SEARCH HERE

Tuesday 1 January 2019

ಶುಭಕಾರ್ಯ ನಾಂದಿ ವಿಧಿ ಮದುವೆ ಚೌಲ ಉಪನಯನ nandi naandi marriage upanayana chowla




importance of upanayana explained


read
ಸಂಸ್ಕಾರಗಳು  ಸಂಚಿಕೆ – ೨೫ 

||ಶುಭಕಾರ್ಯ ಪ್ರಾರಂಭ ವಿಧಿ:||

|| ನಾಂದೀಶ್ರಾದ್ಧಂ || 

ಉಪನಯನ ವಿವಾಹ ಮೊದಲಾದ ಯಾವುದೇ ಸಂಸ್ಕಾರವಾದರೂ ಆರಂಭದಲ್ಲಿ ದೇವತಾಪ್ರತಿಷ್ಠೆ ಮಾಡಲಾಗುವುದು. 

ಈ ದೇವತಾಪ್ರತಿಷ್ಠೆ ಕಾರ್ಯದಲ್ಲಿ ಗಣಪತಿಪೂಜನ, ಪುಣ್ಯಾಹವಾಚನ, ಮಾತೃಕಾಪೂಜನ, ನಾಂದೀಶ್ರಾದ್ಧ, ಮಂಡಪದೇವತಾಪ್ರತಿಷ್ಠಾ,   ಮುಂತಾದ ಕರ್ಮಭಾಗಗಳು ಅಂತರ್ಗತವಾಗಿವೆ.  

ಗಣಪತಿ ಪೂಜೆ:-

ದೇವಗಣದಲ್ಲಿ ಪ್ರಮುಖನಾದವನು ಗಣಪತಿ. 

ಇವನು ಸರ್ವವಿಘ್ನನಾಶಕ.

ಆಂಭಿಸಿದ ಸಂಸ್ಕಾರಕರ್ಮದಲ್ಲಿ ಯಾವುದೇ ವಿಘ್ನವೂ ಉಂಟಾಗದಂತೆ ಅದು ಸಾಂಗವಾಗಿ ನೆರವೇರುವುದಕ್ಕೋಸ್ಕರ ಪ್ರಾರಂಭದಲ್ಲಿ ಗಣಪತಿಯ ಪೂಜೆ ಮಾಡಲಾಗುತ್ತದೆ. 

ಪುಣ್ಯಾಹವಾಚನ:-

ಪುಣ್ಯಂ ಅಹ: = ದಿವಸವು ಪುಣ್ಯಪ್ರದವಾಗಲಿ ಎಂದು ಬ್ರಾಹ್ಮಣರು ಮಾಡುವ ವಾಚನ. 

ಸಂಸ್ಕಾರಕರ್ತೃವಿಗೂ ಸಂಸ್ಕಾರ್ಯನಿಗೂ ಈ ದಿನವು ಹಬ್ಬದಂತೆ ಸುಖ ಸಂತೋಷಗಳನ್ನು ಉಂಟುಮಾಡಲಿ ಎಂದು ಆಶೀರ್ವಾದಗಳನ್ನು ಪಡೆಯುವುದೇ ಪುಣ್ಯಾಹವಾಚನದ ಪ್ರಧಾನ ಉದ್ಧೇಶವಾಗಿದೆ. 

ಇದರಲ್ಲಿ ಸ್ವಸ್ತಿವಾಚನ ಮುಂತಾದವುಗಳೂ ಸೇರಿಕೊಂಡಿವೆ. 

(ಹೆಚ್ಚಿನ ವಿವರಣೆ ನಮ್ಮ ಸಂಚಿಕೆ - 10: ದಿನಾಂಕ 14-12-2018 ರಲ್ಲಿ ಇರುತ್ತದೆ.)

ಮಾತೃಕಾಪೂಜನ:-

ಪ್ರತಿಯೊಬ್ಬನಿಗೂ ತನ್ನ ಕುಲದೇವತೆ ಪ್ರತ್ಯೇಕವಾಗಿರುತ್ತದೆ. 

ಮಾತೃಕಾಪೂಜನದಲ್ಲಿ ಕುಲದೇವತಾ ಪೂಜೆಯು ಅಡಕವಾಗಿದೆ. 

ಯಾವುದೇ ಶುಭಕರ್ಮವನ್ನು ಪ್ರಾರಂಭಿಸುವಾಗ ಪುಣ್ಯಾಹವಾಚನವಾದ ಮೇಲೆ ಪರಿವಾರ ಸಮೇತ ಕುಲದೇವತೆಗಳ ಪೂಜೆ ಮಾಡಲಾಗುತ್ತದೆ. 

ಈ ಪೂಜೆಯಿಂದ ತನ್ನ ಮತ್ತು ತನ್ನ ಕುಲದ ಕಲ್ಯಾಣವಾಗಬೇಕೆಂಬುದೇ ಇದರ ಪ್ರಧಾನ ಉದ್ದೇಶ. 

ನಾಂದೀಶ್ರಾದ್ಧಃ-

ಮನೆಯಲ್ಲಿ ಮಂಗಲಕಾರ್ಯವೊಂದು ನೆರವೇರುವಾಗ ಪಿತೃಗಳೆಲ್ಲರೂ ಸೂಕ್ಷ್ಮರೂಪದಿಂದ ಬಂದು ಉಪಸ್ಥಿತರಾಗಿದ್ದು, ಈ ಕಾರ್ಯಗಳನ್ನು ಸಂತೋಷದಿಂದ ಅವಲೋಕಿಸುತ್ತಾರೆ ಹಾಗೂ ಕುಲಕ್ಕೆ ಶುಭವನ್ನು ತರುತ್ತಾರೆ ಎಂಬುದು ನಮ್ಮ ವಿಶ್ವಾಸ. ಅಂತಹ ಪಿತೃಗಳನ್ನು ಪೂಜಿಸಿ ಸತ್ಕರಿಸುವುದೇ ಈ ವಿಧಿಯ ಪ್ರಧಾನ ಉದ್ದೇಶ. 

ಮಂಡಪದೇವತಾಪ್ರತಿಷ್ಠೆ:-

ಯಾವ ಮಂಟಪದಲ್ಲಿ ಶುಭಕಾರ್ಯವನ್ನು ಮಾಡಲಾಗುತ್ತದೆಯೋ ಆ ಮಂಟಪದ ಪೂಜೆ ಮಾಡುವುದೇ ಮಂಡಪದೇವತಾಪ್ರತಿಷ್ಠೆ.

ದಾರವನ್ನು ಸುತ್ತಿದ ಮಾವಿನ ಎಲೆಯ ಮೇಲೆ ಮಂಟಪದೇವತೆಯನ್ನು ಆವಾಹಿಸಿ ಪ್ರತಿಷ್ಠಾಪಿಸಲಾಗುವುದು.

ಅಂತೆಯೇ ಕರ್ಮ ಸಮಾಪ್ತಿಯಾದಾಗ ದೇವಕೋತ್ಥಾಪನೆ ಮಂಡಪೋದ್ವಾಸನ ಮುಂತಾದುವುಗಳನ್ನು ನೆರವೇರಿಸಬೇಕು. 

ಪ್ರತಿಷ್ಠಾಪಿಸಿದ ದೇವತೆಗಳನ್ನು ವಿಸರ್ಜಿಸುವುದು ಅತ್ಯಂತ ಅವಶ್ಯಕವಾಗಿದೆ. 

ಆವಾಹನದಷ್ಟೇ ವಿಸರ್ಜನೆಯೂ ಮಹತ್ತ್ವ ಪೂರ್ಣಕಾರ್ಯವಾಗಿದೆ. 

*******

ನಾಂದೀಶ್ರಾದ್ಧ:-

ನಾಂದೀ + ಶ್ರಾದ್ಧ = ನಾಂದೀಶ್ರಾದ್ಧ.

ನಾಂದೀ = ಸಂತೋಷ, ಅಭಿವೃದ್ಧಿ, ಮಂಗಳ, ಪ್ರಾರಂಭ, ಶುಭಕರ್ಮ, ಇತ್ಯಾದಿ.,

ಶ್ರಾದ್ಧ = ಶ್ರದ್ಧೆಯಿಂದ ಮಾಡುವ ಪಿತೃಕರ್ಮ, ಆಸಕ್ತಿಯಿಂದ ಮಾಡುವ ಕಾರ್ಯ, ಇತ್ಯಾದಿ., 

ಆದ್ದರಿಂದ ಮನೆಯಲ್ಲಿ ಒಂದು ನಾಂದೀಶ್ರಾದ್ಧವನ್ನು ಮಾಡಿದ್ದಾರೆ ಎಂದರೆ ನಡೆಯುವ ಮಂಗಲಕಾರ್ಯದ  ಪ್ರಾರಂಭವಾಯಿತು ಎಂದು ಅರ್ಥ. 

ನಾಂದೀಶ್ರಾದ್ಧಕ್ಕೆ ಮೊದಲು ಮಾತೃಕಾಪೂಜೆ ಮಾಡಬೇಕು. 

ನಾಂದೀಪಿತೃದೇವತೆಗಳ ಆರಾಧನೆಯಿಲ್ಲದೇ, ಕೇವಲ ಮಾತೃಕಾಪೂಜೆ ಮಾಡಲು ಅವಕಾಶವಿಲ್ಲ.  ನಾಂದೀಶ್ರಾದ್ಧವನ್ನು ಪೂರ್ವಾಹ್ನದಲ್ಲಿಯೇ ಮಾಡಬೇಕು. 

ಜನಿವಾರವನ್ನು ಸವ್ಯದಲ್ಲೇ ಹಾಕಿಕೊಂಡು ನಾಂದೀಶ್ರಾದ್ಧವನ್ನು ಮಾಡಬೇಕು ಮತ್ತು ಶ್ರಾದ್ಧಾಂಗತರ್ಪಣ ಇರುವುದಿಲ್ಲ. 

ನಾಂದೀ ವ್ಯಾಪ್ತಕಾಲ:-

ಏಕವಿಂಶತ್ಯಹರ್ಯಜ್ಞೇ ವಿವಾಹೇ ದಶ ವಾಸರಾ:|
ತ್ರಿಷಟ್ಸು ಚೌಲೋಪನಯನೇ ಶ್ರಾದ್ಧೇ ವಿಪ್ರಾಂಘ್ರಿಶೋಧನಮ್||

ಪ್ರಾರಂಭಂ ವರಣಂ ಯಜ್ಞೇ ಸಂಕಲ್ಪೋ ವ್ರತಸತ್ರಯೋ:|
ನಾಂದೀಶ್ರಾದ್ಧಂ ವಿವಾಹಾದೌ ಶ್ರಾದ್ಧೇ ಪಾಕಪರಿಕ್ರಿಯಾ:||

ದೀಕ್ಷಾಂತೋವಭೃಥೋ ಯಜ್ಞೇ ಕಂಕಣಾಂತಂ ವಧೂವರೌ|
ವ್ರತೇ ಬ್ರಹ್ಮೋದನಂ ಯಾವತ್ ವಟೋ: ಪಾಲಾಶದರ್ಶನಮ್|
ತಾವನ್ನಾಶೌಚಮಿತ್ಯಾಹು: ಶ್ರಾದ್ಧೇ ಕೂರ್ಚವಿಸರ್ಜನಮ್||

ಯಜ್ಞದಲ್ಲಿ ೨೧ ದಿ, ವಿವಾಹದಲ್ಲಿ ೧೦ ದಿನ, ಉಪನಯನದಲ್ಲಿ ೬ ದಿನ, ಮತ್ತು ಚೌಲದಲ್ಲಿ ೩ ದಿನ. ಈ ರೀತಿಯಾಗಿ ನಾಂದೀಕಾಲವಿರುತ್ತದೆ. 

ನಾಂದೀಶ್ರಾದ್ಧಾನಂತರ ಜಾತಾಶೌಚ, ಮೃತಶೌಚಾದಿಗಳು ಪ್ರಾರಂಭವಾದರೆ, ಮಂಗಳಕಾರ್ಯವನ್ನು ಮುಂದುವರಿಸಬಹುದು ಎನ್ನುವುದು ಆಪದ್ಧರ್ಮ. 

ಮಂಗಳಕಾರ್ಯದ ಆರಂಭವೆಂದರೆ, ಯಜ್ಞದಲ್ಲಿ ಋತ್ವಿಗ್ವರಣೆಯಾಗಿದ್ದರೆ ಯಜ್ಞ ಪ್ರಾರಂಭವಾಯಿತೆಂದೂ, ವ್ರತ, ಯಾಗಗಳಲ್ಲಿ ಸಂಕಲ್ಪ ಮಾಡಿದರೆ ಆರಂಭವಾಯಿತೆಂದೂ, ಉಪನಯನ/ವಿವಾಹ ಮುಂತಾದ ಮಂಗಳಕಾರ್ಯದಲ್ಲಿ ನಾಂದೀಯಾಯಿತೆಂದರೆ ಆರಂಭವಾಯಿತೆಂದು ತಿಳಿಯಬೇಕು. 

ನಾಂದೀಯಲ್ಲಿ ಅನೇಕ ಬಗೆಗಳಿವೆ:-

ಸ್ಥಿರನಾಂದೀ, ಚರನಾಂದೀ. ದೇವನಾಂದೀ, ಕರ್ಮಾಂಗನಾಂದೀ, ಸಂಸ್ಕರಾಂಗನಾಂದೀ, ಇತ್ಯಾದಿಗಳು. 

ಸ್ಥಿರ ನಾಂದಿಯನ್ನು ಯಜ್ಞ, ಯಾಗಾದಿಗಳು, ಉಪನಯನ, ವಿವಾಹಾದಿ ಕಾರ್ಯಗಳಿಗೆ ಮಾಡುತ್ತಾರೆ.

ಚರ ನಾಂದಿಯನ್ನು ಎಲ್ಲಾ ಮಂಗಳ ಕಾರ್ಯಗಳಿಗೂ ಮಾಡಬಹುದು. ಪೂಜೆ ಮಾತ್ರ. 

ನಾಂದೀಮುಖಾ: ಎಂದು ಪಿತೃಗಳನ್ನು ಹೆಸರಿಸಿ ಪೂಜಿಸುವುದರಿಂದ ಇದನ್ನು ನಾಂದೀ ಸಮಾರಾಧನೆ, ವೃದ್ಧಿಶ್ರಾದ್ಧ, ಅಭ್ಯುದಯಿಕಶ್ರಾದ್ಧ ಎಂದು ಕರೆಯುವರು. 

***

ಧಾರೆ ಎರೆಯುವ ಮುನ್ನ ಗಂಡಿನ ಪಾದ ಯಾಕೆ ಅತ್ತೆ ಮಾವ ತೊರೆಯುತ್ತಾರೆ..?*


ಅಳಿಯನಲ್ಲಿ ಸುಶೀಲ, ಸುಶಿಕ್ಷಿತ ಸದ್ಗುಣಗಳನ್ನು ಹೊಂದಿರುವುದನ್ನು ಕಂಡು, ಅವನಲ್ಲಿ ವಿಷ್ಣುವಿನ ಸನ್ನಿಧಾನವನ್ನು ನೆನೆದು, ತನ್ನ ಮಗಳಲ್ಲಿನ ಮಹಾಲಕ್ಷ್ಮಿಯನ್ನು, ಧರ್ಮ, ಅರ್ಥಾದಿ ಪುರುಷಾರ್ಥಗಳನ್ನು ಸಾಧಿಸಲು + ಕನ್ಯೆಗೆ ಬೇಕಾದ ಅತಿಮುಖ್ಯ ಸಂಸ್ಕಾರವಾದ "ಪಾಣಿಗ್ರಹಣ"(ಅಂದರೆ ಇನ್ನು ಮುಂದಿನ ಆಕೆಯ ಸಂಪೂರ್ಣ ಲೌಕಿಕ+ಆಧ್ಯಾತ್ಮಿಕ ಹೊಣೆಗಾರಿಕೆಯನ್ನು ಹೊರುವ) ಇದಕ್ಕೆ ಬೇಕಾದ ಧರ್ಮಾಸಕ್ತನಾದ ಅಳಿಯ, ಹಾಗೂ ಇಬ್ಬರೂ ಮಾಡುವ ಮುಂದಿನ ಎಲ್ಲಾ ಧಾರ್ಮಿಕ ಕೆಲಸಗಳಿಂದ ತಂದೆ ತಾಯಿಗಳಿಗೂ ಸದ್ಗತಿ ಉಂಟಾಗಲಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿ.. ಯೋಗ್ಯನಾದ ಸುಸಂಸ್ಕೃತ ಆಧ್ಯಾತ್ಮಿಕ ಲಕ್ಷ್ಯವುಳ್ಳ ವರನಿಗೆ, ತನ್ನ ಮಗಳ ಸಕಲವಿಧವಾದ ಉನ್ನತಿಗಾಗಿ ಪ್ರಾರ್ಥಿಸಿ, ಸಜ್ಜನಿರಿಗೆ/ದಾನ ಸ್ವೀಕರಿಸುವವರಿಗೆ ಕೊಡುವ ಗೌರವದ ಸಂಕೇತ.. 
ಇದು ಮದುವೆಯ ಸಂದರ್ಭದ ಪಾದಪೂಜೆಯ ಅರ್ಥ..

೧) ವರ ತತ್ಸಮಾನ ಶುದ್ಧ ಚಾರಿತ್ರಿಕ+ವಿದ್ಯಾವಿನಯ ಸಂಪನ್ನನಾದ ಧಾರ್ಮಿಕನಾಗಿರಬೇಕು.
೨) ವಧುವೂ ಸಹ ಸುಶೀಲೆ, ಸುಜನೆ, ಸುವಿದ್ಯಾಧರೆ, ಸಹನ ಸಂಪನ್ನೆಯಾಗಿ.

೩) ಇಬ್ಬರೂ ಹಿರಿಯರ ಸೇವೆ ಮಾಡುತ್ತ, ಕಿರಿಯರಿಗೆ ಧಾರ್ಮಿಕ ಮಾರ್ಗದರ್ಶನ ನೀಡುತ್ತ, ಚತುರಾಶ್ರಮ+ವರ್ಣಗಳ ತಕ್ಕಂತೆ ಧರ್ಮದಿಂದ ದುಡಿಯುವ ಅಸಾಧಾರಣ ಸಂಸ್ಕಾರ ಅದು "ಮದವೆ" ಎಂಬ ಘಟ್ಟ.. ಇದನ್ನು ಸಾರ್ಥಕ ಮಾಡಿಕೊಂಡು ನಡೆಯುವ ಹೊಣೆ ನಮ್ಮ ಜೀವನದ ಗುರಿಯಾದರೆ ಉತ್ತಮ..

೪) ಎಲ್ಲಾ ಸಂಪ್ರದಾಯದಲ್ಲಿ ಇದು ಕಾಣದು, ಕೆಲವೊಂದು ನೋಡಿ ಅಳವಡಿಸಿದ ಪದ್ಧತಿ.. ಇದರ ಹಂದರ ತಿಳಿದು ನಡೆದರೆ ಈಗಿನ ವೈಪರೀತ್ಯಗಳನ್ನು ತಡೆದು ನಮ್ಮ ಸಂಸ್ಕೃತಿಗಳನ್ನು ಅವಲಂಬಿಸಿ ನಡೆಯುವ ಅವಕಾಶವನ್ನು ಕಾಪಿಡಬಹುದು!!!
***

No comments:

Post a Comment