ಪರ್ವ ಅಂದರೆ ಹಬ್ಬ. ಹಬ್ಬವೆಂದರೆ ಸಂಭ್ರಮ, ಸಡಗರ, ಸಂತೋಷ, ಸುಖ-ಭೋಗದ ಕನಸು ಕಾಣುತ್ತೇವೆ. ಆದರೆ ಜೈನಧರ್ಮದ ವಿಶಿಷ್ಟ ಆಚರಣೆಯಾದ ದಶಲಕ್ಷಣ ಪರ್ವ ಭೋಗದ ಪರ್ವವಲ್ಲ, ತ್ಯಾಗದ ಪರ್ವ, ವೈರಾಗ್ಯದ ಪರ್ವ. ವೈರಾಗ್ಯದ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಪರ್ವವಾಗಿದೆ.
ಭಾದ್ರಪದ ಮಾಸದಲ್ಲಿ ಪಂಚಮಿಯಿಂದ ಹುಣ್ಣಿಮೆಯವರೆಗೆ ಹತ್ತು ದಿನಗಳ ಕಾಲ ಜೈನರು ದಶಲಕ್ಷಣ ಪರ್ವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಇದು ಅಧ್ಯಾತ್ಮಿಕ ಪರ್ವವಾಗಿದ್ದು, ನಮ್ಮ ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ಧಗೊಳಿಸುವ ಹಬ್ಬವಾಗಿದೆ. ವರ್ತನೆಯಲ್ಲಿ ಪರಿವರ್ತನೆ ಮಾಡುವ ಪರ್ವವಾಗಿದೆ. ವಿಕಾರ ಭಾವನೆಗಳನ್ನು ತ್ಯಜಿಸಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶವಾಗಿದೆ.
ಈ ಪರ್ವದಲ್ಲಿ ಶ್ರಾವಕ-ಶ್ರಾವಕಿಯರು ಸಂಯಮಿಗಳಾಗುತ್ತಾರೆ. ಜಪ-ತಪ, ಪೂಜೆ, ಧ್ಯಾನ, ಪ್ರಾರ್ಥನೆಯಲ್ಲಿ ತಲ್ಲೀನರಾಗುತ್ತಾರೆ. ತಮ್ಮ ಪ್ರಾಯ, ಶಕ್ತಿ-ಸಾಮರ್ಥ್ಯಕ್ಕೆ ಅನುಗುಣವಾಗಿ ಉಪವಾಸ ಮಾಡುತ್ತಾರೆ.
ದಶಧರ್ಮಗಳು: ಉತ್ತಮ ಕ್ಷಮೆ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ ಮತ್ತು ಬ್ರಹ್ಮಚರ್ಯ – ಇವು ದಶಧರ್ಮಗಳು. ಒಂದೊಂದು ಪರ್ವವು ಒಂದೊಂದು ದಿನಕ್ಕೆ ಮೀಸಲಾಗಿದೆ. ಆಯಾ ದಿನ
ಆ ಧರ್ಮದ ಬಗ್ಗೆ ಚಿಂತನ – ಮಂಥನ ನಡೆಸಿ ಆತ್ಮ ಧರ್ಮವನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತದೆ. ಎಲ್ಲಾ ಬಸದಿಗಳಲ್ಲಿ ಅಷ್ಟವಿಧಾರ್ಚನೆ, ಭಜನೆ, ಪ್ರಾರ್ಥನೆ, ವಿದ್ವಾಂಸರಿಂದ ಪ್ರವಚನ, ವಿಶೇಷ ಆರಾಧನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಕ್ಷಮಾಧರ್ಮ: ಕ್ರೋಧವೆಂಬ ಕಷಾಯವನ್ನು, ಕೋಪ ತಾಪವನ್ನು, ಒರಟುತನವನ್ನು ಬಿಟ್ಟು ಸರಳ, ಸಭ್ಯ, ಸಾತ್ವಿಕನಾಗಿ ಬಾಳುವುದೇ ಕ್ಷಮಾಧರ್ಮ. ಕ್ಷಮೆಯು ಅಂತರಂಗದ ಸ್ವಭಾವ. ಅಹಿಂಸೆಯ ಹೆಗ್ಗುರುತು. ಇಂತಹ ಸೌಮ್ಯ ಗುಣವನ್ನು ಬೆಳೆಸಿಕೊಂಡು ಬಾಳುವುದೇ ಉತ್ತಮ ಕ್ಷಮಾಧರ್ಮವಾಗಿದೆ.
ಮಾರ್ದವ: ಮನ, ವಚನ, ಕಾಯಗಳಲ್ಲಿ ಮೃದು ಸ್ವಭಾವದಿಂದ, ಶಾಂತಿಯಿಂದ ಬಾಳುವುದೇ ಮಾರ್ದವ ಧರ್ಮ. ಅಹಂಕಾರ ತೊರೆದು, ಮಮಕಾರ ಬಿಟ್ಟು ಸರಳ ಜೀವನ ನಡೆಸುವುದೇ ಮಾರ್ದವವಾಗಿದೆ.
ಆರ್ಜವ: ಕುಟಿಲತೆಯನ್ನು ತ್ಯಜಿಸಿ ಧರ್ಮ, ನ್ಯಾಯಮಾರ್ಗದಲ್ಲಿ ಸಾತ್ವಿಕಜೀವನ ನಡೆಸುವುದೇ ಆರ್ಜವ ಧರ್ಮವಾಗಿದೆ.
ಶೌಚ: ಆಂತರಿಕ ಪವಿತ್ರತೆಯೇ ಶೌಚಧರ್ಮ, ಅತಿಯಾಸೆ, ಜಿಪುಣತನ ತೊರೆದು ಉದಾರಗುಣಗಳಿಂದ ದಾನ, ಧರ್ಮ, ಪರೋಪಕಾರದೊಂದಿಗೆ ಉತ್ತಮ ಜೀವನ ನಡೆಸುವುದೇ ಶೌಚಧರ್ಮವಾಗಿದೆ.
ಸತ್ಯ: ಸುಳ್ಳು, ಮೋಸ, ವಂಚನೆಗಳನ್ನು ತೊರೆದು ಪ್ರಾಮಾಣಿಕವಾಗಿ ಬಾಳುವುದೇ ಸತ್ಯಧರ್ಮ. ತನ್ನ ನಡೆ – ನುಡಿಯನ್ನು ಉತ್ತಮವಾಗಿಟ್ಟುಕೊಂಡು ಸತ್ಯವಾದ ಧರ್ಮ. ದೇವರು, ಗುರು, ಶಾಸ್ತ್ರವನ್ನು ನಂಬಿ ತಿಳಿದು ಪಾಲಿಸುವುದೇ ಉತ್ತಮ ಸತ್ಯವಾಗಿರುತ್ತದೆ.
ಸಂಯಮ: ಇಂದ್ರಿಯ ಮತ್ತು ಮನಸ್ಸನ್ನು ನಿಗ್ರಹಿಸಿ, ಶೀಲವಂತರಾಗಿ, ವ್ರತ-ನಿಯಮಗಳೊಂದಿಗೆ ಧ್ಯಾನ, ಸ್ವಾಧ್ಯಾಯ ಮಾಡುವುದೇ ಸಂಯಮ ಧರ್ಮವಾಗಿದೆ.
ತಪ: ಆಸೆ-ಆಕಾಂಕ್ಷೆಗಳನ್ನು ನಿರೋಧಿಸಿ ತನು-ಮನವನ್ನು ನಿಯಂತ್ರಿಸಿ ಉಪವಾಸಾದಿ ನಿಯಮಗಳ ಪಾಲನೆ ಉತ್ತಮ ತಪವಾಗಿದೆ.
ತ್ಯಾಗ: ಅಹಂಕಾರ, ಮಮಕಾರ ತ್ಯಜಿಸಿ, ದಾನ-ಧರ್ಮ, ಪರೋಪಕಾರ ಮಾಡುತ್ತ, ಆತ್ಮಧರ್ಮವನ್ನು ನಂಬಿ, ತಿಳಿದು ಪಾಲಿಸುವುದೇ ಉತ್ತಮ ತ್ಯಾಗಧರ್ಮವಾಗಿದೆ.
ಆಕಿಂಚನ್ಯ: ಎಲ್ಲ ಬಾಹ್ಯ ಪರಿಗ್ರಹಗಳನ್ನು ತೊರೆದು ವೀತರಾಗಭಾವದಿಂದ ಬಾಳುವುದೇ ಆಕಿಂಚನ್ಯ ಧರ್ಮ. ಧಾರ್ವಿುಕ ಕ್ರಿಯೆಯಲ್ಲಿ ತೊಡಗಿ, ಸಾತ್ವಿಕ ವೃತ್ತಿಯಿಂದ ಬಾಳುವುದೇ ಆಕಿಂಚನ್ಯ ಧರ್ಮವಾಗಿದೆ.
ಬ್ರಹ್ಮಚರ್ಯ: ಆತ್ಮಜ್ಞಾನವನ್ನು ಹೊಂದಿ ಆತ್ಮಾರಾಧನೆಯಲ್ಲಿ ನಿರತವಾಗಿ, ಸರಳ, ಸಾತ್ವಿಕ ಆಹಾರಸೇವನೆಯೊಂದಿಗೆ ಬಾಳುವುದೇ ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ.
ಈ ದಶಧರ್ವರಾಧನೆಯ ಕೊನೆಯ ದಿನ ಕ್ಷಮಾವಾಣಿ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದೆ. ಪರಸ್ಪರ ಕ್ಷಮೆ ಯಾಚಿಸುವುದರ ಮೂಲಕ ತಮ್ಮಿಂದ ಆಗಿರುವ ತಪ್ಪು-ಕೋಪಗಳನ್ನು ಮರೆತು ಕ್ಷಮಿಸಬೇಕೆಂದು ಕೇಳುತ್ತಾರೆ.
(ಆಕರ: ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ)
****
ಪಲಿಟಾನ ಗುಜರಾತಿನ ಒಂದು ಬೆಟ್ಟ. ಇದನ್ನು ಅತ್ಯಂತ ಪುಣ್ಯ ತೀರ್ಥಕ್ಷೇತ್ರ ಎಂದು ಪರಿಗಣಿಸಲಾಗಿದೆ. ಈ ಬೆಟ್ಟದ ಮೇಲೆ 900ದೇವಾಲಯಗಳಿವೆಯಂತೆ. ಇದು ಜಗತ್ತಿನ ಅತಿ ದೋಡ್ಡ ದೇವಾಲಯಗಳ ಸಂಕೀರ್ಣ. ನೀವೀಗ ನೋಡುತ್ತಿರುವುದು ಅದರ ವೈಮಾನಿಕ ವೀಕ್ಷಣೆ.
***
No comments:
Post a Comment