SEARCH HERE

Friday, 20 March 2020

ವಾಯು ಸ್ತುತಿಃ ಹರಿ ವಾಯು ಸ್ತುತಿಃ vayu stutih harivayu stutih

ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯ ವಿರಚಿತಾ
🙏 ಹರಿವಾಯು ಸ್ತುತಿಃ🙏
ಮೂಲಶ್ಲೋಕಗಳು, ತಾತ್ಪರ್ಯ, ವಿಶೇಷಾಂಶಗಳೊಂದಿಗೆ 


ಹರಿವಾಯುಸ್ತುತಿ ಎಂಬ ಈ ಹೆಸರೇ ಹರಿ ಮತ್ತು ವಾಯುಗಳನ್ನು ಸ್ತುತಿಸುವುದೇ ಈ ಕೃತಿಯ ಉದ್ದೇಶ ಎಂದು ತಿಳಿಸುತ್ತಿದೆ.‌ಹರಿ- ವಾಯು ಎಂಬ ಈ ಜೋಡಿಯು ದೈವ ಹಾಗೂ ಗುರುಗಳ ಅನ್ಯೋನ್ಯತೆಯನ್ನು ಬಿಂಬಿಸುತ್ತದೆ. ಗುರ್ವನುಗ್ರಹ ದೈವಾನುಗ್ರಹಗಳು ಸಾಧಕನಿಗೆ ಅತ್ಯಂತ ಅವಶ್ಯವಾದವುಗಳು. ಅದನ್ನು ಮಹಿಮೆಯ ಮೂಲಕ ಭಕ್ತಿ- ನಿಷ್ಠೆ ಗಳನ್ನು ಧೃಡಗೊಳಿಸುವ ಕೆಲಸ ಕೃತಿಯಿಂದ ಸರಾಗವಾಗಿ ಸಾಗಿದೆ ಎನ್ನಬಹುದು. 



ಈ ಕೃತಿಯನ್ನು ರಚಿಸಿದವರು ತ್ರಿವಿಕ್ರಮ‌ಪಂಡಿತಾಚಾರ್ಯರು , ಮಹಾವಿದ್ವಾಂಸರು ಎಂಬ ಹಿನ್ನೆಲೆಯೊಂದಿಗೆ , ಮಧ್ವರನ್ನು ನೇರ ಕಂಡವರು ಮೊದಲು ಅದ್ವೈತದಿಗ್ದಂತಿಗಳಾಗಿದ್ದು ಪ್ರಖ್ಯಾತ ವಿಮರ್ಶಕರಾಗಿದ್ದವರು. ವಾದ -ವಿವಾದಗಳ ಅನಂತರ ಸತ್ಯದ ನಿಚ್ಚಳತೆ ಇವರಿಗೆ ಕೆಚ್ಚೆದೆ ಮೂಡಿಸಿತು.ಹೀಗಾಗಿ ಮಾಧ್ವಸಿದ್ದಾಂತವನ್ನು ಒಪ್ಪಿಕೊಂಡರು.‌ಹೀಗಾಗಿ ತ್ರಿವಿಕ್ರಮ ಪಂಡಿತಾಚಾರ್ಯರು ಭಾವುಕರಾಗದೆ ವಸ್ತುಸ್ಥಿತಿಯ ಅನ್ವೇಷಕರಾಗಿ ಮೆರೆದರು. ಇಂತಹ ಸಮಕಾಲೀನ ವಿಮರ್ಶಕರು- ಪ್ರತಿಪಕ್ಷ ಧುರೀಣರು ಮಾಧ್ವಸಿದ್ದಾಂತವನ್ನು ಒಪ್ಪಿಕೊಂಡರು ಎನ್ನುವುದು ಮಾಧ್ವಶಾಸ್ತ್ರದ ಪ್ರತಿಷ್ಠೆಯೇ ಸರಿ! ಹೀಗಾಗಿ ಇದೊಂದು ಅನುಭಾವಿಕೃತಿ. ಆದ್ದರಿಂದಲೇ ಏಳು ಶತಮಾನಗಳು ಮುಗಿದರೂ ಈ ಸ್ತುತಿ ವೈಭವದಲ್ಲಿ ಏಳು- ಬೀಳುಗಳು ಆರ್ಭಿವಿಸಲಿಲ್ಲ..



ವಿಮತೀಯರಾದರೂ ವಿಮರ್ಶಕರಾಗಿದ್ದು ಮೆರೆದ ತ್ರಿವಿಕ್ರಮರು ಕೃತಿಯನ್ನು ಎಲ್ಲರೂ ಒಪ್ಪಿದರು. ಗೃಹಸ್ಥ ರಂತೆ ಸಂನ್ಯಾಸಿಗಳೂ ಕೂಡ ಇದರ ಪಾರಾಯಣ- ಪುನಶ್ಚರಣೆಗಳನ್ನು ಇಟ್ಟುಕೊಂಡಿದ್ದಾರೆ. ವಾಯುಸ್ತುತಿಯನ್ನು ತಿಳಿಯದವರು ಮಾಧ್ವರೇ ಅಲ್ಲಾ! ಅನ್ನುವಷ್ಟರ ಮಟ್ಟಿಗೆ ಈ ಕೃತಿ ಜನ ಮನದಲ್ಲಿ ಸೇರಿಹೋಗಿದೆ.

ಇಷ್ಟೆಲ್ಲ ಮಹಿಮೆ ಕಾರಣ ಎಂದರೆ......
 1 ಇದರ ಆವಿರ್ಭಾವಪ್ರಸಂಗ
2 ವಾಯುದೇವರ ಅಂಗೀಕಾರಮುದ್ರೆ
3 ಅದರ ಫಲನೀಡುವ ಶಕ್ತಿ
4 ಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾಗುವ ಸಕಲಗುಣಗಳ ಸಂಕಲನ
5 ಯತಿಶ್ರೇಷ್ಠರಿಂದ ಮುಕ್ತಠಂದ ಪ್ರಶಂಸೆ
6 ಪ್ರತಿಪಾದ್ಯ ದೇವತೆಯ ವೈಭವ


ಆವಿರ್ಭಾವ ಪ್ರಸಂಗ


ಸಾಮಾನ್ಯವಾಗಿ ಕವಿಗಳು ತಮಗೆ ಮೆಚ್ಚುಗೆಯಾದ ವಿಚಾರವನ್ನು ಒಂದೆಡೆ ಕುಳಿತು ವಿವರಿಸುತ್ತಾ ಕಲ್ಪನೆಗಳನ್ನು ಸೇರಿಸುತ್ತಾ ಹೋಗುತ್ತಾರೆ.‌ಹೀಗಾದಾಗ ಕವಿಯ ಮೇಲಿನ ಪ್ರೀತಿಯಿಂದಲೂ, ಕಲ್ಪನೆಗಳ ರೋಚಕತೆಯಿಂದಲೋ , ರಾಜಾಶ್ರಯದಿಂದಲೋ , ಆ ಕೃತಿ ಪ್ರಸಿದ್ದವಾಗುತ್ತದೆ. ಕಾಲಕಳೆದಂತೆ ಕಣ್ಮರೆಯಾಗುತ್ತದೆ. ಅಥವಾ ಕೆಲವು ವರ್ಗಕ್ಕೆ ಸೀಮಿತವಾಗುತ್ತದೆ..
ಆದರೆ ವಾಯುಸ್ತುತಿ ಕಲ್ಪನೆ- ರಾಜಾಶ್ರಯ ಆಧಾರದಂದ ಬಂದುದಲ್ಲ ಆಚಾರ್ಯ ಮಧ್ವರು ಭಗವಂತನನ್ನು ಆರಾಧಿಸುತ್ತಿರುವಾಗ ಈ ತ್ರಿವಿಕ್ರಮ ಪಂಡಿತಾಚಾರ್ಯರು ಇಣುಕಿ ನೋಡಿದರಂತೆ,ಮಧ್ವಾಚಾರ್ಯರು ರಾಮ- ಕೃಷ್ಣ- ವೇದವ್ಯಾಸರನ್ನು ಆರಾಧಿಸುತ್ತಿದ್ದರು. ಇದನ್ನು ಕಂಡ ತ್ರಿವಿಕ್ರಮರ ಅನುಭವ ಪದ್ಯರೂಪದಲ್ಲಿ ಹೊರಹೊಮ್ಮಿತು. ಹೀಗಾಗಿ ತ್ರಿವಿಕ್ರಮರ ಪಾಂಡಿತ್ಯ ಪದಬಂದ ರೂಪ ಪದ್ಯಕ್ಕೆ ಕಾರಣವಾದರೆ, ಅನುಭವವೇ ವಸ್ತುವಿಷಯವಾಯಿತು, ಹೀಗಾಗಿ ತ್ರಿವಿಕ್ರಮರಿಂದ ಹೊರಹೊಮ್ಮಿದ ಈ ಕೃತಿ ಸತ್ಯದ ಪ್ರತಿ ಫಲನವಾಗಿ ಉಳಿಯಿತು. ಹೀಗಾಗಿ ಇದು ಭಕ್ತರ ದೀಕ್ಷಾಶ್ಲೋಕವಾಗಿ ನಿರೂಪಿತವಾಗಿದೆ.‌ಮಾಧ್ವದೀಕ್ಷೆಯ ಪ್ರಭೋದಕವಾಗಿದೆ. ಇದರ ಆವಿರ್ಭಾವನ್ನು ಸೂಚಿಸುವ ಶ್ಲೋಕಗಳು ಹೀಗಿವೆ....


ಅದ್ರಾಕ್ಷೀತ್ ತ್ರೀಣಿ ರೂಪಾಣಿ ಕದಾಚಿತ್ ಬಹುಭಾಗ್ಯವಾನ್ ,ಶ್ರೀಮದಾಚಾರ್ಯ ವರ್ಯಾಣಾಂ ತಥಾ ರಾಮಾಸ್ಯ ಕೃಷ್ಣಯೋಃ ತತ್ರಾಪಿ ಗುರುಭಿಃ ಸೇವ್ಯಮಾನಾನಿ ಪರಮಾದರತ್ ಪರಮಾನಂದಮಗ್ನೋsಸೌ ಚಕ್ರೇ ವಾಯುಸ್ತುತ್ತಿಃ ಸುಧೀಃ



ವಾಯುದೇವರ ಅಂಗೀಕಾರ ಮುದ್ರೆ



ಆವಿರ್ಭಾವವೇ ಅನುಭವದಿಂದ ಹೊರಹೊಮ್ಮಿದಂತೆ ಇದರ ಆಧ್ಯಾತ್ಮತೆಗೆ ಮತ್ತೊಂದು ಗರಿಮೂಡಿದುದು ವಾಯುದೇವರ ಅಂಗೀಕಾರದ ಮುದ್ರೆಯಿಂದ ಸ್ತುತಿಯನ್ನು ರಚಿಸಿದ ತ್ರಿವಿಕ್ರಮ ಪಂಡಿತರು ಅದನ್ನು ದಾಖಲಿಸಿ ಮಧ್ವಾಚಾರ್ಯರ ಪರಿಶೀಲನೆಗೆ ಒಪ್ಪಿಸಿದರಂತೆ ಮಧ್ವಾಚಾರ್ಯರಂತೂ ಎಂದೂ ಎಲ್ಲೂ ಅಸತ್ಯದ ಪ್ರಶಂಸೆಯನ್ನು ಅಪ್ರಾಮಾಣಿಕ ವಿಷಯವನ್ನು ಸಹಿಸಿದವರಲ್ಲ. ಅವರು ಇದು ಪರಿಶುದ್ದವಾಗಿದೆ.‌ಇದು ಭಗವಂತನಿಗೆ ಪ್ರೀತಿಯಾಗುತ್ತದೆ ಎಂದು ಸಮ್ಮತಿಸಿ ಇದರೊಂದಿಗೆ ವಿಷ್ಣುವನ್ನೇ ಸ್ತುತಿಸುವ ಸ್ತೋತ್ರವನ್ನು ರಚಿಸಿ ಸೇರಿಸಿದರಂತೆ. ಹೀಗಾಗಿ ಜೀವೋತ್ತಮರ ಅಂಗೀಕಾರ ಮುದ್ರೆಯೊಂದಿಗೆ, ವಿಷ್ಣುಸ್ತುತಿಯ ರಚನೆಯೂ ಸೇರಿ ಇದು ಭಗವಂತನಿಗೆ ನೇರ ಸೇರುವಂತೆ ಆಯಿತು.‌ತ್ರಿವಿಕ್ರಮರು ರಚಿಸಿದ ಪ್ರತಿಶ್ಲೋಕವೂ ಸಹ ಹರಿವಾಯುಗಳನ್ನು ಒಟ್ಟಿಗೆ ಸ್ತುತಿಸುತ್ತದೆ.‌ ಆದರೂ ವಿಷ್ಣುಪಾರಮ್ಯವನ್ನೇ ಪ್ರತ್ಯೇಕ ಪ್ರಕಟಿಸುವ ಮಂಗಳ ಶ್ಲೋಕ ವಿಷ್ಣಸರ್ವೋತ್ತಮತ್ವದ ಧಾರ್ಢ್ಯಕ್ಕೆ ಪೀಠಿಕೆಯಾಯಿತು. ಮಧ್ವರ ಮೂಲಕ‌ ಭಗವಂತನಿಗೆ ನೇರ ಅರ್ಪಿಸಿದಂತೆಯೂ ಆಯಿತು. ಇಂತಹ ಭಾಗ್ಯ ಬೇರಾವ ಸಮಕಾಲೀನರ ಕೃತಿಗೂ ಲಭ್ಯವಾಗಿಲ್ಲ ಎಂಬುದು ಗಮನಾರ್ಹ..



3 ಅದರ ಫಲನೀಡುವ ಶಕ್ತಿಃ



ತತ್ತ್ವಜ್ಞಾನ ಗುರ್ವನುಗ್ರಹಗಳೊಂದಿಗೆ ಸ್ತುತಿಯ ಜನಪ್ರಿಯತೆಗೆ ಮತ್ತೊಂದು ಮಾನದಂಡ ಎಂದರೆ ಅದರ ಫಲನೀಡುವ ಶಕ್ತಿ.‌ಇತರ ಉಳಿದ ಸ್ತೋತ್ರಗಳು ಪೂರ್ತಿ ಪಠನದ ಅನಂತರ ಒಂದೋ,ಎರಡೋ ಫಲಗಳನ್ನು ನೀಡಿಯಾವು ಅಥವಾ ಫಲಗಳ ಸಾಲನ್ನು ಅಂತ್ಯದಲ್ಲಿ ಒಟ್ಟಾಗಿ ಹೇಳವುದು ಪದ್ದತಿ. ಆದರೆ ವಾಯುಸ್ತುತಿ ಪ್ರತಿಯೊಂದು ಶ್ಲೋಕವೂ ಸಹ ವಿಶಿಷ್ಠವಾದ ಫಲವನ್ನು ನೀಡುತ್ತದೆ. ಹೀಗಾಗಿ ಪ್ರತಿಯೊಂದು ಶ್ಲೋಕವೂ ಮಂತ್ರತುಲ್ಯವಾಗಿದೆ. ಇಡೀ ಸಮೂಹವಂತೂ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿದೆ. ಹೀಗಾಗಿ ಇದರ ಫಲವನ್ನು ಕಂಡವರು ಅದನ್ನುಭವಿಸಿ ಜಗತ್ತಿಗೆ ಸಾರಿದರು.



ಅದರಲ್ಲೂ ಮೋಕ್ಷದ ಸಾಧನ ಎನಿಸಿದ ತತ್ತ್ವಜ್ಞಾನವನ್ನು ತಿಳಿಯುವ  ಯೋಗ್ಯತೆ ಈ ಸ್ತುತಿಯಿಂದ ಲಭಿಸುತ್ತದೆ. ವಾದಿರಾಜತೀರ್ಥರಂತೂ ತಾನು ವಾಯುಸ್ತುತಿಯ ಉಪಾಸನೆಯಿಂದಲೇ ಮಧ್ವರ ಗ್ರಂಥಗಳಿಗೆ ವ್ಯಾಖ್ಯಾನ ಮಾಡುವ ಸಾಮರ್ಥ್ಯ ವನ್ನು ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ...



ಮಾಧ್ವಗ್ರಂಥಸ್ಯಾಭಿಸಂಧಿಂ ವಿದುರ್ದೇವಾ ನ ಮಾನವಾಃ|

ವಾಯುಸ್ತುತಿರತೋನಿತ್ಯಂ ವೇದಾಹಂ ತು ಕಥಂಚನ||


ಮಧ್ವಾಚಾರ್ಯರ ಗ್ರಂಥಗಳ ಅಭಿಪ್ರಾಯವನ್ನು ದೇವತೆಗಳೇ ಸವಿಯಬಲ್ಲರು. ಮಾನವರು ಸವಿಯಲಾರರು.‌ಆದರೂ ವಾಯುಸ್ತುತಿಯಲ್ಲಿ ನಿತ್ಯ ನಿಮಗ್ನನಾಗಿರುವಿವುದರಿಂದ ಸ್ವಲ್ಪ ಮಟ್ಟಿಗೆ ತಿಳಿದಿದ್ದೇನೆ.‌ "ಅಯಮಿಹ ಸುಕೃತಿಂ ವಾಯುದೇವೋ ವಿದಧ್ಯಾತ್" ನನ್ನನ್ನು ವಾಯುದೇವ ಬುದ್ದಿವಂತನನ್ನಾಗಿ ಮಾಡಲಿ ಎಂದು ಬೇಡುತ್ತಿದ್ದೆ.‌ಅದರ ಪ್ರಭಾವದಿಂದ ನನಗೆ ತಿಳಿವು ಮೂಡಿದೆ ಎನ್ನುತ್ತಾರೆ ವಾದಿರಾಜರು.



ವಾದಿರಾಜರಂತಹ ಮಹನೀಯರು, ಇತರ ಸಾಧಾರಣ ಸಾಧಕರೂ ಸಹ ಅದರ ಫಲ ಅನುಭವಿಸಿರುವುದರಿಂದ ವಾಯುಸ್ತುತಿ ಪ್ರಭಾವ ಪರಂಪರೆಯಿಂದಲೂ ಪ್ರಭಾವಶಾಲಿಯಾಗಿ ಬೆಳೆದಿದೆ....



🙏 ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ🙏


🙏 ಶ್ರೀ ಹರಿ ವಾಯುಸ್ತುತಿ 🙏
ಭಾಗ 2


4 ಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾಗುವ ಸಂಕಲನ :



ಸಾಧಕರು ತಮ್ಮ ವ್ಯಕ್ತಿತ್ವದ ಸಂಪೂರ್ಣ ವಿಕಸನಕ್ಕೆ ಅನೇಕ ಗುಣಗಳಿಂದ ಪರಿಪುಷ್ಟರಾಗಿರಬೇಕು ಉತ್ತಮ ವಾಕ್ಯುದ್ದಿ ನಿರ್ಮಲ ಮನಸ್ಸು - ದೇಹದಾರ್ಢ್ಯ - ಎಚ್ಚರ - ಗುರ್ವನುಗ್ರಹ , ದೈತ್ಯರಿಂದ ಪ್ರಭಾವಕ್ಕೊಳಗಾಗದಿರುವದು, ಗ್ರಂಥಗಳ ಜ್ಞಾನ ವೈರಾಗ್ಯಲಾಭ ಸಿದ್ದಿ - ಆರೋಗ್ಯ ಹೀಗೆ ಇವೇ ಮೊದಲಾದವು ಅವಶ್ಯಕ.ಅವನ್ನೆಲ್ಲಾ ನೀಡುವ ಈ ಸ್ತುತಿ ಇಂದಿಗೂ ಎಂದೆಂದಿಗೂ ಸಾಧಕರ ಜೀವನಾಡಿ ಎನಿಸಿರುತ್ತದೆ. ಉಳಿದ ಸ್ತೋತ್ರಗಳು ಕೇವಲ ಶ್ರದ್ದೆ ತುಂಬಿಸಿದರೆ ಇದು ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಸಾಧಕ ಹೇಗೆ ಕ್ರಮೇಣ ಎತ್ತರಕ್ಕೆ ಏರಿ ಹರಿಯ ಅನುಗ್ರಹ ಪಡೆಯಬಹುದು ಎಂದು ತಿಳಿಸುತ್ತದೆ .



5 ಯತೀಶ್ರೇಷ್ಠರಿಂದ ಮುಕ್ತಕಂಠದ ಪ್ರಶಂಸೆ:



ಯತಿ ಶ್ರೇಷ್ಠರುಗಳೂ ಇದನ್ನು ತಪ್ಪದೇ ಪಾರಾಯಣ ಮಾಡುತ್ತಾ ಗೌರವಿಸಿದ್ದಾರೆ. ಇದಕ್ಕೆ ಸರಿಸಮನಾದ ಇನ್ನೊಂದು ವಾಯುಸ್ತುತಿ ಎಂಬುದು ಇಲ್ಲ.‌ಇದರ ಮುಂದೆ ಪರ್ಯಾಯವಾಗಿ ಮತ್ತೊಂದು ಯಾರು ರಚಿಸಿಲ್ಲ. ವಾದಿರಾಜರು ಸಹ ಮುಕ್ತಿಮಲ್ಲಿಕಾ ಗ್ರಂಥದಲ್ಲಿ ಈ ವಾಯುಸ್ತುತಿಯು ಹೇಗೆ ವೇದಗಳ ಅರ್ಥಗಳನ್ನು ಪವಮಾನ ಸೂಕ್ತಗಳನ್ನು ಒಳಗೊಂಡಿದೆ ಎಂದು ವಿಸ್ತರಿಸಿ ಬರೆದಿದ್ದಾರೆ . ಇಂತಹ ಭಾಗ್ಯ ಬೇರೆ ಸುತ್ತಿಗೆ ಕಾಣುವುದು ದುರ್ಲಭ.



6 ಪ್ರತಿಪಾಧ್ಯ ದೇವತೆ ವೈಭವ



ಹಾಗೆಯೇ ಇದರಿಂದ ಅರ್ಚಿಸಲ್ಪಡುವ ದೇವತೆ ಸಾಕ್ಷಾತ್ ಶ್ರೀ ಮನ್ನಾರಾಯಣನೇ ಆಗಿರುವುದರಿಂದ ಸರ್ವೋತ್ತಮನಾದ ಹರಿ, ಜೀವೋತ್ತಮನಾದ ವಾಯು ಇವರಿಬ್ಬರೂ ಈ ಸ್ತುತಿಯ ಆರಾಧ್ಯದೈವರಾಗಿರುವುದೂ ಸಹ ಇದರ ಹಿರಿಮೆಗಳಲ್ಲೊಂದಾಗಿದೆ.



ಇನ್ನೂ ವಾಯುಸ್ತುತಿಯ ಅಂತರಾಳಕ್ಕೆ ಇಳಿದಾಗ ಮಾತು ಮುಗಿಯುವುದಿಲ್ಲ .ತ್ರಿವಿಕ್ರಮ ಪಂಡಿತರು ವ್ಯವಸ್ಥಿತವಾದ ಬದುಕಿನಂತೆ ಇವರ ಚಿಂತನೆಯು ಕ್ರಮಬದ್ಧವಾಗಿದೆ.



"ಆಪಾದಮೌಳಿಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್" ಗುರುಗಳ ಶರೀರವನ್ನು ಪಾದದಿಂದ ಶಿರಃ ಪರ್ಯಂತ ವರ್ಣಿಸಬೇಕು ಎಂಬ ಋಷಿ ಪರಂಪರೆಗನುಗುಣವಾಗಿ ವಾಯುದೇವರ ಜಗದ್ಗುರುಗಳ ಪಾದವನ್ನು ವರ್ಣಿಸಬೇಕು.ತ್ರಿವಿಕ್ರಮರು ಪಾದಕ್ಕಿಂತಲೂ ಮೊದಲು ಕಾಣುವ ಪಾದಪೀಠವನ್ನು ವರ್ಣಿಸುತ್ತಾರೆ. ಆ ಕಾರ್ಯ ನಿರ್ವಣೆಯಲ್ಲಿ ನಾನು ನಿಪುಣನಲ್ಲ ಎಂದು ನೇರ ಹೇಳಿದ್ದಾರೆ. ಹೀಗೆ ಹೇಳವುದು ಎಲ್ಲರ ಬಾಯಲ್ಲಿ ನಿಂತು ನುಡಿಸುವ ಆ ಭಾರತಿಯೂ ಕೂಡ ವಾಯುದೇವರ ಪಾದಧೂಳನ್ನು ಭಾರೀ ಭಕುತಿಯಿಂದ ಸೇವಿಸುವಾಗ ದೇವತೆಗಳೂ ಸಹ ಮುನ್ನುಗ್ಗುತ್ತಾ ಅದನ್ನು ಸೇವಿಸಿ ಅಜ್ಞಾನ ಕಳೆದುಕೊಂಡಿದ್ದಾರೆ. ತಿಳಿವಳಿಕೆ ಪಡೆದುಕೊಂಡಿದ್ದಾರೆ. ಹೀಗಿರುವಾಗ ಅಲ್ಪನಾದ ಮನುಷ್ಯ ಅಸಡ್ಡೆ ಮಾಡಲಾದೀತೆ? ಎನ್ನುತ್ತಾರೆ..



ವಾಯುದೇವರ ಪಾದಧೂಳಿ- ಸಂಜೀವಿನಿಯ ತಂಗಾಳಿ .ರೋಗಗಳಿಗೆ ಮದ್ದು - ಚಿಂತನೆಗಳಿಗೆ ಸಿದ್ದೌಷಧ- ಜ್ಞಾನ ಭಕ್ತಿ ಮೊದಲಾದ ಸದ್ಗುಣಗಳಿಗೆ ಜನ್ಮಭೂಮಿ ಆನಂದಗಳ ವೈವಿಧ್ಯವನ್ನೇ ಸುರಿಸುವ ಆ ಧೂಳಿಯನ್ನು ದೇವತೆಗಳು ಧಾವಂತದಿಂದ ಸೇವಿಸುತ್ತಾರೆ. ಹಾಗೆಂದು ಹೇಳಿ ವಾಯುದೇವರನ್ನು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾ ಕೆಟ್ಟವರ ಸುದ್ದಿಗೆ ಹೋಗದೆ ಜನಪ್ರೀಯ ಸಾಧು ಎನ್ನಲಾಗದು..‌



"ಮುಖ್ಯಪ್ರಾಣನೀವು ನಂಬದ ಜನರ ಗಂಟಲಗಾಣ" ಎನ್ನುವಂತೆ ಅಯೋಗ್ಯರನ್ನು ಅಂಧಂತಮನಸ್ಸಿನಲ್ಲಿ ತಳ್ಳಿ ಶಿಕ್ಷಿಸುವವರು ಇವರು. ಹೀಗಾಗಿ ತಾತ್ಸರಮಾಡಿದವರಿಗೆ ಶಾಶ್ವತ ಸಂಸಾರ- ಅದ್ವೈತಿಗಳಿಗೆ ಉಗ್ರಶಿಕ್ಷೆ ಕೊಟ್ಟಂತೆ ಸಾತ್ತ್ವಿಕರಿಗೆ ಮೋಕ್ಷವನ್ನು ನೀಡುವವರು ಇವರು. ಒಂದೊಂದು ಅವತಾರವೂ ಆದರ್ಶಮಯ. ಹನುಮಂತ ನೆನಿಸಿದಾಗ ನೆನೆಸಿದವರ ಪಾಪವನ್ನೇ ಸುಡುವ ಗುಣಗಳ ಶುದ್ದ ಅಪರಂಜಿ, ಮಹಾಬಾಹುಬಲ. ಆದರೂ ಭಕ್ತಿಯಲ್ಲಿ ನಿಸ್ಸೀಮ ಎನಿಸಿದವರು. ನೆನೆದವರಿಗೆ ಇಂದೂ ರಾಮನಲ್ಲಿ ಭಕ್ತಿ ಚಿಮ್ಮುತದತ್ತದೆ. " ಸ್ಪೃಹಯತೀ ಮಹತೀಂ ಭಕ್ತಿಂ ಅಧ್ಯಾಪಿ ರಾಮೇ" ಅಧ್ಯಾತ್ಮದೊಂದಿಗೆ ಪರೋಪಕಾರದ ಪ್ರಸಂಗ ಬಂದಾಗ, ಸಂಜೀವನಿಯ ತಂದು ಎಲ್ಲರಿಗೂ ಜೀವ ನೀಡಿದರು. ಆರೋಗ್ಯ ಇತ್ತರು. ಕಪಿಗಳ ಸುಟ್ಟು  ಮುಖವನ್ನು ಮೊದಲಿಂತೆ ಮಾಡಿದರು. ಇಷ್ಟೇಲ್ಲಾ ಮಾಡಿದರೂ ರಾಮನಲ್ಲಿನ ಭಕ್ತಿ ಅಚಲವಾಗಿಯೇ ಇತ್ತು. ಅಹಂಕಾರ ಸುಳಿಯಲಿಲ್ಲ. ರಾವಣನನ್ನು ಕಪಿಮುಷ್ಠಿಯಿಂದ ಗುದ್ದಿ ಅವನ ದೇಹ ನುಜ್ಜಾಗಿಸಿದರು. ಭಕ್ತಾಭೀಷ್ಟಪ್ರದನಾದ ಆ ಹನುಮ ಆ ತುಂಬಿದ ಬಲವಾದ ಮುಷ್ಟಿಯಿಂದ ನನಗೆ ಇಷ್ಟಾರ್ಥಗಳನ್ನೆಲ್ಲ ಬಾಚಿಕೊಡಲಿ. ಸಜ್ಜನರಿಗೆ ಎಂದೆಂದೂ ಹರಸುವುದೇ, ತುಂಬಿಕೊಡುವುದೇ ಈ ಹನುಮಂತನ ಲೀಲೆ. ಇವನ ತುಂಬುಹೃದಯದ ಸೇವೆಗೆ ,ರಾಮನ ಮನಸ್ಸು ತುಂಬಿಹೋಯಿತು .ಅರಳಿದ ಕಣ್ಣುಗಳಿಂದ , ಒದ್ದೆಯಾದ ನೋಟದಿಂದ ರಾಮ ಹನುಮಂತನನ್ನು ನೋಡಿದ್ದೇ ನೋಡಿದ್ದು. ಕಡೆಗೆ ತನ್ನ ಅಮೃತ ಸುರಿಸುವ ಆ ಹಸ್ತವನ್ನು ಹನುಮಂತನ ತಲೆಯ ಮೇಲೆ ಇಟ್ಟು ಆರ್ಶಿವದಿಸಿದನಂತೆ! ಅಂತೂ ಹನುಮನ ಸೇವಾಭಾವ ಭಕ್ತಿ ಪರಾಕ್ರಮಗಳನ್ನು ಕೇಳಿದವನೇ ಧನ್ಯ.....

🙏 ಶ್ರೀಹರಿಃ ಸರ್ವೋತ್ತಮ ಶ್ರೀವಾಯುಜೀವೋತ್ತಮಃ🙏

🙏 ಶ್ರೀ ಹರಿವಾಯುಸ್ತುತಿ🙏
ಭಾಗ-3 


ಭೀಮನಂತೂ ಬಲಭೀಮ ಎನಿಸಿಕೊಂಡವ‌. ಅವನ ಬಲ ಸ್ವಾರ್ಥಕ್ಕೆ ಸಾಧನೆ ಆಗದೆ ಪರೋಪಾರಕ್ಕೆ ಸೇತುವೆ ಆಯಿತು. ಊರಿಗೆ ಕಂಟಕನಾದ ಬಕಾಸುರನನ್ನು ಬಲಿಹಾಕಿತು ನರಭಕ್ಷಕ ಕಿರ್ಮೀರನನ್ನು ಕೊಚ್ಚಿಹಾಕಿತು ರಾಜಕೀಯವನ್ನೇ ದಾಂಧಲೆ ಮಾಡಿಕೊಂಡ, ಮಿಲಿಟರಿ ಸೈನ್ಯವನ್ನೇ ಮಿತಿಮಿರಿ ಬೆಳೆಸಿದ ಜರಾಸಂಧನನ್ನು ಜಜ್ಜಿಹಾಕಿತು. ಇಷ್ಟೆಲ್ಲಾ ಗೆಲುವಿನ ಸರಣಿಯನ್ನೇ ಅನುಭವಿಸಿದರೂ ಪರಾಕ್ರಮಗಳನ್ನು ಪರಮಾತ್ಮನ ಪಾದಾರವಿಂದದಲ್ಲಿ ಅರ್ಪಿಸುವ ಅಪ್ಪಟಶ್ರದ್ದೆ ದುಪ್ಪಟಾವಾಯಿತೇ ವಿನಃ ಅಹಂಕಾರ ತರಲಿಲ್ಲ.ಶತ್ರುವನ್ನು ಬಗ್ಗು ಬಡಿಯುವ ಆ ಗಧಾಭಂಗ, ಅಟ್ಟಹಾಸದಿಂದಲೇ ಶತೃಗಳನ್ನು ರಣರಂಗದಿಂದ ಅಟ್ಟಿಬಿಡುವ ಆ ಸಿಂಹಾನಾದ, ಅಕ್ಷೋಹಿಣೀ ಸೈನ್ಯಗಳನ್ನೇ ಸಂಹರಿಸಿದ ಆ  ಅಗಾಧಬಲ ಇದೆಲ್ಲಾ ಇದ್ದೂ ಕಳಕಳಿಯಿಂದ ಇವೆಲ್ಲಾ ಹರಿಯ ಸೇವೆ ಎನ್ನುವ ನಮ್ರಭಾವ , ಅವನ್ನೆಲ್ಲಾ ವರ್ಣಿಸಲಾದೀತೆ? ಭಾರತ ಬರೆದ ವೇದವ್ಯಾಸರೇ ಸಮರ್ಥರು- ಅಥವಾ ವಾಯುದೇವ ಬಂದು ಬಾಯ್ಬಿಡಬೇಕು. 



ನಮ್ಮನ್ನು ಆಳುವ, ಅಳುವಂತೆಮಾಡುವ ಆ ಅವಿಧ್ಯೆಯನ್ನು ಅನಿಲ ನಿರ್ಮೂಲ ಮಾಡಲಿ ಎಂಬುದೇ ನಮ್ಮ ಪ್ರಾರ್ಥನೆ. ಆ ವಾಯುದೇವ ಜ್ಞಾನಾಭಿಮಾನಿಯಾದ ಭಾರತಿಗೆ ಒಂದು ಆದೇಶ ಕೊಟ್ಟರು ಸರಿ, ಅಜ್ಞಾನ ಆಚೆ ಹೋಗಿ ನಾನು ವಿಧ್ಯಾವಂತನಾದೆ‌ ಎಂದು ಅರ್ಥ.



ಪರಾಕ್ರಮ ವಾತ್ಸಲ್ಯ- ಜ್ಞಾನ ಇವೆಲ್ಲವೂ ಹವ್ಯಾಸ ಎನಿಸಿದೆ ಗುಣ ಎನಿಸಬೇಕು ಅದಕ್ಕಾಗಿ ಹರಿಯಲ್ಲಿ ಭಕ್ತಿ ಬೆಳೆಯಬೇಕು ಸೇವೆಯನ್ನು ಸತತ ಮಾಡಬೇಕು. ವಾಯುದೇವರೇ! ತಾವು ಭೀಮನಾದಾಗಲಂತೂ ಒಂದಲ್ಲಾ-ಹರಿಯ ಎರಡು ರೂಪಗಳನ್ನೂ ಯಾದವಕೃಷ್ಣ- ವಾಸಿಷ್ಠಕೃಷ್ಣರನ್ನು ಚೆನ್ನಾಗಿ ಸೇವಿಸಿದಿರಿ. ನಿಮ್ಮ ಮಹಿಮೆ ಬಣ್ಣಿಸಲಾಗದು. ಬಾಗಿ ನಮಿಸುವುದೇ ಸರಿ ಎನ್ನುತ್ತಾರೆ....



ಸಜ್ಜನರಿಗೆ ದಾರಿ ತೋರುವಂತೆ , ಕುಹಕಜನರಿಗೆ ಕಂಗಾಲು ತರುವುದರಲ್ಲೂ ನೀವು ನಿಸ್ಸೀಮರು.‌ನೀವೇ ಹನುಂತನ ಅವತಾರ ತಾಳಿದವರು- ಆದರೂ ಹನುಮನ‌ ಬಾಲ ಎತ್ತಲಾರದೆ ಸೋತ ಹೋದಿರಿ, ಭೀಮ ಸೋತ ಎಂಬ ಕಥೆ ಬೆಳೆಯಿತು. ಅಂತೂ ಅದರ ಹಿಂದಿರುವ ತತ್ತ್ವ- ನಿಮ್ಮೆರಡೂ ಅವತಾರಗಳೂ ಸರಿಸಮಾನ ಎಂಬ ವಿವೇಕ ಬೆರೆಯಲಿಲ್ಲ. ಇದೆಲ್ಲ ನಿಮ್ಮ‌ ಲೀಲೆ. ಸಜ್ಜನರಿಗೆ ಸುಖ- ದುರ್ಜನರಿಗೆ ದುರಂತ ತರುವ ಆ ಭೀಮನನ್ನು ಮರೆಯಲಾಗದು.‌ಆ ವಾಯುದೇವನಿಗೆ ನಮಸ್ಕಾರ. ಹೂವ ತರುವ ನೆಪದಿಂದ ಮುನ್ನೂರು ಕೋಟಿ ದೈತ್ಯರನ್ನು ಮಣ್ಣು ಮಾಡಿದೆ. ಮತ್ತೆ ನೂರು ಕೋಟಿ ರಕ್ಕಸರನ್ನೂ ಸಹ ಕೊಚ್ಚಿಹಾಕಿದೆ...



ನೀನು ಕಾಂತೆಗೆ ಹೂವು ಕೊಟ್ಟೆ ,ಇಡೀ ಲೋಕಕ್ಕೆ ಕಲ್ಯಾಣ ತಂದುಕೊಟ್ಟೆ ,ನೀನು ಗಂಡದೆಯ ಗಂಡನಾಗಿ, ದ್ರೌಪದಿಯ ನಲ್ಲನಾಗಿ ,ಹರಿಯ ಅದ್ದೂರಿಭಕ್ತನಾದವನು. ಭೀಮನೇ! ನಿನಗೆ ನಮಸ್ಕಾರ ನಮ್ಮ‌ ದಾಂಪತ್ಯವೂ ಲೋಕಕ್ಕೆ ಮಂಗಳ ವಾದಂತೆ ಹರಿಯ ಸೇವೆಗೆ ಅಂಗಳ ಆಗಲಿ. ಕುಟುಂಬಕ್ಕೂ ಸಹ ಅನ್ಯೋನ್ಯತೆ ತಾಳ - ಮೇಳ ಮೂಡಸಲಿ ಕೃಷ್ಣನು ಭೂಮಿ ಬಿಟ್ಟನಂತರ ನೀನೂ ಭೂಮಿಯನ್ನು ತೊರೆದೆ . ಹರಿಯ ದರ್ಶನ ಸಂದರ್ಶನ- ಅವಲೋಕನ,ಸ್ಮರಣೆ ಇಲ್ಲದೆ ಕ್ಷಣಕಾಲವೂ ಸಹ ಸುಮ್ಮನೆ ಕೂರಬಾರದು ಎಂಬ ಆ ಆದರ್ಶ ವಿಷ್ಣಭಕ್ತಿಯ ಪ್ರತಿಬಿಂಬ ಮೂಡಿಸುವುದು ...



ದೈತ್ಯರ ದಾಂಧಲೆ ದ್ವಾಪರಕ್ಕೆ ಮುಗಿಯಲಿಲ್ಲ ಕಲಿಕಾಲ ಎಂದರೆ ದೈತ್ಯರದ್ದೇ ಸಾಮಾಜ್ರ್ಯ ಅದರಲ್ಲೂ ಆಳ್ವಿಕೆ ಅನ್ನ ಇವುಗಳಿಗಿಂತ ಜ್ಞಾನದ ಮೇಲೆ ದೈತ್ಯರ ಕಣ್ಣು. ಅಂತೂ ತತ್ತ್ವಜ್ಞಾನ ನಾಶಕ್ಕಾಗಿ ಬಂದರು. ನಾನೇ ಬ್ರಹ್ಮ ಎಂದರು.‌ಹರಿ ನಿರ್ಗುಣ ಎಂದು ನಿರೂಪಿಸಿದರು.‌ಕೊನೆಗೆ ಜಗತ್ತೇ ಸುಳ್ಳು ಎಂದು ಅಬ್ಬರಿಸಿದರು. ಇದೆಲ್ಲ ಪಾಪಸ್ ಕಳ್ಳಿ ಗಿಡದಂತೆ ಕಾಡಾಗಿ ಹಬ್ಬಿತು. ಜನತಗೆ ಮಬ್ಬು ಕವಿಯಿತು....



ಆಗ ಆನಂದತೀರ್ಥ ಎಂಬ ಜ್ಞಾನಾಗ್ನಿ ಕಾಡ್ಗಿಚ್ಚಾಗಿ ಬಂದಿತು. ಅದರ ವಾದವನ್ನೆಲ್ಲಾ ಬೂದಿಮಾಡಿತು . ಈಗ ಕಾಡು ಹೋಗಿ ಜನರು ಕೂಡುವ ನಾಡಾಯಿತು....



ಆ ಅವತಾರ ಜ್ಞಾನ ಗಣಿ ವಾದದ ಧಣಿ. ಆ ವಾದದ ನಾದದ ಮುಂದೆ ವಾದಿಗಳು ಕಾಲ್ಕಿತ್ತರು ಹಲ್ಕಿತ್ತ ಹಾವಾದರು‌. ಆದರೂ ಬುದ್ದಿ ಬರಲಿಲ್ಲ.‌ಮತ್ತೆ ಮುಂದೆ ಗೆಲ್ಲುತ್ತೇವೆ ಎಂದರು ಬುದ್ದಿಯೇ ಇರದವರಿಗೆ ವಿವೇಕ ಬಂದಿತೇ..



ಒಮ್ಮೆ ನಿಮ್ಮ ಶಾಸ್ತ್ರ ಕೇಳಬೇಕಂದರೆ ಸಾಲದು ಕಿವಿ, ಇದ್ದವರಿಗೆಲ್ಲಾ ತಲೆ ಖಾಲಿಯಾಗಿದ್ದರೂ ಶಬ್ಧ ಕೇಳಿಸಿತು ಆದರೆ ಮದ್ವಶಾಸ್ತ್ರ ಕೇಳಲು - ಕೇಳಿದ್ದು ತಿಳಿಯಾಗಿ ತಿಳಿಯಲು ಹಿಂದಿನ ಜನ್ಮ ಪುಣ್ಯ ಗಂಟಾಗಿ ಇರಬೇಕು. ಈ ಜನ್ಮದಲ್ಲಿ ಧೃಡಕಾಯ ಆರೋಗ್ಯ ಅರಸಿ ಬಂದಿರಬೇಕು.‌ಆಚಾರ ಅವರನ್ನು ಹಿಂಬಾಲಿಸಿರಬೇಕು ಇಷ್ಟೆಲ್ಲಾ ಇತಿಮಿತಿಗಳೊಂದಿಗೆ ಪ್ರಶ್ನೆ ಕೇಳುವ ತೀಕ್ಷ್ಣಮತಿಯೂ ಆಗಿರಬೇಕು.‌ಅಂತಹವರಿಗೆ ಮಧ್ವಶಾಸ್ತ್ರ ರಸದೌತಣ, ಆನಂದತೀರ್ಥರೇ, ಆ ಶಾಸ್ತ್ರ ಕೇಳುವ ಕಲಿಯುವ ಆ ಭಾಗ್ಯ ನಮಗೆ ನೀಡಿರಿ..



🙏 ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ🙏


🙏 ಶ್ರೀಹರಿವಾಯುಸ್ತುತಿ🙏


ಭಾಗ 4 



ಆ ಶಾಸ್ತ್ರದ ಮಾತು ಒಂದೆಡೆ, ಸುಂದರವಾದ ನಿಮ್ಮ ದೇಹ, ಇನ್ನೊಂದೆಡೆ ಮಂದಹಾಸ ಮರೆಯಾಗದ ಆ ಮುದ್ದು ಮುಖ, ಮಧುರವಾದ ಮೆಲ್ನುಡಿ ಆರೋಗ್ಯ - ಉಲ್ಲಾಸ ಮೂಡಿಸುವ ಜೇನಿನಂತಹ ಮಾತು, ಕೇಳಿದಾಗಲೇ ದುಃಖ ದೂರವಾಗುವುದು ನೆನೆಸಿಕೊಂಡಷ್ಟು ಮತ್ತೇ ಮತ್ತೇ ನೋಡಬೇಕೆಂದು ಮನಸ್ಸು ಗರಿಗೆದರವುದು - ಪಾಪ ಪರಿಹರಿಸುವ - ಆನಂದ ಸುರಿಸುವುದು ಒಟ್ಟಿನಲ್ಲಿ ಮೂತ್ತೆರಡು ಲಕ್ಷಣದ ಶರೀರ ಪೂರ್ಣ ವ್ಯಕ್ತಿತ್ವದ್ದಾಗಿದೆ. ಅದನ್ನು ಎಂದೆಂದೂ ನೋಡುವ ಭಾಗ್ಯ ಎಂದು ಸಿಕ್ಕುವುದೆ? 



ಈ ವರ್ಣನೆಯನ್ನು ಕೇಳಿದಾಗ "ಸುಂದರ ಮೂರುತಿ ಮುಖ್ಯಪ್ರಾಣ" ಎಂಬ ದಾಸರಪದ ಕಣ್ಮುಂದೆ ನಿಲ್ಲವುದು, 



ಒಟ್ಟನಲ್ಲಿ ಸರ್ವಜ್ಞರಾದವರು ತಾವು ಅಸುರರ ಭಾಷ್ಯ ಖಂಡಿಸಿ ಬ್ರಹ್ಮಸೂತ್ರಭಾಷ್ಯ ರಚಿಸಿದಿರಿ. ಸಕಲ ಗುಣಗಳಿಂದ ತುಂಬಿದವರು ನೀವು. ಮೃತ್ಯು ನಿಮ್ಮನ್ನು ಮುಟ್ಟವುದಿಲ್ಲ.‌ಅಷ್ಟೆ ಏಕೆ? ಆಕ್ರಮಣ ಮಾಡಿದರೂ ವಿಕಾರವಾಗದು ನಿಮ್ಮ ದೇಹ. ಒಟ್ಟಿನಲ್ಲಿ ಸಜ್ಜನರಿಗೆ ಸುಖ ತರುವವರು- ನಿಮ್ಮ ಮಹಿಮೆ ಎಂದರೆ ನಿಮ್ಮ ಹರಿಯ ಗರಿಮೆ,ಆ ಹರಿಯ ಸ್ತುತಿ ಎಂದರೆ ಮನವಿತ್ತ ವಾಯುದೇವನ ಸ್ತುತಿ...



ಒಟ್ಟಿನಲ್ಲಿ ಇಷ್ಟಂತೂ ಸತ್ಯ ವಾಯುದೇವರ ಸುತ್ತಿ ಮಾಡಿದವರ ಪುಣ್ಯ - ಸೇವಿಸಿದವರ ಪುಣ್ಯ ಗಂಗಾಸ್ನಾನಕ್ಕಿಂತಲೂ ಮಿಗಿಲು , ಸಂಸಾರದ ಭಯ ಸುಟ್ಟು ಹೋದಂತೆ ಮೋಕ್ಷದ ಆನಂದಕ್ಕೆ ಬೀಜ ಹುಟ್ಟುಹಾಕಿದಂತೆ, ಅದು ಎಲ್ಲಾ ನೀಡುವ ಕಲ್ಪ ವೃಕ್ಷ ಅದನ್ನು ಸೇವಿಸಬೇಕು. ಆದರದಿಂದ ನಮಸ್ಕರಿಸಬೇಕು . ಅಂತಹವರು ಜ್ಞಾನದ ವಿಸ್ತೃತಿಹೊಂದಿ ಮುಕ್ತಿಯನ್ನು ಹೊಂದುತ್ತಾರೆ....



ಹೀಗೆ ತ್ರಿವಿಕ್ರಮ ಪಂಡಿತಾಚಾರ್ಯರು ರಚಿಸಿದ ವಾಯುಸ್ತುತಿ ಹೇಳುತ್ತಾ ಹೋಗುತ್ತದೆ.‌ಪ್ರತ್ಯಕ್ಷವಾಗಿ ಮಧ್ವರನ್ನು ಕಂಡ, ಮಧ್ವಶಾಸ್ತ್ರದ ಹಿರಿಮೆ ಮನಗಂಡ ಅವರ ಮಾತಿಗೆ ತೂಕಹೆಚ್ಚು ಹೀಗಾಗಿ ಇನ್ನೊಂದು ವಾಯುಸ್ತುಶ್ರೀವಾಯುಜೀವೋತ್ತಮಃ*

ಹರಿವಾಯುಸ್ತುತಿ ಅರ್ಥ ತಾತ್ಪರ್ಯಗಳ ಸಮೇತ ಪ್ರಕಟಿಸುವ ಆಸೆ ಚಿಗುರೊಡೆಯಿತು ದಯಮಾನಾದ ಪರಮಾತ್ಮನ ಅನುಗ್ರಹದಿಂದ ಈ ಕಾರ್ಯ ಇಂದು ಬೆಳಕು ಕಾಣುತ್ತಿದೆ...


🙏 ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ🙏

***********

No comments:

Post a Comment