SEARCH HERE

Sunday, 17 October 2021

ಮನುಸ್ಮೃತಿ manusmriti some shlokas to read in kannada

🌷ಮನುಸ್ಮೃತಿ ಅಧ್ಯಾಯ-2🌷

ಗುರು ಸನ್ನಿಧಿಯಲ್ಲಿ ಶಿಷ್ಯನು ಹೇಗಿರಬೇಕೆಂಬುದನ್ನು ತಿಳಿಸುತ್ತಾ ---

ಚೋದಿತೋ ಗುರುಣಾ ನಿತ್ಯಮಪ್ರಚೋದಿತ ಏವ ವಾ|

ಕುರ್ಯಾದಧ್ಯಯನೇ ಯತ್ನಮಾಚಾರ್ಯಸ್ಯ ಹಿತೇಷು ಚ ||191||

----ಗುರುಕುಲದಲ್ಲಿದ್ದಮೇಲೆ ಗುರುಗಳು "ಮಾಡು" ಎಂದು ಹೇಳಿದರೂ ಸರಿ , ಹೇಳದಿದ್ದರೂ ಸರಿ ನಿತ್ಯವೂ  ತನ್ನ ಅಧ್ಯಯನದಲ್ಲಿ ತೊಡಗುತ್ತಾ ಅವರಿಗೆ ಹಿತಕರವಾದ ಕಾರ್ಯವನ್ನೇ ಮಾಡಬೇಕು.


ಶರೀರಂ ಚೈವ ವಾಚಂ ಚ ಬುದ್ಧೀಂದ್ರಿಯಮನಾಂಸಿ ಚ|

ನಿಯಮ್ಯ ಪ್ರಾಂಜಲಿಸ್ತಿಷ್ಠೇದ್ವೀಕ್ಷಮಾಣೋ ಗುರೋರ್ಮುಖಮ್||192||

------ ಪಾಠದ ಸಮಯದಲ್ಲಿ ಶಿಷ್ಯನು ಗುರುಸನ್ನಿಧಿಯಲ್ಲಿ ನಿಂತಕೊಂಡೇ ತನ್ನ ದೇಹ , ಮನಸ್ಸು , ಬುದ್ಧಿ , ವಾಣಿ ಹಾಗೂ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಗುರುಗಳ ಮುಖವನ್ನೇ ವೀಕ್ಷಿಸುತ್ತಿರಬೇಕು.


ನಿತ್ಯಮುದ್ಧೃತಪಾಣಿಃ ಸ್ಯಾತ್ಸಾಧ್ವಾಚಾರಃ ಸುಸಂಯತಃ|

ಆಸಾತಾಮಿತಿ ಚೋಕ್ತಃ ಸನ್ನಾಸೀತಾಭಿಮುಖಂ ಗುರೋಃ||193||

---- ಉತ್ತರೀಯದಿಂದ ತನ್ನ ತೋಳನ್ನೆತ್ತಿಕೊಂಡು ಶಿಷ್ಟಾಚಾರವನ್ನು ಪಾಲಿಸುತ್ತಾ ಸದಾಚಾರ ಯುಕ್ತದಿಂದ ನಿಂತುಕೊಂಡವನು ಯಾವಾಗ ಗುರುಗಳು "ಕುಳಿತುಕೋ" ಎಂದು ಹೇಳಿದಾಗಲೇ ಆ ಗುರುಗಳ ಸಮ್ಮುಖದಲ್ಲಿ ಕುಳಿತುಕೊಳ್ಳಬೇಕು ಎಂಬುದಾಗಿ. 

***


ಹೀನಾನ್ನವಸ್ತ್ರ ವೇಷಃ ಸ್ಯಾತ್ಸರ್ವದಾ ಗುರುಸನ್ನಿಧೌ|

ಉತ್ತಿಷ್ಠೇತ್ಪ್ರಥಮಂ ಚಾಸ್ಯ ಚರಮಂ ಚೈವ ಸಂವಿಶೇತ್||194||

---- ಯಾವಾಗಲೂ ಗುರುಗಳ ಸನ್ನಿಧಿಯಲ್ಲಿ ಶಿಷ್ಯನ ಅನ್ನ-ವಸ್ತ್ರ ಮತ್ತು  ಅಲಂಕಾರಗಳು ಆ ಗುರುವಿಗಿಂತ ಕಡಿಮೆ ದರ್ಜೆಯದಾಗಿರಬೇಕು. ಅಲ್ಲದೇ ಪ್ರಾತಃಕಾಲ ಗುರುವಿಗಿಂತ ಬೇಗ ಏಳಬೇಕು ಮತ್ತು ರಾತ್ರಿ ಗುರುಗಳು ಮಲಗಿದ ನಂತರವೇ ಮಲಗಬೇಕು ಎಂಬುದಾಗಿ.

**

ಶಿಷ್ಯನಾದವನು ಗುರುಗಳೊಂದಿಗೆ ಹೇಗೆ ವಿನಮ್ರವಾಗಿ ವರ್ತಿಸಬೇಕೆಂಬುದನ್ನು ಈ ಕೆಳಗಿನ ಶ್ಲೋಕಗಳಿಂದ ತಿಳಿಸುತ್ತಾರೆ---


ಪ್ರತಿಶ್ರವಣಸಂಭಾಷೇ ಶಯಾನೋ ನ ಸಮಾಚರೇತ್|

ನಾಸೀನೋ ನ ಚ ಭುಂಜಾನೋ  ನ ತಿಷ್ಠನ್ನ ಪರಾಙ್ಮುಖಃ||195||

---- ಶಿಷ್ಯನಾದವನು ಮಲಗಿಕೊಂಡು, ಆಸನದಲ್ಲಿ ಕುಳಿತುಕೊಂಡು , ಊಟ ಮಾಡುವಾಗ ಅಲ್ಲದೇ ಗುರುವಿಗೆ ಬೆನ್ನು ಮಾಡಿಕೊಂಡು ನಿಂತು ಅಲ್ಲಿಂದಲೇ ಗುರುವಿನೊಡನೆ ಸಂಭಾಷಣೆಯನ್ನು ಮಾಡಬಾರದು.


ಆಸೀನಸ್ಯ ಸ್ಥಿತಃ ಕುರ್ಯಾದಭಿಗಚ್ಛಂಸ್ತು ತಿಷ್ಠತಃ|

ಪ್ರತ್ಯುದ್ಗಮ್ಯ ತ್ವಾವ್ರಜತಃ ಪಶ್ಚಾದ್ಧಾವಂಸ್ತು ಧಾವತಃ||196||

----- ಗುರುಗಳು ಕುಳಿತಿದ್ದರೆ ಶಿಷ್ಯನು ಎದ್ದು ನಿಂತು , ಗುರುಗಳು ನಿಂತಿದ್ದರೆ ಶಿಷ್ಯನು ಬಳಿಬಂದು ನಿಂತು , ಗುರುಗಳು ಬರುತ್ತಿದ್ದರೆ ಅವರೆದುರು ನಡೆದುಹೋಗಿ  , ಗುರುಗಳು ಧಾವಿಸುತ್ತಾ ಹೋಗುತ್ತಿದ್ದರೆ ಅವರನ್ನು ಹಿಂಬಾಲಿಸಿ ಓಡಿಹೋಗಿಯೇ ಅವರ ಆಜ್ಞೆಯನ್ನು ಪರಿಪಾಲಿಸಬೇಕು.


ಪರಾಙ್ಮುಖಸ್ಯಾಭಿಮುಖೋ ದೂರಸ್ಥಸ್ಯೈತ್ಯ ಚಾಂತಿಕಮ್|

ಪ್ರಣಮ್ಯ ತು ಶಯಾನಸ್ಯ ನಿದೇಶೇ ಚೈವ ತಿಷ್ಠತಃ||197||

----- ಗುರುಗಳು ಬೆನ್ನು ಮಾಡಿಕೊಂಡು ಮಾತನಾಡುವಾಗ ಅವರೆದುರು ಹೋಗಿ , ಗುರುಗಳು ದೂರದಿಂದ ಮಾತನಾಡಿಸಿದರೆ ಸಮೀಪಕ್ಕೆ ಅಭಿಮುಖವಾಗಿ ಹೋಗಿ , ಗುರುಗಳು ಮಲಗಿಕೊಂಡು ಮಾತನಾಡಿಸಿದರೆ ಅವರಿಗೆ ನಮಸ್ಕರಿಸುತ್ತಾ , ಗುರುಗಳು ಸಮೀಪದಿಂದ ಮಾತನಾಡಿಸಿದರೆ ತಲೆತಗ್ಗಿಸಿ  ನಿಂತು ಮಾತನಾಡುವುದನ್ನು ಶಿಷ್ಯನಾದವನು ರೂಢಿಸಿಕೊಳ್ಳಬೇಕು.

***

ನೀಚಂ ಶಯ್ಯಾಸನಂ ಚಾಸ್ಯ ಸರ್ವದಾ ಗುರುಸನ್ನಿಧೌ|

ಗುರೋಸ್ತು ಚಕ್ಷುರ್ವಿಷಯೇ ನ ಯಥೇಷ್ಟಾಸನೋ ಭವೇತ್||198||

---- ಶಿಷ್ಯನ ಹಾಸಿಗೆ ಮತ್ತು ಆಸನಗಳು ಗುರುಗಳ ಸನ್ನಿಧಿಯಲ್ಲಿ  ಗುರುಗಳಿಗಿಂತ ಕೆಳಗಿರಬೇಕು. ಅಲ್ಲದೇ ಗುರುಗಳೆದುರು ಕಾಲುಚಾಚಿಕೊಂಡು ಕುಳಿತುಕೊಂಡಿರಬಾರದು.


ನೋದಾಹರೇದಸ್ಯ ನಾಮ ಪರೋಕ್ಷಮಪಿ ಕೇವಲಮ್|

ನ ಚೈವಾಸ್ಯಾನುಕುರ್ವೀತ ಗತಿಭಾಷಿತಚೇಷ್ಟಿತಮ್||199||

------ ಗುರುಗಳನ್ನು ಆಚಾರ್ಯ ಎಂಬುದಾಗಿ ಸಂಬೋಧಿಸುತ್ತಾ , ಇನ್ನೊಬ್ಬರೆದುರು  ಅವರನ್ನು ಪರಿಚಯಿಸುವಾಗ ಅವರ ಹೆಸರಿನ ಮುಂದೆ ಆಚಾರ್ಯ ಎಂಬ ಪದವನ್ನು ಸೇರಿಸದೇ ಹೇಳಬಾರದು. ಅಲ್ಲದೇ ಅವರ ನಡೆ-ನುಡಿಗಳನ್ನು ಯಾವ ಕಾಲಕ್ಕೂ  ಅನುಕರಣೆ ಮಾಡಬಾರದು. 

***

ಗುರುಗಳ ನಿಂದನೆ ಮಾಡಿದರೆ ಶಿಷ್ಯನು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು--


ಗುರೋರ್ಯತ್ರ ಪರೀವಾದೋ ನಿಂದಾ ವಾsಪಿ ಪ್ರವರ್ತತೇ|

ಕರ್ಣೌತತ್ರ ಪಿಧಾತವ್ಯೌ ಗಂತವ್ಯಂ ವಾ ತತೋsನ್ಯತಃ||200||

---- ಎಲ್ಲಿ ಗುರುಗಳ ನಿಂದೆ-ದೂಷಣೆ ನಡೆಯುತ್ತದೆಯೋ ಅಲ್ಲಿ ಶಿಷ್ಯನು ಕಿವಿಮುಚ್ಚಿಕೊಳ್ಳಬೇಕು , ಇಲ್ಲವೇ ಆ ಸ್ಥಳದಿಂದ ದೂರಹೋಗಬೇಕು.


ಪರೀವಾದಾತ್ಖರೋ ಭವತಿ ಶ್ವಾ ವೈ ಭವತಿ ನಿಂದಕಃ|

ಪರಿಭೋಕ್ತಾ ಕೃಮಿರ್ಭವತಿ ಕೀಟೋ ಭವತಿ ಮತ್ಸರೀ||201||

--- ಗುರುವನ್ನು ಶಿಷ್ಯನೇ ಬೈದರೆ  ಮುಂದೆ ಕತ್ತೆಯಾಗಿ ,  ನಿಂದಿಸಿದರೆ ನಾಯಿಯಾಗಿಯೂ ಜನ್ಮತಾಳುವನು. ಮತ್ತು ಗುರು ಧನವನ್ನು ಅಪಹರಿಸಿದರೆ ಕ್ರಿಮಿಯಾಗಿಯೂ ,  ಮತ್ಸರ ಪಟ್ಟರೆ ಕೀಟವಾಗಿಯೂ ಜನ್ಮತಾಳುವನು.


ದೂರಸ್ಥೋ ನಾರ್ಚಯೇದೇನಂ ಕ್ರುದ್ಧೋ ನಾಂತಿಕೇ ಸ್ತ್ರೀಯಾಃ|

ಯಾನಾಸನಸ್ಥಶ್ಚೈವ್ಯೆನಮವರುಹ್ಯಾಭಿವಾದಯೇತ್||202||

----- ಗುರುಗಳು ದೂರದಲ್ಲಿರುವಾಗ , ಸಿಟ್ಟಾದಾಗ , ಯಾವುದೋ ಕಾರ್ಯ ನಿಮಿತ್ತವಾಗಿ ಸ್ತ್ರೀಯರ ಬಳಿಯಿರುವಾಗ ಅವರನ್ನು ಆ ಸಮಯದಲ್ಲಿ  ಪೂಜಿಸಬಾರದು. ಶಿಷ್ಯನು ವಾಹನದ ಮೇಲೆ ಅಥವಾ ಆಸನದ ಮೇಲಿದ್ದರೆ ಅದರಿಂದ ಇಳಿದೇ ಗುರುಗಳಿಗೆ ಅಭಿವಂದಿಸಬೇಕು ಎಂಬುದಾಗಿ.

**

ಪ್ರತಿವಾತೇsನುವಾತೇ ಚ ನಾಸೀತ ಗುರುಣಾ ಸಹ|

ಅಸಂಶ್ರವೇ ಚೈವ ಗುರೋರ್ನ ಕಿಂಚಿದಪಿ ಕೀರ್ತಯೇತ್||203||

---- ಗುರುಗಳ ಉಸಿರಿನ ಗಾಳಿ ತನಗೆ ತಾಕುವಂತೆ , ತನ್ನುಸಿರಿನ ಗಾಳಿ ಗುರುಗಳಿಗೆ ತಾಕುವಂತೆ ಶಿಷ್ಯನು ಯಾವತ್ತೂ ಕುಳಿತುಕೊಳ್ಳಬಾರದು. ತುಸು ಅಂತರವಿರಬೇಕು. ಅಲ್ಲದೇ ಗುರುಗಳ ಹಿಂದುಗಡೆ ಅವರಿಗೆ ಕೇಳದಂತೆ ಮಾತನ್ನಾಡಬಾರದು.


ಗೋsಶ್ವೋಷ್ಪ್ರಯಾನಪ್ರಾಸಾದಸ್ರಸ್ತರೇಷು ಕಟೇಷು ಚ|

ಆಸೀತ ಗುರುಣಾ ಸಾರ್ಧಂ ಶಿಲಾಫಲಕನೌಷು ಚ ||204||

---- ಎತ್ತು-ಕುದುರೆ -ಒಂಟೆಗಳು ಎಳೆಯುವ ಎಲ್ಲಾ ಬಂಡಿಗಳಲ್ಲಿ , ಉಪ್ಪರಿಗೆ ಗಳಲ್ಲಿ , ಶಿಲಾತಲಗಳಲ್ಲಿ , ಚಾಪೆಗಳಲ್ಲಿ , ಬಂಡೆಯ ಮೇಲೆ , ನೌಕೆಯಲ್ಲಿ , ಮರದ ಹಲಗೆಯಲ್ಲಿ ಗುರುಗಳ ಜೊತೆಗೆ ಕುಳಿತುಕೊಳ್ಳಬಹುದು.‌


ಗುರೋರ್ಗುರೌ ಸನ್ನಿಹಿತೇ ಗುರುವದ್ವೃತ್ತಿಮಾಚರೇತ್|

ನ ಚಾನಿಸೃಷ್ಟೋ ಗುರುಣಾ ಸ್ವಾನ್ ಗುರೂನಭಿವಾದಯೇತ್||205||

---- ತನ್ನ ಗುರುವಿನ ಗುರುವು ಬಂದಾಗ ಶಿಷ್ಯನಾದವನು ತನ್ನ ಗುರುವಿನ ಜೊತೆ ವರ್ತಿಸುವಂತೆಯೇ ವರ್ತಿಸಬೇಕು. ಮತ್ತು ತನ್ನ ಮನೆಯ ಹಿರಿಯ…

**


ಶ್ರೇಯಃಸು ಗುರುವದ್ವೃತ್ತಿಂ ನಿತ್ಯಮೇವ ಸಮಾಚರೇತ್|

ಗುರುಪುತ್ರೇಷು ಚಾರ್ಯೇಷು ಗುರೋಶ್ಚೈವ ಸ್ವಬಂಧುಷು||207||

--  ಗುರುಪುತ್ರರು , ಗುರುಗಳ ಬಂಧುಗಳು , ಶ್ರೇಷ್ಟ ವ್ಯಕ್ತಿಗಳು ತನ್ನ ಮನೆಯ ಹಿರಿಯರು ಹಾಗೂ ತಪಸ್ವಿಗಳು-ಜ್ಞಾನಿಗಳ ಇವರ ಜೊತೆಗೆ ತನ್ನ ಗುರುಗಳ ಜೊತೆ ವರ್ತಿಸುವಂತೆಯೇ ವರ್ತಿಸಬೇಕು. 


ಬಾಲಃ ಸಮಾನಜನ್ಮಾ ವಾ ಶಿಷ್ಯೋ ವಾ ಯಜ್ಞಕರ್ಮಣಿ|

ಅಧ್ಯಾಪಯನ್ ಗುರುಸುತೋ ಗುರುವನ್ಮಾನಮರ್ಹತಿ||208||

----- ಗುರು ಪುತ್ರನು ಬಾಲಕನಾಗಿರಲಿ , ಸಮಾನವಯಸ್ಕನಾಗಿರಲಿ , ತನಗೆ ಶಿಷ್ಯನೇ ಆಗಿರಲಿ ಯಜ್ಞಕರ್ಮವನ್ನು ಬಲ್ಲವನಾಗಿದ್ದು ಇತರರಿಗೆ ವೇದಾಧ್ಯಯನವನ್ನು ಮಾಡಿಸುತ್ತಿದ್ದರೂ ಒಟ್ಟಿನಲ್ಲಿ ಅವನು ಯಜ್ಞಕಾರ್ಯಗಳಲ್ಲಿ ಗುರುಗಳಷ್ಟೇ ಪೂಜಾರ್ಹನು. ತಾತ್ಪರ್ಯ ಗುರು ಪುತ್ರನು ತನ್ನ ಗುರುವಿಗೆ ಸಮಾನನು ಎಂಬುದಾಗಿ.

**


ಉತ್ಸಾದನಂ ಚ ಗಾತ್ರಾಣಾಂ ಸ್ನಾಪನೋಚ್ಛಿಷ್ಟಭೋಜನೇ|

ನ ಕುರ್ಯಾದ್ಗುರು ಪುತ್ರಸ್ಯ ಪಾದಯೋಶ್ಚಾವನೇಜನಮ್||209||

---- ನೋಡೀ ಗುರು ಪುತ್ರನಿಗೆ ಗೌರವ ಕೊಡಬೇಕು ನಿಜ ಹಾಗಂತ ಅವನ ಮೈತಿಕ್ಕುವುದು , ಸ್ನಾನ ಮಾಡಿಸುವುದು , ಅವನ ಊಟಮಾಡಿದ ನಂತರ ಉಳಿದದ್ದನ್ನು ಊಟಮಾಡುವುದು , ಪಾದಪೂಜೆ ಇತ್ಯಾದಿಗಳನ್ನು  ಮಾಡಕೂಡದು.


ಗುರುವತ್ಪ್ರತಿಪೂಜ್ಯಾಃ ಸ್ಯುಃ   ಸವರ್ಣಾ ಗುರುಯೋಷಿತಃ|

ಆಸವರ್ಣಾಸ್ತು ಸಂಪೂಜ್ಯಾಃ ಪ್ರತ್ಯುತ್ಥಾನಾಭಿವಾದನ್ಯೆಃ||210||

---- ಗುರು ಪತ್ನಿಯರು ಸವರ್ಣೀಯರಾಗಿದ್ದರೆ ಅವರೂ ಸಹ ಗುರುಗಳಷ್ಟೇ ಪೂಜ್ಯರು. ಆದರೆ ಅನ್ಯಜಾತಿಯವರಾಗಿದ್ದರೆ ಅವರಿಗೆ ಎದ್ದುನಿಂತು ನಮಸ್ಕರಿಸುವ ಮೂಲಕ ಗೌರವಿಸಿದರೆ ಸಾಕು.


ಅಭ್ಯಂಜನಂ ಸ್ನಾಪನಂ ಚ ಗಾತ್ರೋತ್ಸಾಧನಮೇವ ಚ|

ಗುರುಪತ್ನ್ಯಾ ನ ಕಾರ್ಯಾಣಿ ಕೇಶಾನಾಂ ಚ ಪ್ರಸಾಧನಮ್||211||

--- ಗುರು ಪತ್ನಿಯರನ್ನು ಗುರುವಿನಂತೆ ಕಾಣಬೇಕು ನಿಜ ಹಾಗಂತ ಅವರಿಗೆ ಅಭ್ಯಂಗ ಮಾಡಿಸುವುದು , ಸ್ನಾನ ಮಾಡಿಸುವುದು , ಮೈ ಉಜ್ಜುವುದು , ಕೂದಲು ಬಾಚುವುದು , ಹೂ ಮುಡಿಸುವುದು ಇತ್ಯಾದಿಗಳನ್ನು ಮಾಡಕೂಡದು ಎಂಬುದಾಗಿ.

**

ಗುರುಪತ್ನೀ ತು ಯುವತಿರ್ನಾಭಿವಾದ್ಯೇಹ ಪಾದಯೋಃ|

ಪೂರ್ಣವಿಶಂತಿವರ್ಷೇಣ ಗುಣದೋಷೌ ವಿಜಾನತಾ||212||

---- ಗುರು ಪತ್ನಿಯು ಪ್ರಾಯದವರಾಗಿದ್ದರೆ 20 ವರ್ಷಗಳು ತುಂಬಿದ ಶಿಷ್ಯನು ನಮಸ್ಕಾರದ ಗುಣ-ದೋಷಗಳನ್ನರಿತು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಬಾರದು ಎಂಬುದಾಗಿ.

**

ಸ್ಮೃತಿ ಕಾರರು ಬಹಳ ಸೂಕ್ಷ್ಮ ವಿಚಾರವನ್ನು ಈ ಕೆಳಗಿನ ಶ್ಲೋಕಗಳಲ್ಲಿ  ಹೇಳುತ್ತಿದ್ದಾರೆ ---

ಕಾಮಂ ತು ಗುರುಪತ್ನೀನಾಂ ಯುವತೀನಾಂ ಯುವಾ ಭುವಿ|

ವಿಧಿವದ್ವಂದನಂ ಕುರ್ಯಾತ್ ಅಸಾವಹಮಿತಿ  ಬ್ರುವನ್||216||

------ ಗುರು ಪತ್ನಿಯು ಪ್ರಾಯದ ತರುಣಿಯಾಗಿದ್ದರೆ ತರುಣನಾದ ಶಿಷ್ಯನು ಅವಳಿಗೆ ಪಾದ ಮುಟ್ಟಿ ನಮಸ್ಕರಿಸಬಾರದು. ನೆಲವನ್ನು ಮುಟ್ಟಿ ದೂರದಿಂದಲೇ ತನ್ನ ನಾಮಧೇಯವನ್ನು ಹೇಳಿಕೊಂಡು ನಮಸ್ಕರಿಸಬೇಕು.


ವಿಪ್ರೋಷ್ಯ ಪಾದಗ್ರಹಣಮನ್ವಹಂ ಚಾಭಿವಾದನಮ್|

ಗುರುದಾರೇಷು ಕುರ್ವೀತ ಸತಾಂ ಧರ್ಮಮನುಸ್ಮರನ್||217||

--- ಆದರೆ ದೂರದ ಪ್ರಯಾಣ ಮಾಡಿ ಮರಳಿ ಬಂದಾಗ ಮಾತ್ರವೇ ಧರ್ಮವನ್ನು ಸ್ಮರಿಸಿಕೊಂಡು ಗುರುಪತ್ನಿಗೆ ಪಾದ ಮುಟ್ಟಿ ನಮಸ್ಕರಿಸಬಹುದು. ಆದರೆ ನಿತ್ಯದಲ್ಲಿ ಮಾತ್ರ ದೂರದಿಂದಲೇ ನಮಸ್ಕರಿಸುವುದು ಸಾಕು ಎಂಬುದಾಗಿ.

**

ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ|

ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ||218||

------ ಭೂಮಿಯನ್ನು ಗುದ್ದಲಿಯಿಂದ ಆಳವಾಗಿ ಬಗೆದಾಗ ಹೇಗೆ ನೀರು ದೊರೆಯುತ್ತದೆಯೋ ಅದರಂತೆ ಪ್ರಗಾಢವಾಗಿ ಗುರುಸೇವೆ ಮಾಡಿದ ವ್ಯಕ್ತಿಗೆ  ವಿದ್ಯೆಯು ದೊರೆಯುತ್ತದೆ ಎಂಬುದಾಗಿ.

**

ಮುಂಡೋ ವಾ ಜಟಿಲೋ ವಾ ಸ್ಯಾದಥವಾ ಸ್ಯಾಚ್ಛಿಖಾಜಟಃ|

ನೈನಂ ಗ್ರಾಮೇsಭಿನಿಮ್ಲೋಚೇತ್ ಸೂರ್ಯೋನಾಭ್ಯುದಿಯಾತ್ ಕ್ವಚಿತ್||219||

----- ಬ್ರಹ್ಮಚಾರಿಯು ಕೇಶಮುಂಡನ- ಜಡೆ - ಜುಟ್ಟು ಬಿಡಬಹುದು. ಮತ್ತು  ಸೂರ್ಯೋದಯ , ಸೂರ್ಯಾಸ್ತದ ಸಮಯದಲ್ಲಿ ಮಲಗಲೇಬಾರದು ಎಂಬುದಾಗಿ.


ತಂ ಚೇದಭ್ಯುದಿಯಾತ್ಸೂರ್ಯಃ  ಶಯಾನಂ ಕಾಮಚಾರತಃ|

ನಿಮ್ಲೋಚೇದ್ವಾಪ್ಯ ವಿಜ್ಞಾನಾಜ್ಜಪನ್ನುಪವಸೇದ್ದಿನಮ್||220||

---- ಹಾಗೇನಾದರೂ ಆ ಸಮಯದಲ್ಲಿ ಬ್ರಹ್ಮಚಾರಿಯು ಅಜ್ಞಾನವಶಾತ್ ಆ ಕಾಲದಲ್ಲಿ ಮಲಗಿದ್ದೇ ಆದರೆ ಹಗಲು ಉಪವಾಸ ಮಾಡಿ ಗಾಯತ್ರೀ ಮಂತ್ರವನ್ನು ಜಪಿಸಬೇಕು ಎಂಬುದಾಗಿ.

**

ಆಚಮ್ಯ ಪ್ರಯತೋ ನಿತ್ಯಮುಭೇ ಸಂಧ್ಯೇ ಸಮಾಹಿತಃ|

ಶುಚೌ ದೇಶೇ ಜಪನ್ ಜಪ್ಯಮುಪಾಸೀತ ಯಥಾ ವಿಧಿ||222||

---- ಬ್ರಹ್ಮಚಾರಿಯಾದವನು ಪ್ರತಿನಿತ್ಯ ಆಚಮನ ಮಾಡಿ ಶುಚಿಯಾದ ಸ್ಥಳದಲ್ಲಿ ಹೋಗಿ ವಿಧಿ ಪ್ರಕಾರವಾಗಿ ಪ್ರಾತಃ - ಸಾಯಂ- ಸಂಧ್ಯಾಕಾಲಗಳಲ್ಲಿ ಗಾಯತ್ರೀ ಮಂತ್ರವನ್ನು ಜಪಿಸುತ್ತಾ ಮಂತ್ರೋಪಾಸನೆ ಮಾಡಬೇಕು.  

**

ಯದಿ ಸ್ತ್ರೀ ಯದ್ಯವರಜಃ ಶ್ರೇಯಃ ಕಿಂಚಿತ್ಸಮಾಚರೇತ್|

ತತ್ಸರ್ವಮಾಚರೇದ್ಯುಕ್ತೋ ಯತ್ರ ವಸ್ಯ ರಮೇನ್ಮನಃ||223||

----- ಸ್ತ್ರೀ ಅಥವಾ ಪುರುಷನು ಒಂದು ವೇಳೆ ಶ್ರೇಯಸ್ಕರವಾದ ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಮಾಡಲು ತನ್ನ ಮನಸ್ಸು ಒಪ್ಪಿದ್ದೇ ಆದಲ್ಲಿ ಅದು ನಿಷಿದ್ಧವಲ್ಲದಿದ್ದರೆ ಅದನ್ನು ನಿರಾತಂಕವಾಗಿ ಆಚರಿಸಬಹುದಾಗಿದೆ.


ಧರ್ಮೋರ್ಥಾವುಚ್ಯತೇ ಶ್ರೇಯಃ ಕಾಮಾರ್ಥೌ ಧರ್ಮ ಏವ ಚ |

ಅರ್ಥ ಏವೇಹ ವಾ ಶ್ರೇಯಸ್ತ್ರೀವರ್ಗ ಇತಿ ತು ಸ್ಥಿತಿಃ||224||

---------  ಕೆಲವರು ಧರ್ಮ ಮಾತ್ರ , ಕೆಲವರು ಅರ್ಥ ಮಾತ್ರ , ಕೆಲವರು ಧರ್ಮ ಮತ್ತು ಅರ್ಥಗಳೆರಡೂ ಶ್ರೇಯಸ್ಸನ್ನುಂಟು ಮಾಡುತ್ತವೆಯೆಂದು ಹೇಳುತ್ತಾರೆ. ಆದರೆ ಧರ್ಮ ಅರ್ಥ ಮತ್ತು  ಕಾಮ ಇವು ಮೂರರ ಪರಸ್ಪರ ಹೊಂದಾಣಿಕೆಯೇ ಸುಖಕರವು ಶ್ರೇಯಸ್ಕರವು ಎಂಬುದಾಗಿ.

**

ಆಚಾರ್ಯಶ್ಚ ಪಿತಾ ಚೈವ ಮಾತಾ ಚ ಪೂರ್ವಜಃ|

ನಾರ್ತೇನಾಪ್ಯವಮಂತವ್ಯಾ ಬ್ರಾಹ್ಮಣೇನ ವಿಶೇಷತಃ||225||

--- ಮಂತ್ರೋಪದೇಶ ಮಾಡುವ ಆಚಾರ್ಯ, ತಂದೆ-ತಾಯಿ , ಅಣ್ಣನನ್ನು ಎಂತಹ ವಿಷಮಪರಿಸ್ಥಿತಿಯಲ್ಲೂ ಪ್ರಾಜ್ಞನಾದವನು ವಿಶೇಷವಾಗಿ ಬ್ರಾಹ್ಮಣನು ಅವಮಾನಿಸಬಾರದು. 


ಆಚಾರ್ಯೋ ಬ್ರಾಹ್ಮಣೋ ಮೂರ್ತಿಃ ಪಿತಾ ಮೂರ್ತಿಃ ಪ್ರಜಾಪತೇಃ|

ಮಾತಾ ಪೃಥಿವ್ಯಾ ಮೂರ್ತಿಸ್ತು ಭ್ರಾತಾ ಸ್ವೋ ಮೂರ್ತಿರಾತ್ಮನಃ||226||

----- ಏಕೆಂದರೆ ಮಂತ್ರೋಪದೇಶ ಮಾಡುವ ಆಚಾರ್ಯನು ಸಾಕ್ಷಾತ್ ಪರಬ್ರಹ್ಮನ ಸ್ವರೂಪ , ತಂದೆ-ತಾಯಿ ಪ್ರಜಾಪತಿ -ಭೂಮಾತೆಯ ಸ್ವರೂಪ ಮತ್ತು ಅಣ್ಣನು ತನ್ನದೇ ಆತ್ಮಸ್ವರೂಪನಾಗಿರುತ್ತಾನೆ‌ ಎಂಬುದಾಗಿ.

**

ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಮ್|

ನ ತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷಶತೈರಪಿ||227|| 

----- ಮಕ್ಕಳ ಜನನ ಹಾಗೂ ಅವರ ಜೀವನದ ವಿಷಯದಲ್ಲಿ ತಂದೆ-ತಾಯಿಗಳು ಅನುಭವಿಸುವ ನಾನಾ ವಿಧದ ಕಷ್ಟಗಳ ಋಣವನ್ನು ತೀರಿಸಲು ನೂರು ವರ್ಷಗಳಾದರೂ ನಮಗೆ ಸಾಧ್ಯವಿಲ್ಲ ಎಂಬುದಾಗಿ.

**

ತಯೋರ್ನಿತ್ಯಂ ಪ್ರಿಯಂ ಕುರ್ಯಾದಾಚಾರ್ಯಸ್ಯ ಚ ಸರ್ವದಾ|

ತೇಷ್ಟೇವ ತ್ರಿಷು ತುಷ್ಟೇಷು ತಪಃ ಸರ್ವಂ ಸಾಮಾಪ್ಯತೇ||228||

---- ತಂದೆ-ತಾಯಿ , ಆಚಾರ್ಯರು , ಗುರುಗಳನ್ನು ಗೌರವಿಸುತ್ತಾ ಅವರು ಯಾವಾಗಲೂ ಸಂತೃಪ್ತಿಯಿಂದ ಇರುವಂತೆ ನೋಡಿಕೊಳ್ಳಬೇಕು. ಇವರೆಲ್ಲರನ್ನು  ಸಂತೋಷಪಡಿಸುವ ವ್ಯಕ್ತಿಗೆ ಸರ್ವತಪಸ್ಸಿನ ಸಿದ್ಧಿಯು ಲಭಿಸುತ್ತದೆ ಎಂಬುದಾಗಿ.

**

ತಂದೆ ತಾಯಿ ಗುರುಗಳ ಮಹತ್ವವನ್ನು ತಿಳಿಸುತ್ತಿದ್ದಾರೆ ---

ತೇಷಾಂ ತ್ರಯಾಣಾಂ ಶುಶ್ರೂಷಾ ಪರಮಂ ತಪ ಉಚ್ಯತೇ|

ನ ತೈರಭ್ಯನನುಜ್ಞಾತೋ ಧರ್ಮಮನ್ಯಂ ಸಮಾಚರೇತ್||229||

---- ತಂದೆ , ತಾಯಿ ಹಾಗೂ ಗುರು ಈ ಮೂವರ  ಸೇವೆಯೇ ಶ್ರೇಷ್ಟ ತಪಸ್ಸು. ಅವರ ಅಪ್ಪಣೆಯಿಲ್ಲದೇ ಯಾವ ಬೇರೆ ಧರ್ಮವನ್ನು ಆಚರಿಸಲೇಬಾರದು.


ತ ಏವ ಹಿ ತ್ರಯೋ ಲೋಕಾಸ್ತ ಏವ ತ್ರಯ ಆಶ್ರಮಾಃ |

ತ ಏವ ‌ಹಿ ತ್ರಯೋ ವೇದಾಸ್ತ ಏವೋಕ್ತಾಸ್ತ್ರಯೋsಗ್ನಯಃ||230||

---- ಏಕೆಂದರೆ ಅವರೇ ಲೋಕತ್ರಯವನ್ನು ಅನುಗ್ರಹಿಸುವವರು , ಅವರೇ ಬ್ರಹ್ಮಚರ್ಯಾದಿ ಆಶ್ರಮತ್ರಯವನ್ನು ನೀಡುವವರು , ಅವರೇ ವೇದತ್ರಯವನ್ನು ದಯಪಾಲಿಸುವವರು , ಹಾಗೂ ಅವರೇ ಆಹವನೀಯಾದಿ ಅಗ್ನಿತ್ರಯದ ಫಲವನ್ನು ಕೊಡುವಂತಹವರಾಗಿದ್ದಾರೆ.

**

ಪಿತಾ ವೈ ಗಾರ್ಹಪತ್ಯೋಗ್ನಿರ್ಮಾತಾsಗ್ನಿರ್ದಕ್ಷಿಣಃ ಸ್ಮೃತಃ|

ಗುರುರಾಹನೀಯಸ್ತು ಸ್ವಾಗ್ನಿತ್ರೇತಾ ಗರೀಯಸೀ||231||

----  ತಂದೆ , ತಾಯಿ ಮತ್ತು ಗುರುಗಳ ಶ್ರೇಷ್ಟತೆಯನ್ನು ಮುಂದುವರೆಸುತ್ತಾ ---

ತಂದೆಯು ಗಾರ್ಹಪತ್ಯವೆಂಬ ಅಗ್ನಿ ಸ್ವರೂಪನು , ತಾಯಿಯು ದಕ್ಷಿಣಾಗ್ನಿಸ್ವರೂಪಳು ಮತ್ತು ಗುರುವು ಆಹವನೀಯ ಅಗ್ನಿಸ್ವರೂಪನು. ಹೀಗೆ ಇವರು ಸಾಕ್ಷಾತ್ ಅಗ್ನಿದೇವತೆಗಳಿಗಿಂತಲೂ ಶ್ರೇಷ್ಠರು ಎಂಬುದಾಗಿ.


ತ್ರಿಷ್ವಪ್ರಮಾದ್ಯನ್ನೇತೇಷು ತ್ರೀಲ್ಲೋಕಾನ್ ವಿಜಯೇದ್ ಗೃಹೀ|

ದೀಪ್ಯಮಾನಃ ಸ್ವವಪುಷಾ ದೇವವದ್ದಿವಿ ಮೋದತೇ||232||

----- ಈ ಮೇಲೆ ಹೇಳಿದಂತೆ ಈ ಮೂವರಲ್ಲೂ (ತಂದೆ ತಾಯಿ ಗುರು) ತಪ್ಪಿ ನಡೆಯದ ಗೃಹಸ್ಥನು ಮೂರು ಲೋಕಗಳನ್ನು ಜಯಿಸುತ್ತಾನೆ. ದಿವ್ಯವಾದ ಕಾಂತಿಯುತವಾದ ಶರೀರವನ್ನು ಹೊಂದಿ ದೇವಲೋಕದಲ್ಲೂ ಆನಂದವನ್ನನುಭವಿಸುತ್ತಾನೆ ಎಂಬುದಾಗಿ.

**


*ಯಾವತ್ತ್ರಯಸ್ತೇ ಜೀವೇಯುಸ್ತಾವನ್ನಾನ್ಯಂ ಸಮಾಚರೇತ್|*

*ತೇಷ್ಟೇನ ನಿತ್ಯಂ ಶುಶ್ರೂಷಾಂ ಕುರ್ಯಾತ್ಪ್ರಿಯಹಿತೇ ರತಃ||235||*

---- ತಾಯಿ ತಂದೆ ಗುರು ಎಲ್ಲಿಯವರೆಗೆ ಅವರು ಬದುಕಿರುತ್ತಾರೋ ಅವರಲ್ಲಿ   ಮುಖ್ಯವಾಗಿ ಭಕ್ತಿ-ಸೇವೆ ಮಾಡುವುದೇ ಮುಖ್ಯವು. ಇದನ್ನು ಬಿಟ್ಟು ಯಾವ ಧರ್ಮವನ್ನಾಚರಿಸಕೂಡದು. ಅವರನ್ನು ಮೊದಲು ಸುಖದಿಂದಿಡುವುದೇ ಧರ್ಮವಾಗಿದೆ.


*ತೇಷಾಮನುಪರೋಧೇನ ಪಾರತ್ರ್ಯಂ ಯದ್ಯದಾಚರೇತ್|*

*ತತ್ತನ್ನಿವೇದಯೇತ್ತೇಭ್ಯೋ ಮನೋವಚನಕರ್ಮಭಿಃ||236||*

----- ಬೇರೆ ಯಾವ ಧರ್ಮ ಮಾಡಿದರೂ  ಅವರ ಅಪ್ಪಣೆ ಪಡೆದೇ ಸಾಧ್ಯಾಂತವಾಗಿ ಅವರಿಗೆ (ತಾಯಿ-ತಂದೆ -ಗುರು) ನಿವೇದನೆ ಮಾಡಬೇಕು.


*ತ್ರಿಷ್ಟೇತೇಷ್ಟಿಕೃತ್ಯಂ ಹಿ ಪುರುಷಸ್ಯ ಸಾಮಾಪ್ಯತೇ|*

*ಏಷ ಧರ್ಮ಼ಃ ಪರಃ ಸಾಕ್ಷಾದುಪಧರ್ಮೋsನ್ಯ ಉಚ್ಯತೇ||237||*

---ಒಟ್ಟಾರೆ ತಾತ್ಪರ್ಯವಿಷ್ಟೇ ಈ ಮೇಲಿನ ಮೂವರಲ್ಲಿ ಮಾಡುವ ಸೇವೆಯೇ‌ ಸರ್ವೋತ್ತಮ ಅಥವಾ ಶ್ರೇಷ್ಟ ಧರ್ಮವು ಎಂಬುದಾಗಿ.

**

*ಶ್ರದ್ಧಾಧಾನಃ ಶುಭಾಂ ವಿದ್ಯಾಮಾದದೀತಾವರಾದಪಿ|*

*ಅಂತ್ಯಾದಪಿ ಪರಂ ಧರ್ಮಂ ಸ್ತ್ರೀರತ್ನಂ ದುಷ್ಕುಲಾದಪಿ||238||*

----- ಶ್ರದ್ಧಾವಂತ ನಾದವನು ಶುಭಕರವಾದ ವಿದ್ಯೆಯನ್ನು ಶೂದ್ರನಿಂದಲಾದರೂ ಸಂಪಾದಿಸಿಕೊಳ್ಳಬೇಕು. ದಿವ್ಯವಾದ ಧರ್ಮೋಪದೇಶವನ್ನು ಅರ್ಹನಾದ ಅಂತ್ಯಜನಿಂದಲಾದರೂ ಸಹ ಸ್ವೀಕಾರ ಮಾಡಬೇಕು. ಕೆಳ ಜಾತಿಯಲ್ಲಿ ಹುಟ್ಟಿದರೂ ಶ್ರೇಷ್ಟಳಾದ ಸ್ತ್ರೀಯಾಗಿದ್ದರೆ ಅವಳನ್ನೂ ಸಹ‌ ಸ್ವೀಕರಿಸಬಹುದು ಎಂಬುದಾಗಿ.

*ವಿಷಾದಪ್ಯಮೃತಂ ಗ್ರಾಹ್ಯಂ ಬಾಲಾದಪಿ ಸುಭಾಷಿತಮ್|*

*ಅಮಿತ್ರಾದಪಿ ಸದ್ವೃತ್ತಂ ಅಮೇಧ್ಯಾದಪಿ ಕಾಂಚನಮ್||239||*

----- ವಿಷದ ಮಧ್ಯದಿಂದಲಾದರೂ ಸರಿ ಅದರಲ್ಲಿನ  ಅಮೃತವನ್ನೂ , ಚಿಕ್ಕಬಾಲಕನಿಂದಾದರೂ ಸರಿ ಅವನಿಂದ ಹಿತವಚನವನ್ನು , ಶತೃವಾದರೂ ಸರಿ ಅವನಿಂದ ಒಳ್ಳೆಯ ನಡತೆಯನ್ನು ಹಾಗೂ ಹೊಲಸಿನಿಂದಾದರೂ ಸರಿ ಬಂಗಾರವನ್ನು ಪಡೆದುಕೊಳ್ಳಬೇಕು. 

*"""""""""""""🙏🏾"""""""""""""""*

🌷ಮನುಸ್ಮೃತಿ-ಅಧ್ಯಾಯ-2🌷*

*""""""""""""🔥""""""""""""""*

*ಸ್ತ್ರೀಯೋ ರತ್ನಾನ್ಯಥೋ ವಿದ್ಯಾ ಧರ್ಮಃ ಶೌಚಂ ಸುಭಾಷಿತಮ್|*

*ವಿವಿಧಾನಿ ಚ ಶಿಲ್ಪಾನಿ ಸಮಾದೇಯಾನಿ ಸರ್ವತಃ||240||*

---- ಸ್ತ್ರೀಯರು , ರತ್ನಗಳು , ವಿದ್ಯೆ , ಧರ್ಮ , ಶೌಚ , ಸುಭಾಷಿತಗಳು , ಶಿಲ್ಪಗಳು ಇವು ಎಲ್ಲಿದ್ದರೂ ಸಹ ಅವನ್ನು ಪಡೆದುಕೊಳ್ಳಲು ಮುಂದಾಗಬೇಕು.


*ಅಬ್ರಾಹ್ಮಣಾದಧ್ಯಯನಮಾಪತ್ಕಾಲೇ ವಿಧೀಯತೇ|*

*ಅನುವ್ರಜ್ಯಾ ಚ ಶುಶ್ರೂಷಾ ಯಾವದಧ್ಯಯನಂ ಗುರೋಃ||241||*

---- ಆಪತ್ಕಾಲದಲ್ಲಿ ಮಾತ್ರ ಅಬ್ರಾಹ್ಮಣ ಗುರುವಿನಿಂದ ಓದು ಕಲಿಯಬೇಕು. ಹಾಗೂ ಆ ಓದು ಪೂರೈಸುವವರೆಗೆ ಮಾತ್ರ ಅವನಲ್ಲಿ ಗುರು ಭಾವವನ್ನು ಹೊಂದಿ ಸೇವೆ ಮಾಡಬೇಕು. ಆನಂತರ ಮಾಡಬಾರದು.


*ನಾಬ್ರಾಹ್ಮಣೇ ಗುರೌ ಶಿಷ್ಯೋ ವಾಸಮಾತ್ಯಂತಿಕಂ ವಸೇತ್|*

*ಬ್ರಾಹ್ಮಣೇ ಚಾನನೂಚಾನೇ ಕಾಂಕ್ಷನ್ಗತಿಮನುತ್ತಮಾಮ್|||242||*

---- ಉತ್ತಮವಾದ ದಿವ್ಯ ಗತಿಯನ್ನು ಹೊಂದಲು ಅಪೇಕ್ಷಿಸುವ ವ್ಯಕ್ತಿಯು ಅಬ್ರಾಹ್ಮಣನಾದ ಗುರುವಿನ   ಸನ್ನಿಧಿಯಲ್ಲಿ ಹಾಗೂ ವೇದ-ವಿದ್ವಾಂಸನಲ್ಲದ ಬ್ರಾಹ್ಮಣನ ಬಳಿಯಲ್ಲಿ ದೀರ್ಘಕಾಲದ ತನಕ ವಾಸ ಮಾಡಬಾರದು ಅಂದರೆ ಕೊನೆತನಕ ಇರಬಾರದು ಎಂಬುದಾಗಿ.

***

*ಯದಿ ತ್ವಾತ್ಯಂತಿಕಂ ವಾಸಂ ರೋಚಯತ ಗುರೋಃ ಕುಲೇ|*

*ಯುಕ್ತಃ ಪರಿಚರೇದೇನಮಾಶರೀರವಿಮೋಕ್ಷಣಾತ್||243||*

-- ಗುರುಕುಲದಲ್ಲಿಯೇ ಕೊನೆತನಕ ವಾಸಿಸಲಿಚ್ಛಿಸುವ ನೈಷ್ಠಿಕ ಬ್ರಹ್ಮಚಾರಿಯು ಬದುಕಿರುವವರೆಗೂ ಗುರುಸೇವೆ ಮಾಡುತ್ತಿರಬೇಕು.


*ಆಸಮಾಪ್ತೇಃ ಶರೀರಸ್ಯ ಯಸ್ತು ಶುಶ್ರೂಷತೇ ಗುರುಮ್|*

*ಸ‌ ಗಚ್ಛತ್ಯಂಜಸಾ ವಿಪ್ರೋ ಬ್ರಹ್ಮಣಃ ಸದ್ಮ ಶಾಶ್ವತಮ್||244||*

---- ಏಕೆಂದರೆ ಕೊನೆತನಕ ಗುರುಸೇವೆ ಮಾಡುವ ಶಿಷ್ಯನಿಗೆ ಶಾಶ್ವತವಾದ ಬ್ರಹ್ಮಲೋಕವು ದೊರೆಯುತ್ತದೆ.


*ನ ಪೂರ್ವಂ ಗುರವೇ ಕಿಂಚಿದುಪಕುರ್ವೀತ ಧರ್ಮವಿತ್|*

*ಸ್ನಾಸ್ಯಂಸ್ತು ಗುರುಣಾsಜ್ಞಪ್ತಃ ಶಕ್ತ್ಯಾ ಗುರ್ವರ್ಥಮಾಹರೇತ್||245||*

----- ವಿದ್ಯಾಭ್ಯಾಸ ಸಮಯದಲ್ಲಿ ಶಿಷ್ಯನು ಯಾವುದೇ ಗುರು ಕಾಣಿಕೆ- ದಕ್ಷಿಣೆ ಸಲ್ಲಿಸಬಾರದು. ಆದರೆ ಗುರುವಿನ ಅಪ್ಪಣೆಪಡೆದು ಮನೆಗೆ ಮರಳುವ ಮುನ್ನ ತನ್ನ ಶಕ್ತ್ಯಾನುಸಾರ ಗುರುದಕ್ಷಿಣೆ-ಕಾಣಿಕೆಯನ್ನು ಸಲ್ಲಿಸಬೇಕು.

*""""""""""""""🙏🏾""""""""""""*


*🌷ಮನುಸ್ಮೃತಿ🌷*

*ಕ್ಷೇತ್ರಂ ‌ಹಿರಣ್ಯಂ ಗಾಮಶ್ವಂ   ಛತ್ರೋಪಾನಹಮಾಸನಮ್|*

*ಧಾನ್ಯಂ ಶಾಕಂ ವಾಸಾಂಸಿ ಗುರವೇ ಪ್ರೀತಿಮಾವಹೇತ್||246||*

---- ಗುರುಗಳಿಗೆ ಭೂಮಿ , ಬಂಗಾರ , ಗೋವು , ಕುದುರೆ , ಕೊಡೆ, ಪಾದರಕ್ಷೆ , ಆಸನ , ಧಾನ್ಯ, ತರಕಾರಿ , ವಸ್ತ್ರಾದಿಗಳನ್ನು ಯಥಾಶಕ್ತಿ ಪ್ರೀತಿಪುರಸ್ಸರವಾಗಿ ಸಮರ್ಪಿಸಬೇಕು.  


*ಆಚಾರ್ಯೇ ತು ಖಲು ಪ್ರೇತೇ ಗುರುಪುತ್ರೇ ಗುಣಾನ್ವಿತೇ |*

*ಗುರುದಾರೇ ಸಪಿಂಡೇ ವಾ ಗುರುವದ್ವೃತ್ತಿಮಾಚರೇತ್||247||* 

---- ಗುರುವು ಮರಣ ಹೊಂದಿದರೆ ಗುಣವಂತ ನಾದ ಗುರುಪುತ್ರನಲ್ಲಿ ಅಥವಾ ಗುರು ಪತ್ನಿಯಲ್ಲಿ , ಇವರಿಬ್ಬರೂ ಇಲ್ಲದಿದ್ದಲ್ಲಿ ಗುರುವಿನ ಕುಟುಂಬದಲ್ಲಿ ಶಿಷ್ಯನು ಸೇವೆ ಸಲ್ಲಿಸುತ್ತಾ ಇರಬಹುದು.


*ಏತೇಷ್ವವಿದ್ಯಮಾನೇಷು ಸ್ನಾನಾಸನವಿಹಾರವಾನ್|*

*ಪ್ರಯುಂಜಾನೋsಗ್ನಿಶುಶ್ರೂಷಾಂ ಸಾಧಯೇದ್ದೇಹಮಾತ್ಮನಃ||248||*

----- ಗುರು ಅಥವಾ ಗುರುವಿನ ಕುಟುಂಬದವರು   , ಸಂಬಂಧಿಕರು ಯಾರೂ ಇರದ ಪಕ್ಷದಲ್ಲಿ ಗುರುವಿನ ಅಗ್ನಿಯ ಬಳಿ ಸ್ನಾನ, ಆಸನ , ವಿಹಾರ ಇತ್ಯಾದಿಗಳನ್ನು ಪೂರೈಸುತ್ತಾ , ಅಗ್ನಿಪರಿಚರ್ಯೇ ಮಾಡುತ್ತಾ ತನ್ನ ದೇಹವನ್ನು  ತಪದಲ್ಲಿ ತೊಡಗಿಸಬೇಕು.


*ಏವಂ ಚರತಿ ಯೋ ವಿಪ್ರೋ ಬ್ರಹ್ಮಚರ್ಯಮವಿಪ್ಲುತಃ|*

*ಸ ಗಚ್ಛತ್ಯುತ್ತಮಸ್ಥಾನಂ ನ ಚೇಹಾಜಾಯತೇ ಪುನಃ||249||*

---- ಈ ಮೇಲಿನ ರೀತಿಯಾಗಿ ಯಾವ ಬ್ರಾಹ್ಮಣನು ನಿರಂತರ ಹೀಗೆ ಬ್ರಹ್ಮಚರ್ಯವನ್ನು ಕಾಯ್ದುಕೊಂಡು ವೃತನಿಷ್ಠನಾಗಿ ಗುರುಸೇವೆ ಯನ್ನು ಮಾಡುತ್ತಾನೆಯೋ ಅವನು ಉತ್ತಮವಾದ ಬ್ರಹ್ಮ ಸಾಯುಜ್ಯವನ್ನು ಹೊಂದುತ್ತಾನೆ ಮತ್ತು  ಸಂಸಾರದಲ್ಲಿ ಮತ್ತೆ ಜನ್ಮ ಹೊಂದುವುದಿಲ್ಲ ಎಂಬುದಾಗಿ.

*ಮನುಸ್ಮೃತಿ ದ್ವಿತೀಯಾಧ್ಯಾಯ ಸಮಾಪ್ತಿ*

*""""""""""""🔥""""""""""""""*

No comments:

Post a Comment