SEARCH HERE

Tuesday 1 January 2019

ಶೀಗೆಹುಣ್ಣಿಮೆ ಕೋಜಾಗರಿ ಹುಣ್ಣಿಮೆ ಶರದ ಪೂರ್ಣಿಮೆ sheege hunnime ashvina pournima




ಶೀಗೆಹುಣ್ಣಿಮೆ
ಶರತ್ ಋತುವಿನ ಎರಡೂ ಹುಣ್ಣಿಮೆಗಳಲ್ಲಿ ಗೌರೀ ಪೂಜೆ ಮಾಡುವ ಪದ್ಧತಿ ಉತ್ತರ ಕರ್ನಾಟಕ ಹಾಗೂ ಆ ಪ್ರಾಂತ್ಯಕ್ಕಂಟಿಕೊಂಡ ಮಹಾರಾಷ್ಟ್ರ ಆಂಧ್ರಗಳಲ್ಲಿದೆ. ಆಶ್ವೀಜ ಹುಣ್ಣಿಮೆಯಂದು ಶೀಗೆ ಗೌರೀ, ಸಣ್ಣಗೌರೀ, ಶೀಗವ್ವ ಇತ್ಯಾದಿ ಹೆಸರಿನಿಂದ ಕರೆಯುವ ಜೇಡಿಮಣ್ಣು ಅಥವಾ ಮರದಲ್ಲಿ ತಯಾರಿಸಿದ ಬಣ್ಣದ ಗೌರೀ ಬಿಂಬ ದ್ವಾದಶಿಯಂದು ಸ್ಥಾಪಿಸಿ ಹುಣ್ಣಿಮೆವರೆಗೂ ಸಂಜೆ ಪೂಜಿಸಿ ಹಣ್ಣು-ಸಕ್ಕರೆಯಚ್ಚು ಇತ್ಯಾದಿಗಳನ್ನಿರಿಸಿ ಆರತಿ ಬೆಳಗುತ್ತಾರೆ. ಸಣ್ಣಮಕ್ಕಳು ವಿಶೇಷವಾಗಿ ಪೂಜಿಸುವ ಈ ಗೌರಿಗೆ ಹೆಚ್ಚಿನ ಮಡಿ ಆಚರಣೆಗಳಿಲ್ಲ. ತಮಟೆ ಹೂವು ಇತ್ಯಾದಿ ಸುಲಭ ಲಭ್ಯ ಕಾಡುಹೂವುಗಳಿದ್ದರೂ ಸಾಕು. ತವರುಮನೆಗೆ ಬಂದ ಮಗಳಂತೆ ಭಾವಿಸಿ ಈ ಗೌರಿಯನ್ನುಪಚರಿಸುವ ಜನ ದಿನಾನುಕೂಲ ನೋಡಿಕೊಂಡು ಮಡಿಲಕ್ಕಿ ಇಟ್ಟು ವಿಸರ್ಜನೆ ಮಾಡುತ್ತಾರೆ.

Worshipping mother earth and acknowledging her involvement in growth of plants is the reason behind this festival
***

ಸೀಗೆ #ಗೌರೀವ್ರತ
by Sajjanamitra Santosh 
ಆಶ್ವಿನ - ಶುಕ್ಲ - ದ್ವಾದಶಿಯಿಂದ ಆರಂಭಿಸಿ ಪೂರ್ಣಿಮಾ ಪರ್ಯಂತವಾಗಿ ಐದು ದಿನಗಳವರೆಗೂ ಸೀಗೆ ಗೌರಿವ್ರತವನ್ನು ಆಚರಿಸುವ ಪದ್ಧತಿಯಿದೆ. ಇದೊಂದು ಸಾಂಪ್ರದಾಯಿಕ ವ್ರತವಾಗಿದೆ. ಇದನ್ನು ಆಚರಿಸುವ ಕ್ರಮವು ಹೀಗಿದೆ –

ಆಶ್ವಿನ-ದ್ವಾದಶಿಯಂದು ಮರದಿಂದ ಏಳು ಸುತ್ತುಗಳುಳ್ಳ ಗೋಪುರಾಕಾರವಾಗಿ (ಹನುಮನ ಬಾಲವನ್ನು ಒಂದರ ಮೇಲೊಂದು ಪೇರಿಸಿದಂತೆ) ತಯಾರಿಸಿದ್ದು, ಒಂಭತ್ತು ಸುತ್ತುಗಳುಳ್ಳ ಮತ್ತೊಂದನ್ನು ತಯಾರಿಸಿ. ಶಂಕರ, ಗೌರಿಯನ್ನು ಆವಾಹಿಸಬೇಕು. ಒಂಭತ್ತು ಹಾಗೂ ಏಳು ಸುತ್ತುಗಳಲ್ಲಿ ಒಂದು ಅರಷಿಣ ಇನ್ನೊಂದು ಕುಂಕುಮ ಬಣ್ಣವಿರಬೇಕು. ಇವುಗಳನ್ನು ಮಣ್ಣಿನಿಂದಲೂ ತಯಾರಿಸಿ ಪೂಜಿಸುವವರಿದ್ದಾರೆ. ಮರದಿಂದ ತಯಾರಿಸಿದರೆ ಪ್ರತಿವರ್ಷವೂ ತಯಾರಿಸುವ ತೊಂದರೆ ಇರುವುದಿಲ್ಲ. ಮರದಿಂದ ತಯಾರಿಸಿದ ಗೋಪುರಗಳ ಮೇಲೆ ಒಂದು ಕೊಂತಿಯನ್ನು ಇಟ್ಟಿರಬೇಕು. ಇವುಗಳ ಮುಂದೆ ಮಣ್ಣಿನಿಂದ ತಯಾರಾದ ಸಣ್ಣ ಸಣ್ಣ ಹೂಜೀ ಆಕಾರದ ಕೊಂತಿಗಳನ್ನು ಇಟ್ಟಿರಬೇಕು. ಇವುಗಳನ್ನು ಇಟ್ಟು ಗೌರೀ ಶಂಕರನನ್ನು ಆವಾಹಿಸಿ ಪೂಜಿಸಬೇಕು.

ಪ್ರತಿದಿನ ಸಂಜೆ ನೈವೇದ್ಯಕ್ಕಾಗಿ ತಿಂಡಿತಿನಿಸುಗಳನ್ನು ಮಾಡಿ, ಅದನ್ನು ಚಿಕ್ಕ ಚಿಕ್ಕ ಮಕ್ಕಳಿಗೆ ಕೊಡಬೇಕು. ಪ್ರತಿದಿವಸವೂ ಸಂಜೆ ಹಾಡು ಆರತಿಯಾಗಬೇಕು. ದೀಪದ ಆರತಿಯನ್ನು ಇಲ್ಲಿ ಎತ್ತಬಾರದು. ಕೊಬ್ಬರಿ ಸಕ್ಕರೆ, ಬೆಲ್ಲ ಕೊಬ್ಬರಿ, ಕಳ್ಳೆಹಿಟ್ಟು, ತುಪ್ಪ, ಸಕ್ಕರೆ ಇವುಗಳನ್ನು ತಟ್ಟೆಯಲ್ಲಿ ದೀಪದಾಕಾರ ಮಾಡಿ ಆರತಿಯನ್ನು ಎತ್ತಿ ಚಿಕ್ಕ ಮಕ್ಕಳಿಗೆ ಕೊಡುವುದು. ವಿವಾಹವಾದ ಮೇಲೆ ಮಂಗಳ ಗೌರಿಯು ವ್ರತವಿದ್ದಂತೆ ಮದುವೆಗೆ ಮುನ್ನ ಗೌರಿಯ ಅನುಗ್ರಹಕ್ಕಾಗಿ ಮಾಡುವ ವ್ರತವಿದು. ಸೀಗೆ ಪೂರ್ಣಿಮೆ ದಿನ ನದಿಯ ತೀರ, ಬಾವಿ, ಸರೋವರ ಇವುಗಳಲ್ಲಿ ಯಾವುದಾದರೊಂದು ಸ್ಥಳಕ್ಕೆ ವಾದ್ಯ ಸಹಿತವಾಗಿ ಸೀಗೆ ಗೌರಿಯನ್ನು ಕರೆದುಕೊಂಡು ಹೋಗಿ ಅವಲಕ್ಕಿ ಮೊಸರು ನಿವೇದಿಸಿ, ವಿಶೇಷ ಪೂಜೆಯನ್ನು ಮಾಡಿ, ಮುತ್ತೈದೆಯರಿಗೆ ಅವಲಕ್ಕಿ ಪ್ರಸಾದವನ್ನು ನೀಡಿ, ಆ ಮಣ್ಣಿನ ಚಿಕ್ಕ ಚಿಕ್ಕ

ಕೊಂತಿಗಳನ್ನು ನೀರಿನಲ್ಲಿ ವಿಸರ್ಜಿಸಬೇಕು. ಮರದ ಗೌರಿಯನ್ನು ನದಿಯಾದರೆ ಸ್ನಾನ ಮಾಡಿಸಿ ತರುವುದು.
end
***

#ಶೀಗಿ   #ಹುಣ್ಣಿಮೆ
🌺🌺🌺🌺🌺🌺

ಇತರ ಯಾವುದೇ ಸಂಪತ್ತು ಇರದಿದ್ದರೂ ಮನುಷ್ಯ ಬದುಕಬಲ್ಲ. ಆದರೆ ಹಸಿರು ಸಂಪತ್ತು ಇಲ್ಲದಿದ್ದರೆ ಈ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲಾರದು. ಪ್ರಕೃತಿಗೆ ವಿಮುಖರಾದರೆ ಭೂಮಂಡಲವೇ ಮರಳುಗಾಡು. ಅದಕ್ಕೇ ನಮ್ಮ ಪೂರ್ವಜರು ಎಲ್ಲಕ್ಕಿಂತ ಮೊದಲು ಪ್ರಕೃತಿಗೆ ಪ್ರಾಧಾನ್ಯತೆ ಕೊಟ್ಟಿದ್ದರು. ನಿಸರ್ಗದಿಂದಲೇ ಜಲ ಸಂಪತ್ತು, ಫಲ ಸಂಪತ್ತು, ಧಾನ್ಯ ಸಂಪತ್ತು, ಸಕಲ ಜೀವ ಸಂಪತ್ತು.

ಧಾನ್ಯ ಸಂಪತ್ತು ಎಂದರೆ ಬರೀ ಧಾನ್ಯವಲ್ಲ. ಅದು ಜೀವದ ಜೀವ. ಅನ್ನಬ್ರಹ್ಮ. ಜೀವಿಗಳ ಉಸಿರಿನ ಆಸರೆ. ಅಂಥ ಧಾನ್ಯಗಳನ್ನು ಪ್ರಕೃತಿಯ ಮಡಿಲಲ್ಲಿಬೆಳೆದು, ಸಂಭ್ರಮಿಸಿ ಭೂದೇವಿಗೆ ಕೃತಜ್ಞತೆಯನ್ನು ಸಲ್ಲಿಸುವ ಅಪೂರ್ವ ಘಳಿಗೆಯೇ ಶೀಗಿ ಹುಣ್ಣಿಮೆ.

ಮುಂಗಾರಿನ ಫಸಲು ರೈತನ ಮನೆ ತುಂಬುವ ಕಾಲವಿದು. ಜೋಳ, ಗೋವಿನ ಜೋಳ, ಸಜ್ಜೆ, ಹೆಸರು, ಸೂರ‍್ಯಕಾಂತಿ, ರಾಗಿ, ಭತ್ತ... ಹೀಗೆ ಅನೇಕ ಧಾನ್ಯಗಳ ರಾಶಿ ಮಾಡುವ ಕಾಲ. ರಾಶಿಯ ಸಂಭ್ರಮದೊಂದಿಗೆ ಚಳಿಗಾಲವನ್ನು ಸ್ವಾಗತಿಸುವ ಸಂಕ್ರಮಣದ ಕಾಲವೂ ಹೌದು. ಇದಕ್ಕೆ ಶೀಗಿ ಹುಣ್ಣಿಮೆಯ ಬೆಳದಿಂಗಳಿನ ಮೆರುಗು ಸೇರಿಕೊಂಡಾಗ ಅದು ನೀಡುವ ಸಂತೋಷವನ್ನು ಭೂ ತಾಯಿಯ ಮಡಿಲಿನಲ್ಲಿಯೇ ಸವಿಯಬೇಕು.
ಸಡಗರಕ್ಕೆ ಜತೆಯಾಗುವ ಸಂಪ್ರದಾಯ:
ಪ್ರಕೃತಿಯ ಆರಾಧನೆ ಹಾಗೂ ಸಂರಕ್ಷಣೆಯೇ ಶೀಗಿ ಹುಣ್ಣಿಮೆ ಆಚರಣೆಯ ಮೂಲ ಉದ್ದೇಶ. ಇದಕ್ಕೆ ಸಾಂಕೇತಿಕವಾಗಿ ಒಂದಿಷ್ಟು ಸಂಪ್ರದಾಯಗಳು, ಆಚರಣೆಗಳು ಜತೆಯಾಗುತ್ತವೆ. ರಾಶಿ ಮಾಡಿ ಧಾನ್ಯಗಳನ್ನು ಮನೆಗೆ ತುಂಬಿಕೊಳ್ಳುವ ತವಕದಲ್ಲಿರುವ ರೈತ ಕುಟುಂಬದವರು ಈ ವೇಳೆ ಸಡಗರದಿಂದಲೇ ಭೂದೇವಿಯ ಆರಾಧನೆಗೆ ಮುಂದಾಗುತ್ತಾರೆ.

ಮನೆಯಲ್ಲಿಹೋಳಿಗೆ, ಕಡಬು, ಹುಗ್ಗಿ, ಜೋಳದ ವಡೆ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಖಡಕ್‌ ರೊಟ್ಟಿ, ಚಪಾತಿ, ನಾನಾ ರೀತಿಯ ಪಲ್ಯ, ಕೆನೆ ಮೊಸರು, ಬೆಣ್ಣೆ, ತುಪ್ಪ, ಬಗೆ ಬಗೆಯ ಚಟ್ನಿಗಳು... ಹೀಗೆ ಭೂರಿ ಭೋಜನವೇ ತಯಾರಾಗಿರುತ್ತದೆ. ಇವೆಲ್ಲವನ್ನೂ ಕಟ್ಟಿಕೊಂಡು, ಸಿಂಗರಿಸಿದ ಎತ್ತುಗಳೊಂದಿಗೆ ಚಕ್ಕಡಿ ಹೂಡಿಕೊಂಡು ಹೊಲಕ್ಕೆ ಹೋಗುವಾಗಿನ ಖುಷಿ ಇನ್ನೆಲ್ಲಿಯೂ ಸಿಗದು. ಈ ವೇಳೆ ಹಿರಿಯರು, ಮಕ್ಕಳಾದಿಯಾಗಿ ಎಲ್ಲರೂ ಸಾಂಪ್ರದಾಯಿಕ ಬಣ್ಣ ಬಣ್ಣದ ಬಟ್ಟೆ ತೊಟ್ಟು ಮಿರುಗುವುದನ್ನು ನಿಂತು ನೋಡಬೇಕು. ಪುರುಷರು ದಡಿ ಧೋತಿ, ಪಟಗಾ, ಜುರುಕಿ ಪಾದರಕ್ಷೆ, ಕೈಯಲ್ಲಿಕಡಗ, ಕೊರಳಲ್ಲಿಚೈನು, ಬೆರಳಲ್ಲಿಉಂಗುರ ತೊಟ್ಟು ಮೀಸೆ ತಿರುವುತ್ತ ಹೊರಟರೆ, ಮಹಿಳೆಯರು ರೇಷ್ಮೆ ಸೀರೆ, ಬೋರಮಾಳ, ಟಿಕ್ಕಿ, ನತ್ತು, ಡಾಬು, ಝುಮುಕಿ, ಕಾಲ್ಗೆಜ್ಜೆ ಸೇರಿದಂತೆ ಸರ್ವಾಲಂಕಾರ ಭೂಷಿತೆಯರಾಗಿ ಹೊಲಕ್ಕೆ ಹೋಗುತ್ತಾರೆ.
ಅಲ್ಲಿಗೆ ಹೋದ ಮೇಲೆ ಭೂದೇವಿಯನ್ನು ಪೂಜೆ ಮಾಡುವುದು ಮುಖ್ಯ ಘಟ್ಟ. ಸಾಂಪ್ರದಾಯಿಕವಾಗಿ ಭಕ್ತಿ, ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ಮನೆಯಿಂದ ತಂದ ನಾನಾ ಖಾದ್ಯಗಳನ್ನು ನೈವೇದ್ಯ ಮಾಡುತ್ತಾರೆ. ನಂತರ ಆ ನೈವೇದ್ಯವನ್ನು ಹೊಲದ ಎಲ್ಲದಿಕ್ಕುಗಳಲ್ಲಿಯೂ ಚೆಲ್ಲುತ್ತಾರೆ. ಅದಕ್ಕೆ 'ಚರಗ ಚೆಲ್ಲುವುದು' ಎಂಬ ಹೆಸರು. ಇದಾದ ಮೇಲೆ ಎಲ್ಲರೂ ಸೇರಿ ಒಟ್ಟಾಗಿ ಹಬ್ಬದೂಟವನ್ನು ಮಾಡಿ, ಇಡೀ ದಿನ ಪ್ರಕೃತಿಯ ಮಡಿಲಲ್ಲಿಯೇ ನಲಿದು ಸಂಜೆ ಮನೆಗೆ ಮರಳುತ್ತಾರೆ.

ಶೀಗಿ ಹುಣ್ಣಿಮೆಯ ಸಂದರ್ಭದಲ್ಲಿಹೊಸ ಬಟ್ಟೆ ತೊಟ್ಟು, ಹಬ್ಬದೂಟ ಮಾಡಿದರೆ ಸಾಲದು. ಈ ಆಚರಣೆಯ ಹಿಂದಿನ ಉದ್ದೇಶವೇನು, ಅರ್ಥವೇನು, ಮಹತ್ವವೇನು? ಅವುಗಳನ್ನು ಆಚರಣೆಗೆ ತರುವುದು ಹೇಗೆ ಎಂಬುದನ್ನು ತಿಳಿದುಕೊಂಡರೆ ಆಚರಣೆಗೂ ಒಂದು ರೀತಿಯ ಸಾರ್ಥಕತೆ.

ಅನ್ನವೇ ಜಗತ್ತಿಗೆ ಆಸರೆ. ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರಯೋಗಾಲಯದಲ್ಲಿಧಾನ್ಯಗಳನ್ನು ತಯಾರಿಸಲು ಆಗದು. ಅದಕ್ಕೆ ಭೂಮಿ, ನೀರು, ಸ್ವಚ್ಛ ಗಾಳಿ ಬೇಕು. ಇದಕ್ಕಾಗಿ ಇತ್ತೀಚೆಗೆ 'ಪ್ರಕೃತಿ ಉಳಿಸಿ', 'ಕಾವೇರಿ ಕೂಗು' ಎಂಬಂತಹ ಅನೇಕ ರೀತಿಯ ಪ್ರಕೃತಿ ರಕ್ಷಣೆಯ ಅಭಿಯಾನಗಳನ್ನು ನೋಡಿದ್ದೇವೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ನಿಸರ್ಗದ ಮಹತ್ವವನ್ನು ಅರಿತಿದ್ದರು. ಆದ್ದರಿಂದಲೇ ಶೀಗಿ ಹುಣ್ಣಿಮೆಯಂಥ ಪ್ರಕೃತಿ ಆರಾಧನೆಯ ಅನೇಕ ಹಬ್ಬಗಳು ನಮ್ಮ ಸಂಪ್ರದಾಯದಲ್ಲಿಧಾರಾಳವಾಗಿವೆ

ಜಾಗತಿಕ ತಾಪಮಾನ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ, ಹಿಂದೆಂದಿಗಿಂತಲೂ ಈಗ ನಮ್ಮ ಸಂಸ್ಕೃತಿ, ಪರಂಪರೆ, ಹಬ್ಬ ಹರಿದಿನಗಳ ಕುರಿತು ಜಾಗೃತಿ ಹಾಗೂ ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯ ಇದೆ. ಏಕೆಂದರೆ ಅವೆಲ್ಲವೂ ಪ್ರಕೃತಿಯನ್ನೇ ಆಧರಿಸಿ, ಆರಾಧಿಸಿ, ಅದನ್ನು ಸಂರಕ್ಷಿಸುವ ಉದ್ದೇಶಗಳನ್ನೇ ಹೊಂದಿವೆ. ಭೂಮಿ ಬೆಂಗಾಡಾಗುವ ಮೊದಲು ಈಗಿನ ಪೀಳಿಗೆಗೆ ಪ್ರಕೃತಿ ರಕ್ಷಣೆಯ ಬಗ್ಗೆ ತಿಳಿಹೇಳಬೇಕಿದೆ.

ಹಸಿರು ಸಿರಿಯೆಂಬುದು ಜೀವ ಜಗದ ತೊಟ್ಟಿಲು. ಅನ್ನ , ನೀರು, ಗಾಳಿಯ ಮೂಲವೇ ಈ ಪ್ರಕೃತಿ. ಅದು ಜೀವಕ್ಕೆ ಜೀವ ತುಂಬುತ್ತದೆ. ಮನಸ್ಸಿಗೆ ಸಂತೋಷ ಕೊಡುತ್ತದೆ. ಹಸಿರು ಸಂಪತ್ತು ತುಂಬಿ ತುಳುಕುತ್ತಿದ್ದರೆ ಯಾರೂ ಬಡವರಾಗಿ ಉಳಿಯುವುದಿಲ್ಲ. ನಿಸರ್ಗದಲ್ಲಿಯೇ ಸಂಪತ್ತು, ಸಿರಿ, ಉಸಿರನ್ನು ಕಂಡಾಗ ಜಗತ್ತಿಗೇ ಶ್ರೀಮಂತಿಕೆ.

ಶೀಗಿ ಹುಣ್ಣಿಮೆ ಕೂಡ ಈ ಭೂ ಸಂಪತ್ತು, ಜಲ ಸಂಪತ್ತು, ಧಾನ್ಯ ಸಂಪತ್ತು ಹಾಗೂ ಕೃತಜ್ಞತಾ ಭಾವ ಸಂಪತ್ತಿನ ಮಹತ್ವ ಹೇಳುವ ಉದ್ದೇಶದ ಅಪೂರ್ವ ಆಚರಣೆ. ಇದರ ಜತೆ ನಿಸರ್ಗ ರಕ್ಷಣೆ ಬಗೆಗಿನ ಚಿಂತನೆಗೆ ಹಚ್ಚುವ ಸುಸಮಯ. ಈ ವೇಳೆ ಅಂಥದೊಂದು ಸಂರಕ್ಷಣೆಯ ಮಹಾಕಾರ್ಯ ಜಗತ್ತಿನಾದ್ಯಂತ ಅಕ್ಷರಶಃ ಕಾರ್ಯರೂಪಕ್ಕೆ ಬರಬೇಕಿದೆ. ಆಗಲೇ ಆಚರಣೆಗೊಂದು ಅರ್ಥ.

ಕೃತಜ್ಞತೆಯ ಸಂದೇಶ:
ಅನ್ನ ನೀಡಿ, ಇಡೀ ಜೀವ ಸಂಕುಲವನ್ನು ಪೋಷಿಸುತ್ತಿರುವ ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಸುಸಂದರ್ಭವೇ ಶೀಗಿ ಹುಣ್ಣಿಮೆ. 'ಜನ್ಮ ನೀಡಿದವರಿಗೆ, ಅನ್ನ ನೀಡಿದವರಿಗೆ, ಪೋಷಣೆ ಮಾಡಿದವರಿಗೆ, ಆಸರೆಯಾದವರಿಗೆ, ಉಪಕಾರ ಮಾಡಿದವರಿಗೆ ಕೃತಜ್ಞರಾಗಿ ಇರೋಣ' ಎಂಬ ಸಂದೇಶ ಸಾರುತ್ತದೆ ಈ ಆಚರಣೆ. ಹೀಗಾಗಿ ಸಕಲ ಜೀವಗಳ ಜೀವಸೆಲೆಯಾಗಿರುವ ಭೂಮಿಗೆ ಈ ವೇಳೆ ವಿಶೇಷವಾಗಿ ಪೂಜೆ, ನೈವೇದ್ಯ ಹಾಗೂ ಕೃತಜ್ಞತೆ ಸಲ್ಲಿಕೆಯಾಗುತ್ತದೆ.
***

ಶೀಗೆ #ಹುಣ್ಣಿಮೆ
🌺🌺🌺🌺🌺🌺
ಪ್ರಕೃತಿಯು ಚೇತನವಾದದ್ದು. ಅದರಲ್ಲಿ ಜೀವವಿದೆ. ಸೌಂದರ್ಯವಿದೆ. ಸಮೃದ್ದತೆಯಿದೆ. ಫಲವಿದೆ ಹೀಗಾಗಿ ಪ್ರಕೃತಿಯ ಸೌಂದರ್ಯವನ್ನು ಹೆಣ್ಣಿಗೆ ಹೋಲಿಸಲಾಗುತ್ತಿದೆ. ಹೆಣ್ಣು ಗರ್ಭಧರಿಸಿ, ಹೆತ್ತು, ಹೊತ್ತು, ಮಗುವಿನ ಪಾಲನೆ, ಪೋಷಣೆ, ರಕ್ಷಣೆ ಮಾಡಿದರೆ, ಭೂಮಿ ತಾಯಿ ತನ್ನಲ್ಲಿ ಬೆಳೆ ಬೆಳೆದು, ರೈತನಿಗೆ ನೀಡಿ ಜನತೆಯ ಹೊಟ್ಟೆ ತುಂಬಿಸುತ್ತಾಳೆ. ಹೀಗೆ ಹೆಣ್ಣು ಮತ್ತು ಭೂಮಿ ಎರಡರಲ್ಲಿಯೂ ಹೊರುವ, ಹೆರುವ ಸಮೃದ್ದತೆಯ ಗುಣಗಳನ್ನು, ಪಾಲನೆ ಮಾಡುವ ಮಮಕಾರ ಗುಣಗಳನ್ನು ಕಂಡಿರುವ ಒಕ್ಕಲು ಮಕ್ಕಳು ಒಂದರೊಂದಿಗೆ ಇನ್ನೊಂದನ್ನು ಸಮೀಕರಿಸಲು ಯತ್ನಿಸುತ್ತಾರೆ. ಹೆಣ್ಣಿನಂತೆ ಭೂಮಿಯ ಜೀವಕ್ರಿಯೆಯಲ್ಲಿಯೂ ಆಚರಣೆಗಳನ್ನು ಮಾಡಲು ಹಂಬಲಿಸುತ್ತಾರೆ.
ಶೀಗೆ ಹುಣ್ಣಿಮೆಯ ಹೊತ್ತಿಗೆ ಭೂಮಿ ಮುಂಗಾರು ಫಸಲಿನಿಂದಲೂ ಎಳ್ಳಮವಾಸೆಯ ಹೊತ್ತಿಗೆ ಹಿಂಗಾರಿನ ಫಸಲಿನಿಂದಲೂ ಕಾಳು ಕಟ್ಟಿಕೊಂಡು ನಿಂತಿರುತ್ತವೆ, ಗರ್ಭಿಣಿ ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಮುಂದೆ ಮಗುವನ್ನು ಹೆರುವ, ಮನೆ ತುಂಬುವ ನಿರೀಕ್ಷೆಯಲ್ಲಿರುವಂತೆ ಇಲ್ಲಿ ಭೂಮಿ ಕೂಡಾ ಬೆಳೆಗಳನ್ನು ಹೊತ್ತು, ಮಣ್ಣಿನ ಮಕ್ಕಳಿಗೆ ಫಸಲು ಕೊಟ್ಟು ಅವನ ಕಣಜ ತುಂಬುವ ಕಾತುರದಲ್ಲಿರುತ್ತಾಳೆ. ಹೀಗಾಗಿ ಗರ್ಭಿಣಿ ಹೆಂಗಸನ್ನು, ಭೂ ತಾಯಿಯನ್ನು ಒಂದೇ ದೃಷ್ಠಿಕೋನದಿಂದ ನೋಡಬಯಸುವ ಮಣ್ಣಿನ ಮಕ್ಕಳು ಗರ್ಭಿಣಿಗೆ ಸೀಮಂತ ಕಾರ್ಯ ಮಾಡಿದಂತೆ ಭೂ ತಾಯಿಗೂ ಸೀಮಂತ ಮಾಡಿ ಸಂಭ್ರಮಿಸುತ್ತರೆ. ಗರ್ಭಿಣಿ ಹೆಣ್ಣಿನಲ್ಲಿ ಹೇಗೆ ಬಯಕೆಗಳಿರುತ್ತವೆಯೋ ಹಾಗೆಯೇ ಭೂಮಿ ತಾಯಿಗೂ ಬಯಕೆಗಳಿರುತ್ತವೆ ಎಂಬುದು ಅವರ ಗಟ್ಟಿಯಾದ ನಂಬುಗೆ, ಅವರ ದೃಷ್ಠಿಯಲ್ಲಿ ಬಸಿರು ಹೆಂಗಸು, ಕಾಳುಕಟ್ಟಲು ಸಿದ್ದವಾಗಿನಿಂತ ಭೂಮಿ ಎರಡು ಒಂದೇ.
ವಿವಿಧ ಬಗೆಯ ಅಡಿಗೆಗಳನ್ನು ಮಾಡಿ, ಬಂಧು ಬಾಂಧವರೊಡನೆ ಚಕ್ಕಡಿ ಕಟ್ಟಿಕೊಂಡು ಹೋಗಿ ಭೂದೇವಿಯನ್ನು ಪೂಜಿಸಿ ಆಕೆಗೆ ಎಡೆ ತೋರಿಸಿ, ಹೊಲದ ತುಂಬಾ ‘ಚರಗ’ ಚಲ್ಲುತ್ತಾರೆ. ತಾವೂ ಉಂಡುಟ್ಟು ನಲಿಯುತ್ತಾರೆ. ಚರಗ ಚೆಲ್ಲುವದೆಂದರೆ ಅದು ಕಾಟಾಚಾರದ ಆಚರಣೆಯಲ್ಲ. ವಾರಗಟ್ಟಲೇ ಮನೆಯಲ್ಲಿ ಅದಕ್ಕೆ ಸಿದ್ಧತೆ ನಡೆದಿರುತ್ತದೆ. ಎಳ್ಳು ಹಚ್ಚಿ ಮಾಡಿದ ಸಜ್ಜಿರೊಟ್ಟಿ, ಹುರಿಯಕ್ಕಿ ಕರ್ಚಿಕಾಯಿ. ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಗುರೆಳ್ಲ ಹಿಂಡಿ, ಅಗಸೆ ಹಿಂಡಿ ಇವೆಲ್ಲವುಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟಿರುತ್ತಾರೆ.
ಹಬ್ಬದ ದಿನ ಹೋಳಿಗೆ ಹುಗ್ಗಿ, ಕಡುಬು, ಕಾಯಿಪಲ್ಲೆ ಅನ್ನ, ಸಾರು, ಸಜ್ಜೆ ಕಡುಬು ತಯರಿಸುತ್ತಾರೆ. ಪುಂಡಿಪಲ್ಲೆ, ಚವಳಿಕಾಯಿ, ಕುಂಬಳಕಾಯಿ, ಎಣ್ಣೆಗಾಯಿ (ಬದನೆ ಕಾಯಿ), ಎಲ್ಲ ಕಾಯಿಪಲ್ಲೆಗಳು ನೈವೇದ್ಯಕ್ಕೆ ಇರಲೇಬೇಕು. (ಎಲ್ಲ ತರಕಾರಿಗಳನ್ನು ಸೇರಿಸಿ ಒಂದೇ ಪಲ್ಲೆ ಮಾಡುತ್ತದ್ದಾರೆ ಮಾಡರ್ನ ಮುತ್ತೈದೆಯರು. ಎಡಿಪೂರ್ತೇಕ ಸಾಕ ಬಿಡ್ರೀ ಎನ್ನತ್ತಾರವರು)
ಹೊಸ ಸೀರೆ, ಕುಪ್ಪಸ, ಹೊಸ ದೋತರ ರುಮಾಲುಗಳನ್ನು ತೊಟ್ಟು ಮೈತುಂಬಾ ಆಭರಣಗಳನ್ನು ಹಾಕಿಕೊಂಡು ಮಕ್ಕಳು ಮರಿಯೊಂದಿಗೆ, ಸವಾರಿ ಬಂಡಿಯಲ್ಲಿ ಚರಗ ಚಲ್ಲಲು ಹೊರಟ ಪರಿಹಾರವನ್ನು ನೋಡುವುದೇ ಒಂದು ಸೊಗಸು. ಎತ್ತುಗಳಿಗೆ ಜೂಲು, ಗೆಜ್ಜೆಸರ, ಚಕ್ಕಡಿಯಲ್ಲಿ ಕುಳಿತವರಿಗೆ ಬಿಸಿಲು ಹತ್ತದಂತೆ ಮೇಲೆ ಸವಾರಿ, ಆತು ಕುಳಿತು ಕೊಳ್ಳಲು ಮೆತ್ತನೆಯ ಲೋಡು ಅಬ್ಬಬ್ಬಾ ಅದೆಲ್ಲಾ ವರ್ಣನಾತೀತವಾದದ್ದು.
ತಮಗೆ ಅನ್ನವಿಕ್ಕುವ ಭೂತಾಯಿಗೆ ಕೃತಜ್ಞತೆ ಸಲ್ಲಿಸಲು ಮಣ್ಣುನ ಮಕ್ಕಳು ಹಾಕಿಕೊಂಡ ಈ ಆಚರಣೆ ಎಷ್ಟೊಂದು ಶ್ರದ್ಧೆ, ನಂಬಿಕೆ, ಮುಗ್ಧ ಭಕ್ತಿಯಿಂದ ಕೂಡಿರುತ್ತದೆಂಬುದನ್ನು ಗ್ರಾಮೀಣ ಪ್ರದೇಶಕ್ಕೆ ಹಬ್ಬದ ಸಂದರ್ಭದಲ್ಲಿ ಭೆಟ್ಟಿ ನೀಡಿ ಅನುಭವಿಸಿದಾಗಲೇ ಅದರ ಸಂಪೂರ್ಣ ಸೊಗಸು ಗೊತ್ತಾಗುತ್ತದೆ.
ಹೊಲದಲ್ಲಿರುವ ಬನ್ನಿ ಗಿಡದ ಮುಂದೆ ಐದು ಕಲ್ಲುಗಳನ್ನಿಟ್ಟು ಬನ್ನಿಗಿದೊಂದಿಗೆ ಅವಿಗಳಿಗೂ ವಿಭೂತಿ, ಕುಂಕುಮ ಹಚ್ಚಿ ಊದು ಬತ್ತಿ ಬೆಳಗಿಸಿ, (ಬನ್ನಿಗಿಡದ ಮಗ್ಗುಲಲ್ಲಿ ಬೆಳೆದು ನಿಂತ ಪೈರಿಗೂ ಪೂಜೆ ಸಲ್ಲಿಸಿ) ಎಡೆ ತೋರಿಸುತ್ತಾರೆ. ಅದೇ ಎಡೆಯನ್ನು ಹೊಲದ ತುಂಬಾ ತಿರುಗಾಡಿ ಹುಲುಲ್ಲಿಗೋ, ಸಣಮಲ್ಲಿಗ್ಯೋ(ಭೂತಾಯಿ ಕೊಟ್ಟ ಒಂದೊಂದು ಹುಲ್ಲು ಕಡ್ಡಿಯನ್ನು ಕೃತಜ್ಞತಾಪೂರ್ವಕವಾಗಿ ಪ್ರಸಾದ ರೂಪದಲ್ಲಿ ಸ್ವಿಕರಿಸುವ ಒಕ್ಕಲಿಗರು ಅದಕ್ಕೆಂದೇ ಹುಲ್ಲು ಹುಲ್ಲಿಗೆ ಶರಣು ಮಲ್ಲಿಗೆ ಎಂದು ಹೇಳುವುದು ಅದೇ ನಮ್ಮ ಹಳ್ಳಿಗರ ಬಾಯಲ್ಲಿ ಹುಲುಲ್ಲಿಗೋ ಸಣವಲ್ಲಿಗ್ಯೋ ಆಗಿರಬಹುದಲ್ಲವೇ?
ಚರಗ ಚಲ್ಲಿದ ನಂತರ ಚಕ್ಕಡಿಯಲ್ಲಿ ತಂದಿರುವ ಚವ್ವಾಳಿ(ಗುಡಾರ, ಜಮಕಾನ) ಹಾಸಿ ಕುಟುಂಬ ಸಮೇತ ಭೊಜನ. ಬಂದ ಗೆಳೆಯರಿಗೆ ನೆಂಟಷ್ಟರಿಗೆ ಅವರು ಸಾಕು ಸಾಕು ಎನ್ನುತ್ತಿದ್ದರು ‘ನಾಚಬ್ಯಾಡ್ರೀ ಊಟಕ್ಕೆ ಕುಂತಾಗ ನಾಚ್ಯಾಡಬಾರದ್ರೀ’ ಎಂದು ಇವರು ಜುಲುಮೆ ಮಾಡುವುದು ‘ಇಲ್ರೀ ನಾಚ್ಯಾಡಾಕ ನಾವು ಬ್ಯಾರೇರವ್ರ ಮನಿಗೆ ಬಂದೀವೇನ್ರೀ, ಊಟದ ವಿಷಯದೊಳ್ಗ ನಾವು ನಾಚ್ಯಾಡುವುದಿಲ್ಲ ಬಿಡ್ರೀ, ನನ್ನ ಊಟನ ಇಷ್ಟ ನೋಡ್ರೀ’ ಎಂದು ಅವರು ಹೇಳುವುದೂ ನಡದೇ ಇರುತ್ತದೆ. ಊಟದ ನಂತರ ಮನೆಯಿಂದಲೇ ತಂದ ವೀಳ್ಯದೆಲೆ, ಅಡಿಕೆ, ಬಡೆಸೊಪು, ಯಾಲಕ್ಕಿ, ಲವಂಗ, ಮಿಶ್ರಿತ ತಾಂಬೂಲ ಸೇವನೆ ಮಾಡಿ, ಹೊಲದಲ್ಲಿ ತಿರುಗಾಡಿ ‘ಮುಂದಿನ ಬ್ಯಾಸಗೀಗಿ ಈ ಕರ್ಕಿ ಇರಬಾರ್ದು, ಆಚೆಕಡೆ ಒಡ್ಡು ಇನ್ನೆರಡು ಕಟ್ಟೆ ಮಣ್ಣು ಹಾಕಿ ಎತ್ತರ್ಸಬೇಕು. ಆತ ತುಗಲಿ ಗಿಡ ನೆಳ್ಳಗೊಂಡು ನಾಟೀನ ಏಳುವುದಿಲ್ಲ, ಅದನ್ನೊಂದು ತೆಗೆಸಿಬಿಡ್ರಿ’ ಎಂದು ಕಿರಿಯರಿಗೆ, ಆಳುಗಳಿಗೆ ಸೂಚಿಸಿ ಚಕ್ಕಡಿ ಹತ್ತಿ, ಮರಳಿ ಮನೆಗೆ. ಅಲ್ಲಿಗೆ ಒಕ್ಕಲಿಗರ ದೊಡ್ಡ ಹಬ್ಬಗಳಾದ ಸೀಗೆ ಹುಣ್ಣಿಮೆ, ಎಳ್ಳಮವಾಸ್ಯೆ ಚರಗಗಳಿಗೆ ಮಂಗಳ ಹಾಡುದಂತೆ. ನಂತರದ ಬನದ ಹುಣ್ಣಿಮೆ ದಿನ ಬೆಳೆದ ಎಲ್ಲಾ ತರಕಾರಿಗಳನ್ನು ಶಾಖಾಂಬರಿಗೆ ಎಡೆ ತೋರಿಸಿ ಊಟ ಮಾಡುತ್ತಾರೆ.
****

ಕೋಜಾಗರಿ ಹುಣ್ಣಿಮೆ..

ಇಂದು ಕೋಜಾಗಾರಿ ಹುಣ್ಣಿಮೆ...


ನಾಳೆಯಿಂದ ದೀಪಾವಳಿ ಹಬ್ಬದ ತಯ್ಯಾರಿ..
ಉತ್ತರ ಕರ್ನಾಟಕದ, ಅದೂ ಸ್ಪಲ್ಪ ಮಹಾರಾಷ್ಟ್ರ ರಾಜ್ಯದ ನೆರಳು ಬಿದ್ದ ಭಾಗದಲ್ಲಿ ಕೋಜಾಗರಿ ಹುಣ್ಣಿಮೆ ಆಚರಿಸುವದು  ಒಂದು ವಾಡಿಕೆ...

ಈ ಹುಣ್ಣಿಮೆ ರಾತ್ರಿಯಲ್ಲಿ  ಲಕ್ಷ್ಮೀ ದೇವಿ ಭೂಲೋಕದ ಪ್ರದಕ್ಷಿಣೆ ಮಾಡುತ್ತಾ ಯಾರು ಇಂದು ಜಾಗರಣೆ ಮಾಡ್ತಾ ಇದ್ದಾರೆ..
,ಕೋ..ಜಾಗ್ರತಿ...?
ಅಂದರೆ ಯಾರು ನನ್ನ ಆಗಮನದ ಸಲುವಾಗಿ ಜಾಗರಣೆ ಮಾಡ್ತಾ ಇದ್ದಾರೆ ಎಂದು ನೋಡುತ್ತಾಳೆ ಅಂತೆ..
ಅದಕ್ಕಾಗಿ ಅವಳನ್ನು ಸ್ವಾಗತಿಸಲು ಇಂದು ರಾತ್ರಿ ಜಾಗರಣೆ ಮಾಡುವ ಒಂದು ಹುಣ್ಣಿಮೆ... ಕೊಜಾಗರಿ ಹುಣ್ಣಿಮೆ..
ಇಂದು ರಾತ್ರಿ ಚಂದ್ರನು ಭೂಮಿಗೆ ಬಹಳ ಹತ್ತಿರ ವಾಗಿ ಬಂದು ಹೋಗುತ್ತಾನೆ..ಅದರಿಂದ ಬೆಳದಿಂಗಳು ಸ್ಪಲ್ಪ ಜಾಸ್ತಿನೇ ಇಂದು.

ಚಂದ್ರನ ಕಿರಣಗಳು  ಹಾಲಿನಲ್ಲಿ ಬಿದ್ದು ಆ ಹಾಲಿನಿಂದ ಲಕ್ಷ್ಮಿ ದೇವಿಗೆ     invite ಮಾಡುವ ಒಂದು ತರಹದ ಹಬ್ಬ... ಕೋಜಾಗರಿ ಹುಣ್ಣಿಮೆ..
ಹಾಲನ್ನು ಚೆನ್ನಾಗಿ ಕಾಯಿಸಿ, ಅದರಲ್ಲಿ ಏಲಕ್ಕಿ, ಬಾದಾಮು, ಪಿಸ್ತಾ,  ಸಕ್ಕರೆ  ಹಾಕಿ ಚಂದ್ರನಿಗೆ ನೈವೇದ್ಯ ತೋರಿಸಿ ಮನೆಯ ಎಲ್ಲ ಜನರು, ತಮ್ಮ ಬಂಧು ಬಳಗ, ಮತ್ತು ಮಿತ್ರರೊಂದಿಗೆ ಮನೆಯ terrace ಮೇಲೆ ಕುಳಿತು , ಈ ಹಾಲನ್ನು ಅತೀ ಪ್ರೀತಿಯಿಂದ ಸ್ವೀಕರಿಸುತ್ತಾರೆ..
ಕೆಲ ಮಹಿಳೆಯರು, ನೃತ್ಯ ಮಾಡುತ್ತಾರೆ, ಕೆಲವರು ಹಾಡು ಹಾಡುತ್ತಾರೆ , ಹೀಗೆಯೇ ಈ ಕಾರ್ಯಕ್ರಮ ಮಧ್ಯ ರಾತ್ರಿಯ ವರೆಗೂ ನಡೆಯುತ್ತದೆ..
ನಾಳೆಯಿಂದ officially ದೀಪಾವಳಿಯ ತಯ್ಯಾರಿ ಶುರು..

ಹಿಂದೆ.. ಈಗಿನ ತರಹ T V, mobile ಇರಲಿಲ್ಲ.. ಎಲ್ಲರೂ ಸೇರಿ ಪಗಡೆ ಆಟ ಆಡುತ್ತಿದ್ದರು . ಈ ಪಗಡೆ ಆಟ.. ಕೇವಲ.. ಕೇವಲ ದೀಪಾವಳಿ ಹಬ್ಬದ ದಿನಗಳಲ್ಲಿ ಮಾತ್ರ ಕಾಣುತಿತ್ತು...

ಹಾಲನ್ನು ಮಂದ  ಬೆಂಕಿಯ ಮೇಲೆ ಕಾಯಿಸುತ್ತಾರೆ.. ಹಾಲಿನಲ್ಲಿ ಯ ನೀರು ಆವಿಯಾಗಿ ಮೇಲೆ ಹೋಗುತ್ತದೆ.. 
ಹಾಗೆಯೇ ಇಂದು ನಮ್ಮ ಮನದಲ್ಲಿದ್ದ  ಕೆಲವು ನಕಾರಾತ್ಮಕ ವಿಚಾರಗಳೂ ಆ ನೀರಿನ ಆವಿಯಂತೆ, ಗಾಳಿಯಲ್ಲಿ ತೇಲಿ ಹೋಗಲಿ..

ಹಾಗೆಯೇ  ಮನಸ್ಸಿನಲ್ಲಿ  ಜಮಾ ಆಗಿದ್ದ ಸಂಸ್ಕಾರದ ಕೆನೆ  ಕರಗಿಸಿ, ಅದರೊಳಗೆ  ಸಂಬಂಧಗಳ   ವಿಲಾಯಚಿ, ಮತ್ತು  ನಮ್ಮ ತನದ ಕೇಶರ  ಹಾಕಬೇಕು.. ಹಾಗೆಯೇ ವಾತ್ಸಲ್ಯದ ಸಕ್ಕರೆ ಸೇರಿಸಲು  ಹೃದಯಕ್ಕೆ ಋಣಾನುಬಂಧ  ಎಂಬ ಒಳ್ಳೆಯ ಬಣ್ಣ ಬರುತ್ತದೆ..
ಮನಸ್ಸಿನ ತುಂಬಾ ವಿಶ್ವಾಸದ  ಚಂದ್ರನ ಸ್ಪರ್ಶ ಆಯಿತೆಂದರೆ , ಕೋಜಾಗಿರಿ ಹುಣ್ಣಿಮೆ ಆಚರಿಸುದಂತೆ ಆಯಿತು...
***

 


ಕೋಜಾಗರಿ_ಹುಣ್ಣಿಮೆ (ಶರದ ಪೂರ್ಣಿಮೆ)
ಈ ದಿನವೇ ಶ್ರೀಕೃಷ್ಣನು ವ್ರಜಮಂಡಲದಲ್ಲಿ ರಾಸಕ್ರೀಡೆಯನ್ನಾಡಿದನೆಂದು ಶ್ರೀಮದ್‌ಭಾಗವತದಲ್ಲಿ ಹೇಳಲಾಗಿದೆ. 
ಮಹತ್ವ 

 ಈ ದಿನ ಚಂದ್ರನು ಭೂಮಿಗೆ ಅತ್ಯಂತ ಸಮೀಪ ಬಂದಿರುತ್ತಾನೆ, ಆದುದರಿಂದ ಅವನು ದೊಡ್ಡದಾಗಿ ಕಾಣಿಸುತ್ತಾನೆ. ಮೂಲ ಚಂದ್ರತತ್ತ್ವದ ಅಂದರೆ, ‘ಚಂದ್ರಮ’ನನ್ನು ಪ್ರತಿನಿಧಿಸುವ ಮತ್ತು ನಮಗೆ ಕಾಣಿಸುವ ಚಂದ್ರನು, ‘ಚಂದ್ರಮ’ನಂತೆಯೇ ಶೀತಲ ಹಾಗೂ ಆಹ್ಲಾದದಾಯಕವಾಗಿದ್ದಾನೆ. 

ಸಾಧಕರು ಚಂದ್ರನ ಶೀತಲತೆಯನ್ನು ಈಶ್ವರನ ಅವತಾರಗಳಿಂದ ಅನುಭವಿಸಬಲ್ಲರು. ಆದುದರಿಂದಲೇ ರಾಮಚಂದ್ರ, ಕೃಷ್ಣಚಂದ್ರ ಎನ್ನುವ ಹೆಸರುಗಳನ್ನು ರಾಮ-ಕೃಷ್ಣರಿಗೆ ಕೊಡಲಾಗಿದೆ. ಚಂದ್ರನ ಈ ಗುಣದಿಂದಲೇ ‘ನಕ್ಷತ್ರಾಣಾಮಹಂ ಶಶಿ’ ಅಂದರೆ ‘ನಕ್ಷತ್ರಗಳಲ್ಲಿ ನಾನು ಚಂದ್ರನಾಗಿದ್ದೇನೆ’ ಎಂದು ಭಗವಾನ ಶ್ರೀಕೃಷ್ಣನು ಶ್ರೀಮದ್‌ಭಗವದ್ಗೀತೆ ಯಲ್ಲಿ (೧೦:೨೧) ಹೇಳಿದ್ದಾನೆ.
 
 ಮಧ್ಯರಾತ್ರಿಯಲ್ಲಿ ಶ್ರೀ ಲಕ್ಷ್ಮೀಯು ಚಂದ್ರಮಂಡಲದಿಂದ ಭೂಮಂಡಲಕ್ಕೆ ಬಂದು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದಾರೆ?’, ಎಂದು ಕೇಳಿ ಎಚ್ಚರವಾಗಿರುವವರನ್ನು ಧನಧಾನ್ಯಗಳಿಂದ ಸಂತುಷ್ಟರನ್ನಾಗಿ ಮಾಡುತ್ತಾಳೆ. 

🌸🌸🌸🌸🌸🌸
ಕೋಜಾಗರ ವ್ರತ
🌸🌸🌸🌸🌸🌸

ಶ್ರೀಮಹಾಲಕ್ಷ್ಮಿ ಮಂತ್ರ-

ನಮಸ್ತೇ ಸರ್ವದೇವಾನಾಂ ವರದಾಸಿ ಹರಿಪ್ರಿಯೇ | 
ಯಾ ಗತಿಸ್ತ್ವತ್ ಪ್ರಪನ್ನಾನಾಂ ಸಾ ಮೇ ಭೂಯಾತ್ ತ್ವದರ್ಚನಾತ್ || 

ಶ್ರೀ ಇಂದ್ರಮಂತ್ರ- 
ಚತುರ್ದಂತ ಸಮಾರೂಢೋ ವಜ್ರಪಾಣೀ ಪುರಂದರಃ |ಶಚಿಪತಿಶ್ಚ ಧಾತವ್ಯೋ ನಾನಾಭರಣ ಭೂಷಿತಃ||

ಕೋಜಾಗರಿ ವ್ರತ ಎಂದರೇನು? 

ಹಾಲು ಚೆಲ್ಲಿದಂತಹ ಬೆಳದಿಂಗಳು. ಆಕಾಶ ತಂಬ ನಕ್ಷತ್ರ ರಾಶಿ. ನಡುವೆ ಬೆಳ್ಳಿತಟ್ಟೆಯಂತೆ ಹೊಳೆವ ಶರತ್ ಚಂದಿರ. ಸುಮನೋಹರ ವಾತಾವರಣದಲ್ಲಿ ಶ್ರೀಶಂಕರ-ಪಾರ್ವತಿಯರು  ಪುತ್ರನಾದ ಕಾರ್ತಿಕೇಯನೊಂದಿಗೆ ಭೂಲೋಕಕ್ಕೆ ಬರುವ ದಿನ ಶೀಗಿ ಹುಣ್ಣಿಮೆ. 

ಇಂದು ಯಾರು ಉಪವಾಸ ಮತ್ತು ರಾತ್ರಿ ಜಾಗರಣೆ ಮಾಡಿ ವ್ರತ ಆಚರಿಸುವರೋ ಅವರಿಗೆ ಶ್ರೀಗೌರಿ ಶ್ರೀಮಹಾಲಕ್ಷ್ಮೀ ದೇವಿಯರು ಸಕಲ ಸೌಖ್ಯವನ್ನು ಕರುಣಿಸುತ್ತಾರೆ. 

ಯಾರು ರಾತ್ರಿ ಜಾಗರಣೆ ಮಾಡಿ ಶಾರದೀಯ ಪೂರ್ಣಚಂದ್ರ ದರ್ಶನ ಮಾಡುತ್ತಾರೆ ಎಂದು ದೇವಿ ನೋಡುತ್ತಾಳೆ. ಆದ್ದರಿಂದ ಈ ವ್ರತ "ಕೋ-ಜಾಗರ".

ಇದು ಇಂದ್ರ-ಇಂದ್ರಾಣಿಯ ವಿಶೇಷ ಪೂಜೆ ಇರುವ ಈ ವ್ರತವನ್ನು ನಿಷ್ಠೆಯಿಂದ ಮಾಡಿದರೆ ಇಷ್ಟ ಫಲ ಲಭಿಸುವದು. ಕಾರ್ತಿಕೇಯ ಪೂಜೆಯ ಮಹತ್ವವೂ ಇರುವದರಿಂದ  ಕುಮಾರ-ಕೌಮುದಿ  ಪೂರ್ಣಿಮಾ ಎಂದೂ ಕರೆಯುತ್ತಾರೆ.
 
ವಲಿತನ ಕಥೆ: 
ಈ ವ್ರತಾಚರಣೆ ಕುರಿತು ಸನತ್ಕುಮಾರ ಸಂಹಿತೆಯಲ್ಲಿ ವಾಲಕಿಲ್ಹ ಋಷಿಗಳು ಒಂದು ದೃಷ್ಟಾಂತದ ಮೂಲಕ ಕೋಜಾಗೌರಿ ಮಹತ್ವ ಹೇಳುತ್ತಾರೆ.
ಮಗಧ ದೇಶದಲ್ಲಿ (ಈಗಿನ ಬಂಗಾಲ) ವಲಿತನೆಂಬ ಬಡ ಬ್ರಾಹ್ಮಣನಿರುತ್ತಾನೆ. 
ಆತನಿಗೆ ಸಾಕಷ್ಟು ವಿದ್ಯೆಯಿದ್ದರೂ ಬಡತನವಿತ್ತು. ಇದೇ ಕಾರಣಕ್ಕೆ ಆತನ ಹೆಂಡತಿ ಅವನೊಂದಿಗೆ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳವಾಡುತ್ತಿದ್ದಳು. ಒಮ್ಮೆ ಅವಳು ಸಿಟ್ಟಿನ ಭರದಲ್ಲಿ ಪಿತೃಶ್ರಾದ್ಧವಿದ್ದಾಗ ಪಿಂಡಕ್ಕೆ ಸಮರ್ಪಿಸಬೇಕಾದ ಅನ್ನವನ್ನು ಗಂಗಾನದಿಯ ಸಮೀಪದಲ್ಲಿರುವ ತಿಪ್ಪೆಗೆ ಎಸೆದು ಬಿಡುತ್ತಾಳೆ. 
ಇದರಿಂದ ಮನನೊಂದ ವಲಿತ ಮನೆಬಿಟ್ಟು ಹೋಗುತ್ತಾನೆ. ಅಡವಿಯಲ್ಲಿ ಆತನಿಗೆ ನಾಗಕನ್ನಿಕೆಯರು ಭೆಟ್ಟಿಯಾಗುತ್ತಾರೆ. ಅವರು ಕೋಜಾಗರಿ ವ್ರತ ಆಚರಿಸುತ್ತಿರುತ್ತಾರೆ. ರಾತ್ರಿಯೆಲ್ಲ ಜಾಗರಣೆ ಮಾಡುವುದಕ್ಕಾಗಿ ಅವರು ಆಟವಾಡಲು ಆರಂಭಿಸುತ್ತಾರೆ. 

ಆಗ ಆಕಸ್ಮಿಕವಾಗಿ ಅವರು ವಲಿತನನ್ನು ನೋಡಿ ತಮ್ಮೊಂದಿಗೆ ಆಟಕ್ಕೆ ಕರೆಯುತ್ತಾರೆ. ಅಂದು ಅಶ್ವಿನ ಪೌರ್ಣಿಮೆ, ಕೋಜಾಗರಿ ವ್ರತ ಇರುವದರಿಂದ ಶ್ರೀಮಹಾಲಕ್ಷ್ಮೀ ದೇವಿಯು ಆಕಾಶಮಾರ್ಗವಾಗಿ ಸಂಚಾರದಲ್ಲಿರುತ್ತಾಳೆ. 

ವಲಿತ ತನಗೆ ತಿಳಿಯದೆ ಅಂದು ಜಾಗರಣೆ ಮಾಡುತ್ತಾನೆ. ಅದರ ಫಲವಾಗಿ ವಲಿತ ಸುರಸುಂದರನಾಗಿ ಮನ್ಮಥನಂತೆ ಕಂಗೊಳಿಸುತ್ತಾನೆ. ನಾಗ ಕನ್ನಿಕೆಯರು ಅವನಿಗೆ ಒಲಿಯುತ್ತಾರೆ. ಅಲ್ಲದೇ ಬಹು ಸಂಪತ್ತನ್ನು ಅವನಿಗೆ ಕೊಡುತ್ತಾರೆ. ಮುಂದೆ ವಲಿತ ಪತ್ನಿ ಸಹಿತನಾಗಿ ಸಂತೋಷದಿಂದ ವ್ರತವನ್ನು ಆಚರಿಸುತ್ತಾ ಬಹುಕಾಲ ಬಾಳುತ್ತಾನೆ. 

ಉತ್ತರ ಕರ್ನಾಟಕದಲ್ಲಿ ಶೀಗಿಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವಿದೆ. ಇಂದ್ರ-ಇಂದ್ರಾಣಿ, ಶಿವ-ಪಾರ್ವತಿ, ಶ್ರೀಮಹಾಲಕ್ಷ್ಮಿ ಸಹಿತ ಶ್ರೀಕರ ಪೂಜೆ ಮಾಡುತ್ತಾರೆ. ದೇವರ ಭಜನೆ, ಸ್ತೋತ್ರಗಳಿಂದ ವ್ರತ ಆಚರಿಸುತ್ತಾರೆ. ಪಗಡೆ ಆಡುತ್ತಾರೆ.

ರಾತ್ರಿಯ ವೇಳೆ ಮನೆಯ ಹೊರಗೆ ದೊಡ್ಡಪಾತ್ರೆಯಲ್ಲಿ ಹಾಲುಇಟ್ಟು ಆ ಹಾಲಿನಲ್ಲಿ ಚಂದ್ರಬಿಂಬ ದರ್ಶನ ಮಾಡಿ, ಚಂದ್ರಪ್ರಾರ್ಥನೆ ಯೊಂದಿಗೆ ದೇವರಿಗೆ ಹಾಲನ್ನು ನೈವೇದ್ಯ ಮಾಡುತ್ತಾರೆ.

ಗುಜರಾತದಲ್ಲಿ ಶರದ್ ಪೌರ್ಣಿಮೆಯಂದು ಗರ್ಬಾನೃತ್ಯ ಮಾಡುತ್ತ ಜಾಗರಣೆ ಮಾಡುವುದು ವಾಡಿಕೆ.

ಬಂಗಾಲದಲ್ಲಿ ಇದನ್ನು `ಲೋಕ್ಹಿ ಪೂಜೋ' ಎನ್ನುತ್ತಾರೆ. ಅಂದು ಶ್ರೀಮಹಾಲಕ್ಷ್ಮೀ ದೇವಿಗೆ ಅನೇಕ ತರಹದ ತಿಂಡಿ-ತಿನಿಸುಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
 
ಮಿಥಿಲಾ ಪ್ರದೇಶದಲ್ಲಿ ಇದನ್ನು ಕೋಜಾಗರ ವ್ರತ ಎಂದೇ ಕರೆಯುವರು. ಅಂದು ಮನೆಯನ್ನು ಚೆನ್ನಾಗಿ ಅಲಂಕರಿಸಿ. ಅಂಗಳವನ್ನು ತಳಿರು ತೋರಣಗಳಿಂದ ಸಿಂಗರಿಸಿ ಅಕ್ಕಿ ಹಿಟ್ಟಿನ ಪೇಸ್ಟಿನಿಂದ ರಂಗವಲ್ಲಿ ಇಟ್ಟು ಎಲ್ಲ ದೇವ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸುವರು. 

ದೇವರಿಗೆ ಪ್ರಾರ್ಥನೆ ಸಲ್ಲಿಸಿ ಖೀರು, ಪಾಯಸ, ಬೆಣ್ಣೆ, ತಾಂಬೂಲ ಸಹಿತ ನೈವೇದ್ಯ ಅರ್ಪಿಸುವರು. ರಾತ್ರಿಯೆಲ್ಲ ದೇವರ ವಿಗ್ರಹಗಳು ಅಲ್ಲಿಯೇ ಇರುತ್ತವೆ. ಅವರು ಶರತ್ ಪೌರ್ಣಿಮೆಯನ್ನು `ಅಮೃತ ಬರ್ಖಾ' ಎನ್ನುತ್ತಾರೆ.

ಮದುವೆಯಾದ ಮೊದಲವರ್ಷ ನವದಂಪತಿಗಳು ವ್ರತವನ್ನು ಆಚರಿಸಿ ವರವನ್ನು ಬೇಡುವರು. ಹೆಣ್ಣಿನ ಮನೆಯನ್ನು ಅಕ್ಕಿಹಿಟ್ಟಿನ ಪೇಸ್ಟಿನಿಂದ ಸಿಂಗರಿಸಿ ಯಥಾವತ್ತಾಗಿ ದೇವರನ್ನು ಪೂಜಿಸುವರು. ರಾತ್ರಿಹೊತ್ತು ಆಟವಾಡುತ್ತ ಜಾಗರಣೆ ಮಾಡುತ್ತಾರೆ. ಸಿಹಿ ತಾಂಬೂಲ ಹಾಗೂ ಬೆಣ್ಣೆಯನ್ನು ಸವಿಯುತ್ತಾರೆ. 
ಅಳಿಯನಿಗೆ ಹಣ್ಣು ಹಂಪಲು, ಜನಿವಾರ, ಲವಂಗ, ಯಾಲಕ್ಕಿ, ಬೆಳ್ಳಿ ನಾಣ್ಯ, ಬೆಳ್ಳಿ ಆಮೆ, ಮೀನು, ಮಿಥಿಲಾ ಪೇಂಟಿಂಗ್ಸ್, ಅಕ್ಕಿ ಮುಂತಾದ ಸಾಮಗ್ರಿಗಳನ್ನು ಒಂದು ದೊಡ್ಡ ಬುಟ್ಟಿಯಲ್ಲಿ ತುಂಬಿ ಕೊಡುತ್ತಾರೆ. ಅಳಿಯ ತನ್ನ ಪತ್ನಿಯ ಎಲ್ಲ ಸಂಬಂಧಿಗಳಿಗೆ  ಹೊಸಬಟ್ಟೆ ಇತ್ಯಾದಿ ಉಡುಗೊರೆ ಕೊಡುತ್ತಾನೆ. ಇದು ಒಂದು ರೀತಿ ಅಳಿಯತನ ಇದ್ದಂತೆ. 

ಈ ವ್ರತದ ಕುರಿತು ಮಿಥಿಲೆಯಲ್ಲಿ ಒಂದು ಕಥೆ ಜನಜನಿತವಾಗಿದೆ. ಶ್ರೀಲಕ್ಷ್ಮೀ-ಅಲಕ್ಷ್ಮೀ ಇಬ್ಬರೂ ಅಕ್ಕತಂಗಿಯರು. ಶ್ರೀಲಕ್ಷ್ಮೀಗೆ ಸಿಹಿಖಾದ್ಯ ಇಷ್ಟ(ಸತ್ವ). ಅವಳು  ಅದೃಷ್ಟದ  ಗುರುತು
ಅಲಕ್ಷ್ಮೀಗೆ ಮಸಾಲೆ, ಖಾರ, ಉಪ್ಪು (ರಾಜಸ) ಹೆಚ್ಚಾಗಿ ಬೇಕು. ಅವಳು ಅನಿಷ್ಟದ ಪ್ರತೀಕ. ಅದಕ್ಕೆ ರಾತ್ರಿ ಮಸಾಲೆ ತಿನಿಸುಗಳನ್ನುಗಳನ್ನು ಹೊರಗೆ ಇಡುತ್ತಾರೆ.  ಸಿಹಿತಿನಿಸನ್ನು ಮನೆಯ ಒಳಗೆ ಇಡುವರು. 

ದರಿದ್ರ ಲಕ್ಷ್ಮೀ ಹೊರಗಿರುವ ಮಸಾಲೆ ಖಾದ್ಯ ಮೆದ್ದು ಹೊರಗೇ ಹೋಗುತ್ತಾಳೆ. ಅದೃಷ್ಟ ಲಕ್ಷ್ಮೀ ಒಳಗಿರುವ ಸಿಹಿ ಪದಾರ್ಥಗಳನ್ನು ಮನೆಯೊಳಗೆ ಬಂದು ನೈವೇದ್ಯ ಸ್ವೀಕರಿಸುವಳು.

ಎಲ್ಲರೂ ಜಾಗೃತ(ಕೋ-ಜಾಗರಿ)ರಾಗಿದ್ದರೆ ಯಾವದೇ ಸಮಸ್ಯೆ ಉಂಟಾಗಲಾರದು. ಜಾಗೃತಿಯೇ ಅಭಿವೃದ್ಧಿಯ ಮೊದಲ ಹೆಜ್ಜೆ. ಯಾವುದೇ ಸಾಧನೆಗೆ ಕಠಿಣ ಪರಿಶ್ರಮದೊಂದಿಗೆ ಜಾಗೃತಿ ಅವಶ್ಯ. ಅದಕ್ಕೆ ಅದೃಷ್ಟವೂ ಸೇರಬೇಕು. ಅದಕ್ಕಾಗಿ ಕೋಜಾಗರಿ ವ್ರತ ಆಚರಿಸಬಹುದು.

ಉತ್ಸವವನ್ನು ಆಚರಿಸುವ ಪದ್ಧತಿ
 ಈ ದಿನ ನವಾನ್ನ (ಹೊಸತಾಗಿ ಬೆಳೆದ ಧಾನ್ಯದಿಂದ) ಊಟವನ್ನು ಮಾಡುತ್ತಾರೆ. ಶ್ರೀ ಲಕ್ಷ್ಮೀ ಮತ್ತು ಐರಾವತದ ಮೇಲೆ ಕುಳಿತ ಇಂದ್ರನ ಪೂಜೆಯನ್ನು ಮಾಡುತ್ತಾರೆ. ಪೂಜೆಯಾದ ಮೇಲೆ ಅವಲಕ್ಕಿ ಮತ್ತು ಎಳನೀರನ್ನು ದೇವರಿಗೆ ಮತ್ತು ಪಿತೃಗಳಿಗೆ ಸಮರ್ಪಿಸಿ ನಂತರ ನೈವೇದ್ಯವೆಂದು ಸೇವಿಸುತ್ತಾರೆ ಮತ್ತು ತಮ್ಮ ಕಡೆಗೆ ಬಂದವರಿಗೆಲ್ಲರಿಗೂ ಪ್ರಸಾದವೆಂದು ಕೊಡುತ್ತಾರೆ. ಶರದ ಋತುವಿನ ಪೂರ್ಣಿಮೆಯ ಸ್ವಚ್ಛ ಬೆಳದಿಂಗಳಿನಲ್ಲಿ ಚಂದ್ರನಿಗೆ ಕುದಿಸಿ ಗಟ್ಟಿ ಮಾಡಿದ ಹಾಲಿನ ನೈವೇದ್ಯವನ್ನು ಮಾಡುತ್ತಾರೆ, ಆಮೇಲೆ ನೈವೇದ್ಯವೆಂದು ಆ ಹಾಲನ್ನು ಸೇವಿಸುತ್ತಾರೆ. ಚಂದ್ರನ ಪ್ರಕಾಶದಲ್ಲಿ ಒಂದು ವಿಧದ ಆಯುರ್ವೇದಿಯ ಶಕ್ತಿಯಿದೆ. ಆದ್ದರಿಂದಾಗಿ ಈ ಹಾಲು ಆರೋಗ್ಯ ದಾಯಕವಾಗಿದೆ. ಈ ರಾತ್ರಿ ಜಾಗರಣೆ ಮಾಡುತ್ತಾರೆ. ಮನೋರಂಜನೆಗಾಗಿ ಕುಳಿತು ಆಡುವ ವಿವಿಧ ಆಟಗಳನ್ನು ಆಡುತ್ತಾರೆ. ಮರುದಿನ ಬೆಳಗ್ಗೆ ಪೂಜೆಯ ಪಾರಣೆ (ಉಪವಾಸವನ್ನು ಬಿಡುವುದು) ಯನ್ನು ಮಾಡುತ್ತಾರೆ. 

ಭಾವಾರ್ಥ: ಕೋಜಾಗರಿಯ ರಾತ್ರಿ ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿರುತ್ತಾರೆಯೋ, ಅವರಿಗೆ ಮಾತ್ರ ಅಮೃತಪ್ರಾಶನದ ಲಾಭವು ದೊರೆಯುತ್ತದೆ!

 ಕೋಜಾಗರ = ಕೋ + ಓಜ + ಆಗರ. ಈ ದಿನದಂದು ಎಲ್ಲರಿಗೂ ಚಂದ್ರನ ಕಿರಣಗಳಿಂದ ಆತ್ಮಶಕ್ತಿರೂಪೀ (ತೇಜಸ್ಸು) ಆನಂದ, ಆತ್ಮಾನಂದ, ಬ್ರಹ್ಮಾನಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ; ಆದರೆ ಈ ಅಮೃತಪ್ರಾಶನ ಮಾಡಲು ‘ಕೋ ಜಾಗ್ರತಿ?’, ಅಂದರೆ ‘ಯಾರು ಜಾಗೃತರಾಗಿದ್ದಾರೆ? ಯಾರು ಎಚ್ಚರಿಕೆಯಿಂದ ಇದ್ದಾರೆ? ಯಾರು ಇದರ ಮಹತ್ವವನ್ನು ಅರಿತಿದ್ದಾರೆ? ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿದ್ದಾರೆಯೋ ಮತ್ತು ಯಾರಿಗೆ ಇದರ ಮಹಾತ್ಮೆಯು ತಿಳಿದಿದೆಯೋ, ಅವರಿಗೆ ಮಾತ್ರ ಈ ಅಮೃತಪ್ರಾಶನದ ಲಾಭ ದೊರೆಯುತ್ತದೆ ಎಂದು ಋಷಿಗಳು ಹೇಳುತ್ತಾರೆ.’
***

ಕೋಜಗಿರಿ ಲಕ್ಷ್ಮಿ ಪೂಜಾ ಕಥಾ

 ಮೊದಲ ಭಾಗ 
 ಒಮ್ಮೆ ಒಬ್ಬ ಪ್ರಾಮಾಣಿಕ ಮತ್ತು ಉದಾರ ರಾಜನಿದ್ದನು, ಅವನು ತನ್ನ ರಾಜ್ಯದಲ್ಲಿ ಜನರ ಕಲ್ಯಾಣಕ್ಕಾಗಿ ವಾರದ ಮಾರುಕಟ್ಟೆಯ ದಿನದಂದು ಮಾರಾಟವಾಗದ ಎಲ್ಲಾ ಸರಕುಗಳನ್ನು ಅವನು ಖರೀದಿಸುತ್ತಾನೆ ಎಂದು ಹೇಳಿದನು.

 ಒಮ್ಮೆ ರಾಜನು ಮಾರುಕಟ್ಟೆಯಲ್ಲಿ ಮಾರಾಟವಾಗದ ಕಬ್ಬಿಣದ ಅಲಕ್ಷ್ಮಿಯ ಪ್ರತಿಮೆಯನ್ನು ಖರೀದಿಸಿದನು.  ರಾಜನು ತನ್ನ ಅರಮನೆಯ ಪೂಜಾ ಕೋಣೆಯಲ್ಲಿ ಪ್ರತಿಮೆಯನ್ನು ಇರಿಸಿದನು.  ಆ ರಾತ್ರಿ ಅವನಿಗೆ ಒಬ್ಬ ಮಹಿಳೆ ಅಳುವುದು ಕೇಳಿಸಿತು.  ಅಳುವುದು ಪೂಜಾ ಕೊಠಡಿಯಿಂದ.  ಒಳಗೆ ಅಳುತ್ತಾ ಕುಳಿತಿದ್ದ ಒಬ್ಬ ಸುಂದರ ಮಹಿಳೆಯನ್ನು ರಾಜ ಕಂಡನು.  

ಅವಳು ಯಾರೆಂದು ಕೇಳಿದನು ಮತ್ತು ಅವಳೇ ಶ್ರೀ ಮಹಾಲಕ್ಷ್ಮಿ ಎಂದು ಕಂಡುಕೊಂಡನು.  ಬಡತನದ ದೇವತೆಯ ಜೊತೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅವಳು ಅಳುತ್ತಿದ್ದಳು.  ಬಡತನದ ವಿಗ್ರಹವನ್ನು ಅದನ್ನು ಮಾಡಿದ ಕುಶಲಕರ್ಮಿಗೆ ಅವಮಾನವೆಂದು ಭಾವಿಸಿದ ರಾಜನು ಅದನ್ನು ಎಸೆಯಲು ಸಿದ್ಧನಾಗಿರಲಿಲ್ಲ.  ಅದೇ ದೃಶ್ಯವು ಅನೇಕ ರಾತ್ರಿಗಳವರೆಗೆ ಪುನರಾವರ್ತನೆಯಾಯಿತು ಮತ್ತು ಅಂತಿಮವಾಗಿ ಶ್ರೀ ಮಹಾಲಕ್ಷ್ಮಿಯು ತನ್ನೊಂದಿಗೆ ಎಲ್ಲಾ ಅದೃಷ್ಟ, ಅದೃಷ್ಟ, ಧಾನ್ಯಗಳು, ಯಶಸ್ಸು, ರಾಯಧನ ಮತ್ತು ಜ್ಞಾನವನ್ನು ತೆಗೆದುಕೊಂಡು ಅರಮನೆಯನ್ನು ತೊರೆದಳು.  

ರಾಜನು ದಿನದಿಂದ ದಿನಕ್ಕೆ ಬಡವನಾದನು.  ಕೊನೆಗೆ ಧರ್ಮದೇವರು ಅರಮನೆಯಿಂದ ಹೊರಡಲು ಮುಂದಾದಾಗ ರಾಜನು ಅವನನ್ನು ತಡೆದನು.  ವಾರದ ಮಾರುಕಟ್ಟೆಯಿಂದ ಅನಗತ್ಯ ದಾಸ್ತಾನು ಖರೀದಿಸುವ ಭರವಸೆಗೆ ಬದ್ಧರಾಗಿ ವಿಗ್ರಹವನ್ನು ಖರೀದಿಸಿದ್ದೇವೆ ಎಂದು ಅವರು ವಿವರಿಸಿದರು. 

 ಅವರು ಧರ್ಮವನ್ನು ಎತ್ತಿಹಿಡಿಯಲು ಹಾಗೆ ಮಾಡಿದರು.  ಧರ್ಮದ ದೇವರು ರಾಜನಿಗೆ ಸಂತೋಷಪಟ್ಟನು ಮತ್ತು ಅವನ ರಾಣಿ ಶ್ರೀ ಕೋಜಗರಿ ಪೂರ್ಣಿಮಾ ವ್ರತವನ್ನು ಮಾಡಿದಾಗ ಅವನು ಕಳೆದುಕೊಂಡ ಎಲ್ಲವನ್ನೂ ಮರಳಿ ಪಡೆಯುವುದಾಗಿ ಭರವಸೆ ನೀಡಿದನು.

 ರಾಣಿಯು ತಕ್ಷಣವೇ ಉಪವಾಸವನ್ನು ಇಟ್ಟುಕೊಂಡು ಶ್ರೀ ಮಹಾಲಕ್ಷ್ಮಿ ಕೋಜಗರಿ ಪೂಜೆಯನ್ನು ಮಾಡಿದರು.  ಶ್ರೀ ಮಹಾಲಕ್ಷ್ಮಿಯ ಮುಂದೆ ರಾತ್ರಿಯಿಡೀ ಧ್ಯಾನ ಮಾಡಿದಳು ಮತ್ತು ನಿದ್ರೆ ಮಾಡಲಿಲ್ಲ.  ಆಕೆಯ ಆರಾಧನೆಯ ಶುದ್ಧತೆ ಮತ್ತು ಶಕ್ತಿಯಿಂದಾಗಿ ಅಲಕ್ಷ್ಮಿಯ ಕಬ್ಬಿಣದ ವಿಗ್ರಹವು ಕರಗಿತು ಮತ್ತು ರಾಜನು ಮತ್ತೆ ಸಮೃದ್ಧನಾದನು.  

ಅಷ್ಟಲಕ್ಷ್ಮಿ ಸಮೇತ ಶ್ರೀ ಮಹಾಲಕ್ಷ್ಮಿಯನ್ನು ಮನಃಪೂರ್ವಕವಾಗಿ ತಮ್ಮ ಅರಮನೆಗೆ ಸ್ವಾಗತಿಸಿದರು.  ಅಂದಿನಿಂದ ಅವನು ತನ್ನ ರಾಜ್ಯದಲ್ಲಿ ಪ್ರತಿ ಕೋಜಗಿರಿ ಪೂರ್ಣಿಮೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದನು.

 ಓದಿದವರಿಗೆಲ್ಲ ಈ ವ್ರತವನ್ನು ಕೇಳಿ ಶ್ರೀ ಮಹಾಲಕ್ಷ್ಮಿ ಅನುಗ್ರಹಿಸುತ್ತಾಳೆ.  ಎಲ್ಲಾ ಬಡತನವನ್ನು ತೊಡೆದುಹಾಕಿ ಮತ್ತು ಎಲ್ಲರಿಗೂ ಸಮೃದ್ಧಿ ಮತ್ತು ಶಾಂತಿ ನೆಮ್ಮದಿ ಸುಖ ಸಂತೋಷಕೊಟ್ಟು ಹರಸುತ್ತಾಳೆ.

 ಭವಿಷ್ಯೋತ್ತರ ಪುರಾಣವು ಲಲಿತಾ ಶರ್ಮ ಎಂಬ ಬಡ ಬ್ರಾಹ್ಮಣನಿದ್ದನೆಂದು ಹೇಳುತ್ತದೆ ಮತ್ತು ಅವನ ಹೆಂಡತಿ ಚಂಡಿಯು ದುರಾಸೆ ಮತ್ತು ತನ್ನ ಗಂಡನ ಆರ್ಥಿಕ ಸ್ಥಿತಿಯಿಂದ ತುಂಬಾ ಅತೃಪ್ತಳಾಗಿದ್ದಳು.  

ಅವಳು ತನ್ನ ಪತಿ ಮಾಡಲು ವಿನಂತಿಸುವ ರೀತಿಯಲ್ಲಿ ವಿರುದ್ಧವಾಗಿ ಕೆಲಸಗಳನ್ನು ಮಾಡುತ್ತಿದ್ದಳು.  ಇದರಿಂದ ಕೋಪಗೊಂಡ ಬ್ರಾಹ್ಮಣನು ಕಾಡಿಗೆ ಹೋದನು, ಅಲ್ಲಿ ಕೆಲವು ದೇವತೆಗಳು ಕೋಜಗರ ವ್ರತವನ್ನು ಮಾಡುವುದನ್ನು ನೋಡಿದನು. 

 ಅವರೊಂದಿಗೆ ಸೇರಿ ಮಹಾಲಕ್ಷ್ಮಿಯನ್ನು ಪೂಜಿಸಿದರು.  

ರಾತ್ರಿಯಿಡೀ ನಿದ್ದೆ ಮಾಡದೆ ಮಹಾಲಕ್ಷ್ಮಿಯನ್ನು ಮೆಚ್ಚಿಸಲು ಪಗಡೆ ಆಟದಲ್ಲಿ ಕಾಲಕಳೆಯುತ್ತಿದ್ದನು.  

ಆ ರಾತ್ರಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆದು ನಂತರ ಸುಖವಾಗಿ ಬಾಳಿದರು.
****


No comments:

Post a Comment