ಹಿಂದೆ ನನ್ನನ್ನು ಕಾಡುತ್ತಿದ್ದ ಅತಿದೊಡ್ಡ ಸಂದೇಹವೆಂದರೆ ಈ 'ಕಸಬಾ' ಎಂಬ ಊರು ಎಲ್ಲಿದೆ ಎಂಬುದು.
ಆದರೆ, ಕಡೆಕಡೆಗೆ ಯಾವ ತಾಲ್ಲೂಕಿಗೆ ಹೋದರೂ ಕಸಬಾ ಹೋಬಳಿ ಎಂಬ ಪದವನ್ನು ಕೇಳಿದಮೇಲಂತೂ ಇದ್ಯಾವ ಹೋಬಳಿಯಪ್ಪಾ ಎನಿಸಲಾರಂಭಿಸಿತು. ಆಮೇಲಾಮೇಲೆ ಕಸಬಾ ಎನ್ನುವುದು ಊರಲ್ಲ, ಕಂದಾಯ ಇಲಾಖೆಯಡಿಯಲ್ಲಿ ಬರುವ ಯಾವುದೋ ಶಬ್ದ ಎನ್ನುವುದು ಅರ್ಥವಾದರೂ ಈ ಕಸಬಾ ಪದವನ್ನು ಡಿ ಕೋಡ್ ಮಾಡಬೇಕು ಎನ್ನುವ ಆಲೋಚನೆ ಆಗಾಗ ಬಂದು ಮರೆತುಹೋಗುತ್ತಿತ್ತು. ಈಗ ಯಾವುದೊ ಸುದ್ದಿ ಓದುವಾಗ ಕಸಬಾ ಎನ್ನುವ ಪದವನ್ನು ಕಂಡು, ಈ 'ಕಸಬಾ' ಅಂದ್ರೇನಪ್ಪಾ ? ಅಂತ AI ಯನ್ನು ಕೇಳಿದೆ. ಅದು, ಕಸಬಾ ಅರೇಬಿಕ್ ಪದ Qasbah ದಿಂದ ಹುಟ್ಟಿ ಪರ್ಶಿಯನ್, ಉರ್ದು ಮೂಲಕ ಭಾರತಕ್ಕೆ ಬಂದು ನಂತರ ಟಿಪ್ಪು ಹಾಗೂ ಬ್ರಿಟಿಷ್ ಆಡಳಿತದ ಮೂಲಕ ಕರ್ನಾಟಕದಲ್ಲಿ ಸರ್ವವ್ಯಾಪಿಯಾಯಿತು ಅಂತ ಹೇಳಿತು. ಈ ಪದ ದೆಹಲಿ ಸುಲ್ತಾನರ ಕಾಲದಲ್ಲಿ ಕ್ರಿ.ಶ 1206 ರಲ್ಲಿ ಆರಂಭವಾಗಿ ಮೊಘಲರ ಕಾಲದಲ್ಲಿ (1526) ವ್ಯಾಪಕವಾಗಿ ಬಳಕೆಗೆ ಬಂತು ಎನ್ನುವ ಮಾಹಿತಿ ದೊರಕಿತು.
ಅದಷ್ಟೇ ಅಲ್ಲದೇ ಅರೇಬಿಕ್ ಮೂಲದ ಹತ್ತಾರು ಪದಗಳು ಕಂದಾಯ ಇಲಾಖೆಯೊಳಗೆ ಶತಮಾನಗಳಿಂದ ಬೇರು ಬಿಟ್ಟು ಕುಳಿತಿವೆ ಎನ್ನುವ ಮಾಹಿತಿಯೂ ಸಿಕ್ಕಿತು.
ಅದರಲ್ಲಿ ಕೆಲವು ಪದಗಳ ಪಟ್ಟಿ ಕೆಳಗಿವೆ.
ಕಸಬಾ (Kasba)
ಅರೇಬಿಕ್
ಮುಖ್ಯ ಪಟ್ಟಣ, ತಾಲ್ಲೂಕು ಕೇಂದ್ರದ ಹೋಬಳಿ
ತಾಲ್ಲೂಕು (Taluk)
ಅರೇಬಿಕ್ Ta'alluq
ಆಡಳಿತ ಘಟಕ
ತಹಶೀಲ್ದಾರ್ (Tahsildar)
ಅರೇಬಿಕ್ + ಪರ್ಷಿಯನ್
ಕಂದಾಯ ಅಧಿಕಾರಿ
ತಹಶೀಲ್ (Tahsil)
ಅರೇಬಿಕ್
ಕಂದಾಯ ವಸೂಲಿ ವಿಭಾಗ
ಜಮಾಬಂದಿ (Jamabandi)
ಪರ್ಷಿಯನ್
ಭೂದಾಖಲೆಗಳ ವಾರ್ಷಿಕ ಪರಿಶೀಲನೆ
ಜಮೀನು (Zameen)
ಪರ್ಷಿಯನ್
ಭೂಮಿ
ಇನಾಮ್ (Inam)
ಅರೇಬಿಕ್
ದಾನವಾಗಿ ನೀಡಿದ ಭೂಮಿ
ಜಾಗೀರ್ (Jagir)
ಪರ್ಷಿಯನ್
ಸೇವೆಗೆ ಪ್ರತಿಯಾಗಿ ನೀಡಿದ ಭೂಸ್ವತ್ತು
ಖರಾಬು (Kharab)
ಅರೇಬಿಕ್
ಕೃಷಿಗೆ ಯೋಗ್ಯವಲ್ಲದ ಭೂಮಿ
ವಕ್ಫ್ (Waqf)
ಅರೇಬಿಕ್
ಧಾರ್ಮಿಕ ದತ್ತಿ ಆಸ್ತಿ
ಮೋಜಣಿ (Mauza/Mauje)
ಪರ್ಷಿಯನ್
ಕಂದಾಯ ಗ್ರಾಮ
ದರಖಾಸ್ತು (Darkhast)
ಪರ್ಷಿಯನ್
ಅರ್ಜಿ
ಖಾತಾ (Khata)
ಅರೇಬಿಕ್
ಲೆಕ್ಕ / ಆಸ್ತಿ ಖಾತೆ
ಖಾತೆದಾರ (Khathedar)
ಅರೇಬಿಕ್
ಖಾತೆ ಹೊಂದಿರುವ ಭೂ ಮಾಲೀಕ
ಪಟ್ಟಾ (Patta)
ಪರ್ಷಿಯನ್/ಉರ್ದು ಪ್ರಭಾವ
ಭೂಸ್ವಾಮ್ಯದ ದಾಖಲೆ
ಇವೆಲ್ಲಕ್ಕಿಂತ ನನಗೆ ತಮಾಷೆಯೆನಿಸಿದ್ದು ಇವೆಲ್ಲಾ ಅರೇಬಿಕ್/ಪರ್ಷಿಯನ್, ಉರ್ದು ಪದಗಳ ದೊಡ್ಡಪ್ಪನಾದ ಕಂದಾಯ ಇಲಾಖೆಯ 'ಕಂದಾಯ' ಎಂಬ ಪದವೇ ಅರೇಬಿಕ್!
ಬೃಹತ್ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಕನ್ನಡ ನಾಡಿನ ಸರ್ಕಾರಿ ದಾಖಲೆಗಳಲ್ಲಿ ಇಷ್ಟು ಪ್ರಮಾಣದಲ್ಲಿ ವಿದೇಶಿ ಪದಗಳು ಶತಮಾನಗಳಿಂದ ಬೇರು ಬಿಟ್ಟಿದ್ದರೂ, ಅಂಗಡಿಯ ಬೋರ್ಡಿನಲ್ಲಿ ಅರವತ್ತು ಪರ್ಸೆಂಟ್ ಕನ್ನಡ ಇರಬೇಕು ಎಂದು ಬೆರಸಾಡುವ ಕನ್ನಡ ಅಭಿವೃದ್ದಿ ಪ್ರಾಧಿಕಾರದ್ದು ಈ ವಿದೇಶಿ ಪದಗಳನ್ನು ಕನ್ನಡೀಕರಣಗೊಳಿಸುವ ವಿಚಾರದಲ್ಲಿ ಮಾತ್ರ ದಿವ್ಯ ನಿರ್ಲಕ್ಷ್ಯ.
***