ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ|
ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟ|
ಜಗತ್ತಿನೊಡೆಯನಾದ ಶ್ರೀನಿವಾಸನ ಕಲ್ಯಾಣವನ್ನು ಪ್ರತಿವರ್ಷ ಎರಡು ಬಾರಿ ನಡೆಸಲಾಗುವುದು.
ವೈಶಾಖ ಶುದ್ಧ ದಶಮಿಯಂದು ಶ್ರೀನಿವಾಸನು ಪದ್ಮಾವತಿ ದೇವಿಯ ಪಾಣಿಗ್ರಹಣ ಮಾಡಿದ ಪುಣ್ಯ ಕಾಲ.
ಪದ್ಮಾವತಿಯನ್ನು ಪಾಣಿಗ್ರಹಣ ಮಾಡಿದ ಶ್ರೀನಿವಾಸನು ತಾನು ಸರ್ವತ್ರ ವ್ಯಾಪ್ತನಾಗಿದ್ದರು ಲೋಕ ಶಿಕ್ಷಣ ಕ್ಕಾಗಿ ಅಗಸ್ತ್ಯ ಮಹರ್ಷಿಗಳ
ಆಶ್ರಮದಲ್ಲಿ ಆರು ತಿಂಗಳುಗಳ ಕಾಲ ತಂಗಿದ್ದ ಮತ್ತು,ಅವರಿಗೆ ಅನುಗ್ರಹಿಸಿ,
ವಿವಾಹವಾದ ಹೊಸ ದಂಪತಿಗಳಿಗೆ ಪರ್ವತಾರೋಹಣ ನಿಷಿದ್ಧ ಎಂಬ ನೀತಿ ತಿಳಿಸಿಕೊಟ್ಟ.
ಆರು ತಿಂಗಳ ನಂತರ ಪರ್ವತ ಏರಿ ಬಂದ ದಂಪತಿಗಳಿಗೆ ದೇವಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿಸಿದ ರಥದಲ್ಲಿ ಕುಳ್ಳಿರಿಸಿಕೊಂಡು ಬ್ರಹ್ಮ ದೇವರು ಹತ್ತು ದಿನಗಳ ಕಾಲ ಮೆರವಣಿಗೆ ಯನ್ನು ಮಾಡಿದರು.
ಆಶ್ವೀಜ ಶುದ್ಧ ದಶಮಿಯಂದು ಬ್ರಹ್ಮೋತ್ಸವ.
ಸಾಧ್ಯ ವಾದರೆ ಇವೆರಡು ಮಾಸದಲ್ಲಿ ಅಂದರೆ ವೈಶಾಖ ಮತ್ತು ಆಶ್ವೀಜ ಮಾಸದಲ್ಲಿ ವೆಂಕಟಪರ್ವತಕ್ಕೆ ಹೋಗಿ ಆ ಪರಬ್ರಹ್ಮ ನಾದ ಶ್ರೀನಿವಾಸ ನ ದರ್ಶನ ಮಾಡಬೇಕು.
ಕಲಿಯುಗದಲ್ಲಿ ಈ ಮಂಗಳಮಯ ಹಾಗು ಪುಣ್ಯಕರವಾದ ಈತನ ಚರಿತ್ರೆಯನ್ನು ಭಕ್ತಿ ಶ್ರದ್ಧೆ ಇಂದ ಕೇಳಿದರೆ,ಹೇಳಿದರೆ,ಓದಿದರೆ ಎಲ್ಲಾ ದುಃಖ ಗಳು ಪರಿಹಾರವಾಗುವವು...
ಲೌಕಿಕದ ಎಲ್ಲಾ ಅಪೇಕ್ಷೆ ಗಳನ್ನು ಸ್ವಾಮಿ ನೆರವೇರಿಸುವ.
ಬೆಟ್ಟ ಕ್ಕೆ,ಹೋಗಲು ಸಾಧ್ಯ ವಾಗದೇ ಇದ್ದರೆ ಈ ಹತ್ತು ದಿನಗಳ ಕಾಲ ಮೇಲೆ ಹೇಳಿದ ವೈಶಾಖ ಹಾಗು ಆಶ್ವೀಜ ಮಾಸಗಳಲ್ಲಿ ಶ್ರೀನಿವಾಸ ಪದ್ಮಾವತಿ ಯರ ಕಲ್ಯಾಣ ಕತೆಯನ್ನು ಕೇಳಬೇಕು.
ಇವಿಷ್ಟು ಬಲ್ಲವರಿಂದ ತಿಳಿದು ನನ್ನ ಅಲ್ಪ ಮತಿಗೆ ಬಂದಷ್ಟು ತಿಳಿಸುವ ವಿಷಯ.
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ|
ನಿನ್ನ ವಿಸ್ಮರಣೆಯ ಕೊಡದಿರು
ಶ್ರೀನಿವಾಸ ದಯಾನಿಧೆ|
ಶ್ರೀನಿವಾಸ ಕಲ್ಯಾಣವನ್ನು ಬರೆದು ಹಾಕುವ ಅಂತ ಸಂಕಲ್ಪ ಮಾಡಿದ್ದೇನೆ.
ನಿರ್ವಿಘ್ನವಾಗಿ ಈ ಕಾರ್ಯ ನಡೆದು ಸ್ವಾಮಿ ಪ್ರೀತಿಯಾಗಲಿ. ಎಂದು ತಾವು ತುಂಬು ಮನಸ್ಸಿನಿಂದ ಹಾರೈಯಿಸಿ ಆಶೀರ್ವಾದ ಮಾಡಬೇಕೆಂದು ತಮ್ಮ ಬಳಿ ಸವಿನಯ ಪೂರ್ವಕ ಪ್ರಾರ್ಥನೆ.
🙏🙏🙏🙇♂🙇♂👏👏
ಶ್ರೀ ಹರಿವಾಯು ಗುರುಗಳಿಗೆ, ಸಮಸ್ತ ಹರಿದಾಸ ವೃಂದಕ್ಕೆ ಮತ್ತು ಶ್ರೀ ಅಪ್ಪಾವರ ಪಾದಕಮಲಗಳಿಗೆ ಶಿರಸಾಷ್ಟಾಂಗ ನಮಸ್ಕರಿಸಿ ಇಂದಿನಿಂದ ಹತ್ತು ದಿನಗಳ ಕಾಲ ಶ್ರೀನಿವಾಸ ಕಲ್ಯಾಣದ ಚರಿತ್ರೆ ಯನ್ನು ಅಪ್ಪಾವರ ಅನುಗ್ರಹದಿಂದ ಬರೆದು ಹಾಕುವ ಪುಟ್ಟ ಪ್ರಯತ್ನ.
ತಮ್ಮ ಎಲ್ಲಾರ ಆಶೀರ್ವಾದ ಸದಾ ಇರಲಿ
ವೆಂಕಟೇಶನೆ ನಮೊ| ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙇♂day 1
ಶ್ರೀನಿವಾಸನು ಸಕಲ ಸನ್ಮಂಗಳಪ್ರದನಾದ ಸರ್ವೋತ್ತಮನಾದ ದೇವರು...
ಸಕಲ ಪುರಾಣಾದಿಗಳು ಆ ಶ್ರೀನಿವಾಸನೇ ಜಗಜನ್ಮಾದಿಕಾರಣನಾದ ಸಕಲ ಗುಣಪೂರ್ಣನಾದ,ದೋಷವಿದೂರನಾದ,ಸರ್ವ ಸ್ವತಂತ್ರ ನಾದ,ರಮಾ ಬ್ರಹ್ಮ ರುದ್ರ, ಇಂದ್ರಾದಿ,ದೇವತೆಗಳಿಂದ,ಋಷಿ ಮುನಿಗಳಿಂದ,ಅವನ ದಾಸರಿಂದ ಸದಾ ಪೂಜೆಗೊಂಬುವ,ಚತುರ್ವಿಧ ಪುರುಷಾರ್ಥ ಪ್ರದನಾದ ,ಆ ವೆಂಕಟೇಶ ನನ್ನು ಅವನ ಮಹಾತ್ಮೆಯನ್ನು ತಿಳಿದು ಜ್ಞಾನ ಪೂರ್ವಕವಾಗಿ ಅವನನ್ನು ಆರಾಧಿಸುವದರಿಂದ ಸುಪ್ರಸನ್ನನಾದ ಶ್ರೀ ಹರಿಯು ಸಮಸ್ತ ಕಾಮನೆಗಳನ್ನು,ಸನ್ಮಂಗಳವನ್ನು ಇತ್ತು ಕರುಣಿಸಿ ಕಾಪಾಡುವವ ಅಂತ ಸಾರುತ್ತಿವೆ..
ವೈಶಾಖ ಮಾಸದ ಪ್ರಾರಂಭದ ಈ ಶುಭದಿನದಲ್ಲಿ ಮಹಾಮಹಿಮನಾದ ಪದ್ಮಾವತಿಯ ಪತಿಯ ಕಲ್ಯಾಣ ಮಹೋತ್ಸವ ವನ್ನು(ವೈಶಾಖ ಶುದ್ದ ದಶಮಿ ಸ್ವಾಮಿ ಕಲ್ಯಾಣವಾದ ದಿನ.)
ತನ್ನ ಮದುವೆಗೆ ತಾನೇ ದಿನವನ್ನು ನಿಶ್ಚಿತ ಮಾಡಿಕೊಂಡ,ಮತ್ತು ಅದರ ಹಿನ್ನೆಲೆ ನಿರೂಪಿಸುವ ಭವಿಷ್ಯೊತ್ತರ ಪುರಾಣಾಂತರ್ಗತವಾದ ವೆಂಕಟೇಶ ಮಹಾತ್ಮೆ ಯನ್ನು ತಿಳಿಸುವ ಪುಟ್ಟ ಪ್ರಯತ್ನ.
✍ಪುಣ್ಯ ಭೂಮಿಯಾದ ಭರತವರ್ಷದಲ್ಲಿ ಮನುಕುಲದ ಉದ್ದಾರ ಕ್ಕಾಗಿ ಪರಮ ಕೃಪಾಳುಗಳಾದ ಭಗವಾನ್ ಶ್ರೀ ವೇದವ್ಯಾಸ ದೇವರು ಅನೇಕ ಪುರಾಣಗಳನ್ನು ರಚಿಸಿ ಮಹೋದುಪಕಾರ ಮಾಡಿದ್ದಾರೆ. ಅದರಲ್ಲಿ ಭವಿಷ್ಯೊತ್ತರಪುರಾಣದಲ್ಲಿ ಶ್ರೀ ವೆಂಕಟೇಶ ಮಹಾತ್ಮೆ ಯನ್ನು ಹೇಳಿದ್ದಾರೆ.
ಒಮ್ಮೆ ಶೌನಕರು ಸೂತ ಮುನಿಗಳ ಬಳಿ ಬಂದು
ಹಿಂದೆ ನಿಮ್ಮಿಂದ ಅನೇಕ ಭಗವಂತನ ಮಹಿಮೆಯನ್ನು ಸಾರುವ ವಿಷಯಗಳನ್ನು ತಿಳಿದು ಸುಕೃತಿಗಳಾಗಿದ್ದೇವೆ..
ಇವಾಗ ವೆಂಕಟಾಚಲಪತಿಯಾದ ಶ್ರೀ ಹರಿಯ ಮಹಿಮೆಯನ್ನು ಕೇಳಲು ಆಶಿಸಿದ್ದೇವೆ.ಅದನ್ನು ತಿಳಿಸಬೇಕು ಎಂದು ಕೇಳಲು,
ಅವಾಗ ಸೂತರು ಹೇಳುತ್ತಾರೆ.
ಮುನಿವರ್ಯರೆ!! ಬಹಳ ಆನಂದದಾಯಕವಾದ ಪ್ರಶ್ನೆ ಯನ್ನು ಕೇಳಿದ್ದೀರಿ.
ಶ್ರೀ ವೇದವ್ಯಾಸ ದೇವರು ನನಗೆ ಉಪದೇಶ ಮಾಡಿದ ಕ್ರಮದಲ್ಲಿ ನಿಮಗೆ ಹೇಳುತ್ತೇನೆ ಕೇಳಿ.
ಪೂರ್ವದಲ್ಲಿ ಧರ್ಮಿಷ್ಟನಾದ ಜನಕ ರಾಜನು ಧರ್ಮದಿಂದ ರಾಜ್ಯಭಾರ ಮಾಡುತ್ತಾ
ಇದ್ದನು. ಅವನಿಗೆ ಕುಶಕೇತುವೆಂಬ ತಮ್ಮ ಇದ್ದನು.ಅವನಪತ್ನಿ ಬಹು ಪತಿವ್ರತೆಯು.ಆ ದಂಪತಿಗಳಿಗೆ ಮೂರು ಜನ ಪುತ್ರಿ ಯರು.ಜನಕರಾಜನಿಗೆ ಜಾನಕಿ ಎಂಬ ನಾಮದಿಂದ ಕರೆಯಲ್ಪಡುವ ಜಗನ್ಮಾತೆ ಪುತ್ರಿಯಾಗಿದ್ದಾಳೆ.
ಹೀಗೆ ಜನಕರಾಜನು ಪತ್ನಿ ಪುತ್ರಿ ಮತ್ತು ಸಹೋದರನ ಜೊತೆಯಲ್ಲಿ ಆನಂದವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು.
ಒಂದು ದಿನ ಜನಕರಾಜನ ಮನಸ್ಸಿನಲ್ಲಿ ನಾನು ಎಂಭತ್ತು ಸಹಸ್ರ ವರ್ಷ ನನ್ನ ಎರಡು ಕಣ್ಣುಗಳು ಸರ್ವದಾ ಸುಖವನ್ನು ನೋಡಿವೆ.ದುಃಖ ವನ್ನು ಒಂದು ಕಣ್ಣು ಸಹ ನೋಡಿಲ್ಲ.ಮುಂದೆಯೂ ಸಹ ಹೀಗೆ ಸುಖವಾಗಿಯೇ ಇರಬೇಕು.. ದುಃಖ ಗಳನ್ನು ಕಣ್ಣಿನಿಂದ ನೋಡಬಾರದು ಎಂದು ಅಪೇಕ್ಷೆ ಪಟ್ಟನು..
ಅವನ ಅಪೇಕ್ಷೆ ಪಟ್ಟಿದ್ದು ಶಾಸ್ತ್ರ ಸಮ್ಮತವಲ್ಲ ವಾದುದರಿಂದ ಭಗವಂತನು ಅವನಿಗೆ ದುಃಖ ಪ್ರದರ್ಶನ ಮಾಡಿದನು.
ಸಾಧುವಾದ ಜನಕರಾಜನ ಬಾಯಲ್ಲಿ ಅಸಾಧುವಾದ ಮಾತುಗಳನ್ನು ಕೇಳಿ ಶ್ರೀ ಹರಿಯು ಅವನಿಗೆ ಸ್ವಲ್ಪ ದುಃಖವನ್ನು ತೋರಿಸಿದನು.
ಜನಕರಾಜನ ತಮ್ಮ ಕುಶಕೇತು ಮರಣ ಹೊಂದಿದ. ಅವನ ಪತ್ನಿ ಸಹ ಅವನ ಜೊತೆಗೆ ಸಹಗಮನ ಮಾಡಿದಳು.
ಅನಾಥರಾದ ಮಕ್ಕಳನ್ನು ಕಂಡು ಕಡು ದುಃಖಿತನಾದ ಜನಕರಾಜನು ಅನ್ನಾಹಾರಗಳನ್ನು ತ್ಯಜಿಸಿ ದನು.
ಆಗ ದೈವಯೋಗದಿಂದ ಕುಲಪುರೋಹಿತರು,
ವಾಮದೇವ ಮುನಿಗಳ ಸಹೋದರರು ಆದ ಶತಾನಂದರು ಮಿಥಿಲೆಗೆ ಬಂದರು.ಅರ್ಘ್ಯ ಪಾದಾದಿಗಳಿಂದ ಅವರನ್ನು ಪೂಜಿಸಿ ಸತ್ಕರಿಸಿ ತನಗೆ ಪ್ರಾಪ್ತ ವಾದ ದುಃಖ ವನ್ನು ಅವರ ಬಳಿ ಹೇಳಿಕೊಂಡನು.
"ನಾನು ಮುದುಕನಾಗಿದ್ದೆನೆ.ಮಕ್ಕಳು ಚಿಕ್ಕವರಿದ್ದಾರೆ.ನನ್ನ ಮಕ್ಕಳನ್ನು ವಿವಾಹವಾಗಲು ಹಲವಾರು ರಾಜರು ಹೊಂಚು ಹಾಕುತ್ತಾಇದ್ದಾರೆ.ರಾವಣನು ಸಹ ಅದಕ್ಕೆ ಪ್ರಯತ್ನ ಮಾಡುತ್ತಾ ಇದ್ದಾನೆ.
ಇದು ಮೊದಲನೆಯ ದುಃಖ.
ಎರಡನೆಯ ದುಃಖ ನನ್ನ ಮಗಳಾದ ಸೀತಾದೇವಿಯು ಅಪ್ರತಿಮ ಸುಂದರಿ.ಅವಳಿಗೆ ಅತೀ ಸುಂದರನಾದ ವರ ಸಿಗಬೇಕು. ಇದು ಹೇಗೆ ಸಾಧ್ಯ ಎಂದು ಯೋಚನೆ ಯಾಗಿದೆ.
ಇನ್ನೂ ಮೂರನೆಯ ದುಃಖ
ನನ್ನ ಈ ನಾಲ್ಕು ಜನ ಹೆಣ್ಣು ಮಕ್ಕಳು ಒಂದೇ ದೇಶದ ಅರಸನಿಗೆ ಸೊಸೆಯಾಗಬೇಕು.ನನಗೆ ಬರುವ ಅಳಿಯಂದಿರು ಸಹ ಒಬ್ಬ ಅರಸನ ಮಕ್ಕಳಾಗಿರಬೇಕು.ಭಗವಂತನ ಭಕ್ತರಾದವರೇ ನನ್ನ ಮಕ್ಕಳ ಕೈ ಹಿಡಿಯಬೇಕು.ಮುಂದೆ ಅವರಿಂದ ನನಗೆ ಹಿತ ಉಂಟಾಗಬೇಕು.
ಇವೆಲ್ಲವೂ ಯಾವುದರಿಂದ ಆಗುತ್ತದೆ ತಿಳಿಸಿ ಎಂದು ಕೇಳಿದಾಗ
ಆವಾಗ ಶತಾನಂದರು ಹೇಳುತ್ತಾರೆ..
ರಾಜನ್ !ಕಲಿಯುಗದಲ್ಲಿ ವೆಂಕಟಗಿರಿ ಮಹಾತ್ಮೆ ಯನ್ನು ಶ್ರವಣ ಮಾಡುವದರಿಂದ ಸರ್ವಪಾಪವು,ಸರ್ವ ದುಃಖವು ಪರಿಹಾರವಾಗುವದು..
ಯಾವ ಭಗವಂತನ ಚರಿತ್ರೆ ಯನ್ನು ಕೇಳಿ ಸಕಲ ದೇವತೆಗಳು ತಮ್ಮ ತಮ್ಮ ಪದವಿಯನ್ನು ಹೊಂದಿದರೋ
ಅಂತಹ ಆ ವೈಕುಂಠ ಗಿರಿಯ ಚರಿತ್ರೆ ನಿನಗೆ ಹೇಳುವೆನು..
"ಸಂತಾನ, ಸಂಪತ್ತು,ರೋಗಭಯ,ಜ್ಞಾನ ಸಿದ್ದಿ,ಸಕಲರಿಗು ಮಂಗಳವನ್ನು ಉಂಟುಮಾಡುವ ಬೆಟ್ಟದೊಡೆಯನ ಚರಿತ್ರೆ ಯನ್ನು ನಿನಗೆ ಹೇಳುವೆನು.
ನಿನಗೆ ಶತೃನಾಶ,ಪುತ್ರಿಯರ ವಿವಾಹ, ಸಕಲ ಶ್ರೇಯಸ್ಸು ಗಳು ಅದರ ಶ್ರವಣದಿಂದ ದೊರಕುತ್ತವೆ.
ಈ ಪರ್ವತಕ್ಕೆ ಕೃತಯುಗದಲ್ಲಿ ವೃಷಭಾಚಲವೆಂದು,
ತ್ರೇತಾಯುಗ ದಲ್ಲಿ ಅಂಜನಾಚಲವೆಂದು,
ದ್ವಾಪರದಲ್ಲಿ ಶೇಷಾಚಲವೆಂದು, ಕಲಿಯುಗದಲ್ಲಿ ವೆಂಕಟಾಚಲವೆಂದು ಯುಗಭೇದದಿಂದ ಹೆಸರುಂಟಾಗಿದೆ.ಅಂತ ಹೇಳುತ್ತಾರೆ.
ಆ ಪರ್ವತಕ್ಕೆ ನಾಲ್ಕು ಹೆಸರುಗಳು ಬಂದ ಹಿನ್ನೆಲೆ ಮುಂದೆ ತಿಳಿಯೋಣ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಒಂದೊಂದು ಯುಗಗೆ ಒಂದೊಂದು ಪೆಸರು|
ಚಂದವಾಗಿಪ್ಪವು ಪೊಗಳಿದವರಿಗೀಗಾ|
ನಂದವೇ ಕೊಡುತಲಿ ಅತಿಶಯವೆನಿಸಿ ವಸುಂಧರದದೊಳಗೆ ಸುಲಭವಾಗಿದೆ ಕೇಳಿ|
ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|
ಕಾಣಿಸಿ ಕೊಂಬನು ಈ ಗಿರಿಯ ಸ್ಮರಿಸಿ ದವರಿಗೆ|
🙏ಹರೇ ಶ್ರೀನಿವಾಸ🙏
*************
||ಶ್ರೀ ವಿಠ್ಠಲ ಪ್ರಸೀದ ||
||ಶ್ರೀ ವೆಂಕಟೇಶನ ಕಲ್ಯಾಣ ಸಂದರ್ಭದಲ್ಲಿ
ಎರಡನೇ ದಿನದ ಸ್ಮರಣೆ ||
ವರಾಹ ಪುರಾಣ ಆದರಿಸಿ ಶ್ರೀನಿವಾಸನ ಮಹಿಮೆ .
ಹಿರಣ್ಯ ಕಷಿಪುವಿನ ವಂಶಸ್ಥರಾದ ದೈತ್ಯರಿಂದ
ಕಶ್ಯಪಾದಿ ಮುನಿಗಳು ಶ್ರೀಶೈಲ ಪ್ರಾಂತದಲ್ಲಿ
ಪೀಡೆಗೆ ಒಳಗಾಗಿದ್ದರು . ಹಾಗೆ ರಾವಣಾದಿಗಳಿಂದ ಹಿಂಸೆಗೆ ಒಳಗಾಗಿದ್ದ ಇಂದ್ರಾದಿದೇವತೆಗಳು ಎಲ್ಲರೂ ಶ್ರೀ ಹರಿಯಿಂದ ತಮ್ಮ ದುಸ್ಥಿತಿಯಿಂದ ಒಂದು ಅಂತ್ಯಕಾಣಲು
ಕ್ಷೀರಸಾಗರಕ್ಕೆ ಹೋದರು . ಅಲ್ಲಿ ದೂರವೇ ನಿಂತು ಶ್ರೀಹರಿಯ ಸ್ತೋತ್ರಾದಿಗಳಲ್ಲಿ ಮಗ್ನರಾದರು . ಅಲ್ಲಿನ ಒಬ್ಬ ಪಾರ್ಷದ ಸಾರೂಪ್ಯ ಹೊಂದಿರುವವನು ,ಬಂದು ಶ್ರೀಹರಿ ಇಲ್ಲಿಲ್ಲ
ಭೂಲೋಕದಲ್ಲಿ ಯಾವುದೋ ಗಿರಿಯಲ್ಲಿ ನೆಲೆಸಿದ್ದಾನೆ ಅಲ್ಲಿಹೋಗಿ ಪ್ರಾರ್ಥಿಸಿ ಎಂದ .
ದೇವತೆಗಳು ಋಷಿಗಳು ದಾರಿಕಾಣದೆ ವೈಕುಂಠಕ್ಕೆ ಹೊರಟರು .ದಾರಿಯಲ್ಲಿ ಅವರಿಗೆ ನಾರದರು ಎದುರಾಗಿ ಸ್ವಾಮಿ ವೈಕುಂಠದಲ್ಲೂ ಇಲ್ಲ ,ಎಲ್ಲರೂ ಹೋಗಿ ಬ್ರಹ್ಮದೇವರನ್ನು ಪ್ರಾರ್ಥಿಸೋಣ ಎಂದು ದೇವತೆಗಳನ್ನು ಕರೆದುಕೊಂಡು ಸತ್ಯಲೋಕಕ್ಕೆ ಬಂದರು .
ಸರ್ವಜ್ಞರಾದ ಬ್ರಹ್ಮದೇವರು ತಮ್ಮ ಧಿವ್ಯಜ್ಞಾನದಿಂದ ಶ್ರೀಹರಿ ವೆಂಕಟಾಚಲದಲ್ಲಿ ಇರುವನೆಂದು ತಿಳಿಸಿ ಅವರೆಲ್ಲರನ್ನು ಕರೆದುಕೊಂಡು ವೆಂಕಟಾಚಲ ಪರ್ವತಕ್ಕೆ ಬಂದು
ಶ್ರೀಹರಿಯ ವಿಶೇಷ ದರ್ಶನಾರ್ಥ ಧ್ಯಾನ ಮಗ್ನರಾದರು. ಇದೆ ಸಮಯದಲ್ಲಿ ದಶರಥ ಮಹಾರಾಜ , ಪುತ್ರಾರ್ಥಿಯಾಗಿ ವಸಿಷ್ಠರ ಸಲಹೆಯಂತೆ ವೆಂಕಟಾಚಲಕ್ಕೆ ಆಗಮಿಸಿದ್ದ .
ಅಲ್ಲಿ ಬ್ರಹ್ಮದೇವರೊಡಗೂಡಿ ಎಲ್ಲ ದೇವತೆಗಳು
ಋಷಿಗಳು ತಪಸ್ಸಿನಲ್ಲಿ ಮಗ್ನರಾಗಿರುವುದನ್ನು ನೋಡಿದ . ಬ್ರಹ್ಮ ದೇವರಂತೂ ತೀವ್ರ ತಪಸ್ಸಿನಲ್ಲಿ ಮಗ್ನರಾಗಿದ್ದರು . ಈ ದೃಶ್ಯವನ್ನು ನೋಡಿ ದಶರಥ ಮಹಾರಾಜ ಅವರೆಲ್ಲರಿಗೂ ನಮಸ್ಕರಿಸಿ ವಸಿಷ್ಠರ ಉಪದೇಶದಿಂದ ಪ್ರಾಪ್ತವಾದ ಮಂತ್ರ ಸಿದ್ಧಿಯನ್ನು ಬಳೆಸಿ ವಸಿಷ್ಠರೊಂದಿಗೆ ಜಪದಲ್ಲಿ ನಿರತನಾದ.
ಇದ್ದಕ್ಕಿದ್ದಂತೆ ಸ್ಪೋಟಕ ಶಬ್ದವೊಂದು ಕೇಳಿಸಿತು
ಅದೇನೆಂದು ನೋಡಿದಾಗ , ಇಡೀ ಜಗತ್ತನ್ನು
ಬೆಳಗುವ , ಸಪ್ತ ಪ್ರಾಕಾರದಿಂದ ಶೋಭಿತವಾದ
ವಿಮಾನವೊಂದು ಗೋಚರಿಸಿತು . ಅದು ರತ್ನಖಚಿತವಾದ ಶ್ರೀಹರಿಯ ಮಂದಿರ .
ಬ್ರಹ್ಮದೇವರ ನಾಯಕತ್ವದಲ್ಲಿ ಎಲ್ಲ ದೇವತೆಗಳು
ಋಷಿಗಳು ಮಂದಿರವನ್ನು ಹೊಕ್ಕು ಶ್ರೀಹರಿಯ
ದರ್ಶನ ಪಡೆದರು . ಭಗವಂತ ಧಿವ್ಯ ಪೀತಾಂಭರಿಯಾಗಿದ್ದ ಪ್ರಸನ್ನ ಮಂದಹಾಸದಿಂದ ಕರುಣಾ ಪೂರ್ಣ ನೋಟದಿಂದ ಎಲ್ಲರನ್ನು ಸಂತೋಷಗೊಳಿಸಿದ .
ಋಷಿಗಳು ವೇದೋಕ್ತ ಮಂತ್ರದಿಂದ ಸ್ತುತಿಸಿದರು . ತಮಗೆ ದೈತ್ಯರಿಂದ ಬಂದಿರುವ
ಪಿಡುಗನ್ನು ಪರಿಹಾರಕ್ಕಾಗಿ ಪ್ರಾರ್ಥಿಸಿದರು .ಭಕ್ತ ಪ್ರಿಯನಾದ ಭಗವಂತ ಎಲ್ಲ ದೇವತೆಗಳ ಅಹವಾಲನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೇಳಿದ .
ದಶರಥನಲ್ಲಿ ಶ್ರೀರಾಮಾಗಿ ಅವತರಿಸುತ್ತೇನೆಂದ
ಇಂದ್ರಾದಿದೇವತೆಗಳಿಗೆ ರಾವಣನ ಉಪದ್ರವ
ಪರಿಹರಿಸುತ್ತೇನೆಂದ , ಶ್ರೀಶೈಲ , ವೆಂಕಟಗಿರಿಯಲ್ಲಿ ಕಂಟಕ ರಾಗಿರುವ ದೈತ್ಯರನ್ನು ಸಂಹರಿಸುತ್ತೇನೆಂದ , ಎಲ್ಲ ತಪಸ್ವಿಗಳಿಗೆ
ನಿರ್ವಿಜ್ನವಾಗಿ ತಪಸ್ಸು ಮಾಡುವಂತೆ ಅನುವು ಮಾಡಿಕೊಡುತ್ತೇನೆ ಎಂದು ಅಭಯ ಪ್ರಧಾನ ಮಾಡಿದ .
ದಶರಥ ನಾಲ್ಕು ಶ್ಲೋಕದಿಂದ ದೇವಾ ದೇವನನ್ನು
ಸ್ತುತಿಸಿದ್ದಕ್ಕೆ ಸಂತುಷ್ಟನಾಗಿ ಅಸಾಧಾರಣರಾದ ನಾಲ್ಕು ಪುತ್ರರು ಜನಿಸುತ್ತಾರೆ ಎಂದು ಅಭಯನೀಡಿದ .
ಇದೇ ಸಮಯದಲ್ಲಿ ರುದ್ರದೇವರಿಗೆ ವೆಂಕಟಾಚಲ ಪರ್ವತದಲ್ಲಿ ತನ್ನ ಜೊತೆ ಈಶಾನ್ಯ
ಕೋಣದಲ್ಲಿ ಕಲ್ಪ ಪರ್ಯಂತ ವಾಸಮಾಡಲು ಆದೇಶ ನೀಡಿದ .
ಎಲ್ಲ ದೇವತೆಗಳಿಗೂ ಅವರವರ ಯೋಗ್ಯತೆಗೆ ತಕ್ಕಂತೆ ಪ್ರತ್ಯಕ್ಷ ಧರ್ಶನ ಕೊಟ್ಟು ಬ್ರಹ್ಮನನ್ನು ಕುರಿತು “ “ ಹೇ ಚತುರ್ಮುಖ , ಸರ್ವರಲ್ಲೂ ದಯಮಾಡುವ ಸ್ವಭಾವ ಉಳ್ಳವನು ನೀನು , ನಿನಗೋಸ್ಕರ ಈ ವೆಂಕಟಾಚಲದಲ್ಲಿ , ಲಕ್ಷ್ಮಿ ಶೇಷ ಗರುಡ ವಿಶ್ವಕ್ಸೆನಾ , ಭೂದೇವಿ , ನೀಳಾದೇವಿ , ಹಾಗು ಇತರರೊಂದಿಗೆ ಈ ಕಲ್ಪ ಪರ್ಯಂತ ವಾಸಿಸುತ್ತೇನೆ . ಯಾರು ನಾನಾವಿಧ ತಪಸ್ಸನ್ನು ಈ ವೆಂಕಟ ಗಿರಿಯಲ್ಲಿ ಮಾಡುತ್ತಾರೋ , ಅವರೆಲ್ಲರ ತಪಸ್ಸು ಸುಲಭದಲ್ಲಿ ಸಿದ್ಧಿಸಲಿ . ಯಜ್ಞಕರ್ಮಗಳು ಫಲಪ್ರದವಾಗಿರುವುದು , ಯೋಗಿಗಳಿಗೆ ಯೋಗ ಸಿದ್ಧಿಯಾಗಲಿ “ ಎಂದು ಹೇಳಿದನೆಂದು
ವರಾಹಾ ಪುರಾಣ ಉಲ್ಲೇಖಿಸುತ್ತದೆ .
ದೇವತೆಗಳ ಈ ಪ್ರಾರ್ಥನೆ ಆದರಿಸಿ ಶ್ರೀ ಪುರಂದರ ದಾಸರು ರಚಿಸಿದ ದೇವರನಾಮ ಬಹು ಜನಪ್ರಿಯ
“ ಬ್ರಹ್ಮಾದಿಗಳು ಕ್ಷಿತ ಸಾಗರಕ್ಕೆ ಪೋಗಿ
ಲಕ್ಷ್ಮಿ ನಾರಾಯಾಣರ ಪಾದಕ್ಕೆ ಎರಗಿ
ಭೂಭಾರ ಹರಣವನು ಮಾಡಬೇಕಾಗಿ “
ಎಂದಿದ್ದಾರೆ ಮಹಾನುಭಾವರು .
ನಾಹಂ ಕರ್ತಾ ಹರಿಃ ಕರ್ತಾ
||ಲಕ್ಷ್ಮಿ ವೆಂಕಟೇಶಾರ್ಪಣಮಸ್ತು ||
**********
||ಶ್ರೀನಿವಾಸ ಕಲ್ಯಾಣ ಮಹಾತ್ಮೆ||
✍ನೆನ್ನೆ ಪೋಸ್ಟ್ ಮಾಡಿದ ಶ್ರೀನಿವಾಸ ಕಲ್ಯಾಣ ಮಹಾತ್ಮೆ ಯಲ್ಲಿ ಬರುವ ಕೆಲವು ವಿಚಾರಗಳು ಶ್ರೀ ವಿಷ್ಣು ಸಹಸ್ರನಾಮ ನಾಮಗಳಲ್ಲಿ ಹೇಗೆ ಪ್ರತಿಬಿಂಬ ವಾಗಿದೆ ಎಂಬುದನ್ನು ತಿಳಿಯೋಣ.
ಆ ಜಗತ್ತಿನ ಸ್ವಾಮಿ ಯಾದ ಶ್ರೀನಿವಾಸನ ದಯೆಯಿಂದ.
"ದರ್ಪಹಾ"
✍ಭಗವಂತನ ಕುರಿತಾದ ಅವನನ್ನು ವರ್ಣಿಸುವ ಈ ಶ್ಲೋಕ ಶ್ರೀ ವಿಷ್ಣು ಸಹಸ್ರನಾಮ ದಲ್ಲಿ ಬರುತ್ತದೆ.
ಈ ಶ್ಲೋಕ ದ ಅರ್ಥ.
"ತನ್ನ ನಿಜ ಭಕ್ತರಿಗೆ ಯಾವುದೋ ಒಂದು ಕಾರಣದಿಂದಾಗಿ ಅವರಿಗೆ ದರ್ಪ ಉಂಟಾದರೆ ಆದಷ್ಟು ಬೇಗ ಯಾವುದೋ ಒಂದು ಉಪಾಯ ಅಥವಾ ಘಟನೆ ಮೂಲಕ ಅವರ ದರ್ಪವನ್ನು ಭಗವಂತ ನಾಶ ಮಾಡುತ್ತಾನೆ"...
"ಹಾಗಾಗಿ ಅವನಿಗೆ ದರ್ಪಹಾ ಎಂದು ಹೆಸರು".
ಇದು ಶ್ರೀನಿವಾಸ ಕಲ್ಯಾಣ ಮಹಾತ್ಮೆ ಹೇಗೆ ಅನ್ವಯಿಸುತ್ತದೆ ಎಂದರೆ
ಜನಕ ಮಹಾರಾಜ ಭಗವಂತನ ಪರಮ ಭಕ್ತ. ಸದಾ ಕಾಲ ಸತ್ಯವನ್ನು ನುಡಿಯಕ್ಕಂತಹವನು,ಸರ್ವ ಶಾಸ್ತ್ರ ಗಳಲ್ಲಿ ಪಂಡಿತನು,ಕೋಪವನ್ನು ಬಿಟ್ಟವನು ,ಇದ್ದುದರಲ್ಲಿ ನಿತ್ಯವು ತೃಪ್ತನಾಗಿ ,ಅಹಂಕಾರ ಇಲ್ಲದವನು ಮತ್ತು ವಿಶೇಷವಾಗಿ ಸದಾ ಕಾಲ ಶ್ರೀ ಹರಿಯ ನಾಮ ಸ್ಮರಣೆ ಮಾಡುತ್ತಾ,ಸದಾ ಭಗವಂತನ ತತ್ವ ಚಿಂತನೆ ಮಾಡತಕ್ಕಂತಹವನು ಮತ್ತು ಭಗವಂತನ ಭಕ್ತರ ಗುಂಪಿನಲ್ಲಿ ಇದ್ದವನು.
ಇಂತಹ ಜನಕ ಮಹಾರಾಜನಿಗೆ
ಒಮ್ಮೆ ಮನಸ್ಸಿನಲ್ಲಿ ಆಲೋಚನೆ ಬಂದಿತು.
"ಇಷ್ಟುದಿವಸ ದುಃಖ ದಿಂದ ನಾನು ಕಣ್ಣೀರು ಇಟ್ಟ ಪ್ರಸಂಗವೇ ಬಂದಿಲ್ಲ.
ಇದೆಲ್ಲವು ನಾನು ಮಾಡಿರುವ ಪುಣ್ಯ ವಿಶೇಷದ ಫಲ.ಇಷ್ಟು ದಿನ ಸುಖವನ್ನು ನ ಕಂಡ ನಾನು ಯಾವತ್ತಿಗೂ ದುಃಖವನ್ನು ನೋಡಬಾರದು ಮತ್ತು ದುಃಖ ನನಗೆ ಭಾದಿಸಬಾರದು" ಎಂದು ಚಿಂತನೆ ಮಾಡಿದನು.
ಸಾಧುವಾದ ತನ್ನ ಭಕ್ತನ ಬಾಯಿಯಿಂದ ಬಂದ ಅಸಾಧುವಾದ ಇಂತಹ ಮಾತನ್ನು ಕೇಳಿ ಶ್ರೀ ಹರಿಯು ಜನಕನ ದರ್ಪವನ್ನು ಮುರಿಯಲು ಅವನ ತಮ್ಮ ನಾದ ಕುಶಧ್ವಜನು ಮರಣ ಹೊಂದುವಂತೆ ಮಾಡಿ
ಆ ಪ್ರಯುಕ್ತ
ಜನಕನಿಗೆ ದುಃಖದ ಪರಂಪರೆಯೇ ಒದಗುವಂತೆ ಮಾಡಿ ಅದರಿಂದಾಗಿ ಅವನ ದರ್ಪವನ್ನು ಪರಿಹಾರವನ್ನು ಮಾಡಿದನು.
ಹೀಗೆ ತನ್ನ ಭಕ್ತರ ದರ್ಪವನ್ನು ಪರಿಹಾರ ಮಾಡುವ ಆ
ಶ್ರೀ ಹರಿಗೆ ದರ್ಪಹಾ ಎನ್ನುವ ನಾಮದಿಂದ ಕರೆಯುತ್ತಾರೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಶೇಷಾಚಲನಿವಾಸ ದೋಷದೂರನೆ|
ಭಕ್ತ ಪೋಷಕ ಶ್ರೀಕಾಂತ ನಮೋ ನಮೋ||
🙏ಶ್ರೀನಿವಾಸ ದಯಾನಿಧೆ🙏
**********
ಶ್ರೀನಿವಾಸ ಕಲ್ಯಾಣ ಚರಿತ್ರೆ|| day 2
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||.
✍ಹಿಂದಿನ ಸಂಚಿಕೆಯಲ್ಲಿ ಶತಾನಂದರು ಜನಕ ಮಹಾರಾಜನಿಗೆ
ಶ್ರೀ ವೆಂಕಟಗಿರಿಯ ಮಹಾತ್ಮೆ ಯನ್ನು ಭಕ್ತಿಯಿಂದ ಯಾರು ಶ್ರವಣ ಮಾಡುತ್ತಾರೋ ಅವರ ದುಃಖ,ಕಷ್ಟ ಪರಿಹಾರವಾಗಿ ಮಂಗಳವಾಗುತ್ತದೆ ಅಂತ ಹೇಳುತ್ತಾರೆ.
ಯುಗಭೇದದಿಂದ ನಾಲ್ಕು ಹೆಸರು ಬಂದ ಬಗೆಯನ್ನು ಹೇಳುತ್ತಾರೆ.
ಕೃತಯುಗದಲ್ಲಿವೃಷಭಾಚಲ
ತ್ರೇತಾಯುಗದಲ್ಲಿ ಅಂಜನಾಚಲ,
ದ್ವಾಪರಯುಗದಲ್ಲಿ ಶೇಷಾಚಲ,
ಕಲಿಯುಗದಲ್ಲಿ
ವೆಂಕಟಾಚಲವೆಂದು, ಹೇಳುತ್ತಾರೆ.
ಅದಕ್ಕೆ ಜನಕನು
ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು ಕೇಳಿದಾಗ
ಅದಕ್ಕೆ ಶತಾನಂದರು
ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು..ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ.
ಅವಾಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರಮಾಡುವೆನೆಂದು
ಹೇಳುತ್ತಾನೆ.
ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥ ದಲ್ಲಿ ಸ್ನಾನ ಮಾಡಿ ,ಅವನ ಬಳಿಯಿರುವ ನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ,ಪೂಜೆ ಮುಗಿದ ಮೇಲೆ ,ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀ ಹರಿಗೆ ಸಮರ್ಪಣೆ ಮಾಡುತ್ತಾ ಇದ್ದ.
ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.
ಈ ರೀತಿಯಲ್ಲಿ ೫ ಸಹಸ್ರ ವರ್ಷಗಳ ಕಾಲ ಪೂಜೆ ಯನ್ನು ಮಾಡಿದನು..
ಸರಿಯಾಗಿ ೫ಸಹಸ್ರ ವರ್ಷಗಳಾಗುವ ಸಮಯಕ್ಕೆ ಶ್ರೀ ಹರಿ ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ..
ಭಗವಂತನ ದರ್ಶನ ದಿಂದ ಆನಂದ ತಡೆಯಲಾರದೆ ಮೂರ್ಛೆ ತಾಳುತ್ತಾನೆ.
ನಂತರ ಎಚ್ಚರವಾದ ಮೇಲೆ ಭಗವಂತನ ಬಳಿ ಹೀಗೆಂದು ಕೇಳುತ್ತಾನೆ.
ಹೇ ನಾರಾಯಣ!! ನೀನು ದೋಷ ರಹಿತನು,.
ರಮಾ,ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವನು ಮತ್ತು ಎಲ್ಲರಿಗಿಂತ ಅತ್ಯುತ್ತಮ ನಾದವನು ಆಗಿದ್ದೀಯಾ.
ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆಉಂಟಾಗಿದೆ.ಅದನ್ನು ನಡೆಸಿಕೊಡಲು ಕೇಳುತ್ತಾನೆ.
ಭಗವಂತನು ತಥಾಸ್ತು! ಅಂತ ಹೇಳಿ ಅವನ
ಜೊತೆಯಲ್ಲಿ ಯುದ್ಧ ವನ್ನು ಮಾಡುತ್ತಾನೆ.
ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ.
ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರ ವನ್ನು ಪ್ರಯೋಗ ಮಾಡಲು ಸಿದ್ದನಾಗುತ್ತಾನೆ.
ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ
ಸ್ವಾಮಿ! ನಿನ್ನ ಚಕ್ರದ ಪ್ರಭಾವಕೇಳಿದ್ದೇನೆ.ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ..
ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಅಂತ ಪ್ರಾರ್ಥನೆ ಮಾಡಿದ..
ಅವಾಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರ ದಿಂದ ಅವನನ್ನು ಸಂಹರಿಸಿ,ಮುನಿಗಳ ಕಷ್ಟ ವನ್ನು ಪರಿಹರಿಸಿದನು.. ಹಾಗಾಗಿ ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಅಂತ ಹೆಸರು ಬಂದಿತು. ಅಂತ ಹೇಳುತ್ತಾರೆ.
(೨)ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠ ನಾದ ಕೇಸರಿಯ
ಪತ್ನಿಯಾದ ಅಂಜನಾ ದೇವಿಯು ಪುತ್ರ ಸಂತಾನಕ್ಕಾಗಿ ಮತಂಗ ಮುನಿಗಳ ಆದೇಶದಂತೆ ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿಆಚರಿಸಿ ವಾಯುದೇವರ ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು..
ಹಾಗಾಗಿ ಇದು ಅಂಜನಾದ್ರಿ ಅಂತ ಹೆಸರು ಬಂದಿತು.
(೩)ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠ ದಲ್ಲಿ ಏಕಾಂತದಲ್ಲಿ ಇದ್ದನು.
ಅಂತಃ ಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು.
ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆ ಯಂತೆ ಕಾಯುತ್ತಿದ್ದರು..
ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ.
ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ ತಡೆಯಬೇಡ!! ಅಂತ ವಾಯುದೇವರು ಹೇಳಿದರು ಸಹ,
ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು ಅಂತ ಹೇಳುತ್ತಾರೆ.
ಅದಕ್ಕೆ ವಾಯುದೇವರು
ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆ ಯನ್ನು ನೆನಪು ಮಾಡಿಕೊಡುತ್ತಾರೆ..
ಆದರು ಸಹ ಶೇಷದೇವನು ಕೋಪದಿಂದ
ಸಕಲ ಜೀವ ನಿಯಾಮಕರಾದ ಮುಖ್ಯ ಪ್ರಾಣದೇವರನ್ನು ನಿಂದಿಸುತ್ತಾ
ಎಲೈ !!ವಾಯುದೇವ !!ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ?ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು??
ಕೇಳು! ನನ್ನ ಶಕ್ತಿ ಸಾಮರ್ಥ್ಯ ದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರು ಇಲ್ಲ .ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು.ಅಂತ
ತನ್ನ ಬಗ್ಗೆ ತಾನೇ ಸ್ವಪ್ರಶಂಶೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ.
ಹೇ! ಶೇಷದೇವನೇ! ಅರಮನೆಯಲ್ಲಿ ಇರುವ ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ ಮಾತ್ರಕ್ಕೆ ಪಟ್ಟದ ಆನೆಗೆ ಸಮವಾದೀತೇ??
ಮಹಾರಾಜನ ಸೇವೆಗೆ ಇರುವ ಸೇವಕನು ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ??..
ಅದು ಅವನ ದೊಡ್ಡಸ್ತಿಕೆಯೆ ??
ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??.
ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು ಅಂತ ವಾಯುದೇವರು ಉಪದೇಶ ಮಾಡುತ್ತಾರೆ.
ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು.
ಆವಾಗ ಶ್ರೀಹರಿಯು ಹೊರಗಡೆ ಬಂದು
ಶೇಷ !!ಏಕಿಂತು ಕೂಗಾಡುತ್ತಿರುವೆ!!ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ?? ಎಂದು ಪ್ರಶ್ನಿಸಲು
ಅದಕ್ಕೆ ಶೇಷದೇವನು
ಪ್ರಭು ಮಲಯಾಚಲವಾಸಿಯು, ಬಹು ಗರ್ವಿಷ್ಟನು, ದುರಭಿಮಾನಿಯು,ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ.
ಅದಕ್ಕಾಗಿ ಈ ಕಲಹಎಂದು ಹೇಳುತ್ತಾನೆ..
ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು..
ಭಗವಂತನು ಮುಖ್ಯ ಪ್ರಾಣನನ್ನು ಕಂಡು ಕುಮಾರ!! ಪವಮಾನ!!
ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ??ಎಂದು ಮಧುರವಾಣಿ ಇಂದ ನುಡಿದನು.
ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು.
ಅಹಂಕಾರದಿಂದ ತಾನು ಮಹಾನ್ ಶಕ್ತಿ ಶಾಲಿ.ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ ಎಂದು ಹೇಳುವನು.
ಅದಕ್ಕೆ ಭಗವಂತನು
ಶೇಷ !!ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ..
ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು..
ಆದ್ದರಿಂದ ನಿಮ್ಮಿಬ್ಬರಿಗೂ ಒಂದು ಪರೀಕ್ಷೆ ಇಡುವೆನು..
ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತನ ಮಗ ರಾಜಕುಮಾರನಾದ ಆನಂದಾದ್ರಿ ಬೆಟ್ಟ ವಿದೆ.ನೀನು ನಿನ್ನ ದೇಹವೆಂಬ ಹಗ್ಗದಿಂದ ಅದನ್ನು ಬಿಗಿಯಾಗಿ ಸುತ್ತುವರೆದು ಕುಳಿತಿಕೊ.ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ.ಅದರಿಂದ ಯಾರು ಶ್ರೇಷ್ಠ ರು ಅಂತ ತಿಳಿಯುತ್ತದೆ ಅಂತ ಆಜ್ಞೆ ಮಾಡಿದನು.
ಅದರಂತೆ
ಶೇಷದೇವನು ತಾನೇ ಶಕ್ತಿ ಶಾಲಿ.ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು..
ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯ ವನ್ನು ನೋಡಲು ನಿಂತರು.
ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ..
ಏನಾಶ್ಚರ್ಯ!!
ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರ ದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು.
ತನ್ನ ಪುತ್ರ ನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು
ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು ಶೇಷದೇವರ ಸಹಿತವಾಗಿ ನದಿಯ ದಡದ ಮೇಲೆ ಇರಿಸಿದರು..
ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ. ನಿರ್ಣಯ ಮಾಡುತ್ತಾರೆ.
ಶೇಷದೇವರ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು ಹೋಗಿ
ಜಗತ್ಪ್ರಾಣನಾದ,
ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ
ನಾನು ಮಾಡಿದ ನಿಂದಾರೂಪ,ಕಾರ್ಯವನ್ನು ಕ್ಷಮಿಸಿ.🙏
ಅಂತ ಪ್ರಾರ್ಥನೆ ಮಾಡುತ್ತಾರೆ.
ವಾಯುದೇವರು ಪರಮಕರುಣಾಳುಗಳು,ಯಾರಲ್ಲಿಯು ದ್ವೇಷವಿಲ್ಲದವರು, ಶೇಷದೇವನ ಅಪರಾಧವನ್ನು ಕ್ಷಮಿಸಿ, ಅನುಗ್ರಹ ಮಾಡಿ
"ಶೇಷದೇವನೇ ! ಇದೆಲ್ಲಾ ಶ್ರೀಹರಿಯ ಇಚ್ಚೆಯ ಪ್ರಕಾರ ನಡೆದಿದೆ.ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು.ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತ ವಾಗುವದು ಅಂತ ಹೇಳಿ" ಅವರನ್ನು ಆನಂದಗೊಳಿಸಿದರು.
ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು.ಎಂದು ಶತಾನಂದರು ಜನಕರಿಗೆ ಹೇಳಿದರು.
ಮುಂದಿನ ಸಂಚಿಕೆ ನಂತರ..
🙏ಶ್ರೀ ಕೃಷ್ಣಾ ರ್ಪಣಮಸ್ತು🙏
ಶ್ರೀನಿವಾಸ ನಮ್ಮ ವಿಜಯವಿಠ್ಠಲ ರೇಯಾ|
ಕಾಣಿಸಿಕೊಂಬನು ಈ ಗಿರಿಯ ಸ್ಮರಿಸಿದವರಿಗೆ|
🙏ಶ್ರೀನಿವಾಸ ದಯಾನಿಧೆ🙏
*****************
ಶ್ರೀನಿವಾಸ ಕಲ್ಯಾಣ ಮಹಾತ್ಮೆಯಲ್ಲಿ ವಿಷ್ಣು ಸಹಸ್ರನಾಮ ಪದದ ಚಿಂತನೆ||
ನೆನ್ನೆ ಬೆಳಿಗ್ಗೆ ಪೋಸ್ಟ್ ಮಾಡಿದ ಶ್ರೀನಿವಾಸ ಕಲ್ಯಾಣ ಮಹಾತ್ಮೆ ಯಲ್ಲಿ ಕೆಲವು ವಿಚಾರಗಳು ಶ್ರೀ ವಿಷ್ಣು ಸಹಸ್ರನಾಮ ನಾಮಗಳಲ್ಲಿ ಹೇಗೆ ಪ್ರತಿಬಿಂಬ ವಾಗಿದೆ ಎಂಬುದನ್ನು ತಿಳಿಯೋಣ.
ಆ ಜಗತ್ತಿನ ಸ್ವಾಮಿಯಾದ ಶ್ರೀನಿವಾಸನ ದಯೆಯಿಂದ.
ಮಾನದಃ
✍ಶ್ರೀ ವಿಷ್ಣು ಸಹಸ್ರನಾಮ ದಲ್ಲಿ ಭಗವಂತನ ಗುಣಗಳನ್ನು ಹೊಗಳುವ ಒಂದು ಶ್ಲೋಕ.
ತನ್ನ ಭಕ್ತರು ಯಾರು ಇದ್ದಾರೆ ಅವರಿಗೆ ಗೌರವ ವನ್ನು ಕೊಡುವಲ್ಲೂ ಮತ್ತು ಕೊಡಿಸುವಲ್ಲೂ ಭಗವಂತನ ಭಕ್ತವಾತ್ಸಲ್ಯವನ್ನು ಅನುಸಂಧಾನ ಮಾಡಬಹುದಾಗಿದೆ.
ತನ್ನ ಭಕ್ತರಿಗೆ ಗೌರವಕ್ಕೆ ಅರ್ಹವಾದ ಪ್ರಯೋಜಕವಾದ ಜ್ಞಾನ ವನ್ನು ಬಲವನ್ನು ತಾನೇ ಅವರಿಗೆ ನೀಡಿ, ಅದಕ್ಕಾಗಿ ತಾನೇ ಗೌರವ ವನ್ನು ಅನುಗ್ರಹ ಮಾಡುವ ಔದಾರ್ಯ ಭಕ್ತವತ್ಸಲನಾದ ನಮ್ಮ ಸ್ವಾಮಿ ಶ್ರೀ ಹರಿಯದ್ದು.
ಇದು ಇಲ್ಲಿ ಹೇಗೆ ಅನ್ವಯಿಸುತ್ತದೆ??
ಎಂದರೆ
ವೆಂಕಟಾಚಲ ಪರ್ವತಕ್ಕೆ ಶೇಷಶೈಲ ಅಥವಾ ಶೇಷಾದ್ರಿ ಪದ ಬರಲು ಕಾರಣವನ್ನು ಶತಾನಂದ ಮುನಿಗಳು ಜನಕನಿಗೆ ಹೇಳುತ್ತಾರೆ.
ಒಮ್ಮೆ ವೈಕುಂಠ ನಗರಕ್ಕೆ ಭಗವಂತನ ಭೇಟಿಯಾಗಲು ವಾಯುದೇವರು ಬಂದಾಗ ಶೇಷದೇವನು ಅವರಿಗೆ ಒಳಗಡೆ ಬಿಡದೇ ಅವರ ಜೊತೆಗೆ ವಾಗ್ವಾದವನ್ನು ಮಾಡುತ್ತಾನೆ. ತನ್ನ ಹಾಗೇ ಬಲ,ಜ್ಞಾನ, ವೈರಾಗ್ಯ,ವಿಷ್ಣು ಭಕ್ತಿ ಈ ಗುಣಗಳಲ್ಲಿ ತನಗೆ ಸಮರಾದವರು ಈ ಜಗತ್ತಿನಲ್ಲಿ ಇಲ್ಲ ವೆಂದು ಹೇಳುತ್ತಾ ಯಾವಾಗಲು ಶ್ರೀ ಹರಿಯ ಅಂತಃಪುರದಲ್ಲಿ ತನ್ನ ವಾಸ.ಇತ್ಯಾದಿ ಯಾಗಿ ಅಹಂಕಾರದಿಂದ ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳಲು
ಅವಾಗ ಅಲ್ಲಿ ಆಗಮಿಸಿದ ಭಗವಂತ ವಾಯು ದೇವ ಮತ್ತು ಶೇಷದೇವನ ನಡುವೆ ಸ್ಪರ್ಧೆ ಏರ್ಪಾಡು ಮಾಡುವನು.
ಅದರಂತೆ ಆನಂದ ಪರ್ವತವನ್ನು ಶೇಷದೇವನು ತನ್ನ ದೇಹದಿಂದ ಸುತ್ತುಹಾಕಿ ಗಟ್ಟಿಯಾಗಿ ಹಿಡಿದುಕೊಳ್ಳುವನು.
ಅದನ್ನು ವಾಯುದೇವರು ತನ್ನ ಕಿರುಬೆರಳ ಸ್ಪರ್ಶಮಾತ್ರದಿಂದ ಆ ಪರ್ವತವು ಆದಿಶೇಷನ ಸಹಿತವಾಗಿ ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನ ದೂರದಷ್ಟು ದಕ್ಷಿಣ ಅಭಿಮುಖವಾಗಿ ಹಾರಿ ಹೋಯಿತು.
ಇದರಿಂದ ಶೇಷದೇವನ ಗರ್ವ,ದುರಭಿಮಾನ ಮತ್ತು ಮದವನ್ನು ಭಗವಂತ ಪರಿಹಾರಮಾಡಿದನು.
ತದನಂತರ ದಲ್ಲಿ ವಾಯುದೇವರ ಮಹಿಮೆ ಯನ್ನು ಎತ್ತಿ ಜಗತ್ತಿಗೆ ತೋರಿಸಿಕೊಟ್ಟ. ಆ ಪ್ರಯುಕ್ತ ವಾಯುದೇವರು ಶೇಷದೇವನಿ ಗಿಂತ ಎಲ್ಲಾದರಲ್ಲಿ ಅಧಿಕ ಎಂದು ತೋರಿಸಿ ಅಧಿಕವಾದ ಗೌರವ ವನ್ನು ತೋರಿಸಿದ.
ಹಾಗಾಗಿ
ಇಲ್ಲಿ ಮಾನದಃ ಅಂದರೆ
ಶೇಷದೇವನ ದುರಭಿಮಾನವನ್ನು ವಾಯುದೇವರು ಮೂಲಕ ಪರಿಹರಿಸಿರುವವನು
ಮತ್ತು ವಾಯುದೇವರಿಗೆ ಶೇಷದೇವನ ಮೂಲಕ ಗೌರವ ದೊರಕುವಂತೆ ಮಾಡಿರುವನು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಖಗರಾಜವಾಹನ ಜಗದೊಡೆಯನೆ| ನಿನ್ನ ಅಗಣಿತ ಮಹಿಮೆಗೆ ನಮೊ ನಮೋ||
🙏ಶ್ರೀನಿವಾಸ ದಯಾನಿಧೆ🙏
*********
||ಶ್ರೀನಿವಾಸ ಕಲ್ಯಾಣ ಚರಿತ್ರೆ||Day 3
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
(ವೆಂಕಟಗಿರಿ ಮಹಾತ್ಮೆ ಇಂದು ಅವಶ್ಯಕ ಪಾರಾಯಣ )
✍ಹಿಂದಿನ ಎರಡು ಸಂಚಿಕೆಗಳಲ್ಲಿ
ಶತಾನಂದರು ಜನಕರಾಜನಿಗೆ ವೆಂಕಟಗಿರಿಯ ಮಹಾತ್ಮೆ ಹೇಳುತ್ತಾ ಆ ಪರ್ವತಕ್ಕೆ ಯುಗ ಭೇದ ದಿಂದ,ವೃಷಭಾಚಲ ಅಂಜನಾಚಲ,ಶೇಷಾಚಲ ಎಂದು ಹೆಸರು ಬಂದ ಹಿನ್ನೆಲೆ ಯನ್ನು ಹೇಳುತ್ತಾ ನಂತರ ಕಲಿಯುಗದಲ್ಲಿ ಅದಕ್ಕೆ ವೆಂಕಟಾಚಲ ಎನ್ನುವ ಹೆಸರು ಹೇಗೆ ಬಂತು ಅನ್ನುವದನ್ನು ಮುಂದೆ ಹೇಳುತ್ತಾರೆ.
ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು.
ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣ ನಿದ್ದನು.ಅವನಿಗೆ ಮಾಧವ ಎಂಬ ಮಗನಿದ್ದನು.
ಅವನ ಪತ್ನಿ ಚಂದ್ರ ರೇಖೆ.
ವೇದವೇದಾಂಗ ಪಾರಂಗತನು,ಸದಾಚಾರ ರತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷಿತ ಪಡಲು ಅದಕ್ಕೆ ಅವನ ಪತ್ನಿಯು ಅದು ಯೋಗ್ಯವಲ್ಲ ಈ ಸಮಯದಲ್ಲಿ ಅಂತ ಬಹು ಹಿತನುಡಿಗಳನ್ನು ಹೇಳಿದರು ಮಾಧವನು ಒಪ್ಪದೇ ವಿಹಾರಕ್ಕೆ ಕರೆದನು.
ಆಗ ಅವನ ಪತ್ನಿಯು ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು.
ಅದೇ ಸಮಯದಲ್ಲಿ ವನದಲ್ಲಿ ಶ್ವೇತ ವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಚಂಡಾಲ ಕನ್ಯೆ ಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು.
ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ
ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿ ಗೆ ಬರಹೇಳಿದ್ದು.ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು ಎಂದು ಹೇಳಲು ಹರ್ಷಿತಳಾದ ಅವಳು ಮನೆಗೆ ತೆರಳಿದಳು.
ನಂತರ ಪತ್ನಿ ಹೋಗಿದ್ದ ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು.
ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ
ಚಂಡಾಲ ಸ್ತ್ರೀ ಯ ಸಂಗಮ ನಿನಗೆ ವಿಹಿತ ವಲ್ಲವೆಂದು ಹೇಳಿದರು ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ.
ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಚಂಡಾಲ ಕರ್ಮವನ್ನು ಸ್ವೀಕರಿಸು" ಅಂತ ಹೇಳಿದಳು.ವಿಧಿಯಿಂದ ಪ್ರೇರಿತನಾದವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು,ತಲೆಯನ್ನು ಬೋಳಿಸಿಕೊಂಡು,ಮಾಂಸ ಮಧ್ಯ ವನ್ನು ಸೇವಿಸುತ್ತಾ ಅವಳ ಜೊತೆಯಲ್ಲಿ ವಾಸ ಮಾಡಿದ.
ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ.
ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು ಅನ್ನುವಂತೆ,ಈ ದೇಹವು ಅಶಾಶ್ವತ ವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು..
ಪ್ರಿಯಕರಳ ಮರಣದಿಂದ
ದುಃಖದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ.
ಅವರು ಉಂಡು ಉಳಿಸಿದ ಭಗವಂತನ ಪ್ರಸಾದವನ್ನು, ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ.
ಆ ರಾಜರು ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಭಕ್ತಿ ಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ.
ಮಾಧವನು ಸಹ ಅವರಂತೆ ಕಪಿಲ ತೀರ್ಥ ದಲ್ಲಿ ಸ್ನಾನ ಮಾಡಿ ಶಿರೋಮುಂಡನ ಮಾಡಿಸಿಕೊಂಡು ತನ್ನ ಪಿತೃಗಳಿಗೆ ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು.
ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲವೋ ಅವನ ಪಾಪಗಳೆಲ್ಲ ಪರಿಹಾರವಾಯಿತು.
ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥ ದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪ ರಾಶಿ ನಾಶವಾಗುವದು..
ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿ ಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು..
ಮರುದಿನರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ
ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ ,ಆ ಪರ್ವತದ ಸ್ಪರ್ಶ ಮಾತ್ರ ದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು..
"ಹೇಗೆ ನೊಣವನ್ನು ನುಂಗಿದವನು ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆ ಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು..
ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ ,ಮಾಂಸ ,ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು.ಆಗ ಬಂದ ದುರ್ವಾಸನೆಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು.ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲುಸಕಲದೇವತೆಗಳು ,ಬ್ರಹ್ಮ ರುದ್ರಾದಿ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿ ಗೆ ಆಗಮಿಸಿದರು..
ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು.
ವೇದಪ್ರತಿಪಾದ್ಯನು, ಕಾಂತಿ ಸಂಪನ್ನನು, ಸರಸ್ವತಿ ದೇವಿಯ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಬ್ರಹ್ಮ ದೇವರು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ..
"ವತ್ಸ!!ಮಾಧವ!!ನಿನ್ನ ಪಾಪಗಳು ಪರಿಹಾರವಾದವು.ನೀನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಆ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು...
ಮುಂದೆ ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜ ನಾಗಿ ರಾಜ್ಯ ಭಾರವನ್ನು ಮಾಡುತ್ತೀಯಾ..
ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ..
"ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!!
ನನಗೆ ಹಾಗು ಲೋಕಕ್ಕೆ, ಜನನಿಯಾದ, ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು..
ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ, ನನ್ನ ಪಿತನಾದ, ಆ ದೇವ ದೇವನಾದ ಶ್ರೀ ಮನ್ ನಾರಾಯಣನು ನಿನಗೆ ಅಳಿಯನಾಗುವನು..
ಬಹುಕಾಲ ರಾಜ್ಯದ ಭಾರವನ್ನು ಮಾಡಿಅನಂತರ ಮೋಕ್ಷ ವನ್ನು ಪಡೆಯುತ್ತೀಯಾ" ಅಂತ ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಬ್ರಹ್ಮ ದೇವರು ಅದೃಶ್ಯ ರಾದರು.
"ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲ ವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು.ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತ ವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು" ಬಂದಿತು.
ಸಕಲ ಪಾಪ ಪರಿಹಾರಕವಾದ್ದರಿಂದಲೇ ವೆಂಕಟಶೈಲವೆಂದು ಈ ಪರ್ವತಕ್ಕೆ ಹೆಸರು.
ಪ್ರಸ್ತುತಃ ಮಾಧವನ ಪಾಪ ಪರಿಹಾರವಾದ್ದರಿಂದ ಮಾಧವಾದ್ರಿ ಎಂಬ ಹೆಸರು ಬರಬೇಕಿತ್ತು ಅನ್ನುವ ಸಂದೇಹ ಬರಬಹುದು.
ಮಾಧವಾದ್ರಿ ಎಂಬ ಹೆಸರು ಇದ್ದರೆ ಬರಿಯ ಮಾಧವನ ಪಾಪವನ್ನು ಮಾತ್ರ ಪರಿಹರಿಸಲು ಸಮರ್ಥ.ಬೇರೆಯವರ ಪಾಪವಲ್ಲ ಅನ್ನುವ ರೀತಿಯಲ್ಲಿ ಅರ್ಥ ಬರಬಹುದು.
"ಪರ್ವತದ ಸ್ಪರ್ಶವನ್ನು ಮಾಡಿದವರು ಯಾರೇ ಆಗಿರಲಿ, ಅವರ ಪಾಪಗಳನ್ನು ಪರಿಹರಿಸುತ್ತದೆ".
"ವೇಂ ..ಎಂದರೆ ಸಕಲ ಪಾಪಗಳು"..
"ಕಟ ..ಎಂದರೆ ಆ ಪಾಪಗಳನ್ನು ಸುಡುವದು"..
ಎಂಬ ಅರ್ಥ ಇರುವದರಿಂದ ಅದಕ್ಕೆ ದೇವತೆಗಳು "ವೆಂಕಟಾಚಲವೆಂದು" ಕರೆದರು.
ನಾಲ್ಕು ಯುಗದಲ್ಲಿ ಈ ಗಿರಿಗೆ ಹೆಸರು ಬಂದ ಬಗೆಯನ್ನು,ಈ ಮೂರು ದಿನಗಳ ಕಾಲ ಶ್ರೀ ವೆಂಕಟೇಶ ಮಹಾತ್ಮೆ ಯಲ್ಲಿ ತಿಳಿದಿರುತ್ತೇವೆ.
ಮತ್ತು
ವೆಂಕಟಗಿರಿ ಮಹಾತ್ಮೆ ಯನ್ನು ಯಾರು ಪ್ರಾತಃ ಕಾಲದಲ್ಲಿ ಪಠಣ ಮಾಡುವರೋ,ಅವರಿಗೆ ಗಂಗಾಸ್ನಾನ ಫಲ,ಬರೆದರೆ ಗಂಗಾಜನಕ ಶ್ರೀ ಕೃಷ್ಣನ ಸಹಸ್ರ ಬಾರಿ ಪ್ರದಕ್ಷಿಣೆ ರೂಪವಾದ ಫಲ ಲಭಿಸುತ್ತದೆ.
ಈ ಕಾರಣದಿಂದ ವೆಂಕಟಾಚಲವು ಲೋಕದಲ್ಲಿ ಪ್ರಸಿದ್ದವಾದ ಕೀರ್ತಿ ಉಳ್ಳದ್ದಾಯಿತು.
"ಜನಕರಾಜನೇ!! ಯಾವ ವ್ಯಕ್ತಿ ಮುಂಜಾನೆ ಈ ಪರ್ವತವನ್ನು ಭಕ್ತಿ ಶ್ರದ್ಧೆ ಇಂದ ಸ್ತೋತ್ರ ಮಾಡುವರೋ ಅವರಿಗಾಗುವ ಪುಣ್ಯದ ಫಲವನ್ನು ಹೇಳುವೆ ಕೇಳು".
"ಗಂಗೆಯ ಮತ್ತು ರಾಮಸೇತು ಯಾತ್ರೆಯನ್ನು ಸಹಸ್ರಬಾರಿ ಮಾಡಿದರೆ ಬರುವ ಪುಣ್ಯ ದಷ್ಟು ಪುಣ್ಯವನ್ನು ನಿಶ್ಚಿತ ವಾಗಿ ಪಡೆಯುವರು."
ಇದಕ್ಕೆ ಸಂದೇಹವಿಲ್ಲ.
"ಇದು ಪುಣ್ಯಕರ ಮಂಗಳಕರ,ಮತ್ತು ಕೇಳುವದರಿಂದ ಬರೆದು ಓದುವರಿಂದ ಶ್ರೇಯಸ್ಸು ಕೊಡುವಂತಹದು."
"ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ,ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು ಕೇಳು".
ಸಮಗ್ರಭೂಮಿ,ಗಂಗಾನದಿ ,ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯ ವು ಬರುವದು.ಬಹು ಪುಣ್ಯ ಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆ ಯನ್ನು ನಿನಗೆ ಹೇಳಿದ್ದೇನೆ. ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು ಎಂದು ಹೇಳಿದರು.
ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿದಿದು..
ಇದನ್ನು ಕೇಳಿ ಸಂತುಷ್ಟನಾದ ಜನಕರಾಜನು ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು ಕೇಳುತ್ತಾನೆ.
ನಾಳೆ ಅದರ ಬಗ್ಗೆ ತಿಳಿಸುವ ಪ್ರಯತ್ನ.
🙏ಶ್ರೀ ಕೃಷ್ಣಾ ರ್ಪಣ ಮಸ್ತು🙏
ಈ ಗಿರಿ ಯಾತ್ರಿಯಾ ಮಾಡಿದ ಜನರಿಗೆ|
ನಾಗಶಯನ ವಿಜಯವಿಠ್ಠಲ ವೆಂಕಟ ಒಲಿವಾ||
🙏ಅ.ವಿಜಯವಿಠ್ಠಲ🙏
***************
|ಶ್ರೀನಿವಾಸ ಕಲ್ಯಾಣ ಮಹಾತ್ಮೆಯಲ್ಲಿ ವಿಷ್ಣು ಸಹಸ್ರನಾಮ ಪದದ ಚಿಂತನೆ||
ನೆನ್ನೆ ಪೋಸ್ಟ್ ಮಾಡಿದ ಶ್ರೀನಿವಾಸ ಕಲ್ಯಾಣ ಮಹಾತ್ಮೆ ಯಲ್ಲಿ ಕೆಲವು ವಿಚಾರಗಳು ಶ್ರೀ ವಿಷ್ಣು ಸಹಸ್ರನಾಮ ನಾಮಗಳಲ್ಲಿ ಹೇಗೆ ಪ್ರತಿಬಿಂಬ ವಾಗಿದೆ ಎಂಬುದನ್ನು ತಿಳಿಯೋಣ.
ಆ ಜಗತ್ತಿನ ಸ್ವಾಮಿಯಾದ ಶ್ರೀನಿವಾಸನ ದಯೆಯಿಂದ.
🙏🙏
||ಸಂಧಾತಾ||
"ಆಯಾ ವ್ಯಕ್ತಿಗಳು ,ಮತ್ತು ಘಟನೆಗಳು ಆಯಾ ಕಾಲದಲ್ಲಿ, ಆಯಾ ದೇಶದಲ್ಲಿ, ಸಂಭವಿಸುವಂತೆ ಮಾಡಿ
ಆಯಾ ವ್ಯಕ್ತಿಗಳಿಗು ,ಆ ಘಟನೆ ಗಳಿಗು ಆಯಾ ಕಾಲದ ದೇಶದ ಸಂಧಾನವನ್ನು ಮಾಡುವ ಮೂಲಕ ಆಯಾ ದೇಶದ ಕಾಲದ ಪ್ರಭಾವ, ಆಯಾ ವ್ಯಕ್ತಿ ಯ ಮೇಲೆ ಮತ್ತು ಕಾಲದ ಮೇಲೆ ಆಗುವಂತೆ ಮಾಡುವನು.
ಇದು ಅವನ ಲೀಲೆ.
ಇದನ್ನು ಶ್ರೀನಿವಾಸ ಕಲ್ಯಾಣ ಚರಿತ್ರೆ ದಲ್ಲಿ ಅನ್ವಯ ಹೇಗೆ ಎಂದರೆ
ಸಂಧಾತಾ
ಭಗವಂತನ ಸಂಕಲ್ಪ ದಂತೆ ಶೇಷಾಚಲ ಯಾತ್ರೆಯಲ್ಲಿ ತೊಡಗಿದ್ದ ರಾಜರ ಸಂಪರ್ಕ ಅವನಿಗೆ ಆಗುತ್ತದೆ.
ಹೀಗೆ ಕುಂತಲೆಯನ್ನು ಕಳೆದುಕೊಂಡ ಅಡ್ಡಾದಿಡ್ಡಿ ತಿರುಗುವ ಮಾಧವನಿಗೆ ಶೇಷಾಚಲಯಾತ್ರೆಗೆ ಹೊರಟ ಉತ್ತರ ದೇಶದ ರಾಜರ ಸಮಾಗಮವಾಗುವಂತೆ ಭಗವಂತ ಸಂಯೋಜನೆ ಮಾಡುವನು.
ಹಾಗಾಗಿ ಸಂಧಾತಾ ಪದ ಇಲ್ಲಿ ಅನ್ವಯಿಸುತ್ತದೆ.
|ಪಾಪನಾಶನಃ|
ಶೇಷಗಿರಿಯ ಪರ್ವತ ಸ್ಪರ್ಶಮಾತ್ರದಿಂದ ಮಾಧವನ ಪಾಪರಾಶಿ ಸುಟ್ಟು ನಾಶವಾಗುವಂತೆ ಅನುಗ್ರಹ ಮಾಡಿರುವನು.
ಮಾಧವನು ಆ ರಾಜರ ಜೊತೆಗೆ ಶೇಷಗಿರಿ ಶಿಖರವನ್ನು ಏರುತ್ತಿರುವಂತೆ ಅವನ ಪಾಪವೆಲ್ಲವು ಸುಟ್ಟು ಬೂದಿ ಯಾಯಿತು.
ಹೇಗೆ ನೊಣವನ್ನು ನುಂಗಿದವನು ವಾಂತಿ ಮಾಡಿಕೊಳ್ಳುವನೋ ಅದರಂತೆ ಅವನ ದೇಹದಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು.ಅವನ ಪಾಪರಾಶಿಯೆಲ್ಲ ಸುಟ್ಟು ಬೂದಿಯಾಯಿತು.
ಹಾಗಾಗಿ ಪಾಪನಾಶನಃ ಶಬ್ದ ಇಲ್ಲಿ ಅನ್ವಯ ಮಾಡಿಕೊಳ್ಳಲು ಬಹುದು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಶ್ರೀ ವೆಂಕಟೇಶನೆ ನಮೊ ನಮೋ
🙏ಶ್ರೀನಿವಾಸ ದಯಾನಿಧೆ🙏
*********
||ಶ್ರೀ ಶ್ರೀನಿವಾಸ ಕಲ್ಯಾಣ ಚರಿತ್ರೆ|| day4
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಹಿಂದಿನ ಅಧ್ಯಾಯ ದಲ್ಲಿ ಚತುರ್ಯುಗದಲ್ಲಿ ವೆಂಕಟಗಿರಿಗೆ ಬಂದ ನಾಲ್ಕು ಹೆಸರುಗಳ ಕಾರಣ ಮುಂತಾದವನ್ನು ಕೇಳಿದ ಜನಕಮಹಾರಾಜನು ಅತೀ ಸಂತುಷ್ಟನಾಗಿ
ಸ್ವಾಮಿ!! ಹಿಂದೆ ನೀವು ವಾಯುದೇವರು ಶೇಷದೇವನಿಗೆ ಭಗವಂತನು ಇಲ್ಲಿ ಬಂದು ವಾಸ ಮಾಡುತ್ತಾನೆ ಅಂತ ಹೇಳಿದ್ದೀರಿ..
ಯಾವ ಕಾರಣದಿಂದಾಗಿ ಭಗವಂತ ವೈಕುಂಠ ವನ್ನು ಬಿಟ್ಟು ಇಲ್ಲಿ ನೆಲೆಸಿದ??ಅದರಂತೆ ಆಕಾಶರಾಜನ ಚರಿತ್ರೆ,ಮತ್ತು ಸಾಕ್ಷಾತ್ ಮಹಾಲಕ್ಷ್ಮೀ ದೇವಿಯು ಅವನಿಗೆ ಹೇಗೆ ಮಗಳಾದಳು??ಭಗವಂತನು ಆಕಾಶರಾಜನಿಗೆ ಹೇಗೆ ಅಳಿಯನಾದ?? ಕತೆಯನ್ನು ದಯವಿಟ್ಟು ಅದರ ಬಗ್ಗೆ ತಿಳಿಸಬೇಕು ಅಂತ ಕೇಳಿಕೊಂಡನು.
ಅದಕ್ಕೆ ಶತಾನಂದರು
ಹೇ ರಾಜನ್!! ಕೇಳು! ಪೂರ್ವದಲ್ಲಿ ಸಕಲ ಮುನಿಶ್ರೇಷ್ಟರು ಗಂಗಾನದಿಯ ತಟದಲ್ಲಿ ಒಂದು ಶ್ರೇಷ್ಠ ವಾದ ಯಜ್ಞ ವನ್ನು ಆಚರಿಸಿದರು..
ಆ ಯಾಗ ನಡೆಯುವ ಸುಸಂಧರ್ಭದಲ್ಲಿ ದೇವರ್ಷಿಯಾದ ನಾರದರು ಅಲ್ಲಿಗೆ ಆಗಮಿಸಿ ಕಶ್ಯಾಪಾದಿ ಋಷಿಗಳನ್ನು ನೋಡಿ ಈ ಉತ್ತಮವಾದ ಯಜ್ಞ ವನ್ನು ಯಾವ ಉದ್ದೇಶದಿಂದ ಮಾಡುವಿರಿ??ಈ ಯಜ್ಞಕ್ಕೆ ದೇವತೆ ಯಾರು?? ಮತ್ತು ಈ ಯಜ್ಞ ದ ಫಲವನ್ನು ಯಾವ ಸರ್ವೋತ್ತಮ ದೇವತೆಗೆ ಅರ್ಪಿಸುವಿರಿ?? ಶ್ರೀಹರಿಗೋ??ವಾರಿಜೋದ್ಬವನಿಗೋ??ಅಥವಾ ಶಂಕರನಿಗೋ??ಅಂತ ಕೇಳಿದಾಗ
ಸಕಲ ಮುನಿಗಳಲ್ಲಿ ಇದರ ಬಗ್ಗೆ ಚರ್ಚೆ ಯಾಗಿ ನಿಜ ಇದನ್ನು ಯಾರಿಗೆ ಅರ್ಪಿಸಬೇಕು?? ಅಂತ ವಿಚಾರಿಸಿ ಕೊನೆಗೆ ಸಾಧ್ಯವಾಗದೇ ಋಷಿಗಳ ಸಮೂಹದಲ್ಲಿ ಶ್ರೇಷ್ಠ ರಾದ ಭೃಗು ಮುನಿಗಳ ಹತ್ತಿರ ಬಂದು ಸ್ವಾಮಿ ಭೃಗುಮುನಿಗಳೇ!!ದೇವತೆಗಳಲ್ಲಿ ಉತ್ತಮನಾದ ಪರಮ ಪುರುಷನು ಯಾರೆಂದು ತಿಳಿದು ಬರಲು ದಯಮಾಡಿ ಹೊರಡಿರಿ ಎಂದು ಕೋರಿದರು..
ಆಗ ಭೃಗು ಮುನಿಗಳು ಅವರ ಕೋರಿಕೆಯನ್ನು ಮನ್ನಿಸಿ ಸರ್ವೋತ್ತಮ ದೇವತೆ ಯಾರೆಂದು ತಿಳಿಯಲು ಕಮಲ ಮಂದಿರನಾದ ಸತ್ಯಲೋಕದಲ್ಲಿ ಸರಸ್ವತಿ ಸಮೇತ ನಾಗಿ ಇರುವ ಬ್ರಹ್ಮ ದೇವರ ಬಳಿ ಬಂದರು..
ಆ ಸಮಯದಲ್ಲಿ ನಾಲ್ಕು ಮುಖಗಳಿಂದ ಬ್ರಹ್ಮ ದೇವರು ವೇದಘೋಷವನ್ನು ಮಾಡುತ್ತಾ ಇದ್ದರು..
ಅವರಿಗೆ ಭಕ್ತಿ ಇಂದ ನಮಸ್ಕರಿಸಿ ದರು ಸಹ
ಬ್ರಹ್ಮ ದೇವರು ಭೃಗು ಋಷಿಗಳ ಕಡೆ ಗಮನ ಹರಿಸಲಿಲ್ಲ.
ನೋಡಿದರು, ಮಾತನಾಡಿಸದೆ ಸುಮ್ಮನೆ ಮೌನ ವಹಿಸಿದರು..
ಶ್ರೀ ಹರಿ ಸರ್ವೋತ್ತಮ ಸಿದ್ದಾಂತ ಸ್ಥಾಪಿಸಲೋಸುಗ ಅವರು ಸುಮ್ಮನೆ ಸರಸ್ವತಿ ದೇವಿಯರೊಡನೆ ಭಗವಂತನ ಧ್ಯಾನಾಸಕ್ತರಾಗಿ ಕುಳಿತಿದ್ದರು.
ಇದನ್ನು ಕಂಡ ಭೃಗು ಮುನಿಗಳು ಬ್ರಹ್ಮ ದೇವನು ಸ್ವಲ್ಪ ಅಜ್ಞಾನ ಉಳ್ಳವನಾಗಿದ್ದಾನೆ, ಆದ್ದರಿಂದ ಇವನು ಸರ್ವೋತ್ತಮ ದೇವತೆ ಅಲ್ಲವೆಂದು ತಿಳಿದು ಕಲಿಯುಗದಲ್ಲಿ ಇವರ ಪೂಜೆ ಆಗದಿರಲಿ ಎಂದು ಶಾಪವನ್ನು ಕೊಟ್ಟು ಮುಂದೆ ಕೈಲಾಸ ಪರ್ವತಕ್ಕೆ ಬರುವರು.
ಭೃಗುಋಷಿಗಳು ಸತ್ಯಲೋಕದಿಂದ ಕೈಲಾಸ ಪರ್ವತಕ್ಕೆ ಹೋದಾಗ
ಅಲ್ಲಿ ರುದ್ರದೇವರು ತಮ್ಮ ಪತ್ನಿಯಾದ ಪಾರ್ವತಿದೇವಿಯರೊಂದಿಗೆ ಏಕಾಂತದಲ್ಲಿದ್ದರು...
ಅಲ್ಲಿಯು ಸಹ ರುದ್ರದೇವರು "ಶ್ರೀಹರಿಯೇ ಸರ್ವೋತ್ತಮ"ನೆಂದು ತಮ್ಮಿಂದಲೂ ಸ್ಥಾಪಿಸಬೇಕೆಂದು ತಿಳಿದು ಭೃಗುಋಷಿಗಳು ಬಂದದ್ದನ್ನು ನೋಡಿಯು ನೋಡದಂತೆ ನಟಿಸಿ,ಅವರ ಯೋಗ-ಕ್ಷೇಮವನ್ನು ವಿಚಾರಿಸದೆ, ಸುಮ್ಮನೆ ಇರುತ್ತಾರೆ.ನಂತರ ಪಾರ್ವತಿ ದೇವಿಯು ಋಷಿಗಳ ಆಗಮನವನ್ನು ಹೇಳಿದಾಗ ತಮ್ಮ ಪತ್ನಿ ಯೊಡನೆ ಗಿರುವ ಸಮಯ, ಏಕಾಂತಕ್ಕೆ ಭಂಗ ತಂದಿರುವಿರೆಂದು ಋಷಿಗಳಿಗೆ ತಮ್ಮ ತ್ರಿಶೂಲದಿಂದ ಸಂಹರಿಸಲು ಹೋದಂತೆ ನಟಿಸಿದಾಗ,
ಅಗ ಭೃಗು ಋಷಿಗಳು ಕೋಪದಿಂದ "ಭೋಗಾಸಕ್ತರಾದ ನಿಮಗೆ ಇನ್ನು ಮುಂದೆ ಭೂ-ಲೋಕದಲ್ಲಿ ನಿಮ್ಮ ಮೂರ್ತಿಯನ್ನು ಪೂಜಿಸದೆ ಲಿಂಗ ಪೂಜೆಯಾಗಲಿ"ಎಂದು ಶಾಪವನ್ನು ಕೊಡುತ್ತಾರೆ. ಅವರು ಕೊಟ್ಟು ಶಾಪವನ್ನು ತೆಗೆದುಕೊಂಡು ಪರಮ ವೈಷ್ಣವಾಗ್ರೇಸರಾದ ಹಾಗು ಮನೋನಿಯಾಮಕರಾದ ರುದ್ರದೇವರೆ ವೈಕುಂಠ ಲೋಕಕ್ಕೆ ಹೋಗುವಂತೆ ಭೃಗುಋಷಿಗಳಿಗೆ ಮನಃ ಪ್ರೇರಿಸಿದರು..
ಆ ನಂತರ ವೈಕುಂಠಕ್ಕೆ ಬಂದರು.
ಅಲ್ಲಿ ಶ್ರೀ ಮನ್ನಾರಾಯಣನು ಶೇಷಮಂಚದಲ್ಲಿ ಸುಪ್ಪತ್ತಿಗೆ ಮೇಲೆ ನಿದ್ರಾ ವಶದವನಂತೆ ನಟನೆ ಮಾಡುತ್ತಾ ಪವಡಿಸಿದ್ದನು.ಇದನ್ನು ಕಂಡ ಭೃಗು ಋಷಿಗಳು ಪರಮ ಕೋಪದಿಂದ ಶ್ರೀ ಹರಿಯ ವಕ್ಷಸ್ಥಳಕ್ಕೆ ತಮ್ಮ ಪಾದದಿಂದ ತಾಡನೆ ಮಾಡಿದರು..
ತಕ್ಷಣ ರಮಾಪತಿಯು ಮೇಲೆದ್ದು ತಾನು ಅಪರಾಧ ಮಾಡಿದವನಂತೆ ಕ್ಷಮೆ ಯಾಚಿಸುತ್ತಾ
"ಯಾಕೆನ್ನ ಮೇಲೆ ಇಷ್ಟು ಸಿಟ್ಟು?? ನೀ ಬೇಕಾದ್ದು ಕೇಳು ಕೊಡುವೆನು ಕಾಲಕಾಲಕ್ಕೆ...
ಸುಮ್ಮನೆ ಯಾರಿಗು ತಿಳಿಸದೇ ನನ್ನ ಮನೆಗೆ ಬಂದು ಒದ್ದ ಕಾರಣವೇನು??ನನ್ನ ವಜ್ರ ಕಠಿಣವಾದಂತಹ ಎದೆಗೆ ಒದ್ದು ನಿಮ್ಮ ಮೃದುವಾದ ಕೋಮಲವಾದ ಪಾದ ಎಷ್ಟು ನೊಂದಿತೋ ನಾನರಿಯೇ!! ಅಂತ ಹೇಳಿ
ಭೃಗು ಋಷಿಗಳನ್ನು ಅರ್ಘ್ಯ ಪಾದಾದಿಗಳಿಂದ ಸತ್ಕರಿಸಿ ಲೋಕ ವಿಡಂಬನೆ ಗೊಸ್ಕರ ಆ ಪಾದೋದಕವನ್ನು ತಾನು ಶಿರಸ್ಸಿನಲ್ಲಿ ಧರಿಸಿ,ತನ್ನ ಪತ್ನಿಯಾದ ರಮಾದೇವಿಯರಿಗು ಪ್ರೋಕ್ಷಣೆ ಮಾಡಿ, ಮನೆಯಲ್ಲಿ ಎಲ್ಲಾ ಕಡೆಗೆ,ತನ್ನ ಸಕಲ ಪರಿವಾರದವರಿಗು ಪ್ರೋಕ್ಷಣೆಯನ್ನು ಶ್ರೀ ಹರಿಯು ಮಾಡುತ್ತಾನೆ.
ಶ್ರೀ ಹರಿಯಿಂದ ಗೌರವ ವನ್ನು ಪಡೆದುಕೊಂಡು ಸಂತುಷ್ಟರಾಗಿ
ಬಂದ ಕಾರ್ಯವಾಗಿದ್ದನ್ನು ತಿಳಿದು ಭೃಗು ಋಷಿಗಳು ಭೂಲೋಕಕ್ಕೆ ಬಂದು
ಶ್ರೀ ಹರಿಯೇ ಸರ್ವೋತ್ತಮ ನೆಂದು ಹೇಳಿ ಇದು ಸತ್ಯ ಅಂತ ಎಲ್ರಿಗು ಉಪದೇಶ ವನ್ನು ಮಾಡಿದರು..
ಶ್ರೀ ಹರಿಯು ಸಕಲ ದೇವತಾ ಸಾರ್ವಭೌಮ ನು.ನಂತರ ಲಕ್ಷ್ಮೀ ದೇವಿಯರು ತಾರತಮ್ಯ ದಲ್ಲಿ ಕಿರಿಯಳು.ಆ ನಂತರ ಬ್ರಹ್ಮ ವಾಯುಗಳು. ಮತ್ತು ಅವರ ಪತ್ನಿಯರು..ತದನಂತರ ಸಕಲ ದೇವತಾ ಪರಿವಾರ ತಾರತಮ್ಯ ದಲ್ಲಿ ಬರುತ್ತಾರೆ ಅಂತ ಹೇಳಿ ಪರಮ ಪುರುಷನಾದ ಆ ಶ್ರೀ ಹರಿಗೆ ಯಜ್ಞ ಫಲವನ್ನು ಸಮರ್ಪಣೆ ಮಾಡಿದರು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಈ ಗಿರಿ ಯಾತ್ರಿಯಾ ಮಾಡಿದ ಜನರಿಗೆ|
ನಾಗಶಯನ ವಿಜಯವಿಠ್ಠಲ ವೆಂಕಟ ಒಲಿವ||
🙏ಶ್ರೀನಿವಾಸ ದಯಾನಿಧೆ🙏
****************
|| ಶ್ರೀ ವಿಠ್ಠಲ ಪ್ರಸೀದತು ||
ವೈಶಾಖ ಶುದ್ಧ ಪಂಚಮಿಯ ಲೇಖನ
ಶ್ರೀನಿವಾಸ ಕಲ್ಯಾಣದ ಐದನೇ ದಿನ
ಭಗವಂತ ಕಲಿಯುಗ ವೈಕುಂಠ ಶೇಷಾಚಲವಾಸನಿಗೆ ಜಾತಿ ಮತ ಬಡವ ಬಲ್ಲಿದ ಹೆಣ್ಣು ಗಂಡು ಎಂಬ ಭೇದವಿಲ್ಲ .
ಹರಿಕಥಾಮೃತಸಾರದಲ್ಲಿ ಶ್ರೀ ಜಗನ್ನಾಥ ದಾಸರು “ ಬಾಂಡಕಾರಕ
ಭೀಮನ ಮೃದಾಭರಣ ಗೊಲಿದ “ ಎಂದಿದ್ದಾರೆ . ಹಾಗಾದರೆ ಈ ಭೀಮ ಯಾರು ದೇವರನ್ನು ಹೇಗೆ ಒಲಿಸಿದ
ಎಂದರೆ , ಹಿಂದಿನ ಸಂಚಿಕೆಯಲ್ಲಿ ಹೇಳಿದಹಾಗೆ ಶ್ರೀನಿವಾಸ “ಇಲ್ಲ ಕಾಸು ಎಂದು ಸುಳುಮಾತನಾಡಿದರೆ ಎಲ್ಲ ಕಸಕೊಂಬ ಕಳ್ಳದೊರೆಗೆ “ ಎಂದಿದ್ದಾರೆ ವಿಜಯದಾಸರು
ತೊಂಡಮಾನ ರಾಯನಿಗೆ ಶ್ರೀನಿವಾಸ
“ ರಾಜ ಪ್ರತಿದಿನದಲ್ಲೂ ನನಗೆ ನೈವೇದ್ಯ ನೀಡಿ ನನ್ನನ್ನು ಸ್ವರ್ಣ ಕಮಲಗಳಿಂದ ಅರ್ಚಿಸು . ರಾಜ್ಯವನ್ನು
ತುಂಬಾ ಪ್ರಾಮಾಣಿಕವಾಗಿ ಸ್ವಧರ್ಮದಿಂದ ಪಾಲಿಸು , ನಿನ್ನ ಎಲ್ಲ ಅಭೀಷ್ಟಗಳು ಪೂರ್ಣಗೊಳ್ಳುವುದು , ಆದರೆ ಯಾವಕಾರಣಕ್ಕೂ ಅಕಾಲದಲ್ಲಿ ನನ್ನ ದರ್ಶನಕ್ಕೆ ಬರಬೇಡ “ ಎಂದು
ಹೇಳಿದ್ದನು .
ತೊಂಡಮಾನ ನಿತ್ಯವೂ ಹಾಗೆಯೇ ಅರ್ಚಿಸುತ್ತಿದ್ದ . ಒಮ್ಮೆತಾನು ಅರ್ಚಿಸಿದ
ಸುವರ್ಣ ಪುಷ್ಪಗಳಮೇಲೆ ಹಸಿಯ ಮಣ್ಣಿನಿಂದ ಮಾಡಿದ ತುಳಸಿಯನ್ನು ಕಂಡನು . ಶ್ರೀನಿವಾಸನನ್ನು ಇದಕ್ಕೆ ಕಾರಣ ಕೇಳಿದ . ಶ್ರೀನಿವಾಸ ನನ್ನ ಭಕ್ತ ಕುಲಾಲ ಭೀಮನೆಂಬುವ ತನ್ನ ಮನೆಯಲ್ಲಿರುವ ತನ್ನ ಮೂರ್ತಿಗೆ ಮಣ್ಣಿನ ತುಳಸಿಯಿಂದ ಅರ್ಚಿಸುತ್ತಿದ್ದಾನೆ ಎಂದು ತಿಳಿಸಿದ .
ಆಶ್ಚರ್ಯಗೊಂಡ ತೋಂಡಮಾನ ಅವನನ್ನು ನೋಡಲು ಇಚ್ಛಿಸಿದ .
ಭೀಮನ ಮನೆಗೆ ಬಂದ ರಾಜನನ್ನು ತುಂಬಾ ಗೌರವದಿಂದ ಕುಂಬಾರ ಬರಮಾಡಿಕೊಂಡ . ಈ ವಿಷಯ ರಾಜನಿಗೆ ಹೇಗೆ ತಿಳಿಯಿತು ಎಂದು ವಿಚಾರಿಸಿದಾಗ ಶ್ರೀನಿವಾಸನೆ ಹೇಳಿದ ಎಂದು ರಾಜ ಹೇಳಿದಾಗ ವಿನಯದಿಂದ ಭೀಮ ತನಗೆ ಏನೂ ತಿಳಿಯದು ಭಕ್ತಿ ಹೊರತು ಎಂದು ತನ್ನ ವಿನಯ ಪ್ರದರ್ಶಿಸುತ್ತಾನೆ .
ಈ ಮೊದಲೇ ಭೀಮನ ಭಕ್ತಿಗೆ ಮೆಚ್ಚಿ ತೊಂಡಮಾನ ನಿನ್ನ ಮನೆಗೆ ಬಂದ ದಿನವೇ ನಿನಗೆ ಮುಕ್ತಿ ಎಂದು ತಿಳಿಸಿರುತ್ತಾನೆ ಭಗವಂತ. ಹಾಗೆಯೇ
ಅದರ ಪ್ರಕಾರ ಶ್ರೀನಿವಾಸ ಕುಂಬಾರ
ದಂಪತಿಗಳಿಗೆ ದರ್ಶನವಿತ್ತು ವಿಮಾನದಲ್ಲಿ ಅವರಿಬ್ಬರಿಗೆ ಧಿವ್ಯ ರೂಪ ಧಾರಣೆ ಮಾಡಿಸಿ ರಾಜನು ನೋಡುತ್ತಿರುವಂತೆ ವಿಷ್ಣುಲೋಕಕ್ಕೆ ಕಳಿಸಿದನು .
ಇದನ್ನು ನೋಡಿದ ತೋಂಡಮಾನ ರಾಜ ತನ್ನ ಅರಮನೆಗೆ ಬಂದು ವೈರಾಗ್ಯ ಹೊಂದಿ ತನ್ನ ಮಗ ಶ್ರೀನಿವಾಸನೆಂಬುವನನ್ನು ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿ , ಕಾಡಿಗೆ ಹೋಗಿ ತಪಸ್ಸು ಮಾಡಿದ. ಶ್ರೀನಿವಾಸ ದರ್ಶನಕೊಟ್ಟು ಏನುಬೇಕೆಂದು ಕೇಳಿದ
ರಾಜ , ವಿಷ್ಣುಲೋಕದಲ್ಲಿ ಆವಾಸ ಬೇಡಿದ . ಶ್ರೀನಿವಾಸ ವಿಮಾನ ತರಸಿ
ಧಿವ್ಯ ರೊಪಧಾರಣೆಯಿಂದ ವಿಷ್ಣು ಲೋಕಕ್ಕೆ ಕಳುಹಿದ .
ಶ್ರೀನಿವಾಸ ಚಾತುರ್ವರ್ಣದವರನ್ನು ಅನುಗ್ರಹಿಸಿದ ವಿಷಯ ಅನೇಕ ಪುರಾಣಗಳಲ್ಲಿ ಉಕ್ತವಾಗಿದೆ .
ದೇವ ಶರ್ಮಾಹ್ವಯ ಕುಟುಂಬಕೆ ಜೀವನೋಪಾಯವನ್ನು ಕಾಣದೆ
ದೇವದೇವ ಶರಣ್ಯ ರಕ್ಷಿಸುರಕ್ಷಿಸೆನೆ ಕೇಳಿ.
ತಾ ವೊಲಿದು ಪಾಲಿಸಿದ ಸೌಖ್ಯ , ಕೃಪಾವಲೋಕದಿಂದಲೀತನ ಸೇವಿಸದೇ ಸೌಖ್ಯವ ಬಯಸುವರಲ್ಪ ಮಾನವರು “ ಎಂಬ ಶ್ರೀ
ಜಗನ್ನಾಥದಾಸರು ಹೆಸರಿಸಿದ ‘ದೇವಶರ್ಮ ‘ ಆದಿತ್ಯ ಪುರಾಣದಲ್ಲಿ ಇವನ ಕಥೆ ಹೇಳಿದೆ . ದೇವಶರ್ಮ
ವಾಯುದೇವರ ಶಿಷ್ಯ ಸ್ವಾಮಿಯ ದರ್ಶನ ಸ್ತೋತ್ರದಿಂದ ಇಹಪರದಲ್ಲಿ ಬಹು ಸೌಖ್ಯ ಅನುಭವಿಸಿದವನು .
ಹೀಗೆ ಹನ್ನೆರಡು ಪುರಾಣಗಳಲ್ಲಿ ಶ್ರೀನಿವಾಸನ ಮಹಿಮೆ ವರ್ಣಿತವಾಗಿದೆ
ಶ್ರೀನಿವಾಸನ ಮುಂದಿನ ಭಕ್ತಾನುಗ್ರಹ ಮುಂದಿನ ಸಂಚಿಕೆಯಲ್ಲಿ
||ನಾಹಂ ಕರ್ತಾ ಹರಿಃ ಕರ್ತಾ||
||ಶ್ರೀನಿವಾಸರ್ಪಣಮಸ್ತು ||
***********
||ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ|| day6
|ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
|ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙏🙏
✍ಶತಾನಂದರು ಜನಕರಾಜನ ಪ್ರಾರ್ಥನೆ ಯಂತೆ ಭಗವಂತನು ಭೂಲೋಕಕ್ಕೆ ಬಂದ ಬಗ್ಗೆ ಮತ್ತು ವೆಂಕಟ ಗಿರಿಯ ಮಹಿಮೆಯನ್ನು ಹೇಳಿ ಮುಂದೆ ಅಲ್ಲಿ ಇರುವ ತೀರ್ಥಾದಿಗಳ ವೈಶಿಷ್ಟ್ಯ ಹಾಗು ಮುಂದಿನ ಕತೆಯನ್ನು ನಿರೂಪಣೆ ಮಾಡುತ್ತಾರೆ.
ಎಲೈ !ರಾಜನೇ ಕೇಳು..
ಶ್ರೀ ವೆಂಕಟ ಗಿರಿಯ ಮೇಲ್ಭಾಗದಲ್ಲಿ ಸ್ವಾಮಿ ಪುಷ್ಕರಣಿ ಎಂಬ ಪವಿತ್ರ ತೀರ್ಥವು ವಿರಾಜಿಸುತ್ತಿದೆ.ಅದು ಬಹು ಉತ್ತಮವಾದ ತೀರ್ಥವು..
ಸಕಲ ಜಲಚರಗಳಿಂದ ಅದುಕೂಡಿದೆ.ಸಕಲ ನದಿ ತೀರ್ಥಗಳಿಂದ ಕೂಡಿದ ಆ ಪುಷ್ಕರಣಿ ಯಲ್ಲಿ ಸ್ನಾನ ಮಾಡುವವರು ಕೃತಾರ್ಥರು ಮತ್ತು ಪುಣ್ಯ ಶಾಲಿಗಳು..
ಸೂರ್ಯನು ಧನು ರಾಶಿಯಲ್ಲಿ ಇರುವಾಗ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಅರುಣೋದಯ ಕಾಲದಲ್ಲಿ ಸಮಸ್ತ ದೇವತೆಗಳು, ಋಷಿಗಳು ಪರಮ ಮಂಗಳಕರವಾದ ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಲು ಅಪೇಕ್ಷಿತ ಪಡುತ್ತಾರೆ..
ಅಂದಮೇಲೆ ಮಾನವರು ಸ್ನಾನ ಮಾಡುವದು ಅವಶ್ಯಕ ಎಂದು ಬೇರೆ ಹೇಳಬೇಕಾಗಿಲ್ಲ.
ಶ್ರೀ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಬ್ರಾಹ್ಮಣರು ಪಿತೃಗಳ ತೃಪ್ತಿ ಗಾಗಿ ಶ್ರಾದ್ಧ ತರ್ಪಣಾದಿ ಕರ್ಮಗಳನ್ನು ನೆರವೇರಿಸಿದರೆ ಅಂತಹವರ ಪಿತೃಗಳು ಸಂತುಷ್ಟರಾಗಿ ಶ್ರೀ ಹರಿಯ ವೈಕುಂಠ ಲೋಕದಲ್ಲಿ ನರ್ತಿಸುವರು..
ಒಂದು ವೇಳೆ ನೆರವೇರಿಸದಿದ್ದಲ್ಲಿ ಭಗವಂತನ ಅನುಗ್ರಹದಿಂದ ದೊರಕಿದ ಮಾನವ ಜನ್ಮದಿಂದ ಪ್ರಯೋಜನ ವೇನು??..
ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ??..
ಆ ಪವಿತ್ರ ಸ್ವಾಮಿ ಪುಷ್ಕರಣಿ ತೀರ್ಥ ದಲ್ಲಿ ಸ್ನಾನ ಮಾಡಿ ದಾನ ಮಾಡುವುದರಿಂದ ಮಾನವರು ಭಾಗ್ಯ ಶಾಲಿಗಳಾಗುವರು.
ಹಿಂದೆ ಶಂಕನೆಂಬ ರಾಜನು ಸ್ವಾಮಿ ಪುಷ್ಕರಣಿ ಯಲ್ಲಿ ಸ್ನಾನ ಮಾಡಿದ ಮಾತ್ರ ದಿಂದಲೇ ಸ್ವರ್ಗಲೋಕವನ್ನು ಪಡೆದನು..
ಪೂರ್ವ ದಲ್ಲಿ ನಾರಾಯಣ ನೆಂಬ ಹೆಸರಿನ ಅಂಗಿರಸರಿಗೆ ಪುತ್ರ ನಾದ ಭೂಸುರನು ಸ್ನಾನ ಮಾಡಿದರ ಫಲದಿಂದ ಭಗವಂತನ ದರುಶನ ವಾಗಿ ಮೋಕ್ಷ ವನ್ನು ಪಡೆದನು..
ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವನು ಸಹ ಇಲ್ಲಿ ಬಂದು ಸ್ನಾನ ಮಾಡಿದ ಫಲದಿಂದ ರಾವಣನ ಸಂಹಾರ ಮಾಡಿ ಸೀತಾದೇವಿ ಯನ್ನು ಪಡೆದನು.
(ಭಗವಂತನಿಗೆ ಯಾವ ಫಲ??)
ಇದೆಲ್ಲಾ ಸ್ವಾಮಿ ಪುಷ್ಕರಣಿ ತೀರ್ಥ ಮಹಾತ್ಮೆ ತಿಳಿಸಿ ಕೊಡಲು ಮಾಡುವ ನಾಟಕ)
ಇಂತು ಶುಭಕರವಾದ ಸ್ವಾಮಿ ಪುಷ್ಕರಣಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ವಾಗಿ ಕಂಗೊಳಿಸುತ್ತದೆ.
ಆ ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ತನ್ನ ಸತಿಯಾದ ಭೂದೇವಿಯನ್ನು ಆಲಂಗಿಸಿಕೊಂಡು ವರಾಹರೂಪಿಯಾದ ಶ್ರೀಹರಿ ಅಶ್ವತ್ಥ ವೃಕ್ಷ ದಿಂದ ಶೋಭಿಸುವ ಆ ಸ್ಥಳ ದಲ್ಲಿ ವಿರಾಜಿಸಿದ್ದಾನೆ..
ಮೂರು ಕೋಟಿ ಸಂಖ್ಯೆಯ ವಿವಿಧ ತೀರ್ಥ ಗಳಿಗೆ ಈ ವೆಂಕಟ ಗಿರಿಯು ಮಾತೃ ಸ್ಥಾನವಾಗಿದೆ..
ಇಂತಹ ಶ್ರೇಷ್ಠ ವಾದ ವೆಂಕಟಾಚಲಕ್ಕೆ ಬಂದು ಸ್ವಾಮಿಯು ಇದು ವೈಕುಂಠಕ್ಕಿಂತ ಮಿಗಿಲೆಂದೂ ತೋರಿಸಲೋಸುಗ ಅಲ್ಲಿ ವಿಹಾರ ಮಾಡುತ್ತಾ ಇದ್ದನು. ಇಂತು ತಿರುಗಾಡುತ್ತಿರುವ ಶ್ರೀ ರಮಾ ಪತಿಯು ರಹಸ್ಯ ವಾಗಿ ವಾಸಿಸಲು ಸರಿಯಾದ ಜಾಗವು ದೊರಕಲಿಲ್ಲ ವಲ್ಲಾ ಎಂದು ಯೋಚಿಸುತ್ತಿರುವಾಗ ಸ್ವಾಮಿ ಪುಷ್ಕರಣಿಯ ದಕ್ಷಿಣ ಭಾಗದಲ್ಲಿ ನಿರ್ಮಲವು,ದೇವತಾ ಯೊಗ್ಯವು ಆದ ಹುಣಸೇಮರದ ಅಡಿಯಲ್ಲಿ ಇರುವ ಒಂದು ಹುತ್ತವನ್ನು ಕಂಡು ಜಗತ್ ಪ್ರಭು ವಾದ ಭಗವಂತನು ಇದೇ ತಾನು ಗುಪ್ತ ವಾಗಿರಲು ಯೋಗ್ಯವಾದ ಸ್ಥಳವೆಂದು ಆಲೋಚಿಸಿ ಆ ಹುತ್ತದಲ್ಲಿ ಮರೆಯಾದನು..
ಇಂತು ಭಗವಂತನು ೧೦,೦೦೦ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದ ನು.
🙏🙏🙇♂
ಸ್ವಾಮಿ ಪುಷ್ಕರಣಿ ಯ ಹುಟ್ಟು.
ಹಿಂದೆ ಸರಸ್ವತಿ ದೇವಿಯು ತಾನು ಗಂಗಾದಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ಳಾಗಬೇಕೆಂದು ಬ್ರಹ್ಮಾವರ್ತದಲ್ಲಿ ತಪಸ್ಸು ಆಚರಣೆ ಮಾಡುತ್ತಾ ಇದ್ದರು.
ಆಗ ಪುಲಸ್ತ್ಯ ಅಲ್ಲಿ ಗೆ ಬಂದನು.ಪುಲಸ್ತ್ಯನು ತನ್ನ ಮಗನೆಂದು ಸರಸ್ವತಿದೇವಿಯು ಉದಾಸೀನ ಭಾವದಿಂದ ಇದ್ದುದ್ದನ್ನು ಕಂಡು ಪುಲಸ್ತ್ಯನು
"ನೀನು ಯಾವ ಉದ್ದೇಶದಿಂದ ತಪಸ್ಸು ಮಾಡುತ್ತಾ ಇರುವೆ ಅದು ಸಫಲವಾಗದೇ ಹೋಗಲಿ" ಅಂತ ಶಾಪ ಕೊಟ್ಟನು.
ಅವಾಗ ಸರಸ್ವತಿ ದೇವಿಯು ಸಹ "ನಿನ್ನ ವಂಶದಲ್ಲಿ ರಾಕ್ಷಸರೇ ಹುಟ್ಟಲಿ ಅಂತ ಶಾಪ ಕೊಟ್ಟಳು.
ಭಗವಂತ ಹೇಗೆ ನಟನೆ ಮಾಡುವನೋ ಅದರಂತೆ ರಮಾದೇವಿ ಮೊದಲು ಗೊಂಡು ಸಕಲ ದೇವತಾ ಪರಿವಾರದವರು ಸಹ ನಟನೆ ಮಾಡುವರು.
ಬ್ರಹ್ಮ ದೇವರ ಪತ್ನಿಯಾದ ಸರಸ್ವತಿ ದೇವಿಯರು ಹೆಸರು ಗೋಸ್ಕರ ತಪಸ್ಸು ಮಾಡುವದೇ??
ಮತ್ತು
ಮಗ ಶಾಪ ಕೊಡುವದು.ನಂತರ ಅವರು ತಿರುಗಿ ಶಾಪ ಕೊಡುವದು..
ಇವೆಲ್ಲವೂ ಗಂಗಾ ನದಿಯ ಮಹತ್ವ ಬಗ್ಗೆ ತಿಳಿಸಲೋಸುಗ ಅಷ್ಟೇ.
ಆ ನಂತರ ಸರಸ್ವತಿ ದೇವಿಯು ಪುನಃ ತಪಸ್ಸು ಆಚರಿಸಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡು ಅವನಲ್ಲಿ ತನ್ನ ನಿರಂತರ ಸಾನಿಧ್ಯ ಬೇಡಿದಳು.
"ಗಂಗಾ ನದಿಗಿಂತ ಶ್ರೇಷ್ಠ ವಾದ ಸ್ಥಾನ ವನ್ನು ಫಲಿಸದೇ ಹೋಗಲಿ ಅಂತ ಶಾಪ ಬಂದ" ಬಗೆ ಹೇಳಿದಾಗ
ಅದಕ್ಕೆ ಭಗವಂತನು
"ನದಿಗಳಲ್ಲಿ ಶ್ರೇಷ್ಠ ತೆ ಬೇಡ ಅಂತ ಶಾಪ ಇದೆ ಹೊರತು ಪುಷ್ಕರಣಿ ಯಲ್ಲಿ ಅಲ್ಲ.ನೀನು ಶೇಷಗಿರಿ ಪರ್ವತಕ್ಕೆ ಹೋಗು.ಆ ಗಿರಿಯ ದಕ್ಷಿಣ ಭಾಗ ದಲ್ಲಿ ಸುಖವಾಗಿ ನೆಲೆಸು."
"ನಾನು ಸಹ ನಿನ್ನ ಪಕ್ಕದಲ್ಲಿ ವಾಸ ಮಾಡುವೆ ಅಂತ ಹೇಳುವನು."
ಇದು ಸ್ವಾಮಿ ಪುಷ್ಕರಣಿ ತೀರ್ಥ ದ ಹಿನ್ನೆಲೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ|
ದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದು|
ನಿಷ್ಕಾಮ ವರವೆ ಉಂಟು| ನಿತ್ಯಾ ಮುಕ್ತಿಗೆ ಗಂಟು|
.
ಪುಷ್ಕರಾಕ್ಷ ತಿಮ್ಮ ವಿಜಯವಿಠ್ಠಲ ಒಡೆಯ|
ಪುಷ್ಕರಣಿಯ ಮತಿ ಪುಷ್ಕಳವಾಗಿ ಕೊಡುವ|
🙏ಶ್ರೀನಿವಾಸ ದಯಾನಿಧೆ🙏
**************
ಶ್ರೀ ವಿಠ್ಠಲ ಪ್ರಸೀದತು
ಶ್ರೀನಿವಾಸ ಕಲ್ಯಾಣದ ಆರನೇದಿನದ ಮಹಾತ್ಮೆ
ಪದ್ಮ ಪುರಾಣದಲ್ಲಿ ನಿರೂಪಿತವಾಗಿರುವಂತೆ .
ಶುಕಾಚಾರ್ಯರ ಭಕ್ತಿ ಎಲ್ಲರಿಗೂ ತಿಳಿದಿದ್ದೇ.
ಒಮ್ಮೆ ಬ್ರಹ್ಮಸಭೆಯಲ್ಲಿ ವೆಂಕಟಾಚಲದ ಮಾಹಾತ್ಮೆ ಕೇಳಿ ವೆಂಕಟಾಚಲ ದರ್ಶನ ಮಾಡಲು ಇಚ್ಛಿಸಿ ವೆಂಕಟಾಚಲಕ್ಕೆ ಬಂದರು .
ಅಲ್ಲಿನ ಪ್ರಕೃತಿ ವಿಶೇಷ , ಪ್ರಾಣಿಪಕ್ಷಿಗಳ ಮುಕ್ತ ಸಂಚಾರ , ಋಷಿ ಮುನಿಗಳ ಸಮೂಹ ಅಲ್ಲಿನ ತೀರ್ಥಗಳು ಎಲ್ಲವನ್ನು ನೋಡಿ ಸಂತೋಷಗೊಂಡು ತಾವು ತೀರ್ಥ ಸ್ನಾನ ಮಾಡಿ
ಅಹ್ನಿಕಾದಿಗಳನ್ನು ಮಾಡಿದರು . ಅಲ್ಲಿಯೇ ಗುಹೆಗಳಲ್ಲಿ ವಾಸಿಸುತ್ತಿದ್ದ ಮುನಿಪುಂಗರ ಆತಿಥ್ಯ ಸ್ವೀಕರಿಸಿ , ಎಲ್ಲ ತೀರ್ಥಸ್ನಾನ ನಂತರ
ಸುವರ್ಣಮುಖಿ ತೀರದ ಪದ್ಮಸರೋವರಕ್ಕೆ ಬಂದರು ಅಲ್ಲಿಯೇ ಬಹುಕಾಲ ಪಂಚಾಗ್ನಿ ಮಧ್ಯೆ ತಪಸ್ಸನಾಚರಿಸಿದರು .
ಎಷ್ಟಾದರೂ ರುದ್ರಾoಶರಲ್ಲವೇ ಅವರ ಕಠಿಣ ತಪಸ್ಸು ಪ್ರಕೃತಿಯನ್ನು ವಿಕೃತ ಗೊಳಿಸಿತು .
ಸಹಜವಾದ ಯಾವ ಕ್ರಿಯೆಗಳು ನಡೆಯಲಿಲ್ಲ
ಸೂರ್ಯ ಸುಡಲಿಲ್ಲ ,ಮೇಘಗಳು ಮಳೆ ತರಿಸಲಿಲ್ಲ ,ಅಗ್ನಿ ಜ್ವಲಿಸಲಿಲ್ಲ ,ದೇವತಾ ವಿಮಾನಗಳು ಆಕಾಶದಲ್ಲಿ ಹಾರಾಡಲಿಲ್ಲ ಸಮುದ್ರ ಸ್ಟಂಭಿತವಾಯಿತು . ಇದನ್ನು ನೋಡಿದ ಇಂದ್ರ ಶುಕಾಚಾರ್ಯರ ತಪೋಭಂಗಕ್ಕೆ ಅಪ್ಸರಾ ಸ್ತ್ರೀಯರನ್ನು ಕಳುಹಿಸಿದ .
ಅಪ್ಸರೆಯರು ಬಂದು ಹಾವಭಾವ ಪ್ರದರ್ಶಿಸಿ ಮೋಹಿತರಾಗುವಂತೆ ಪ್ರಚೋದಿಸಿದರೂ ಕಣ್ಣನ್ನು ತೆಗೆಯದ ಮುನಿಗಳನ್ನು ಅಪ್ಸರೆಯರೇ
ಪರಿಹಾಸ್ಯ ಮಾಡಿದರು. ಶುಕ ಮುನಿಗಳು ನಿರಂತರ ಶ್ರೀನಿವಾಸನ ಧ್ಯಾನದಲ್ಲಿದ್ದರು . ಅವನನ್ನೇ ಈ ಅಪ್ಸರ ಸ್ತ್ರೀಯರ ಶೃಂಗಾರ ಲೀಲೆಗಳಿಂದ ಪಾರುಮಾಡಲು ಮೊರೆಯಿಡುತ್ತಿದ್ದರು . ಆದರೆ ಶುಕರು ತನ್ನ ತಪೋ ಭಂಗ ಮಾಡಲು ಇಂದ್ರದೇವರ ಆಜ್ಞಾನುಸಾರವಾಗಿ ಬಂದಿರುವ ಆ ಸ್ತ್ರೀಯರಬಗ್ಗೆ ಕನಿಕರ ತೋರಿದರು ಹೊರತು ಶಪಿಸಲಿಲ್ಲ ಕಾರಣ ಅಗಾಧವಾಗಿದ್ದ ಅವರ ತಪಸ್ಸಿನ ಪುಣ್ಯವನ್ನು ಕಳೆದುಕೊಳ್ಳಲು ತಯಾರಿರಲಿಲ್ಲ
ಶ್ರೀನಿವಾಸನನ್ನು ಕುರಿತು ನಾನಾವಿಧವಾಗಿ ಸ್ತೋತ್ರ ಮಾಡಿದರು. ಅಪ್ಸರ ಸ್ತ್ರೀಯರು ತಮ್ಮ ಉದ್ದೇಶ ಫಲಿಸದಿದ್ದ ಕಾರಣ ಹಿಂದಿರುಗಿದರು .
ರಾಹುವಿನಿಂದ ಮುಕ್ತನಾದ ಚಂದ್ರನಂತೆ
ಈಗ ನಿರಾತಂಕವಾಗಿ ತಮ್ಮ ತಪಸ್ಸು ಮುಂದುವರೆಸಿದರು ಶುಕಾಚಾರ್ಯರು ..
ಶ್ರೀನಿವಾಸ ಪ್ರತ್ಯಕ್ಷನಾದ . ಸಂತಸಗೊಂಡರು
ಶುಕರು , ಭವಿಷ್ಯೋತ್ತರ ಪುರಾಣದಲ್ಲಿ ಶ್ರೀನಿವಾಸನ ವಿವಾಹವೆಂದು ಕೇಳಿ ಸಂತಸದಿಂದ ಕುಣಿದಂತೆ ಈಗಲೂ ನರ್ತನ ಮಾಡುತ್ತಾ , ಆನಂದದಲ್ಲಿ ಕೃಷ್ಣಾಜಿನ ಹರಿದರು
ಪ್ರದಕ್ಷಿಣೆ ಬಂದು ಸ್ತೋತ್ರಮಾಡಿದರು .
ಶ್ರೀನಿವಾಸ ಸಂತುಷ್ಟನಾಗಿ ಅವರ ಭಕ್ತಿಗೆ ಮೆಚ್ಚಿ ಕಲ್ಪಾoತರದಲ್ಲಿ ಸಾಯುಜ್ಯ ಮುಕ್ತಿ ದಯಪಾಲಿಸಿದ .
ಮುಂದೆ ಅವರ ತಪಸ್ಸು ಸ್ವಾಮಿ ಪುಷ್ಕರಿಣಿ ತೀರದಲ್ಲಿ ಆಯಿತು . ಅಲ್ಲಿ ಬ್ರಾಹ್ಮಣರಿಗಾಗಿ
೧೦೮ ಅಗ್ರಹಾರಗಳನ್ನು ನಿರ್ಮಿಸಿ ನಿತ್ಯಾನುಷ್ಠಾನ ಮಾಡುವವರಿಗೆ ಅನುಕೂಲ ಕಲ್ಪಿಸಿದರು .
ಶುಕಪುರಿ ಎಂಬ ಸ್ಥಳದಲ್ಲಿ ಕೃಷ್ಣ ಬಲರಾಮರ ಪ್ರತಿಷ್ಠೆಮಾಡಿ ನಿತ್ಯದಲ್ಲೂ ಸನ್ನಿಧಾನ ಇರುವಂತೆ ಪ್ರಾರ್ಥಿಸಿದರು .
ಮತ್ತೆ ತಪಸ್ಸಿನಲ್ಲಿ ನಿರತರಾದ ಶುಕಮುನಿಗಳಿಗೆ ಈ ಬಾರಿ ಶ್ರೀನಿವಾಸ ಪ್ರತ್ಯಕ್ಷನಾದಾಗ ತನ್ನ
ಸುದರ್ಶನ ಚಕ್ರ ದರ್ಶನ ಮಾಡಿಸಿದ ಜೊತೆಗೆ ತನ್ನ ದೇವತಾ ಪರಿವಾರವನ್ನೂ ತೋರಿದ .
ಭಕ್ತಿಯಿಂದ ಕರೆದಾಗೆಲ್ಲ ಬಂದ ಶ್ರೀನಿವಾಸನನ್ನು
ನೋಡಿ ಪುಳುಕಿತರಾಗಿ ಈ ಜಗತ್ತು ನಿಸ್ಸಾರ ಎಂದು ತಿಳಿದು ವೈರಾಗ್ಯ ಹೊಂದಿ ಸೂರ್ಯಲೋಕದತ್ತ ಪ್ರಯಾಣ ಬೆಳೆಸಿದರು .
ಅವರು ಹೇಳಿದ ಸ್ತೋತ್ರ —
||ಮಾತಾ ಚ ಕಮಲಾದೇವಿ ಪಿತಾದೇವೊ ಜನಾರ್ದನಃ
ಬಾಂಧವಾ ವಿಷ್ಣು ಭಕ್ತಾಶ್ಚ. ಸ್ವದೇಶಾ ಭುವನತ್ರಯಂ ||
ಇದೆ ಸಮಯದಲ್ಲಿ ತಂದೆ ,ಮಗ ಸಾಕ್ಷಾತ್
ಭಗವಂತನಾದ ವ್ಯಾಸರೂಪಿ ಪರಮಾತ್ಮ
ರುದ್ರರೂಪಿ ಶುಕಾಚಾರ್ಯರು ಲೋಕ ವಿಡಂಬನೆ ಮಾಡುತ್ತಾರೆ .
ಅದರ ವಿವರಣೆ ನಾಳೆ ವಿಸ್ತಾರ ಮಾಡಲ್ಪಡುತ್ತದೆ
||ನಾಹಂ ಕರ್ತಾ ಹರಿಃ ಕರ್ತಾ||
||ಶ್ರೀನಿವಾಸರ್ಪಣಮಸ್ತು ||
********
ಶ್ರೀ ವೆಂಕಟೇಶ ಮಹಾತ್ಮೆ ಚರಿತ್ರೆ|| day7
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||.
🙏
ಹಿಂದಿನ ಸಂಚಿಕೆಯಲ್ಲಿ ಭಗವಂತನು ಭೂಲೋಕಕ್ಕೆ ಬಂದು ವೆಂಕಟಗಿರಿಯಲ್ಲಿ ಇರುವ ಸ್ವಾಮಿ ಪುಷ್ಕರಣಿ ತಟದಲ್ಲಿ ಇರುವ ಹುತ್ತದಲ್ಲಿ ಗುಪ್ತ ವಾಗಿ ವಾಸ ಮಾಡುತ್ತಾನೆ.
ಹೀಗೆ ದ್ವಾಪರಯುಗ ಕಳೆದು ೨೮ನೆಯ ಕಲಿಯುಗದಲ್ಲಿ ಕೆಲ ಸಂವತ್ಸರಗಳು ಗತಿಸಿದ ನಂತರ ನಾಗಕನ್ನಿಕೆಯ ಉದರದಲ್ಲಿ ಚೋಳರಾಜನೆಂಬ ಒಬ್ಬ ರಾಜೋತ್ತಮನು ಜನಿಸಿದನು. ಅವನು ಪುಣ್ಯ ಪ್ರದವಾದ ಆ ಭೂಭಾಗ ದಲ್ಲಿ ಸಕ್ರಮವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು. ಅವನ ರಾಜ್ಯ ವು ಕಾಲಕಾಲಕ್ಕೆ ಮಳೆ ಬೆಳೆಗಳಿಂದ ಸಮೃದ್ಧವಾಗಿ ಇತ್ತು.
ಹೀಗಿರುವಾಗ ಲಕ್ಷ್ಮೀ ದೇವಿಯು ಲೋಕ ವಿಡಂಬನಾರ್ಥವಾಗಿ ತನ್ನ ಪತಿಯನ್ನು ಹುಡುಕುವ ಪ್ರಯುಕ್ತ ಮತ್ತು ಭಗವಂತನ ಸೇವೆಗಾಗಿ ಗೊಲ್ಲತಿಯ ವೇಷ ಧರಿಸಿ ಬ್ರಹ್ಮ ದೇವರನ್ನು, ಆಕಳನ್ನಾಗಿಯು ಮತ್ತು ರುದ್ರ ದೇವರನ್ನು ಕರುವನ್ನಾಗಿ ಮಾಡಿಕೊಂಡು ಚೋಳರಾಜನ ಅರಮನೆಗೆ ಬರುತ್ತಾಳೆ.
ಬಂದಂತಹ ಗೊಲ್ಲತಿಯನ್ನು ನೋಡಿ ರಾಜನು
"ಈ ಆಕಳು ಕರುವಿನ ಬೆಲೆ ಎಷ್ಟು" ಎಂದು ಕೇಳಿದಾಗ ಅದಕ್ಕೆ ರಮಾದೇವಿಯು
ಇದನ್ನು ನಿನಗೆ ಉಚಿತವಾದ ಮೌಲ್ಯಕ್ಕೆ ಮಾರುತ್ತೇನೆ.ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗು ಸಂಪತ್ತಿನ ಒಡತಿಯಾದ ನನಗೆ ನಿನ್ನ ಧನವು ಬೇಡ.ಆದರೆ ಒಂದು ಶರತ್ತು.ಮಾಮೂಲಿ ಆಕಳಲ್ಲ,ಇದು
ಹತ್ತರಲ್ಲಿ ಹನ್ನೊಂದು ಅಂತ ಪಾಲನೆ ಮಾಡುವ ಹಾಗಿಲ್ಲ. ಚೆನ್ನಾಗಿ ಪಾಲಿಸಬೇಕು.
ಈ ಆಕಳು ಕೇಳಿದಷ್ಟು ಹಾಲನ್ನು ಕರೆಯುತ್ತದೆ.
ಇದರ ಹಾಲನ್ನು ಕುಡಿದವರಿಗೆ ರೋಗ ರುಜಿನಗಳ ಭಯವಿಲ್ಲ.
ಈ ಹಾಲನ್ನು ತನ್ನ ಸ್ವಂತಕ್ಕೆ ಬಳಸಬಾರದು.
ಹಾಗೇನಾದರು ಬಳಸುವೆ ಅಂದರೆ ಬೇರೆ ಕಡೆ ಮಾರಲು ಹೋಗುತ್ತೇನೆ.
ಈ ಗೋವಿನ ಹಾಲನ್ನು ಭಗವಂತನಿಗೆ ಗೊಸ್ಕರವೇ ಮೀಸಲಿಡಬೇಕು.ಇದೇ ಇದರ ಬೆಲೆ.ಅಂತ ಹೇಳಿದಾಗ,
ಆ ಶರತ್ತಿಗೆ ರಾಜ ಒಪ್ಪಿ ಒಪ್ಪಂದಕ್ಕೆ ಬರುವನು.ನಂತರ ಅವನಿಗೆ ಕೊಟ್ಟು ರಮಾದೇವಿ ಕೊಲ್ಹಾಪುರ ಕ್ಕೆ ಹೊರಡುವಳು.
ಭಗವಂತನ ಅನುಗ್ರಹದಿಂದ ಬ್ರಹ್ಮದೇವನಿಗೆ ಬ್ರಹ್ಮ ಪದವಿ ಮತ್ತು ರುದ್ರಾದಿ ಗಳಿಗೆ ಮೋಕ್ಷ ವನ್ನು ಕೊಡುವವಳಿಗೆ ಅವರನ್ನು ಆಕಳು ಕರುವನ್ನು ಮಾಡುವದು ರಮಾದೇವಿ ಗೆ ಅಸಾಧ್ಯ ವಾದ ಕಾರ್ಯವಲ್ಲ.
ಮೇಲಾಗಿ
ಬ್ರಹ್ಮ ದೇವರು ಜೇಷ್ಠ ರು ಹಾಗಾಗಿ ಅವರನ್ನು ಆಕಳ ರೂಪದಿಂದ ಮತ್ತು ರುದ್ರ ದೇವರಿಗೆ ಕರುವನ್ನು ಮಾಡಿದಳು.
ಹೀಗಿರುವಾಗ ಬ್ರಹ್ಮ ದೇವರು ಗೋ ರೂಪದಿಂದ ಅ ರಾಜನ ಎರಡುಸಾವಿರ ಗೋವುಗಳ ಹಿಂಡಿನಲ್ಲಿ ಸೇರಿಕೊಂಡು ಭಗವಂತನು ಇರುವ ಸ್ಥಳವನ್ನು ಹುಡುಕಿಕೊಂಡು ಹೊರಟರು.
ಹಸುವಿನ ರೂಪವನ್ನು ತಾಳಿದ ಬ್ರಹ್ಮ ದೇವರು ನೆಲವನ್ನು ಮೂಸಿ ನೋಡುತ್ತಾ ಭಗವಂತನ ಹುಡುಕಾಟ ಮಾಡಲು
ನಂತರ ಸ್ವಾಮಿ ಪುಷ್ಕರಣಿ ಬಳಿ ಹುತ್ತ ದ ಒಳಗಡೆ ಇರುವ ತನ್ನ ಸ್ವಾಮಿ ಯನ್ನು ಕಂಡು ಆನಂದ ಗೊಂಡರು.
ಮೂಸಿ ನೋಡುವದು ಪ್ರಾಣಿಗಳ ಸ್ವಭಾವ...
ಮಧ್ವ ಶಾಸ್ತ್ರದ ಮೂಲಕ ಭಗವಂತನನ್ನು ಕಾಣಬೇಕು ಅಂತ ಇಲ್ಲಿ ಸೂಚನೆ..
ನಂತರ
"ಗೋ" ಅಂದರೆ ವೇದಗಳು..ಅವುಗಳನ್ನು ಅವಲಂಬಿಸಿದರೆ ಭಗವಂತನು ಸಿಗುತ್ತಾನೆ ಎಂದು ಇನ್ನೊಂದು ಅರ್ಥ.
"ಗೋ" ಸೇವೆ ಮಾಡುವದರಿಂದ ಭಗವಂತನ ದರುಶನ ಸಾಧ್ಯ ವೆಂದು ಸೂಚನೆ.
ಜಗನ್ಮಾತೆಯ ಆಜ್ಞೆಯಂತೆ ಆಕಳು-ಕರು ವೇಷ ಧಾರಿಗಳಾದ ಬ್ರಹ್ಮ-ರುದ್ರದೇವರು ಜಗತ್ಪತಿಯನ್ನು ಹುಡುಕುವ ಹಾಗೆ ನಟಿಸುತ್ತ, ಸ್ವಾಮಿಯು ಕುಳಿತಿರುವ ಹುತ್ತಿನಲ್ಲಿಗೆ ಬಂದು,ಆ ಹುತ್ತಿನಲ್ಲಿರುವ ತನ್ನ ಮತ್ತು ಜಗತ್ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುತ್ತಾ,ರಾಜನ ಮನೆಯವರಿಗೆ ಹಾಲನ್ನು ಕೊಡದ ಹಾಗಾಯಿತು..
ಇಲ್ಲಿ "ಗೋ"ಎಂದರೆ ಸರ್ವ ವೇದ ಮಂತ್ರಗಳೆಂದರ್ಥ..,
"ಕ್ಷೀರ"ಎಂದರೆ ಸರ್ವ ವೇದಗಳಿಂದ ಪ್ರತಿಪಾದ್ಯನಾದ ಎಲ್ಲರಿಂದಲೂ,ಎಲ್ಲಾ ಕಾಲಗಳಲ್ಲಿಯು ನವರಸ ಭರಿತವಾದ ನವವಿಧ ಭಕ್ತಿಯು, ಧ್ಯಾನಕ್ಕೆ ಮಾಧ್ಯಮವಾಗಿ ಬಿಂಬಾಪರೋಕ್ಷವನ್ನು ಉಣಿಸುವ ಅಮೃತ ರಸವೆಂದರ್ಥ..
ಈ ರಸವನ್ನು ಜಗತ್ಸ್ವಾಮಿಗೆ ಒಂದು ಬಿಟ್ಟು ಬೇರೆಯವರು ಅನರ್ಹರು ಎಂಬ ಉದ್ದೇಶದಿಂದ ಆಕಳ ರೂಪದಿಂದಯಿರುವ ಬ್ರಹ್ಮದೇವರು ರಾಜನ ಮನೆಯಲ್ಲಿ ಒಂದು ದಿನವು ಹಾಲು ಕೊಡುವುದಿಲ್ಲ..
ಆ ಹುತ್ತಕ್ಕೆ ಅದರಲ್ಲಿ ಅಡಗಿರುವ ಸ್ವಾಮಿಗೆ ತನ್ನ ಕೆಚ್ಚಲು ಹಾಲಿನಿಂದ ಧಾರಾಕಾರವಾಗಿ ಅಭಿಷೇಕ ವನ್ನು ಮಾಡಿ ಹೋಗುತ್ತಾ ಇದ್ದರು..
ಬ್ರಹ್ಮ ದೇವರು ಆಕಳ ರೂಪದಿಂದ ಬಂದು ಚೋಳರಾಜನ ಅರಮನೆಯಲ್ಲಿದ್ದುಕೊಂಡೆ ಅಲ್ಲಿರುವ ಬೇರೆ ಹಸುವಿನೊಂದಿಗೆ ಬೆರೆತು, ಪರಮಾತ್ಮನಿಗೆ ನಿತ್ಯದಲ್ಲಿಯೂ ಕ್ಷೀರಾಭಿಷೇಕವನ್ನು ಮಾಡತೊಡಗಿದರು...
ಆದ ಕಾರಣ ಮನೆಯಲ್ಲಿ ಚೋಳರಾಜನಿಗೆ ಒಂದು ದಿವಸವು ಕೂಡಾ ಹಾಲನ್ನು ಕೊಡದಂತಾಯಿತು.ಆಗ ಚೋಳರಾಜನ ಪತ್ನಿಯು ಗೋಪಾಲಕನನ್ನು ಕರೆದು ಅದರ ಕ್ಷೀರವನ್ನು ನೀನೇ ಕುಡಿಯುತ್ತಿಯೋ?ಅಥವಾ ಬೇರೆ ಯಾರಿಗಾದರು ಕೊಡುತ್ತಿಯೋ?"ಎಂದು ಕೋಪಿಸಿಕೊಂಡು ಅವನಿಗೆ ದಂಡಿಸಿ ಬೆದರಿಸಿದಳು.ಅದಲ್ಲದೆ ಇದೆ ರೀತಿಯು ಮುಂದುವರಿಸಿದರೆ ನಿನ್ನನ್ನು ಉಗ್ರವಾಗಿ ದಂಡಿಸಬೇಕಾಗುವದೆಂದು ಗದರಿಸಿದಳು.*
ನಿತ್ಯ ಗೋವು ಹಾಲು ಕೊಡದೇ ಇರುವುದು ನೋಡಿ ರಾಣಿಯು ಗೋಪಾಲಕನಿಗೆ ದಂಡಿಸುವಳು.
ಪೆಟ್ಟು ತಿಂದ ಗೋಪಾಲಕ ಸಿಟ್ಟಿ ನಿಂದ ಮರುದಿನ ಆಕಳ ರೂಪದಲ್ಲಿ ಇರುವ ಬ್ರಹ್ಮ ದೇವರ ಕುತ್ತಿಗೆ ಹಾಗು ಕಾಲಿಗೆ ಹಗ್ಗವನ್ನು ಕಟ್ಟಿ ಅದರ ಹಿಂದೆಯೆ ಹೋಗುವನು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ವಾಯುವಂದಿತ ವಿಜಯವಿಠಲ|
ವೆಂಕಟಗಿರಿ ರಾಯ ತನ್ನ ಶರಣರಿಗೆ ಭೀತಿ ಬರಗೊಡನು|
🙏ಶ್ರೀನಿವಾಸ ದಯಾನಿಧೆ🙏
**********
|| ಶ್ರೀವಿಠ್ಠಲ ಪ್ರಸೀದತು ||
ಶ್ರೀವೆಂಕಟೇಶ ಕಲ್ಯಾಣ ನಿಮಿತ್ತ ಶ್ರೀನಿವಾಸನ ಕೆಲವು ಮಹಿಮೆಗಳು .
ಹಿಂದಿನ ಲೇಖನದಲ್ಲಿ ಶುಕಾಚಾರ್ಯರ , ತಪಸ್ಸಿನ ವಿಷಯ ಆಯಿತು.ಜಗತ್ತು ಅಸಾರವೆಂದು ವೈರಾಗ್ಯ ಹೊಂದಿ ಸೂರ್ಯ ಲೋಕಕ್ಕೆ ಹೊರಟರು . ಜಗತ್ತಿನ ತಂದೆಯಾದ ವ್ಯಾಸರು ಲೋಕವಿಡಂಬನೆ ಮಾಡುತ್ತಾ ಮಗನನ್ನು ನಾನಾರೀತಿಯಲ್ಲಿ ಕೂಗಿ ಕರೆದರು.
ಸೂರ್ಯ ತನ್ನಬಳಿ ಬಂದ ಶುಕರಿಗೆ , ಅಪುತ್ರರಿಗೆ ಉನ್ನತ ಲೋಕ ಪ್ರಾಪ್ತಿಯಿಲ್ಲ ಆದ್ದರಿಂದ ಸೂರ್ಯಲೋಕದಲ್ಲಿ ಅಂತವರಿಗೆ ಸ್ಥಳವಿಲ್ಲ
ಎಂದು ತಿಳಿಸುತ್ತಾನೆ . ಶುಕರು ಈ ಮಾತನ್ನು ಕೇಳಿ , ತಮ್ಮ ನೆರಳಿನಿಂದ ಛಾಯಾ ಶುಕ ಎಂಬ ಪುತ್ರನನ್ನು ಪಡೆದು ಅವನನ್ನು ವ್ಯಾಸರ ಬಳಿ ಕಳುಹುತ್ತಾರೆ . ಇದರಿಂದ ಇಬ್ಬರ ಇಚ್ಚೆಯು ಪೂರ್ಣಗೊಳ್ಳುತ್ತದೆ ವ್ಯಾಸರ ವಿರಹ ಪರಿಹರಿಸಿದಂತಾಯಿತು , ಸೂರ್ಯನ ಮಾತಿನಂತೆ ಪುತ್ರನನ್ನು ಪಡೆದಿದ್ದಾಯಿತು .
ಶುಕಾಚಾರ್ಯರು ಸೂರ್ಯಲೋಕ ಪ್ರವೇಶಿಸಿದರು
ಈ ಛಾಯಾಶುಕರೇ ವ್ಯಾಸರಿಂದ ಭಾಗವತ ಶ್ರಾವಣ ಮಾಡಿದವರು .ಶ್ರೀಮದ್ಭಾಗವತವನ್ನು ಪ್ರಚಾರಮಾಡಿ ಬ್ರಹ್ಮಲೋಕ ಸೇರಿದರು . ಬ್ರಹ್ಮ ಸಭೆಯಲ್ಲೂ ಭಾಗವತವನ್ನು ಪ್ರಚುರಗೊಳಿಸಿ ಜೊತೆಗೆ ವೆಂಕಟಾಚಲ ಮಹಾತ್ಮೆಯನ್ನು ಕೇಳಿ
ಪದ್ಮ ಸರೋವರಕ್ಕೆ ಬಂದು ,೧೦೮ ಮಾನಸಪುತ್ರರನ್ನು ಪಡೆದು ಎಲ್ಲರನ್ನೂ ಬ್ರಹ್ಮವಿಧ್ಯೆಯಲ್ಲಿ ಪಾರಂಗತರನ್ನಾಗಿ ಮಾಡಿದರು ಎನ್ನುತ್ತದೆ ಪದ್ಮ ಪುರಾಣ .
ಅಷ್ಟೇ ಅಲ್ಲ ಭಾದ್ರಪದದಲ್ಲಿ ನಡೆಯುವ ಬ್ರಹ್ಮೋತ್ಸವದಲ್ಲಿ ವಾಹನ ಚಾಲಕರಾಗಿ ತನ್ನ ಮಾನಸಪುತ್ರರನ್ನು ವಾಹನ ವಾಹಕರಾಗಿ ನೇಮಿಸಿ ಶ್ರೀನಿವಾಸನನ್ನು ಭಕ್ತಿಯಿಂದ ಹೀಗೆ ಪ್ರಾರ್ಥಿಸಿದರು , “ ಓ ದೇವಾ ಶ್ರೀಪತಿ , ನನ್ನ ಹೆಸರಿನಿಂದ ನಿರ್ಮಿತವಾಗಿರುವ ಶುಕಪುರ
ಕ್ಷೇತ್ರದಲ್ಲಿ ಉತ್ಪನ್ನವಾದ ದವಸಧಾನ್ಯದಲ್ಲೇ ನೈವೇದ್ಯ ಸ್ವೀಕರಿಸು ,ಪ್ರಳಯಕಾಲದವರೆವಿಗೂ
ಹಾಗು ಪ್ರಳಯಕಾಲದವರೆವಿಗೂ ಈ ನನ್ನ
ಆತ್ಮಜರಿಂದ ಸೇವೆ ಸ್ವೀಕರಿಸು “ ಎಂದ ಮಾತಿಗೆ ಶ್ರೀನಿವಾಸನ ಒಪ್ಪಿಗೆ ಸಿಕ್ಕಿತು .
ಮುಂದೆ ೧೦೮ ಮಾನಸಪುತ್ರರನ್ನು ಆರು ಗೋತ್ರದವರಿಗೊಪ್ಪಿಸಿ , ಪದ್ಮಸರೋವರವನ್ನು
ಪ್ರತಿಷ್ಠೆ ಮಾಡಿದ್ದ ರಾಮಕೃಷ್ಣ ಮೂರ್ತಿಗಳನ್ನು
ಪ್ರದಕ್ಷಿಣೆ ಮಾಡಿ ಆಕಾಶಮಾರ್ಗವಾಗಿ
ಬ್ರಹ್ಮ ಸಭೆ ಸೇರಿದರು ಶ್ರೀ ಶುಕರು.
ಇಂದು ಶ್ರೀವ್ಯಾಸರಾಜರ ವರ್ಧಂತಿ . ಈ ಸಂಧರ್ಭದಲ್ಲಿ ಗುರುಗಳಿಗೆ ವಂದಿಸುತ್ತಾ
ಅರ್ಚಕ ಕುಲವೇ ನಷ್ಟವಾಗಿದ್ದಾಗ ಶ್ರೀನಿವಾಸನ
ಪೂಜಾ ಕೈಂಕರ್ಯ ನಿಲ್ಲಿಸದೆ ತಾವೇ ಸ್ವತಃ
ಪೂಜಾದಿಗಳನ್ನು ಮಾಡುತ್ತಾ ಅರ್ಚಕ ವಂಶದ ಕುಡಿಗೆ ಹನ್ನೆರಡು ವರ್ಷ ಪೂರೈಸಿದನಂತರ
ದೇವಸ್ಥಾನದ ಆಡಳಿತ ಹಸ್ತಾಂತರಿಸಿದ್ದು ನೋಡಿದರೆ “ಪದ್ಮ ಪುರಾಣ “ರೀತ್ಯಾ ಸ್ವಾಮಿಗೆ ಉತ್ಸವದ ವ್ಯವಸ್ಥೆ ಮಾಡಿದ್ದ ಶ್ರೀಶುಕಾಚಾರ್ಯರಿಗೆ ನೀಡಿದ ಗೌರವ ಇರಬಹುದು . ಬ್ರಹ್ಮ ರುದ್ರಾದಿ ವಂದ್ಯ
ಎಂದು ಶ್ರೀವೇಂಕಟೇಶನನ್ನು ಕರೆದು ಅವರುಮಾಡುತ್ತಿರುವ ಪೂಜೆ ನೈವೇದ್ಯ ಎಂದು
ತಿಳಿದು ಗರ್ಭಗುಡಿಯಲ್ಲಿ ಕೊಟ್ಟ ಪ್ರಸಾದವನ್ನು ಹೆಚ್ಚಿನ ಜನ ನಿರಾಕರಿಸಲಾರರು . ಎಲ್ಲವೂ
ದೇವತೆಗಳು ಮಾಡಿದ್ದ ವ್ಯವಸ್ಥೆ ಎನ್ನುತ್ತದೆ ಅಷ್ಟಾದಶ ಪುರಾಣಗಳು .
ಇಂಥ ದೇವತೆಗಳು ವಾಸ ಮಾಡುವ ವೆಂಕಟಾಚಲದ ಯಾತ್ರೆಯ ಒಂದುಹೆಜ್ಜೆ ಅಶ್ವಮೇಧ ಫಲದ ಫಲ ಕೊಡುವುದು ಎನ್ನುತ್ತಾರೆ ಹರಿದಾಸ ಶ್ರೇಷ್ಠರು .
||=ನಾಹಂ ಕರ್ತಾ ಹರಿಃ ಕರ್ತಾ||
||ಶ್ರೀನಿವಾಸರ್ಪಣಮಸ್ತು ||*
*********
||ಶ್ರೀನಿವಾಸ ಕಲ್ಯಾಣ ಮಹಾತ್ಮೆ||day7 part #2
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಗೋ ರೂಪದಲ್ಲಿ ಇದ್ದ ಬ್ರಹ್ಮ ದೇವರು ಭಗವಂತನಿಗೆ ಹಾಲನ್ನು ಕರೆಯುವುದು ಕಂಡು ಗೋಪಾಲಕನು ಹುತ್ತ ದಲ್ಲಿ ಯಾವುದೋ ಪಿಶಾಚಿ ಇರಬೇಕು. ಅದು ಗೋವನ್ನು ವಶಪಡಿಸಿಕೊಂಡು ಅದರಿಂದ ಹಾಲನ್ನು ಈ ರೀತಿಯಲ್ಲಿ ತೆಗೆದುಕೊಳ್ಳುತ್ತದೆ.
ಗೋವಿನ ಅಪರಾಧ ಏನು ಇಲ್ಲ ಅಂತ ತಿಳಿದುಕೊಂಡು
"ಎಲೈ ಪಿಶಾಚಿ ಯೇ !!ಹೊರಗೆ ಬಾ..ನೀನು ಬರದಿದ್ದರೆ ನಿತ್ಯ ನಿನಗೆ ಹಾಲನ್ನು ಕೊಡುವ ಆಕಳನ್ನು ಸಂಹಾರ ಮಾಡುವೆ" ಅಂತ ಕೋಪದಿಂದ ಕೊಡಲಿಯನ್ನು ಎತ್ತಿ ಸಂಹರಿಸಲು ಹೋದಾಗ ಅವಾಗ್ಗೆ ಭಗವಂತನು ತನ್ನ ಭಕ್ತರಲ್ಲಿ ಇರುವ ವಾತ್ಸಲ್ಯ ವನ್ನು ತೋರಿಸುತ್ತಾ,
"ತನ್ನ ಸ್ವಾರ್ಥ ದಿಂದ ಯಾವ ಮನುಷ್ಯ ನು ತನ್ನ ಭಕ್ತನನ್ನು ಕಣ್ಣಿನ ಎದುರಿಗೆ ಕೊಲ್ಲಲು ಪಡುತ್ತಾ ಇರುವದನ್ನು ಕಂಡು ನೋಡಿ ಸುಮ್ಮನೆ ಇರುವನೊ ಅಂಥವನು ಸೂರ್ಯ ಚಂದ್ರ ಇರುವವರೆಗು ನರಕವನ್ನು ಅನುಭವಿಸುವನು"..
"ನೀಚನಾದ ಈ ದನಗಾಹಿಯು ನನಗೆ ಹಾಲು ಕೊಡುವ ಕಾರಣದಿಂದಾಗಿ ಈ ಗೋವನ್ನು ಅನ್ಯಾಯವಾಗಿ ಕೊಲ್ಲಲು ಸಿದ್ದನಾಗಿದ್ದಾನೆ."
"ಒಂದೇ ಒಂದು ತುಳಸಿದಳ ದಿಂದ ನನ್ನನ್ನು ಭಕ್ತಿಯಿಂದ ಪೂಜಿಸಿದರು ಸಾಕು ಅಂತಹ ಭಕ್ತರನ್ನು ಕಾಪಾಡುವೆಎಂದು ನನ್ನ ಪ್ರತಿಜ್ಞೆ ಇದೆ."
"ಹೀಗಿರುವಾಗ ನನ್ನ ಮಗನಾದ ಬ್ರಹ್ಮದೇವನು ನನ್ನ ಅಚ್ಛಿನ್ನ ಭಕ್ತನಾಗಿರುವನು.ಮತ್ತು ಗೋವಿನ ರೂಪ ಧರಿಸಿ ನನ್ನ ಸೇವೆ ಮಾಡಲು ಬಂದಿರುವನು.ಮೇಲಾಗಿ ನನ್ನ ಪುತ್ರನು.ಹಾಗಾಗಿ ಅವನ ರಕ್ಷಣೆ ಮಾಡುತ್ತೇನೆ "ಎಂದು ಸಂಕಲ್ಪ ಮಾಡಿ ಭಗವಂತನು ಆ ಕೊಡಲಿಯ ಪೆಟ್ಟಿಗೆ ತನ್ನ ಶಿರವನ್ನು ಒಡ್ಡಿ ಆ ಪೆಟ್ಟು ಸ್ವೀಕಾರ ಮಾಡಿದನು.
ಕಠಿಣವಾದ ಕುಠಾರದಿಂದ ಹೊಡೆಯಿಸಿಕೊಂಡ ಶ್ರೀನಿವಾಸನ ತಲೆಯು ತೀಕ್ಷ್ಣ ವಾದ ಆ ಕೊಡಲಿಯ ಹೊಡೆತದಿಂದ ಭಿನ್ನ ವಾಯಿತು.
"ಶ್ರೀನಿವಾಸನ ತಲೆಯೊಡೆದು ಏಳು ತಾಳೆಯ ಮರದಷ್ಟು ಎತ್ತರಕ್ಕೆ ರಕ್ತ ವು ಚಿಮ್ಮಿತು."
"ಭಗವಂತನ ಶರೀರ ಅಚ್ಛೇದ್ಯ ಹಾಗು ಅಭೇದ್ಯವಾಗಿದ್ದು ಯಾರು ಸೀಳಲು ಸಾಧ್ಯವಿಲ್ಲ"..
"ಇವನ ಎಡಗಾಲಿನ ಅಂಗುಷ್ಟದ ಉಗುರು ನೂರು ಕೋಟಿ ಯೋಜನ ದಪ್ಪ ಇರುವ ಬ್ರಹ್ಮಾಂಡದ ಕಠಾಹವನ್ನು ಸೀಳಿದ್ದರು ಅದು ಬಗ್ಗಿಹೋದ ಬಗ್ಗೆ ದಾಖಲೆ ಇಲ್ಲ.ಹೀಗಿರುವಾಗ ತಲೆಯನ್ನು ಸೀಳುವದು ಹೇಗೆ??"
"ನೇರವಾಗಿ ವೈಕುಂಠ ದಿಂದ ಬಂದ ಅಪ್ರಾಕೃತನಿಗೆ ಪ್ರಾಕೃತ ಶರೀರ ದಂತೆ ರಕ್ತ ಬರುವದು ಹೇಗೆ??"
"ಇದೆಲ್ಲಾ ಅವನ ನಟನೆ.ಅವನು ಅಪ್ರಾಕೃತನಾದರು ಪ್ರಾಕೃತ ರಕ್ತವನ್ನು ಆ ಕಾಲದಲ್ಲಿಸೃಷ್ಟಿಸಿ ತನ್ನ ಸ್ವರೂಪದ ಬಗ್ಗೆ ಅಯೋಗ್ಯ ವ್ಯಕ್ತಿಗಳಿಗೆ ತಪ್ಪು ಕಲ್ಪನೆ ಉಂಟಾಗಿಸುವದು ಮತ್ತು ಯೋಗ್ಯ ವ್ಯಕ್ತಿಗಳು ತನ್ನ ಈ ವಿಡಂಬನೆಯ ಲೀಲಾ ವೈಭವವನ್ನು ಅನುಭವಿಸುವಂತೆ ಮಾಡುವದು ಇದರ ಉದ್ದೇಶ."
ಈ ಹಿನ್ನೆಲೆ ಯಲ್ಲಿ ವೆಂಕಟೇಶ ನು ಗೋಪಾಲನ ಕೊಡಲಿನ ಏಟಿಗೆ ತನ್ನ ತಲೆಗೆ ಗಾಯವಾದಂತೆ ನಟಿಸಿದನು.
ಭಗವಂತನ ತಲೆಯಿಂದ ಬಂದ ರಕ್ತ ವನ್ನು ನೋಡಿ ಗೋಪಾಲಕನು ಮರಣ ಹೊಂದಿದನು.
ಗೋಪಾಲಕನು ಮೃತಿಹೊಂದಿದ್ದನ್ನು ಕಂಡು ಆ ಗೋವು ಬೆಟ್ಟ ದಿಂದ ಇಳಿದು ಚೋಳರಾಜನ ಬಳಿಗೆ ಬಂದು ಅತಿ ದುಃಖದಿಂದ ಹೊರಳಾಡಹತ್ತಿತು.ಅವಾಗ್ಗೆ ರಾಜನು ದೂತನನ್ನು ಆಕಳ ಹಿಂದೆ ಕಳುಹಿಸಿ ಏನಾಗಿದೆಎಂದು ನೋಡಿ ಬರಲು ಕಳುಹಿಸಿದನು.ಆ ದೂತನು ಪರ್ವತಕ್ಕೆ ಹೋಗಿ,ಅಲ್ಲಿ ಹುತ್ತದಿಂದ ರಕ್ತ ಹರಿಯುತ್ತಾ ಇರುವುದನ್ನು ಕಂಡು ಬಂದು ರಾಜನಿಗೆ ಹೇಳುತ್ತಾನೆ.
ತಕ್ಷಣ ಚೋಳರಾಜನು ಮೇನೆಯಲ್ಲಿ ಕುಳಿತು ಆ ಪರ್ವತಕ್ಕೆ ಆಗಮಿಸಿದ. ನೋಡಿ ಆಶ್ಚರ್ಯಕರವಾಗಿ ಯಾರು ಇದನ್ನು ಮಾಡಿರಬಹುದು ಅಂತ ತನ್ನಲ್ಲಿ ಮಾತನಾಡುತ್ತಾ ಇರುವಾಗ
"ಹುತ್ತದಿಂದ ಹಾವು ಹೇಗೆ ಹೊರ ಬರುವದು ಅದೇ ರೀತಿ ಯಲ್ಲಿ ಸರಸರಸನೇ ಶ್ರೀನಿವಾಸ ಬಂದನು".
ತನ್ನ ಶಿರಸ್ಸಿನ ಮೇಲೆ ಅಂಗೈಯನ್ನು ಇಟ್ಟು ಕೊಂಡು ಗಾಯವನ್ನು ಒತ್ತುತ್ತಾ ಕಣ್ಣೀರು ಸುರಿಸುತ್ತಾ ನುಡಿದ.
"ಎಲವೋ ಪಾಪಿ!ಚೋಳರಾಜನೆ ಕೇಳು.
ಮಂದಮತಿಯೇ, ಮಧಾಂದನಾಗಿರುವೆಯಲ್ಲ.
ತಂದೆ ತಾಯಿಗಳಿಲ್ಲ ,ಬಂಧು ಬಳಗವಿಲ್ಲ ,ನನಗೆ..ಸದಾ ಎಡತೊಡೆಯ ಮೇಲೆ ಒಪ್ಪುವ ಎನ್ನ ಮಡದಿಯು ಎನ್ನನ್ನು ಬಿಟ್ಟು ಸಿಟ್ಟು ಮಾಡಿಕೊಂಡು ದೂರ ನಡೆದಳು.ಪತ್ನಿ ಪುತ್ರರಿಂದ ಬಿಡಲ್ಪಟ್ಟಿರುವ ನನಗೆ ನಿನ್ನ ಗೋಪಾಲಕನು ನನ್ನ ತಲೆಯನ್ನು ಕೊಡಲಿಯಿಂದ ಒಡೆದನು.ಈ ಅಘಾತದಿಂದ ನನಗೆ ದುಃಖ ವಾಗುವಂತೆ ಮಾಡಿದ ನೀನು ಪಿಶಾಚಿ ಯಾಗು" ಅಂತ ಶಾಪವನ್ನು ಕೊಡುತ್ತಾನೆ.
ಶ್ರೀ ಹರಿಯ ಶಾಪವನ್ನು ಪಡೆದ ಚೋಳರಾಜನು ಮೂರ್ಚಿತನಾಗಿ ಧರಾಶಾಯಿಯಾಗಿ ಬಿದ್ದನು.ಕೆಲ ಸಮಯದ ನಂತರ ಪರಮಾತ್ಮನ ಬಳಿ ಪ್ರಾರ್ಥನೆ ಮಾಡಿದನು.
"ನಾ ಮಾಡಿದ ತಪ್ಪು ಆದರು ಏನು??
ಯಾಕೆ ಶಾಪವನ್ನು ಕೊಟ್ಟಿದ್ದು??ಇದರಿಂದ ವಿಮುಕ್ತಿ ಹೇಗೆ??ಅಂತ ಕೇಳಿದಾಗ" ಅದಕ್ಕೆ ಭಗವಂತನು ಹೇಳುತ್ತಾನೆ.
ಎಲೈ !!ರಾಜನೇ ಕೇಳು!! ನನ್ನ ಶಾಪವು ಎಂದಿಗು ಹುಸಿಯಾಗದು..
"ಯಾವ ಯಜಮಾನನು ತನ್ನಹೆಂಡತಿ ಮಕ್ಕಳು ಕಾರ್ಯವನ್ನು ಮಾಡುವಾಗ ಧರ್ಮ, ಅಧರ್ಮಗಳನ್ನು ವಿಚಾರ ಮಾಡುವದಿಲ್ಲವೋ ಅವನು ಅವನ ಹೆಂಡತಿ ಮಕ್ಕಳು ಮಾಡಿದ ಪಾಪಕ್ಕೆ ಗುರಿಯಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ".
"ಸೇವಕನು ಮಾಡಿದ ತಪ್ಪಿಗೆ ಯಜಮಾನ ಹೊಣೆಯಾಗುವನು.".
ಇದರ ಅಭಿಪ್ರಾಯ ಇಷ್ಟೇ.
"ನೀನು ನನ್ನ ಭಕ್ತನೆಂದು ತಿಳಿದು ಲಕ್ಷ್ಮೀ ದೇವಿಯು ಗೋ ರೂಪದಲ್ಲಿದ್ದ ಬ್ರಹ್ಮ ರುದ್ರಾದಿಗಳನ್ನ ನೀಡಿದರೆ ಅದನ್ನು ನಿನ್ನ ಹೆಂಡತಿಯು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು, ಬಲವಂತವಾಗಿ ಆ ಆಕಳ ಹಾಲನ್ನು ಕರೆದುಕೊಂಡು ತನ್ನ ಮಗನಿಗೆ ಬಳಸಿದಳು."
"ಈ ಮೂಲಕ ರಮಾದೇವಿ ಹೇಳಿದ ಮಾತು
ಭಗವಂತನಿಗೆ ಗೊಸ್ಕರವೇ ಇದರ ಹಾಲನ್ನು ಬಳಸಬೇಕೆಂದು ಹೇಳಿದ ಮಾತನ್ನು ಉಲ್ಲಂಘನೆ ಮಾಡಿದಳು.
ನಂತರ ಹಾಲು ಕೊಡದೆ ಇದ್ದುದ್ದನ್ನು ನೋಡಿ ಗೋಪಾಲಕನಿಗೆ ತಾಡನೆ ಮಾಡಿದಾಗ,ಅವನು ಗೋವನ್ನು ಕೊಲ್ಲುವ ದುರ್ಭುದ್ದಿ ಬರುತ್ತದೆ..
ನೀನಾದರು ಸಹ ಗೋವು ಹಾಲನ್ನು ಏಕೆ ಕೊಡಲಿಲ್ಲ!! ಅಂತ ವಿಚಾರಣೆ ಮಾಡಲಿಲ್ಲ.
ಹೀಗಾಗಿ ನೀನು ಪರೋಕ್ಷವಾಗಿ ಕಾರಣವಾಗಿರುವೆ.
ಆದ್ದರಿಂದ ರುದ್ರ ದೇವರ ಪರಿವಾರದಲ್ಲಿ ಒಬ್ಬನಾಗು ಅಂದರೆ ಪಿಶಾಚಿ ಯಾಗು ಅಂತ ಶಾಪ ಕೊಟ್ಟಿದ್ದು.
ಆದರು ನೀನು ಮಾಮೂಲಿನ ಪಿಶಾಚಿ ಯಂತೆ ರಕ್ತ ಮಾಂಸ ತಿನ್ನುವ ಪಿಶಾಚಿ ಗಳ ಹಾಗೆ ನೀನಲ್ಲ.ಇದು ನಾನು ಮಾಡುವ ಅನುಗ್ರಹ.
ಈ ಪಿಶಾಚಿ ರೂಪವು ಕಲಿಯುಗ ಪೂರ್ತಿ ಇರುತ್ತದೆ..
ಮುಂದೆ ಆಕಾಶರಾಜ ಎಂಬ ರಾಜನು ಜನಿಸಿ ಅವನ ಮಗಳನ್ನು ನನಗೆ ಕೊಟ್ಟು ಕನ್ಯಾದಾನ ಮಾಡುವನು.ಆ ಸಮಯದಲ್ಲಿ ವರದಕ್ಷಿಣೆ ರೂಪವಾಗಿ ಎರಡು ಸಾವಿರ ತೊಲೆಗಳಷ್ಟು ತೂಕವಿರುವ ನವರತ್ನ ಖಚಿತವಾದ ಕಿರೀಟ ವನ್ನು ಕೊಡುವನು..
ನಾನದನ್ನು ಶುಕ್ರವಾರ ಧರಿಸುವೆನು. ಆ ಸಮಯದಲ್ಲಿ ನನ್ನ ಕಣ್ಣಿಂದ ಆನಂದಾಶ್ರು ಬರುವದು.ಅದನ್ನು ನೋಡಿದ ನಿನಗೆ ಸುಖವುಂಟಾಗುವದು..
ಆ ಸಂಧರ್ಭದಲ್ಲಿ ಆರು ಘಳಿಗೆ ನಿನಗೆ ಸುಖ ವುಂಟಾಗುವದು ಅಂತ ಹೇಳಿ ಚೋಳರಾಜನಿಗೆ ಸಮಾಧಾನ ಮಾಡುವನು.
ಹೀಗೆ ಚೋಳರಾಜನಿಗೆ ಶಾಪವನ್ನು ಕೊಟ್ಟ ಭಗವಂತನು ಅದರ ಪರಿಹಾರವನ್ನು ಹೇಳಿದ್ದಾನೆ.
🙏ಶ್ರೀ ಕೃಷ್ಣಾರ್ಪಣಮಸ್ತು🙏
ವಾಯುವಂದಿತ ವಿಜಯವಿಠ್ಠಲ|

************
ಶ್ರೀ ಶ್ರೀನಿವಾಸ ಕಲ್ಯಾಣ ಚರಿತ್ರೆ||day8
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ ಶ್ರೀನಿವಾಸನು ತನ್ನ ತಲೆಗೆ ಆದ ಗಾಯವನ್ನು ಮಾಯುವದಕ್ಕೆ ದೇವಗುರು ಬೃಹಸ್ಪತಿ ಯ ನೆನೆಸಿದ. ತಕ್ಷಣ ಬೃಹಸ್ಪತಿ ಅಲ್ಲಿ ಬರುತ್ತಾನೆ.
"ಇಂದೀರೇಶನೇ! ನೀ ಇಂದು ಕರೆದ ಕಾರಣವೇನು?? ಎಂದು ಕೇಳಿದಾಗ
ಎಲ್ಲಾ ವೃತ್ತಾಂತ ಹೇಳಿ
ತಲೆಗೆ ಔಷಧ ಬೇಕು.ಉತ್ತಮ ವಾಗಿರಬೇಕು.ನೆತ್ತಿಗೆ ಹಿತಕರ ವಾಗಿ ಇರಬೇಕು. ಮತ್ತೆ ಸುಲಭ ಇರಬೇಕು.ದುಡ್ಡು ಎತ್ತಿ ಕೊಡುವ ಔಷಧ ಹೇಳಬೇಡ.ವಿತ್ತ(ಹಣ)ಎನ್ನ ಬಳಿ ಇಲ್ಲ.ಬರಿ ಕೈಯಲ್ಲಿ ಇದ್ದೀನಿ ಎಂದು ಹೇಳುತ್ತಾನೆ.
ಅವಾಗ್ಗೆ ಔಷಧ ತಂದು ದೇವದೇವನ ತಲೆಗೆ ಪಟ್ಟಿ ಕಟ್ಟಿ ದೇವಗುರು ಹೊರಡುವ.
ಒಂದು ದಿನ ಹೊರಗಡೆ ಅರುಣೋದಯದಲ್ಲಿ ಶ್ರೀನಿವಾಸ ಔಷಧ ತರಲು ಅಡವಿಯಲ್ಲಿ ಹೋಗುತ್ತಿರುವಾಗ ಭೂವರಾಹ ದೇವನ ನೋಡುತ್ತಾನೆ.
ತನ್ನದೇ ಇನ್ನೊಂದು ರೂಪ.ಲೋಕ ವಿಡಂಬನಾತ್ಮಕ ವಾಗಿಅದೇ ಸಮಯದಲ್ಲಿಯೇ ಶ್ರೀನಿವಾಸ ನಡೆದ ವೃತ್ತಾಂತವನ್ನು ವರಾಹ ದೇವರಿಗೆ ತಿಳಿಸಿದನು. ಅವರಿಬ್ಬರ ಪರಸ್ಪರ ಸಂಭಾಷಣೆ ನಡೆಯಿತು.
ಲೋಕ ಶಿಕ್ಷಣಾರ್ಥವಾಗಿ ಶ್ರೀನಿವಾಸ ನು ವರಾಹರೂಪಿ ಪರಮಾತ್ಮನಿಂದ ತಾನು ನೆಲೆಸುವ ಸ್ಥಳವನ್ನು ಸ್ವೀಕರಿಸಿದ ಪ್ರಯುಕ್ತ
"ನನಗಿಂತ ಮೊದಲು ಪೂಜೆ-ನೈವೇದ್ಯಾದಿ ಸರ್ವ ಪೂಜಾದಿ ಗೌರವಾದಿಗಳು ನಿನಗೆ ಆಗಲೆಂದು ವಚನವಿತ್ತು ಅಲ್ಲಿಯೆ ನೆಲಸಿದನು.ಆಗ ವರಾಹದೇವನು ಶ್ರೀನಿವಾಸನ ಶುಶ್ರೂಶೆ ಪ್ರಯುಕ್ತ ತನ್ನಲ್ಲಿರುವ ಬಕುಲಮಾಲಿಕ ಎಂಬ ತಾಯಿಯ ಸ್ವರೂಪದಂತಿರುವ ಹೆಣ್ಣು ಮಗಳನ್ನು ಶ್ರೀನಿವಾಸ ನೊಂದಿಗೆ ಕಳುಹಿಸಿಕೊಟ್ಟನು.
ನಂತರ ಗೋಪಾಲಕನಿಂದಾದ ತಲೆಯ ಪೆಟ್ಟನ್ನು ಅತ್ತಿ-ಎಕ್ಕೆ ಮುಂತಾದ ವನಸ್ಪತಿಗಳ ಮುಖಾಂತರ ಗುಣವಾದಂತೆ ನಟಿಸಿ,ತನ್ನ ತಾಯಿಯ ಸ್ಥಾನದಲ್ಲಿರುವ ಬಕುಲಮಾಲಿಕೆಗೆ ತನ್ನ. ಪರಿಚಯವನ್ನು ಹೇಳಿ,ಅವಳ ವೃತ್ತಾಂತವನ್ನು ಲೋಕ ವಿಡಂಬನಾರ್ಥವಾಗಿ ತಿಳಿದುಕೊಂಡನು.
ಒಮ್ಮೆ ಆಕಾಶ ರಾಜನು ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಟಿ ಯಾಗವನ್ನು ಮಾಡಲು ಯಾಗ ಸ್ಥಳ ಶುದ್ಧ ಮಾಡಲೋಸುಗ ಸುವರ್ಣ ನಿರ್ಮಿತ ನೇಗಿಲಿನಿಂದ ಭೂಮಿಯನ್ನು ಉಳುತ್ತಿರುವಾಗ ಆ ಸ್ಥಳದಲ್ಲಿ ತಾವರೆಯಲ್ಲಿ ಮಲಗಿದ್ದ ಕೂಸು ಸಿಗುತ್ತದೆ. . ಮಕ್ಕಳಿಲ್ಲದೇ ಅಸಂತುಷ್ಟನಾದ ರಾಜನು ಮಗುವನ್ನು ತನ್ನ ಪಟ್ಟದರಸಿಗೆ ತಂದೊಪ್ಪಿಸಿ ಮಗುವು ಕಮಲದಲ್ಲಿ ದೊರಕಿರುವುದರಿಂದ "ಪದ್ಮಾವತಿ"ಯೆಂದು ನಾಮಕರಣ ಮಾಡಿದರು..
ಪದ್ಮಾವತಿಯು ಪ್ರಾಪ್ತವಯಸ್ಕಳಾದಾಗ ಒಮ್ಮೆ ಗೆಳತಿಯರೊಡನೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿಗೆ ಬಂದ ನಾರದಮಹರ್ಷಿಗಳು ಅವಳ ಹಸ್ತ ಸಾಮುದ್ರಿಕಾ ಮುಖೇನ "
ಶ್ರೀಮನ್ನಾರಾಯಣನೆ ನಿನ್ನ ಪತಿಯಾಗುವನೆಂದು ಭವಿಷ್ಯವನ್ನು ನುಡಿಯುವರು..
ಇದಾದ ನಂತರ ಪದ್ಮಾವತಿಯು ಮತ್ತೊಮ್ಮೆ ತನ್ನ ಸಖಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸಲು ಹೋದಾಗ,ಇತ್ತಕಡೆ ಶ್ರೀನಿವಾಸನು ಬೇಟೆಗೆ ಕಾಡಿಗೆ ಬಂದಾಗ ಒಂದು ಆನೆಯನ್ನು ಬೆನ್ನಟ್ಟಿಕೊಂಡು ಹೋದನು.ಆಗ ಆನೆಯು ಸಖಿಯರಿದ್ದ ಉದ್ಯಾನವನದಲ್ಲಿ ಪ್ರವೇಶಿಸಿ ಪದ್ಮಾವತಿಯೆಂಬ ಕನ್ಯೆಗೆ ವಂದಿಸಿ ಮುಂದೆ ಹೋಯಿತು.ಆಗ ಅಲ್ಲಿ ಪರಸ್ಪರ ಪದ್ಮಾವತಿಯ ವೆಂಕಟೇಶನ ಭೇಟಿಯಾಯಿತು.
ಆನೆಯನ್ನು ಕಂಡು ಹೆದರಿದ ಪದ್ಮಾವತಿ ಮತ್ತು ಅವರ ಸಖಿಯರ ಗುಂಪಿನ ಬಳಿಗೆ ವೆಂಕಟೇಶನು ಕುದುರೆ ಏರಿ ಅವರ ಬಳಿಗೆ ಬಂದನು.ಆಗ ವೆಂಕಟೇಶನು ಹಾಗು ಪದ್ಮಾವತಿಯು ಪರಸ್ಪರ ಅವರವರ ಕುಲಗೋತ್ರಗಳನ್ನು ತಿಳಿಸಿದರು.ತನ್ನ ಮೇಲೆ ಪ್ರೇಮವನ್ನು ತೋರಿಸಿದ ವೆಂಕಟೇಶ್ವರನ ಮೇಲೆ ಪದ್ಮಾವತಿಗೆ ಕೋಪ ಬಂದಂತೆ ನಟಿಸಿದಳು. ಇದರ ಅಂತರಂಗ ಮರ್ಮವನ್ನರಿಯದ ಸಖೀಯರು ಕೋಪಿಸಿಕೊಂಡು ಕುದುರೆಗೆ ಕಲ್ಲನ್ನು ಎಸೆದರು.ಆಗ ಪದ್ಮಾವತಿ ಯು ತಾನೇ ಸ್ವತಃ ವೆಂಕಟೇಶ್ವರನಿಗೆ ಕಲ್ಲನ್ನು ಎಸೆದಳು. ಆಗ ಕುದುರೆಯು ಅಲ್ಲಿಯೇ ಮರಣ ಹೊಂದಿತು.ಶ್ರೀನಿವಾಸನಿಗೆ ತಲೆಯು ಒಡೆಯಿತು.
ಇದರ ಗುಹ್ಯಾರ್ಥವೆನೆಂದರೆ
"ವರದೋ ವಾಯು ವಾಹನ" ಎಂಬಂತೆ ವಾಯುದೇವರು ಜಗದೊಡೆಯನಾದ ನಾರಾಯಣನು ಪತ್ನಿಯ ಸಂಗಡವಿರುವಾಗ ನನ್ನ ಕೆಲಸ ಏನು ಇಲ್ಲವೆಂದು,ವಾಹನರಾಗಿ ಬಂದಿದ್ದ ವಾಯುದೇವರು ಸಖಿಯರ ಕೋಪವನ್ನು ನಿಮಿತ್ತ ಮಾಡಿಕೊಂಡು ಅಲ್ಲಿಂದ ಅದೃಶ್ಯ ರಾದರು..
ಪದ್ಮಾವತಿ ವರ್ತನೆಯಿಂದ ಶ್ರೀನಿವಾಸನು ವ್ಯಥೆಗೊಂಡಂತೆ ನಟನೆ ಮಾಡುವ.,
ಮನೆಗೆಬಂದು ಮುಸುಗು ಹೊದ್ದು ಮಲಗಿದ್ದ ಮಗನನ್ನು ಕಂಡು ತಾಯಿ ಆತಂಕದಿಂದ ವಿಚಾರಿಸಲು, ಬಕುಲಾದೇವಿಯೊಡನೆ ಅಲ್ಲಿ ನಡೆದ,ವೃತ್ತಾಂತವನ್ನು ತಿಳಿಸಿ ಪದ್ಮಾವತಿಯ ಪೂರ್ವ ಚರಿತ್ರೆಯನ್ನು ತಿಳಿಸಿದನು.
ರಾವಣನು ಹಿಂದೆ ವೇದವತಿಯ ರೂಪದಲ್ಲಿದ್ದ ಲಕ್ಷ್ಮೀಯನ್ನು ಮೋಹಿಸಲು ಹೋಗಿ,ತನ್ನ ವಂಶ ಸ್ತ್ರೀ-ಅಪಹರಣದಿಂದಲೇ ನಾಶವಾಗುವಂತೆ ಶಾಪವನ್ನು ಪಡೆದಿದ್ದನು.ಆ ವೇದವತಿಯು ತನ್ನ ರಕ್ಷಣೆಗೋಸ್ಕರ ಅಗ್ನಿಯಲ್ಲಿ ಪ್ರವೇಶ ಮಾಡಿದಳು.ರಾವಣನು ಸೀತಾಪಹರಣ ಕಾಲದಲ್ಲಿ ಅಗ್ನಿ ದೇವನು ವೇದವತಿಯೇ ಸೀತೆಯಾಗಿರುವಳೆಂದು ಬೋಧಿಸಿ ವೇದವತಿಯನ್ನೆ ರಾವಣನಿಗೆ ಅರ್ಪಿಸಿ ನಿಜವಾದ ಸೀತೆಯನ್ನು ತನ್ನಲ್ಲಿಯೇ ಉಳಿಸಿಕೊಂಡು ಕೆಲಕಾಲ ಜಗನ್ಮಾತೆಗೆ ಸೇವೆಮಾಡಿದನು..ರಾವಣನ ಸಂಹಾರವಾದ ಬಳಿಕ ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸಲು ಬಂದಾಗ,ಸೀತೆಯು ತನ್ನ ಪತಿಯಾದ ರಾಮದೇವರಿಗೆ ನಿಜವಾದ ಐತಿಹ್ಯವನ್ನು ತಿಳಿಸಿ,ವೇದವತಿಯನ್ನು ವಿವಾಹವಾಗಲು ಕೇಳಿಕೊಂಡಳು.
ಆಗ ಏಕಪತ್ನಿ ವೃತಸ್ಥನಾದ ನಾನು ನಿನ್ನ ಇಚ್ಛೆಯನ್ನು ಮುಂದೆ ಇಪ್ಪತ್ತೆಂಟನೆ ಕಲಿಯುಗದಲ್ಲಿ ಪೂರ್ತಿಗೊಳಿಸುವೆನೆಂದು ಹೇಳಿದ ವಚನವನ್ನು ಸ್ಮರಣೆಗೆ ತಂದುಕೊಂಡ. ಪದ್ಮಾವತಿಯು ಶ್ರೀನಿವಾಸನ ಸ್ಮರಣೆಯಲ್ಲಿ ನಿರತಳಾಗಿ,ತನ್ನ ತಂದೆ-ತಾಯಿಗೆ, ಬಂಧು-ಬಾಂಧವರಿಗೆ ಹಾಗೂ ಸಖಿಯರಿಗೆ ಮನೋರೋಗ ಬಾಧೆಗೆ ಪೀಡಿತಳಾದಂತೆ ವರ್ತಿಸಿದಳು.
ಆಕಾಶರಾಜ ಮಾತ್ತು ಧರಣಿದೇವಿಯು ಮಗಳ ವೇದನೆಯನ್ನು ನೋಡಲಾಗದೆ ದೇವಗುರುಗಳಾದ ಬೃಹಸ್ಪತ್ತ್ಯಾಚಾರ್ಯರೊಂದಿಗೆ ತಮ್ಮ ಸಂಕಟ ಹೇಳಿಕೊಂಡಾಗ,ಅದನ್ನರಿತ ಅವರು ಮನೋನಿಯಾಮಕರಾದ ಪರಮ ವೈಷ್ಣವರಾದ ರುದ್ರದೇವರಾರಾಧನೆ ಮಾಡಲು ಹೇಳಿದರು..ಗುರುಗಳ ಸಲಹೆಯಂತೆ ರಾಜನು ಅಲ್ಲಿರುವ ಅಗಸ್ತೇಶ್ವರನ ದೇವಾಲಯಕ್ಕೆ ತಮ್ಮ ಪರಿಚಾರಕಿಯರ ಮೂಲಕ ಪೂಜೆಗೆಂದು ಕಳುಹಿಸಿದನು.ಇತ್ತಕಡೆ ಶ್ರೀನಿವಾಸನು ಬಕುಲಮಾಲಿಕೆಯನ್ನು ಆಕಾಶರಾಜನ ಪಟ್ಟಣಕ್ಕೆ ಕಳುಹಿಸಿ ಕೊಟ್ಟಿದ್ದನು.ಆಗ ರಾಜನ ಸೇವಕಿಯರ ಗುಂಪಿನ ಭೇಟಿಯು ಬಕುಲಮಾಲಿಕೆಗೆ ಆಗಿ,ಇದ್ದ ವೃತ್ತಾಂತ ತಿಳಿಸಿದಳು.
ಅಷ್ಟರ ಮಧ್ಯ ವೇಳೆಯಲ್ಲಿ ಶ್ರೀನಿವಾಸನು ಕೊರವಂಜಿಯ ವೇಷವನ್ನು ಧರಿಸಿ ಬ್ರಹ್ಮದೇವರನ್ನು ಕೂಸು ಮಾಡಿಕೊಂಡು, ರುದ್ರದೇವರನ್ನು ಊರುಗೋಲಾಗಿ ಮಾಡಿಕೊಂಡು,ಬ್ರಹ್ಮಾಂಡವನ್ನೇ ಬುಟ್ಟಿಯನ್ನಾಗಿ ಮಾಡಿಕೊಂಡು ಆಕಾಶರಾಜನ ಅರಮನೆಗೆ ಬಂದು ಪದ್ಮಾವತಿಯ ಭವಿಷ್ಯವನ್ನು ಹೇಳುವುದರೊಂದಿಗೆ ಬಕುಲಮಾಲಿಕೆಯ ಕಾರ್ಯವು ಬೇಗನೆ ಸಿದ್ಧಿಸುವಂತೆ ಅವರ ಮನದಲ್ಲಿ ಮೂಡಿಸಿ ಆಕೆಯು ತಂದ ವರನಿಗೆ ಕನ್ಯಾದಾನ ಮಾಡಲು ಭಾಷೆ ತೆಗೆದುಕೊಂಡು ತನ್ನ ಸ್ವ-ಸ್ಥಾನಕ್ಕೆ ಬಂದನು.ರಾಜನಾಜ್ಞೆಯಂತೆ ಅಗಸ್ತೇಶ್ವರ ದೇವಾಲಯಕ್ಕೆ ಹೋದ ಸೇವಕಿಯರ ಸಂಗಡ ಬಂದ ಬಕುಲಮಾಲಿಕೆಯನ್ನು ಕಂಡು ಕೊರವಂಜಿಯ ಮಾತು ನಿಜವಾಯಿತೆಂದು ಸಂತೋಷಪಟ್ಟರು.
🙏ಶ್ರೀ ಕೃಷ್ಣಾ ರ್ಪಣ ಮಸ್ತು🙏
ಶ್ರೀನಿವಾಸನೆ ಭಕ್ತ ಪೋಷಕ|
ಜ್ಞಾನಿ ಕುಲಗಳಿಗೆ ಅಭಯದಾಯಕ|
ದೀನ ಬಾಂದವ ನೀನೆ| ಎನ್ನ ಮನದರ್ಥ ಪೂರೈಸು||
🙏ಶ್ರೀನಿವಾಸ ದಯಾನಿಧೆ🙏
*************
||ಶ್ರೀ ವಿಠ್ಠಲ ಪ್ರಸೀದತು ||
ವೆಂಕಟೇಶನ ಕಲ್ಯಾಣ ಪ್ರಯುಕ್ತ ಅವನ ಮಹಿಮೆ ಸ್ಮರಣೆ .ಎಂಟನೇ ದಿನ
ಬ್ರಹ್ಮಾಂಡ ಪುರಾಣದಲ್ಲಿನ ಒಂದು ಮಹಿಮೆ
ಒಮ್ಮೆ ಭೃಗು ಋಷಿಗಳು ನಾರದರನ್ನು ಕೇಳುತ್ತಾರೆ
“ತಾವು ಜಗತ್ತನ್ನು ಪರ್ಯಟನೆ ಮಾಡುತ್ತೀರಿ . ಭೂಲೋಕದಲ್ಲಿ ಅಧಿಕ ಮಹತ್ವವುಳ್ಳ ಕ್ಷೆತ್ರ ಯಾವುದೆಂದು ತಿಳಿದಿದೆ, ಯಾವ ಕ್ಷೇತ್ರದಲ್ಲಿ ತಪಸ್ಸು ಶೀಘ್ರವಾಗಿ ಫಲ ಕೊಡುವುದು” ಎಂದು ಕೇಳಿದರು . ಅದು ಭೃಗು ಋಷಿಗಳ ಆಶ್ರಮ ಅನೇಕ ಶಿಷ್ಯರುಗಳು ಕೂಡ ಅಲ್ಲಿದ್ದರು . ನಾರದರು ತುಂಬು ಉತ್ಸಾಹದಿಂದ ವೆಂಕಟಾಚಲದ ಮಹಿಮೆ ಎಲ್ಲರಿಗೂ ಕೇಳುವಂತೆ ಹೇಳತೊಡಗಿದರು . “ ಇದರ ಮಹಿಮೆ ಹೇಳಲು ಬ್ರಹ್ಮಾದಿಗಳಿಗೂ ಸಂಪೂರ್ಣ ಹೇಳಲು ಸಾಧ್ಯವಿಲ್ಲ , ವೈಕುಂಠಾಧಿಪತಿ ತನ್ನ ನಿಯತ ಪತ್ನಿ ರಮೆಯೊಂದಿಗೆ ವೈಕುಂಠವನ್ನು ತೊರೆದು ಸದಾಕಾಲ ಇಲ್ಲಿ ವಾಸಮಾಡುತ್ತಿದ್ದಾನೆ ಕೇವಲ ಭಕ್ತವಾತ್ಸಲ್ಯದಿಂದ “ ಎಂದು ಹೇಳಿ
ಈ ಭೂಲೋಕದ ವೈಕುಂಠಕ್ಕೆ ಸರಿಸುಮಾರು ಇಪ್ಪತ್ತು ಹೆಸರಿನಿಂದ ಕರೆಸಿಕೊಳ್ಳುತ್ತದೆ ,
ಅವುಗಳೆಂದರೆ ,ಅಂಜನಾದ್ರಿ , ವೃಷಾದ್ರಿ ,
ಶೇಷಾದ್ರಿ , ಗರುಡಾದ್ರಿ ,ತೀರ್ಥಾಧ್ರಿ , ಶ್ರೀನಿವಾಸಾಧ್ರಿ , ಚಿಂತಾಮಣಿ ಗಿರಿ , ವೃಷಭಾದ್ರಿ
ವರಹಾದ್ರಿ,ಜ್ಞಾನಾಧ್ರಿ ,ಕನಕಾಚಲ .,ಆನಂದಾದ್ರಿ
ನೀಲಾದ್ರಿ ,ಸುಮೇರು ಶಿಖರಾಚಲ ,ವೈಕುಂಠಾದ್ರಿ,ಪುಷ್ಕರಾದ್ರಿ ,ಋಷ್ಯಾದ್ರಿ ,ನಾರಾಯಣಾದ್ರಿ , ಕ್ರೀಡಾದ್ರಿ , ನೃಸಿಂಹಾದ್ರಿ .
ಈ ನಾಮಗಳನ್ನು ಜಪಿಸಿದರೆ ಅವರ ಸರ್ವ ಪಾಪ ನಶಿಸಿಹೋಗುತ್ತದೆ ಎಂದರು
“ವೆಂಕಟಾದ್ರಿ ಸಮಂ ಸ್ಥಾನಂ ಬ್ರಹ್ಮಾಂಡೆ ನಾಸ್ತಿಕಿಂಚನ
ವೆಂಕಟೇಶ ಸಮೋ ದೆವೋ ನ ಭೂತೋ ನ ಭವಿಷ್ಯತಿ “ಎಂದು ಹೇಳಿ ಕೆಲವಿವರಣೆ ನೀಡಿದರು
ಆಶ್ಚರ್ಯ ವಾಗುತ್ತದೆ .ಭೃಗುಋಷಿಗಳು ಹರಿಹರ ಬ್ರಹ್ಮದಿಗಳನ್ನು ಪರೀಕ್ಷಿಸುವಾಗ , ಪರಮಾತ್ಮನ ಎದೆಗೆ ಒದ್ದರೆಂದು ಶ್ರೀಹರಿ ವೈಕುಂಠ ಬಿಟ್ಟು ಭೂಲೋಕಕ್ಕೆ ಬಂದನೆಂದು ಕಥೆ ಇರುವಾಗ ಭೃಗು ಮಹರ್ಷಿಗಳೇ ನಾರದರನ್ನು ಈ ಕುರಿತಾಗಿ ವಿವರಣೆ ಕೇಳುತ್ತಾರೆ ಇಲ್ಲಿ.
ನಾರದರು ವಿವರಿಸುತ್ತಾರೆ . ತಾವು ಒಮ್ಮೆ ಹರಿಯ ದರ್ಶನಕ್ಕೆ ಕ್ಷೀರಸಾಗರಕ್ಕೆ ಹೋದಾಗ
ಅಲ್ಲಿ ಅತ್ಯದ್ಭುತವಾದ ಶ್ವೇತದ್ವೀಪವನ್ನು ನೋಡಿದ್ದನ್ನು ಅಲ್ಲಿ ಸರ್ವಾಂಗ ಸುಂದರನಾದ
ಸರ್ವಾಭರಣ ಭೂಷಿತನಾದ ಶ್ರೀಹರಿಯನ್ನು ,
ದೇವಾ ಪಿತೃ ಋಷಿ ರಾಜರುಗಳಿಂದ , ಅಷ್ಟೇಕೆ ರಮಾದೇವಿಯರಿಂದ ಪೂಜಿತನಾಗಿರುವ ಎರಡು ಲಕ್ಷ ಯೋಜನ ವಿಸ್ತ್ಕ್ರುತ ಶರೀರನಾದ ಹರಿಯನ್ನು ಕಂಡೆ . ಅಂತ ವೈಭೋಗದಲ್ಲಿದ್ದರೂ
ಮೊಮ್ಮಗನಾದ ತಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡು ನಾರದ ಬ್ರಹ್ಮಾಂಡಲ್ಲಿ ನನಗೆ ಒಂದು ಯೋಗ್ಯವಾದ ಸ್ಥಳವೊಂದನ್ನು ಹೇಳುವಂತೆ ಕೇಳಿಕೊಂಡನೆಂದು ಹೇಳಿ, ನಿನಗೆ ಕ್ರೀಡಾ ಯೋಗ್ಯ ಸ್ಥಳ ವೆಂಕಟಾದ್ರಿ ಎಂದು ತಿಳಿಸಿದೆ , ಎಂದು ನಾರದರು ಭೃಗು ಮುನಿಗಳಿಗೆ ತಿಳಿಸುತ್ತಾರೆ .
ಆಗ ಪರಮಾತ್ಮ “ಮುಂದೆ ಚೋಳ ರಾಜನ ಸುತನೊಬ್ಬನು ನನ್ನನ್ನು ಅರ್ಚಿಸುತ್ತಾನೆ ಅವನನ್ನು ಅರ್ಚಿಸಲು ಅಲ್ಲಿಯೇ ನೆಲಸುತ್ತೇನೆ” ಎಂದ . ಶೇಷನನ್ನು ಕರೆದು , ಗಿರಿ ರೂಪದಲ್ಲಿರುವಂತೆ ಆಜ್ಞಾಪಿಸಿ ,ಅವನ ಫಣಾಮಂಡಲದ ಮಧ್ಯದಲ್ಲಿ ರಮೆಯೊಂದಿಗೆ ಇರುತ್ತೇನೆ “ ಎಂದು ಅಭಯವನ್ನಿತ್ತ . ಶೇಷದೇವನೂ ಒಂದು ವರಕೇಳಿದ , “ ಜಂಗಮ ಸ್ಥಾವರಗಳು ನನ್ನಲ್ಲಿ ವಾಸಿಸುವರೆವಿಗೆ ಎಲ್ಲ ಅಭೀಷ್ಟಗಳು ಸಿದ್ಧಿಸಲಿ ,” ಎಂದು ಪ್ರಾರ್ಥಿಸಿದ .
ಅಂತೆಯೇ ಸೇನಾಪತಿಯಾದ ವಿಶ್ವಾಕ್ಸೆನನಿಗೆ ಸಕಲ ದೇವತೆಗಳ ಜೊತೆಗೆ ವೆಂಕಟಗಿರಿಯಲ್ಲಿರಲು ಆಜ್ಞಾಪಿಸಿ ಗರುಡಾ ರೂಢನಾಗಿ ಭೂ ನೀಳಾದೇವಿ ಸಮೇತ ತಾನು ಅಲ್ಲಿನೆಲಸಿದ , ಎನ್ನುತ್ತದೆ ಸ್ಕಂದ ಪುರಾಣ .
||ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀನಿವಾಸರ್ಪಣಮಸ್ತು ||
***********
||ವೆಂಕಟೇಶನೆ ನಮೋ ವೆಂಕಟೇಶನೆ ನಮೋ||
||ಸಂಕಟ ಪರಿಹರಿಸು ವಿಜಯವಿಠ್ಠಲರೇಯಾ||
day 8 continued.
ಇಂದು ಬೆಳಿಗ್ಗೆ ಪೋಸ್ಟ್ ಮಾಡಿದ ಶ್ರೀನಿವಾಸ ಕಲ್ಯಾಣ ದಲ್ಲಿ ಪದ್ಮಾವತಿ ದೇವಿಯ ಬಳಿಭಗವಂತ ನಡೆದುಕೊಂಡ ಬಗ್ಗೆ ಉತ್ತರ.
ಬೇಟೆಯಾಡಲು ಹೊರಟ ಭಗವಂತನು ಪದ್ಮಾವತಿ ಯನ್ನು ಅರಣ್ಯ ದಲ್ಲಿ ಕಂಡಾಗ ತನ್ನ ಪ್ರೇಮ ನಿವೇದನೆ ಮಾಡುತ್ತಾನೆ.
ನೋಡುವವರಿಗೆ ಇದು ಬಹು ವಿಚಿತ್ರ ಎನಿಸುವದು.
ಇದರ ಹಿನ್ನೆಲೆ ಇಷ್ಟೇ.
ಭಗವಂತನು ಆನಂದ ಪರಿಪೂರ್ಣ.ಸ್ವರಮಣ ಕಾಮಾದಿ ,ದೋಷ ದೂರ,ಪ್ರಾಕೃತ ಗುಣಗಳಿಂದ ರಹಿತನಾದವನು...
ಅಂತಹ ಸ್ವಾಮಿ ಸ್ತ್ರೀ ಚಾಪಲ್ಯಕ್ಕೆ ಒಳಗಾಗಲಾರ.
ಆದುದರಿಂದ ಅವನು ವೆಂಕಟೇಶ ರೂಪದಿಂದ ಪದ್ಮಾವತಿಯ ಜೊತೆಯಲ್ಲಿ ಕಾಮುಕನಂತೆ ಮಾತಗಳನ್ನು ಆಡುವದು,ನಡೆದು ಕೊಳ್ಳುವದು.ಇದು ಲೌಕಿಕದಲ್ಲಿ ಕಾಮುಕ ಜನರನ್ನು ಬಿಂಬಿಸುವ ರೀತಿಯಲ್ಲಿ ನಟನೆಯನ್ನು ಮಾಡಿದ್ದು ಹೊರತುಪಡಿಸಿ ಬೇರೆ ಅಲ್ಲ...
ಹೇಗೆ
ರಾಮಾವತಾರದಲ್ಲಿ ಸೀತೆಯನ್ನು ಕಳೆದುಕೊಂಡವನಂತೆ,ಮತ್ತು ಅದರಿಂದಾಗಿ ಭಾರಿ ದುಃಖಕ್ಕೆ ಒಳಗಾದವನಂತೆ,ನಟಿಸಿ,ಲೌಕಿಕದಲ್ಲಿ ಜನ ಹೇಗೆ ವರ್ತನೆ ಮಾಡುವರೋ ಹಾಗೆ ನಟಿಸಿದ..
ಶ್ರೀ ವರದೇಶ ದಾಸರು ತಮ್ಮ ಒಂದು ಕೃತಿಯಲ್ಲಿ ಹೇಳುತ್ತಾರೆ👇.
||ಮನುಜರಂದದಿ ಸತಿ ವಿಯೋಗವ ತೋರ್ದನ|| ಅಂತ.
ಇನ್ನೊಂದು ಕೃತಿ ಯಲ್ಲಿ
ಜಾನಕಿಯು ಅವಿಯೋಗಿ ನಿನ್ನ ಬಳಿ ಇರುತಿರಲು| ವಾನರರ ಭಲ್ಲೂಕಗಳ ಸೇನೆ ನೆರಹಿ|
ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ| ಶ್ರೀನಿಧಿಯೆ ತವಲೀಲೆ ಬಹು ಚೋದ್ಯವು|| ಅಂತ ವರ್ಣನೆ ಮಾಡುತ್ತಾರೆ.
ಅದೇ ರೀತಿಯಾಗಿ ಜಗತ್ತಿನಲ್ಲಿ, ಸ್ತ್ರೀ ಚಪಲರಾದ ಕಾಮುಕರು ಅವಮಾನಕರವಾಗಿ ಬೈಸಿಕೊಳ್ಳುವಷ್ಟು, ಕಲ್ಲಿನಿಂದ ಜನಗಳ ಕೂಡ ಹೊಡೆಸಿಕೊಳ್ಳುವಷ್ಟು,ಮತ್ತು ದೈನ್ಯಸ್ಥಿತಿಗೆ ಒಳಗಾಗಬೇಕಾಗುವುದೆಂದು ವಿಡಂಬಿಸುವದಕ್ಕಾಗಿಯೇ ಹಾಗೇ ವೆಂಕಟೇಶನು ನಮಗೆಲ್ಲ ಪಾಠವನ್ನು ತಿಳಿಸಲೋಸುಗವಾಗಿಯೇ ಹಾಗೇ ನಡೆದುಕೊಂಡಿರುವದು.. ಹೊರತುಪಡಿಸಿ
ಭಗವಂತನು ಕಾಮಿಯಲ್ಲ..
ಯಾವಾಗಲು ಅವನವಕ್ಷ ಸ್ಥಳದಲ್ಲಿ ರಮಾದೇವಿಯನ್ನು ಹೊಂದಿರುವವನಿಗೆ ಈ ರೀತಿಯಲ್ಲಿ ಮಾಡುವ
ಅವಶ್ಯಕತೆ ಬೇಕಿದ್ದಿಲ್ಲ.
ಸ್ವರಮಣ ಅವನು..
ತನ್ನ ಸುಖಕ್ಕಾಗಿ ಪದ್ಮಾವತಿ ಯನ್ನು ಅಪೇಕ್ಷಿಸುವ ಪ್ರಸಂಗವು ಇಲ್ಲ..
ಯಾವ ಭಗವಂತನ ಮೋಹಿನಿ ರೂಪವನ್ನು ಸಮುದ್ರ ಮಥನ ಸಮಯದಲ್ಲಿ ಕಂಡಾಗ ಲಕ್ಷ್ಮೀ ದೇವಿಯರು ಸಹ ಬೆರಗಾಗುತ್ತಾರೆ..
.
ಇದನ್ನು ಶ್ರೀವಾದಿರಾಜ ಗುರುಗಳು ಲಕ್ಷ್ಮೀ ಶೋಭಾನದಲ್ಲಿ ಹೇಳುತ್ತಾರೆ.
👇
ತನ್ನ ಸೌಂದರ್ಯ ದಿಂದನ್ನಂತ ಮಡಿಯಾದ|
ಲಾವಣ್ಯದಿ ಮೆರೆವ ನಿಜ ಪತಿಯ|
ಹೆಣ್ಣು ರೂಪವ ಕಂಡು ಕನ್ಯೆ ಮಹಾಲಕ್ಚುಮಿ ಇವ ಗನ್ಯರೇಕೆಂದು ಬೆರಗಾದಳು||
ಲಾವಣ್ಯಮಯವಾದ ಹರಿಯ ಸ್ತ್ರೀ ವೇಷಕ್ಕೆ ಭಾವುಕೆಯರೆಲ್ಲ ಮರುಳಾಗೆ|
ಇಂತಹ ಸ್ವಾಮಿ ಕಾಮುಕನಂತೆ ಪದ್ಮಾವತಿ ಯ ಬಳಿ ವರ್ತನೆ ಮಾಡುವನೇ??
ಇದೆಲ್ಲ ನಟನೆ.
ಅಜ್ಞ ಜನರು ಮೋಹಿತರಾಗಲಿ ಮತ್ತು ತನ್ನ ನಿಜ ಭಕ್ತರು ಈ ನಾಟಕವನ್ನು ನೋಡಿ ಆನಂದ ಪಡಲಿ ಎಂದು ತೋರಿಸುವುದು ಅಷ್ಟೇ ಹೊರತು ಬೇರೆ ಏನು ಅಲ್ಲ.
ಇನ್ನೂ ಪದ್ಮಾವತಿ ದೇವಿಯು ಕಲ್ಲು ಹೊಡೆದ ಕಾರಣ ವೇನು??
ಅದಕ್ಕೆ ಉತ್ತರ ಇಷ್ಟೇ.
ಸೀತಾವತಾರದಲ್ಲಿ ಹೇಗೆ ರಾಮಾವತಾರದ ನಟನೆ ಗೆ ಅನುಗುಣವಾಗಿ ನಟಿಸಿದ್ದು ,ರುಕ್ಮಿಣಿ ಅವತಾರದಲ್ಲಿ ಪ್ರಣಯ ಕಲಹದ ನಾಟಕದಲ್ಲಿ ಕೃಷ್ಣ ನ ನಟನೆಗೆ ಪೂರಕವಾಗಿ ನಟಿಸಿದ್ದ ಳೊ....
ಅಂತೆಯೇ ಪದ್ಮಾವತಿ ರೂಪದಲ್ಲಿ ಸಹ,ಅಪರಿಚಿತ ಗಂಡು ಕಾಮುಕನಾಗಿ ಚುಡಾಯಿಸಲು ಬರುವಾಗ ಕನ್ಯೆ ಎಷ್ಟು ಜಾಗುರೂಕಳಾಗಿರಬೇಕು??
ಮತ್ತು
ವಿವಾಹ ವೆನ್ನುವದು ಹೆತ್ತವರು ಬಂಧು ಬಳಗದ ಮುಖಾಂತರವೆ ನಡೆಯಬೇಕು ಹೊರತು ತಾವೇ ಸ್ವತಃ ಹಿರಿಯರಿಲ್ಲದೇ ಮುಂದುವರೆಯಬಾರದು ಎಂಬ ನೀತಿಯನ್ನು ಸಾರುವದಕ್ಕಾಗಿ...
ಮತ್ತು
ತನಗೆ ಭಗವಂತ ಪರಿಚಿತ ಅಂತ ಗೊತ್ತು ಇದ್ದರು ಸಹ,
ಅಪರಿಚಿತ ಗಂಡು ರೂಪದಲ್ಲಿ ಇದ್ದ ವೆಂಕಟೇಶ ನನ್ನು ಗದರಿಸುವಳು.
ಹಾಗು
ಕಲ್ಲು ಹೊಡೆಯುವ ಮೂಲಕ ಅವಮಾನ ಮಾಡುವಷ್ಟು ಮುಂದು ವರೆಯುವಳು.
ಇದು ಅವರಿಬ್ಬರ ನಟನೆ .
ನಮ್ಮ ಹಾಗೇ ಅವರಿಬ್ಬರೂ ಎನ್ನುವ ಯೋಚನೆ ಸರ್ವತ್ರಾ ಬೇಡ.
ಅದರಿಂದ ಪಾಪ ಲೇಪನವಾಗುವದು ಹೊರತಾಗಿ ಬೇರೆ ಏನು ಫಲ ಇಲ್ಲ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
||ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ||
🙏ಶ್ರೀನಿವಾಸ ದಯಾನಿಧೆ🙏
******************
||ಶ್ರೀನಿವಾಸ ಕಲ್ಯಾಣ ಮಹಾತ್ಮೆ|| Day 09
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
✍ಆಕಾಶರಾಜನು ಬಕುಲದೇವಿಯು ಬಂದುದನ್ನು ಕಂಡು ಗುರುಗಳಾದ ಬೃಹಸ್ಪತ್ತ್ಯಾಚಾರ್ಯರನ್ನು,
ಶುಕಾಚಾರ್ಯರನ್ನು ಬರಮಾಡಿಕೊಂಡು ವಿವಾಹ ಸಂಸ್ಕಾರಕ್ಕೆ ಅವಶ್ಯವಾಗಿ ಬೇಕಾಗುವ ಘಟಿತಾರ್ಥ ನಿರ್ಣಯಗಳನ್ನು ತಮ್ಮ ಕುಲಗೋತ್ರಾ-ಬಕುಲಮಾಲಿಕೆಯ ಕುಲ-ಗೋತ್ರಾದಿಗಳನ್ನು ಕೂಡಿಸಿ ನೋಡುವುದರ ಮೂಲಕ ನಿಶ್ಚಯ ಪತ್ರವನ್ನು ಬರೆಯಲು ನಿರ್ಧರಿಸಿ,ಆ ಪತ್ರನ್ನು ಶ್ರೀನಿವಾಸನಿಗೆ ತಲುಪಿಸಲು ಶುಕಾಚಾರ್ಯರಿಗೆ ವಿಜ್ಞಾಪಿಸಿದನು.ಅದರಂತೆ ರಾಜನು ತಮ್ಮಬಂಧು-ಬಾಂಧವರನ್ನು ಕೂಡಿಕೊಂಡು,ತಮ್ಮ ಕುಲ ಗುರುಗಳ ಸಮ್ಮುಖದಲ್ಲಿ ವಿವಾಹ ನಿಶ್ಚಯ ಪತ್ರ ಬರೆದು ಶುಕಾಚಾರ್ಯರೊಂದಿಗೆ ಶ್ರೀನಿವಾಸದೇವರಿಗೆ ಕಳುಹಿಸಿಕೊಟ್ಟನು.
ಅದನ್ನು ಶುಕಾಚಾರ್ಯರು ತಮ್ಮ ಶಿರಸ್ಸಿನಲ್ಲಿಟ್ಟಕೊಂಡು ಸ್ವಾಮಿಗೆ ತಲುಪಿಸಿ,ಇಲ್ಲಿಯ ಒಪ್ಪಿಗೆಯನ್ನು ಶ್ರೀನಿವಾಸ ನಿಗೆ ಹೇಳಿದಾಗ
"ವೈಶಾಖ ಶುದ್ದ ದಶಮಿಯಲಿ ಇದ್ದ ಶುಕ್ರವಾರ ಶುಭ ತಿಥಿಯಲಿ ,ಮುದ್ದುಮುಖದವಳಾಗಿ ಇದ್ದ ನಿನ್ನ ಕನ್ನಿಕೆಯ ಶುದ್ದ ಪಾಣಿಗ್ರಹಣ ಸಿದ್ದಾಗಿ ಮಾಡುವೆನು ಬುದ್ದಿಪೂರ್ವಕ ಸ್ನೇಹ ಬದ್ದನಾಗಿ ಎಂದು ಪತ್ರ ಬರೆದು" ಮುಂದಿನ ವಿವಾಹ ಕಾರ್ಯಾರಂಭಗಳನ್ನು ಮಾಡಲು ಆಕಾಶರಾಜನಿಗೆ ಅನುಮತಿ ಕೊಟ್ಟನು.
ಆ ನಂತರ ಶ್ರೀನಿವಾಸನು ತನ್ನ ತಾಯಿಯಾದ ಬಕುಳೆಗೆ
"ನನಗೀ ವಿವಾಹವು ಬೇಡವೆನಿಸಿದೆ.ನನಗೆ ಯಾರು ಬಂಧು, ಬಳಗ ಇಲ್ಲ.ಏಕಾಂಗಿ ನಾನು. ಮದುವೆ ನಿಬ್ಬಣಕ್ಕೆ ನಾವಿಬ್ಬರೇ ಹೋಗುವದು ಸರಿಯೇ!!.ಆಕಾಶರಾಜ ಮಹಾರಾಜ. ಅವನಿಗೆ ಬಂಧು ಬಳಗ ಎಲ್ಲಾ ಇದೆ.ಬಂಧು ಬಳಗ ಇಲ್ಲದ ನಾನು ಹೇಗೆ ಸಂಬಂಧ ಬೆಳೆಸಲಿ??ಅದಕ್ಕೆ ಚಿಂತೆ ಆಗಿದೆ "ಎಂದು ಸಾಮಾನ್ಯ ಮಾನವನಂತೆ ನಟಿಸುತ್ತಾ ಹೇಳಿದ.
ಅದಕ್ಕೆ ಬಕುಳೆಯು
"ಇದೆಂತಹ ಮಾತು!!ನಿನ್ನಂತಹ ಪುರುಷರು ಸುಳ್ಳು ಹೇಳಬಾರದು.".
ನೀನು ಜಗತ್ಕುಟುಂಬಿ. ರಮಾ,ಬ್ರಹ್ಮ ರುದ್ರಾದಿ ದೇವತೆಗಳೇ ನಿನ್ನ ಪರಿವಾರ.ಜಗತ್ತಿನ ಸುಜೀವರೆಲ್ಲರೂ ನಿನ್ನ ಬಂಧುಗಳು.ಇಂತಹ ನೀನು ನಾನು ಒಬ್ಬೊಂಟಿಗ.ನನಗಾರು ಇಲ್ಲ ಅಂತ ಏಕೆ ನಟಿಸುವಿ??..
ನಿನ್ನ ಕಪಟನಾಟಕವನ್ನು ಸಾಕುಮಾಡು.ಬ್ರಹ್ಮ,ವಾಯು,ರುದ್ರಾದಿ ದೇವತೆಗಳನ್ನು, ಮತ್ತು ನಿನ್ನ ಸೊಸೆಯರು,ಮೊಮ್ಮಕ್ಕಳು, ಮರಿ ಮಕ್ಕಳು ಇವರೆನೆಲ್ಲ ಸ್ಮರಿಸು ಅಂತ ಪ್ರಾರ್ಥನೆ ಮಾಡಿದಾಗ
ತಕ್ಷಣ ಗರುಡ,ಶೇಷರನ್ನು ಸ್ಮರಿಸಿದನು.
ಅವರಿಬ್ಬರೂ ಬಂದ ಕೂಡಲೆ
ಪತ್ರವನ್ನು ಬರೆಯುವನು ಮೊದಲು ಪರಮೇಷ್ಟಿಗೆ.
"ಚಿರಂಜೀವಿ ಯೆನಿಸುವ ಬ್ರಹ್ಮ ದೇವ ಮಾಡುವೆ ನಿನಗೆ ಕೇವಲ ಆಶೀರ್ವಾದ.ನಾವು ಕ್ಷೇಮದಲ್ಲಿದ್ದ ಭಾವವನ್ನು ತಿಳಿದುಕೊಂಡು ನೀನು ಕ್ಷೇಮದಲ್ಲಿದ್ದ ಭಾವವನ್ನು ತಿಳಿಸುವದು.ಈ ವಸುದೆಯಲಿ ಎನ್ನ ವೈವಾಹಿಕ ಉತ್ಸವಕೆ ಯಾವತ್ತೂ ಸುರರೆಲ್ಲ ಇವತ್ತೆ ಬರಬೇಕು.ಅದು ನಿನ್ನ ಜೊತೆಗೂಡಿ.ಉಳಿದ ವೃತ್ತಾಂತ ಬಂದ ಮೇಲೆ ತಿಳಿಸುವೆ ಎಂದು ಬರೆದು
ನಂತರ
ಇನ್ನೊಂದು ಪತ್ರವನ್ನು ರುದ್ರ ದೇವನಿಗೆ ಬರೆಯುವನು.
"ಸರಸದಲಿ ಕೈಲಾಸಗಿರಿಯಲ್ಲಿರುವವಗೆ ಎನ್ನ ಪರಮ ಆಶೀರ್ವಾದ." "ತ್ವರಿತ ವಾಗಿ ನಿನ್ನ ಪರಿವಾರ ಸಮೇತವಾಗಿ ಎನ್ನ ವಿವಾಹಕ್ಕೆ ಬರುವದು ಅದು ಅತ್ಯಗತ್ಯವಾಗಿ ಉರಗಭೂಷಣನೇ."
"ನೀನಿಲ್ಲಿ ಬಂದ ಮೇಲೆ ವಿಷಯ ತಿಳಿಸುವೆನು ಉರಗೇಶ ಹೊರಟು ಬಾ.". ಎಂದು ಬರೆದನು.
ನಂತರದಲ್ಲಿ.
ಗರುಡನಿಗೆ ಬ್ರಹ್ಮ ದೇವರನ್ನು,ಶೇಷನಿಗೆ ರುದ್ರ ದೇವರನ್ನು ನನ್ನ ವಿವಾಹ ಕಾರ್ಯಕ್ರಮಕ್ಕೆ ಬರಲು ಅವರ ಮುಖಾಂತರ ಪತ್ರ ಮುಖೇನ ಶೀಘ್ರವಾಗಿ ಬರಲು ಆಹ್ವಾನವನ್ನು ನೀಡಿದನು.
ಬ್ರಹ್ಮ ದೇವರು ತನ್ನ ತಂದೆಯು ಬರೆದ ಪತ್ರ ವನ್ನು ಓದಿ ಕೇಳಿ ತನ್ನ ಸತಿಯರಾದ ಸರಸ್ವತಿ, ಗಾಯತ್ರಿ, ಸಾವಿತ್ರಿ ದೇವಿಯರೊಡನೆ , ಅವರ ಪರಿವಾರದೊಡನೆ ಶೇಷಗಿರಿ ಕಡೆ ಪಯಣ ಬೆಳೆಸಿದನು.
ಅದೇ ಕಾಲಕ್ಕೆ ವಾಯುದೇವರು ಭಾರತಿದೇವಿಯರ ಸಹಿತವಾಗಿ,ರುದ್ರದೇವರು ಪಾರ್ವತಿ ಸಹಿತವಾಗಿ ಇಂದ್ರಾದಿ ದೇವತೆಗಳು ತಮ್ಮ ಪತ್ನಿಯರು ಸಮೇತವಾಗಿ, ಸಕಲ ಋಷಿಗಳು ಅವರ ಪರಿವಾರ ಸಮೇತರಾಗಿ ವೆಂಕಟಾದ್ರಿ ಗೆ ಬಂದರು.
ಭಗವಂತನನ್ನು ಕಂಡು ಬ್ರಹ್ಮ ದೇವನು ಪಾದಕ್ಕೆ ಎರಗಿದಾಗ ಪ್ರೀತಿಯಿಂದ ಆಲಂಗಿಸಿ
"ಕುಮಾರ!! ನಿನಗೆ ಮಂಗಳವಾಗಲಿ.ಬಹುಕಾಲವಾದ ಮೇಲೆ ನನ್ನ ನೋಡಲು ಬಂದಿರುವೆಯಲ್ಲ.ಒಮ್ಮೆ ಯಾದರು ನನ್ನನ್ನು ನೋಡಬೇಕು ಎಂಬ ಕೂತುಹಲ ನಿನಗೆ ಬರಲಿಲ್ಲ ವಲ್ಲ!ಇವಾಗ ಬಂದೆಯಲ್ಲ! ಅದೇ ದೊಡ್ಡದು. ನಿನ್ನನ್ನು ಬಿಟ್ಟು ನನಗೆ ಜಗತ್ತಿನಲ್ಲಿ ಯಾವುದು ಇಲ್ಲ ಅಂತ ಕಣ್ಣೀರು ಹಾಕುತ್ತಾ" ಆಲಂಗಿಸಿಕೊಂಡನು..
ಸಕಲ ದೇವತೆಗಳು ಈ ಲೀಲೆಯನ್ನು ನೋಡಿ ಆನಂದ ಭರಿತರಾದರು.
ಆನಂತರ ಮಗನನ್ನು ಕೂಡಿಸಿಕೊಂಡು ಹಿಂದೆ ನಡೆದ ವಿಷಯವನ್ನು ಹೇಳಿ
"ನನ್ನ ಸಲುಹಿದ ಈ ತಾಯಿ ಯಾದ ಬಕುಳೆಗೆ ನಮಸ್ಕಾರ ಮಾಡು" ಎಂದು ಹೇಳುತ್ತಾನೆ.
ತಂದೆಯ ಮಾತಿಗೆ ಬ್ರಹ್ಮ ದೇವನು
"ಯಾವತ್ತಿಗೂ ಎಂದು ಇಲ್ಲದ ಈ ತಾಯಿ ಬಂದಳು ಎಲ್ಲಿಂದ? ಎಂದು ಕೇಳಲು
ಇಂದಿರೇಶನು ಹೇಳುವನು.
"ಹಿಂದಕ್ಕೆ ಈಕೆ ಯಶೋಧೆಯು.ನನ್ನ ವಿವಾಹ ನೋಡಿಲ್ಲ ವೆಂದು ದುಃಖ ಪಡಲು ಈ ಕಾಲದಲ್ಲಿ ಬಕುಳೆಯಾಗಿ ನನ್ನ ವಿವಾಹವನ್ನು ನೋಡಲು ಬಂದಿದ್ದಾಳೆ "ಎಂದು ಹೇಳಿದನು.
ನಂತರ ಬ್ರಹ್ಮ ದೇವನು ತನ್ನ ಪರಿವಾರ ಸಮೇತವಾಗಿ ಬಕುಳದೇವಿಗೆ ನಮಸ್ಕರಿಸಿ ದರು.
ಆ ಸಮಯದಲ್ಲಿ ಸಕಲ ವಾಧ್ಯಗಳ ಧ್ವನಿ ಕೇಳಲು ಬಂದವರು ಯಾರು?? ಎಂದು ಕೇಳಲು
ಜಿಂಕೆಯನ್ನು ಏರಿಕೊಂಡು ಸುವಾಸನೆಯನ್ನು ಬೀರುತ್ತಾ ಭಾರತಿಪತಿಯಾದ ಮುಖ್ಯ ಪ್ರಾಣದೇವರು ತಮ್ಮ ಸತಿಯಾದ ಭಾರತಿದೇವಿಯರೊಡನೆ ಅಲ್ಲಿಗೆ ಬರುತ್ತಾರೆ..
ತನ್ನ ಮಗನಾದ ವಾಯುದೇವರ ಆಗಮನದಿಂದ ಸಂತಸ ಗೊಂಡಂತೆ ನಟಿಸಿದ.
ನಂತರ ಕೆಲ ಕ್ಷಣದಲ್ಲಿ ರುದ್ರ ದೇವರು ಅವರ ಪರಿವಾರ ಸಮೇತವಾಗಿ ಸಹ ಅಲ್ಲಿ ಗೆ ಬರುತ್ತಾರೆ.
ಹೀಗೆ ಸಕಲ ದೇವತಾ ಪರಿವಾರ,ಸಕಲ ಋಷಿಗಳು ಪರಿವಾರದವರು ಬಂದಾಗ ಸಂತೋಷ ದಿಂದ ಎಲ್ಲರನ್ನೂ ಆದರಿಸಿ ಭಗವಂತನು ಸತ್ಕಾರ ಮಾಡುತ್ತಾನೆ.
ನಂತರ ದೇವಶಿಲ್ಪಿಯಾದ ವಿಶ್ವ ಕರ್ಮನ ಮೇಲೆ ಸಿಟ್ಟು ಬಂದಂತೆ ನಟಿಸಿ ಆನಂತರ ಅನುಗ್ರಹಿಸಿ ಇಂದ್ರದೇವರ ಮುಖಾಂತರ ನಾರಾಯಣ ಪುರದಲ್ಲಿ ಉಳಿದುಕೊಳ್ಳಲು ದೊಡ್ಡ ಸೌಧವನ್ನು ನಿರ್ಮಿಸಿದನು.ಸಕಲ ದೇವತೆಗಳಿಗೆ ಅವರವರ ಯೋಗ್ಯತೆ ಅನುಗುಣವಾಗಿ ತನ್ನವಿವಾಹದಲ್ಲಿ ಅವರೆಲ್ಲರು ಮಾಡುವ ಕಾರ್ಯವನ್ನು ಒಪ್ಪಿಸಿದನು.
ವಿವಾಹಾಂಗವಾಗಿ ಪುಣ್ಯಾಹ,ನಾಂದೀ ಮುಂತಾದ ಶುಭಕಾರ್ಯಗಳನ್ನು ಮಾಡುವ ಸಮಯದಲ್ಲಿ ತನ್ನ ಪತ್ನಿ ಯಾದ ಲಕ್ಷ್ಮೀ ದೇವಿಯನ್ನು ನೆನೆಸಿ ಕೊಂಡು
"ಸಿರಿಯಿಲ್ಲದ ಈ ಸಭೆಯು ಸರಿಬಾರದಯ್ಯ ಬ್ರಹ್ಮಾ ಸರಸ ತೋರದು ಕಣ್ಣಿಗೆ. ನೀವೆಲ್ಲರೂ ಇಷ್ಟು ಜನ ಇರುವಾಗ ಬರಿಯ ಮನೆಯಂತೆ ತೋರುತ್ತದೆ. ಮನಸ್ಸು ನಿಲ್ಲದು" ಎಂದು ಸಾಮಾನ್ಯ ಮಾನವನಂತೆ ಶೋಕಿಸತೊಡಗಿದ.
ತಿಳಿಯದೋ ನಿನ್ನಾಟ.
ಮುಂದಿನ ಭಾಗ ಸಾಯಂಕಾಲ.
🙏.ಶ್ರೀ ಕೃಷ್ಣಾರ್ಪಣಮಸ್ತು🙏
ಒಲಿದು ಭಕ್ತ ರಿ ಗಾಗಿ ಮದುವೆ
ಹವಣಿಸಿಕೊಂಡ|

ಶ್ರೀನಿವಾಸನ ಕಲ್ಯಾಣದ ಶುಭ ಸಂದರ್ಭದಲ್ಲಿ
ಅವನ ಮಹಿಮೆ ಸಾರುವ ಲೇಖನ ಮಾಲೆಯಲ್ಲಿ
೯ ನೇ ಲೇಖನ.
ಚಿ | ಸುಮುಖ್ ಮೌದ್ಗಲ್ಯ ಶ್ರೀನಿವಾಸ ದೇವರ ಕುರಿತಾಗಿ ಶ್ರೀವಾದಿರಾಜರ ದಶಾವತಾರವನ್ನು ತಿಳಿಸುವ ಒಂದು ಕೃತಿಯನ್ನು ಹಾಡಿದ್ದಾರೆ . ಸುಮುಖ್ ಅವರು ತುಂಬಾ ಸುಶ್ರಾವ್ಯವಾಗಿ ಒಂದು ಮಧುರ ರಾಗವನ್ನು ಅಳವಡಿಸಿದ್ದಾರೆ ಕೂಡ . ಸೂಕ್ಹ್ಮವಾಗಿ ಗಮನಿಸಿದಾಗ ಸಾಹಿತ್ಯದಲ್ಲಿ ಯತಿಗಳು “ ಮಂಜುಗುಣಿ ಶ್ರೀನಿವಾಸನನ್ನು ಕುರಿತ ದೇವರ ನಾಮ . ಸ್ಥಳ ಪುರಾಣದ ಜಾಡು ಹಿಡಿದುಹೋದಾಗ ,
ಭಗವಂತ ವಿಹಾರಕ್ಕಾಗಿ ಚೋಳ ಪಾಂಡ್ಯ ರಾಜ್ಯ ಗಳನ್ನು ದಾಟಿ ಕರ್ನಾಟಕದ ಸಹ್ಯಾದ್ರಿ ಕಡೆಗೆ ಬಂದನೆಂದೂ ಆಸ್ಥಳದಲ್ಲಿ ನೆಲೆಯಾದನೆಂದು
ಸ್ವಾಮಿಯನ್ನು ಹುಡುಕಿ ಬಂದ ಒಬ್ಬ ಭಕ್ತ ಯೋಗಿಗೆ ಸ್ವಾಮಿ ತಾನು ಇಲ್ಲಿರುವೆನೆಂದು
ತನ್ನನ್ನು ಅಘನಾಶಿನಿ ನದಿಯ ದಡದಲ್ಲಿ ಪ್ರತಿಷ್ಠಾಪಿಸಬೇಕೆಂದು ಆದೇಶವಿತ್ತನು . ಅಲ್ಲಿಯೇ ಇದ್ದ ಹುತ್ತದ ಮೇಲೆ ಶ್ರೀನಿವಾಸನ
ವಿಗ್ರಹವನ್ನಿಟ್ಟು ಪ್ರತಿಷ್ಠೆ ಮಾಡಲು ಪ್ರಯತ್ನಪಡುವಷ್ಟರಲ್ಲಿ ವಿಗ್ರಹ ಅಲ್ಲಿಯೇ ನೆಲೆ ಗೊಂಡಿತು . ಅಲ್ಲಾಡಿಸಲು ಆಗಲಿಲ್ಲ .
ಇತಿಹಾಸದ ಪ್ರಕಾರ ಈ ಪ್ರದೇಶವನ್ನು ಅನೇಕ ರಾಜ ಮನೆತನಗಳು ಆಳಿದವು . ಅದರಲ್ಲಿ
ಶ್ರೀ ವಾದಿರಾಜರ ಕಾಲದಲ್ಲಿ ಇದ್ದ ಸೋದೆ ಅರಸರ ವಂಶದವನು ಸ್ವಾಮಿಗಳ ಇಚ್ಚೆಯಂತೆ ದೇವಸ್ಥಾನ ಜೀರ್ಣೋದ್ದಾರ ಮಾಡಿದನು
ಮಂಜುಗುಣಿ ದೇವಾಲಯ ಹಿಮಗಾಲದಲ್ಲಿ ಹಿಮದಿಂದ ಆವೃತ್ತ ವಾಗಿರುವುದರಿಂದ ಈ ಹೆಸರು . ಉತ್ತರ ಕರ್ನಾಟಕದ ಸಿರಿಸಿಯಿಂದ ೨೬ ಕಿಲೋಮೀಟರ್ ಇರುವ ಮಂಜುಗುಣಿ
ಸ್ವಾಮಿ ಪುಷ್ಕರಿಣಿಯಂತೆ , ಅಘನಾಶಿನಿ ದಡದಲ್ಲಿದೆ . ಶೇಷಾಚಲದಲ್ಲಿ ಸ್ವಾಮಿ ನೆಲೆಸಿರುವಹಾಗೆ ಇಲ್ಲಿ ಹುತ್ತದಮೇಲೆ ನೆಲೆಸಿದ್ದಾನೆ .ಇಂಥ ಭಗವಂತನಮೇಲೆ ಶ್ರೀ
ವಾದಿರಾಜರು “ ಮನ್ನಿಸೋ ಶ್ರೀನಿವಾಸ ಮಂಜುಗುಣಿ ವಾಸ “ ಎಂದು ಕೃತಿ ರಚಿಸಿ
ತಮ್ಮ ಭಕ್ತಿಯನ್ನು ತೋರಿದ್ದಾರೆ . ಈ ಕ್ಷೆತ್ರವನ್ನು
“ತೀರ್ಥ ಪ್ರಬಂಧದಲ್ಲೂ “ ಉಲ್ಲೇಖಿಸಿದ್ದಾರೆ .
ಭಕ್ತರೊಬ್ಬರು “ ಸ್ವಾಮಿಯ ದರ್ಶನದಿಂದ
ತಿರುಪತಿಯಲ್ಲಾದಷ್ಟೇ ಮನಸ್ಸಿಗೆ ಮುದ ಕೊಡುತ್ತದೆ ಆದರೆ ಜನ ದಟ್ಟಣೆ ಇಲ್ಲದೆ “ ಎಂದು
ಉಧ್ಗರಿಸಿದ್ದಾರೆ.
ಇನ್ನು ವೆಂಕಟಾಚಲಕ್ಕೆ ಬಂದರೆ
ಸ್ವಾಮಿ ಸಾಕ್ಷಾತ್ ನಿಂತಿದ್ದರೂ ಏಕೆ ಮೌನವಾಗಿದ್ದಾನೆ ಎಂದರೆ ಇದು ಕಲಿಯುಗ
ಎನ್ನುತ್ತಾರೆ , ಇದಕ್ಕೆ ಪೌರಾಣಿಕ ಹಿನ್ನೆಲೆ ಉಂಟು.
ವರಾಹ ಪುರಾಣದಲ್ಲಿ ಬರುವ ಒಂದು ಕಥೆ ಇದಕ್ಕೆ ಪುಷ್ಟಿ ನೀಡುತ್ತದೆ .
ಇಂದು ಶ್ರೀನಿವಾಸ ಕಲ್ಯಾಣ ಆಕಾಶರಾಜನ ಮಗಳು ಪದ್ಮಾವತಿ ರೂಪದ ರಮೆಯನ್ನು ವಿಜೃಂಭಣೆಯಿಂದ ಬ್ರಹ್ಮಾದಿ ಸುರರ ಸಮ್ಮುಖದಲ್ಲಿ ವಿವಾಹವಾದ . ರಾಜ ತೊಂಡಮಾನನಿಂದ ಮಂದಿರ ನಿರ್ಮಾಣ ಮಾಡಿಸಿಕೊಂಡ . ಅವನಿಗೆ ತನ್ನ ಶಂಖ ಚಕ್ರ ದಯಪಾಲಿಸಿದ . ಹಾಗೆ ಬಿಲ ಮಾರ್ಗದಿಂದ ಬಂದು ತನ್ನನ್ನು ಪೂಜಿಸಲು ಅವಕಾಶ ಮಾಡಿಕೊಟ್ಟ .
ಆ ಸಂಧರ್ಭದಲ್ಲಿ , ಒಬ್ಬ ಬ್ರಾಹ್ಮಣ , ಸಾಮವೇದದ ವಸಿಷ್ಠ ಗೋತ್ರಕ್ಕೆ ಸೇರಿದವನು
ವೀರಶರ್ಮ ಎಂದು ಹೆಸರು, ಅವನ ಹೆಂಡತಿ
ಕೌಶಿಕಿಯನ್ನು ಕರೆದುಕೊಂಡು ತೀರ್ಥ ಕ್ಷೆತ್ರಕ್ಕೆ ಹೊರಟಿದ್ದ . ಆ ಪತ್ನಿ ಗರ್ಭಿಣಿಯಾದ್ದರಿಂದ
ಮುಂದೆ ಯಾತ್ರೆ ಮಾಡಲಾರದೆ ತೊಂಡಮಾನ ರಾಜನಲ್ಲಿ ರಕ್ಷಣೆಗಾಗಿ ಒಪ್ಪಿಸಿ ಯಾತ್ರೆ ಮುಂದುವರೆಸಿದ .
ರಾಜ ಆಕೆಗೆ ತನ್ನ ಅರಮನೆಯ ಒಂದುಭಾಗದಲ್ಲಿ
ವಾಸಕ್ಕೆ ಅನುಕೂಲ ಕಲ್ಪಿಸಿ ಸೈನಿಕರನ್ನು ರಕ್ಷಣೆಗೆ ನೇಮಿಸಿ , ಆರು ತಿಂಗಳಿಗಾಗುವ ಧವಸ ಧಾನ್ಯವನ್ನು ಒದಗಿಸಿಕೊಟ್ಟು ತನ್ನ ರಾಜಕಾರ್ಯದಲ್ಲಿ ಮಗ್ನನಾಗಿ ಸಂಪೂರ್ಣ
ಅವಳ ವಿಷಯವನ್ನೇ ಮಾರುತುಬಿಟ್ಟ
ಚೈತ್ರ ಶುಕ್ಲ ಏಕಾದಶಿ ತೀರ್ಥ ಯಾತ್ರೆಗೆ ಹೋಗಿದ್ದ ಬ್ರಾಹ್ಮಣ ಮರಳಿ ಬಂದ. ರಾಜನಿಗೆ
ಬದರಿಕಾಶ್ರಮದ ಪ್ರಸಾದ ಗಂಗಾ ಜಲದೊಂದಿಗೆ ಆಶೀರ್ವದಿಸಲು ಬಂದ
ಅಲ್ಲಿ ನೋಡಿದರೆ ವಿಷಯವೇ ಬೇರೆಯದಿತ್ತು.
ವಿಪ್ರನ ಗರ್ಭಿಣಿ ಪತ್ನಿ ರಾಜನ ಅಲಕ್ಷ ದಿಂದ
ಅನ್ನ ಆಹಾರ ಇಲ್ಲದೆ ಮೃತಳಾಗಿದ್ದಳು
ರಾಜ ಶಾಪಕ್ಕೆ ಹೆದರಿ ಸುರಂಗ ಮಾರ್ಗದಿಂದ
ಹೋಗಿ ಶ್ರೀನಿವಾಸನಿಗೆ ಶರಣಾದ . ಶ್ರೀನಿವಾಸ
ಅಭಯ ಪ್ರಧಾನ ಮಾಡಿ , ಮೃತ ದೇಹವನ್ನು ನನ್ನ ಮಂದಿರದ ಪೂರ್ವ ಭಾಗದಲ್ಲಿರುವ ಸರೋವರದಲ್ಲಿ ದ್ವಾದಶಿಯದಿನ ಅಸ್ಥಿಯ ಸ್ನಾನ ಮಾಡಿಸು ಈ ಅಪಮೃತ್ಯು ಪರಿಹಾರವಾಗುವುದು ಎಂದ . ತೊಂಡಮಾನ ಹಾಗೆ ಮಾಡಿದ .
ಅವನ ರಾಣಿಯರು ಸ್ನಾನ ಮಾಡಿದಹಾಗೆ ಆಸ್ತಿಗೂ ಸ್ನಾನ ಮಾಡಿಸಲಾಗಿ ಬ್ರಾಹ್ಮಣ ಪತ್ನಿ
ಮೊದಲಿನಂತೆ ಶರೀರ ಹೊಂದಿದಳು .
ವೀರ ಶರ್ಮ ಬ್ರಾಹ್ಮಣನಿಗೆ ಈ ವಿಷಯವೆಲ್ಲ ತಿಳಿಯಿತು . ಶ್ರೀನಿವಾಸನ ಅನುಗ್ರಹಕ್ಕೆ ತನ್ನ ಕೃತಜ್ಞತೆ ಸಲ್ಲಿಸಿ ರಾಜನಿಂದ ಧನ ವಸ್ತ್ರದಿ ಪಡೆದು ಅವನನ್ನು ಆಶೀರ್ವದಿಸಿ ತನ್ನ ಊರಿಗೆ ಹೊರಟ. ಈ ಅನುಗ್ರಹವನ್ನು ಶ್ರೀನಿವಾಸನ
ಅಷ್ಟೋತ್ತರದಲ್ಲಿ “ ಸುಧರ್ಮಿಣೀ ಸುಚೈತನ್ಯ ಪ್ರಧಾತ್ರೇ ಶ್ರೀ ವೆಂಕಟೇಶಾಯ ನಮಃ .
ಎಂದು ಗುಣಗಾನ ಮಾಡುತ್ತಾರೆ .
ಕೊನೆಯಲ್ಲಿ , ಶ್ರೀನಿವಾಸ ಜೀವದಾನ ಮಾಡಿದ
ಬ್ರಾಹ್ಮಣನ ಪತ್ನಿ ತಾನು ಪರಮಾತ್ಮನ ಉದರಸ್ತ
ಲೋಕಗಳನ್ನು ನೋಡಿದಳೆಂದು ಅವಳು ಕೆಲವುಕಾಲ ಯಮನ ಲೋಕ ಸೇರದೆ ಪರಮಾತ್ಮನ ಉದರದಲ್ಲಿದ್ದಳೆಂದು ಪುರಾಣಗಳು ವರ್ಣಿಸುತ್ತದೆ .
ಶ್ರೀನಿವಾಸ ತಾನು ಇನ್ನುಮುಂದೆ ಪ್ರತ್ಯಕ್ಷವಾಗಿ ಯಾರೊಡನೆ ಮಾತನಾಡುವುದಿಲ್ಲ ,ತನ್ನ ಅನುಗ್ರಹವನ್ನು ಅನ್ಯರ ಮೂಲಕವೇ ತಿಳಿಸುವುದಾಗಿ ರಾಜನಿಗೆ ಹೇಳುತ್ತಾನೆ .
ಹಾಗೆ ತನ್ನನ್ನು ಕುರಿತು ಸ್ತೋತ್ರಾದಿಗಳನ್ನು ಮಾಡಿದ ವಿಪ್ರ ವೇದಾರ್ಥ ಪ್ರವರ್ತಕನಾಗಿ
ಸಾಯುಜ್ಯವನ್ನು ಹೊಂದುತ್ತಾನೆ .
ಶ್ರೀವಾದಿರಾಜರ ಪದದಿಂದ ಆರಂಭ ವಾಯಿತು ಇಂದಿನ ಲೇಖನ
ಅವರು ಮಾಡಿದ ಸ್ತೋತ್ರದಿಂದ ಕೊನೆಯಹಂತ
“ ಶ್ರೀ ವೆಂಕಟಲಸಚೈಲವಾಸೀ ದಾಸೀಕೃತಾಮರಃ
ಛಾಯಯಾ ಪಾತುಮಾಂ ನಿತ್ಯ ಸುರದ್ರುಮಃ
ದೃಷ್ಟ್ವ ದಿಶಿದಿಶಿ ಸ್ವೀಯಾನ್ ದಯಯಾ ಪಾಲಯನ್ನಿವ
ವರ್ತತೇ ವಿಶ್ವತಶ್ಚಕ್ಷು: ವೆಂಕಟೇ ವೆಂಕಟೇಶ್ವರಃ
ಯೇ ಶಂಖ ಚಕ್ರೋಜ್ವಲ ಬಾಹುಯುಗ್ಮಃ
ಸ್ವಾoಘಿoಭಜಂತೇ ಭವ ಸಿಂಧುರೇಷಾಮ್
ಕಟಿ ಪ್ರಮಾಣಸ್ತ್ವಿತಿ ವೆಂಕಟೇಶ: ಸ್ಪುಟೀಕಾರೊತ್ಯಾತ್ಮ ಕರಾಂಬುಜಾತೈ ||
ಶ್ರೀ ವಾದಿರಾಜ ಗುರು ಸಾರ್ವಭೌಮರು ಒಂದು ವಿಭಿನ್ನ ವಾಗಿ ಸ್ತೋತ್ರಮಾಡುವುದು ಅವರ ಎಂದಿನ ಶೈಲಿ .
ಹಾಗೆಯೇ ಶ್ರೀನಿವಾಸನನ್ನೂ ಸ್ತೋತ್ರಮಾಡುತ್ತಾ
ಕಾಂತಿಯುಕ್ತವಾದ ವೆಂಕಟಗಿರಿಯೆಂಬ ಶೋಭಾಯಮಾನವಾದ ಪರ್ವತದಲ್ಲಿ ವಾಸವಾಗಿರುವ , ದೇವತೆಗಳನ್ನು ದಾಸರನ್ನಾಗಿ ಮಾಡಿಕೊಂಡಿರುವ ಶ್ರೀನಿವಾಸನೆಂಬ ಕಲ್ಪವೃಕ್ಷ
ತನ್ನ ನೆರಳಿಂದ ಸದಾಕಾಲವೂ ನನ್ನಮೇಲೆ ಬೀರಲಿ
ವೆಂಕಟ ಪರ್ವತಕ್ಕೆ ಸ್ವಾಮಿಯಾದ ಶ್ರೀ ಶ್ರೀನಿವಾಸನು ದಿಕ್ಕು ದಿಕ್ಕಿನಲ್ಲಿ ಇರುವ ತನ್ನ
ಭಕ್ತರನ್ನು ನೋಡಿ , ಕೃಪೆಯಿಂದ ಅವರನ್ನು
ಕಾಪಾಡುತ್ತಾನೋ ಎಂಬಂತೆ ಸರ್ವತ್ರ ಕಣ್ಣುಳ್ಳವನಾಗಿ ವೆಂಕಟ ಪರ್ವತದಲ್ಲಿ ಇದ್ದಾನೆ
ಯಾರು ತನ್ನ ಶಂಖ ಚಕ್ರಗಳಿಂದ ಶೋಭಿತವಾದ
ಎರಡು ಬಾಹುಗಳನ್ನು ,ತನ್ನ ಪಾದವನ್ನು ಸೇವಿಸುತ್ತಾರೋ ಅಂತಹವರಿಗೆ ಈ ಸಂಸಾರ
ಸಮುದ್ರವು ಸೊಂಟದಷ್ಟೇ ಪರಿಮಿತಿ ಉಳ್ಳದಾಗುತ್ತದೆ ಎಂದು ಹೇಳಿ
ಈ ಲೇಖನದ ಕೊನೆಯಲ್ಲಿ
ಶ್ರೀವಾದಿರಾಜ. ಪೂಜ್ಯ ಚರಣರು ಹೇಳಿದ ,
ಗುರುವಂದನೆಯಿಂದ ಕೂಡಿದ ,ಎಲ್ಲ ಮಠ ಮಂದಿರದಲ್ಲಿ , ಸಂಸ್ಥಾನ ಪೂಜೆಯಲ್ಲಿ ಹೇಳುವ ಶ್ಲೋಕ
“ ಆನಂದತೀರ್ಥವರದೇ ದಾನವಾರಣ್ಯಪಾವಕೇ
ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇsಸ್ತು
ಮೇ ಮನಃ ||”
“ಶ್ರೀಮದಾನಂದತೀರ್ಥರಿಗೆ ವರಪ್ರದನಾಗಿರುವ
ದುಷ್ಟ ದಾನವರೆಂಬ ಕಾಡಿಗೆ ಬೆಂಕಿಯಾಗಿರುವ
ಸುಜನರಿಗೆ ಜ್ಞಾನಪ್ರದನಾಗಿರುವ ಸರ್ವೇಶ್ವರನಾದ ಶ್ರೀನಿವಾಸನಲ್ಲಿ ನನ್ನ ಮನಸ್ಸು ಇರಲಿ “ ಎಂದಿದ್ದಾರೆ ವಾದಿರಾಜ ಪೂಜ್ಯ ಚರಣರು. ನಮ್ಮ ಪ್ರಾರ್ಥನೆಯು ಅದೇ ಆಗಿದೆ
ಈ ಲೇಖನಮಾಲೆ ಇಂದಿಗ ಸಂಪೂರ್ಣವಾಯಿತು
|| ನಾಹಂ ಕರ್ತಾ ಹರಿಃ ಕರ್ತಾ||
||ಶ್ರೀನಿವಾಸಾರ್ಪಣಮಸ್ತು||
*************
ಶ್ರೀನಿವಾಸ ಕಲ್ಯಾಣ ಮಹಾತ್ಮೆ||
Day 09 continued
ವೆಂಕಟೇಶನೆ ನಮೊ ವೆಂಕಟೇಶನೆ ನಮೊ|
ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||
🙏🙏
ನಂತರ ಬ್ರಹ್ಮ ದೇವನ ಕುರಿತು
"ಸಿರಿ ಇಲ್ಲದ ಸಭೆಯು ಸರಿಬಾರದಯ್ಯ.ಗಗನದಲ್ಲಿ ನಕ್ಷತ್ರಗಳು ,ಚಂದ್ರ ಇಲ್ಲದೇ ಹೇಗೆ ಶೋಭಿಸದೋ?,ಮರಗಳು ಇಲ್ಲದ ಅರಣ್ಯ,ರೆಕ್ಕೆ ಇಲ್ಲದ ಪಕ್ಷಿಗಳು, ಅದೇ ರೀತಿ ಲಕ್ಷ್ಮೀ ದೇವಿ ಇಲ್ಲದ ಈ ಸಭೆ ಶೋಭಿಸದು" ಅಂತ ಹೇಳಿದನು.
ಅದಕ್ಕೆ ರುದ್ರ ದೇವನು ಭಗವಂತನಿಗೆ ಹೇಳುವರು. ನೀನು ಸ್ವರಮಣನು,ಸಂಗ ರಹಿತನು.ಕ್ಲೇಶವೆಂಬುವದೇ ನಿನ್ನ ಬಳಿ ಇಲ್ಲ.ಯಾಕೆ ಈ ರೀತಿಯಲ್ಲಿ ಕಣ್ಣೀರು ಹಾಕುವದು?? ಅಂತ ಕೇಳಿದಾಗ
ನೀನಿನ್ನು ಬಾಲಕ!!.ನಿನಗೇನು ತಿಳಿಯದು.ಪ್ರಳಯ ಕಾಲದಲ್ಲಿ ನನ್ನ ಜೊತೆಯಲ್ಲಿ ನನಗೆ ಹಾಸಿಗೆಯಾಗಿ,ಆಭರಣವಾಗಿ ಗೆಳತಿಯಾಗಿ ನನ್ನೊಡನೆ ಸದಾ ಇರುವಂತಹ ಲಕ್ಷ್ಮೀ ಯನ್ನು ಬಿಟ್ಟು ನನಗೆ ಇರಲು ಆಗುವುದಿಲ್ಲ ಅಂತ ಹೇಳಿ
ಸೂರ್ಯದೇವನನ್ನು ಕರೆದು ಕೊಲ್ಹಾಪುರ ಕ್ಕೆ ಹೋಗಿ ಲಕ್ಷ್ಮೀ ಯನ್ನು ಕರೆತರಲು ಹೇಳುತ್ತಾನೆ.
ಅದಕ್ಕೆ ಸೂರ್ಯನು
ನಾನು ಕರೆದರೆ ಹೇಗೆ ಜಗನ್ಮಾತೆ ಬರುವಳು ಪ್ರಭು!!?? ಎಂದಾಗ.ಅದಕ್ಕೆ ಭಗವಂತನು ಯುಕ್ತಿಯನ್ನು ಹೇಳುವ..
ನೀನು ಕಣ್ಣೀರು ಸುರಿಸುತ್ತಾ,ಒರೆಸಿಕೊಳ್ಳುತ್ತಾ ರಮಾದೇವಿಯ ಮನೆ ಬಾಗಿಲಲ್ಲಿ ನಿಂತು ಕರೆದಾಗ ಬಂದು ಸಮಾಧಾನ ಮಾಡುವಳು..
ಅವಾಗ ನೀನು
"ತಾಯಿ! ನಿನ್ನ ಪತಿಯಾದ ನಾರಾಯಣ ನು ಹಾಸಿಗೆ ಹಿಡಿದು ಮಲಗಿದ್ದಾನೆ.ಬದುಕುವನೋ ಅಥವಾ ಇಲ್ಲವೊ ತಿಳಿಯದು ಬಹಳ ಅಶಕ್ತನಾಗಿದ್ದಾನೆ ಬೇಗ ಹೊರಡು ಅಂತ ಅವಸರಿಸು".. ಎಂದು ಹೇಳುವನು.
ಅದಕ್ಕೆ ಸೂರ್ಯನು
ಸ್ವಾಮಿ!! ಸಕಲ ಲೋಕಗಳಿಗು ಜಗನ್ಮಾತೆ ಯಾದ, ಸರ್ವಜ್ಞೆಯಾದ, ಸಕಲವನ್ನು ತಿಳಿದ ಆ ತಾಯಿ ನನ್ನ ಮಾತನ್ನು ಹೇಗೆ ನಂಬುವಳು??
"ಯಾವಾತನ ನಾಮ ಸ್ಮರಣೆ ಇಂದ ಸಕಲ ರೋಗ ನಿವಾರಣೆ ಆಗುವದೋ ಅವನು ರೋಗಗ್ರಸ್ಥ ಅಂತ ಹೇಳಿದರೆ ತಾಯಿ ನಂಬುವಳೇ??" ಎಂದಾಗ....
ಅದಕ್ಕೆ ಶ್ರೀಕಾಂತ ನು
"ವತ್ಸ!!ಸೂರ್ಯ ಚಿಂತಿಸಬೇಡ.ನನ್ನ ಮಾಯೆ ಇಂದ ಲಕ್ಷ್ಮೀ ದೇವಿಯು ಸಹ ಮೋಹಿತಳಾಗಿ ನಿನ್ನ ಜೊತೆ ಬರುವಳು ಎಂದು ಹೇಳಿ ರಥವನ್ನು ಕೊಟ್ಟು ಕಳುಹಿಸುವನು.
ಅದರಂತೆ ಲಕ್ಷ್ಮೀ ದೇವಿಯು
ಶ್ರೀಹರಿಯ ಆದೇಶದಂತೆ ದೇಶ,ಮತ್ತು ಕಾಲಗಳಿಗೆ ತಕ್ಕಂತೆ
ಶ್ರೀಹರಿಯ ಆಚರಣೆಗೆ ತಕ್ಕಂತೆ ತಾನು ಸಹ ಅವನ ಮಾತನ್ನು ನಂಬಿದವಳಂತೆ ನಟಿಸುತ್ತಾ ಬಹು ಶೀಘ್ರವಾಗಿ ರಥದಲ್ಲಿ ಕುಳಿತು,ಬಹು ವೇಗವಾಗಿ, ಆತುರವಾಗಿ ಶ್ರೀನಿವಾಸನು ಇದ್ದ ಕಡೆ ಬರುವಳು.
ರಮಾದೇವಿ ಬಂದ ವಿಚಾರವನ್ನು ತಿಳಿದು ಭಗವಂತನು ಅಶಕ್ತನು, ರೋಗಗ್ರಸ್ತ ನು ಆದವನಂತೆ ಆಕಾರ ಧರಿಸಿ ತನ್ನ ಬಲತೋಳನ್ನು ಬ್ರಹ್ಮ ದೇವನಮೇಲೆ,ಎಡತೋಳನ್ನು ರುದ್ರ ದೇವನ ಮೇಲೆ ಇಟ್ಟು ಕೊಂಡು ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಾ ಬಂದನು..
ತನಗೆ ಬೇಕಾದ ಹಾಗೆ ರೂಪಧಾರಣೆ ಮಾಡುವ ,ಲೋಕ ಮಾನವರಂತೆ ವರ್ತನೆ ಮಾಡುವ ಭಗವಂತನ ಈ ನಾಟಕವು ಸಕಲ ದೇವತೆಗಳಿಗು ಋಷಿಗಳಿಗು ಆಶ್ಚರ್ಯಕರವಾಗಿ ಮತ್ತು ಸಂತಸಕರವಾಗಿ ತೋರಿತು.
ಬಂದ ರಮಾದೇವಿ ಈ ರೂಪ ವನ್ನು ಕಂಡು ಭಗವಂತನಿಗೆ ನಮಸ್ಕರಿಸಿ ಅವನನ್ನು ಆಲಂಗಿಸಿಕೊಂಡಳು.ಕೆಲ ಕ್ಷಣದಲ್ಲಿ ಭಗವಂತನು ಅತೀ ಪುಷ್ಟಿ ಉಳ್ಳವನಾಗಿ ಸುಂದರವಾಗಿ ಪತ್ನಿ ಸಮೇತ ಸಿಂಹಾಸನದ ಮೇಲೆ ಕುಳಿತನು.
ವಿವಾಹಕ್ಕೆ ಅತಿ ಮುಖ್ಯವಾಗಿ ಬೇಕಾಗುವ ದ್ರವ್ಯರಾಶಿ ನಾಲ್ಕು ಲಕ್ಷ ಸುವರ್ಣವನ್ನು ಕುಬೇರನಿಂದ ಸಾಲವಾಗಿತೆಗೆದುಕೊಂಡನು.ನಂತರ ವಿವಾಹ ಸಂಸ್ಕಾರಕ್ಕೆ ಪೂರಕವಾದ ಸುರಗಿಯ, ಮಂಗಳಸ್ನಾನ,ಅಲಂಕಾರ ಮಾಡಿಕೊಂಡು ,ಮಂಟಪ-ಕುಲದೇವತಾ ಸ್ಥಾಪನೆಯನ್ನು ಶ್ರೀವರಾಹಸ್ವಾಮಿಯ ಗುಡಿಯಲ್ಲಿ ಪ್ರತಿಷ್ಠಾಪಿಸಿ,ತಾನೇ ತನ್ನ ಕುಲದೈವವೆಂದು ಹೇಳಿಕೊಂಡ ಅಹೋಬಲ ಶ್ರೀಲಕ್ಷ್ಮೀ ನರಸಿಂಹದೇವರಿಗೆ ಭೂರಿಭೋಜನದ ಅಡುಗೆಯನ್ನು ಸಮರ್ಪಣೆ ಮಾಡಿ,ದೇವತೆಗಳಿಗೆ ಭೂರಿ ಭೋಜನಾದಿಗಳನ್ನು ಮಾಡಿಸಿ,ದೇವತೆಗಳ ಸಂಗಡ ಆಕಾಶರಾಜನ ಪಟ್ಟಣಕ್ಕೆ ತನ್ನ ಬಂಧು-ಬಾಂಧವರ ಜೊತೆಗೂಡಿ ಬಂದು ನವಮಿ ದಿನ ಅಂದರೆ ವಿವಾಹಕ್ಕೆ ಹಿಂದಿನ ದಿನದಲ್ಲಿ ಆತಿಥ್ಯ ಸ್ವೀಕಾರ ಮಾಡುವನು. .
ಶ್ರೀನಿವಾಸದೇವರು
ಆಕಾಶರಾಜನಿಂದ ದಿಬ್ಬಣ ಪೂಜೆಯನ್ನು ಮುಗಿಸಿಕೊಂಡು,ರಾಜಗೃಹಕ್ಕೆ ಬಂದು, ಆ ರಾತ್ರಿಯ ಆದರ-ಆತಿಥ್ಯಗಳನ್ನು ಸ್ವಿಕರಿಸಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡು
ಮರುದಿನ ವೈಶಾಖ ಶುದ್ಧ ದಶಮಿಯಂದು ಬ್ರಹ್ಮಾದಿ ಸರ್ವ ದೇವತೆಗಳ ಅಧಿಷ್ಠಾನದಲ್ಲಿ ಬೃಹಸ್ಪತ್ತ್ಯಾಚಾರ್ಯಾದಿ ಅನೇಕ ಋಷಿಮುನಿಗಳ ಅಧ್ವರ್ಯದಲ್ಲಿ "ದೇವಾಗ್ನಿ ದ್ವಿಜ ಸನ್ನಿಧೌ"ಎಂದು ಮುಂದಿನ ಜನಾಂಗದ ಅನುಕರಣೆಗೊಸ್ಕರ ನಮಗೆ ವಿವಾಹದ ಕ್ರಮ ತಿಳಿಸಲೋಸುಗ ಶ್ರೀಪದ್ಮಾವತಿಯನ್ನು ಶ್ತೀಶ್ರೀನಿವಾಸದೇವರು ಪಾಣಿಗ್ರಹಣವನ್ನು ಮಾಡಿಕೊಂಡು,ಮಾವನೊಂದಿಗೆ ಎಲ್ಲಾ ಗೌರವಾದಿಗಳನ್ನು ಸ್ವಿಕರಿಸಿ ಅಗಸ್ತ್ಯಾಶ್ರಮಕ್ಕೆ ಬಂದು ಆರು ತಿಂಗಳುಗಳ ಕಾಲ ಅಲ್ಲಿಯೇ ಇದ್ದು ನಂತರ ಬೆಟ್ಟವನ್ನೇರಿ ತನ್ನ ಸ್ವಸ್ಥಾನವನ್ನು ಅಲಂಕರಿಸಿ ಅಂದಿನಿಂದ ಇಂದಿಗೂ ಭಕ್ತರನ್ನು ಉದ್ದರಿಸುತ್ತ ವೆಂಕಟಾದ್ರಿಯಲ್ಲಿ ನೆಲಸಿರುವನು..
🙏ಶ್ರೀ ಕೃಷ್ಣಾರ್ಪಣಮಸ್ತು🙏
ಒಲಿದು ಭಕುತರಿಗಾಗಿ ಮದುವೆ
ಹವಣಿಸಿಕೊಂಡ|
ಸುಲಭ ದೇವರ ದೇವ
ವಿಜಯವಿಠ್ಠಲ ವೆಂಕಟ|
🙏ಶ್ರೀನಿವಾಸ ದಯಾನಿಧೆ🙏
*****
ಶತಾನಂದರು ಜನಕರಾಜನಿಗೆ ಈ ಶ್ರೀನಿವಾಸ ಕಲ್ಯಾಣವನ್ನು ಶ್ರವಣ ಮಾಡಿದರ ಫಲವನ್ನು ಹೇಳುತ್ತಾರೆ.
ಕೋಟಿ ಕನ್ಯಾದಾನ ಮಾಡಿದ ಫಲ,ಭೂದಾನ ಮಾಡಿದ ಫಲ, ಈ ಕಥೆಯನ್ನು ಕೇಳುವದರಿಂದ ಬರುವದು..
ಇದನ್ನು ಶ್ರವಣ ಮಾಡಿಸಿದವರಿಗು,ಕಥೆಯನ್ನು ಹೇಳಿದವರಿಗು,ಕೇಳಿದವರಿಗು ಸಹ ಸಮಸ್ತ ಅಭೀಷ್ಟಗಳು ನೆರವೇರುತ್ತದೆ..
ಸರ್ವರಿಗು ಇದರಿಂದ ಮಂಗಳುಂಟಾಗುವದು.ಅಂತ ಹೇಳಿ ಮಂಗಳವನ್ನು ಆಚರಿಸಿದರು..
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಸಂಪೂರ್ಣ ವಾದುದು.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ನವಮಿ ಮೇಲೆ ದಶಮಿ ತಿಥಿ ಬಂದ ಕಾರಣದಿಂದಾಗಿ ಅವಸರದಲ್ಲಿ ಬರೆದು ಮುಗಿಸಬೇಕಾಯಿತು.
ನಾಳೆಯ ದಿನ ವಿಸ್ತಾರವಾಗಿ ಕಲ್ಯಾಣದ ವೈಭವವನ್ನು ತಿಳಿಸುವ ಪ್ರಯತ್ನ.
🙏🙏🙏
ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ|
ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟ||
🙏ಅ.ವಿಜಯವಿಠ್ಠಲ🙏
************
||ಶ್ರೀನಿವಾಸ ಕಲ್ಯಾಣ ಮಹಾತ್ಮೆ|| day 10
ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ|
ಸುಲಭ ದೇವರ ದೇವ ವಿಜಯವಿಠ್ಠಲ||
🙏🙏🙏🙏
ಶ್ರೀನಿವಾಸ ಕಲ್ಯಾಣ ವಿಸ್ತಾರವಾದ ವಿವರಣೆ|
✍ದಶಮಿ ಶುಕ್ರವಾರ ಸಾಯಂಕಾಲ ಸಮಯದಲ್ಲಿ.
ಆಕಾಶರಾಜನು ಸಮಸ್ತ ಚತುರಂಗ ಬಲವನ್ನು ಮುಂದಿಟ್ಟುಕೊಂಡು ಮಗನಾದ ವಸುಧಾನನನ್ನು ಮುಂದೆ ಮಾಡಿಕೊಂಡು ತನ್ನ ಸಹೋದರ ತೋಂಡಮಾನ ಮಿತ್ರರು ಬಂಧು ಗಳ ಪರಿವಾರ ದೊಂದಿಗೆ ಪುರೋಹಿತ ಸಹಿತವಾಗಿ ಅಲಂಕೃತವಾದ ಐರಾವತವನ್ನು ಮುಂದೆ ಇಟ್ಟುಕೊಂಡು ಹೊರಟನು.
ಇಂದ್ರನ ಐರಾವತವು ರತ್ನ ಕಂಬಳಿ ಇಂದ ಅಲಂಕೃತ ವಾಗಿ,ಘಂಟೆಗಳ ಮಾಲೆಯಿಂದ ಸಿಂಗರಿಸಿದ,ಮೇಘದಂತೆ ಗಂಭೀರ ಘರ್ಜನೆ ಮಾಡುವ,ಕಿವಿಗೆ ಚಾಮರವನ್ನು ಕಟ್ಟಿದ ನಾಲ್ಕು ದಂತಗಳಿರುವ ಐರಾವತ ವನ್ನು ಮುಂದೆ ಮಾಡಿಕೊಂಡು ವಿಶ್ವಕರ್ಮನಿಂದ ನಿರ್ಮಿತವಾದ ಶ್ರೀನಿವಾಸ ನ ಬಿಡಾರಕ್ಕೆ ಬಂದನು.
ಹತ್ತು ಸಾವಿರ ಕಂಬಗಳಿಂದ ದೇದಿಪ್ಯಮಾನವಾಗಿ ಅವನ ಬಿಡಾರ ಕಂಗೊಳಿಸುತ್ತಾ ಇತ್ತು.
ಆ ಮಹಾಸಭೆಯಲ್ಲಿ ಬ್ರಹ್ಮಾದಿ ಸಕಲ ದೇವತೆಗಳು,
ವಿಶ್ವಾಮಿತ್ರ, ಭಾರದ್ವಾಜ, ವಸಿಷ್ಠ, ಗೌತಮ,ಭೃಗು ಅತ್ರಿ,ಪುಲಸ್ಯ,ವಾಲ್ಮೀಕಿ ಮುಂತಾದ ಮಹರ್ಷಿಗಳು
ವೈಖಾಸನರು ದೂರ್ವಾಸರು,ಮಾರ್ಕಂಡೇಯ ಗಾಲವ,ದಧೀಚಿ,ಚ್ಯವನ, ಸನಕ, ಸನಂದನರು,ಮೊದಲಾದ ಭಗವಂತನ ಭಕ್ತರು ಜಟಾ ಕಿರೀಟ ಧರಿಸಿ ಕೃಷ್ಣಾಜಿನ ವಸ್ತ್ರ ಧಾರಿಗಳಾಗಿ ತಮ್ಮ ತಮ್ಮ ಆಸನಗಳಲ್ಲಿ ಕುಳಿತಿದ್ದರು.
ಅವರ ಮಧ್ಯಭಾಗದಲ್ಲಿ ಶ್ರೀನಿವಾಸ ರತ್ನ ಗಂಬಳಿಯ ಮೇಲೆ ಕುಳಿತಿದ್ದನು..ಆತನ ಸಮೀಪದಲ್ಲಿ ಬ್ರಹ್ಮ ದೇವನು ಕರ ಜೋಡಿಸಿ ಕುಳಿತಿದ್ದನು.
ಆಕಾಶರಾಜನು ವರನಾದ ಶ್ರೀನಿವಾಸ ನನ್ನು ಕರೆದುಕೊಂಡು ಹೋಗಲು ಕುಲಪುರೋಹಿತರಾದ ಬೃಹಸ್ಪತಿ ಯನ್ನು ಮುಂದೆ ಮಾಡಿಕೊಂಡು ಆ ಸಭೆಗೆ ಬಂದನು.
ಬಂದಂತಹ ಆಕಾಶರಾಜನನ್ನು ಕಂಡು ಶ್ರೀನಿವಾಸನು ತಟ್ಟನೆ ಆಸನದಿಂದ ಎದ್ದು ಸ್ವಾಗತಿಸಿ ಆಲಂಗಿಸಿಗೊಂಡು "ವಯೋವೃದ್ದರಾದ ನೀವು ನನ್ನ ಕರೆದೊಯ್ಯುವ ಬದಲು ನಿಮ್ಮ ಮಗನನ್ನು ಕಳುಹಿಸಿದರೆ ಸಾಕಾಗಿತ್ತು" ಎಂದನು.
ತಕ್ಷಣ ಆಕಾಶರಾಜನು ಪುರೋಹಿತರ ಅಪ್ಪಣೆ ಕೇಳಿದಾಗ ಬೃಹಸ್ಪತಿ ಆಚಾರ್ಯರು
"ಅಮ್ಮ! ಧರಣಿದೇವಿ ವಸಿಷ್ಠ ರ ಪತ್ನಿಯಾದ ಅರುಂಧತಿ ಯನ್ನು ಮುಂದೆ ಇಟ್ಟುಕೊಂಡು ಶ್ರೀನಿವಾಸ ನಿಗೆ ಪೂಜೆಯನ್ನು ಮಾಡುವವಳಾಗು" ಎನ್ನಲು
ಅದರಂತೆ ಧರಣಿದೇವಿಯು ಮಾಡಲು ಸಕಲರು ಭಗವಂತನಿಗೆ ಪೂಜೆ ಮಾಡುವ ಭಾಗ್ಯ ಸಿಕ್ಕ ಧರಣಿ ದೇವಿಯನ್ನು ಹೊಗಳಿದರು.
ನಂತರ ಶ್ರೀನಿವಾಸ ಆನೆಯ ಮೇಲೆ ಲಕುಮಿ ಸಹಿತ ಕುಳಿತಾಗ
ಸಪತ್ನಿ ಸಮೇತರಾಗಿ ಬ್ರಹ್ಮಾದಿ ದೇವತೆಗಳು,ಸಕಲ ಋಷಿ ಮುನಿಗಳು ೪೯ಮರುತ್ತುಗಳು,ಅಷ್ಟ
ವಸುಗಳು,ಏಕಾದಶ ರುದ್ರ ರು ,ದ್ವಾದಶಾದಿತ್ಯರು ಇವರುಗಳಿಂದ ಕೂಡಿದವನಾಗಿ ಆಕಾಶರಾಜನು ನಿರ್ಮಿಸಿದ ಕಲ್ಯಾಣಮಂಟಪಕ್ಕೆ ಬಂದನು.
ನಂತರ ಅಲ್ಲಿ ನಿರ್ಮಾಣ ಮಾಡಿಸಿದ್ದ ನವರತ್ನ ಮಯ ಸಿಂಹಾಸನದಲ್ಲಿ ಭಗವಂತ ಆಸೀನನಾದನು.ಅವನ ಸುತ್ತಲೂ ಬ್ರಹ್ಮಾದಿ ದೇವತೆಗಳು ಆಸೀನರಾದರು.
ಪತ್ನಿ ಸಮೇತವಾಗಿ ಆಕಾಶರಾಜ ಸಂಕಲ್ಪ ವನ್ನು ಮಾಡಿ ಸ್ವಾಮಿ ಪುಷ್ಕರಣಿ ಜಲವನ್ನು ಧಾರಾಕಾರವಾಗಿ ಭಗವಂತನ ಪಾದಗಳಿಗೆ ಹಾಕುತ್ತಾ ಇರಲು,ಪುರೋಹಿತರು "ಸಹಸ್ರ ಶೀರ್ಷಾ ಪುರುಷ" ಎಂದು ಮಂತ್ರ ಪಠಣ ಮಾಡುತ್ತಾ ಇರಲು.ಆ ಪಾದೋದಕವನ್ನು ಆಕಾಶರಾಜನು ತನ್ನ ಶಿರದಲ್ಲಿ ಧರಿಸಿದನು.ನಂತರ ತನ್ನ ಪತ್ನಿ ಪುತ್ರ ಹಾಗು ಸಕಲ ಬಂಧುಗಳು,ತನ್ನ ಅರಮನೆಯಲ್ಲಿ ಎಲ್ಲಾ ಕಡೆ ಪ್ರೋಕ್ಷಣೆ ಮಾಡಿ ಕೃತಾರ್ಥನಾದನು.
ನಂತರ ಅನೇಕ ಉಡುಗೊರೆಗಳನ್ನು ಶ್ರೀನಿವಾಸ ನಿಗೆ ಅರ್ಪಿಸಿದ. ಇದಾದ ಮೇಲೆ ಪದ್ಮಾವತಿ ದೇವಿಯು ಅಲಂಕೃತ ಳಾಗಿ ವೇದಿಕೆ ಮೇಲೆ ಬಂದಾಗ ಜೀರಿಗೆ ಬೆಲ್ಲವನ್ನು ಕೈಗೆ ಕೊಟ್ಟು ಅಕ್ಕಿ ಯ ರಾಶಿಯ ಮೇಲೆ ನಿಲ್ಲಿಸಿದರು.
ನಂತರ ಪುರೋಹಿತರು ಪಶ್ಚಿಮಾಭಿಮುಖವಾಗಿ ಇದ್ದ ಶ್ರೀನಿವಾಸನನ್ನು ಪೂರ್ವಾಭಿಮುಖವಾಗಿ, ಪದ್ಮಾವತಿ ಯನ್ನು ಪಶ್ಚಿಮ ಅಭಿಮುಖವಾಗಿ ನಿಲ್ಲಿಸಿ, ದರ್ಭೆಇಂದ ವಧುವಿನ ಹಣೆಯನ್ನು ಒರೆಸಿ ಆಚೆ ಬಿಸಾಡಿ ಅನಿಷ್ಟ ಪರಿಹಾರ ಕ್ರಿಯೆಯನ್ನು ಮಾಡಿದರು..
ನಂತರ ಮಂಗಳವಾದ್ಯಗಳು ಮೊಳಗಿದವು.ಮಂಗಳಾಷ್ಟಕ ಮುಗಿದ ಮೇಲೆ ಅಂತಃಪಟವನ್ನು ವಸಿಷ್ಠ ರು ಸೆಳೆದರು.ಆಗ ಶ್ರೀನಿವಾಸ ಪದ್ಮಾವತಿಯರು ಪರಸ್ಪರ ವಾಗಿ ಜೀರಿಗೆ ಬೆಲ್ಲ,ಅಕ್ಷತೆ ಕಾಳುಗಳನ್ನು ಎರಚಿಕೊಂಡರು.
ನಂತರ ಪುರೋಹಿತರು ಮಹೂರ್ತ ನಿರೀಕ್ಷಣೆ ಮಾಡಿ ಮಂಗಳಾಷ್ಟಕವನ್ನು ಪಠಣ ಮಾಡಿ ಸುಮಹೂರ್ತೆ ಸಾವಧಾನ| ಸುಲಗ್ನಾ ಸಾವಧಾನ|| ಎಂದು ಹೇಳುತ್ತಾ ಗಂಟೆ ಯನ್ನು ಬಾರಿಸಿದರು.
ಬೃಹಸ್ಪತಿ ಯು ವಧುವಿನ ಕಡೆ ಪುರೋಹಿತರು. ಅವರು ಪ್ರವರವನ್ನು ಹೇಳಿದ ಹಾಗೆ ಆಕಾಶರಾಜನು ಹೇಳುವನು..
"ಅತ್ರಿ ಗೊತ್ರದಲ್ಲಿ ಜನಿಸಿರುವ,ಸುವೀರರಾಜನ ಮರಿಮಗಳಾದ, ಸುಧರ್ಮರಾಜನ ಮೊಮ್ಮಗಳಾದ,ಆಕಾಶರಾಜನ ಮಗಳಾದ ಕಮಲದಂತೆ ಕಣ್ಣು ಉಳ್ಳವಳಾದ ಪದ್ಮಾವತಿ ಎಂಬ ಸಾಲಂಕೃತ ಅಲಂಕಾರ ಗೊಂಡ ಕನ್ಯೆ ಯನ್ನು ನಿನಗೆ ಕನ್ಯಾದಾನವಾಗಿ ನೀಡುತ್ತಾ ಇರುವೆನು ಸ್ವೀಕರಿಸು ಎಂದು ಹೇಳಿದನು"..
ನಂತರ ವಧೂ ವರರ ಮಧ್ಯದಲ್ಲಿ ರತ್ನ ಮಯ ಶಾಲನ್ನು ಅಡ್ಡಹಿಡಿದರು.
ಗಂಡಿನ ಕಡೆಯ ಪುರೋಹಿತ ರಾದ ವಸಿಷ್ಠ ರು ವರನ ಪ್ರವರವನ್ನು ಉಚ್ಚಾರಣೆ ಮಾಡಿದರು.
ಅದರಂತೆ ಶ್ರೀನಿವಾಸ ಹೇಳುವನು.
"ಯಯಾತಿ ಮಹಾರಾಜನ ಮರಿ ಮಗನಾದ,ಶೂರಸೇನ ರಾಜನ ಮೊಮ್ಮಗ ನಾದ,ವಸುದೇವನ ಪುತ್ರನು ಆದ,ವಸಿಷ್ಠ ಗೋತ್ರದವನಾದ ಶ್ರೀನಿವಾಸ ನೆಂಬ ನಾಮಧೇಯವುಳ್ಳ ನಾನು ನಿನ್ನ ಇಂದ ಕನ್ಯಾದಾನವಾಗಿ ಕೊಡಲ್ಪಡುತ್ತಿರುವ ಈ ಕನ್ಯೆಯನ್ನು ಸ್ವೀಕಾರ ಮಾಡುತ್ತಾ ಇದ್ದೇನೆ."
ನಂತರ ಆಕಾಶರಾಜನು ಸುಗಂಧ,ವಸ್ತ್ರ, ಲೇಪನಾದಿಗಳಿಂದ ಶ್ರೀನಿವಾಸ ನನೆ ಪೂಜಿಸಿ ವಾಸುದೇವನ ಕರ ಕಮಲದಲ್ಲಿ ಕಂಕಣವನ್ನು ಕಟ್ಟಿದನು.
ಬೃಹಸ್ಪತಿ ಆಚಾರ್ಯರು ಪದ್ಮಾವತಿ ಕರಾಂಬುಜದಲ್ಲಿ ಕಂಕಣ ಬಂಧನ ಮಾಡಿದರು.
ಆ ನಂತರದಲ್ಲಿ ದೇವದೇವನಾದ ಶ್ರೀನಿವಾಸ ನಿಂದ ಪೂಜೆ ಮಾಡಲ್ಪಟ್ಟ ಮಾಂಗಲ್ಯಸೂತ್ರಕ್ಕೆ ರಾಜನು ತಮ್ಮ ಮನೆಯ ಕರಿಮಣಿಗಳನ್ನು ಸೇರಿಸಿ,ಅದನ್ನು ಪೂಜಿಸಿದರು..
ದೇವ ದೇವ ನಿಗೆ ಕನ್ಯಾದಾನ ಮಾಡುವ ತಮ್ಮ ಭಾಗ್ಯವನ್ನು ನೆನೆದು ಆನಂದ ವನ್ನು ಪಟ್ಟರು.ದಂಪತಿಗಳ
ಕಣ್ಣು ಗಳಿಂದ ಧಾರಾಕಾರವಾಗಿ ಆನಂದ ಭಾಷ್ಪಗಳು.
ಅರುಂಧತಿ ವಸಿಷ್ಠ ಮೊದಲಾದವರು ಆ ಪವಿತ್ರವಾದ ಮಾಂಗಲ್ಯ ವನ್ನು ಮುಟ್ಟಿದ ನಂತರ ಆ ಮಂಗಳ ಸೂತ್ರವನ್ನು ಶ್ರೀನಿವಾಸನು ಕರದಲ್ಲಿ ಹಿಡಿದು
"ಮಾಂಗಲ್ಯಂ ತಂತುನಾನೇನ|
ಜಗಜ್ಜೀವನ ಹೇತುನಾ|
ಕಂಠೇ ಬಧ್ನಾಮಿ ಸುಭಗೆ ಚಿರಂಜೀವ ಮಯಾ ಸಹ"|
"ಜಗತ್ತಿನ ಜೀವನಕ್ಕೆ ಕಾರಣವಾಗಿರುವ ಈ ಮಂಗಳಸೂತ್ರವನ್ನು ಪದ್ಮಾವತಿ ನಿನ್ನ ಕೊರಳಲ್ಲಿ ಕಟ್ಟುತ್ತೇನೆ.ನೀನು ನನ್ನ ಸಹಧರ್ಮಿಣಿಯಾಗಿ ನನ್ನ ಜೊತೆಯಲ್ಲಿ ಚಿರಕಾಲ ಬಾಳು" ಎಂಬ
ಈ ಮಂತ್ರವನ್ನು ಹೇಳಿ ಶ್ರೀನಿವಾಸನು ಪದ್ಮಾವತಿ ದೇವಿಯ ಕೊರಳಲ್ಲಿ ಮಂಗಳಸೂತ್ರವನ್ನು ಕಟ್ಟಿದನು.
ಕಟ್ಟಿದ ಮಂಗಳ ಸೂತ್ರವ
ಆ ಬಳಿಕ ವಿವಾಹಕ್ಕೆ ಸಂಭಂದಿಸಿದ ಎಲ್ಲಾ ಸಕಲ ಕಾರ್ಯಕಲಾಪಗಳನ್ನು ಪುರೋಹಿತರು ಪೂರ್ಣಗೊಳಿಸಿದರು.
🙏🙏🙏🙏
ಮಂಗಳಂ ಮಂಗಳಂ|
ಒದಗಿ ಮಹೂರ್ತಕ್ಕೆ ಬಂದವಗೆ|
ಸದಯ ಹೃದಯನಾಗಿರುವವಗೆ|
ಮುದದಿಂದಲಿ ಶ್ರೀ ಪದುಮಾವತಿಯಳ ಮದುವೆ|
ಮಾಡಿಕೊಂಡ ಮದುಮಗಗೆ| ಮಂಗಳಂ
ಬೆಟ್ಟದೊಡೆಯನ ಈ ವಿಶಿಷ್ಟ ಕತೆಯನ್ನು|
ಬಹಳ ನಿಷ್ಠೆ ಯಲಿ ಕೇಳಿದರೆ| ಎಷ್ಟು ಪೇಳಲಿ ಫಲವ|
ಕಷ್ಟ ದೂರಾಗುವದು|,ಕಟ್ಟುವದು ಕಲ್ಯಾಣ ,|ದುಷ್ಟ ಗ್ರಹ ಗಳ ಬಾಧೆ ಬಿಟ್ಟು ಓಡುವದು|
ಕಷ್ಟದಲಿ ಪುತ್ರಕಾಮೇಷ್ಟಿ ಯಾಗ ಮಾಡಿದ ಫಲವು|,ಇಷ್ಟರಿಂದಲೆ ಕೊಡುವ ಇಷ್ಟದಾಯಕ ಹರಿಯು||
ಕೊಟ್ಟು ಸಲಹುವ ಮತ್ತೆ ತುಷ್ಟನಾಗುತ| ಕರೆದ ಅಭೀಷ್ಟವನು ಕೊಡುವ| ಎಲ್ಲಾ ಕೊಟ್ಟು ಬಿಡುವನು ಮುಕ್ತಿ ಕಟ್ಟ ಕಡೆಗೆ.||
🙏ಶ್ರೀ ಕೃಷ್ಣಾರ್ಪಣಮಸ್ತು🙏
ವರ ವೈಕುಂಠದಿ ಬಂದವಗೆ|
ವರಾಹ ಗಿರಿಯಲಿ ನಿಂತವಗೆ|
ಮಂಗಳಂ ಜಯ ಮಂಗಳಂ|🙏ಅ.ವಿಜಯವಿಠ್ಠಲ🙏
***
ಭೂರಿ ದಕ್ಷಿಣಃ
✍️ತನ್ನ ಮಾವನಾದ ಆಕಾಶ ರಾಜನಿಂದ ಕನ್ಯಾದಾನದ ಅಂಗವಾಗಿ ತುಂಬಾ ವರದಕ್ಷಿಣೆ ಯನ್ನು ಪಡೆದವನು ಯಾರೆಂದರೆ ಅವನೇ ಶ್ರೀನಿವಾಸ. ದೇವದೇವನ ಇನ್ನೊಂದು ಹೆಸರು ಭೂರಿದಕ್ಷಿಣಃ..
ಕನ್ಯಾದಾನ ಮಾಡುವ ಸಮಯದಲ್ಲಿ ಆಕಾಶರಾಜನು ಕೋಟಿ ಸುವರ್ಣ ನಾಣ್ಯದ ರಾಶಿಯನ್ನು ಭಗವಂತನಿಗೆ ಸಮರ್ಪಣೆ ಮಾಡಿದನು.
ನಂತರ ದಲ್ಲಿ
2000 ಭಾರ ತೂಕದ (೨೦೦೦ತೊಲ) ತೂಕದ ಸುವರ್ಣ ಕಿರೀಟ ವನ್ನು,ಜೊತೆಗೆ ಅಷ್ಟೇ ತೂಕದ ಟೊಂಕದ ಪಟ್ಟಿಯನ್ನು, ಭುಜ ಕಿರೀಟವನ್ನು, ಗೆಜ್ಜೆ ಗಳನ್ನು ,ಅದರ ಅರ್ಧ ತೂಕದ ೧೦೦೦(1000) ತೊಲ ಭಾರವುಳ್ಳ ರತ್ನ ದ ಪಾದುಕೆಗಳು, ಏಳು ಪದಕಗಳನ್ನು, ಮುತ್ತಿನ ಮಾಲೆಗಳನ್ನು,ರಟ್ಟೆ ಬಳೆಗಳನ್ನು, ಮಕರ ಕರ್ಣ ಕುಂಡಲ ಗಳನ್ನು ,ನವರತ್ನ ಗಳಿಂದ ರಚಿತವಾದ ೩೨(32) ತೊಲೆಯ ತೂಕದ ಕಂಕಣಗಳನ್ನು,೧೧೧(111) ತೊಲೆಯ ವಜ್ರಕಟ್ಟಿದ ಕಟಿ ಸೂತ್ರವನ್ನು,ಪಾದುಕೆಗಳು ಉಂಗುರುಗಳು ಹತ್ತು ಬೆರಳಿಗೆ,೬೦ (60)ತೊಲೆಯ ಭೋಜನ ಪಾತ್ರೆ ಸುವರ್ಣದ ತಟ್ಟೆ, 64 ರತ್ಬ ಗಂಬಳಿಗಳನ್ನು,ನೀರು ಕುಡಿಯುವ ಸುವರ್ಣ ಲೋಟಗಳನ್ನು,ರಜತ ಸ್ವರ್ಣ ಪಾತ್ರೆಗಳನ್ನು ಹಂಡೆ,ಕೊಡ,ತಂಬಿಗೆ ಮತ್ತು ಅನೇಕ ನವರತ್ನದ ಆಭರಣಗಳು ಕೊಟ್ಟನು.
🙏ಶ್ರೀ ಕೃಷ್ಣಾರ್ಪಣಮಸ್ತು🙏
|ಈ ಪರಿಯ ಸೊಬಗು ಇನ್ನಾವ ದೇವರಲ್ಲಿ ನಾ ಕಾಣೆ||
🙏ಶ್ರೀನಿವಾಸ ದಯಾನಿಧೆ🙏
************
srinivasa kalyana devaranama by hayavadana
****

🌺ಶ್ರೀನಿವಾಸೇsಸ್ತು ಮೇ ಮನಃ🌺
🌷🌹ಶ್ರೀನಿವಾಸ ಚಿಂತನ 🌹🌷
( ಶ್ರೀನಿವಾಸ ಕಲ್ಯಾಣಮಹೋತ್ಸವ ವಿಶೇಷ ಸಂಚಿಕೆ -1)
|| ವೇಂಕಟಾದ್ರಿಯ ಮಹಿಮೆ ||
ದಿವ್ಯೊಯಂ ಪರ್ವತೆಂದ್ರಸ್ತು ನ ಪುನಃ ಪ್ರಾಕೃತೋ ಗಿರಿಃ |
ಸ್ವರೂಪಂ ತಸ್ಯ ಶೈಲಸ್ಯ ನ ತು ಜಾನಾಂತಿ ಮಾನುಷಾಃ ||
ಈ(ವೇಂಕಟ) ಪರ್ವತವು ಪ್ರಾಕೃತ ಶಿಲೆಯಿಂದಾದ್ದಲ್ಲ ದಿವ್ಯವಾದದ್ದು ಇದರ ಸ್ವರೂಪ ದೇವತೆಗಳು ತಿಳಿಯಬಹುದು -ಮಾನುಷರಿಗೆ ಸಾಧ್ಯವಿಲ್ಲ .
ಯೋಜನತ್ರಯ ವಿಸ್ತಾರಂ ತ್ರಿಂಶದ್ ಯೋಜನಮಾಯುತಂ |
ಅಪ್ರಾಕೃತ ಮಮೇಯಂ ಚ ಸರ್ವರತ್ನಮಯಂ ಗಿರಿಮ್ |
ಹಿರಣ್ಮಯಂ ಮಹಾಶೃಂಗಂ ಪಂಚೋಪನಿಷದಾತ್ಮಕಮ್ ||
ಈ ಪರ್ವತ ಸಾಧರಣ ಪರ್ವತವಲ್ಲ -ಉಪನಿಷತ್ ಸ್ವರೂಪವಾದದ್ದು ಮೂರುಯೋಜನ ವಿಸ್ತ್ರತವಾಗಿಯೂ ಮೂವತ್ತು ಯೋಜನೆ ಅಗಲವಾಗಿಯೂ ಇರುವ ಗಿರಿ ,ಅಪ್ರಾಕೃತವೂ ಹಿರಣ್ಮಯವೂ ಸರ್ವರತ್ನಮಯವಾದದ್ದು .
-ವರಾಹಪುರಾಣ 34ನೇ ಅಧ್ಯಾಯ
ವೇಂಕಾರೋ ಅಮೃತಬೀಜಸ್ತು ಕಟಮೈಶ್ವರ್ಯ ಮುಚ್ಯತೇ |
ಅಮೃತಮೈಶ್ವರ್ಯ ಸಂಘತ್ವಾತ್ ವೇಂಕಟಾದ್ರಿರಿತಿ ಸ್ಮೃತಃ ||
ವೆಂಕಾರ ಅಮೃತಬೀಜವೇನಿಸಿದೆ ,ಕಟವೆಂದರೆ ಐಶ್ವರ್ಯ .ಅಮೃತ =ಮೋಕ್ಷ , ಐಶ್ವರ್ಯ =ಲೌಕಿಕ ಸಂಪತ್ತು ಎರಡನ್ನೂ ನಿಡುವ ಗಿರಿ ವೆಂಕಟಗಿರಿ .
-ವರಾಹ ಪುರಾಣ 1-4-31
🌷ವೇಂಕಟಾಚಲದ ಶೃಂಗಾಗ್ರದರ್ಶನದ ಫಲ🌷
ವೆಂಕಟಾಚಲ ಶೃಂಗಾಗ್ರೇ ದೃಷ್ಟಮಾತ್ರೇ ಹಲಾಯುಧಃ |
ತೀರ್ಥಯಾತ್ರಫಲಂ ಕೃತ್ಸ್ನಂ ಪ್ರಾಪ್ತವಾನಿತಿ ಮೇ ಶ್ರುತಮ್ |
ಶಿಖರಂ ಯಸ್ಯ ದೃಷ್ಟೈವ ಸದ್ಯಃ ಪಾಪೈಃ ಪ್ರಮುಚ್ಯತೇ ||
ವೆಂಕಟಾಚಲದ ಶಿಖರದ ಅಗ್ರಭಾಗವನ್ನು ನೋಡಿದ ಮಾತ್ರಕ್ಕೆ ಬಲರಾಮನು ತೀರ್ಥಯಾತ್ರಫಲವನ್ನು ಹೊಂದಿದನು .ನಾವೂ ಸಹ ಶಿಖರವನ್ನು ನೋಡಿದ ಮಾತ್ರಕ್ಕೆ ಸದ್ಯ ಸರ್ವಪಾಪ ನಿವೃತ್ತಿಯಾಗುವುದು .
-ವರಾಹಪುರಾಣ 8-22
🌹ಭೂಮಿಪ್ರದಕ್ಷಿಣೆಯ ಫಲ🌹
ವೆಂಕಟಾಹ್ವೋ ನರೋ ಗತ್ವಾ ಕುರ್ಯಾತ್ ತಸ್ಯ ಪ್ರದಕ್ಷಿಣಮ್ |
ಭೂಮಿಪ್ರದಕ್ಷಿಣೇ ಪುಣ್ಯಂ ಯತ್ ತತ್ಪುಣ್ಯಮವಾಪ್ನುಯಾತ್ ||
ವೇಂಕಟಪರ್ವತವನ್ನೇರಿ ಶ್ರೀನಿವಾಸನನ್ನು ಪ್ರದಕ್ಷಿಣೆ ಬಂದವನಿಗೆ ಭೂಮಂಡಲ ಪ್ರದಕ್ಷಿಣೆ ಹಾಕಿದ ಪುಣ್ಯವು .
-ವರಾಹಪುರಾಣ 1-8-21
ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ |
ವೇಂಕಟೇಶಸಮದೇವೋ ನ ಭೂತೋ ನ ಭವಿಷ್ಯತಿ ||
ವೇಂಕಟಾಚಲಕ್ಕೆ ಸಮಾನವಾದ ಸ್ಥಾನ ಬ್ರಹ್ಮಾಂಡದಲ್ಲಿ ಮತ್ತೊಂದಿಲ್ಲ .ವೇಂಕಟೇಶನಿಗೆ ಸಮಾನನಾದ ದೈವ ಹಿಂದೆಯೂ ಇರಲಿಲ್ಲ ;ಈಗಲೂ ಇಲ್ಲ ಮುಂದೆಯೂ ಬರುವುದಿಲ್ಲ .
-ಬ್ರಹ್ಮಾಂಡ ಪುರಾಣ
ಸಮಸ್ತಸುಜನಾಧಾರಂ ದೋಷದೂರಂ ಗುಣಾಕರಮ್ |
ಶ್ರೀವೆಂಕಟಾಚಲಾವಾಸಂ ಶ್ರೀನಿವಾಸಂ ಭಜೇsನಿಶಮ್ ||
ಎಲ್ಲಾ ಸಜ್ಜನರಿಗೆ ಆಶ್ರಯನು ನಿರರ್ದೋಷನು ಗುಣಪೂರ್ಣನು ಶ್ರೀವೇಂಕಟಾಚಲನಿವಾಸಿಯು ಆದ ಶ್ರೀನಿವಾಸನ್ನು ನಿರಂತರವಾಗಿ ಆಶ್ರಯಿಸುತ್ತೇನೆ .
-ತೀರ್ಥಪ್ರಭಂಧ
**********
🌷ಪರರ ಬೇಡದಂತೆ ಎನ್ನ ಮಾಡಯ್ಯ ಹರಿಯೇ🌷
ಏನು ಬೇಡಲಿ ನಿನ್ನ ಬಳಿಗೆ ಬಂದು
ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ |
.................
ಬೇಡುವೇನು ನಾ ನಿನ್ನ ಬೇಡುತಕ್ಕದ ದೇವ
ನೀಡೇನೆಂಬುದು ನಿನ್ನ ಮನದೊಳಿತ್ತೆ |
ಮೂಡಲಗಿರಿವಾಸ ಗೋಪಾಲ ವಿಠಲ
ಪರರ ಬೇಡದಂತೆ ಎನ್ನ ಮಾಡಯ್ಯ ಹರಿಯೇ 🙏
- ಶ್ರೀಗೋಪಾಲದಾಸರು
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ...
🌺ಶ್ರೀನಿವಾಸೇsಸ್ತು ಮೇ ಮನಃ🌺
🌷🌹ಶ್ರೀನಿವಾಸ ಚಿಂತನ 🌹🌷
(ವೈಶಾಖಶುದ್ಧದಶಮಿ ವಿಶೇಷಸಂಚಿಕೆ-2 )
|| ಶ್ರೀನಿವಾಸದೇವರ ದರ್ಶನಮಾಡುವಾಗ ತಾಳಬೇಕಾದ ಅನುಸಂಧಾನಗಳು ||
🌷ಶಂಖಚಕ್ರಧಾರಣೆಯ ಉದ್ದೇಶ🌷
ಶ್ರೀವಾದಿರಾಜಸ್ವಾಮಿಗಳು ತಮ್ಮ ತೀರ್ಥಪ್ರಬಂಧದ ಯೇ ಶಂಖಚಕ್ರೋಜ್ವಲ ಬಾಯುಯುಗ್ಮಾಃ... ಎಂಬ ಶ್ಲೋಕದಲ್ಲಿ ಶ್ರೀನಿವಾಸ ತನ್ನ ಪಾದಸೇವೆ ಮಾಡುವವರು ತನ್ನ ಚಿಹ್ನೆಯಾದ ಶಂಖಚಕ್ರಗಳನ್ನು ತನ್ನ ಕೈಂಕರ್ಯದ ಕುರುಹಾಗಿ ಧರಿಸಿಕೊಳ್ಳಬೇಕೆಂಬುದನ್ನು ಎರಡು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸುವ ಮೂಲಕ ಸೂಚಿಸುತ್ತಿರುವನು ಎಂದು ನಿರೂಪಿಸಲಾಗಿದೆ .
ಯಥೇಚ್ಛಯೈವ ಸರ್ವಂ ತು ಮನಸಾ ದೇಹತೋsಪಿವಾ |
ಕರ್ತುಂ ಶಕ್ತೋsಪಿ ಚಾಸ್ತ್ರಾದ್ಯ ಲಿಲೈವಾನಂತಶಕ್ತಿನಃ ||
ತನ್ನ ಇಚ್ಛೆಗನುಗುಣವಾಗಿ ಮನಸ್ಸಿನ ಮೂಲಕವೇ. ದೇಹದ ಮೂಲಕವೇ. ಎಲ್ಲವನ್ನು ನಡೆಸಲು ಸಮರ್ಥವಾಗಿರುವ ಭಗವಂತ ಲೀಲಾರೂಪದಿಂದ ಶಂಖಚಕ್ರಗಳನ್ನು ಧರಿಸಿದ್ದಾನೆಂದು
ವಾರಾಹ (ಭಾಗವತತಾತ್ಪರ್ಯನಿರ್ಣಯ 3- 20-5 )ದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ಸ್ಪಷ್ಟಪಡಿಸಿದ್ದಾರೆ .
ಶ್ರೀಮಧ್ವಾಚಾರ್ಯರು ದ್ವಾದಶಸ್ತೋತ್ರ ದಲ್ಲಿ ತಿಳಿಸಿರುವಂತೆ
ಶಂಖಚಕ್ರಗದಾಪದ್ಮಾಧರಾಶ್ಚಿಂತ್ಯಾಹರೇರ್ಭುಜಾಃ |
ಪೀನವೃತ್ತಾ ಜಗದ್ರಾಕ್ಷಾಕೇವಲೋದ್ಯೋಗೀನೋsನಿಶಮ್ ||
ತಾನು ಸತತವಾಗಿ ಜಗತ್ತಿನಲ್ಲಿ ಸಜ್ಜನರ ಸಂರಕ್ಷಣೆಯಲ್ಲಿ ತೊಡಗಿರುವೆನೆಂದು ಭಕ್ತರಿಗೆ ವಿಶ್ವಾಸವನ್ನು ಮೂಡಿಸುವುದಕ್ಕಾಗಿ ಶಂಖಚಕ್ರಗಳನ್ನು ಧರಿಸಿರುವನು ಎಂದು ಅನುಸಂಧಾನ ತಾಳಬೇಕು .
ಆ ಶಂಖಚಕ್ರಗಳಾದರೂ ಜಡಗಳಲ್ಲ ; ಶ್ರೀದೇವಿ ಪರಮಾತ್ಮನ ಶಂಖರೂಪದಲ್ಲಿದ್ದರೆ ದುರ್ಗಾದೇವಿ ಚಕ್ರರೂಪದಲ್ಲಿರುವಳು .
ಪೂರ್ವಂ ಹರೇಶ್ಚಕ್ರಮಭೂದ್ಧಿ ದುರ್ಗಾ ತಮಃ ಸ್ಥೀತಾ...ಸತ್ವಾತ್ಮೀಕಾ ಶಂಖಾ ||
-ಮಹಾಭಾರತತಾತ್ಪರ್ಯನಿರ್ಣಯ 3-74-75
ಆದ್ದರಿಂದ ಶ್ರೀದೇವಿ ಸ್ವರೂಪದ ಶಂಖದ ಮೂಲಕ ಸಾತ್ವಿಕಸಂಪತ್ತನ್ನುತಾನು ನೀಡುವುದಾಗಿಯೂ ,ದುರ್ಗಾಸ್ವರೂಪದ ಚಕ್ರದ ಮೂಲಕ ಆಸುರಿಶಕ್ತಿಗಳನ್ನು ತಾನು ಪರಿಹರಿಸುವುದಾಗಿಯೂ ಶ್ರೀನಿವಾಸನು ಆಶ್ವಾಸನೆ ನಿಡುತ್ತಿದ್ದಾನೆಂದು ಅನುಸಂಧಾನ ತಾಳಬೇಕು .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ...
🌺ಶ್ರೀನಿವಾಸೇsಸ್ತು ಮೇ ಮನಃ🌺
🌷🌹ಶ್ರೀನಿವಾಸ ಚಿಂತನ 🌹🌷
(ವೈಶಾಖಶುದ್ಧದಶಮಿ ವಿಶೇಷ ಸಂಚಿಕೆ -3 )
|| ಶ್ರೀನಿವಾಸದೇವರ ದರ್ಶನಮಾಡುವಾಗ ತಾಳಬೇಕಾದ ಅನುಸಂಧಾನಗಳು ||
🌷ಹಸ್ತಗಳ ಸಂದೇಶಾನುಸಂಧಾನ🌷
( 2ನೇ ಸಂಚಿಕೆಯ ಮುಂದುವರಿದ ಭಾಗ )
ಶ್ರೀನಿವಾಸ ದೇವರು ತನ್ನ ಇನ್ನೆರಡು ಕೈಗಳಲ್ಲಿ ಎಡಕೈಯನ್ನು ಎಡಸೊಂಟದ ಮೇಲೂ ಬಲಕೈಯನ್ನು ಬಲಸೊಂಟದಮೇಲೂ ಧರಿಸಿಕೋಂಡಿರುವನು .ಬಲಸೊಂಟದ ಮೇಲಿರುವ ಕೈಯನ್ನು ಚಾಚಿಕೊಂಡು ತನ್ನ ಪಾದವನ್ನು ತೋರಿಸುತ್ತಿರುವುದರಿಂದ ಶ್ರೀವಾದಿರಾಜಸ್ವಾಮಿಗಳು ತಿಳಿಸಿರುವಂತೆ ತನ್ನ ಪಾದದ ಉಪಾಸನೆ ನಡೆಸುವವರ ಪಾಲಿಗೆ ಭವಸಾಗರ ಸೊಂಟದವರೆಗಷ್ಟೇ ಬರುವುದು ಹೊರತು ಮುಳುಗಿಸಿಬಿಡಲಾರದು ಎಂದು ಸಂದೇಶಿಸುತ್ತಿರವನೆಂದು ಅನುಸಂಧಾನ ತಾಳಬೇಕು .
ಯೇ ಶಂಖಚಕ್ರೋಜ್ವಲ ಬಾಹುಯುಗ್ಮಾಃ ಸ್ವಾಂಘ್ರಿಂ ಭಜಂತೇ ಭವಸಿಂಧುರೇಷಃ.|
ಕಟಿಪ್ರಮಾಣಸ್ತ್ವಿತಿ ವೆಂಕಟೇಶಃ ಸ್ಫುಟೀಕರೋತ್ಯಾತ್ಮಕರಾಂಬುಜಾತೈಃ ||
ಅಲ್ಲದೆ ತನ್ನ ಪಾದ ಸಾಂಸಾರಸಾಗರವನ್ನು ದಾಟಿದ ಮೇಲೂ ಅದನ್ನು ಆಶ್ರಯಿಸಿಕೊಂಡೆ ಇರಬೇಕಾದ್ದೆಂದು ಬ್ರಾಹ್ಮ(ಭಾಗವತತಾತ್ಪರ್ಯ ನಿರ್ಣಯ 10-3 -31) ದಲ್ಲಿ ತನ್ನ ಪಾದದ ವೈಶಿಷ್ಟ್ಯವನ್ನು ಅನುಸಂಧಾನಕ್ಕೆ ತಂದುಕೊಳ್ಳಲು ಸೂಚಿಸುತ್ತಿರುವನು .
ಭಗವತ್ಪಾದನೌಕಾ ಯಃ ನೇಯಂ ನೌಕೋಪಮ ಭವೇತ್ | ತಯಾ ತೀರ್ತ್ವಾ ತು ಕಾಮೇವ ಪ್ರಾಪ್ಯ ತಿಷ್ಠಂತಿ ತತ್ರ ಯತ್ ||
ಅಂತೆಯೇ ಬಲಗೈಯ ಅಂಗೈಯನ್ನು ಬಿಡಿಸಿ ವರದಮುದ್ರೆಗೋಳಪಡಿಸಿ ತಾನು ಲಕ್ಷ್ಮೀದೇವಿ ಮುಂತಾದ ಪ್ರತಿಯೊಬ್ಬರಿಗೂ ಅವರವರ ಯೋಗ್ಯತೆಗನುಗುಣವಾಗಿ ನಾಲ್ಕು ಪುರುಷಾರ್ಥಗಳ ಕುರಿತೂ ವರಗಳನ್ನು ಅನುಗ್ರಹಿಸಲು ಸಿದ್ಧ ಎಂದು ತನ್ನ ವರದೇಶವರಪ್ರದತ್ವ ಮಹಿಮೆಯನ್ನು ಸೂಚ್ಯವಾಗಿ ಸಾರುತ್ತಿರುವನು .
ಸೊಂಟದಮೇಲೆ ಕೈ ಇಡುವುದು ಸಿದ್ಧತೆಯ ಸಂಕೇತವಾದುದರಿಂದ ಶ್ರೀನಿವಾಸದೇವರು ತನ್ನ ಪಾದವನ್ನು ಉಪಾಸನೆ ನಡೆಸುವವರನ್ನು ಮೋಕ್ಷಕ್ಕೊಯ್ಯಲ್ಲು ಸದಾ ಸಿದ್ಧ ಎಂದು ಸೊಂಟದಮೇಲೆ ಕೈಯಿಡುವ ಮೂಲಕ ಸಾರುತ್ತಿರುವನು .
ಆದಿತ್ಯಪುರಾಣದ ವೇಂಕಟೇಶ ಮಹಾತ್ಮೆಯಲ್ಲಿ ಬಂದಿರುವ ಈ ವರ್ಣನೆಯನ್ನು ಶ್ರೀವಾದಿರಾಜಗುರುಸಾರ್ವಭೌಮರು ತೀರ್ಥಪ್ರಭಂಧದಲ್ಲಿ ವರ್ಣಿಸಿದ್ದಾರೆ
ಭವಾಬ್ಧಿತಾರಂ ಕಟಿವರ್ತಿಹಸ್ತಂ
ಸ್ವರ್ಣಾಂಬರಂ ರತ್ನಕೀರಿಟಕುಂಡಲಂ |
ಆಲಂಬಿ ಸೂತ್ರೋತ್ತಮ ಮಾಲ್ಯಭೂಷೀತಂ
ನಮಾಮ್ಯಹಂ ವೇಂಕಟೇಶ ಶೈಲನಾಯಕಮ್ ||
ಸಂಸಾರಸಾಗಾರವನ್ನು ದಾಟಿಸುವವನು ನನ್ನ ಪಾದಗಳನ್ನು. ಆಶ್ರಯಿಸಿದವರಿಗೆ ಸಂಸಾರಸಮುದ್ರವು ಕಟಿಯವರೆಗೆ ಮಾತ್ರವಿದ್ದು ದಾಟಲು ಶಕ್ಯವು ಎಂದು ಸೂಚಿಸಲು ಕಟಿಯಲ್ಲಿ ಹಸ್ತವಿರಿಸಿರುವವನು .ಪೀತಾಂಬರ ,ರತ್ನಖಚಿತ ಕೀರಿಟಕುಂಡಲ ,ಓಲಾಡುವ ಯಜ್ಞೋಪವೀತ ,ಉತ್ತಮಮಾಲಿಕೆಗಳಿಂದ ಕಂಗೊಳಿಸುವ ಶ್ರೀವೇಂಕಟಾಚಲಾಧಿಪತಿಯನ್ನು ನಮಿಸುತ್ತೇನೆ ಎಂದು ದೇವಶರ್ಮನು ಶ್ರೀನಿವಾಸದೇವರಲ್ಲಿ ಪ್ರಾರ್ಥಿಸಿದ್ದಾನೆ
-ಆದಿತ್ಯಪುರಾಣಾಂತರ್ಗತ ವೇಂಕಟೇಶಮಹಾತ್ಮೇ 4-11
ಆದಿತ್ಯಪುರಾಣದ ವೇಂಕಟೇಶ ಮಹಾತ್ಮೆಯಲ್ಲಿ ಬಂದಿರುವ ಈವರ್ಣನೆಯನ್ನು ಶ್ರೀವಾದಿರಾಜಗುರುಸಾರ್ವಭೌಮರು ತೀರ್ಥಪ್ರಭಂಧದಲ್ಲಿ ಯೇ ಶಂಖಚಕ್ರೋಜ್ವಲ ಬಾಹುಯುಗ್ಮಾಃ ಎಂಬ ಶ್ಲೋಕದಲ್ಲಿ ವರ್ಣಿಸಿದ್ದಾರೆ .
ಇದೆಲ್ಲವನ್ನೂ ಹೃದಯದಲ್ಲಿರಿಸಿಕೋಂಡು ಶ್ರೀನಿವಾಸ ದೇವರ ದರ್ಶನ ಮಾಡುವಾಗ ಅನುಸಂಧಾನ ತಾಳಬೇಕು .
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ...
🌺ಶ್ರೀನಿವಾಸೇsಸ್ತು ಮೇ ಮನಃ🌺
🌷🌹ಶ್ರೀನಿವಾಸ ಚಿಂತನ 🌹🌷
( ವೈಶಾಖಶುದ್ಧದಶಮಿ ವಿಶೇಷ ಸಂಚಿಕೆ -4 )
|| ಕೊನೆಯ ಸಂಚಿಕೆ ||
🌷ಬೇಟೆಗೆ ಹೊರಟ ಶ್ರೀನಿವಾಸ ದೇವರ ಅಲಂಕಾರದ ವೈಭವ🌷
ಶುಭ್ರವಸ್ತ್ರಂ ಪಂಚದಶಹಸ್ತಂ ಬಿಭ್ರತ್ತಥೋಪರಿ ಕಾಂಚಿಂ ಬದ್ಧ್ವಾ|
ಹದಿನೈದು ಮೊಳದ ಶುಭ್ರವಸ್ತ್ರವನ್ನುಟ್ಟು ಅದರ ಮೇಲೆ ಒಡ್ಯಾಣವನ್ನು ಕಟ್ಟಿಕೊಂಡಿದ್ದನು .
ಶುಭ್ರವಸ್ತ್ರಂ ಪರಿಧಾಯ ಪಂಚಹಸ್ತಂ ತಥಾ ದಧತ್ |
ಐದುಮೊಳದ ವಸ್ತ್ರವನ್ನು ಉತ್ತರಿಯವನ್ನಾಗಿ ತಟ್ಟುಕೊಂಡಿದ್ದನು .
ಧೃತ್ವಾ ಶುಭ್ರಾಂ ಮೃತ್ತಿಕಾಮ್ |ತನ್ಮಧ್ಯೇ ಕುಂಕುಮಸ್ಯಾಪಿ ತಿಲಕಂ ಸುಮನೋಹರಮ್ ||
ಶುಭ್ರಮೃತ್ತಿಕೆಯ ಅರ್ಥಾತ್ ಗೋಪಿಚಂದನದ ನಾಮ ಹಾಕಿಕೊಂಡು ಆ ನಾಮದ ಮಧ್ಯದಲ್ಲಿ ಕುಂಕುಮದ ತಿಲಕ ಇಟ್ಟುಕೊಂಡಿದ್ದನು .
ಪೂಗೀಫಲಂ ಸತಾಂಬೂಲಂ ಚೂರ್ಣನಿಕ್ಷಿಪ್ಯ ಪಾತ್ರಕಮ್ | ಆದರ್ಶಂ ಮೃತ್ತಿಕಾಂ ಶುಭ್ರಾಂ ತಥಾ ಕುಂಕುಮ ಭಾಜನಮ್ | ಸ್ವರ್ಣನಿರ್ಮೀತ ವಸ್ತ್ರೇ ಬದ್ಧ್ವಾ ತು ಕಟಿಮಧ್ಯತಃ ||
ವೀಳ್ಯದೆಲೆ ,ಅಡಿಕೆ ,ಚೂರ್ಣದಿಂದ ಕೂಡಿದ ಕರಡಿಕೆ .ಕನ್ನಡಿ ಕನ್ನಡಿ ಗೋಪಿಚಂದನ ಕುಂಕುಮದ ಕರಡಿಗೆ - ಇವನ್ನು ಪೀತಾಂಬರದಿಂದ. ಸುತ್ತಿ ಸೊಂಟಕ್ಕೆ ಕಟ್ಟಿಕೊಂಡಿದ್ದನು .
ಸ್ವರ್ಣಯಜ್ಞೋಪವೀತಾಂಗಃ ಕಂಠಾಭರಣಭೂಷಿತಃ |ಕಂಕಣಾಂಕಿತದೋರ್ಭ್ಯಾಂ ವೈ ಸಂಪೂರ್ಣವರಗಾತ್ರತಃ ||
ದೇಹದಲ್ಲಿ ಚಿನ್ನದ ಯಜ್ಞೋಪವೀತ ,ಕಂಠದಲ್ಲಿ ಕೌಸ್ತುಭ ಎರಡೂ ಕೈಗಳಲ್ಲಿ ರತ್ನಕಂಕಣ .
ಭುಜಕೀರ್ತ್ಯಾ ರತ್ನಮಯ್ಯಾ ರಾಜಮಾನಾಂಗುಲಿಯಕೈಃ |
ಭುಜಗಳಲ್ಲಿ ರತ್ನದ ಅಂಗದಗಳು .ಬೆರಳುಗಳಲ್ಲಿ ವಿರಾಜಿಸುವ ಉಂಗುರಗಳು .
ಕುಂಕುಮಾಸಕ್ತಸುಗಂಧೇನ ಲಿಪ್ತಾಂಗವರರಾಜತಃ|
ಕಸ್ತೂರಿಮಿಶ್ರಿತ ಶ್ರೀಗಂಧದಿಂದ ಮೈತುಂಬಾ ಲೇಪನ .
ಕಬರಿಕೃತಕೇಶೇಷು ರಕ್ತವಸ್ತ್ರಂ ಸುವೇಷ್ಟ್ಯ ಚ | ಲಂಬಿತೈಃ ಪುಷ್ಪಜಾಲೈಶ್ಚ ಸ್ಕಂಧಗೈಃ ಪರಿಭೂಷಿತಃ |
ಸುವರ್ಣರತ್ನ ಸಂಬದ್ಧಪಾದುಕಾಗೂಹಿತಾಂಘ್ರಿಕಃ ||
ಹೆಳಲುಹಾಕಿದ ಕೂದಲುಗಳ ಮೇಲೆ ಕೆಂಪುವಸ್ತ್ರವನ್ನು ಸುತ್ತಿಕೊಂಡು ಹೆಗಲವರೆಗೆ ಚಾಚಿಕೊಂಡಿದ್ದ ಹೂಗಳ ಮಾಲೆಯಿಂದ ಅಲಂಕಾರಿಸಲ್ಪಟ್ಟವನಾಗಿ ಸುವರ್ಣರತ್ನಖಚಿತ ಪಾದುಕೆಗಳನ್ನು ಮೆಟ್ಟಿ ಬಿಲ್ಲು ಬಾಣಗಳನ್ನು ಧರಿಸಿ
ಧನುರ್ಭಾಣದರಃ ಶ್ರೀಮಾನ್ ಸಾಕ್ಷನ್ಮನ್ಮಥಃ |
ಏವಂ ಮನೋಹರಂ ರೂಪಂ ಧೃತ್ವಾ ಶ್ರೀವೇಂಕಟೇಶ್ವರಃ ||
ಹೀಗೆ ಸಾಕ್ಷತ್ ಮನ್ಮಥಮನ್ಮಥನಾಗಿ ಬೇಟೆಗೆ ಹೊರಟಿದ್ದ ಶ್ರೀನಿವಾಸದೇವರ ಅಲಂಕಾರ ವೈಭವದ ವರ್ಣನೆ ಭವಿಷ್ಯೋತ್ತರ ಪುರಾಣದಲ್ಲಿ ಇದೆ .
ಭವಿಷ್ಯೋತ್ತರ ಪುರಾಣಾಂತರ್ಗತ ವೇಂಕಟೇಶ ಮಹಾತ್ಮೇ ಅಧ್ಯಾಯ -6
|| ಶ್ರೀಕೃಷ್ಣಾರ್ಪಣಮಸ್ತು ||
ಶ್ರೀಐತರೇಯ...
*******
No comments:
Post a Comment