ಅಂಬರೀಷ ಮಹಾರಾಜ ಮಹಾ ವಿಷ್ಣು ಭಕ್ತ.ಆದರೆ ಇದು ಜಗತ್ತಿಗೆ ತಿಳಿಯದು. ಇದನ್ನು ತಿಳಿಸುವ ಕಾರ್ಯಕ್ಕೆ ದೂರ್ವಾಸ ಮಹಾ ಮುನಿಗಳೇ ಹೊರಡುತ್ತಾರೆ.ಮಹಾ ಅಪಾಯವೂ ಈ ಪರೀಕ್ಷೆಯೊಳಗಿದೆ ಎಂಬುದನ್ನರಿತ ಮಹರ್ಷಿ ದೂರ್ವಾಸ ಮುನಿಗಳು ಅಂಬರೀಷ ಮಹಾರಾಜನಲ್ಲಿಗೆ ಪ್ರಯಾಣ ಬೆಳೆಸಿದರು. ಅದುವೇ ದ್ವಾದಶೀ ಮಹಾತ್ಮೆಯೂ ಆಗಿ ಇಂದಿಗೂ ಮುಕ್ಕೋಟಿ ದ್ವಾದಶಿಯನ್ನಾಗಿ ಆಚರಿಸಲ್ಪಡುತ್ತಿದೆ.
ಅಂಬರೀಷ ಮಹಾರಾಜರು ದ್ವಾದಶಿ ವೃತವನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬಂದವರು. ಲೋಪವೆಂಬುದೇ ಇರಲಿಲ್ಲ. ಆಂದು ದ್ವಾದಶಿ.ಮುಕ್ಕೋಟಿ ದ್ವಾದಶಿ. ಆ ದಿನ ಸೂರ್ಯೋದಯದಿಂದ ಒಂದು ಗಳಿಗೆ ಮಾತ್ರ ದ್ವಾದಶಿ ತಿಥಿ ಇತ್ತು.(ಗಳಿಗೆ ಎಂದರೆ 24 ಮಿನಿಟು). ಆ ಗಳಿಗೆ ದಾಟಿದರೆ ತ್ರಯೋದಶಿ ತಿಥಿ ಬರುತ್ತದೆ. ಅದರ ಒಳಗೆ ಬ್ರಾಹ್ಮಣಾರಾಧನೆ ಮುಗಿಸಿ ರಾಜನು ದೇವರ ಪ್ರಸಾದ ಸ್ವೀಕರಿಸಬೇಕಾಗಿತ್ತು.ತಪ್ಪಿದರೆ ವೃತ ಭಂಗದ ದೋಷ! ದೂರ್ವಾಸರು ಇದನ್ನೇ ಆಧಾರವಾಗಿಟ್ಟುಕೊಂಡು ರಾಜನಾಸ್ಥಾನಕ್ಕೆ ಬರುತ್ತಾರೆ. ರಾಜನಿಗೆ ಋಷಿಗಳಾಗಮನದಿಂದ ಬಹಳ ಸಂತೋಷವೇ ಆಯ್ತು. ಸಾಕ್ಷಾತ್ ಹರಿಯೇ ಇಂದಿನ ಆರಾಧನೆಗೆ ಮುನಿಗಳನ್ನು ಕಳುಹಿಸಿದ್ದಾನೆ ಎಂದು ಮುನಿಗಳ ಪಾದಗಳಿಗೆರಗಿ ಸ್ವಾಗತಿಸಿದ. ' ರಾಜಾ ನಮಗೆ ಸ್ನಾನ,ನಿತ್ಯಾಹ್ನಿಕಗಳಾಗಿಲ್ಲ, ನಾವು ಅದನ್ನು ಮುಗಿಸಿಕೊಂಡು ಬರುತ್ತೇವೆ' ಎಂದು ರಾಜನ ಒಪ್ಪಿಗೆ ಪಡೆದು ನದಿಗೆ ತೆರಳಿದರು. ಕಾಲು,ಅರ್ಧ ಗಳಿಗೆ ದಾಟಿತು.ಮುಕ್ಕಾಲು ಗಳಿಗೆಯೇ ಮುಗಿಯಿತು.ಇನ್ನೇನು ದ್ವಾದಶಿ ಸಮಾಪ್ತಿ ಕಾಲ ಬಂದೇ ಬಿಟ್ಟಿತು.ಆದರೂ ಋಷಿಗಳಾಗಮನ ಆಗದೆ ರಾಜ ಮರುಗಿದ.ದ್ವಾದಶಿ ಸಂತರ್ಪಣೆ, ಪ್ರಸಾದವನ್ನು ದ್ವಾದಶಿ ತಿಥಿ ಅಂತ್ಯದೊಳಗೆ ಮುಗಿಸದಿದ್ದರೆ ವೃತ ಭಂಗವಾಗುತ್ತದೆ. ಆದರೆ ಋಷಿಗಳನ್ನು ಬಿಟ್ಟು ಪ್ರಸಾದ ಸ್ವೀಕರಿಸಿದರೆ ಋಷಿಗಳ ಶಾಪಕ್ಕೆ ತುತ್ತಾಗಬೇಕಾದೀತು.ಇಂತಹ ಸಂಧಿಗ್ದದಲ್ಲಿ ರಾಜನು ತನ್ನ ರಾಜಗುರುಗಳಲ್ಲಿ ಪರಿಹಾರೋಪಾಯ ಕೇಳುತ್ತಾನೆ.' ಹೇ ರಾಜನ್ ,ಎಲ್ಲದಕ್ಕಿಂತಲೂ ಮುಖ್ಯವಾದುದು ಹರಿಯ ಅನುಗ್ರಹ. ಹಾಗಾಗಿ ನೀನು ಘನ ಆಹಾರ ತೆಗೆದುಕೊಳ್ಳದೆ, ಮೂರು ಸಲ ಸಾಲಗ್ರಾಮ ತೀರ್ಥವನ್ನು ಆಪೋಷಣೆ ತೆಗೆದುಕೊ. ಮಿಕ್ಕಿದ್ದು ಭಗವಂತನ ಇಚ್ಛೆ ' ಎಂದರು. ರಾಜಗುರುಗಳಾಜ್ಞೆಯಂತೆ ಅಂಬರೀಷ ಮಹಾರಾಜನು ನಡೆದುಕೊಂಡ.ಅಷ್ಟರಲ್ಲೇ ದೂರ್ವಾಸರು ಶಿಷ್ಯರೊಡನೆ ನಿತ್ಯಾಹ್ನಿಕ ಮುಗಿಸಿ ಬಂದರು.ರಾಜನು ನಡೆದ ವಿಚಾರ ತಿಳಿಸುತ್ತಾನೆ.ಕುಪಿತರಾದ ದೂರ್ವಾಸರು, ' ಎಲೈ ದೂರ್ತನೇ.. ನಾವೇನು ನಿನ್ನ ಉಚ್ಚಿಷ್ಟ ನೆಕ್ಕುವುದಕ್ಕೆ ಬಂದವರೇ? ಅವಮಾನ ಮಾಡಿದೆಯಾ ನಮಗೆ.ಇದೋ ನಿನ್ನ ವಂಶಕ್ಕೇ ಶಾಪ ಕೊಡುತ್ತೇನೆ ' ಎಂದು ಕ್ರುದ್ರರಾದರು ದೂರ್ವಾಸರು. ಅಂಬರೀಷ ಮಹಾರಾಜನಿಗೆ ದಿಕ್ಕು ತೋಚದಾಯ್ತು. ಯಾರ ಪ್ರೀತ್ಯರ್ಥ ವೃತವೋ ಆ ಹರಿಯನ್ನೇ ಬೇಡಿಕೊಂಡ.
ಅಷ್ಟರಲ್ಲೇ ಕೋಟಿ ಸೂರ್ಯ ಉದಯವಾದಂತೆ ಹರಿಯ ಸುದರ್ಶನವು ದೂರ್ವಾಸರನ್ನು ಬೆನ್ನಟ್ಟಿತು.ಕೊನೆಗೆ ದೂರ್ವಾಸರು ಹರಿಯನ್ನೇ ಮೊರೆಹೊಕ್ಕರು.ಆದರೇನು? ' ಹೇ ಮುನಿಯೇ,ನಿನ್ನ ಕ್ರೋಧವೇ ನಿನಗೆ ಮಾರಕವಾಯ್ತು.ನಾನೇನೂ ಮಾಡಲು ಸಾಧ್ಯವಿಲ್ಲ.ನನ್ನ ಪರಮ ಭಕ್ತ ಅಂಬರೀಷನೇ ಇದಕ್ಕೆ ಪರಿಹಾರ ನೀಡಬಲ್ಲ.ನೀನು ಅವನಲ್ಲಿಗೇ ಹೋಗು' ಎಂದು ಶ್ರೀಹರಿಯು ದೂರ್ವಾಸ ಋಷಿಗೆ ಹೇಳಿದನು. ದೂರ್ವಾಸರು ಅಂಬರೀಷನ ಮೊರೆಹೋದರು.ಮತ್ತೆ ಅಂಬರೀಷನು ಹರಿಯನ್ನು ಧ್ಯಾನಿಸಲು,ಹರಿಯು ಪ್ರತ್ಯಕ್ಷನಾಗಿ ಸುದರ್ಶನವನ್ನು ಹಿಂದೆ ಪಡೆದು,' ಎಲೈ ಮಹಾರಾಜನೇ ನಿನ್ನ ಅನನ್ಯ ಭಕ್ತಿಯ ವೃತದ ಮಹಿಮೆಯನ್ನು ಜಗತ್ತಿಗೆ ತೋರಿಸಲೆಂದೇ,ದೂರ್ವಾಸ ಮುನಿಗಳಿಗೆ ದುರ್ಬುದ್ಧಿಯನ್ನು ಪ್ರೇರೇಪಿಸಿದೆ. ಈ ಮುಕ್ಕೋಟಿ ದ್ವಾದಶಿ ವೃತದ ಮಹಿಮೆ ಜಗತ್ತಿಗೆ ನಿನ್ನಿಂದಲೇ ತಿಳಿಯುವಂತಾಗಲಿ' ಎಂದು ಹರಸಿದರು ಆ ಮಹಾಪಾಲಕ ಮಹಾವಿಷ್ಣು ದೇವರು. ದೂರ್ವಾಸರು ತನ್ನ ತಪ್ಪಿನ ಪರಿಮಾರ್ಜನೆಗಾಗಿ ಮತ್ತೆ ತಪೋನಿರತರಾದರು.
ಇಂದು ಕೂಡಾ ನಮ್ಮ ಭಕ್ತಿಯ,ನಿಷ್ಟೆಯ ಪರೀಕ್ಷಗಳು ನಡೆಯುತ್ತಲೇ ಇರುತ್ತದೆ.ವಿಚಲಿತರಾಗದೆ ಎಲ್ಲವನ್ನೂ ಸ್ವೀಕರಿಸಿದಾಗ ಹರಿಯು ನಮ್ಮ ಜತೆಗೇ ನಿಲ್ಲುತ್ತಾನೆ.ಭಗವದ್ಭಕ್ತರನ್ನು ಪೋಷಿಸದೆ ಇರುವುದಿಲ್ಲ ಎಂಬುದೇ ಈ ಮುಕ್ಕೋಟಿ ದ್ವಾದಶಿಯ ಸಂದೇಶ.
***
ಮುಕ್ಕೋಟಿ ದ್ವಾದಶಿ ಅಂದರೇನು?
ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ. ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ.
ಯಾವ ಕ್ಷೇತ್ರದಲ್ಲಿ ವಿಷ್ಣುವಿನ ದರ್ಶನ ಮಾಡಿದರೆ ಶ್ರೇಷ್ಠ?
ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಮಹಾವಿಷ್ಣುವಿನ ದರ್ಶನ ಮಾಡುವುದು ಶ್ರೇಷ್ಠ. ಅವುಗಳು – ತಿರುಮಲ, ಶ್ರೀಮುಷ್ಣಂ, ತೋತಾದ್ರಿ, ಶ್ರೀರಂಗ, ಇತ್ಯಾದಿ. ಇಲ್ಲಿ ಮಾಡಲಾಗದಿದ್ದರೆ ವೈಷ್ಣವ ಸಂಪ್ರದಾಯದ ದೇವಸ್ಥಾನ ಗಳಲ್ಲಿ ಕೂಡ ಮಾಡಬಹುದು.
*****
ಮುಕ್ಕೋಟಿ ದ್ವಾದಶಿ
ಮುಕ್ಕೋಟಿ ದ್ವಾದಶಿ ದಿನದ ಶುಭಾಶಯಗಳು
ಈ ಉಗಾಭೋಗದಲ್ಲಿ ದಾಸರು ಮಧ್ವರ ಸದಾಚಾರ ಸ್ಮೃತಿ ಮತ್ತು ಭಾಗವತದ ಭಾಗವತರನ್ನು ಸ್ಮರಿಸಿಕೊಂಡು ನಮ್ಮಂತಹ ಪಾಮರರಿಗೆ ಸಾಧನೆಯ ಮಾರ್ಗ ತೋರಿದ್ದಾರೆ.
ಆಚಾರ್ಯರ ದ್ವಾದಶ ಸ್ತೋತ್ರದಲ್ಲಿ ವರ್ಣಿಸಿದಂತೆ ಕುರುಭುಂಕ್ಷ್ವಚ ಕರ್ಮ ನಿಜಂ ನಿಯತಂ. ಪ್ರಾಕಾರ ದಿನ ನಿತ್ಯದ ಸಕಲ ಕರ್ಮಗಳು, ಅವುಗಳ ಫಲ ಶ್ರೀಹರಿಗೆ ಅರ್ಪಣೆಯಾಗಬೇಕು. ಆ ಕರ್ಮಗಳು ಸುಕರ್ಮ, ದುಷ್ಕರ್ಮ, ಸಕಾಮ, ನಿಷ್ಕಾಮ ಆಗಿರಲಿ. ನಾವು ಕರ್ಮ ಮಾಡದೆಯಿದ್ದರೂ ನಾವು ಅದೆಷ್ಟೋ ಬೇಡವಾದ ಕರ್ಮ ಮಾಡಿದ್ದರಿಂದ ಪಾಪದ ಬಾವಿಗೆ ಬೀಳುತ್ತೇವೆ. ಕಾರಣ ದಾಸರು ಸುಳಾದಿಯಲ್ಲಿ ನಿತ್ಯ ನೈಮಿತ್ತಿಕವ ಮಾಡು ಮಾಡದಲಿರು ಎಂಬ ವಾಕ್ಯ ಪ್ರಯೋಗ ಮಾಡಿದ್ದಾರೆ.
ಇದಕ್ಕೂ ಮೊದಲು ನಾವು ಮಧ್ವರಾಗಿ ಆಚಾರ್ಯರ ತತ್ವ ತಿಲಿಯುವದೇ ಮುಖ್ಯ ವಿಷಯವಾಗಿದೆ. ಅದಕ್ಕಾಗಿ ಭಾಗವತದ ಭಕ್ತರನ್ನು ಸ್ಮರಿಸಿ ಅವರ ತ್ಯಾಗ, ಆದರ್ಶ ಧರ್ಮ ನೀತಿಗಳನ್ನು ತಿಳಿಯಲು ದಶಮಿ ಏಕಾದಶಿ ದ್ವಾದಶಿ ವೃತಗಳ ಮಹಿಮೆಗಳನ್ನು ತಿಳಿಯಬೇಕು. ಅದಕ್ಕಾಗಿ ಶ್ರೀ ಹರಿಯ ಮತದಂತೆ ಸದಾಚಾರ ತಿಳಿದೂ ಆಚರಣೆಯಲ್ಲಿ ತರುವದೇ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರವಾಗುವದು. ಈ ತತ್ವಗಳನ್ನು ಓದಿ ತಿಳಿದೂ ಸುಖಪಡುವದೇ ಪರಮಾತ್ಮನಿಗೆ ಪ್ರೀತಿಯ ವಿಷಯವಾಗಿದೆ. ಅದನ್ನೇ ದಾಸರು ತತ್ವವಾ ವಿಚಾರಿಸಿ ಸುಖಿಸಿ ಎಂದೂ ಹೇಳಿದ್ದಾರೆ. ಮತ್ತು ಸದಾಚಾರ ಸ್ಮೃತಿಯಂತೆ ಎಂಬ ಶಬ್ದ ಪ್ರಯೋಗವನ್ನು ಮಾಡಿದ್ದಾರೆ.
ದ್ವಾದಶಿ ಆಚರಣೆ ತಿಳಿ ಯಜಮಾನನು ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ಸ್ನಾನ ಸಂಧ್ಯಾದಿಗಳನ್ನು ಮಾಡಿ ದೇವರ ಪೂಜೆ, ನೈವೈಧ್ಯ ವೈಶ್ವದೇವ ಮಾಡಿಕೊಂಡು ಯಾರಾದರೂ ಯೋಗ್ಯ ವಿಪ್ರ ಬರುವದಾರಿ ಕಾಯಬೇಕು. ಆ ವಿಪ್ರನು ಭೋಜನಕ್ಕೆಯೋಗ್ಯನಾಗಿರಬೇಕು. ಯಜಮಾನನಿಂದ ಸ್ವೀಕರಿಸಿದ ದಾನಕ್ಕೆ ತಕ್ಕ ಅನುಷ್ಠಾನ ಜಪ ತಪ ಮಾಡಿಕೊಂಡು ತನ್ನಪುಣ್ಯವನ್ನು ತಿರುಗಿ ಗಳಿಸುವ ಸಾಮರ್ಥ್ಯ ಹೊಂದಿನವನಾಗಿರಬೇಕು. ಇಂಥವನು ದಾಸರ ಪ್ರಕಾರ, ಪುರಾಣ ಶಾಸ್ತ್ರ ಪ್ರಕಾರ ಸತ್ಪಾತ್ರ ಬ್ರಾಹ್ಮಣ ಎಣಿಸಿಕೊಳ್ಳುವನು. ಇಂಥವರಿಗೇ ಯಜಮಾನನಾದವನು ಊಟಕ್ಕೆ ಹಾಕಿ ತೃಪ್ತಿ ಪಡಿಸಿ ಅವರ ಅನುಮತಿಪಡೆಡು ತಾನು ಮೊದಲು ತೀರ್ಥ ಪಾರಣೆ ಮಾಡಿ ನಂತರದಲ್ಲಿ ದಾನಧರ್ಮ ಮಾಡಿ ಮತ್ತೆ ಅನಯಿ ಪಡೆದು ಊಟ ಮಾಡಿದಾಗ ಫಲ ದೊರೆಯುವದು.
ಇದನ್ನೆಲ್ಲಾ ಮಾಡಿ ಪುಣ್ಯ ಗಳಿಸಿದರೆ ಅದು ಮೃತ್ಯು ವನ್ನು ಜಯಿಸುವ ಪುಣ್ಯ ದೊರೆಯುವದು. ಮುಕ್ತಿಗೆ ಸಾಧನೆ ಆಗುವದೆಂದು ದಾಸರು ಮೃತ್ಯು ಜಯಿಸಿ ಸದ್ಗತಿಗೆ ಸದ್ಯನಾಗು ಎಂದೂ ಸಾರಿ ಹೇಳಿದ್ದಾರೆ.
ಈ ರೀತಿಯಲ್ಲಿ ಸದಾಚಾರ ಸ್ಮೃತಿಯನ್ನು ಓದಿ ತಿಳಿದೂ ಸಂತೋಷಗೊಂಡು ಸತ್ಪಾತ್ರರಿಗೆ ದ್ವಾದಶಿದಿನ ಮೃಷ್ಟಾನ್ನ ಭೋಜನ ಉಣಿಸಿದ ಫಲದಿಂದ ಸತ್ಯ ಮೂರ್ತಿ ವಿಜಯ ವಿಠಲ ರಾಯನು ನಮ್ಮನ್ನು ದಿನನಿತ್ಯ ಬಿಡದೇ ರಕ್ಷಿಸುವನು.
ಶ್ರೀಹರಿವಾಯು
ನಿತ್ಯನೈಮಿತ್ತಿಕವ ಮಾಡು ಮಾಡದಲಿರು
ತತ್ತ್ವವ ವಿಚಾರಿಸಿ ಸುಖಿಸಿ ದ್ವಾದಶಿ ದಿನ
ಹೊತ್ಹೋಗಗೊಡದಲೆ ಸದಾಚಾರಸ್ಮೃತಿಯಂತೆ ಪಂಕ್ತಿಪಾವನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ
ಮೃತ್ಯು ಜಯಿಸಿ ಸದ್ಗತಿಗೆ ಸಾಧ್ಯನಾಗು
ಸತ್ಯಮೂರುತಿ ವಿಜಯವಿಠಲರೇಯ ನಿತ್ಯ ಬಿಡದೆ ಕಾಯ್ವನು ||
-ಶ್ರೀ ವಿಜಯದಾಸರು
****
No comments:
Post a Comment