SEARCH HERE

Monday, 1 April 2019

ವೇದವನ್ನು ಯಾರು ಬರೆದರು who wrote vedas


ಧರ್ಮ ಬಿಂದು💧
ವೇದ” ಎಂದರೆ  “ಇದು ನಮ್ಮಂತಹ ಸಾಮಾನ್ಯರಿಗಲ್ಲ”! ವೇದವನ್ನು ತಿಳಿಯಲು  ಸಂಸ್ಕೃತದ ಜ್ಞಾನ   ಇರಬೇಕು! ವೇದ ಎಂದರೆ ಪೂಜೆ ಪುನಸ್ಕಾರಕ್ಕಾಗಿ ಇರುವ ಮಂತ್ರಗಳು! ಎಲ್ಲರಿಗೂ   ವೇದವನ್ನು ಓದುವ ಅರ್ಹತೆ ಇಲ್ಲ! ಹೆಂಗಸರು ಓದಬಾರದು! ಯಾವುದೋ ಒಂದು ವರ್ಗದವರು ಮಾತ್ರ ಓದಬೇಕು! ಇತ್ಯಾದಿ,ಇತ್ಯಾದಿ ವಿಚಾರಗಳು ಬಹುಪಾಲು ಜನರಲ್ಲಿ ಸಾಮಾನ್ಯವಾಗಿ ಬೇರೂರಿದೆ. ಅದಕ್ಕೆ ಹಲವಾರು ಕಾರಣಗಳು ಇವೆ .ಕಾರಣಗಳು ಏನೇ ಇರಲಿ, ಈ ವೇದಿಕೆಯ ಉದ್ಧೇಶವೆಂದರೆ ವೇದವೆಂದರೆ ಇದು “ಅಸಾಮಾನ್ಯರಿಗೆ”ಎನ್ನುವ ಭಾವನೆಯನ್ನು ಕಿತ್ತುಹಾಕಿ ಎಲ್ಲಾ ಮಾನವರ ನೆಮ್ಮದಿಯ ಬದುಕಿಗಾಗಿ ಇರುವ ಅರಿವಿನ ಭಂಡಾರ ಎಂಬುದನ್ನು  ಕೆಲವು ವೇದ ಮಂತ್ರವನ್ನು ಆಧರಿಸಿ  ಸರಳವಾದ ಮಾತುಗಳಲ್ಲಿ  ನನ್ನಂತಹ “ಸಾಮಾನ್ಯನಿಂದ ಸಾಮಾನ್ಯರಿಗೆ”  ತಿಳಿಸುವುದೇ ಆಗಿದೆ. ಈ ಹೊತ್ತಿಗೆಯನ್ನು ಓದುವಾಗ ವೇದ ಪಂಡಿತರುಗಳು ಹಲವು  ಭಾಷ್ಯಗಳ ಆಧಾರದಮೇಲೆ  ಒಂದೇ ಮಂತ್ರಕ್ಕೆ ಬೇರೆಯ ಅರ್ಥವನ್ನು ನೀಡುವ ಅವಕಾಶಗಳೂ ಸಹ  ಇದ್ದೇ ಇದೆ. ಆದರೆ ವೇದ ಪಂಡಿತರಲ್ಲಿ ನನ್ನ ಮನವಿ ಏನೆಂದರೆ ವೇದವು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವ ಭೌಮ , ಎಂಬುದನ್ನು ವೇದ ಮಂತ್ರಗಳಲ್ಲೇ ನಿರೂಪಿಸಿದೆ. ಆದರೆ ಅದಕ್ಕೆ ಭಾಷ್ಯವನ್ನು ಬರೆಯುವಾಗ ಅಂದಿನ ಸಾಮಾಜಿಕ ಜೀವನಕ್ಕನುಗುಣವಾಗಿ ವೇದಮಂತ್ರವನ್ನು ಅರ್ಥೈಸಿದ್ದಾರೆಂಬುದು ಗಮನದಲ್ಲಿರಬೇಕು.ಆದರೆ ಇಂದಿನ ಕಾಲಘಟ್ಟದಲ್ಲಿ ಯಾಸ್ಕಾಚಾರ್ಯರ  ನಿರುಕ್ತದ ಆಧಾರದಿಂದ ವೇದ ಮಂತ್ರಗಳನ್ನು ಬಿಡಿಸಿಕೊಂಡಾಗ ಮಾತ್ರ  ವೇದವು ಇಂದಿನ ಕಾಲಕ್ಕೂ , ಮುಂದಿನ ಕಾಲಘಟ್ಟಕ್ಕೂ ಸಹ ಹೇಗೆ ಉಪಯುಕ್ತ ಎಂಬ ಅರಿವು ಮೂಡುತ್ತದೆ.

 ವೇದವನ್ನು ಯಾರು ಬರೆದರು?
ವೇದವು ಅಪೌರುಷೇಯ.ಇದನ್ನು ಮನುಷ್ಯರು ಬರೆದದ್ದಲ್ಲ. ಅಂದರೆ ಹೇಗೆ ಬಂತು? ಎಂಬುದೇ ತಾನೇ ಮುಂದಿನ ಪ್ರಶ್ನೆ! ವೇದವನ್ನು ಋಷಿಗಳು ತಮ್ಮ ತಪೋ ಬಲದಿಂದ ಕಂಡುಕೊಂಡರು. “ ಋಷಿರ್ದರ್ಶನಾತ್” ಎನ್ನುತ್ತಾರೆ. ಅಂದರೆ ಋಷಿಗಳು ಕಂಡುಕೊಂಡ  ಸತ್ಯ. ಋಷಿಗಳು ಅಂತರ್ಮುಖಿಗಳಾಗಿ ತಪಸ್ಸನ್ನು ಆಚರಿಸಿದಾಗ ಭಗವಂತನಿಂದಲೇ ಕಂಡುಕೊಂಡ  ಸತ್ಯವೇ ವೇದಗಳು. ಮಾನವ ಜನ್ಮ ಯಾವಾಗ ಆಯ್ತೋ ಆಗಿನಿಂದಲೇ ವೇದಗಳು ಇವೆ. ವಿಜ್ಞಾನಿಯೊಬ್ಬ   ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ. ಯಾವುದೇ ವಸ್ತುವನ್ನು  ಮೇಲೆ ಎಸೆದರೂ ಭೂಮಿಯು ಅದನ್ನು ಆಕರ್ಶಿಸುವುದರಿಂದ ಅದು ಭೂಮಿ ಮೇಲೆ ಬೀಳುತ್ತದೆ. ವಿಜ್ಞಾನಿಯು ಈ ಸತ್ಯವನ್ನು ಕಂಡುಹಿಡಿಯುವ ಮುಂಚೆಯೂ  ಯಾವುದೇ ಮೇಲೆ ಎಸೆದ ವಸ್ತು ಭೂಮಿಗೆಗೆ ಬೀಳುತ್ತಲೇ ಇತ್ತಲ್ಲವೇ? ಆದರೆ ವಿಜ್ಞಾನಿಯು ಈ ನಿಯಮವನ್ನು ತನ್ನ ಸಂಶೋಧನೆಯಿಂದ  ಕಂಡುಕೊಂಡನು. ಹಾಗೆಯೇ ನಮ್ಮ ಋಷಿಮುನಿಗಳು ಅದಾಗಲೇ ಇದ್ದ  ವೇದ ಜ್ಞಾನವನ್ನು ತಮ್ಮ ತಪಸ್ಸಿನ ಬಲದಿಂದ ಕಂಡುಕೊಂಡರು. ಇಷ್ಟನ್ನು ವೇದದ ಉಗುಮದ ಬಗ್ಗೆ ಅರಿತು ಕೊಂಡರೆ ಸಾಕು. ಯಾವ್ಯಾವ ಮಂತ್ರವನ್ನು ಯಾವ ಯಾವ ಋಷಿಗಳು ಕಂಡುಕೊಂಡರೆಂಬುದನ್ನು  ಆಯಾಮಂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ವೇದವ್ಯಾಸರು  ಅಲ್ಲಲ್ಲಿ ಹರಡಿದ್ದ ವೇದ ಜ್ಞಾನವನ್ನು  ನಾಲ್ಕು ಭಾಗಗಳಲ್ಲಿ ಕ್ರಮವಾಗಿ ಹಂಚಿದರು. ಆದರೆ  ನಾಲ್ಕೂ ವೇದಗಳು ಭಗವಂತನಿಂದಲೇ ಪ್ರಕಟವಾದವೆಂಬುದನ್ನು ಒಂದು ವೇದ ಮಂತ್ರವೇ ಸಾರುತ್ತದೆ. ಆ ಮಂತ್ರದಿಂದಲೇ   ಮುಂದುವರೆಯೋಣ.

ವೇದದ ಉಗಮ:
ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ. ಯಜುರ್ವೇದದ ೩೧ ನೇ ಅಧ್ಯಾಯದ ೭ನೇ ಮಂತ್ರ ಹೀಗಿದೆ?

ತಸ್ಮಾತ್  ಯಜ್ಞಾತ್ ಸರ್ವಹುತ: ಋಚ: ಸಾಮಾನಿ  ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||

ತಸ್ಮಾತ್  ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ
ಋಚ: ಸಾಮಾನಿ  ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು
ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.
ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.

ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ  ರೂಪದಲ್ಲಿ ಪ್ರಕಟವಾಗಿದ್ದ  ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು     ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.
 ವೇದಮಂತ್ರಾರ್ಥಗಳನ್ನು ನಾನಾ ರೀತಿಯಲ್ಲಿ ಅರ್ಥೈಯಿಸುವುದುಂಟು, ಆದರೇ, ಯಾವ ಅರ್ಥವು “ಋತದ” ಅಂದರೇ ಜಗತ್ತಿನ ನಿಯಮಕ್ಕೆ- ಪ್ರಕೃತಿ ನಿಯಮಕ್ಕೆ ಹೊಂದುತ್ತದೆಯೋ ಆ ಅರ್ಥವು ಮಾತ್ರ ಋಷಿಪ್ರೋಕ್ತ. ಕೇವಲ ನಂಬಿಕೆ ಮಾತ್ರದ, ಜಗತ್ತಿನ ನಿಯಮಕ್ಕೆ ಹೊಂದದ- ಸಂಶಯಾದಿಗಳನ್ನು ನಿವಾರಿಸದ ಅರ್ಥಗಳಿಂದ ಮಾನವ ಸಮಾಜಕ್ಕೆ ಲಾಭವಾದರೂ ಏನು?

ಅಥರ್ವವೇದಕ್ಕೆ ಛಂದಸ್ಸು ಎಂಬ ಹೆಸರೂ ಉಂಟು. “ಛಂದಸ್” ಶಬ್ದಕ್ಕೆ =ಇಚ್ಛೆ, ಸುಖ, ಆನಂದ ಆದಿ ಸದರ್ಥಗಳೂ, ಹಾಗೂ = ಮೋಸ, ಸೇಡು,[ಮುಯ್ಯಿ], ದ್ರೋಹ, ಕುಟಿಲತೆ- ಮೊದಲಾದ ದುರರ್ಥಗಳೂ ಇವೆ. ಹಾಗಾಗಿ ಅಥರ್ವವೇದದ ಬಗ್ಗೆ ತಪ್ಪು ಕಲ್ಪನೆ ಉಂಟಾಗಿದೆ. ಅಥರ್ವವೇದದಲ್ಲಿ, ಋಗ್ವೇದದ ಯಾವ ಗುಣ- ಗುಣಿ(ತತ್ವಗಳ), ವಿಚಾರವಿದೆಯೋ, ಅದನ್ನು ಕಾರ್ಯರೂಪಕ್ಕಿಳಿಸುವ ವಿಚಾರವಿದೆಯೆಂದು ತಿಳಿಯುತ್ತದೆ.
********

No comments:

Post a Comment