SEARCH HERE

Tuesday 1 January 2019

ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ tulasi katte

ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸುವುದು ಹೇಗೆ?

ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆಯೆಂದಾದರೆ ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖಮಾಡಿ ನಿಲ್ಲಬೇಕು. ಮುಖ್ಯದ್ವಾರದಿಂದ ಬಲಗಡೆಗೆ ಅರ್ಧಕೋಲು (ಇನ್ನು ಮುಂದೆ ಒಂದು ಕೋಲು ಅಂದರೆ ೨೮ ಇಂಚು ಎಂದು ತಿಳಿಯಬೇಕು) ದೂರದಲ್ಲಿ ಗೋಡೆಯ ಅಥವಾ ಸಿಟೌಟ್‌ನ ಗೋಡೆಗೆ ಒಂದು ಗುರುತು ಮಾಡಿರಿ. ಅಲ್ಲಿಂದ ಪೂರ್ವದಿಕ್ಕಿನೆಡೆಗೆ ಲಂಬವಾಗಿ ನಿಮ್ಮ ಮನೆಯ ಹಾಗೂ ಅಂಗಳದ ಅಗಲವನ್ನು ಅನುಲಕ್ಷ್ಯಿಸಿ ಅದಕ್ಕೆ ಅನುರೂಪವಾಗುವಂತೆ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಆಗ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿಕಟ್ಟೆಯಿರುವುದು. ಮನೆಯು ಪಶ್ಚಿಮಾಭಿಮುಖವಾಗಿ ಇದ್ದರೆ ಯಾ ಉತ್ತರಾಭಿಮುಖವಾಗಿದ್ದರೆ ಮನೆಯ ಮುಖ್ಯ ದ್ವಾರದೆದುರು ನಿಂತು ಎಡಗಡೆಗೆ ಅರ್ಧಕೋಲು ದೂರದ ಬಿಂದುವಿನಿಂದ ಅನುಕ್ರಮವಾಗಿ (ಪಶ್ಚಿಮಾಭಿಮುಖವಾಗಿ ಯಾ ಉತ್ತರಾಭಿಮುಖವಾಗಿ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಅಂದರೆ ಅನುಕ್ರಮವಾಗಿ ಮನೆಯ ಮುಖ್ಯದ್ವಾರದಿಂದ ವಾಯುವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ನಿಮ್ಮ ಮನೆಯ ದಿಕ್ಕು ಸ್ವಲ್ಪ ತಿರುಗಿ ಇದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಇದು ಜನ ಸಾಮಾನ್ಯರು ತುಳಸಿಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸಬಹುದಾದ ಸುಲಭ ವಿಧಾನವಾಗಿದೆ.

ತುಳಸಿಕಟ್ಟೆಯ ಉದ್ದಗಲ ಅಳತೆಗಳು ಹೀಗಿದ್ದರೆ ಚೆನ್ನ

ಸಾಮಾನ್ಯವಾಗಿ ತುಳಸಿಕಟ್ಟೆಯ ಉದ್ದ, ಅಗಲ, ಎತ್ತರಗಳು ತಲಾ ೧೯ ಅಂಗುಲ (೧೯) ಆಗಿದ್ದರೆ ಉತ್ತಮ. ತುಳಸಿಕಟ್ಟೆಯ ಎತ್ತರವು ಮನೆಯ ಪಂಚಾಂಗದ ಮಟ್ಟದಿಂದ ಒಂದು ಅಂಗುಲವಾದರೂ ಕಡಿಮೆಯಿರಬೇಕು. ಕೊನೆಯ ಪಕ್ಷ ಪಂಚಾಂಗದ ಮಟ್ಟಕ್ಕೆ ಸಮಾನಾಂತರವಾಗಿರಬಹುದು. ಅದಕ್ಕಿಂತ ಹೆಚ್ಚು ಎತ್ತರವು ಸೂಕ್ತವಲ್ಲ. ಹಾಗೆಂದು ಈಗಾಗಲೇ ಇರುವ ತುಳಸಿಕಟ್ಟೆಯನ್ನು ಹಾಗೆಯೇ ಇರಗೊಡಿಸುವುದು ಒಳ್ಳೆಯದು.

ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು?

ಸಾಮಾನ್ಯವಾಗಿ ಶನಿವಾರ, ಬುಧವಾರ ಯಾ ಗುರುವಾರ ದಿನಗಳಂದು ಬೆಳಗ್ಗಿನ ಹೊತ್ತು ಶ್ರೀಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.

ತುಳಸಿಕಟ್ಟೆಯಲ್ಲಿ ಯಾವ ಜಾತಿಯ ಗಿಡವನ್ನು ನೆಡಬಹುದು?

ತುಳಸಿಕಟ್ಟೆಯಲ್ಲಿ ತಾರಕತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿ (ಬಿಳಿ ತುಳಸಿ)ಯನ್ನು ಸುತ್ತಮುತ್ತ ಮಾರಕ ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ (ನಸುಗಪ್ಪು ಬಣ್ಣದ ತುಳಸಿ)ಯನ್ನೂ ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.

ಕೊನೆಯ ಮಾತು

ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ. ಆಸಕ್ತರು ಬೇರೆ ಬೇರೆ ಗ್ರಂಥಗಳನ್ನೋದಿ ಅವುಗಳನ್ನು ಅರಿತುಕೊಳ್ಳಬಹುದು ಇದು ಮುಂಬರುವ ಉತ್ಥಾನ ದ್ವಾದಶಿಯ ಸಾಂದರ್ಭಿಕ ಕಿರುಲೇಖನ ಮಾತ್ರ. ಮುಂಬರುವ ಉತ್ಥಾನ ದ್ವಾದಶಿಯಂದು ಹಾಗೂ ಮುಂದಿನ ವರ್ಷಗಳಲ್ಲಿ ಶ್ರೀ ತುಳಸಿಪೂಜೆಯನ್ನು ಶ್ರೀಕೃಷ್ಣದಾಮೋದರನೊಂದಿಗೆ ವಿವಾಹ ಮಾಡುವ ಮೂಲಕ ಅತ್ಯಂತ ಶ್ರದ್ದಾಭಕ್ತಿಭಾವಗಳಿಂದ ಆಚರಿಸಿ ದೈವಾನುಗ್ರಹ ಪಡೆಯೋಣ. ಆದಿನ ಅನಿವಾರ್ಯವಾಗಿ ಪೂಜೆಮಾಡಲಾಗದಿದ್ದರೆ ಅನಂತರದ ಹುಣ್ಣಿಮೆಯ ತನಕ ಯಾವುದಾದರೊಂದು ದಿನ ಪೂಜೆ ಮಾಡಬಹುದು. ತುಳಸಿಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಉರಿಸಿಡದೆ ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ದೇದೀಪ್ಯ ವಾತಾವರಣವನ್ನು ನಿರ್ಮಿಸಿ ಸತ್ತ್ವಗುಣದ ಸಂವರ್ಧನೆ ಮಾಡುವುದು ತೀರಾ ಅವಶ್ಯವಾಗಿದೆ ಎಂಬುದರ ಅರಿವು ನಮಗೆಲ್ಲರಿಗೂ ಇರಲಿ.
******

ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?
ಪ್ರಶ್ನೆ. ಬಾಡಿ ಹೋದ ತುಳಸಿಗಿಡವನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ತಿಳಿಸಿ ?

ಉತ್ತರ: ತುಳಸಿ ಒಂದು ಸಸ್ಯ. ಆ ಸಸ್ಯದಲ್ಲಿರುವ ಜೀವಕ್ಕೆ ಎಷ್ಟು ಆಯುಷ್ಯವಿದೆಯೋ ಅಷ್ಟು ದಿವಸ ಇರುತ್ತದೆ. ಆ ನಂತರ ಗಿಡ ಬಾಡಿ ಹೋಗುತ್ತದೆ.


ಬಾಡಿ ಹೋದ ತುಳಸೀ ಗಿಡವನ್ನು ಅವಶ್ಯವಾಗಿ ತೆಗೆಯಬಹುದು. ತೆಗೆದು ಹೊಸ ಸಸಿಯನ್ನು ತಂದು ನೆಡಬೇಕು.
ಬಾಡಿ ಹೋದ ಗಿಡವನ್ನು, ಮಂಗಳವಾರ, ಶುಕ್ರವಾರ, ಅಮಾವಾಸ್ಯಾ, ಪೌರ್ಣಮಿ, ಸಂಕ್ರಾಂತಿಗಳಂದು ತೆಗೆಯತಕ್ಕದ್ದಲ್ಲ. ದ್ವಾದಶಿಯಂತೂ ಸರ್ವಥಾ ತೆಗೆಯಬಾರದು.
ಸಾಮಾನ್ಯವಾಗಿ ಯಾವುದೇ ಗಿಡವನ್ನು ಪುರುಷರೇ ತೆಗೆಯಬೇಕು. ವಂಶವನ್ನು ಬೆಳೆಸುವ ಮಹತ್ತರ ಸೌಭಾಗ್ಯದ ಕಾರ್ಯವನ್ನು ಹೊತ್ತಿರುವ ಸ್ತ್ರೀಯರು ಅದನ್ನು ಮಾಡತಕ್ಕದ್ದಲ್ಲ. ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಸ್ತ್ರೀಯರು ಬಾಡಿ ಹೋದ ಗಿಡವನ್ನು ತೆಗೆಯಬಹುದು. (ಆದರೆ ದೇವರ ಪೂಜೆಗೆ ತುಳಸಿಯನ್ನು ಬಿಡಿಸುವಂತಿಲ್ಲ. ಹೊಸದಾದ ಗಿಡವನ್ನು ಮುತ್ತೈದೆಯಾದ ಸ್ತ್ರೀಯರು ನೆಡುವದು ಇಡಿಯ ಕುಲಕ್ಕೆ ಯಶಸ್ಸನ್ನು ನೀಡುವ ಪುಣ್ಯಕಾರ್ಯ.)
ಗಿಡ ತೆಗೆದಾದ ಮೇಲೆ ನೆರಳಿನಲ್ಲಿ ಒಂದಷ್ಟು ದಿವಸ ಪೂರ್ಣ ಒಣಗಿಸಬೇಕು.
ರೆಂಬೆ ಕೊಂಬೆಗಳಲ್ಲಿರುವ ಸಣ್ಣ ಸಣ್ಣ ಗಾತ್ರದ ಕಡ್ಡಿಗಳನ್ನೆಲ್ಲ ಪುಟ್ಟಪುಟ್ಟದಾಗಿ ಮುರಿದಿಟ್ಟುಕೊಳ್ಳಬೇಕು. ನಿತ್ಯ ವೈಶ್ವದೇವ ಮಾಡಬೇಕಾದರೆ, ಅಥವಾ ಹೋಮ ಮಾಡಬೇಕಾದರೆ ಅದನ್ನು ಬಳಸಬೇಕು.
ಸ್ವಲ್ಪ ದಪ್ಪ ಗಾತ್ರದ ಕಡ್ಡಿಗಳನ್ನು ದೀಪ ಹಚ್ಚಲು ಉಪಯೋಗಿಸಬೇಕು. ಬೆಂಕಿ ಕಡ್ಡಿಯಿಂದ ಮತ್ತು ಹೂಬತ್ತಿ ಮಂಗಳಾರತಿ ಬತ್ತಿಗಳಿಂದ ದೀಪ ಹಚ್ಚಬಾರದು. ಮೊದಲು ತುಳಸೀಕಾಷ್ಠವನ್ನು ಹಚ್ಚಿಕೊಂಡು ಆ ತುಳಸೀಕಾಷ್ಠದಿಂದಲೇ ದೀಪಗಳನ್ನು ಹಚ್ಚಬೇಕು.
ಇನ್ನೂ ಸ್ವಲ್ಪ ದಪ್ಪ ಗಾತ್ರದ ಕಡ್ಡಿಯನ್ನು ಗಂಧ ತೇಯುವಾಗ ಬಳಸಬೇಕು. ತುಳಸೀಕಾಷ್ಠವನ್ನು ಸಾಣೆಕಲ್ಲಿನ ಮೇಲೆ ತೇದ ನಂತರ ಅದರಿಂದ ಬರುವ ಗಂಧದ ನೀರನ್ನು ಸ್ವಾದೂದದಕ್ಕೆ ಸೇರಿಸಿ ದೇವರಿಗೆ ಅಭಿಷೇಕ ಮಾಡಬೇಕು. ದೇವರಿಗೆ ಅತ್ಯಂತ ಪ್ರಿಯ.
ಕಾಂಡದ ಬಳಿಯಿರುವ ದೊಡ್ಡ ಗಾತ್ರದ ಕಾಷ್ಠಗಳನ್ನು ತುಳಸೀ ಮಣಿಗಳನ್ನು ಮಾಡಲು ಎತ್ತಿಟ್ಟುಕೊಳ್ಳಬಹುದು.
ಮತ್ತು ವಿಗ್ರಹಗಳನ್ನು ಸ್ವಚ್ಛ ಮಾಡಲು, ಪಂಚಾಮೃತ ಅಭಿಷೇಕ ಮಾಡಿದಾಗ ವಿಗ್ರಹದಲ್ಲಿ ಉಳಿಯುವ ಅಂಶಗಳನ್ನು ತೆಗೆಯಲು ಪುಟ್ಟ ಪುಟ್ಟ ತುಳಸೀಕಾಷ್ಠಗಳು ತುಂಬ ಉಪಯೋಗವಾಗುತ್ತವೆ.
ತುಳಸಿಯ ಕಾಷ್ಠವನ್ನು ತೆಗೆಯುವಾಗ ಕೈಗೆ ಸಿಗದಷ್ಟು ಸಣ್ಣಸಣ್ಣ ತುಳಸೀಕಾಷ್ಠದ ಕಣಗಳು ನೆಲದ ಮೇಲಿರುತ್ತವೆ. ಜೋಪಾನವಾಗಿ ಅವೆಲ್ಲವನ್ನು ತೆಗೆದು ಒಂದು ಉತ್ತಮ ಪಾತ್ರೆಯಲ್ಲಿಟ್ಟುಕೊಂಡು ದೇವರಿಗೆ ಧೂಪ ಹಾಕುವಾಗ ಅದನ್ನು ಬಳಸಬೇಕು. ದೇವರಿಗೆ ಅತ್ಯಂತ ಪ್ರಿಯ.
ಮನೆಯಲ್ಲಿ ಮರಣವುಂಟಾದಾಗ, ದೇಹವನ್ನು ಸುಡಬೇಕಾದರೆ ಚಿತೆಯಲ್ಲಿನ ನೂರಾರು ಕಟ್ಟಿಗೆಗಳ ಮಧ್ಯದಲ್ಲಿ ಒಂದು ಸಣ್ಣ ತುಳಸೀಕಾಷ್ಠವಿದ್ದರೂ ಸಕಲ ಪಾಪಗಳಿಂದ ಜೀವ ಮುಕ್ತನಾಗುತ್ತಾನೆ ಎಂದು ಶಾಸ್ತ್ರದ ವಚನವಿದೆ.
ಯದ್ಯೇಕಂ ತುಲಸೀಕಾಷ್ಠಂ

ಮಧ್ಯೇ ಕಾಷ್ಠಶತಸ್ಯ ಚ 

ದಾಹಕಾಲೇ ಭವೇನ್ಮುಕ್ತಿಃ 

ಪಾಪಕೋಟಿಯುತಸ್ಯ ಚ

ಹೀಗಾಗಿ ಸಾವುಂಟಾದವರ ಮನೆಗೆ ಹೋಗುವಾಗ ಮನೆಯಲ್ಲಿನ ಒಂದಷ್ಟು ಕಾಷ್ಠವನ್ನು ತೆಗೆದುಕೊಂಡು ಹೋಗಿ ಕೊಡಬೇಕು.
ಹೀಗೆ, ಕೈಗೆ ಸಿಗಲಾರದಂತಹ ಕಣದಿಂದ ಪುಡಿಯಿಂದ ಆರಂಭಿಸಿ ಗಟ್ಟಿಯ ಕಾಷ್ಠದವರೆಗೆ ತುಳಸೀ ಗಿಡ ಭಗವಂತನಿಗೆ ಸಮರ್ಪಿತವಾಗಬೇಕು. ಯಾವ ಕಾರಣಕ್ಕೂ ಬಿಸಾಡಬಾರದು.
****

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು ಏಕೆ?

ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಎಲ್ಲಾ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ?

ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ  ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು

ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪನದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||
ಶ್ರೀ ಕೃಷ್ಣಾರ್ಪಣಮಸ್ತು   
***




No comments:

Post a Comment