೆ ನದಿಯ ತಟದಲ್ಲಿ ವೇದಾಧ್ಯಯನ ಮುಂದುವರೆಸಿದ. 
ಇವನ ಪೋಷಣೆ, ಪ್ರೀತಿಗೆ ಗೋವುಗಳು ಸಹಾ ಸಂತೋಷದಿಂದ ಚಂದೇಶ ಶರ್ಮನನ್ನು ಪ್ರೀತಿಸತೊಡಗಿದವು.

ಚಂದೇಶ ಗೋವುಗಳಿಗೆ ಆಹಾರ ನೀಡುವಸಲುವಾಗಿ, ಎಲೆಗಳು, ಗಿಡಗಳನ್ನು ಕತ್ತರಿಸಲು ಸದಾಕಾಲ ತನ್ನಲ್ಲಿ ಕೊಡಲಿಯನ್ನ ಇಟ್ಟುಕೊಳ್ಳುತ್ತಿದ್ದ.
ದೇವಾಲಯಗಳಲ್ಲಿ ಚಂಡಿಕೇಶ್ವರ ಮೂರ್ತಿಯ ಕೈಯಲ್ಲಿ ಕೊಡಲಿ ಇರುವುದನ್ನು ನಾವು ಗಮನಿಸಬಹುದು.

ಚಂದೇಶ ಶರ್ಮ ಗೋಪಾಲನೆಯ ವೇಳೆಯಲ್ಲಿ ಪಕ್ಕದ ನದಿಯಿಂದ ಮರಳು ತಂದು ಅದರಿಂದ ಒಂದು ಲಿಂಗಾಕೃತಿಯ ಶಿವಲಿಂಗವನ್ನು ತಯಾರಿಸಿ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿ ವೇದಾಧ್ಯಯನದಲ್ಲಿ ತೊಡಗುತ್ತಿದ್ದ. 

ಚಂದೇಶನ ಪೋಷಣೆಗೆ ಸಂತೋಷಗೊಂಡ ಗೋವುಗಳು, ಪ್ರೀತಿಯಿಂದ ತಾವಾಗಿಯೇ ಹಾಲು ಸುರಿಸಲು ಪ್ರಾಂಭಿಸಿದವು.  ಗೋವುಗಳು ನೀಡಿದ ಹಾಲನ್ನು ಒಂದು ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಮರಳಿನಿಂದ ತಯಾರಿಸಿದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ. 

ಒಂದು ದಿನ ಅಗ್ರಹಾರದ ಒಬ್ಬ ವ್ಯಕ್ತಿ, ಗೋವುಗಳು ತಾವಾಗಿಯೇ ಹಾಲು ನೀಡುತ್ತಿದ್ದು, ಅದನ್ನು ಚಂದೇಶನು ಲಿಂಗಕ್ಕೆ ಅಭಿಷೇಕ ಮಾಡುವುದನ್ನು ನೋಡಿದ. ಅಗ್ರಹಾರದಲ್ಲಿದ್ದ ಗೋವುಗಳ ಮಾಲೀಕನಿಗೆ ವಿಷಯ ತಿಳಿಸಿದ.

ವಿಷಯ ತಿಳಿದ ಗೋವುಗಳ ಮಾಲೀಕ, ಚಂದೇಶ ಶರ್ಮನ ತಂದೆಯ ಬಳಿ ದೂರು ನೀಡಿದ.

|ಅಲ್ಲಿ ನಡೆದದ್ದು ಏನು?|

ಮಗನ ಈ ವರ್ತನೆಯಿಂದ ಕೋಪಗೊಂಡ 'ಈಚದತ್ತ' ಮರುದಿನ ಅಲ್ಲಿ ಚಂದೇಶ ಮತ್ತು ಗೋವುಗಳ ವರ್ತನೆಯನ್ನು ನೋಡಲು ಖುದ್ದಾಗಿ ತೆರಳಿದ.
ಚಂದೇಶ ಇಹಲೋಕದ ಅರಿವೇ ಇಲ್ಲದೆ ಧ್ಯಾನ ಮಗ್ನನಾಗಿ  ಮರಳಿನ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದ, ಗೋವುಗಳು ಸಹಾ ಇದನ್ನು ನೋಡುತ್ತಿದ್ದವು.
ಈಚದತ್ತ ಮಗನನ್ನು ಕರೆದ, ಕೂಗಿದ, ಅಲುಗಾಡಿಸಲು ಪ್ರಯತ್ನಿಸಿದ. ಧಾನ್ಯದಲ್ಲಿದ್ದ ಚಂದೇಶ ಯಾವುದಕ್ಕೂ ಎಚ್ಚರ ಆಗಲಿಲ್ಲ.
ಕೋಪಗೊಂಡ ಈಚದತ್ತ ಅಲ್ಲಿನ ಮಡಕೆಗಳಲ್ಲಿ ಇದ್ದ ಹಾಲನ್ನು ತನ್ನ ಕಾಲಿಂದ ಒದೆಯುತ್ತಾನೆ. ಹಾಲಿನ ಮಡಕೆ ಚೂರುಗಳು,ಮರಳಿನ  ಲಿಂಗಕ್ಕೆ ತಾಗಿ ಲಿಂಗವು ಭಿನ್ನವಾಯಿತು.
ತಕ್ಷಣವೇ ಕಣ್ಣು ತೆರದ ಚಂದೇಶ, ತನ್ನ ಬಳಿ ಇದ್ದ ಕೊಡಲಿಯಿಂದ ತಂದೆಯ ಕಾಲುಗಳನ್ನು ಕತ್ತರಿಸಿದ.
ಯಾವ ಕಾಲಿನಿಂದ ಶಿವನ ಧ್ಯಾನವನ್ನು ಭಂಗ ಮಾಡಿ ಶಿವನಿಗೆ ಅಪಚಾರ ಮಾಡಿದೆಯೋ, ಆ ಕಾಲುಗಳಿಗೆ ಇದೇ ತಕ್ಕ ಶಾಸ್ತಿ ಎಂದ. ರಕ್ತದ ಮಡುವಿನಲ್ಲಿ ಈಚದತ್ತ ಒದ್ದಾಡುತ್ತಿದ್ದ.

|ಪ್ರತ್ಯಕ್ಷವಾದ ಪರಶಿವ|

ಚಂದೇಶ ಶರ್ಮ ತನ್ನ ಆರಾಧ್ಯದೈವವಾದ ಶಿವನ ಧ್ಯಾನಕ್ಕೆ ಅಪಚಾರ ಮಾಡಿದ ತನ್ನ ತಂದೆಯನ್ನೂ ಲೆಕ್ಕಿಸದೆ, ಕಾಲುಗಳನ್ನು ಕತ್ತರಿಸಿದ, ಚಂದೇಶನ ಪರಮ ಭಕ್ತಿಗೆ ಮೆಚ್ಚಿದ ಪರಶಿವ ಅಲ್ಲಿ ಪ್ರತ್ಯೇಕವಾದ.

| ಪರಶಿವನ ಕುಟುಂಬಕ್ಕೆ ಚಂದೇಶ ಶರ್ಮನ ಸೇರ್ಪಡೆ|
ಪ್ರತ್ಯಕ್ಷವಾದ ಪರಶಿವ, ಸಾಮಾನ್ಯ ಮಾನವನಾದ ಚಂದೇಶ ಶರ್ಮನ ಶ್ರದ್ಧೆ ಭಕ್ತಿಗೆ ಮೆಚ್ಚಿ, ಅಂದಿನಿಂದ ತನ್ನ ಕುಟುಂಬದ ಸದಸ್ಯರಾದ ಪಾರ್ವತಿ, ವಿನಾಯಕ, ಸುಬ್ರಹ್ಮಣ್ಯರ (ಮುರುಗ,ಮಣಿಕಂಟ) ಜೊತಗೆ, ಚಂದೇಶನನ್ನು ತನ್ನ ಮೂರನೇ ಮಗನಾಗಿ ಸ್ವೀಕರಿಸಿದ. ಈಚದತ್ತನಿಗೆ ಕಾಲುಗಳು ಮತ್ತೆ ಬರುವಂತೆ ಅನುಗ್ರಹಿಸಿದ. 
ಪರಶಿವನು ಚಂದೇಶನಿಗೆ "ಚಂಡಿಕೇಶ್ವರ" ಎಂದು ಮರುನಾಮಕರಣ ಮಾಡಿದ.

|ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ಏಕೆ?|

ಶಿವ ಪುರಾಣದ ಉಲ್ಲೇಖದಂತೆ, ಚಂಡಿಕೇಶ್ವರ ಸದಾಕಾಲವೂ ಪರಶಿವನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ.

ಶಿವಾಲಕ್ಕೆ ತೆರಳುವ ಭಕ್ತರು, ಶಿವಾಲಯದಿಂದ ಚಂಡಿಕೇಶ್ವರನಿಗೆ ತಿಳಿಯದಂತೆ ಏನನ್ನೂ ಹೊರಗೆ ಕೊಂಡೊಯ್ಯುವಂತಿಲ್ಲ.

ಅದು ದೇವರ ಪ್ರಸಾದವಾಗಲಿ, ದೇವರ ನಿರ್ಮಾಲ್ಯವಾಗಲಿ, ಧ್ಯಾನದಲ್ಲಿ ಇರುವ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಮ್ಮತ್ತ ಚಂಡಿಕೇಶ್ವರನ ಗಮನ ಸೆಳೆದು, ನಂತರ ನಾವು ಹೊರಗೆ ತೆಗೆದುಕೊಂಡು ಹೋಗಬೇಕು. 
ಹೊರಗೆ ಹೋಗುವ ನಿರ್ಮಾಲ್ಯಗಳಾದ ಬಿಲ್ವಪತ್ರೆ, ಹೂವ್ವು, ವಿಭೂತಿ ಅಥವ ಪ್ರಸಾದಗಳನ್ನು ಚಂಡಿಕೇಶ್ವರನಿಗೆ ತೋರಿಸಿಯೇ ಹೊರಗೆ ತೆಗೆದುಕೊಂಡು ಹೋಗಬೇಕೆಂಬ ನಿಯಮ ಉಂಟು. 
ಹಾಗಾಗಿ ಚಂಡಿಕೇಶ್ವರನಿಗೆ ಚಿಟಿಕೆ, ಚಪ್ಪಾಳೆ ತಟ್ಟಿ, ನಿನಗೆ ತಿಳಿಯದಂತೆ ಏನನ್ನೂ ಇಲ್ಲಿಂದ ಹೊರಗೆ ತೆಗೆದುಕೊಂಡು ಹೋಗುತ್ತಿಲ್ಲ , ಎಂಬುದನ್ನು ತಿಳಿಸಿ ಹೊರಗೆ ಕೊಂಡೊಯ್ಯುವುದು‌ ಪದ್ದತಿ. 

ಇಂದಿಗೂ ಶಿವಾಲಯಗಳಲ್ಲಿ ಹಿಂದಿನ ದಿನದ ಮೂರ್ತಿಗಳ ನಿರ್ಮಾಲ್ಯಗಳನ್ನು ತೆಗೆದು, ಚಂಡಿಕೇಶ್ವರನಿಗೆ ತೋರಿಸಿದ ನಂತರವೇ ವಿಸರ್ಜನೆ ಮಾಡುವ ಆಚಾರ ರೀತಿಯ ಪದ್ದತಿ ಉಂಟು.
*********.

No comments:

Post a Comment