SEARCH HERE

Tuesday, 1 January 2019

ಪ್ರದೋಷ ಪೂಜೆ pradosha pooja

pradosha pooja

ಪ್ರದೋಷ ಎಂದರೆ _ ಪಾಪಗಳಿಂದ ಮುಕ್ತಿ ಎಂದರ್ಥ.

ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ. ಸಂಜೆ ನಾಲ್ಕು ಮೂವತ್ತರಿಂದ ಆರೂವರೆಯವರೆಗೆ ಈ ಕಾಲ ಇರುತ್ತದೆ. ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ “ಆನಂದ ತಾಂಡವ” (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ. ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು.

ಅಂದು ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳ್ಳೆಯದು.

ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.

ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ. ಶನಿವಾರ ಬರುವ ಪ್ರದೋಷವನ್ನು ಶನಿ ಪ್ರದೋಷ ಎಂದು ಕರೆಯುತ್ತಾರೆ.

ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಶನಿವಾರವಾದ್ದರಿಂದ “ಶನಿ ಪ್ರದೋಷ” ತುಂಬಾ ಒಳ್ಳೆಯದಾಗಿರುತ್ತದೆ.

ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.

ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು/ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನಿ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.

ಮಾಡಬಹುದಾದ ಪೂಜೆಗಳು

– ಅರ್ಚನೆ, ಶಿವ ಅಷ್ಟೋತ್ತರದ ಸಮೇತ

– ಹಾಲಿನ ಅಭಿಷೇಕ

– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ

– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ

ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು

ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ

ಪಂಚಾಮೃತ – ಸಂಪತ್ತನ್ನು ನೀಡುತ್ತದೆ

ತುಪ್ಪ – ಮೋಕ್ಷವನ್ನು ನೀಡುತ್ತದೆ

ಹಾಲು – ದೀರ್ಘಾಯುಷ್ಯ

ಮೊಸರು – ಮಕ್ಕಳ ಭಾಗ್ಯ

ಜೇನು ತುಪ್ಪ – ಉತ್ತಮ ಧ್ವನಿ

ಅಕ್ಕಿ ಪುಡಿ – ಸಾಲಗಳಿಂದ ಮುಕ್ತಿ

ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ

ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ

ಎಳೆನೀರು – ಸಂತೋಷ ಮತ್ತು ಜೀವನ ಆನಂದ

ಬೇಯಿಸಿದ ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.

ಗಂಧ (ಗಂಧದ ಪೇಸ್ಟ್) – ಲಕ್ಷ್ಮಿ ಕಟಾಕ್ಷ

ಸಕ್ಕರೆ – ಶತ್ರು ನಾಶ

ಪ್ರದೋಷವು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ನೀಡುವ ಒಂದು ಆಚರಣೆ. ದಯವಿಟ್ಟು ಇದನ್ನು ಆಚರಿಸಿ.

ಪ್ರದೋಷಸಮಯದಲ್ಲಿ ಶ್ರೀರಾವಣಕವಿವಿರಚಿತ "ಶಿವತಾಂಡವಸ್ತೋತ್ರಂ" ನ ಪಾರಾಯಣವು ತುಂಬಾ ವಿಹಿತವಾಗಿದೆ. ಈ ಸ್ತೋತ್ರದ ಕೊನೆಯಲ್ಲಿ ಫಲಶ್ರುತಿಶ್ಲೋಕವಾದ...

ಪೂಜಾವಸಾನಸಮಯೇ ದಶವಕ್ತ್ರಗೀತಿಂ |
ಯಶ್ಶಂಭುಪೂಜನಪರಃ ಪಠತಿ ಪ್ರದೋಷೇ ||

ತಸ್ಯ ಪ್ರಧಾನರಥಗಜೇಂದ್ರತುರಂಗಯುಕ್ತಾಂ |
ಲಕ್ಷ್ಮೀಂ ಸದೈವ ಸುಮುಖೀಂ ಪ್ರದದಾತಿ ಶಂಭುಃ ||

ಎಂಬ ಶ್ಲೋಕದಲ್ಲಿ ತಿಳಿಸಿದಂತೇ ಪ್ರದೋಷಕಾಲದ ಪೂಜಾಸಮಯದಲ್ಲಿ ಯಾರು ದಶವಕ್ತ್ರನಾದ ರಾವಣಕವಿಯ ಈ ತಾಂಡವಸ್ತೋತ್ರವನ್ನು ಪಠಿಸುವರೋ, ಅವರಿಗೆ ಶಂಭುವಾದ ರುದ್ರದೇವರು ಸಕಲೈಶ್ವರ್ಯವನ್ನೂ ದಯಪಾಲಿಸುತ್ತಾನೆ ಎಂದು ವರ್ಣಿಸಿದ್ದಾರೆ.

*********

No comments:

Post a Comment