ಮುಖ್ಯ ಪ್ರಾಣಾಂತರ್ಗತ ಎಂಬುದರ ಬಗ್ಗೆ - ಭಗವಂತ ಯದ್ಯಪಿ ಸರ್ವತ್ರ ವ್ಯಾಪ್ತನಾಗಿದ್ದರೂ, ಅವ್ಯಕ್ತನೂ ಆಗಿರುವುದರಿಂದ ಯಾರಿಗೂ ಗೋಚರನಾಗುವುದಿಲ್ಲ. ಅವನನ್ನು ಶಾಸ್ತ್ರದಿಂದಲೇ ತಿಳಿಯಬೇಕು. ಅವನು ಎಲ್ಲಾ ಪ್ರಾಣಿಗಳಲ್ಲೂ ಇದ್ದಾನಾದರೂ, “ಬ್ರಾಹ್ಮಣೇ ಗವಿಹಸ್ತಿನಿ ! ಶುನಿ ಚೈವ ಸ್ವಪಾಕೇ ಚ (ಗೀತೆ ೫ / ೧೮) ಬ್ರಾಹ್ಮಣನಲ್ಲೂ, ಹಸುವಿನಲ್ಲೂ , ಆನೆಯಲ್ಲೂ, ನಾಯಿಯಲ್ಲೂ, ಚಂಡಾಲನಲ್ಲೂ ಇದ್ದರೂಕೂಡ, ಅಲ್ಲೆಲ್ಲಾ ಅವನನ್ನು ಒಂದೇರೀತಿ ಪೂಜಿಸುವಂತಿಲ್ಲ. ಹಾಗೆಯೇ ಆ ಸ್ವಾಮಿಯು ರುದ್ರಾದಿ ದೇವತೆಗಳಲ್ಲಿ ಅಂತರ್ಯಾಮಿಯಾಗಿದ್ದರೂ ಅವರಿಲ್ಲರುವ ವಿಷ್ಣುವನ್ನು ನಾವು ಪೂಜಿಸುವಂತಿಲ್ಲ. ಏಕೆಂದರೆ ರುದ್ರಾದಿ ಸಕಲ ದೇವತೆಗಳೂ ಅಜ್ಞಾನಾದಿ ದೋಷಗಳು, ದೈತ್ಯಭಾದೆಯೂ ಇರುವುದರಿಂದ ಅವರ ದೋಷದಿಂದ ಪರಮಾತ್ಮ ಪೂಜ್ಯನಾಗುವುದಿಲ್ಲ. ‘ ಕಸ್ಮಿನ್ನಹಮ್ ‘ ಎಂಬ ಷಟ್ಪ್ರಶ್ನಶ್ರುತಿಯು (೬/೩) ಮುಖ್ಯಪ್ರಾಣ ಎಲ್ಲಿರುತ್ತಾನೋ ಅಲ್ಲೇ ಹರಿ ಇರುವನು. ಅವನಿಲ್ಲದಕಡೆ ತಾನಿರುವುದಿಲ್ಲವೆಂದೂ ಹಾಗು ಮುಖ್ಯಪ್ರಾಣನಿಂದ ಬಂದದ್ದನ್ನು ಮಾತ್ರ ಸ್ವೀಕರಿಸುತ್ತಾನೆ ಮಿಕ್ಕದ್ದನ್ನು ಸ್ವೀಕರಿಸುವುದಿಲ್ಲ ಎಂದೂ ಹೇಳುತ್ತದೆ. ಅದಲ್ಲದೆ ಛಾ೦ದೋಗ್ಯ ಉಪನಿಷತ್ತಿನಲ್ಲಿಯೂ, ಭಾಗವತ ತಾತ್ಪರ್ಯದಲ್ಲಿಯೂ ಮುಖ್ಯಪ್ರಾಣನಿಗೆ ಅಜ್ಞಾನಾಧಿ ದೋಷಗಳಾಗಲೀ, ದೈತ್ಯಭಾದೆಯಾಗಲೀ ಇಲ್ಲವೆಂದೂ, ಆದ್ದರಿಂದಲೇ ಅವನು ‘ ಅಖಣಾಷ್ಮಸಮಃ’ ಬಂಡೆಗಲ್ಲಿದ್ದಹಾಗೆ ಎಂದು ಹೇಳಿದೆ. ಆದಕಾರಣ ಮುಖ್ಯಪ್ರಾಣನ ಹೃದಯವು ಸದಾ ಸ್ವಚ್ಛವಾಗಿರುವುದರಿಂದ ಅಲ್ಲಿ ನೆಲೆಸಿರುವ ಶ್ರೀಹರಿಯು ಸ್ವಚ್ಛವಾಗಿ ಪರಿಶುದ್ಧನಾಗಿರುತ್ತಾನೆ.
ಛಾ೦ದೋಗ್ಯದಲ್ಲೂ , ಗೀತಾ, ಭಾಗವತಾದಿ ತಾತ್ಪರ್ಯಗಳಲ್ಲೂ , ಬ್ರಹ್ಮ ರುದ್ರಾದಿ ದೇವತೆಗಳಿರುವಂತೆ, ಅದೇ ಹೆಸರಿನ ದೈತ್ಯರುಗಳೂ ಇದ್ದಾರೆಂದು, ಆ ದೈತ್ಯರಿಗೆ ‘ ದೀನತೆಯಿಂದ ದೇವ ‘ ಎಂದು ಹೆಸರೆಂದೂ, (ದೀನತ್ವಾತ್ ದೇವನಾಮಕಃ) ಹೇಳಿದೆ. ಆದ್ದರಿಂದ ಮುಖ್ಯಪ್ರಾಣಾಂತರ್ಗತ ಶ್ರೀಹರಿ ಎಂದು ಹೇಳದೆ ಬರಿಯ ಶ್ರೀಹರಿ ಎಂದು ಹೇಳಿದರೆ ಅದನ್ನು ಕಂಗಾಳಿಗಳಾದ (ದೀನತ್ವಾತ್) ಆ ದೈತ್ಯರು ತೆಗೆದುಕೊಂಡುಹೋಗಿಬಿಡುತ್ತಾರೆ. ಬರೇ ಮುಖ್ಯಪ್ರಾಣ ಎಂದರೂ ಕೂಡ ಆ ಹೆಸರಿನ ದೈತ್ಯ ಬಂದುಬಿಡುತ್ತಾನೆ. ಅದನ್ನೂ ತಡೆಯುವುದಕ್ಕಾಗಿ ನಾವು ಮುಖ್ಯಪ್ರಾಣನಿಗೂ ಒಂದು ಬೇರೆ ವಿಶೇಷಣ ಕೊಡಬೇಕು. ‘ ಭಾರತೀರಮಣ’ ಎಂಬ ವಿಶೇಷಣ ಕೊಟ್ಟರೆ ಅದು ಅವರಿಗೇ ಸೇರುತ್ತದೆ. ಕ್ವಚಿತ್ ಮುಖ್ಯಪ್ರಾಣನೆಂಬ ದೈತ್ಯನಿದ್ದರೂ ಅವನ ಪತ್ನಿಯ ಹೆಸರು ಬೇರೆ ಇರುತ್ತದೆ. ಆದ್ದರಿಂದ ಭಾರತೀರಮಣ ಮುಖ್ಯಪ್ರಾಣ ಎನ್ನುವುದು ದೈತ್ಯರಿಗೆ ಸರ್ವಥಾ ಸಲ್ಲುವುದಿಲ್ಲ.
ಇದರಜೊತೆಗೆ ಮುಖ್ಯಪ್ರಾಣನ ದ್ವಾರ ಹರಿಯ ಹತ್ತಿರಹೋಗುವುದು ಬಹಳ ಸುಲಭ. (ಸಸ್ನೇಹಾನಾಮ್ ಸಹಸ್ವಾನ್ ಅಹರಹರಹಿತಂ ದೇಹಭಾಜಾ೦ ವಾಯುಸ್ತುತಿ (ಶ್ಲೋಕ ೧೭). ಇಂಥಾ ಪ್ರಾಣದೇವರ ಮುಖಾಂತರ ಹೋದರೆ ನಮ್ಮ ಅಲ್ಪ ಕರ್ಮವು ಶುದ್ಧವಾಗಿ ಶ್ರೀಹರಿಗೆ ಮುಟ್ಟುತ್ತದೆ. ಮತ್ತು ಅದು ಪರಿಶುದ್ಧವಾಗಿರುವುದರಿಂದಲೇ ಸಿದ್ಧಿಯಾಗುತ್ತದೆ.
ಸಂಗ್ರಹ
*****
No comments:
Post a Comment