SEARCH HERE

Friday, 1 October 2021

ಮಧ್ವಮತದ ವೈಭವ

ಮಧ್ವಮತದ ವೈಭವ 🌞


 ‌ನಮ್ಮ ಈ ತತ್ವವಾದದ ಸೊಬಗು ಅನನ್ಯ, ಅಮೂಲ್ಯ,

ಅದ್ಭುತ, ಆಶ್ಚರ್ಯ ,ಆನಂದ ಆನಂದ ಆನಂದ

ಇದರಲ್ಲಿನ ಒಂದೊಂದೂ  ವೈಭವ....ವಿಶಿಷ್ಟ.... 


ಪುಟ್ಟ ವಿಷಯದಿಂದಲೂ ದಟ್ಟವಿಷಯಗಳವರೆಗೂ  ಪ್ರಮೇಯಗಳ ಗುಚ್ಛ...ಪರಿಪೂರ್ಣ ಸ್ವಚ್ಛ

 ಇಲ್ಲಿನ ಪೂಜೆ ಪಾರಾಯಣ ಸ್ತೋತ್ರ,ಹಾಡು, ಪ್ರಸಾದ ಉತ್ಸವ ಆರಾಧನೆ ,ಅಧ್ಯಯನ ಧನ್ಯತೆ. ಎಲ್ಲಿಲ್ಲಿಯೂ....

ಶ್ರೀಹರಿಯ ಸ್ವತಂತ್ರತ್ವ, ಸರ್ವೋತ್ತಮತ್ವ , ಗುಣಪೂರ್ಣತ್ವಾದಿ,

ನಿರ್ದೋಷತ್ವ..ಗುಣಗಳ ಚಿಂತನೆ ,ಜಗತ್ಸತ್ಯತ್ವ ಪಂಚಭೇದ, ತಾರತಮ್ಯ,  ಜೀವತ್ರೈವಿಧ್ಯ,ಮುಕ್ತಿ ಸಾಧನವಾದ ಭಕ್ತಿ ,ತನ್ಮೂಲಕ ಸ್ವರೂಪಾನಂದಾವಿರ್ಭಾವರೂಪ ಮುಕ್ತಿ...

ಪ್ರತ್ಯಕ್ಷಾನುಮಾನಾಗಮಗಳೇ ಪ್ರಮಾಣ...

ಎಲ್ಲವೂ ಅಡಗಿದೆ...

ಒಮ್ಮೆ ಸಾಮಾನ್ಯವಾಗಿ ನೋಡುವುದಾದರೆ.


ಪೂಜೆ:-

ಇಪ್ಪತ್ತಕ್ಕೂ ಅಧಿಕ ಮಾಧ್ವ ಮಠಗಳಲ್ಲಿ.. ಪ್ರತಿನಿತ್ಯ ಅತ್ಯದ್ಭುತವಾದ ದಿವ್ಯ ಪ್ರತೀಕಗಳು ವ್ಯಾಸ&ಮಧ್ವರ ತದ್ದಾಸರಾದ ಅನೇಕ ಭಗವದ್ಭಕ್ತರ

ಕರಸ್ಪರ್ಶವಾದ

ಸಾಕ್ಷತ್ಪ್ರತಿಮೆಗಳು 

ಅದಕ್ಕನುಗುಣವಾದ ರಾಜಸಂಸ್ಥಾನಾದಿಗಳಿಂದ ಅರ್ಪಿತವಾದ  ನಾನಾಭರಣ.

 ಬಿರುದುಬಾವಲಿಗಳು

ವಾದದಲ್ಲಿ ಗೆದ್ದು ಆರ್ಜಿಸಿದ ಪ್ರತೀಕಗಳು,ಆಭರಣಗಳು,

ಸ್ವಪ್ನಲಬ್ಧಾಧಿಪ್ರತೀಕಗಳು.

ದಿವ್ಯಶಾಲಗ್ರಾಮಗಳು. ಸ್ವಗ್ರಹದಲ್ಲೂ ಪರಂಪರಾಗತ ಪ್ರತಿಮೆಗಳ ಅರ್ಚನೆ...

ಇವುಗಳಲ್ಲೆಲ್ಲಾ ತಂತ್ರಸಾರಾದಿಗಳ ಕ್ರಮದಂತೆ...ಭಕ್ತಿಶ್ರದ್ಧಾದಿಗಳಿಂದ ತತ್ವನ್ಯಾಸಮಾತೃಕಾನ್ಯಾಸಾದಿಗಳಿಂದ   ಅನಂತಗುಣಪರಿಪೂರ್ಣನ ಸನ್ನಿಧಾನ...ಚಿಂತಿಸುತ್ತಾ  ಸೇವಿಸುವ ಸೌಭಾಗ್ಯ ಇನ್ನಾರಿಗುಂಟು ಮಾಧ್ವರಿಗಲ್ಲದಲೆ.

 


ಪ್ರಸಾದ

ನಿತ್ಯವೂ ಪರಮಾತ್ಮನಿಗೆ ನಿವೇದಿಸುವ ಬಗೆಬಗೆಯ ವರ್ಣದ , ಶುದ್ಧವಾದ, ಸಾತ್ವಿಕವಾದ, ಯೋಗ್ಯವಾದ, ರುಚಿಯಾದ ಶುಚಿಯಾದ,ಹಿತವಾದ, ಆರೋಗ್ಯಪ್ರದವಾದ ,ಆನಂದಪ್ರದವಾದ,ತುಷ್ಟಿಕೊಡುವ ಪುಷ್ಟಿಕೊಡುವ,

ಪಾಪ ಕಳೆಯುವ,

ಆಯುಷ್ಯವನ್ನೂ ಕೊಡುವ,

ಮನ:ಪ್ರಸನ್ನತೆ ಕೊಡುವ,

ತತ್ವಜ್ಞಾನವನ್ನೂ ಕೊಡುವ,

ಪದಾರ್ಥಗಳಲ್ಲಿ ಭಗವದ್ರೂಪಗಳನ್ನು ಚಿಂತಿಸಿ ಅಭಿಮಂತ್ರಿಸಿರುವ , ಅನುಸಂಧಾನದಿಂದ  ಹಾಡುತ್ತಾ ಸ್ತುತಿಸುತ್ತಾ  ಪಾಕಮಾಡಿದ, ಅದರಂತೆಯೇ ಬಡಿಸುವ,

ಪರಮಾತ್ಮನಪಾದೋದಕದಿಂದ ಸಿಕ್ತವಾದ, ತುಲಸೀವಿಮಿಶ್ರಿತವಾದ.

ಷಡ್ರಸಾನ್ನಗಳು ,ಪರಮಾನ್ನ, ಪರಮಾತ್ಮನನಾಮವನ್ನೇ ಹೊಂದಿರುವ ಹಯಗ್ರೀವಮಡ್ಡಿ,

 ಬಗೆಬಗೆಯ ಭಕ್ಷ್ಯಗಳು, ಇವುಗಳನ್ನು ಹರಿಗರ್ಪಿಸಿಯೇ ....  ಹರಿನಾಮಗಳೊಂದಿಗೇನೇ ಸವಿದು ಸವಿದು ಗೋವಿಂದ ಗೋವಿಂದ... ಎಂದು ಉತ್ಕಂಠತೆಯಿಂದ  ಉದ್ಗರಿಸಿ

ಭುಂಜಿಸುವ ಸೌಭಾಗ್ಯ ಪಡೆದವನೇ ಭಾಗ್ಯವಂತ ಈ ಭಾಗ್ಯ ಮಧ್ವರಾಯರ ಪಾದಪದ್ಮ ಭಜಕರಿಗಷ್ಟೇ...


ಪಾರಾಯಣಗಳು

:- ಲೌಕಿಕವೈದಿಕವೇದಭೇದಭಿನ್ನ

ವರ್ಣಾತ್ಮಕ ಧ್ವನ್ಯಾತ್ಮಕವಾದ ಅಶೇಷಶಬ್ದಗಳಲ್ಲಿ ಎಲ್ಲಾಕಡೆ,

ಪರಮಾತ್ಮನಿದ್ದಾನೆ ಅವನಗುಣಗಳನ್ನೇ ಆ ಶಬ್ದಗಳು, ಅಕ್ಷರಗಳು, ಧ್ವನಿಗಳು  ತಿಳಿಸಿಕೊಡುತ್ತದೆ...ಎಂಬ‌ ಅನುಸಂಧಾನದಿಂದ ಪ್ರತಿವರ್ಣವೂ ತತ್ವಬೋಧಕ ಪರಮಸತ್ಯ ಎಂದು ತಿಳಿಯುತ್ತಾ 

ವೇದವನ್ನು  ಅಪೌರುಷೇಯವನ್ನಾಗಿಯೂ,ಪುರಾಣೇತಿಹಾಸಾದಿಗಳನ್ನು ಪರಮಾತ್ಮಕೃತವೆಂದೂ,  ಮಧ್ವರಾಯರಿಂದ ಆರಂಭಿಸಿ ಸಕಲ ತತ್ವಜ್ಜ್ಞಾನಿಗಳ ವಾಕ್ಯಗಳನ್ನೂ ತದನುಸಾರಿಯಾದ ಕೃತಿಗಳನ್ನೂ  ಕಂಠಾಭರಣವೆಂದೂ ಚಿಂತಿಸಿ ಸ್ವಯೋಗ್ಯವಾದ ಗ್ರಂಥಗಳನ್ನು ಸಾರಿ ಸಾರಿ...

ಮುಕ್ತಕಂಠದಿ ಉಚ್ಚರಿಸಿ 

ಹಾಡಿ ಪಾಡಿ ವಿಶೇಷಾರ್ಥಜ್ಞಾನದಿಂದ ಆನಂದದಲ್ಲೋಲಾಡುವ  ಈ ಸೌಭಾಗ್ಯ ಮೂರ್ಲೋಕದಲ್ಲಿನ್ನಾವ ಜೀವಿಗುಂಟು,

ಇದು ಮಧ್ವಮತದ ಸೌಭಾಗ್ಯವೆನ್ನಿ,


ದಾಸಸಾಹಿತ್ಯ&ಪ್ರವಚನಗಳು

:-ಪರಮಾತ್ಮನ ಪರಮೋತ್ತಮವಾದ ಗುಣಗಳನ್ನು & ನಿರ್ದೋಷತೆಯನ್ನೂ ಭಕ್ತವಶ್ಯತ್ವವನ್ನೂ, ಇವೇ ಮೊದಲಾದ ಅನೇಕಗುಣಗಳನ್ನು 

& ಜ್ಞಾನಭಕ್ತಿವೈರಾಗ್ಯಗಳನ್ನ ಸಂಪಾದಿಸಿದ ಭಗವದ್ಭಕ್ತರ ಕಥೆಗಳು ಕೀರ್ತನೆಗಳ ಮೂಲಕ ತಿಳಿಸುವ ತನ್ಮೂಲಕ ಅವುಗಳನ್ನು  ನಮ್ಮದಾಗಿಸಿಕೊಳ್ಳಲು ಸಾಧನಗಳಾದ

 ಭಾಗವತ ರಾಮಾಯಣ.ಮಹಾಭಾರತ ಪುರಾಣಗಳ ಮೂಲಕವೇ ಸರ್ವರಿಗೂ ತತ್ವಜ್ಞಾನವನ್ನು& ನವವಿಧಭಕ್ತಿಯಲ್ಲಿ ಮುಖ್ಯವಾಗಿ  ಶ್ರವಣಕೀರ್ತನಗಳೆರಡೂ  ಆಗುವಂತಹ, ಸ್ವಯೋಗ್ಯಗ್ರಂಥಗಳ ಶ್ರವಣಮಂಗಲವಾದ, ಕೀರ್ತನರೂಪವಾದ

ಹರಿಯ ಆರಾಧನೆಗೆ ಪೂರಕವಾದ ಸಕಲಚಿಂತನೆಗಳ ಸಾರರೂಪವಾದ,

ಕರ್ಣಭೂಷಣವೂ ಹೌದು, 

ಆನಂದೊದ್ರೇಕ...  

ಇದು ಈ ಮತವಲ್ಲದೆ ಇಂತಹ ಸೌಭಾಗ್ಯ ಇನ್ನೆಲ್ಲಿ... 


ವ್ರತಗಳು,

:- ವೇದಾದಿಸಿದ್ಧವಾದ ಏಕಾದಶೀಚಾತುರ್ಮಾಸ್ಯ ವಿಷ್ಣುಪಂಚಕಾದಿ  ಸಮಸ್ತವೈಷ್ಣವವ್ರತಗಳ ಮೂಲಕ ವಿಷಯವೈರಾಗ್ಯಕ್ಕೆ ಮುಖ್ಯಸಾಧನವೆನಿಸಿ,

ಆರೋಗ್ಯ ಕೊಡುವ ...ಏಕಾಂತಕ್ಕನುಕೂಲವಾಗುವ ಹಾಗೂ ಅರಿಷಡ್ವರ್ಗಗಳನಿಗ್ರಹಕ್ಕೆ ಮನೋವಿಶುದ್ಧಿಗೆ ಬುದ್ಧಿಶುದ್ಧಿಗೆ ...ದೊಡ್ಡಸಾಧನವಾಗುವ ವ್ರತಗಳಿವು . ವ್ರತಗಳಲ್ಲಿರುವ  ಭಗವಂತನಿಗಾಗಿ ಜಾಗರಣೆ ಭಜನೆ ಧ್ಯಾನಮೌನದಾನಾದಿಗಳು  ಸಂಕೀರ್ತನಾದಿಗಳಮೂಲಕ ಶ್ರೀಮಧ್ವೇಶನಿಗೆ ನಿಷ್ಕಾಮಕರ್ಮವನ್ನರ್ಪಿಸುವ  ಈ ಸೌಭಾಗ್ಯ  ಇದು ಮಾಧ್ವರಿಗಲ್ಲದೆ  ಇನ್ನೆಲ್ಲಿ ...


ಕ್ರೀಡೆ&ಕಲೆಗಳು ವೈಕುಂಠಪಟ 

ಪಂಚೀಕರಣ, ಪರಮಾತ್ಮನ ನಾನಾರೂಪಗಳ ಚಿತ್ರರಚನೆ& ಪ್ರತಿಮಾರಚನೆ & ಮಂಟಪರಚನೆ &ಕೋಲಾಟ,& ರಂಗೋಲಿ& ಶ್ಲೋಕಾಂತ್ಯಕ್ಷರಿ

ದಾಸಸಾಹಿತ್ಯದ ಹಾಡುಗಳ ಅಂತ್ಯಾಕ್ಷರೀ

ಶಾಸ್ತ್ರೀಯಅಷ್ಟಾವಧಾನ,  ಗ್ರಂಥಪಂಕ್ತಿಕಂಠಸ್ಥೀಕರಣ...

ಸರ್ವಮೂಲಾದಿ ಗ್ರಂಥನಾಮಗಳ ಕ್ರಮ ವ್ಯುತ್ಕ್ರಮದಂತೆ ಹೇಳುವುದು..

ತನ್ಮೂಲಕ ಸರ್ವತ್ರ ಪುಣ್ಯಸಾಧನ...

 ಮಾಧ್ವರಿಗಲ್ಲದೆ. ಇನ್ನೆಲ್ಲಿ


 ಪುಣ್ಯಕ್ಷೇತ್ರಗಳು:- ಪರಮಾತ್ಮನ ದಿವ್ಯಸನ್ನಿಧಿಗಳಲ್ಲಿ ಯಾವ ಕ್ಷೇತ್ರ ಸಂದರ್ಶಿಸದೆ.. ತತ್ವಜ್ಞಾನಿ ಎನಿಸನೋ &ಮುಕ್ತಿ ದು:ಸಾಧ್ಯವೋ ,ಯಾವಕ್ಷೇತ್ರದಲ್ಲಿ ಸಮಸ್ತಕರ್ಮಗಳು ಪ್ರತ್ಯಕ್ಷವಾಗಿ ಮಧ್ವಾಂತರ್ಗತಕೃಷ್ಣಾರ್ಪಣವೆನ್ನಲು ಸಾಧ್ಯವೋ.. , ಮೂರ್ಲೋಕದಲ್ಲಿ ಇದಕ್ಕೆ ಸಮನಾದ ತೀರ್ಥಕ್ಷೇತ್ರ ಗಳಿಲ್ಲವೋ... ತಾನೇ. ತಾನಾಗಿ ಲಿಂಗದಲಿ ನಿಂತಿರುವ  ಅನಂತಾಸನನಿರುವನೋ,

ಸಾಧನೆಗೆ ಪ್ರತಿಬಂಧವನ್ನು ಮಥಿಸಿ ಭಕ್ತರಿಗೆ ಪಾಶದಿಂದ ತನ್ನೆಡೆಗೆ ಸೆಳೆಯುವದಕ್ಕಾಗಿಯೇ ಭೈಷ್ಮೀಮಧ್ವಕರಾರ್ಚಿತ ಶ್ರೀಕೃಷ್ಣನಿರುವನೋ ,  ಅದೃಶ್ಯರಾಗಿ ಇಂದಿಗೂ ಇರುವ ಚತುರ್ದಶಭುವನದಾಚಾರ್ಯರು ಶ್ರೀಮದಾನಂದತೀರ್ಥರಿರುವವರೋ 

ಚಂದ್ರಮೌಳೀಶ್ವರನಿರುವನೋ ನಿತ್ಯ ಗಂಗೆಯಸನ್ನಿಧಾನವಿರುವ& 12ವರ್ಷಗಳಿಗೊಮ್ಮೆ ಗಂಗೆ ಪ್ರತ್ಯಕ್ಷಳಾಗುವ ಮಧ್ವಸರೋವರವಿರುವುದೋ..

ಸಕಲದೇವತೆಗಳು ಇಂದಿಗೂ ಎಲ್ಲಿ ಹರಿಯನ್ನು ಸೇವಿಸುತ್ತಿರುವರೋ...,

 ತಂತ್ರಸಾರೋಕ್ತಕ್ರಮದಂತೆ ಪೂಜಿಸಲ್ಪಡುವ ಏಕಮಾತ್ರ ಕ್ಷೇತ್ರವೋ  ಅಂತಹ ರಜತಪೀಠಪುರ( ಉಡುಪಿ) ಮಾಧ್ವರ ತವರೂರು......

 ವೈಷ್ಣವರಿಗೇ ಒಲಿಯುವ ಬದರೀ ತಿರುಪತಿ ಪಂಢರಾಪುರವೇ ಮೊದಲಾದ  ಸಮಸ್ತಕ್ಷೇತ್ರಗಳು  ಗಂಗಾದಿನದಿಗಳು 

ಜ್ಞಾನಿಗಳ ಅಂಗಳ.

ಹರಿಯನ್ನೋಲಿಸಿದ

ಜ್ಞಾನಿಗಳ ಸಾಧನಾಭೂಮಿ, ತಪೋಭೂಮಿ ವೃಂದಾವನಗಳೇ ಅತೀ ದೊಡ್ಡಕ್ಷೇತ್ರಗಳಾಗಿ ಮೆರೆಯುತ್ತಿರುವೆ., ಈ ಎಲ್ಲ ಕ್ಷೇತ್ರಗಳ ದರ್ಶನದಿಂದ ಅಲ್ಲಿನ ಜ್ಜ್ಞಾನಿಗಳ ದರ್ಶನ,ಸೇವೆ, ಅವರ ಉಪದೇಶ ಇವುಗಳ 

ಮೂಲಕ ದೇಹವೇ ಭಗವಂತನ ಕ್ಷೇತ್ರವೆನಿಸುವಂತೆ ಮಾಡಿಕೊಳ್ಳುವ ದೊಡ್ಡ ಸೌಭಾಗ್ಯ ಇನ್ನಾರಿಗೆ..


ಮಧ್ವಶಾಸ್ತ್ರ-

ಯಾವುದು ಅನಾದಿಸಿದ್ಧಾಂತವೋ , ಪ್ರತ್ಯಕ್ಷಾನುಮಾನಾಗಮಗಳಿಂದ ಸಿದ್ಧವೋ, ಹರಿಯೇ ಪರದೈವನೋ, ಶ್ರೀಮಧ್ವಾಚಾರ್ಯರು ಗುರುಗಳೋ 

ಮುಕ್ತಿಯೇ ನೆಲೆಯೋ

ಅನಂತಾನಂದವೇ ಫಲವೋ,

ಯಾವ ಶಾಸ್ತ್ರದ ಶ್ರವಣ ಅಧ್ಯಯನ ಅನುಷ್ಠಾನಾದಿಗಳಿಂದ 

ದೇಹವೂ ಕ್ಷೇತ್ರವಾಗುವುದೋ

ಗೋಪಿ&ಮುದ್ರೆ&ಗಂಧಾಕ್ಷತೆ& ತುಳಸಿಪದ್ಮಾಕ್ಷಿ ಮಾಲೆಗಳೂ ಅಲಂಕಾರವೆನೆಸುವವೋ,

ಮಂತ್ರಾಕ್ಷತೆಯೇ ರಕ್ಷಾಕವಚವೋ,

ಅಕ್ಷರವೂ ಭಗವದ್ಗುಣವರ್ಣನೆ ಎನಿಸುವುದೂ, ಭೋಜನವೂ ಪ್ರಸಾದವೆನಿಸುವುದೋ..

ಜಗತ್ತೂ  ಪೂಜಾಸಾಧನವಾಗುವುದೋ,

ಷಡ್ವೈರಿಗಳೂ ಮಿತ್ರರಾಗುವವೋ ,

ರೋಗಾದಿಗಳು ತಪಸ್ಸಾಧನವೆನಿಸುವವೋ 

ಪ್ರತೀ ಕರ್ಮ ಮುಕ್ತಿಸಾಧನವೆನಿಸುವುದೋ..

ಭವವೂ ಬಾಧಿಸದೋ

ಸುಜ್ಞಾನವೈರಾಗ್ಯಾದಿಗಳೆ ಆಸ್ತಿಯೋ,

ವೈಷ್ಣವರೇ ಬಾಂಧವರೋ

ಸರ್ವವೂ ಸಮರ್ಪಣೀಯವೋ..

ವೇದಾದಿ ಸಮಸ್ತವಾಙ್ಮಯಪ್ರಪಂಚವೂ ತತ್ವಬೋಧಕವಾಗವುದೋ ಸಾರ್ಥಕವಾಗುವುದೋ,

ದುರ್ಮತಧ್ವಾಂತದ ನಿವಾರಣೆ ಆಗುವುದೋ.. 

ಯಾವ ಮತದಲ್ಲಿ ಸಾತ್ವಿಕರಾದ  ಸಕಲಜೀವಿಗಳಿಗೂ  ಮೋಕ್ಷವಿದೆಯೋ ,

ಯಾವ ಮತವೇ ಅಂತತ: ಸಿದ್ಧವಾಗಿದೇಯೋ...

ಅದು ಈ ನಮ್ಮ ಮಧ್ವಮತ ಇಂತಹಾ ಸೌಭಾಗ್ಯ ವೈಭವ  ಚತುರ್ದಶಭುವನದಲ್ಲಿ ಇನ್ನೆಲ್ಲೂ ಸರ್ವಥಾ ಸರ್ವಥಾ ಸರ್ವಥಾ ಸಿಗದು.....


ಆಚಾರ್ಯ: ಪವನೋಸ್ಮಾಕಂ

 ಆಚಾರ್ಯಾನೀ ಚ ಭಾರತೀ/

ದೇವೋ ನಾರಾಯಣ:ಶ್ರೀಶ:

ದೇವೀ ಮಂಗಲದೇವತಾ//

-ಯುಕ್ತಿಮಲ್ಲಿಕಾ 


ಅಹೋಭಾಗ್ಯಮಹೋಭಾಗ್ಯಂ ಮಾಧ್ವಮಾರ್ಗಾನುವರ್ತಿನಾಮ್/

ದೇವೋರಮಾಪತಿರ್ಯತ್ರ

ಯದ್ಗುರುರ್ಭಾರತೀಪತಿ://


ಜಯತಿ ಶ್ರೀರಮಾಕಾಂತ:

ಜಯತಿ ಶ್ರೀಶ್ಚ ತತ್ಪ್ರಿಯಾ/

ಶ್ರೀ ಶ್ರೀಶಭಕ್ತೋ ಜಯತಿ

 ಮಧ್ವೋ ವಿಧ್ವಸ್ತಸಾಧ್ವಸ://

-ಯುಕ್ತಿಮಲ್ಲಿಕಾ


  ಸ್ವಸ್ವಯೋಗ್ಯ ಶಾಸ್ತ್ರಧ್ಯಯನನದ ಮೂಲಕ ಸರ್ವರಿಗೂ ಹರಿಭಕ್ತರಾಗುವ,

ಸ್ವವಿಹಿತವೃತ್ತಿಯಿಂದ ಭಕ್ತಿಯಿಂದ ಪರಮಾತ್ಮನನ್ನು ಆರಾಧಿಸುವ ಪರಮಧರ್ಮಾಚರಣೆಗೆ ಸಾಧನವಾಗಿಸಿ ಮೋಕ್ಷಪ್ರದವಾಗುವ 

 ಏಕೈಕ ಮತ ಅದು ಮಧ್ವಮತ.


ಅಲ್ಪಕಾಲದರೂ ಮಧ್ವಮತವ ಪೊಂದು ಭವವೀ ನಿರ್ಲೇಪ...

          -ಗೋಪಾಲದಾಸರು


ಮಧ್ವರಾಯರ ಕರುಣಪಡೆಯದವ ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು

       -ವಿಜಯದಾಸರು

ಆನಂದತೀರ್ಥರಮತ ಪರಮ ಆನಂದಸಾಧನ ತಿಳಿಕಂಡ್ಯ

                 -ಶ್ರೀವ್ಯಾಸತತ್ವಜ್ಞರು( ವಾಸುದೇವವಿಠಲರು)


✍️ಅನಿಲ ಜೋಷಿ


•||मध्वो देदिप्यतेसौ जगति विजयते सत्सभामङ्गलाय।।•

*****


No comments:

Post a Comment