SEARCH HERE

Friday 1 October 2021

ಪ್ರದೋಷ ಪೂಜೆ ಮತ್ತು ಅದರ ಲಾಭಗಳು

 ಪ್ರದೋಷ ಪೂಜೆ ಮತ್ತು ಅದರ ಲಾಭಗಳು


ಪ್ರದೋಷ ಎಂದರೆ ಪಾಪಗಳಿಂದ ಮುಕ್ತಿ ಎಂದರ್ಥ.


ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ.


 ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ. ಬರುವ ದಾರಿಯಲ್ಲಿ ನಂದಿಯ ಮೇಲೆ “ಆನಂದ ತಾಂಡವ” (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ.


ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭಿಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು.


ಅಂದು ಉಪವಾಸವಿದ್ದು, ಶಿವನ ಪೂಜೆಯನ್ನು ಮಾಡಿದರೆ ಒಳ್ಳೆಯದು.


ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.


ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ. ಶನಿವಾರ ಬರುವ ಪ್ರದೋಷವನ್ನು ಶನಿ ಪ್ರದೋಷ ಎಂದು ಕರೆಯುತ್ತಾರೆ.


ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಶನಿವಾರವಾದ್ದರಿಂದ “ಶನಿ ಪ್ರದೋಷ” ತುಂಬಾ ಒಳ್ಳೆಯದಾಗಿರುತ್ತದೆ.


ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.

ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು ಅಥವಾ ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನೈಶ್ಚರ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.


ಪ್ರದೋಷದ ಸಮಯದಲ್ಲಿ ಮಾಡಬಹುದಾದ ಪೂಜೆಗಳು

– ಶಿವನ ಅಷ್ಟೋತ್ತರದಿಂದ ಅರ್ಚನೆ

– ಹಾಲಿನ ಅಭಿಷೇಕ

– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ

– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ.

***


No comments:

Post a Comment