SEARCH HERE

Tuesday, 31 March 2020

ಆರೋಗ್ಯ ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ ಮೂಲವ್ಯಾಧಿ ayurveda medicines for piles


note: administering medication based on following articles is purely at your risk.  consult right doctors whom you believe and counter check on internet.

following articles/write up are by ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ 

ಶಿವಮೊಗ್ಗ  ದಾವಣಗೆರೆ  ಬೆಂಗಳೂರು  ಕಾಂಗ್ರಾ M-93438 55135
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
24.05.2020.       ಸಂಚಿಕೆ-145

✍️: 
ಮೂಲವ್ಯಾಧಿ ಮಾಹಾರೋಗ   ಭಾಗ-1

ಮೂಲವ್ಯಾಧಿಯನ್ನು ಮಹಾರೋಗ ಎನ್ನುವುದು ಏಕೆ?

ಗುದವಲಿಗಳ ಊತದ ಲಕ್ಷಣವಾಗಿ ಕಂಡುಬರುವ ಮೂಲವ್ಯಾಧಿ, ಮನುಷ್ಯನ ಶಾರೀರಿಕ ಬೆಳವಣಿಗೆಯನ್ನೇ ವಿಕೃತಗೊಳಿಸಿ ಅನೇಕ ರೋಗಗಳನ್ನು ತರುತ್ತದೆ ಆದ್ದರಿಂದ ಇದು ಮಹಾರೋಗ ಎಂದು ಕರೆಸಿಕೊಳ್ಳುತ್ತದೆ. 
ಹಾಗೆಯೇ,
ಅರಿಯಂತೆ ಇರಿಯುವ ಅಂದರೆ ಶತ್ರುವಿನಂತೆ ಚುಚ್ಚಿ ತೊಂದರೆ ಕೊಡುವ ಅಥವಾ ಕೊಲ್ಲುವ ರೋಗವಾದ್ದರಿಂದ ಆಯುರ್ವೇದದಲ್ಲಿ ಇದನ್ನು "ಅರ್ಶ" ಎಂದು ಕರೆಯುತ್ತಾರೆ.

ಅದರಲ್ಲೂ ಜನ್ಮಾರಭ್ಯ ಇರುವ ಆದರೆ ಕಣ್ಣಿಗೆ ಕಾಣದ "ಸಹಜ ಅರ್ಶಸ್ಸು" ವ್ಯಕ್ತಿಯ ಇಡೀ ಜೀವಮಾನದ ಶತ್ರು!!  ಶರೀರ ಸಹಜವಾಗಿ ಬೆಳವಣಿಗೆ ಆಗಲು ಬಿಡುವುದಿಲ್ಲ, ಅವನು ಸದಾ ಕಿರಿಕಿರಿಯಿಂದ ಇತರರ ಮೇಲೆ ಸಿಟ್ಟುಮಾಡುತ್ತಾ, ಪರಮ ಆಲಸ್ಯವುಳ್ಳವನೂ ಆಗಿರುತ್ತಾ, ಯೋಚನಾ ಮಗ್ನನಾಗಿ ಮತ್ತು ಕಾರ್ಯಪ್ರವೃತ್ತಿಯಲ್ಲಿ ನಿರಾಸಕ್ತನಾಗಿ ಇರುವಂತೆ ಮಾಡಿ ಅವನ ಬುದ್ಧಿಸಾಮರ್ಥ್ಯದ ಎಲ್ಲಾ ಯಶಸ್ಸುಗಳನ್ನೂ ಅಪಹರಿಸುತ್ತದೆ.

ಈ ಎಲ್ಲಾ ಕಾರಣಗಳಿಂದ ಮೂಲವ್ಯಾಧಿಯನ್ನು ಮಾಹಾವ್ಯಾಧಿ ಎಂದು ಗ್ರಹಿಸುತ್ತಾರೆ. 

ಅರ್ಶಸ್ಸಿನ ವಿಧಗಳು: 
ಮುಖ್ಯವಾಗಿ ಸಹಜ ಮತ್ತು ಜನ್ಮೋತ್ತರ ಎಂದು ಎರೆಡು ವಿಧ.

ಹಾಗೆಯೇ,

ಒಣಗಿದ ಮತ್ತು ರಕ್ತಸ್ರಾವಿ ಎಂತಲೂ ಇನ್ನೊಂದು ರೀತಿಯಲ್ಲಿ ವಿಭಾಗ ಮಾಡುತ್ತಾರೆ.

ಅರ್ಶಸ್ಸಿನ ಕಾರಣಗಳೇನು?
ಪೂರ್ವ ಜನ್ಮದ ಕರ್ಮಫಲಗಳನ್ನು ಅನುಭವಿಸಲು ಸಹಜ ಅರ್ಶಸ್ಸು ಬರುವುದು.

ವಿರುದ್ಧ ಆಹಾರ ಸೇವನೆ ಮತ್ತು ಜೀರ್ಣಶಕ್ತಿಯನ್ನು ಪರಿಗಣಿಸದೇ ಪದೇ ಪದೇ ತಿನ್ನುವುದರಿಂದ ಮಲ ಸಂಚಯ ಹೆಚ್ಚಾಗಿ ಒತ್ತಡ ಉಂಟಾಗಿ ರೋಗ ಬರುವುದು.

ಮಲ ಮೂತ್ರಾದಿಗಳನ್ನು ತಡೆದು ಕೆಲಸ ಮಾಡುವುದರಿಂದ ಒತ್ತಡ ಹೆಚ್ಚಾಗಿ ಅರ್ಶಸ್ಸನ್ನು ತರುವುದು.

ಅತಿಯಾದ ಲೈಂಗಿಕ ಕ್ರಿಯೆಗಳಿಂದ ಗುದವಲಿಗಳು ಬಿಗಿತಗೊಂಡು ಅರ್ಶಸ್ಸು ಬರುವುದು.

ಅತಿಯಾದ ಪ್ರಯಾಣಗಳಿಂದ, ದ್ವಿಚಕ್ರ ವಾಹನ ಓಡಿಸುವುದರಿಂದ ಗುದಕ್ಕೆ ಒತ್ತಡವಾಗಿ ಅರ್ಶಸ್ಸು ಬರುವುದು.

ಕುದುರೆ, ಒಂಟಿ, ಆನೆಗಳ ಪ್ರಯಾಣವೂ ಅರ್ಶಕಾರಕ.

ಸಹಜ ಅರ್ಶಸ್ಸಿನ ವಿವರಣೆಯನ್ನು ನಾಳೆ ನೋಡೋಣ.
********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
25.05.2020.       ಸಂಚಿಕೆ-146

✍️: 
ಮೂಲವ್ಯಾಧಿ ಮಹಾರೋಗ!!!   ಭಾಗ-2
ಸಹಜ ಅರ್ಶಸ್ಸು:
ತಂದೆ ತಾಯಿಗಳ ಬೀಜ ದೋಷಗಳಿಂದ, ವ್ಯಕ್ತಿಯ ಪೂರ್ವಜನ್ಮದ ಕರ್ಮಗಳ ಪ್ರಾಯಶ್ಚಿತ್ತ ರೂಪವಾಗಿಯೂ ಬರುವುದು ಸಹಜ ಅರ್ಶ. ಇದರ ವ್ಯಾಪಕತೆ ಬಹಳ ಗಂಭೀರ, ಅಂದರೆ ಕಣ್ಣಿಗೆ ಕಾಣದಂತೆ ಹುದುಗಿಕೊಂಡು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗಿ ರೋಗಿಯ ಹಾದಿತಪ್ಪಿಸುವ ಸಹಜ ಅರ್ಶಸ್ಸನ್ನು ಶುದ್ಧ ಮತ್ತು ಪರಿಣತ ಆಯುರ್ವೇದ ವೈದ್ಯ ಮಾತ್ರ ಗ್ರಹಿಸುತ್ತಾನೆ. ಒಟ್ಟಾರೆ ವ್ಯಕ್ತಿ ಈ ತೊಂದರೆಗಳಿಂದ ಪ್ರಾಯಶ್ಚಿತ್ತ ಅನುಭವಿಸಿ ಶುದ್ಧನಾಗುವಂತೆ ಆದರೆ ಅತ್ಯಂತ ತೀವ್ರವಾಗಿ ಕಾಡುವುದೇ ಸಹಜ ಅರ್ಶಸ್ಸು.

ಲಕ್ಷಣಗಳು: 
ಎಷ್ಟೇ ಆಹಾರ ಸೇವಿಸಿದರೂ ಹಿಗ್ಗದ ಶರೀರ
ಅಜೀರ್ಣ
ದುರ್ಬಲ ಅಗ್ನಿ
ಒಮ್ಮೆ ಗಟ್ಟಿಯಾಗಿಯೂ, ಒಮ್ಮೆ ನೀರಾಗಿಯೂ ಮಲ ಪ್ರವೃತ್ತಿ
ಹೊಟ್ಟೆಯುಬ್ಬರ
ಹೊಟ್ಟೆಯಲ್ಲಿ ಗುಡುಗುಡು ಶಬ್ದ
ಬಹಳ ಅಶಕ್ತನು
ಅಲ್ಪಶುಕ್ರ ಉಳ್ಳವನೂ
ಅಧಿಕ ಕಿರಿಕಿರಿ ಅಥವಾ ಕ್ರೋಧಿಯೂ
ಕಮ್ಮು, ಉಬ್ಬಸ, ಶೀತ, ಶಿರಶೂಲೆ ಉಳ್ಳವನೂ
ಎದೆಯಲ್ಲಿ ತಲ್ಲಣ, ಉಬ್ಬಳಿಕೆ ಉಳ್ಳವನೂ
ಸ್ವರಕ್ಕೆ ಹೆಚ್ಚಿನ ಬಲ ಇಲ್ಲದವನೂ
ತೇಜಸ್ಸು ಕಡಿಮೆಯಾಗಿರುವುದು
ಆಗಾಗ್ಗೆ ಬೆನ್ನು, ಪಕ್ಕೆ, ಸೊಂಟ ಹಿಡಿದುಕೊಳ್ಳುವುದೂ
ಸರ್ವದಾ ಯೋಚನೆಗಳುಳ್ಳ
ಪರಮಾಲಸಿಯೂ ಆಗಿರುತ್ತಾನೆ.

ಸಹಜವಾಗಿ ಈ ಅರ್ಶಸ್ಸು ಪುರುಷನಲ್ಲಿ ಬರುತ್ತದೆ.

ಸಹಜ ಅರ್ಶಸ್ಸಿನ ಚಿಕಿತ್ಸೆ:

ಈ ಅರ್ಶಸ್ಸು ಪ್ರಾಯಶ್ಚಿತ್ತ ರೂಪವಾಗಿ ಬರುವ ಕಾರಣ, ಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸುವುದೇ ಸೂಕ್ತ. ಮತ್ತು ಅನ್ಯರ ತೊಂದರೆಗಳಿಗೆ ಪ್ರೀತಿಯಿಂದ ಸ್ಪಂದಿಸುವುದು.

ಆದಾಗ್ಯೂ ನಮ್ಮ ಪ್ರಯತ್ನ ಎಂದರೆ, ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು.

ಹಸಿವನ್ನು ಗಮನಿಸಿ ಆಹಾರ ಸೇವಿಸುವುದು.

ಲೈಂಗಿಕಾಸಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು.

ಅಗ್ನಿಯನ್ನು ನಿಯಂತ್ರಣದಿಂದ ಹೆಚ್ಚಿಸುವ ಚಿಕಿತ್ಸೆಯೇ ಸೂಕ್ತ, ಇದನ್ನು ವೈದ್ಯರು ಮಾಡುತ್ತಾರೆ.
********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
26.05.2020.       ಸಂಚಿಕೆ-147
✍️: 
ಮೂಲವ್ಯಾಧಿ ಮಹಾರೋಗ!!!     ಭಾಗ-3
ಅರ್ಶಸ್ಸು ಬರುವ ಮುನ್ನಿನ ಲಕ್ಷಣಗಳು ಅಂದರೆ ಪೂರ್ವ ರೂಪಗಳು:

ತೇನಸ್ತು ಭವಿಷ್ಯತಾಂ ಪೂರ್ವರೂಪ.....ಪ್ರವಕ್ತರಾಣಿ ಭವಂನ್ತಿ ||
-ಸುಶ್ರುತ ಸಂಹಿತಾ

ಮುಂದೆ ಆರು ತಿಂಗಳು ಅಥವಾ ವರ್ಷದಲ್ಲೋ ಬರುವ ಮೂಲವ್ಯಾಧಿಯನ್ನು ಈಗಲೇ ಗುರುತಿಸಿಕೊಳ್ಳಬಹುದು.

ಹಾಗೆ ಗುರುತಿಸಿದರೆ ಯಾವುದೇ ಔಷಧವಿಲ್ಲದೇ ಗುಣಪಡಿಸಬಹುದು.

ಲಕ್ಷಣಗಳು:
• ಆಹಾರದಲ್ಲಿ ಆಶ್ರದ್ಧೆ(ಆಹಾರ ಬೇಡ ಎನ್ನಿಸುವುದು) 
• ಸೇವಿಸಿದ ಆಹಾರ ಕಷ್ಟದಿಂದ ಜೀರ್ಣವಾಗುವುದು
• ಹುಳಿತೇಗು
• ತೊಡೆಗಳಲ್ಲಿ ಅಶಕ್ತಿ
• ಆಧ್ಮಾನ (ಉಂಡ ನಂತರ ಹೊಟ್ಟೆಯುಬ್ಬರ)
• ಎಷ್ಟೇ ಆಹಾರ ಸೇವಿಸಿದರೂ ಶರೀರ ವರ್ಧಿಸದಿರುವುದು
• ಉದ್ಗಾರ (ಅತಿ ತೇಗು)
• ಕಣ್ಣಿನ ಸುತ್ತ ಊತ
• ಆಂತ್ರಕೂಜನ ( ಕರುಳೊಳಗೆ ಕೂಗಿನ ಸದ್ದು)
• ಆಗಾಗ ಗುದದಲ್ಲಿ ಕತ್ತರಿಸಿದಂತೆ ವೇದನೆ
• ರಕ್ತಹೀನತೆ
• ಗ್ರಹಣೀರೋಗ (ಆಗಾಗ ಅತಿ ಹಸಿವು, ಅಲ್ಪ ಹಸಿವು, ಹಸಿವು ನಾಶವಾಗುತ್ತಿರುವುದು, ಆಗಾಗ ಗಟ್ಟಿಮಲ, ದ್ರವಮಲ ಪ್ರವೃತ್ತಿ)
• ಕೆಮ್ಮು, ಉಬ್ಬಸ
• ಕ್ಷಯರೋಗ ಬಂದಂತೆ ಅನುಭವ
• ಭ್ರಮ(ತಲೆತಿರುಗುವುದು)
• ವಿಪರೀತ ಆಕಳಿಕೆ
• ಕೆಲಸದಲ್ಲಿ ನಿದ್ರೆ
• ಇಂದ್ರಿಯ ದೌರ್ಬಲ್ಯತೆ
• ಅಲ್ಪಮಲ
• ಉದರವ್ಯಾಧಿಯ ಭಯ

ಇವುಗಳು ಇರುವವರು ಶೀಘ್ರವಾಗಿ ಲಕ್ಷಣ ನಿವೃತ್ತಿಯಾಗುವವರೆಗೂ ಆಹಾರ ವಿಹಾರಗಳಲ್ಲಿ ಪಥ್ಯೆಯನ್ನು ಸ್ವಲ್ಪವೂ ತಪ್ಪಿಸದೇ ಪಾಲಿಸತಕ್ಕದ್ದು.

ಕೆಲವರಿಗೆ ಸಣ್ಣ ಪ್ರಮಾಣದ ಔಷಧಗಳು ಬೇಕಾಗುತ್ತವೆ.
ಹಾಗೆಯೇ ಬಿಡುವುದರಿಂದ ಇವೇಲಕ್ಷಣಗಳು ಹೆಚ್ಚಾಗಿ ಬಾಧಿಸುತ್ತಾ ಮೂಲವ್ಯಾಧಿಯು ಸೇರಿಕೊಳ್ಳುತ್ತದೆ. ಬಹು ಕಷ್ಟಕರವಾದ ಶತೃವನ್ನು ಶರೀರದಲ್ಲಿ ಇಟ್ಟುಕೊಂಡುನೂರಾರು ರೋಗಗಳಿಗೆ ತುತ್ತಾಗುವ ಬದಲು ಆಹಾರ ವಿಹಾರ ಔಷಧಗಳಿಂದ ಸಂಪೂರ್ಣವಾಗಿ ಪರಿಹರಿಸಿಕೊಳ್ಳಿ.
********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
27.05.2020.       ಸಂಚಿಕೆ-148
✍️: 
ಮೂಲವ್ಯಾಧಿ ಮಹಾರೋಗ   ಭಾಗ-4
ಮೂಲವ್ಯಾಧಿಯ ವಿಧಗಳು

ಸರ್ವೇಷಾಂ ಚ ಅರ್ಶಸಾಂ ಅಧಿಷ್ಠಾನಂ ಮೇದೋ, ಮಾಂಸಂ ತ್ವಕ್ ಚ |
-ಚರಕ ಸಂಹಿತಾ

ಶುಷ್ಕಸ್ರಾವಿ ಭೇದಾಶ್ಚ......|
-ವಾಗ್ಭಟಾಚಾರ್ಯ

ಎಲ್ಲಾ ವಿಧದ ಅರ್ಶಸ್ಸುಗಳು ಚರ್ಮ, ಮಾಂಸ ಮತ್ತು ಮೇದಸ್ಸುಗಳನ್ನು ಆಶ್ರಯಿಸಿಕೊಂಡಿರುತ್ತವೆ.

ಮೂಲವ್ಯಾಧಿಗಳು 2 ವಿಧ ಮತ್ತು ಗುದ ಹೊರತು ಬೇರೊಂದು ಸ್ಥಳದಲ್ಲಿ ಆಗುವ ಗಂಟುಗಳು ಒಟ್ಟು 3 ವಿಧ ಎಂದು ಗುರುತಿಸಬಹುದು.

1. ಶುಷ್ಕ ಅರ್ಶಸ್ಸು- ರಕ್ತಸ್ರಾವ ರಹಿತ
2. ಆರ್ದ್ರ ಅರ್ಶಸ್ಸು- ರಕ್ತಸ್ರಾವ ಸಹಿತ ಮತ್ತು
3. ಅನ್ಯ ಸ್ಥಾನ ಸ್ಥಿತ ಅರ್ಶಸ್ಸುಗಳು

ಅರ್ಶಸ್ಸಿನ ಗಂಟುಗಳು ಗುದವನ್ನು ಬಿಟ್ಟು ಬೇರೆ ಬೇರೆ ಸ್ಥಾನಗಳಲ್ಲೂ ಆಗುತ್ತವೆ, ಅವುಗಳನ್ನು ನಮ್ಮ ಭಾಷೆಯ ಮೂಲವ್ಯಾಧಿ ಅಥವಾ ಪೈಲ್ಸ್ ಎಂದು ಕರೆಯದೇ ಸ್ಥಾನಗಳನ್ನು ಆಶ್ರಯಿಸಿ ಬೇರೆ ಬೇರೆ ಶಬ್ದಗಳಿಂದ ಕರೆಯಲಾಗಿದೆ.

1. ಶುಷ್ಕ‌ ಅರ್ಶಸ್ಸು- ಅಂದರೆ ಗುದದ್ವಾರದಲ್ಲಿ ಬೆಳೆಯುವ ಒಣಗಿದ ಮೊಳಕೆಗಳು. ಇಲ್ಲಿ ರಕ್ತಸ್ರಾವ ಆಗುವುದಿಲ್ಲ. ಆದರೆ ವಿಪರೀತ ನೂವು, ಗುದದ್ವಾರದಲ್ಲಿ ಮರಳನ್ನು ಹಾಕಿದಂತೆ ಚುಚ್ಚುವಿಕೆ, ಉರಿ, ಬಿಗಿತ, ಸೊಂಟ ನೋವು, ಕಾಲುಗಳ ಸೆಳೆತ, ತಲೆ ತಿರುಗುವುದು, ಬಾಯಿ ಒಣಗುವುದು, ಒಣ. ಉಬ್ಬಳಿಕೆ ಬರುವುದು ಮುಂತಾದವು ಇರುತ್ತವೆ.
2. ಆರ್ದ್ರ ಅರ್ಶಸ್ಸು - ಅಂದರೆ ಮೇಲಿನ‌ಎಲ್ಲಾ ಲಕ್ಷಣಗಳ ‌ಜೊತೆಗೆ ಗುದದಲ್ಲಿ ತೀವ್ರ ಉರಿ ಮತ್ತು ಕೆಟ್ಟ ರಕ್ತವು ಬಹಳವಾಗಿ ಸ್ರಾವವಾಗುತ್ತದೆ. ಕೆಟ್ಟ ರಕ್ತವು ಗಾಢ, ಕಡುಗೆಂಪು, ಸಿಂಬಳದಂತೆ, ಒಮ್ಮೆಗೇ ಸುರಿದುಬಿಡುತ್ತದೆ. ವಿರಳವಾಗಿ ಶುದ್ಧ ರಕ್ತವೂ ಸುರಿಯುತ್ತದೆ, ಅದು ಕೆಂಪಾಗಿ, ಅತೀವ ಸುಸ್ತಿನಿಂದ ಕೂಡಿರುತ್ತದೆ.
3. ಅನ್ಯ ಸ್ಥಾನಸ್ಥಿತ ಅರ್ಶಸ್ಸು- ಅಂದರೆ ಗುದದ್ವಾರದ ಹೊರತಾಗಿ, ಮೂಲವ್ಯಾಧಿಯಂತೆಯೇ ಗಂಟುಗಳು ಬರುವ ಅರ್ಶಸ್ಸುಗಳನ್ನು ಮೂಲವ್ಯಾಧಿ ಎಂದು ಕರೆಯುವುದಿಲ್ಲ. ಉದಾ: ನಾಸಾರ್ಶಸ್ಸು, ಕರ್ಣಾರ್ಶಸ್ಸು, ಯೋನಿ ಅರ್ಶಸ್ಸು, ಶಿಶ್ನಾರ್ಶಸ್ಸು, ಕಂಠಾರ್ಶಸ್ಸು....ಮುಂತಾಗಿ ಕರೆಯುತ್ತಾರೆ. ಇವುಗಳ ಚಿಕಿತ್ಸೆ ಸ್ಥಾನಕ್ಕನುಗುಣ ಭಿನ್ನವಾಗಿರುತ್ತದೆ. ಇದರ ಮುಂದುವರಿದ ಭಾಗವನ್ನೇ ಕೀಲಕ ಅಥವಾ ಕಿಲಾಯ್ಡ್ಸ್ ಎಂದು ಕರೆಯುತ್ತೇವೆ.

*********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
28.05.2020.       ಸಂಚಿಕೆ-149

✍️: 
ಮೂಲವ್ಯಾಧಿ ಮಹಾರೋಗ. ಭಾಗ-5

ಮೂಲವ್ಯಾಧಿಯ ಪರಿಹಾರೋಪಾಯಗಳು. "ಔಷಧ ಚಿಕಿತ್ಸೆ "


ಮೂಲವ್ಯಾಧಿಯ ನಾಲ್ಕೂ ವಿಧದ ಪರಿಹಾರಗಳನ್ನು ವೈದ್ಯರ ಮುಖೇನವೇ ಪಡೆಯಬೇಕಾಗುತ್ತದೆ. ಯಾವ ಚಿಕಿತ್ಸೆಗಳೂ ಸ್ವಯಂ ಮಾಡಿಕೊಳ್ಳುವುದು ಯೋಗ್ಯವಲ್ಲ. ಆದರೆ 
ಅತ್ಯಾವಶ್ಯವಾಗಿ ಮೂಲವ್ಯಾಧಿಯನ್ನು ತಡೆಯಲು ಮತ್ತು ಪುನಃ ಮರುಕಳಿಸದಂತೆ ಮಾಡಲು ಅನೇಕ ವಿಧಾನಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಪಥ್ಯಾಪಥ್ಯ ವಿಭಾಗದಲ್ಲಿ ನಾಳೆ ಅವುಗಳನ್ನು ವಿಶದೀಕರಿಸಲಾಗುವುದು.

ಮೂಲವ್ಯಾಧಿಯ ಚತುರ್ವಿಧೋಪಾಯಗಳು:

ಚತುರ್ವಿಧೋ ಅರ್ಶಸಾಂ ಸಾಧನೋಪಾಯಃ | ತದ್ಯಾಥಾ "ಭೇಷಜಂ" "ಕ್ಷಾರ" "ಅಗ್ನಿಃ" "ಶಸ್ತ್ರಂ" ಇತಿ |
- ಸುಶ್ರುತ ಸಂಹಿತಾ

1. ಔಷಧ ಚಿಕಿತ್ಸೆ ಅಥವಾ ಔಷಧ ಕುಡಿಸುವುದು.
2. ಕ್ಷಾರ ಕರ್ಮ ‌ಅಥವಾ ಕ್ಷಾರ ಚಿಕಿತ್ಸೆ
3. ಅಗ್ನಿಕರ್ಮ ಅಥವಾ ಸುಡುವಿಕೆ
4. ಶಸ್ತ್ರಚಿಕಿತ್ಸೆ ಅಥವಾ ಕತ್ತರಿಸಿ ತೆಗೆಯುವುದು

ಇವು ನಾಲ್ಕು ಪರಿಹಾರೋಪಾಯಗಳು.

ಮೊದಲನೆಯದಾದ "ಔಷಧ ಚಿಕಿತ್ಸೆ"ಯಲ್ಲಿ ದಕ್ಷ ವೈದ್ಯನು ಪ್ರಧಾನವಾಗಿ ರೋಗಿಯ ಅಗ್ನಿಯನ್ನು ಗಮನದಲ್ಲಿಟ್ಟುಕೊಂಡು-
• ಆಹಾರ ಜೀರ್ಣವಾಗುವ
• ಯಕೃತ್ತಿನಿಂದ ಹೀರಿಕೊಳ್ಳುವಂತೆ ಮಾಡುವ 
• ಮಲವು ಜೀರ್ಣವಾಗಿ ಸ್ವಭಾವ ಸಹಜವಾಗಿ ಹೊರಹೋಗುವ ಔಷಧೋಪಚಾರಗಳನ್ನು ಮಾಡುತ್ತಾನೆ.

ಸಾಮಾನ್ಯವಾಗಿ ಶೇ 90 ರಷ್ಟು ಮೂಲವ್ಯಾಧಿಗಳಿಗೆ ಔಷಧ ಯೋಜನೆಯೇ ಶ್ರೇಷ್ಠ ಚಿಕಿತ್ಸೆ.‌ ಏಕೆಂದರೆ ಮೂಲವ್ಯಾಧಿಗೆ ಕಾರಣವೇ ಮಾನವನ ಕರುಳಿನಲ್ಲಿರುವ "ಜಠರಾಗ್ನಿ". ಇದು ಸರಿಯಾಗಿ ಉದ್ದೀಪನವಾದರೆ ಮೂಲವ್ಯಾಧಿಯು ಶಾಶ್ವತವಾಗಿ ಪರಿಹಾರವಾಗುತ್ತದೆ.
ಎರಡನೆಯದಾದ " ಕ್ಷಾರ ಚಿಕಿತ್ಸೆ "ಯು ಮೂಲವ್ಯಾಧಿಗೆ ಅತ್ಯುಪಯುಕ್ತ ಚಿಕಿತ್ಸಾ ವಿಧಾನವಾಗಿದೆ. 

******

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
29.05.2020.       ಸಂಚಿಕೆ-150

✍️: ಮೂಲವ್ಯಾಧಿ ಮಹಾರೋಗ. ಭಾಗ-6

ಮೂಲವ್ಯಾಧಿಯ ಪರಿಹಾರೋಪಾಯಗಳು.  "ಕ್ಷಾರ ಚಿಕಿತ್ಸೆ "

ಎರಡನೆಯದಾದ " ಕ್ಷಾರ ಚಿಕಿತ್ಸೆ "ಯು ಮೂಲವ್ಯಾಧಿಗೆ ಅತ್ಯಪಯುಕ್ತ ಚಿಕಿತ್ಸಾ ವಿಧಾನವಾಗಿದೆ. 

ಕ್ಷಾರ ಎಂದರೆ ಹುಳಿಯ ವಿರುದ್ಧದ ಒಂದು ಪದಾರ್ಥ, ಆಂಗ್ಲ ಭಾಷೆಯಲ್ಲಿ ಇದನ್ನು "ಅಲ್ಕಲಿ" ಎಂದು ಕರೆಯುತ್ತಾರೆ.

ಉತ್ತಾರಾಣಿ, ಎಳ್ಳು ಕಡ್ಡಿ ಮುಂತಾದವುಗಳ ಅಲ್ಕಲಾಯ್ಡ್ ಗಳನ್ನು ಆಯುರ್ವೇದೀಯ ವಿಶೇಷ ವಿಧಾನದಿಂದ ಸಂಸ್ಕರಿಸಿದರೆ ಬರುವ ಪೇಸ್ಟ್ ಅಥವಾ ಪುಡಿಯಂತಹ ಪದಾರ್ಥವೇ "ಕ್ಷಾರ". ಸುಮಾರು 10Kg ಉತ್ತರಾಣಿ ಮುಂತಾದವುಗಳನ್ನು ಬಳಸಿದರೆ 50ಗ್ರಾಂ ಕ್ಷಾರ ಹೊರಬರುವುದು.

ಇದು ಪ್ರತ್ಯಾಮ್ಲವಾದ ಕಾರಣ ಸುಡುವ ಗುಣವನ್ನು ಹೊಂದಿರುತ್ತದೆ. ಈ ಸುಡುವ ಗುಣವನ್ನೇ ಬಳಸಿಕೊಂಡು ಅನೇಕ ವಿಧದ ಮೂಲವ್ಯಾಧಿಗಳನ್ನು ಬುಡಸಮೇತ ತೆಗೆಯಬಹುದು. 

ಮೂಲವ್ಯಾಧಿಗೆ ಕ್ಷಾರಚಿಕಿತ್ಸೆಯು ಹಿಂದಿನಿಂದಲೂ ಮತ್ತು ಇಂದೂ ಸಹ ಅತ್ಯಂತ ಪ್ರಚಲಿತದಲ್ಲಿರುವ ಪದ್ದತಿಯಾಗಿದೆ. ಸಾಮಾನ್ಯವಾಗಿ " ಕ್ಷಾರಸೂತ್ರ" ಎಂಬ ಹೆಸತಿನಿಂದ ಕರೆಸಿಕೊಂಡಿದೆ.

ಕೇವಲ ಮೂಲವ್ಯಾಧಿಯ ಅಂದರೆ ಪೈಲ್ಸ್ ಗಡ್ಡೆಯಲ್ಲದೇ, ಫಿಷ್ಟುಲಾ ಮತ್ತು ಅನ್ಯಸ್ಥಾನ ಸ್ಥಿತ ಅರ್ಶಸ್ಸಿನ ಗಡ್ಡೆಯನ್ನೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ, ಜೀವಕೋಶಗಳಲ್ಲಿ ಶಾಶ್ವತ ಫೈಬ್ರೋಸಿಸ್ ಉಂಟುಮಾಡದೇ(ಒಣಗಿಸದೇ) ಯಶಸ್ವಿಯಾಗಿ ಬುಡಸಮೇತ ಕತ್ತರಿಸಿ ತೆಗೆಯುವ ಚಿಕಿತ್ಸೆ ಇದಾಗಿದೆ. 

ಈ ಕ್ಷಾರ ಚಿಕಿತ್ಸೆಯಲ್ಲೂ-
ಪಾನೀಯ ಕ್ಷಾರ (ಕುಡಿಯುವ ಕ್ಷಾರ)
ಪ್ರತಿಸಾರಣ ಕ್ಷಾರ (ಹಚ್ಚುವ ಕ್ಷಾರ)
ಕ್ಷಾರ ಲೇಪ (ದಪ್ಪನಾಗಿ ಬಳಿಯುವ ಕ್ಷಾರ)
ಕ್ಷಾರಸೂತ್ರ (ಕ್ಷಾರ ಲೇಪಿತ ದಪ್ಪನಾದ ದಾರದಿಂದ ಕತ್ತರಿಸುವಿಕೆ)
ಎಂಬ ನಾಲ್ಕು ವಿಧಾನಗಳುಂಟು

ರೋಗಿ ಬಂದ ಸಂದರ್ಭಕ್ಕೆ ಅಗತ್ಯವಾದ
ಮತ್ತು 
ರೋಗ - ಅದರ ಕಾಲಾವಧಿಯನ್ನು ಅವಲಂಬಿಸಿ ಇದನ್ನು ಕ್ಷಾರಚಿಕಿತ್ಸಕ ಅಥವಾ ಶಸ್ತ್ರಚಿಕಿತ್ಸಕ. ನಿರ್ಧರಿಸುತ್ತಾನೆ.

"ಔಷಧಯೋಗ್ಯ ಅವಸ್ಥೆಗಳಲ್ಲಿ ಕ್ಷಾರ ಪ್ರಯೋಗ ಅತ್ಯಂತ ಅನಗತ್ಯ" ಹಾಗೆಯೇ "ಕ್ಷಾರಯೋಗ್ಯ ಅವಸ್ಥೆಗಳಲ್ಲಿ ಔಷಧ ಪ್ರಯೋಗ ಕೇವಲ ಸಮಯಹಾಳು"
ಹಾಗಾಗಿ ಮೂಲವ್ಯಾಧಿ ರೋಗಿಯು ಶುದ್ಧ ಆಯುರ್ವೇದ ವೈದ್ಯನಿಗೆ ಒಪ್ಪಿಸಿಕೊಳ್ಳುವುದೇ ದಾರಿ.
ಯಾವುದೇ ಮೂಲವ್ಯಾಧಿಗಳ ಶಾಶ್ವತ ನಿವಾರಣೆ ನಮ್ಮ ನಮ್ಮ ಆಹಾರದಲ್ಲಿಯೇ ಇರುತ್ತದೆ. ಎಂಬ ಸಿದ್ಧ ಸೂತ್ರಕ್ಕೆ ಹೆಚ್ಚಿನ ಗಮನವನ್ನು ಕೊಡಿ.
**********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
30.05.2020.       ಸಂಚಿಕೆ-151

✍️: ಮೂಲವ್ಯಾಧಿ ಮಹಾವ್ಯಾಧಿ ಭಾಗ-7
ಮೂಲವ್ಯಾಧಿಯಲ್ಲಿ ಅಗ್ನಿಕರ್ಮ ಮತ್ತು ಶಸ್ತ್ರಚಿಕಿತ್ಸೆ ಚಿಕಿತ್ಸೆ

ಕರ್ಕಶ ಸ್ಥಿರ ಪೃಥು ಕಠಿಣಾನಿಃ ಅಗ್ನಿನಾ | 
ತನು ಮೂಲಾನ್ ಉಚ್ಛ್ರಿತಾನಿ ಕ್ಲೇದವಂತೀ ಚ ಶಸ್ತ್ರೇಣ ||
- ಸುಶ್ರುತ ಸಂಹಿತಾ

ಅಗ್ನಿ ಕರ್ಮ:
ಬಂಗಾರ, ಬೆಳ್ಳಿ, ತಾಮ್ರ ಮುಂತಾದ ಶುದ್ಧ ಲೋಹಗಳ ಶಲಾಕೆಗಳನ್ನು ಅಂದರೆ ಲೋಹಗಳ ವಿಶಿಷ್ಠವಾದ ಯಂತ್ರ-ಶಸ್ತ್ರಗಳನ್ನು ಚನ್ನಾಗಿ ಕಾಯಿಸಿ ಸುಡುವ ಚಿಕಿತ್ಸೆಯೇ ಅಗ್ನಿಕರ್ಮ. 

ಮೂಲವ್ಯಾಧಿ ಗ್ರಂಥಿಗಳು ಕರ್ಕಶ, ಸ್ಥಿರ ಅಂದರೆ ಒರಟಾಗಿ, ಬಿಗಿಯಾಗಿ ಅಂಟಿಕೊಂಡು, ಒಂದಕ್ಕೊಂದು ಪ್ರತ್ಯೇಕವಾಗಿದ್ದು, ಗಡುಸಾಗಿಯೂ ಇದ್ದರೆ ಅಗ್ನಿಯಿಂದ ಸುಡುವುದು ಸೂಕ್ತ.

ಶಸ್ತ್ರಚಿಕಿತ್ಸೆ:
ಗ್ರಂಥಿಗಳು ಎತ್ತರವಾಗಿಯೂ ಮತ್ತು ಅವುಗಳ ಮೂಲ ಮೆತ್ತಗೂ ಇದ್ದು, ಅದರಿಂದ ಅಂಟಿನ ಕಫದಂತಹ ಅಥವಾ ಕಫ ಮಿಶ್ರಿತ ರಕ್ತದಂತಹ ಸ್ರಾವ ಇದ್ದರೆ ಶಸ್ತ್ರಚಿಕಿತ್ಸೆ ಸೂಕ್ತ. 

ಕ್ಷಾರ, ಅಗ್ನಿ ಮತ್ತು ಶಸ್ತ್ರ ಕರ್ಮಗಳ ಅಪಾಯ:

ಕ್ರಿಯತೇ ತ್ರಿವಿಧಂ ಕರ್ಮ..... ಸುದಾರುಣಃ|
ಪುಂಸ್ತ್ವೋಪಘಾತ......ಮರಣಂ....ವಿಭ್ರಮಾತ್||
-ಚರಕ ಸಂಹಿತಾ

ಔಷಧ ಹೊರತು ಉಳಿದ ಚಿಕಿತ್ಸೆಗಳಿಂದ ದಾರುಣ ಅಪಾಯಗಳು ಇರುವ ಸಾಧ್ಯತೆಯೇ ಹೆಚ್ಚು.
ಮೂಲವ್ಯಾಧಿಗೆ ಮಾಡುವ ಈ ಚಿಕಿತ್ಸಾ ಕರ್ಮಗಳಿಂದ ಪುರುಷನ ಲೈಂಗಿಕ ಶಕ್ತಿ ಕುಂದುತ್ತದೆ. ರಕ್ತಸ್ರಾವ, ಕೀವು ಸೋರುವ(ಸೋಂಕಿನಿಂದ) ಅವಕಾಶವೂ ಇರುತ್ತದೆ. ಮೊಳಕೆಗಳು ಮತ್ತೆ ಬರುವ ಸಾಧ್ಯತೆ ಹೆಚ್ಚು. ದಾರುಣ ಸಂದರ್ಭಗಳಲ್ಲಿ ಮರಣ ಸಂಭವಿಸುವ ಸಾಧ್ಯತೆಯೂ ಇಲ್ಲದಿಲ್ಲ.

ಆದಾಗ್ಯೂ ಆಹಾರ ಪಾಲನೆ ಮಾಡದಿದ್ದರೆ, ನಮ್ಮ ಜಠರಾಗ್ನಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದಿದ್ದರೆ. ಯಾವ ಚಿಕಿತ್ಸಾ ಕ್ರಮವೂ ಯಶಸ್ವಿಯಲ್ಲ.
************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
31.05.2020.       ಸಂಚಿಕೆ-152

✍️: ಮೂಲವ್ಯಾಧಿ ಮಹಾವ್ಯಾಧಿ ಭಾಗ-8
ಮೂಲವ್ಯಾಧಿ ಬಾರದಂತೆ ಮತ್ತು ಮರುಕಳಿಸದಂತೆ ತಡೆಯುವ ಆಹಾರಕ್ರಮಗಳು

ಮೂಲವ್ಯಾಧಿಗೆ "ಮಲಬದ್ಧತೆ ನಿವಾರಣೆ" ಮತ್ತು "ಅಗ್ನಿ ಸಂವರ್ಧನೆ" ಒಂದು ಪರಿಪೂರ್ಣ ಮತ್ತು ಶ್ರೇಷ್ಠ ಚಿಕಿತ್ಸೆಯಾಗಿದೆ.

1. ಮಲಬದ್ಧತೆ ನಿವಾರಣೆ:

ಮಲಬದ್ಧತೆ ನಿವಾರಣೆ ಎಂದರೆ ಕೇವಲ ನಿತ್ಯವೂ ಮಲಪ್ರವೃತ್ತಿಯಾಗುವುದಲ್ಲ. ಪ್ರವೃತ್ತಿಯಾಗುವ ಮಲದ ಲಕ್ಷಣ ಶುದ್ಧ ಅಂದರೆ ಪಕ್ವ ಮಲ ಪ್ರವೃತ್ತಿಯಾಗಬೇಕು. ಆಗ ಮಾತ್ರ ಮೂಲವ್ಯಾಧಿ ನಿವೃತ್ತಿಯಾಗುತ್ತದೆ ಹಾಗೂ ಮತ್ತೆ ಮರುಕಳಿಸುವುದಿಲ್ಲ ಎಂದು ಖಂಡಿತವಾಗಿ ಹೇಳಬಹುದು.

ಪಕ್ವ ಮಲದ ಲಕ್ಷಣ:

• ಮಲವು ದುಂಡನೆಯ ಆಕಾರವುಳ್ಳದ್ದಾಗಿರಬೇಕು.
• ಟೇಪ್ ನಂತೆಯಾಗಲೀ, ಒಡಕಾಗಿ, ಅರ್ಧ ನೀರಾಗಿ ಇರಬಾರದು.
• ದುರ್ವಾಸನೆ ಇರಬಾರದು‌.
• ಹೊರಬಿದ್ದ ಮಲವು ನೀರಿನಲ್ಲಿ ತೇಲಬೇಕು.
• ಮಲವು ನೀರಿನಲ್ಲಿ ಮುಳುಗಿದರೆ ಅದರಲ್ಲಿ ಆಹಾರದ ಅಂಶಗಳು ಇನ್ನೂ ಉಳಿದಿವೆ ಎಂದು ಅರ್ಥ, ಹೀಗಿದ್ದರೆ ಮುಂದೆ ಅರ್ಶಸ್ಸು ಬಂದೇ ಬರುತ್ತದೆ.
• ದಿನದಲ್ಲಿ ಹಲವುಬಾರಿ ಪ್ರವೃತ್ತಿಯಾಗಬಾರದು.
• ಎರೆಡು ಮೂರು ದಿನಗಳವರೆಗೆ ತಡೆಯಬಾರದು.

2. ಅಗ್ನಿ ಸಂವರ್ಧನೆ:

ಅಗ್ನಿ ಸಂವರ್ಧನೆ ಎಂದರೆ ಸುನಿಯಂತ್ರಿತ ಹಸಿವು ಎಂದರ್ಥ. ತಡೆಯಲಸಾಧ್ಯವಾದ ಹಸಿವನ್ನು ಸಂಕಟ ಎನ್ನಬಹುದು.

ನಿತ್ಯವೂ ಕುಳಿತು ಕೆಲಸ ಮಾಡುವವರ ಅಗ್ನಿ ಅತ್ಯಂತ ಕಡಿಮೆ ಇರುತ್ತದೆ. ಏನನ್ನಾದರೂ ತಿನ್ನದಿದ್ದರೆ ಉರಿ ಏಳಬಹುದು ಆದರೆ ಅದು ಹಸಿವಲ್ಲ. 

ಅಗ್ನಿ ವೃದ್ಧಿಗೆ ಉಪಾಯಗಳು-
• ಶಾರೀರಿಕ ಶ್ರಮದ ಕೆಲಸಗಳು
• ಸಮಯಕ್ಕೆ ಸರಿಯಾದ ನಿಯಮಿತ ಆಹಾರ ಸೇವನೆ
• ನೆಮ್ಮದಿಯ ನಿದ್ದೆ
• ಚನ್ನಾಗಿ ಪುಡಿಮಾಡಿದ ಶುಂಠಿ, ಜೀರಿಗೆ, ಹಿಪ್ಪಲಿ ತಲಾ 10ಗ್ರಾಂ ಮತ್ತು ಧನಿಯಾ 30ಗ್ರಾಂ ಸೇರಿಸಿಟ್ಟುಕೊಂಡು. ಒಂದು ಬಾರಿಗೆ ಒಂದು ಗ್ರಾಂ ಮಿಶ್ರಣವನ್ನು ಬಳಸಿ ಕಷಾಯ ಮಾಡಿ ಆಹಾರಕ್ಕಿಂತ ಮೊದಲು ಬೆಳಿಗ್ಗೆ 7ಕ್ಕೆ ಸಂಜೆ 7ಕ್ಕೆ ಸೇವಿಸಿದರೆ ಅಗ್ನಿ ವೃದ್ಧಿಯಾಗುತ್ತದೆ. ಈ ಮಿಶ್ರಣ ಒಬ್ಬರಿಗೆ ಒಂದು ತಿಂಗಳಿಗೆ ಸಾಕಾಗುತ್ತದೆ.

ಆದಾಗ್ಯೂ ಆಹಾರ ಪಾಲನೆ ಮಾಡದಿದ್ದರೆ, ನಮ್ಮ ಜಠರಾಗ್ನಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದಿದ್ದರೆ. ಯಾವ ಚಿಕಿತ್ಸಾ ಕ್ರಮವೂ ಯಶಸ್ವಿಯಲ್ಲ.
*********
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
01.06.2020.                   ಸಂಚಿಕೆ-153

✍️: ಮೂಲವ್ಯಾಧಿ ಮಹಾವ್ಯಾಧಿ ಭಾಗ-9
ಮೂಲವ್ಯಾಧಿ ಶಾಶ್ವತ ನಿವಾರಣೆಗೆ ಮಜ್ಜೆಗೆ ಚಿಕಿತ್ಸೆ.

ಮೂಲವ್ಯಾಧಿಯು ಬಾರದಂತೆ ತಡೆಯುವ ಮತ್ತು ಮರುಕಳಿಸದಂತೆ ಮಾಡುವ ಶ್ರೇಷ್ಠ ಚಿಕಿತ್ಸೆಯೇ "ಮಜ್ಜಿಗೆ ಯೋಜನೆ" ವಿಧಾನ

.....ವಾತಶ್ಲೇಷ್ಮ ಅರ್ಶಸಾಂ ತಕ್ರಾತ್ ಪರಂ ನಾಸ್ತೀಹ ಭೇಷಜಮ್ |
ಭೂಮಾವಪಿ ನಿಷಿಕ್ತಂ ತತ್ ದೇಹೇ ತಕ್ರಂ ತೃಣೋಲುಪಂ ||
ನಾಸ್ತಿ ತಕ್ರಾತ್ ಪರಂ ಕಿಂಚಿತ್ ಔಷಧಂ ಕಫವಾತಜೇ ||
-ಚರಕ ಸಂಹಿತಾ

ರಕ್ತಸ್ರಾವ ಆಗದ, ಪಿತ್ತ ಅಥವಾ ರಕ್ತದಿಂದ ಕೂಡಿರದ ಮೂಲವ್ಯಾಧಿಗಳಿಗೆ ಮಜ್ಜಿಗೆ ಸೇವನೆ ಅತ್ಯದ್ಭುತ ಪರಿಣಾಮಕಾರಿಯಾಗಿದೆ.

ಉದಾಹರಣೆಗೆ: 
ಗರಿಕೆ ಹುಲ್ಲನ್ನು ಎಷ್ಟೇ ಬಾರಿ ಕಿತ್ತು ತೆಗೆದರೂ ಮತ್ತೆ ಮತ್ತೆ ಚಿಗುರುತ್ತದೆ. ಆದರೆ ಅದೇ ಭೂಮಿಗೆ ಮಜ್ಜಿಗೆಯನ್ನು ಹಾಕಿಬಿಟ್ಟರೆ ಮೂಲಸಮೇತ ಗರಿಕೆಯು ಒಣಗಿಹೋಗುತ್ತದೆ. 

ಹಾಗೆಯೇ, 
ಮೂಲವ್ಯಾಧಿಯ ಮೊಳಕೆಗಳು ಒಣಗಿಹೋಗಲು ಅತ್ಯುತ್ತಮ ಮತ್ತು ಶಾಶ್ವತ ನಿವಾರಣಾ ಔಷಧ ಎಂದರೆ ಮಜ್ಜಿಗೆ. ಇದು ಭೂಲೋಕದ ಅಮೃತ ಎಂದೂ ಕರೆಸಿಕೊಂಡಿದೆ.

ಮಜ್ಜಿಗೆ ತಯಾರಿಸುವ ವಿಧಾನ:
ಹಾಲನ್ನು ನಿಧಾನವಾಗಿ ಮತ್ತು ಚನ್ನಾಗಿ ಕಾಯಿಸಿದರೆ ದಪ್ಪ ಕೆನೆ ಬರುತ್ತದೆ. ಅದು ಬಿಸಿ ಕಡಿಮೆಯಾಗಿ ಇನ್ನೂ ಬೆಚ್ಚಗಿರುವಾಗಲೇ ಸ್ವಲ್ಪ ಮೊಸರನ್ನು ಸೇರಿಸಿ ಬೆಚ್ಚಗಿನ ಜಾಗದಲ್ಲಿ ಇಟ್ಟರೆ, ವಾತಾವರಣದ ಆಧಾರದ ಮೇಲೆ 3-6 ಗಂಟೆಗಳಲ್ಲಿ ಗಟ್ಟಿಯಾದ ಮೊಸರು ದೊರೆಯುತ್ತದೆ. ಅದು ಹುಳಿಯಾಗುವ ಮೊದಲು ಅಂತ ತಕ್ಷಣವೇ ಕಡೆಗೋಲಿನಿಂದ ಕಡೆದರೆ ಮಜ್ಜೆಗೆ ದೊರೆಯುತ್ತದೆ. ಒಮ್ಮೆ ತಯಾರಾದ ಮಜ್ಜಿಗೆಯ ಆಯಷ್ಯ 48 ನಿಮಿಷಗಳು ಮಾತ್ರ. ಆ ನಂತರ ಅದು ವಿಪರೀತ ಗುಣಕ್ಕೆ ತಿರುಗಿ ರೋಗಕಾರಕವಾಗುತ್ತದೆ.

ಚಿಕಿತ್ಸಾರ್ಥ ಮಜ್ಜೆಗೆಯ ವಿಧಗಳು:
ಜಿಡ್ಡಿರುವ ಮಜ್ಜಿಗೆ
ಜಿಡ್ಡು ತೆಗೆದ (ಬೆಣ್ಣೆ ತೆಗೆದ)ಮಜ್ಜಿಗೆ 

ಮಜ್ಜಿಗೆಯನ್ನು ಔಷಧಿಯಾಗಿ ಹೇಗೆ ಬಳಸುವುದು ಎಂಬ ವಿಚಾರವನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ.
**************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
02.06.2020.                   ಸಂಚಿಕೆ-154
ಮೂಲವ್ಯಾಧಿ ಮಹಾವ್ಯಾಧಿ ಭಾಗ-10
ಇದರಲ್ಲಿ
ಮೂಲವ್ಯಾಧಿಗೆ ಮಜ್ಜೆಗೆ ಚಿಕಿತ್ಸೆ.

ಮಜ್ಜಿಗೆಯನ್ನು ಔಷಧಿಯಾಗಿ ಬಳಸುವುದು ಹೇಗೆ?

• ಹುಳಿ ಕೆಟ್ಟ ಮೊಸರಿನಿಂದ ತಯಾರಾಗಿರಬಾರದು.
• ಸ್ವತಃ  ಮಜ್ಜಿಗೆ ಹುಳಿ ಇರಬಾರದು.
• ಮಜ್ಜಿಗೆ ತಯಾರಾದ 48 ನಿಮಿಷದೊಳಗೆ  ಬಳಸಬೇಕು.

ಒಂದು ಮಣ್ಣಿನ ಪಾತ್ರೆಗೆ ಒಳಭಾಗದಲ್ಲಿ "ಚಿತ್ರಕ ಮೂಲ ತ್ವಕ್' ಕಲ್ಕವನ್ನು ಲೇಪಿಸಿ ಒಣಗಿಸಬೇಕು. ಅದರೊಳಗೆ ಹಾಲನ್ನು ಹೆಪ್ಪುಹಾಕಿ ಮೊಸರು ಮಾಡಬೇಕು. ಮೊಸರು ತಯಾರಾದ ನಂತರ ಅದನ್ನು ಕಡೆಗೋಲಿನಿಂದ ಅಲ್ಲಿಯೇ ಕಡೆಯಬೇಕು. ಬಂದ ಮಜ್ಜಿಗೆಯು ಬೆಣ್ಣೆ ಬರುವ‌ ಮೊದಲೇ ಬಳಸಬಹುದು ಅಥವಾ ಬೆಣ್ಣೆ ಬಂದ ನಂತರ ಅದನ್ನು ತೆಗೆದು ಬಳಸಬಹುದು.

ಒಣಗಿದ ಮೂಲವ್ಯಾಧಿ ಮೊಳಕೆಯುಳ್ಳ ರಕ್ತ, ಕೀವು, ದ್ರವಸ್ರಾವ ಇಲ್ಲದ ಮತ್ತು ಹೆಚ್ಚು ನೋವಿರುವಲ್ಲಿ ಬೆಣ್ಣೆ ತೆಗೆಯದ ಮಜ್ಜಿಗೆಯನ್ನು ಬಳಸಬೇಕು.
ಮತ್ತು
ಮೃದುವಾದ ಆದರೆ ರಕ್ತ, ದ್ರವಸ್ರಾವ ಇಲ್ಲದ ಮತ್ತು ಅಲ್ಪಶೂಲೆ ಉಳ್ಳ ಮೂಲವ್ಯಾಧಿ ಮೊಳಕೆಗಳಿಗೆ ಬೆಣ್ಣೆ ತೆಗೆದ ಮಜ್ಜಿಗೆಯನ್ನೂ ಬಳಸಬೇಕು.

ಪ್ರತಿ 7 ದಿನಕ್ಕೊಮ್ಮೆ ಕನಿಷ್ಠ ಆರು ವಾರಗಳ ಕಾಲ ಬಳಸಿದಲ್ಲಿ, ಶುಷ್ಕ ಅಂದರೆ ಒಣ ಮೂಲವ್ಯಾಧಿ ಅಥವಾ ಅಸ್ರಾವೀ‌ ಅಂದರೆ ರಕ್ತ, ದ್ರವ ಸ್ರಾವ ಇರದ ಮೂಲವ್ಯಾಧಿ ಮೊಳಕೆಗಳು ಬುಡಸಮೇತ ಒಣಗುತ್ತವೆ. ಮತ್ತೆ ಮರುಕಳಿಸುವ ಸಾಧ್ಯತೆ ಕಡಿಮೆ.

ಇದರ ಮಹತ್ವ:
ಅದೇ ಮೇಲೆಹೇಳಿದ ಅವಸ್ಥೆಗಳಲ್ಲಿ ಮಜ್ಜಿಗೆಗಿಂತ ಸರ್ವಶ್ರೇಷ್ಠ ಚಿಕಿತ್ಸೆಯೇ ಇಲ್ಲ. ಅದು ಶಾಶ್ವತ ಪರಿಹಾರವೂ ಹೌದು.

ವಿ. ಗಮನಕ್ಕೆ: 
ಚಿತ್ರಕ ಎಂಬ ಗಿಡಮೂಲಿಕೆಯು ಅತ್ಯಂತ ತೀಕ್ಷ್ಣ ಮತ್ತು ಪ್ರಭಾವೀ ದ್ರವ್ಯವಾಗಿದ್ದು. ವೈದ್ಯರ ಅನುಸೂಚನೆಯ ಮೇರೆಗೆ ಬಳಸುವುದೇ ಹಿತಕರವಾದದ್ದು.

ವಿ. ಸೂಚನೆ:

ರೋಗದ ಅವಸ್ಥೆಯಲ್ಲಷ್ಟೇ ಅಲ್ಲ, ನಿತ್ಯ ಸೇವನೆಯಲ್ಲೂ ಸಹ
ಮಜ್ಜಿಗೆ ಹುಳಿ ಬಂದಿರಬಾರದು.
ಮಜ್ಜಿಗೆ ಕುಡಿಯುವ ಮೊದಲು ಯಾವುದೇ ಅವಸ್ಥೆಯಲ್ಲಿ ಸೈಂಧವ ಉಪ್ಪನ್ನು ಬಳಸಲೇಬೇಕು. ಉಫ್ಪು ರಹಿತ ಮಜ್ಜಿಗೆ ಮೂಲವ್ಯಾಧಿಯನ್ನು ಹೆಚ್ಚಿಸುತ್ತದೆ.

ಅತ್ಯಂತ ಪಿತ್ತ ಉಳ್ಳ, ರಕ್ತಸ್ರಾವ ಮತ್ತು ದಾರುಣ ಉರಿಯಿಂದ ಕೂಡಿದ ಮೂಲವ್ಯಾಧಿಗೆ ಮಜ್ಜಿಗೆ ಚಿಕಿತ್ಸೆಯಿಂದ ಲಾಭವಿಲ್ಲ. 

ಆರ್ದ್ರ ಅಥವಾ ಸ್ರಾವೀ ಅರ್ಶಸ್ಸು(ರಕ್ತ ಕೀವು ಸ್ರಾವ ಇರುವ ಮೂಲವ್ಯಾಧಿ) ಚಿಕಿತ್ಸೆಯನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ.
***********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
03.06.2020.                   ಸಂಚಿಕೆ-155
ಮೂಲವ್ಯಾಧಿ ಮಾಹಾವ್ಯಾಧಿ ಭಾಗ-11
ಇದರಲ್ಲಿ
ಆರ್ದ್ರ ಅಥವಾ ಸ್ರಾವದಿಂದ ಕೂಡಿದ ಅರ್ಶಸ್ಸಿನ ಚಿಕಿತ್ಸೆ
***********

ಚಿಕಿತ್ಸಿತಂ......ಸ್ರಾವೀಣಾಂ......ದ್ವಿವಿಧಃ..... ಸ್ನಿಗ್ಧಂ ಶೀತಂ.......ಪಿತ್ತೋಲ್ಬಣೇ....ಘರ್ಮಕಾಲೇ....ಸ್ತಂಭನೀಯಂ......ಕಫಾನುಗಮ್ ||
-ಚರಕ ಸಂಹಿತಾ

ಹಸಿಯದಾದ / ಸ್ರಾವ ಇರುವ ಮೂಲವ್ಯಾಧಿಯು ಯಾವಾಗಲೂ ರಕ್ತ ಅಥವಾ ಪಿತ್ತ ದೂಷಣೆಯಿಂದ ಬರುತ್ತದೆ. ಇದನ್ನು ಎರೆಡು ವಿಧವಾಗಿ ವಿಂಗಡಿಸಿ ಚಿಕಿತ್ಸೆ ಮಾಡುತ್ತಾರೆ.

ಪಿತ್ತ ಮತ್ತು ರಕ್ತ ವಿಕೃತಿ ಸಾಮಾನ್ಯ ಆದರೆ ಅದರಲ್ಲಿ 
ಕಫಾನುಬಂಧ
ಮತ್ತು
ವಾತಾನುಬಂಧ
ಎಂದು ವಿಂಗಡಿಸಿ ಚಿಕಿತ್ಸೆ ಮಾಡುತ್ತಾರೆ.

ಪಿತ್ತ ಮತ್ತು ರಕ್ತವು ಉಷ್ಣ ಭಾವವನ್ನು ಹೊಂದಿರುತ್ತದೆ, ಆ ಉಷ್ಣತೆಯಿಂದ ಗುದದಲ್ಲಿರುವ ರಕ್ತನಾಳಗಳು ಮತ್ತು ಮಾಂಸ ಭಾಗವು ಮೆತ್ತಗಾಗಿ ಅಲ್ಲಿಂದ ಸ್ರಾವ ಆರಂಭವಾಗುತ್ತದೆ. ಸ್ರಾವದ ಲಕ್ಷಣವನ್ನಾಧರಿಸಿ ಅದು ಕಫ‌ಪ್ರಧಾನವೋ ಅಥವಾ ವಾತ ಪ್ರಧಾನವೋ ಎಂದು ವಿಂಗಡಿಸಿ ಚಿಕಿತ್ಸೆ ಮಾಡುತ್ತಾರೆ.

ಎರಡರಲ್ಲೂ ಕೀವು ಅಥವಾ ದ್ರವ ಅಥವಾ ರಕ್ತಸ್ರಾವದ ಜೊತೆಗೆ ಉರಿ ಮತ್ತು ನೋವುಗಳು ಹಿಂಸಿಸುತ್ತಿರುತ್ತವೆ.
ಆದರೆ
ಸ್ರಾವದ ಜೊತೆ ಅರ್ಶಸ್ಸು ಮೆದುವಾಗಿದ್ದು ಮತ್ತು ನೋವಿಗಿಂತಲೂ ಹೆಚ್ಚು ಸ್ರಾವವೇ ಇದ್ದರೆ "ಕಫ ಪ್ರಧಾನ" ಎಂತಲೂ 
ಅರ್ಶಸ್ಸು ಕಠಿಣವಾಗಿದ್ದು, ಅಲ್ಪಸ್ರಾವ ಮತ್ತು ಹೆಚ್ಚು ನೋವಿನಿಂದ ಕೂಡಿದ್ದರೆ "ವಾತಪ್ರಧಾನ" ಎಂತಲೂ ತಿಳಿಯಬೇಕು.

ಸ್ರಾವೀ ಅರ್ಶಸ್ಸಿನ ಉಪಚಾರಗಳು:

ಈ ಎರೆಡೂ ಅರ್ಶಸ್ಸುಗಳನ್ನು ವೈದ್ಯರೇ ಗುರುತಿಸಿ ಚಿಕಿತ್ಸೆ ಮಾಡುತ್ತಾರೆ, ಆದಾಗ್ಯೂ ವೈದ್ಯರ ಔಷಧಿಗಳ ಜೊತೆಗೆ ಆಹಾರ ವಿಹಾರಗಳಲ್ಲಿ ನಾವು ಸರಳವಾಗಿ ಸರಿಪಡಿಸಿಕೊಳ್ಳುವ ಸಾಧ್ಯತೆ ಖಂಡಿತಾ ಇದೆ.‌

ಅದನ್ನು ಇಲ್ಲಿ ನೋಡೋಣ-

ಕಫ ಪ್ರಧಾನ ಸ್ರಾವೀ ಅರ್ಶಸ್ಸಿಗೆ "ತಾಜಾ ಬಿಸಿಯದಾದ ಅಲ್ಪ ಪ್ರಮಾಣದ ಮತ್ತು ಜೀರ್ಣಕ್ಕೆ ಅತ್ಯಂತ ಹಗುರವಾದ" ಆಹಾರವನ್ನು ಸೇವಿಸಬೇಕು.

ವಾತ ಪ್ರಧಾನ ಸ್ರಾವೀ ಅರ್ಶಸ್ಸಿಗೆ "ತಾಜಾ ಅಲ್ಪ ಬೆಚ್ಚಗಿರುವ ಜೀರ್ಣವಾಗುವಷ್ಟು ಪ್ರಮಾಣದ ಆಹಾರವನ್ನು ಸೇವಿಸಿ,‌ ಆಹಾರದಲ್ಲಿ ಶುಂಠಿ ಮತ್ತು ಹಾಲಿನ ಅಂಶ ನಿತ್ಯವೂ ಇರುವುದು ಅತ್ಯುತ್ತಮ.

ಎರಡರಲ್ಲೂ ಸಹ ಆಹಾರದಲ್ಲಿ ಶುಂಠಿಯನ್ನೂ ಆಹಾರದ ನಂತರ ಓಮು ಕಾಳು ಸೇವನೆಯನ್ನೂ ಮಾಡುತ್ತಿರಬೇಕು. ರಾತ್ರಿ 10ರ ಒಳಗೇ ಮಲಗಿ ಕನಿಷ್ಠ ಏಳು ಗಂಟೆಗಳ ಕಾಲ ನೆಮ್ಮದಿಯ ನಿದ್ದೆಯನ್ನು ಮಾಡಲೇಬೇಕು.

**********


No comments:

Post a Comment