blood pressure
ಇತ್ತೀಚೆಗೆ ಬದಲಾದ ಜೀವನಶೈಲಿಯಿಂದಾಗಿ ನಾವು ಬಿಪಿ ಅಂದರೆ ಬ್ಲಡ್ ಪ್ರೆಶರ್ ಬಗ್ಗೆ ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಕೊರೊನಾ ಬಂದ ಮೇಲೆ ಹೆಚ್ಚು ಅಥವಾ ಕಡಿಮೆ ಬಿಪಿ (ರಕ್ತದ ಒತ್ತಡ) ಪ್ರಕರಣಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದೇವೆ. ಆಫೀಸಿನ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣಗಳಿಂದ ಬಿಪಿ ಜಾಸ್ತಿ ಅಥವಾ ಕಡಿಮೆ ಆಗಬಹುದು.
ಹೃದಯವು ರಕ್ತವನ್ನು ಹೊರಹಾಕಿದಾಗ, ರಕ್ತದ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಬೀರುವ ಒತ್ತಡವೇ ರಕ್ತದೊತ್ತಡ. ಇದು ನಮ್ಮ ಶರೀರದಲ್ಲಿರುವ ರಕ್ತದ ಪರಿಮಾಣ ಮತ್ತಿತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ಲೋ ಬಿಪಿ ಅಥವಾ ಹೈಪೋಟೆಂಶನ್ ಎಂದರೇನು?
ಸಾಮಾನ್ಯವಾಗಿ ಆರೋಗ್ಯವಂತ ಪುರುಷ ಹಾಗೂ ಮಹಿಳೆಯರಲ್ಲಿ ರಕ್ತದ ಒತ್ತಡವು 120/80 ಮಿಲಿಮೀಟರ್ ಗಳಿಷ್ಟಿರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಸ್ವಲ್ಪ ಬದಲಾಗುತ್ತಿರುತ್ತದೆ. ಆದರೆ ರಕ್ತದ ಒತ್ತಡವು 90/60 ಗಿಂತಲೂ ಕಡಿಮೆಯಾದಾಗ ಅದನ್ನು ಕಡಿಮೆ ರಕ್ತದ ಒತ್ತಡ / ಲೋ ಬಿಪಿ ಎನ್ನುತ್ತೇವೆ. ಅಧಿಕ ರಕ್ತದೊತ್ತಡವು ಹೇಗೆ ದೇಹದ ಎಲ್ಲ ಪ್ರಮುಖ ಅಂಗಾಂಗಗಳ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದೋ, ಹಾಗೆಯೇ, ಕಡಿಮೆಯಾಗುವ ರಕ್ತದೊತ್ತಡವೂ ಅಪಾಯಕಾರಿಯೇ. ಅದೂ ಸಹ ಶರೀರದ ಪ್ರಮುಖ ಅಂಗಾಂಗಗಳಾದ ಹೃದಯ, ಮೆದುಳು ಹಾಗೂ ಮೂತ್ರಪಿಂಡಗಳ ರಕ್ತ ಪರಿಚಲನೆಯಲ್ಲಿ ತೊಡಕನ್ನು ಉಂಟುಮಾಡುತ್ತದೆ.
ಸಾಮಾನ್ಯವಾಗಿ ಕಡಿಮೆ ರಕ್ತದ ಒತ್ತಡ ಎಂದರೆ ವೈದ್ಯಕೀಯ ಭಾಷೆಯಲ್ಲಿ 'ಹೈಪೋಟೆಂಶನ್' ಎಂದು ಕರೆಯುತ್ತಾರೆ. ಇದರ ಪ್ರಕಾರ ಹೃದಯಕ್ಕೆ, ಮೆದುಳಿಗೆ ಮತ್ತು ದೇಹದ ಇನ್ನಿತರ ಬಹು ಮುಖ್ಯ ಅಂಗಾಂಗಗಳಿಗೆ ಅಗತ್ಯಕ್ಕಿಂತ ಕಡಿಮೆ ರಕ್ತ ಸಂಚಾರ ಆಗುತ್ತದೆ. ಇದರಿಂದ ತಲೆ ಸುತ್ತು ಬರುವುದು, ವಾಕರಿಕೆ, ವಾಂತಿ ಮತ್ತು ಮಾನಸಿಕ ಸ್ಥಿತಿಯ ಅಸಮತೋಲನದಂತಹ ಸಮಸ್ಯೆಗಳು ತಲೆದೋರುತ್ತವೆ. ಕೆಲವೊಂದು ಪ್ರಕರಣಗಳಲ್ಲಿ ಕಡಿಮೆ ರಕ್ತದ ಒತ್ತಡ ಹೊಂದಿರುವ ವ್ಯಕ್ತಿಗಳಿಗೆ ಯಾವುದೇ ಗುಣ ಲಕ್ಷಣಗಳು ಕಂಡು ಬರುವುದಿಲ್ಲ.
ಇತ್ತೀಚಿನ ದಿನಗಳಲ್ಲಿ 40 ವರ್ಷ ದಾಟುತ್ತಿದ್ದಂತೆ ಪ್ರತಿಯೊಬ್ಬರಿಗೂ ರಕ್ತದ ಒತ್ತಡದ ಸಮಸ್ಯೆ ಪ್ರಾರಂಭವಾಗುತ್ತದೆ. ತಮ್ಮ ಬದಲಾದ ಜೀವನ ಶೈಲಿ ಅಥವಾ ಆಹಾರ ಪದ್ಧತಿಯಿಂದ ಹಲವಾರು ದೀರ್ಘ ಕಾಲ ಕಾಡುವ ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಳ್ಳುತ್ತವೆ. ಮಧುಮೇಹ ರಕ್ತದ ಒತ್ತಡ ಹೃದಯ ಸಂಬಂಧಿ ಸಮಸ್ಯೆಗಳು ಹೀಗೆ ಒಂದಕ್ಕೊಂದು ಸಂಬಂಧ ಇರುವ ಕಾಯಿಲೆಗಳು ಮನುಷ್ಯನ ದೇಹಕ್ಕೆ ಹತ್ತಿರವಾಗುತ್ತವೆ. ರಕ್ತದ ಒತ್ತಡದ ವಿಷಯಕ್ಕೆ ಬಂದರೆ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಜನರಂತೆ ಕಡಿಮೆ ರಕ್ತದ ಒತ್ತಡದ ಜನರೂ ಸಹ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಲೋ ಬಿಪಿಗೆ ಕಾರಣ ಮತ್ತು ಲಕ್ಷಣಗಳು:
ಕಡಿಮೆ ರಕ್ತದೊತ್ತಡ ಬೇರೆ ಕಾರಣಗಳ ಜೊತೆಗೆ ಬರುವಂಥದು. ಮಾನಸಿಕ ಒತ್ತಡ, ಆತಂಕ ಆದಾಗ ಬರುತ್ತದೆ. ಆದ್ದರಿಂದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಕೆಲವೊಮ್ಮೆ ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಮಾತ್ರೆ ಪ್ರಮಾಣ ಜಾಸ್ತಿ ಆದರೆ ರಕ್ತದೊತ್ತಡ ಕಡಿಮೆ ಆಗುತ್ತದೆ. ರಕ್ತಹೀನತೆ (ಅನೀಮಿಯಾ) ಇರುವವರಿಗೂ ಮಾತ್ರೆಗಳನ್ನು ತೆಗೆದುಕೊಂಡಾಗ ರಕ್ತದ ಒತ್ತಡ ಕಡಿಮೆ ಆಗಬಹುದು. ಆಗ ಔಷಧಿ ಮತ್ತು ಆಹಾರ ಸೇವನೆ ಸರಿ ಮಾಡಿಕೊಂಡರೆ ವಾಸಿಯಾಗುತ್ತದೆ. ದೈಹಿಕ ತೂಕ ಕಡಿಮೆ ಇರುವವರಲ್ಲಿ ಕಡಿಮೆ ರಕ್ತದೊತ್ತಡ ಕಾಣಿಸಿಕೊಳ್ಳಬಹುದು. ಮಾನಸಿಕ ಸಮಸ್ಯೆಗಳಿಗೆ ಮಾತ್ರೆ ತೆಗೆದುಕೊಂಡಾಗ ರಕ್ತದ ಒತ್ತಡ ಕಡಿಮೆ ಆಗಬಹುದು.
ತಲೆಸುತ್ತು, ಮೂರ್ಛೆ, ಅಸ್ಪಷ್ಟ ದೃಷ್ಟಿ, ಆಳವಿಲ್ಲದ, ತ್ವರಿತ ಉಸಿರಾಟ, ಬಾಯಾರಿಕೆ ಮತ್ತು ನಿರ್ಜಲೀಕರಣ, ಆಯಾಸ ಮತ್ತು ವಾಕರಿಕೆಗಳು ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.
ಲೋ ಬಿಪಿಗೆ ಮನೆ ಮದ್ದು:
ಕಡಿಮೆ ರಕ್ತದೊತ್ತಡ ಉಂಟಾದಾಗ ಒಂದು ಲೋಟ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಕುಡಿಯಬೇಕು. ಅಲ್ಲದೇ ಒಂದು ಲೋಟ ನೀರಿಗೆ ಅರ್ಧ ಚಮಚ ಸಕ್ಕರೆ ಹಾಕಿಯೂ ಕುಡಿಯಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಕಿಯೂ ಸೇವಿಸಬಹುದು.
ನೀರಿನಂಶ ಹೆಚ್ಚಿರುವ ನಿಂಬೆ, ಮೂಸಂಬಿ, ಕಿತ್ತಲೆ ಹಣ್ಣಿನ ಜೂಸ್ ಮತ್ತು ಎಳನೀರನ್ನು ತೆಗೆದುಕೊಳ್ಳಬೇಕು. ದೇಹದಲ್ಲಿ ನಿರ್ಜಲೀಕರಣ ಆಗುವುದರಿಂದ ನೀರಿನಂಶ ಹೆಚ್ಚಿಸುವ ಶರಬತ್ತುಗಳನ್ನು ಸೇವಿಸಬೇಕು. ನೀರನ್ನು ಆದಷ್ಟು ಸ್ವಲ್ಪ ಹೆಚ್ಚು 3-4 ಲೀಟರ್ ಪ್ರತಿದಿನ ಕುಡಿಯಬೇಕು.
ಊಟ, ತಿಂಡಿಯಲ್ಲಿ ಸ್ವಲ್ಪ ಉಪ್ಪಿನಂಶ ಹೆಚ್ಚು ಇದ್ದರೆ ಒಳ್ಳೆಯದು ಕೂಡ. ಮೇಲುಪ್ಪು ಹಾಕಿಕೊಳ್ಳಬಹುದು. ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಚೆನ್ನಾಗಿ ನಿದ್ರೆಯನ್ನು ಮಾಡಬೇಕು.
ಒಂದು ಚಮಚ ಅಶ್ವಗಂಧ ರಸಾಯನ ಇಲ್ಲವೇ ಅಶ್ವಗಂಧ ಚೂರ್ಣದ ಜೊತೆಗೆ ಒಂದು ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಎರಡು ಬಾರಿ ಊಟದ ನಂತರ ಸೇವಿಸಬಹುದು. ಶತಾವರಿ ರಸಾಯನ/ ಚೂರ್ಣ ಮತ್ತು ಜೇನುತುಪ್ಪ ಬೆರೆಸಿ ತೆಗೆದುಕೊಳ್ಳಬಹುದು. ಸಕ್ಕರೆ ರೋಗ ಇರುವವರು ಜೇನುತುಪ್ಪದ ಬದಲಿಗೆ ಬೆಚ್ಚಗಿನ ನೀರು ಅಥವಾ ಹಾಲನ್ನು ಇಲ್ಲಿ ಬಳಸಬಹುದು.
ಮಾನಸಿಕ ಒತ್ತಡದಿಂದ ಕಡಿಮೆ ರಕ್ತದೊತ್ತಡ ಉಂಟಾದರೆ ಏನಾದರೂ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಓದುವುದು, ಸಂಗೀತ ಕೇಳುವುದು, ಗಿಡಗಳನ್ನು ಬೆಳೆಸುವುದು, ಬೇರೆಬೇರೆ ಕೆಲಸಗಳನ್ನು ಮಾಡುವುದು ಹೀಗೆ ಏನಾದರೂ ಮಾಡಬೇಕು. ಪ್ರತಿದಿನ ಕನಿಷ್ಠ ಅರ್ಧಗಂಟೆ ಸಾಮಾನ್ಯ ನಡಿಗೆ ಅಥವಾ ವ್ಯಾಯಾಮ ಮಾಡಬೇಕು. ಒಟ್ಟಾರೆ ಹೇಳುವುದಾದರೆ ನಮ್ಮ ದೇಹ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು. ಸಾಕಷ್ಟು ನೀರನ್ನು ಕುಡಿಯಬೇಕು. ಅಗತ್ಯ ಪೋಷಕಾಂಶಗಳಿರುವ ಆಹಾರ ಸೇವನೆ ಬಹಳ ಮುಖ್ಯ. ಮಸಾಲೆ ಹೆಚ್ಚಾಗಿರುವ ಪದಾರ್ಥಗಳನ್ನು ತಿನ್ನಬಾರದು. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ಸಹನೆ ಮತ್ತು ಸಮಾಧಾನಗಳನ್ನು ಬೆಳೆಸಿಕೊಂಡರೆ ಮಾನಸಿಕ ಒತ್ತಡ ಮತ್ತು ಕಡಿಮೆ ರಕ್ತದೊತ್ತಡ ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಕನ್ನಡ ಪ್ರಭ.
ಡಾ ವಸುಂಧರಾ ಭೂಪತಿ.
***
ಸರ್ವದಾ ಸ್ವಾಸ್ಥ್ಯ ನಮ್ಮದಾಗಲು ಉಪಾಯವೇನು ?
Pulmonary hypertension ಇರುವ ಅನೇಕ ರೋಗಿಗಳನ್ನು ನೋಡಿದ್ದೇವೆ ಮತ್ತು ಚಿಕಿತ್ಸಿಸಿದ್ದೇವೆ. ಆಯುರ್ವೇದದ ಸಿದ್ಧಾಂತದಂತೆ ಮೂಲ ಕಾರಣವನ್ನು ಹುಡುಕಿ ತಗೆಯದೇ ಚಿಕಿತ್ಸೆ ಮಾಡುವಂತಿಲ್ಲ. ಹಾಗೆ ಕಾರಣವನ್ನು ಹುಡುಕುತ್ತಾ ಹೋದಾಗ ವಿಶೇಷ "ನಿದಾನ"(ಕಾರಣ) ವೊಂದು ನಮಗೆ ಕಾಣಸಿಗುತ್ತದೆ. ಅದೇ, "ಕ್ರೋಧ"😡
ಸಾಮಾನ್ಯವಾಗಿ ರೋಗಕಾರಣಗಳಲ್ಲಿ ಆಹಾರ-ವಿಹಾರಗಳ ವ್ಯತ್ಯಾಸವನ್ನು ಹುಡುಕುವುದು ಆಯುರ್ವೇದ ವೈದ್ಯನ ಹಾದಿ. ಆದರೆ, ಈ ವಿಶೇಷ ಕಾಯಿಲೆಯಲ್ಲಿ ನಮಗೆ ಆಹಾರ ಗೌಣವಾಗಿಯೂ ಮತ್ತು ಮನಸ್ಸಿನ ಆಂದೋಲನ ಪ್ರಧಾನವಾಗಿಯೂ ಕಂಡುಬರುತ್ತದೆ.
ವಾಸ್ತವದಲ್ಲಿ ಮನಸ್ಸು ಹೃದಯ ಮತ್ತು ಪುಪ್ಪುಸಗಳ ನಡುವೆ ಹರಿಯುತ್ತಿರುವ ರಕ್ತದಲ್ಲಿ ಸ್ಥಿತವಾಗಿರುತ್ತದೆ. ಆದ್ದರಿಂದಲೇ, ನಮ್ಮ ಭಾವನೆಗಳ ಏರುಪೆರುಗಳಲ್ಲಿ ಅನುಭವಕ್ಕೆ ಬರುವುದು ಅದೇ ಸ್ಥಾನದಲ್ಲಿ. ಅಂದರೆ, ಎದೆಯ ಮಧ್ಯಭಾಗದಲ್ಲಿ. ಮನದಲ್ಲಿ ಆತಂಕ ಹೆಚ್ಚಾದಾಗ ಮತ್ತು ಮನಸ್ಸು ತೃಪ್ತಿಯನ್ನು ಅನುಭವಿಸುತ್ತಿರುವಾಗ ಹೃದಯ ಪುಪ್ಪುಸಗಳೆರಡೂ ಸ್ಪಂದಿಸಿ ಕ್ರಮವಾಗಿ ವೇಗವನ್ನು ಪಡೆಯುತ್ತವೆ ಮತ್ತು ನಿಧಾನಗತಿಯನ್ನು ಹೊಂದುತ್ತವೆ.
"ಕ್ರೋಧಾತ್ ಪಿತ್ತಂ" ಎಂದಿದ್ದಾರೆ ಆಚಾರ್ಯರು.
ಕ್ರೋಧವು ಶಾರೀರಿಕ ವಿಕಾರವಲ್ಲ. ಆದರೆ, ಅದರಿಂದ ಶರೀರದ ದೋಷವಾದ ಪಿತ್ತವು ವರ್ಧಿಸುತ್ತದೆ. ಈ ಪ್ರವೃದ್ಧ ಪಿತ್ತವು ಮನಸ್ಸಿನ ಕಾರಣದಿಂದ ಉತ್ಪತ್ತಿಯಾಗಿರುವುದರಿಂದ ಅದರ(ಮನಸ್ಸಿನ) ಸ್ಥಾನದಲ್ಲೇ ಅಂದರೆ, ಹೃದಯ ಪುಪ್ಪುಸಗಳ ನಡುವಿನ ರಕ್ತನಾಳಗಳಲ್ಲೇ (pulmonary arteries and veins) ಸ್ಥಿತಗೊಂಡು ವಿಕಾರವನ್ನುಂಟು ಮಾಡುತ್ತದೆ.
PTH ಅನ್ನು, ಆಧುನಿಕ ವಿಜ್ಞಾನವು ತೀರಾ ಕೊನೆಯ ಹಂತದಲ್ಲಿ ಪತ್ತೆಹಚ್ಚುತ್ತದೆ. ಆದರೆ, ಆಯುರ್ವೇದವು ಇದನ್ನು ಆರಂಭಿಕ ಹಂತದಲ್ಲಿಯೇ ನಿಖರವಾಗಿ ಅಥವಾ ಸ್ಪಷ್ಟವಾಗಿ ಗುರುತಿಸಿಬಿಡುತ್ತದೆ.
PTH ಆರಂಭಿಕ ಹಂತದಲ್ಲಿರುವವರು ಸಾಮಾನ್ಯವಾಗಿ ಕಿರಿಕಿರಿಯ ಸ್ವಭಾವ ಉಳ್ಳವರಾಗಿಯೂ ಯಾವ ಚಿಕಿತ್ಸೆಯಿಂದಲೂ ರಕ್ತದ ಪ್ರಮಾಣ ಹೆಚ್ಚಾಗದಿರುವ ಅವಸ್ಥೆ..... ಮುಂತಾದವುಗಳಿಂದ ಬಳಲುತ್ತಿರುತ್ತಾರೆ.
ರಕ್ತವು ಅಲ್ಪಪ್ರಮಾಣದಲ್ಲಿ ಅಥವಾ ಅಲ್ಪ ಶಕ್ತಿಯಿಂದ ಕೂಡಿದ್ದರೆ ಕಾಲಕ್ರಮದಲ್ಲಿ ಶರೀರದ ಎಲ್ಲಾ ಅವಯವಗಳೂ ದುರ್ಬಲವಾಗುತ್ತಾ ಸಾಗುತ್ತವೆ ಮತ್ತು ಆ ಶರೀರದ ಪ್ರಕೃತಿಗೆ ಅನುಗುಣವಾಗಿ ಯಾವುದೋ ಒಂದು ಅವಯವವು ಕಾಯಿಲೆಗೆ ತುತ್ತಾಗುತ್ತಾ ಸಾಗುತ್ತದೆ.
ಚಿಕಿತ್ಸಿಸಲು ಸಾಧ್ಯವಾಗದಂತೆ ತೀರಾ ಕೊನೆಕೊನೆಗೆ ಇದನ್ನು ಗುರುತಿಸುತ್ತಿರುವುದು ಆಧುನಿಕ, ಮುಂದುವರಿದ ವಿಜ್ಞಾನದ ಹಿನ್ನೆಡೆ.
ಸರ್ವರೋಗಗಳ ಮೂಲಸ್ಥಾನವಾದ ಮನಸ್ಸನ್ನು ವಿಶಾಲವಾಗಿಸಿಕೊಂಡು ಕ್ರೋಧದಿಂದ ಹೊರಬರುವುದೇ ಆರೋಗ್ಯದ ಗುಟ್ಟು.
No comments:
Post a Comment