SEARCH HERE

Monday, 1 April 2019

ಚಿತ್ರಾಹುತಿವಿಧಿ not ಚಿತ್ರಾವತಿ ವಿಧಿ chitraahuti not chitravati process





#ಅಥಚಿತ್ರಾಹುತಿವಿಧಿ not ಚಿತ್ರಾವತಿ - ಈಗ ಉಪನಯನ ಮಾಡಿದ ಕೆಲವು ಮಕ್ಕಳಿಗೆ ಭೋಜನವಿಧಿ ಗೊತ್ತಿರುವದಿಲ್ಲ ಹೇಗೆ  ಚಿತ್ರಾಹುತಿ ತಿರುಗಬೇಕು, ಏನು ಮಂತ್ರ ಹೇಳಬೇಕು ಎಷ್ಟು ಬಲಿಯನ್ನು ಹಾಕಬೇಕು ಅಂತ ತಂದೆ ತಾಯಿಗೆ ಕೂಡಾ ಅನಕೂಲವಾಗಲಿ ಅಂತ ಒಂದು ಸಣ್ಣ ಪ್ರಯತ್ನ....

ಪ್ರಪ್ರಥಮವಾಗಿ ಅನ್ನಪೂರ್ಣ ಸ್ವರೂಪವಾದ       ಬಡಿಸಿರುವ ಬಾಳೆಎಲೆಗೆ (ಬಡಿಸಿರುವ ತಟ್ಟೆಗೆ )
ನಮಸ್ಕಾರ ಮಾಡಿ....‌

ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಇತಿ ಪ್ರೋಕ್ಷ್ಯ||  ಈ ಮಂತ್ರ ಹೇಳಿ
ಅನ್ನಕ್ಕೆ ನೀರನ್ನು ಚಿಮುಕಿಸುವುದು

ಸತ್ಯಂತ ವರ್ತೇನ  ಪರಿಷಿಂಚಾಮಿ || ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ||  ಈ ಮಂತ್ರ ಹೇಳಿ ನೀರಿನಿಂದ ಅನ್ನದ ತಟ್ಟೆ _ ಬಾಳೆ ಎಲೆಯನ್ನು ಪ್ರದಕ್ಷಿಣವಾಗಿ ನೀರನ್ನು ಹಾಕುವದು
ನಂತರ ಬಲ ಭಾಗದಲ್ಲಿ ನೀರಿನಿಂದ ಗೆರೆ ಎಳೆದು-ನಂತರ
ಅನ್ನಕ್ಕೆ ಸ್ವಲ್ಪ ತುಪ್ಪ ಕಲಿಸಿ ( ಉಪ್ಪು ಹಾಕಿರಬಾರದು)

ಓಂ ಚಿತ್ರಾಯ  ನಮಃ  | ಓಂ ಚಿತ್ರ ಗುಪ್ತಾಯ ನಮಃ| ಓಂ ಯಮಾಯ  ನಮಃ  | ಓಂ ಯಮಧರ್ಮಾನಮಃ  (ಸ್ವಾಹಾ )  ಅಂತ ಹೇಳುತ್ತಾ  ಇತಿ ಅನ್ನದ ಅಗುಳಿನ ಬಲಿಯನ್ನು ಇಡುವುದು 

ನಂತರ ಬಲಗೈಯಲ್ಲಿ ನೀರು ಹಾಕಿಕೊಂಡು ಕೆಳಗಿನ ಮಂತ್ರ ಹೇಳಿ.....ಕುಡಿಯಬೇಕು

ಅಹಂವೈಶ್ವಾನರೋಭೂತ್ವಾ ಪ್ರಾಣೀನಾಂ ದೇಹಮಾಶ್ರಿತಃ
ಪ್ರಾಣಾಪಾನ ಸಮಾಯುಕ್ತಂ ಪಚಾಮ್ಯನ್ನಮ್ ಚತುರ್ವಿದಂ ... ಅಮೃತಮಸ್ತು ಅಮೃತೋಪಸ್ತರಣಮಸಿ ಸ್ವಾಹಾ  ಅಂದು ಬಲಗೈಯಲ್ಲಿ ಹಿಡಿದ ನೀರನ್ನು ಆಪೋಷಣ ಮಾಡಿ 

ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ | ಓಂ ಸಮಾನಯ ಸ್ವಾಹಾ | ಓಂ ಬ್ರಹ್ಮಣೇ ಸ್ವಾಹಾ || ಇತಿ ಷಡ್ವಾರಂ ಪ್ರಾಣಾಹುತಿಂ ಮಖೇ ಜುಹುಯಾತ್ || 
may add ಸರ್ವೇಭ್ಯೋ ಭೂತೇಭ್ಯೋ  ನಮಃ(ಸ್ವಾಹಾ) 

ಅಂದರೆ  ಆರು ತುತ್ತುಗಳನ್ನು ಮೇಲಿನ ಮಂತ್ರ ಹೇಳುತ್ತಾ   (ಜಠರಾಗ್ನಿಗೆ ಬಲಿ) ತುತ್ತನ್ನು ಸ್ವೀಕರಿಸಬೇಕು.... ಹೀಗೆ ತುತ್ತನ್ನು ಸ್ವೀಕರಿಸುವಾಗ ಎಡಗೈಯಿಯ ಅನಾಮಿಕ ಬೆರಳಿನಿಂದ  ಬಾಳೆಎಲೆಯ ಎಡಗಡೆ ಒತ್ತಿ ಹಿಡಿಯಬೇಕು ತುತ್ತು ಸ್ವೀಕರಿಸಿ ನಂತರ ಆ ಬೆರಳಿಗೆ ನೀರಿನಿಂದ ತೊಳೆದು ಕಣ್ಣಿಗೆ ಹಚ್ಚಿಕೊಂಡು ಊಟವನ್ನು ಮಾಡಬೇಕು.....
ಊಟವಾದ ಮೇಲೆ ಬಲಗೈಯಲ್ಲಿ ನೀರನ್ನು ಹಾಕಿಕೊಂಡು 

||ಅಮೃತಾ ಪಿ ಧಾನಮಸಿ ಸ್ವಾಹಾ||
ಅಂತ ಹೇಳಿ ಆಪೋಶನ ಮಾಡಬೇಕು  

ನಂತರ

ಒಂದೇ ಸಾರಿ ಅವುಗಳ ಮೇಲೆ ನೀರು ಬಿಟ್ಟು ಎಲ್ಲ ಬಲಿ  ಒಟ್ಟು ಸೇರಿಸುವುದು; 
ನಂತರ  
ಬಲಗೈ ನಾಲ್ಕು ಬೆರಳುಗಳನ್ನು ನೆಲಕ್ಕೆ ಊರಿ 
||ಅನ್ನ ದಾತಾ ಸುಖಿ ಭವ|| 
ಅಂತ  ಅನ್ನ ಹಾಕಿದವರು ಸುಖವಾಗಿರಲಿ ಅಂತ ಹಾರೈಸಿವುದು....ನಂತರ 
ಕೈ ತೊಳೆದುಕೊಳ್ಳುವುದು; 
ಕೈಕಾಲು ತೊಳೆದು ..‌ಹೊಟ್ಟೆ ಮುಟ್ಟಿಕೊಂಡು.‌

||ಅಗಸ್ತ್ಯಂ ಕುಂಭಕರ್ಣಂ ಚ ಶನಿಂ ಚ ವಡವಾನಲಂ |
ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ ||
ಇತಿ ಜಪೇತ್
It is the shortest form of performing vaishwadeva ritual. It is not ಚಿತ್ರಾವತಿ. It is ಚಿತ್ರಾಹುತಿ.
***********

ಬ್ರಾಹ್ಮಣರಲ್ಲಿ ಊಟಕ್ಕೆ ಕುಳಿತಾಗ 
ಚಿತ್ರಾಹುತಿ ನೀಡುವ ಕ್ರಮ ------
ಚಿತ್ರಾಹುತಿ ನೀಡುವ ಕಾರಣ-----

ಭೋಜನವೆಂಬುದು ಒಂದು ಯಜ್ಞರೂಪ

ಸನಾತನ ಕಾಲದಿಂದಲೂ ಬ್ರಾಹ್ಮಣರು ಪಶು ಪಕ್ಷಿ ಗಳಂತೆ ಆಹಾರವನ್ನು ಎಲೆ ಅಥವ ತಟ್ಟೆಯಲ್ಲಿ ಹಾಕಿದೊಡನೇ ಮುಕ್ಕಲು ಪ್ರಾರಂಭಿಸುವುದಿಲ್ಲ ..ಅವರು ಊಟವನ್ನು ಒಂದು ಯಜ್ಞ ಎಂದು ಭಾವಿಸುತ್ತಾರೆ. ಪಂಡಿತರಿಂದ ಒಬ್ಬ ಸಾಮಾನ್ಯ ಬ್ರಾಹ್ಮಣ (ಗೃಹಸ್ತರಾದಿ) 
ಮೊದಲಾಗಿ ಎಲ್ಲರೂ ಭೋಜನವನ್ನು ಯಜ್ಞದಂತೆ ಆಚರಿಸಿದರೆ ದೇಹದ ಮತ್ತು ಮನಸ್ಸಿನ ಆರೋಗ್ಯ ಭಾಗ್ಯ ರೂಪದಲ್ಲಿ ನಮ್ಮನ್ನು ರಕ್ಷಿಸುತ್ತದೆ

ನಮ್ಮ ವೈದಿಕ ಚಿಂತನೆಯಲ್ಲಿ ಬ್ರಹ್ಮಾಂಡದಿಂದ ಪಿಂಡಾಂಡದವರೆಗೆ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿರ್ಭರಣಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ. 

ಈ ಕಾರಣದಿಂದಲೇ ಅದು 'ಪ್ರಾಣಾಗ್ನಿಹೋತ್ರ'ವೆಂದು ಕರೆಯಲ್ಪಡುತ್ತದೆ. ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ. 
ಈ ಅಗ್ನಿ ನಾವು ಸೇವಿಸುವ ಆಹಾರವನ್ನು ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು 'ಪಾಚಕಾಗ್ನಿ' . ಈ ಪಾಚಕಾಗ್ನಿಯು ಜಠರಾಗ್ನಿ, ಉದರಾಗ್ನಿ, ಕೋಷ್ಠಾಗ್ನಿ ಮುಂತಾದ ಪ್ರಾಸಂಗಿಕ ನಾಮಧೇಯಗಳಿಂದ ಕರೆಯಲ್ಪಟ್ಟರೂ ಅದು ಗೀತೆಯಲ್ಲಿ ವಿವರಿಸಿದಂತೆ 'ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ.

ಭೋಜನಯಜ್ಞವೆಂಬ ಆತ್ಮಯಜ್ಞಕ್ಕೆ ಜೀವಾತ್ಮನೇ ಯಜ್ಞಪತಿ. ಯಜ್ಞಸಾಧನವಾದ ಆಹಾರರೂಪಿ ಹವಿಸ್ಸನ್ನು ನಿರ್ಮಿಸುವವನು, ಭುಂಜಿಸುವವನು ಪರಮಾತ್ಮನಾದುದರಿಂದ ಅವನೇ ಯಜ್ಞೀ, ಯಜ್ಞಪತಿ, ಯಜ್ಞಾಂಗ, ಯಜ್ಞವಾಹನ, ಯಜ್ಞಸಾಧನ. ಈ ಕಾರಣಕ್ಕಾಗಿಯೇ ಭೋಜನ ಪ್ರಾರಂಭದ ಮೊದಲು 'ಬ್ರಹ್ಮಾರ್ಪಣ'ವೆಂಬ ಪರಿಕಲ್ಪನೆ.

ಪಚಾಮ್ಯನ್ನಂ ಚತುರ್ವಿಧಮ್ : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು ಪಂಚಭಕ್ಷವಾಗುತ್ತದೆ. ಈ ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.

ಶುಚಿತ್ವ
ಈ ಪ್ರಾಣಾಗ್ನಿಹೋತ್ರಕ್ಕೆ ಜಠರವೆಂಬ ಯಜ್ಞಕುಂಡದಲ್ಲಿ ಕಾಲಕಾಲಕ್ಕೆ ಪಾಚಕಾಗ್ನಿಯನ್ನು ಸ್ಥಾಪಿಸಿಕೊಳ್ಳುವ ನಮ್ಮ ದೇಹವೇ ಯಜ್ಞಶಾಲೆ. ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬಾಳೆಎಲೆಯಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.


ಭೋಜನ ಸ್ವೀಕಾರಕ್ಕೂ ಮೊದಲು

1. ಪರಿಷಿಂಚನೆ
ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:
ಓಂ ಭೂರ್ಭುವಃ ಸ್ವಃ |
ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)
ವಿಷ್ಣೋರನ್ನಂ ರಕ್ಷಸ್ವ

ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಪರಿಸಿಂಚನ ಎಂದರೆ
ನಮ್ಮ ಆಡುನುಡಿಯಲ್ಲಿ ಬಹಳ ಸರಳವಾಗಿ ನಾವಿದನ್ನು ಸುತ್ತುಗಟ್ಟುವುದು ಎನ್ನುತ್ತೇವೆ. ಏನನ್ನು ಸುತ್ತುಗಟ್ಟುವುದು ಮತ್ತು ಯಾಕಾಗಿ ಸುತ್ತುಗಟ್ಟುವುದು ಎಂಬ ಅರಿವಿಲ್ಲದೆ ನಡೆಸುವ ಈ ಕ್ರಿಯೆ ಬ್ರಾಹ್ಮಣರು ಸುತ್ತುಗಟ್ಟದೆ ಉಣ್ಣುವುದಿಲ್ಲ ಎಂಬಷ್ಟರ ಮಟ್ಟಿಗೆ ಯಾಂತ್ರಿಕವಾಗಿಯೇ ಉಳಿದಿದೆ. ಸೇಚನ, ಸಿಂಚನ ಎಂಬ ಶಬ್ದಗಳು ನೀರನ್ನು ಚಿಮುಕಿಸುವ ಕ್ರಿಯೆಯನ್ನು ಸೂಚಿಸುವಂತಹವುಗಳು. ಈ ಮೊದಲೇ ಜಲಪ್ರೋಕ್ಷಣೆಗೊಂಡು ಶುದ್ಧೀಕರಿಸಿದ ಬಾಳೆಎಲೆಯ ಮೇಲೊ ಬಡಿಸಿದ ಅನ್ನದ ಸುತ್ತ ಎಡದಿಂದ ಬಲಕ್ಕೆ ಪ್ರದಕ್ಷಿಣಾಕಾರದಲ್ಲಿ ಅಭಿಮಂತ್ರಿತ ಜಲವನ್ನು 'ಸತ್ಯಂತ್ವರ್ತೇನ ಪರಿಷಿಂಚಾಮಿ' ಎಂದು ಉಚ್ಚರಿಸುತ್ತ ಪರಿಸಿಂಚನ ಮಾಡಬೇಕು. ಇದರರ್ಥ 'ಸತ್ಯ' (ಭಗವಂತ) ಮತ್ತು 'ಋತ' (ಧರ್ಮ ಮತ್ತು ನ್ಯಾಯ)ವನ್ನು ಸ್ಮರಿಸಿ ಈ ಅನ್ನವನ್ನು ಪರಿಷೇಚನ ಮಾಡುತ್ತೇನೆ. ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.

2) ಚಿತ್ರಾಹುತಿ ಹವಿಸ್ಸು ಸಮರ್ಪಣೆ 
ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ

ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು

ಚಿತ್ರಾಯ ನಮ: 
ಚಿತ್ರಗುಪ್ತಾಯ ನಮ: 
ಯಮಾಯ ನಮ: 
ಯಮಧರ್ಮಾಯ ನಮ: 

ಈ ನಾಲ್ಕು ಮಂತ್ರದಿಂದ
ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು
ಚಿತ್ರಾಹುತಿ ಎಂದರೆ
ಎಲೆಯ ಬಲತುದಿಯಲ್ಲಿ ನೀರಿನಿಂದ ಗೆರೆಯೆಳೆದು ನಾಲ್ಕು ಅನ್ನದ ಸಣ್ಣ ತುತ್ತುಗಳನ್ನಿರಿಸುವುದೇ ಚಿತ್ರಾಹುತಿ. ಈ ಚಿತ್ರಾಹುತಿಯನ್ನು ನೀಡುವಾಗ ಭೋಜನವೂ ಒಂದು ಯಜ್ಞವಿಧಿಯಂತೆ ಇದ್ದು, ಯಜ್ಞಕರ್ಮದಲ್ಲಿ ಪ್ರಧಾನಹೋಮ ಅಥವಾ ಪೂರ್ಣಾಹುತಿಗೆ ಮೊದಲು ಉಪದೇವತೆಗಳಿಗೆ ನೀಡುವ ಬಲಿಯ ಪ್ರತೀಕದಂತೆ ಈ ಚಿತ್ರಾಹುತಿ.

3)'ಆಪೋಷನ'ವೆಂದರೆ ನೀರನ್ನು ಗುಟುಕಿಸುವುದು ಎಂದರ್ಥ. ನೀರು ನಮಗೆ ಬದುಕನ್ನು ನೀಡುವಂತಹದು. ಅದು ಅಮೃತ ಸಮಾನ. ಹಾಗಾಗಿ ನಾವು ತಿನ್ನುವ ಈ ಅನ್ನಕ್ಕೆ ಅಮೃತದ ಸವಿಯಿರಲಿ ಎಂಬ ಸಂಕಲ್ಪದೊಂದಿಗೆ ಅಮೃತೋಪರಣಮಸೀ ಸ್ವಾಹಾಃ' ಎಂದು ಆಪೋಷನಗೈಯ್ಯಬೇಕು.
4)ಅಭಿಘಾರ :
ಅಭಿಘಾರವೆಂದರೆ ನೈವೇದ್ಯಕ್ಕಾಗಿ ಹಾಕುವ ತುಪ್ಪ. ಇದು ಆಹಾರವನ್ನು ಸ್ವಾದಿಷ್ಠವಾಗಿ ಮಾಡುತ್ತದೆ. ಯಜ್ಞದಲ್ಲಿ ಹವಿಸ್ಸಿನ ಮೇಲೆ ತುಪ್ಪವನ್ನು ಹನಿಸುವಂತೆ ಈ ಭೋಜನ ಯಜ್ಞದಲ್ಲಿ ಈ ಅಭಿಘಾರ.

5) ಪ್ರಾರ್ಥನೆ
ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ(ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.

'ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ '
ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ,
ಅಮೃತೋಪಸ್ತರಣಮಸಿ ಸ್ವಾಹಾ ||

6) ಅನ್ನಪ್ರಾಶನ (ಸ್ವಾಹಾಕಾರ)

ಓಂ ಪ್ರಾಣಾಯ ಸ್ವಾಹಾ || 
ಓಂ ಅಪಾನಾಯ ಸ್ವಾಹಾ || 
ಓಂ ವ್ಯಾನಾಯ ಸ್ವಾಹಾ || 
ಓಂ ಉದಾನಾಯ ಸ್ವಾಹಾ || 
ಓಂ ಸಮಾನಾಯ ಸ್ವಾಹಾ || 
(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು

ಸ್ವಾಹಾಕಾರ ಎಂದರೆ ಯಜ್ಞಯಾಗಾದಿಗಳಲ್ಲಿ ಪೂರ್ಣಾಹುತಿಗೆ ಮೊದಲು ಅಗ್ನಿಗೆ ಚರುವನ್ನು ಸಮರ್ಪಿಸಿದಂತೆ ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಮತ್ತು ಬ್ರಹ್ಮನಿಗೂ ಎಲೆಯಲ್ಲಿ ಬಡಿಸಿದ ಖಾರ, ಉಪ್ಪು, ಹುಳಿಗಳನ್ನು ಸೇರಿಸದ ಅನ್ನವನ್ನು (ಸಣ್ಣ ತುತ್ತು) ಸ್ವಾಹಾಕಾರಕ್ಕಾಗಿ ಭುಂಜಿಸಬೇಕು.ಈ ಸ್ವಾಹಾಕಾರವೆಂದರೆ ಜಗಿಯದೆ ನುಂಗುವ ಪ್ರಕ್ರಿಯೆ. ಈ ಪ್ರಾಣಾದಿ ಸ್ವಾಹಾಕಾರ ಪ್ರಕ್ರಿಯೆಯಲ್ಲಿ 

*ಪ್ರಾಣಾಯ ಸ್ವಾಹಾಕ್ಕೆ ತೊರು ಬೆರಳು ಮತ್ತು ಮಧ್ಯದ ಬೆರಳು ಮತ್ತು ಹೆಬ್ಬೆರಳು,
*ಅಪಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಹೆಬ್ಬೆರಳು, 
*ವ್ಯಾನಾಯ ಸ್ವಾಹಾಗೆ ಉಂಗುರದ ಬೆರಳು, ಕಿರು ಬೆರಳು ಮತ್ತು ಹೆಬ್ಬೆರಳು, 
*ಉದಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳು, 
*ಸಮಾನ ಕ್ಕೆ ಐದೂ ಬೆರಳುಗಳನ್ನು ಬಳಸಬೇಕೆಂಬ ನಿಯಮವಿದೆ. 

ಈ ಎಲ್ಲ ಪೂರ್ವ ಪೀಠಿಕೆಯ ನಂತರ ಭೋಜನವನ್ನು ಆತುರ, ಅಸಹನೆ, ಸಿಟ್ಟು ಇಲ್ಲದೆ ಶಾಂತಮನಸ್ಸಿನಿಂದ ತನಗೆ ಬೇಕಾದಷ್ಟು ಸ್ವೀಕರಿಸಬೇಕು. ಅತಿ ಭುಂಜನವು ದೈಹಿಕ ಆರೋಗ್ಯದ ಮೇಲೆ ವಿಕೃತ ಪರಿಣಾಮವನ್ನು ಬಿರಬಲ್ಲದೆಂಬ ಎಚ್ಚರವಿರಬೇಕು. ಈ ರೀತಿಯ ಭೋಜನವೇ ಪ್ರಾಣಾಗ್ನಿಹೋತ್ರದ ಪೂರ್ಣಾಹುತಿ.

7). ಉತ್ತರ ಆಪೋಶನ :
ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಕೊಂಡು ಈ ಮಂತ್ರ ಹೇಳಿ ಕುಡಿಯುವುದು.
ಅಮೃತಾಪಿಧಾನಮಸಿ ಸ್ವಾಹಾ ||
ಉತ್ತರಾಪೋಶನ :
ಉತ್ತರಾಪೋಶನವೆಂದರೆ ಭೋಜನದ ಅಂತ್ಯದಲ್ಲಿ ನೀರು ಕುಡಿಯುವುದು. ಯಜ್ಞದಲ್ಲಿ ಪೂರ್ಣಾಹುತಿ ನಂತರ ವಸೋರ್ಧಾರ ಎಂಬ ಹೆಸರಿನಲ್ಲಿ ಹವಿಸ್ಸಿನ ಮೇಲೆ ಆವರಣವಾಗುವ ಹಾಗೆ ತುಪ್ಪದ ಧಾರೆಯನ್ನು ಹರಿಸುತ್ತಾರೆ. ಅದೇ ರೀತಿ ಈ ಭೋಜನ ಯಜ್ಞದ ನಂತರ ಈ ಉತ್ತರಾಪೋಶನವು ನಾವು ಭುಂಜಿಸಿದ ಭೋಜನವನ್ನು ಅಮೃತವನ್ನಾಗಿಸಲಿ ಎಂಬ ಆಶಯದೊಂದಿಗೆ 'ಅಮೃತಾ ಪಿಧಾನಮಸಿ ಸ್ವಾಹಾ' ಎನ್ನುತ್ತ ಆಪೋಷನವನ್ನು ಮಾಡಬೇಕು. ಪಿಧಾನವೆಂದರೆ ಮುಚ್ಚಳವೆಂತಲೂ ಅಮೃತ ಪಿಧಾನವೆಂದರೆ ಅಮೃತದ ಆವರಣವೆಂತಲೂ ಅರ್ಥ. ಈ ಆಪೋಶನದಲ್ಲಿ ಭೋಜನದ ಮೇಲೆ ಅಮೃತದ ಅವರಣವಾಗಲಿ ಎಂಬ ಆಶಯವಿದೆ. ಪೂರ್ವಾಪೋಶನವು ಭೋಜನಕ್ಕೆ ಅಮೃತದ ವೇದಿಕೆಯಾದರೆ ಉತ್ತರಾಪೋಶನವು ಭೋಜನಕ್ಕೆ ಇರಿಸುವ ಅಮೃತದ ಮುಚ್ಚಳವಾಗಿದೆ. ಹೀಗೆ ಪೂರ್ವಾಪೋಶನ ಮತ್ತು ಉತ್ತರಾಪೋಶನವೆಂಬ ಎರಡು ಅಮೃತಸ್ತರಗಳ ನಡುವೆ ನಾವು ಭುಂಜಿಸಿದ ಭೋಜನ ಅಮೃತಮಯವಾಗಲಿ ಎಂಬ ಹಾರೈಕೆ ಇಲ್ಲಿಯದು. 
ವಸೋರ್ಧಾರೆಯು ಹವಿಸ್ಸನ್ನು ಪೂರ್ಣವಾಗಿ ಪಚನ ಮಾಡಲು ಯಜ್ಞಾಗ್ನಿಗೆ ಸಹಾಯಕವಾಗುವಂತೆ ಉತ್ತರಾಪೋಶನವು ನಾವು ಸೇವಿಸಿದ ಭೋಜನವನ್ನು ಪಚನ ಮಾಡಲು ಜಠರಾಗ್ನಿಗೆ ನೆರವಾಗುತ್ತದೆ


ನಮ್ಮ ಹಿರಿಯರು ಭೋಜನ ವಿಧಿಯನ್ನೂ ಕೂಡ ಒಂದು ಯಜ್ಞವೆಂದು ಪರಿಗಣಿಸುವುದರ ಜತೆಗೆ ನಮ್ಮ ದೇಹಕ್ಕೆ ವೈಜ್ಞಾನಿಕ ಕ್ರಮದಲ್ಲಿ ಆಹಾರವನ್ನು ಪೂರಣಗೊಳಿಸಿ ಪಂಚಪ್ರಾಣಗಳ ಊರ್ಜೆಯನ್ನು ವೃದ್ಧಿಗೊಳಿಸಿ ತನ್ಮೂಲಕ ಆತ್ಮಶಕ್ತಿಯನ್ನು ಸದಾ ಜಾಗೃತಗೊಳಿಸುವ ಯಾಜ್ಞಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ. ಭೋಜನವೆಂಬುದು ಹಸಿವಾದೊಡನೆ ಬರಿಯ ಉಣ್ಣುವ ಕ್ರಿಯೆಯಲ್ಲ. ಅದು ಯಾಜ್ಞಿಕ, ಯೋಗಿಕಗಳನ್ನೊಳಗೊಂಡ ಒಂದು ಸಂಸ್ಕಾರಯುತ ಪ್ರಕ್ರಿಯೆ. ನಮ್ಮ ದುಡಿಮೆಯ ಫಲವಾದ ಭೋಜನವನ್ನು ಯಜ್ಞಕರ್ಮಗಳಿಗೆ ಹೋಲಿಸಿ ಭೋಜನವಿಧಿಯನ್ನು ಇಷ್ಟೊಂದು ಕ್ಲಿಷ್ಠಗೋಸಬೇಕಿತ್ತೆ ಎಂಬ ಪ್ರಶ್ನೆಯೊಂದು ಉದ್ಭವಿಸುವುದು ಸಹಜವೆ. ನಮ್ಮ ಬದುಕಿನ ಎಲ್ಲ ಸಂಗತಿಗಳಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ಜೀವಧಾರಣ, ಶರೀರದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡುವಲ್ಲಿ ಅವರು ಭೋಜನ ವಿಧಿಗೂ ಒಂದು ವೈಜ್ಞಾನಿಕ ಸೂತ್ರವನ್ನು ಅಳವಡಿಸಿದರು.
***************


another write-up (from one blog)
************
ಪರಿಶಿಂಚನೆ ಮತ್ತು ಚಿತ್ರಾವತಿ
Posted by ಶ್ರೀಕಂಠ ಬಾಳಗಂಚಿ
ನಾವೆಲ್ಲಾ ಪ್ರತೀಬಾರಿ ಊಟ ಮಾಡುವುದಕ್ಕಿಂತ ಮುನ್ನ ನೀರಿನಿಂದ ಪರಿಶಿಂಚನೆ ಮಾಡಿ ನಾಲ್ಕು ಅಗುಳು ಅನ್ನವನ್ನು ತೆಗೆದು ಕೊಂಡು ಎಲೆಯ ಬಲೆಗಡೆಯಲ್ಲಿ ಇಟ್ಟು ನಂತರ ಮತ್ತೊಮ್ಮೆ ಅನ್ನವನ್ನು ತೆಗೆದುಕೊಂಡು ಆರು ಬಾರಿ ಹಲ್ಲಿಗೆ ತಾಕದಂತೆ ತಿಂದು ತಾಯಿ ಅನ್ನಪೂರ್ಣೆಗೆ ನಮಿಸಿ ಊಟವನ್ನು ಮುಂದುವರೆಸುತ್ತೇವೆ. ಆದರೆ ಬಹುತೇಕರಿಗೆ ಭೋಜನವಿಧಿ ಮತ್ತದರ ಅರ್ಥವೇ ಗೊತ್ತಿಲ್ಲದೇ ಸುಮ್ಮನೇ ಯಾಂತ್ರೀಕೃತವಾಗಿ ಮಾಡುತ್ತಿರುತ್ತಾರೆ. ಆದ ಕಾರಣ ಚಿತ್ರಾವತಿ ಎಂದರೆ ಏನು? ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಚಿತ್ರಾವತಿ ಹೇಗೆ ಇಡಬೇಕು? ಮತ್ತು ಚಿತ್ರಾವತಿ ಇಡುವಾಗ ಯಾವ ಮಂತ್ರಗಳನ್ನು ಜಪಿಸಬೇಕು ?ಎಷ್ಟು ಬಾರಿ ಬಲಿಯನ್ನು ಹಾಕಬೇಕು? ಎಂಬುದನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

chitravati

ಪ್ರತೀ ಬಾರಿ ಊಟ ಮಾಡುವ ಮೊದಲು ಲೋಕದ ನಿಯಮವನ್ನು ಕಾಪಾಡುವ ಯಮನ ನೆಚ್ಚಿನ ಭಂಟನಾದ ಚಿತ್ರಗುಪ್ತರನ್ನು ನೆನೆಸಿಕೊಂಡು ಚಿತ್ರಾವತಿ ಇಡುವುದು ಧಾರ್ಮಿಕವಾಗಿ ನಡೆದು ಬಂದಿರುವ ಪದ್ದತಿಯಾಗಿದೆ. ಇನ್ನು ವೈಜ್ಞಾನಿಕವಾಗಿ ನೋಡಿದಲ್ಲಿ ಅಂದಿನ ಕಾಲದಲ್ಲಿ ಬಹುತೇಕ ಮನೆಗಳು ಸಗಣಿ ಸಾರಿಸಿದ ಮನೆಗಳಾಗಿದ್ದು ಎಲ್ಲರೂ ನೆಲದ ಮೇಲೆಯೇ ಕುಳಿತು‌ ಬಾಳೆ ಎಲೆಯೋ ಇಲ್ಲವೇ ಮುತ್ತುಗದ ಎಲೆಗಳನ್ನು ಊಟಕ್ಕೆ ಬಳೆಸುತ್ತಿದ್ದದ್ದು ಸಹಜ ಪ್ರಕ್ರಿಯೆಯಾಗಿರುತ್ತಿತ್ತು. ಹಾಗೆ ಸಗಣಿ ‌ಸಾರಿಸಿದ ನೆಲದ ಮೇಲೆ‌ ಎಲೆಯ ಮೇಲೆ ಊಟ ಮಾಡುವ ಸಂದರ್ಭದಲ್ಲಿ ಯಾವುದೇ ಕ್ರಿಮಿಕೀಟಗಳು ನಮ್ಮ ಎಲೆಗಳಿಗೆ ಬಾರದಿರಲೆಂದು ಎಲೆಯ ಸುತ್ತಲೂ ನೀರಿನ ಕಟ್ಟೆ ಕಟ್ಟಿ, ಆ ನೀರಿನ ಮೂಲೆಯಲ್ಲೇ ಹಾದು ಹೋಗುವ ಕ್ರಿಮಿ ಕೀಟಗಳು ಎಲೆಯ ಬಲಬಾಗದಲ್ಲಿ ಇಟ್ಟ ಚಿತ್ರಾವತಿಗೆ ಆಕರ್ಷಿತವಾಗಿ‌ ಅಲ್ಲಿಟ್ಟ ಅನ್ನದ ಅಗುಳನ್ನು ತಿನ್ನುತ್ತಾ ಎಲೆಗಳ ಮೇಲೆ ಬಾರದಿರಲಿ ಎನ್ನುವುದಾಗಿರುತ್ತಿತ್ತು. ಕ್ರಿಮಿಕೀಟಗಳು ಇಂದಿನ ಮನುಷ್ಯರಂತೆ ದುರಾಸೆ ಇಲ್ಲದೇ ಪಾಲಿಗೆ ಸಿಕ್ಕಿದ್ದು ಪಂಚಾಂಮೃತ ಎನ್ನುವಂತೆ ಸಿಕ್ಕ ಅನ್ನದ ಅಗುಳನ್ನು ತಿನ್ನುವುದರಲ್ಲೇ ಮಗ್ನವಾಗಿ ಎಲೆಯತ್ತ ಹರಿಸುತ್ತಿರಲಿಲ್ಲ ಅವುಗಳ ಚಿತ್ತ.

ಅದಕ್ಕಾಗಿಯೇ ಊಟದ ಟೇಬಲ್ ಮೇಲೆ ಕುಳಿತಾಗ ಚಿತ್ರಾವತಿ ಇಡುವ ಅವಶ್ಯಕತೆಯೇ ಇರುವುದಿಲ್ಲ. ಇದನ್ನೇ ನೆಪವಾಗಿಟ್ಟು ಕೊಂಡು ಅನೇಕ ಬುದ್ದಿವಂತರು ಯಾವ ಸಮಯದಲ್ಲೂ ಪರಿಶಂಚನೆಯನ್ನೇ ಮಾಡದೇ ನೇರವಾಗಿ ಊಟಕ್ಕೆ ಕೈಹಾಕುವ ಪದ್ದತಿ ಆರಂಭಿಸಿರುವುದು ತುಸು ಕಸಿವಿಸಿಯ ಸಂಗತಿಯಾಗಿದೆ.

ಎಲೆ ಅಥವಾ ತಟ್ಟೆಯನ್ನು ಬಡಿಸಿ ಅದಕ್ಕೆ ಅಂದು ಮಾಡಿದ ಅಡುಗೆಯನ್ನೆಲ್ಲಾ ಬಡಿಸಿ ತೊವ್ವೆ ಹಾಗಿ ತುಪ್ಪದ ಅಭಿಗಾರವಾದ ಮೇಲೆ

ಅನ್ನಪೂರ್ಣೆಯ ಸ್ವರೂಪವಾದ ಬಡಿಸಿರುವ ಬಾಳೆಎಲೆ/ ತಟ್ಟೆಗೆ ಎರಡೂ ಕೈಗಳಿಂದ ಮನಃಪೂರ್ವಕವಾಗಿ ನಮಸ್ಕಾರ ಮಾಡಿ….‌

ಉದ್ದರಣೆಯಿಂದ ನೀರನ್ನು ಬಲ ಅಂಗೈಯ್ಯಿಗೆ ಹಾಕಿ ಕೊಂಡು,
ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಇತಿ ಪ್ರೋಕ್ಷ್ಯ|| ಈ ಮಂತ್ರ ಹೇಳಿ ಅನ್ನಕ್ಕೆ ನೀರನ್ನು ಪ್ರೋಕ್ಷಣೆ ( ಚಿಮುಕಿಸುವುದು) ಮಾಡಬೇಕು.

ಮತ್ತೊಮ್ಮೆ ಉದ್ದರಣೆಯಿಂದ ನೀರನ್ನು ಬಲ ಅಂಗೈಯ್ಯಿಗೆ ಹಾಕಿ ಕೊಂಡು,
ಸತ್ಯಂತ ವರ್ತೇನ ಪರಿಷಿಂಚಾಮಿ || ( ) ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ|| ಈ ಮಂತ್ರ ಹೇಳುತ್ತಾ

ಕೈಯಲ್ಲಿದ್ದ ನೀರನ್ನು ಬಾಳೆ ಎಲೆ/ತಟ್ಟೆಯನ್ನು ಬಲಡೆಯಿಂದ, ಎಡಗಡೆಗೆ ಪ್ರದಕ್ಷಿಣವಾಗಿ ನೀರನ್ನು ಒಡ್ಡಿನ ರೂಪದಲ್ಲಿ ಹಾಕಿ,

ಉಳಿದ ನೀರಿನಿಂದ ಬಾಳೆ ಎಲೆ/ತಟ್ಟೆಯ ಬಲ ಭಾಗದಲ್ಲಿ ಗೆರೆ ಎಳೆಯ ಬೇಕು.

ಆನಂತರ ತುಪ್ಪ ಹಾಕಿದ್ದ ನಾಲ್ಕು ಅಗುಳು ಅನ್ನದ ಭಾಗವನ್ನು ತೆಗೆದುಕೊಂಡು,

ಓಂ ಚಿತ್ರಾಯ ನಮಃ | ಓಂ ಚಿತ್ರ ಗುಪ್ತಾಯ ನಮಃ| ಓಂ ಯಮಾಯ ನಮಃ | ಓಂ ಯಮಧರ್ಮಾನಮಃ ಎಂದು ಹೇಳುತ್ತಾ ತಟ್ಟೆಯ ಬಲ ಭಾಗದಲ್ಲಿ ನೀರಿನ ಗೆರೆಯಮೇಲೆ ಒಂದೊಂದೇ ಅಗುಳನ್ನು ಸಾಲಾಗಿ ಮೇಲಿನಿಂದ ಕೆಳಗೆ ಬರುವಂತೆ ಇಡಬೇಕು . ಈ ಪ್ರಕ್ರಿಯೆಯನ್ನು ಅನ್ನದ ಅಗುಳಿನ ಬಲಿ ಇಡುವುದು ಎನ್ನುತ್ತಾರೆ.

ನಂತರ ಪುನಃ ಬಲಗೈಯಲ್ಲಿ ನೀರು ಹಾಕಿಕೊಂಡು
ಅಹಂವೈಶ್ವಾನರೋಭೂತ್ವಾ ಪ್ರಾಣೀನಾಂ ದೇಹಮಾಶ್ರಿತಃ | ಎಂದು ಹೇಳುತ್ತಾ ಆ ನೀರನ್ನು ಸೇವಿಸಬೇಕು.

ಪ್ರಾಣಾಪಾನ ಸಮಾಯುಕ್ತಂ ಪಚಾಮ್ಯನ್ನಮ್ ಚತುರ್ವಿದಂ … ಅಮೃತಮಸ್ತು ಅಮೃತೋಪಸ್ತರಣಮಸಿ ಸ್ವಾಹಾ ಎಂದು ಬಲಗೈಯಲ್ಲಿ ಹಿಡಿದ ನೀರನ್ನು ಪುನಃ ಆಪೋಷಣ ಮಾಡಿದ ನಂತರ ಆ ನೀರನ್ನು ಎಲೆಯ ಬಲಗಡೆಯಲ್ಲಿಟ್ಟ ಬಲಿಯ ಮೇಲೆ ಬಿಟ್ಟು ಎಲ್ಲಾ ನಾಲ್ಕೂ ಬಲಿಗಳನ್ನು ಒಟ್ಟಿಗೆ ಸೇರಿಸು ನಂತರ, ಕೈ ತೊಳೆದುಕೊಳ್ಳಬೇಕು

ಪುನಃ ತುಪ್ಪ ಹಾಕಿದ ಅನ್ನದ ಅಗುಳನ್ನು ಬಲಗೈ ಬೆರಳಿನಿಂದ ತೆಗೆದುಕೊಂಡು, ಎಡಗೈಯಿಯ ಅನಾಮಿಕ ಬೆರಳಿನಿಂದ ಬಾಳೆಎಲೆಯ ಎಡಗಡೆ ಒತ್ತಿ ಹಿಡಿದುಕೊಂಡು

ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ | ಓಂ ಸಮಾನಯ ಸ್ವಾಹಾ | ಓಂ ಬ್ರಹ್ಮಣೇ ಸ್ವಾಹಾ || ಇತಿ ಷಡ್ವಾರಂ ಪ್ರಾಣಾಹುತಿಂ ಮಖೇ ಜುಹುಯಾತ್ ||

ಎಂದು ಆರು ಬಾರಿ ಅನ್ನದ ಅಗುಳನ್ನು (ಜಠರಾಗ್ನಿಗೆ ಬಲಿಯಾಗಿ ) ಸ್ವೀಕರಿಸಬೇಕು.
ಹೀಗೆ ತುತ್ತನ್ನು ಸ್ವೀಕರಿಸಿದ ನಂತರ ಎಲೆಯನ್ನು ಒತ್ತಿ ಹಿಡಿದಿದ್ದ ಬೆರಳಿಗೆ ನೀರಿನಿಂದ ತೊಳೆದು ಕಣ್ಣಿಗೆ ಒತ್ತಿಕೊಂಡು ಮಾತನಾದದೇ ಮೌನವಾಗಿ ಊಟವನ್ನು ಮುಂದುವರಿಸಬೇಕು.

ಊಟವಾದ ನಂತರ ಪುನಃ ಬಲಗೈಯಲ್ಲಿ ಸ್ವಲ್ಪ ನೀರನ್ನು ತೆಗೆದು ಕೊಂಡು ಶೇಷವಾಗಿ ಉಳಿದಿದ್ದ ಉಪ್ಪಿನ ಮೇಲೆ ಹಾಕಿ ಉಪ್ಪು ಸಂಪೂರ್ಣವಾಗಿ ನೀರಿನಲ್ಲಿ ಕರಗುವಂತೆ ಮಾಡಬೇಕು. ಈ ರೀತಿ ಮಾಡುವುದನ್ನು ಉಪ್ಪಿನ ಋಣ ತೀರಿಸುವುದು ಎನ್ನುತ್ತಾರೆ.

ಆದಾದ ನಂತರ ಮತ್ತೊಮ್ಮೆ ಬಲಗೈಯ್ಯಿಗೆ ನೀರನ್ನು ಹಾಕಿಕೊಂಡು

ಅಮೃತಾ ಪಿ ಧಾನಮಸಿ ಸ್ವಾಹಾ|ಅಂತ ಹೇಳುತ್ತಾ ಆಪೋಶನ ಮಾಡಿ,

ಬಲಗೈಯ್ಯಿನ ನಾಲ್ಕು ಬೆರಳುಗಳನ್ನು ಎಲೆ/ತಟ್ಟೆಯ ಬಲಭಾಗದ ನೆಲಕ್ಕೆ ಊರಿಕೊಂಡು ಅನ್ನ ದಾತಾ ಸುಖಿ ಭವ ಎಂದು ಅನ್ನ ಹಾಕಿದವರು ಸುಖವಾಗಿರಲಿ ಎಂದು ಹಾರೈಸಬೇಕು. ಇಲ್ಲಿ ಅನ್ನಾ ಹಾಕಿದವರು ಎಂದರೆ ಊಟವನ್ನು ಬಡಿಸಿದವರು ಮತ್ತು ಅಡುಗೆಯನ್ನು ಮಾಡಿಸದ ಮನೆಯವರು ಎನ್ನುವುದಕ್ಕಿಂತಲೂ ನಮ್ಮ ಹಸಿದ ಹೊಟ್ಟೆಯನ್ನು ತುಂಬಲು ದವಸ ಧಾನ್ಯಗಳನ್ನು ಬೆಳೆದ ರೈತರು ಚೆನ್ನಾಗಿರಲಿ ಎಂದು ಹಾರೈಸುತ್ತಾ ನಿಧಾನವಾಗಿ ಎದ್ದು ನೀರಿನ ಮನೆಗೆ ಹೋಗಿ ಚೆನ್ನಾಗಿ ಎರಡೂ ಕೈಗಳನ್ನು ತೊಳೆದುಕೊಂಡು ಆನಂತರ ಕಾಲುಗಳನ್ನೂ ತೊಳೆದುಕೊಂಡು,

ಊಟ ಮಾಡಿದ ಹೊಟ್ಟೆಯನ್ನು ನಿಧಾನವಾಗಿ ಸಾವರಿಸುತ್ತಾ ,

ಅಗಸ್ತ್ಯಂ ಕುಂಭಕರ್ಣಂ ಚ ಶನಿಂ ಚ ವಡವಾನಲಂ | ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ || ಇತಿ ಜಪೇತ್|| ಎಂದು ಹೇಳುವ ಮುಖಾಂತರ ಊಟದ ಯಜ್ಞ ಮುಗಿಸಬೇಕು.

ಅಂದೆಲ್ಲಾ ಮನೆಗಳ ಮುಂದೆ ಇಡುತ್ತಿದ್ದ ರಂಗೋಲಿಗಳೂ ಕೂಡಾ ಅಕ್ಕಿ ಹಿಟ್ಟಿನದ್ದಾಗಿದ್ದು ಕ್ರಿಮಿಕೀಟಗಳಿಗೆ ಆಹಾರ ರೂಪದಲ್ಲಿರುತ್ತಿದ್ದವು ಇದರಿಂದ ಆ ಅಕ್ಕಿ ಹಿಟ್ಟನ್ನು ಮನೆಯ ಹೊರಗೇ ಕ್ರಿಮಿಕೀಟಗಳು ತಿನ್ನುವುದರಲ್ಲೇ ಮಗ್ನವಾಗಿ ಅವುಗಳು ಮನೆಯ ಒಳಗೆ ಪ್ರವೇಶಿಸುತ್ತಿರಲಿಲ್ಲ‌

ಹಾಗೆಯೇ ಎಲ್ಲರ ಮನೆಗಳ ಮುಂದೆ ಕಟ್ಟುವ ಮಾವಿನ ಎಲೆಗಳ ತೋರಣಗಳೂ ಕೂಡ ಕ್ರಿಮಿಕೀಟಗಳನ್ನು ತಡೆಗಟ್ಟಲು ಇರುವ ಸಾಧನವೇ ಆಗಿದೆ.


ಒಟ್ಟಿನಲ್ಲಿ ನಮ್ಮ ಪೂರ್ವಜರ ಪ್ರತಿಯೊಂದು ಪದ್ದತಿಗಳ ಹಿಂದೆಯೂ ಧಾರ್ಮಿಕ ಆಚರಣೆಯ ರೂಪದಲ್ಲಿ ಒಂದಲ್ಲಾ ಒಂದು ರೀತಿಯ ವೈಜ್ಞಾನಿಕ ಕಾರಣ ಇದ್ದೇ ಇರುತ್ತಿದ್ದವು. ಆದರೆ ನಾವಿಂದು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಆಗದೇ ಅದನ್ನು ಬಿಡಲಾಗದೇ ವಿಲ ವಿಲ ಪರದಾಡುತ್ತಿರುವುದಂತೂ ವಿಪರ್ಯಾಸವೇ ಸರಿ.
***********

2 comments: