५) आदिन्मातॄराविशद्यास्वा शुचिरहिंस्यमान उर्विया वि वावृधे ।
अनु यत्पूर्वा अरुहत्सनाजुवो नि नव्यसीष्ववरासु धावते ॥५॥
ಪದಪಾಠ
आत्। इत्। मातॄ:। आ। आविषत्। यासु। आ। शुचिः। अहिंस्यमानः। ऊर्विया। वि। वावृधे।
अनु। यत्। पूर्वाः। अरुहत्। सनाजुवः। नि। नव्यसिषु। अवरासु। धावते।।
ಮಂತ್ರಾರ್ಥ:-
'ಉಭಾ ಯದಸ್ಯ ಜನುಷಂ' 'ಯೋಷಣ: ಜನಯಂತ' ಇತ್ಯಾದಿಗಳಲ್ಲಿ ಹಿಂದೆ ವಾಯುದೇವರು ಮಧ್ವಯತಿಗಳಾಗಿ ಅವತಾರಮಾಡಿದರು ಎಂದು ಹೇಳಲಾಗಿದೆ. ಹಾಗಾದರೆ ಅವರಿಗೂ ಸಹ ಶುಕ್ಲಶೋಣಿತ ಸಂಬಂಧದಿಂದ ಗರ್ಭವಾಸಾದಿ ದೋಷಗಳು ಇವೆಯೆ? ಕರ್ಮಫಲ ಭೋಗವಿದೆಯೆ? ಮೋದಲಾದ ಶಂಕೆಗಳಿಗೆ ಈ ಮಂತ್ರ ಉತ್ತರಕೊಡುತ್ತದೆ.
ನಿರ್ದೋಷನು ಅನಂತಕಳ್ಯಾಣಗುಣಪೂರ್ಣನು (ಆತ್ ಇತ್) ಅಕಾರ ಶಬ್ದವಾಚ್ಯನಾದ ನಾರಾಯಣನ ಪ್ರೇರಣೆಯಿಂದಲೆ ಅವತಾರತ್ರಯಗಳಲ್ಲಿಯೂ (ಮಾತೃ:)ತಾಯಿಯನ್ನು ಅರ್ಥಾತ್ ಅಂಜನಾ,ಕುಂತಿ, ಮಧ್ಯಗೇಹಭಟ್ಟರ ಪತ್ನಿ ಇವರಲ್ಲಿ ಕ್ರಮವಾಗಿ ತ್ರೇತ-ದ್ವಾಪರ-ಕಲಿಯುಗಗಳಲ್ಲಿ (ಆವಿಶತ್) ಚೆನ್ನಾಗಿ ಪ್ರವೇಶಿಸಿದರು ಅರ್ಥಾತ್ ಯಾವ ಶುಕ್ಲಶೋಣಿತ ಸಂಬಂಧವಿಲ್ಲದೆಯೇ ಮಾಸ- ಮಾಸಕ್ಕೆ ಅಂಗಾಂಗವೃದ್ಧಿಯಿಲ್ಲದೇನೆ ಸರಿಯಾಗಿ ಪ್ರಸವಕಾಲದಲ್ಲಿ ತಾಯಿಯ ಉದರವನ್ನು ಅನಾಯಾಸವಾಗಿ ಪ್ರವೇಶಿಸಿದರು.
ಯಾವ ಸ್ತ್ರೀಯರಲ್ಲಿ ಈ ವಾಯುದೇವರು (ಆ ಶುಚಿ:) ಅತ್ಯಂತ ಪರಿಶುದ್ಧರಾಗಿ ಅಥವಾ (ಪಾಪಾದಿಕರ್ಮಲೇಪರಹಿತ: ಇತ್ಯರ್ಥ) ಪಾಪಾದಿಕರ್ಮಗಳ ಲೇಪವಿಲ್ಲದೆ (ಊರ್ವಿಯಾ) ತಮ್ಮ ಅಚಿಂತ್ಯಾದ್ಭುತ ಶಕ್ತಿಯಿಂದ, ಉರುತರಸ್ವಶಕ್ತಿಯಿಂದ
(ಅಹಿಂಸ್ಯಮಾನ:) ಗರ್ಭವಾಸಾದಿ ದುಃಖಗಳನ್ನು ಅನುಭವಿಸದೆ ಅರ್ಥಾತ್ ಕಲ್ಯಾದಿದೈತ್ಯಬಾಧ ರಹಿತರಾಗಿ (ವಿವಾವೃಧೆ)ವಿಶೇಷವಾಗಿ ವೃದ್ಧಿಯಾದರು.
ಅರ್ಥಾತ್ ಮಧ್ವಾಚಾರ್ಯರಿಗೆ ಉದರದಲ್ಲಿರುವಾಗ ಗರ್ಭವಾಸಾದಿ ದುಃಖಗಳು ಮತ್ತು ಪ್ರಸವಾದಿ ದೋಷಗಳು ಜನ್ಮಾಂತರದಲ್ಲಿ ಕಲ್ಯಾದಿದೈತ್ಯರಿಂದ ಅಬಾಧಿತರು.
ಸಕಲಜೀವರುಗಳು(ರುದ್ರಾದಿ ದೇವತೆಗಳೂ ಸಹ) ತಂದೆಯಿಂದ ತಾಯಿಯನ್ನು ಪ್ರವೇಶಿಸಿ ನವಮಾಸಗಳು ದಿನೇದಿನೇ ಅಂಗಾಂಗಳ ವೃದ್ಧಿಯನ್ನು ಹೋಂದುತ್ತಾ ಆ ಗರ್ಭವಾಸದಲ್ಲಿರುವಾಗ ಆಗುವ ಅನೇಕ ಪೀಡೆಗಳನ್ನು ಅನುಭವಿಸುತ್ತಾ ಎಲ್ಲಾ ಯಾತನೆಗಳನ್ನು ಸಹಿಸಿಕೋಂಡು ಜನನವನ್ನು ಎತ್ತಿ ಪುನಃ ಕಲ್ಯಾದಿಗಳ ದುಷ್ಪರಿಮಾಣದಿಂದ ಪಾಪಕರ್ಮರತರಾಗುವಂತೆ ಸಾಕ್ಷಾತ್ ನಾರಾಯಣನಿಂದ ಜನಿಸುವ ವಾಯುದೇವರಿಗೆ ಈ ಎಲ್ಲಾ ವಿಧವಾದ ಲೇಪ-ದೋಷಗಳು ಸರ್ವಥಾ ಇಲ್ಲ.
ಹೀಗಾಗಿ ಮೋದಲು ಹೇಳಿದಂತೆ ಮೂಲರೂಪದ ಜ್ಞಾನಾನಂದಾದಿ ಗುಣಗಳಲ್ಲಿ ಯಾವ ವ್ಯತ್ಯಾಸವನ್ನೂ ತೋರದೆ ದ್ವಾತ್ರಿಂಶಲ್ಲಕ್ಷಣೋಪೇತವಾದ ದೇಹದಿಂದಲೆ ಮೂರು ಅವತಾರಗಳನ್ನು ವಾಯುದೇವರು ಧರಿಸಿದರು.
ಇನ್ನೋಂದು ಅರ್ಥವನ್ನೂ ಶೃತಿ ಹೇಳುತ್ತದೆ.ಅದು ಹೀಗೆ
(ಆತ್ ಇತ್) ಲಕ್ಷ್ಮೀನಾರಾಯಣರ ಅನುಗ್ರಹದಿಂದ (ಮಾತೃ:) ಋಗಾದಿ ಸಪ್ತಶಾಸ್ತ್ರಗಳಲ್ಲಿ (ಆ ವಿಶತ್) ಚೆನ್ನಾಗಿ ಪ್ರವೇಶಿಸಿದರು.ಅಲ್ಲಿ
(ಆ ಶುಚಿ:)ಅಜ್ಞಾನಾದಿ ದೋಷಗಳಿಲ್ಲದೆ ಪರಿಶುದ್ಧರಾಗಿ
(ಅಹಿಂಸ್ಯಮಾನ:) ಪೂರ್ವಪಕ್ಷಿಗಳು ಹೇಳುವ ಜೀವೇಶ್ವರೈಕ್ಯ, ಪ್ರಪಂಚಮಿಥ್ಯತ್ವ ಮೋದಲಾದವುಗಳನ್ನು ಹೇಳಿದಂತೆ ತೋರುವ ಶೃತಿಗಳಿಂದ ಹಿಂಸಿತರಾಗದೆ (ಊರ್ವಿಯಾ) ತಮ್ಮ ಅತ್ಯಧಿಕಸ್ವಶಕ್ತಿಯಿಂದ (ವಿವಾವೃಧೆ) ವಿಜೃಂಭಿಸಿದರು.
ಈ ಮಧ್ವರೂಪದಿಂದ ವಾಯುದೇವರು (ಸನಾಜುವ:) ಸನಾತನನಾದ ನಾರಾಯಣನನ್ನು ನಿರಂತರ ಗುಣಗಾನಮಾಡುತ್ತಾ ಅವನನ್ನು ಸೇವಿಸುತ್ತಿರುವರು.
ಈ ಮಧ್ವಾಚಾರ್ಯರು (ಪೂರ್ವಾ:) ಸಪ್ತವಿದ್ಯೆಗಳಲ್ಲಿ ಮೋದಲಿನ ನಾಲ್ಕು ವೇದಗಳುಅರ್ಥಾತ್ ಋಕ್-ಯಜು-ಸಾಮ-ಅಥರ್ವಣಾದಿ ವೇದಗಳನ್ನು (ಅನು) ಉಪಕ್ರಮ- ಉಪಸಂಹಾರಾದಿಗಳನ್ನು ಅನುಸರಿಸಿ
(ಅರುಹತ್) ಮನಸ್ಸಿನಿಂದ ಮೇಲೆ ಹತ್ತಿ ಅರ್ಥಾತ್ ಅವುಗಳನ್ನು ಅಭಿಮಾನಿತ್ವೇನ ಅಧಿಷ್ಠಾನಮಾಡಿ ಸ್ಥಿತರಾದರು.
ಅಂದರೆ ಅಪೂರ್ವಾನಂತಾರ್ಥಗಳಿರುವ ವೇದಗಳಿಗೆ ಉಪಕ್ರಮ- ಉಪಸಂಹಾರ-ಅಭ್ಯಾಸ-ಅಪೂರ್ವತಾ-ಫಲ-ಅರ್ಥವಾದ-ಉಪಪತ್ತಿ ಮೋದಲಾದ ಏಳು ಯುಕ್ತಿಗಳನ್ನು ಅನುಸರಿಸಿ ಅಶ್ವಾರೋಹಿಯು ತನ್ನ ಅಶ್ವಕ್ಕೆ ಯಾವ ಧಕ್ಕೆಯೂ ಬಾರದಂತೆ ನೋಡಿಕೊಳ್ಳುವ ಹಾಗೆ ಮಧ್ವಾಚಾರ್ಯರು ವೇದಗಳನ್ನು ಅಧಿಷ್ಠಾನ ಮಾಡಿ ಹಿಂದೆಹೇಳಿದ ಯುಕ್ತಿಗಳಿಂದ ವೇದಗಳಿಗೆ ಅರ್ಥಗಳನ್ನು ಸಾವಕಾಶವಾಗಿ ಇತಿಹಾಸ-ಪುರಾಣಾದಿಗಳಿಗೆ ವಿರೋಧ ಬಾರದಂತೆ ಸಕಲಸಜ್ಜನಸಾಮಾನ್ಯರಿಗೂ ಅರ್ಥವಾಗುವಂತೆ ನಿರ್ಣಯಿಸಿದರು.
ಹೀಗೆಯೆ (ನವ್ಯಸೀಷು) ವೇದಗಳನಂತರ ಬಂದ ಅಥವಾ ಮೂಲರೂಪದಿಂದ ಉದ್ಭವಿಸಿದ ವೇದವ್ಯಾಸರೂಪದಿಂದ ಜನಿಸಿದ (ಅವರಾಸು) ವೇದಗಳಿಗಿಂತ ಕಿರಿಯರಾದ ಇತಿಹಾಸ-ಪುರಾಣ-ಪಂಚರಾತ್ರಗಳೆಂಬ ಮೂರು ವಿದ್ಯೆಗಳಿಗೆ
(ನಿ ಧಾವತೆ) ನೇರವಾಗಿ ಸುಸ್ಪಷ್ಟವಾಗಿ ವೇಗವಾಗಿ ಅರ್ಥಗಳನ್ನು ಹೇಳಿದರು.
*********
No comments:
Post a Comment