SEARCH HERE

Monday, 12 April 2021

ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ ganahoma sankashti, daivaradhane



ಇಲ್ಲಿ ನಾವು ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕು. ನಾವು ನಮ್ಮ ದೈನಂದಿನ ಜೀವನದಲ್ಲಿ ಗಣಹೋಮ, ನವಗ್ರಹಹೋಮ, ದೈವಾರಾಧನೆ, ಸಂಕಷ್ಟಿ, ಇತ್ಯಾದಿ ರೂಪದಲ್ಲಿ ಉಪಾಸನೆ ಮಾಡುತ್ತೇವೆ. ಇದು ತಪ್ಪೇ? ನಾವು ಗಣಪತಿ ಅಥವಾ ಇನ್ಯಾವುದೋ ಪ್ರತೀಕದಲ್ಲಿ ಭಗವಂತನ ಆರಾಧನೆ ಮಾಡಿದರೆ ನಮಗೆ ಮೋಕ್ಷ ಪ್ರಾಪ್ತಿ ಇಲ್ಲವೇ? ಯಾವುದು ಸರಿ, ಯಾವುದು ತಪ್ಪು? ಯಾವುದು ತ್ರೈವಿಧ್ಯಧರ್ಮ, ಯಾವುದು ಭಾಗವತ ಧರ್ಮ ?

ನಮ್ಮಲ್ಲಿ ಇಂದು ಭಾಗವತ ಧರ್ಮ ಕಣ್ಮರೆಯಾಗುತ್ತಿದೆ. ಯಾವುದೇ ಪ್ರತೀಕದ ಅಂತರ್ಯಾಮಿ ಭಗವಂತನ ಪೂಜೆ ತಪ್ಪಲ್ಲ. ಆದರೆ ಅದರ ಹಿಂದಿರುವ ನಮ್ಮ ಸಂಕಲ್ಪ ತಪ್ಪು. ಉದಾಹರಣೆಗೆ ನವಗ್ರಹ ಹೋಮ. ಒಂದು ವೇಳೆ ನಾವು ಯಾವ ಫಲ ಕಾಮನೆ ಇಲ್ಲದೆ, ಕೇವಲ ಮೋಕ್ಷ ಪ್ರಾಪ್ತಿಗಾಗಿ, ಸಕಲ ದೇವತಾಪರಿವಾರನಾದ, ನವಗ್ರಹ ಅಂತರ್ಗತ ನಾರಾಯಣ ಪ್ರೀತ್ಯರ್ಥ ನವಗ್ರಹ ಹೋಮ ಮಾಡಿದರೆ ಏನೂ ತಪ್ಪಿಲ್ಲ. ಆದರೆ ಅಲ್ಲಿ ನಾವು ‘ನವಗ್ರಹ ಅಂತರ್ಗತ ನಾರಾಯಣ ಪ್ರಸನ್ನನಾಗಿ ಆ ಮೂಲಕ ನವಗ್ರಹ ದೋಷ ಪರಿಹಾರ ಮಾಡಲಿ’ ಎಂದು ಸಂಕಲ್ಪ ಮಾಡಿದಾಗ ಅದು ತ್ರೈವಿಧ್ಯ ಧರ್ಮವಾಗುತ್ತದೆ. ಸಂಕಲ್ಪ ಮಾಡುವಾಗ ಯಾವುದೇ ಕಾಮನೆ ಸೇರಿಸದೆ ಕೇವಲ ಭಗವದ್ ಪ್ರೀತ್ಯರ್ಥ ಎಂದು ಯಾವ ಕಾಮ್ಯ ಕರ್ಮ ಮಾಡಿದರೂ ಅದು ಭಾಗವತ ಧರ್ಮ. ಭಗವಂತ ಸುಪ್ರೀತನಾದರೆ ಎಲ್ಲವೂ ಸಿದ್ಧಿ. ಅವನು ಕೊಟ್ಟಿದ್ದನ್ನು ಸಂತೋಷವಾಗಿ ಭೋಗಿಸು, ಕೊಡದಿದ್ದನ್ನು ಬಯಸಬೇಡ. ನಿನಗೆ ಬಂದ ಕಷ್ಟ ನಿವಾರಣೆ ಮಾಡು ಎಂದು ಭಗವಂತನನ್ನು ಪೂಜಿಸಬೇಡ, ಬದಲಿಗೆ ಬಂದದ್ದನ್ನು ಪ್ರಸಾದವಾಗಿ ಸ್ವೀಕರಿಸು ಮತ್ತು ಜ್ಞಾನ ವೈರಾಗ್ಯ ಭಕ್ತಿ-ಮೋಕ್ಷ ಕೊಡು ಎಂದು ನಿರಂತರ ಭಗವಂತನನ್ನು ಪ್ರಾರ್ಥಿಸು. ನಿನ್ನ ರಕ್ಷಣೆಯ ಭಾರ ಆ ಭಗವಂತನದ್ದು. ಅದಕ್ಕಾಗಿ ನೀನು ತಲೆ ಕೆಡಿಸಿಕೊಳ್ಳಬೇಡ. ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ ಅದು ಆಕಸ್ಮಿಕವಲ್ಲ. ಅದು ಭಗವಂತನ ಇಚ್ಛೆ, ಅದರ ನಿವಾರಣೆಗಾಗಿ ನೀನು ಭಗವಂತನನ್ನು ಪೂಜಿಸುವುದಲ್ಲ ಬದಲಿಗೆ ಭಗವಂತನನ್ನು ಸೇರಲು ಭಗವಂತನನ್ನು ಪೂಜಿಸುವುದು. ಈ ರೀತಿ ನಾವು ನಮ್ಮ ಸಂಕಲ್ಪದ ಹಿಂದಿನ ಅನುಸಂಧಾನವನ್ನು ಬದಲಿಸಿಕೊಂಡಾಗ ಅದು ಭಾಗವತ ಧರ್ಮವಾಗುತ್ತದೆ. ಒಬ್ಬ ತ್ರೈವಿಧ್ಯ ತನ್ನ ಗುರುವಿಗೆ ‘ನನ್ನ ಗುರು’ ಎಂದು ನಮಸ್ಕಾರ ಮಾಡಿದರೆ ಭಾಗವತ ‘ಆ ಗುರುಗಳ ಒಳಗೆ ಭಗವಂತ ಕೂತು ನನಗೆ ಪಾಠ ಹೇಳುತ್ತಿದ್ದಾನೆ’ ಎಂದು ತಿಳಿದು ನಮಸ್ಕಾರ ಮಾಡುತ್ತಾನೆ. ಭಾಗವತ ತನ್ನೆಲ್ಲಾ ಕ್ರಿಯೆಯಲ್ಲಿ ಭಗವಂತನನ್ನು ಕಾಣುತ್ತಾನೆ. ಆತ ತನ್ನೆಲ್ಲಾ ಕ್ರಿಯಾ ಕರ್ಮದಲ್ಲಿ ಮೋಕ್ಷ ಮತ್ತು ಭಗವಂತನನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಆತನ ಪೂಜಾ ಸಂಕಲ್ಪದಲ್ಲಿ ಮೋಕ್ಷದ ಬಯಕೆಯನ್ನು ಬಿಟ್ಟು ಇನ್ಯಾವುದೇ ಬಯಕೆ ಇರುವುದಿಲ್ಲ. ನಾವು ಈ ಎತ್ತರಕ್ಕೇರುವುದು ಅಸಾಧ್ಯವಲ್ಲ. ಇದನ್ನು ಸಾಧ್ಯ ಮಾಡಲು ಪ್ರಯತ್ನ ಬೇಕು ಅಷ್ಟೇ. ನಾವು ಎಷ್ಟುಎಷ್ಟು ಭಗವತ್ ಪ್ರೀತ್ಯರ್ಥ ಕರ್ಮ ಮಾಡುತ್ತೇವೋ ಅಷ್ಟುಅಷ್ಟು ಹೆಚ್ಚು ಮೋಕ್ಷಕ್ಕೆ ಹತ್ತಿರವಾಗುತ್ತೇವೆ. ಭಗವಂತನಲ್ಲಿ ‘ನನಗೆ ಇದನ್ನು ಕೊಡು’ ಎಂದಾಗಾಲಿ ಅಥವಾ ‘ಇದನ್ನು ನಿವಾರಿಸು’ ಎಂದಾಗಲಿ ಎಂದೂ ಕೇಳಬೇಡ. ನಿನಗೆ ಏನು ಬೇಕು ಎನ್ನುವುದು ಭಗವಂತನಿಗೆ ಗೊತ್ತಿದೆ, ಅದನ್ನು ಭಗವಂತನಿಗೆ ಬಿಡು. ಕೇವಲ ಭಗವತ್ ಪ್ರೀತಿಗಾಗಿ, ಮೋಕ್ಷ ಸಾಧನೆಗಾಗಿ ಕರ್ಮ ಮಾಡು”. “ಇದು ಕೇವಲ ಭೀಮಸೇನ/ವಾಯುದೇವರಿಗೆ ಮಾತ್ರ” ಎಂದು ಪಲಾಯನ ವಾದ ಮಾಡದೆ ಯಾವುದೇ ಫಲ ಕಾಮನೆ ಇಲ್ಲದೆ ಪೂರ್ಣ ಭಕ್ತಿಯಿಂದ ಭಗವಂತನ ಪೂಜೆ ಮಾಡು. ಪೂಜೆಯಲ್ಲಿ ನಿನಗೆ ಬೇಡಲು ಇರುವ ಅಧಿಕಾರ ಕೇವಲ ‘ಮೋಕ್ಷ ಮತ್ತು ಭಗವಂತ’. ಅದನ್ನು ಪಡೆಯಲು ನಿನ್ನ ಸಾಧನೆಯನ್ನು ಮೀಸಲಿಡು. ಜೀವನದಲ್ಲಿ ಬರುವ ಏಳು ಬೀಳು ಎಲ್ಲವೂ ನಶ್ವರ, ಆ ಬಗ್ಗೆ ಯೋಚಿಸದೆ, ಸಂಸಾರದಿಂದ ಕಳಚಿಕೊಂಡು ಸಾವಿಲ್ಲದ ಮೋಕ್ಷವನ್ನು ಸೇರುವುದಕ್ಕಾಗಿ ಸಾಧನೆ ಮಾಡು. ಇದು ಇಲ್ಲಿರುವ ಮೂಲ ಸಂದೇಶ.
ಭಗವಂತನ ಪೂಜೆಗೆ ಬೇಕಾಗಿರುವುದು ಧನ-ಕನಕವಲ್ಲ. ಕೇವಲ ನಿಷ್ಕಾಮ ಭಕ್ತಿ. ಭಗವಂತನ ಪೂಜೆ ಎಷ್ಟು ಸುಲಭ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:

ಅಧ್ಯಾಯ - 09: ಶ್ಲೋಕ – 26
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ।ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥೨೬॥
ಪತ್ರಮ್ ಪುಷ್ಪಮ್ ಫಲಮ್ ತೋಯಮ್ ಯಃ ಮೇ ಭಕ್ತ್ಯಾ ಪ್ರಯಚ್ಛತಿ ।
ತತ್ ಅಹಮ್ ಭಕ್ತಿ ಉಪಹೃತಮ್ ಅಶ್ನಾಮಿ ಪ್ರಯತ ಆತ್ಮನಃ –
ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೆ ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಆ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.
ಮಹೋನ್ನತನಾದ ಭಗವಂತನ ಪೂಜೆಗೆ ಮೂಲವಾಗಿ ಬೇಕಾಗಿರುವುದು ‘ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಳ್ಳುವುದು(involvement)’, ಮತ್ತು ‘ಮನಸ್ಸು ತುಂಬಿ ಆರಾಧನೆ’ ಮಾಡುವುದು. ಮನಸ್ಸಿನಲ್ಲಿ ಭಕ್ತಿ ತುಂಬಿ ತುಳಸಿ ಪತ್ರೆಯನ್ನೋ, ಹೂವನ್ನೋ ಅರ್ಪಿಸಿದರೆ ಅದನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇಲ್ಲಿ ಬಂಗಾರದ ಪೀಠವಾಗಲೀ, ಬೆಳ್ಳಿಯ ಹರಿವಾಣವಾಗಲಿ, ಪಂಚಪಾತ್ರೆಯಾಗಲಿ ಏನೂ ಬೇಡ. ಮನೆಯಲ್ಲಿ, ಮನೆ ತೋಟದಲ್ಲಿ ಏನಿದೆ ಅದನ್ನೇ ಅರ್ಪಿಸು. ಮನೆಯಲ್ಲಿ ಹಾಲಿಲ್ಲದಿದ್ದರೆ ಒಂದು ಲೋಟ ನೀರನ್ನು ಭಕ್ತಿಯಿಂದ ಅರ್ಪಿಸು. ಆದರೆ ಅದರ ಹಿಂದೆ ಭಾವ ಶುದ್ಧಿ ಇರಲಿ ಅಷ್ಟೇ. ಕೃಷ್ಣ ಹೇಳುತ್ತಾನೆ “ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಎಂದು. ಭಗವಂತ ಬಯಸುವುದು ನಮ್ಮ ಅಂತರಂಗದ ಪ್ರೀತಿಯನ್ನು ಮತ್ತು ಹೃದಯವಂತಿಕೆಯನ್ನು ಹೊರತು ಹೊರಗಿನ ವೈಭವವನ್ನಲ್ಲ. “ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ”-“ನೀನು ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿ, ಭಕ್ತಿಯಿಂದ ಏನು ಕೊಟ್ಟರೂ ಅದನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ ಕೃಷ್ಣ. ರಾಮಾಯಣದಲ್ಲಿ ಬರುವ ಶಬರಿಯ ಕಥೆ ಭಗವಂತನ ಈ ನುಡಿಗೆ ಒಂದು ದೃಷ್ಟಾಂತ.
ಕೃಪೆ: ಪದ್ಮಶ್ರೀ 🙏 ಶ್ರೀ ಬನ್ನಂಜೆ ಗೋವಿಂದಾಚಾರ್ಯರು🙏
( निष्काम भगवद् भक्ति की महिमा )
पत्रं पुष्पं फलं तोयं यो मे भक्त्या प्रयच्छति।
तदहं भक्त्युपहृतमश्नामि प्रयतात्मनः॥
जो कोई भक्त मेरे लिए प्रेम से पत्र, पुष्प, फल, जल आदि अर्पण करता है, उस शुद्धबुद्धि निष्काम प्रेमी भक्त का प्रेमपूर्वक अर्पण किया हुआ वह पत्र-पुष्पादि मैं सगुणरूप से प्रकट होकर प्रीतिसहित खाता हूँ
॥26॥
Patram pushpam phalam toyam yo me bhaktyaa prayacchati;
Tadaham bhaktyupahritamashnaami prayataatmanah.
Whoever offers Me with devotion and a pure mind (heart), a leaf, a flower, a fruit or alittle water—I accept (this offering).
***

ನವಗ್ರಹಾರಾಧನೆ - ಹೇಗೆ ? ಏಕೆ ?
ಗ್ರಹಚಾರ ದೋಷಕ್ಕೆ ಶಾಸ್ತ್ರದ ಪರಿಹಾರ....?

ಗ್ರಹಗಳಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಗ್ರಹಾರಾಧನೆಯನ್ನು ಶಾಸ್ತ್ರ ಹೇಳುತ್ತದೆ. “ದುಷ್ಟಾರಿಷ್ಟೇ ಸಮಾಯಾತೇ ಕರ್ತವ್ಯಂ ಗ್ರಹಶಾಂತಿಕಮ್” ಎಂಬುದಾಗಿ. ಮಳೆ, ಆಯುಷ್ಯ, ಆರೋಗ್ಯ, ಪುಷ್ಟಿ ಮೊದಲಾದ ಉದ್ದೇಶದಲ್ಲೂ ಗ್ರಹಗಳನ್ನು ಆರಾಧಿಸುವುದಿದೆ. ಈ ಗ್ರಹಾರಾಧನೆ ಸಾಮಾನ್ಯವಾಗಿ ಐದು ವಿಧ: 1) ಪೂಜೆ  2) ಅಧ್ವರ 3) ಜಪ 4) ಸ್ತೋತ್ರ 5)ದಾನ..... ಎಂಬುದಾಗಿ.

1) ಪೂಜೆ : ನವಗ್ರಹ ಪೂಜೆಯಲ್ಲಿ ನವಗ್ರಹ ಪ್ರತಿಮೆಗಳು ಅಥವಾ ಆಯಾಯ ಧಾನ್ಯಗಳು ಪ್ರತೀಕವೆನಿಸುತ್ತವೆ. ಆದಿತ್ಯಾದಿ ನವಗ್ರಹದ ಪ್ರತಿಮೆ ಇರುವಲ್ಲಿಗೆ ಹೋಗಿ ಅಭಿಷೇಕಾದಿ ಪೂಜೆಗಳನ್ನು ಮಾಡಿಸಿ ಪ್ರದಕ್ಷಿಣೆ ನಮಸ್ಕಾರಗಳ ಮೂಲಕ ಗ್ರಹಗಳ ಸಂಪ್ರೀತಿಯನ್ನು ಸಂಪಾದಿಸಬಹುದು. ಈ ಸಂದರ್ಭದಲ್ಲಿ ಆಯಾಯ ಗ್ರಹಗಳಿಗೆ ಪ್ರಿಯವಾದ ನೈವೇದ್ಯವನ್ನು ನಿವೇದಿಸಬಹುದು. 

ಸೂರ್ಯ ನಿಗೆ ಗುಡಾನ್ನ,  ಚಂದ್ರ ನಿಗೆ ಪಾಯಸ, ಕುಜ ನಿಗೆ ಪರಿಮಳಿಸುವ ಗಂಜಿ, ಬುಧ ನಿಗೆ ಕ್ಷೀರಾನ್ನ, ಗುರು ವಿಗೆ ಮೊಸರನ್ನ, ಶುಕ್ರ ನಿಗೆ ಘೃತಾನ್ನ, ಶನಿ ಗೆ ಎಳ್ಳು ಮಿಶ್ರಿತಾನ್ನ (ಕೃಸರ), ರಾಹು ವಿಗೆ ಕುಂಬಳ ಕಾಯಿ ಮತ್ತು ಉದ್ದು ಮಿಶ್ರಿತವಾದ ಅನ್ನ ಹಾಗೂ ಕೇತು ವಿಗೆ ಚಿತ್ರಾನ್ನ ವು ಅತ್ಯಂತ ಪ್ರಿಯವಾದ ಅನ್ನವೆನಿಸಿದ್ದು ಇದರ ನೈವೇದ್ಯ, ಆಹುತಿಗಳು ಗ್ರಹಪ್ರೀತಿಕರವೆಂದು ನವಗ್ರಹಕಾರಿಕೆ ಹೇಳುತ್ತದೆ.

2) ಅಧ್ವರ : ಅಧ್ವರ ಎಂದರೆ ಹೋಮ. ನವಗ್ರಹಾಂತರ್ಯಾಮಿ ಲಕ್ಷ್ಮೀನರಸಿಂಹನನ್ನು ಉದ್ದೇಶಿಸಿ ಅಗ್ನಿಯಲ್ಲಿ ಆಹುತಿಯನ್ನು ಕೊಡುವುದು. ನವಗ್ರಹಗಳ ಮಂತ್ರದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಮಿತ್ತು, ಚರು ಮತ್ತು ಆಜ್ಯಗಳಿಂದ ೨೮ ಅಥವಾ ೧೦೮ ಸಂಖ್ಯೆಯ ಆಹುತಿಗಳನ್ನು ಕೊಡಬೇಕು. ಚರು ಎಂದರೆ ಅನ್ನ, ಆಯಾಯ ಗ್ರಹಗಳಿಗೆ ಪ್ರಿಯವಾದ ಅನ್ನವನ್ನು ಹಿಂದೆ ಹೇಳಿದೆ.
ಸೂರ್ಯಾದಿ ಗ್ರಹಗಳಿಗೆ ಗುಡಾನ್ನವೇ ಮೊದಲಾದ ಆಯಾಯ ಅನ್ನದಿಂದಲೇ ಹೋಮಿಸುವುದು ಅತ್ಯಂತ ಉಚಿತ. ಹಾಗೆಯೇ ಪ್ರತಿಯೊಂದು ಗ್ರಹಗಳಿಗೂ ಅದರದೇ ಆದ ಸಮಿತ್ತುಗಳಿವೆ.

*ಸೂರ್ಯನಿಗೆ ಅರ್ಕ (ಎಕ್ಕ) 
*ಚಂದ್ರನಿಗೆ ಪಲಾಶ (ಮುತ್ತುಗ)
*ಕುಜನಿಗೆ ಖದಿರ, 
*ಬುಧನಿಗೆ ಉತ್ತಾರಣಿ 
*ಗುರುವಿಗೆ ಅಶ್ವತ್ಥ, 
*ಶುಕ್ರನಿಗೆ ಔದುಂಬರ 
*ಶನಿಗೆ ಶಮೀ, 
*ರಾಹುವಿಗೆ ದೂರ್ವಾ
*ಕೇತುವಿಗೆ ಕುಶ 

ಈ ಸಮಿತ್ತುಗಳಿಂದ, ಗುಡಾನ್ನಾದಿ ಚರುವಿನಿಂದ ಮತ್ತು ಗೋವಿನ ತುಪ್ಪದಿಂದ ಹೋಮಿಸುವುದೇ ನವಗ್ರಹ ಹೋಮ.

(ಈ ನವಗ್ರಹ ಸಮಿಧೆಗಳು ಇಂದಿಗೂ ಯಥೇಷ್ಟ ಉಪಲಬ್ಧವಿದೆ. ಸಮಿಧೆಗಳ ಪೂರ್ವ ತಯಾರಿ ಸಾಧ್ಯವಾಗದಿದ್ದಲ್ಲಿ ಹೋಮವನ್ನೇ ಮುಂದೆ ಹಾಕಿ ಸಾಮಗ್ರಿ ದೊರೆತ ಮೇಲೆಯೇ ಹೋಮಿಸುವುದು ಶಿಷ್ಟ ಪ್ರವೃತ್ತಿ (ದ್ರವ್ಯಗಳು ಸಿಗದೇ ಅನಿವಾರ್ಯವಾದಾಗ ಪ್ರತ್ಯಾಮ್ನಾಯವಾಗಿ ಬದಲಿ ದ್ರವ್ಯಗಳನ್ನು ಸ್ವೀಕರಿಸುವುದಕ್ಕೆ ಶಾಸ್ತ್ರದ ಅನುಮತಿಯಿದೆ. ) 
ಒಂದೊಂದು ಸಮಿಧೆಯ ಹೋಮಕ್ಕೂ ಶಾಸ್ತ್ರಕಾರರು ಫಲ ಹೇಳುತ್ತಾರೆ.

ಅರ್ಕೇಣ ವ್ಯಾಧಿನಾಶಃ ಸ್ಯಾತ್ ಫಲಾಶೈಃ ಸರ್ವಸಂಪದಃ |
ಖದಿರೇಣಾರ್ಥಸಿದ್ಧಿಃಸ್ಯಾತ್ ಅಪಾಮಾರ್ಗಃ ಸುಪುತ್ರದಃ ||
ಆಶ್ವತ್ಥೇನ ಪ್ರಜಾವೃದ್ಧಿಃ ಸೌಭಾಗ್ಯಂ ಸ್ಯಾದೌದುಂಬರಾತ್ |
ಶಮಿನಾ ಪಾಪಶಮನಂ ದೂರ್ವಯಾಯುಷ್ಯವರ್ಧನಮ್ll
ಕುಶೇನಬ್ರಹ್ಮವರ್ಚಃಸ್ಯಾದಿತ್ಯೇತದ್ ಸಮಿಧಾಂ ಫಲಮ್|

ಗ್ರಹಗಳಿಗೆ ಕೊಟ್ಟ ಆಹುತಿಯ ದಶಾಂಶ ಸಂಖ್ಯೆಯಲ್ಲಿ ಅಧಿದೇವತೆ, ಪ್ರತ್ಯಧಿದೇವತೆಗಳಿಗೂ ಆಹುತಿಯನ್ನು ಕೊಡಬೇಕು. 
ಕೊನೆಯಲ್ಲಿ ದುರ್ಗಾದಿ ಕೃತು ಷಡ್ಗುಣ್ಯ ದೇವತೆಗಳಿಗೆ
ಇಂದ್ರಾದಿ ಅಷ್ಟ ದಿಕ್ಪಾಲಕದೇವತೆಗಳನ್ನೂ ಪೂಜಿಸಿ, ಆಹುತಿ ನೀಡಿ ಪ್ರಾಯಶ್ಚಿತ ಹವನ ಮಾಡುತ್ತಾರೆ. ಇದು ಹೋಮದ ವಿಚಾರ..

3) ಜಪ : ನವಗ್ರಹಗಳಿಗೆ ಸಂಬಂಧಿಸಿದ ಒಂಬತ್ತು ವೇದಮಂತ್ರಗಳಿವೆ. ಇದರ ಉಪದೇಶವಿದ್ದವರು ಜಪ ಮಾಡ ಬೇಕು ಅವು ಆಯಾಯ ಗ್ರಹಗಳಿಗೆ ಪ್ರಿಯವಾದ ಮಂತ್ರಗಳು. ಅಂದರೆ ಆ ಮಂತ್ರದ ಮೂಲಕ ಪರಮಾತ್ಮನನ್ನು ಧ್ಯಾನಿಸಿದಾಗ ಗ್ರಹಪ್ರೀತಿಯು ಉಂಟಾಗುತ್ತದೆ.

ಯಾವ ಗ್ರಹಗಳ ಜಪ ಎಷ್ಟು ಮಾಡ ಬೇಕೆಂಬುದರ ಬಗ್ಗೆ‌ ಎರಡು ಕ್ರಮವಿದೆ. ಒಂದು ಕ್ರಮದಂತೆ ಜಪಸಂಖ್ಯೆಯನ್ನು ಕೋಷ್ಟಕದಲ್ಲಿ ಕೊಡಲಾಗಿದೆ. ಇನ್ನೊಂದು ಕ್ರಮದಂತೆ ಆಯಾಯ ಗ್ರಹಗಳ ದಶಾವರ್ಷಕ್ಕೆ ಅನುಗುಣವಾಗಿ ಜಪ ಮಾಡ ಬೇಕು. ಅಂದರೆ ಆದಿತ್ಯನ ದಶಾವರ್ಷ ೬ ವರ್ಷವಾದ್ದರಿಂದ ೬,೦೦೦ ಸಂಖ್ಯೆಯಲ್ಲಿ ಆದಿತ್ಯನ ಜಪವಾಗಬೇಕು. ಹಾಗೆಯೇ ಚಂದ್ರನಿಗೆ ೧೦,೦೦೦, ಕುಜನಿಗೆ ೭,೦೦೦, ಬುಧನಿಗೆ ೧೭,೦೦೦, ಗುರುವಿಗೆ ೧೬,೦೦೦, ಶುಕ್ರನಿಗೆ ೨೦,೦೦೦, ಶನೈಶ್ಚರನಿಗೆ ೧೯,೦೦೦, ರಾಹುವಿಗೆ ೧೮,೦೦೦, ಹಾಗೂ ಕೇತುವಿಗೆ ೭,೦೦೦ ಸಂಖ್ಯೆಯಲ್ಲಿ ಜಪವಾಗಬೇಕು. ಸ್ವಂತ ಕರ್ತೃವೇ ಇಷ್ಟು ಜಪ ಮಾಡುವುದು ದುಃಸಾಧ್ಯವಾದ್ದರಿಂದ ಶ್ರೋತ್ರಿಯ ಬ್ರಾಹ್ಮಣರ ಮೂಲಕ ಮಾಡಿಸಬಹುದು. ಅಲ್ಲದೇ
ಯಜಮಾನನು ಯಥಾಶಕ್ತಿ ಗಾಯತ್ರೀ ಜಪದಿಂದಲೂ ಗ್ರಹದೋಷವನ್ನು ಪರಿಹರಿಸಿಕೊಳ್ಳಬೇಕು

4) ಸ್ತೋತ್ರ :

ಪುರಾಣಗಳಲ್ಲಿ ಬಂದ ಅಥವಾ ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ನವಗ್ರಹ ಸ್ತೋತ್ರಗಳಿವೆ. ಇವನ್ನು ಪಠಿಸುವುದೂ ಗ್ರಹಪ್ರೀತಿ ಸಾಧಕವಾಗಿದೆ. 
ವೇದ ಮಂತ್ರದ ಬಗ್ಗೆ ತಿಳಿಯದವರೂ ಈ ಗ್ರಹ ಸ್ತೋತ್ರವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹ ದೋಷವನ್ನು ಪರಿಹರಿಸಿ ಕೊಳ್ಳಬಹುದು. 

5) ದಾನ - ಗ್ರಹಚಾರ ದೋಷ ಪರಿಹಾರದ ಹಲವು ಮಾರ್ಗಗಳಲ್ಲಿ ದಾನವೂ ಒಂದು. ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಪ್ರತಿಮೆ, ರತ್ನ, ವಸ್ತ್ರಗಳನ್ನು ದಾನ ಕೊಡುವುದರ ಮೂಲಕ ಗ್ರಹ ದೋಷ ಪರಿಹಾರವೆಂದು ಶಾಸ್ತ್ರ ಹೇಳುತ್ತದೆ. ಸುಶಕ್ತರು ಈ ನಾಲ್ಕೂ ದಾನಗಳನ್ನು ಕೊಡಬಹುದು. ಶಕ್ತಿಗನುಗುಣವಾಗಿ ಒಂದೋ ಎರಡೋ ದಾನ ಮಾಡಬಹುದು. ಎಷ್ಟು ದಾನ ಕೊಡುತ್ತಿದ್ದೇನೆ ಎನ್ನುವುದಕ್ಕಿಂತಲೂ ಕೊಡುವಾತನ ನಿರ್ವಂಚನೆ ಬುದ್ಧಿ ಮತ್ತು ಸ್ವೀಕರ್ತೃವಿನ ಪಾತ್ರತೆಯು ದಾನದ ಸಾಫಲ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಪ್ರತಿದಿನ ಮನೆಯಲ್ಲಿ ದೇವರ ಪೂಜೆ (ಸಾಲಿಗ್ರಾಮ ಅಥವಾ ಇಷ್ಟಲಿಂಗ ಪೂಜೆ), ಘಂಟಾನಾದ, ಶಂಖನಾದ, ತುಳಸೀಪೂಜೆ,
ಗೋ ಪೂಜೆ; ದೇವಸ್ಥಾನಕ್ಕೆ ಹೋಗುವುದು; ಸಾಲಿಗ್ರಾಮ ತೀರ್ಥ (ಪ್ರೋಕ್ಷಣೆ) ಸೇವನೆ 
ಗಾಯತ್ರೀ ಜಪ, ಘಂಟಾನಾದ, ವಿಷ್ಣು ಸಹಸ್ರನಾಮ ಮುಂತಾದ ಸ್ತೋತ್ರ ಪಠಣೆ, ದೇವ, ಗುರು ಮತ್ತು ಪಿತೃಗಳ ಮನಸಾ ಸ್ಮರಣೆ ಮನೆಯಲ್ಲಿ ಹಿರಿಯರ ಆದರಣೆ 
ಮನೆಗೆ ಬಂದ ಅತಿಥಿಗೆ ಉಪಚಾರ, ಮುತ್ತೈದೆಗೆ ಅರಿಶಿನ ಕುಂಕುಮ ಕೊಡುವುದು ವರ್ಷಕ್ಕೆ ಒಂದು ಸಲವಾದರೂ ಕುಲದೇವರ ದರ್ಶನ ;
ಮೂಲ ನಾಗ; ನಂಬಿಕೊಂಡು ಬಂದ ದೈವಗಳ ಪೂಜೆ

ಇವುಗಳು ಮನೆಯ "ವಾಸ್ತುದೋಷ" ಕುಟುಂಬದ ಸರ್ವರ ಗ್ರಹಚಾರದೋಷ ಇವುಗಳನ್ನು ನಿವಾರಿಸಲೂ ಸುಲಭ-ಸಾಧನ ಗಳಾಗಿವೆ.
**
ಹೋಮದ ಭಸ್ಮಧಾರಣೆ ಮತ್ತು ಮಹತ್ವ...

ಇದು ಎಲ್ಲಾ ರೀತಿಯ ಭಸ್ಮಗಳಿಗಿಂತಲೂ ತುಂಬಾ ಶ್ರೇಷ್ಟವಾದದ್ದು ಮತ್ತು ಶಕ್ತಿಶಾಲಿಯಾದದ್ದು..

೧. ಹೋಮದ ಭಸ್ಮದ ಧಾರಣೆಯಿಂದ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..
ದೇವರ ಅನುಗ್ರಹ ಇದ್ದು, ಸಕಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ..

೩.ಭಸ್ಮಧಾರಣೆಯಿಂದ ಸಕಲ ವಿಧವಾದ ಗೋಚರ ಅಗೋಚರ ದೃಶ್ಯ ಅದೃಶ್ಯ ರೋಗಗಳು ನಿವಾರಣೆಯಾಗುತ್ತದೆ ..

೪. ಶ್ರೀ ಮಹಾಗಣಪತಿ ಹೋಮದ ಭಸ್ಮ ಧರಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ..

೫. ಶ್ರೀ ಸುಬ್ರಹ್ಮಣ್ಯ ಹೋಮದ ಭಸ್ಮ ಉಪಯೋಗಿಸಿದರೆ ಮನೆಯಲ್ಲಿ ಗೃಹಕಲಹ ನಿಂತು ಎಲ್ಲರಿಗೂ ಶಾಂತಿ ಸಿಕ್ಕುತ್ತದೆ..

೬. ಶ್ರೀ ದುರ್ಗಾ ಹೋಮದ ಭಸ್ಮಧಾರಣೆಯಿಂದ ಸಕಲ ಶತೃಗಳೂ ನಾಶವಾಗಿ ನೆಮ್ಮದಿಯ ಸಂಸಾರವನ್ನು ಮಾಡುತ್ತಾರೆ..

೭. ಶ್ರೀ ನವಗ್ರಹ ಹೋಮದ ಭಸ್ಮಧಾರಣೆಯಿಂದ ಯಾವುದೇ ಗ್ರಹಗಳ ಕಾಟವೂ ಇರುವುದಿಲ್ಲ ..

೮. ಶ್ರೀ ಮಹಾಮೃತ್ಯುಂಜಯ ಹೋಮದ ಭಸ್ಮಧಾರಣೆಯಿಂದ ಸಕಲ ವಿಧವಾದ ಅಪಮೃತ್ಯುಗಳು ನಿವಾರಣೆಯಾಗುತ್ತದೆ ..

೯. ಶ್ರೀ ಲಲಿತಾ ತ್ರಿಪುರಸುಂದರೀ , ಶ್ರೀ ರಾಜರಾಜೇಶ್ವರೀ, ಶ್ರೀ ಗಾಯತ್ರೀ ದೇವಿ ಹೋಮದ ಭಸ್ಮಧಾರಣೆಯಿಂದ ಸಕಲ ಕಾರ್ಯಗಳು ದಿಗ್ವಿಜಯ ಹೊಂದಿ, ಆಜೀವಮಾನ ಪೂರ್ತಿ ಸುಖವಂತರಾಗಿರುತ್ತಾರೆ..

೧೦. ಶ್ರೀ ಸುದರ್ಶನ ಹೋಮದ ಭಸ್ಮದಿಂದ ಸಕಲ ಶತೃ ನಿವಾರಣೆಯಾಗುತ್ತದೆ. , ಮಾಟ ಮಂತ್ರ ದೋಷ ನಿವಾರಣೆಯಾಗುತ್ತದೆ ..

೧೧. ಶ್ರೀ ಲಕ್ಷ್ಮೀನಾರಾಯಣ ಹೋಮದ ಭಸ್ಮ ಧಾರಣೆಯಿಂದ ಗಂಡ ಹೆಂಡತಿ ಜಗಳ ನಿವಾರಣೆಯಾಗಿ, ಅನ್ಯೋನ್ಯವಾಗಿರುತ್ತಾರೆ..

೧೨. ಹೋಮದ ಭಸ್ಮಧಾರಣೆಯಿಂದ ಯಾವುದೇ ಮಾಂತ್ರಿಕ ಭಾದೆ , ಶಾಪಗಳು , ದೃಷ್ಟಿಗಳು , ಗ್ರಹಭಾದೆಗಳು ಆಗುವುದಿಲ್ಲ...

ಶುಭವಾಗಲಿ...
***

No comments:

Post a Comment