Ganapati
ಗಣಪನಿಗೆ ಹಲವಾರು ರೂಪ. ಗಜಾನನ, ಲಂಬೋದರ, ಮಂಗಳಮೂರ್ತಿ, ವಕ್ರತುಂಡ, ವಿನಾಯಕ, ಮೋದಕಪ್ರಿಯ, ಏಕದಂತ… ಹೀಗೆ ಹಲವಾರು ನಾಮಧೇಯ. ಆದರೆ ಇವೆಲ್ಲವೂ ಪುರುಷ ರೂಪದ ಗಣಪತಿಯಾದವು. ಹಾಗಿದ್ದರೆ ಹೆಣ್ಣು ಗಣಪತಿಯೂ ಇದೆಯೇ?
ಹೌದು. ಗಣಪತಿಯ ಸ್ತ್ರೀ ರೂಪವೂ ಇದೆ. ಆ ಹೆಣ್ಣು ಗಣಪನಿಗೆ ವಿನಾಯಕಿ ಎಂದು ಹೆಸರು. ಹೆಣ್ಣು ಆನೆ ತಲೆಯ ದೇವತೆಯಾಗಿರುವ ಇದಕ್ಕೆ ಗಜಾನನಿ, ವಿಘ್ನೕಶಿ, ಗಣೇಶಿನಿ ಎಂಬ ಹೆಸರುಗಳೂ ಇವೆ. ಶಿವನ ಶಕ್ತಿಯ ಒಂದು ರೂಪಗಳಲ್ಲಿ ವಿನಾಯಕಿಯೂ ಸೇರಿದ್ದಾಳೆ. ತಾಂತ್ರಿಕ ಸಾಧನೆಗಳನ್ನು ಮಾಡುವವರು ಈಕೆಯನ್ನು ಪೂಜಿಸುತ್ತಾರೆ.
ವಿನಾಯಕಿ ಗಜಮುಖ ಮತ್ತು ಮಹಿಳೆಯ ದೇಹವನ್ನು ಹೊಂದಿರುವ ಹಿಂದೂ ದೇವತೆ. ಈ ದೇವತೆ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಈ ದೇವತೆಯ ಕೆಲವೇ ಕೆಲವು ಚಿತ್ರಗಳು ಲಭ್ಯವಿವೆ.
ವಿನಾಯಕಿಯು 64 ಯೋಗಿನಿ ಮಾತ್ರಿಕಾ ದೇವತೆಗಳಲ್ಲಿ ಒಬ್ಬಳು. ಜೈನ ಮತ್ತು ಬೌದ್ಧ ಪರಂಪರೆಯಲ್ಲಿ ಈ ದೇವತೆಯನ್ನು ಗಣಪತಿರಿದಾಯ ಎಂದು ಕರೆಯಲಾಗುತ್ತದೆ.
ಈ ದೇವತೆಗೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಚಿಂದ್ರಂನಲ್ಲೊಂದು ದೇಗುಲವೂ ಇದೆ. ಸುಚಿಂದ್ರಂನಲ್ಲಿರುವ ಸ್ತುನುಮಲಯನ್ (ತನುಮಾಲಯಂ) ದೇವಾಲಯದಲ್ಲಿ ವಿನಾಯಕಿ ವಿಗ್ರಹವಿದೆ. 1300 ವರ್ಷಗಳಷ್ಟು ಪುರಾತನವಾದ ಈ ದೇವಾಲಯದಲ್ಲಿ ಇರುವ ವಿನಾಯಕಿ, ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಮೇಲಿನ ಎಡಗೈಯಲ್ಲಿ ಯುದ್ಧ-ಕೊಡಲಿ ಮತ್ತು ಕೆಳಗಿನ ಎಡಗೈಯಲ್ಲಿ ಒಂದು ಶಂಖವಿದೆ.
ಈ ದೇವಾಲಯವು 17ನೇ ಶತಮಾನದ್ದಾಗಿದ್ದು ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಸುಮಾರು 18 ಅಡಿ ಎತ್ತರದ ನಾಲ್ಕು ಸಂಗೀತ ಕಂಬಗಳು ಇಲ್ಲಿನ ವಿಶೇಷತೆ. ಏಕೆಂದರೆ ಇದನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ! ಏಳು ಅಂತಸ್ತಿನ ಬಿಳಿ ಗೋಪುರ ಹೊಂದಿರುವ ದೇಗುಲದ ತುಂಬೆಲ್ಲಾ ಹಿಂದೂ ದೇವರ ಶಿಲ್ಪಗಳಿವೆ. ಅಷ್ಟೇ ಅಲ್ಲದೇ, ಭಾರತದಲ್ಲಿಯೇ ಅತೀ ಎತ್ತರದ್ದು ಎನ್ನಲಾದ ಒಂದು ಗ್ರಾನೈಟ್ ಬ್ಲಾಕ್ನಿಂದ ಕೆತ್ತಲಾಗಿರುವ 22 ಅಡಿ ಎತ್ತರದ ಹನುಮಂತನ ವಿಗ್ರಹವೂ ಇಲ್ಲಿದೆ.
ವಿನಾಯಕಿಗೊಂದು ಪೌರಾಣಿಕ ಹಿನ್ನೆಲೆ
ಹಿಂದೂ ದೇವತೆಗಳಿಗೆ ಪೌರಾಣಿಕ ಹಿನ್ನೆಲೆ ಇರುವಂತೆ ಸ್ತುನುಮಲಯನ್ನಲ್ಲಿರುವ ವಿನಾಯಕಿಗೂ ಪೌರಾಣಿಕ ಕಥೆಯಿದೆ. ಅದೇನೆಂದರೆ ಅಂಧಕನೆಂಬ ರಕ್ಕಸ ಕೈಲಾಸದ ಮೇಲೆ ಆಕ್ರಮಣ ಮಾಡಿ, ಪಾರ್ವತಿಯನ್ನು ಎಳೆದೊಯ್ಯಲು ಯತ್ನಿಸಿದ. ಕೋಪಿಷ್ಠಗೊಂಡ ಶಿವ ಆತನನ್ನು ತ್ರಿಶೂಲದಿಂದ ಇರಿದ. ಆ ಕ್ಷಣದಲ್ಲಿ ರಕ್ಕಸನ ರಕ್ತ ಎಲ್ಲೆಡೆ ಚಿಮ್ಮಿತು. ಅದು ಬಿದ್ದಲ್ಲೆಲ್ಲ ಅಂಧಕರು ಹುಟ್ಟಿಕೊಳ್ಳತೊಡಗಿದರು. ಆತನ ರಕ್ತ ನೆಲ ಸೇರದಂತೆ ಹೀರಿ ಮುಗಿಸಲು ಪ್ರತಿ ದೇವತೆಯೂ ತಮ್ಮ ಶಕ್ತಿ ರೂಪವನ್ನು ಯುದ್ಧಾಂಗಣದಲ್ಲಿ ಹೊರತೆಗೆಯುವಂತೆ ಪಾರ್ವತಿ ಸೂಚಿಸಿದಳು. ಹಾಗೆ ವಿನಾಯಕ ಹೊರಗೆಡಹಿದ ಆತನ ಸ್ತ್ರೀ ಸ್ವರೂಪವೇ ವಿನಾಯಕಿ.
ಹೀಗೆ ಹೋಗಿ…
ತಮಿಳುನಾಡು ಮತ್ತು ಇತರ ರಾಜ್ಯಗಳಿಂದ ಕನ್ಯಾಕುಮಾರಿ ಜಿಲ್ಲೆಗೆ ಉತ್ತಮ ಸಂಪರ್ಕ ಹೊಂದಿದೆ. ಅರುಲ್ಮಿಗು ]ೕ ತನುಮಲೈಯಿಲ್ ತಿರುಕ್ಕೋವಿಲ್ ನಗರ ಕೋವಲ್ ರಸ್ತೆಯು ಕನ್ಯಾಕುಮಾರಿಯಿಂದ 14 ಕಿ.ಮೀ ದೂರದಲ್ಲಿದೆ.
ಇನ್ನೆಲ್ಲಿವೆ ವಿನಾಯಕಿ?
ವಿನಾಯಕಿಯ ಮೊದಲ ವಿಗ್ರಹ ಟೆರಕೋಟದಲ್ಲಿ ಕೆತ್ತಿದ್ದು ಇದು ಮೊದಲ ಬಾರಿಗೆ ರಾಜಸ್ಥಾನದಲ್ಲಿ ಕಂಡುಬಂದಿತ್ತು. ಕ್ರಿ.ಪೂ 1ನೇ ಶತಮಾನದಲ್ಲಿ ರಾಜಸ್ಥಾನದ ರೈಹನರ್ನಲ್ಲಿ ಕಂಡು ಬಂದಿತು. ಒಡಿಶಾದ ಹಿರಾಪುರದ ತಾಂತ್ರಿಕ ದೇವಾಲಯ ಚೌಸಾತ್ ಯೋಗಿನಿ ಎಂಬಲ್ಲಿ ನರ್ತಿಸುವ ಭಂಗಿಯಲ್ಲಿರುವ ವಿನಾಯಕಿಯ ವಿಗ್ರಹವಿದೆ. 41 ಯೋಗಿನಿಯರಲ್ಲಿ ಒಬ್ಬಳಾದ ಚೌಸಾತ್ ಯೋಗಿಣಿ ಮಧ್ಯಪ್ರದೇಶದ ಬೇದಾಘಾಟನಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಾಲಿ, ಚಿತ್ರಾಪುರ ಮಠದ ವಸ್ತುಸಂಗ್ರಹಾಲಯದಲ್ಲೂ ಒಂದು ಕಂಚಿನ ಗಣೇಶಾನಿ ಪ್ರತಿಮೆಯಿದೆ. ಟಿಬೇಟ್ನ ವಿವಿಧೆಡೆಗಳಲ್ಲಿ ಗಣೇಶಾನಿ ಪ್ರತಿಮೆಗಳಿವೆ. ವಿನಾಯಕಿಯನ್ನು ಮಧುರೈಯಲ್ಲಿ ‘ವ್ಯಾಘ್ರಪಾದ ಗಣಪತಿ’ ಎಂದು ಆರಾಧಿಸಲಾಗುತ್ತದೆ. ವ್ಯಾಘ್ರಪಾದ ಗಣಪತಿ ಸ್ತ್ರೀಯ ದೇಹ ಹಾಗೂ ಹುಲಿಯ ಪಾದಗಳನ್ನು ಹೊಂದಿದೆ. ಹಿಂದೂ ಪುರಾಣದಲ್ಲಿ ಅಷ್ಟೇನು ಮಹತ್ವ ನೀಡಲ್ಪಡದ ವಿನಾಯಕಿಯ ಮೊದಲ ಉಲ್ಲೇಖ ಮತ್ಸ್ಯ ಪುರಾಣದಲ್ಲಿ ಕಂಡು ಬರುತ್ತದೆ. ವಿನಾಯಕಿಯ ಹೆಸರು ಹೆಚ್ಚಿನವರಿಗೆ ಗೊತ್ತಿರದಿದ್ದರೂ ವಿನಾಯಕಿಯ ಮೇಲೆ ಹಲವಾರು ಸಂಶೋಧನಾ ಗ್ರಂಥಗಳು ಪ್ರಕಟವಾಗಿವೆ.
-| ಸವಿತಾ ನಾಯ್ಕ
********
No comments:
Post a Comment