SEARCH HERE

Tuesday, 1 January 2019

ಗರಿಕೆ ಆರ್ಯುರ್ವೇದ ಗುಣ garike durva bermuda grass ayurvedic medicine


ಗರಿಕೆಯ ಆರ್ಯುರ್ವೇದ ಗುಣ ಹಾಗೂ ವಿಶಿಷ್ಟ ಹಿನ್ನೆಲೆ

ತೇನ ವಿನಾ ತೃಣಮಪಿ ನ ಚಲತಿ ಅಂದರೆ ಭಗವಂತನ ಚಿತ್ತವಿರದೆ ಹುಲ್ಲುಕಡ್ಡಿಯೂ ಅಲುಗಾಡದು ಎಂಬ ನುಡಿಗಟ್ಟಿನ ಹಿಂದೆ ಹುಲ್ಲಿನ ಬಗ್ಗೆ ಕೊಂಚ ಕೀಳರಿಮೆ ಇದೆ ನಿಜ. ಆದರೆ ವರ್ಷಕ್ಕೊಮ್ಮೆ ಗೌರಿ-ಗಣಪನ ಮಡಿಗೇರುವ ಗರಿಕೆಯದು ಮಾತ್ರ ವಿಶಿಷ್ಟ ಹಿನ್ನೆಲೆ.
ನಮ್ಮ ರಾಜ್ಯದ ದಕ್ಷಿಣದ ಕೊಡಿನಾಡು ಕೊಡಗು. ಆ ಜಿಲ್ಲೆಯ ತುತ್ತ ತುದಿಯ ಪುಟ್ಟ ಹಳ್ಳಿಯ ಹೆಸರೇ ಕರಿಕೆ. ಅದರ ಹಿಂದೆ ಗರಿಕೆಯ ಹೆಸರೇ ಇದೆ. ಇತರ ದೇಶಗಳಲ್ಲಿ ಗರಿಕೆ ಒಂದು ಕಳೆ. ನಮಗೆ ಪೂಜಾರ್ಹ ಹುಲ್ಲು. ಅದರ ನಾನಾ ಬಳಕೆಗಳ ದೊಡ್ಡ ಪಟ್ಟಿ ಆಯುರ್ವೇದದ ಸಂಸ್ಕೃತಗ್ರಂಥಗಳಲ್ಲಿವೆ.
ಅನಿಯಮಿತ ಮುಟ್ಟಿನ ಸ್ರಾವದ ಹಿಂದೆ ಗರ್ಭಾಶಯದ ಒಳಗಂಟು(ಫೈಬ್ರಾಯಿಡ್) ಪ್ರಬಲ ಕಾರಣ. ಅಂತಹ ಸಂದರ್ಭಗಳಲ್ಲಿ ದಾಳಿಂಬೆ ಸಿಪ್ಪೆ ಕಷಾಯ ಮತ್ತು ಗರಿಕೆಯ ರಸದ ಕುಡಿಸುವ ಮನೆ ಮದ್ದು ರೂಢಿಯಲ್ಲಿದೆ.
ಅನೇಕರಿಗೆ ಗರ್ಭಕೋಶದ ಶಸ್ತ್ರ ಕ್ರಿಯೆ ನಡೆಸದಂತೆ ಗರಿಕೆ ರಸಸೇವನೆ ಒಳಿತು ಮಾಡಿದೆ. ಅಂದರೆ ಕಲ್ಲು, ಲೋಹ ಕರಗಿಸುವ ಗರಿಕೆ ಜೀವಂತ ಒಡಲ ಪುಟ್ಟ ಗಂಟು ಕರಗಿಸಿದರೆ ಅಚ್ಚರಿ ಇಲ್ಲ. ಮಹಿಳೆಯರ ತಿಂಗಳ ತೊಂದರೆ ಪರಿಹರಿಸಲು ಗರಿಕೆ ಸಂಜೀವಿನಿ.
ಗಂಡದೂರ್ವಾ, ಗಂಡಾಲಿ, ಶತವೀರ್ಯಾ, ಗೋಲೋಮಿ, ಮತ್ಸ್ಯ ಶಕುಲಾದನೀ ಇತ್ಯಾದಿ ಪರ್ಯಾಯ ಹೆಸರು ಗರಿಕೆಯದು. ಇಲ್ಲಿ ಗಂಡ ಅಂದರೆ ಗಿಣ್ಣು ಅಥವಾ ಗಂಟು. ಗಂಟು ಗಂಟುಗಳಲ್ಲಿ ಬೇರು. ಅಲ್ಲಿಯೇ ಹೊಸ ಕವಲು. ಅದನ್ನೇ ಉಪನಿಷದ್ಗಳು ಕಾಂಡಾತ್ ಕಾಂಡಾತ್ ಪ್ರರೋಹಂತಿ ಎಂಬ ಸುಂದರ ಬಣ್ಣನೆಯೊಂದಿಗೆ ಸಸ್ಯಶಾಸ್ತ್ರೀಯ ವರ್ಣನೆ ಮಾಡುತ್ತವೆ.
ಹಸುಗಳು ಅತಿಯಾಗಿ ಇಷ್ಟ ಪಡುವ ವಸ್ತು ಗರಿಕೆ, ಒಂದು ಹುಲ್ಲು ನೂರು ಗುಣ ಎಂಬ ಗರಿಕೆಯ ಅತಿಶಯೋಪಕಾರ ಕಾಣುವೆವು. ನಿಮ್ಮ ಮನೆಯ ನಾಯಿ ಹರಿಕೆ ಹುಲ್ಲನ್ನು ಮೆಲ್ಲುವ ಮತ್ತು ಕೆಲವೊಮ್ಮೆ ಉದರಶುದ್ಧಿ ಮಾಡಿಕೊಳ್ಳುವ ಪ್ರಕೃತಿ ಚಿಕಿತ್ಸೆ ಕಂಡಿದ್ದೀರಿ. ಚರಕಸಂಹಿತೆಯ ಜೀವನೀಯ, ಅಂದರೆ ಜೀವನಕ್ಕೆ ಉಪಕರಿಸುವ ಗಣ(ಗುಂಪು)ದಲ್ಲಿ ಗರಿಕೆಗೆ ಇದೆ.
ಜ್ವರ, ಮೈಉರಿ, ಕಫ ಉಲ್ಬಣತೆ, ಚರ್ಮಗಾದರಿ, ಗುಳ್ಳೆ, ನೀರೂಡುವ ತುರಿಗಜ್ಜಿ, ಸರ್ಪಸುತ್ತು ಪರಿಹಾರಕ್ಕೆ ಗರಿಕೆ ಮದ್ದು. ಬಾಯಿ ರುಚಿ ಹೆಚ್ಚಿಸೀತು. ವಾಂತಿಗೆ ಕಡಿವಾಣ. ಮೂರ್ಛೆ ತಿಳಿವಿಗೆ ಗರಿಕೆರಸದ ಮೂಗಿನ ಬಳಕೆಗೆ ಉಲ್ಲೇಖಗಳಿವೆ.
ಎಂತಹದೇ ರಕ್ತಸ್ರಾವ ನಿಲುಗಡೆಗೆ ಗರಿಕೆ ಬೇಕು. ವಿಷಚಿಕಿತ್ಸೆಗೆ ಗರಿಕೆ ಉತ್ತಮ ಮದ್ದು. ಕೇರುಗಾಯದ ಮದ್ದಾಗಿ ಗರಿಕೆರಸದ ಲೇಪ ಬಯಲು ಸೀಮೆಯ ಜನಪದ ವೈದ್ಯ. ಮೂತ್ರಕಟ್ಟು, ಉರಿ ಮತ್ತು ಕಲ್ಲುಪರಿಹಾರಕ್ಕೆ ಗರಿಕೆ ರಸ ಪಾನ ಚಿಕಿತ್ಸೆಯಾಗಿದೆ.
ಗರಿಕೆಯ ತುದಿ ಚಿಗುರು ಆಯ್ದು ತರುವಿರಿ. ಬರೋಬ್ಬರಿ ನೂರೆಂಟು ಗಂಟು! ಅಂತಹ ಗರಿಕೆ ಚಿಗುರಿನ ಹಾರ ಗಣಪನಿಗರ್ಪಿಸಿರಿ. ಆದರೆ ಅದನ್ನು ಮರುದಿನ ಮೋರಿಗೆ ಎಸೆಯದಿರಿ.
ನೂರೈವತ್ತು ವರ್ಷಗಳ ಹಿಂದೆ ನಮ್ಮ ನೆಲದಲ್ಲಿ ಒಂದು ಪುಸ್ತಕ ಸಂಪದಿತ. ಅದರ ಹೆಸರು ‘ಸಹಸ್ರಾರ್ಧ ವೃಕ್ಷಾದಿ ವರ್ಣನಂ.’ ಅಂದರೆ ಐನೂರು ಗಿಡ ಮರಗಳ ಬಣ್ಣನೆ. ಹಾರದ ಗರಿಕೆ ಆಹಾರವಾಗುವ ಸುಂದರ ವರ್ಣನೆ ಅಂತಹ ಗ್ರಂಥದ ಅಮೂಲ್ಯ ಮಾಹಿತಿ.
ಗರಿಕೆರಸ ಕುಡಿಯುವ ನೀವು ಗರಿಕೆ ಹಾರದ ಪಲ್ಯ ಮಾಡಿ ಆಹಾರವಾಗಿ ಬಳಸಿರಿ. ಕಲ್ಲು ಕರಗಿಸುವ ಈ ಹುಲ್ಲು ಗಣಪನ ಹಬ್ಬದ ಉಂಡೆ, ಚಕ್ಲಿ, ಕೋಡುಬಳೆ, ಒಬ್ಬಟ್ಟು ಕರಗಿಸೀತಲ್ಲವೇ? ಈ ಗ್ರಂಥದ ಮತ್ತೊಂದು ಮಾಹಿತಿ ಕೂಡ ಸ್ವಾರಸ್ಯದ್ದೇ. ಗರಿಕೆಯ ಬೇರಗೆದು ತೆಗೆಯಿರಿ. ಬೆಲ್ಲದ ಪಾನಕ ಮಾಡಿ ಕುಡಿಯಿರಿ. ಅದು ಬಹಳ ತಂಪು. ಆದರೆ ಬೇರಗೆಯುವ ಕೆಲಸ ಮಾತ್ರ ಸುಲಭದ್ದಲ್ಲ.
ಸಾಸಿವೆಗಿಂತಲೂ ಕಿರಿದಾದ ಗರಿಕೆ ಬೀಜ ಯಥೇಚ್ಛ ಬೆಳೆದರೆ ಎರಡೂವರೆ ಚದರ ಮೀಟರ್ ಹರಹು ಪಡೆಯಬಲ್ಲುದು. ಕೇವಲ ಐದು ತಿಂಗಳಲ್ಲಿ ಅಂತಹ ಬೆಳೆ. ಐದಡಿ ತಳಕ್ಕಿಳಿವ ಬೇರು! ಸಮುದ್ರ ತಟದ ಉಪ್ಪು ನೀರು ಸಹ ಗರಿಕೆಯ ಕೆಚ್ಚಡಗಿಸದು. ಬಂಜರು ನೆಲದಲ್ಲೂ ಗರಿಕೆ ಬೆಳೆದೀತು.
*******

ಗರಿಕೆ ಹುಲ್ಲಿನ ಕಥೆ

ಒಂದು ಕಾಲದಲ್ಲಿ ಒಬ್ಬ ರಾಕ್ಷಸ ಅನಲಾಸುರ ಇದ್ದನು. ಅವನು ಸ್ವರ್ಗದಲ್ಲಿ ಆತಂಕ ಉಂಟು ಮಾಡಿದನು.ಅವನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾರಿಯಲ್ಲಿ ಯಾರೇ ಬಂದರು ಏನೇ ಬಂದರು ಎಲ್ಲವನ್ನು ಸುಟ್ಟು ಹಾಕುತ್ತಿದ್ದನು. ಹೀಗೆ ಎಲ್ಲವನ್ನು ನಾಶ ಮಾಡುತ್ತಿದ್ದನು. ಆಗ ದೇವನಾದ ಗಣೇಶನನ್ನು ಸಹಾಯಕ್ಕೆ ಆಹ್ವಾನಿಸಲಾಗುತ್ತದೆ.

ಗಣೇಶ ಮತ್ತು ರಾಕ್ಷಸ ಅನಲಾಸುರ ಇಬ್ಬರು ಯುದ್ಧ ಮಾಡುತ್ತಾರೆ. ಆಗ ಅನಲಾಸುರನು ಬೆಂಕಿಯ ಉಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ. ಆಗ ಗಣೇಶನು ಇವನನ್ನು ಸಂಹಾರ ಮಾಡಲು ವಿರಾಟ ರೂಪವನ್ನು ಪಡೆದು ಸಂಪೂರ್ಣವಾಗಿ ಅನಲಾಸುರನನ್ನು ನುಂಗಿಬಿಟ್ಟನು.ಆಗ ಗಣೇಶನ ದೇಹದಲ್ಲಿ ಅಧಿಕವಾದ ಉಷ್ಣಾಂಶ ಉತ್ಪತ್ತಿಯಾಗಿ ಗಣೇಶನ ಹೊಟ್ಟೆಯು ಸಹ ಊದಿಕೊಂಡು ಬಿಡುವುದು.ಗಣೇಶನು ಈ ದೇಹದ ಉಷ್ಣಾಂಶದಿಂದ ದೇಹಾಲಾಸ್ಯದಿಂದ ಸುಧಾರಿಸಿಕೊಳ್ಳುವುದಕ್ಕೆ ಹರ ಸಾಹಸ ಪಡುತ್ತಿದ್ದನು.

ದೇವತೆಗಳಾದ ಬ್ರಹ್ಮ, ವಿಷ್ಣು ಮಹೇಶ್ವರ,ಸೂರ್ಯ, ಚಂದ್ರ, ಎಲ್ಲರೂ ಗಣೇಶನ ನೋವು ಕಡಿಮೆ ಮಾಡುವುದಕ್ಕೆ ಬಂದರು ಏನು ಮಾಡಿದರೂ ಹೊಟ್ಟೆ ನೋವು ಗಣೇಶನಿಗೆ ಕಡಿಮೆ ಯಾಗುವುದಿಲ್ಲ.

ಕೊನೆಗೆ ಋಷಿ ಮುನಿಗಳು 21 ಗರಿಕೆಯನ್ನು ತೆಗೆದುಕೊಂಡು ಬಂದು ಗಣೇಶನ ತಲೆಯ ಮೇಲೆ ಇಡುತ್ತಾರೆ. ಆಗ ಗಣೇಶನ ದೇಹದ ಉಷ್ಣಾಂಶವೆಲ್ಲವೂ ಹಾವಿಯಾಗಿ ಮಾಯಾಜಾಲವಾಗಿ ಕಡಿಮೆಯಾಗುತ್ತದೆ. ಗಣೇಶನು ಸಹ ಗುಣ ಮುಖನಾಗುತ್ತಾನೆ.
*********

ಗರಿಕೆಯ ಗಿಡವನ್ನು ಗುರುತಿಸುವುದು ಹೇಗೆ ?

ಗರಿಕೆಯು ಒಂದೇ ಬೇರಿನಲ್ಲಿ ಮೊದಲು ಮೂರು ಉದ್ದನೆಯ ಎಲೆಗಳಾಗಿ ಬೆಳೆದು ನಂತರ ಮೂರ್ನಾಲ್ಕು ಗಂಟುಳಾಗಿ ಅಲ್ಲಿಂದ ಎಲೆಗಳು ಚಿಗುರೊಡೆದು ಮತ್ತೆ ಉದ್ದಕ್ಕೆ ಬೆಳೆಯುತ್ತವೆ. ಗರಿಕೆಯ ಎಲೆಯನ್ನು ನೀವು ಒಂದು ವೇಳೆ ಪೂಜೆಗೆ ಕಿತ್ತರೂ ಸಹ ಅದು ಬೇಗ ಬೇಗನೇ ಚಿಗುರೊಡೆದು ಮರುಹುಟ್ಟು ಪಡೆದು ಪುನರ್ಜೀವ ಪಡೆಯುವುದು.
********

ಗರಿಕೆಯ ಹಿನ್ನೆಲೆ ಮತ್ತು ಮಹತ್ವ

ಗರಿಕೆ ಹುಲ್ಲಿಗೆ ಪೂಜೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ನೀಡಲಾಗುತ್ತದೆ. ಗರಿಕೆಯು ದೇವರಾದ ಶಿವ, ದೇವಿ ಶಕ್ತಿ ಮತ್ತು ಗಣೇಶ ದೇವರನ್ನು ಒಟ್ಟಾಗಿ ಸೇರಿಸುತ್ತದೆ. 

ಹಿಂದೂ ಧರ್ಮದಲ್ಲಿ ಗರಿಕೆಯಿಲ್ಲದೆ ಯಾವ ಪೂಜೆಯು ಸಂಪೂರ್ಣವಾಗುವುದಿಲ್ಲ. ಪವಿತ್ರವಾದ ಗರಿಕೆಯನ್ನು ಮೊದಲು ಪೂಜಿತನಾದ ಗಣೇಶನಿಗೆ ಅರ್ಪಿಸಲೇಬೇಕು. ಪೂಜೆಯಲ್ಲಿ ಪವಿತ್ರವಾದ ಸ್ಥಾನವನ್ನು ಮೊದಲು ತುಳಸಿ ಗಿಡಕ್ಕೆ ನೀಡಲಾಗಿದೆ. ತುಳಸಿಯ ನಂತರ ಗರಿಕೆ ಹುಲ್ಲಿಗೆ ಎರಡನೇ ಸ್ಥಾನ ನೀಡಲಾಗಿದೆ. ತುಳಸಿ ಮತ್ತು ಗರಿಕೆ ಎರಡೂ ಸಹ ಪವಿತ್ರವೆಂದು ಭಾವಿಸಲಾಗಿದೆ. ಗಣೇಶನ ಪೂಜೆಯಲ್ಲಿ ಗರಿಕೆಯು ವಿಶೇಷ ಸ್ಥಾನವನ್ನು ಪಡೆದಿದೆ.

ಗರಿಕೆಯು ಎಲೆಗಳು ಮೂರು ಕತ್ತಿಗಳ ಆಕಾರದ ರೀತಿಯಲ್ಲಿ ಮೊದಲು ಚಿಗುರೊಡೆಯುತ್ತವೆ. ಆ ಮೂರು ಗರಿಕೆಯ ಎಲೆಗಳು ಸಹ ಮೂರು ದೇವ ತತ್ವಗಳಾದ ಶಿವ, ಶಕ್ತಿ,ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ.

ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ ಹಾಗೆ ದೇವರ ತತ್ವಗಳನ್ನು ನೀರಿನ ಹನಿಗಳ ಮೂಲಕ ಗರಿಕೆಯ ಎಲೆಗಳಿಗೆ ಹೀರಿಕೊಳ್ಳುವ ಸಾಮರ್ಥ್ಯ ಇದೆ. 21 ಗರಿಕೆಯನ್ನು ಗಣೇಶ ದೇವನಿಗೆ ಪೂಜೆ ಮಾಡುವಾಗ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟವನ್ನು ಹೊತ್ತು ತರುವುದು ಎಂದು ನಂಬಲಾಗಿದೆ.
********

ಗರಿಕೆ(ದೂರ್ವೆ):
ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷ ಮಹತ್ವವಿದೆ. ಇದನ್ನು ದೂರ್ವೆ ಎಂದೂ ಕರೆಯುತ್ತಾರೆ. ದೂರ್ವೆ ಈ ಶಬ್ದವು ದೂಃ ಅವಮ್ ಹೀಗೆ ಆಗಿದೆ. 'ದೂಃ' ಅಂದರೆ ದೂರದಲ್ಲಿ ಇದ್ದದ್ದು ಮತ್ತು 'ಅವಮ್' ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆಯಾಗಿದೆ, ಅಂದರೆ ಗರಿಕೆಯಾಗಿದೆ. ಗಣಪತಿಗೆ ಅರ್ಪಿಸಬೇಕಾದ ಗರಿಕೆಯು ಎಳೆಯದಾಗಿರಬೇಕು. ಇದನ್ನೇ 'ಬಾಲತೃಣಮ್' ಎನ್ನುತ್ತಾರೆ. ಒಣಗಿದಾಗ ಅದನ್ನು ಒಂದು ವಿಧದ ಹುಲ್ಲೆಂದು ಪರಿಗಣಿಸಬಹುದು. ಗರಿಕೆಗಳಿಗೆ 3, 5, 7ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.

ಗರಿಕೆ ಹುಲ್ಲು ಜಾತಿಯ ಸಸ್ಯ. ಹೆಚ್ಚು ಆರೈಕೆ ಬೇಡದೆ ತನ್ನಷ್ಟಕ್ಕೆ ತಾನು ಬೆಳೆಯುವ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕ. ಗರಿಕೆಯನ್ನು ಸಂಸ್ಕೃತದಲ್ಲಿ ಅನಂತಾ, ಶತಪರ್ವಿಕಾ, ಸಹಸ್ರವೀರ್ಯಾ, ಶತವಲ್ಲಿ ಎನ್ನುತ್ತಾರೆ. ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಸಿ ಹೊಂದಿರುವ ಗರಿಕೆಯನ್ನು ಅನಾದಿ ಕಾಲದಿಂದಲೂ ರಕ್ತ ಸೋರಿಕೆ ತಡೆಗಟ್ಟಲು ಬಳಕೆ ಮಾಡುವುದಿದೆ. ಹಸಿರು, ಬಿಳಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ. ಎಲೆಗಳು ಉದ್ದವಾಗಿ, ಕಾಂಡಗಳು ದಪ್ಪವಾಗಿರುವ ಗಂಡದೂರ್ವಾ ಎಂಬ ಇನ್ನೊಂದು ಬಗೆ ಗರಿಕೆ ಕೂಡ ಇದೆ. ರಕ್ತಸೋರಿಕೆ ತಡೆಗಟ್ಟಲು, ಅಜೀರ್ಣ ನಿವಾರಣೆಗೆ, ಚರ್ಮ ವ್ಯಾಧಿಗೆ, ಮಧುಮೇಹ, ಸರ್ಪಸುತ್ತು, ಮೂತ್ರ ಸಂಬಂಧಿ ಕಾಯಿಲೆ ನಿವಾರಣೆಗೆ ಗರಿಕೆ ಬಳಕೆಯಾಗುತ್ತದೆ.

***

ದೂರ್ವ, ಶತವೀರ್ಯ, ಗೋಲೇಮಿ, ಮತ್ಸ್ಯಶಕುಲಾದಿನಿ ಗಂಡದೂರ್ವಾ, ಧುಬ್ ದೂಬ್, ಅರಗಂ ಪಿಲ್, ಕರಕುಗರಿಕಾ, ಗರಿಕಗಡ್ಡಿ ಎಂಬ ಹೆಸರುಗಳಿಂದ ಕರೆಯುತ್ತಾರೆ.

    ಗರಿಕೆಯಲ್ಲಿ ಒಂಬತ್ತು ಪ್ರಭೇದಗಳಿವೆ ಎಂದು ಹಳೆಯ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಿದೆ. ಗರಿಕೆಯ ಉಪಯೋಗಗಳು ಅಷ್ಟಿಷ್ಟಲ್ಲ, ಬೆಟ್ಟದಷ್ಟು. ಇದನ್ನ ಅರಿತ ಮಹನೀಯರು, ಮನುಜಕುಲಕ್ಕೆ ಒಳಿತಾಗಲೆಂದು ಗರಿಕೆಯ ಉಪಯೋಗಗಳನ್ನು ತಿಳಿಸಿಕೊಟ್ಟರು. ಗರಿಕೆಯಲ್ಲಿನ ಆನೆಬಲದ ಶಕ್ತಿ ಸಾಮರ್ಥ್ಯಗಳನ್ನು ನೋಡಿಯೇ, ಪೂರ್ವಕಾಲದಲ್ಲಿ ಋಷಿಮುನಿಗಳು ಇದಕ್ಕೆ "ಸಹಸ್ರವೀರ್ಯಾ" "ಶತವೀರ್ಯ" ಎಂಬ ಹೆಸರುಗಳನ್ನು ಕೊಟ್ಟರು.
    ಹೋಮ, ಯಜ್ಞ ಯಾಗಾದಿಗಳಲ್ಲಿ ಸಮಿತ್ತು ದರ್ಭೆ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದಿಯೋ, ಗರಿಕೆ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹೋಮ ಯಜ್ಞ ಯಾಗಾದಿಗಳಲ್ಲಿ ಪೂಜೆ ಪ್ರಾರಂಭಿಸುವ ಮುನ್ನ, ಅರಸಿಣದಿಂದ ಮಾಡಿದ "ಪಿಳ್ಳೇರಾಯ ಗಣಪತಿ" ಯನ್ನು ಪೂಜಿಸಿ, ಗರಿಕೆಯನ್ನು ಅರ್ಪಿಸಿ ಪೂಜೆ ಕಾರ್ಯಗಳನ್ನು ಪ್ರಾಂಭಿಸುವುದು ವಾಡಿಕೆ. 
    ಗರಿಕೆಯ ದಗ್ಧವಾಗಿ ಬರುವ ಹೋಮ ಧೂಮವು, ಕಣ್ಣಿನ ಕಾಂತಿಯನ್ನು ವೃದ್ಧಿಸುತ್ತದೆ. ಶಾರೀರಿಕ ಹಾಗು ಆತ್ಮಶಕ್ತಿಯನ್ನು ಸಹ ವೃದ್ಧಿಸುತ್ತೆ.
    ಗಣಪತಿಗೆ ಅತಿ ಪ್ರಿಯವಾದದ್ದು, ಪೂಜೆಗೆ ಶ್ರೇಷ್ಠವಾದದ್ದು ಗರಿಕೆ. ಪವಿತ್ರವಾದ 21 ಗರಿಕೆಯಿಂದ ದಿನವು ಅರ್ಚನೆ ಮಾಡಿದರೆ, ಸರ್ವ ವಿಘ್ನಗಳು ದೂರವಾಗಿ ಇಷ್ಟಕಾರ್ಯ ಸಿದ್ಧಿಸುತ್ತೆ ಎಂಬ ಅಚಲ ನಂಬಿಕೆ ಹಿಂದೂಧರ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. 
   ಗರಿಕೆಯಲ್ಲಿ ಔಷಧೀಯ ಭಂಡಾರವೇ ತುಂಬಿದೆ. 48ದಿನಗಳಕಾಲ, ಬೆಳಿಗ್ಗೆ ಸಂಜೆ 50ml ನಂತೆ ಗರಿಕೆ ಚಿಗರಿನ ರಸ ಸೇವಿಸುತ್ತಾ ಬಂದರೆ, ಅನೇಕ ವ್ಯಾಧಿಗಳು  ಗುಣವಾಗುತ್ತೆ. ದೇಹದಲ್ಲಿ ನರದೌರ್ಬಲ್ಯ ದೂರವಾಗಿ ಮಾಂಸಖಂಡಗಳಿಗೆ ಅಗಾಧ ಶಕ್ತಿ ಬರುತ್ತೆ. 
    ಒಂದು ಹಿಡಿ ತಾಜಾ ಗರಿಕೆ ಬೇರನ್ನು ತಂದು, ಶುದ್ಧಗೊಳಿಸಿ, ಮಡಿಕೆಯಲ್ಲಿ ಹಾಕಿ, ಅದಕ್ಕೆ 2 ಲೋಟ ನೀರು, ಚಿಟಿಕೆ ಕಾಳುಮೆಣಸು ಚೂರ್ಣ, ಚಿಟಿಕೆ ಜೀರಿಗೆ ಚೂರ್ಣ, ಚಿಟಿಕೆ ಕಲ್ಲುಪ್ಪು ಹಾಕಿ, ಒಲೆಯಮೇಲಿಟ್ಟು, ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಸೋಸಿಕೊಂಡು, ಬೆಳಿಗ್ಗೆ ಸಂಜೆ 50ml ನಂತೆ ಹಿರಿಯರು, 10ml ನಂತೆ ಮಕ್ಕಳು ಸೇವಿಸಿದರೆ, ನೆಗಡಿ, ಜ್ವರ, ಕೆಮ್ಮು, ಕಫ, ಶೀತಜ್ವರ ನಿವಾರಣೆಯಾಗುತ್ತೆ. 
    ದಿನವು ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು, ತಾಜಾ ಗರಿಕೆ ಹುಲ್ಲಿನ ರಸ 50ml ನಂತೆ ಕುಡಿಯುತ್ತಾ ಬಂದರೆ, ಅಧಿಕ ರಕ್ತದೊತ್ತಡ, ಮಧುಮೇಹ ಹತೋಟಿಗೆ ಬರುತ್ತೆ. ಮೂತ್ರನಾಳ,ಮೂತ್ರಕೋಶಕ್ಕೆ ಸಂಬಂಧಿಸಿದ ಸೊಂಕು,   ಇತರೆ ಸಮಸ್ಯೆಗಳು ವಾಸಿಯಾಗುತ್ತೆ. ಬಾಯಿಹುಣ್ಣು, ಬಾಯಿದುರ್ವಾಸನೆ ನಿವಾರಣೆಯಾಗುತ್ತೆ.
  ಎರಡು ಹಿಡಿಯಷ್ಟು ತಾಜಾ ಗರಿಕೆ ಬೇರನ್ನು ತಂದು ಶುದ್ಧಗೊಳಿಸಿ, ಒಂದು ಮಡಿಕೆಗೆ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಚೆನ್ನಾಗಿ ಮಂದದುರಿಯಲ್ಲಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ ಸೋಸಿಕೊಂಡು, ಅದಕ್ಕೆ 1 ಚಮಚ ಅತಿಮಧುರ ಚೂರ್ಣ, 1 ಚಮಚ ಶುದ್ಧಿಮಾಡಿದ ಅಶ್ವಗಂಧ ಚೂರ್ಣ, 1 ಚಮಚ ಕೆಂಪು ಕಲ್ಲುಸಕ್ಕರೆ ಬೆರಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು ಸೇವಿಸುತ್ತಾ ಬಂದರೆ, ಪುರುಷರಲ್ಲಿ ನಪುಂಷಕತ್ವ ದೂರವಾಗಿ ವೀರ್ಯಾಣು ವೃದ್ಧಿಯಾಗುತ್ತೆ. ಮಾಂಸಖಂಡಗಳಿಗೆ ಅಗಾಧವಾದ ಶಕ್ತಿ ಬರುತ್ತೆ. ದೇಹದಲ್ಲಿ ನರದೌರ್ಬಲ್ಯ ದೂರವಾಗುತ್ತೆ. 
    ಮೂಗಿನಲ್ಲಿ ರಕ್ತಸ್ರಾವವಾಗುವ ಸಮಯದಲ್ಲಿ, ಗರಿಕೆ ಚಿಗುರಿನ ರಸವನ್ನು 2-3 ಹನಿ ಹಾಕಿದರೆ ತಕ್ಷಣ ನಿಲ್ಲುತ್ತೆ. ಹೊಟ್ಟೆಗೆ 20ml ನಂತೆ ಸೇವಿಸಬೇಕು. 
     ಗರಿಕೆ ಬೇರಿನ ಕಷಾಯವನ್ನು ಆಯುರ್ವೇದ ವೈದ್ಯರ ಸಲಹೆಯಂತೆ ಕುಡಿಸಿದರೆ, ನಿಶಕ್ತಿಯಿಂದ  ಬಳಲುತ್ತಿರುವ ಮಕ್ಕಳಿಗೆ ಹಾಗು ಬೆಳವಣಿಗೆ ಕಾಣದ ಮಕ್ಕಳಿಗೆ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. 
    ಗರಿಕೆ ಚಿಗುರಿನ ರಸವನ್ನು ನಿಯಮಿತವಾಗಿ  ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ತಗ್ಗಿ  ಮೂತ್ರದಲ್ಲಿನ ಉರಿ ನಿವಾರಣೆಯಾಗುತ್ತೆ. ವಾತನೊವು, ಕೀಲುನೋವು ವಾಸಿಯಾಗುತ್ತೆ. 
    ದಿನವು ಗರಿಕೆ ರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಕಲಸಿ ಕುಡಿಯುತ್ತಾ ಬಂದರೆ, ಮೂತ್ರಪಿಂಡದಲ್ಲಿನ ಕಲ್ಲು ಕರಗುತ್ತೆ. 
    ಸ್ತ್ರೀಯರು 40-50ml ನಂತೆ ಸೇವಿಸಿದರೆ, ಋತಸ್ರಾವ ಸಮಸ್ಯೆಗಳು ನಿವಾರಣೆಯಾಗುತ್ತೆ. 
  ಗರಿಕೆ ರಸ ಸೇವಿಸುವುದರಿಂದ ಮೂತ್ರಬಂಧ ಸಮಸ್ಯೆ ವಾಸಿಯಾಗಿ, ಮೂತ್ರ ಸರಾಗವಾಗುತ್ತೆ. 
    ಹಸಿ ಅರಸಿಣ ಕೊಂಬಿನರಸ ಗರಿಕೆ ಹುಲ್ಲಿನರಸ ಸಮನಾಗಿ ಬೆರಸಿ 30-40ml ನಂತೆ ಹೊಟ್ಟೆಗೆ ಸೇವಿಸಿ, ಇದನ್ನೇ ದೇಹಕ್ಕೆ ಲೇಪನ ಮಾಡಿಕೊಂಡು 1 ಗಂಟೆಯ ನಂತರ ಸ್ನಾನ ಮಾಡುವುದರಿಂದ ಚರ್ಮವ್ಯಾಧಿಗಳು ನಿವಾರಣೆಯಾಗುತ್ತೆ. ವ್ರಣ, ಗಾಯ, ಹುಳುಕಡ್ಡಿ, ನವೆ ದದ್ದು ಸಹ ಗುಣವಾಗುತ್ತೆ. 
    ತಾಜಾ ರಸ ನಿಯಮಿತವಾಗಿ ಸೇವಿಸುವುದರಿಂದ, ಮಾನಸಿಕ ಸಮಸ್ಯೆಗಳು, ಮೆದುಳಿನ ಸಮಸ್ಯೆಗಳು ನಿವಾರಣೆಯಾಗುತ್ತೆ.
    ಗರಿಕೆ ಚಿಗುರಿನ ಕಷಾಯ ಸೇವನೆಯಿಂದ, ಗರ್ಭಕೋಶ ಜಾರುವಿಕೆ, ಅತಿ ಋತುಸ್ರಾವ, ಯೋನಿಯಲ್ಲಿ ತುರಿಕೆ ಉರಿ ನಿವಾರಣೆಯಾಗುತ್ತೆ. 
   ಚೇಳು, ವಿಷಕ್ರಿಮಿಗಳು ಕಚ್ಚಿದಾಗ 2 ಗಂಟೆಗೊಮ್ಮೆ 30ml ನಂತೆ ರಸ ಹೊಟ್ಟೆಗೆ ಸೇವಿಸಿದರೆ ದೇಹದಲ್ಲಿನ ವಿಷ ನಿವಾರಣೆಯಾಗುತ್ತೆ.
    ಕಷಾಯದಿಂದ ಗಂಟೆಗೊಮ್ಮೆ ಬಾಯಿ ಮುಕ್ಕಳಿಸುತ್ತಿದ್ದರೆ, ಬಾಯಿಹುಣ್ಣು, ಬಾಯಿ ದುರ್ವಾಸನೆ, ವಸಡುನೋವು, ವಸಡಿನಲ್ಲಿ ರಕ್ತಸ್ರಾವ ಗುಣವಾಗುತ್ತೆ.
    ಹೊಟ್ಟೆಯಲ್ಲಿ ಸಂಕಟ ಉರಿ ನೋವು ಇದ್ದಾಗ ಗರಿಕೆ ರಸ ಸೇವಿಸಿದರೆ ಶೀಘ್ರ ನಿವಾರಣೆಯಾಗುತ್ತೆ. ಮೂತ್ರದಲ್ಲಿ ರಕ್ತ ಬೀಳುತ್ತಿದ್ದರೆ ನಿಲ್ಲುತ್ತೆ. 

    ಗರಿಕೆ ರಸವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ಮಲಬದ್ಧತೆ, ಮೂಲವ್ಯಾಧಿ ನಿವಾರಣೆಯಾಗುತ್ತೆ. 
         

ಸಂಗ್ರಹ ಮಾಹಿತಿ.
****

No comments:

Post a Comment