ದೊಡ್ಡಪತ್ರೆ (ಸಾಂಬ್ರಾಣಿ ಸೊಪ್ಪು):
"ದೊಡ್ಡಪತ್ರೆ" ಅಥವಾ "ಸಾಂಬ್ರಾಣಿ ಸೊಪ್ಪು" ಅಥವಾ "ಸಾಂಬಾರ್ ಬಳ್ಳಿ" ಹೀಗೆ ನಾನಾ ಹೆಸರುಗಳಿಂದ ಕರೆಯುತ್ತೇವೆ. ಬಹಳ ಔಷಧ ಗುಣವನ್ನು ಹೊಂದಿರುವ ಸಸಿಯಿದು. ಮನೆಯ ಹಿತ್ತಲಲ್ಲಿ ಸಿಗುವಂತೆ ಬೆಳೆಸಬಹುದು. ಇದರಿಂದ ತಯಾರಿಸಬಹುದಾದ ಹಲವು ರೀತಿಯ ಅಡುಗೆಯನ್ನು ಮಾಡಬಹುದು. ದೊಡ್ಡಪತ್ರೆ ಎಲೆಗಳು ಮೃದುವಾಗಿದ್ದು, ದಪ್ಪನಾಗಿದ್ದು, ಓರೆಗಾನೊ ರೀತಿಯ ಸವಾಸನೆಯನ್ನು ಹೊಂದಿದೆ. ಈ ಸಸ್ಯ ಬಹಳ ಬೇಗ ಬೆಳೆಯುತ್ತದೆ ಮತ್ತು ಇದಕ್ಕೆ ಸ್ವಲ್ಪ ನೀರು ಸಾಕಾಗುತ್ತದೆ. ಯಾವುದೇ ರೀತಿಯ ಹವಾಮಾನದಲ್ಲಿ ಸಹ ಇದು ಬೆಳೆಯಬಲ್ಲದು. ನನ್ನ ಮನೆಯ ತೋಟದಲ್ಲಿ ದೊಡ್ಡಪತ್ರೆಯ ಸಸ್ಯವಿದ್ದು, ಅದರ ಚಿತ್ರ ಮತ್ತು ಅದರ ಎಲೆಗಳನ್ನು ಉಪಯೋಗಿಸಿ ಕೊಂಡು ತಯಾರಿಸಲಾದ ಅಡುಗೆಗಳ ಚಿತ್ರವನ್ನು ಇಲ್ಲಿ ನೀವು ಕಾಣಬಹುದು
ದೊಡ್ಡಪತ್ರೆಯ ಟೀ
5 ದೊಡ್ಡಪತ್ರೆ ಎಲೆ ,10 ತುಳಸಿ ಎಲೆ, ಒಂದು ಚೂರು ಶುಂಠಿ, ಸಕ್ಕರೆ, ಹಾಲು ,ನೀರು
ವಿಧಾನ :
ಒಂದು ಲೋಟ ನೀರಿಗೆ ಐದು ದೊಡ್ಡಪತ್ರೆ ಎಲೆ 10 ತುಳಸಿ ಎಲೆ ಮತ್ತು ಶುಂಠಿಯನ್ನು ಹಾಕಿ ಅರ್ಧಲೋಟ ಆಗುವ ತನಕ ಕುದಿಸಬೇಕು ಅದಕ್ಕೆ ಸಕ್ಕರೆ ಹಾಲು ಹಾಕಿ ಒಂದು ಕುದಿ ಬಂದರೆ ತಯಾರಾಗಿರುತ್ತದೆ.
ದೊಡ್ಡಪತ್ರೆಯ ಕಷಾಯ
ಐದು ದೊಡ್ಡಪತ್ರೆ ಎಲೆ, 10 ತುಳಸಿ ಎಲೆ, ಒಂದು ಚೂರು ಶುಂಠಿ, ಅರ್ಧ ನಿಂಬೆ, ಅರಶಿನ, 2 ಚಮಚ ಜೇನುತುಪ್ಪ ಒಂದು ಲೋಟ ನೀರು.
ವಿಧಾನ
ಒಂದು ಲೋಟ ನೀರನ್ನು ಕುದಿಯಲು ಇಡಬೇಕು ಅದಕ್ಕೆ ಐದು ದೊಡ್ಡಪತ್ರೆ ಎಲೆ, ಚಿಟಿಕೆ ಅರಸಿನ, 10 ತುಳಸಿ ಎಲೆ ಹಾಕಿ ಚೆನ್ನಾಗಿ ಕುದಿಸಬೇಕು ಕುದಿಬಂದ ನೀರನ್ನು ತಣ್ಣಗೆ ಮಾಡಿ ಅದಕ್ಕೆ ಜಜ್ಜಿ ತೆಗೆದು ಶುಂಠಿಯರಸ ಅರ್ಧ ನಿಂಬೆಹಣ್ಣಿನ ರಸ ಜೇನುತುಪ್ಪ ಹಾಕಿ ಚೆನ್ನಾಗಿ ಕಲಸಿ. ಇಲ್ಲಿಗೆ ದೊಡ್ಡಪತ್ರೆಯ ಕಷಾಯ ಸಿದ್ಧವಾಗಿದೆ.
ದೊಡ್ಡಪತ್ರೆ ಎಳ್ಳು ಚಟ್ನಿ
ದೊಡ್ಡಪತ್ರೆ ಎಲೆ 10, ಬೆಳ್ಳುಳ್ಳಿ ,ತುಪ್ಪ, ತೆಂಗಿನಕಾಯಿ ಒಂದು ಮುಷ್ಟಿ, 1 ಚಮಚ ಕಪ್ಪುಎಳ್ಳು, ನಿಂಬೆ ಗಾತ್ರದ ಬೆಲ್ಲ, ನೆಲ್ಲಿ ಗಾತ್ರದ ಹುಣಸೆಹಣ್ಣು.
ವಿಧಾನ
ಕತ್ತರಿಸಿದ ಎಲೆಯನ್ನು ತುಪ್ಪದಲ್ಲಿ ಚೆನ್ನಾಗಿ ಬಾಡಿಸಿಕೊಳ್ಳಬೇಕು ಮತ್ತೆ ಮೇಲಿರುವ ಎಲ್ಲಾ ವಸ್ತುಗಳನ್ನು ಹಾಕಿ ರುಬ್ಬಿ ದಲ್ಲಿ ಚಟ್ನಿ ಸಿದ್ಧವಾಯಿತು. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ...
ದೊಡ್ಡಪತ್ರೆ ಬಜ್ಜಿ
1ಕಪ್ ಕಡ್ಲೆಹಿಟ್ಟು,10ದೊಡ್ಡಪತ್ರೆ ಎಲೆಗಳು,
1/2 ಟೀಸ್ಪೂನ್ ಅಚ್ಚ ಖಾರದ ಪುಡಿ,2 ಟೀಸ್ಪೂನ್ ಅಕ್ಕಿ ಪುಡಿ,ಒಂದು ಸಣ್ಣ ಚಿಟಿಕೆ ಅಡುಗೆ ಸೋಡಾ,ಒಂದು ದೊಡ್ಡ ಚಿಟಿಕೆ ಇಂಗು,
ಎಣ್ಣೆ ಬಜ್ಜಿ ಕಾಯಿಸಲು,ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ:
ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ ಕೊಳ್ಳ ಬೇಕು. ಅದರಲ್ಲಿ ಎಲೆ ಯನ್ನು ಮುಳುಗಿಸಿ ಎಣ್ಣೆ ಯಲ್ಲಿಕಾಯಿದ್ದಿದರೇ ಆಯಿತು.
ದೊಡ್ಡಪತ್ರೆ ಈರುಳ್ಳಿ ಚಟ್ನಿ:
15-20 ದೊಡ್ಡಪತ್ರೆ ಎಲೆಗಳು,1ದೊಡ್ಡ ಈರುಳ್ಳಿ , ನೆಲ್ಲಿ ಗಾತ್ರದ ಹುಣಿಸೆಹಣ್ಣು,1 ಕಪ್ ತೆಂಗಿನತುರಿ,1 ಚಮಚ ಸಾರಿನ ಪುಡಿ / ಸಾಂಬಾರ್ ಪುಡಿ / (1/2 ಟೀಸ್ಪೂನ್ ಧನಿಯಾ ಪುಡಿ + 1/2 ಟೀಸ್ಪೂನ್ ಅಚ್ಚಖಾರದ ಪುಡಿ + 1/4 ಟೀಸ್ಪೂನ್ ಜೀರಿಗೆ ಪುಡಿ), ತುಪ್ಪ, ಉಪ್ಪು ರುಚಿಗೆ ತಕ್ಕಷ್ಟ
ವಿಧಾನ
ಎಲೆಯನ್ನು ಚೆನ್ನಾಗಿ ತುಪ್ಪದಲ್ಲಿ ಬಾಡಿಸಿಕೊಂಡು, ಮೇಲಿರುವ ಎಲ್ಲಾ ವಸ್ತುಗಳನ್ನು ಹಾಕಿ ರುಬ್ಬಿ ಕೊಂಡು ನೀರುಳ್ಳಿಯ ಒಗ್ಗರಣೆ.
ದೊಡ್ಡಪತ್ರೆ ತಂಬುಳಿ 15-20 ದೊಡ್ಡಪತ್ರೆ ಎಲೆಗಳು,1/2ಟೀಸ್ಪೂನ್ ಜೀರಿಗೆ,1/2 ಟೀಸ್ಪೂನ್ ಕಾಳು ಮೆಣಸು,1/2 ಕಪ್ ತೆಂಗಿನತುರಿ,1ಕಪ್ ಮೊಸರು,1/2 ಒಣ ಮೆಣಸಿನಕಾಯಿ,2ಟೀಸ್ಪೂನ್ ಅಡುಗೆ ಎಣ್ಣೆ,1/4 ಟೀಸ್ಪೂನ್ ಸಾಸಿವೆ, ಉಪ್ಪುರುಚಿಗೆ ತಕ್ಕಷ್ಟು.
ವಿಧಾನ:
ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ, ಕತ್ತರಿಸಿ. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಹಾಕಿ.
ಸೊಪ್ಪು ಬಾಡಿದ ಕೂಡಲೇ ತೆಂಗಿನತುರಿ ಹಾಕಿ ಹುರಿದ ಎಲೆ, ಜೀರಿಗೆ ಮತ್ತು ಕಾಳುಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿಯೊಂದಿಗೆ ರುಬ್ಬಿಕೊಳ್ಳಿ. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಅನ್ನ, ದೋಸೆ ಅಥವಾ ಇಡ್ಲಿಯೊಂದಿಗೆ ರುಚಿಯಾಗಿರುತ್ತದೆ.
ದೊಡ್ಡಪತ್ರೆ ರಸಂ
15-20 ದೊಡ್ಡಪತ್ರೆ ಎಲೆಗಳು, 2ಮಧ್ಯಮ ಗಾತ್ರದ ಟೊಮ್ಯಾಟೋ,1/2 ನಿಂಬೆ ಗಾತ್ರದ ಹುಣಿಸೆಹಣ್ಣು,1/2 ನಿಂಬೆ ಗಾತ್ರದ ಬೆಲ್ಲ,1/2 ಟೀಸ್ಪೂನ್ ಜೀರಿಗೆ,1//2 ಟೀಸ್ಪೂನ್ ಸಾಸಿವೆ,1 ಒಣಮೆಣಸಿನ ಕಾಯಿ,1//2 ಟೀಸ್ಪೂನ್ ಗುದ್ದಿದ ಕಾಳುಮೆಣಸು,1/4 ಅರಶಿನ,1ಹಸಿರು ಮೆಣಸಿನಕಾಯಿ,4-5 ಕರಿಬೇವಿನ ಎಲೆ,2ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ,ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ:
ದೊಡ್ಡಪತ್ರೆ ಎಲೆ ಮತ್ತು ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ ಮತ್ತು ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ. ನಂತರ ಪುಡಿಮಾಡಿದ ಕಾಳುಮೆಣಸು ಮತ್ತು ಅರಿಶಿನ ಪುಡಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಗುಚಿ.
ಕತ್ತರಿಸಿದ ಟೊಮೆಟೊ ಸೇರಿಸಿ ಟೊಮ್ಯಾಟೊ ಮೃದು ಆಗುವ ತನಕ ಹುರಿಯಿರಿ. ನಂತರ ಕತ್ತರಿಸಿದ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
ಈಗ ಉಪ್ಪು , ಹುಣಸೆ ರಸ, ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. ಕಡಿಮೆ ನೀರು ಬಳಸಿಕೊಂಡು ಗೊಜ್ಜಿನಂತೆ ಮಾಡಿದಲ್ಲಿ ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ.
ಆರೋಗ್ಯಕ್ಕೂ ಉಪಕಾರ ವಾದ ಸಸಿ:
5-6 ದೊಡ್ಡಪತ್ರೆ ಎಲೆಗಳನ್ನು ಸ್ಟೋವ್ ಅಥವಾ ಬಾಣಲೆಯಲ್ಲಿ ಬಾಡಿಸಿಕೊಂಡು ರಸವನ್ನು ಹಿಂಡಿ ತೆಗೆಯಿರಿ. ರಸದ ಅರ್ಧ ಭಾಗದಷ್ಟು ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಚಿಕ್ಕ ಮಕ್ಕಳಿಗೆ ಇದು ಬಹಳ ಪರಿಣಾಮಕಾರಿ.
ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.
ದೊಡ್ಡಪತ್ರೆ ಎಲೆಗಳನ್ನು ಮೇಲೆ ಪಟ್ಟಿ ಮಾಡಿದ ಅಡುಗೆಗಳನ್ನು ಮಾಡುವ ಮೂಲಕ ಅಥವಾ ಬೇರೆ ಅಡುಗೆಗಳೊಂದಿಗೆ ಸುವಾಸನೆಗೆ ಸೇರಿಸುವ ಮೂಲಕ ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳಿ.
***
ದೊಡ್ಡ ಪತ್ರೆಯ ಆರೋಗ್ಯ ಪ್ರಯೋಜನಗಳು !!!
🌿🌿🌹🌼🌼🌼🌿🌹🌼🌿🌿
ಕೆಲವೊಮ್ಮೆ ನಮ್ಮ ಹಿತ್ತಲಿನಲ್ಲಿಯೇ ಇರುವ ಗಿಡಗಳಲ್ಲಿಯೇ ನಮ್ಮ ಆರೋಗ್ಯಕ್ಕೆ ಬೇಕಾಗುವ ಎಷ್ಟೋ ಪೋಷಕಾಂಶಗಳು ಇರುತ್ತವೆ. ಆದರೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ. ಸಾಮಾನ್ಯವಾಗಿ ದೊಡ್ಡಪತ್ರೆಯನ್ನು ನಾವೆಲ್ಲರೂ ನೋಡಿರುತ್ತೇವೆ. ಇದಕ್ಕೆ ಹಳ್ಳಿ ಭಾಷೆಯಲ್ಲಿ ಸಾಂಬಾರ್ ಬಳ್ಳಿ ಅಂತಲೂ ಕರೆಯುತ್ತಾರೆ.
- ದೊಡ್ಡಪತ್ರೆ ಎಲೆ, ತುಳಸಿ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.
- ಮೈ ಮೇಲೆ ಪಿತ್ತದ ಗಂದೆಗಳು ಎದ್ದಾಗ ದೊಡ್ಡಪತ್ರೆಯ ಎಲೆಯ ರಸವನ್ನು ಸೇವಿಸುವುದು ಮತ್ತು ಮೈ ಗೆ ಹಚ್ಚಿಕೊಳ್ಳುವ ಪದ್ಧತಿ ಹಲವು ಕಡೆಗಳಲ್ಲಿದೆ.
- ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ.
- 1 ವಾರದ ವರೆಗೆ ದೊಡ್ಡಪತ್ರೆಯ ಎಲೆಗಳನ್ನು ತಿಂದರೆ ಅರಿಶಿನ ಕಾಮಾಲೆಯು ವಾಸಿಯಾಗುತ್ತದೆ.
ದೊಡ್ಡಪತ್ರೆ ಎಲೆಯ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ.
- ದೊಡ್ಡಪತ್ರೆಯ ಎಲೆಯನ್ನು ಉಪ್ಪು ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ.
- ದೊಡ್ಡಪತ್ರೆ ಎಲೆಗಳ ರಸ ಮತ್ತು ಅಷ್ಟೇ ಪ್ರಮಾಣದ ಎಳ್ಳೆಣ್ಣೆ ಸೇರಿಸಿ ಇದನ್ನು ನಿತ್ಯ ತಲೆಗೆ ಹಾಕುವುದರಿಂದ ತಲೆ ತಂಪಾಗುವುದರೊಂದಿಗೆ ಕಣ್ಣುರಿ ಕಡಿಮೆಯಾಗುತ್ತದೆ.
- ದೊಡ್ಡಪತ್ರೆ ಎಲೆಗಳಿಂದ ಚಟ್ನಿಯನ್ನು ಮಾಡಿಕೊಂಡು ಸೇವಿಸುವುದರಿಂದ ತಲೆಸುತ್ತು ನಿಲ್ಲುತ್ತದೆ.
- ದೊಡ್ಡಪತ್ರೆ ಎಲೆ, ಕಾಳುಮೆಣಸು ಮತ್ತು ಉಪ್ಪನ್ನು ಅಗೆದು ರಸ ಕುಡಿದರೆ ಬಾಯಿಯ ದುರ್ನಾತ ದೂರವಾಗಿ ಪಿತ್ತ ಶಮನವಾಗುತ್ತದೆ.
- ಕಜ್ಜಿ, ತುರಿಕೆಗಳಾದಾಗ ದೊಡ್ಡಪತ್ರೆ ಎಲೆಗಳನ್ನು ಉಜ್ಜಿಕೊಂಡರೆ ಚರ್ಮವ್ಯಾಧಿಗಳು ಗುಣವಾಗುವವು.
- ದೊಡ್ಡಪತ್ರೆ ಎಲೆಗಳಲ್ಲಿ ಕಾಲರಾ ರೋಗವನ್ನು ಗುಣಪಡಿಸುವ ಅಂಶಗಳಿವೆ.
- ದೊಡ್ಡಪತ್ರೆ ಎಲೆಗಳನ್ನು ಬಾಡಿಸಿ ರಸವನ್ನು ತೆಗೆದು ಜೇನು ಅಥವಾ ಕಲ್ಲುಸಕ್ಕರೆಯನ್ನು ಸೇರಿಸಿ ದಿನಕ್ಕೆ 3 ಬಾರಿ ಕುಡಿಯುವುದರಿಂದ ಭೇದಿಯು ಕಡಿಮೆಯಾಗುತ್ತದೆ.
- ದೊಡ್ಡಪತ್ರೆಯ ಹಸಿ ಎಲೆಯ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.
- ಮಕ್ಕಳಿಗೆ ನೆಗಡಿಯಾದಾಗ ದೊಡ್ಡಪತ್ರೆ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ರಸವನ್ನು ನೆತ್ತಿಗೆ ಹಿಂಡುವುದರಿಂದ ಕಡಿಮೆಯಾಗುತ್ತದೆ.
****
No comments:
Post a Comment