ವೇದಾನಾಂ ಸಾಮವೇದೋsಸ್ಮಿ (ವೇದಗಳಲ್ಲಿ ನಾನು ಸಾಮವೇದ)
‘ಬ್ರಾಹ್ಮಣ ನ ನಿಷ್ಕಾರಣೋ ಧರ್ಮಃ ಷಡಂಗೋ ವೇದೋsಧ್ಯೇಯಃ ಜ್ಞೇಯಶ್ಚ”
ಯಾವ ಪ್ರತಿಫಲವನ್ನು ಬಯಸದೇ ಬ್ರಾಹ್ಮಣನಾದವನು ಶಿಕ್ಷಾದಿ ಷಡಂಗ ಸಹಿತ ವೇದವನ್ನು ಅಧ್ಯಯನ ಮಾಡಬೇಕು ಮತ್ತು ತಿಳಿಯಬೇಕು ಎಂಬುದು ವಿಧಿವಾಕ್ಯ. ವೇದಗಳಲ್ಲಿ ಶ್ರೇಷ್ಠ, ಕನಿಷ್ಠಗಳೆಂಬ ಭೇದವಿಲ್ಲ.
ಕೃತಯುಗದಲ್ಲಿ ಅಸ್ಥಿಗತ ಪ್ರಾಣ. ತ್ರೇತಾಯುಗದಲ್ಲಿ ಚರ್ಮಗತ ಪ್ರಾಣ. ದ್ವಾಪರಯುಗದಲ್ಲಿ ಮಾಂಸಗತ ಪ್ರಾಣ- ಕಲಿಯುಗದಲ್ಲಿ ಮನುಷ್ಯರಿಗೆ ಅನ್ನಗತ ಪ್ರಾಣ,
ಬಹುಶಃ ಇದನ್ನು ತಿಳಿದು ದ್ವಾಪರದ ಅಂತ್ಯದಲ್ಲಿ ವೇದವ್ಯಾಸ ಮಹರ್ಷಿಗಳು ವೇದರಾಶಿಯನ್ನು ನಾಲ್ಕಾಗಿ ವಿಂಗಡಿಸಿದರು. ಅದೇ- ಋಕ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು. ನಾವು ದಿನನಿತ್ಯ ಬ್ರಹ್ಮಯಜ್ಞವನ್ನು ಮಾಡುವಾಗ ನಾಲ್ಕೂ ವೇದಗಳ ಮಂತ್ರಗಳನ್ನು ಹೇಳಲೇ ಬೇಕು. ಹಾಗಿದ್ದರೂ ‘ವೇದಾನಾಂ ಸಾಮವೇದೋsಸ್ಮಿ’ (ವೇದಗಳಲ್ಲಿ ನಾನು ಸಾಮವೇದವಾಗಿದ್ದೇನೆ) ಎಂದು ಗೀತಾಚಾರ್ಯನು ಸಾಮವೇದದ ಮಹತ್ವವನ್ನು ಎತ್ತಿ ಹೇಳಿದ್ದಾನೆ.
“ಸಾಚ ಅಮಶ್ಚ ಇತಿ” ಸಾಮಃ. ಸಾ ಎಂದರೆ ಋಕ್, ಇದರಿಂದ ಕೂಡಿದ ಅಮಃ ಎಂದು ‘ಸಾಮ’ ಶಬ್ಧದ ನಿರ್ವಚನವನ್ನು ಮಾಡಲಾಗಿದೆ.
ವೇದಗಳಲ್ಲಿ ನಾಲ್ಕು ಸ್ವರಗಳು. ಉದಾತ್ತ, ಅನುದಾತ್ತ, ಸ್ವರಿತ ಹಾಗೂ ಪ್ರಚಯ. ಈ ನಾಲ್ಕು ವಿಧವಾದ ಸ್ವರಗಳಲ್ಲಿ ಮೊದಲ ಮೂರು ಸ್ವರಗಳೇ ಹೆಚ್ಚಾಗಿ ಬಳಕೆಯಲ್ಲಿವೆ.
“ಉದಾತ್ತೋ ಪ್ರಚಯಸ್ವರಃ” ಉದಾತ್ತಸ್ವರದಲ್ಲಿ ಪ್ರಚಯ ಸ್ವರವು ಅಂತರ್ಗತವಾಗಿದೆ. ಈ ಮೂರು ಸ್ವರಗಳಲ್ಲಿ ಸಪ್ತಸ್ವರಗಳಾಗಿವೆ.
“ಉದಾತ್ತೌನಿಷದಗಾಂಧಾರೌ” – ನಿಷದ, ಗಾಂಧಾರಗಳು- ಉದಾತ್ತ ಸ್ವರಗಳು. “ಅನುದಾತ್ತೌ- ವೃಷಭ ಧೈವತೌ”– ವೃಷಭ ಧೈವತಗಳು ಅನುದಾತ್ತ ಸ್ವರಗಳು.
“ಸ್ವರಿತಪ್ರಭವಾ ಹೇತೇ- ಷಡ್ಜ ಮಧ್ಯಮ ಪಂಚಮಾಃ|” ಷಡ್ಜ, ಮಧ್ಯಮ, ಪಂಚಮಗಳು- ಸ್ವರಿತಪ್ರಭವ ಸ್ವರಗಳು ಹೀಗೆ – ಮೂರು ಸ್ವರಗಳಿಂದ ಏಳು ಸ್ವರಗಳು ಪ್ರಭವಿಸಿದವು.
ಓಂಕಾರವು ಎಲ್ಲ ವೇದಗಳನ್ನು ಒಳಗೊಂಡಿದೆ.
‘ಪ್ರಣವೋಹಿ ಭಗವದ್ರೂಪಃ’ “ಗೀತೋಪಾಸನೆಯನ್ನು ಸಾಮವೇದದ ಛಾಂದೋಗ್ಯೋಪನಿಷತ್ತಿ”ನಲ್ಲಿ ಹೇಳಿದ್ದಾರೆ.
ಓಮಿತ್ಯೇತದಕ್ಷರಂ ಉದ್ಗೀತೋಪಾಸಕಸ್ಯ| ಓಂ ಇತಿ ಉದ್ಗೀತಯತಿ ಗಾನಾತ್ಮಕವಾದ (ಗೀತಿವಿಶಿಷ್ಠಮಂತ್ರ) ಮಂತ್ರವನ್ನು ಆಯ್ಕೆ ಮಾಡಿ ವಿಶೇಷವಾಗಿ ಹೇಳಿದರು. ಗಾನ ಅಂದರೆ ನಾದ. ನಾದಸ್ಯಶುದ್ಧಚೈತನ್ಯಸೂಕ್ಷ್ಮರೂಪತ್ವಾತ್, ಚಿತ್ತವೃತ್ತಿ ನಿರೋಧೇನ ಪ್ರಧಾನತ್ವಾತ್|
ಮನುಷ್ಯನ ಮನಸ್ಸು ಬಾಹ್ಯದ ಕಡೆಗೆ ಹೆಚ್ಚು ಒಲಿಯುತ್ತದೆ. ಅದೇ ಮನಸ್ಸು ಅಂತರ್ಮುಖವಾದ ಯಾವುದೋ ಒಂದು ಅವ್ಯಕ್ತಸ್ಥಿತಿ ಉಂಟಾಗುತ್ತದೆ. ಮನಸ್ಸು ಹೆಚ್ಚು ಅಂತರ್ಮುಖವಾಗಿ ನಾದ ತಲ್ಲೀನತೆ ಉಂಟಾದಾಗ ಚಿತ್ತವೃತ್ತಿನಿರೋಧ ಆಗುತ್ತದೆ. ‘ಚಿತ್ತಸ್ಯ ಶುದ್ಧಯೇ ಕರ್ಮ‘ ಬಹುಶಃ ಎಲ್ಲ ಕರ್ಮಾಚರಣೆ ಚಿತ್ತಶುದ್ಧಿಗಾಗಿ. ಕರ್ಮದಿಂದ ಚಿತ್ತಶುದ್ಧಿಯಾಗಿ ಅಂತಃಕರಣವು ಶುದ್ಧವಾಗುತ್ತದೆ. ಅಂತಃಕರಣ ಶುದ್ಧಿಗಾಗಿ ನಾದೋಪಾಸನೆ.
ನಾದಧ್ವನಿ ಜನಿತವಾದುದು ಸ್ವರ. ಅದು ದೇವತೆಗಳ ಉಪಜೀವನ, ಆಹಾರ, (ವಾಚಂ ದೇವಾ ಉಪಜೀವಂತಿ ಸರ್ವೇ) ಆದುದರಿಂದಲೇ ವೇದದಲ್ಲಿ ಸ್ವರಕ್ಕೆ ಹೆಚ್ಚು ಮಹತ್ವ. ಅದಕ್ಕೊಂದು ಸ್ವರ ಶಾಸ್ತ್ರವೇ ಉಂಟಾಯಿತು. ಅದೇ ಶಿಕ್ಷೆ. ನಾರದೀಯಶಿಕ್ಷೆಯಲ್ಲಿಯ ಸ್ವರಮಂಡಲದ ವಿಚಾರ ಹೀಗಿದೆ-
“ಸಪ್ತಸ್ವರಾಃ ತ್ರಯೋಗ್ರಾಮಾಃ, ಮೂರ್ಛಾನಮೇಕವಿಂಶತಿಃ|
ತಾನಾ-ಏಕೋನಪಂಚಾಶತ್ ಇತ್ಯೇತೇ ಸ್ವರಮಂಡಲಂ||”
ಗಾನವೂ ದ್ವಿವಿಧ-ಗ್ರಾಮಗೇಯಗಾನ, ಅರಣ್ಯಗೇಯಗಾನ. ನಾದದಲ್ಲಿಯೂ-ಎರಡು ವಿಧ. ಆಹತನಾದ, ಅನಾಹತನಾದ. ಘರ್ಷಣದಿಂದ, ಪ್ರಾಣಾಪಾನಗಳ ಆಘಾತದಿಂದ ಉತ್ಪನ್ನವಾಗುವ ನಾದ ಆಹತನಾದ. ಈ ನಾದ ಶ್ರೋತ್ರೇಂದ್ರಿಯಕ್ಕೆ ಕೇಳಿಸದೆ ಇಂತಹ ಘರ್ಷಣೆಯಿಲ್ಲದೇ ಉಂಟಾಗುವ ನಾದ ಅನಾಹತ ನಾದ. ಕೇವಲ ಯೋಗಜ್ಞಾನಿಗಳಿಗೆ ವೇದ್ಯವಾಗುವಂತಹದು. ಗಾನಕ್ಕೆ ಅಳವಡಿಸಿದ, ಛಂದೋಬದ್ಧವಾದ ವೇದಭಾಗ- ಸಾಮವೇದ. ಪ್ರಣವೋದ್ಗೀಥವಪುಷೇ ಮಹಾಶ್ವಶಿರಸೇನಮಃ ಎಂದು- ಪರಬ್ರಹ್ಮನ ವರ್ಣನೆಯಿದೆ.
ನಮ್ಮ ಶ್ರವಣೇಂದ್ರಿಯದ ಮೂಲಕ ನಾದತರಂಗವು ಮೇಲ್ಮುಖವಾಗಿ ಹರಿದು ಸುಪ್ತಪ್ರಜ್ಞೆಯನ್ನು ಜಾಗೃತಗೊಳಿಸಿ, ಧ್ವನಿನಿಯಂತ್ರಣ ಕೇಂದ್ರವನ್ನು ತಲುಪಿದಾಗ ಯಾವುದೋ ಅವ್ಯಕ್ತವಾದ ಆನಂದಾತಿಶಯವು ದೊರಕುತ್ತದೆ. ಸುಪ್ತವಾದ ಶಕ್ತಿ ಜಾಗೃತವಾದಾಗ ಆನಂದಾನುಭೂತಿ.
ಮನಸ್ಸನ್ನು ರಂಜಿಸುವ ವೇದ ಗಾನಾತ್ಮಕವಾದುದು. ಮನಸ್ಸಿನ ಅಲೆಯನ್ನು ನಿಯಂತ್ರಿಸುವ ಶಕ್ತಿ ಈ ಗಾನವೇದಕ್ಕೆ ಇದೆ. ಇದು ಮನುಷ್ಯನ- ತಾರ್ಕಿಕ ಬುದ್ಧಿ, ಕ್ರಿಯಾತ್ಮಕ ಧೀಶಕ್ತಿಗಳು ಇದರಿಂದ ಬೆಳೆಯುತ್ತವೆ. ಈ ಹಿನ್ನೆಲೆಯಲ್ಲಿಯೇ ಗಾನಾತ್ಮಕ ವೇದ-ಸಾಮವೇದ ಎನ್ನಲಾಗಿದೆ. ಸಪ್ತಸ್ವರಗಳು ನಾದದ ಮೂಲಕ ಎಲ್ಲ ಚರಾಚರ ಜೀವರಾಶಿಯನ್ನು ತಲುಪುತ್ತವೆ.
ನಾದವು ಸಕಲ ಜೀವಹೃದಯಾಂತರ್ವತಿಯಾಗಿದೆ. ದೀಪಶಿಖಾಂತರ್ಗತವಾಗಿ ಸರ್ವತತ್ತ್ವಾಧಿಷ್ಠಾತೃವಾಗಿ, ನಿರತಿಶಯಸತ್ಯಾನಂದಾನುಭವ ಪ್ರಕಾಶಕವಾಗಿದೆ. ಹೀಗೆ ಚಿಚ್ಛಕ್ತಿಯು “ನಾದಾತ್ಮಕ” ಎನಿಸಿದೆ. ಇದರಿಂದಲೇ ಮೋಕ್ಷಸಾಧನೆ. ನಾದಲಯ ಹಾಗೂ ಯೋಗಾನಂದಾನುಭವ. ಗಾನಪ್ರಧಾನವಾದ ಸಾಮವೇದದಲ್ಲಿ ಹಾ- ಮತ್ತು ಉ ಎನ್ನುವ ಸ್ತೋಭಾಕ್ಷರಗಳು ಇವೆ.
“ಸಾಮವೇದೋ ಬ್ರಾಹ್ಮಣಾನಾಂ ಪ್ರಸೂತಿಃ” ಆದುದರಿಂದಲೇ ವೇದಗಳಲ್ಲಿ ಸಾಮವೇದವೇ ತಾನು- ಎಂದು ಪರಬ್ರಹ್ಮಸ್ವರೂಪಿಯಾದ ಭಗವಾನ್ ಶ್ರೀಕೃಷ್ಣನು ಹೇಳಿದ್ದಾನೆ.
ಸಪ್ತಸ್ವರೈಃ ಸಮಸ್ತಂ ಯೋ|
ಜಗದೇತಚ್ಚರಾಚರಮ್ ||
ಸಂಜೀವಯತಿ ವಿಶ್ವಾತ್ಮಾ |
ಸ ಮೇ ವಿಷ್ಣುಃ ಪ್ರಸೀದತು||
ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ
Samaveda
Samaveda
******
No comments:
Post a Comment