SEARCH HERE

Tuesday, 1 January 2019

ಉಪನಯನ ವಿವಾಹ ನಾಂದೀ ಶ್ರಾದ್ಧಃ ಶುಭಕಾರ್ಯ upanayana marriage naandi shraddha




importance of upanayana explained

'ಉಪನಯನ'ಕ್ಕೆ ಆಡು ಭಾಷೆಯಲ್ಲಿ 'ಮುಂಜಿವೆ' ಅನ್ನುತ್ತೇವೆ. ಈ ಮುಂಜಿವೆ ಪದ ಹೇಗೆ ಏಕೆ ಬಂತು? ಕನ್ನಡದಲ್ಲಿ ಮಾತ್ರ ಈ ಪದ ಬಳಸುವರೆ? ಇತರ ಭಾಷೆಯಲ್ಲಿಯೂ ಬಳಸುವರೆ? ಇತರ ಭಾಷೆಯಲ್ಲಿ ಕನ್ನಡದಲ್ಲಿ ಇರುವಂತೆ ಉಪನಯನಕ್ಕೆ ಪ್ರಾದೇಶಿಕ ಪದಗಳಿವೆಯೇ?


 ಮುಂಜ ಅನ್ನೋದು ಸಂಸ್ಕೃತ ಪದ , ಮುಂಜಾ ಅಂತ ಅದು ಒಂದು ಹುಲ್ಲಿನ ಪ್ರಭೇದ , ಆ ಹುಲ್ಲಿನಿಂದ ವಟುವಿಗೆ ಉಡುದಾರ ಮಾಡಿ , ವೇದಮಂತ್ರಗಳನ್ನು ಉಚ್ಚರಿಅಮಸುತ್ತಾ , ಹಾಗೂ ವಟುವಿನಿಂದ ಆ ಮಂತ್ರಗಳನ್ನು ಹೇಳಿಸುತ್ತಾ ಆತನ ಸೊಂಟಕ್ಕೆ ಮೂರು ಸುತ್ತು ಸುತ್ತಿ ನಾಭಿಯ ಹತ್ತಿರ ಮೂರುಗಂಟಗಳನ್ನು ಹಾಕಬೇಕು . ಓಂ ಇಯಂ ದುರುಕ್ತಾತ್ ಪರಿಬಾಧಮಾಬಾಚ್ಛರ್ಮವರೂಥಂಪುನೀತೀನ ಆಗಾತ್ | ಪ್ರಾಣಾಪಾನಾಭ್ಯಾಂ ಬಲಮಾಭರಂತೀಪ್ರಿಯಾದೇವಾನಾಂ ಸುಭಗಾಮೇಖಲೇಯಂ||೧|| ಋತಸ್ಯಗೋಪ್ತ್ರೀತಪಸಃಪರಸ್ಪೀತಘ್ನಿರಕ್ಷಃ ಸಹಮಾನಾ ಅರಾತೀಃ| ಸಾನಃ ಸಮಂತಮನುಪರೇಹಿಭದ್ರಯಾಭರ್ತಾರಸ್ತೇ ಮೇಖಲೇಮಾರಿಷಾಮ||೨|| = ಅಪವಿತ್ರತೆಯನ್ನು ನಾಶಪಡಿಸಿ ನಮ್ಮ ಮನೆಗಳಿಗೆ ಉನ್ನತಿಯನ್ನು ತಂದುಕೊಡುವ ಮುಂಜಾ ಹುಲ್ಲಿನ ಮೇಖಲೆ(ಉಡುದಾರ) ನಮಗೆ ಸಿಗಲಿ . ಈ ಮೇಖಲೆಯು ನಮ್ಮ ಪ್ರಾಣ ಅಪಾನಗಳ ಸಾಮರ್ಥ್ಯವನ್ನು ಬೆಳೆಸುತ್ತ ಸೌಭಾಗ್ಯದಾಯಕವಾಗಲಿ . ನಿತ್ಯ ಹಾಗೂ ನೈಮಿತ್ತಿಕ ತಪಗಳನ್ನು ಸಂರಕ್ಷಿಸುವ , ರಾಕ್ಷಸ ಶಕ್ತಿಯನ್ನು ನಾಶಪಡಿಸುವ , ಶತ್ರುಮಾರಕವಾದ ಈ ಮುಂಜಾ ಮೇಖಲೆಯು ನಮಗೆ ಸಿಗಲಿ , ಎಲೈ ಮುಂಜಾ ಮೇಖಲೆಯೇ ! ಮಂಗಲಕಾರಕ ಅಥವಾ ಸಮಸ್ತ ದುಷ್ಟಶಕ್ತಿಗಳಿಂದ ರಕ್ಷಿಸುವ ನಿನ್ನನ್ನು ನಾನು ಧರಿಸುತ್ತಿರುವೆನು . ನಮಗೆ ನಿನ್ನ ಸಾಮರ್ಥ್ಯದಿಂದ , ನಿತ್ಯ ನೈಮಿತ್ತಿಕ ಧರ್ಮಾಚರಣೆಗಳಿಗೆ ಯಾವ ಪೀಡೆಯೂ , ಅಡತಡೆಯೂ ಆಗದಂತೆ ರಕ್ಷಿಸು . 
   ಎಂದು ಆ ವಟುವು ಆ ಮುಂಜಾ ಎಂಬ ಹುಲ್ಲಿನಿಂದ ತಯಾರಿಸಿದ ಮೇಖಲೆ(ಉಡುದಾರ) ಯನ್ನು ಪ್ರಾರ್ಥಿಸಿಕೊಳ್ಳುತ್ತಾ ಸೊಂಟಕ್ಕೆ ಮೂರುಸುತ್ತು ಸುತ್ತಿಕೊಂಡು ನಾಭಿಪ್ರದೇಶದ ಹತ್ತಿರ ಮೂರು ಗಂಟುಗಳನ್ನು ಹಾಕಿಕೊಳ್ಳಬೇಕು . ಅಂದರೆ ನಾನು ಷಡಂಗ ಸಹಿತವಾದ ಮೂರು ವೇದಗಳನ್ನು ಚನ್ನಾಗಿ ಗುರುಮುಖೇನ ಅಧ್ಯಯನ ಮಾಡಿ ಆ ಆರು ಅಂಗಗಳಿಂದ ಸುರಕ್ಷಿತಬಾಗಿರುವೆ. ಅವುಗಳ ಅಧ್ಯಯನವು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆಗೈಯ್ಯುವ ಸಂಸ್ಕಾರ ಇದಾಗಿದೆ .ಹೀಗಾಗಿ ಇದಕ್ಕೆ ಮುಂಜಿ , ಮೌಂಜಿ , ಮುಂಜಿವೆ ಎನ್ನುವ ಪದಗಳು ಬಳಕೆಯಲ್ಲಿ ಬಂದಿವೆ . 🙏🏻
***

ಉಪನಯನದ ಬಗ್ಗೆ ಸಂಕ್ಷಿಪ್ತ ಮಾಹಿತಿ

1)ಉಪನಯನದ ಯೋಗ್ಯ ವಯಸ್ಸು:-
:“ಅಷ್ಟವರ್ಷಂ ಬ್ರಾಹ್ಮಣಮುಪನಯೀತ” ಎಂದಿದೆ ಶ್ರುತಿ  ಗರ್ಭಾಷ್ಟಮದಲ್ಲಿ ಅಂದರೆ ಹುಟ್ಟಿದ ಏಳನೇ ವಯಸ್ಸಿಗೆ ಬಾಲಕನಿಗೆ ಉಪನಯನ ಮಾಡಬೇಕು. 

“ಬ್ರಹ್ಮವರ್ಚಸಕಾಮಸ್ಯ ಕಾರ್ಯಂ ವಿಪ್ರಸ್ಯಪಂಚಮೇ”

ಉಪನಯನಕ್ಕೆ ಏಳು ಅಥವಾ ಎಂಟನೇ ವರ್ಷ ಶ್ರೇಷ್ಠ ಕಾಲ. ಒಂಭತ್ತರಿಂದ ಹನ್ನೆರಡು ಮುಖ್ಯಕಾಲ. ಹದಿಮೂರರಿಂದ ಹದಿನಾರು ಗೌಣಕಾಲ, ಆ ನಂತರ ಅಂದರೆ 16 ವರ್ಷ ಕಳೆದ ವಿಪ್ರವಟು ಪತಿತನಾಗುತ್ತಾನೆ. ಸರ್ವಕರ್ಮಗಳಿಗೆ ಅನರ್ಹನು. ಆತನಿಗೆ ಉಪನಯನ ಮಾಡಿದರೆ ನಿಷ್ಪಲ. ಅಂತಹ ಹುಡುಗನ ತಂದೆಯು“ಪುತ್ರ ದ್ರೋಹಿ, ವೇದ ದ್ರೋಹಿ” ಎನಿಸಲ್ಪಡುತ್ತಾನೆ. ಆದ್ದರಿಂದ ಸರ್ವಪ್ರಯತ್ನದಿಂದ ಏಳನೇವಯಸ್ಸಿಗೆ ಮಾಡಿ, ತಪ್ಪಿದರೆ ಹನ್ನೆರಡರ ಒಳಗೆ, ಕೊನೆಯ ಅವಕಾಶ ಹದಿನಾಲ್ಕರ ಒಳಗಂತೂ ಮಾಡಲೇಬೇಕು.

ಗರ್ಭಾಷ್ಟಮ ಅಥವಾ ಜನ್ಮಾಷ್ಟಮದಲ್ಲಿ (ಮಗುವಿನ ಏಳನೇ ಅಥವಾ ಎಂಟನೇ ವಯಸ್ಸಿನಲ್ಲಿ) ಗುರುಬಲವಿಲ್ಲದಿದ್ದರೂ ಉಪನಯನ ಮಾಡಬಹುದು.
 ಆ ಕಾಲ ಅಷ್ಟು ಮಹತ್ವಪೂರ್ಣವಾಗಿರುವಂತದ್ದು, ಗುರುಬಲವಿರುವ ಬೇರೆಕಾಲದಲ್ಲಿ ಮಾಡಿದ ಉಪನಯನಕ್ಕೆ ಎಷ್ಟು ಫಲವೋ ಅದಕ್ಕಿಂತ ಹೆಚ್ಚು ಫಲ...  ಗರ್ಭಾಷ್ಟಮ ಅಥವಾ ಜನ್ಮಾಷ್ಟಮದಲ್ಲಿ ಮಾಡಿದ ಉಪನಯನಕ್ಕಿದೆ.

“ಅತ್ರ ಅನಿಷ್ಟೇsಪಿ ಜೀವೇ ಅನಿಮಿಷರವಿಮಧೌ ಕಾರ್ಯಮಬ್ದಸ್ಯ ದಾಢ್ಯಾತ್” ಅಂದರೆ ಗುರು ಅನಿಷ್ಟ ಸ್ಥಾನಗತನಾದರೂ, ಮೀನರಾಶಿಯಲ್ಲಿ ಸೂರ್ಯನಿರುವ ಚೈತ್ರಮಾಸದಲ್ಲಿ ಉಪನಯನ ಮಾಡಬೇಕು. ಯಾಕೆಂದರೆ ಆ ವಯಸ್ಸಿಗೆ ಪ್ರಾಬಲ್ಯವಿರುವುದರಿಂದ ಆದರೆ ಎಂಟನೆ ವರ್ಷ ಕಳೆದು ಮಾಡುವ ಸಂಸ್ಕಾರಕ್ಕೆ ಗುರುಬಲವಿರಲೇಬೇಕು. 

ಯೋಗ್ಯವಾದ ಕಾಲ: -
 ದಕ್ಷಿಣಾಯನವು ಉಪನಯನಕ್ಕೆ ನಿಷಿದ್ಧ.
 ಉತ್ತರಾಯಣವು ಪ್ರಶಸ್ತ.
 ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜೇಷ್ಠ ಮೊದಲಾದ ಪಂಚಮಾಸಗಳು ಯೋಗ್ಯವಾದ ಮಾಸಗಳು, 
ಜೇಷ್ಠ ಮಾಸದಲ್ಲಿ ಜೇಷ್ಠ ಮಗುವಿಗೆ ಉಪನಯನ ಮಾಡಬಾರದು.
(“ಜೇಷ್ಠ ಮಾಸೇ ನ ಜೇಷ್ಠಸ್ಯ”)

ಬ್ರಾಹ್ಮಣವಟುವಿಗೆ ವಸಂತಋತುವಿನಲ್ಲಿ ಅಂದರೆ ಚೈತ್ರ ವೈಶಾಖ ಮಾಸಗಳಲ್ಲಿ ಉಪನಯನ ಶ್ರೇಷ್ಠವೆನಿಸಿದೆ. “ವಸಂತೇ ಬ್ರಾಹ್ಮಣಮುಪನಯೀತ” ಗಾಯತ್ರೀ ಮಂತ್ರ ಉಪದೇಶವು ವೇದಾಧ್ಯಯನ ಅಧಿಕಾರ ಸಿದ್ದಿಗಾಗಿ, ಉಪನಯನದ ನಂತರ ವಟುವನ್ನು ಅಧ್ಯಯನಕ್ಕಾಗಿ ಗುರುಕುಲಕ್ಕೆ ಕಳುಹಿಸುವ ಕ್ರಮವಿದೆ. “ತಂ ಅಧ್ಯಾಪಯಿತ” ಎಂದಿದೆ ವೇದ. ಹಾಗಾಗಿ ಈ ಸಂಸ್ಕಾರವು ಅಧ್ಯಯನಕ್ಕೆ ಸಂಬಂಧಪಟ್ಟದ್ದು. ಆ ಕಾರಣದಿಂದ ಅನಧ್ಯಯನದ ದಿನಗಳಾದ ಚತುರ್ದಶೀ, ಅಮವಾಸ್ಯಾ, ಪೌರ್ಣಮೀ, ಪಾಡ್ಯ, ಅಷ್ಟಮಿ ತಿಥಿಗಳಂದು ಈ ಸಂಸ್ಕಾರ ನಡೆಸಕೂಡದು. ಶಿರೋಮುಂಡನವೂ ಕೂಡಾ ಉಪನಯನದ ಅಂಗವಾದ್ದರಿಂದ, ಮುಂಡನಕ್ಕೆ ನಿಷಿದ್ಧವಾದ, ದಶಮೀ, ಏಕಾದಶೀ, ದ್ವಾದಶೀ, ತಿಥಿಗಳಂದು, ಮಂಗಳವಾರ ಶನಿವಾರಗಳಂದೂ ಉಪನಯನ ಮಾಡಬಾರದು. 

ವಟುವಿಗೆ ಹಾಗೂ ತಂದೆಗೆ ತಾರಾನುಕೂಲವಾಗುವ ದಿನದಂದು ಉಪನಯನ ಮಾಡಬೇಕು. 

ಒಂದು ವೇಳೆ ತಂದೆ ಇಲ್ಲವಾದರೆ ಉಪನಯನ, ಗಾಯತ್ರೀ ಉಪದೇಶ ಯಾರು ಮಾಡಬೇಕು? 
“ಪಿತೈವೋಪನಯೇತ್ ಪುತ್ರಂ ತದಭಾವೇ ಪಿತುಃ ಪಿತಾ | ತದಭಾವೇ ಪಿತುರ್ಭಾತಾ ತದಭಾವೇ ತು ಸೋದರಃ” |

ತಂದೆಯು ಇಲ್ಲವಾದರೆ ಅಜ್ಜ (ತಂದೆಯ ತಂದೆ) ಅಜ್ಜನೂ ಇಲ್ಲದಿದ್ದರೆ ವಟುವಿನ ದೊಡ್ಡಪ್ಪ ಚಿಕ್ಕಪ್ಪಂದಿರು. ಅವರೂ ಇಲ್ಲದಿದ್ದರೆ ಅಣ್ಣನು ಉಪನಯನ ಮಾಡಬೇಕು.

 ಉಪನಯನ ಎನ್ನುವುದು ಬ್ರಾಹ್ಮಣನಿಗೆ ಎರಡನೆಯ ಜನ್ಮ, ಈ ಸಂಸ್ಕಾರದ ನಂತರ ಬ್ರಾಹ್ಮಣನು “ದ್ವಿಜ” ಎನಿಸುತ್ತಾನೆ. ಮೊದಲನೆಯ ಜನ್ಮವು ಕೆಟ್ಟದಿನದಂದು, ಕೆಟ್ಟ ಲಗ್ನದಲ್ಲಿಯೂ ಆಗಬಹುದು. ಅದು ನಮ್ಮ ಕೈಯಲಿಲ್ಲ. 
ಆದರೆ ಎರಡನೆಯ ಜನ್ಮವಾದ ಉಪನಯನ ಸಂಸ್ಕಾರ ಮಾತ್ರ ನಿರ್ದುಷ್ಟ ಕಾಲದಲ್ಲಿ, ಉತ್ತಮ ಲಗ್ನದಲ್ಲಿ
ನಡೆಸಿದರೆ, ಜನ್ಮಕಾಲದಲ್ಲಿ ಸೂಚಿತವಾದ ಅರಿಷ್ಟಗಳನ್ನು ಪರಿಹರಿಸಬಲ್ಲದು.

ಯಾವಾಗಲಾದರು ಮಾಡಿದರಾಯ್ತು ಎಂಬ ಬೇಜವಾಬ್ದಾರಿತನವನ್ನು ತೋರಿಸದೆ ಯೋಗ್ಯಕಾಲದಲ್ಲಿ ಉಪನಯನವನ್ನು ನಡೆಸಬೇಕು. 
ಕನಿಷ್ಠಪಕ್ಷ ಸಂಧ್ಯಾವಂದನೆಯನ್ನೂ ಮಾಡದ ಯುವ ವಿಪ್ರ ಪೀಳಿಗೆಯನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣವೇ ಅಯೋಗ್ಯ, ದೋಷಪೂರ್ಣ ಮುಹೂರ್ತಗಳಲ್ಲಿ, ಅಕಾಲದಲ್ಲಿ, ಅಬದ್ಧ ರೀತಿಯಲ್ಲಿ ಉಪನಯನ ಮಾಡುವುದಾಗಿದೆ. ಅಷ್ಟೇ ಅಲ್ಲದೇ ಎಲ್ಲಿಯೋ ಕಲ್ಯಾಣ ಮಂಟಪಗಳಲ್ಲಿ, ಲಕ್ಷ ಗಟ್ಟಲೇ ಖರ್ಚುಮಾಡಿ ಆಡಂಬರತನದ ಪ್ರದರ್ಶನಕ್ಕಾಗಿ ನಡೆಯುವ ಉಪನಯನಗಳಿಗೆ ಯೋಗ್ಯ ಕಾಲ ಮುಹೂರ್ತಗಳು ಬೇಡವಾಗಿದೆ. ಅದರ ಪರಿಣಾಮವೇ ಉಪನಯನದ ನಂತರ ಯೋಗ್ಯ ಸಂಸ್ಕಾರಗಳಾಗಲಿ ಸಂಧ್ಯಾವಂದನೆ ಯಾಗಲಿ ಮಾಡದೇ ಇರುವ ಹೊಸ ಬ್ರಾಹ್ಮಣವಟುಗಳ ಪ್ರಾದುರ್ಭಾವ. ಈಗಾಗಬಾರದು ಎಂದಾದರೆ ಈ ಸಂಸ್ಕಾರವು ಸಕಾಲದಲ್ಲಿ ಸರಿಯಾಗಿ ನಡೆಯಬೇಕು.
ಓಂ ತತ್ಸತ್
***


ಶುಭಕಾರ್ಯ ಪ್ರಾರಂಭ ವಿಧಿ: - ನಾಂದೀಶ್ರಾದ್ಧಂ - ಉಪನಯನ ವಿವಾಹ ಮೊದಲಾದ ಯಾವುದೇ ಸಂಸ್ಕಾರವಾದರೂ ಆರಂಭದಲ್ಲಿ ದೇವತಾಪ್ರತಿಷ್ಠೆ ಮಾಡಲಾಗುವುದು.

ಈ ದೇವತಾಪ್ರತಿಷ್ಠೆ ಕಾರ್ಯದಲ್ಲಿ ಗಣಪತಿಪೂಜನ, ಪುಣ್ಯಾಹವಾಚನ, ಮಾತೃಕಾಪೂಜನ, ನಾಂದೀಶ್ರಾದ್ಧ, ಮಂಡಪದೇವತಾಪ್ರತಿಷ್ಠಾ,   ಮುಂತಾದ ಕರ್ಮಭಾಗಗಳು ಅಂತರ್ಗತವಾಗಿವೆ.

ಗಣಪತಿ ಪೂಜೆ:-

ದೇವಗಣದಲ್ಲಿ ಪ್ರಮುಖನಾದವನು ಗಣಪತಿ.
ಇವನು ಸರ್ವವಿಘ್ನನಾಶಕ.
ಆಂಭಿಸಿದ ಸಂಸ್ಕಾರಕರ್ಮದಲ್ಲಿ ಯಾವುದೇ ವಿಘ್ನವೂ ಉಂಟಾಗದಂತೆ ಅದು ಸಾಂಗವಾಗಿ ನೆರವೇರುವುದಕ್ಕೋಸ್ಕರ ಪ್ರಾರಂಭದಲ್ಲಿ ಗಣಪತಿಯ ಪೂಜೆ ಮಾಡಲಾಗುತ್ತದೆ.

ಪುಣ್ಯಾಹವಾಚನ:-

ಪುಣ್ಯಂ ಅಹ: = ದಿವಸವು ಪುಣ್ಯಪ್ರದವಾಗಲಿ ಎಂದು ಬ್ರಾಹ್ಮಣರು ಮಾಡುವ ವಾಚನ.
ಸಂಸ್ಕಾರಕರ್ತೃವಿಗೂ ಸಂಸ್ಕಾರ್ಯನಿಗೂ ಈ ದಿನವು ಹಬ್ಬದಂತೆ ಸುಖ ಸಂತೋಷಗಳನ್ನು ಉಂಟುಮಾಡಲಿ ಎಂದು ಆಶೀರ್ವಾದಗಳನ್ನು ಪಡೆಯುವುದೇ ಪುಣ್ಯಾಹವಾಚನದ ಪ್ರಧಾನ ಉದ್ಧೇಶವಾಗಿದೆ.
ಇದರಲ್ಲಿ ಸ್ವಸ್ತಿವಾಚನ ಮುಂತಾದವುಗಳೂ ಸೇರಿಕೊಂಡಿವೆ.

ಮಾತೃಕಾಪೂಜನ:-

ಪ್ರತಿಯೊಬ್ಬನಿಗೂ ತನ್ನ ಕುಲದೇವತೆ ಪ್ರತ್ಯೇಕವಾಗಿರುತ್ತದೆ.
ಮಾತೃಕಾಪೂಜನದಲ್ಲಿ ಕುಲದೇವತಾ ಪೂಜೆಯು ಅಡಕವಾಗಿದೆ.
ಯಾವುದೇ ಶುಭಕರ್ಮವನ್ನು ಪ್ರಾರಂಭಿಸುವಾಗ ಪುಣ್ಯಾಹವಾಚನವಾದ ಮೇಲೆ ಪರಿವಾರ ಸಮೇತ ಕುಲದೇವತೆಗಳ ಪೂಜೆ ಮಾಡಲಾಗುತ್ತದೆ.
ಈ ಪೂಜೆಯಿಂದ ತನ್ನ ಮತ್ತು ತನ್ನ ಕುಲದ ಕಲ್ಯಾಣವಾಗಬೇಕೆಂಬುದೇ ಇದರ ಪ್ರಧಾನ ಉದ್ದೇಶ.

ನಾಂದೀಶ್ರಾದ್ಧಃ-

ಮನೆಯಲ್ಲಿ ಮಂಗಲಕಾರ್ಯವೊಂದು ನೆರವೇರುವಾಗ ಪಿತೃಗಳೆಲ್ಲರೂ ಸೂಕ್ಷ್ಮರೂಪದಿಂದ ಬಂದು ಉಪಸ್ಥಿತರಾಗಿದ್ದು, ಈ ಕಾರ್ಯಗಳನ್ನು ಸಂತೋಷದಿಂದ ಅವಲೋಕಿಸುತ್ತಾರೆ ಹಾಗೂ ಕುಲಕ್ಕೆ ಶುಭವನ್ನು ತರುತ್ತಾರೆ ಎಂಬುದು ನಮ್ಮ ವಿಶ್ವಾಸ. ಅಂತಹ ಪಿತೃಗಳನ್ನು ಪೂಜಿಸಿ ಸತ್ಕರಿಸುವುದೇ ಈ ವಿಧಿಯ ಪ್ರಧಾನ ಉದ್ದೇಶ.

ಮಂಡಪದೇವತಾಪ್ರತಿಷ್ಠೆ:-

ಯಾವ ಮಂಟಪದಲ್ಲಿ ಶುಭಕಾರ್ಯವನ್ನು ಮಾಡಲಾಗುತ್ತದೆಯೋ ಆ ಮಂಟಪದ ಪೂಜೆ ಮಾಡುವುದೇ ಮಂಡಪದೇವತಾಪ್ರತಿಷ್ಠೆ. ದಾರವನ್ನು ಸುತ್ತಿದ ಮಾವಿನ ಎಲೆಯ ಮೇಲೆ ಮಂಟಪದೇವತೆಯನ್ನು ಆವಾಹಿಸಿ ಪ್ರತಿಷ್ಠಾಪಿಸಲಾಗುವುದು. ಅಂತೆಯೇ ಕರ್ಮ ಸಮಾಪ್ತಿಯಾದಾಗ ದೇವಕೋತ್ಥಾಪನೆ ಮಂಡಪೋದ್ವಾಸನ ಮುಂತಾದುವುಗಳನ್ನು ನೆರವೇರಿಸಬೇಕು. ಪ್ರತಿಷ್ಠಾಪಿಸಿದ ದೇವತೆಗಳನ್ನು ವಿಸರ್ಜಿಸುವುದು ಅತ್ಯಂತ ಅವಶ್ಯಕವಾಗಿದೆ.
ಆವಾಹನದಷ್ಟೇ ವಿಸರ್ಜನೆಯೂ ಮಹತ್ತ್ವ ಪೂರ್ಣಕಾರ್ಯವಾಗಿದೆ.

ಇಂದಿನ ಸಂಚಿಕೆಯಲ್ಲಿ ನಾಂದೀಶ್ರಾದ್ಧದ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಯುವ ಪ್ರಯತ್ನ ಮಾಡೋಣ.

ನಾಂದೀಶ್ರಾದ್ಧ:-

ನಾಂದೀ + ಶ್ರಾದ್ಧ = ನಾಂದೀಶ್ರಾದ್ಧ.

ನಾಂದೀ = ಸಂತೋಷ, ಅಭಿವೃದ್ಧಿ, ಮಂಗಳ, ಪ್ರಾರಂಭ, ಶುಭಕರ್ಮ, ಇತ್ಯಾದಿ.,

ಶ್ರಾದ್ಧ = ಶ್ರದ್ಧೆಯಿಂದ ಮಾಡುವ ಪಿತೃಕರ್ಮ, ಆಸಕ್ತಿಯಿಂದ ಮಾಡುವ ಕಾರ್ಯ, ಇತ್ಯಾದಿ.,

ಆದ್ದರಿಂದ ಮನೆಯಲ್ಲಿ ಒಂದು ನಾಂದೀಶ್ರಾದ್ಧವನ್ನು ಮಾಡಿದ್ದಾರೆ ಎಂದರೆ ನಡೆಯುವ ಮಂಗಲಕಾರ್ಯದ  ಪ್ರಾರಂಭವಾಯಿತು ಎಂದು ಅರ್ಥ.

ನಾಂದೀಶ್ರಾದ್ಧಕ್ಕೆ ಮೊದಲು ಮಾತೃಕಾಪೂಜೆ ಮಾಡಬೇಕು.
ನಾಂದೀಪಿತೃದೇವತೆಗಳ ಆರಾಧನೆಯಿಲ್ಲದೇ, ಕೇವಲ ಮಾತೃಕಾಪೂಜೆ ಮಾಡಲು ಅವಕಾಶವಿಲ್ಲ.  ನಾಂದೀಶ್ರಾದ್ಧವನ್ನು ಪೂರ್ವಾಹ್ನದಲ್ಲಿಯೇ ಮಾಡಬೇಕು.
ಜನಿವಾರವನ್ನು ಸವ್ಯದಲ್ಲೇ ಹಾಕಿಕೊಂಡು ನಾಂದೀಶ್ರಾದ್ಧವನ್ನು ಮಾಡಬೇಕು ಮತ್ತು ಶ್ರಾದ್ಧಾಂಗತರ್ಪಣ ಇರುವುದಿಲ್ಲ.

ನಾಂದೀ ವ್ಯಾಪ್ತಕಾಲ:-

ಏಕವಿಂಶತ್ಯಹರ್ಯಜ್ಞೇ ವಿವಾಹೇ ದಶ ವಾಸರಾ:|
ತ್ರಿಷಟ್ಸು ಚೌಲೋಪನಯನೇ ಶ್ರಾದ್ಧೇ ವಿಪ್ರಾಂಘ್ರಿಶೋಧನಮ್||
ಪ್ರಾರಂಭಂ ವರಣಂ ಯಜ್ಞೇ ಸಂಕಲ್ಪೋ ವ್ರತಸತ್ರಯೋ:|
ನಾಂದೀಶ್ರಾದ್ಧಂ ವಿವಾಹಾದೌ ಶ್ರಾದ್ಧೇ ಪಾಕಪರಿಕ್ರಿಯಾ:||
ದೀಕ್ಷಾಂತೋವಭೃಥೋ ಯಜ್ಞೇ ಕಂಕಣಾಂತಂ ವಧೂವರೌ|
ವ್ರತೇ ಬ್ರಹ್ಮೋದನಂ ಯಾವತ್ ವಟೋ: ಪಾಲಾಶದರ್ಶನಮ್|
ತಾವನ್ನಾಶೌಚಮಿತ್ಯಾಹು: ಶ್ರಾದ್ಧೇ ಕೂರ್ಚವಿಸರ್ಜನಮ್||

ಯಜ್ಞದಲ್ಲಿ ೨೧ ದಿ, ವಿವಾಹದಲ್ಲಿ ೧೦ ದಿನ, ಉಪನಯನದಲ್ಲಿ ೬ ದಿನ, ಮತ್ತು ಚೌಲದಲ್ಲಿ ೩ ದಿನ. ಈ ರೀತಿಯಾಗಿ ನಾಂದೀಕಾಲವಿರುತ್ತದೆ.

ನಾಂದೀಶ್ರಾದ್ಧಾನಂತರ ಜಾತಾಶೌಚ, ಮೃತಶೌಚಾದಿಗಳು ಪ್ರಾರಂಭವಾದರೆ, ಮಂಗಳಕಾರ್ಯವನ್ನು ಮುಂದುವರಿಸಬಹುದು ಎನ್ನುವುದು ಆಪದ್ಧರ್ಮ.

ಮಂಗಳಕಾರ್ಯದ ಆರಂಭವೆಂದರೆ, ಯಜ್ಞದಲ್ಲಿ ಋತ್ವಿಗ್ವರಣೆಯಾಗಿದ್ದರೆ ಯಜ್ಞ ಪ್ರಾರಂಭವಾಯಿತೆಂದೂ, ವ್ರತ, ಯಾಗಗಳಲ್ಲಿ ಸಂಕಲ್ಪ ಮಾಡಿದರೆ ಆರಂಭವಾಯಿತೆಂದೂ, ಉಪನಯನ/ವಿವಾಹ ಮುಂತಾದ ಮಂಗಳಕಾರ್ಯದಲ್ಲಿ ನಾಂದೀಯಾಯಿತೆಂದರೆ ಆರಂಭವಾಯಿತೆಂದು ತಿಳಿಯಬೇಕು.

ನಾಂದೀಯಲ್ಲಿ ಅನೇಕ ಬಗೆಗಳಿವೆ:-

ಸ್ಥಿರನಾಂದೀ, ಚರನಾಂದೀ. ದೇವನಾಂದೀ, ಕರ್ಮಾಂಗನಾಂದೀ, ಸಂಸ್ಕರಾಂಗನಾಂದೀ, ಇತ್ಯಾದಿಗಳು.

ಸ್ಥಿರ ನಾಂದಿಯನ್ನು ಯಜ್ಞ, ಯಾಗಾದಿಗಳು, ಉಪನಯನ, ವಿವಾಹಾದಿ ಕಾರ್ಯಗಳಿಗೆ ಮಾಡುತ್ತಾರೆ.

ಚರ ನಾಂದಿಯನ್ನು ಎಲ್ಲಾ ಮಂಗಳ ಕಾರ್ಯಗಳಿಗೂ ಮಾಡಬಹುದು. ಪೂಜೆ ಮಾತ್ರ.

ನಾಂದೀಮುಖಾ: ಎಂದು ಪಿತೃಗಳನ್ನು ಹೆಸರಿಸಿ ಪೂಜಿಸುವುದರಿಂದ ಇದನ್ನು ನಾಂದೀ ಸಮಾರಾಧನೆ, ವೃದ್ಧಿಶ್ರಾದ್ಧ, ಅಭ್ಯುದಯಿಕಶ್ರಾದ್ಧ ಎಂದು ಕರೆಯುವರು. - ಸಂಸ್ಕಾರಗಳು  ಒಂದು ಕಿರುನೋಟ  ಸಂಚಿಕೆ – ೨೫
***
more here


No comments:

Post a Comment