SEARCH HERE

Monday 1 July 2019

ಗುರುರಾಜ ಕರ್ಜಗಿ gururaja karjagi 01




https://www.youtube.com/channel/UClNEDHT_Zo9OJJp2v512vCg/videos 
for audios  
           click    AUDIOS OF GURURAJ KARJAGI


ಡಾ . ಗುರುರಾಜ ಕರ್ಜಗಿ ಯವರು ಶಿಕ್ಷಣ  ತಜ್ಞರು. ಇವರು ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ , ಬೆಳೆಸಿ, ಪ್ರಾಧ್ಯಾಪಕರಾಗಿ , ಸಾವಿರಾರು ವಿದ್ಯಾರ್ಥಿಗಳ ಕನುಸುಗಳಿಗೆ ಬೆಳಕಾಗಿ, ಅವರ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ .

ವಿ.ವಿ. ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ , ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯಾ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ , ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷರಾಗಿದ್ದಾರೆ , ಇವರ ಅನುಭವದ ಮೂಸೆಯಿಂದ ಕತೆಗಳೂ , ಲೇಖನಗಳೂ, ಪಠ್ಯ ಪುಸ್ತಕಗಳು ಮುಡಿಬಂದಿವೆ . ಸೃಜನ ಶೀಲತೆ , ಸಂವಹನಕಲೆ , ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು , ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾಗಾರಗಳಿಗೆ , ಭಾರತ ಮತ್ತು ವಿದೇಶಗಳಿಲಿಯೂ ತುಂಬ ಬೇಡಿಕೆ 
ಇದೆ. ಇವರ ಕೆಲವು ಲೇಖನಗಳು ಇಲ್ಲಿವೆ.

ನಂಬಿಕೆಯೇ ದೇವರು 
ರಾಜೀವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನಿಗೆ ವಯಸ್ಸು ನಲವತ್ತಾಗಿದ್ದರೂ ಇಪ್ಪತ್ತೈದರ ಹುಡುಗನ ಹಾಗೆ ಸಂತೋಷವಾಗಿ ಚಟುವಟಿಕೆಯಿಂದ ಕೆಲಸಮಾಡಿಕೊಂಡಿದ್ದ. ಒಂದು ದಿನ ತುಂಬ ತಲೆನೋವು ಕಾಣಿಸಿಕೊಂಡಿತು.
ಯಾವುದೋ ಮಾತ್ರೆ ತೆಗೆದುಕೊಂಡ. ತಾತ್ಪೂರ್ತಿಕವಾಗಿ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುಕಳಿಸಿತು. ಮರುದಿನ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಎಡಕಣ್ಣಲ್ಲಿ ಒಂದು ಕೆಂಪು ಚುಕ್ಕಿ ಕಂಡಂತಾಯಿತು. ಸಂಜೆಯ ಹೊತ್ತಿಗೆ ಅದು ಕಣ್ಣು ತುಂಬೆಲ್ಲ ಹರಡಿಕೊಂಡು ಕಣ್ಣೇ ಕಾಣದಂತಾಯಿತು. ಮರುದಿನವೇ ವೈದ್ಯರ ಕಡೆಗೆ ಹೋದ.

ಹತ್ತಾರು ಪರೀಕ್ಷೆಗಳನ್ನು ನಡೆಸಿ ರಾಜೀವನ ಎಡಕಣ್ಣಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ತಡೆಯುಂಟಾಗಿದ್ದು ಆ ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿದೆ ಎಂತಲೂ ಅದನ್ನು ಸರಿಮಾಡುವುದು ಸಾಧ್ಯವಿಲ್ಲವೆಂದೂ ವೈದ್ಯರು ತಿಳಿಸಿದರು. ಇದು ಏಕೆ ಆಯಿತು ಎಂಬುದು ತಿಳಿಯದಾಗಿದೆ ಎಂದರು. ಈ ಆಘಾತವೇ ಸಾಕಾಗಿತ್ತು.

ಮಾರನೆಯ ದಿನ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ತಲೆಗೆ ಸುತ್ತುಬಂದಂತಾಗಿ ರಾಜೀವ ಕುಸಿದುಬಿದ್ದ. ಮತ್ತೆ ಅವನನ್ನು ಆಸ್ಪತ್ರೆಗೆ ಸೇರಿಸಿದರು.

ಈ ಬಾರಿ ಹೃದಯತಜ್ಞರು ಪರೀಕ್ಷೆಗಳನ್ನು ನಡೆಸಿದರು. ಅವರ ತೀರ್ಮಾನ ಇನ್ನೂ ಭಯಂಕರವಾಗಿತ್ತು. ಇದೊಂದು ಅತ್ಯಂತ ಅಪರೂಪದ ರೋಗ ತಾಕಾಯಾಸಸ್ ಆರ್ಟಿರಿಟಿಸ್ ರೋಗವಂತೆ. ಇದರಿಂದ ರಕ್ತನಾಳಗಳಲ್ಲಿ ಉರಿ, ಊತ, ಉಂಟಾಗುತ್ತ ಅವು ಸಣ್ಣದಾಗುತ್ತ ಹೋಗುತ್ತವಂತೆ. ತಕ್ಷಣವೇ ಆಪರೇಷನ್ ಮಾಡದೇ ಹೋದರೆ ಬದುಕುವುದು ದುಸ್ತರ.

ನಾಲ್ಕು ದಿನಗಳ ಹಿಂದೆಯೇ ಆರೋಗ್ಯವಾಗಿದ್ದ ರಾಜೀವನಿಗೆ ಸಿಡಿಲು ಬಡಿದಂತಾಯಿತು. ನಾಲ್ಕೇ ದಿನಗಳಲ್ಲಿ ಅದೆಷ್ಟು ಬದಲಾವಣೆ? ರಾಜೀವ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದ. ಮತ್ತೊಬ್ಬರಿಗೆ ಈ ಪರಿಯ ತೊಂದರೆ ಬಂದರೆ ಯಾವ ಚಿಂತೆ ಮಾಡಬೇಡಿ ಎಲ್ಲ ಸರಿಹೋಗುತ್ತದೆ ಎಂದು ಹೇಳುವುದು ಬಹಳ ಸುಲಭ. ಆ ಪರಿಸ್ಥಿತಿ ತಮಗೇ ಬಂದಾಗ ಯಾವ ಹೊರಗಿನ ಸಮಾಧಾನ ಧೈರ್ಯವನ್ನು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಸೇರಿಕೊಂಡ ರಾಜೀವ ದಿನದಿನಕ್ಕೆ ಹತಾಶನಾಗುತ್ತಿದ್ದ. ತನ್ನ ನಂತರ ಹೆಂಡತಿ ಹಾಗೂ ಸಣ್ಣ ವಯಸ್ಸಿನ ಮಗನ ಜೀವನ ನಡೆಯುವ ಬಗೆ ಹೇಗೆ ಎಂದು ಚಿಂತಿಸತೊಡಗಿದ. ಅವನ ಪರಿವಾರದವರೂ ಎದೆ ಒಡೆದುಕೊಂಡಿದ್ದರು.

ಆಸ್ಪತ್ರೆಯಲ್ಲಿ ಅವನನ್ನು ಕಾಣಲು ಸ್ನೇಹಿತರು ಬರುತ್ತಿದ್ದರು. ಕೆಲವರು ಶುಭಸಂದೇಶದ ಪತ್ರಗಳನ್ನು ಕೊಟ್ಟು ಹೋಗುತ್ತಿದ್ದರು. ರಾಜೀವನನ್ನು ತಪಾಸಿಸಲು ಬಂದ ಆಸ್ಪತ್ರೆಯ ವೈದ್ಯರೂ ಒಂದು ಶುಭಸಂದೇಶದ ಕಾರ್ಡನ್ನು ಕೊಟ್ಟು ಹೋದರು. ನಂತರ ರಾಜೀವ ಅದನ್ನು ಗಮನವಿಟ್ಟು ನೋಡಿದ. ಅದರ ಮುಖಪುಟದ ಮೇಲೆ ಸುಂದರವಾದ ಶ್ರೀ ಕೃಷ್ಣನ ಚಿತ್ರವಿದೆ. ಆದರೆ ಶ್ರೀ ಕೃಷ್ಣ ವೈದ್ಯರ ಹಾಗೆ ಗೌನು ಹಾಕಿಕೊಂಡಿದ್ದಾನೆ, ಕೊರಳಲ್ಲಿ ಸ್ಟೆಥಾಸ್ಕೋಪ್ ಇದೆ. ಚಿತ್ರದ ಮೇಲೊಂದು ಸುಂದರ ಬರಹ,  `ನಮ್ಮ ಮುಖ್ಯ ಶಸ್ತ್ರಚಿಕಿತ್ಸಕ.` ಅದನ್ನು ನೋಡಿ ರಾಜೀವನಿಗೆ ಏನೋ ಧೈರ್ಯ ಬಂದಂತಾಯಿತು. ತಾನು ಅತ್ಯಂತ ಸಮರ್ಥ ಶಸ್ತ್ರಚಿಕಿತ್ಸಕನ ಕೈಯಲ್ಲಿ ತನ್ನ ದೇಹವನ್ನು ಒಪ್ಪಿಸಿದ್ದೇನೆ ಎನ್ನಿಸಿತು. ಆಪರೇಷನ್ ಮಾಡುವ ವೈದ್ಯರ ಹೃದಯದಲ್ಲಿರುವ ಭಗವಂತ ತನ್ನನ್ನು ರಕ್ಷಿಸುತ್ತಾನೆ ಎಂಬ ಭಾವನೆ ಬಂತು. ಮನಸ್ಸು ನಿರಾಳವಾಯಿತು. ಹೆಂಡತಿ, ಸ್ನೇಹಿತರೊಂದಿಗೆ ನಗುನಗುತ್ತ ಹಿಂದಿನ ದಿನ ಕಳೆದ. ಮರುದಿನವೇ ಆಪರೇಷನ್ ಇದ್ದರೂ ಚೆನ್ನಾಗಿ ನಿದ್ರೆ ಮಾಡಿದ. ಮರುದಿನ ಆಪರೇಷನ್ ಥೇಟರಿಗೆ ಕರೆದುಕೊಂಡು ಹೋಗುವಾಗ ಹೆಂಡತಿಗೆ ಹೇಳಿದ, `ನನಗೇನಾಗುತ್ತದೆ ಎಂಬ ಚಿಂತೆಯಿಲ್ಲ. ಭಗವಂತನ ಕೈಯಲ್ಲಿ ಒಪ್ಪಿಸಿಕೊಂಡು ಬಿಟ್ಟಿದ್ದೇನೆ. ನೀನು ಭಯಪಡಬೇಡ.`

ಎಂಟು ತಾಸುಗಳ ಆಪರೇಷನ್ ನಡೆಯಿತು. ಅವನ ರಕ್ತನಾಳಗಳನ್ನೆಲ್ಲ ಸರಿಪಡಿಸಿದರು ವೈದ್ಯರು. ಮೂರು ದಿನಗಳ ದೀರ್ಘ ಮಂಪರಿನಿಂದ ಹೊರಬಂದ ರಾಜೀವ. ಅವನಿಗೆ ಪುನರ್ಜನ್ಮವಾಗಿತ್ತು. ಈಗಲೂ ಅವನ ಎಡಗಣ್ಣು ಕಾಣುವುದಿಲ್ಲ, ಮೊದಲಿನ ಹಾಗೆ ಹಾರಾಟ ಮಾಡುವಂತಿಲ್ಲ. ಆದರೂ ತನ್ನನ್ನು ನಿಭಾಯಿಸಿಕೊಂಡು ಬದುಕಿದ್ದಾನೆ. ಬದುಕಿನಲ್ಲಿ ಆಶಾವಾದ ಉಳಿಸಿಕೊಂಡಿದ್ದಾನೆ, ಉತ್ಸಾಹ ಬೆಳೆಸಿಕೊಂಡಿದ್ದಾನೆ. ಇದು ಪವಾಡವಲ್ಲ. ವೈದ್ಯರ ಪರಿಶ್ರಮ ಹಾಗೂ ವಿಜ್ಞಾನದ ಪ್ರಗತಿಯ ಸಾಧನೆ. ಇದರೊಂದಿಗೆ ಮನಸ್ಸಿಗೆ ಚೈತನ್ಯ ತಂದ ನಂಬಿಗೆಯ ಫಲ. ಯಾವುದೇ ನಂಬುಗೆ ಪವಾಡಸದೃಶ ಬದಲಾವಣೆಯನ್ನು ತರಬಲ್ಲದು.

ಬಾಳಿನ ಬುನಾದಿ ನಂಬಿಕೆ. ಈ ನಂಬಿಕೆ ವ್ಯಕ್ತಿಗಳ ಮೇಲೆ ಇರಬಹುದು, ಸಂಸ್ಥೆಗಳ ಮೇಲೆ, ದೇಶದ ಮೇಲೆ, ಮಾನವ ಸ್ವಭಾವಗಳ ಮೇಲೆ ಅಥವಾ ಭಗವಂತನ ಮೇಲಿರಬಹುದು. ನಮ್ಮ ನಂಬಿಕೆಯೇ ನಮ್ಮನ್ನು ದೇವರಾಗಿ ಕಾಪಾಡುತ್ತದೆ.
*********

ಬಾಹ್ಯ ರೂಪ 

1930-31ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಕನ್ನಡ ಸಂಘದವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಅದಕ್ಕೆ ಮುಖ್ಯ ಅತಿಥಿಯನ್ನಾಗಿ ಟಿ.ಪಿ. ಕೈಲಾಸಂರ ಅವರನ್ನು ಆಹ್ವಾನಿಸಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ಇನ್ನೂ ಬೆಳಗಾಗುವುದರೊಳಗೆ ರೈಲಿನಿಂದ ತಿರುಚ್ಚಿಯನ್ನು ತಲುಪಿದರು ಕೈಲಾಸಂ.
ಸಾಮಾನ್ಯವಾದ ದಿನದಲ್ಲೇ ತಮ್ಮ ವೇಷಭೂಷಣಗಳ ಬಗ್ಗೆ ಅಷ್ಟೊಂದು ಗಮನ ನೀಡದ ಕೈಲಾಸಂ, ರಾತ್ರಿ ಪ್ರವಾಸದಲ್ಲಿ ತಮಗೆ ಅನುಕೂಲವೆನಿಸಿದ ಬಟ್ಟೆ ಧರಿಸಿದ್ದರು. ಅವರು ರೈಲಿನಿಂದ ಇಳಿದಾಗ ಅವರ ವೇಷ ವಿಚಿತ್ರವಾಗಿತ್ತು. ಸ್ಯಾಂಡೋ ಬನಿಯನ್, ಕೊಳೆಯಾಗಿದ್ದ ಲುಂಗಿ, ಹೆಗಲಿಗೊಂದು ಕೈ ಚೀಲ.
ಕೆಳಗಿಳಿದು ಕತ್ತು ತಿರುಗಿಸಿ ಅತ್ತಿತ್ತ ನೋಡಿದರು. ಸಂಘಟಕರಾರಾದರೂ ಬಂದಿರಬಹುದೇ ಎಂದು ಹುಡುಕಾಡಿದರು. ಯಾರೂ ಕಾಣಲಿಲ್ಲ. ಮನದಲ್ಲೇ ಅವರನ್ನು ಶಪಿಸಿ ತಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೊರನಡೆದರು. ಆಗ ಯಾರೋ ಇವರ ಹೆಗಲ ಮೇಲೆ ಒಂದು ಕೋಲನ್ನು ಇಟ್ಟಂತಾಯಿತು. ತಿರುಗಿ ನೋಡಿದರೆ ಒಬ್ಬ ದೀರ್ಘದೇಹಿ ನಿಂತಿದ್ದಾರೆ.
ಘಿಗರಿಗರಿ ಮಲ್ ಪಂಚೆ, ಉದ್ದ ಕ್ಲೋಸ್ ಕಾಲರ್ ಉಲ್ಲನ್ ಕೋಟು, ತಲೆಗೆ ಜರೀಪೇಟ, ಕಣ್ಣಿಗೆ ಕಪ್ಪು ಕನ್ನಡಕ. ಒಟ್ಟಿನಲ್ಲಿ ಅತ್ಯಂತ ಶ್ರಿಮಂತರ ಠೀವಿ. ಕೈಯಲ್ಲಿಯ ಬೆತ್ತವನ್ನು ತೋರಿಸುತ್ತಾ ತಮಿಳಿನಲ್ಲಿ ಹೇಳಿದರು, `ಏ ಕೂಲಿ, ಬಾ ಇ್ಲ್ಲಲಿ’, ನಂತರ ತಮ್ಮ ಹಾಸಿಗೆ ಸುರುಳಿ ಮತ್ತು ಸೂಟಕೇಸನ್ನು ತೋರುತ್ತ,  `ಇವೆರಡನ್ನೂ ಹೊರಗಡೆ ತೆಗೆದುಕೊಂಡು ಬಂದು ನಮ್ಮ ಕಾರಿನಲ್ಲಿ ಇಡಬೇಕು.ಎಷ್ಟು ಕೊಡಬೇಕು ಈಗಲೇ ಹೇಳು. ಹೊರಗೆ ಹೋಗಿ ತಗಾದೆ ಮಾಡಬೇಡ’  ಎಂದು ಗಡುಸಾಗಿ ಹೇಳಿದರು.

 ಗುರುರಾಜ ಕರ್ಜಗಿ
ಕೈಲಾಸಂ ನಗುತ್ತ,  `ಹಾಗೆ ಆಗಲಿ ಸ್ವಾಮಿ. ನಾನು ತಕರಾರು ಮಾಡುವವನೇ ಅಲ್ಲ. ಜನ ನನ್ನ ಸೇವೆಯಿಂದ ತೃಪ್ತಿ ಪಟ್ಟು ಎಷ್ಟು ಕೊಟ್ಟರೂ ನನಗೆ ಸರಿಯೇ. ನೀವೇ ಏನಾದರೂ ತಿಳಿದು ಕೊಡಿ’  ಎಂದು ಅವರು ಕೋಲಿನಿಂದ ತೋರಿಸಿದ ಟ್ರಂಕನ್ನು ಸಲೀಸಾಗಿ ಒಂದೇ ಝಟಕಿಗೆ ಎತ್ತಿ ತಲೆಯ ಮೇಲೆ ಇಟ್ಟುಕೊಂಡರು. ತಮ್ಮ ಚೀಲವನ್ನು ಸರಿಯಾಗಿ ಏರಿಸಿಕೊಂಡು, ಇನ್ನೊಂದು ಕೈಯಿಂದ ಹಾಸಿಗೆ ಸುರುಳಿಯನ್ನು ಎತ್ತಿ, ಮೊಳಕಾಲಿನ ಮೇಲೆ ಇರಿಸಿಕೊಂಡು ನಂತರ ಮತ್ತೊಮ್ಮೆ ಹ್ಞೂಂಕರಿಸಿ ಎತ್ತಿ ಬಗಲಿಗೆ ಸೇರಿಸಿ ಹಿಡಿದುಕೊಂಡರು. ಆಮೇಲೆ ಹಿಂತಿರುಗಿ ತಮ್ಮನ್ನು ಬೆರಗುಗಣ್ಣಿಂದ ನೋಡುತ್ತಿದ್ದ ಚೆಟ್ಟಿಯಾರರಿಗೆ,  `ಬನ್ನಿ ಸ್ವಾಮಿ, ಹೋಗೋಣ’  ಎಂದವರೇ ಸರಸರನೇ ನಡೆದುಬಿಟ್ಟರು.
ಇವರನ್ನು ಹಿಂಬಾಲಿಸಿ ಓಡುವುದು ಚೆಟ್ಟಿಯಾರರಿಗೆ ತುಂಬ ಕಷ್ಟವಾಯಿತು.  ಸಾವಕಾಶ, ಸಾವಕಾಶ  ಎನ್ನುತ್ತ ಉಸಿರುಬಿಗಿಹಿಡಿದು ಓಡಿದರು. ಸ್ಟೇಷನ್ನಿನ ಹೊರಗೆ ಒಂದು ದೊಡ್ಡ ಕಾರು ಬಂದು ನಿಂತಿತು. ಅದರಿಂದ ಇಳಿದ ಕೆಲವರು ಚೆಟ್ಟಿಯಾರರನ್ನು ನೋಡಿ ಸಂಭ್ರಮದಿಂದ ಓಡಿಬಂದರು, ಅವರನ್ನು ಕಾರಿನಲ್ಲಿ ಕೂಡ್ರಿಸಿದರು. ಅಷ್ಟರಲ್ಲಿ ಕೈಲಾಸಂ ಅವರ ಸಾಮಾನುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿದ್ದರು. ಬಂದವರು ಚೆಟ್ಟಿಯಾರರಿಗೆ ಹೇಳುತ್ತಿದ್ದರು,  `ಸಾರ್ ತಮಗೆ ಸ್ವಾಗತ ಸರ್. ನಾವು ಕನ್ನಡ ಸಂಘದ ಕಾರ್ಯಕರ್ತರು. ತಾವೇ ಇಂದಿನ ಕಾರ್ಯಕ್ರಮಕ್ಕೆ ಅಧ್ಯಕ್ಷರಲ್ಲವೇ. ಅದಕ್ಕೇ ತಮ್ಮನ್ನು ಎದುರುಗೊಳ್ಳಲು ಬಂದಿದ್ದೇವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಟಿ.ಪಿ. ಕೈಲಾಸಂ ಅವರೂ ಇದೇ ರೈಲಿನಿಂದ ಬರುವವರಿದ್ದರು. ಅವರನ್ನೂ ನೋಡಿಕೊಂಡು ಬರುತ್ತೇವೆ’  ಎನ್ನುವ ಹೊತ್ತಿಗೆ ಕೈಲಾಸಂ ಚೆಟ್ಟಿಯಾರರ ಬಳಿಗೆ ಬಂದರು.
`ಎಷ್ಟಯ್ಯೊ ನಿನ್ನ ಕೂಲಿ’  ಎಂದು ಚೆಟ್ಟಿಯಾರ್ ಕೇಳುವಾಗ ಕಾರ್ಯಕರ್ತರು ಇವರನ್ನು ನೋಡಿ ಬಿಳಿಚಿಕೊಂಡರು,  `ಅಯ್ಯಯ್ಯೋ ಇದೇನು ಸಾರ್. ತಾವು ಕೂಲಿಯ ಹಾಗೆ, ಇವನ್ನೇಕೆ ಹೊತ್ತುಕೊಂಡು ಬಂದಿರಿ’  ಎಂದು ಗಾಬರಿಯಿಂದ ಚೆಟ್ಟಿಯಾರರ ಕಡೆಗೆ ತಿರುಗಿ,  `ಸಾರ್, ಇವರೇ ಕೈಲಾಸಂ. ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ’  ಎಂದರು.

ಆಗ ಕೈಲಾಸಂ ತಮ್ಮ ಟ್ರೇಡ್‌ಮಾರ್ಕ್ ಸಿಗಾರ್ ಹಚ್ಚಿ ಹೊಗೆ ಎಬ್ಬಿಸಿ ಚೆಟ್ಟಿಯಾರರ ಕಡೆಗೆ ಕೈ ಚಾಚಿ ` ಹೌದು ಸರ್, ನಾನೇ ಕೈಲಾಸಂ, ಬಿ.ಎ., ಎ.ಆರ್.ಸಿ (ಲಂಡನ್), ಎಫ್.ಆರ್.ಜಿ..ಎಸ್ (ಲಂಡನ್) ಅತ್ಯಂತ ಉನ್ನತ ಶಿಕ್ಷಣ ಪಡೆದ ಕೂಲಿ. ಇಂದು ತಾವೇ ಅಧ್ಯಕ್ಷರು. ನಾವಿಬ್ಬರೂ ಈ ರೀತಿ ಭೆಟ್ಟಿಯಾಗುವುದು ಆಶ್ಚರ್ಯಕರವಾದ ರೀತಿಯಲ್ಲವೇ’  ಎಂದರು. ಮುಂದೆ ಇಡೀ ದಿನ ಚೆಟ್ಟಿಯಾರರು ಪೆಚ್ಚಾಗಿಯೇ ಇದ್ದರು. ಬಾಹ್ಯರೂಪದಿಂದ, ಚರ್ಯೆಯಿಂದ ಮನುಷ್ಯನ ಗುಣವನ್ನು, ಮಟ್ಟವನ್ನು ಅಳೆಯುವುದು ತುಂಬ ಅಪಾಯಕಾರಿ.
**********

ಕೃತಜ್ಞತೆ 

ಗಾಂಧೀಜಿ ಪುಣೆಯ ಯೆರವಡಾ ಜೈಲಿನಲ್ಲಿದ್ದಾಗ ಒಂದು ದಿನ ಅವರಿಗೊಂದು ಪತ್ರ ಬಂದಿತು. ದಿನಾಲೂ ಗಾಂಧೀಜಿಗೆ ಪತ್ರಗಳು ಬರುವುದು ಸಾಮಾನ್ಯವಾದ ವಿಷಯವಾಗಿದ್ದರೂ ಈ ಪತ್ರ ವಿಶೇಷವಾಗಿತ್ತು. ರಣಛೋಡದಾಸರೆಂಬವರು ಬರೆದ ಈ ಪತ್ರದಲ್ಲಿ ಎಂಭತ್ತೆಂಟು ಪ್ರಶ್ನೆಗಳಿದ್ದವು.  ಪ್ರತಿಯೊಂದು ಪ್ರಶ್ನೆಗೂ ಗಾಂಧೀಜಿ ಉತ್ತರಿಸಲೇಬೇಕೆಂಬ ಒತ್ತಾಯವೂ ಇತ್ತು. ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿಯವರಿಗೆ ಕೋಪ ಬಂತು.  ಅದನ್ನು ಬಾಪೂಜಿಗೆ ತೋರಿಸಿ ಹರಿದುಹಾಕಬೇಕೆಂದುಕೊಂಡರು.

ಆದರೆ ಗಾಂಧೀಜಿ ಅದನ್ನು ಮುಖ್ಯವಾದ ಪತ್ರವೆಂಬಂತೆ ತಾಳ್ಮೆಯಿಂದ ಓದಿದರು. ಅದರಲ್ಲಿ ಅನೇಕ ಪ್ರಶ್ನೆಗಳು. ಅವುಗಳಲ್ಲಿ ಕೆಲವು ಗಾಂಧೀಜಿಗೆ ನೋವು ಉಂಟುಮಾಡುವಂಥವು, ಕೆಲವು ಅವರ ತತ್ವಗಳನ್ನು ಬಲವಾಗಿ ವಿರೋಧಿಸುವಂಥವು ಇದ್ದವು.  ಗಾಂಧೀಜಿ ಸ್ವತ: ತಾವೇ ಪ್ರತಿಯೊಂದು ಪ್ರಶ್ನೆಗೂ ಉತ್ತರ ಬರೆದರು.

ಇದು ಮಹಾದೇವ ದೇಸಾಯಿಯವರಿಗೆ ಸರಿ ಕಾಣಲಿಲ್ಲ,  ಬಾಪೂ, ರಣಛೋಡದಾಸರು ನಮ್ಮೆಲ್ಲರ ಮನಸ್ಸಿಗೆ ನೋವಾಗುವಂತೆ ಉದ್ದೇಶಪೂರ್ವಕವಾಗಿ ಬರೆದಿದ್ದಾರೆ. ನೀವು ಆ ಪತ್ರಕ್ಕೆ ಅಷ್ಟೊಂದು ಮಹತ್ವ ನೀಡಿ ಉತ್ತರ ಬರೆದಿದ್ದು ನನಗೆ ಸರಿ ಕಾಣುವುದಿಲ್ಲ  ಎಂದರು.  ಆಗ ಗಾಂಧೀಜಿ ಹೇಳಿದರು,  ಮಹಾದೇವ, ರಣಛೋಡದಾಸರು ನನಗೆ ತುಂಬ ಅವಶ್ಯವಾಗಿದ್ದಾಗ ಸಹಾಯ ಮಾಡಿದ್ದಾರೆ.  ನಾನು ಕೊನೆಯ ಉಸಿರು ಇರುವ ತನಕ ಅವರು ಮಾಡಿದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ

ಮಹಾದೇವ ಬಾಪೂಜಿ ಬರೆದ ಪತ್ರವನ್ನು ನೋಡಿದರು. ಪತ್ರವನ್ನು  ಗೌರವಾನ್ವಿತರಾದ ರಣಛೋಡದಾಸಭಾಯಿ  ಎಂದು ಪ್ರಾರಂಭಿಸಿ ಕೊನೆಗೆ  ಮೋಹನದಾಸನ ಪ್ರಣಾಮಗಳು  ಎಂದು ಮುಗಿಸಿದ್ದರು. ಮಹಾದೇವ ಕುತೂಹಲದಿಂದ ಕೇಳಿದರು,  ತಾವು ಇಷ್ಟು ಗೌರವದಿಂದ ಬರೆದಿರುವುದರಿಂದ ಅವರು ತಮಗಿಂತ ವಯಸ್ಸಿನಲ್ಲಿ ಬಹಳ ದೊಡ್ಡವರಾಗಿರಬೇಕಲ್ಲ?  ಗಾಂಧೀಜಿ, ಇಲ್ಲ, ಅವರು ನನಗಿಂತ ಏಳೆಂಟು ವರ್ಷ ದೊಡ್ಡವರು.  ಆದರೆ ಅವರು ನನಗೆ ಮಾಡಿದ ಸಹಾಯಕ್ಕೆ ನಾನು ಅವರನ್ನು ಹಿರಿಯಣ್ಣ ಎಂದೇ ಭಾವಿಸಿದ್ದೇನೆ. ನಾನು ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹೋದಾಗ ಇವರ ಅಣ್ಣನ ಮನೆಯಲ್ಲಿಯೇ ಇದ್ದೆ. ಆಗ ರಣಛೋಡದಾಸಭಾಯಿ ನನ್ನನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತಿದ್ದರು.

 ಮುಂದೆ ನಾನು ಮುಂಬೈಗೆ ಹೋಗುವಾಗ ಐದು ಸಾವಿರ ರೂಪಾಯಿಗಳನ್ನು ನೀಡಿದ್ದರು. ಈ ಸಹಾಯವಿಲ್ಲದಿದ್ದರೆ ನಾನು ಮುಂಬೈಯಲ್ಲಿ ನೆಲೆಸುವ ಮತ್ತು ನಂತರ ಪರದೇಶಕ್ಕೆ ಹೋಗುವ ವಿಚಾರ ಕನಸಾಗಿಯೇ ಉಳಿಯುತ್ತಿತ್ತು  ಎಂದರು.

ಅದು ಸರಿ, ಆದರೆ ಈಗ ಅವರು ನಿಮಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲವಲ್ಲ? ಬದಲಾಗಿ ನಿಮಗೆ ಇರಿಸುಮುರಿಸಾಗುವಂಥ ಮಾತುಗಳನ್ನೇ ಆಡುತ್ತಿದ್ದಾರೆ  ಕೇಳಿದರು ಮಹಾದೇವ. ಆಗ ಗಾಂಧೀಜಿ ಭಾವಾವೇಶದಿಂದ ಮಾತನಾಡಿದರು. ಅವರ ಧ್ವನಿ ನಡುಗುತ್ತಿತ್ತು.

ಅವರು ಈಗ ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ.  ಆದರೆ ಒಂದು ಕಾಲಕ್ಕೆ ನನಗೆ ಅವಶ್ಯವಾಗಿದ್ದಾಗ ಕೈ ಹಿಡಿದಿದ್ದಾರೆ.  ಇಂದು ನಾನೇನು ಆಗಿದ್ದೀನೋ ಅದಕ್ಕೆ ತಳಪಾಯ ಹಾಕಿದವರು ಅವರು.  ಅವರನ್ನು ನಾನು ಎಂದಿಗೂ ಮರೆಯಲಾರೆ  ಎಂದರು. ಈ ಮಾತುಗಳನ್ನು ಕೇಳುತ್ತಿದ್ದ ಮಹಾದೇವ ದೇಸಾಯಿ ಮತ್ತು ವಲ್ಲಭಭಾಯಿ ಪಟೇಲರಿಗೆ ಆಶ್ಚರ್ಯವಾಯಿತು.


ಉಪಕಾರ ಸ್ಮರಣೆ ಮನುಷ್ಯರನ್ನು ಬೇರೆ ಪ್ರಾಣಿಗಳಿಂದ ಬೇರ್ಪಡಿಸುತ್ತದಂತೆ.  ಪ್ರಾಣಿಗಳೂ ಉಪಕಾರ ಮಾಡಿದವರನ್ನು ಮರೆಯುವುದಿಲ್ಲ. ಆದರೆ ಕೆಲವು ಮನುಷ್ಯರ ಆಕಾರದಲ್ಲಿರುವವರಿಗೆ ಆ ಪ್ರಜ್ಞೆಯೇ ಇಲ್ಲ ಎನ್ನಿಸುತ್ತದೆ.  ಯಾರು ತಮ್ಮನ್ನು ಎತ್ತರಕ್ಕೆ ಒಯ್ದರೋ, ಯಾರು ನೆಲೆ ಕೊಟ್ಟರೋ, ಯಾರು ಸಮಾಜದಲ್ಲಿ ಸ್ಥಾನ ನೀಡಿದರೋ ಅಂಥವರ ಕತ್ತನ್ನೇ ಅತ್ಯಂತ ಸರಿಯಾದ ಸಮಯದಲ್ಲಿ ಕತ್ತರಿಸಿ ಮತ್ತೆ ಮೊಸಳೆ ಕಣ್ಣೀರು ಸುರಿಸಿ ಜನರ ಅನುಕಂಪೆಯನ್ನು ಬಯಸುತ್ತಾರೆ. ಕತಜ್ಞತೆ ಇಲ್ಲದ ಮನುಷ್ಯನಷ್ಟು ಅಪಾಯಕಾರಿ ವಸ್ತು ಮತ್ತೊಂದಿಲ್ಲ.
************

ದಾನದ ಮಹಿಮೆ 

ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಅನೇಕ ಸುಂದರ ಜನಪದ ಕಥೆಗಳಲ್ಲಿ ಇದೊಂದು.
ಒಂದು ಊರಿನಲ್ಲಿ ತಾಯಿ ಮಗ ಇದ್ದರು. ತಾಯಿ ಬೇರೆಯವರ ಮನೆಗಳಲ್ಲಿ ದುಡಿದು ಹಣಗಳಿಸಿ, ಅದರಲ್ಲೇ ಸಾಕಷ್ಟನ್ನು ದಾನ ಮಾಡಿ ಉಳಿದದ್ದರಲ್ಲಿ ಇಬ್ಬರ ಜೀವನ ಸಾಗಿಸುತ್ತಿದ್ದಳು.  ಮಗನಿಗೆ ಈ ದಾನ ಇಷ್ಟವಿಲ್ಲ. ಆಕೆಯನ್ನು ಕೇಳಿದ, `ಯಾಕೆ ಹೀಗೆ ದಾನ ಮಾಡುತ್ತೀ. ಕೆಲವೊಮ್ಮೆ ಉಪವಾಸ ಇದ್ದು ದಾನ ಮಾಡುತ್ತಿ.  ಈ ದಾನದ ಮಹತ್ವ ಏನು’  ತಾಯಿ ಹೇಳಿದಳು,  `ಮಗೂ, ದಾನದಿಂದ ಪುಣ್ಯ ಬರುತ್ತದೆ.

ಪುಣ್ಯ ಎಂದರೇನು’  ಮಗ ಕೇಳಿದ. ತಾಯಿ,  `ನನಗೇನು ಗೊತ್ತಪ್ಪ.  ಅದು ಶಿವನಿಗೇ ಗೊತ್ತು. ಅವನನ್ನೇ ಹೋಗಿ ಕೇಳು’  ಎಂದಳು.
ಮಗ ಶಿವನನ್ನು ಕಾಣಲು ಹೊರಟ. ದಾರಿಯಲ್ಲಿ ದಟ್ಟವಾದ ಅರಣ್ಯ. ಕತ್ತಲೆಯೂ ಆಯಿತು.  ತರುಣನಿಗೆ ಗಾಬರಿ. ಆಗ ಅಲ್ಲಿಗೊಬ್ಬ ಬೇಡ ಬಂದ.

 ಈತನನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಹೋದ. ಹೆಂಡತಿಗೆ ಹಣ್ಣು, ಹಂಪಲುಗಳನ್ನು ನೀಡಲು ಕೇಳಿದ. ಆಕೆ ಸಿಡುಕಿನಿಂದ, `ನನ್ನದ್ದನ್ನು ಕೊಡಲಾರೆ, ಬೇಕಾದರೆ ನಿನ್ನ ಪಾಲಿನಲ್ಲೇ ಕೊಡು’ ಎಂದಳು.  ಬೇಡ ತನ್ನ ಪಾಲಿನ ಆಹಾರವನ್ನು ಈತನಿಗಿತ್ತು, ಕಾಲು ಒತ್ತಿ, ಹಾಸಿಗೆ ಹಾಸಿ ಗುಡಿಸಲಿನಲ್ಲಿ ಮಲಗಿಸಿದ.  ತಾನು ಗುಡಿಸಿಲಿನ ಅರ್ಧ ಒಳಗೆ, ಅರ್ಧ ಹೊರಗೆ ಮಲಗಿದ. ರಾತ್ರಿ ಹುಲಿ ಬಂದು ಬೇಡನನ್ನು ಹೊಡೆದು ತಿಂದಿತು.

ಗುಡಿಸಲಿನೊಳಗೆ ನುಗ್ಗಿ ಅವನ ಹೆಂಡತಿಯನ್ನು ಎಳೆದುಕೊಂಡು ಹೋಗಿ ಮುಗಿಸಿತು. ಹುಡುಗ ದುಃಖದಿಂದ ಮುಂದೆ ನಡೆದ.  ಮುಂದೆ ದಾರಿಯಲ್ಲಿ ರಾಜನೊಬ್ಬ ಸಿಕ್ಕ. ಈತ ಶಿವನ ಕಡೆಗೆ ಹೊರಟಿದ್ದನ್ನು ತಿಳಿದು,  `ಹುಡುಗಾ, ನನ್ನದೊಂದು ಸಮಸ್ಯೆಗೆ ಶಿವನಿಂದ ಪರಿಹಾರ ಕೇಳಿಕೊಂಡು ಬಾ, ನಾನು ಕೋಟಿ ಹೊನ್ನು ಖರ್ಚುಮಾಡಿ ಕೆರೆ ಕಟ್ಟಿಸಿದ್ದೇನೆ. ಆದರೆ ಒಂದು ಹನಿ ನೀರೂ ಬೀಳಲಿಲ್ಲ’. ಹುಡುಗ `ಹ್ಞೂ’ ಎಂದು ನಡೆದ. ಸ್ವಲ್ಪ ಮುಂದೆ ಹೋಗುವಾಗ ದಾರಿಯಲ್ಲಿ ಒಬ್ಬ ಕುಂಟ ಮನುಷ್ಯ ಸಿಕ್ಕ.  ಆತನೂ ಕೇಳಿದ, `ನನ್ನ ಕುಂಟತನಕ್ಕೆ ಕಾರಣವನ್ನು ಕೇಳಿ ಬಾ’. ಹಾಗೆಯೇ ಮುಂದುವರೆದಾಗ ದಾರಿಯಲ್ಲಿ ಒಂದು ದೊಡ್ಡ ಸರ್ಪ ಕಂಡಿತು. ಅದು ಹುತ್ತದೊಳಗೆ ಹೋಗಲಾರದೆ, ಹೊರಗೆ ಬರಲಾರದೆ ಒದ್ದಾಡುತ್ತಿತ್ತು. `ನಾನು ಇದರಿಂದ ಪಾರಾಗುವುದು ಹೇಗೆ ಎಂದು ಕೇಳಿಕೊಂಡು ಬಾ’ ಎಂದಿತು.

ತರುಣ ಬಂದು ಶಿವನನ್ನು ಕಂಡ `ಪ್ರಭೋ, ದಾನದ ಪುಣ್ಯ ಎಂದರೇನು, ದಯವಿಟ್ಟು ಹೇಳು’ ಎಂದ. ಅದಕ್ಕೆ ಶಿವ, `ನೋಡು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನಾನು ಕೊಡುವ ಪ್ರಸಾದವನ್ನು ಆಕೆಗೆ ಕೊಡು.  ಆಕೆ ಗಂಡು ಮಗುವನ್ನು ಹಡೆಯುತ್ತಾಳೆ. ಆ ಕೂಸು ನಿನಗೆ ದಾನದ ಪುಣ್ಯವೇನೆಂದು ಹೇಳುತ್ತದೆ’ ಎಂದ. ರಾಜನ ಕೆರೆಯ ನೀರಿನ ಬಗ್ಗೆ ಕೇಳಿದಾಗ, `ರಾಜ ತನ್ನ ಮಗಳಿಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿದರೆ ನೀರು ಬೀಳುತ್ತದೆ’ ಎಂದ. ಅಂತೆಯೇ ಕುಂಟನ ಕಾಲಿನ ಪರಿಹಾರವನ್ನು ಕೇಳಿದಾಗ, `ಆತ ವಿದ್ಯಾದಾನ ಮಾಡಿಲ್ಲ.

ತನ್ನ ವಿದ್ಯೆಯನ್ನು ಯಾರಿಗಾದರೂ ದಾನ ಮಾಡಿದರೆ ಕುಂಟತನ ಹೋಗುತ್ತದೆ’ ಎಂದು ನುಡಿದ. ಹಾಗಾದರೆ ಹಾವಿನ ತೊಂದರೆಗೆ ಪರಿಹಾರವೇನು ಎಂಬ ಪ್ರಶ್ನೆಗೆ, `ಅದರ ನೆತ್ತಿಯಲ್ಲಿ ಒಂದು ರತ್ನವಿದೆ. ಅದನ್ನು ಯಾರಿಗಾದರೂ ಕೊಟ್ಟರೆ ಅದರ ಸಮಸ್ಯೆ ಬಗೆಹರಿಯುತ್ತದೆ’ ಎಂದು ಉತ್ತರಿಸಿದ. ಬರುವಾಗ ದಾರಿಯಲ್ಲಿ ಹಾವು ಸಿಕ್ಕಿತು. ಶಿವನ ಮಾತನ್ನು ತಿಳಿಸಿದಾಗ ನೆತ್ತಿಯ ರತ್ನವನ್ನು ಇವನಿಗೇ ಕೊಟ್ಟಿತು. ಕುಂಟ ಈತನಿಗೆ ಎಲ್ಲ ವಿದ್ಯೆಗಳನ್ನು ದಾನ ಮಾಡಿದ. ವಿದ್ಯೆ ಮತ್ತು ರತ್ನವನ್ನು ಪಡೆದ ಇವನಿಗೇ ರಾಜ ಮಗಳನ್ನು ಕೊಟ್ಟು ಮದುವೆ ಮಾಡಿದ.


ರಾಜ್ಯವನ್ನು ಕೊಟ್ಟ. ಕೆರೆ ತುಂಬಿತು.  ನಂತರ ತರುಣ ನೇಪಾಳಕ್ಕೆ ಹೋದ.  ರಾಣಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದಳು. ಈತ ಕೊಟ್ಟ ಪ್ರಸಾದ ತಿಂದೊಡನೆ ಸುಖಪ್ರಸವವಾಗಿ ಗಂಡುಮಗು ಹುಟ್ಟಿತು.  ಅದನ್ನು ಬಂಗಾರದ ತಟ್ಟೆಯಲ್ಲಿ ತಂದು ಇವನ ಮುಂದಿಟ್ಟರು. ಈತ ಕೇಳಿದ, `ದಾನದ ಪುಣ್ಯ ಯಾವುದು’ ಮಗು ಪಕಪಕನೇ ನಕ್ಕು ಹೇಳಿತು, `ಹುಚ್ಚಾ, ಶಿವನನ್ನು ಕಂಡು ಬಂದರೂ ಜ್ಞಾನ ಬರಲಿಲ್ಲವೇ? ಯಾವ ಬೇಡ ನಿನಗೆ ಕಾಡಿನಲ್ಲಿ ಆಶ್ರಯ ಕೊಟ್ಟನೋ ಅವನೇ ನಾನು. ಅನ್ನದಾನ ಮಾಡಿದ್ದಕ್ಕೆ ಈಗ ರಾಜಕುಮಾರನಾಗಿ ಹುಟ್ಟಿದ್ದೇನೆ. ದಾನ ಮಾಡದ ನನ್ನ ಹೆಂಡತಿ ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ’.
ಹುಡುಗ ತನ್ನ ಊರಿಗೆ ಬಂದು ತಾಯಿಯನ್ನು ಕರೆದುಕೊಂಡು ಹೋಗಿ ದೊರೆತ ರಾಜ್ಯದ ರಾಜನಾಗಿ ಸುಖದಿಂದ ಬದುಕಿದ.

ನಾವು ಜೀವನದಲ್ಲಿ ಪಡೆಯುತ್ತಲೇ ಇರುತ್ತೇವೆ. ಅದರಲ್ಲೇ ಸಂತೋಷವನ್ನೂ ಪಡೆಯುತ್ತೇವೆ. ಆದರೆ, ನಿಜವಾದ ಮಾತೆಂದರೆ ನೀಡುವುದರಲ್ಲಿ ಇರುವ ಸುಖ, ನೆಮ್ಮದಿ ಪಡೆಯುವುದರಲ್ಲಿ ಇಲ್ಲ. ಹಾಗೆಂದು ಎಲ್ಲವನ್ನು ತ್ಯಾಗ ಮಾಡಿ ಸನ್ಯಾಸಿಯಾಗಬೇಕೆಂದಿಲ್ಲ. ನಮ್ಮ ಆಸೆ, ದುರಾಸೆಯಾಗದಂತೆ. ಅಪೇಕ್ಷೆ ಪರಪೀಡಕವಾಗದಂತೆ, ಬದುಕು ಪರರಿಗೆ ಹೊರೆಯಾಗದಂತೆ, ಇರುವ ನೆಲೆಯಲ್ಲೇ ಮತ್ತಷ್ಟು ಜನರಿಗೆ ನೆರಳಾಗುವ, ಪ್ರಯೋಜನಕಾರಿಯಾಗುವಂತೆ ಬದುಕುವುದು ಸಾರ್ಥಕತೆಯ ಲಕ್ಷಣ.
************

ಸಂತನಾಗುವ ಪರಿ 

ಶೇಖ್ ರ‌್ಯೂಗಾರಿ ಬಹುದೊಡ್ಡ ಸೂಫೀ ಸಂತ. ಅವನ ತಿಳುವಳಿಕೆ, ಚಿಂತನೆಗಳನ್ನು ವಿವರಿಸುವ ರೀತಿ ಅನನ್ಯವಾಗಿದ್ದವು. ಆಗಿನ ಕಾಲದ ಎಲ್ಲ ಸಂತರೂ ಅವನನ್ನು ತುಂಬ ಗೌರವಿಸುತ್ತಿದ್ದರು. ಆತ ಸಾಮಾನ್ಯವಾಗಿ ಹೆಚ್ಚು ಮಾತನಾಡುವವನಲ್ಲ.

ಆದರೆ ಮಾತನಾಡಿದ ಪ್ರತಿಯೊಂದು ವಾಕ್ಯವೂ ಅರ್ಥಗರ್ಭಿತವಾಗಿರುತ್ತಿತ್ತು. ಅವನ ಶಿಷ್ಯರಾಗಬೇಕೆಂದು ಅನೇಕ ಜನ ತರುಣರು ಅಪೇಕ್ಷೆಪಡುತ್ತಿದ್ದರು. ಶಿಷ್ಯರನ್ನು ಆಯ್ದುಕೊಳ್ಳುವುದರಲ್ಲಿ ಶೇಖ್ ತುಂಬ ಕಾಳಜಿ ವಹಿಸುತ್ತಿದ್ದ. ಅವನು ಅವರನ್ನು ಬಹಳ ಪರೀಕ್ಷೆ ಮಾಡಿ ತನ್ನಲ್ಲಿ, ತನ್ನ ಚಿಂತನೆಗಳಲ್ಲಿ ಪೂರ್ಣ ನಂಬಿಕೆ ಇದ್ದವರನ್ನು ಮಾತ್ರ ಆರಿಸಿಕೊಳ್ಳುತ್ತಿದ್ದ.

ಮನಸ್ಸು ತಯಾರಾಗಿರದಿದ್ದರೆ ಆ ತರುಣರ ವಯಸ್ಸೂ ಹಾಳು ಮತ್ತು ಸಂತತ್ವ ಹೃದಯಕ್ಕಿಳಿಯಲಾರದು. ಆದ್ದರಿಂದ ಬಂದವರಿಗೆ ಪರೀಕ್ಷೆಗಳನ್ನು ಕೊಟ್ಟು ಅವರ ನಿಷ್ಠೆಯನ್ನು, ಧೃಡಮನಸ್ಸನ್ನು ಪರೀಕ್ಷಿಸುತ್ತಿದ್ದ. ಹೀಗಿರುವಾಗ ಒಬ್ಬ ತರುಣ ಶೇಖ್ ಬಳಿಗೆ ಬಂದು ತನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಬೇಕೆಂದು ಕೇಳಿಕೊಂಡ. ತರುಣ ಬುದ್ಧಿವಂತ. ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾನೆ ಎಂದು ತಿಳಿಯುತ್ತಿತ್ತು.

ಯಾವ ಪರೀಕ್ಷೆ ಮಾಡಿದರೂ ಆತ ಅದರಲ್ಲಿ ತೇರ್ಗಡೆಯಾದ. ಆದರೂ ಶೇಖ್ ತರುಣನನ್ನು ಒಪ್ಪಿಕೊಳ್ಳದೇ ಒಂದು ವಾರದ ನಂತರ ತನ್ನನ್ನು ಬಂದು ಕಾಣಬೇಕೆಂದೂ ಆಗ ತೀರ್ಮಾನ ಮಾಡುವುದಾಗಿಯೂ ಹೇಳಿ ಕಳುಹಿಸಿದ. ಶೇಖ್‌ನ ಹಿರಿಯ ಶಿಷ್ಯರಿಗೆ ಇದು ತುಂಬ ಆಶ್ಚರ್ಯವೆನಿಸಿತು.

ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣನಾದ ಈ ಬುದ್ಧಿವಂತನನ್ನು ಗುರುಗಳು ತೆಗೆದುಕೊಳ್ಳಬಹುದಾಗಿತ್ತು ಎನ್ನಿಸಿತು. ಎರಡು ದಿನಗಳ ನಂತರ ಶೇಖ್ ತನ್ನ ಅತ್ಯಂತ ಶ್ರಿಮಂತ ಸ್ನೇಹಿತನೊಬ್ಬನನ್ನು ಕರೆದ. ಅವನ ಖ್ಯಾತ ಉದ್ದಿಮೆಯಲ್ಲಿ ಈ ತರುಣನಿಗೊಂದು ಮುಖ್ಯವಾದ ಹುದ್ದೆಯನ್ನು ಕೊಡುವಂತೆಯೂ, ಅದಕ್ಕೆ ಹೆಚ್ಚಿನ ಸಂಬಳವನ್ನು ನೀಡಬೇಕೆಂದೂ ತಿಳಿಸಿದ. ಸ್ನೇಹಿತ ಮರು ಮಾತನಾಡಲಿಲ್ಲ.

ಮರುದಿನವೇ ತರುಣನನ್ನು ಕರೆಸಿ ಅವನ ಪರೀಕ್ಷೆ ಮಾಡಿದ ನೆಪ ಮಾಡಿ ಕೆಲಸಕ್ಕೆ ನಿಯಮಿಸಿಕೊಂಡ. ಹುಡುಗನಿಗೆ ಬಲು ಆಶ್ಚರ್ಯ. ಇಷ್ಟು ಅನಾಯಾಸವಾಗಿ ಕೆಲಸ ಸಿಕ್ಕೀತೆಂದು ಆತ ಊಹಿಸಿರಲಿಲ್ಲ. ಅದರಲ್ಲೂ ಇಷ್ಟು ದೊಡ್ಡ ಸಂಬಳವನ್ನು ಯಾವ ಅನುಭವವೂ ಇಲ್ಲದ ತನಗೆ ಯಾರು ಕೊಟ್ಟಾರು. ತುಂಬ ಸಂತೋಷದಿಂದ ಕೆಲಸ ಒಪ್ಪಿಕೊಂಡ.

ಅವನು ಕೆಲಸಕ್ಕೆ ಸೇರಿದ ಮರು ದಿನವೇ ಶೇಖ್ ಅವನನ್ನು ಬರ ಹೇಳಿದ. ಅನುಮಾನಿಸುತ್ತಲೇ ತರುಣ ಬಂದ. ಶೇಖ್,  `ಮಗೂ, ನೀನು ನನ್ನ ಶಿಷ್ಯತ್ವವನ್ನು ಅಪೇಕ್ಷಿಸಿ ಬಂದಿದ್ದೀಯಾ. ನಾನೂ ತುಂಬ ಆಲೋಚನೆ ಮಾಡಿದೆ. ಕೆಲವು ಪರೀಕ್ಷೆಗಳನ್ನು ಮಾಡಿದೆ. ಎಲ್ಲದರಲ್ಲೂ ನೀನು ಯಶಸ್ವಿಯಾಗಿರುವೆ.

ನಾಳೆಯಿಂದಲೇ ನೀನು ಆಶ್ರಮಕ್ಕೆ ಬಂದು ಸೇರಿಕೋ~  ಎಂದ. ತರುಣ ಶೇಖ್‌ನ ಕಣ್ಣುಗಳನ್ನು ನೋಡದಾದ. ತಲೆ ತಗ್ಗಿಸಿ ಹೇಳಿದ,  `ಸ್ವಾಮೀ, ನಾನು ತಮ್ಮ ತೀರ್ಮಾನಕ್ಕಾಗಿ ಎರಡು ದಿನ ಕಾಯ್ದೆ. ತಾವು ಏನೂ ಹೇಳಲಿಲ್ಲ. ಹಾಗಾದರೆ ನಾನು ನಿಮ್ಮ ಅಪೇಕ್ಷಿತ ಮಟ್ಟಕ್ಕೆ ಬಂದಿಲ್ಲವೆಂದು ನಿರಾಶನಾದೆ.

ನಿನ್ನೆಯ ದಿನವೇ ಬಹುದೊಡ್ಡ ಉದ್ದಿಮೆಯೊಂದು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡಿದೆ. ನನ್ನ ಪರಿವಾರದ ಹಿತದೃಷ್ಟಿಯಿಂದ ಅದು ಒಳ್ಳೆಯದೆಂದು ಒಪ್ಪಿಕೊಂಡಿದ್ದೇನೆ~ ಎಂದ. ಶೇಖ್ ನಕ್ಕು ಹೇಳಿದ,  `ಮಗೂ ಯಾವ  ಕೆಲಸ ದೊರೆಯಲಿಲ್ಲವೆಂದು ಸಂತನಾಗುವುದು ಸಲ್ಲದು. ಎಲ್ಲವಿದ್ದರೂ ಅದನ್ನು ತೊರೆದು ಬರುವುದು ಸಂತತ್ವ.


ಅದಕ್ಕೆ ಬುದ್ಧಿಯ ಚತುರತೆ ಬೇಡ, ಹೃದಯದ ನಿಷ್ಕಲ್ಮಷತೆ ಬೇಕು~ ಎಂದ. ಸಾಧುವಾಗುವುದು ಸಂತನಾಗುವುದು ಪ್ರಪಂಚದಿಂದ ವಿಮುಖನಾಗುವುದಲ್ಲ. ಬದಲಾಗಿ ಜೀವನದ ಜೀವಾಂತರಂಗದಲ್ಲಿ ಹೋಗುವುದು, ಸುತ್ತಮುತ್ತಲಿನ ಜನರ ಮನೋಧರ್ಮ ಬದಲಾಯಿಸುವುದು. ಆಸೆಗಳನ್ನು, ಆಕರ್ಷಣೆಗಳನ್ನು ಗೆಲ್ಲದ ಹೊರತು ಈ ಗುರಿ ಸಾಧ್ಯವಿಲ್ಲ.
************

ಮಾವಿನ ಹಣ್ಣಿನ ಕಥೆ 

ನಮ್ಮ ಮಾವಿನ ಹಣ್ಣಿಗೆ ಬಹಳ ದೊಡ್ಡ ಇತಿಹಾಸವಿದೆ. ಈ ಹಣ್ಣಿನ ಮರ ನಮ್ಮ ದೇಶದಲ್ಲಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳಾದುವಂತೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಕ್ಸಾಂಡರ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ತುಂಬ ಇಷ್ಟವಾಗಿತ್ತಂತೆ.

ಇನ್ನೊಂದು ದಂತಕಥೆಯ ಪ್ರಕಾರ, ಮಾವಿನ ಹಣ್ಣನ್ನು ಲಂಕೆಯಿಂದ ನಮ್ಮ ದೇಶಕ್ಕೆ ತಂದದ್ದು ಆಂಜನೇಯನಂತೆ. ಅಶೋಕವನದಲ್ಲಿ ಸೀತೆಯನ್ನು ಕಂಡು ಉಂಗುರವನ್ನು ಕೊಟ್ಟ ಮೇಲೆ ಸಂತೋಷದಿಂದ ಮರದಿಂದ ಮರಕ್ಕೆ ಹಾರಿ ಸಿಕ್ಕ ಹಣ್ಣುಗಳನ್ನೆಲ್ಲ ತಿಂದನಂತೆ.

ಎಲ್ಲಕ್ಕಿಂತ ಮಾವಿನಹಣ್ಣು ತುಂಬ ಪ್ರಿಯವಾಗಿದ್ದರಿಂದ ಅದರ ಬೀಜಗಳನ್ನು ನಮ್ಮ ದೇಶಕ್ಕೆ ತಂದು ಹಾಕಿದನಂತೆ. ಇನ್ನೊಂದು ಕಥೆಯಂತೆ, ಪಾರ್ವತಿ-ಪರಮೇಶ್ವರರ ಮದುವೆಯಾದದ್ದು ಮಾವಿನ ಮರದ ಕೆಳಗೆ. ಆದ್ದರಿಂದಲೇ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೆ ಮಾವಿನ ಎಲೆಗಳಿಂದ ಅಲಂಕಾರ ಮಾಡುತ್ತಾರೆಂದು ಹೇಳುತ್ತಾರೆ.

ಬೌದ್ಧಧರ್ಮದಲ್ಲೂ ಮಾವಿನ ಮರಕ್ಕೆ ವಿಶೇಷ ಸ್ಥಾನವಿದೆ. ಬುದ್ಧನ ಜಾತಕ ಕಥೆಗಳಲ್ಲಿ ಇದರ ಪ್ರಸ್ತಾಪ ಬರುತ್ತದೆ. ಬುದ್ಧ ಎಷ್ಟೋ ಜನ್ಮಗಳ ಹಿಂದೆ ಮಹಾಕಪಿಯಾಗಿ ಜನ್ಮ ಎತ್ತಿದ್ದ.

ಅವನ ಜೊತೆಗೆ ಎಂಬತ್ತು ಸಾವಿರ ಕಪಿಗಳು ಇದ್ದವು. ರಾಜನಾದ ಮಹಾಕಪಿಯ ಜೊತೆಗೆ ಉಳಿದ ಕೋತಿಗಳು ಗಂಗಾತೀರದ ದಟ್ಟ ಕಾಡಿನಲ್ಲಿ ಒಂದು ಬೃಹತ್ ಮಾವಿನ ಮರದ ಮೇಲೆ ವಾಸವಾಗಿದ್ದವು. ಮಹಾಕಪಿ ಉಳಿದ ಕೋತಿಗಳಿಗೆ, `ಈ ಹಣ್ಣು ವಿಶೇಷವಾದದ್ದು.
ಇದರ ಒಂದು ಹಣ್ಣೂ ನೆಲದ ಮೇಲೆ ಬೀಳದ ಹಾಗೆ ನೋಡಿಕೊಳ್ಳಿ. ಒಂದು ಬಾರಿ ಮನುಷ್ಯರಿಗೆ ಮಾವಿನಹಣ್ಣಿನ ರುಚಿ ಗೊತ್ತಾಯಿತೋ ಅವರು ಈ ಹಣ್ಣಿಗಾಗಿ ನಮ್ಮನ್ನೆಲ್ಲ ನಾಶಮಾಡಲು ಹಿಂಜರಿಯುವವರಲ್ಲ~ ಎಂದು ಹೇಳಿದನಂತೆ. ಕೋತಿಗಳು ಹಾಗೆಯೇ ನೋಡಿಕೊಂಡವು.

ಆದರೆ, ಒಂದು ದಿನ ಮಾತ್ರ ಪೂರ್ತಿಯಾಗಿ ಮಾಗಿದ ಹಣ್ಣು ತೊಟ್ಟು ಕಳಚಿ ನದಿಯ ನೀರಿನಲ್ಲಿ ಬಿತ್ತು. ತೇಲುತ್ತ ಮುಂದೆ ಸಾಗಿತು. ಕೆಳಹರಿವಿನಲ್ಲಿ ಕಾಶೀನಗರದ ರಾಜ ಬ್ರಹ್ಮದತ್ತ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದ. ಈ ಹಣ್ಣು ತೇಲುತ್ತ ಅವನ ಕೈ ಸೇರಿತು.

ಇದೇನು ಬಣ್ಣದ ಹಣ್ಣು ಎಂದು ತೆಗೆದುಕೊಂಡು ತೀರಕ್ಕೆ ಬಂದು ಅದನ್ನು ಹಿಂಡಿ ರಸವನ್ನು ಬಾಯಿಯಲ್ಲಿ ಹಾಕಿಕೊಂಡ. ಪರಮಾನಂದವಾಯಿತು. ಇಂಥ ಹಣ್ಣನ್ನು ಎಂದೂ ಕಂಡಿರಲೂ ಇಲ್ಲ, ಸವಿದೂ ಇರಲಿಲ್ಲ. ತನ್ನ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಈ ಹಣ್ಣಿನ ಮರವನ್ನು ಕಂಡು ಹಿಡಿದು ಅಂಥ ಮರವನ್ನಾಗಲೀ, ಬೀಜವನ್ನಾಗಲೀ ತನ್ನ ರಾಜ್ಯಕ್ಕೆ ತರಬೇಕೆಂದು ಆಜ್ಞೆ ಮಾಡಿದ.

ಎಷ್ಟೋ ದಿನಗಳ ನಂತರ ರಾಜನ ದೂತರು ಗಂಗಾನದಿಯ ಪ್ರವಾಹಕ್ಕೆ ವಿರುದ್ಧವಾಗಿ ನಡೆದು ಬಂದು ಕಾಡಿನಲ್ಲಿದ್ದ ಈ ಮರವನ್ನು ಕಂಡರು. ಮರದ ತುಂಬ ಹಣ್ಣುಗಳು. ಸುದ್ದಿ ತಿಳಿದು ರಾಜ ಬಂದ. ಮರದ ಮೇಲೆ ತುಂಬಿಕೊಂಡಿದ್ದ ಕೋತಿಗಳನ್ನು ನೋಡಿದ.

ಈ ಕೋತಿಗಳೆಲ್ಲ ಹಣ್ಣುಗಳನ್ನು ತಿಂದುಬಿಡುತ್ತವೆ ಎಂದುಕೊಂಡು  ಈ ಕೋತಿಗಳನ್ನು ಓಡಿಸಿ ಇಲ್ಲವೇ ಕೊಂದುಬಿಡಿ  ಎಂದು ಆಜ್ಞೆ ಮಾಡಿದ. ತನ್ನ ಪರಿವಾರದವರು ಸಾಯಬಾರದೆಂದು ಮಹಾಕಪಿ ನದಿಯ ತುದಿಯವರೆಗೂ ಚಾಚಿಕೊಂಡಿದ್ದ ಕೊಂಬೆಯೊಂದನ್ನು ಏರಿ ಆ ಕಡೆಗೆ ಹಾರಿತು.

ನಂತರ ಉದ್ದವಾದ ಕೋಲನ್ನು ತಂದು ಅದಕ್ಕೆ ಕಟ್ಟಿ ಕೋತಿಗಳಿಗೆಲ್ಲ ಅದರ ಮೂಲಕ ಇನ್ನೊಂದು ದಂಡೆಗೆ ಹೋಗಲು ಹೇಳಿತು. ಆ ಕೋಲು ಕೊಂಚ ಗಿಡ್ಡವಾದ್ದರಿಂದ ತನ್ನ ದೇಹವನ್ನೇ ಸೇತುವೆಯಂತೆ ಚಾಚಿ ಹಿಡಿದುಕೊಂಡಿತು. ಕೋತಿಗಳೆಲ್ಲ ಆ ಕಡೆಗೆ ಸಾಗಿದವು. ಆದರೆ ದೇವದತ್ತನೆಂಬ ಕೋತಿ ಮಹಾಕಪಿಯ ಮೇಲೆ ಸಿಟ್ಟಿನಿಂದ ದಾಟುವಾಗ ಅದರ ಬೆನ್ನನ್ನು ಒತ್ತಿ ತುಳಿದು ಮುರಿದುಬಿಟ್ಟಿತು. ಆದರೂ ಎಲ್ಲ ಕೋತಿಗಳೂ ದಾಟುವವರೆಗೆ ಮಹಾಕಪಿ ನೋವನ್ನು ತಾಳಿಕೊಂಡು ನಂತರ ಕುಸಿದು ಬಿದ್ದಿತು.

ಈ ಮಹಾಕಪಿಯ ತ್ಯಾಗ ಬುದ್ಧಿಯನ್ನು ಕಂಡು ರಾಜ ಬ್ರಹ್ಮದತ್ತ ಅದನ್ನು ಅರಮನೆಗೆ ತಂದು ಶುಶ್ರೂಷೆ ಮಾಡಿದ. ಅದು ಫಲಕಾರಿಯಾಗದೇ ಮಹಾಕಪಿ ಸತ್ತು ತನ್ನ ಅವತಾರ ಮುಗಿಸಿತು. ರಾಜ ಬ್ರಹ್ಮದತ್ತ ಆ ಕಪಿಯ ನೆನಪಿಗಾಗಿ ಮಾವಿನಗಿಡದ ಕೆಳಗೆ ಒಂದು ದೇವಸ್ಥಾನ  ಕಟ್ಟಿಸಿದ. ಹೀಗೆ ಮಾವಿನ ಹಣ್ಣಿನ ಮರದ ಕಥೆ ಬೆಳೆಯುತ್ತದೆ.


ಇದರ ತಾತ್ಪರ್ಯವಿಷ್ಟೇ. ನಾವು ಬಳಸುವ ಪ್ರತಿಯೊಂದು ವಸ್ತುವಿಗೆ ಒಂದು ಅದ್ಭುತ ಇತಿಹಾಸ, ಕತೆ ಇರುತ್ತದೆ. ಅದನ್ನು ತಿಳಿದು ಗಮನಿಸಿದಾಗ ಆ ವಸ್ತುವಿನ ಬಗ್ಗೆ ಗೌರವ, ಪ್ರೀತಿ ಬರುತ್ತದೆ. ಮಾವಿನ ಹಣ್ಣು ತಿನ್ನುವಾಗ ಈ ಕಥೆಗಳು ಜ್ಞಾಪಕವಾದರೆ ಹಣ್ಣಿನ ರುಚಿ ಹೆಚ್ಚುತ್ತದೆ.
***********

ಅಳಿಯ ಹಾಗೂ ಸೊಸೆ ಹೇಗಿರಬೇಕು

ಮೊನ್ನೆ ಪದ್ಮಾವತಮ್ಮ ಮನೆಗೆ ಬಂದಿದ್ದರು. ಅವರು ಬಂದರೆಂದರೆ ಮನೆಗೆ ಪೋಸ್ಟ್ ಆಫೀಸ್ ಬಂದ ಹಾಗೆ. ಯಾವ ಪ್ರಯತ್ನವಿಲ್ಲದೇ ಊರ ಸುದ್ದಿಯೆಲ್ಲ ತಿಳಿಯುತ್ತದೆ. ಈ ಬಾರಿ ಅವರು ಬೇರೆಯವರ ಮನೆಯ ವಿಷಯಗಳನ್ನು ತಂದಿರಲಿಲ್ಲ, ಎಲ್ಲ ಅವರ ಮನೆಯ ವಿಷಯವೇ. ಅವರ ಮಗಳ ಮದುವೆಯಾಗಿ ಎರಡು ವರ್ಷವೂ ಕಳೆದಿಲ್ಲ.

ಈಗಾಗಲೇ ಅವಳ ಮನೆಯಲ್ಲಿ ದೊಡ್ಡ ರಾದ್ದಾಂತವಾಗಿ ಮಗಳು ಮನೆಗೆ ಬಂದುಬಿಟ್ಟಿದ್ದಾಳೆ. ಗಂಡನ ಕಡೆಯವರು ತುಂಬ ಹಿಂಸೆ ಕೊಡುತ್ತಾರಂತೆ. ಅವಳಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಮೊದಮೊದಲು ಗಂಡ ಸ್ವಲ್ಪ ಸಹಾನುಭೂತಿಯಿಂದ ವರ್ತಿಸುತ್ತಿದ್ದನಂತೆ. ಇತ್ತೀಚಿಗೆ ಅವನೂ ತಂದೆ-ತಾಯಿಯರು ಹೇಳಿದ್ದನ್ನೇ ಕೇಳಿಕೊಂಡು ಹೆಂಡತಿಗೆ ಚಿತ್ರಹಿಂಸೆ ಕೊಡುತ್ತಿದ್ದಾನಂತೆ. ಅವಳು ತಡೆಯಲಾಗದೇ ತಾಯಿಯ ಮನೆಗೆ ಬಂದುಬಿಟ್ಟಿದ್ದಾಳೆ. ಪದ್ಮಾವತಮ್ಮ ಆಕೆಗೆ ಹೇಳಿದ್ದಾರಂತೆ,  ನೀನ್ಯಾಕೆ ಚಿಂತೆ ಮಾಡುತ್ತೀ.  ಅವರಿಗೆ ಬುದ್ಧಿ ಕಲಿಸುತ್ತೇನೆ. ವರದಕ್ಷಿಣೆಗಾಗಿ ತೊಂದರೆಕೊಡುತ್ತಿದ್ದಾರೆ ಎಂದು ಪೋಲೀಸ್ ಕಂಪ್ಲೇಂಟ್ ಕೊಟ್ಟರೆ ನೆಲಕ್ಕೆ ಮೂಗು ಉಜ್ಜಿಕೊಂಡು ಬರಬೇಕು, ಹಾಗೆ ಮಾಡುತ್ತೇನೆ. ನನಗೆ ಪದ್ಮಾವತಮ್ಮನವರ ಬೀಗರ ಕಡೆಯವರೂ ಪರಿಚತರೇ.

ಆದ್ದರಿಂದ ಹಿನ್ನೆಲೆ ನನಗೆ ಗೊತ್ತಿತ್ತು. ಅವರು ಸಾತ್ವಿಕರು, ಸ್ವಲ್ಪ ಧರ್ಮ, ಪೂಜೆ, ದೇವಸ್ಥಾನ ಇವುಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದವರು. ಹೊಸದಾಗಿ ಬಂದ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ಈಕೆ ಸ್ವಲ್ಪ ಅಹಂಕಾರದ ಹುಡುಗಿ. ಈ ಪೂಜೆ, ಪುನಸ್ಕಾರವೆಂದರೆ ಆಗುವುದಿಲ್ಲ. ಅತ್ತೆ, ಮಾವಂದಿರಿಗೆ ಈಕೆಯ ಆಧುನಿಕ  ವೇಷ ಭೂಷಣ ಅಷ್ಟು ಇಷ್ಟವಾಗಿಲ್ಲ. ಮದುವೆಯಾದ ಹೆಂಗಸು ಈ ರೀತಿ ಅರ್ಧ ಬೆನ್ನು, ಅರ್ಧ ಎದೆ ಕಾಣುವಂತೆ ಬಟ್ಟೆ ಹಾಕಿಕೊಳ್ಳುವುದು ಅಷ್ಟು ಸರಿಯಲ್ಲ ಎಂದು ಮೆದುವಾಗಿ ಹೇಳಿ ನೋಡಿದ್ದಾರೆ. ಇದರಿಂದ ಆಕೆಯ ಆತ್ಮ ಗೌರವಕ್ಕೆ ಧಕ್ಕೆಯಾಯಿತೆಂದು ಕೂಗಾಡಿ, ಅತ್ತು, ಊಟ ಮಾಡದೇ ಮಲಗಿ ಮನೆಯಲ್ಲಿ ರಂಪವಾಯಿತು. ಈ ಹುಡುಗಿಗೆ ಮನೆ ಕೆಲಸ ಮಾಡಿಯೇ ಗೊತ್ತಿಲ್ಲ. ಅತ್ತೆಗೂ ವಯಸ್ಸಾಗಿದೆ. ಸ್ವಲ್ಪ ಸಹಾಯ ಮಾಡಬಾರದೇ ಎಂದು ಮಾವ ಹೇಳಿದ್ದೇ ತಪ್ಪಾಯಿತು. ಕೆಲಸದವಳು ಬೇಕಾಗಿದ್ದರೆ ಮಗನ ಮದುವೆಯನ್ನು ಒಬ್ಬ ಕೆಲಸದವಳ ಜೊತೆ ಮಾಡಬೇಕಿತ್ತು ಎಂದು ಒರಟಾಗಿ ಮಾತನಾಡಿ ಮೂರು ದಿನ ಮನೆಯಲ್ಲಿ ಊಟಮಾಡದೇ ಹೋಟೆಲ್ಲಿಗೆ ಹೋಗಿ ತಿಂದು ಬಂದಿದ್ದಾಳೆ.

ಅತ್ತೆ-ಮಾವ ಏನು ಮಾತನಾಡಿದರೆ ಏನಾಗುತ್ತದೋ ಎಂದು ಭಯಪಟ್ಟು ಅವಳಿಗೆ ಏನನ್ನೂ ಹೇಳದೇ ಸುಮ್ಮನಿದ್ದು ಬಿಟ್ಟಿದ್ದಾರೆ. ಬರಬರುತ್ತಾ ಅವಳ ಸ್ವಭಾವ ಗಂಡನಿಗೂ ಕಷ್ಟವಾಯಿತು. ಆಕೆ ಮಲಗುವುದೇ ರಾತ್ರಿ ಎರಡು ಗಂಟೆಗೆ, ಬೆಳಿಗ್ಗೆ ಏಳುವುದು ಹತ್ತು ಗಂಟೆಗೆ. ಆಕೆಯ ಗಂಡ ಆಫೀಸಿಗೆ ಬೆಳಿಗ್ಗೆ ಎಂಟೂವರೆಗೇ ಹೊರಡಬೇಕು. ದಿನಾಲು ತಾಯಿಯೇ ಕಷ್ಟಪಟ್ಟು ಮಗನಿಗೆ ತಿಂಡಿ ಮಾಡಿ, ಊಟ ಕಟ್ಟಿಕೊಡಬೇಕು. ಒಂದು ದಿನ ತಡೆಯದೇ ಆತನೂ ಹೆಂಡತಿಗೆ ಬುದ್ಧಿ ಹೇಳುವ ಧೈರ್ಯಮಾಡಿದ. ಪರಿಣಾಮ ಮನೆಯಲ್ಲಿ ರುದ್ರನರ್ತನ. ಆಕೆ ತನ್ನ ಗಂಟುಮೂಟೆ ಕಟ್ಟಿಕೊಂಡು ತಾಯಿಯ ಮನೆಗೆ ಬಂದುಬಿಟ್ಟಳು. ಹಗ್ಗ ಹರಿಯುವ ಹಂತಕ್ಕೆ ಬಂದ ಈ ಪರಿಸ್ಥಿತಿಯನ್ನು ನೋಡಿದಾಗ ಇದು ಬಹಳಷ್ಟು ಮನೆಗಳಲ್ಲಿ ಆಗುತ್ತಿದೆಯಲ್ಲ ಎನ್ನಿಸಿತು.

ಈ ಮಾತು ಬರೀ ಹುಡುಗಿಯರಿಗೆ ಮಾತ್ರವಲ್ಲ, ಹುಡುಗರಿಗೂ ಹೊಂದುತ್ತದೆ. ಹೊಸದಾಗಿ ಮದುವೆಯಾದ ತರುಣ-ತರುಣಿಯರಲ್ಲಿ ಬೇಗ ಮನಸ್ತಾಪಗಳು ಬಂದು, ಹೊಂದಾಣಿಕೆ ಆಗದಿರುವುದಕ್ಕೆ ಬಹುಪಾಲು ಕಾರಣ ನಾವು ಪಾಲಕರೇ ಎನ್ನಿಸಿತು.

ಮಗಳು ಚಿಕ್ಕವಳಾಗಿದ್ದಾಗ ತಂದೆ ತಾಯಿಯರನ್ನು, ಹಿರಿಯರನ್ನು ಗಮನಿಸುತ್ತಾಳೆ. ತಾಯಿಯನ್ನು ತಂದೆ ನಡೆಸಿಕೊಳ್ಳುವ ರೀತಿ, ತಾಯಿ ಅಥವಾ ತಂದೆಯ ದರ್ಪದ ವರಸೆ ಇದು ಅವಳ ಮನದಲ್ಲಿ ಮೂಡುತ್ತದೆ. ನಾವು ನಮ್ಮ ಮಕ್ಕಳಿಗೆ ಇನ್ನೊಬ್ಬರೊಡನೆ ಹೊಂದಿಕೊಂಡು ಬದುಕುವ, ಸಣ್ಣಪುಟ್ಟ ತ್ಯಾಗಗಳನ್ನು ಕುಟುಂಬಕೋಸ್ಕರ ಮಾಡುವುದನ್ನು ಕಲಿಸುವುದಿಲ್ಲ. ಹಿರಿಯರಿಗೆ ಗೌರವ ನೀಡುವ, ಸಂಪ್ರದಾಯಗಳನ್ನು ಗೌರವಿಸುವ ಪಾಠ ಹೇಳುವುದಿಲ್ಲ. ಬದಲಾಗಿ ನನ್ನ ಮಗನನ್ನು ರಾಜನ ಹಾಗೆ ಮತ್ತು ಮಗಳನ್ನು ರಾಣಿಯ ಹಾಗೆ ಬೆಳೆಸಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೇವೆ.


ನಿಮ್ಮ ಸೊಸೆ ಹೇಗಿರಬೇಕೆಂದು ಬಯಸುತ್ತೀರೋ ಅದೇ ರೀತಿ ನಿಮ್ಮ ಮಗಳನ್ನೂ ಬೆಳೆಸಿ. ನಿಮ್ಮ ಅಳಿಯ ಹೇಗಿರಬೇಕೆಂದು ಅಪೇಕ್ಷಿಸುತ್ತೀರೋ, ಅದೇ ರೀತಿ ನಿಮ್ಮ ಮಗನನ್ನೂ ಬೆಳೆಸಿ. ಆಗ ಮನೆ-ಮನಗಳು ಒಂದಾಗಿ ಕುಟುಂಬ ಜೀವನ ಸುಂದರವಾಗುತ್ತದೆ.
**********

ಆಡಂಬರದ ಪೂಜೆ 

ಕುರುಕ್ಷೇತ್ರದ ಯುದ್ಧ ಮುಗಿದು ಯುಧಿಷ್ಠರ ಚಕ್ರವರ್ತಿಯಾಗಿದ್ದಾನೆ. ದೇಶದಲ್ಲಿ ಶಾಂತಿ ಇದೆ. ಇನ್ನು ಮುಂದೆ ಯುದ್ಧದ ಭೀತಿ ಇಲ್ಲ. ಯುದ್ಧ ಮಾಡಲು ಯಾರೂ ಉಳಿದೇ ಇಲ್ಲ.
ಅರ್ಜುನನಿಗೆ ತಾನು ಯುದ್ಧದಲ್ಲಿ ಮಾಡಿದ ಸಾಧನೆಯ ಬಗ್ಗೆ ಗರ್ವ ಬಂದಿದೆ. 

ತಾನಿಲ್ಲದಿದ್ದರೆ ಪಾಂಡವರು ಗೆಲ್ಲುವುದು ಸಾಧ್ಯವಿತ್ತೇ? ತಾನು ಈಶ್ವರನನ್ನು ಒಲಿಸಿಕೊಂಡು ಪಡೆದ ಪಾಶುಪತಾಸ್ತ್ರದಿಂದಲೇ ವಿಜಯ ಸಾಧ್ಯವಾದದ್ದು ಎಂದು ಬಲವಾಗಿ ನಂಬಿದ್ದ. ಪರಶಿವನ ಬಗ್ಗೆ ತನಗಿದ್ದ ಗೌರವವನ್ನು ತೋರಿಸಲು ದಿನಾಲು ಭರ್ಜರಿಯಾಗಿ ಪೂಜೆ ಮಾಡುತ್ತಿದ್ದ.

ಅವನು ಪೂಜೆಗೆ ಕುಳಿತರೆ ಆ ಕರ್ಪೂರ, ಊದುಬತ್ತಿಗಳ ಘಮಲೇನು? ಅದೆಷ್ಟು ಆರತಿಗಳು, ಅದೆಷ್ಟು ಬಂಡಿ ಬಂಡಿ ಹೂಗಳು? ಅರ್ಜುನ ಪೂಜೆ ಮಾಡುವಾಗ ಅವನ ಸೇವಕರಿಗೆ ಈ ವಸ್ತುಗಳನ್ನು ಒದಗಿಸಿ ಒದಗಿಸಿ ಪ್ರಾಣ ಹೋಗುತ್ತಿತ್ತು. 

ಇಡೀ ದೇಶದ ತುಂಬೆಲ್ಲ ಅರ್ಜುನನ ಪೂಜೆಯ ವೈಖರಿಯ ಮಾತು ಹರಡಿತ್ತು. ಅದು ಪ್ರಚಾರವಾದಷ್ಟೂ ಅರ್ಜುನನ ಅಭಿಮಾನ ಹೆಚ್ಚಾಗುತ್ತಿತ್ತು, ಮತ್ತೆ ಪೂಜೆಯ ಆಡಂಬರ ಬೆಳೆಯುತ್ತಿತ್ತು. 

ಆದರೆ ಭೀಮ ಈ ತರಹದ ಪೂಜೆಯನ್ನು ಮಾಡುತ್ತಿರಲಿಲ್ಲ. ಬಹಳ ಹೆಚ್ಚೆಂದರೆ ಊಟಕ್ಕೆ ಕೂಡ್ರುವ ಮುಂದೆ ಐದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮಾಡಿ ಓಂ ಶಿವಾಯ ನಮಃ ಎನ್ನುತ್ತಿದ್ದ.

ಅದನ್ನು ನೋಡಿ ಅರ್ಜುನ ತಿರಸ್ಕಾರದ ನಗೆ ನಗುತ್ತಿದ್ದ. ತನ್ನ ಪೂಜೆಯ ಸಂಭ್ರಮದ ಬಗ್ಗೆ ಅರ್ಜುನನಿಗೆ ಬಂದ ಅಹಂಕಾರದ ಸೂಚನೆ ಕೃಷ್ಣನಿಗೆ ದೊರೆಯಿತು, ತಕ್ಷಣವೇ ಹಸ್ತಿನಾವತಿಗೆ ಬಂದ.

ಮರುದಿನ, ಅರ್ಜುನನ ಪೂಜೆಯ ಆರ್ಭಟವನ್ನು ನೋಡಿದ. ಪೂಜೆಯ ನಂತರ ಹೇಳಿದ, `ಅರ್ಜುನ, ನಿನ್ನ ಪೂಜೆಯನ್ನು ನೋಡಿ ತುಂಬ ಸಂತೋಷವಾಯಿತು. ಇದು ಈಶ್ವರನನ್ನು ನಿಜವಾಗಿಯೂ ಒಲಿಸುವ ಬಗೆ ಅಲ್ಲವೇ?` `ಹೌದು ಕೃಷ್ಣ, ಮಹೇಶ್ವರನ ಗೌರವಕ್ಕೆ ತಕ್ಕ ರೀತಿಯಲ್ಲಿ ಪೂಜೆ ಮಾಡಬೇಡವೇ? ಭೀಮನ ಹಾಗೆ ಒಮ್ಮೆ ಮಾತ್ರ ಓಂ ಶಿವಾಯ ನಮಃ ಎಂದರೆ ಸಾಕೇ? ಅದೂ ಒಂದು ಪೂಜೆಯೇ` ಎಂದು ಅಹಂಕಾರದಿಂದ ಬೀಗಿದ ಅರ್ಜುನ. 

ಆಗ ಕೃಷ್ಣ ಹೇಳಿದ, `ಅರ್ಜುನ, ನೀನು ಆ ಮಹೇಶ್ವರನನ್ನು ನೋಡಿ ತುಂಬ ದಿನಗಳಾದುವಲ್ಲವೇ? ನಡೆ, ನಾವಿಬ್ಬರೂ ಸೇರಿ ಕೈಲಾಸಕ್ಕೆ ಹೋಗಿ ಆತನಿಗೆ ಪ್ರಣಾಮ ಸಲ್ಲಿಸಿ ಬರೋಣ.` ಅರ್ಜುನ ಒಪ್ಪಿದ. ಮರುದಿನವೇ ಇಬ್ಬರೂ ಪ್ರಯಾಣ ಬೆಳೆಸಿದರು.

ಕೈಲಾಸದ ಹತ್ತಿರಕ್ಕೆ ಬರುತ್ತಿದ್ದರು. ಆಗ ಅಲ್ಲೊಂದು ದೃಶ್ಯ ಕಾಣಿಸಿತು. ಒಬ್ಬ ಮನುಷ್ಯ ಒಂದು ಗಾಡಿಯ ತುಂಬ ಹೂಗಳನ್ನು ತುಂಬಿಕೊಂಡು ಬಂದು ಒಂದೆಡೆಗೆ ಸುರಿಯುತ್ತಿದ್ದ. ಅವನ ಹಿಂದೆ ಮತ್ತೊಂದು ಬಂಡಿ, ಅದರ ಹಿಂದೆ ಇನ್ನೊಂದು ಬಂಡಿ. ಹೀಗೆ ಬಂಡಿಗಳ ಸಾಲೇ ಬರುತ್ತಿದ್ದವು. ಒಬ್ಬೊಬ್ಬರಾಗಿ ಬಂದು ಹೂಗಳನ್ನು ತಂದು ತೆಗ್ಗಿನಲ್ಲಿ ಸುರುವಿ ಮತ್ತೆ ಅವಸರದಿಂದ ಹೋಗುತ್ತಿದ್ದರು. 

ಕೃಷ್ಣ ಆ ಬಂಡಿ ಸವಾರನನ್ನು ಕೇಳಿದ, `ಏನಪ್ಪಾ ಇದು. ಇಷ್ಟೊಂದು ಹೂಗಳನ್ನು ಇಲ್ಲಿ ಸುರಿದು ಹೋಗುತ್ತಿದ್ದೀರಿ?` ಆತ ಹೇಳಿದ, `ಸ್ವಾಮೀ ದಯವಿಟ್ಟು ನಮ್ಮನ್ನು ಮಾತನಾಡಿಸಬೇಡಿ. 

ನಮಗೆ ಒಂದು ನಿಮಿಷವೂ ಪುರುಸೊತ್ತಿಲ್ಲ, ಈಗಾಗಲೇ ಐದು ನೂರು ಬಂಡಿ ಹೂಗಳನ್ನು ಕೈಲಾಸದಿಂದ ತಂದು ಸುರುವಿದ್ದೇವೆ. ಇನ್ನೂ ಸಾವಿರ ಬಂಡಿಗಳಷ್ಟು ಹೂಗಳಿವೆ. ಈಶ್ವರನಿಗೆ ಅರ್ಪಿಸಿದ ಹೂಗಳನ್ನು ಖಾಲಿಮಾಡುವುದರಲ್ಲಿ ಸಾಕುಸಾಕಾಗಿ ಹೋಗಿದೆ.

` ಅರ್ಜುನ ಉತ್ಸಾಹದಿಂದ ಕೇಳಿದ, `ಯಾರು ಇಷ್ಟು ಪ್ರಮಾಣದಲ್ಲಿ ಈಶ್ವರನಿಗೆ ಹೂ ಅರ್ಪಿಸಿದವರು?` ಸೇವಕ ಹೇಳಿದ, `ಮತ್ತಾರು ಸ್ವಾಮಿ, ಅವನೇ ಭೀಮಸೇನ. ದಿನಾಲು ಅವನು ಅರ್ಪಿಸಿದ ಹೂಗಳನ್ನು ತೆಗೆಯುವುದೇ ಕಷ್ಟ.` ಅರ್ಜುನನಿಗೆ ಆಶ್ಚರ್ಯವಾಯಿತು. `ಇವು ಅರ್ಜುನ ಅರ್ಪಿಸಿದ ಹೂಗಳಿರಬೇಕು. ಭೀಮನೆಲ್ಲಿ ಹೂ ಅರ್ಪಿಸುತ್ತಾನೆ?` ಎಂದ.

ಅದಕ್ಕೆ ಸೇವಕ, `ಛೇ ಆ ಅಹಂಕಾರದ ಮುದ್ದೆ ಅರ್ಜುನನೆಲ್ಲಿ ಹೂ ಏರಿಸುತ್ತಾನೆ? ತೋರಿಕೆಗಾಗಿ ಪೂಜೆಯ ಆಡಂಬರ ಮಾಡುತ್ತಾನೆ. ಬಹಳವೆಂದರೆ ದಿನವೂ ಕೇವಲ ಒಂದೆರಡು ಹೂಗಳು ಇಲ್ಲಿಗೆ ಬಂದಿರಬಹುದು. ಆದರೆ ಅತ್ಯಂತ ಭಕ್ತಿಯಿಂದ ಭೀಮ ಕ್ಷಣಮಾತ್ರ ಮಾಡಿದ ಪೂಜೆಯಿಂದ ಬಂಡಿಗಟ್ಟಲೆ ಹೂಗಳು ಇಲ್ಲಿಗೆ ಈಶ್ವರನ ಪಾದಕ್ಕೆ ತಲುಪುತ್ತವೆ` ಎಂದ. ಕೃಷ್ಣ ಅರ್ಜುನನ ಮುಖ ನೋಡಿದ. ಅಹಂಕಾರ ಪೂರ್ತಿ ಇಳಿದುಹೋದದ್ದು ಕಾಣುತ್ತಿತ್ತು.


ಪೂಜೆ ಭಕ್ತ-ಭಗವಂತರ ನಡುವಿನ ಅತ್ಯಂತ ಪ್ರೀತಿಯ ಸಂಬಂಧ, ಸಂವಾದ. ಅದಕ್ಕೆ ಆಡಂಬರದ ಅವಶ್ಯಕತೆ ಇಲ್ಲ. ಆಡಂಬರ ಹೆಚ್ಚಾದಂತೆ ನಮ್ಮ ಅಹಂಕಾರದ ಮೆರವಣಿಗೆಯಾಗುತ್ತದೆ ಅಷ್ಟೇ. ಅದು ಭಕ್ತಿಯ ಪೂಜೆ ಆಗುವುದಿಲ್ಲ.
************


ಕತ್ತೆಯ ಕೊರಳಿನ ಹರಳು 

ಅವನೊಬ್ಬ ಬಡವ. ಅವನು ದಿನಾಲು ಕಾಡಿಗೆ ಹೋಗಿ ಕಟ್ಟಿಗೆ ಕಡಿದುಕೊಂಡು ಊರಿಗೆ ಬಂದು, ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ. ಏನು ಮಾಡಿದರೂ ಬಡತನ ಹಿಂಗದು. ಅವನ ಕಾರ್ಯದಲ್ಲಿ ಸಹಕಾರಿಯಾಗಿದ್ದುದು ಅವನ ಕತ್ತೆ. ಹತ್ತು ವರ್ಷದಿಂದ ಕಟ್ಟಿಗೆ ಹೊತ್ತು ಹೊತ್ತು ಸಣ್ಣದಾಗಿತ್ತು.

ಚಳಿಗಾಲದ ಒಂದು ದಿನ ಸಂಜೆ ಹೀಗೆ ಕಟ್ಟಿಗೆಯನ್ನು ಕತ್ತೆಯ ಮೇಲೆ ಹೊರಿಸಿ ಕಾಡಿನಿಂದ ಬರುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ಹೊಳೆಹೊಳೆಯುವ ಕಲ್ಲೊಂದು ಅವನ ಗಮನ ಸೆಳೆಯಿತು. ಅದೊಂದು ಗಾಜಿನ ಚೂರು ಇರಬೇಕೆಂದುಕೊಂಡು ಎತ್ತಿಕೊಂಡ. 

ಆ ಕಲ್ಲಿನ ಮಧ್ಯದಲ್ಲೊಂದು ಸಣ್ಣ ತೂತಿತ್ತು. ಚೆನ್ನಾಗಿದೆ ನೋಡುವುದಕ್ಕೆ ಎಂದುಕೊಂಡು ಆ ತೂತಿನಲ್ಲಿ ದಾರ ಪೋಣಿಸಿ ಅದನ್ನು ತನ್ನ ಕತ್ತೆಯ ಕೊರಳಿನಲ್ಲಿ ಹಾರದಂತೆ ಹಾಕಿದ. ಪಾಪ! ಇದುವರೆಗೂ ಕತ್ತೆಗೆ ತಾನು ಏನೂ ಮಾಡಲಿಲ್ಲ, ಹೀಗಾದರೂ ಒಂದು ಮರ್ಯಾದೆ ಇರಲಿ ಎಂದು ಸಮಾಧಾನ ಪಟ್ಟುಕೊಂಡ.

ಮುಂದೆ ನಡೆಯುತ್ತಿರುವಾಗ ಎದುರಿಗೆ ಒಬ್ಬ ವರ್ತಕ ಬಂದ. ಅವನು ಕತ್ತೆಯ ಕೊರಳಲ್ಲಿ ನೇತಾಡುತ್ತಿದ್ದ ಹೊಳೆಯುವ ಹರಳು ನೋಡಿದ. ಅವನ ತರಬೇತಾದ ಕಣ್ಣುಗಳಿಗೆ ಅದು ಒಂದು ವಜ್ರವೆಂದು ತಕ್ಷಣ ಹೊಳಿಯಿತು.

ಬಹುಶಃ ಈ ಬಡವನಿಗೆ ಅದು ವಜ್ರವೆಂದು ತಿಳಿದಿಲ್ಲ, ಅದಕ್ಕೇ ಕತ್ತೆಯ ಕೊರಳಲ್ಲಿ ಕಟ್ಟಿದ್ದಾನೆ ಎಂದು ಗೊತ್ತಾಗಿ ಅದನ್ನು ಲಪಟಾಯಿಸಲು ಹೊಂಚು ಹಾಕಿದ.  `ಏನಪ್ಪಾ, ಕತ್ತೆಯ ಕೊರಳಲ್ಲಿ ಯಾಕೆ ಈ ಸಿಂಗಾರ? ನನಗೆ ಈ ಕಲ್ಲು ಕೊಡುತ್ತೀಯಾ? 

ಎಷ್ಟು ಕೊಡಬೇಕು ಹೇಳು` ಎಂದು ಕೇಳಿದ. ಬಡವನಿಗೆ ಆಶ್ಚರ್ಯವಾಯಿತು. ಈ ಕಲ್ಲನ್ನು ಯಾಕೆ ಕೊಂಡುಕೊಳ್ಳುತ್ತಾನೆ ಈತ ಎಂದು ಚಿಂತಿಸಿ `ನೂರು ರೂಪಾಯಿ ಕೊಟ್ಟರೆ ಕೊಟ್ಟೇನು` ಎಂದ. 

ವ್ಯಾಪಾರಿಗೆ ದುರಾಸೆ. ಹೇಗಿದ್ದರೂ ಮೂರ್ಖನಿಗೆ ವಜ್ರದ ಬೆಲೆ ಗೊತ್ತಿಲ್ಲ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಜ್ರವನ್ನು ನೂರು ರೂಪಾಯಿಗೆ ಕೊಡಲು ಸಿದ್ಧನಿದ್ದಾನೆ. ಅವನು ಕೇಳಿದಷ್ಟೇ ಕೊಟ್ಟರೆ ಸಂಶಯ ಬಂದೀತು, ಇನ್ನಷ್ಟು ಚೌಕಾಸಿಮಾಡೋಣವೆಂದು, `ಇಲ್ಲಪ್ಪ, ನೂರು ರೂಪಾಯಿ ಹೆಚ್ಚಾಯಿತು, ಐವತ್ತು ರೂಪಾಯಿ ಕೊಡುತ್ತೇನೆ. 

ಏನು ಹೇಳುತ್ತೀ?` ಎಂದು ಕೇಳಿದ. ಬಡವನಿಗೆ ಗೊತ್ತಾಯಿತು, ಈ ಕಲ್ಲಿನ ಬೆಲೆ ಐವತ್ತಕ್ಕಿಂತ ಹೆಚ್ಚಾಗಿದೆ. ಇಲ್ಲದಿದ್ದರೆ ಬುದ್ಧಿವಂತ ವ್ಯಾಪಾರಿ ಕಲ್ಲಿಗೆ ಇಷ್ಟೇಕೆ ಬೆಲೆಕೊಡುತ್ತಿದ್ದ? ಗೋಣು ಅಲ್ಲಾಡಿಸಿ ಹೇಳಿದ, `ಬೇಡ ಬಿಡಿ ಸ್ವಾಮಿ. ನನ್ನ ಕತ್ತೆಯ ಕೊರಳಲ್ಲಿ ಚೆನ್ನಾಗಿ ಕಾಣುತ್ತದೆ. ಹಾಗೆಯೇ ಇರಲಿ.`  ರೈತ ಗಮನಿಸಿದ, ಕೊಡುವುದಿಲ್ಲವೆಂದರೂ ವ್ಯಾಪಾರಿ ಹಿಂದೆಯೇ ಬರುತ್ತಿದ್ದಾನೆ. 

ಆಗ ದಾರಿಯಲ್ಲಿ ಮತ್ತೊಬ್ಬ ವ್ಯಾಪಾರಿ ಬಂದ. ಅವನೂ ಹರಳು ನೋಡಿದ ಅವನಿಗೂ ಆದರ ಬೆಲೆ ಅರ್ಥವಾಯಿತು. ಹಿಂದೆಯೇ ಬರುತ್ತಿದ್ದ ವ್ಯಾಪಾರಿಯನ್ನು ಕಂಡ. ಇವನೂ ಈ ಹರಳಿನ ಹಿಂದೆಯೇ ಬಿದ್ದಿದ್ದಾನೆ ಎಂದು ತಿಳಿಯಿತು. 

ತಾನೇ ಬಡವನನ್ನು ಕೇಳಿದ, `ಏನಪ್ಪಾ, ನಿನಗೆ ಸಾವಿರ ರೂಪಾಯಿ ಕೊಡುತ್ತೇನೆ, ಕಲ್ಲು ಕೊಡುತ್ತೀಯಾ?` ಇವನಿನ್ನೂ ಪ್ರಶ್ನೆಯನ್ನು ಮುಗಿಸಿರಲಿಲ್ಲ, ಆಗ ಹಿಂದೆ ಬರುತ್ತಿದ್ದ ವ್ಯಾಪಾರಿ ಥಟ್ಟನೇ ಹಾರಿ ಬಂದ. `ನೀನು ಬರೀ ಸಾವಿರ ರೂಪಾಯಿ ಕೊಟ್ಟು ಹರಳು ಹೊಡೆಯಬೇಕೆಂದು ಮಾಡಿದ್ದೀಯಾ?

ನಾನು ಐದು ಸಾವಿರ ಕೊಡುತ್ತೇನೆ` ಎಂದು ಅರಚಿದ. ಇನ್ನೊಬ್ಬ ಬಿಟ್ಟಾನೆಯೇ, `ಏನಯ್ಯೊ ಐದು ಸಾವಿರಕೊಟ್ಟು ಈ ಮುಗ್ಧನಿಗೆ ಟೋಪಿ ಹಾಕಲು ನೋಡುತ್ತೀಯಾ? ನಾನು ಹತ್ತು ಸಾವಿರ ರೂಪಾಯಿ ಕೊಡುತ್ತೇನೆ.` ಇಬ್ಬರ ನಡುವೆ ಪೈಪೋಟಿ ನಡೆಯಿತು. 

ಕಟ್ಟಿಗೆ ಮಾರುವ ಬಡವ ನಕ್ಕು. ತನ್ನ ಕತ್ತೆಗೆ, ಸ್ನೇಹಿತ, `ನಮ್ಮಿಬ್ಬರ ಬಡತನ ಕೊನೆಗೂ ನೀಗಿತು. ನಿನ್ನ ಕೊರಳಲ್ಲಿ ಇರುವುದು ವಜ್ರವೆಂದು ತಿಳಿಯಿತು. ನಾವು ವಜ್ರದ ವ್ಯಾಪಾರಿಗೆ ಇದನ್ನು ಮಾರಿ ಮುಂದೆ ಸುಖವಾಗಿರೋಣ.

ನೀನಿನ್ನು ಕೆಲಸ ಮಾಡುವುದು ಬೇಡ. ಈ ಮೂರ್ಖರು ಹೊಡೆದಾಡುತ್ತ ಇರಲಿ` ಎಂದು ಹೇಳಿ ನಡೆದ. ಮುಂದೆ ಸಂತೋಷವಾಗಿ ಬದುಕಿದ.

ಮಾಸ್ತಿ ಹೇಳುತ್ತಿದ್ದರು :  ಪ್ರತಿಯೊಬ್ಬರ ಮನೆಯಲ್ಲೂ ಒಂದು ಕಪಾಟಿದೆ. ಅದರೊಳಗೆ ನೂರು ಕೋಟಿ ರೂಪಾಯಿ ನಗದು ಇದೆ. ಆದರೆ ನಾವು ಮನೆ ಮನೆಗೆ ಹೋಗಿ ಹತ್ತು ರೂಪಾಯಿ ಕೊಡಿ ಎಂದು ಬೇಡುತ್ತೇವೆ. 

ಯಾಕೆ ಗೊತ್ತೇ? ನಮಗೆ ಕಪಾಟಿನ ಕೀಲಿಕೈ ನಮ್ಮ ಜೇಬಿನಲ್ಲೇ ಇದೆ ಎಂಬುದು ತಿಳಿದಿಲ್ಲ. ಅದನ್ನು ಹುಡುಕಿ ಹೊರ ತೆಗೆದರೆ ನಮ್ಮ ಜೀವನವೇ ಬದಲಾಗಿ ಹೋಗುತ್ತದೆ .
ನಿಜ, ನಮ್ಮಳಗಿರುವ ಅಸಾಮಾನ್ಯ ಶಕ್ತಿಯನ್ನು ತಿಳಿಯದೇ ನಾವು ಬರೀ ಕಲ್ಲೆಂದುಕೊಳ್ಳುತ್ತೇವೆ. 


ಅದು ವಜ್ರವೆಂದು ಒಂದು ಬಾರಿ ತಿಳಿದರೆ ಸಾಕು ನಮಗೇ ಆಶ್ಚರ್ಯವಾಗುವಂತೆ ಜೀವನ ಅದ್ಭುತವಾಗಿ ತೆರೆದುಕೊಳ್ಳುತ್ತದೆ.
**********

ಜೀವನ ದರ್ಶನ ನೀಡಿದ ಶಿಕ್ಷಕ

ಅವರೊಬ್ಬ ಶಿಕ್ಷಕ. ಅವರು ಜೀವನದ ಬೇರೆ ಮುಖಗಳನ್ನು ನೋಡಿ ನಂತರ ಶಿಕ್ಷಕತ್ವವನ್ನು ಆರಿಸಿಕೊಂಡರೋ ಇಲ್ಲ, ಶಿಕ್ಷಕರಾಗಲೆಂದೇ ಹುಟ್ಟಿದರೋ ಹೇಳುವುದು ಕಷ್ಟ. ಅವರೊಂದು ವಿಶ್ವಕೋಶವೇ ಆಗಿದ್ದರು. ಆಗಿನ್ನೂ ಪ್ರತಿಯೊಂದಕ್ಕೂ  ಗೂಗಲ್  ನೋಡುವ ಪ್ರವೃತ್ತಿ ಇರಲಿಲ್ಲ. ಆದರೆ ಯಾವ ಸಮಸ್ಯೆ ಬಂದರೂ  ಮೇಷ್ಟರು ಇದ್ದಾರಲ್ಲ, ಅವರನ್ನು ಕೇಳಿದರಾಯಿತು  ಎಂಬುದು ಎಲ್ಲರ ಮನಸ್ಸಿಗೂ ಬರುತ್ತಿತ್ತು, ಅವರ ಸಮಸ್ಯೆಗಳಿಗೆ ಉತ್ತರವೂ ದೊರೆಯುತ್ತಿತ್ತು. 

ಅವರು ಜೀವನದಲ್ಲಿ ಎಲ್ಲವನ್ನೂ ಕಂಡಿದ್ದವರು, ಮನಸ್ಸು ಮಾಗಿದವರು. ಎಂಥ ಕಷ್ಟವೇ ಬರಲಿ, ಎಂಥ ಸಂತೋಷವೇ ಇರಲಿ,  ಆಯ್ತು ಅದು ಭಗವಂತನ ಇಚ್ಛೆ  ಎಂದು ನಕ್ಕುಬಿಡುವರು. ಅವರಿಗೆ ಇಬ್ಬರು ಮಕ್ಕಳಿದ್ದರು. ದೊಡ್ಡ ಮಗ ಬುದ್ಧಿವಂತ, ಪರಿಶ್ರಮಿ. ಆತ ಕೆಲಸಕ್ಕೆ ಸೇರಿ ತಂದೆಗೆ ಸಹಾಯಕನಾಗುತ್ತಾನೆ ಎಂದು ಎಲ್ಲರೂ ಭಾವಿಸಿದ್ದರು. ಅದೇ ಸಮಯಕ್ಕೆ ಮೇಷ್ಟ್ರು ನಿವೃತ್ತರಾಗಿದ್ದರು. ಅವರದು ತುಂಬ ಮಗುವಿನಂಥ ಸ್ವಭಾವ. ಯಾರೋ ಹೇಳಿದರೆಂದು ತಮ್ಮ ಉಳಿತಾಯದ ಹಣವನ್ನೆಲ್ಲ ಒಂದೆಡೆ ಹೂಡಿ ಎಲ್ಲವನ್ನೂ ಕಳೆದುಕೊಂಡರು. ಈ ಸಮಯದಲ್ಲಿ ಒಂದು ದಿನ ಹಿರಿಯ ಮಗ ಬಂದು,  ಅಪ್ಪಾ ನಾನು ಪಾದ್ರಿಯಾಗಬೇಕೆಂದು ನಿರ್ಧರಿಸಿದ್ದೇನೆ. ನನಗೆ ಅದೇ ಹಾದಿ ಸರಿಯೆಂದು ಎನ್ನಿಸಿದೆ, ನಿಮ್ಮ ಅಪ್ಪಣೆಬೇಕು  ಎಂದಾಗ ಈ ಮುದುಕರಿಗೆ ಕ್ಷಣಕಾಲ ನಿರಾಸೆಯಾಗಿದ್ದಿರಬೇಕು. ಆದರೆ ತೋರಗೊಡಲಿಲ್ಲ. ಮಗ ಹೊರಟುನಿಂತಾಗ ತಾವೂ ರೈಲ್ವೆ ನಿಲ್ದಾಣಕ್ಕೆ ಹೋದರು. 

ರೈಲು ಬಿಡುವುದಕ್ಕಿಂತ ಕ್ಷಣ ಮೊದಲು ಮಗನನ್ನು ಬದಿಗೆ ಕರೆದು,  ಮಗೂ, ನಿನ್ನ ನಂಬಿಕೆಯನ್ನು ಬಲವಾಗಿಸಿಕೊಂಡು ನಡೆ. ಆದರೆ ಒಂದು ಮಾತು, ನಿನಗೆ ಅಲ್ಲಿನ ವ್ಯವಸ್ಥೆ ಸರಿಯಿಲ್ಲವೆಂದೆನ್ನಿಸಿದರೆ ಮನಸ್ಸಿನಲ್ಲಿ ಖಿನ್ನತೆಯನ್ನು ಮಾಡಿಕೊಂಡು, ಮನೆಗೆ ಹೇಗೆ ಹೋಗಲಿ ಎಂದು ಚಿಂತಿಸಬೇಡ. ನಾನು ಯಾವಾಗಲೂ ನಿನ್ನೊಂದಿಗಿದ್ದೇನೆ  ಎಂದು ಹೇಳಿ ಮೈದಡವಿ ಕಳುಹಿಸಿಕೊಟ್ಟರು. ತನ್ನ ತಂದೆ ಸದಾ ತನ್ನೊಂದಿಗಿದ್ದಾರೆ ಎಂದು ಹೇಳುವ ಈ ಆಶ್ವಾಸನೆ ಎಂಥ ಭದ್ರತೆಯನ್ನು ಮಕ್ಕಳಿಗೆ ನೀಡುತ್ತದೆ!

ಕೆಲದಿನಗಳ ನಂತರ ಅವರ ಹೆಂಡತಿಯ ಆರೋಗ್ಯ ಕೆಟ್ಟಿತು. ಹೊಟ್ಟೆಯಲ್ಲಿ ವೃಣವಾಗಿ ಕರುಳಿನ ಬಹುಭಾಗವನ್ನು ಕತ್ತರಿಸಬೇಕಾಯಿತು. ಆಸ್ಪತ್ರೆಯ ಖರ್ಚು ವಿಪರೀತವಾಯಿತು. ತಮಗಾಗಿ ಪ್ರೀತಿಯಿಂದ ಕೊಂಡಿದ್ದ ಕಾರನ್ನು ಮಾರಿ ಹೆಂಡತಿಯನ್ನು ಕಾಪಾಡಿಕೊಂಡರು. ಒಂದು ದಿನ ತಮ್ಮ ಎರಡನೆಯ ಮಗನನ್ನು ಕರೆದುಕೊಂಡು ಆಸ್ಪತ್ರೆಗೆ ನಡೆದು ಹೋಗುತ್ತಿರುವಾಗ ಹುಡುಗ ಕೇಳಿದ,  ಯಾಕಪ್ಪಾ, ಕಾರು ಮಾರಿಬಿಟ್ಟೆ? ಅದಿದ್ದರೆ ಎಷ್ಟು ಚೆನ್ನಾಗಿತ್ತಲ್ಲ?  ತಂದೆ ಅಷ್ಟೇ ಶಾಂತವಾಗಿ ಹೇಳಿದರು,  ಮಗೂ ನನಗೆ ಕಾರಿಗಿಂತ ನಿನ್ನ ತಾಯಿ ಹೆಚ್ಚು ಮುಖ್ಯ .  ಈ ಮಾತು ಮಗುವಿನ ಮೇಲೆ ಏನೆಲ್ಲ ಪ್ರಭಾವ ಬೀರಿತು. ತನ್ನ ತಂದೆ ತನ್ನ ಹೆಂಡತಿಯ ಮೇಲಿಟ್ಟ ಪ್ರೀತಿ, ಆ ಪ್ರೀತಿಗೋಸ್ಕರ ಯಾವ ತ್ಯಾಗವೂ ದೊಡ್ಡದಲ್ಲವೆಂಬ ತಿಳಿವು ಇವೆಲ್ಲ ಪರಿವಾರದ ಸಂಬಂಧಗಳು ಹೇಗಿರಬೇಕು ಎನ್ನುವ ಜೀವನದುದ್ದಕ್ಕೂ ಸಾಕಾಗುವ ಪಾಠವನ್ನೂ ಆ ಮಗುವಿಗೆ ನೀಡಿದ್ದಿರಬೇಕು.

ಆ ಮೇಷ್ಟ್ರರಿಗೆ ತಮ್ಮ ಸಾವು ಹತ್ತಿರ ಬಂತೆಂದು ತಿಳಿದಿರಬೇಕು. ಆದರೆ ಸಾವಿನಲ್ಲೂ ಕೂಡ ಅದೇ ಸಮತ್ವ, ಅದೇ ಶುದ್ಧತೆ, ಅದೇ ಪರಿಪೂರ್ಣತೆ. ಮಗನಿಗೆ ಹೇಳಿದರು,  ಅಲ್ಲಿ ಮೇಜಿನ ಮೇಲೆ ಬೈಬಲ್ಲಿನ ಯಾವ ಯಾವ ಹಾಡುಗಳನ್ನು ನಾನು ತೀರಿಹೋದಮೇಲೆ ಹಾಡಬೇಕೆಂಬುದನ್ನು ಗುರುತು ಮಾಡಿ ಇಟ್ಟಿದ್ದೇನೆ. ಆದರೆ ಜೋಪಾನ, ನೀನು ಕೆಲವೊಂದು ಬಾರಿ ಅವಸರದಿಂದ ಪದಗಳನ್ನು ಸರಿಯಾಗಿ ಉಚ್ಛರಿಸುವುದಿಲ್ಲ. ನನ್ನನ್ನು ಸಮಾಧಿ ಮಾಡುವಾಗ ನಿನ್ನ ಉಚ್ಛಾರಣೆ ಸರಿಯಾಗಿರಲಿ . ಮುಂದೆ ಎರಡೇ ದಿನದಲ್ಲಿ ಎದುರು ಬಂದ ಸಾವನ್ನು ಬಹುದಿನಗಳಿಂದ ಕಾಣದೇ ಇದ್ದ ಅತ್ಯಂತ ಪ್ರೀತಿಸಿದ ಸ್ನೇಹಿತನಂತೆ ಅಪ್ಪಿಕೊಂಡು ನಡೆದೇಬಿಟ್ಟರು. ಸದಾ, ಸರ್ವದಾ ಆದರ್ಶ ಶಿಕ್ಷಕನಂತೆ.


ನಾವೂ ನಮ್ಮ ಮಕ್ಕಳಿಗೆ ಇಂಥ ಜೀವನದ ಮೌಲ್ಯಗಳನ್ನು, ಬದುಕುವ ರೀತಿಯನ್ನು, ಪರಿವಾರದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ಪರಿಯನ್ನು ಕಲಿಸಿಕೊಡುವುದು ಸಾಧ್ಯವೇ? ಹಾಗಾಗುವಂತೆ ಪ್ರಯತ್ನಿಸಬೇಕು. ಅದು ನಮ್ಮ ಮನೆಗೂ, ಸಮಾಜಕ್ಕೂ ಸಮಾಧಾನ, ಸಂತೃಪ್ತಿಯನ್ನು ನೀಡುವ ಕ್ರಿಯೆ.
**********

ಪ್ರಚೋದನೆಗಳು

ಇದು ಕೆಲವರ್ಷಗಳ ಹಿಂದೆ ಅಮೆರಿಕೆಯಲ್ಲಿ ಮಾಡಿದ ಸಂಶೋಧನೆಯ ಫಲಿತಾಂಶ. ಶಿಕಾಗೋದಲ್ಲಿರುವ ಸ್ಟೋನ್‌ಬ್ರಾಂಡೆಲ್ ಕೇಂದ್ರದಲ್ಲಿ ಡಾ.ಲೇಸಿ ಹಾಲ್ ಎಂಬ ಮನಃಶಾಸ್ತ್ರಜ್ಞರ ನೇತೃತ್ವದಲ್ಲಿ ನಡೆಸಿದ ಸಂಶೋಧನೆ ಇದು.
ಡಾ.ಲೇಸಿ ಪ್ರಪಂಚದಲ್ಲಿರುವ ಅನೇಕ ಜನರನ್ನು ಸೂಕ್ಷ್ಮವಾಗಿ ಗಮನಿಸಿದರು. ಅದರಲ್ಲಿ ಬಹಳಷ್ಟು ಜನ ನಿರಾಸೆಯಿಂದ ಕೊರಗುತ್ತಾರೆ, ಕೆಲವರು ತುಂಬ ಶೃದ್ಧೆಯಿಂದ ಆತ್ಮವಿಶ್ವಾಸದಿಂದ ಜೀವನವನ್ನು ಉಕ್ಕಿಸುತ್ತಾರೆ. ಇನ್ನು ಉಳಿದವರು ಉತ್ಸಾಹವೂ ಇಲ್ಲದೇ ಕೊರಗೂ ಇಲ್ಲದೇ ಹೇಗೆ ಹೇಗೋ ಜೀವನವನ್ನು ಕಳೆದುಬಿಡುತ್ತಾರೆ. ಈ ವ್ಯತ್ಯಾಸಕ್ಕೆ ಕಾರಣವೇನಿದ್ದಿರಬಹುದು? ಇದು ವಂಶಪಾರಂಪರ್ಯವಾಗಿ ಬಂದದ್ದೇ? ಪರಿಸರದಿಂದಲೇ? ಶಿಕ್ಷಣದಿಂದಲೇ? ಅವರವರಿಗೆ ದೊರೆತ ಅವಕಾಶಗಳು, ಸ್ಪಂದನೆಗಳು ಅವರ ವ್ಯಕ್ತಿತ್ವವನ್ನು ನಿರ್ಮಿಸಿದವೇ? ಇದನ್ನು ಅಭ್ಯಾಸ ಮಾಡಲು ಡಾ. ಲೇಸಿ ಹಾಲ್     ಪ್ರವೃತ್ತರಾದರು. ಅವರು ಮೊದಲು ಸಮಾಜದ ಬೇರೆ ಬೇರೆ ಸ್ತರಗಳಲ್ಲಿರುವ ಸಾವಿರಾರು ಜನರನ್ನು ಸಂಪರ್ಕಿಸಿ ಈ ಕಾರ್ಯದಲ್ಲಿ ಭಾಗಿಯಾಗುವಂತೆ ಕೇಳಿಕೊಂಡರು. ನಂತರ ಅವರೆಲ್ಲರಿಗೆ ಒಂದು ಡೈರಿಯನ್ನು ಕೊಟ್ಟು ಅದರಲ್ಲಿ ತಮ್ಮ ಮನಸ್ಸಿಗೆ ದೊರೆತ ಪ್ರತಿ ಸ್ಪಂದನೆಯನ್ನು ದಾಖಲಿಸಲು ಹೇಳಿದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಪ್ರತಿಯೊಂದು ಘಟನೆಯಿಂದ ತಮ್ಮ ಮನಸ್ಸಿಗೆ ದೊರೆತ ಪ್ರತಿಕ್ರಿಯೆ ಎಂಥದ್ದು ಎಂಬುದನ್ನು ಬರೆಯಬೇಕಿತ್ತು. ಬೆಳಿಗ್ಗೆ ಎದ್ದಾಗ ನಿಮ್ಮ ಹೆಂಡತಿ ಕಾಫೀ ನೀಡಿದ ರೀತಿ, ಪೇಪರಿನವನು ಅದನ್ನು ಎಸೆದು ಹೋದ ಬಗೆ, ದೂರದರ್ಶನವನ್ನು ನೋಡುವಾಗ ಪ್ರತಿಯೊಂದು ಚಾನೆಲ್ ತೋರಿಸುವ ಸುದ್ದಿ, ಆ ಸೀರಿಯಲ್‌ಗಳಲ್ಲಿ ತೋರುವ ವಸ್ತುಗಳು, ಮನೆಯಲ್ಲಿ ಆಗಾಗ ಹೋಗುವ ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ, ಆಫೀಸಿಗೆ ತೆರಳುವಾಗ ಆಗುವ ನುಗ್ಗಾಟ, ಕಂಡಕ್ಟರನೊಡನೆ ವಾದ, ಆಫೀಸಿನಲ್ಲಿ ಸಾಹೇಬರ ಸಿಡಿಮಿಡಿ, ಸಹೋದ್ಯೋಗಿಗಳ ಅಸಹಕಾರ ಮತ್ತು ನಿರಾಸಕ್ತಿ, ಊಟ ಮಾಡುವಾಗ ಕಂಡುಬರುವ ವಸ್ತುಗಳ ಕಲಬೆರಕೆ, ಮಕ್ಕಳ ಶಾಲೆಯ ಫೀ ಹೆಚ್ಚಳ, ವರ್ತಮಾನ ಪತ್ರಿಕೆಗಳಲ್ಲಿ ಬರುವ ಸುದ್ದಿಗಳ ಸಾರ ಇವೆಲ್ಲವುಗಳು ತಮ್ಮ ಬುದ್ಧಿಯನ್ನು ಪ್ರಚೋದಿಸಿದ ಪರಿಯನ್ನು ಡೈರಿಯಲ್ಲಿ ಬರೆಯಬೇಕೆಂದು ಕೋರಲಾಗಿತ್ತು. ಡಾ.ಲೇಸಿ ಹಾಲ್‌ರ ಈ ವಿನಂತಿಯನ್ನು ಜನ ಉತ್ಸಾಹದಿಂದ ಒಪ್ಪಿಕೊಂಡು ಸಂಶೋಧನೆಯಲ್ಲಿ ಭಾಗಿಯಾದರು. ಜನ ತಮ್ಮ ಅನುಭವಕ್ಕೆ ಬಂದ ಎಲ್ಲ ಘಟನೆಗಳನ್ನು ದಾಖಲಿಸುತ್ತ ಆ ಘಟನೆಗಳಲ್ಲಿ ಎಷ್ಟು ನಕಾರಾತ್ಮಕ ಅಥವಾ ಸಕಾರಾತ್ಮಕ ಪ್ರಚೋದನೆಯನ್ನು ನೀಡಿದವು ಎಂಬುದನ್ನು ತೋರಿದರು.

ಡಾ.ಲೇಸಿ ಸುಮಾರು ಒಂದೂವರೆ ವರ್ಷದವರೆಗೆ ಈ ಪ್ರಯೋಗವನ್ನು ಮುಂದುವರೆಸಿದರು. ನಂತರ ಈ ದಾಖಲೆಗಳನ್ನೆಲ್ಲ ತರಿಸಿಕೊಂಡು ಕಂಪ್ಯೂಟರಿನಲ್ಲಿ ಶೇಖರಿಸಿ ವಿಶ್ಲೇಷಿಸಿದರು. ತಮ್ಮ ಸಹೋದ್ಯೋಗಿಗಳೊಡನೆ ಚರ್ಚಿಸಿ ತಮ್ಮ ಸಂಶೋಧನೆಯ ಪಾಠವನ್ನು ಪ್ರಕಟಿಸಿದರು. ಅದು ಯಾರಿಗಾದರೂ ಗಾಬರಿಯನ್ನುಂಟು ಮಾಡುವ ವಿಚಾರ. ಸಂಶೋಧನೆಯ ಪ್ರಕಾರ ಬಹಳಷ್ಟು ಜನಕ್ಕೆ ದೊರೆತದ್ದು ಪ್ರತಿಶತ ತೊಂಬತ್ತರಷ್ಟು ನಕಾರಾತ್ಮಕ ಪ್ರಚೋದನೆ. ವೃತ್ತಪತ್ರಿಕೆಯನ್ನೋ, ದೂರದರ್ಶನ ವಾರ್ತೆಯನ್ನೋ ನೋಡಿ, ಅದರಲ್ಲಿ ನಕಾರಾತ್ಮಕವಾದದ್ದೆಷ್ಟು, ಸಕಾರಾತ್ಮಕವಾದದ್ದೆಷ್ಟು ಎಂಬ ಅರಿವಾಗುತ್ತದೆ ಅಲ್ಲವೇ? ನಮಗೆ ದೊರೆತ ಪ್ರಚೋದನೆ ತೊಂಬತ್ತು ಭಾಗ ನಕಾರಾತ್ಮಕವಾಗಿದ್ದರೂ ಪ್ರತಿಶತ ಹತ್ತು ಜನರು ಜೀವನದಲ್ಲಿ ಆಶಾವಾದಿಗಳಾಗಿ, ಸದಾ ಉತ್ಸಾಹಿಗಳಾಗಿ ಇರುವುದು ಹೇಗೆ ಸಾಧ್ಯವಾಯಿತು ಎಂದುಕೊಂಡು ಡಾ. ಲೇಸಿ ಅಂಥ ಜನರ ಜೀವನ ಚರ್ಯೆಯನ್ನು ಆಳವಾಗಿ ಪರಿಶೀಲಿಸಿದರು. ಅವರಿಗೊಂದು ವಿಷಯ ಸ್ಪಷ್ಟವಾಯಿತು. ಯಾರ ವೈವಾಹಿಕ, ಪಾರಿವಾರಿಕ ಜೀವನ ಹೆಚ್ಚು ಭದ್ರವಾಗಿದೆಯೋ, ಯಾರು ಸದಾಕಾಲ ಅತ್ಯಂತ ಸೃಜನಶೀಲವಾದ ಜನರ, ಸಂಸ್ಥೆಗಳೊಡನೆ ಸಂಬಂಧ ಇಟ್ಟುಕೊಂಡಿದ್ದಾರೋ ಅವರೆಲ್ಲ ಜಗತ್ತನ್ನು ಆಶಾವಾದದಿಂದ, ಪ್ರೀತಿಯಿಂದ   ಕಾಣುತ್ತಾರೆ. ಡಾ.ಲೇಸಿ ಹೇಳುತ್ತಾರೆ,  ನಮ್ಮೆದುರು ಒಂದು ಪ್ರಚಂಡವಾದ ಸವಾಲಿದೆ.

ಇದೊಂದು ಕಠಿಣವಾದ ಯುದ್ಧ, ನಮ್ಮ ಮನಸ್ಸು ಬುದ್ಧಿಗಳ ಮೇಲೆ ಇಷ್ಟೊಂದು ಭಾರಿ ಪ್ರಮಾಣದ ನಕಾರಾತ್ಮಕ ಪ್ರಚೋದನೆಗಳ ಪೆಟ್ಟು ಸದಾ ಬೀಳುತ್ತಿದ್ದರೂ ಸಕಾರಾತ್ಮಕವಾಗಿ ಉಳಿಯಲು ನಾವು ಹಟದಿಂದ, ಶ್ರದ್ಧೆಯಿಂದ ಗಟ್ಟಿಯಾದ ನಂಬಿಕೆಗಳಿಗೆ, ಮನುಷ್ಯ ಸಂಬಂಧಗಳಿಗೆ ನಮ್ಮನ್ನು ಬಿಗಿದುಕೊಂಡು ಒಳ್ಳೆಯದನ್ನೇ ಕಾಣುವ ಮೊಂಡತನವನ್ನು ತೋರಬೇಕು. ಇಲ್ಲದಿದ್ದರೆ ಈ ನಕಾರಾತ್ಮಕತೆಯ ಮಹಾಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತೇವೆ . ನಮಗೆ ಬೇರೆ ಯಾವ ದಾರಿಯೂ ಇಲ್ಲ. ನಮ್ಮ ಮುಂದಿನ ಸಮಾಜ ಸುಂದರವಾಗಬೇಕಾದರೆ ಇದನ್ನು ನಾವು ಮಾಡಲೇಬೇಕಲ್ಲವೇ?
*********

ಜ್ಞಾನದ ಉಡುಗೊರೆ

ಅವರೊಬ್ಬ ಮಹಾಜ್ಞಾನಿ. ಅವರ ಮಗಳಿಗೆ ಅದು ವಿಶೇಷವಾದ ದಿನ. ಅವಳಿಗೆ ಅಂದು ಇಪ್ಪತ್ತನೆಯ ಹುಟ್ಟುಹಬ್ಬ. ಚೀನಾ ದೇಶದಲ್ಲಿ ಹುಡುಗಿಗೆ ಇಪ್ಪತ್ತಾದರೆ ಬಾಲ್ಯ ಮುಗಿದು ತಾರುಣ್ಯಕ್ಕೆ ಕಾಲಿಟ್ಟ ಕ್ಷಣ ಅದು. ಆಕೆ ಸಂಭ್ರಮದಲ್ಲಿದ್ದಳು. ಮನೆಯಲ್ಲಿಯೂ ತುಂಬ ಸಂತಸದ ವಾತಾವರಣ.

ಸಂಜೆ ಬಂದ ಅತಿಥಿಗಳ ಮುಂದೆ ಪ್ರಾರ್ಥನೆಯ ಕಾರ್ಯಕ್ರಮವಾದ ಮೇಲೆ ಜ್ಞಾನಿಯಾದ ತಂದೆ ಮಗಳನ್ನು ಪ್ರೀತಿಯಿಂದ ಕರೆದು ತಲೆನೇವರಿಸಿ ಅವಳ ಕೈಯಲ್ಲಿ ಒಂದು ಪೆಟ್ಟಿಗೆಯನ್ನಿಟ್ಟು,  `ಮಗೂ, ಇದು ನಿನ್ನ ಹುಟ್ಟುಹಬ್ಬದ ಕಾಣಿಕೆ` ಎಂದ. ಆಕೆಗೆ ತನ್ನ ತಂದೆ ಯಾವ ಉಡುಗೊರೆ ಕೊಟ್ಟಿರಬೇಕು ಎಂಬುದನ್ನು ತಿಳಿಯುವ ಕುತೂಹಲ. `ಅಪ್ಪಾ ಇದರಲ್ಲಿ ಏನಿದೆ?` ಎಂದು ಕೇಳಿದಳು. ತಂದೆ ನಕ್ಕು ಹೇಳಿದರು, `ಮಗೂ ಅದನ್ನು ನೀನೇ ಕಂಡುಕೊಳ್ಳಬೇಕು. ರಾತ್ರಿ ಊಟವಾದ ಮೇಲೆ ನಿನ್ನ ಕೋಣೆಗೆ ಇದನ್ನು ತೆಗೆದುಕೊಂಡು ಹೋಗು. ಮೊದಲು ಹತ್ತು ನಿಮಿಷ ಧ್ಯಾನ ಮಾಡಿ ನಂತರ ಪೊಟ್ಟಣವನ್ನು ಬಿಚ್ಚಿ ಉಡುಗೊರೆಯನ್ನು ನೋಡು.` 

ತಂದೆ ಹೇಳಿದಂತೆಯೇ ಈ ಹುಡುಗಿ ಧ್ಯಾನ ಮಾಡಿದ ಮೇಲೆ ಪೊಟ್ಟಣವನ್ನು ಬಿಚ್ಚಿದಳು. ಅದರೊಳಗೆ ಮೂರು ಸುಂದರವಾದ, ಆಕರ್ಷಕವಾಗಿ ಕೆತ್ತನೆ ಮಾಡಿದ ಮರದ ಪುಟ್ಟ ಪೆಟ್ಟಿಗೆಗಳು. ಅವುಗಳ ಮೇಲೆ ಒಂದು, ಎರಡು, ಮೂರು ಎಂಬ ಸಂಖ್ಯೆಗಳನ್ನು ಅಂಟಿಸಲಾಗಿತ್ತು. ನಿಧಾನವಾಗಿ ಒಂದನೇ ಪೆಟ್ಟಿಗೆಯನ್ನು ತೆರೆದಳು. ಅದರಲ್ಲಿ ಒಂದು ಸುಂದರವಾದ ಚೌಕಟ್ಟಿನೊಳಗೆ ಹೊಂದಿಸಿದ ಕನ್ನಡಿ ಇತ್ತು. ಹುಡುಗಿ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಳು. ತನ್ನ ರೂಪ ಹೆಮ್ಮೆ ತರುವಂತಿತ್ತು ಎನ್ನಿಸಿತು. ಸೂಕ್ಷ್ಮವಾಗಿ ಗಮನಿಸಿದಾಗ ಕನ್ನಡಿಯ ಅಂಚಿನಲ್ಲಿ ಏನೋ ಬರೆದಿತ್ತು. ಕುತೂಹಲದಿಂದ ನೋಡಿದಳು. ಅಲ್ಲಿ `ಇದು ಇಂದಿನ ನೀನು` ಎಂದು ಬರೆದಿತ್ತು.

ಮತ್ತೊಂದು ಪೆಟ್ಟಿಗೆಯನ್ನು ತೆರೆದಳು. ಆಕೆಗೆ ಗಾಬರಿಯಾಯಿತು. ಅದರೊಳಗೆ ಗಾಜಿನಿಂದ ಮಾಡಿದ ಮನುಷ್ಯನ ತಲೆಬುರುಡೆಯ ಪ್ರತಿಕೃತಿ ಇತ್ತು. ಈ ಸಾವಿನ ಚಿಹ್ನೆಯಾದ ತಲೆಬುರುಡೆಯನ್ನು ಅದೇಕೆ ತನಗೆ ಕೊಟ್ಟಿರಬಹುದು ಎಂಬ ಚಿಂತೆಯೂ ಆಯಿತು, ದುಃಖವೂ ಆಯಿತು. ಆ ಪೆಟ್ಟಿಗೆಯ ಮೂಲೆಯ ಮೇಲೆ `ಇದು ನಾಳೆಯ ನೀನು` ಎಂದು ಬರೆದಿತ್ತು.

ಮುಖ ಗಂಟಿಕ್ಕಿಕೊಂಡು ಮೂರನೆಯ ಪೆಟ್ಟಿಗೆಯ ಮುಚ್ಚಳವನ್ನು ತೆರೆದಳು. ಇದರಲ್ಲಿ ಕನ್ನಡಿಯಂಥ ಸುಂದರವಾದ ವಸ್ತುವಿರಬಹುದೇ ಅಥವಾ ತಲೆಬುರುಡೆಯಂಥ ಹೆದರಿಕೆ ಬರುವ ಚಿಹ್ನೆ ಇರಬಹುದೇ ಎಂದು ಚಿಂತಿಸುತ್ತಲೇ ಒಳಗೆ ನೋಡಿದಳು. ಅದರಲ್ಲಿ ಅತ್ಯಂತ ಸುಂದರವಾದ, ಆಕರ್ಷಕವಾಗಿ ಕೆತ್ತಲಾದ, ಧ್ಯಾನಮುದ್ರೆಯಲ್ಲಿದ್ದ ಭಗವಾನ್ ಬುದ್ಧನ ದಂತದ ವಿಗ್ರಹವಿತ್ತು. ಬುದ್ಧನ ಮುಖದ ಮೇಲಿನ ಕಾಂತಿ, ಶಾಂತಿ ಮನ ತುಂಬುತ್ತಿತ್ತು. 

ಅವಳ ಮನಸ್ಸಿಗೆ ತುಂಬ ಹಾಯೆನಿಸಿತು. ತಂದೆಯ ಉಡುಗೊರೆಯ ಬಗ್ಗೆ ಹೆಮ್ಮೆಯಾಯಿತು. ಈ ಪೆಟ್ಟಿಗೆಯ ಮೂಲೆಯಲ್ಲೂ ಒಂದು ಬರಹವಿತ್ತು. `ಇದು ಶಾಶ್ವತವಾದ ನೀನು` ಎಂಬುದೇ ಆ ಒಕ್ಕಣೆ.

ಆಗ ಆ ಹುಡುಗಿಗೆ ತನ್ನ ತಂದೆ ನೀಡಿದ್ದು ಸಾಮಾನ್ಯವಾದ ಉಡುಗೊರೆಯಲ್ಲ ಎಂಬುದು ಅರ್ಥವಾಯಿತು. ಅವರು ಕೊಟ್ಟದ್ದು ಮೂರು ವಸ್ತುಗಳಲ್ಲ, ಅವು ಮೂರು ದೊಡ್ಡ ತತ್ವಗಳು, ಅವುಗಳ ಅರ್ಥವನ್ನು ತಿಳಿದುಕೊಳ್ಳಬೇಕೆಂದು ಹೊರಟಳು. ಇದು ಮಾತಿಲ್ಲದೇ ಕಲಿಸುವ ಪಾಠ. ಆ ಹುಡುಗಿಗೆ ಮಾತ್ರವಲ್ಲ, ಆ ಜ್ಞಾನಿ ನಮಗೆಲ್ಲರಿಗೂ ನೀಡಿದ ಅತ್ಯಂತ ಪ್ರಯೋಜನಕಾರಿಯಾದ ಪಾಠ. ಮೊದಲ ಪೆಟ್ಟಿಗೆಯಲ್ಲಿದ್ದ ಕನ್ನಡಿ ನಮ್ಮ ಇಂದಿನ ಸ್ಥಿತಿಯನ್ನು ತಿಳಿಸುತ್ತದೆ. ಕನ್ನಡಿ ಎಂದಿಗೂ ಹಿಂದಿನ, ಮುಂದಿನ ಚಿತ್ರಗಳನ್ನು ಸಂಗ್ರಹಿಸಿ ಇಡಲಾರದು. ಅದು ಕೇವಲ ವಾಸ್ತವವನ್ನು ಮಾತ್ರ ತೋರುತ್ತದೆ. ಸಾಂಕೇತಿಕವಾಗಿ ಅದು ನಮ್ಮ ಆತ್ಮವನ್ನು ಪ್ರತಿಫಲಿಸುವ ಕ್ರಿಯೆಯನ್ನು ಸೂಚಿಸುತ್ತದೆ. ನಾವು ಸದಾ ನಮ್ಮ ಆತ್ಮಪರೀಕ್ಷಣೆಯನ್ನು ಮಾಡಿಕೊಂಡು ಜೀವನವನ್ನು ಶುದ್ಧವಾಗಿಟ್ಟುಕೊಳ್ಳಬೇಕು. 

ಬಾಹ್ಯಸುಂದರತೆ ಮಾತ್ರವೇ ಸಾಲದು. ಎರಡನೆಯ ಪೆಟ್ಟಿಗೆಯಲ್ಲಿಯ ತಲೆಬುರುಡೆ ನಮ್ಮ ನಾಳೆಯ ಸೂಚನೆ. ನಾವು ನಾಳೆ ಮೃತ್ಯುವನ್ನಪ್ಪಿ ದೇಹ ಕಳೆದು ಅಸ್ಥಿಯಾಗುತ್ತೇವೆ. ಈ ಜೀವನ, ನಿರ್ದಿಷ್ಟ ಅವಧಿಯದು ಮಾತ್ರವಲ್ಲ ತುಂಬ ಚಿಕ್ಕದೂ ಹೌದು. ಇದರ ಸರಿಯಾದ ಅರ್ಥವಾದರೆ ನಮಗೆ ದೊರೆತಿರುವ ಪ್ರತಿಯೊಂದು ಕ್ಷಣವೂ ಎಷ್ಟು ಮುಖ್ಯವಾದದ್ದು ಮತ್ತು ವ್ಯರ್ಥಮಾಡಲಾಗದಷ್ಟು ಅಮೂಲ್ಯವಾದದ್ದು ಎಂಬುದು ತಿಳಿಯುತ್ತದೆ, ತಿಳಿಯಬೇಕು. 


ಮೂರನೆಯ ಪೆಟ್ಟಿಗೆಯಲ್ಲಿನ ಬುದ್ಧನ ವಿಗ್ರಹ ನಮ್ಮಲ್ಲಿ ಸದಾ ಸರ್ವದಾ ಇರುವ ದಿವ್ಯತೆಯ ಸಂಕೇತ. ಅದು ಎಂದೆಂದಿಗೂ ಇರುವಂತಹದು. ಪ್ರತಿಕ್ಷಣವೂ ಅದನ್ನು ನೆನೆಸಿಕೊಂಡು ಅದನ್ನು ಬೆಳಸುವಲ್ಲಿ ನಮ್ಮ ಪ್ರಯತ್ನ ನಡೆಯಬೇಕು. ಅದೊಂದು ಅಧ್ಯಾತ್ಮಿಕವಾಗಿ ಉನ್ನತಿಗೇರುವ ಪ್ರಕ್ರಿಯೆ. ಇದೇ ಶಾಶ್ವತವಾದ ನಮ್ಮ ರೂಪ. ಇದೇ ಮಹಾಜ್ಞಾನಿ ನೀಡಿದ ಕಾಣಿಕೆ  ಮಗಳಿಗೆ ಮಾತ್ರವಲ್ಲ, ಇಡೀ ಮಾನವ ಕುಲಕ್ಕೆ. ನಮ್ಮ  ಇಂದು ಸದಾ ಅಂತಃಸಾಕ್ಷಿಯನ್ನು ಪರೀಕ್ಷಿಸುತ್ತ ನಡೆಯಬೇಕು. ನಮ್ಮ ನಾಳೆ ಕೇವಲ ನಶ್ವರವಾದದ್ದೆಂಬ ಎಚ್ಚರಿಕೆಯಲ್ಲಿ ಪ್ರತಿಕ್ಷಣವನ್ನು ವ್ಯರ್ಥಗೊಳಿಸದೇ ಶ್ರಮಿಸಬೇಕು. ಕೊನೆಗೆ ಎಂದೆಂದಿಗೂ ಶಾಶ್ವತವಾದ  ಬುದ್ಧತ್ವವನ್ನು ಎಂದರೆ ನಮಗೆ ದೈವದತ್ತವಾಗಿ ಬಂದ ದೈವತ್ವವನ್ನು ವೃದ್ಧಿಸಿಕೊಂಡು ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು. ಇದೇ ನಾವು ಪ್ರೌಢಾವಸ್ಥೆಯಲ್ಲಿ ಹಿರಿಯರಿಂದ ಪಡೆಯುವ ಜ್ಞಾನದ ಉಡುಗೊರೆ. ಅದರ ಹದವರಿತು ಬಾಳು ಅರಳಬೇಕು.
***********

ನಂಗೆಲಿಯ ಬಲಿದಾನ
ನಮ್ಮ ದೇಶದ ಅತಿ ದೊಡ್ಡ ಶಾಪವೆಂದರೆ ಅಸ್ಪೃಶ್ಯತೆ. ನಾವು ಎಲ್ಲಿಯವರೆಗೆ ಮನುಷ್ಯರನ್ನು ಮನುಷ್ಯರಂತೆ ನೋಡುವುದನ್ನು ಬೆಳೆಸಿಕೊಳ್ಳುವುದಿಲ್ಲವೋ ನಾವು ಒಂದು ನಾಗರಿಕ ಸಮಾಜವಾಗಿ ಬಾಳುವುದು ಅಸಾಧ್ಯವಾಗುತ್ತದೆ.

ನಮ್ಮ ಧರ್ಮ ಇಂದು ಅವರನ್ನು ಮುಟ್ಟಬೇಡಿ, ಇವರನ್ನು ಮುಟ್ಟಬೇಡಿ ಎನ್ನುತ್ತ ಕೇವಲ ಮುಟ್ಟದಿರುವ ಧರ್ಮವಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಜ್ಞಾನದ ನೀಡಿಕೆಯಲ್ಲಿ, ಅಧ್ಯಾತ್ಮದಲ್ಲಿ, ಶ್ರೀಮಂತಿಕೆಯಲ್ಲಿ ಪ್ರಪಂಚಕ್ಕೇ ಮಾದರಿಯಾಗಿದ್ದ ನಮ್ಮ ದೇಶ ಕೆಳಮಟ್ಟಕ್ಕೆ ಇಳಿಯಲು ಈ ಅಸ್ಪೃಶ್ರ್ಯತೆಯ ಮನೋಭಾವವೇ ಕಾರಣ.` ಹೀಗೆಂದು ತಮ್ಮ ಆಕ್ರೋಶವನ್ನು ಒಂದು ಶತಮಾನದ ಹಿಂದೆಯೇ ಬಹಿರಂಗಪಡಿಸಿದವರು ವೀರ ಸನ್ಯಾಸಿ ವಿವೇಕಾನಂದರು. ಈ ವ್ಯಕ್ತಿ-ವ್ಯಕ್ತಿಗಳ ನಡುವಿನ ತಾರತಮ್ಯಗಳು ಈಗ ಕಡಿಮೆಯಾಗಿದ್ದರೂ ಅವು ಇನ್ನೂ ಉಳಿದಿರುವುದು ಖೇದದ ಸಂಗತಿ.

ಈ ಅವ್ಯವಸ್ಥೆಯ ವಿರುದ್ಧ ಹೋರಾಡಿದವರು ಹಲವರು. ಕೆಲವರ ಹೆಸರುಗಳು ನೆನಪಿನಲ್ಲಿವೆ. ಅನೇಕರ ಹೆಸರುಗಳು ಮರೆಯಾಗಿ ಹೋಗಿವೆ. ಹೀಗೆ ತಾರತಮ್ಯದ ವಿರುದ್ಧ ಹೋರಾಟದಲ್ಲಿ ತನ್ನ ಜೀವನವನ್ನೇ ಬಲಿಕೊಟ್ಟು ಇತಿಹಾಸ ನಿರ್ಮಿಸಿದ ಮಹಿಳೆ ನಂಗೆಲಿ. ಕೇರಳದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಇಡೀ ಮಹಿಳಾ ಸಮುದಾಯಕ್ಕೆ ಮರ್ಯಾದೆಯನ್ನು, ಸ್ವಾತಂತ್ರವನ್ನು ತಂದುಕೊಟ್ಟವಳು ನಂಗೆಲಿ. ಅವಳ ಬಲಿದಾನವನ್ನು ಇತಿಹಾಸ ದಾಖಲಿಸದಿರುವುದು ದುರ್ದೈವ. ಅವಳ ಮನೆತನದವರು ಬಾಯಿಂದ ಬಾಯಿಗೆ ಅವಳ ಗಾಥೆಯನ್ನು ಸಾಗಿಸಿ ಕಾಪಾಡಿಕೊಂಡಿದ್ದಾರೆ.

ಪ್ರತಿಯೊಂದು ವಸ್ತುವಿನ ಮೇಲೆ ತೆರಿಗೆ ಹಾಕುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಕಳೆದ ಶತಮಾನದಲ್ಲಿ ಕೇರಳದ ತಿರುವಾಂಕೂರಿನಲ್ಲಿ ಅತ್ಯಂತ ಹೀನಾಯವಾದ ತೆರಿಗೆ ಜಾರಿಯಲ್ಲಿತ್ತು. ಕೆಳಜಾತಿಯ ಮಹಿಳೆಯರಿಗೆ ತಮ್ಮ ಎದೆ ಮುಚ್ಚಿಕೊಳ್ಳಲು ಅನುಮತಿ ಇರಲಿಲ್ಲ.

ಅವರು ಹಾಗೆಯೇ ತೆರೆದೆದೆಯಲ್ಲಿ ತಿರುಗಾಡಬೇಕಿತ್ತು, ಮೇಲ್ವರ್ಗದ ಜನರ ಹಸಿದ ಕಣ್ಣುಗಳಿಗೆ ಆಹಾರವಾಗಬೇಕಿತ್ತು. ಅವರು ಎದೆಯನ್ನು ಮುಚ್ಟಿಕೊಳ್ಳಬೇಕಾದರೆ ರಾಜ್ಯಕ್ಕೆ ತೆರಿಗೆ ಕಟ್ಟಬೇಕಾಗಿತ್ತು. ಅದನ್ನು  ಮುಲಕ್ಕರಮ್ ಎನ್ನುತ್ತಿದ್ದರು. ಹಾಗೆಂದರೆ  ಎದೆ ತೆರಿಗೆ  ಎಂದರ್ಥ. ಬಹಳಷ್ಟು ಬಡ ಹೆಣ್ಣುಮಕ್ಕಳು ತೆರಿಗೆ ಕಟ್ಟಲು ಹಣ ಎಲ್ಲಿಂದ ತಂದಾರು? ಅನೇಕ ಸುಂದರ ತರುಣಿಯರು ಈ ಕ್ರೂರ ಶಾಸನಕ್ಕೆ ಹೆದರಿ ತಮ್ಮ ಗುಡಿಸಲುಗಳ ಕತ್ತಲೆಯಲ್ಲಿಯೇ ತಮ್ಮ ಜೀವನವನ್ನು ಕೊಳೆಸಿಬಿಡುತ್ತಿದ್ದರು.

ಅಕಸ್ಮಾತ್ ಯಾವುದೇ ಮಹಿಳೆ ಎದೆಯ ಮೇಲೆ ಬಟ್ಟೆ ಹಾಕಿಕೊಂಡು ಹೋದರೆ ತಕ್ಷಣವೇ ಅಧಿಕಾರಿಗಳು ಆಕೆಗೆ ಉಗ್ರ ಶಿಕ್ಷೆ ನೀಡಿ ತೆರಿಗೆ ಹಾಕುತ್ತಿದ್ದರಂತೆ.
ಈ ಸಮಯದಲ್ಲಿ ನಂಗೆಲಿ ಈ ವ್ಯವಸ್ಥೆಯನ್ನು ಧಿಕ್ಕರಿಸಲು ತೀರ್ಮಾನ ಮಾಡಿದಳು. ಆಕೆ ಇದ್ದದ್ದು ಚೆರ್ತಲಾ ಎಂಬ ಊರಿನಲ್ಲಿ. ಆಕೆಗೆ ಆಗ ಸುಮಾರು ಮೂವತ್ತು-ಮೂವತ್ತೈದು ವರ್ಷ ವಯಸ್ಸಿದ್ದೀತು. ನಂಗೆಲಿ ತುಂಬ ಸುಂದರಿ ಎಂಬ ಹೆಸರಿತ್ತು.

ಆಕೆಯ ಗುಂಗುರು ಕೂದಲು ಮೊಳಕಾಲು ಮುಟ್ಟುತ್ತಿತ್ತಂತೆ. ಆಕೆಯ ಬಣ್ಣವೂ ಅಪರೂಪವೇ. ನಂಗೆಲಿ ತುಂಬ ಆರೋಗ್ಯ ಪೂರ್ಣವಾಗಿದ್ದು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವಳು. ಆಕೆಯ ಸಮಾಜದ ಜನ ಆಕೆಯನ್ನು ಅಪ್ಸರೆ ಎಂದೇ ಕರೆಯುತ್ತಿದ್ದರು. ನಂಗೆಲಿಗೆ ತನ್ನ ಸೌಂದರ್ಯದ ಬಗ್ಗೆ ಅಭಿಮಾನವೂ ಇತ್ತು. ಅದರೊಂದಿಗೆ ಮತ್ತೊಬ್ಬರ ಕಣ್ಣಿಗೆ ಆಹಾರ ಮಾಡುವ ವ್ಯವಸ್ಥೆಯ ಬಗ್ಗೆ ರೋಷವೂ ಇತ್ತು. ಆಕೆ ಈ ವ್ಯವಸ್ಥೆಯನ್ನು ಎದುರಿಸಿ ಸ್ವಾತಂತ್ರ್ಯವನ್ನು ಬಯಸಿದಳು.


ನಂಗೆಲಿ ಹೊರ ನಡೆದಾಗ ಎದೆಯ ಮೇಲೆ ಬಟ್ಟೆಯನ್ನು ಹೊದ್ದೇ ನಡೆದಳು. ಈ ವಿಷಯ ಬೆಂಕಿಯಂತೆ ಹರಡಿತು. ನಗರದ ಅಧಿಕಾರಿ ನಂಗೆಲಿಯ ಮನೆಗೆ ಎದೆ ತೆರಿಗೆಯನ್ನು ಹಾಕಲು ಧಾವಿಸಿದ. ಆಗ ನಂಗೆಲಿಯ ಗಂಡ ಕಂದಪ್ಪನ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿ ಜೋರು ಮಾಡಿ ತಕ್ಷಣವೇ ತೆರಿಗೆ ಕಟ್ಟುವಂತೆ ಆಗ್ರಹಿಸಿದ. ಆಗಿನ ಪದ್ಧತಿಯಂತೆ ತೆರಿಗೆಯನ್ನು ಬಾಳೆ ಎಲೆ ಹಾಸಿದ ತಟ್ಟೆಯ ಮೇಲೆ ಒಂದು ದೀಪದ ಹಿಂದೆ ಇಟ್ಟುಕೊಡುವುದು ವಾಡಿಕೆ.

ನಂಗೆಲಿ ಅಧಿಕಾರಿಗೆ ಒಂದು ನಿಮಿಷ ಕಾಯುವಂತೆ ತಿಳಿಸಿ, ಮನೆಯ ಒಳಗೆ ನಡೆದಳು. ಹಣ ತರಲು ಹೋಗಿರಬೇಕೆಂದು ಅಧಿಕಾರಿ ಭಾವಿಸಿದ. ಐದು ನಿಮಿಷಗಳ ನಂತರ ಎದೆಯ ಮೇಲೆ ಬಟ್ಟೆ ಹೊದ್ದುಕೊಂಡು ಬಂದ ನಂಗೆಲಿ ತಟ್ಟೆಯನ್ನು ಅಧಿಕಾರಿಯ ಮುಂದೆ ಇಟ್ಟಳು. ಅದನ್ನು ನೋಡಿ ಗಾಬರಿಯಾದ ಅಧಿಕಾರಿ ನಡುಗತೊಡಗಿದ, ಮನೆಯಿಂದ ಹೊರಗೆ ಓಡಿ ಬಿಟ್ಟ. ನಂಗೆಲಿ ಆ ತಟ್ಟೆಯಲ್ಲಿ ತನ್ನ ಎರಡೂ ಸ್ತನಗಳನ್ನು ಕತ್ತರಿಸಿ ಇಟ್ಟುಬಿಟ್ಟಿದ್ದಳು. ಕ್ಷಣದಲ್ಲೇ ನಂಗೆಲಿ ಕೂಡ ಕೆಳಗೆ ಬಿದ್ದು ಎಚ್ಚರ ತಪ್ಪಿದಳು. ಆಕೆಯ ಸುತ್ತಮುತ್ತ ರಕ್ತದ ಕೋಡಿ ಹರಿದಿತ್ತು.
*************


ಅಪೇಕ್ಷಗಳ ಹಿಡಿತ

ಹಿಮಾಲಯ ತಪ್ಪಲಿನಲ್ಲಿತ್ತು ಆ ಆಶ್ರಮ. ಅಲ್ಲಿ ಅನೇಕ ಸನ್ಯಾಸಿಗಳು ತಮ್ಮ ಜೀವನದ ದಾರಿಯನ್ನು ಕಂಡುಕೊಳ್ಳುತ್ತಿದ್ದರು. ಬೇಸಿಗೆಯಲ್ಲೇನೋ ಸ್ವಲ್ಪ ಜೀವನ ಚೆನ್ನಾಗಿರುತ್ತಿತ್ತು. ಗುರುಗಳು-ಶಿಷ್ಯರು ಬಿಸಿಲಿನಲ್ಲಿ ಕುಳಿತು ಮೈಕಾಯಿಸಿಕೊಳ್ಳಲು ಅನುಕೂಲವಿತ್ತು. ಆದರೆ ಉಳಿದ ತಿಂಗಳುಗಳಲ್ಲಿ ಮಾತ್ರ ಬದುಕು ದುಃಸಾಧ್ಯವಾಗುತ್ತಿತ್ತು.

ಮಳೆಗಾಲದಲ್ಲಿ ನಿರಂತರವಾಗಿ ಬೀಳುವ ಮಳೆ, ಅದರಿಂದ ಉಕ್ಕಿ ಹರಿಯುವ ನದಿಗಳು ಯಾರಿಗಾದರೂ ಗಾಬರಿ ಮಾಡುತ್ತಿದ್ದವು. ನಂತರ ಬರುವ ಚಳಿಗಾಲದಲ್ಲಂತೂ ಕೊರೆಯುವ ಚಳಿಗೆ ನಡುನಡುಗಿ ಮೈಯಲ್ಲಿಯ ಮೂಳೆಗಳು ಮುರಿಯದಿದ್ದುದೇ ಪವಾಡ.

ಈ ಗುಂಪಿನಲ್ಲೊಬ್ಬ ತರುಣ ಸನ್ಯಾಸಿ. ಆತನಿಗೆ ಈಜುವುದೆಂದರೆ ಬಲು ಸಂತೋಷ. ಇನ್ನೇನು ಕೆಲವೇ ದಿನಗಳಲ್ಲಿ ಚಳಿಗಾಲ ಪ್ರಾರಂಭವಾಗುತ್ತದೆನ್ನುವಾಗ ಒಂದು ದಿನ ಆತ ನದೀ ತೀರದಲ್ಲಿ ನಿಂತಿದ್ದ. ಆಗ ಅವನ ಕಣ್ಣಿಗೆ ಒಂದು ದೃಶ್ಯ ಬಿತ್ತು. ಅವನು ದೂರದಲ್ಲಿ ನದಿಯ ನೀರಿನಲ್ಲಿ ಯಾವುದೋ ವಸ್ತು ತೇಲಿ ಬರುತ್ತಿದ್ದುದನ್ನು ಕಂಡ. ದಿಟ್ಟಿಸಿ ನೋಡಿದರೆ ಒಂದು ದೊಡ್ಡ ಕಪ್ಪು ಕಂಬಳಿ ನೀರಿನಲ್ಲಿ ಹರಿದುಕೊಂಡು ಬರುತ್ತಿದೆ.

ಅದನ್ನು ನೋಡಿದ ತಕ್ಷಣ ತರುಣ ಸನ್ಯಾಸಿಗೆ ಮುಂದೆ ಬರಲಿರುವ ಚಳಿಯ ದಿನಗಳ ನೆನಪಾಯಿತು. ತಾನು ಕಳೆದ ಬಾರಿ ತನ್ನನ್ನು ಬೆಚ್ಚಗಿರಿಸಿಕೊಳ್ಳಲು ಒದ್ದಾಡಿದ್ದರ ನೆನಪಾಯಿತು. ಆಹಾ! ಈ ಕಂಬಳಿ ನನಗಾಗಿಯೇ ಬಂದಂತಿದೆ. ಇದನ್ನು ದಂಡೆಗೆಳೆದು ಒಣಗಿಸಿ ಇಟ್ಟುಕೊಂಡರೆ ಚಳಿಗಾಲವನ್ನು ಸುಸೂತ್ರವಾಗಿ ಪಾರಾಗಬಹುದು. ಹೀಗೆಲ್ಲ ಯೋಚಿಸಿ ಆತ ತಣ್ಣಗೆ ಕೊರೆಯುವ ನೀರಿಗೆ ಹಾರಿಕೊಂಡ.

ಜೋರಾಗಿ ಕೈಬೀಸುತ್ತ ಆ ಕಂಬಳಿ ಬರುತ್ತಿರುವೆಡೆ ಈಜುತ್ತ ನುಗ್ಗಿದ. ದಂಡೆಯ ಮೇಲೆ ನಿಂತಿದ್ದ ಆಶ್ರಮದ ಜನಕ್ಕೆ ಇದೊಂದು ಆಶ್ಚರ್ಯ. ಈತ ಎಲ್ಲಿಗೆ ಸಾಗುತ್ತಿದ್ದಾನೆ ಎಂದು ನೋಡುತ್ತಿದ್ದರು. ಅವನು ಈಜುತ್ತ ಕಂಬಳಿಯ ಹತ್ತಿರ ತಲುಪಿದ. ಕಂಬಳಿಗೆ ಕೈ ಹಾಕಿ ಎಳೆದ. ಹಾಗೆ ಎಳೆದವನೇ ಹೋ, ಹೋ ಎಂದು ಕಿರುಚಲಾರಂಭಿಸಿದ.

ದಂಡೆಯ ಮೇಲಿದ್ದವರಿಗೆ ಏನೂ ಅರ್ಥವಾಗಲಿಲ್ಲ. ಅವರೂ ಅವನು ಕಂಬಳಿಯನ್ನೇ ಎಳೆಯುತ್ತಿದ್ದಾನೆ ಎಂದುಕೊಂಡಿದ್ದರು. ತರುಣ ಸನ್ಯಾಸಿ ಮತ್ತೆ ಕೂಗಿದ,  `ನನ್ನನ್ನು ಪಾರು ಮಾಡಿ, ಪಾರುಮಾಡಿ.` ದಂಡೆಯಲ್ಲಿದ್ದವರಿಗೆ ಆ ಕಂಬಳಿ ಬಹಳ ಭಾರವಾಗಿದ್ದರಿಂದ ಅದನ್ನು ಎಳೆಯುವುದು ಅವನಿಗೆ ಅಸಾಧ್ಯವಾಗಿರಬೇಕು ಎನ್ನಿಸಿ,  `ಭಾರವಾಗಿದ್ದರೆ ನೀನೇ ಕೈ ಬಿಟ್ಟು ಬಿಡು, ದೂರ ತಳ್ಳಿ ಬಂದುಬಿಡು`  ಎಂದು ಕೂಗಿದರು.

ಆಗ ಆತ,  `ನಾನು ಅದನ್ನು ಯಾವಾಗಲೋ ಬಿಟ್ಟೆ. ಆದರೆ ಅದು ನನ್ನನ್ನು ಬಿಡುತ್ತಿಲ್ಲ`  ಎಂದು ಅರಚಿದ. ಅವನು ಕಂಬಳಿ ಎಂದು ಹಿಡಿದದ್ದು ಒಂದು ನೀರು ಕರಡಿ. ಈಗ ಅದು ಅವನನ್ನೇ ಹಿಡಿದುಬಿಟ್ಟಿದೆ! ಅದರಿಂದ ಪಾರಾಗುವುದು ಅವನಿಗೆ ಕಷ್ಟವಾಗಿದೆ. ನಂತರ ಹತ್ತಾರು ಜನ ನೀರಿಗೆ ಹಾರಿ ಕೋಲಿನಿಂದ ಹೊಡೆದು ಅದನ್ನು ಓಡಿಸಿ ಈ ಸನ್ಯಾಸಿಯನ್ನು ಪಾರುಮಾಡಿಕೊಂಡು ಬಂದರು.

ನಮಗೂ ಹಾಗೆಯೇ ಆಗುತ್ತದೆ ಅಲ್ಲವೇ? ನಾವೂ ಜೀವನದ ನದಿಯಲ್ಲಿ ತೇಲಿಬರುವ ಅನೇಕ ವಸ್ತುಗಳನ್ನು ನಾವೂ ಬೆನ್ನತ್ತಿ ಹೋಗುತ್ತೇವೆ.  ನಮ್ಮ ಕಷ್ಟಕಾಲಕ್ಕೆ ಒದಗುತ್ತವೆ ಎಂದು. ಆ ವಸ್ತುಗಳು, ಬಂಗಲೆ, ಕಾರು, ಅಧಿಕಾರ, ಮನ್ನಣೆ, ದೇಹ ಸಂತೋಷ ಯಾವುದೂ ಆಗಬಹುದು. ಅವು ನಮಗೆ ಬೇಕೆಂದು ಹಿಡಿದುಕೊಳ್ಳುತ್ತೇವೆ.


ಹಿಡಿದುಕೊಳ್ಳುವುದಷ್ಟೇ ನಮ್ಮ ಕೈಯಲ್ಲಿದ್ದದ್ದು. ನಂತರ ಆ ವಸ್ತುವೇ ನಮ್ಮನ್ನು ಹಿಡಿದುಕೊಳ್ಳುತ್ತದೆ. ಒಂದು ಸ್ಕೂಟರ್ ಬೇಕು ಎಂದುಕೊಂಡು ಕೊಂಡರೆ ಅದರ ಹಿಂದೆಯೇ ಸರಮಾಲೆ ಬಂದೇ ಬರುತ್ತದೆ. ಸ್ಕೂಟರಿನ ಇನ್ಸೂರೆನ್ಸ್, ಪೆಟ್ರೋಲ್ ಖರ್ಚು, ಹೆಲ್ಮೆಟ್, ಕೂದಲು ಉದುರುವಿಕೆ ಇತ್ಯಾದಿ. ಒಂದು ಅಧಿಕಾರದಲ್ಲಿ ಕುಳಿತಿರೋ ಬಂತು ನೋಡಿ ಅದರ ಹಿಂದೆಯೇ ಅಧಿಕಾರದ ಜರ್ಬು, ಅಹಂಕಾರ, ಮತ್ತೊಬ್ಬರ ಅಸೂಯೆ ಮತ್ತು ಅಧಿಕಾರ ಕಳೆದುಹೋಗುವ ಭಯ.

ಈ ವಸ್ತುಗಳನ್ನು, ಅಪೇಕ್ಷೆಗಳನ್ನು ಹಿಡಿದುಕೊಳ್ಳುವ ಮೊದಲೇ ಅವು ತರುವ ಹಿಡಿತಗಳನ್ನು, ಬಿಗಿತಗಳನ್ನು ನೆನಪಿಗೆ ತಂದುಕೊಂಡರೆ ವಾಸಿ.
**************


೨೦ july ೨೦೧೧
ಕೊಳ್ಳುಬಾಕತನದ ಸಂಸ್ಕೃತಿ

ಇತ್ತೀಚೆಗೆ ನನಗೊಂದು ಫೋನ್ ಬಂದಿತ್ತು. ದೂರದ ಅಮೆರಿಕೆಯಿಂದ. ಫೋನ್ ಮಾಡಿದ್ದು ರಾಧಿಕಾ. ನನ್ನ ಬಹಳ ಹಳೆಯ ವಿದ್ಯಾರ್ಥಿನಿ. ಆಕೆ ಮದುವೆಯಾಗಿ ಅಮೆರಿಕೆಗೆ ಹೋಗಿ ಅಲ್ಲೇ ಉಳಿದಿದ್ದ ವಿಷಯ ತಿಳಿದಿತ್ತು. ಆಕೆ ನನಗೆ ಎಂದೂ ಮೊದಲು ಫೋನ್ ಮಾಡಿಯೇ ಇರಲಿಲ್ಲ. ಅವಳ ವಿಷಯವೇ ಮರೆತು ಹೋಗಿತ್ತು. ಈ ಫೋನ್ ಕರೆ ಮತ್ತೆ ಸೇತುವೆಯನ್ನು ಕಟ್ಟಿತು. ರಾಧಿಕಾ ಸುಮಾರು ನಲವತ್ತೈದು ನಿಮಿಷ ಮಾತನಾಡಿರಬೇಕು. ಆಕೆ ಹೇಳಿದ್ದು ಸಿನಿಮಾ ನೋಡಿದ ಹಾಗೆ ಕಣ್ಣಿಗೆ ಕಟ್ಟಿದೆ.

ರಾಧಿಕಾಳ ಗಂಡ ಎಂಜಿನಿಯರ್. ಒಳ್ಳೆಯ ಮನುಷ್ಯ, ಒಳ್ಳೆಯ ಕೆಲಸ. ವ್ಯಾಪಾರ ನಗರಿಯಾದ ನ್ಯೂಯಾರ್ಕ್‌ನಲ್ಲಿ ಕೆಲಸ. ಮನೆ ಕೂಡ ದೂರವಿರಲಿಲ್ಲ. ಕೈತುಂಬ ಸಂಬಳ, ಒಬ್ಬಳೇ ಮಗಳು, ಬ್ಯಾಂಕಿನಲ್ಲಿ ಸಾಕಷ್ಟು ಹಣ. ಜೀವನ ಚೆನ್ನಾಗಿ ನಡೆಯುತ್ತಿತ್ತು. ರಾಧಿಕಾ ಕೆಲಸ ಮಾಡದೇ ಗೃಹಿಣಿಯಾಗಿ ಸಂತೋಷದಿಂದ ಇದ್ದವಳು.

ಎಲ್ಲವೂ ಒಂದೇ ರೀತಿ ಇದ್ದರೆ ಸಂಸಾರ ಎಂದು ಏಕನ್ನಬೇಕು? ಮೂರು ವರ್ಷಗಳ ಹಿಂದೆ ಅಮೆರಿಕೆಯ ಹಣಕಾಸಿನ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಸಮಾಜ ವ್ಯವಸ್ಥೆಯೇ ಅಸ್ತವ್ಯಸ್ತವಾಯಿತು. ಕಂಡರಿಯದ ಹಣಕಾಸಿನ ಮುಗ್ಗಟ್ಟು ತಲೆದೋರಿತು. ಕೆಲಸಗಳು ಕಳೆದು ಹೋದವು. ಮನೆಗಳು ಮಾರಾಟಕ್ಕೆ ನಿಂತವು, ಕೊಂಡುಕೊಳ್ಳುವವರಿಲ್ಲದೇ ಖಾಲಿ ಬಿದ್ದವು. ಈ ವಿಷಮ ಪರಿಸ್ಥಿತಿಯಲ್ಲಿ ರಾಧಿಕಾಳ ಗಂಡನ ಕೆಲಸ ಹೋಯಿತು.

ಮನೆಯಲ್ಲಿ ಆತನೊಬ್ಬನೇ ಗಳಿಸುವವನು. ಆರೆಂಟು ತಿಂಗಳು ಉಳಿತಾಯದ ಮೇಲೆಯೇ ಜೀವನ ನಡೆಯಿತು. ಕೂಡಿಟ್ಟ ಹಣ ಜಾಲರಿಯಲ್ಲಿಯ ನೀರಿನಂತೆ ಸೋರಿಹೋಗುತ್ತಿತ್ತು. ಎಲ್ಲಿ ಹೋದರೂ ಕೆಲಸ ದೊರಕಲಿಲ್ಲ. ಆತ ಎಂಥ ಕೆಲಸಕ್ಕೂ ಸಿದ್ಧನಾದ. ಯಾವುದೂ ಸಿಗಲಿಲ್ಲ. ಗಂಡ ಹೆಂಡತಿ ಹೌಹಾರಿದರು. ಭಾರತಕ್ಕೆ ಬಂದರೆ ಯಾವ ಮುಖ ತೋರಿಸುವುದು? ಇಲ್ಲಿಯಾದರೂ ಅವಕಾಶ ಬೇಕಲ್ಲವೇ?

ಇಬ್ಬರೂ ಕುಳಿತು ಚಿಂತೆ ಮಾಡಿದರು. ಎಲ್ಲವನ್ನೂ ಖಾಲಿ ಮಾಡಿ ಭಾರತಕ್ಕೆ ಮರಳಿಬಿಡುವುದೇ? ಇಲ್ಲ, ಪರಿಸ್ಥಿತಿಯನ್ನು ಎದುರಿಸಿ ನಿಂತು ಹೋರಾಡುವುದೇ? ಎರಡನೆಯದೇ ಸರಿ ಎಂದು ತೀರ್ಮಾನಿಸಿದರು. ಮನೆಯ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿತ್ತು. ಮನೆಯ ವಿದ್ಯುಚ್ಛಕ್ತಿ ಬಿಲ್ ಕಟ್ಟದಿದ್ದುದರಿಂದ ಸರಬರಾಜು ಬಂದಾಗಿತ್ತು. ಆಗಲೇ ಡಿಸೆಂಬರ್ ತಿಂಗಳು ಕಾಲಿಡುತ್ತಿತ್ತು. ಹೊರಗಡೆ ತುಂಬ ಚಳಿ, ಶೂನ್ಯ ತಾಪಮಾನದ ಹತ್ತಿರ ಉಷ್ಣತೆ.

ವಿದ್ಯುತ್ ಇಲ್ಲದ ಕಾರಣ ಮನೆಯನ್ನು ಕಾಯಿಸುವ ಉಪಕರಣ ಉಪಯೋಗಿಸುವಂತಿಲ್ಲ. ಪಶ್ಚಿಮದ ಮೂಲೆಯ ಕೊಠಡಿ ಇದ್ದುದರಲ್ಲೇ ಬೆಚ್ಚಗಾಗಿದ್ದುದು. ಪುಟ್ಟ ಮಗುವನ್ನು ಕರೆದುಕೊಂಡು ಮೂವರೂ ಅದೇ ಕೋಣೆಯಲ್ಲಿ ಇರತೊಡಗಿದರು. ರಾಧಿಕಾ ತಾನು ಕೊಂಡಿದ್ದ ಆಭರಣಗಳನ್ನು ಮಾರಿದಳು, ಮನೆಯ ಅಲಂಕಾರಕ್ಕೆ ಪ್ರೀತಿಯಿಂದ ಕೊಂಡಿದ್ದ ಸೋಫಾ ಸೆಟ್ಟು, ರತ್ನಗಂಬಳಿಯನ್ನು ಕೊಟ್ಟಾಯಿತು. ಗಂಡ-ಹೆಂಡತಿ ಇಬ್ಬರೂ ಕುಳಿತು ಪಟ್ಟಿ ಮಾಡಿದರು. ನಮಗೆ ತೀರಾ ಅವಶ್ಯಕವಾದ ವಸ್ತುಗಳಾವವು? ಯಾವ ವಸ್ತುಗಳು ಇಲ್ಲದಿದ್ದರೂ ನಡೆಯುತ್ತದೆ?

ಯಾವ ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು? ಪಟ್ಟಿ ತಯಾರಾದ ಮೇಲೆ ಅವರಿಗೇ ಆಶ್ಚರ್ಯವಾಯಿತು. ತಾವು ಮೊದಲೇ ಹೀಗೆ ಯೋಚಿಸಿದ್ದರೆ ಎಷ್ಟೊಂದು ಉಳಿಸಬಹುದಿತ್ತಲ್ಲ ಎಂದು. ತಮ್ಮ ಪಟ್ಟಿಯಂತೆಯೇ ಅಗತ್ಯಗಳನ್ನು ಕಡಿಮೆ ಮಾಡಿ ಬದುಕತೊಡಗಿದರು. ನಿಧಾನವಾಗಿ ಅದೇ ಜೀವನ ಪದ್ಧತಿಯಾಯಿತು. ಪರಿಚಯದ ಗುಜರಾತಿ ವ್ಯಾಪಾರಸ್ಥರು ರಾಧಿಕಾಳಿಗೆ ತಮ್ಮ ಅಂಗಡಿಯಲ್ಲಿ ಕ್ಯಾಶಿಯರ್ ಕೆಲಸ ಕೊಟ್ಟರು. ಸ್ವಲ್ಪ ಜೀವನ ಹಗುರಾಯಿತು. ಕೆಲ ತಿಂಗಳುಗಳ ನಂತರ ಆಕೆಯ ಗಂಡನಿಗೂ ಕೆಲಸ ದೊರಕಿತು. ಮತ್ತೆ ಜೀವನದ ರೈಲು ಹಳಿಯ ಮೇಲೆ ಬಂತು.

ಈಗ ಅವರಿಗೆ ಕಳೆದ ಎರಡು ವರ್ಷಗಳಿಂದ ತಮ್ಮ ಅವಶ್ಯಕತೆಗಳನ್ನು ನಿಯಂತ್ರಿಸುವುದು ಅಭ್ಯಾಸವಾಗಿದೆ. ರಾಧಿಕಾ ಹೇಳಿದಳು,  `ನೀವು ಆವಾಗ ಹೇಳುತ್ತಿದ್ದರಲ್ಲ ಸರ್, ಜೀವನಕ್ಕೆ ಎರಡೇ ಹಾದಿ. ಒಂದು ನಮ್ಮ ಅಗತ್ಯಗಳನ್ನು ಹಿಗ್ಗಿಸಿಕೊಳ್ಳುತ್ತಾ ಅವನ್ನು ತೂಗಿಸಲು ಹೆಣಗುತ್ತ ಕೊರಗುವುದು. ಇನ್ನೊಂದು, ನಮ್ಮ ಅವಶ್ಯಕತೆಗಳನ್ನು ಮಿತಿಯಲ್ಲಿರಿಸಿಕೊಂಡು ಸಂತೋಷ ಪಡುವುದು. ನಾವೀಗ ಎರಡನೆಯದನ್ನೇ ಮಾಡುತ್ತ ಸಂತೋಷದಲ್ಲಿದ್ದೇವೆ. ಇದು ತಾವೇ ನಮ್ಮ ಮನಸ್ಸಿನಲ್ಲಿ ಹಾಕಿದ ಬೀಜ ಸರ್.` ನನಗೆ ತುಂಬ ಸಂತೋಷವಾಯಿತು. ಒಳ್ಳೆಯ ಬೀಜ ಸದಾ ಒಳ್ಳೆಯ ಫಲದ ಮರಗಳನ್ನೇ ಕೊಡುತ್ತದೆ.


ನಮ್ಮ ಜೀವನದ ಬಹುಪಾಲು ಚಿಂತೆ, ಸಂಕಟಗಳು ನಮ್ಮ ಅವಶ್ಯಕತೆಗಳನ್ನು ಹೆಚ್ಚಿಸಿಕೊಳ್ಳುತ್ತ ಅವುಗಳನ್ನು ಪಡೆಯಲು ಮಾಡುವ ಒದ್ದಾಟಗಳು. ಅದಕ್ಕೇ ಗಾಂಧೀಜಿ ಹೇಳಿದರು  ನಮ್ಮಲ್ಲಿ ಎಲ್ಲರ ಅವಶ್ಯಕತೆಗಳನ್ನು ಪೂರೈಸುವಷ್ಟು ಸಾಮಗ್ರಿ ಇದೆ ಆದರೆ ಎಲ್ಲರ ಆಸೆಬುರುಕತನವನ್ನು ಪೂರೈಸುವಷ್ಟಿಲ್ಲ . ಈ ಕೊಳ್ಳುಬಾಕತನದ ಸಂಸ್ಕೃತಿಯ ಕಬಂಧಬಾಹುಗಳಿಂದ ಪಾರಾಗುವುದು ಬಹುಮುಖ್ಯ
***************


೧೪ july ೨೦೧೧
ಪ್ರವಾಸಿ ಮಂದಿರ

ಇಬ್ರಾಹಿಂ ಎಂಬುವನು ಬಾಲ್ಕ ದೇಶದ ರಾಜನಾಗಿದ್ದ. ಅವನು ಮಹಾಶೂರ. ಅವನ ವಿರುದ್ಧ ಹೋರಾಡಲು ಎಲ್ಲರೂ ಹೆದರುತ್ತಿದ್ದರು.ಹೋರಾಟ ಮಾಡುವುದು ದೂರವಿರಲಿ, ಅವನೇ ತಮ್ಮ ರಾಜ್ಯದ ಮೇಲೆ ದಾಳಿ ಮಾಡದಿದ್ದರೆ ಸಾಕು ಎಂದು ಹೆದರಿ ಸುಮ್ಮನಿದ್ದರು.

ಅವನ ಐಶ್ವರ್ಯಕ್ಕೆ ಮಿತಿಯೇ ಇರಲಿಲ್ಲ. ಅವನಿಗೆ ಜೀವನದ ಸಕಲ ಸೊಗಸುಗಳೂ ಬೇಕು. ಅಷ್ಟೊಂದು ಹಣವಿದ್ದ ಮೇಲೆ ಸೊಗಸುಗಳು ಬಂದು ಬೀಳುವುದಕ್ಕೆ ಯಾವ ತಡೆ? ಅಧಿಕಾರ. ಅಂತಸ್ತು, ಶೌರ್ಯ, ಸಂಪತ್ತು ಎಲ್ಲ ಸೇರಿಕೊಂಡು ಅವನ ತಲೆ ತಿರುಗಿಸಿಬಿಟ್ಟಿದ್ದವು. ಅಹಂಕಾರ ಕ್ಷಣಕ್ಷಣಕ್ಕೂ ಏರುತ್ತಿತ್ತು. ಆದರೂ ಅವನ ಹೃದಯದಲ್ಲಿ ಏಲ್ಲೋ ತಾನು ಏಕಾಕಿ ಎಂಬ ಭಾವನೆ ಸಣ್ಣದಾಗಿ ಮೊಳೆಯುತ್ತಿತ್ತು.

ಒಂದು ದಿನ ರಾಜನು ದರ್ಬಾರು ಮುಗಿಸಿ ಅರಮನೆಗೆ ಬಂದು ವಿಶ್ರಾಂತಿಗೆಂದು ತನ್ನ ಕೊಠಡಿ ಕಡೆ ಹೊರಟಾಗ ಅಲ್ಲಿ ಒಬ್ಬ ಫಕೀರನನ್ನು ಅರಮನೆಯ ಸೇವಕರು ಕರೆದುಕೊಂಡು ಬಂದರು. ಆತನ ಹರಕು ಬಟ್ಟೆ, ಉದ್ದಗಡ್ಡ, ಕಂಕುಳಲ್ಲಿದ್ದ ಹರಕು ಚಾಪೆ ಇವುಗಳನ್ನು ನೋಡಿ `ಇವನನ್ನೇಕೆ ಇಲ್ಲಿ ಕರೆದುಕೊಂಡು ಬಂದಿರಿ?` ಎಂದ ಕೇಳಿದ ಇಬ್ರಾಹಿಂ.

`ಅವನ್ನೇನು ಕೇಳುತ್ತೀರಿ? ನಾನೇ ಹೇಳುತ್ತೇನೆ. ನನಗೂ ತಿರುಗಿ, ತಿರುಗಿ ಸಾಕಾಗಿ ಹೋಗಿದೆ. ಈ ಪ್ರವಾಸಿಗೃಹದಲ್ಲಿ ಸ್ವಲ್ಪ ಹೊತ್ತು ನಿದ್ರೆ ಮಾಡಬೇಕೆಂದು ಬಂದೆ` ಎಂದವನೇ ಫಕೀರ ಗೋಡೆಯ ಪಕ್ಕ ತನ್ನ ಹರಕು ಚಾಪೆಯನ್ನು ಹಾಸಿಬಿಟ್ಟು ಮಲಗಿಯೇ ಬಿಟ್ಟ. ಇವನ ನಡತೆಯನ್ನು ನೋಡಿ ಹೌಹಾರಿದ ರಾಜ. `ಏ, ಇದು ಪ್ರವಾಸಿ ಗೃಹವೇನೋ? ಇದು ನನ್ನ ಅರಮನೆ. ಏಳು ಮೇಲೆ, ಯಾರಲ್ಲಿ, ಇವನನ್ನು ಆಚೆ ತಳ್ಳಿ` ಎಂದು ಕೋಪದಿಂದ ಕೂಗಿದ.

ಆಗ ಆ ಫಕೀರ ಹೇಳಿದ,  `ಮಹಾರಾಜ ಕೋಪ ಬೇಡ. ನನ್ನ ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸು. ನೀನು ಬರುವುದಕ್ಕಿಂತ ಮೊದಲು ಈ ಅರಮನೆಯಲ್ಲಿ ಯಾರಿದ್ದರು?`
`ನನ್ನ ತಂದೆ, ಹಿಂದಿನ ಮಹಾರಾಜ` ಎಂದ ರಾಜ
 `ಈಗ ನಿಮ್ಮ ತಂದೆ ಎಲ್ಲಿದ್ದಾರೆ?`
 `ಅವರು ಕಾಲವಾಗಿ ಇಪ್ಪತ್ತು ವರ್ಷವಾಯಿತು.`
 `ನಿಮ್ಮ ತಂದೆಗೂ ಹಿಂದೆ ಈ ಅರಮನೆಯಲ್ಲಿ ಯಾರಿದ್ದರು?`
 `ನನ್ನ ಅಜ್ಜ, ಮತ್ತಾರು ಇದ್ದಾರು ಇಲ್ಲಿ?` ರಾಜನಿಗೆ ಕೋಪ ಏರುತ್ತಿತ್ತು.
 `ಈಗ ಅವರು ಎಲ್ಲಿದ್ದಾರೆ?`

 `ಅವರು ತೀರಿ ಹೋಗಿ ಅದೆಷ್ಟೋ ಕಾಲವಾಯಿತು, ಆ ವಿಚಾರ ಈಗೇಕೆ?`
 `ಇರಿ, ಇರಿ, ಕೋಪ ಬೇಡ. ನಿಮ್ಮಜ್ಜನಿಗಿಂತ ಮೊದಲು ಯಾರಿದ್ದರು ಅರಮನೆಯಲ್ಲಿ?`  `ಅಯ್ಯೋ ಫಕೀರ, ಈ ಅರಮನೆ ತಲೆತಲಾಂತರದಿಂದ ನಮಗೆ ಬಂದದ್ದು. ನಮ್ಮಜ್ಜನಿಗಿಂತ ಮೊದಲು ನಮ್ಮ ಮುತ್ತಜ್ಜ ವಾಸವಾಗಿದ್ದರು.`

`ಈಗ ಅವರು ಎಲ್ಲಿದ್ದಾರೆ?`  ಕೇಳಿದ ಫಕೀರ.
***************


ರೋಷದ ಮಾತು
ರಾಮಾಯಣದ ಯುದ್ಧ ಕಾಂಡದಲ್ಲಿ ಬರುವ ಸನ್ನಿವೇಶ ಇದು. ರಾವಣನ ಮಗನಾದ ಇಂದ್ರಜಿತ್ತು ಯುದ್ಧಕ್ಕೆ ಬಂದು ಮಾಯಾಯುದ್ಧವನ್ನು ಪ್ರಾರಂಭಿಸುತ್ತಾನೆ. ಆಕಾಶದ ಮೋಡಗಳ ಹಿಂದೆ ಅವಿತುಕೊಂಡು ಬಾಣಗಳ ಮಳೆಗರೆಯುತ್ತಾನೆ. ಕ್ಷಣಕ್ಷಣಕ್ಕೆ ದಿಕ್ಕುಗಳನ್ನು ಬದಲಿಸುತ್ತ ಕಪಿಸೇನೆಯನ್ನು ಕಂಗೆಡಿಸುತ್ತಾನೆ. ನಂತರ ಮಾಯಾಸೀತೆಯನ್ನು ಯುದ್ಧಭೂಮಿಗೆ ಕರೆತರುತ್ತಾನೆ. ಈ ವಿವರಗಳನ್ನು ವಾಲ್ಮೀಕಿ ಮುನಿಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

ಆತ ಆ ಮಾಯಾಸೀತೆಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾನೆ. ಪೆಟ್ಟು ತಾಳಲಾರದೇ ಆ ಸೀತೆ  ಅಯ್ಯೋ ರಾಮ, ರಾಮ  ಎಂದು ಕೂಗಿಕೊಂಡು ಅಳುತ್ತಾಳೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಎಳೆದು ಖಡ್ಗದಿಂದ ಹೊಡೆಯುತ್ತಾನೆ. ಈ ದೃಶ್ಯವನ್ನು ನೋಡಲಾಗದೇ ಆಂಜನೇಯ ಅವನಿಗೆ ಶಾಪಕೊಡುತ್ತಾನೆ, ಕಪಿಗಳನ್ನು ಸೇರಿಸಿಕೊಂಡು ಇಂದ್ರಜಿತ್ತುವಿನ ಕಡೆಗೆ ನುಗ್ಗುತ್ತಾನೆ.
ಆಗ ಇಂದ್ರಜಿತ್ತು ಮಾಯಾಸೀತೆಯನ್ನು ಕೊಂದು ಕೆಳಗೆ ಎಸೆದುಬಿಡುತ್ತಾನೆ. ಯಾವ ಹೆಂಗಸು ನೆಲಕ್ಕೆ ಹೀಗೆ ಬಿದ್ದರೆ ಅದು ದುಃಖಕಾರಕವೇ. ಅದರಲ್ಲೂ ಸೀತೆಯಂಥ ಸಾಧ್ವಿಗೆ ಈ ಸ್ಥಿತಿ ಬಂದಾಗ ಯಾರು ಸಹಿಸುತ್ತಾರೆ?

ಹನುಮಂತ ಕಪಿಸೇನೆಯನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ಇಂದ್ರಜಿತ್ತು ಸೀತೆಗೆ ಹೊಡೆದದ್ದನ್ನು ನಂತರ ಆಕೆಯನ್ನು ಕೊಂದುಹಾಕಿದ್ದನ್ನು ಹೇಳುತ್ತಾನೆ. ಈ ಮಾತನ್ನು ಕೇಳಿ ಶ್ರೀರಾಮನು ದುಃಖದಿಂದ ಬಸವಳಿದು, ಬುಡವನ್ನು ಕತ್ತರಿಸಿದ ಮರದಂತೆ ಎಚ್ಚರ ತಪ್ಪಿ ಬೀಳುತ್ತಾನೆ. ಅಣ್ಣ ಹೀಗೆ ಮೂರ್ಛೆ ಹೋಗಿ ಬಿದ್ದದ್ದನ್ನು ಕಂಡು ಲಕ್ಷ್ಮಣ ತನ್ನಣ್ಣನನ್ನು ಎರಡೂ ಕೈಗಳಿಂದ ಅಪ್ಪಿಕೊಂಡು ದುಃಖಪಡುತ್ತಾನೆ. ಅವನ ಮನಸ್ಸಿನ ರೋಷ ಭುಗಿಲ್ಲೆಂದು ಎದ್ದಿದೆ. ಅವನ ಮಾತುಗಳು ಆ ಕೋಪವನ್ನು ಪ್ರಕಟಿಸುತ್ತವೆ.

 ಶುಭೇ ವರ್ತ್ಮನಿ ತಿಷ್ಠಂತಂ ತ್ವಾಮಾರ್ಯ ವಿಜಿತೇಂದ್ರಿಯಮ್
ಅನರ್ಥೇಭ್ಯೋ ನ ಶಕ್ನೋತಿ ತ್ರಾತುಂ ಧರ್ಮೋ ನಿರರ್ಥಕಃ 
-ಸರ್ಗ 83, ಶ್ಲೋಕ 14.

ಅಣ್ಣಾ, ಜಿತೇಂದ್ರಿಯನಾಗಿ ಸದಾಚಾರದಲ್ಲೇ ನಿರತನಾದವನು ನೀನು. ಧರ್ಮವು ನಿನ್ನನ್ನು ಅನರ್ಥಗಳಿಂದ ಪಾರುಮಾಡಲು ಶಕ್ತವಾಗಲಿಲ್ಲ. ಧರ್ಮವೆಂಬುದು  ನಿರರ್ಥಕ.

ದುಃಖತಪ್ತನಾದ ಲಕ್ಷ್ಮಣನ ಬಾಯಿಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಜ್ಜನ, ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? 

ಧರ್ಮವೆಂಬುದು ನಿರರ್ಥಕವಾದದ್ದು. ನಮಗೆಲ್ಲ ಹೀಗೆ ಪದೇ ಪದೇ ಎನ್ನಿಸುತ್ತಿಲ್ಲವೇ? ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ!

ಲಕ್ಷ್ಮಣ ಇನ್ನೂ ಮುಂದುವರಿದು ಹಣವಿಲ್ಲದವನ ಪಾಡು ಯಾರಿಗೂ ಬೇಡ, ಎಲ್ಲವೂ ಹಣವಿದ್ದವರಿಗೆ ಮಾತ್ರ ದಕ್ಕುತ್ತದೆ ಎಂದು ಸಂಕಟಪಡುತ್ತಾನೆ.

 ಯಸ್ಯಾರ್ಥಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ
ಯಸ್ಯಾರ್ಥಾಃ ಸ ಚ ವಿಕ್ರಾಂತೋ ಯಸ್ಯಾರ್ಥಾಃ ಸ ಚ ಬುದ್ಧಿಮಾನ್
ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ 

 ಹಣವಿದ್ದವನಿಗೆ ಎಲ್ಲರೂ ಮಿತ್ರರೇ, ಎಲ್ಲರೂ ಬಂಧುಗಳೇ! ಈ ಲೋಕದಲ್ಲಿ
ಹಣವಂತನೇ ಪುರುಷ, ಹಣವಂತನೇ ಪಂಡಿತ; ಹಣವುಳ್ಳವನೇ ಪರಾಕ್ರಮಿ,
ಅವನೇ ಬುದ್ಧಿವಂತ! ಹಣವುಳ್ಳವನೇ ದೊಡ್ಡ ಮನುಷ್ಯ, ಅವನೇ ಗುಣಶಾಲಿ. ಇದು ರಾಮಾಯಣದ ಕಾಲದ ಮಾತೇ ಎಂದು ಆಶ್ಚರ್ಯವಾಗುತ್ತದಲ್ಲವೇ? ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಯಾವ ಕಾಲದಲ್ಲೂ ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದಿಂದಲೇ ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಧರ್ಮ ನಿಷ್ಪ್ರಯೋಜಕ ಎನ್ನಿಸೀತು. ಆದರೆ ಅದು ಸರಿಯಲ್ಲ. ಮುಂದೆ ರಾಮಾಯಣದಲ್ಲಿ ಇದೇ ಲಕ್ಷ್ಮಣ ಅಣ್ಣ ಶ್ರೀರಾಮನ ಧರ್ಮರಕ್ಷಣೆಗೆ ಒತ್ತಾಸೆಯಾಗಿ ನಿಂತು ಹೋರಾಡಿ ಅಧರ್ಮಿ ರಾವಣನ ಪರಿವಾರವನ್ನು ಕೊಂದದ್ದನ್ನು ನೋಡಿದ್ದೇವೆ. ಇಂದಿಗೂ ಕೆಲಕಾಲ ಮದಾಂಧರಾಗಿ, ಅಧರ್ಮದಿಂದ ಹಣಗಳಿಸಿ ಮೆರೆದು ಈಗ ಜೈಲಿನ ಕಂಬಿಗಳ ಹಿಂದೆ ತೋರಿಕೆಯ ಪಶ್ಚಾತ್ತಾಪದ ಕಣ್ಣೀರು ಸುರಿಸುವವರನ್ನೂ ಕಂಡಿದ್ದೇವೆ.


ಅಧರ್ಮ ದೀಪಾವಳಿಯಲ್ಲಿ ಮಕ್ಕಳು ಹಚ್ಚುವ ಬೆಂಕಿಯ ಕುಂಡದಂತೆ. ಅದು ಬಣ್ಣಬಣ್ಣದ ಕಿರಣಗಳನ್ನು, ಕಿಡಿಗಳನ್ನು ಹಾರಿಸುತ್ತ ಕಣ್ಣು ಕೋರೈಸುವಾಗ ತುಂಬ ಆಕರ್ಷಕವಾಗಿ ಕಾಣುತ್ತದೆ. ಆದರೆ ಅದು ಉರಿಯುವುದು ಕ್ಷಣಕಾಲ ಮಾತ್ರ. ಮತ್ತೆ ಅಂಧಕಾರ. ಧರ್ಮ, ದೇವರ ಮುಂದೆ ಹಚ್ಚಿದ ನಂದಾದೀಪ. ಅದು ಕಣ್ಣು ಕೋರೈಸಲಾರದು, ಆದರೆ ಹೆಚ್ಚು ಕಾಲ ಬದುಕುವಂಥದ್ದು, ನೆಮ್ಮದಿ ನೀಡುವಂಥದ್ದು. ಅದು ನಮಗೆ ಬೇಕಾದದ್ದು.
************


ಸಂಯಮವುಳ್ಳ ಶಕ್ತಿ 

ಅದೊಂದು ಕರಾಟೆ ತರಬೇತಿ ನೀಡುವ ಶಾಲೆ. ಆ ಶಾಲೆಯ ಮುಖ್ಯಗುರುಗಳು ಈ ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ತಮ್ಮ ಶಿಷ್ಯರಿಗೆಲ್ಲ ಆದರ್ಶಪ್ರಾಯರಾದವರು. ಅವರಿಗೆ ಕರಾಟೆಯ ಪಾಠ ಹೊಟ್ಟೆಪಾಡಿನ ಉದ್ಯೋಗವಾಗಿರಲಿಲ್ಲ, ತರುಣ, ತರುಣಿಯರ ಜೀವನವನ್ನು ಪರಿಷ್ಕಾರಗೊಳಿಸುವ ಒಂದು ಕ್ರಿಯೆಯಾಗಿತ್ತು.

ಹಲವಾರು ಮಕ್ಕಳು, ತರುಣರು ಇಲ್ಲಿ ಕರಾಟೆ ಕಲಿಯುತ್ತಿದ್ದರು. ಒಬ್ಬ ಹುಡುಗ ಈ ಗುರುಗಳ ಹತ್ತಿರ ತನ್ನ ಐದನೇ ವಯಸ್ಸಿನಿಂದ ಕರಾಟೆ ಕಲಿಯಲು ಬರುತ್ತಿದ್ದ. ಹದಿನೈದು ವರ್ಷಗಳ ನಿರಂತರ ಪರಿಶ್ರಮದ ಸಾಧನೆಯಿಂದ ಆತ ಅತ್ಯಂತ ಶ್ರೇಷ್ಠ ಕರಾಟೆ ಪಟುವಾಗಿ ಹೊಮ್ಮಿದ. ಅತ್ಯಂತ ಶ್ರೇಷ್ಠ ಕರಾಟೆ ಸಾಧನೆ ಮಾಡಿದವನಿಗೆ  ಬ್ಲ್ಯಾಕ್ ಬೆಲ್ಟ್  ಅಂದರೆ ಕಪ್ಪುಪಟ್ಟಿಯನ್ನು ನೀಡಲಾಗುತ್ತದೆ.

ಅದನ್ನು ವಿಶೇಷ ಸಮಾರಂಭದಲ್ಲಿ ನೀಡಲು ಆಯೋಜಿಸಲಾಗಿತ್ತು. ಅದು ಆ ತರುಣನ ಕರಾಟೆ ಜೀವನದ ಮರೆಯಲಾಗದ ಸಂದರ್ಭ. ಆತ ತುಂಬ ಖುಷಿಯಾಗಿದ್ದ. ಆ ದಿನವೂ ಬಂತು.

ಕಾರ್ಯಕ್ರಮವನ್ನು ನೋಡಲು ತುಂಬ ಜನ ಬಂದಿದ್ದರು. ಹುಡುಗ ಎದ್ದು ತನ್ನ ಕಪ್ಪು ಪಟ್ಟಿಯನ್ನು ಪಡೆಯಲು ಗುರುವಿನ ಪೀಠದತ್ತ ಸಾಗಿದ.

`ಕಪ್ಪುಪಟ್ಟಿ ಪಡೆಯುವ ಎ್ಲ್ಲಲ ಅರ್ಹತೆಯನ್ನು ನೀನು ಪಡೆದುಕೊಂಡಿರುವುದು ಸಂತೋಷ, ಆದರೆ ಅದನ್ನು ಪಡೆಯುವುದಕ್ಕೆ ಮುನ್ನ ಇನ್ನೊಂದು ಮಹತ್ವದ ಪರೀಕ್ಷೆಯಲ್ಲಿ ಉತ್ತಿರ್ಣನಾಗಬೇಕು`  ಎಂದರು ಗಂಭೀರವಾಗಿ ಗುರುಗಳು.

`ನಾನು ಸಿದ್ಧವಾಗಿದ್ದೇನೆ ಗುರುಗಳೇ`  ಎಂದ ಶಿಷ್ಯ. ಬಹುಶಃ ಮತ್ತೊಂದು ದೈಹಿಕ ಪರೀಕ್ಷೆ ಇದ್ದಿರಬೇಕು ಎಂದು ಭಾವಿಸಿದ.`ಈಗ ನಾನು ಕೇಳುವ ಬಹುಮುಖ್ಯವಾದ ಪ್ರಶ್ನೆಗೆ ನೀನು ಸರಿಯಾದ ಉತ್ತರ ನೀಡಬೇಕು. ಈ ಕಪ್ಪುಪಟ್ಟಿಯ (ಬ್ಲ್ಯಾಕ್ ಬೆಲ್ಟ್ )  ನಿಜವಾದ ಅರ್ಥವೇನು?`

`ಗುರುಗಳೇ ಬಂದು ರೀತಿಯಲ್ಲಿ ಇದು ಮಹಾನ್ ಪ್ರಯಾಣದ ಅಂತಿಮ ಹಂತ. ದೀರ್ಘ ಕಾಲದ ಪರಿಶ್ರಮದ ಕಲಿಕೆಗೆ ದೊರೆತ ಪಾರಿತೋಷಕ.`ಗುರುಗಳು ಕ್ಷಣಕಾಲ ಯಾವ ಮಾತೂ ಆಡದೇ ನಿಂತು ನಂತರ ನಿಧಾನವಾಗಿ ಹೇಳಿದರು, `ನೀನು ಇನ್ನೂ ಕಪ್ಪು ಪಟ್ಟಿಗೆ ಸಿದ್ಧನಾಗಿಲ್ಲ, ಇನ್ನೊಂದು ವರ್ಷ ಪ್ರಯತ್ನಮಾಡಿ ಮರುವರ್ಷ ಬಾ.`
ಒಂದು ವರ್ಷದ ನಂತರ ಮತ್ತೆ ತರುಣ ಮೊಣಕಾಲೂರಿ ಗುರುವಿನ ಮುಂದೆ ಕಪ್ಪು ಪಟ್ಟಿಗಾಗಿ ಕುಳಿತ.

`ಈಗ ಹೇಳು ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`  ಕೇಳಿದರು ಗುರುಗಳು.  `ಪರಿಶ್ರಮ ಸಾರ್ಥಕವಾದದ್ದರ ಸಂಕೇತ ಈ ಕಪ್ಪುಪಟ್ಟಿ` ಎಂದು ನುಡಿದ ಶಿಷ್ಯ.
ಗುರು ಮತ್ತೆ ಕ್ಷಣಕಾಲ ಸುಮ್ಮನಿದ್ದು ತಲೆ ಅಲ್ಲಾಡಿಸಿ ಅಸಮ್ಮತಿ ವ್ಯಕ್ತಪಡಿಸಿ,  `ಮಗೂ, ನೀನು ಇನ್ನೊಂದು ವರ್ಷ ಸಾಧನೆ ಮುನ್ನಡೆಸಿ ಬಾ` ಎಂದು ನಡೆದುಬಿಟ್ಟರು.

ಮುಂದಿನ ವರ್ಷ ಅದೇ ದಿನ ಗುರುಗಳು ಮತ್ತೆ ಅದೇ ಪ್ರಶ್ನೆ ಕೇಳಿದರು.  `ಈ ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`ಈ ಬಾರಿ ಹುಡುಗ ನಿಧಾನವಾಗಿ ಹೇಳಿದ,  `ಗುರುಗಳೇ ಈ ಕಪ್ಪುಪಟ್ಟಿ ಸಾಧನೆಯ ಅಂತ್ಯವಲ್ಲ, ಪ್ರಾರಂಭ.

ಸದಾ ಉನ್ನತದ ಸಾಧನೆಯೆಡೆಗೆ ತುಡಿಯುವ, ಎಂದಿಗೂ ಮುಗಿಯದ ಸಾಧನೆಯ ಪ್ರಯಾಣದ ಪ್ರಾರಂಭದ ಸಂಕೇತ. ಇದು ಅಸಾಮಾನ್ಯ ಶಕ್ತಿಯ ದ್ಯೋತಕವಲ್ಲ, ಶಕ್ತಿಯಿದ್ದೂ ಅದನ್ನು ದುರ್ಬಳಕೆ ಮಾಡದಿರುವ ಸಂಯಮದ ಸಂಕೇತ.`
ಗುರುಗಳು ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಸಿ,  `ಈಗ ನೀನು ಕಪ್ಪುಪಟ್ಟಿಗೆ ಅರ್ಹನಾಗಿದ್ದೀಯಾ` ಎಂದು ಅವನನ್ನು ಅಪ್ಪಿಕೊಂಡು ಕಪ್ಪುಪಟ್ಟಿ ನೀಡಿದರು.

ರಾಕ್ಷಸರ ಹಾಗೆ ವಿಪರೀತ ಶಕ್ತಿ ಪಡೆಯುವುದು ದೊಡ್ಡದಲ್ಲ, ಭಾರೀ ಶಕ್ತಿ ಇದ್ದೂ ಅದನ್ನು ರಾಕ್ಷಸರ ಹಾಗೆ ಬಳಸದಿರುವುದು ಬಹುದೊಡ್ಡ ಶಕ್ತಿ. ಅದೇ ಸಂಯಮ.ಸಂಯಮವಿಲ್ಲದ ಶಕ್ತಿ ಘಾತಕವಾದದ್ದು. ಅದಕ್ಕೇ ಕವಿ ಹೇಳಿದ್ದು,  ವೈರಾಗ್ಯ, ಕಾರುಣ್ಯ ಮೇಳನವೇ ಧೀರತನ . ಕರುಣೆ, ಮತ್ತು ವೈರಾಗ್ಯವಿಲ್ಲದ ಶಕ್ತಿ ಅಪಾಯಕಾರಿಯಾದದ್ದು.


ಶಕ್ತಿ ಇದ್ದೂ ಅದನ್ನು ವೈರಾಗ್ಯದಿಂದ, ಕರುಣೆಯಿಂದ ಕಾಣುವ ಶಕ್ತಿಯೇ ಧೀರತನ, ಅದರಿಂದಲೇ ಜಗತ್ತಿನ ಬೆಳವಣಿಗೆ, ರಕ್ಷಣೆ ಸಾಧ್ಯವಾಗುತ್ತದೆ.
**********


ಉಶೀನರ ಎಂಬ ಮಹಾ ದಾನಿ 
ನಮ್ಮ ದೇಶದಲ್ಲಿ ಅನೇಕ ದಾನಿಗಳು ಆಗಿ ಹೋಗಿದ್ದಾರೆ. ಅವರ ದಾನದ ಕಥೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ. ಆದರೆ ಕೆಲವೊಂದು ಪ್ರಸಂಗಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದಿಲ್ಲ. ಅಂಥ ಹೆಚ್ಚು ಪ್ರಚಾರ ಪಡೆಯದ ಒಬ್ಬ ದಾನಿ ಉಶೀನರ. ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ.

ಉಶೀನರ ಭೋಜನಗರದಲ್ಲಿ  ಒಂದು ಕಾಲದಲ್ಲಿ  ಮಹಾಪ್ರತಾಪಶಾಲಿಯಾದ ರಾಜನಾಗಿದ್ದ. ಆತ ತುಂಬ ಉದಾರಿಯೆಂತಲೂ, ಪರೋಪಕಾರಿ ಹಾಗೂ ಮಹಾದಾನಿ ಎಂತಲೂ ಪ್ರಸಿದ್ಧನಾಗಿದ್ದ.

ಇವನ ದಾನಶೀಲತೆಯ ಕೀರ್ತಿ ಮೂರು ಲೋಕಗಳಲ್ಲೂ ಹರಡಿತ್ತು. ಈ ವಿಷಯ ದೇವತೆಗಳ ನಾಯಕನಾದ ದೇವೇಂದ್ರನನ್ನು ಮುಟ್ಟಿತು. ಬಹುಶಃ ಮಾನವರ ಸಾಧನೆಗಳು ದೇವತೆಗಳಲ್ಲೂ ಅಸೂಯೆಯನ್ನು ಉಂಟುಮಾಡುತ್ತಿದ್ದವೆಂದು ತೋರುತ್ತದೆ.

ಇಂದ್ರನಿಗೆ ಉಶೀನರನ ದಾನ ಮಾಡುವ ಮನಸ್ಸು ಯಾವ ಮಟ್ಟದವರೆಗೂ ಹೋಗಬಲ್ಲುದು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಈ ಪರೀಕ್ಷೆ ನಡೆಸುವುದಕ್ಕಾಗಿ ಆತ ಇತರ ದೇವತೆಗಳ ಸಹಾಯ ಕೇಳಿದ.

ಅಗ್ನಿಯನ್ನು ಕರೆದು ಒಂದು ಪಾರಿವಾಳದ ರೂಪವನ್ನು ಪಡೆಯಲು ಹೇಳಿದ. ತಕ್ಷಣ ಪಾರಿವಾಳದ ರೂಪದಲ್ಲಿ ಅಗ್ನಿ ನಿಂತ. ಇಂದ್ರ ಸ್ವತಃ ತಾನೇ ನಾಯಿಯ ರೂಪ ತಾಳಿ ಪಾರಿವಾಳವನ್ನು ಹಿಡಿಯಲು ಬೆನ್ನು ಹತ್ತಿದ.

ಗಾಬರಿಯಾದ ಪಾರಿವಾಳ ಹಾರುತ್ತ ಹಾರುತ್ತ ಉಶೀನರನ ಬಳಿಗೆ ಬಂದಿತು. ರಾಜ ತುಂಬ ದಯಾಳುವಲ್ಲವೇ? ಅದಕ್ಕೆ ಶರಣಾಗತಿಯನ್ನು ನೀಡಿದ. ಅದರ ಹಿಂದೆಯೇ ನಾಯಿಯೂ ಓಡಿ ಬಂತು. ತನಗೆ ಆಹಾರವಾಗಬೇಕಿದ್ದ ಪಾರಿವಾಳದ ಕಡೆಗೆ ನುಗ್ಗಲು ನೋಡಿತು. ಅದನ್ನು ಉಶೀನರ ತಡೆದು ನಿಲ್ಲಿಸಿದ.

ಆಗ ನಾಯಿ ಹೇಳಿತು,  `ರಾಜಾ, ನೀನು ಮಾಡುವುದು ಅನ್ಯಾಯ. ಅದು ನನ್ನ ಆಹಾರ. ಅಲ್ಲಿಂದ ಇಲ್ಲಿಯವರೆಗೂ ಅದನ್ನು ಅಟ್ಟಿಸಿಕೊಂಡು ಬಂದಿದ್ದೇನೆ. ನನಗೆ ಬೆಳಿಗ್ಗಿನಿಂದ ಯಾವ ಆಹಾರವೂ ದೊರೆತಿಲ್ಲ.

ಈ ಪಾರಿವಾಳವೇ ನನ್ನ ಇಡೀ ಮನೆಮಂದಿಗೆಲ್ಲ ಆಹಾರ. ಇದು ಸಿಗದಿದ್ದರೆ ನನ್ನ ಹೆಂಡತಿ, ಮಕ್ಕಳು ಮತ್ತು ನಾನು ಉಪವಾಸದಿಂದ ಸಾಯಬೇಕಾಗುತ್ತದೆ. ಆದ್ದರಿಂದ ಪಾರಿವಾಳವನ್ನು ನನಗೆ ಕೊಟ್ಟು ಬಿಡು.`

ರಾಜ ಈಗಾಗಲೇ ಪಾರಿವಾಳಕ್ಕೆ ರಕ್ಷಣೆಯ ಅಭಯವನ್ನು ನೀಡಿದ್ದಾಗಿದೆ. ಅದನ್ನು ನಾಯಿಗೆ ಒಪ್ಪಿಸುವುದು ಸಾಧ್ಯವಿಲ್ಲ. ಆದರೆ ನಾಯಿಯ ವಾದವೂ ಸರಿಯಾದದ್ದೇ. ಅದಕ್ಕೆ ತನ್ನ ಆಹಾರವನ್ನು ಪಡೆದುಕೊಳ್ಳುವ ಅಧಿಕಾರವಿದೆ.

ಪಾರಿವಾಳವನ್ನು ಅದಕ್ಕೆ ಕೊಡದಿದ್ದರೆ ನಾಯಿಗೆ ಅಪಚಾರ ಮಾಡಿದಂತಾಗುತ್ತದೆ. ಹೀಗೆ ಯೋಚಿಸಿ ಉಶೀನರ ನಾಯಿಗೆ ಹೇಳಿದ, `ಪಾರಿವಾಳಕ್ಕೆ ನಾನು ರಕ್ಷಣೆ ನೀಡಿದ್ದರಿಂದ ಅದನ್ನು ನಿನಗೆ ಕೊಡಲಾರೆ.

ಆದರೆ ನೀನೂ ಉಪವಾಸ ಬೀಳಬಾರದು. ಅದಕ್ಕೆ ಪಾರಿವಾಳದ ತೂಕದ ಮಾಂಸವನ್ನು ನನ್ನ ದೇಹದಿಂದ ಕೊಡುತ್ತೇನೆ` ಎಂದು ಹೇಳಿ ತಕ್ಕಡಿಯನ್ನು ತರಿಸಿ ಅದರ ಒಂದು ತಟ್ಟೆಯಲ್ಲಿ ಪಾರಿವಾಳವನ್ನಿಟ್ಟು ಮತ್ತೊಂದರಲ್ಲಿ ತನ್ನ ದೇಹದ ಭಾಗಗಳನ್ನು ಕತ್ತರಿಸಿ ಹಾಕುತ್ತ ಬಂದ.

ಅದೆಷ್ಟು ಮಾಂಸವನ್ನು ಹಾಕಿದರೂ ಪಾರಿವಾಳದ ತಟ್ಟೆ ಮೇಲಕ್ಕೇರುತ್ತಲೇ ಇಲ್ಲ! ಕೊನೆಗೆ ತಾನೇ ತಟ್ಟೆಯಲ್ಲಿ ಕುಳಿತು ತನ್ನ ಇಡೀ ದೇಹವನ್ನೇ ಸಮರ್ಪಿಸಿಕೊಂಡ. ಈ ಸರ್ವಾರ್ಪಣ ಭಾವವನ್ನು ಕಂಡು ಇಂದ್ರ, ಅಗ್ನಿ ತೃಪ್ತರಾಗಿ, ಪ್ರತ್ಯಕ್ಷವಾಗಿ ಅವನು ಮತ್ತೆ ಮೊದಲಿನಂತಾಗುವಂತೆ ವರ ನೀಡಿದರು. ಅವನ ಖ್ಯಾತಿ ಮತ್ತಷ್ಟು ಹೆಚ್ಚಿತು.

ಘನವಾದ ತತ್ವವೊಂದಕ್ಕೆ ದಿನರಾತ್ರಿ ಮನಸೋತು, ಬೇರೆ ಏನನ್ನೂ ಚಿಂತಿಸದೇ ಸದಾ ಅದೇ ತತ್ವಕ್ಕೇ ತನ್ನನ್ನು ತೆತ್ತುಕೊಂಡು ಜೀವಭಾರವನ್ನು ಮರೆತ ಇಂಥ ಮಹಾನುಭಾವರ ಜೀವನ ಅಸಾಮಾನ್ಯವಾದದ್ದು


Krupe: : Prajavani  – July 15, 2011
***********

ವಿಚಿತ್ರ ತೀರ್ಮಾನ 
ಅವನೊಬ್ಬ ಹತ್ತಿಯ ವ್ಯಾಪಾರಿ. ತಾನು ರೈತರಿಂದ ಹತ್ತಿಯನ್ನು ಕೊಂಡು, ಅದನ್ನು ಬಿಗಿಯಾಗಿ ಹಗ್ಗದಿಂದ ಕಟ್ಟಿ ದಿಂಡುಗಳನ್ನು ಮಾಡಿ ಪಟ್ಟಣಕ್ಕೆ ಒಯ್ದು ಹೆಚ್ಚಿನ ಹಣಕ್ಕೆ ಮಾರಿ ಬರುತ್ತಿದ್ದ. ಅವನ ಜೀವನ ಸುಖವಾಗಿ ಸಾಗುತ್ತಿತ್ತು.
ಒಂದು ದಿನ ಹೀಗೆ ಐವತ್ತು ಹತ್ತಿಯ ದಿಂಡುಗಳನ್ನು ಬಂಡಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಊಟಕ್ಕೆಂದು ಮರದ ಕೆಳಗೆ ಕುಳಿತ. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಮಲಗಿದ. ಆ ಮರದ ಕೆಳಗೆ ಒಂದು ಸುಂದರವಾದ ಬುದ್ಧನ ವಿಗ್ರಹ. ಅದರ ಮುಂದೆಯೇ ಮಲಗಿದ. ಎಚ್ಚರವಾದ ಮೇಲೆ ನೋಡುತ್ತಾನೆ,

ತನ್ನ ಬಂಡಿ ಪೂರ್ತಿ ಖಾಲಿಯಾಗಿದೆ. ಎಲ್ಲ ಹತ್ತಿಯ ದಿಂಡುಗಳನ್ನು ಯಾರೋ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ! ಯಾರನ್ನಾದರೂ ಕೇಳೋಣವೆಂದರೆ ಬುದ್ಧನ ವಿಗ್ರಹದ ಹೊರತು ಯಾರೂ ಅಲ್ಲಿ ಇಲ್ಲ. ಅವನು ತಕ್ಷಣವೇ ಹೋಗಿ ನ್ಯಾಯಾಧಿಕಾರಿಗೆ ದೂರು ಒಪ್ಪಿಸಿದ.

ಆ ನ್ಯಾಯಾಧೀಶ ಎಲ್ಲ ವಿಷಯವನ್ನು ಕೇಳಿ ತಿಳಿದುಕೊಂಡು ಒಂದು ತೀರ್ಮಾನಕ್ಕೆ ಬಂದ. ಆ ಹತ್ತಿಯ ದಿಂಡುಗಳನ್ನು ಬುದ್ಧನ ವಿನಾ ಇನ್ನಾರೂ ಕದ್ದಿರುವುದಕ್ಕೆ ಸಾಧ್ಯವಿಲ್ಲ, ಯಾಕೆಂದರೆ ಅಲ್ಲಿ ಮತ್ತಾರೂ ಇರಲಿಲ್ಲ. ಆದ್ದರಿಂದ ಬುದ್ಧನನ್ನು ನ್ಯಾಯಾಲಯಕ್ಕೆ ಕರೆತರುವಂತೆ ಅಪ್ಪಣೆ ಮಾಡಿದ. ಅಧಿಕಾರಿಗಳು ಕಷ್ಟಪಟ್ಟು ವಿಗ್ರಹವನ್ನು ಹೊತ್ತು ತಂದರು.

ನ್ಯಾಯಾಲಯದಲ್ಲಿ ಜನಸಂದಣಿ. ಇದೆಂಥ ವಿಚಾರಣೆ? ಬುದ್ಧನ ವಿಗ್ರಹ ಹತ್ತಿಯ ದಿಂಡುಗಳನ್ನು ಕಳವು ಮಾಡುವುದುಂಟೇ? ಒಂದು ವೇಳೆ ಬುದ್ಧನೇ ಕಳವು ಮಾಡಿದ್ದು ನಿಜವೆಂದು ತೀರ್ಮಾನವಾದರೆ ದಿಂಡುಗಳನ್ನು ವ್ಯಾಪಾರಿಗೆ ಯಾರು ಕೊಡುವವರು?

ನ್ಯಾಯಾಧೀಶ ಗಂಭೀರವಾಗಿ ಬಂದು ತನ್ನ ಆಸನದಲ್ಲಿ ಕುಳಿತ. ಎಲ್ಲರೂ ಕುತೂಹಲದಿಂದ ಕಲಾಪವನ್ನು ಗಮನಿಸುತ್ತಿದ್ದರು. ನ್ಯಾಯಾಧೀಶ ವ್ಯಾಪಾರಿಗೆ ಮತ್ತೊಮ್ಮೆ ತನ್ನ ತಕರಾರನ್ನು ವಿವರಿಸಲು ಹೇಳಿದ. ಆತ ಚಾಚೂ ತಪ್ಪದಂತೆ ಎಲ್ಲವನ್ನೂ ವಿವರಿಸಿ. ತನ್ನ ಕಳವಾದ ಮಾಲನ್ನು ಹೇಗಾದರೂ ಹುಡುಕಿಕೊಡುವಂತೆ ಬೇಡಿಕೊಂಡ. ನ್ಯಾಯಾಧೀಶ ಅದೇ ಗಂಭೀರತೆಯಿಂದ ನ್ಯಾಯಾಲಯದಲ್ಲಿ ಇಡಲಾಗಿದ್ದ ಬುದ್ಧನ ವಿಗ್ರಹಕ್ಕೆ ಕೇಳಿದ,  `ಈ ತಕರಾರಿನ ಬಗ್ಗೆ ನಿನಗೇನಾದರೂ ಹೇಳುವುದು ಇದೆಯೇ?`  ಜನರೆಲ್ಲ ಗೊಳ್ಳೆಂದು ನಕ್ಕರು. ವಿಗ್ರಹ ಮಾತನಾಡುವುದುಂಟೇ? ನ್ಯಾಯಾಧೀಶ ಮೇಜು ಕುಟ್ಟಿ ಹೇಳಿದ,  `ಸದ್ದು, ನ್ಯಾಯಾಲಯದಲ್ಲಿ ಈ ರೀತಿಯ ಗಲಾಟೆ ಆಗಕೂಡದು`.  ಜನ ಸ್ತಬ್ಧರಾದರು.

ಮತ್ತೆ ನ್ಯಾಯಾಧೀಶ ಬುದ್ಧನ ವಿಗ್ರಹದ ಕಡೆಗೆ ನೋಡಿ ಹೇಳಿದ,  `ನಿನಗೆ ಹೇಳುವುದು ಏನೂ ಇಲ್ಲದಿದ್ದರೆ ನಾನು ತೀರ್ಪು ನೀಡಬೇಕಾಗುತ್ತದೆ ಮತ್ತು ನಾನು ನೀಡುವ ತೀರ್ಪಿಗೆ ನೀನು ಬದ್ಧನಾಗಬೇಕಾಗುತ್ತದೆ.` ವಿಗ್ರಹ ಏನು ಹೇಳೀತು?

ನಿಧಾನವಾಗಿ ನ್ಯಾಯಾಧೀಶ ತೀರ್ಪು ಕೊಟ್ಟ.  `ಅಪರಾಧಿ ಬುದ್ಧನೇ. ಅವನೇ ಹತ್ತಿಯ ದಿಂಡುಗಳನ್ನು ಕದ್ದು ಬೇರೆಯವರಿಗೆ ಮಾರಿದ್ದಾನೆ. ಯಾಕೆಂದರೆ ಅಪರಾಧ ನಡೆದಾಗ ಅವನ ವಿನಾ ಮತ್ತಾರೂ ಇರಲೇ ಇಲ್ಲ. ಆದ್ದರಿಂದ ಮೂರು ದಿನದ ಒಳಗಾಗಿ ಆತ ಕದ್ದ ಮಾಲನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು.` ಜನಕ್ಕೆ ನಗು ತಡೆಯಲಾಗಲಿಲ್ಲ. ಈ ನ್ಯಾಯಾಧೀಶನ ಮೂರ್ಖತನಕ್ಕೆ ಅವರು ಕೈ ತಟ್ಟಿ ಜೋರಾಗಿ ನಕ್ಕರು.

ನ್ಯಾಯಾಲಯ ಗದ್ದಲಮಯವಾಯಿತು. ತಕ್ಷಣ ನ್ಯಾಯಾಧೀಶ ಹೇಳಿದ,  `ನಾನು ಆಗಲೇ ನಿಮಗೆ ತಾಕೀತು ಮಾಡಿದ್ದೆ, ನ್ಯಾಯಾಲಯದ ಗೌರವಕ್ಕೆ ಕುಂದುಬರದ ಹಾಗೆ ನಡೆದುಕೊಳ್ಳಬೇಕು ಎಂದು. ನೀವು ಅದಕ್ಕೆ ಭಂಗ ತಂದಿದ್ದೀರಿ. ಆದ್ದರಿಂದ ನಿಮಗೆಲ್ಲ ಶಿಕ್ಷೆ ನೀಡಲೇಬೇಕು. ಅಧಿಕಾರಿಗಳು ಇಲ್ಲಿರುವ ಎಲ್ಲರ ಹೆಸರು, ವಿಳಾಸಗಳನ್ನು ಬರೆದುಕೊಳ್ಳಬೇಕು. ಮತ್ತು ಪ್ರತಿಯೊಬ್ಬರೂ ಇನ್ನು ನಾಲ್ಕು ತಾಸಿನಲ್ಲಿ ಮೂರು ಮೂರು ಹತ್ತಿಯ ದಿಂಡುಗಳನ್ನು ದಂಡವಾಗಿ ತಂದು ನ್ಯಾಯಾಲಯಕ್ಕೆ ಒಪ್ಪಿಸಬೇಕು.`

ಅನಿವಾರ್ಯವಾಗಿ ಎಲ್ಲರೂ ಮೂರು ದಿಂಡುಗಳನ್ನು ತಂದಿಟ್ಟರು. ಮೂಟೆಗಳನ್ನು ಕಳೆದುಕೊಂಡ ವ್ಯಾಪಾರಿ ಈ ರಾಶಿಗಳೊಳಗೆ ತನ್ನ ದಿಂಡುಗಳನ್ನು ಗುರುತಿಸಿದ. ಯಾಕೆಂದರೆ ಅವನು ತನ್ನ ದಿಂಡುಗಳ ಮೇಲೆ ನೀಲಿ ಬಣ್ಣದ ಗುರುತು ಮಾಡಿದ್ದ. ನ್ಯಾಯಾಧೀಶನ ಬುದ್ಧಿವಂತಿಕೆಯಿಂದ ನಿಜವಾದ ಕಳ್ಳರು ಸಿಕ್ಕಿಬಿದ್ದರು.


ಕೆಲವೊಂದು ಬಾರಿ ಕೆಲವು ವಿಚಾರಗಳು ಮೇಲ್ನೋಟಕ್ಕೆ ವಿಚಿತ್ರ, ಅಸಂಬದ್ಧ ಎನ್ನಿಸಿದರೂ ಆಳದಲ್ಲಿ ನೋಡಿದಾಗ ಚಿಂತನೆ ಕಂಡುಬರುತ್ತದೆ. ಆದ್ದರಿಂದ ಯಾವುದೇ ಚಿಂತನೆ, ನಮ್ಮ ಮನಸ್ಸಿಗೆ ಸರಿ ತೋರಲಿಲ್ಲವೆಂದಾಗ ಅದನ್ನು ಅಪ್ರಸ್ತುತ, ಅಪ್ರಯೋಜಕ ಎಂದು ತಳ್ಳಿಹಾಕುವುದು ಬುದ್ಧಿವಂತಿಕೆಯ ಲಕ್ಷಣವಲ್ಲ.  22- July 11
************

ಆರ್ಥರ್ ಆಶ್ 
ಆರ್ಥರ್ ಆಶ್ ಟೆನಿಸ್ ಇತಿಹಾಸದಲ್ಲಿ ಬಹುದೊಡ್ಡ ಹೆಸರು. ಅದು ಬರೀ ಟೆನಿಸ್ ನಲ್ಲಿ ಮಾತ್ರ ದೊಡ್ಡ ಹೆಸರಲ್ಲ. ಆಶಾವಾದಕ್ಕೆ, ಸಮಾಜ ಸುಧಾರಣೆಗೆ, ಅಸಮಾನತೆಯ ನಿವಾರಣೆಗೆ ತನ್ನನ್ನು ಆಳವಾಗಿ ತೊಡಗಿಸಿಕೊಂಡ ಹೆಸರು ಆರ್ಥರ್ ಆಶ್.

ಆರ್ಥರ್ ಆಶ್ ಹುಟ್ಟಿದ್ದು ಜುಲೈ 10, 1948 ರಂದು ಅಮೆರಿಕೆಯ ವರ್ಜಿನಿಯಾದ ರಿಚ್‌ಮಂಡ್‌ನಲ್ಲಿ. ತಂದೆ ಬ್ರೂಕ್‌ಫೀಲ್ಡ್ ಆಟದ ಮೈದಾನದ ಹೊರಗಿದ್ದ ಕಾರುಗಳನ್ನು ನಿಲ್ಲಿಸುವ ಸ್ಥಳದ ವಿಶೇಷ ಪೋಲೀಸ್ ಆಗಿದ್ದರು. ಮಗನನ್ನು ತುಂಬ ಪ್ರೀತಿಯಿಂದ ಆದರೆ ಶಿಸ್ತಿನಿಂದ ಬೆಳೆಸಿದರು. ಈ ಹುಡುಗ ಬೆಳೆದದ್ದೇ ಟೆನಿಸ್ ಮೈದಾನಗಳಲ್ಲಿ. ಮೈ ತುಂಬಿಕೊಳ್ಳದೇ ಕಡ್ಡಿಯ ಹಾಗೆ ಆರಡಿ ಒಂದು ಇಂಚು ಎತ್ತರಕ್ಕೆ ಬೆಳೆದ.

ತನ್ನ ಏಳನೇ ವಯಸ್ಸಿಗೆ ಟೆನಿಸ್ ಆಡಲು ಪ್ರಾರಂಬಿಸಿದ ಆಶ್, ಹದಿನೇಳನೇ ವಯಸ್ಸಿಗೆ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್ ಆದ. ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ವಿದ್ಯಾರ್ಥಿವೇತನ ಪಡೆದು ಹೋದ. ವರ್ಣಭೇದ ನೀತಿ ಹೆಚ್ಚಾಗಿದ್ದ ಕಾಲದಲ್ಲಿ ಈ ಕಪ್ಪು ಹುಡುಗ ಮುಂದೆ ಬೆಳೆಯುವುದು ತುಂಬ ಕಷ್ಟವಿತ್ತು. ಎಷ್ಟೋ ಟೆನಿಸ್ ಮೈದಾನಗಳಲ್ಲಿ ಈತನಿಗೆ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ ಅವನ ಏಕಾಗ್ರ ಚಿತ್ತ ಮತ್ತು ಸತತ ಪ್ರಯತ್ನ ಯಾವುದನ್ನೂ ಲೆಕ್ಕಿಸದೇ ಮುಂದೆ ನಡೆಸುತ್ತಿತ್ತು.

1966 ರಲ್ಲಿ ಆತ ಅಮೆರಿಕೆಯ ಡೆವಿಸ್ ಕಪ್ ತಂಡಕ್ಕೆ ಆಯ್ಕೆಯಾಗಿದ್ದ ಮೊದಲ ಕಪ್ಪು ವ್ಯಕ್ತಿಯಾಗಿದ್ದ. 1968 ರಲ್ಲಿ ಅಮೆರಿಕೆಯ ಓಪನ್ ಟೆನಿಸ್‌ನ ಚಾಂಪಿಯನ್ನಾಗಿ ಜಗತ್ತನ್ನು ಬೆರಗುಗೊಳಿಸಿದ. ಮುಂದೆ 1970 ರಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಚಾಂಪಿಯನ್ ಆದ. 1975 ರಲ್ಲಿ ಪ್ರಪಂಚದ ಅತ್ಯಂತ ಶ್ರೇಷ್ಠ ಹಾಗೂ ಪ್ರತಿಷ್ಠೆಯ ಇಂಗ್ಲೆಂಡಿನ ವಿಂಬಲ್ಡನ್ ಪ್ರಶಸ್ತಿಯನ್ನು ಆಗಿನ ಚಾಂಪಿಯನ್ ಆಗಿದ್ದ ಜಿಮ್ಮಿ ಕಾನರ್ಸನನ್ನು ಸೋಲಿಸಿ ಗೆದ್ದ. ಹಾಗೆ ಪ್ರಶಸ್ತಿ ಪಡೆದ ಮೊದಲ ಕರಿಯ ವ್ಯಕ್ತಿ ಎಂದು ಮನ್ನಣೆ ಪಡೆದ, ಪ್ರಪಂಚದ ನಂಬರ್ ಒಂದನೇ ಆಟಗಾರನಾದ.

ಇದಿಷ್ಟೇ ಆಗಿದ್ದರೆ ಅದೊಂದು ಕ್ರೀಡಾಪಟುವಿನ ಸಾಧನೆಯ ಕಥೆಯಾಗುತ್ತಿತ್ತು. ಆದರೆ ಆತ ವರ್ಣಭೇದ ನೀತಿಯ  ವಿರುದ್ಧ ಹೊರಾಡಿದ್ದೂ ಒಂದು ವಿಶೇಷ ಗಾಥೆ.

ಬಹಿಷ್ಕಾರವಿದ್ದರೂ ಆಗ ದಕ್ಷಿಣ ಆಫ್ರಿಕೆಗೆ ಹೋಗಿ ನೆದರ್ಲೆಂಡಿನ ಬಿಳಿಯ ಆಟಗಾರ ಆಕರ್‌ನೊಡನೆ ಸೇರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ. ಅಷ್ಟೇ ಅಲ್ಲ ಅಲ್ಲಿಯ ಜನರ ಮನಸ್ಸನ್ನು ಗೆದ್ದ. ಅವರು ಆತನಿಗೊಂದು ವಿಶೇಷ ಹೆಸರು ನೀಡಿದರು –  ಸಿಫೋ . ಝುಲು ಭಾಷೆಯಲ್ಲಿ ಸಿಫೋ ಎಂದರೆ  ಭಗವಂತ ನೀಡಿದ ಕಾಣಿಕೆ .

 1979 ರಲ್ಲಿ ಅವನಿಗೆ ಹೃದಯಘಾತವಾಗಿ ನಾಲ್ಕು ರಕ್ತನಾಳಗಳ ಬದಲಾವಣೆಯಂತಹ ಭಾರೀ ಶಸ್ತ್ರಚಿಕಿತ್ಸೆಯಾದರೂ ಪಾರಾಗಿ ಬದುಕಿದ. ಅಷ್ಟಾದರೂ ಅಮೆರಿಕೆಯ ತಂಡಕ್ಕೆ ತರಬೇತುದಾರನಾಗಿ ಮುಂದುವರೆದ. 1983 ರಲ್ಲಿ ಮತ್ತೊಮ್ಮೆ ಹೃದಯಘಾತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ. ಇದಕ್ಕಿಂತ ಹೆಚ್ಚಿನ ಆಘಾತವೆಂದರೆ 1988 ರಲ್ಲಿ ಅವನಿಗೆ ಭಯಂಕರವಾದ ಏಡ್ಸ್ ರೋಗ ತಗುಲಿದೆ ಎಂದು ಗೊತ್ತಾಯಿತು. ಬಹುಶಃ ಎರಡು ಬಾರಿ ಶಸ್ತ್ರಚಿಕಿತ್ಸೆಯಾದಾಗ ನೀಡಿದ ಯಾವುದೋ ರಕ್ತದಲ್ಲಿ ಬಂದ ಸೋಂಕು ಅದು. ಮುಂದೆ ಆರು ವರ್ಷ ಅದರೊಡನೆ ಹೋರಾಟ. ಏಡ್ಸ್ ರೋಗದ ವಿರುದ್ಧ ನಡೆದ ಹೋರಾಟಗಳಿಗೆಲ್ಲ ನೇತಾರನಾದ. ಇದರೊಂದಿಗೆ ತನ್ನ ಜೀವನ ಚರಿತ್ರೆ ಬರೆದ. ಅವನ ಗ್ರಂಥ,  `ಯಶಸ್ಸಿನೆಡೆಗೆ ಕಠಿಣ ದಾರಿ`  (ಎ ಹಾರ್ಡ್ ರೋಡ್ ಟು ಗ್ಲೋರಿ) 1,600 ಪುಟಗಳ ಬೃಹತ್ ಗ್ರಂಥ. ಇದು ಎಷ್ಟು ಮೆಚ್ಚಿಗೆ ಪಡೆಯಿತೆಂದರೆ ಅವನಿಗೆ ಅಮೆರಿಕೆಯ ಅನೇಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ನೀಡಲಾಯಿತು.


ಅವನಿಗಾದ ನೋವನ್ನು ಕಂಡು ಅಭಿಮಾನಿಯೊಬ್ಬ ಕೇಳಿದ,  `ಭಗವಂತ ನೀನೇಕೆ ಹೀಗೆ ಮಾಡಿದೆ ಎಂದು ಕೇಳಬಾರದೇ?`  ಅದಕ್ಕೆ ಆಶ್ ಕೊಟ್ಟ ಉತ್ತರ ಅಸಾಮಾನ್ಯ. ಅತ ಹೇಳಿದ,  `ಪ್ರಪಂಚದಲ್ಲಿ ಐದಾರು ಕೋಟಿ ಹುಡುಗರು ಟೆನಿಸ್ ಆಡಲು ಪ್ರಾರಂಭಿಸಿರಬೇಕು. ಅದರಲ್ಲಿ ಒಂದು ಐದಾರು ಲಕ್ಷ ತರುಣರು ರಾಜ್ಯ ಮಟ್ಟದಲ್ಲಿ, ಐದು ಸಾವಿರ ತರುಣರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಿರಬಹುದು. ಅವರಲ್ಲಿ ಕೇವಲ ಐವತ್ತು ಜನ ವಿಂಬಲ್ಡನ್‌ನ ಪ್ರಾಥಮಿಕ ಹಂತಕ್ಕೆ ಆಯ್ಕೆಯಾಗುತ್ತಾರೆ. ಕೇವಲ ಎಂಟು ಜನ ಕ್ವಾರ್ಟರ್ ಫೈನಲ್ಲಿಗೆ, ನಾಲ್ಕು ಜನ ಸೆಮಿ ಫೈನಲ್ಲಿಗೆ ಮತ್ತು ಕೊನೆಗೆ ಇಬ್ಬರು ಫೈನಲ್ಲಿಗೆ ತಲುಪುತ್ತಾರೆ. ಅವರಲ್ಲೊಬ್ಬ ಮಾತ್ರ ಚಾಂಪಿಯನ್ ಎನ್ನಿಸಿಕೊಳ್ಳುತ್ತಾನೆ. ಅಂತಹ ಒಬ್ಬ ಅದೃಷ್ಟಶಾಲಿ ನಾನಾಗಿದ್ದೆ. ಆ ವಿಂಬಲ್ಡನ್ ಪಾರಿತೋಷಕವನ್ನು ಕೈಯಲ್ಲಿ ಹಿಡಿದು ಸಂತೋಷದಲ್ಲಿ ತೇಲಾಡುತ್ತಿರುವಾಗ ನಾನು ಆಕಾಶದ ಕಡೆಗೆ ನೋಡಿ,  ಭಗವಂತಾ ನನಗೇಕೆ ಇಂಥ ಸಂತೋಷ ಕೊಟ್ಟೆ, ಎಂದು ಕೇಳಿದೆನೇ? ಈಗ ಏಕೆ ಈ ಪ್ರಶ್ನೆ ಕೇಳಲಿ?`  ಇಂಥ ಸಮತೋಲನ ಮನಃಸ್ಥಿತಿ ಹೊಂದಿದ್ದವನು ಆಶ್. ಅವನು 1993 ರ ಫೆಬ್ರವರಿ 6ರಂದು ಆತ ದೇಹ ಬಿಟ್ಟ. ಆದರೆ ಜನರ ಮನಸ್ಸಿನಲ್ಲಿ ಉಳಿದುಬಿಟ್ಟ. ಎಲ್ಲಿಂದ ಎಲ್ಲಿಗೆ ಜೀವನದ ಪಯಣ? ಸಾಧನೆಗೆ ಮಿತಿಗಳಿಲ್ಲ. ನಮ್ಮ ಮನಸ್ಸಿನ ಮಿತಿಗಳೇ ನಮ್ಮ ಜೀವನದ ಧೋರಣೆಗಳನ್ನು, ಸಾಧನೆಯ ಮಿತಿಗಳನ್ನು ನಿರ್ಧರಿಸುತ್ತವೆ. ನಾವೇ ಹಾಕಿಕೊಂಡ ಈ ಮಿತಿಗಳನ್ನು ಮೀರಲು ಪ್ರಯತ್ನಿಸೋಣ.
*********

ಮನತಿದ್ದಿದ ದೇವರನುಡಿ

ಮಾಸ್ತಿ ಅವರಿಗೆ ಆರು ಜನ ಹೆಣ್ಣು ಮಕ್ಕಳು. ಅಧಿಕಾರದಲ್ಲಿದ್ದಾಗಲೇ ಎಲ್ಲ ಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಈ ಘಟನೆ ನಡೆದದ್ದು ಆರನೇ ಮಗಳ ಮದುವೆಯ ಸಂದರ್ಭದಲ್ಲಿ. ಮದುವೆಯೇನೋ ಚೆನ್ನಾಗಿಯೇ ಆಯಿತು. ಇನ್ನು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂದರ್ಭ. ಆ ಹೊತ್ತಿಗೆ ತುಂಬ ಖರ್ಚಾಗಿ ಮಾಸ್ತಿಯವರ ಆರ್ಥಿಕ ಸ್ಥಿತಿ ಸ್ವಲ್ಪ ನಾಜೂಕಾಗಿತ್ತು.

ಅದಕ್ಕೆ ತಮ್ಮ ಹೆಂಡತಿ ಮತ್ತು ತಾಯಿಯನ್ನು ಕರೆದು ಹೇಳಿದರು, `ಮದುವೆಯ ಸಂಭ್ರಮಕ್ಕೇನೂ ಕಡಿಮೆಯಾಗಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ಯಾವುದು ಅವಶ್ಯವೋ ಅದನ್ನು ಮಾತ್ರ ಮಾಡಿ, ದುಂದು ಮಾಡುವುದು ಬೇಡ' ಇಷ್ಟು ಎಚ್ಚರಿಕೆ ನೀಡಿ ತಮ್ಮ ಪ್ರವಾಸಕ್ಕೆ ಹೋದರು. ಅವರು ಮರಳಿ ಬರುವುದರಲ್ಲಿ ತಯಾರಿಯೆಲ್ಲ ತುಂಬ ಅದ್ಧೂರಿಯಾಗಿಯೆ ಆಗಿದೆ. ಸಾಲ ಮಾಡುವಷ್ಟರ ಮಟ್ಟಿಗೆ ಖರ್ಚು ಹೆಚ್ಚಾಗಿದೆ. ಮಾಸ್ತಿಯವರಿಗೆ ರೇಗಿಹೋಯಿತು.

ಹೆಂಡತಿ ಕರೆದು,  'ನಾನು ನಿನಗೆ ಏನು ಹೇಳಿದ್ದೆ, ನೀನು ಏನು ಮಾಡಿದೆ? ನೀನು ಮನುಷ್ಯಳೇ? ಮೃಗಕ್ಕೂ, ನಿನಗೂ ಏನು ವ್ಯತ್ಯಾಸ' ಎಂದು ಅಬ್ಬರಿಸಿದರು. ಗಂಡನ ಈ ಅಪರೂಪದ ಕೋಪ ನೋಡಿ ಆಕೆ ಗಾಬರಿಯಾಗಿ ಮಾತನಾಡದೆ ನಿಂತುಬಿಟ್ಟರು. ಈ ಸಿಡಿಲಿನಂತಹ ಮಾತಿನ ಮಳೆ  ಕೇಳಿ ತಾಯಿ ಹೊರಬಂದರು,  'ಯಾಕೋ, ಸೀನೂ ಆಕೆಯನ್ನು ಬೈಯ್ಯುತ್ತಿದ್ದೀ? ಆಕೆಯದೇನೂ ತಪ್ಪಿಲ್ಲ. ತೀರ್ಮಾನ ನಾನೇ ತೆಗೆದುಕೊಂಡದ್ದು.

ಮಗುವನ್ನು ಹಾಗೆಯೇ ಗಂಡನ ಮನೆಗೆ ಕಳುಹಿಸುವುದಾಗುತ್ತೇನೋ? ನಿನ್ನ ಹೆಂಡತಿ ಬೇಡವೆಂದರೂ, ನಾನೇ ಹತ್ತು ಜನ ಸಂತೋಷಪಡುವಂತೆ ಆಗಲಿ ಎಂದು ತೀರ್ಮಾನಮಾಡಿ ಎಲ್ಲವನ್ನೂ ಸಂಪ್ರದಾಯದಂತೆಯೇ ಯೋಜಿಸಿದ್ದೇನೆ. ಸರಿ ತಾನೇ'  ಎಂದರು. ಎರಡನೇ ಬಾರಿಗೆ ಸಿಟ್ಟು ಉಕ್ಕಿ ಬಂತು ಮಾಸ್ತಿಯವರಿಗೆ.

ಆ ಕೋಪದಲ್ಲಿ ತಾವು ನಿಂದಿಸುತ್ತಿದ್ದುದು ಯಾರೆಂಬುದೂ ಮರೆತುಹೋಯಿತು, 'ಗೊಡ್ಡು ಸಂಪ್ರದಾಯಕ್ಕೆ ಕಟ್ಟುಬಿದ್ದ ಒಡ್ಡ ಹೆಂಗಸು ನೀನು. ನನ್ನ ಕಷ್ಟದ ಬಗ್ಗೆ ಸ್ವಲ್ಪವಾದರೂ ಕರುಣೆ ಇದೆಯೇ, ಕಾಳಜಿ ಇದೆಯೇ? ನೀನೂ ಒಬ್ಬ ತಾಯಿಯೇ' ಎಂದೆಲ್ಲಾ ಕೂಗಾಡಿ ತಮ್ಮ ಕೊಠಡಿಗೆ ಹೋಗಿ ಬಾಗಿಲು ಮುರಿದುಹೋಗುವಂತೆ ರಪ್ಪೆಂದು ಬಡಿದು ಮುಚ್ಚಿಕೊಂಡರು.

ಮರುದಿನ ಎಂದಿನಂತೆ ಸ್ನಾನಮಾಡಿ, ಮಡಿಯುಟ್ಟು ದೇವರ ಮನೆಗೆ ಹೋದರು. ಮನೆದೇವರನ್ನು ಸ್ಮರಿಸುತ್ತ ಆ ಶ್ರಿನಿವಾಸನನ್ನು ಸ್ತುತಿಸುವ ಶ್ಲೋಕಗಳನ್ನು ಹೇಳತೊಡಗಿದರು. ನಂತರ ನಿತ್ಯದಂತೆ ರಾಮಾಯಣದ ಪಾರಾಯಣ ಪ್ರಾರಂಭಿಸಿದರು. ಆಶ್ಚರ್ಯ! ದಿನವೂ ನಿರಾಯಾಸವಾಗಿ ಹೇಳುತ್ತಿದ್ದ ಶ್ಲೋಕಗಳು ಬಾಯಿಗೇ ಬರುತ್ತಿಲ್ಲ. ಪೀಠಿಕಾ ಶ್ಲೋಕಗಳೂ ನೆನಪಿಗೆ ಬರುತ್ತಿಲ್ಲ. ಸಾಲುಗಳೆಲ್ಲ ಮರೆತುಹೋಗಿವೆ! ದಿಟ್ಟಿಸಿ ತಮ್ಮ ಆರಾಧ್ಯ ದೈವವಾದ ಶ್ರಿನಿವಾಸನ ಚಿತ್ರ  ನೋಡಿದರು. ಅದು ಮಾತನಾಡಿದಂತೆ ತೋರಿತು, 'ನಿನ್ನನ್ನು ಹೊತ್ತು, ಸಾಕಿ, ಸಲಹಿ, ದೊಡ್ಡವನನ್ನಾಗಿ ಮಾಡಿ, ನಿನ್ನನ್ನೂ ಒಬ್ಬ ಮನುಷ್ಯನನ್ನಾಗಿ ಮಾಡಿ, ಸಂತೋಷ ಪಟ್ಟು, ನಿನಗಾಗಿಯೇ ಬದುಕಿರುವ ನಿನ್ನ ಅಮ್ಮನ ವಿಷಯದಲ್ಲಿ ಎಂಥದೋ ಒಂದು ಸಣ್ಣ ವಿಷಯಕ್ಕೆ, ಆ ಸೌಜನ್ಯವನ್ನೂ ಮರೆತು ಹಾಗೆ ಒರಟು ಮಾತನಾಡಿ ಸಣ್ಣವನಾದೆಯಲ್ಲ' ಎಂದಂತೆ ಭಾಸವಾಯಿತು. ತಕ್ಷಣ ಪುಸ್ತಕವನ್ನು ಕೆಳಗಿಟ್ಟು ಅಡುಗೆ ಮನೆಗೆ ಹೋದರು.

ಅಮ್ಮ ಒಲೆಯ ಮುಂದೆ ಕುಳಿತಿದ್ದರು. ಇವರೂ ಪಕ್ಕದಲ್ಲಿ ಕುಳಿತು 'ಅಮ್ಮೋ' ಎಂದರು. ಅಮ್ಮ ತಿರುಗಿ ನೋಡಿದರು. ಬಹುಶಃ ಅತ್ತು, ಅತ್ತು ಅವರ ಕಣ್ಣು ಊದಿಕೊಂಡಿದ್ದವು. ಆಕೆಯನ್ನು ನೋಡಿ ಕರುಳು ಕಿವುಚಿದಂತಾಯಿತು. 'ಅಮ್ಮೋ, ನಿನ್ನ ಮೇಲೆ ಅತ್ಯಂತ ಸಣ್ಣ ಕಾರಣಕ್ಕೆ ರೇಗಾಡಿದೆ. ಹಣ ಸಾಲದಲ್ಲಾ ಎಂಬ ಸಂಕಟದಿಂದ ಹಾಗೆಲ್ಲ ಮಾತನಾಡಿದೆ. ಕೋಪದಲ್ಲಿ ಏನೇನೋ ಎಂದುಬಿಟ್ಟೆ.

ಈಗ ಪಾರಾಯಣಕ್ಕೆ ಕುಳಿತರೆ  ಕ್ಷುಲ್ಲಕ ಕಾರಣಕ್ಕೆ ಹೆತ್ತ ಅಮ್ಮನನ್ನೇ ಬೈದು ಕಣ್ಣೀರು ತರಿಸಿದ ನೀನು ಈಗ ನಸುಗುನ್ನಿಯಂತೆ ನನ್ನೆದರು ಕುಳಿತು ಪಾರಾಯಣ ಮಾಡುತ್ತಿಯೇನೋ ಪಾಪಿ, ಎದ್ದು ತೊಲಗು ಎಂದು ದೇವರು ಹೇಳಿದಂತಾಯಿತು. ನಾನು ಮಾಡಿದ್ದು ಅಪರಾಧ, ಕ್ಷಮಿಸು'  ಎಂದು ಕಾಲು ಹಿಡಿದುಕೊಂಡು ಅತ್ತರು.

ಆಗ ಅವರ ಅಮ್ಮ,  'ಛೇ, ನನ್ನಪ್ಪ, ನೀನೇಕೆ ಸಂಕಟಪಡುತ್ತೀಯೋ, ನೀನು ನನಗೆ ಬೈಯ್ಯಲಾರದೆ ಇನ್ನಾರು ಮಾತನಾಡಬೇಕೋ? ನಿನ್ನೆ ಏನೆಂದಿಯೋ ಯಾವುದೂ ನೆನಪಿಲ್ಲ. ಎಲ್ಲ ಆಗಲೇ ಮರೆತುಬಿಟ್ಟೆ. ಹೋಗು ಶುದ್ಧ ಮನಸ್ಸಿನಿಂದ ಪಾರಾಯಣ ಮಾಡು'  ಎಂದು ತಲೆ ನೇವರಿಸಿದರು.

ಮರಳಿ ಬಂದು ದೇವರ ಮುಂದೆ ಕುಳಿತಾಗ ಯಾವ ಶ್ಲೋಕಗಳೂ ಮರೆಯಲಿಲ್ಲ. ಹೃದಯ ಹಗುರಾಯಿತು.ಇಂಥ ಘಟನೆಗಳು ನಮ್ಮ ಮನಸ್ಸುಗಳನ್ನು ಹದಗೊಳಿಸುತ್ತವೆ, ನಮ್ಮಲ್ಲಿ ಆಗಾಗ ಉಕ್ಕಿ ಬರುವ ಅಹಂಕಾರದ, ಕ್ರೌರ್ಯದ ಮಾತುಗಳಿಗೆ, ಕೃತಿಗಳಿಗೆ ತಡೆಯೊಡ್ಡುತ್ತವೆ.

ನಿರೂಪಣೆ: ಡಾ. ಗುರುರಾಜ ಕರ್ಜಗಿ, ‘ಕರುಣಾಳು ಬಾ ಬೆಳಕೆ’
*********

No comments:

Post a Comment