🕉 ಶ್ರೀ ಗುರುಭ್ಯೋ ನಮಃ 🕉 ಮನೆಯಲ್ಲಿ ಈ ಗಿಡಗಳನ್ನು ನೆಡುವುದರಿಂದ ಸಂಪತ್ತು, ಅದೃಷ್ಟ ನಿಮ್ಮದಾಗುವುದು...
ಮನೆಯ ಅಂಗಳದಲ್ಲಿ ಹಚ್ಚ ಹಸಿರಿನ ಗಿಡಗಳು ಕಂಗೊಳಿಸಿದಾಗ ನಿಮ್ಮ ಅಂದದ ಗೃಹಕ್ಕೊಂದು ಶೋಭೆ ಬರುತ್ತದೆ. ಕೆಲವೊಮ್ಮೆ ಮನೆಯಲ್ಲಿ ಇರಿಸುವಂತಹ ಗಿಡಗಳಿಂದಲೂ ಸಂಪತ್ತು, ಸಮೃದ್ಧಿ ಹೆಚ್ಚಾಗಬಹುದು. ಈ ಆಧುನಿಕ ಯುಗದಲ್ಲಿ ಮನೆಯ ಒಳಾಂಗಣವೂ ಹಸಿರಿನಿಂದ ಕೂಡಿರಬೇಕು ಎಂದು ಪಾಟ್‌ಗಳನ್ನು ಇಡುವ ಪರಿಪಾಠ ಬೆಳೆದಿದೆ. ಹಾಗಂತ ಎಲ್ಲಾ ಗಿಡಗಳನ್ನು ಮನೆಯಂಗಳದಲ್ಲಿ, ಮನೆಯ ಒಳಾಂಗಣದಲ್ಲಿ ನೆಡುವುದು ಸೂಕ್ತವಲ್ಲ. ಹಾಗಾದರೆ ಯಾವ ಗಿಡ ನಿಮಗೆ ಅದೃಷ್ಟ ತರುವುದು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
ತುಳಸಿ ಗಿಡ
ಪವಿತ್ರವಾದ ತುಳಸಿ ಗಿಡಕ್ಕೆ ಎಲ್ಲಾ ಹಿಂದೂ ಮನೆಗಳಲ್ಲೂ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ವಾಸ್ತು ಪ್ರಕಾರದಲ್ಲೂ ತುಳಸಿಗೆ ಮೊದಲ ಪ್ರಾಧಾನ್ಯತೆ. ತುಳಸಿಯು ಗುರು ಗ್ರಹವನ್ನು ಪ್ರತಿನಿಧಿಸುವುದರಿಂದ ಈ ಗಿಡವು ಮನೆಗೆ ಶುಭವನ್ನು ತರುವುದು. ಈ ಗಿಡವನ್ನು ಮನೆಯ ಈಶಾನ್ಯ ಭಾಗದಲ್ಲಿ ನೆಟ್ಟರೆ ತುಂಬಾ ಒಳ್ಳೆಯದು. ಇದನ್ನು ಹೊರತು ಪಡಿಸಿ ಉತ್ತರ, ಪೂರ್ವ ಅಥವಾ ತುಳಸಿ ಗಿಡವನ್ನು ನೆಡುವುದು ಒಳ್ಳೆಯದು. ತುಳಸಿ ಗಿಡ ಇಡಲು ಜಾಗದ ಕೊರತೆ ಇದ್ದಲ್ಲಿ ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿರುವ ಬಾಲ್ಕನಿಯಲ್ಲಿ ಇಡಬಹುದು.
ಅದೃಷ್ಟದ ಬಿದಿರಿನ ಗಿಡ
ಪುಟ್ಟ ಪುಟ್ಟ ಎಳೆಗಳುಳ್ಳ ಹಸಿರು ಬಿದಿರಿನ ಗಿಡವನ್ನು ನೀವು ನೋಡಿರಬಹುದು. ವಾಸ್ತು ಪ್ರಕಾರ ಈ ಅದೃಷ್ಟದ ಬಿದಿರು ತುಂಬ ಪ್ರಮುಖವಾದ ಸ್ಥಾನ ಪಡೆದಿದೆ. ಇದು ಮನೆಗೆ ಅದೃಷ್ಟ ಹಾಗೂ ಶಾಂತಿಯನ್ನು ತರುತ್ತದೆ. ಫೆಂಗ್ ಶುಯಿ ಪ್ರಕಾರ ಆಗ್ನೇಯ ದಿಕ್ಕು ಸಂಪತ್ತಿನ ದಿಕ್ಕು ಆಗಿರುವುದರಿಂದ ಈ ಗಿಡವನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. ಮನೆಯ ಲಿವಿಂಗ್ ರೂಂ ಅಥವಾ ನೀವು ಕೆಲಸ ಮಾಡುವ ಟೇಬಲ್ ಮೇಲೆಯೂ ಇಟ್ಟುಕೊಳ್ಳಬಹುದು. ಎರಡು ಕೊಂಬೆಯ ಬಿದಿರು ದಂಪತಿಗಳಲ್ಲಿ ಪ್ರೀತಿಯನ್ನು ಹೆಚ್ಚಿಸುವುದು ಎಂದೂ ಹೇಳಲಾಗುತ್ತದೆ.
ಮನಿ ಪ್ಲಾಂಟ್
ಮನಿಪ್ಲಾಂಟ್ ಗಿಡವು ಸಂಪತ್ತು ಹಾಗೂ ಅಭಿವೃದ್ಧಿಯನ್ನು ಸೂಚಿಸುತ್ತದೆ. ಈ ಗಿಡವನ್ನು ಮನೆಯ ಆಗ್ನೇಯ ಭಾಗ ಅಥವಾ ವಾಸಿಸುವ ಕೋಣೆಯಲ್ಲಿ ಇಡಬೇಕು. ಆಗ್ನೇಯ ಭಾಗದಲ್ಲಿ ಗಣೇಶನು ನೆಲೆಸುವುದರಿಂದ ಅದೃಷ್ಟ, ಸಂಪತ್ತು, ಸಮೃದ್ಧಿ ನೆಲೆಸುವುದು ಎಂದು ಹೇಳಲಾಗುತ್ತದೆ. ಇದನ್ನು ಮನೆಯ ಒಳಭಾಗದಲ್ಲಿ ಇಟ್ಟರೆ ಒಳ್ಳೆಯದು. ಹೊರಭಾಗದಲ್ಲಿ ನೆಡಬಾರದು. ಮನಿಪ್ಲಾಂಟ್ ಒತ್ತಡ, ಆತಂಕ, ವಾಗ್ವಾದ ಹಾಗೂ ನಿದ್ರಾಹೀನತೆ ಸಮಸ್ಯೆ ನಿವಾರಿಸುವುದೆಂದು ಹೇಳಲಾಗುತ್ತದೆ.
ಬಾಳೆಗಿಡ
ಬಾಳೆಗಿಡವು ಗುರುಗ್ರಹವನ್ನು ಪ್ರತಿನಿಧಿಸುವುದರಿಂದ ಮನೆಯ ಈಶಾನ್ಯ ದಿಕ್ಕಿನಲ್ಲಿ ಬಾಳೆಗಿಡವನ್ನು ನೆಡಬೇಕು. ಹಿಂದೂ ಧರ್ಮದಲ್ಲಿ ಬಾಳೆಗಿಡವು ಪೂಜನೀಯವಾದುದು ಜೊತೆಗೆ ಮನೆಗೆ ಶಾಂತಿ ಹಾಗೂ ಸಮೃದ್ಧಿಯನ್ನು ತರುವುದೆಂಬ ನಂಬಿಕೆ ಇದೆ. ಈ ಗಿಡವು ಸಂಪತ್ತನ್ನು ವೃದ್ಧಿಸುವುದರ ಜೊತೆಗೆ ಆಕಸ್ಮಿಕ ಅದೃಷ್ಟವನ್ನು ತರುವುದು.
ಬಿಳಿ ಎಕ್ಕದ ಗಿಡ
ಬಿಳಿ ಎಕ್ಕದ ಗಿಡವು ಬಹಳ ಪವಿತ್ರವಾಗಿದ್ದು, ಬಿಳಿ ಎಕ್ಕದ ಹೂವು ಶಿವನಿಗೆ ಅತ್ಯಂತ ಪ್ರಿಯ. ಈ ಗಿಡವು ಮನೆಗೆ ಸಂಪತ್ತು ಹಾಗೂ ಅದೃಷ್ಟವನ್ನು ತರುವುದು. ಈ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ಗಿಡವು ನಿಮ್ಮ ಶತ್ರುಗಳ ಮೇಲೆ ಜಯವನ್ನು ತರುವುದು. ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯನ್ನು ಹೆಚ್ಚಿಸುವುದು.
ಲೋಳೆಸರ
ಲೋಳೆಸರವು ಧನಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವುದರಿಂದ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಮುಖವಾದ ಗಿಡ. ಮನೆಯ ಒಳಗೆ ಅಲೋವೆರಾ ಗಿಡವನ್ನು ಇಡುವುದರಿಂದ ಆರೋಗ್ಯ ಹಾಗೂ ಸಮೃದ್ಧಿ ನೆಲೆಸುವುದು. ವಾಸ್ತು ಪ್ರಕಾರ ಅಲೋವೆರಾ ಗಿಡವನ್ನು ಪೂರ್ವ ಅಥವಾ ಉತ್ತರ ಭಾಗದಲ್ಲಿ ಇಡಬೇಕು.
ಕಹಿಬೇವಿನ ಗಿಡ
ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾದ ಗಿಡವೆಂದರೆ ಬೇವು, ಜೊತೆಗೆ ಮನೆಯಲ್ಲಿ ಇದರ ಗಿಡವನ್ನು ನೆಡುವುದರಿಂದ ಒಳ್ಳೆಯದಾಗುವುದೆಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಬೇವಿನ ಗಿಡವನ್ನು ಮನೆಯ ಹೂತೋಟದಲ್ಲಿ ನೆಟ್ಟರೆ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸುವುದೆಂದು ಹೇಳಲಾಗುತ್ತದೆ. ಇದರೊಂದಿಗೆ ನಕಾರಾತ್ಮಕ ಶಕ್ತಿಗಳನ್ನು ದೂರವಿರಿಸುವುದಲ್ಲದೇ ಸಂಬಂಧಗಳಲ್ಲಿ ಕಂಡುಬರುವ ಅಸಮಾಧಾನವನ್ನು ನಿವಾರಿಸುವುದು.
ಯಾವ ಗಿಡ ನೆಡಬಾರದು...
ಮನೆಯಂಗಳದಲ್ಲಿ ಮುಖ್ಯವಾಗಿ ನಕಾರಾತ್ಮಕಶಕ್ತಿಯನ್ನು ಆಕರ್ಷಿಸುವಂತಹ ಹುಣಸೆ ಮರವನ್ನು ನೆಡಬಾರದು. ಜೊತೆಗೆ ಹಣ್ಣು ನೀಡುವ ಮರಗಳಾದ ಮಾವಿನ ಮರ, ಜಂಬುನೇರಳೆ ಮರ, ಮುಳ್ಳಿರುವ ಮರಗಳಾದ ಸೀಗೆಕಾಯಿ, ಬೋರೆಹಣ್ಣಿನ ಮರ ಹಾಗೂ ಅಶ್ವತ್ಥ, ಆಲದಮರ, ಇಪ್ಪೆಮರವನ್ನು ಮನೆಯ ಅಂಗಳದಲ್ಲಿ ನೆಡಬಾರದು. ಮುಖ್ಯವಾಗಿ ಬೊನ್ಸಾಯ್ ಗಿಡಗಳನ್ನು ನೆಡುವುದು ವಾಸ್ತು ಪ್ರಕಾರ ಒಳ್ಳೆಯದಲ್ಲ.
********
No comments:
Post a Comment