ಸೂರ್ಯ
ಸೂರ್ಯನ ಜನನ:-
ಸೂರ್ಯದೇವನ ಕುರಿತಾದ ವಿಷಯಗಳು ಋಗ್ವೇದದಲ್ಲಿ ಉಲ್ಲೇಖಿಸಿದೆ. ಅನೇಕ ಪುರಾಣಗಳ ಪ್ರಕಾರ ಬ್ರಹ್ಮನ ಮಾನಸ ಪುತ್ರ ಮರೀಚಿ, ಇವರ ಮಗ ಕಶ್ಯಪ. ಇವರು ದಕ್ಷಬ್ರಹ್ಮನ ಮಕ್ಕಳಾದ ಅದಿತಿ ಮತ್ತು ದಿತಿಯನ್ನು ವಿವಾಹವಾಗುತ್ತಾರೆ. ಕಶ್ಯಪ ರಿಂದ ಅದಿತಿಗೆ ದೇವತೆಗಳು ಹುಟ್ಟಿದರೆ, ದಿತಿಗೆ ಅಸುರರು ಹುಟ್ಟುತ್ತಾರೆ. ಋಷಿಮುನಿಗಳು ಬ್ರಾಹ್ಮಣರು ಮಾಡಿದ ಯಾಗಾದಿಗಳ ಫಲ ದೇವತೆಗಳಿಗೆ ಹೋಗಿ ಅವರಿಗೆ ಹೆಚ್ಚು ಶಕ್ತಿ ಬರುತ್ತದೆ.
ಇದರಿಂದಾಗಿ ಅಸುರರು ತಮಗೆ ಫಲ ದೊರಕುವುದಿಲ್ಲ ವೆಂದು ದೇವತೆಗಳ ಮೇಲೆ ದ್ವೇಷ ಬೆಳೆಯುತ್ತದೆ. ಬರಬರುತ್ತಾ ಇದು ಇಷ್ಟಕ್ಕೆ ನಿಲ್ಲದೆ ದೇವತೆಗಳಿಗೆ ಹಿಂಸೆ ಕೊಡುವುದಲ್ಲದೆ, ಅವರ ಮೇಲೆ ಯುದ್ಧಮಾಡಿ ಸ್ವರ್ಗ ಲೋಕದಿಂದ ಹೊರಗೆ ತಳ್ಳುತ್ತಾರೆ. ಸ್ವರ್ಗವನ್ನು ಅಸುರರು ಆಕ್ರಮಿಸುತ್ತಾರೆ.
ದೇವತೆಗಳ ತಾಯಿಯಾದ ಅದಿತಿಗೆ ಇದನ್ನೆಲ್ಲಾ ನೋಡಿ ಸಂಕಟವಾಗಿ ತನ್ನ ಮಕ್ಕಳಾದ ದೇವತೆಗಳನ್ನು ರಕ್ಷಿಸಲು ಈಶ್ವರನ ಕುರಿತು ಘೋರವಾದ ತಪಸ್ಸು ಮಾಡುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷವಾಗಿ ಏನು ವರ ಬೇಕೆಂದು ಕೇಳುತ್ತಾನೆ. ಅದಿತಿಯು ಕೈಮುಗಿದು ದೇವಾ, ನನ್ನ ತಂಗಿ 'ದಿತಿ' ಯ ಮಕ್ಕಳಾದ ಅಸುರರು ನನ್ನ ಮಕ್ಕಳಿಗೆ ಚಿತ್ರಹಿಂಸೆಗಳನ್ನು ಕೊಟ್ಟು ಸ್ವರ್ಗದಿಂದ ದಬ್ಬಿ, ನಿಲ್ಲಲು ನೆಲೆಯಿಲ್ಲದೆ ಒದ್ದಾಡುವಂತೆ ಮಾಡಿದ್ದಾರೆ. ದೇವ ನೀವು ಕರುಣೆಯಿಟ್ಟು ನನ್ನ ಮಕ್ಕಳಿಗೆ ಎಂದಿನಂತೆ ಸ್ವರ್ಗವು ದೊರಯುವಂತೆ ಆಶೀರ್ವದಿಸಬೇಕು ಎಂದು ಬೇಡಿದಳು. ಆಗ ಶಿವನು ನನ್ನ ಅಂಶದಿಂದ ನಿನಗೆ ಒಬ್ಬ ಮಗ ಜನಿಸುತ್ತಾನೆ ಅವನು ರಾಕ್ಷಸರನ್ನು ಸೋಲಿಸಿ ಸ್ವರ್ಗವನ್ನು ನಿನ್ನ ಮಕ್ಕಳಿಗೆ ಕೊಡಿಸುತ್ತಾನೆ ಎಂದು ಅದಿತಿಗೆ ಹರಸಿದನು.
ಸ್ವಲ್ಪ ದಿನಗಳಲ್ಲಿ ಪರಮೇಶ್ವರನ ಅನುಗ್ರಹದಿಂದ ಅದಿತಿಗೆ ಒಬ್ಬ ಮಗ ಜನಿಸುತ್ತಾನೆ. ಅವನು ಹುಟ್ಟುವಾಗಲೇ ಫಳಫಳ ಹೊಳೆಯುತ್ತಿದ್ದು ಬೆಂಕಿಯಂತೆ ಪ್ರಜ್ವಲಿಸುತ್ತಿದ್ದನು ಆದುದರಿಂದ ಮಗುವಿಗೆ 'ಸೂರ್ಯ' ಎಂದು ಹೆಸರಿಟ್ಟರು. ಇವನು ಮುಂದೆ ಬೆಳೆದು ದೊಡ್ಡವನಾಗಿ ಸಹೋದರರೊಂದಿಗೆ ಅಸುರರ ಮೇಲೆ ಯುದ್ಧ ಸಾರಿ, ಸ್ವರ್ಗದಿಂದ ಅಸುರರನ್ನು ಹೊರಗೆ ದಬ್ಬಿ ತನ್ನ ಸಹೋದರರಿಗೆ ಅವರ ಸ್ವರ್ಗವನ್ನು ಅವರಿಗೆ ಕೊಡಿಸುತ್ತಾನೆ. ಅಂದಿನಿಂದಲೇ ಸೂರ್ಯದೇವನು ಜಗತ್ತಿಗೆ ಬೆಳಕನ್ನು ಕೊಡುತ್ತಾ ಅನೇಕ ಜೀವ ಕೋಟಿಗಳಿಗೆ ಕಾರಣನಾಗುತ್ತಾನೆ.
ಸೂರ್ಯನು ಹುಟ್ಟುವ ಮೊದಲು, ಸೃಷ್ಟಿಯು ಆರಂಭವಾಗುವ ಸಮಯ ಮೊದಲು ಜಗತ್ತು ಕತ್ತಲಲ್ಲಿ ತುಂಬಿತ್ತು. ಆಗ ವಿಷ್ಣು ತಾನೊಬ್ಬನೇ ಇದ್ದು ಅವನಿಗೆ ಜೊತೆ ಬೇಕು ಎನಿಸಿ ಹಲವಾರು ದೇವತೆಗಳನ್ನು ಸೃಷ್ಟಿಸಲು ಯೋಚಿಸುತ್ತಾನೆ. ಹೀಗೆ ಯೋಚಿಸಿದಾಗ ಅವನ ನಾಭಿಯಿಂದ ಒಂದು ಕಮಲದ ಹೂವು ಹೊರಬರುತ್ತದೆ ಅದರೊಳಗಿಂದ ಬ್ರಹ್ಮ ಸೃಷ್ಟಿಯಾದನು. ಬ್ರಹ್ಮ ಹುಟ್ಟಿದಾಗ ಜಗತ್ತೆಲ್ಲ ಕತ್ತಲೆ ಮಯವಾಗಿತ್ತು ಬ್ರಹ್ಮಾಂಡದಲ್ಲಿನ ನೀರು ತುಂಬಿತ್ತು. ಬ್ರಹ್ಮನು ಈ ಕತ್ತಲ ಪ್ರಪಂಚದಲ್ಲಿ ಸಾವಿರಾರು ವರುಷ ಕಳೆದನು.
ಹೀಗೆ ಕಳೆಯುತ್ತಿರುವಾಗ ಸಮುದ್ರದ ನೀರಿನಲ್ಲಿ ಬರುವ ತೊರೆಗಳೆಲ್ಲ ಒಂದೆಡೆ ಸಂಗ್ರಹವಾಗಿ ಮೊಟ್ಟೆಯ ರೂಪ ತಾಳುತ್ತದೆ. ಬ್ರಹ್ಮನು ಆ ಮೊಟ್ಟೆಯನ್ನು ಒಡೆದಾಗ ಸೂರ್ಯದೇವನು ಹೊರಬರುತ್ತಾನೆ. ಸೂರ್ಯದೇವನು ಹುಟ್ಟುತ್ತಿದ್ದಂತೆಯೇ ಶಾಖ ಮತ್ತು ಬೆಳಕನ್ನು ಉತ್ಪತ್ತಿಮಾಡುತ್ತ ಬಂದನು. ಶಾಖ ಮತ್ತು ಬೆಳಕು ದಿನೇ ದಿನೇ ಹೆಚ್ಚಾಗತೊಡಗಿತ್ತು. ಇದರಿಂದ ನೀರೆಲ್ಲಾ ಬತ್ತಿತು. ಶಾಖ ತಡೆದುಕೊಳ್ಳಲಾಗದೆ ಎಲ್ಲಾ ಜೀವಿಗಳು ಒದ್ದಾಡಿದವು.
ಬ್ರಹ್ಮನಿಗೂ ಈ ತಾಪ ತಾಳಲಾರದೆ ಸೂರ್ಯದೇವನನ್ನು ಸಂಹರಿಸಿದನು.
ಇದರಿಂದ ಬೆಳಗ್ಗೆ ಇಲ್ಲದಂತಾಗಿ ದೇವತೆಗಳಿಗೆ ಹೀಗೆ ಬದುಕುವುದು ಅಸಾಧ್ಯವೆನಿಸಿತು. ಅವರೆಲ್ಲರೂ ಬೆಳಕು ಬೇಕೆಂದು ಶಿವನ ಮೊರೆ ಹೊಕ್ಕರು. ಶಿವನು ಸೂರ್ಯದೇವನಿಗೆ ಸಾಮಾನ್ಯ ಶಾಖ ವಿರುವಂತೆ ಮಾಡಿ ಅದಿತಿಯ ಹೊಟ್ಟೆಯಲ್ಲಿ ಜನಿಸುವಂತೆ ಮಾಡುತ್ತಾನೆ.
ಸೂರ್ಯ ಎಂದರೆ ಬೆಳಕು. ನವಗ್ರಹಗಳಲ್ಲಿ ಸೂರ್ಯ ಪ್ರಮುಖನಾದವನು. ಸೂರ್ಯನ ದೇವತೆ ಆದಿತ್ಯ. ಸೂರ್ಯನಿಗೆ ಹೊಂಬಣ್ಣದ ಕೂದಲುಗಳಿವೆ. ಬಂಗಾರ ಬಣ್ಣದ ಕೈಗಳಿವೆ. ಸೂರ್ಯನು ತನ್ನ ವಿಜಯೋತ್ಸವದ ರಥದಲ್ಲಿ ಸ್ವರ್ಗದಿಂದ ಇಳಿದು ಬರುತ್ತಾನೆ. ಏಳು ಕುದುರೆಗಳು ರಥವನ್ನು ಎಳೆಯುತ್ತವೆ. ಅವುಗಳ ತಲೆಯು ಕಾಮನಬಿಲ್ಲಿನ ಬಣ್ಣಗಳನ್ನು ಪ್ರತಿನಿಧಿಸುತ್ತವೆ. ಸೂರ್ಯ ಪ್ರತಿನಿಧಿಸುವ ವಾರ ರವಿವಾರ. ಕಣ್ಣಿಗೆ ಕಾಣುವ ದೇವರು ಸೂರ್ಯ. ಪ್ರತಿದಿನ ಮುಂಜಾನೆ ಸೂರ್ಯೋದಯ ನೋಡಿ ಸ್ತುತಿಸಿ ನಮಸ್ಕರಿಸುತ್ತಾರೆ. ಸೂರ್ಯರಾಧನೆ ಬಹಳ ಪ್ರಾಮುಖ್ಯ ಪಡೆದಿದೆ. ಸೂರ್ಯ ಜಗತ್ತಿಗೆ ಆಧಾರ.
💐🙏💐
ಈ ಪಿತೃ ಪಕ್ಷದಲ್ಲಿ ಪ್ರತಿದಿನ ಸೂರ್ಯ ದೇವನಿಗೆ ಅರ್ಘ್ಯ ಪ್ರದಾನ ಮಾಡಿ, ಆದಿತ್ಯ ಹೃದಯ ಪಠಿಸುವುದು ತುಂಬಾನೇ ಒಳ್ಳೆಯ ಫಲವನ್ನು ಕೊಡುತ್ತದೆ.
( ವಾಟ್ಸ್ ಅಪ್ ಸಂಗ್ರಹ )
***
“ಗ್ರಹಾಣಾಮಾದಿರಾದಿತ್ಯಃ” ಎಂಬಂತೆ ಈತ ಗ್ರಹಗಳಲ್ಲಿ ಮೊದಲಿಗೆ. ಆರೋಗ್ಯ ಜ್ಞಾನಗಳನ್ನು ದಯಪಾಲಿಸುವ ದೇವತೆ. ೨ ಕೈಯಲ್ಲಿ ಕೆಂಪು ಕಮಲಗಳು ಕೆಂಪು ರಥದಲ್ಲಿ ರಥಿಕ, ಅರುಣನೇ ಇವಗೆ ಸಾರಥಿ. ರಥಕ್ಕೆ ಕಟ್ಟಿರುವ ಕುದುರೆಗಳು ೭.
ಸೂಕ್ಷ್ಮಗುಂಗುರು ಕೂದಲುಗಳಿಂದ ಒಪ್ಪುವ ತಲೆ. ಆಕರ್ಷಕ ರೂಪ ಚೇತೋಹಾರಿಯಾದ ಗಂಭೀರ ಧ್ವನಿ. ಹೆಚ್ಚು ಎತ್ತರವಿಲ್ಲದ ನಿಲುವು. ಅನುಪಮ ಬುದ್ಧಿ ಚಾತುರ್ಯ. ಗೋರೋಚನದಂತೆ ಕೆಂಪು ಬೆರೆತ ಸುಂದರ ಕಣ್ಗಳು. ಧೈರ್ಯಶಾಲಿ ಪ್ರಚಂಡ. ಪಿತ್ತಪ್ರಕೃತಿ, ಉನ್ನತ ವ್ಯಕ್ತಿತ್ವ. ದೊಡ್ಡ ಕೈಗಳು. ಕೆಂಪುಉಡುಗೆ, ಇದು ರವಿಯನ್ನು ಶಾಸ್ತ್ರಾಕಾರರು ಗುರುತಿಸುವ ಬಗೆ.
ಆದಿತ್ಯ ಮಾರ್ತಾಂಡ ಭಾನು,ರವಿ,ದಿವಾಕರ,ಪ್ರಭಾಕರ ಇವು ಸೂರ್ಯನ ಪ್ರಸಿದ್ಧ ಹೆಸರುಗಳು. ಅದಿತಿ-ಕಶ್ಯಪರ ಮಗ. ಅದೊಂದು ದಿನ ಕಶ್ಯಪರು
ಮನೆಯಲ್ಲಿ ಇರಲಿಲ್ಲ. ಅದಿತಿದೇವಿ ತುಂಬು ಗರ್ಭಿಣಿ. ದೇವರ ಧ್ಯಾನದಲ್ಲಿದ್ದಾಳೆ. ಹೊರಗಿನಿಂದ ಭವತಿ ಭಿಕ್ಷಾಂಧೇಹಿ ಎಂಬ ಮಾಣವಕನ ಧ್ವನಿ. ಬುಧನು
ಭಿಕ್ಷೆಗಾಗಿ ಬಂದಿದ್ದ. ಕರೆದ ಕೂಡಲೇ ಭಿಕ್ಷೆಗೆ ಬರಲಿಲ್ಲವೆಂಬ ಸಿಟ್ಟು ಬುಧನಿಗೆ. ಏನು ಗರ್ಭಿಣಿ ಎಂಬ ಅಹಂಕಾರವೋ? ಗರ್ಭದಲ್ಲಿರುವ ಆ ಶಿಶು ಸತ್ತು ಹೋಗಲಿ
ಎಂಬ ಶಾಪವಾಗಿ ಆ ಸಿಟ್ಟು ಸ್ಪೋಟಗೊಂಡಿತು. ಆಕೆ ತತ್ತರಿಸಿ ಬಿದ್ದಳು. ಮೃತವಾದ ಅಂಡದಮ್ತೆ ಕಾಣಿಸಿದ ಆ ಶಿಶು ಶ್ರೀಹರಿಯ ಮಹಿಮೆಯಿಂದ ಕಶ್ಯಪರ
ಪ್ರಭಾವದಿಂದ ಸತ್ತು ಬದುಕಿತು. ಈ ಮಗುವೇ ಸೂರ್ಯ. ಆದ್ದರಿಂದಲೇ ಮಾರ್ತಾಂಡ ಆದಿತ್ಯ ಎಂಬುದು ಇವನ ಇನ್ನೊಂದು ಹೆಸರು. ಅದಿತಿಯ
ಮಗನೆಂಬ ಕಾರಣದಿಂದ ಮಾತ್ರ ಇವನಿಗೆ ಈ ಹೆಸರಲ್ಲ. ದಿನದಿನವೂ ಉದಯಿಸುತ್ತಾ ಅಸ್ತಮಿಸುತ್ತಾ ಜೀವಜಾತದ ೨೪ ಘಂಟೆಗಳ ಆಯುಷ್ಯವನ್ನು ಕಿತ್ತು
ಸಾಗುವುದರಿಂದ ಇವನಿಗೆ ಈ ಹೆಸರು. (ಆಯುರಾದಾಯ ಯಾತೀತಿ ಆದಿತ್ಯಃ)
ಮನುಷ್ಯ ಪ್ರತಿದಿನವೂ ಸೂರ್ಯಾಸ್ತದ ಸುಂದರ ಸಂಜೆಯನ್ನು ನೋಡಿ ಖುಶಿ ಪಡುತ್ತಾನೆ. ತನ್ನ ವಯಸ್ಸು ಒಂದು ದಿನ ಜಾಸ್ತಿಯಾಯಿತು ಎಂದೇ ಭಾವಿಸುತ್ತಾನೆ.
ಆಯುಷ್ಯದಲ್ಲಿ ಒಂದುದಿನ ಕಡಿಮೆಯಾಯಿತು ಎಂದು ಯೋಚಿಸುವುದಿಲ್ಲ. ಇದು ದುರಂತ.
ಸಂಜ್ಞಾ ಮತ್ತು ಛಾಯಾ ಸೂರ್ಯನ ಹೆಂಡಂದಿರು. ಸಂಜ್ಞೆಯಲ್ಲಿ ಯಮ ಯಮುನೆ ಮತ್ತು ಮನು ಹುಟ್ಟಿದರು. ಛಾಯಾ ದೇವಿಯಲ್ಲಿ ಸಾವರ್ಣಿ ಮತ್ತು ಶನೀಶ್ವರ ಎಂಬ ಈರ್ವರು ಹುಟ್ಟಿದರು. ಈ ಮನ್ವಂತರದ ಅಧಿಪತಿಯಾದ ವೈವಸ್ವತ ಮನು ಸೂರ್ಯನ ಪುತ್ರ. ಗ್ರಹಕೋಟಿಯಲ್ಲಿ ಭಯಂಕರನೆನಿಸಿದ ಶನಿಯೂ ರವಿಕುಮಾರ. ಕರ್ಣ ಸುಗ್ರೀವರು ಸೂರ್ಯಾಂಶ ಸಂಭೂತರು.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ರಿಹರಿಸಿಕೊಳ್ಳಬಹುದು.
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||
“ಕೆಂಪುದಾಸವಾಳ ಪುಷ್ಫದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”.
***
ವಿಷ್ಣುಪುರಾಣ
ಸಂಚಿಕೆ - 355
****
ಶ್ರೀಮನ್ನಾರಾಯಣಾಯ ನಮ:
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
****
ದ್ವಿತೀಯಾಂಶ:
ಅಷ್ಟಮೋಧ್ಯಾಯ:
****
ವಿದಿಶಾಸು ತ್ವಶೇಷಾಸು ತಥಾ ಬ್ರಹ್ಮನ್ ದಿಶಾಸು ಚ|
ಯೈರ್ಯತ್ರ ದೃಶ್ಯತೇ ಭಾಸ್ವಾನ್ ಸ ತೇಷಾಮುದಯ: ಸ್ಮೃತ:||15||
ತಿರೋಭಾವಂ ಚ ಯತ್ರೈತಿ ತತ್ರೈವಾಸ್ತಮನಂ ರವೇ:|
ನೈವಾಸ್ತಮನಮರ್ಕಸ್ಯ ನೋದಯ: ಸರ್ವದಾ ಸತ:||16||
ಉದಯಾಸ್ತಮನಾಖ್ಯಂ ಹಿ ದರ್ಶನಾದರ್ಶನಂ ರವೇ:|
ಶಕ್ರಾದೀನಾಂ ಪುರೇ ತಿಷ್ಠನ್ ಸ್ಪೃಶತ್ಯೇಷ ಪುರತ್ರಯಮ್||17||
ವಿಕೋಣೌ ದ್ವೌ ವಿಕೋಣಸ್ಥ:ತ್ರೀನ್ ಕೋಣಾನ್ ದ್ವೇ ಪುರೇ ತಥಾ|
ಉದಿತೋ ವರ್ದ್ಧಮಾನಾಭಿರಾಮಧ್ಯಾಹ್ನಾತ್ತಪನ್ ರವಿ:||18||
ಸಮಸ್ತ ದಿಕ್ಕುಗಳಲ್ಲಾಗಲಿ ವಿದಿಕ್ಕುಗಳಲ್ಲಾಗಲಿ ಅಲ್ಲಿರುವ ಜನರಿಗೆ ಸೂರ್ಯನು ಯಾವಾಗ ಕಾಣಿಸುತ್ತಾನೋ ಆಗ ಸೂರ್ಯೋದಯವೆಂದು ಹೇಳಲ್ಪಡುತ್ತದೆ. ಯಾವಾಗ ಸೂರ್ಯನು ಕಾಣಿಸುವುದಿಲ್ಲವೋ ಆಗ ಸೂರ್ಯಾಸ್ತಮಯವೆಂದು ಹೇಳಲ್ಪಡುತ್ತದೆ.
ಸರ್ವದಾ ಪ್ರಕಾಶಿಸುತ್ತಿರುವ ಸೂರ್ಯನಿಗೆ ಅಸ್ತಮಯವೂ ಇಲ್ಲ, ಉದಯವೂ ಇಲ್ಲ.
ಸೂರ್ಯನ ದರ್ಶನವೇ ಸೂರ್ಯೋದಯ. ಅದರ್ಶನವೇ ಅಸ್ತಮಯ.
ಸೂರ್ಯನು ಇಂದ್ರಾದಿಗಳ ನಗರದಲ್ಲಿ ಪ್ರಕಾಶಿಸುತ್ತಿರುವಾಗ ಮೂರು ನಗರಗಳನ್ನೂ ಎರಡು ವಿಕೋಣಗಳನ್ನೂ ಬೆಳಗುತ್ತಾನೆ.
ಆತನು ವಿಕೋಣದಲ್ಲಿದ್ದಾಗ ಮೂರು ವಿಕೋಣಗಳನ್ನೂ ಎರಡು ನಗರಗಳನ್ನು ಬೆಳಗುತ್ತಾನೆ.
ಅವನು ಉದಿತನಾದ ಮೇಲೆ ವರ್ಧಿಸುತ್ತಿರುವ ಕಿರಣಗಳಿಂದ ಮಧ್ಯಾಹ್ನದವರೆಗೆ ತಾಪವನ್ನು ಕೊಡುತ್ತ ಹೋಗುತ್ತಾನೆ.
****
ನಾಹಂ ಕರ್ತಾ ಹರಿ: ಕರ್ತಾ:
****
ಸಂಗ್ರಹ:-
ಪಂ. ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
06-01-2019.
**
ವಿಕೋಣ. = ವಿದಿಕ್ಕು, ಮೂಲೆ ಪೂರ್ವದಲ್ಲಿದ್ದಾಗ ಪಾಶ್ವದ ಎರಡು ಮೂಲೆಗಳನ್ನೂ, ಪೂರ್ವ, ದಕ್ಷಿಣ, ಉತ್ತರಗಳನ್ನೂ ಬೆಳಗುತ್ತಾನೆ.
ಮೂಲೆಯಲ್ಲಿದ್ದಾಗ ಪಾರ್ಶ್ವದ ಎರಡು ದಿಕ್ಕು, ಆ ದಿಕ್ಕುಗಳ ತುದಿಯಲ್ಲಿರುವ ಎರಡು ಮೂಲೆಗಳು ಮತ್ತು ತಾನಿದ್ದ ಮೂಲೆ ಇವನ್ನು ಬೆಳಗುತ್ತಾನೆ.
ಅಂತೂ ಭೂಗೋಳದ ಅರ್ಧಭಾಗದಷ್ಟು ಸದಾ ಬೆಳಕಿನಿಂದ ಕೂಡಿರುತ್ತದೆ.
***
ವಿಷ್ಣುಪುರಾಣ🙏🏽
🌷🔔ॐ🔔🌷
🔯🔔 ಸಂಚಿಕೆ - 356🔔🔯
****
ಶ್ರೀಮನ್ನಾರಾಯಣಾಯ ನಮ:
ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್|
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||
****
ದ್ವಿತೀಯಾಂಶ:
ಅಷ್ಟಮೋಧ್ಯಾಯ:
****
ತತ: ಪರಂ ಹ್ರಸಂತೀಭಿರ್ಗೋಭಿರಸ್ತಂ ನಿಯಚ್ಛತಿ|
ಉದಯಾಸ್ತಮಾನಾಭ್ಯಾಂ ಚ ಸ್ಮೃತೇ ಪೂರ್ವಾಪರೇ ದಿಶೌ||19||
ಯಾವತ್ಪುರಸ್ತಾತ್ತಪತಿ ತಾವತ್ ಪೃಷ್ಠೇ ಚ ಪಾರ್ಶ್ವಯೋ:|
ಋತೇಮರಗಿರೇರ್ಮೇರೋರುಪರಿ ಬ್ರಹ್ಮಣ: ಸಭಾಮ್||20||
ಯೇ ಯೇ ಮರೀಚಯೋರ್ಕಸ್ಯ ಪ್ರಯಾಂತಿ ಬ್ರಹ್ಮಣ: ಸಭಾಮ್|
ತೇ ತೇ ನಿರಸ್ತಾಸ್ತದ್ಭಾಸಾ ಪ್ರತೀಪಮುಪಯಾಂತಿ ವೈ||21||
ತಸ್ಮಾದ್ದಿಶ್ಯುತ್ತರಸ್ಯಾಂ ವೈ ದಿವಾರಾತ್ರಿ: ಸದೈವ ಹಿ|
ಸರ್ವೇಷಾಂ ದ್ವೀಪವರ್ಷಾಣಾಂ ಮೇರುರುತ್ತರತೋ ಯತ:||22||
ಅನಂತರ ಕ್ರಮವಾಗಿ ಕ್ಷೀಣವಾಗುವ ಕಿರಣಗಳೊಡನೆ ಅಸ್ತಂಗತನಾಗುತ್ತಾನೆ.
ಸೂರ್ಯನ ಉದಯಾಸ್ತಮನಗಳ ನಿಮಿತ್ತದಿಂದ ಪೂರ್ವದಿಕ್ಕು, ಪಶ್ಚಿಮದಿಕ್ಕು ಎಂಬ ವ್ಯವಹಾರ ಬಂದಿದೆ.
ಆತನು ಪೂರ್ವ ದಿಕ್ಕಿನಲ್ಲಿ ಬೆಳಗುವಾಗ ಹಿಂದಿನ ಪಶ್ಚಿಮವನ್ನೂ, ಪಾರ್ಶ್ವಗಳಾದ ಉತ್ತರ-ದಕ್ಷಿಣಗಳನ್ನೂ ಬೆಳಗುತ್ತಲೇ ಇರುತ್ತಾನೆ.
ಅಮರಗಿರಿಯಾದ ಮೇರುವಿನ ಮೇಲಿರುವ ಬ್ರಹ್ಮಸಭೆಯನ್ನು ಮಾತ್ರ ಬೆಳಗಲಾರ.
ಏಕೆಂದರೆ, ಸೂರ್ಯನ ಯಾವ ಯಾವ ಕಿರಣಗಳು ಬ್ರಹ್ಮಸಭೆಯನ್ನು ಸೇರುತ್ತವೆಯೋ ಅವು ಬ್ರಹ್ಮದೇವನ ತೇಜಸ್ಸಿನಿಂದ ಪರಾಹತವಾಗಿ ಹಿಂದಿರುತ್ತವೆ.
ಸಮಸ್ತ ದ್ವೀಪಗಳಿಗೂ ದೇಶಗಳಿಗೂ ಮೇರುಪರ್ವತವು ಉತ್ತರದಲ್ಲಿ ಇರುವುದರಿಂದ, ಮೇರುಪರ್ವತದ ಮೇಲೆ ಯಾವಾಗಲೂ (ಒಂದು ಪಾರ್ಶ್ವದಲ್ಲಿ) ಹಗಲು (ಇನ್ನೊಂದು ಪಾರ್ಶ್ವದಲ್ಲಿ) ರಾತ್ರಿಯಾಗಿರುತ್ತದೆ.
****
ಸಂಗ್ರಹ:-
ಪಂ. ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga. 07-01-2019.
**
No comments:
Post a Comment